ಸಮಯ ಬೆಳಗ್ಗೆ ಆರಾಗಿದೆ. ಹಾಗಂತ ಹೇಳುತ್ತಿರುವುದು "ವೇಕಪ್ ವೇಕಪ್ ವೇಕಪ್, ಇಟ್ಸ್ ಎ ಬ್ರಾಂಡ್ ನ್ಯೂ ಡೇ" ಎಂದು ಬಾಯ್ಬಡಿದುಕೊಳ್ಳುತ್ತಿರುವ
ಅಲರಾಂ. ನಿದ್ರೆಗಣ್ಣಿನಲ್ಲೇ ಅದರ ತಲೆಮೇಲೆ ಕುಕ್ಕಿ ಇನ್ನೊಂದರ್ಧ ಗಂಟೆ ಬಾಯ್ತೆರೆದು
ಕಾಯುತ್ತಿರುವ ಒತ್ತಡ ತುಂಬಿದ ಹಗಲಿನಿಂದ ಅಡಗಿಕೊಳ್ಳುವವನಂತೆ ಹೊದಿಕೆಯೊಳಗೆ
ಹುದುಗಿಕೊಳ್ಳುತ್ತೇನೆ. ಮತ್ತೊಮ್ಮೆ ಅಲರಾಂ ಕೂಗಿದಾಗ ಧಿಗ್ಗನೆದ್ದುಕುಳಿತು, ಕಣ್ಣಿಗೆ ಮೊದಲು ಕಂಡ ಬಾಗಿಲನ್ನೇ
ಬಾತ್ರೂಮಿನ ಬಾಗಿಲೆಂದು ತೆಗೆದು, ಮುಖಕ್ಕೆ
ಪ್ರಖರ ಬೆಳಕು, ತಂಪುಗಾಳಿ ಸೋಕಿದಾಗ ಅದು ಕೋಣೆಯ
ಹೊರಬಾಗಿಲೆಂಬುದು ಅರಿವಾಗಿ ಮತ್ತೆ ಕೋಣೆಯೊಳಗೆ ಮರಳಿ, ಬ್ರಹ್ನಾಂಡವಾಗಿ
ಆಕಳಿಸುತ್ತಾ, ತಡಬಡಿಸಿ ತಯಾರಾಗಿ, ಬಿಎಂಟಿಸಿ ಬಸ್ಸಿನಲ್ಲಿ
ನೇತಾಡುತ್ತಿರುವ ಇದೇ ಹೊತ್ತಿಗೆ,
ಊರಿನಲ್ಲಿ ಅಡಿಕೆಕುಯಿಲು ಭರದಿಂದ ಸಾಗುತ್ತಿದೆ!
ಈ ಬೆಂಗಳೂರು ತೀರಾ ಯಾಂತ್ರಿಕ ಅನ್ನಿಸುವುದು ಈ ಕಾರಣಕ್ಕೇ. ಇಲ್ಲಿನ ಕಾಯಕದ ಕ್ಯಾಲೆಂಡರ್ ನಲ್ಲಿ ಸಂವತ್ಸರದ ಮೊಟ್ಟಮೊದಲ ದಿನದಿಂದ ಕಟ್ಟಕಡೆಯ ಕ್ಷಣದ ತನಕ ಯಾವುದೇ ಸೀಸನ್ ಎಂಬುದಿಲ್ಲ. ಇಲ್ಲಿನ ಸಿಮೆಂಟು-ಕಾಂಕ್ರೀಟಿನ ಆಫೀಸುಗಳು ಯಾವ ಸುಗ್ಗಿ ಬಂದರೂ ತೆನೆತೂಗಿ ನಿಲ್ಲುವುದಿಲ್ಲ. ಎಷ್ಟೇ ಮಣ್ಣು, ನೀರು, ಗೊಬ್ಬರ ಎರೆದರೂ ಇವು ಚಿಗುರಿಬರುವುದಿಲ್ಲ. ಚೈತ್ರಮಾಸದ ಮೊದಲ ದಿನ ಹೇಗೆ ಬಾಗಿಲು ತೆರೆಯುತ್ತವೆಯೋ ಫಾಲ್ಗುಣದ ಕೊನೆಯ ದಿನವೂ ಹಾಗೇ ಕದ ಮುಚ್ಚಿಕೊಳ್ಳುತ್ತವೆ. ಅದು ಪಟ್ಟಣ ಜೀವನದ ಅತಿದೊಡ್ಡ ಬೇಸರ.
ನಾನಿಲ್ಲಿ ಅಲರಾಂ ಆರಿಸಿಮಲಗಿದ ಅದೇ ಹೊತ್ತಿಗೆ ಅಲ್ಲಿ, ದೂರದ ಊರಿನಲ್ಲಿ ಅಪ್ಪ, ಅಮ್ಮ ಎದ್ದು ನಿಮಿಷಗಳೇ ಕಳೆದಿರುತ್ತವೆ. ಅದೂ ಯಾವುದೇ ಅಲರಾಂ ಬಾಯ್ಬಡಿದುಕೊಳ್ಳದೇ! ಚಂದದ ಛಳಿಯೊಂದು ಮಂಜಿನ ಸಮೇತ ಮನೆಯೆದುರು ಸೂರ್ಯನ ಮೊದಲ ಕಿರಣಗಳಲ್ಲಿ ಛಳಿಕಾಯಿಸಿಕೊಳ್ಳುತ್ತಾ ನಿಂತಿರುವ ಗುಡ್ಡವನ್ನೂ, ಒಳಗೊಳಗೇ ದುಂಬಿಯ ಕನಸುಕಾಣುತ್ತಿರುವ, ಇನ್ನೂ ಪೂರ್ತಿ ಅರಳದ ಅಂಗಳದ ಅರೆನಿದಿರೆಯ ಹೂಗಳನ್ನೂ, ಮುಗಿಲು ತೊಡಿಸಿದ ಇಬ್ಬನಿಯುಂಗುರ ತೊಟ್ಟು ನಿಶ್ಚಿತಾರ್ಥವಾದ ಹುಡುಗಿಯಂತೆ ಬೀಗುತ್ತಿರುವ ಹಸಿರು ಹುಲ್ಲನ್ನೂ, ಬೋನಿನಲ್ಲಿ ಕಾಲು-ಬಾಲಗಳನ್ನೆಲ್ಲ ಒಂದಾಗಿಸಿಕೊಂಡು ಇರಕಿ ಹೊಡೆದು ಬೆಚ್ಚಗೆ ಮಲಗಿರುವ ಟೀಪುವನ್ನೂ ಆವರಿಸಿಕೊಂಡುಬಿಟ್ಟಿರುತ್ತದೆ. ಅಪ್ಪ, ಒಡಲತುಂಬಾ ಸುಲಿದ ಅಡಿಕೆಗಳನ್ನು ತುಂಬಿಕೊಂಡು ಕುಳಿತಿರುವ ಹಂಡೆಯ ಬುಡಕ್ಕೆ ಬೆಂಕಿ ಒಟ್ಟುತ್ತಿರುತ್ತಾನೆ. ಕಾಲ್ಗೆಜ್ಜೆ ಸಪ್ಪಳದಿಂದಲೇ ಅಮ್ಮ ಎದ್ದಿದ್ದು ಗೊತ್ತಾದ ಕೊಟ್ಟಿಗೆಯ ಕರು ನಿಂತಲ್ಲೇ ಕುಪ್ಪಳಿಸುತ್ತಿರುತ್ತದೆ. ಕಟ್ಟಿಗೆ, ಕೊನಮಟ್ಟೆ, ಸಿಪ್ಪೆ, ಒಣ ತೆಂಗಿನ ಗರಿಗಳ ನಡುವೆ ಭಗಭಗನೆ ಹೊತ್ತಿಕೊಳ್ಳುವ ಒಲೆಯೊಳಗಿನ ಬೆಂಕಿ ಸುತ್ತಲ ಛಳಿಯೊಡನೆ ಕದನಕ್ಕಿಳಿದಿರುತ್ತದೆ.
ಅದೇ ಇಪ್ಪತ್ತು ಚಿಲ್ಲರೆ ವರ್ಷಗಳಷ್ಟು ಹಿಂದಕ್ಕೆ ಹೋದರೆ? ಇದೇ ದಿನದ ಇದೇ ಕ್ಷಣದಲ್ಲಿ ಆ ಛಳಿ, ಇಬ್ಬನಿ, ಸಿಪ್ಪೆ ರಾಶಿಗಳ ನಡುವೆ ನಾಲ್ಕು ವರ್ಷದ ಪುಟ್ಟು ಕುಳಿತಿರುತ್ತಿದ್ದ! ಒಲೆಯೊಳಗಿನ ಬೆಂಕಿ ಬಣ್ಣಬಣ್ಣದ ಕೆನ್ನಾಲಿಗೆಗಳನ್ನು ಚಾಚಿ ಉರಿಯುತ್ತ ಶಾಖ ಬೀರಿ ಆಗಷ್ಟೇ ಎದ್ದುಬಂದ ಅವನನ್ನು 'ಬಾ ಬಾ' ಎಂದು ಕರೆದರೆ ಸುತ್ತಲಿನ ಛಳಿ ಹಲ್ಲುಗಳನ್ನು ಕಟಗುಟ್ಟಿಸಿ 'ಹೋಗು ಹೋಗು' ಎಂದು ತಳ್ಳಿದಂತಾಗಿ ಹೆಚ್ಚೂಕಡಿಮೆ ಒಲೆಯೊಳಗೇ ಕುಳಿತಂತೆ ಕುಳಿತು, ಒಳಗೆ ನಡೆಯುವ ಬಣ್ಣಬಣ್ಣದ ಜ್ವಾಲೆಗಳ ಲಾಸ್ಯವನ್ನೂ, ಬೆದರಿಸುವ ಚಿಟಪಟ ಸಿಡಿತಗಳನ್ನೂ ನೋಡುತ್ತಾ ನಡುಗುತ್ತಿರುವ ಪ್ರತಿಯೊಂದು ಜೀವಕೋಶದೊಳಕ್ಕೂ ಶಾಖವನ್ನು ತುಂಬಿಕೊಳ್ಳುವುದು ಛಳಿಗಾಲದ ದಿನವೊಂದಕ್ಕೆ ಸಿಗುವ ಅತ್ಯುತ್ತಮ ಆರಂಭ.
ಒಲೆ ಒಟ್ಟಿದ ನಂತರ ಮುಂದಿನ ಕೆಲಸ ಸಿಪ್ಪೆ ಆರಿಸುವುದು. ಪಣತ ಕೊಟ್ಟಿಗೆಯೊಳಗೆ ನಿನ್ನೆ ರಾತ್ರೆ ಹನ್ನೊಂದರ ತನಕ ಭಾಗ್ಯ, ಲಕ್ಷ್ಮಿ, ಶಾರದ, ಮಂಜ, ರಮೇಶರೆಲ್ಲರೂ ಸುಲಿದುಹೋದ ಅಡಿಕೆಯ ಸಿಪ್ಪೆಗಳು ಆ ತುದಿಯಿಂದ ಈ ತುದಿಯತನಕ ಹರಡಿಕೊಂಡಿರುತ್ತವೆ. ಅದರೊಳಗೆ ಅಡಗಿಕೊಂಡಿರುವ, ಅಡಿಕೆ ಸುಲಿಯುವಾಗ ಕೈಜಾರಿದ 'ಸುಲಿಬೇಳೆ'ಗಳನ್ನು ಒಂದೊಂದಾಗಿ ಆರಿಸಿತೆಗೆಯಬೇಕು. ಅಪ್ಪ ಅಮ್ಮ ಪಟಪಟನೆ ಸಿಪ್ಪೆಗಳನ್ನು ಕೆದಕುತ್ತಾ, ತಲೆಮರೆಸಿಕೊಂಡ ಸುಲಿಬೇಳೆಗಳನ್ನು ಆಚೆ ತೆಗೆಯುತ್ತಿದ್ದರೆ ಮೂರು ಸಿಪ್ಪೆಗಳ ಅಗಲದಷ್ಟಿರುವ ಪುಟ್ಟ ಕೈಯಿಂದ ಬೇಗಬೇಗನೆ ಕೆದಕಲಾರದೆ ಹಿಂದುಳಿಯುವ ಪುಟ್ಟುವಿಗೆ ಒಂದೇ ಒಂದು ಸುಲಿಬೇಳೆಯೂ ಸಿಗುವುದಿಲ್ಲ. ಅಷ್ಟರಲ್ಲಿ ಆರಿಸಬೇಕಾದ ಸಿಪ್ಪೆಯೆಲ್ಲ ಮುಗಿದು ಏನೂ ಸಿಗದ ಪುಟ್ಟು 'ವ್ಯಾssss..' ಎಂದು ವರಾತ ತೆಗೆಯಬಾರದೆಂದು ಅಮ್ಮನೇ ಅವನು ಹುಡುಕುವ ಸಿಪ್ಪೆಗಳೊಳಗೆ ಗುಟ್ಟಾಗಿ ಒಂದೆರೆಡು ಅಡಿಕೆಗಳನ್ನು ಹುದುಗಿಸಿಟ್ಟು, ಅವು ಅವನ ಕೈಗೆ ಸಿಗುವಂತೆ ಮಾಡುತ್ತಾಳೆ. ಅಂಗಳದಲ್ಲಿ ರಾಶಿಬಿದ್ದಿರುವ 'ಕೊನಮಟ್ಟೆ'ಗಳನ್ನು ಅಪ್ಪ ಬುಟ್ಟಿಗೆ ತುಂಬಿಸಿಕೊಂಡು 'ಧರೆಹೊಂಡ'ಕ್ಕೆಸೆಯಲು ಹೋಗುವಾಗ ಪುಟಾಣಿ ಕೊನಮಟ್ಟೆಯೊಂದನ್ನು ಕೈಯ್ಯಲ್ಲಿ ಹಿಡಿದ ಪುಟ್ಟು ಹಿಂದೆಯೇ ಪುಟಪುಟನೆ ಓಡುತ್ತಾನೆ. ಸ್ವಲ್ಪ ಹೊತ್ತಿಗೆಲ್ಲಾ ಒಲೆಯ ಮೇಲೆ ಹಂಡೆಯಲ್ಲಿರುವ ಅಡಿಕೆ ಒಳಗಿರುವ ಚೊಗರಿನಲ್ಲಿ ಚೆನ್ನಾಗಿ ಕುದ್ದು ಕೆಂಪುಬಣ್ಣ ಪಡೆದುಕೊಂಡಿರುತ್ತದೆ. ತಳದ ತುಂಬಾ ತೂತುಗಳಿರುವ 'ಚೊಗರು ಹುಟ್ಟ'ನ್ನು ಹಂಡೆಯೊಳಗಿಳಿಸಿ ಹೊರತೆಗೆದರೆ ಅದರ ತುಂಬಾ ಕುದ್ದು ಕೆಂಪಾದ ಸುಲಿಬೇಳೆಗಳು! ಚೊಗರೆಲ್ಲಾ ತಳದ ತೂತುಗಳಲ್ಲಿ ಬಸಿದುಹೋಗಿ ಉಳಿಯುವ ಅಡಿಕೆಯನ್ನು ಚಿಕ್ಕ ಬುಟ್ಟಿಯೊಂದರಲ್ಲಿ ಸಂಗ್ರಹಿಸುವ ಅಪ್ಪ ಅದನ್ನು ಹೊತ್ತು, ಏಣಿಯ ಮೂಲಕ ಚಪ್ಪರಕ್ಕೆ ಒಯ್ಯುತ್ತಾನೆ. ಅಲ್ಲಿ ಸಾಲಾಗಿ ಹಾಸಿದ 'ಹೊಗದಟ್ಟಿ'ಗಳ ಮೇಲೆ ಮುಂದಿನ ಐದಾರು ಬಿಸಿಲುಗಳಲ್ಲಿ ಚೆನ್ನಾಗಿ ಒಣಗಬೇಕಿರುವ ಅವನ್ನು ಬಿಡಿಬಿಡಿಯಾಗಿ ಹರಡಿ ಕೆಳಗಿಳಿದು ಬರುತ್ತಾನೆ. ಅಷ್ಟರಲ್ಲಿ ಅಮ್ಮ ಇನ್ನೊಂದಿಷ್ಟು ಬೆಂದಡಿಕೆಗಳನ್ನು ಸೋಸಿ ಬುಟ್ಟಿ ತುಂಬಿಸಿ ತಯಾರಿಟ್ಟಿರುತ್ತಾಳೆ. ಇದು, ಹಂಡೆಯೊಳಗಿನ ಅಷ್ಟೂ ಬೆಂದಡಿಕೆ ಚಪ್ಪರದ ಮೇಲಕ್ಕೆ ವರ್ಗಾವಣೆಯಾಗುವ ತನಕ ಹೀಗೇ ಮುಂದುವರಿಯುತ್ತದೆ. ಅಲ್ಲೇ ಪಕ್ಕದಲ್ಲಿ ಎರೆಡು ಇಟ್ಟಿಗೆಗಳನ್ನು ಒಲೆಯಂತೆ ಜೋಡಿಸಿ, ಅದರ ಮೇಲೊಂದು ಚಿಕ್ಕ ಪಾತ್ರೆಯಿಟ್ಟು, ಒಳಗೊಂದಿಷ್ಟು ನೀರು-ಅಡಿಕೆ ಸಿಪ್ಪೆ ತುಂಬಿಸಿಟ್ಟು, ಸೌಟು ಹಾಕಿ ಕುಚುಕುತ್ತಿರುವ ಪುಟ್ಟುವಿನ 'ಆಟದ ಒಲೆ'ಯಲ್ಲೂ ಸಹಾ ಹೀಗೇ ಅಡಿಕೆ ಬೇಯುತ್ತಿದೆ, ಅವನ ಕಲ್ಪನೆಯ ಹಂಡೆಯೊಳಗೆ.
ಈಗಾಗಲೇ ತೆಗೆದ ಅಡಿಕೆ ಕೊನೆಗಳು ಖಾಲಿಯಾಗಿರುವುದರಿಂದ ಕೊನೆ ತೆಗೆಯುವ ತಮ್ಮಯ್ಯ ಕೊಟ್ಟೆಮಣೆ ಹಿಡಿದು ಬಂದಿದ್ದಾನೆ. ಜೊತೆಗೇ ಅವನು ತಂದಿರುವ ಬಳುಕುವ, ತುದಿಯಲ್ಲಿ ಕೊಕ್ಕೆಯಿರುವ ದೋಟಿ ಈ ಲೋಕದ್ದೇ ಅಲ್ಲವೇನೋ ಎಂಬಷ್ಟು ಉದ್ದವಾಗಿರುವುದು ನೋಡಿ ಪುಟ್ಟುವಿಗೆ ಆಶ್ಚರ್ಯವಾಗಿದೆ. ಎಲ್ಲರೂ ತಿಂಡಿ, ಚಾ ಮುಗಿಸಿ ತೋಟದತ್ತ ನಡೆದಿದ್ದಾರೆ. ಅಲ್ಲಿ ತಮ್ಮಯ್ಯ ತನ್ನ ಕಾಲು ಹಾಗೂ ಅಡಿಕೆಮರಗಳ ಸುತ್ತ ಕೊಟ್ಟೆಮಣೆ ತೊಟ್ಟು, ಮರವನ್ನು ತಬ್ಬಿಕೊಂಡು ಕೋತಿಯಂತೆ ಮೇಲೇರಿದ್ದಾನೆ. ಅವನು ಅಪಾಯಕಾರಿಯಾಗಿ ವಾಲಾಡುತ್ತಿರುವ ಅಡಿಕೆ ಮರದ ತುದಿಯಲ್ಲಿ ಕುಳಿತು, ಅಕ್ಕಪಕ್ಕದ ಮರಗಳ ಕತ್ತಿಗೆ ದೋಟಿ ಹಾಕಿ ಅವು ಕತ್ತಿಗೆ ಕಟ್ಟಿಕೊಂಡಿರುವ ಕೊನೆಗಳನ್ನು ಕೀಳುತ್ತಾ, ಸಾಕ್ಷಾತ್ ಆಂಜನೇಯನಷ್ಟೇ ನಿಪುಣತೆಯಲ್ಲಿ ಮರದಿಂದ ಮರಕ್ಕೆ ದಾಟಿಕೊಳ್ಳುತ್ತಾ, ಬೆಳೆದ ಅಡಿಕೆ ಕೊನೆಗಳನ್ನು ಕಿತ್ತು ತನ್ನ ಸೊಂಟಕ್ಕೆ ಸಿಕ್ಕಿಸಿಕೊಂಡ ಹಗ್ಗದಲ್ಲಿ ಜಾರಿಬಿಡುತ್ತಿರುವುದು, ಹಗ್ಗದ ಇನ್ನೊಂದು ತುದಿ ಹಿಡಿದು ಕೆಳಗೆ ನಿಂತಿರುವ ಅಪ್ಪ ಮೇಲಿಂದ ಸುಂಯ್ಯನೆ ಜಾರಿಬರುವ ಕೊನೆ ನೆಲಕ್ಕಪ್ಪಳಿಸದಂತೆ ಹಿಡಿದು ಪಕ್ಕಕ್ಕಿಡುವುದು ಜಗತ್ತಿನ ಅತಿದೊಡ್ಡ ಸಾಹಸದಂತೆ ಕಾಣುತ್ತಿದೆ. ತೆಗೆದ ಕೊನೆಗಳನ್ನೆಲ್ಲ ಬುಟ್ಟಿಗೆ ತುಂಬಿಸಿಕೊಂಡ ಸತೀಶ ಹೊತ್ತು ಮನೆಯಂಗಳಕ್ಕೊಯ್ದು ರಾಶಿಹಾಕುತ್ತಿದ್ದಾನೆ. ಸಂಜೆಯ ಹೊತ್ತಿಗೆ ತೆಗೆದ ಕೊನೆಗಳನ್ನೆಲ್ಲ ಎಣಿಸಿ 'ಕುತ್ತರಿ' ಹಾಕಲಾಗಿದೆ. "ಈ ಸಲ ಗೋಟಡಿಕೆನೇ ಜಾಸ್ತಿ ಅನ್ಸತ್ತೆ" ಎಂದ ಅಪ್ಪನಿಗೆ "ಇಲ್ಲ ಅಯ್ಯ, ಕೇಕೋಡ್ರ ತೋಟ್ದಲ್ಲೂ ಇದೇ ಕತಿ" ಎಂದು ತಮ್ಮಯ್ಯ ಸಮಾಧಾನ ಹೇಳಿದ್ದಾನೆ. ಸ್ವಲ್ಪ ಹೊತ್ತಿಗೇ ಸಾಕಿ, ಭಾಗ್ಯ, ಲಕ್ಷ್ಮಿ, ಸದೆಯ, ಕಿಟ್ಟರೆಲ್ಲ ಬಂದು ತಂತಮ್ಮ ಕತ್ತಿಹೂಡಿ ಕುಳಿತಿದ್ದಾರೆ. ಕರೆಂಟು ಹೋದರೆ ಎಮರ್ಜೆನ್ಸಿಗೆಂದು ಸೀಮೆ ಎಣ್ಣೆ ಬುಡ್ಡಿಗಳನ್ನು ತಯಾರಿಡಲಾಗಿದೆ. "ಸಣ್ಣಯ್ಯ, ನಿಮ್ ಕೊಟ್ಗಿಗೆ ಹುಲಿ ನುಗ್ಗಿದ್ ಕತಿ ಗೊತ್ತಿತಾ ನಿಮ್ಗೆ?" ಎಂದು ಸದೆಯ ಪುಟ್ಟುವನ್ನು ಮಾತಿಗೆಳೆದಿದ್ದಾನೆ. ಎಷ್ಟೋ ವರ್ಷದ ಹಿಂದೆ ಹುಲಿಯೊಂದು ತೋಟದಾಸಿ ಬಂದು ಕೊಟ್ಟಿಗೆಯಲ್ಲಿದ್ದ ದನದ ಮೇಲೆರಗಿದ್ದು, ಅಲ್ಲೇ ಇದ್ದ ದೈತ್ಯ ಹೋರಿ ಅದರೊಂದಿಗೆ ಹೋರಾಟಕ್ಕಿಳಿದು ಶೌರ್ಯ ಮೆರೆದಿದ್ದು, ಸದ್ದು ಕೇಳಿ ಎಲ್ಲರೂ ಗಲಾಟೆ ಮಾಡುತ್ತ ಎದ್ದು ಬಂದಾಗ ಅನಾಮತ್ತು ಎಂಟಡಿಯೆತ್ತರದ ಗೋಡೆಯಾಚೆಗೆ ನೆಗೆದುಹೋದ ಹುಲಿಯ ಬಾಲವಷ್ಟೇ ಕಂಡಿದ್ದು... ಸದೆಯ ಹೇಳುತ್ತಿರುವ ಈ ಭಯಾಶ್ಚರ್ಯ ಬೆರೆತ ರೋಚಕ ಕಥೆ ದೃಶ್ಯಗಳಾಗಿ ಪುಟ್ಟುವಿನ ಕಲ್ಪನೆಯಲ್ಲಿ ಚಲನಚಿತ್ರದಂತೆ ಮೂಡಿಬರುತ್ತಿದೆ. "ನಮ್ ಶಂಕ್ರಂಗೆ ಮೊನ್ಮೊನ್ನೆ ಕಾಪಿಕಾನ್ ಗುಡ್ದಂಗೆ ಹುಲಿ ಹೆಜ್ಜೆ ಕಂಡೀತಂಬ್ರು" ಎಂದ ಕಿಟ್ಟ ಪುಟ್ಟುವಿನ ಭಯವನ್ನು ದುಪ್ಪಟ್ಟುಗೊಳಿಸಿದ್ದಾನೆ. ಅಂದು ರಾತ್ರೆ ಅವನಿಗೆ ಭೀಕರ ಹುಲಿಯೊಂದು ಅಡಿಕೆ ಮರಹತ್ತಿ ಕೊನೆ ತೆಗೆಯುತ್ತಿರುವಂತೆ, ತೋಟಕ್ಕೆ ಬಂದ ಅವನ ಮೇಲೆ ಘರ್ಜಿಸುತ್ತಾ ಎರಗಿದಂತೆ ವಿಚಿತ್ರ, ಭಯಾನಕ ಕನಸು ಬೀಳಲಿದೆ.
ಹೀಗೆ ಹುತ್ತದೊಳಗಿನ ನಾಗರಹಾವಿನಿಂದ ಹಿಡಿದು ಹಿತ್ತಲಕೇರಿಯ ನಾಗಪ್ಪಣ್ಣನ ತನಕ ಎಲ್ಲಾ ವಿಷಯಗಳೂ ಅಲ್ಲಿ ಚರ್ಚೆಯಾಗುತ್ತಿವೆ. ಅಡಿಕೆ ಸುಲಿಯಲು ಬಂದವರಿಗೆಂದು ಅಮ್ಮ ಪೂರಿ-ಪಲ್ಯ ಮಾಡಿದ್ದಾಳೆ. ಅದನ್ನೇ ತಿಂದು 'ನನಗೆ ಊಟ ಬೇಡ' ಎಂದು ಹಠಮಾಡಿದ ಪುಟ್ಟುವಿಗೆ ಬಲವಂತವಾಗಿ ಮಜ್ಜಿಗೆ ಕಲಸಿದ ಅನ್ನದ ನಾಲ್ಕು ತುತ್ತು ತಿನ್ನಿಸಲಾಗಿದೆ. ಬಲ್ಬಿನೆಡೆಗೆ ಆಕರ್ಶಿತವಾಗಿ ಹೊರಗಿನ ಕತ್ತಲಿನಿಂದ ಗುಂಯ್ ಎನ್ನುತ್ತಾ ಹಾರಿಬಂದ 'ದುಂಬಿ'ಯನ್ನು ಹೊಡೆದು ಸಾಯಿಸಲಾಗಿದೆ. "ಇಂಥಾ ಒಂದು ದುಂಬೀನ ಕೊಂದ್ರೆ ಒಂದು ತೆಂಗಿನ ಮರ ಉಳಿಸಿದಷ್ಟು ಪುಣ್ಯ ಬರೆತ್ತೆ" ಎಂದಿದ್ದಾಳೆ ಅಮ್ಮ. ಸ್ವಲ್ಪ ಹೊತ್ತಿಗೇ ಕರೆಂಟುಹೋಗಿ ಸೀಮೆಣ್ಣೆ ಬುಡ್ಡಿಗಳನ್ನು ಹಚ್ಚಲಾಗಿದೆ. ನುಸಿ, ಹಾತೆಗಳೆಲ್ಲ ದೀಪದ ಸುತ್ತ ಹಾರಾಡಿ ರೆಕ್ಕೆ ಸುಟ್ಟುಕೊಳ್ಳುತ್ತಿವೆ. ಛಳಿ ಹೆಚ್ಚಾಗುತ್ತಿದೆ. ಸದೆಯ ಹೇಳಿದ ಕೊಳ್ಳಿದೆವ್ವದ ಕಥೆಯನ್ನು ಕೇಳಿಸಿಕೊಳ್ಳುತ್ತಾ ಒಲೆಯ ಪಕ್ಕ ಹಾಸಿದ ಗೋಣಿಯಮೇಲೇ ನಿದ್ರೆಹೋದ ಪುಟ್ಟುವನ್ನು ಅಮ್ಮ ಮನೆಯೊಳಗೆ ಮಲಗಿಸಿಬಂದಿದ್ದಾಳೆ. ಸಮಯ ಕಳೆದಂತೆ ನಿದ್ರಾದೇವಿ ಕಾಟ ಜಾಸ್ತಿಯಾಗುತ್ತಾ ಎಲ್ಲರೂ ಹಾ... ಎಂದು ಆಕಳಿಸತೊಡಗಿದ್ದಾರೆ. ಹತ್ತೂ ಮೊವ್ವತ್ತಕ್ಕೆ ಎಲ್ಲರೂ ಎದ್ದು ತಾವು ಸುಲಿದ ಅಡಕೆಯನ್ನು ಕೊಳಗದಲ್ಲಿ ಅಳೆಯತೊಡಗಿದ್ದಾರೆ. ಎಲ್ಲರಿಗಿಂತ ಹೆಚ್ಚು ಕೊಳಗ ಸುಲಿದ ಸಾಕಿ ಗುಟ್ಟಾಗಿ ಒಳ್ಳೊಳ್ಳೇ ಕೊನೆಗಳನ್ನು ಬಡಿದಿಟ್ಟುಕೊಂಡಿದ್ದಳೇನೋ ಎಂದು ಭಾಗ್ಯಳಿಗೆ ಅನುಮಾನವಾಗಿದೆ. ಅಪ್ಪನ ಪುಸ್ತಕದಲ್ಲಿ ಲೆಕ್ಕ ಬರೆಸಿದ ಎಲ್ಲರೂ ಕೈ ತೊಳೆದುಕೊಂಡು ತಂತಮ್ಮ ಮನೆಯತ್ತ ನಡೆದಿದ್ದಾರೆ.
***************
ಹೆಚ್ಚೂಕಡಿಮೆ ಅಕ್ಟೋಬರ್ ಕೊನೆಯ ವಾರದಿಂದ ಫೆಬ್ರವರಿ ಅಂತ್ಯದ ತನಕ (ಅಡಿಕೆ ಆರಿಸಿ ಮೂಟೆಕಟ್ಟುವುದೂ ಸೇರಿ) ವಿವಿಧ ಹಂತಗಳಲ್ಲಿ ಸಾಗುವ 'ಅಡಿಕೆ ಕುಯಿಲು' ನಾಲ್ಕು ವರ್ಷದ ಪುಟ್ಟುವಿನಿಂದ ಹಿಡಿದು ಎಂಭತ್ತು ವರ್ಷದ ಪುಟ್ಟೇಗೌಡರ ತನಕ ಎಲ್ಲರೂ ಒಂದಿಲ್ಲೊಂದು ರೀತಿ ತನ್ನ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತದೆ. ನಾವು ಅದೇ ಆಫೀಸಿನ ಅದೇ ಕಂಪ್ಯೂಟರ್ ಎದುರು ಕುಳಿತು, ಕೀಬೋರ್ಡನ್ನು ದಿನವಿಡೀ ಕಟಕಟನೆ ಕುಟ್ಟಿ ಮನೆಗೆ ಮರಳುವ ಅವಧಿಯಲ್ಲಿ ಈ ಮಂದಿ ಅದೆಷ್ಟೋ ಅರೋಗ್ಯಕರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ನಿಸರ್ಗದ ಚಿಕ್ಕ ಬದಲಾವಣೆಯನ್ನೂ ತಮ್ಮದಾಗಿಸಿಕೊಳ್ಳುವ ಹಳ್ಳಿಯ ಜೀವನಕ್ರಮಕ್ಕೂ, ನಮ್ಮ ಅನುಕೂಲಕ್ಕಾಗಿ ನಿಸರ್ಗವನ್ನೇ ಬದಲಾಯಿಸುತ್ತಿರುವ ಪಟ್ಟಣ ಜೀವನಕ್ಕೂ ನಡುವಿನ ವ್ಯತ್ಯಾಸವೇನೆಂಬುದನ್ನು ನಮ್ಮ ಇಂದಿನ ಅರೋಗ್ಯ, ವಾತಾವರಣಗಳೇ ಹೇಳುತ್ತಿವೆ. ಆದರೆ ಈಗೀಗ ಮಾರುಕಟ್ಟೆಯ ಅಸ್ಥಿರತೆ ಹಾಗೂ ಕೆಲಸಗಾರರ ಕೊರತೆಯಿಂದ ಅಡಿಕೆ ಕೊಯಿಲು ತನ್ನ ಸಹಜ ಸೊಬಗನ್ನು ಕಳೆದುಕೊಳ್ಳುತ್ತಿದೆ. ಮೊದಲು ಟಿವಿಗಳು ಹಾಗೂ ನಂತರ ಅಡಿಕೆ ಸುಲಿಯುವ ಮೆಶಿನ್ಗಳು ಬಂದಮೇಲೆ ರಾತ್ರೆ ಅಂಗಳವನ್ನು ತುಂಬುತ್ತಿದ್ದ ರೋಚಕ ಕಥೆಗಳು, ತಮಾಷೆಗಳು, ಚರ್ಚೆಗಳೆಲ್ಲಾ ಇಲ್ಲವಾಗುತ್ತಾ, ಹಳೆಯ ತಲೆಮಾರೊಂದರ ಅಗಾಧ ಅನುಭವ, ಕಥೆ, ಹಾಡು, ಪಾಡು, ಜ್ಞಾನಗಳು ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತಿದ್ದ ಇಂತಹಾ ಅಪೂರ್ವ ಸಂದರ್ಭಗಳು ಮಾಯವಾಗುತ್ತಿವೆ. ಓದಿಕೊಂಡವರು ಪಟ್ಟಣ ಸೇರಬೇಕೆನ್ನುವುದು ನದಿಗಳೆಲ್ಲ ಕಡಲು ಸೇರಬೇಕೆನ್ನುವಷ್ಟೇ ಅನಿವಾರ್ಯ ಸಂಗತಿಯೆಂಬ ತಪ್ಪು ಕಲ್ಪನೆ ಹೀಗೇ ಮುಂದುವರೆದಲ್ಲಿ ಮುಂದೊಂದು ದಿನ ಈ ಅಡಿಕೆ ಕೊಯಿಲು, ಗದ್ದೆಕೊಯಿಲು, ನಾಟಿ, ಸುಗ್ಗಿಗಳೆಲ್ಲ ಹೀಗೆ ಕೇವಲ ಪಟ್ಟಣದ ಬಸ್ಸುಗಳಲ್ಲಿ ನೇತಾಡುತ್ತ ಸ್ಮರಿಸಿಕೊಂಡ ನೆನಪುಗಳಲ್ಲಿ, ಸಾಪ್ತಾಹಿಕಗಳಲ್ಲಿ ಓದಿ ಮರೆತ ಬರಹಗಳಲ್ಲಿ ಉಳಿದುಹೋದರೂ ಆಶ್ಚರ್ಯವಿಲ್ಲ.
('ನಿಮ್ಮೆಲ್ಲರ ಮಾನಸ'ಲ್ಲಿ ಪ್ರಕಟಿತ ಲೇಖನ)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ