ಅಂಗಡಿ ಎಂದರೆ ಹೇಗಿರುತ್ತದೆ?
ನನಗೆ ಈ ಜೆನರಲ್ ಸ್ಟೋರ್ಸ್ ಗೊತ್ತು, ಫ್ಯಾಕ್ಟರಿ ಔಟ್ಲೆಟ್ ಗೊತ್ತು. ಮಾಲ್ ಗೊತ್ತು. ರಿಲಯನ್ಸ್ ಡಿಜಿಟಲ್, ರಿಟೈಲರ್ ಶಾಪ್, ಬಿಗ್ ಬಜಾರ್, ಸೂಪರ್ ಮಾರ್ಕೆಟ್, ಬ್ರ್ಯಾಂಡ್ ಫ್ಯಾಕ್ಟರಿ ಎಲ್ಲವೂ ಗೊತ್ತು. ಇದ್ಯಾವುದಿದು ಅಂಕಲ್ ಅಂಗಡಿ? ಅದು ರಿಲಯನ್ಸ್ ದಾ ಇಲ್ಲಾ ಒರಾಯನ್ ದಾ?
ಮುಂದಿನ ಪೀಳಿಗೆಯ ಚಿಲ್ಟಾರಿಗಳು ಹೀಗಂತ ಕೇಳಿದರೆ ಬೆಚ್ಚಿಬೀಳಬೇಡಿ. ಈಗ ಚಿಕ್ಕ ಚಿಕ್ಕ ನಗರಗಳಲ್ಲೂ ಸೂಪರ್ ಮಾರ್ಕೆಟ್, ಬ್ರಾಂಡ್ ಫ್ಯಾಕ್ಟರಿ, ಫ್ಯಾಶನ್ ಸ್ಟೋರ್ ಗಳು ತುಂಬಿಕೊಳ್ಳುತ್ತಿರುವುದನ್ನು ನೋಡಿದರೆ 'ಅಂಗಡಿ' ಎನ್ನುವ ನಾವು-ನೀವು ನಿಂಬೆಹುಳಿ ಚಾಕ್ಲೇಟ್ ಕೊಳ್ಳುತ್ತಿದ್ದ ಆ ಪುಟ್ಟ ಮಾಯಾಮಳಿಗೆ ಮಾಯವಾಗಿ ಹೋಗುವ ದಿನ ದೂರವಿಲ್ಲವೇನೋ ಅನಿಸುತ್ತದೆ. ಹಾಗಂತ ಇಲ್ಲಿನ ತನಕದ ಪೀಳಿಗೆಯಲ್ಯಾರೂ ಅಂಗಡಿಯನ್ನು ನೋಡದೇ ಬೆಳೆದವರು ಇರಲಿಕ್ಕಿಲ್ಲ. ನಿಮಗೆಲ್ಲ ನಿಮ್ಮೂರಿನ ನಟ್ಟ ನಡುವಿನಲ್ಲಿ ಅಥವಾ ಬಸ್ ಸ್ಟ್ಯಾಂಡಿನ ಪಕ್ಕ ನಾಲ್ಕು ಜನ ಸೇರುವ ಜಾಗದಲ್ಲಿ ಬಾಬಣ್ಣ, ರಾಮಣ್ಣ, ಉಪೇಂದ್ರಣ್ಣ ಎಂಬ ಯಾವುದೋ ಹೆಸರಿನ 'ಅಣ್ಣ'ನೊಬ್ಬ ಇಟ್ಟಿದ್ದ ಅಂಗಡಿ ನೆನಪಿದೆ ತಾನೇ? ಆಗಿನ ಕಾಲಕ್ಕೆ ಇಡೀ ಊರಿಗೇ ಬಿಗ್ ಬಜಾರಾಗಿದ್ದ ಅವುಗಳನ್ನು ಮರೆಯುವುದಾದರೂ ಹೇಗೆ ಅಲ್ವಾ? ನನಗಿನ್ನೂ ಚೆನ್ನಾಗಿ ನೆನಪಿದೆ. ನಮ್ಮೂರಿನ ಬಸ್ ಸ್ಟಾಪಿನ ಎದುರು, ಮುಖ್ಯರಸ್ತೆಯ ಬದಿಯಲ್ಲಿ, ರಸ್ತೆಗಿಂತ ಕೊಂಚ ಎತ್ತರದ ಜಾಗದಲ್ಲಿ ಹಂಚಿನದೊಂದು ಸೂರು. ಅದರ ಕೆಳಗೆ ಮೂರಡಿ ಎತ್ತರದ ಆವರಣ ಎನ್ನಬಹುದಾದ ಚಿಕ್ಕದೊಂದು ಕಟ್ಟೆ. ಚಪ್ಪಲಿಯನ್ನು ಅಲ್ಲೇ ಬಿಚ್ಚಿಟ್ಟು ಒಳಗೆ ನಡೆದರೆ ಮೊದಲು ಎದಿರಾಗುವುದು ನೆಲದ ಮೇಲೆ ಟೊಮೇಟೋ, ಕ್ಯಾರೇಟ್, ಅಲೂಗಡ್ಡೆ ಮುಂತಾದ ತರಕಾರಿಗಳನ್ನು ತುಂಬಿಟ್ಟಿರುವ ಬುಟ್ಟಿಗಳು. ಪಕ್ಕದಲ್ಲಿ ಮರದ ಪೆಟ್ಟಿಗೆಗಳೊಳಗೆ ಶಿಸ್ತಾಗಿ ನಿಂತಿರುವ ಗೋಲಿ ಸೋಡದ ನೀಲಿ ಬಾಟಲ್ ಗಳು. ಎದುರುಗಡೆ ಅಂಗಡಿಯ ಬಾಗಿಲಿನಲ್ಲಿ ಪುಟ್ಟದೊಂದು ಮರದ ಸ್ಟ್ಯಾಂಡಿನ ಮೇಲೆ ಸಾಲಾಗಿ ನಿಂತು ತಮ್ಮೊಳಗಿನ ಚಾಕ್ಲೇಟೇ ಇತ್ಯಾದಿ ಸಿಹಿ-ಹುಳಿ ತಿಂಡಿಗಳನ್ನು ಜಗತ್ತಿಗೆ ತೋರಿಸುತ್ತ ಕೈಬೀಸಿ ಕರೆಯುತ್ತಿರುವ ಗಾಜಿನ ಭರಣಿಗಳು. ಪಕ್ಕದ ಗೋಡೆಯ ಮೇಲೆ ಹಾರದಂತೆ ನೇತಾಡುತ್ತಿರುವ, ಲೇಟೆಸ್ಟ್ ಆಗಿ ಮಾರುಕಟ್ಟೆಗೆ ಬಂದಿರುವ ಕಟ್ಟಮಿಟ್ಟ, ಶಕ್ತಮಾನ್ ಚಾಕಲೇಟ್ ಗಳು. ಒಳಗಿನ ಸ್ಟ್ಯಾಂಡುಗಳಲ್ಲಿ ಸಾಲಾಗಿ ಜೋಡಿಸಿಟ್ಟ ದಿನಬಳಕೆಯ ವಸ್ತುಗಳು..
ಅದು ಬಾಬಣ್ಣನ ಅಂಗಡಿ!
ಪಕ್ಕದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪ್ರತಿಯೊಬ್ಬ ಚಿಣ್ಣನೂ ತಿರುತಿರುಗಿ ನೋಡುತ್ತಾ ಹೋಗುತ್ತಿದ್ದ ಅಂಗಡಿಯದು. ಇಪ್ಪತೈದು ಪೈಸೆಯ ನಿಂಬೆ ಹುಳಿ ಚಾಕ್ಲೆಟ್ ನಿಂದ ಹಿಡಿದು ಇಪ್ಪತೈದು ರುಪಾಯಿಯ ಕ್ಯಾಸ್ಕೋ ಬಾಲಿನ ತನಕ ಮಕ್ಕಳ ಮನಗೆದ್ದುದೆಲ್ಲವೂ ಅಲ್ಲಿ ಲಭ್ಯ. ಸಂಜೆ ಹೊರಗೆ ಹೊರಟ ಅಪ್ಪನ ಜೊತೆ ಹಠ ಮಾಡಿ ತಾನೂ ಹೋರಟುಬಂದು ಆ ಅಂಗಡಿಯ ಬಾಗಿಲಿನಲ್ಲಿ ನಿಂತ ಪೋರನ ಕಣ್ಣೆದುರು ಗೊಂಚಲು ಗೊಂಚಲು ಕನಸುಗಳು! ಆ ಬದಿಯಲ್ಲಿ ನೋಡಿದರೆ ಬಾಟಲಿಯೊಳಗೆ ಬೆರಳು ತೂರಿಸಿ ಫಟ್ ಎಂದು ಒಡೆದುಕೊಡುವ ಗೋಲಿಸೋಡ. ಮಧ್ಯದಲ್ಲಿ ಮರದ ಸ್ಟ್ಯಾಂಡಿನ ಮೇಲೆ ನಮ್ಮ ಜೇಬಿನೊಳಗೇ ಇದೆಯೇನೋ ಎನ್ನುವಷ್ಟು ಪಾರದರ್ಶಕವಾಗಿರುವ ಭರಣಿಗಳೊಳಗೆ ಜೋಡಿಸಿರುವ ಸೋಂಪಾಪುಡಿ, ಮೈಸೂರ್ ಪಾಕು, ಕಂಬಾರ್ ಕಟ್(ಕಡ್ಲೆ ಮಿಠಾಯಿ), ಶುಂಟಿ ಪೇಪರ್ಮೆಂಟ್, ಮಹಾಲ್ಯಾಕ್ಟೋ, ಜೆಲ್ಲಿ, ಲ್ಯಾಕ್ಟೋ ಕಿಂಗ್, ಕಾಫೀ ಬೈಟ್, ನಿಂಬೆಹುಳಿ ಚಾಕ್ಲೇಟ್, ರಸಗುಲ್ಲಗಳು. 'ನನ್ನನ್ನು ಊದು' ಎಂದು ಕೈ ಬೀಸಿ ಕರೆಯುತ್ತಿರುವ ಬಾಟಲಿಯೊಳಗಿನ ಬಣ್ಣಬಣ್ಣದ ಪುಗ್ಗಿಗಳು, ಕೈಮೇಲೆ ಅಂಟಿಸಿಕೊಂಡು ನೀರು ಹಚ್ಚಿ ಗಸಗಸನೆ ಉಜ್ಜಿದಾಗ ಒಳಗಿರುವ ಬೂಮರ್, ಶಕ್ತಿಮಾನ್ ರ ಚಿತ್ರಗಳು ಕೈಯ ಮೇಲಕ್ಕೆ ವರ್ಗಾವಣೆಯಾಗಿಬಿಡುವ ಅದ್ಭುತ ಟ್ಯಾಟೂಗಳು ಫ್ರೀ ಬರುವ ಬೂಮರ್, ಬಿಗ್ ಬಬೂಲ್, ಮಾರ್ಬಲ್ಸ್ ಗಳು...
ಚಿಕ್ಕಚಿಕ್ಕ ಪ್ಯಾಕೇಟುಗಳಲ್ಲಿ ನೇತುಹಾಕಿರುವ ಹಸಿರು ಕಡಲೆ, ಇಂಗ್ಲೀಷ್ ನ ಅಕ್ಷರಗಳೇ ಹಿಡಿಕೆಗಳಾಗಿರುವ ಎಬಿಸಿಡಿ ಲಾಲಿಪಾಪ್, ಕವರ್ ನೊಳಗೆ ಪ್ಲಾಸ್ಟಿಕ್ ಉಂಗುರ, ಸರ, ಪೀಪಿ, ಬಿಲ್ಲು-ಬಾಣ ಮುಂತಾದ 'ಸರ್ಪೈಸ್ ಗಿಫ್ಟ್' ಗಳು ಫ್ರೀ ದೊರೆಯುವ ಶಕ್ತಿಮಾನ್ ಚಾಕಲೇಟ್ ಗಳು, ಚಿಕ್ಕಚಿಕ್ಕ ಕಡ್ಡಿಗೆ ಬಣ್ಣಬಣ್ಣದ ಬ್ಯಾಗಡೆ ಸುತ್ತಿರುವ, ಒಳಗಡೆ ನಾಲಿಗೆ ನಲಿನಲಿದಾಡುವಂತೆ ಮಾಡುವ ಹುಣಿಸೆಯ ಲೇಹ್ಯವಿರುವ ಕಟ್ಟಮಿಟ್ಟ, ಅದೋ ಅಲ್ಲಿ- ಅಂಗಡಿಯೊಳಗಿನ ತುತ್ತತುದಿಯ ಮೂಲೆಯಲ್ಲಿ ಕಾಣುತ್ತಿರುವ ಕೆಂಬಣ್ಣದ ಫ್ರಿಜ್ಜಿನೊಳಗಿನ ಚಿಕ್ಕ ಕವರ್ ನೊಳಗೆ ತುಂಬಿಟ್ಟಿರುವ ಬಣ್ಣಹಚ್ಚಿದ ಹಿಮದಂತಿರುವ ಗಟ್ಟಿ ಪೆಪ್ಸಿ, ಬಾಯಲ್ಲಿ ಕುಡಿದರೆ ಮೂಗಲ್ಲಿ ತೇಗು ಬರುವ ಪೀಲೆ.. ಇಷ್ಟೆಲ್ಲ ವೈವಿಧ್ಯಮಯ ತಿಂಡಿಗಳ ಮಧ್ಯೆ ಒಂದೇ ಒಂದನ್ನು ಆಯ್ಕೆ ಮಾಡಬೇಕೆಂಬುದು ಎಂತಹ ಘೋರ! ಮನೆಗೆ ಬೇಕಾದ ಉಪ್ಪು, ಕಡಲೆಹಿಟ್ಟು, ಅಡಿಗೆ ಎಣ್ಣೆಗಳನ್ನೆಲ್ಲ ಕೊಂಡಾದ ಮೇಲೆ ಅಪ್ಪ ಕೇಳುವ "ನಿಂಗೇನ್ಬೇಕ?" ಎಂಬ ಒಂದೇ ಒಂದು ಪ್ರೆಶ್ನೆಗೆ ಪೋರನ ಬಾಯಿಯಲ್ಲಿ ಹತ್ತು ಉತ್ತರ ತಯಾರಿರುತ್ತಿತ್ತು:
"ಶಕ್ತಿಮಾನ್ ಚಾಕ್ಲೇಟ್.."
"ಬೇಡಬೇಡ ಭೂಮರ್.."
"ಇದು ಬೇಡ ಪೆಪ್ಸಿ..."
ಹೀಗೆ ಇಡೀ ಅಂಗಡಿಗೆ ಅಂಗಡಿಯೇ ಬೆರಳಂಚಿಗೆ ಬಂದು ನಿಂತುಬಿಡುತ್ತಿದ್ದ ಕ್ಷಣವದು. ಕೊನೆಗೆ ಅಪ್ಪ-ಬಾಬಣ್ಣ ಇಬ್ಬರೂ ಕಣ್ಣಲ್ಲೇ ಮಾತಾಡಿಕೊಂಡು, ಯಾವುದೋ ಒಂದು ಜಾತಿಯ ಚಾಕಲೇಟನ್ನು ಪೋರನ ಕೈಗಿತ್ತು, ಅದೇ ಜಗತ್ತಿನ ಸರ್ವ ಶ್ರೇಷ್ಠ ಚಾಕಲೇಟೆಂದು ಅವನನ್ನು ನಂಬಿಸಿ ಸಾಗಹಾಕುವ ಮೂಲಕ ಈ ಗೊಂದಲ ಕೊನೆಯಾಗುತ್ತದೆ. ಹೀಗೆ ಯಾವುದೋ ಒಂದು ತಿಂಡಿಯನ್ನು ಹಿಡಿದು ಹೊರಟು, ಕೊನೆಯ ಬಾರಿಗೆಂಬಂತೆ ತಿರುಗಿ ನೋಡಿದ ಆ ಚಿಣ್ಣನಿಗೆ ಕೊನೆಗೂ ಅಂಗಡಿಯಲ್ಲೇ ಉಳಿದುಹೋದ, ಅವನು ಕೊಳ್ಳಲಾಗದ ಆ ಚಾಕ್ಲೇಟುಗಳೆಲ್ಲ ಕಣ್ಣೀರು ತುಂಬಿಕೊಂಡು ವಿದಾಯ ಹೇಳುತ್ತವೆ.
ಇದು ಅಲ್ಲಿ ಅಂಗಡಿಯಲ್ಲಿ ದಿನಕ್ಕೆ ಏನಿಲ್ಲವೆಂದರೂ ಹತ್ತು ಬಾರಿಯಂತೆ, ವಾರದ ಏಳೂ ದಿನವೂ ಪುನರಾವರ್ತನೆಯಾಗುತ್ತಿದ್ದ ಘಟನೆ. ಹಂಚಿನ ಮಾಡಿನ ಚಿಕ್ಕ ಜಾಗವಾಗಿತ್ತಾದರೂ ಬಾಬಣ್ಣನ ಅಂಗಡಿ ಕೇವಲ ದಿನಬಳಕೆಯ ದಿನಸಿ ವಸ್ತುಗಳಿಗೆ ಸೀಮಿತವಾಗಿರಲಿಲ್ಲ. ಯಾವುದೇ ಹಬ್ಬವಾದರೂ ಊರಿನಲ್ಲಿ ಮೊದಲು ಕಾಲಿಡುತ್ತಿದ್ದುದು ಇಲ್ಲಿಗೇ. ದೀಪಾವಳಿ, ರಾಖಿ ಹಬ್ಬಗಳೆಲ್ಲ ಸನಿಹ ಬಂದಿದ್ದು ನಮಗೆ ಗೊತ್ತಾಗುತ್ತಿದ್ದುದೇ ಬಾಬಣ್ಣನ ಅಂಗಡಿಯನ್ನು ಹೊಸದಾಗಿ ಅಲಂಕರಿಸಿರುವ ಪಟಾಕಿ, ರಾಖಿಗಳಿಂದ. ಕೋವಿ, ಮದ್ದು, ಪಟಾಕಿಗಳು ಬಾಬಣ್ಣನ ಅಂಗಡಿಯನ್ನು ಪ್ರವೇಶಿಸಿದ ಮರುದಿನ ಸಂಜೆಯೇ ನಮ್ಮ ಶಾಲೆಯ ಹಿಂದಿನ ಗುಡ್ಡದಲ್ಲಿ ಢಮಾರ್ ಎನ್ನುವ ಶಬ್ದ ಮೊಳಗುತ್ತಿತ್ತು. ಅಮ್ಮನನ್ನು ಕಾಡಿ, ಗೊಗರೆದು ಐವತ್ತೋ ಅರವತ್ತೋ ಇಸಿದುಕೊಂಡು ಅಂಗಡಿಗೆ ಬರುವ ಮಕ್ಕಳಿಗೆ ಬಾಬಣ್ಣನಿಂದ ಯಾವ ಒಬಾಮಾನಿಗೂ ಕಡಿಮೆಯಿಲ್ಲದ ಭವ್ಯ ಸ್ವಾಗತ ದೊರೆಯುತ್ತಿತ್ತು. "ಬಾರಾ ಮಾಣಿ.. ಹೊಸ ಹೊಸ ಪಟಾಕಿ ಬಂದಿದೆ ನೋಡಾ" ಎನ್ನುತ್ತಾ ಒಳಗಿನಿಂದ ಬಿಡಿಮದ್ದು, ಕೋವಿ, ಮೆಣಸಿನಕಾಯಿ ಪಟಾಕಿ, ನೆಲಚಕ್ರ, ಸುರುಸುರು ಬತ್ತಿ, ಬಾಳೆಕಂಬ, ರಾಕೆಟ್ ಗಳ ಬಾಕ್ಸ್ ಗಳನ್ನು ತೆಗೆದು ಎದಿರಿಡುತ್ತಿದ್ದ. "ಇಪ್ಪತ್ತು ರೂಪಾಯಿ ವಾಪಾಸು ತರ್ಬೇಕು" ಎಂದು ಹೇಳಿಕಳಿಸಿರುತ್ತಿದ್ದ ಅಮ್ಮನ ಮಾತನ್ನು ನಾವು ಕಣ್ಣೆದುರಿನ ಆ ವೈಭವವನ್ನು ನೋಡನೋಡುತ್ತಲೇ ಮರೆತುಬಿಟ್ಟಿರುತ್ತಿದ್ದೆವು. ಆದರೆ ಕಡಿಮೆ ಬೆಲೆಕೊಟ್ಟು ತಂದ ಕಡಿಮೆ ಗುಣಮಟ್ಟದ್ದಾಗಿತ್ತೋ ಅಥವಾ ಬಾಬಣ್ಣ ಅವನ್ನು ತಣ್ಣಗಿನ ಜಾಗದಲ್ಲಿಟ್ಟಿರುತ್ತಿದ್ದನೋ ಏನೋ, ಅಲ್ಲಿ ಕೊಂಡ ಪಟಾಕಿಗಳಲ್ಲಿ ಹಲವು ಠುಸ್ ಗುಂಪಿಗೆ ಸೇರಿಬಿಡುತ್ತಿದ್ದವು. ಢಮಾರೆಂಬ ದೊಡ್ಡ ಶಬ್ದದೊಂದಿಗೆ ಹೊಟ್ಟಬೇಕಾದ ಮೆಣಸಿನಕಾಯಿ ಪಟಾಕಿ ಸುರುಸುರು ಬತ್ತಿಯಂತೆ ಸುರ್ರನೆ ಬೆಂಕಿಯನ್ನೆರಚುತ್ತ ಚೀರಾಡುತ್ತಿತ್ತು. ನಿಂತಲ್ಲೇ ಅಷ್ಟೆತ್ತರಕ್ಕೆ ನಕ್ಷತ್ರಗಳನ್ನೆರಚಬೇಕಾದ ಬಾಳೆಕಂಬ ಢಮಾರನೆ ಹೊಟ್ಟಿ ಆಕಾಶಕ್ಕೆ ನೆಗೆಯುತ್ತಿತ್ತು. ಇನ್ನು ಬಾಬಣ್ಣ "ಮೂರು ತೆಂಗಿನಮರದಷ್ಟು ಎತ್ತರಕ್ಕೆ ಹಾರತ್ತೆ ನೋಡು!" ಎಂದು ಬೂಸಿ ಹೊಡೆದು ಕೊಟ್ಟಿದ್ದ ರಾಕೆಟ್ ನೆಟ್ಟಗೆ ನಿಲ್ಲಿಸಿ ಉಡಾಯಿಸಿದರೂ ಬೆಂಕಿ ಅಂಟಿಸಿದವನನ್ನೇ ಅಟ್ಟಿಸಿಕೊಂಡು ಹೋಗಿ ಅಂಗಳದ ತುಂಬಾ ಅಟ್ಟಾಡಿಸಿದ ಘಟನೆಗಳೂ ನಡೆದಿದ್ದವು!
ಇನ್ನು ರಾಖಿ ಹಬ್ಬ ಬಂದರಂತೂ ಮುಗಿದೇ ಹೋಯಿತು, ಕೊರಳ ತುಂಬಾ ನಾನಾ ಬಣ್ಣ, ನೂಲು, ಸ್ಪಂಜುಗಳ ರಾಖಿಗಳ ಮಾಲೆ ಕಟ್ಟಿಕೊಂಡ ಬಾಬಣ್ಣನ ಅಂಗಡಿ ಸ್ವರ್ಗಲೋಕದ ಬಾಗಿಲೇ ಆಗಿಬಿಡುತ್ತಿತ್ತು. ರುಪಾಯಿಗೆ ಹತ್ತುಬರುವ ಉದ್ದುದ್ದ ತೆಳು ಎಳೆಗಳಿರುವ ಗೌರೀದಾರ, ರೂಪಾಯಿಗೆ ನಾಲ್ಕು ಬರುವ ಉಲ್ಲನ್ನಿನ ಪುಟ್ಟ, ಉರುಟು ತಲೆಯ ರಾಖಿ, ಅದರಲ್ಲೇ ಕೊಂಚ ದೊಡ್ಡ ತಲೆಯಿರುವ ಐವತ್ತು ಪೈಸೆಯದ್ದು, ಸಂತ್ರದ ತಗಡಿನ ಹಾಳೆಯ ಮೇಲೆ ಸ್ಪಂಜಿನ ಚಕ್ರವಿರುವ ಎರೆಡು ರೂಪಾಯಿಯ, ದೊಡ್ಡ ಗಾತ್ರದ ಅತಿ ದುಬಾರಿ ರಾಖಿ.. ಬೆಲೆಗೆ ತಕ್ಕಷ್ಟು ಗಾತ್ರ, ಗಾತ್ರಕ್ಕೆ ತಕ್ಕಷ್ಟು ಖುಷಿ! ಆ ದಿನ ಸ್ವಲ್ಪ ಬೇಗ ಹೊರಟು ಜೇಬಿನಲ್ಲಿದ್ದ ಐದೋ-ಆರೋ ರುಪಾಯಿಗಳನ್ನು ಬಾಬಣ್ಣನಂಗಡಿಯಲ್ಲಿ ಬಣ್ಣ ಬಣ್ಣದ ರಾಖಿಗಳಾಗಿ ಪರಿವರ್ತಿಸಿಕೊಂಡ ಮೇಲೇ ಎಲ್ಲರೂ ಶಾಲೆಗೆ ಹೋಗುತ್ತಿದ್ದುದು. ಹುಡುಗ-ಹುಡುಗಿಯರೆನ್ನದೆ, ಮೇಷ್ಟ್ರು-ಮಿಸ್ ಗಳೆನ್ನದೆ ಎಲ್ಲರ ಕೈಗೂ ರಾಖಿ ಕಟ್ಟುವ ಮೂಲಕ ಸಂಭ್ರಮ ವರ್ಗಾವಣೆಯಾಗುತ್ತಿತ್ತು. ಕೆಲವರಂತೂ ದಿನದ ಕೊನೆಯಲ್ಲಿ ಅತಿ ಕಷ್ಟದಲ್ಲಿ ಎರೆಡು ರಾಖಿಗಳನ್ನು ಉಳಿಸಿಕೊಂಡು "ಇದು ಅಪ್ಪ-ಅಮ್ಮಂಗೆ ಕಟ್ಟಕ್ಕೆ" ಎಂದು ಜಂಭದಿಂದ ಹೇಳಿಕೊಳ್ಳುತ್ತಿದ್ದರು! ಹೀಗೆ ಪ್ರತಿಯೊಂದು ಹಬ್ಬದ ಮುಗ್ಧ ಸಂಭ್ರಮವೂ ಈ ಅಂಗಡಿಯ ಬಾಗಿಲಿನಿಂದಲೇ ಹೊರಟು ಊರಿನೆಲ್ಲ ಚಳ್ಳೆ-ಪಿಳ್ಳೆಗಳ ಮನಮನಕ್ಕೆ ರವಾನೆಯಾಗುತ್ತಿತ್ತು.
ಬಾಬಣ್ಣ ಅಪ್ಪಿತಪ್ಪಿಯೂ ಮಕ್ಕಳಿಗೆ ಕಡ(ಸಾಲ) ಕೊಡುತ್ತಿರಲಿಲ್ಲ. ಮಕ್ಕಳು ಹೇಳುವ ಸಾಲಕ್ಕೆ ಅವರ ಅಪ್ಪಂದಿರನ್ನು ಹುಡುಕುವ ತಾಪತ್ರಯವನ್ನು ಅವನು ಅಪ್ಪಿತಪ್ಪಿಯೂ ಮೈಮೇಲೆಳೆದುಕೊಳ್ಳುತ್ತಿರಲಿಲ್ಲ. ಅದೊಂದು ಮಧ್ಯಾಹ್ನ ಊಟದ ಪಿರಿಯಡ್ನಲ್ಲಿ ಗೆಳೆಯನ ಜೊತೆ ರಾಖಿ ಕೊಳ್ಳಲು ಹೋದ ನನ್ನನ್ನು ಎರೆಡು ರೂಪಾಯಿಯ, ಅರಿಶಿಣ ಬಣ್ಣದ ದೊಡ್ಡ ಸ್ಪಂಜಿನ ರಾಖಿ ಇನ್ನಿಲ್ಲದಂತೆ ಸೆಳೆದಿತ್ತು. ಆದರೆ ಜೇಬಲ್ಲಿದ್ದುದು ಬರೀ ಎಂಟಾಣೆಯ ಬಿಲ್ಲೆ . "ಉಳಿದ ದುಡ್ಡು ಸಂಜೆ ಅಪ್ಪ ಕೊಡ್ತಾರೆ" ಎಂದು ಆಸೆಯಿಂದ ಚಾಚಿದ ಕೈಯ್ಯನ್ನು ಒರಟಾಗಿ ತಳ್ಳಿದ ಬಾಬಣ್ಣ "ಅದೆಲ್ಲ ಆಗಲ್ಲ" ಎಂದುಬಿಟ್ಟ. ಆ ಕ್ಷಣಕ್ಕೆ ಅವಮಾನವಾಗಿ ಕಣ್ತುಂಬಿ ಬಂದಿತ್ತಾದರೂ ಮುಂದೆಂದೂ ನಾನು ಯಾವ ಅಂಗಡಿಯಲ್ಲೂ 'ಕಡ' ಹೇಳುವ ಧೈರ್ಯ ಮಾಡಲಿಲ್ಲ. ಅದು ಬಾಬಣ್ಣನಂಗಡಿ ಕಲಿಸಿದ ಜೀವಮಾನದ ಪಾಠ.
ಅಂಗಡಿಯೊಳಗೇ ಬಾಬಣ್ಣ ಚಿಕ್ಕ ಹೋಟೆಲ್ ಸಹಾ ಇಟ್ಟಿದ್ದ. ಅಲ್ಲಿ ಬೆಳಗಿನ ತಿಂಡಿಗಳಾದ ದೋಸೆ, ಇಡ್ಲಿ, ವಡೆ, ಉಪ್ಪಿಟ್ಟುಗಳ ಜೊತೆ ಸಂಜೆಯ ತುಡು ಕಳೆಯುವ ಗೋಲಿಬಜೆ, ಪಕೋಡ, ಮೆಣಸಿನಕಾಯಿ ಬಜ್ಜಿ, ಟೀ, ಕಾಫಿಗಳು ಸದಾ ಸಿದ್ಧವಾಗಿರುತ್ತಿದ್ದವು. ಸಂಜೆಯ ಹೊತ್ತಿಗೆ ಕುಳಿತು ಹರಟುವವರಿಗೆ ಬಾಬಣ್ಣನ ಅಂಗಡಿಯೆಂಬುದು ಇಂದಿನ ಟಿವಿ9 ಸ್ಟುಡಿಯೋ ಇದ್ದಂತೆ. ಊರಿನ ನುರಿತ ಅರ್ಥಶಾಸ್ತ್ರಜ್ಞರು, ರಾಜಕೀಯ ವಿಶ್ಲೇಷಕರೆಲ್ಲ ಕಚ್ಚಿದ ಮೆಣಸಿನಕಾಯಿ ಬಜ್ಜಿಯ ಖಾರಕ್ಕೆ ಸ್ssssss ಎಂದು ಬಾಯಿಯಿಂದ ಗಾಳಿ ಎಳೆದುಕೊಳ್ಳುತ್ತಾ, ಸೊರ್ರನೆ ಬಿಸಿ ಚಾ ಹೀರುತ್ತಾ ಪರ-ವಿರೋಧದ ಚರ್ಚೆಯಲ್ಲಿ ತೊಡಗುತ್ತಿದ್ದರು. ತೋಟಕ್ಕೆ ಹಂದಿ ನುಗ್ಗಿದ್ದರಿಂದ ಹಿಡಿದು ಜಾರ್ಜ್ ಬುಶ್ ಬಾಂಬು ಹಾಕಿದ್ದರ ತನಕ, ವಾಜಪೇಯಿ ಸರಕಾರ ಗೆದ್ದಿದ್ದರಿಂದ ಹಿಡಿದು ವಾಸಣ್ಣನ ಮಗಳಿಗೆ ಗಂಡು ಗೊತ್ತಾದುದರ ತನಕ ಅದೆಷ್ಟೋ ರಾಷ್ಟ್ರ, ಅಂತರಾಷ್ಟ್ರ ಮಟ್ಟದ ಸಂಗತಿಗಳೆಲ್ಲ ಅಲ್ಲಿ ಕೇವಲ ನಾಲ್ಕು ಪ್ಲೇಟು ಬೋಂಡಾ ಹಾಗೂ ಫೋರ್ ಬೈ ಟೂ ಕಾಫಿಯ ಖರ್ಚಿನಲ್ಲಿ ಚರ್ಚಿತವಾಗಿ ಪರಿಹಾರ ಕಂಡುಕೊಳ್ಳುತ್ತಿದ್ದವು. ಈ ಎಲ್ಲ ಪರ-ವಿರೋಧ ಚರ್ಚೆಗಳ ನಡುವೆ ಆ್ಯಂಕರ್ ಆಗುತ್ತಿದ್ದ ಬಾಬಣ್ಣ ಯಾವ ಕಡೆಯವರಿಗೂ ಬೇಸರವಾಗದಂತೆ, ತನ್ನ ಹೋಟೆಲ್ ನ ಮಾರನೇ ದಿನ ಸಂಜೆಯ ಗೋಲಿಬಜೆಗೆ ಯಾವೊಬ್ಬ ಗಿರಾಕಿಯೂ ಮಿಸ್ ಆಗದಂತೆ ಎಚ್ಚರಿಕೆಯಿಂದ ಇಬ್ಬರ ಪಕ್ಷದಲ್ಲಿಯೂ ಮಾತನಾಡುತ್ತಿದ್ದ. ವಾಗ್ವಾದ ತಾರಕಕ್ಕೇರುವ ಸೂಚನೆ ಕಂಡಾಗೆಲ್ಲ "ಅಣ್ಣು ಹಾಂಡ್ರ ಮನೆ ಯಮ್ಮಿ ಹೊತ್ತಿಗೆ ಐದು ಲೀಟ್ರು ಹಾಲು ಕೊಡ್ತಂಬ್ರು, ಹೌದಾ ಮರ್ರೆ?" ಎಂದು ವಿಷಯ ಬದಲಾಯಿಸಿಬಿಡುತ್ತಿದ್ದ.
ರಸ್ತೆಗಿಂತ ಎತ್ತರದಲ್ಲಿದ್ದ ಬಾಬಣ್ಣನಂಗಡಿಯ ಕಟ್ಟೆಯ ಮೇಲೆ ಕುಳಿತರೆ ಹಳ್ಳಿಯ ಸಂಜೆಯ ದೃಶ್ಯಗಳು ಕಲಾವಿದನೊಬ್ಬನ ಚಂದದ ಚಿತ್ರದಂತೆ ಕಣ್ತುಂಬಿಕೊಳ್ಳುತ್ತಿದ್ದವು. ದಿನಗೆಲಸ ಮುಗಿಸಿ ದೊಡ್ಡದಾಗಿ ಹರಟುತ್ತಾ ತಂತಮ್ಮ ಮನೆಗಳಿಗೆ ಮರಳುತ್ತಿರುವ ಗಂಡಾಳು-ಹೆಣ್ಣಾಳುಗಳು, ಬೆನ್ನಿಗೆ ಬ್ಯಾಗು ತಗುಲಿಸಿಕೊಂಡು ಚಿಲಿಪಿಲಿಗುಟ್ಟುತ್ತಾ ಪುಟಪುಟನೆ ಓಡುವ ಶಾಲೆಯ ಮಕ್ಕಳು, ಪಟ್ಟಣದಿಂದ ಮರಳುವವರನ್ನು ತುಂಬಿಕೊಂಡು ಗಂಟೆಗೊಂದರಂತೆ ವಾಲಾಡುತ್ತಾ ಉಸ್ಸೋ ಎಂದು ಏರು ಹತ್ತಿ ಬರುವ ಬಸ್ಸುಗಳು, ಅದರಿಂದಿಳಿದ ಜಂಭದ ನಡಿಗೆಯ ಕಾಲೇಜು ಹುಡುಗಿಯರು, ಅವರನ್ನು ಹಿಂಬಾಲಿಸುವ ನೇತಾಡುವ ಬ್ಯಾಗಿನ ಹುಡುಗರು, ಪೇಟೆಗೆ ರಿಪೇರಿ ಮಾಡಿಸಲೆಂದು ಒಯ್ದಿದ್ದ, ತೋಟಕ್ಕೆ ಔಷಧಿ ಹೊಡೆಯುವ ಮೆಶಿನ್ನನ್ನು ಹೊತ್ತು ಮನೆಯೆಡೆಗೆ ನಡೆಯುತ್ತಿರುವ ದ್ಯಾಮೇಗೌಡರು, ಇರುವ ಕಾಲುಭಾಗ ರಸ್ತೆಯ ಮುಕ್ಕಾಲುಭಾಗವನ್ನು ಆಕ್ರಮಿಸಿಕೊಂಡು, ಪಿಡಬ್ಲುಡಿಯವರೂ ನಾಚುವಂತೆ ರಸ್ತೆಯನ್ನಳೆಯುತ್ತ ನಡೆಯುವ ಪಾನಮತ್ತ 'ಮಧು'ಲೋಕ ಚಕ್ರವರ್ತಿಗಳು, ಕೆಮ್ಮೋಡಗಳ ಹಿನ್ನಲೆಯಲ್ಲಿ ಹಾರುತ್ತಾ ದೂರ ದಿಗಂತದಲ್ಲೆಲ್ಲೋ ಮರೆಯಾಗಿ ಹೋಗುವ ಹಕ್ಕಿಗಳು, ಅದೇ ಹಾದಿಯಲ್ಲಿ ಕೊನೆಗೆ ತಾನೂ ಮುಳುಗಿಹೋಗುವ ಸೂರ್ಯ... ಹಳ್ಳಿ ಪರಿಸರದ ಪರದೆಯ ಮೇಲೆ ಮೂಡುವ ಪ್ರತಿ ದೃಶ್ಯಕ್ಕೂ ಈ ಅಂಗಡಿ ಕಟ್ಟೆಯೇ ಬಾಲ್ಕನಿ ಸೀಟು. ಕವಿದ ಕತ್ತಲ ನಡುವೆ ಚಲಿಸುವ ಬೆಳಕಿನ ಡಬ್ಬದಂತೆ ಸಾಗಿಬಂದ, ಪಟ್ಟಣದಿಂದ ಬರುವ ಕಟ್ಟಕಡೆಯ ಬಸ್ಸಾದ ಗಾಯತ್ರೀ ಬಸ್ಸೂ ಶೆಡ್ಡು ಸೇರಿದಾಗ ಬಾಬಣ್ಣ ಆಕಳಿಸುತ್ತ ಮೇಲೇಳುತ್ತಿದ್ದ. ಅದೇ ಬಸ್ಸಿಗೆ ಬಂದಿಳಿದವನ್ಯಾರನ್ನೋ "ಕಾಮತ್ ಬಸ್ಸು ತಪ್ಸಿಕೊಂಡ್ಯನೋ" ಎಂದು ಕೇಳುತ್ತ, ಈ ಊರಿಗೆ ಮದುವೆಮಾಡಿಕೊಟ್ಟ ತನ್ನ ಮಗಳನ್ನು ನೋಡಲೆಂದು ದೂರದೂರಿನಿಂದ ಬಂದಿಳಿದ ಹೆಸರು ಗೊತ್ತಿಲ್ಲದ ಹಿರಿಯರನ್ನು "ಏನು ಭಟ್ರೇ, ಅರಾಮಾ?" ಎಂದು ಕುಶಲ ವಿಚಾರಿಸುತ್ತ ಅಂಗಡಿಯ ಬಾಗಿಲು ಮುಚ್ಚುತ್ತಿದ್ದ. ಒಳಗಡೆ ಮಾರಾಟವಾಗದ ಚಾಕ್ಲೇಟು, ಸಿಹಿತಿಂಡಿ, ಆಟಿಕೆಗಳೆಲ್ಲ ಮರುದಿನ ತಮ್ಮನ್ನರಸಿ ಬರಲಿರುವ ಚಿಣ್ಣರಿಗಾಗಿ ಕಾಯುತ್ತ ತಂತಮ್ಮ ಭರಣಿಗಳೊಳಗೆ ನಿದ್ರೆಗೆ ಜಾರುತ್ತಿದ್ದವು.
(ತುಷಾರದ ಫೆಬ್ರವರಿ 2018ರ ಸಂಚಿಕೆಯಲ್ಲಿ ಪ್ರಕಟಿತ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ