ಶನಿವಾರ, ಜುಲೈ 20, 2019

ಓ ಮೇಘವೇ...






ಇತ್ತೀಚಿನ ವರುಷಗಳಲ್ಲಿ ಅತೀ ಹೆಚ್ಚು ಜನರಿಂದ ಆಮಂತ್ರಣಕ್ಕೊಳಗಾಗುತ್ತಿರುವ ಸುಪ್ರಸಿದ್ಧ ಅತಿಥಿಗಳೆಂದರೆ ಅವು ಮಳೆ ಮೋಡಗಳು. ಮೊದಲೆಲ್ಲಾ ಮೇ ತಿಂಗಳ ಕೊನೆಯ ವಾರದಲ್ಲಿ ಯಾರಾದರೂ ಕರೆಯುವ ಮೊದಲೇ ಹಾಜರಾಗಿ ಆಕಾಶದುದ್ದಕ್ಕೂ ಕೋಟೆ ಕಟ್ಟಿಕೊಂಡು ಜಡಿಮಳೆಸುರಿಸುತ್ತಾ 'ಎಂಥಾ ಮರ್ರೆ ಇದು.. ಮಧ್ಯಾಹ್ನ ಮೂರ್ಗಂಟೆಗೇ ಕತ್ಲಾದಂಗಿತ್ತಲೆ' ಎಂದು ಬೈಸಿಕೊಳ್ಳುತ್ತಿದ್ದ ಮೋಡಗಳಿಗೆ ಹಠಾತ್ತನೆ ಅದೇನು ಬೇಸರವಾಯಿತೋ ಏನೋ, ಜೂನ್ ಹದಿನೈದು ಕಳೆದರೂ ಬಾರದೇ, ಹಿಂದೆ ತನ್ನನ್ನು ಬೈದಿದ್ದ ಅದೇ ಬಾಯಿಗಳಿಂದ "ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೇ" ಎಂದು ಹಾಡಿಸಿಕೊಳ್ಳುತ್ತಿವೆ.

ಮೋಡಗಳು ಪ್ರತಿದಿನ ನಮ್ಮ ಕಣ್ಣೆದುರೇ ಸುಳಿದಾಡಿಕೊಂಡಿದ್ದರೂ ಅವನ್ನು ನಾವು ಹೆಚ್ಚಾಗಿ ಗಮನಿಸುವುದು ಮಳೆಗಾಲದಲ್ಲಿ ಮಾತ್ರ. ಥೇಟ್ ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಮಳೆ ಬಾರದಿದ್ದಾಗಲೇ ನಾವು ಮೋಡಗಳ ಹುಡುಕಾಟದಲ್ಲಿ ತೊಡಗುತ್ತೇವೆ. ಸೃಷ್ಟಿಯ ಸುಂದರ ಸೋಜಿಗಗಳಾದ ಮೋಡಗಳು ಅದೇ ಸೃಷ್ಟಿಯ ಇನ್ನಿತರ ನೈಸರ್ಗಿಕ ರಚನೆಗಳಾದ ಸಾಗರ, ಪರ್ವತ, ಅರಣ್ಯ, ನೆಲಗಳೊಡನೆ ಸೋದರ ಸಂಬಂಧಿಯಂತೆ ವರ್ತಿಸುವುದನ್ನು ನೋಡಿದಾಗ ಅಚ್ಚರಿಯಾಗುತ್ತದೆ. ಅಲ್ಲೆಲ್ಲೋ ಇರುವ ಸಮುದ್ರವಂತೆ. ಅದರ ನೀರು ಬಿಸಿಲಿಗೆ ಆವಿಯಾಗುವುದಂತೆ. ಅದರಿಂದ ಹುಟ್ಟಿಕೊಂಡ ಮೋಡಗಳು ಇನ್ನೆಲ್ಲಿಗೋ ತೇಲಿ ಹೋಗಿ ಮಳೆ ಸುರಿಸಿ ಮತ್ತದೇ ಬಿಸಿಲಿನ ಧಗೆಯನ್ನು ಇಳಿಸಿ ಕಡಲ ಬೇಗೆಯನ್ನು ಕಡಿಮೆಮಾಡುವುದಂತೆ. ಸುರಿದ ಮಳೆಗೆ ನೆಲ ಚಿಗುರಿ, ಕಾಡು ಬೆಳೆದು, ಅದೇ ಕಾಡು ಮತ್ತೆ ಮಳೆಯನ್ನು ಕರೆಯುವುದಂತೆ. ಜಲ ಚಿಮ್ಮಿ, ನೀರು ಹರಿದು ಮತ್ತದೇ ಕಡಲಿನಲ್ಲಿ ಅಂತರ್ಧಾನವಾಗುವುದಂತೆ... ನಿರಂತರವಾಗಿ ತಿರುಗುತ್ತಾ ಸೃಷ್ಟಿಯ ಉಳಿವಿಗಾಗಿ ಕೆಲಸಮಾಡುವ ನಿಸರ್ಗದ ಈ ತಿರುಗಣೆಯಲ್ಲಿ ಮೋಡಗಳು ಜೀವ ರಚನೆಯ ರಾಯಭಾರಿಗಳಂತೆ ಕೆಲಸಮಾಡುತ್ತವೆ.

ನನಗೆ ಮೋಡ ಹಾಗೂ ಆಕಾಶಗಳೆರೆಡೂ ಬೇರೆ ಬೇರೆಯೆಂಬುದು ಜ್ಞಾನೋದಯವಾಗಿದ್ದೇ ಶಾಲೆ ಸೇರಿಕೊಂಡ ಮೇಲೆ. ಅಳತೆಗೋಲುಗಳ ಲೆಕ್ಕಕ್ಕೆ ಸಿಗದ ಅಗಾಧ ಎತ್ತರದಲ್ಲಿ ನೀಲಿಯಾಗಿ ಹಬ್ಬಿರುವ ಕಾಲ್ಪನಿಕ ಆಕಾಶಕ್ಕೂ, ಅದರ ಕೆಳಗೆ ಮಾಯಾವೀ ಚಾಪೆಗಳಂತೆ ತೇಲುತ್ತಾ ಓಡುತ್ತಿರುವ ಮೋಡಕ್ಕೂ ನಡುವಿನ ಅಂತರವನ್ನು ಮೊದಲ ಬಾರಿಗೆ ಗುರುತಿಸಿದಾಗ ಯುರೇಕಾ... ಎಂದು ಕೂಗುವಷ್ಟು ಉದ್ವೇಗವಾಗಿತ್ತು. ಸದಾ ಯಾವುದೋ ದೂರದೂರಿಗೆ ಹೊರಟ ಅಲೆಮಾರಿಗಳಂತೆ ಓಡುತ್ತಲೇ ಇರುವ ಮೋಡಗಳು ನೆಲದಿಂದ ಕಿಲೋಮೀಟರ್ ಗಳಷ್ಟು ಎತ್ತರದಲ್ಲಿರುತ್ತವೆ. ಅಷ್ಟು ಎತ್ತರದಿಂದ ನೋಡುವುದಕ್ಕೋ ಏನೋ, ಅವುಗಳಿಗೆ ಮಳೆಯಿಲ್ಲದೆ ಕಾದ ನೆಲದ ಬಾಯಾರಿದ ಬಿರುಕುಗಳುಒಮ್ಮೊಮ್ಮೆ ಕಾಣಿಸುವುದೇ ಇಲ್ಲ! ತಮ್ನನ್ನೇ ಕಾಯುತ್ತಾ ಎದೆಬಿರಿದಿರುವ ಒಣನೆಲಕ್ಕೆ ಕೊಂಚವಾದರೂ ಮಳೆ ಸುರಿಸದೆಯೇ ತಮ್ಮ ಪಾಡಿಗೆ ತಾವು ಮುಂದಕ್ಕೆ ಹೋಗಿ, ಇನ್ನೆಲ್ಲೋ ಬೆಂಗಳೂರು, ಮುಂಬೈಗಳಂತಹಾ ನೀರು ಇಂಗದ ಶಹರಗಳ ತಲೆಯ ಮೇಲೆ ಧೋ ಎಂಬ ಬೊಬ್ಬೆಯೊಂದಿಗೆ ತಮ್ಮೊಡಲಿನ ಹನಿಗಳನ್ನೆಲ್ಲಾ ಸುರಿಸಿ, ಪಟ್ಟಣವನ್ನು ಭಾರವಾಗಿಸಿ, ತಾವು ಹಗುರಾಗುವುದು ಮೋಡಗಳ ವಿಚಿತ್ರ ಜಾಯಮಾನ.

ಬರಿಯ ಕಪ್ಪು-ಬಿಳುಪು ಬಣ್ಣಗಳಷ್ಟನ್ನೇ ಹೊಂದಿರುವ ಮೋಡಗಳಿಗೆ ಸಾರ್ವತ್ರಿಕವಾಗಿ ಬಣ್ಣ ಬಳಿಯುವ ಕೆಲಸ ಸೂರ್ಯನದ್ದು. ಸೂರ್ಯ ಹುಟ್ಟುವ ಹಾಗೂ ಮುಳುಗುವ ವೇಳೆಗಳಲ್ಲಿ ಅವನ ಸ್ವಾಗತ ಹಾಗೂ ವಿದಾಯಗಳಿಗಾಗಿ ನೆರೆಯುವ ಮೋಡಗಳಿಗೆ ಬಣ್ಣಬಣ್ಣದ ಬಟ್ಟೆಯನ್ನು ಸೂರ್ಯನೇ ತೊಡಿಸುತ್ತಾನೆ. ಒಂದಷ್ಟು ಕೆಂಪು, ಒಂದಷ್ಟು ಹಳದಿ, ಒಂದಷ್ಟು ನೀಲಿ ಬಣ್ಣಗಳು ಬೇರೆ ಬೇರೆ ಅನುಪಾತದಲ್ಲಿ ಮೇಘಗಳನ್ನಾವರಿಸಿ ನಿಂತು ಇಡೀ ಬಾನಿಗೆ ಬಾನೇ ಬಣ್ಣದಂಗಡಿಯ ಗೋಡೆಯಂತಾಗಿಬಿಡುತ್ತದೆ. ಮೋಡಗಳ ಸಂದಿಯಿಂದ ಚಿಮ್ಮಿ ಮತ್ಯಾವುದೋ ಮೋಡದ ಮೇಲೆ ಬೀಳುತ್ತಿರುವ ಕಿರಣಗಳನ್ನು ಕಂಡಾಗ ಒಂದು ಮೋಡವು ಇನ್ನೊಂದಕ್ಕೆ ಬೆಳಕಿನ ನೀರನ್ನೆರಚುತ್ತಾ ಆಡುತ್ತಿರುವಂತೆ ಭಾಸವಾಗುತ್ತದೆ.

ಇಂತಿಪ್ಪ ಮೋಡಗಳು ಕೇವಲ ಮಳೆಯನ್ನು ಮಾತ್ರವಲ್ಲ, ಮನುಷ್ಯನ ಮನಸ್ಸನ್ನೂ ನಿಯಂತ್ರಿಸುತ್ತವೆ. ಬೆಳ್ಳಂಬೆಳಗ್ಗೆ ಆಗಸದಲ್ಲಿ ಮೋಡ ಕವಿದಿತ್ತೆಂದರೆ ಮನಸ್ಸೂ ಒಂಥರಾ ಮಂಕಾಗಿಬಿಡುತ್ತದೆ. ಮಧ್ಯಾಹ್ನದ ವೇಳೆ ಕವಿಯುವ ಮೋಡಗಳೊಳಗೆ ಉಸ್ಸಪ್ಪಾ.. ಎನ್ನುವ ನಿಟ್ಟುಸಿರಿರುತ್ತದೆ. ಸಂಜೆ ಕವಿದ ಮೇಘಗಳ ಹಿಂದೆ ಕಾಮನ ಬಿಲ್ಲಿನ ನಿರೀಕ್ಷೆಯಿರುತ್ತದೆ. ಮನಸ್ಸಿನಲ್ಲಿ ಯಾವ ರೂಪವಿದ್ದರೆ ಆ ರೂಪ ಮೇಘಗಳಲ್ಲೂ ಕಾಣುವುದು ಮತ್ತೊಂದು ಸೋಜಿಗ. ಭಕ್ತರಿಗೆ ದೇವರಂತೆಯೂ, ಪ್ರಿಯತಮನಿಗೆ ಪ್ರೇಯಸಿಯ ಚಹರೆಯಂತೆಯೂ ದರ್ಶನಕೊಡುವ ಇವು ರೈತರಿಗೆ ಅಗಾಧ ನೆಮ್ಮದಿಯ ನಿಟ್ಟುಸಿರಿನ ರಾಶಿಯಂತೆ ಗೋಚರಿಸುತ್ತವೆ. ಮೋಡಗಳು ಆಡುವ ನೆರಳು-ಬೆಳಕಿನ ನಿಜವಾದ ಆಟವನ್ನು ನೋಡಬೇಕೆಂದರೆ ಎತ್ತರದ ಬೆಟ್ಟವನ್ನೋ, ಪರ್ವತವನ್ನೋ ಏರಿ ನಿಲ್ಲಬೇಕು. ಒಂದೇ ಬೆಟ್ಟದ ಅರ್ಧ ಇಳಿಜಾರಿನ ಮೇಲೆ ನೆರಳನ್ನೂ, ಇನ್ನರ್ಧದ ಮೇಲೆ ಬಿಸಿಲನ್ನೂ ಉಂಟುಮಾಡಿರುವ ಸೋಜಿಗದ ನೋಟ ಅಲ್ಲಷ್ಟೇ ಕಾಣಲು ಸಾಧ್ಯ. ಅಲ್ಲೆಲ್ಲೋ ದೂರದಲ್ಲಿ ಮಳೆಯನ್ನು ಸಿಂಪಡಿಸುತ್ತಾ, ರಸ್ತೆ, ಕಾಡು, ವಾಹನ, ಮನೆ, ಮಂದಿಗಳನ್ನೆಲ್ಲಾ ರಾಡಿ ಮಾಡುತ್ತಾ ಇನ್ನೆಲ್ಲಿಗೋ ಧಾವಿಸುತ್ತಿರುವ ಮೋಡದ ತರಲೆ ನೋಟ ನೋಡಲು ಸಿಗುವುದು ಅಲ್ಲಿಂದ ಮಾತ್ರ.

                       ****************

ಮೋಡ ಸರ್ವಾಂತರ್ಯಾಮಿ. ನಮ್ಮ ಭೂಮಿ ಮಾತ್ರವಲ್ಲ, ಸೌರಮಂಡಲ ಹಾಗೂ ಅದರಾಚೆಗಿನ ಗ್ರಹಗಳ ಆಕಾಶದಲ್ಲೂ ಸಹಾ ತೇಲುವ ಮೋಡಗಳೇ ತುಂಬಿವೆ. ಹಾಗಂತ ಎಲ್ಲಾ ಗ್ರಹದ ಎಲ್ಲಾ ಮೋಡಗಳೂ ನೀರಿನ ಮಳೆಯನ್ನೇ ಸುರಿಸುವುದಿಲ್ಲ! ಏಕೆಂದರೆ ಒಂದೊಂದು ಗ್ರಹದ ಮೋಡಗಳೊಳಗಿನ ಸಂಯೋಜನೆಯೂ ಒಂದೊಂದು ತೆರನಾಗಿರುತ್ತದಂತೆ. ಇಥೇನ್, ಮಿಥೇನ್ ಮುಂತಾದ ವಿಷಾನಿಲಗಳಿಂದ ಕೂಡಿದ ಆ ಮೋಡಗಳು ಕರಗಿದಾಗ ಆಮ್ಲ, ಪ್ರತ್ಯಾಮ್ಲಗಳ ಆ್ಯಸಿಡ್ ಮಳೆಯೇ ಸುರಿದುಬಿಡುತ್ತದೆ. ಇನ್ನು ಸೌರಮಂಡಲದ ಅತಿ ದೈತ್ಯ ಗ್ರಹವಾದ ಗುರುವಿನ ವಾತಾವರಣದಲ್ಲಿ ಹೈಡ್ರೋಜನ್ ಹಾಗೂ ನೈಟ್ರೋಜನ್ ಗಳಿಂದಾದ ಮೋಡಗಳು ತೇಲುತ್ತಿವೆಯಂತೆ. 1995ರಲ್ಲಿ ಮೊದಲ ಬಾರಿಗೆ ಗುರುವಿನ ವಾತಾವರಣವನ್ನು ಪ್ರವೇಶಿಸಿದ 'ಗೆಲಿಲಿಯೋ' ಆಕಾಶನೌಕೆಯ ಕ್ಯಾಮರಾ ಕಣ್ಣಿಗೆ ಬಣ್ಣಬಣ್ಣದ ಅನಿಲಗಳನ್ನು ಮೈತುಂಬಾ ಬಳಿದುಕೊಂಡು, ಫಳೀರೆಂಬ ಮಿಂಚಿನ ಚಾಟಿಗಳನ್ನು ಝಳಪಿಸುತ್ತಾ ತೇಲುತ್ತಿದ್ದ ನೂರಾರು ಮೋಡಗಳು ಕಂಡಿದ್ದವು.  ಸುಮಾರು ಸಾವಿರಾರು ವೋಲ್ಟ್ ಗಳಷ್ಟು ವಿದ್ಯುತ್ ತರಂಗಗಳನ್ನು ಹೊಂದಿದ್ದ, ಓಡಾಡುವ ಜನರೇಟರ್ ಗಳಂತಿದ್ದ ಈ ಮೋಡಗಳೇ ಕೊನೆಗೆ ಗೆಲಿಲಿಯೋ ಪ್ರೋಬನ್ನು ಸುಟ್ಟು ಕರಕಲಾಗಿಸಿದ್ದವು. ಅಂತೆಯೇ ವಿಜ್ಞಾನಿಗಳ ಮಾತನ್ನು ನಂಬುವುದಾದರೆ ಯುರೇನಸ್, ನೆಪ್ಚೂನ್ ಗ್ರಹಗಳಲ್ಲಿನ ಮೋಡಗಳು ಅಕ್ಷರಷಃ ವಜ್ರದ ಮಳೆಯನ್ನೇ ಸುರಿಸುತ್ತವಂತೆ! ಅವುಗಳ ಅಂತರಾಳದಲ್ಲಿ ಹೇರಳವಾಗಿ ತುಂಬಿರುವ ಇಂಗಾಲದ ಮೋಡಗಳು ವಾತಾವರಣದ ಅತಿಯಾದ ಒತ್ತಡದೊಂದಿಗೆ ವರ್ತಿಸುವುದೇ ಇದಕ್ಕೆ ಕಾರಣ ಎಂಬುದು ವಿಜ್ಞಾನಿಗಳ ಅಂದಾಜು. ಹಾಗೇ, ಭೂಮಿಯಿಂದ 53 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ HD189733ಬಿ ಎನ್ನುವ ಏಲಿಯನ್ ಗ್ರಹದಲ್ಲಿನ ಖತರ್ನಾಕ್ ಮೇಘಗಳು ಅಲ್ಲಿನ ನೆಲಕ್ಕೆ ಗಾಜಿನ ಮಳೆಯನ್ನೇ ಸುರಿಸುತ್ತವಂತೆ! ಹೀಗೆ ಮೋಡಗಳು ಸದಾ ತಾವಿರುವ ವಾತಾವರಣಕ್ಕೆ ತಕ್ಕಂತೆ ವರ್ತಿಸುತ್ತಾ ಮನುಷ್ಯನ ಕುತೂಹಲದ ಪರಿಧಿಯನ್ನು ವಿಸ್ತರಿಸುತ್ತಲೇ ಅನಂತಾಕಾಶದಲ್ಲಿ ತೇಲುತ್ತಿವೆ.

                       ****************

ಯಾವ ಗ್ರಹದಲ್ಲಿ ಎಂಥದೇ ಮಳೆ ಬಂದರೂ ನಮ್ಮ ಭೂಮಿಯಲ್ಲಿನ ಮೋಡಗಳು ನಮ್ಮ ಮೇಲೆ ಮುನಿಸಿಕೊಂಡಿರುವುದಂತೂ ಸತ್ಯ. ಪ್ರತೀ ಬಾರಿಯ ಮಳೆಗಾಲದಲ್ಲೂ ಇದು ಸಾಬೀತಾಗುತ್ತಿದೆ. ತಮ್ಮ ಅಸಹಾಯ ಸೋದರರಾದ ಅರಣ್ಯ, ಗುಡ್ಡ, ಕೆರೆ, ನದಿಗಳ ಮೇಲೆ ಮನುಷ್ಯ ತೋರುತ್ತಿರುವ ದಬ್ಬಾಳಿಕೆಗೆ ಪರಮ ಶಕ್ತರಾದ  ಮೇಘಗಳು ಅತಿವೃಷ್ಟಿ, ಅನಾವೃಷ್ಟಿಗಳ ಮೂಲಕ ಸೇಡು ತೀರಿಸಿಕೊಳ್ಳುತ್ತಿವೆ. ಹೀಗೆ ತಮ್ಮ ಅಂಕೆಗೆ ಸಿಲುಕದೆ ಜಿದ್ದು ತೀರಿಸಿಕೊಳ್ಳುವ ಮೋಡಗಳನ್ನು ಹದ್ದುಬಸ್ತಿನಲ್ಲಿಡುವ ಪ್ರಯತ್ನಗಳೂ ನಡೆಯುತ್ತಿವೆ. ಮೋಡ ಬಿತ್ತನೆಯಂತಹಾ ತಂತ್ರಜ್ಞಾನದ ಮೂಲಕ ಮೋಡಗಳನ್ನು ಉದ್ದೇಪಿಸಿ ಮಳೆ ಬರಿಸಲಿಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ಖುದ್ದು ಸರ್ಕಾರವೇ ಹರಿಸುತ್ತಿದೆ. ಆದರೆ ಮೋಡಗಳು ಮಾತ್ರ ಇಂತಹಾ ಯಾವ ಒತ್ತಡಕ್ಕೂ ಜಗ್ಗದೇ ಋತುಚಕ್ರದ ಅಂಗಗಳ ಮೇಲೆ ಮನುಷ್ಯ ತೋರುತ್ತಿರುವ ಅತಿಯಾದ ಹಸ್ತಕ್ಷೇಪವನ್ನು ತಮ್ಮದೇ ರೀತಿಯಲ್ಲಿ ಪ್ರತಿಭಟಿಸುತ್ತಿವೆ. 'ಪ್ರಳಯವಾಗುವ ಕಾಲಕ್ಕೆ ಹೊಳ ಊಳುತ್ತಿರುವ ಎಡ ಭಾಗದ ಎತ್ತಿನ ಮೇಲೆ ಬೀಳುವ ಮಳೆ ಬಲಭಾಗದೆತ್ತಿನ ಮೇಲೆ ಬೀಳುವುದಿಲ್ಲ' ಎನ್ನುವುದು ಹಿಂದಿನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಗಾದೆ. ಈಗಾಗಲೇ ಆ ಅಂತರ 'ಪಕ್ಕದ ಏರಿಯಾದಲ್ಲಿ ಬಿದ್ದ ಮಳೆ ಈ ಏರಿಯಾದಲ್ಲಿ ಬಿದ್ದಿಲ್ಲ'  ಎನ್ನುವಷ್ಟು ಸಮೀಪಕ್ಕೆ ಬಂದಾಗಿದೆ. ಈಗಲೂ ನಾವು ಎಚ್ಚೆತ್ತುಕೊಳ್ಳದೇ ಹೋದರೆ ಎರೆಡೆತ್ತುಗಳನ್ನು ಕಟ್ಟಿಕೊಂಡು ಕಾಯುತ್ತಾ ಕೂರುವುದೊಂದೇ ಉಳಿಯುವ ದಾರಿಯಾಗುತ್ತದೆ.

(ಜುಲೈ 21ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...