ಶನಿವಾರ, ಜುಲೈ 20, 2019

ಮದುವೆ ಛತ್ರದ ಚಿತ್ರಗಳು...



'ರಾಧಾ ವೆಡ್ಸ್ ಕೃಷ್ಣಮೂರ್ತಿ'
ಇಡೀ ದ್ವಾಪರಯುಗದಲ್ಲಿ ನಡೆಯದೇ ಹೋದ ಮದುವೆಯೊಂದು ಈಗ ಲಕ್ಷಾಂತರ ವರ್ಷಗಳ ನಂತರ ನಡೆಯುತ್ತಿರುವಂತೆ ಕಾಣುತ್ತಿರುವ ಆ ಬೋರ್ಡನ್ನು ದ್ವಾರಬಾಗಿಲಿನಲ್ಲಿ ತೊಟ್ಟುಕೊಂಡು ನಿಂತಿರುವ ಛತ್ರದ ಹೆಸರು ಏನೋ ಇದೆ. ಹೆಸರು  ಏನೇ ಆದರೂ ಅವುಗಳೊಳಗೆ ನಡೆಯುವುದು ಒಂದೇ ತಾನೇ? ಮದುವೆ! ಬಣ್ಣ ಬಳಿದ ಥರ್ಮಾಕೋಲಿನಲ್ಲಿ ಸುಂದರವಾಗಿ ಕೆತ್ತಿರುವ ಹುಡುಗನ ಹೆಸರಿನ ಕೆಳಗೆ 'ಬಿ.ಇ.' ಎಂದೂ, ಹುಡುಗಿಯ ಹೆಸರ ಕೆಳಗೆ 'ಎಲ.ಎಲ್.ಬಿ' ಎಂದೂ ಸಿನೆಮಾದ ಹೆಸರಿನ ಕೆಳಗೆ ಬರೆಯುವ ಟ್ಯಾಗ್ ಲೈನ್ ನಂತೆ ಹೆಸರಿನ ಅಕ್ಷರಕ್ಕಿಂತ ಕೊಂಚ ಕಿರಿದಾಗಿ, ಆದರೆ ಸ್ಪಷ್ಟವಾಗಿ ಕಾಣುವಂತೆ ಬರೆಯಲಾಗಿದೆ. ಸಮಾಜದ ಎರೆಡು ಬೇರೆಬೇರೆ ಸ್ತಂಭಗಳಾದ ಐಟಿ ಹಾಗೂ ನ್ಯಾಯಾಂಗಗಳ ವಿಶೇಷ ಸಮ್ಮಿಲನದಂತಿರುವ ಈ ಮದುವೆಯನ್ನು ನೋಡುವ ಕುತೂಹಲಕ್ಕೆಂಬಂತೆ ಹತ್ತಾರು ಜನ ಆ ದೊಡ್ಡ ಬೋರ್ಡಿನ ಕೆಳಗಿನಿಂದ ಹಾದು ಮದುವೆ ಮಂಟಪವಿರುವ ಛತ್ರದ ಮೊದಲ ಮಹಡಿಯತ್ತ ನಡೆಯುತ್ತಿದ್ದಾರೆ. ಬಾಗಿಲಿನಿಲ್ಲಿ ನಿಂತು ರಾಣಿಯರ ಕಾಲದ ಪರಿಚಾರಿಕೆಯರನ್ನು ನೆನಪಿಸುತ್ತಿರುವ ಕೋಮಲಾಂಗಿಯರು ಏನೆಂದು ತಿಳಿಯದ ಸುಗಂಧ ದ್ರವ್ಯಕ್ಕೆ ತಮ್ಮ ಆಕರ್ಶಕ ಮುಗುಳ್ನಗೆ ಬೆರೆಸಿ ಒಳಕ್ಕೆ ನಡೆಯುತ್ತಿರುವವರ ಮೇಲೆ ಸಿಂಪಡಿಸುತ್ತಿದ್ದಾರೆ. ನಗರದ ಟ್ರಾಫಿಕ್ಕು, ಧೂಳು, ಹೊಗೆಗಳಲ್ಲಿ ಮಿಂದು ಬಂದವರ ಬೆವರಿನ ವಾಸನೆ ಕಲ್ಯಾಣ ಮಂಟಪದೊಳಗೆ ತುಂಬದಿರಲಿ ಎಂಬುದೂ ಅದರ ಹಿಂದಿನ ಉದ್ದೇಶವೋ ಏನೋ? ಪಕ್ಕದಲ್ಲೇ ಸಾಲಾಗಿ ಇರಿಸಿರುವ ಬಳುಕುವ ಸೊಂಟದ ಪ್ಲಾಸ್ಟಿಕ್ ಲೋಟಗಳಲ್ಲಿನ ಸ್ವಾಗತ ಪೇಯವನ್ನು ಹೈಹೀಲ್ಡ್ ತೊಟ್ಟ ಚತುರೆಯರು ಅಷ್ಟೇ ನಾಜೂಕಾಗಿ ಎತ್ತಿಕೊಂಡು ಲಿಪ್ಸ್ಟಿಕ್ ಕೆಡದಂತೆ ಹೀರಿ ಒಳಗೆ ನಡೆಯುತ್ತಿದ್ದಾರೆ. ಸೂಟುಬೂಟಿನ ಗಂಭೀರ ಜೆಂಟಲ್ ಮೆನ್ ಗಳು ಅದನ್ನು ಕುಡಿಯಲೆಂದು ಮನಸ್ಸಿನಲ್ಲೇ ಕೈ ಚಾಚಿದರೂ ತಮ್ಮೊಳಗಿರುವ ಸಕ್ಕರೆಯ ಗೋದಾಮಿನ ನೆನಪಾಗಿ, ಮತ್ತಷ್ಟು ಗಂಭೀರ ವದನರಾಗಿ ಒಳಗಡಿಯಿಡುತ್ತಿದ್ದಾರೆ.
ಒಳಗೆ ಬಾಗಿಲಿನಾಚೆ ಹೆಂಗಸು-ಗಂಡಸರ ಸಣ್ಣ ಗುಂಪೊಂದು ನಿಂತಿದೆ. ಹೆಣ್ಣು ಹಾಗೂ ಗಂಡಿನ ಕಡೆಯ ದೂರದ ಸಂಬಂಧಿಗಳಾಗಿರಬಹುದಾದ ಅವರು ಒಳಬರುವ ಪ್ರತಿಯೊಬ್ಬರನ್ನೂ 'ಓಹೋಹೋ ಬನ್ನಿ ಬನ್ನಿ. ಪಾನಕ ತಗೊಂಡ್ರಾ' ಎಂದು ಅಪಾರವಾದ ನಗೆಯ ಮೂಲಕ ಸ್ವಾಗತಿಸುತ್ತಿದ್ದಾರೆ. ಕೊಂಚ ಮಟ್ಟಿಗೆ ಪರಿಚಯ ಇದ್ದವರನ್ನು ಹೆಗಲು ತಬ್ಬಿ, ಬೆನ್ನು ತಟ್ಟಿ ಒಳಗೆ ಕಳಿಸಲಾಗುತ್ತಿದೆ. ಬೆಳಗಿನಿಂದ ಇದನ್ನೇ ಮಾಡುತ್ತಿರುವುದರಿಂದ ಅವರ ತಬ್ಬುವ ಹಾಗೂ ಬೆನ್ನು ತಟ್ಟುವ ವೇಗ ಕೊಂಚ ಬಿರುಸಾಗಿದೆಯಾದರೂ ಮುಖದ ಮೇಲಿನ ಮುಗುಳ್ನಗೆ ತಾಜಾ ಆಗಿಯೇ ಇದೆ.
ಸಭೆಯಲ್ಲಿ ಸಾಲಾಗಿ ಇರಿಸಿರುವ ಕುರ್ಚಿಗಳೆಲ್ಲ ಮಧ್ಯಾಹ್ನದ ಸೆಕೆಗೇನೋ ಎಂಬಂತೆ ಮೇಲೆ ತಿರುಗುತ್ತಿರುವ ಫ್ಯಾನುಗಳಿಗೆ ದೇಹವೊಡ್ಡಿಕೊಂಡು ತಮ್ಮ ಮೇಲೆ ಯಾರೂ ಕೂರದಿರಲಿ ಎಂದು ಬೇಡಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಅಲಲ್ಲಿ ಚಿಕ್ಕ ಗುಂಪಿನಲ್ಲಿ ಕುಳಿತು ಪರಸ್ಪರ ಕುಶಲೋಪರಿಯಲ್ಲಿ ತೊಡಗಿರುವವರು 'ಇವಳು ನನ್ನ ದೊಡ್ಡಮ್ಮನ ಕೊನೆಯ ಮಗನ ಅತ್ತೆಯ ಮಗಳು, ಇವನು ನನ್ನ ಭಾವನ ಅತ್ತೆಯ ಹಿರಿಯ ಮಗ' ಎಂದು ಯಾರಿಗೋ ಯಾರನ್ನೋ ಪರಿಚಯಿಸುತ್ತಿದ್ದಾರೆ. ಇದನ್ನು ಕೇಳಿಸಿಕೊಂಡವರು ಮೈಲುಗಟ್ಟಲೆ ದೂರಕ್ಕಿರುವ ಆ ಸಂಬಂಧದ ಕೊಂಡಿಯಲ್ಲಿ ಅವರಿಗೆ ಇವರು ಏನಾಗಬೇಕೆಂಬುದು ಅರ್ಥವಾಗದೇ ಪೆಚ್ಚು ನಗೆ ನಗುತ್ತಾ 'ಓಹೋಹೋ‌‌.. ಹೌದಾ‌.‌. ಸಂತೋಷ' ಎನ್ನುತ್ತ ತನ್ನೆದುರಿರುವ ಅಪರಿಚಿತ ವ್ಯಕ್ತಿಯ ಕೈಕುಲುಕುತ್ತಿದ್ದಾರೆ. ಈ ರೀತಿಯ ಸಂಭಾಷಣೆಯಲ್ಲಿ ಕಳೆದುಹೋಗಿರುವ ಕೆಲವರು ತಾವು ಬಂದಿರುವುದು ಮದುಮಕ್ಕಳನ್ನು ನೋಡಲಿಕ್ಕೆಂಬುದನ್ನೇ ಮರೆತು ಕುರ್ಚಿ ತಿರುಗಿಸಿಕೊಂಡು ವೇದಿಕೆಗೇ ಬೆನ್ನು ಹಾಕಿ ಕುಳಿತು ಪಟಂಗ ಹೊಡೆಯುತ್ತಿದ್ದಾರೆ. ಗಾಗ್ರಾ, ಚೂಡಿದಾರ್ ತೊಟ್ಟಿರುವ ಜಿಂಕೆಗಳಂತೆ ಕಿಲಕಿಲ ನಗುತ್ತಿರುವ ಹುಡುಗಿಯರು ತಮ್ಮನ್ನು ಹಿಂಬಾಲಿಸುತ್ತಿರುವ ಹುಡುಗನೋಟಗಳ ಜೊತೆ ಕಣ್ಣಾಮುಚ್ಚಾಲೆಯಾಡುತ್ತಿದ್ದಾರಾದರೂ, ತಮ್ಮ ತಲೆಯಲ್ಲೇ ವ್ಯವಸ್ಥಿತವಾದ ಶಾದಿ ಡಾಟ್ ಕಾಂ ಜಾಲವೊಂದನ್ನು ಹೊಂದಿರುವ ನಡುವಯಸ್ಸಿನ ಮಹಿಳಾಮಣಿಗಳ ದೃಷ್ಟಿಯಿಂದ ಪಾರಾಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇಂತಹಾ ಚಂದದ ಅವಿವಾಹಿತ ಹುಡುಗಿಯರನ್ನು ತಮ್ಮ ತೀಕ್ಷ್ಣ ನೆನಪಿನೊಳಗೆ ದಾಖಲಿಸಿಕೊಳ್ಳುತ್ತಿರುವ ಆ ಮಹಿಳಾಮಣಿಗಳು ತಮ್ಮ ಸಂಬಂಧದ ಯಾವ ಅವಿವಾಹಿತ ಹುಡುಗನಿಗೆ ಇವಳು ಜೋಡಿಯಾಗುತ್ತಾಳೆಂದು ಕ್ಷಣಾರ್ಧದಲ್ಲೇ ಹೊಂದಿಸಿಬಿಟ್ಟಿದ್ದಾರೆ. ಹೀಗೆ ಇಂದು ನಡೆಯುತ್ತಿರುವ ಒಂದು ಮದುವೆಯು ಮುಂದೆ ನಡೆಯಲಿರುವ ಎಷ್ಟೋ ಮದೆವೆಗಳಿಗೆ ನಾಂದಿಯಾಗಿದೆ.
ಮೇಲುಗಡೆ ವೇದಿಕೆಯಲ್ಲಿ ಸೀರೆ, ಪಂಚೆಗಳ ಸರಭರ ಸಡಗರದಿಂದ ಸಾಗಿದೆ. ಓಡಾಡುವ ಬಂಗಾರದಂಗಡಿಯಂತಿರುವ ಹೆಂಗಸರು ಕಿಲಕಿಲನೆ ನಗುತ್ತಾ, ಒಬ್ಬರ ಒಡವೆಯನ್ನು ಇನ್ನೊಬ್ಬರು ತಮ್ಮ ಸೂಕ್ಷ್ಮ ನೋಟದಲ್ಲಿ ದಾಖಲಿಸಿಕೊಳ್ಳತ್ತಲೇ ಮಂಟಪದಲ್ಲಿನ ವಸ್ತುಗಳನ್ನು ಆಚೆಯಿಂದೀಚೆಗೆ, ಈಚೆಯಿಂದಾಚೆಗೆ ಸಾಗಿಸುತ್ತಾ ಮಂಗಳ ಕಾರ್ಯಗಳಿಗೆ ನೆರವಾಗುತ್ತಿದ್ದಾರೆ. ಇಡೀ ಮದುವೆಯ ಜವಾಬ್ದಾರಿಯನ್ನೇ ಟವೆಲ್ಲಾಗಿಸಿಕೊಂಡು ಹೆಗಲ ಮೇಲೆ ಹಾಕಿಕೊಂಡಿರುವ ಕೆಲ ಹಿರಿಯ ಯಜಮಾನರುಗಳು ನಡೆಯುತ್ತಿರುವ ಕಾರ್ಯಯಂತ್ರಕ್ಕೊಂದು ಗಡಿಬಿಡಿಯನ್ನು ಕರುಣಿಸಿದ್ದಾರೆ. ಆಗಾಗ ಸಡಿಲವಾಗುತ್ತಿರುವ ತನ್ನ ಐಟಿ ಗತ್ತಿನ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ ಯಜ್ಞಕುಂಡದ ಮುಂದೆ ಕುಳಿತಿರುವ ಪಂಚೆ-ಶಲ್ಯದ ಮದುಮಗ ನೇರ ದೃಷ್ಟಿಯನ್ನು ಪುರೋಹಿತರ ಮೇಲೂ, ವಾರೆದೃಷ್ಟಿಯನ್ನು ಪಕ್ಕ ಕುಳಿತಿರುವ ಮದುಮಗಳ ಮೇಲೂ ನೆಟ್ಟಿದ್ದಾನೆ. ಇಡೀ ಸಭೆಯೇ ತನ್ನನ್ನು ನೋಡುತ್ತಿರುವ ನೋಟಕ್ಕಿಂತಲೂ ಈ ಕಳ್ಳ ನೋಟಕ್ಕೇ ಹೆಚ್ಚು ತಲೆ ತಗ್ಗಿಸಿರುವ ವಧುವಿನ ಕೆನ್ನೆ ಕಾಲು ಭಾಗ ಅಗ್ನಿ ಕುಂಡದ ತಾಪದಿಂದಲೂ, ಇನ್ನು ಕಾಲು ಭಾಗ ನಾಚೆಕೆಯಿಂದಲೂ, ಉಳಿದರ್ಧ ಭಾಗ ಮೇಕಪ್ ನ ರೋಸ್ ನಿಂದಲೂ ಕೆಂಪಾಗಿದೆ. ನೇರ ಕಾಂಜೀವರಂಗೇ ಹೋಗಿ ಕೊಂಡು ತಂದ ಘಟವಾಣಿ ಸೀರೆಯನ್ನುಟ್ಟಿರುವ ಮದುಮಗನ ತಾಯಿ ವಧುವಿನ ಮೊಗ್ಗಿನ ಜಡೆಯನ್ನು ಆಗಾಗ ಸರಿಪಡಿಸುತ್ತಿದ್ದಾಳೆ. ಎಲ್ಲ ಸೂಚನೆಗಳನ್ನೂ ವಿಧೇಯನಾಗಿ ಪಾಲಿಸುತ್ತಿರುವ ಹೆಣ್ಣಿನ ತಂದೆ ಆಗಾಗ ಸಭೆಯತ್ತ ನೋಡುತ್ತಾ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆಯೆಂಬುದನ್ನು ಖಾತರಿಪಡಿಸಿಕೊಳ್ಳುತ್ತಿದ್ದಾನೆ. ವೇದಿಕೆಯ ಪಕ್ಕದಲ್ಲಿರುವ ವಾದ್ಯವೃಂದದಿಂದ 'ಒಲವೇ ಜೀವನ ಸಾಕ್ಷಾತ್ಕಾರ' ಹಾಡಿನ ಶಹನಾಯ್ ವರ್ಷನ್ ಹೊಮ್ಮುತ್ತಿದೆ. ಅಷ್ಟರಲ್ಲಿ ಪುರೋಹಿತರು 'ಗಟ್ಟಿಮೇಳ ಗಟ್ಟಿಮೇಳ' ಎನ್ನಲಾಗಿ ಪೇಪೇಪೇ ಡುಂಡುಂಡುಂ ತಾರಕಕ್ಕೇರಿದೆ.
ಅರ್ಧ ಮದುವೆ ಪುರೋಹಿತರ ಸೂಚನೆಯಂತೆ ನಡೆದರೆ ಮುಕ್ಕಾಲು ಭಾಗ ಶಾಸ್ತ್ರ-ಸಂಪ್ರದಾಯಗಳು ಕ್ಯಾಮರಾ ಮ್ಯಾನ್ ನ ಆಣತಿಯಂತೆ ಜರುಗಿವೆ. ಧಾರೆ ಎರೆದದ್ದು, ಪರದೆ ಹಿಡಿದದ್ದು, ತರ್ಪಣ ಕೊಟ್ಟಿದ್ದರಿಂದ ಹಿಡಿದು ತಾಳಿಕಟ್ಟಿದ್ದರ ತನಕ ಎಲ್ಲವೂ ಅವನು ಹೇಳಿದ ಭಾವ-ಭಂಗಿಗಳಲ್ಲಿಯೇ ಆಗಿವೆ. ಈಗಾಗಲೇ ಹಿಂದಿನ ದಿನದ 'ನಾಂದಿ'ಯನ್ನೂ, ರಾತ್ರಿಯ ಆರತಕ್ಷತೆಯನ್ನೂ ನೂರಾರು ಫೋಟೋಗಳಲ್ಲಿ ಸೆರೆಹಿಡಿದಿರುವ ದಣಿವು ಅವನ ಹಣೆಯ ಮೇಲೆ ಬೆವರಾಗಿ ಸಾಲುಗಟ್ಟಿದೆ. ತಾಳಿ ಕಟ್ಟುವ ಶಾಸ್ತ್ರ ಮುಗಿದ ಕೆಲ ಹೊತ್ತಿಗೇ ವೇದಿಕೆಯ ಮೇಲಿನ ಚಿತ್ರವೇ ಬದಲಾಗಿದೆ. ಅಗ್ನಿಕುಂಡ ಉರಿಯುತ್ತಾ, ಪುರೋಹಿತರ ಮಂತ್ರಘೋಷಗಳಿಂದ ತುಂಬಿದ್ದ ಜಾಗವೀಗ ಸೂಟುಬೂಟು, ಫ್ಲಾಶುಲೈಟುಗಳಿಂದ ಕಂಗೊಳಿಸುತ್ತಿದೆ. ಹಿನ್ನೆಲೆಯಲ್ಲಿ ಅರಮನೆಯ ಬಾಗಿಲು, ಕಂಬಗಳಂತಹಾ ಕುಸುರಿ ಕೆತ್ತನೆಯ ಮಾದರಿಗಳನ್ನಿಟ್ಟು ಅವುಗಳಿಗೆ ಪ್ಲಾಸ್ಟಿಕ್ ನ ಬಳ್ಳಿಗಳನ್ನೂ, ವಿವಿಧ ಮಾಲೆ, ಬಿಡಿ ಹೂಗಳನ್ನು ಇಳಿಬಿಟ್ಟು ವೇದಿಕೆಯನ್ನು ಸಿಂಗರಿಸಲಾಗಿದೆ. ಮಂಟಪದ ಆಚೀಚೆ  ನಿಲ್ಲಿಸಿರುವ ಎರೆಡು ಗೊಂಬೆಗಳು ಮದುಮಕ್ಕಳನ್ನು ಹರಸಲೆಂದು ನೇರ ಗಂಧರ್ವ ಲೋಕದಿಂದ ಬಂದಿರುವ ದೇವದೂತರಂತೆ ಕಾಣುತ್ತಿವೆ. ಮದುಮಗನೀಗ ರಾಮ್ ರಾಜ್ ಪಂಚೆಯಿಂದ ಹೊರಬಂದು ರೇಮಂಡ್ ಸೂಟಿನೊಳಗೆ ತೂರಿಕೊಂಡಿದ್ದಾನೆ. ಮದುಮಗಳು ಕಾಂಜೀವರಂನಿಂದ ಧರ್ಮಾವರಂಗೆ ಬಂದುನಿಂತಿದ್ದಾಳೆ‌. ಹದಿನೈದು ಸಾವಿರ ವೆಚ್ಛದ ವಿಶೇಷ ಮೇಕಪ್ ಬಳಿಸಿಕೊಂಡಿರುವ ಅವಳೀಗ ಅವಳೇ ಅಲ್ಲವೆಂಬಷ್ಟು ಬೇರೆಯವಳಾಗಿ ಕಂಗೊಳಿಸುತ್ತಿದ್ದಾಳೆ. ವಿಶೇಷ ಬಣ್ಣದ ಕೋಟು ತೊಟ್ಟು ಟೈ ಧರಿಸಿರುವ ಗಂಡಿನ ತಂದೆಯನ್ನು ಫಕ್ಕನೆ ನೋಡಿದವರಿಗೆ ಇವರು ಈ ಮೊದಲು ಚಂದನ ವಾಹಿನಿಯಲ್ಲಿ ವಾರ್ತೆ ಓದುತ್ತಿದ್ದರೇನೋ ಎಂಬ ಅನುಮಾನ ಕಾಡುತ್ತಿದೆ. ಟೈಯನ್ನು ಆಗಾಗ ಸರಿಪಡಿಸಿಕೊಳ್ಳುತ್ತಿರುವ ಅವರು ಪ್ರತೀಬಾರಿ ಕ್ಯಾಮರಾದ ಮುಂದೆ ನಿಂತಾಗಲೂ ಇನ್ನೇನು "ನಮಸ್ಕಾರ. ವಾರ್ತೆಗಳು. ಓದುತ್ತಿರುವವರು ಎಂ.ಎನ್. ವಿಠ್ಠಲ ರಾವ್. ಮುಖ್ಯಾಂಶಗಳು" ಎಂದು ಹೆಡ್ ಲೈನ್ಸ್ ಹೇಳಲು ಆರಂಭಿಸುತ್ತಾರೇನೋ ಎಂಬ ಭ್ರಮೆಯಾಗುತ್ತಿದೆ‌. ಹೀಗೆ ಇದ್ದಕ್ಕಿದ್ದಂತೆ ಸಮಯ ವೇದಗಳ ಕಾಲದಿಂದ ಐಟಿಯುಗಕ್ಕೆ ಬದಲಾಗಿರುವಂತೆ ಎಲ್ಲವೂ ಬದಲಾಗಿ ಸಾಲುಸಾಲು ಲೈಟು, ಫ್ಲಾಶು, ಫೋಟೋ, ಸೆಲ್ಫೀಗಳಿಂದ ವೇದಿಕೆಯೀಗ ಲಕಲಕನೆ ಹೊಳೆಯತೊಡಗಿದೆ.
ಮದುವೆಗಿಂತ ದೀರ್ಘವಾಗಿ ಫೋಟೋ ಕಾರ್ಯಕ್ರಮವೇ ನಡೆಯುತ್ತಿರುವುದು ಪುರೋಹಿತರಿಗೆ ವಿರಾಮವನ್ನೂ, ಕ್ಯಾಮರಾಮ್ಯಾನ್ ಗೆ ಆಯಾಸವನ್ನೂ ಉಂಟುಮಾಡಿದೆ. ಛಾಯಾಗ್ರಾಹಕ ಲಕಲಕ ಹೊಳೆಯುವ ಹೆಂಗಸರನ್ನೂ, ಕರ್ನಲ್ ನಗುವಿನ ಗಂಡಸರನ್ನೂ, ಅವರವರ ನಗೆಯ ಸಮೇತ ಸೆರೆಹಿಡಿಯುತ್ತಿದ್ದಾನೆ. ಇನ್ನೇನು ಕ್ಲಿಕ್ಕಿಸಬೇಕೆನ್ನುವಷ್ಟರಲ್ಲಿ ಹುಡುಗಿಯೊಬ್ಬಳು ತನ್ನ ಮುಂಗುರಳನ್ನು ಹಿಂದೆ ಸರಿಸಲು ಕೈಯೆತ್ತಿರುವುದರಿಂದ ಆ ಫೋಟೋವನ್ನು ಮತ್ತೆ ತೆಗೆಯಬೇಕಾಗಿಬಂದಿದೆ. ಫೋಟೋ, ಫೋಸುಗಳೆಂದರೇನೆಂದೇ ತಿಳಿಯದೆ ಎತ್ತಲೋ ನೋಡುತ್ತಿರುವ ಚಿಕ್ಕ ಮಗುವಿನ ದೃಷ್ಟಿಯನ್ನು ಕ್ಯಾಮರಾದತ್ತ ಸೆಳೆಯುವ ಹೆಚ್ಚುವರಿ ಜವಾಬ್ದಾರಿಯೂ ಫೋಟೋಗ್ರಾಫರ್ ನ ಮೇಲೇ ಬಿದ್ದಿದೆ. ಕಿಚ್ ಕಿಚ್.. ಕೂ ಕೂ‌.. ಟುಕ್ ಟುಕ್.. ಎಂದು ಇಂಕಾ ನಾಗರೀಕತೆಯ ಆದಿವಾಸಿಯಂತೆ ವಿಚಿತ್ರ ಸದ್ದು ಹೊರಡಿಸುವ ಮೂಲಕ ಕೊನೆಗೂ ಅವನು ಮಗುವಿನಿಂದ ಫೋಸು ತೆಗೆಸುವಲ್ಲಿ ಯಶಸ್ವಿಯಾಗಿದ್ದಾನೆ‌. ಅಷ್ಟರಲ್ಲಿ "ಹೇ ಡ್ಯೂಡ್, ಲುಕ್ಕಿಂಗ್ ಆಸಮ್, ಕಂಗ್ರಾಟ್ಸ್ ಡಾ ತಂಬೀ..." ಎಂಬ ಗೌಜಿನೊಂದಿಗೆ ಮದುಮಗನ ಸಹೋದ್ಯೋಗಿ ಟೆಕ್ಕಿಗಳ ಗುಂಪೊಂದು ವೇದಿಕೆಗೆ ಧಾಳಿಯಿಟ್ಟಿದೆ. ತನ್ನ ಕ್ಯಾಮರಾದಲ್ಲಿ ಮಾತ್ರವಲ್ಲದೆ ಅವರು ಕೊಟ್ಟ ಮೊಬೈಲ್ನಲ್ಲೂ ಫೋಟೋ ಕ್ಲಿಕ್ಕಿಸಿದ ಫೋಟೋಗ್ರಾಫರ್ ಮುಂದಿನ ಫೋಟೋಗಾಗಿ ತಯಾರಾಗುತ್ತಿದ್ದಾನೆ. ಆದರೆ ಅಷ್ಟು ಬೇಗ ವೇದಿಕೆಯಿಂದಿಳಿಯದ ಟೆಕ್ಕಿಗಳು ವಿವಿಧ ಭಂಗಿಗಳಲ್ಲಿ ಮೂತಿ ತಿರುಗಿಸಿಕೊಂಡು ಸೆಲ್ಫೀ ಹೊಡೆಯತೊಡಗಿದ್ದಾರೆ. ಮರುದಿನ ಬರಲಿರುವ ಲೈಕು, ಕಮೆಂಟುಗಳು ಮಾತ್ರವಲ್ಲದೆ ತಮ್ಮ ಯೋಯೋ ಸ್ಟೈಲನ್ನೂ ಗಮನದಲ್ಲಿಟ್ಟಿಕೊಂಡು ಅವರು ಹೊಡೆದುಕೊಳ್ಳುತ್ತಿರುವ ಸೆಲ್ಫೀಗಳು ಅಷ್ಟು ಬೇಗ ಮುಗಿಯುವಂತೆ ಕಾಣುತ್ತಿಲ್ಲ.
ನಿನ್ನೆ ಸಂಜೆಯ ಆರತಕ್ಷತೆಯ ಸಮಯದಿಂದಲೂ ಹಲ್ಲುಕಿರಿಯುತ್ತಲೇ ಇರುವ ಮದುಮಕ್ಕಳಿಗೆ ತುಟಿ, ವಸಡು, ಗಲ್ಲಗಳೆಲ್ಲಾ ನೋಯತೊಡಗಿವೆ. ಯಾರೇ ಎದುರು ಬಂದರೂ ಅವರ ಹಲ್ಲುಗಳು ತಾನಾಗೇ ಹೀ ಎಂದು ಕಿರಿದು, ಹಸ್ತಲಾಘವಕ್ಕೆ ಕೈಚಾಚುವುದೀಗ ಅವರಿಗೆ ಅಭ್ಯಸವಾಗಿಹೋಗಿ, ಫೋಟೋ ಸೆಶನ್ ನ ನಂತರವೂ ಈ ಚಾಳಿ ಮುಂದುವರಿಯುತ್ತದೇನೋ ಎಂಬ ಸಣ್ಣ ಭಯ ಅವರನ್ನೀಗ ಕಾಡತೊಡಗಿದೆ. ಕ್ಯಾಮರಾಮ್ಯಾನ್ ಈಗಾಗಲೇ ಅರ್ಧ ದಾರಿ ಕೋಮಾಗೇ ಹೋಗಿಬಿಟ್ಟಿದ್ದಾನೆ. ವೇದಿಕೆಯಲ್ಲಿ ಫೋಟೋ ತೆಗೆಸಿಕೊಳ್ಳಲಿಕ್ಕೆ ಯಾರೂ ಇಲ್ಲದ ಎರೆಡು ನಿಮಿಷದ ಸೈಕಲ್ ಗ್ಯಾಪಿನಲ್ಲೇ ಅವನು ಸರಸರನೆ ತನ್ನ ಕ್ಯಾಮರಾ, ಫ್ಲಾಶ್ ಲೈಟ್, ಬಿಳಿಯ ಛತ್ರಿಗಳನ್ನೆಲ್ಲ ಮಡಿಚಿಟ್ಟು ತಿರುಗಿಯೂ ನೋಡದಂತೆ ಊಟದ ಹಾಲ್ ನತ್ತ ಪೇರಿಕಿತ್ತಿದ್ದಾನೆ.
ಇಷ್ಟು ಹೊತ್ತು ವೇದಿಕೆಯ ಕೊನೆಯ ಸಾಲಿನಲ್ಲಿ ಕುಳಿತಿದ್ದ ಸಣಕಲು ದೇಹದ, ಕಾಂತಿ ಮುಗಿದ ಕಣ್ಣುಗಳ ಗಂಡು ಆಕೃತಿಯೊಂದು ಈಗ ಎದ್ದು ವೇದಿಕೆಯತ್ತ ನಡೆದುಬಂದಿದೆ. ಇಂತಹಾ ದಟ್ಟ ಗೌಜಿನ ನಡುವೆಯೂ ಪರಮ ಏಕಾಂತವೊಂದರಿಂದ ಎದ್ದುಬಂದಂತಿರುವ ಅವನನ್ನು 'ಇವನು ಮಾಧವ. ನನ್ನ ಹಳೆಯ ಕೊಲೀಗ್' ಎಂದು ಮದುಮಗಳು ಮದುಮಗನಿಗೆ ಪರಿಚಯಿಸಿದಾಗ, ಅವಳನ್ನು ಮನಸಾರೆ ಪ್ರೀತಿಸಿದ್ದ ಅವನೊಳಗಿನ ಪ್ರೇಮಿ ಮೌನವಾಗಿ ನರಳಿದ್ದಾನೆ. ತಾನೆಂದೂ ಹಿಡಿಯಲಾಗದೇಹೋದ ಅವಳ ಕರವನ್ನು ಜೀವಮಾನವಿಡೀ ಹಿಡಿದು ನಡೆಯಲಿರುವ ಮದುಮಗನ ಭಾಗ್ಯವಂತ ಕೈಗಳನ್ನು ಕುಲುಕಿದ ಆ ವಿಫಲ ಪ್ರೇಮಿ ಯಾವ ಫೋಟೋದಲ್ಲೂ ದಾಖಲಾಗದೇ ವೇದಿಕೆಯಿಳಿದು ನಡೆದಿದ್ದಾನೆ‌‌. ಮೊದಲ ಬಾರಿಗೆ ಅವಳ ಮೇಲೆ ಪ್ರೀತಿಯಾದ ದಿನ ಪ್ರೇಮ ನಿವೇದನೆಯ ಜೊತೆಗೆ ಕೊಡಬೇಕೆಂದು ಅವನು ಕೊಯ್ದುತಂದಿದ್ದ, ಕೊನೆಗೂ ಜೇಬಿನಲ್ಲೇ ಬಾಡಿಹೋದ ಹೂವೊಂದು ಮರುಜನ್ಮ ಪಡೆದು ಹಳೆಯ ನೆನಪಿನ ಹೊಸ ಹೂವಾಗಿ ಅವನು ಅವಳಿಗೆ 'ಹ್ಯಾಪಿ ಮ್ಯಾರೀಡ್ ಲೈಫ್' ಎಂದು ಕೊಟ್ಟ ಬೊಕ್ಕೆಯಲ್ಲಿ ಸೇರಿಕೊಂಡು ಬೆಚ್ಚಗೆ ಕುಳಿತಿದೆ.
ಕೆಳಗಡೆ ಊಟದ ಕೊಠಡಿಯಲ್ಲಿ ಊಟ ಭರ್ಜರಿಯಾಗಿ ಸಾಗಿದೆ. ಕ್ಯಾಮರಾವನ್ನು ತನ್ನ ಅಸಿಸ್ಟೆಂಟಿಗೆ ಕೊಟ್ಟ ಫೋಟೋಗ್ರಾಫರ್ ಗಡಿಬಿಡಿಯಲ್ಲಿ ಊಟಕ್ಕೆ ತೊಡಗಿದ್ದಾನೆ‌. ಬಾಳೇಲೆಗೆ ಬೀಳುತ್ತಿದ್ದಂತೆಯೇ ಸುನಾಮಿಯಂತೆ ಓಡುತ್ತಿರುವ ಬಿಸಿಬಿಸಿ ಸಾರನ್ನು ತಡೆಯಲಿಕ್ಕೆ ಹುಡುಗನೊಬ್ಬ ಪಾಡುಪಡುತ್ತಿದ್ದಾನೆ. ಪುಟಾಣಿ ಕೈಯಿಂದ ಕೋಸಂಬರಿಯ ಒಂದೊಂದೇ ಎಳೆಯನ್ನು ಹೆಕ್ಕಿ ತಿನ್ನುತ್ತಿರುವ ಮಗುವಿಗೆ ಅದರ ಅಮ್ಮ ಅವಳ ಮನಸ್ಸಿನಷ್ಟೇ ಮೃದುವಾಗಿ ನುರಿದ ಕೈತುತ್ತನ್ನು ತಿನ್ನಿಸುತ್ತಿದ್ದಾಳೆ. ನಡುಗುವ ಕೈಯ ವಯೋವೃದ್ಧ ಬಡಿಸುವ ಭಟ್ಟರು ತಾವು ಬಡಿಸಬಹುದಾದ ಏಕಮಾತ್ರ ವಸ್ತುವಾದ ನೀರನ್ನು ಆನೆ ಸೊಂಡಿನಿಲಾಕಾರದ ಮೂತಿಯ ಕ್ಯಾಟಲ್ ನಿಂದ ಮೆಲ್ಲಗೆ ಲೋಟಗಳಿಗೆ ಸುರಿಯುತ್ತಾ ಮುನ್ನಡೆಯುತ್ತಿದ್ದಾರೆ. ಹತ್ತಿಪ್ಪತ್ತು ಜನರಿಗೆ ಬಡಿಸುವಷ್ಟರಲ್ಲಿ ಕ್ಯಾಟಲ್ ಖಾಲಿಯಾಗಿ, ಅದನ್ನು ಮತ್ತೆ ತುಂಬಿಸಿಕೊಂಡು ಬರುವಷ್ಟರಲ್ಲಿ ಈಗಾಗಲೇ ನೀರು ಹಾಕಿಸಿಕೊಂಡವರೂ ಮತ್ತೆ ನೀರು ಬೇಕೆನ್ನುತ್ತಿರುವುದರಿಂದ ಅವರೀಗ ಕಂಗಾಲಾಗಿದ್ದಾರೆ. ಸಕಾಲಕ್ಕೆ ಆಚೆಕಡೆಯಿಂದ ಚಿಕ್ಕ ಹುಡುಗನೊಬ್ಬ ಮತ್ತೊಂದು ನೀರಿನ ಕ್ಯಾಟಲ್  ತಂದು, ಅವರು ಬೈಸಿಕೊಳ್ಳುವುದು ತಪ್ಪಿದೆ. ಈಚೆ ಸಾಲಿನಲ್ಲಿ ಕುಳಿತಿರುವ ಮದುಮಗನ ತಮ್ಮ ಎದುರುಗಡೆ ಕುಳಿತಿರುವ ಮದುಮಗಳ ತಂಗಿಯತ್ತ ಕಳ್ಳನೋಟ ಬೀರುತ್ತಿದ್ದಾನೆ. ಪಂಕ್ತಿಯಲ್ಲಿ ಕುಳಿತು ಬಾಳೇಲೆಯಲ್ಲಿನ ಜಿಲೇಬಿಗಿಂತ ಸಿಹಿಯಾದ ನಗೆ ಬೀರುತ್ತಿರುವ ಹಸಿರು ಲಂಗದ ಹುಡುಗಿಯೊಬ್ಬಳು ಬೇಡಬೇಡವೆನ್ನುತ್ತಿದ್ದರೂ ಬಡಿಸುವ ಹುಡುಗ ಅವಳಿಗೆ ಒಂದು ಬರ್ಫಿ ಜಾಸ್ತಿ ಬಡಿಸಿದ್ದಾನೆ. ಅವನ ಮನಸ್ಸಿನಲ್ಲಿ ಆ ಕ್ಷಣದಲ್ಲಿ ಎದ್ದಿರವ ಸಿಹಿಯಾದ ಭಾವನೆಯೇ ಅವಳ ಬಾಳೇಲೆಯಲ್ಲಿ ಬರ್ಫಿಯಾಗಿ ಅವತಾರವೆತ್ತಿದೆ‌‌‌. ಬಿರಬಿರನೆ ಊಟ ಮುಗಿಸಿಕೊಂಡು ಬಂದ ಫೋಟೋಗ್ರಾಫರ್ ಹೊಸ ಚೈತನ್ಯದೊಂದಿಗೆ ಮರಳಿ ಕ್ಯಾಮರಾ ಹಿಡಿದುಕೊಂಡು ಡರ್ರೆಂದು ತೇಗುತ್ತಿರುವ ಮಂದಿಯನ್ನು ಅವರ ತೇಗಿನ ಸಮೇತ ಚಿತ್ರೀಕರಿಸುತ್ತಿದ್ದಾನೆ. ಇಷ್ಟು ದಿನ ತಳ್ಳುಗಾಡಿಯಲ್ಲಿ ಒಣ ಪಲಾವ್ ತಿನ್ನುತ್ತಿದ್ದ ಛತ್ರದ ಸೆಕ್ಯೂರಿಟಿಯವನಿಗೂ ಇಂದು ಮೃಷ್ಟಾನ್ನ ಭೋಜನ ದೊರಕಿ ತೃಪ್ತಿಯಾಗುವಷ್ಟು ಉಂಡಿದ್ದಾನೆ‌. ಸಾಲಿನಲ್ಲಿ ನಿಂತು ಕೈತೊಳೆಯುವಾಗ ಮದುಮಗಳ ತಂಗಿಯ ಕೈ ಮದುಮಗನ ತಮ್ಮನ ಕೈಗೆ ಸೋಕಿ ನಲ್ಲಿಯಲ್ಲಿ ಬೀಳುತ್ತಿರುವ ನೀರೆಲ್ಲಾ ಪನ್ನೀರಾಗಿ ಪರಿವರ್ತನೆಯಾಗಿದೆ.
                 ******************
ಅಲ್ಲಿ ಊಟ ಮುಗಿಸಿ ಒಬ್ಬೊಬ್ಬರೇ ಹೊರಡುತ್ತಿದ್ದರೆ ಇಲ್ಲಿ ಗೊಂಬೆ, ಸ್ತಂಭ, ದ್ವಾರಗಳು ವೇದಿಕೆಯಿಂದಿಳಿದು ಹೊರಗೆ ನಿಂತಿರುವ ಲಾರಿಯತ್ತ ಸಾಗುತ್ತಿವೆ. ಮತ್ತೊಂದು ಮದುವೆ ನಡೆಯುವ ತನಕ ಕತ್ತಲ ಗೋಡೌನ್ ನಲ್ಲಿ ಬಂಧಿಯಾಗಿರಬೇಕಲ್ಲಾ ಎಂಬ ಅವುಗಳ ದುಃಖ ಮುಖವನ್ನು ಗಮನಿಸಿದವರಿಗೆ ಮಾತ್ರ ಕಾಣುತ್ತಿದೆ. ಕೆಲವೇ ಕ್ಷಣಗಳ ಹಿಂದಿನ ಮಾಲೆಯೀಗ ಬಿಡಿಬಿಡಿ ಹೂವಾಗಿ ನೆಲದ ಮೇಲೆ ಬಿದ್ದಿದೆ. ಓಡೋಡಿಬಂದಿರುವ ಛತ್ರದ ಕೆಲಸದಾಳಿನ ಮಗಳು ಆ ಹೂಗಳನ್ನು ಆಯ್ದು ಬೊಗಸೆಗೆ ತುಂಬಿಕೊಳ್ಳುತ್ತಿದ್ದಾಳೆ. ಜಗದ ಕೋಮಲತೆಯನ್ನೆಲ್ಲ ಕೈಯಲ್ಲಿ ಹಿಡಿದ ಖುಷಿಯಲ್ಲಿ ಅವಳ ಮುಖ ಅರಳಿರುವ ಪರಿಗೆ ಇಡೀ ಮದುವೆಯೇ ಸಾರ್ಥಕವಾದಂತೆ ಭಾಸವಾಗುತ್ತಿದೆ.
ಹೆಣ್ಣು ಜೀವನದನ ಒಂದು ಆಯಾಮದಿಂದ ಇನ್ನೊಂದು ಆಯಾಮಕ್ಕೆ ದಾಟುವ ಹೊಸ್ತಿಲಿನಲ್ಲಿ  ಮದುಮಗಳು ಕಣ್ತುಂಬಿಕೊಂಡು ನಿಂತಿದ್ದಾಳೆ. ಅವಳು ತಂದೆ ತಾಯಿಯನ್ನು ತಬ್ಬಿ ಅಳುವಾಗ ಇಷ್ಟು ಹೊತ್ತು ನಗುನಗುತ್ತಾ ಓಡಾಡಿಕೊಂಡಿದ್ದ ತಮ್ಮನೂ ಓಡಿ ಬಂದು ಅವಳನ್ನು ಬಿಗಿದಪ್ಪಿದ್ದಾನೆ. ನವಜೋಡಿಯನ್ನು ಕೂರಿಸಿಕೊಂಡ ಕಾರು ಹೊಸ ಸಂಬಂಧಗಳ, ಹೊಸ ಪುಳಕಗಳ, ಹೊಸ ಸವಾಲುಗಳ, ಹೊಸ ಆಸೆ-ಕನಸುಗಳ, ಹೊಸ ನೋವು-ಕಣ್ಣೀರುಗಳ ಹೊಸ ಬದುಕಿನತ್ತ  ಅವರನ್ನು ಕೊಂಡೊಯ್ದಿದೆ. ಅವರನ್ನು ಕಳುಹಿಸಿಕೊಟ್ಟ ಹೆಣ್ಣಿನ ತಂದೆ ಮನೆಯೆದುರಿನ ಚಪ್ಪರ ತೆಗೆಯುತ್ತಾ ದ್ವಾರಕ್ಕೆ ಕಟ್ಟಿದ ಮಲ್ಲಗೆಯ ಮಾಲೆಯನ್ನು ಕಳಚುವಾಗ ಅದನ್ನು ಸಂಭ್ರಮದಿಂದ ಮುಡಿಯುತ್ತಿದ್ದ ಮಗಳ ನೆನಪು ಉಕ್ಕಿಬಂದು ದುಃಖ ಉಮ್ಮಳಿಸಿದೆ.
ಅಲ್ಲಿ, ದೂರ ದಾರಿಯ ತಿರುವಿನಲ್ಲಿ ಕಾರು ಹೊರಳಿದಾಗ ಮದುಮಗಳ ಮುಡಿಯಿಂದ ಹೂವೊಂದು ಜಾರಿ ಮದುಮಗನ ತೊಡೆಯ ಮೇಲೆ ಬಿದ್ದಿದೆ. ಅವನು ಅದನ್ನು ಮೃದುವಾಗಿ ಹಿಡಿದು ಅವಳ ಮುಡಿಗೇ ಮರಳಿಸಿದ ಪರಿಗೆ ಸೋತ ಅವಳು ಅವನ ಹೆಗಲಿಗೆ ತಲೆಯಾನಿಸಿದ್ದಾಳೆ. ಹೊರಗಡೆ ಬಾನಿನಲ್ಲಿ ಚಂದದ ಸಂಜೆಯೊಂದು ಮುಳುಗುತ್ತಾ ಅವರ ಬದುಕಿನ ಮಧುರ ಇರುಳಿಗೆ ದಾರಿಮಾಡಿಕೊಟ್ಟಿದೆ. ಬೆಳದಿಂಗಳು ಮೆಲ್ಲನೆ ಮೂಡುತ್ತಿದೆ‌.
('ತುಷಾರ'ದ ಆಗಸ್ಟ್ 2019ರ ಸಂಚಿಕೆಯಲ್ಲಿ ಪ್ರಕಟಿತ)



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...