ನಾನಿಲ್ಲಿ ಕ್ಷೇಮ. ನೀನು ಹೇಗಿದ್ದಿ? ನಿನ್ನ ಅಜ್ಜಿಗೆ ಅನಾರೋಗ್ಯವೆಂಬ ಸುದ್ದಿ ಕೇಳಿದೆ. ಅವರೀಗ ಹೇಗಿದ್ದಾರೆ? ಶಾಲೆ, ಶಿಕ್ಷಕ ವೃತ್ತಿಗಳೆಲ್ಲ ಹೇಗೆ ನಡೆಯುತ್ತಿವೆ?
ನೀನು ಬರೆಯುವ ಪತ್ರಗಳಿಗೆ ಉತ್ತರ ಬರೆಯಬೇಕೆಂದು ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಆದರೆ ಬೆಂಗಳೂರಿನ ಈ ಯಂತ್ರಮಯ ಬದುಕಿನಿಂದ ಪತ್ರ, ಪುಸ್ತಕಗಳಂತಹಾ ಅಂತರಂಗದ ಒಡನಾಡಿಗಳು ಆಚೆ ಹೋಗಿ ಅದೆಷ್ಟೋ ವರುಷಗಳೇ ಕಳೆದಿವೆ. ಮೊಬೈಲ್ನಲ್ಲಿ ಬರುವ ‘ಲೋಡಿಂಗ್.. ಪ್ಲೀಸ್ ವೆಯ್ಟ್’ ಎಂದು ತಿರುಗುವ ಚಕ್ರದ ಅರ್ಧ ನಿಮಿಷದ ಕಾಯುವಿಕೆಯನ್ನೇ ಸಹಿಸಲಾಗದ ಈ ಧಾವಂತದ ಬದುಕಿನಲ್ಲಿ ನಿಮಿಷಗಟ್ಟಲೆ ಯೋಚಿಸಿ, ಭಾವನೆಗಳನ್ನೆಲ್ಲ ಆಚೆ ತೆರೆದು ಪದವಾಗಿಸಿ, ಪತ್ರ ಬರೆಯುವ ತಾಳ್ಮೆ, ಆಸಕ್ತಿ ಎಲ್ಲಿಂದ ಬರಬೇಕು ಹೇಳು? ನಿಜ ಮಿತ್ರ.. ಈ ಮಹಾನಗರದ ದಿನಚರಿಯ ತುಂಬಾ ಅದೆಂಥದೋ ವೇಗ, ಧಾವಂತ, ಗಡಿಬಿಡಿ, ಅಸಮಾಧಾನಗಳು… ನಗರಿಗೆ ನಗರಿಯೇ ತನ್ನೊಳಗೇ ಆಚೆಯಿಂದೀಚೆ, ಈಚೆಯಿಂದಾಚೆ ಸುತ್ತುತ್ತಿದೆ. ಇಪ್ಪತ್ತೇ ನಿಮಿಷಕ್ಕೆ ತಲುಪಬೇಕಿರುವ ಪಿಜ್ಜಾಗಳು, ಮಳೆ, ಟ್ರಾಫಿಕ್, ಆಕ್ಸಿಡೆಂಟ್ ನಂತಹಾ ಯಾವ ದುರ್ಘಟನೆ ಸಂಭವಿಸಿದರೂ ಸಮಯಕ್ಕೆ ಸರಿಯಾಗಿ ಲಾಗಿನ್ ಆಗಲೇಬೇಕಾದ ಕಂಪನಿಯ ಉದ್ಯೋಗಗಳು, ಉರಿಗೋಪಿ ಬಾಸ್ ಒಡ್ಡುವ ಕೆಲಸ ಕಳೆದುಕೊಳ್ಳುವ ಬೆದರಿಕೆಗಳು, ಮೊವ್ವತ್ತೇ ಸೆಕೆಂಡಿನಲ್ಲಿ ಸಿಗ್ನಲ್ ದಾಟಿಬಿಡಿರೆಂದು ವೇಗವನ್ನು ಉದ್ದೀಪಿಸುವ ಟ್ರಾಫಿಕ್ ಲೈಟ್ ಗಳು, ಐದು ನಿಮಿಷ ತಡವಾದರೂ ತಪ್ಪಿ ಹೋಗುವ ನೌಕರಿಗಳು, ಬ್ರೇಕು ಹಾಕಿದರೆ ಜಗಳಕ್ಕೇ ನಿಲ್ಲುವ, ಓಡುತ್ತಲೇ ಇರು ಎಂದು ಅರಚುವ ಸುತ್ತಮುತ್ತಲ ವಾಹನ ಸವಾರರು… ಇವೆಲ್ಲವೂ ಇಲ್ಲಿನ ಜನರನ್ನು ಹೆದರಿಸಿ, ಬೆದರಿಸಿ, ಆಸೆ ತೋರಿಸಿ ಓಟಕ್ಕೆ ಹಚ್ಚುತ್ತಿವೆ, ತನ್ನ ಬಾಲವನ್ನು ತಾನೇ ಹಿಡಿಯಲು ನಿಂತಲ್ಲೇ ಗಿರಕಿ ಹೊಡೆಯುವ ಶ್ವಾನದಂತೆ… ಯಾಕಾಗಿ ಈ ಓಟ? ಯಾರಿಗಾಗಿ ಈ ಧಾವಂತ? ಯಾವ ಪುರುಷಾರ್ಥಕ್ಕಾಗಿ ಇಷ್ಟು ಗಡಿಬಿಡಿ? ಯಾವ ದಿಗ್ವಿಜಯಕ್ಕಾಗಿ ಈ ಪರಿಯ ಕ್ರೋಧ - ಪೈಪೋಟಿ? ಸ್ಪರ್ಧೆಯಲ್ಲಿರುವ ಯಾರಿಂದಲೂ ಉತ್ತರ ಸಿಗಲಾರದು. ತಮಾಷೆ ಗೊತ್ತಾ? ಇವೆಲ್ಲದರ ಮಧ್ಯೆ ಭೋರಿಡುವ ಆ್ಯಂಬುಲೆನ್ಸುಗಳು ತಮ್ಮೊಳಗೆ ತಳಮಳಿಸುತ್ತಿರುವ ಜೀವದ ಸಮೇತ ಈ ಟ್ರಾಫಿಕ್ಕು, ಸಿಗ್ನಲ್ಲುಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಇಲ್ಲಿ ಬದುಕಿನಿಂದ ಸಾವಿಗಿರುವ ದೂರ ಬರೀ ಎರೆಡೋ ಮೂರೋ ಕಿಲೋಮೀಟರ್. ಅದನ್ನೂ ಸಹಾ ಕ್ರಮಿಸಲಾಗದೇ ಅದೆಷ್ಟೋ ಜೀವಗಳು ಮುದುಡಿಹೋಗುತ್ತವೆನ್ನುವುದೇ ಇಲ್ಲಿನ ಅತ್ಯಾಧುನಿಕ ಬದುಕಿನ ವ್ಯಂಗ್ಯ.
ಈ ಮಹಾನಗರಿಯ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಬಿಡು.. ಹೇಗಿದೆ ನಿನ್ನ ಶಿಕ್ಷಕ ವೃತ್ತಿ? ಪುಣ್ಯವಂತ ನೀನು! ಸಾಹಿತ್ಯವನ್ನು ಓದುವುದಕ್ಕೇ ಸಮಯವಿಲ್ಲದ ಈ ಕಾಲದಲ್ಲಿ ಅದನ್ನು ಬೋಧಿಸುವ ಶಿಕ್ಷಕವೃತ್ತಿ ಪಡೆದಿದ್ದೀಯ. ನಾವು ಮರೆತೇ ಹೋಗಿರುವ ಕುವೆಂಪು, ತೇಜಸ್ವಿ, ಜೋಗಿ, ಕಾಯ್ಕಿಣಿ, ಬೇಂದ್ರೆಯವರೆಲ್ಲರ ಜೊತೆ ಪ್ರತಿದಿನದ ಪ್ರತಿ ನಿಮಿಷವೂ ಮಾತನಾಡುತ್ತೀಯ! ಒಡನಾಡುತ್ತೀಯ! ಸಹ್ಯಾದ್ರಿ ಮಲೆಗಳ ನಡುವೆಯೇ ಕುಳಿತು ‘ಮಲೆಗಳಲ್ಲಿ ಮದುಮಗಳು’ ಓದುತ್ತೀಯ. ತೇಜಸ್ವಿಯ ‘ಹಕ್ಕಿ ಪುಕ್ಕ’ ಓದುವ ಹೊತ್ತಿಗೆ ನಿನ್ನ ಮನೆಯ ಮೇಲೇ ಸಾಲು ಸಾಲು ಹಕ್ಕಿಗಳು ಬಂದುಕುಳಿತಿರುತ್ತವೆ. ಕಾರಾಂತರ ‘ಬೆಟ್ಟದ ಜೀವ’ವನ್ನು ಕುಳಿತು ಓದಲಿಕ್ಕೆ ನಿನ್ನ ಮನೆಯ ಬಾಜುವಿನಲ್ಲೇ ಬೆಟ್ಟಗಳಿವೆ! ಹುಟ್ಟಿದೂರಿನಲ್ಲೇ ಬದುಕು ಕಂಡುಕೊಂಡಿರುವ ಕೆಲವೇ ಕೆಲವು ಪುಣ್ಯವಂತರ ಪೈಕಿ ನೀನೂ ಒಬ್ಬನೆಂದು ನೆನೆಯುವಾಗ ಅದೇನೋ ಒಂದು ತೆರನಾದ ಖುಷಿಯೆನಿಸುತ್ತದೆ.
ಆದರೆ, ತಪ್ಪುತಿಳಿಯಬೇಡ, ಇತ್ತೀಚೆಗೆ ಹಳ್ಳಿಗರ ಮೇಲೆ ತೀವ್ರ ಅಸಮಾಧಾನವೊಂದು ಎದ್ದು ಕುಣಿಯುತ್ತಿದೆ. ನಿಮಗೆಲ್ಲ ನೀವು ವಾಸಿಸುತ್ತಿರುವ ಪರಿಸರದ ಪ್ರಾಮುಖ್ಯತೆಯೇ ಗೊತ್ತಿಲ್ಲವೇನೋ ಅನಿಸುತ್ತಿದೆ. ಕ್ಷಮಿಸು, ಸಾಕ್ಷಾತ್ ನಮ್ಮೂರಿನಲ್ಲೇ ನಡೆಯುತ್ತಿರುವ ‘ಮರಮೇಧ’ವನ್ನು ನೋಡಿದ ಮೇಲೇ ನಾನು ಈ ಅಭಿಪ್ರಾಯ ತಾಳಿರುವುದು. ನಂಬುತ್ತೀಯೋ ಇಲ್ಲವೋ, ಕಳೆದ ಮೂರ್ನಾಲ್ಕು ವರ್ಷಗಳಿಂದ ಗಮನಿಸುತ್ತಿದ್ದೇನೆ, ಪ್ರತೀಬಾರಿ ಊರಿಗೆ ಹೋದಾಗಲೂ ಪಕ್ಕದಲ್ಲಿನ ಕಾಡಿನಲ್ಲಿ ಹಿಂದಿನ ಬಾರಿ ಇದ್ದ ಮೂರ್ನಾಲ್ಕು ಮರಗಳು ಈ ಸಲ ಇರುವುದಿಲ್ಲ! ಗುಡ್ಡದ ಏರಿಗಳು, ಮರ-ಮಟ್ಟಿಗಳು, ಪೊದೆ, ಗಿಡಗಂಟಿಗಳೆಲ್ಲ ತಾವು ಇದ್ದದ್ದೇ ಸುಳ್ಳೆಂಬಂತೆ ಮಾಯವಾಗುತ್ತಿವೆ. ಅವು ಏನಾಗಿಹೋದವೆಂದು ತಿರುಗಿನೋಡಿದರೆ ಅಲ್ಲೇ ಪಕ್ಕದಲ್ಲಿರುವ ಮನೆಯೆದುರು ಸಾಲಾಗಿ ಪೇರಿಸಿರುವ ರಾಶಿ ರಾಶಿ ಕಟ್ಟಿಗೆಗಳು ಕಣ್ಣಿಗೆ ಬೀಳುತ್ತವೆ. ಕಳೆದ ಸಲವಂತೂ ನನ್ನ ಹೈಸ್ಕೂಲಿನ ಪಕ್ಕವೇ ಇದ್ದ ದೈತ್ಯ ಹಲಸಿನ ಮರವೊಂದು ಕಾಣೆಯಾಗಿತ್ತು. ಎಷ್ಟು ಚಂದದ ಮರ ಗೊತ್ತಾ? ಪ್ರತಿದಿನ ಆಟದ ಅವಧಿಯ ಬೆಲ್ ಬಾರಿಸಿದಾಗಲೂ ನೇರ ಅದರ ಬುಡಕ್ಕೇ ಓಡುತ್ತಿದ್ದೆವು. ಕಾಗದದ ಮುದ್ದೆಗಳ ಬಾಲು ಹಾಗೂ ಕೈಯ ಬ್ಯಾಟಿನ ನಮ್ಮ ಕ್ರಿಕೆಟ್ ಗೆ ಆ ಮರವೇ ವಿಕೆಟ್ ಆಗುತ್ತಿತ್ತು. ಅದೆಷ್ಟೋ ಬಾರಿ ಆ ಮರದ ಬುಡದಲ್ಲೇ ಬೋರ್ಡನ್ನಿಟ್ಟು, ಹತ್ತೆಂಟು ಮರಗಳ ಆ ಪುಟ್ಟ ವನವನ್ನೇ ಕೊಠಡಿಯಾಗಿಸಿ ಪಾಠ ಮಾಡುತ್ತಿದ್ದರು. ‘ಗೀಜಗನ ಗೂಡು’ ಪಾಠ ಮಾಡುವಾಗ ಆ ಮರದಲ್ಲೇ ಕಟ್ಟಿದ್ದ ಗೂಡೊಂದನ್ನು ಮಾಸ್ತರು ಉದಾಹರಿಸಿ ವಿವರಿಸಿದ್ದು ಇಂದಿಗೂ ನೆನಪಿನಲ್ಲುಳಿದಿದೆ. ಇಷ್ಟೆಲ್ಲ ನೆನಪಿನ ಹಸಿರೆಲೆಗಳಿದ್ದ ಆ ಮರದ ಜಾಗದಲ್ಲೀಗ ಗೋರಿಯಂತಹಾ ಕಡಿದುಳಿದ ಬುಡ ಮಾತ್ರ ಉಳಿದುಕೊಂಡಿದೆ. ಏನಾಗಿದೆ ನಮ್ಮ ಜನರಿಗೆ? ಯಾಕೆ ಹೀಗೆ ಹಠಕ್ಕೆ ಬಿದ್ದಂತೆ ಅರಣ್ಯವನ್ನು ನಾಶಮಾಡುತ್ತಿದ್ದಾರೆ? ಪರಿಸರಕ್ಕೊಂದು ಚೆಲುವನ್ನೂ, ವಿರಮಿಸಲಿಕ್ಕೆ ನೆರಳನ್ನೂ, ವಾತಾವರಣಕ್ಕೊಂದಿಷ್ಟು ತಂಪನ್ನೂ, ಉಸಿರಾಟಕ್ಕೆ ಗಾಳಿಯನ್ನೂ, ಭೂಮಂಡಲಕ್ಕೇ ಜೀವವನ್ನೂ ದಯಪಾಲಿಸಿರುವ ಅರಣ್ಯವನ್ನು ಕಡಿದು ಕಟ್ಟಿಗೆಯಾಗಿಸಿ ಯಾರ ಶವಸಂಸ್ಕಾರಕ್ಕೆಂದು ಕೂಡಿಸಿಡುತ್ತಿದ್ದಾರೆ? ಈ ಭೂಮಿಯ ಮೇಲಿಂದ ಕಟ್ಟಕಡೆಯ ಮರವೂ ಕಡಿದುರುಳಿಸಲ್ಪಟ್ಟ ದಿನ ಇವರೇನನ್ನು ಉಸಿರಾಡುತ್ತಾರೆ? ನನಗಂತೂ ಅರ್ಥವೇ ಆಗುವುದಿಲ್ಲ.
ನಿನಗೆ ಗೊತ್ತಾ ಗೆಳೆಯ? ಕೆಲವು ವರ್ಷಗಳ ಹಿಂದೆ ನಮ್ಮೀ ಮಹಾನಗರಿಯಲ್ಲಿ ಮೆಟ್ರೋ ನಿರ್ಮಾಣಕ್ಕೆಂದು ಜಯನಗರದ ಕೆಲ ಭಾಗಗಳಲ್ಲಿ ಮರಗಳ ಬುಡಕ್ಕೆ ಹಾಗೂ ಉದ್ಯಾನವನಗಳ ಕತ್ತಿಗೆ ಕೊಡಲಿಯಿಟ್ಟಾಗ ಅಲ್ಲಿನ ನಿವಾಸಿಗಳೆಲ್ಲ ಪುಟಿದೆದ್ದುಕುಳಿತಿದ್ದರು. ‘ಅಭಿವೃದ್ಧಿ ಬೇಕು, ಆದರೆ ಅದು ಮರಗಿಡಗಳ ಉಳಿವಿನೊಂದಿಗೇ ಜರುಗಬೇಕು’ ಎಂದು ಸಾರಿದ್ದರು. ಮೆಟ್ರೋ ಮಾತ್ರವಲ್ಲ, ಇಂಥದೇ ಎಷ್ಟೋ ಅಭಿವೃದ್ಧಿ ಕಾರ್ಯಗಳು ಜರುಗಿದಾಗಲೂ, ನಗರಕ್ಕವು ಅವಶ್ಯಕವಾದವೇ ಆಗಿದ್ದಾಗಲೂ ಜನ ಅವುಗಳಿಂದಾಗುವ ಪರಿಸರ ನಾಶದ ವಿರುದ್ಧ ಸೆಟೆದುನಿಂತಿದ್ದಾರೆ. ಎರೆಡು ದಶಕದಿಂದೀಚೆಗೆ ನಗರೀಕರಣದ ಹೆಸರಿನಲ್ಲಿ ತಾವು ಕಳೆದುಕೊಂಡಿರುವುದೇನ್ನುವುದು ಇಲ್ಲಿ ಕನಿಷ್ಠ ಕೆಲ ಮಂದಿಗಾದರೂ ಅರ್ಥವಾಗಿದೆ. ‘ಕಳೆದುಕೊಳ್ಳುವಷ್ಟು ಹಸಿರೀಗ ನಮ್ಮ ಬಳಿ ಇಲ್ಲ’ ಎಂಬುದು ಅರಿವಾಗಿದೆ. ಆದರೆ ಸದಾ ಹಸಿರಿನ ನೆರಳಿನಲ್ಲೇ ಬದುಕುತ್ತಿರುವ, ಫಲಾಹಾರಗಳನ್ನು ನೇರ ಮರ-ಗಿಡಗಳಿಂದಲೇ ಕಿತ್ತು ತಿನ್ನುತ್ತಿರುವ ನಮ್ಮ ಹಳ್ಳಿಗರಲ್ಲೇಕೆ ಈ ಕನಿಷ್ಠ ಪ್ರಜ್ಞೆಯೂ ಇಲ್ಲ? ಬೇರೆ ಯಾರದೋ ಕಥೆ ಬಿಡು, ನನ್ನ ಹುಟ್ಟೂರೇ ಕಳೆದ ಕೆಲ ವರ್ಷಗಳಲ್ಲಿ ನಗರವಾಗುವ ಹುಚ್ಚು ಧಾವಂತಕ್ಕೆ ಬಿದ್ದಂತೆ ಬದಲಾಗುತ್ತಿದೆ. ಸುಮ್ಮನೆ ನಿಂತು ನೋಡುವಾಗ, ಏಳು ವರ್ಷಗಳ ಕೆಳಗೆ ನಡುರಾತ್ರಿಯಲ್ಲಿ ನಾನು ಬೆಂಗಳೂರಿನ ಬಸ್ಸು ಹತ್ತಿ ಇತ್ತ ಹೊರಡುತ್ತಿದ್ದಂತೆಯೇ ನನ್ನ ಊರು ಸಹಾ ಯಾವುದೋ ಬಸ್ಸು ಹತ್ತಿ ಮತ್ತೆಲ್ಲಿಗೋ ಹೊರಟುಹೋಯಿತೇನೋ ಅನ್ನಿಸುವಷ್ಟು ಪರಿವರ್ತಿತವಾಗಿದೆ. ಬದಲಾವಣೆಯೆಂದರೆ ಮತ್ತೇನಲ್ಲ, ಇಂದು ಮರವಿದ್ದ ಜಾಗದಲ್ಲಿ ನಾಳೆ ಮನೆಯೋ, ಮಳಿಗೆಯೋ ಹುಟ್ಟುವುದು ಅಷ್ಟೇ.
ಇದನ್ನೆಲ್ಲ ನೋಡುವಾಗ ನನಗೆ ತೇಜಸ್ವಿಯವರ ಬರೆದ ಸಾಲೊಂದು ನೆನಪಿಗೆ ಬರುತ್ತದೆ. “ಆಹಾರಕ್ಕಾಗಿ ಪ್ರಾಣಿಗಳೂ, ಮನುಷ್ಯರೂ ಮಾಡುತ್ತಿದ್ದ ಬೇಟೆಯಿಂದ ಪ್ರಾಣಿವರ್ಗಕ್ಕೆ ವಿನಾಶದ ಅಂಚಿಗೆ ಹೋಗುವಷ್ಟು ಹಾನಿಯಾದ ಉದಾಹರಣೆಗಳು ಕಡಿಮೆ. ಆದರೆ ಔದ್ಯಮಿಕ ಶೋಷಣೆ ಪ್ರಾರಂಭವಾದರೆ ಸಾಕು, ಆ ಪ್ರಾಣಿ ವಿನಾಶದ ಅಂಚಿಗೆ ಸರಿದಿದ್ದನ್ನು ನೋಡಬಹುದು” ಎಂಬ ಅವರ ಮಾತು ಅರಣ್ಯನಾಶಕ್ಕೂ ಅನ್ವಯವಾಗುತ್ತದೆ. ಮನೆ ಕಟ್ಟಲಿಕ್ಕಾಗಿ ಮರಕಡಿಯುವುದನ್ನು ಒಪ್ಪೋಣ, ಆದರೆ ಕಟ್ಟಿಗೆ, ಪೀಠೋಪಕರಣಗಳ ತಯಾರಿಸಿ ಮಾರಲಿಕ್ಕೆ, ಒಲೆಗೆ ಒಟ್ಟಿ ಬೆಂಕಿ ಕಾಸಲಿಕ್ಕೆ, ಪರ್ಯಾಯ ಮಾರ್ಗವಿರುವ ಮತ್ತೆಂತದೋ ಉದ್ದೇಶಕ್ಕೆ ಕಾನನದ ಹನನವಾಗುವುದು ಎಷ್ಟು ಸರಿ? ಕಳೆದುಕೊಳ್ಳುವಷ್ಟು ಕಾಡು ನಮ್ಮ ಬಳಿಯೆಲ್ಲಿದೆ? ಒಂದು ಮರ ಕಡಿದರೆ ಎರೆಡು ಗಿಡ ನೆಡಿ ಎನ್ನುತ್ತದೆ ಸರ್ಕಾರ. ಆದರೆ ಇಲ್ಲಿ ಬರೀ ಕಡಿದ ಮರದ ಬೊಡ್ಡೆಗಳೇ ಕಾಣುತ್ತಿವೆಯಲ್ಲದೆ ನೆಟ್ಟ ಸಸಿಗಳೆಲ್ಲಿವೆ? ಯಾರಪ್ಪನ ಮನೆಯ ಸೊತ್ತೂ ಅಲ್ಲದ ಈ ಹಸಿರು ದೇಗುಲಗಳನ್ನು ಕೆಡವಿದ ಈ ವಿಧ್ವಂಸಕರ ಬಳಿ ಮಾತನಾಡಲು ಹೋದರೆ ತೋಳು ಮಡಿಚಿಕೊಂಡೇ ಬರುವಾಗ, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಮ್ಮ ನಾಯಕರುಗಳೇ ಇವರನ್ನು ಬೆಂಬಲಿಸುವಾಗ ಇದನ್ನೆಲ್ಲ ತಡೆಯುವುದಾದರೂ ಹೇಗೆ?
ಕೇಳುತ್ತಾ ಹೋದರೆ ಪ್ರೆಶ್ನೆಗಳು ಸಾವಿರಾರಿವೆ. ನಾನೀಗ ಇಲ್ಲಿ, ಹದಿನೇಳು ಮಹಡಿಯ ಕಟ್ಟಡದ ಮಧ್ಯದಲ್ಲಿರುವ, ನಾಲ್ಕು ದಿಕ್ಕಿನಲ್ಲೂ ಗೋಡೆಗಳೇ ಸುತ್ತುವರಿದಿರುವ ಕೋಣೆಯೊಂದರ ಕೃತಕ ಬೆಳಕಿನಡಿ ಕುಳಿತು ಇಂತಹಾ ಉತ್ತರವಿಲ್ಲದ ಪ್ರೆಶ್ನೆಗಳ ಬರೆಯುತ್ತಿರುವ ಹೊತ್ತಿಗೆ ಹೊರಗಡೆ ನನಗೆ ಕಾಣದ ಆಗಸದಲ್ಲಿ ಸೂರ್ಯ ಮುಳುಗುತ್ತಿದ್ದಾನೆ. ನಮ್ಮೂರ ಗುಡ್ಡದಮೇಲೆ ಬಣ್ಣದ ಚೆಂಡಾಗಿಮುಳುಗುವ ಅದೇ ಸೂರ್ಯ ಇಲ್ಲಿ ಕೇವಲ ಗಡಿಯಾರದ ಮುಳ್ಳಿನಲ್ಲಿ ಅಸ್ತಂಗತನಾಗುತ್ತಾನೆ ತಮಾಷೆ ಗೊತ್ತಾ? ನೆಲದಿಂದ ಏಳಂತಸ್ತಿನಷ್ಟು ಎತ್ತರದಲ್ಲಿದ್ದೂ ನನ್ನ ಮನೆಯ ಯಾವುದೇ ಕಿಟಕಿ, ಬಾಗಿಲಿನಿಂದಲೂ ಅವನು ಕಾಣಿಸುವುದಿಲ್ಲ. ಆಧುನಿಕತೆ ಸೊಕ್ಕಿ ನಿಂತಿರುವ ಈ ಸೆರೆಮನೆಯಂತಹಾ ಮನೆಯಲ್ಲಿ ಬಲ್ಬು, ಟ್ಯೂಬ್ ಲೈಟುಗಳ ಹೊರತಾಗಿ ಮತ್ಯಾವ ಸೂರ್ಯನೂ ಉದಯಿಸುವುದೇ ಇಲ್ಲ! ಹೀಗೆ ಅದೆಷ್ಟೋ ಸೂರ್ಯೋದಯ, ಸುರ್ಯಾಸ್ತಗಳೆಂಬ ಸೃಷ್ಟಿಯ ಸುಂದರ ಚಿತ್ರಗಳು ಕಣ್ಮರೆಯಲ್ಲೇ ಮುಗಿದುಹೋಗಿವೆಯೋ ಲೆಕ್ಕವಿಟ್ಟವರಾರು? ಈ ತಪ್ಪಿದ ಲೆಕ್ಕ ನಮ್ಮ ಮಕ್ಕಳ ಬದುಕಿನಲ್ಲೂ ಮುಂದುವರಿಯಬಾರದೆಂದರೆ ನಾವಿದರ ಬಗ್ಗೆ ಇಂದಿನಿಂದಲೇ ಗಂಭೀರವಾಗಿ ಚಿಂತಿಸಬೇಕಿದೆ. ನೀನೇನನ್ನುತ್ತೀ?
ಇಂತಿ ನಿನ್ನ ಉತ್ತರದ ನಿರೀಕ್ಷೆಯಲ್ಲಿ,
-ವಿನಾಯಕ ಅರಳಸುರಳಿ.
('ನಿಮ್ಮೆಲ್ಲರ ಮಾನಸ'ದಲ್ಲಿ ಪ್ರಕಟಿತ ಲೇಖನ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ