"ಸೋರುತಿಹುದು ಮನೆಯ ಮಾಳಿಗೀ..."
ನೆಲದ ಮೇಲೆ ನೀರು ಸೋರುತ್ತಿರುವಲ್ಲೆಲ್ಲಾ ಪಾತ್ರೆಗಳನ್ನಿಡುತ್ತಾ ಅಮ್ಮ ಹಾಡುತ್ತಿದ್ದ ಹಾಡಿಗೆ ಸೋರುವ ಮಾಡಿನಿಂದ ಬೀಳುತ್ತಿದ್ದ ಹನಿಗಳು ತಾಳಹಾಕುತ್ತಿದ್ದವು. ಅಪ್ಪ ಕೈಯ್ಯಲ್ಲೊಂದು ಉದ್ದದ ಬಿದಿರುಕೋಲು ಹಿಡಿದು ಹಂಚುಗಳನ್ನು ಎತ್ತೆತ್ತಿ ಸರಿಯಾಗಿ ಕೂರಿಸುತ್ತಾ ಸೋರುವುದನ್ನು ಸರಿಪಡಿಸಲು ಯತ್ನಿಸುತ್ತಿದ್ದ. ಕಿಟಕಿಯ ಬಾಗಿಲನ್ನು ಕೊಂಚವೇ ಸರಿಸಿದ ವಿಶು ಹೊರಗೆ ಅಂಗಳದತ್ತ ನೋಡಿದ. ಅಲ್ಲಿ ಕಣ್ಣಿರುವುದೇ ಸುಳ್ಳೇನೋ ಎಂಬಷ್ಟು ಗಾಢ ಕತ್ತಲೆ... ಹಿಂದಿನಿಂದ ಧೋ ಎನ್ನುವ ಮಳೆಹನಿಗಳ ಆರ್ಭಟ. ಭಯವೆನ್ನಿಸಿ ಬಾಗಿಲು ಮುಚ್ಚಿದ. ಕರೆಂಟಿಲ್ಲದ ಕೋಣೆಯ ಹೊಸಿಲಿನಲ್ಲಿಟ್ಟಿದ್ದ ಸೀಮೆ ಎಣ್ಣೆ ಬುಡ್ಡಿದೀಪ ಗಾಳಿ ಹೇಳಿದಂತೆ ಕುಣಿಯುತ್ತಿತ್ತು. ವಿಶು ಕೋಣೆಯ ನಡುವಿಟ್ಟಿದ್ದ ಮಾಡಿನಿಂದ ಸೋರಿದ ನೀರಿನಿಂದಾಗಿ ಅರ್ಧ ತುಂಬಿದ್ದ ಪಾತ್ರೆಯೊಳಗೆ ಮೆಲ್ಲಗೆ ಕೈಯ್ಯಾಡಿಸಿದ. ಅದು ಫ್ರಿಜ್ಜಿನಲ್ಲಿಟ್ಟಂತೆ ತಣ್ಣಗಿತ್ತು. ನಿಮಿಷಗಳು ಜಾರಿದವು.
"ಜಾಸ್ತಿ ಮಾತಾಡ್ಬೇಡ ನೀನು!"
ಅಡಿಗೆ ಮನೆಯ ಕತ್ತಲಿಂದ ಅಚಾನಕ್ಕಾಗಿ ನುಗ್ಗಿಬಂದ ಗುಡುಗು ಧ್ವನಿಗೆ ವಿಶು ಬೆಚ್ಚಿಬಿದ್ದ.
"ಹೇಳಿದ ಕೂಡ್ಲೇ ಮನೆ ಕಟ್ಟೋಕೆ ಇಲ್ಲಿ ಅಜ್ಜನ ದೀಸ್ಯಾರು ಮಾಡಿಟ್ಟಿರೋ ಗಂಟಿಲ್ಲ ಗೊತ್ತಾಯ್ತಾ? ಅಷ್ಟಿದ್ದಿದ್ರೆ ಯಾರಾದ್ರೂ ದುಡ್ಡಿರೋ ಶ್ರೀಮಂತನ್ನೇ ಮದುವೆ ಆಗ್ಬೇಕಿತ್ತು. ಯಾರಾದ್ರೂ ಕಾಲು ಹಿಡಿದಿದ್ರ ನಿಂಗೆ ನನ್ನೇ ಮದುವೆ ಆಗೂ ಅಂತ?"
ಕತ್ತಲು ಕಾರುತ್ತಾ ನಿಂತಿದ್ದ ಬಾಗಿಲಿನಿಂದ ಧಡಬಡ ಹೆಜ್ಜೆಗಳನ್ನಿಡುತ್ತಾ ಹೊರಬಂದ ಅಪ್ಪ ಧಡಾಲನೆ ಮಲಗುವ ಕೋಣೆಯ ಬಾಗಿಲು ತೆಗೆದ ಸದ್ದೂ, ಅಡುಗೆ ಮನೆಯಲ್ಲಿ ಅಮ್ಮ ಬಿಕ್ಕಿದ ಸದ್ದೂ ಒಟ್ಟಿಗೇ ವಿಶಾಲನ ಕಿವಿಯನ್ನು ಹೊಕ್ಕವು. ಕಣ್ಕಟ್ಟಿದ್ದ ಕತ್ತಲಿನೊಳಗೆ ತಡಕುತ್ತಾ ಅಡಿಗೆ ಮನೆಯೊಳಕ್ಕೆ ನಡೆದ. ಅಲ್ಲಿ ಚಿಮಣಿ ಬುಡ್ಡಿಯ ಬಳಕಲ್ಲಿ ಅವನಿಗೆ ಕಂಡಿದ್ದು ಒಂದು ಕಡೆ ಅಪ್ಪ ಉಂಡೆದ್ದು ಹೋದ ಬಾಳೇಲೆ, ಅದರೆದುರು ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಾ ನಿಂತಿರುವ ಅಮ್ಮ...
"ಏನಾಯ್ತಮ್ಮಾ?"
ಅಮ್ಮ ಉತ್ತರಿಸಲಿಲ್ಲ. ಸೆರಗಿನಿಂದ ಮತ್ತೊಮ್ಮೆ ಕಣ್ಣೊರೆಸಿಕೊಂಡವಳು ಸ್ಟ್ಯಾಂಡಿನಿಂದ ಪುಟ್ಟ ತಟ್ಟೆಯನ್ನು ತೆಗೆದು ನೆಲದಮೇಲಿರಿಸುತ್ತಾ ಹೇಳಿದಳು:
"ಬೇಗಬೇಗ ಊಟ ಮಾಡು. ಕರೆಂಟಿನ್ನು ಬರಲ್ಲ!"
"ಬೇಗಬೇಗ ಊಟ ಮಾಡು. ಕರೆಂಟಿನ್ನು ಬರಲ್ಲ!"
'ಪಚಕ್!'
ಮಾಡಿನಿಂದ ಸೋರಿದ ಹನಿಯೊಂದಕ್ಕೆ ಸಿಕ್ಕ ಚಿಮಣಿ ಬುಡ್ಡಿ ಆರಿಹೋಯಿತು. ಕೋಣೆಯ ತುಂಬಾ ತುಂಬಿಕೊಂಡ ಕತ್ತಲ ಹಿನ್ನೆಲೆಯಲ್ಲಿ ಹೊರಗೆ ಸುರಿಯುತ್ತಿದ್ದ ಮಳೆಗಾಳಿಯ ಸದ್ದು ಇನ್ನಷ್ಟು ಭಯಾನಕವಾಗಿ ಕೇಳತೊಡಗಿತು.
"ಅಮ್ಮಾ....."
ವಿಶು ಭಯದಿಂದ ಕರೆದ.
ವಿಶು ಭಯದಿಂದ ಕರೆದ.
"ಏಳ್ಬೇಡ, ಅಲ್ಲೇ ಕೂತಿರು. ದೀಪ ಹಚ್ತೀನಿ"
ಕತ್ತಲ ಮರೆಯಿಂದ ಅಮ್ಮನ ದನಿ ಅಭಯ ಹೇಳಿತು. ನಂತರ ಅಮ್ಮ ನಡೆದದ್ದೂ, ಬೆಂಕಿ ಪೊಟ್ಟಣಕ್ಕಾಗಿ ತಡಕುವಾಗ ಅವಳ ಕೈಬಳೆ ಘಲಗುಟ್ಟಿದ್ದೂ, ಅವಳು ಗೀರಿದಾಗ ಥಂಡಿ ಹಿಡಿದ ಬೆಂಕಿಕಡ್ಡಿಗಳೆರೆಡು ಕೊರ್ ಕೊರ್ ಎಂದು ಆರಿಹೋದದ್ದೂ ಶಬ್ದಗಳಾಗಿ ಅವನ ಕಿವಿ ತಲುಪಿದವು. ಕೊನೆಗೂ ಹೊತ್ತಿಕೊಂಡ ಮೂರನೇ ಕಡ್ಡಿಯಲ್ಲಿ ಬುಡ್ಡಿಹಚ್ಚಿದ ಅಮ್ಮ ಆಚೆಕಡೆ ನೆಲದ ಮೇಲಿಟ್ಟಿದ್ದ ಪಾತ್ರೆಯನ್ನು ತಂದು ಹೊಸತಾಗಿ ಸೋರುತ್ತಿರುವಲ್ಲಿಟ್ಟು ಅಪ್ಪ ಉಂಡ ಬಾಳೇಲೆ ಎತ್ತಿಕೊಂಡು ಹೊರನಡೆದಳು. ಬಗ್ಗಿ ಪಾತ್ರೆಯನ್ನು ನೆಲದ ಮೇಲಿರಿಸುವಾಗ ಅವಳ ಕಣ್ಣ ಹನಿಗಳೆರೆಡು ಜಾರಿ ಪಾತ್ರೆಗೆ ಬಿದ್ದಿದ್ದು ಬುಡ್ಡಿಯ ಬೆಳಕಲ್ಲಿ ವಿಶಾಲನಿಗೆ ಸ್ಪಷ್ಟವಾಗಿಯೇ ಕಂಡಿತು. ಎದುರಿರುವ ಆ ಪಾತ್ರೆಯೊಳಕ್ಕೆ ಮತ್ತೊಮ್ಮೆ ಕೈಯ್ಯದ್ದಿದ.
ಅದರ ನೀರೀಗ ಕೊಂಚ ಬೆಚ್ಚಗಾದಂತೆನಿಸಿತು.
*****************
"ಇದು ನಮ್ ಅಪ್ಪಯ್ಯ ಕಟ್ಸಿದ್ ಮನಿ ಆಚಾರ್ರೇ. ಅದ್ಕೇ ಇದ್ರ ಮೇಲೆ ಪಾಸಿ ಜಾಸ್ತಿ. ನಾವಿರೋತಂಕ ಈ ಮನಿ ಕೆಡ್ಗೋ ಮಾತೇ ಇಲ್ಲೆ. ಮುಂದೆ ಮಕ್ಳ ಕಾಲಕ್ಕೆ ಕಂಡ್ಕಂಡ್ರಾಯ್ತ್.... ಏನಂತ್ರೀ ಅಚಾರ್ರೇ"
ಕುಂದಾಪುರದ ಆಚಾರಿಗೆ ಅಪ್ಪ ಹೇಳುತ್ತಿದ್ದ ಮಾತುಕೇಳಿದ ಅಮ್ಮ ಮಲಗಿದಲ್ಲೇ ಸಣ್ಣಗೆ ಗೊಣಗಿಕೊಂಡಳು. ರಾತ್ರೆಯಿಡೀ ಸುರಿದಿದ್ದ ಮಳೆ ಮಧ್ಯಾಹ್ನದ ಹೊತ್ತಿಗೆ ಸಣ್ಣ ವಿರಾಮ ತೆಗೆದುಕೊಂಡ ಬೆನ್ನಲ್ಲೇ ಸೋರುತ್ತಿದ್ದ ಮಾಡನ್ನು ಸರಿಪಡಿಸಲೆಂದು ಅಪ್ಪ ಆಚಾರಿಯನ್ನು ಕರೆಸಿದ್ದ. "ತೇಪೆ ಹಾಕೋದೇ ಆಗೋಯ್ತು ಜೀವನಾ ಎಲ್ಲಾ" ಎಂಬ ಅಮ್ಮನ ಗೊಣಗನ್ನ ಕೇಳಿಯೂ ಕೇಳದಂತೆ ಅಪ್ಪ ಕೆಲಸ ಆರಂಭಿಸಿದ್ದ. "ಊಟ ಬ್ಯಾಡ ಅಮ್ಮ" ಎಂದು ಹಲ್ಕಿರಿದ ಆಚಾರಿಗೊಂದು ಲೋಟ ಕಾಫಿ ಮಾಡಿಕೊಟ್ಟುಬಂದ ಅಮ್ಮ ಮಧ್ಯಾಹ್ನದ ನಿದ್ರೆಗೆಂದು ಹಾಸಿದ ಹಾಸಿಗೆಯ ಮೇಲೆ ವಿಶಾಲನೂ ಒರಗಿಕೊಂಡ. ಹೊರಗೆ ಆಚಾರಿಯೊಂದಿಗೆ ಅಪ್ಪ ಆಡುತ್ತಿದ್ದ ಒಂದೊಂದು ಮಾತಿಗೂ ಇಲ್ಲಿ ಅಮ್ಮ ಅಸಮಾಧಾನದ ನಿಟ್ಟುಸಿರಿಡುತ್ತಿದ್ದಳು.
ಕುಂದಾಪುರದ ಆಚಾರಿಗೆ ಅಪ್ಪ ಹೇಳುತ್ತಿದ್ದ ಮಾತುಕೇಳಿದ ಅಮ್ಮ ಮಲಗಿದಲ್ಲೇ ಸಣ್ಣಗೆ ಗೊಣಗಿಕೊಂಡಳು. ರಾತ್ರೆಯಿಡೀ ಸುರಿದಿದ್ದ ಮಳೆ ಮಧ್ಯಾಹ್ನದ ಹೊತ್ತಿಗೆ ಸಣ್ಣ ವಿರಾಮ ತೆಗೆದುಕೊಂಡ ಬೆನ್ನಲ್ಲೇ ಸೋರುತ್ತಿದ್ದ ಮಾಡನ್ನು ಸರಿಪಡಿಸಲೆಂದು ಅಪ್ಪ ಆಚಾರಿಯನ್ನು ಕರೆಸಿದ್ದ. "ತೇಪೆ ಹಾಕೋದೇ ಆಗೋಯ್ತು ಜೀವನಾ ಎಲ್ಲಾ" ಎಂಬ ಅಮ್ಮನ ಗೊಣಗನ್ನ ಕೇಳಿಯೂ ಕೇಳದಂತೆ ಅಪ್ಪ ಕೆಲಸ ಆರಂಭಿಸಿದ್ದ. "ಊಟ ಬ್ಯಾಡ ಅಮ್ಮ" ಎಂದು ಹಲ್ಕಿರಿದ ಆಚಾರಿಗೊಂದು ಲೋಟ ಕಾಫಿ ಮಾಡಿಕೊಟ್ಟುಬಂದ ಅಮ್ಮ ಮಧ್ಯಾಹ್ನದ ನಿದ್ರೆಗೆಂದು ಹಾಸಿದ ಹಾಸಿಗೆಯ ಮೇಲೆ ವಿಶಾಲನೂ ಒರಗಿಕೊಂಡ. ಹೊರಗೆ ಆಚಾರಿಯೊಂದಿಗೆ ಅಪ್ಪ ಆಡುತ್ತಿದ್ದ ಒಂದೊಂದು ಮಾತಿಗೂ ಇಲ್ಲಿ ಅಮ್ಮ ಅಸಮಾಧಾನದ ನಿಟ್ಟುಸಿರಿಡುತ್ತಿದ್ದಳು.
"ಅಪ್ಪ ನಿನ್ನೆ ನಿಂಗೆ ಯಾಕೆ ಬಯ್ದಿದ್ದು ಅಮ್ಮಾ?"
ಅಮ್ಮ ಉತ್ತರಿಸಲಿಲ್ಲ.
"ಮನೆ ಕಟ್ಸು ಅಂತ ಹೇಳಿದ್ಕೇ ಬೈದ್ನ ಅಪ್ಪ?"
ಉತ್ತರವನ್ನೇ ಪ್ರೆಶ್ನೆಯಾಗಿಸಿ ಕೇಳಿದ ಮಗನಿಗೆ ಹೇಳಲು ಅವಳ ಬಳಿ ಉತ್ತರಗಳಿರಲಿಲ್ಲ, ಕನಸುಗಳಿದ್ದವು!
"ನೀನು ದೊಡ್ಡೋನಾದ ಮೇಲೆ ಇಂಜಿನಿಯರ್ ಆಗ್ಬೇಕು ವಿಶು. ನಿನ್ನ ಮಾವ ಕಟ್ಸಿದಾನಲ, ಅಂಥಾದ್ದೇ ಮನೆ ಕಟ್ಸ್ಬೇಕು!"
ಅಮ್ಮ ಉತ್ತರಿಸಲಿಲ್ಲ.
"ಮನೆ ಕಟ್ಸು ಅಂತ ಹೇಳಿದ್ಕೇ ಬೈದ್ನ ಅಪ್ಪ?"
ಉತ್ತರವನ್ನೇ ಪ್ರೆಶ್ನೆಯಾಗಿಸಿ ಕೇಳಿದ ಮಗನಿಗೆ ಹೇಳಲು ಅವಳ ಬಳಿ ಉತ್ತರಗಳಿರಲಿಲ್ಲ, ಕನಸುಗಳಿದ್ದವು!
"ನೀನು ದೊಡ್ಡೋನಾದ ಮೇಲೆ ಇಂಜಿನಿಯರ್ ಆಗ್ಬೇಕು ವಿಶು. ನಿನ್ನ ಮಾವ ಕಟ್ಸಿದಾನಲ, ಅಂಥಾದ್ದೇ ಮನೆ ಕಟ್ಸ್ಬೇಕು!"
"ಶಂಕ್ರು ಮಾವ ಕಟ್ಸಿದಾನಲ ಆರ್ಸೀಸಿ ಮನೆ... ಅದೇ ಥರಾನ ಅಮ್ಮ?"
"ಹುಂ ಪುಟ್ಟೂ. ನಮ್ಗೊಂದು ಕೋಣೆ, ನಿನಗೊಂದು ಕೋಣೆ, ಬಂದೋರಿಗೆ ಉಳಿಯೋಕೆ ಒಂದು ಕೋಣೆ. ಕೋಣೆಕೋಣೆಗೂ ಫ್ಯಾನು.."
ವರಲೆ ತಿಂದು ಲಡ್ಡು ಹಿಡಿದಿದ್ದ ಮಾಡನ್ನೇ ದಿಟ್ಟಿಸುತ್ತಾ ಅಮ್ಮ ಹೇಳುತ್ತಾ ಹೋದಳು. ಅವಳ ಕನಸಿನ ಮಾಲಿಕೆಯನ್ನ ಮಧ್ಯದಲ್ಲಿ ತುಂಡರಿಸುವಂತೆ ವಿಶು ಕೇಳಿದ:
ವರಲೆ ತಿಂದು ಲಡ್ಡು ಹಿಡಿದಿದ್ದ ಮಾಡನ್ನೇ ದಿಟ್ಟಿಸುತ್ತಾ ಅಮ್ಮ ಹೇಳುತ್ತಾ ಹೋದಳು. ಅವಳ ಕನಸಿನ ಮಾಲಿಕೆಯನ್ನ ಮಧ್ಯದಲ್ಲಿ ತುಂಡರಿಸುವಂತೆ ವಿಶು ಕೇಳಿದ:
"ಮನಗೆ ಏನಂತ ಹೆಸರಿಡೋದು ಅಮ್ಮ?"
ಅವಳು ಯಾವುದೋ ಯೋಚನೆಗೆ ಜಾರಿದಂತೆ ಅರೆಕ್ಷಣ ಮೌನವಾದಳು. ನೆನಪಿನಾಳದಿಂದ ಆಯ್ದ ನೋವೊಂದು ಅವಳ ತುಟಿಯಲ್ಲಿ ಹೆಸರಾಗಿ ಹೊರಬಂತು:
"ಅನಂತ ನಿಲಯ!"
"ಹಂಗಂದ್ರೆ ಯಾರು?"
"ನಿನ್ನ ಅಣ್ಣ ವಿಶು"
"ಅಣ್ಣನಾ!?" ಅಚ್ಚರಿ ಆನಂದಗಳಿಂದ ಅವನ ಪುಟ್ಟ ಕಣ್ಣು ಇಷ್ಟಗಲಕ್ಕೆ ಅರಳಿತು.
"ಎಲ್ಲಿದಾನೆ ಅಮ್ಮ ನನ್ ಅಣ್ಣ?"
"ಎಲ್ಲಿದಾನೆ ಅಮ್ಮ ನನ್ ಅಣ್ಣ?"
"ದೇವರ ಹತ್ರ...."
ಹಳೆಯ ನಕ್ಷತ್ರವೊಂದು ಅವಳ ಕಣ್ಣಂಚಲ್ಲಿ ಕರಗಿನಿಂತಿತ್ತು.
ಹಳೆಯ ನಕ್ಷತ್ರವೊಂದು ಅವಳ ಕಣ್ಣಂಚಲ್ಲಿ ಕರಗಿನಿಂತಿತ್ತು.
****************
"ಹೌದು ವಿಶಾಲ್... ನನಗೆ ದುಡ್ಡಿರೋ ಹುಡುಗನ್ನೇ ಮದುವೆ ಆಗಬೇಕಂತ ಆಸೆ. ಈ ಪ್ರೀತಿ ಗೀತಿ ಎಲ್ಲಾನೂ ಮರೆತುಬಿಡಿ ಪ್ಲೀಸ್. ನೀವು ಮರೆಯದಿದ್ರೂ ನನ್ನ ನನ್ ಪಾಡಿಗೆ ಬಿಟ್ಬಿಡಿ. ಹರಕು ಮನೆಯಲ್ಲಿ ಮುರುಕು ಗೋಡೆಗಳನ್ನ ತೊಳೆಯೋ-ಬಳಿಯೋ ಬದುಕು ನನಗೆ ಇಷ್ಟವಿಲ್ಲ!"
ಅವಳು ಹಾಗೆಂದು ಹೇಳಿ ನಡುಬೀದಿಯಲ್ಲವನನ್ನು ಬಿಟ್ಟುಹೋದ ದಿನವೇ ಊರಿನಲ್ಲಿ ಮನೆಯ ಹೊರಕೋಣೆಯೊಂದರ ಗೋಡೆ ಕುಸಿದು ಬಿದ್ದಿತ್ತು... ಥೇಟ್ ಅವನ ಹೃದಯದಂತೆ. ರಾತ್ರೋರಾತ್ರಿ ಬಸ್ಸು ಹತ್ತಿ ಊರಿಗೆ ಬಂದಿಳಿದು ಮನೆಯಂಗಳಕ್ಕೆ ಕಾಲಿಟ್ಟವನನ್ನು ಒಳಗಿನಿಂದ ತೇಲಿಬಂದ ಸಂಭಾಷಣೆ ಸ್ವಾಗತಿಸಿತು:
"ಮಗ ಬೆಂಗ್ಳೂರಗೆ ಕೆಲ್ಸಕ್ಕಿದ್ದ. ಮತ್ತೆಂತ ಯೋಚ್ನೆ ಮಾಡ್ತ್ರಿ ಚಂದ್ರಯ್ಯ? ಮಳಿಗಾಲ ಮುಗೀತಿದ್ಹಂಗೆ ಮನೆ ಕಟ್ಟೂಕ್ ಶುರು ಮಾಡ್ಬಿಡಿ"
ಅದು ಗೋಪಾಲಾಚಾರಿಯ ಧ್ವನಿ.
ಅದು ಗೋಪಾಲಾಚಾರಿಯ ಧ್ವನಿ.
"ಬೆಂಗ್ಳೂರಲ್ ಕೆಲ್ಸ ಮಾಡೋರೆಲ್ಲ ಇಂಜಿನಿಯರಲ್ಲ ಗೋಪಾಲ. ಅವ್ನಿಗೆ ಬರೋದೇ ಹದ್ಮೂರೋ ಹದ್ನಾಕೋ ಸಾವ್ರ ಸಂಬ್ಳ. ತಿಂಗ್ಳಿಗೆ ಎರೆಡು ಸಾವ್ರ ಉಳಿದ್ರೆ ಹೆಚ್ಚು. ಅಷ್ಟ್ರಲ್ಲಿ ಅವ್ನ ಖರ್ಚು ನೋಡ್ಕೋತಾನಾ, ತಂಗಿ ಮದುವೆ ಮಾಡ್ತಾನಾ, ಮನೆ ಕಟ್ತಾನಾ... ಯಾವ್ದು ಮಾಡ್ತಾನೆ ಪಾಪ? ನಮ್ ಕಥೆ ನೋಡಿದ್ರೆ ಹಿಂಗೆ...."
ಅಮ್ಮ ಅಲವತ್ತುಕೊಂಡಳು.
ಅಮ್ಮ ಅಲವತ್ತುಕೊಂಡಳು.
"ಅಷ್ಟೇ ಬಪ್ಪುದಾ ಮಾರ್ರೆ? ಆ ಚಂದಕ್ ಅಷ್ಟ್ ದೂರ ಎಂತಕ್ ಹ್ವಾದ್ದು? ಊರಾಗೇ ಎಂತರ್ ಕೆಲ್ಸ ಮಾಡ್ಕಂಡ್ ಇರ್ಲಕ್ಕಿದ್ದೀತಲೆ. ಬಾಡ್ಗೆ-ಊಟದ್ ಖರ್ಚಾರೂ ಉಳೀತಿತ್ತು"
ತನ್ನ ಬದುಕಿನ ಕಠೋರ ಸತ್ಯಗಳ ತಾಪ ಸೋಕಿ ಹೊಸಿಲ ದಾಟಿ ಒಳಗಡಿಯಿಡುತ್ತಿದ್ದವನ ಹೆಜ್ಜೆ ಸಣ್ಣಗೆ ಅದುರಿತು. ಅವರ ಯಾವ ಮಾತನ್ನೂ ಕೇಳಿಸಿಕೊಳ್ಳದವನಂತೆ ಮುಗುಳ್ನಗೆಯೊಂದಿಗೆ ಒಳಹೊಕ್ಕು ನೇರ ನಡುಮನೆಯ ಗೋಡೆಯತ್ತ ನಡೆದ. ಅಲ್ಲಿ ವಾಸ್ತವವೇ ಮೈದಾಳಿ ಮಲಗಿರುವಂತೆ ಚೂರುಚೂರಾಗಿ ಚದುರಿಬಿದ್ದಿತ್ತು.... ಎಪ್ಪತ್ತು ವರ್ಷದ ಹಿಂದೆ ಕಟ್ಟಿದ್ದ ಮಣ್ಣಿನ ಗೋಡೆ.
ಅಪ್ಪ ಎಂದಿನಂತೆ ಈ ದುರ್ದೈವಕ್ಕೆ ತನ್ನ ಬಡ ಜೀವನದ 'ಇಲ್ಲ'ಗಳನ್ನು ಹೊಣೆ ಮಾಡಿ ಸುಮ್ಮನಾದ. ಅಮ್ಮ ನಾಲ್ಕುಹನಿ ಕಣ್ಣೀರು ಸುರಿಸಿ ತಣ್ಣಗಾದಳು. ತಂಗಿ-ತಮ್ಮನನ್ನು ಅವರ ಕಾಲೇಜಿನ ಬಸ್ಸು ಕೊಂಡೊಯ್ದಿತು. ಕೊನೆಗೆ ಅಡಿಕೆ ದಬ್ಬೆಗಳಿಂದ ತೇಪೆ ಕಟ್ಟಿದ ತಾತ್ಕಾಲಿಕ ಗೋಡೆಯೆದುರು ಉಳಿದು ಹೋದವನು ವಿಶಾಲನೊಬ್ಬನೇ.
"ಹರಕು ಮನೆಯಲ್ಲಿ ಮುರುಕು ಗೋಡೆಗಳನ್ನ ತೊಳೆಯೋ-ಬಳಿಯೋ ಬದುಕು ನನಗೆ ಇಷ್ಟವಿಲ್ಲ ವಿಶಾಲ್!"
ಅವಳಾಡಿದ ಮಾತು ಅವನ ಕಿವಿಯಲ್ಲಿ ಗುಂಯ್ಗಟ್ಟಿತು. ನೋವಿನ ನೆನಪಿನೊಂದಿಗೆ ತುಂಬಿಬಂದ ಕಣ್ಣಿಂದ ಕಟ್ಟಕಡೆಯ ಕಂಬನಿಯ ಹನಿ ಜಾರಿಹೋಗುವ ಹೊತ್ತಿಗಾಗಲೇ ಅವನು ನಿರ್ಧರಿಸಿಬಿಟ್ಟಿದ್ದ:
ಅವಳಾಡಿದ ಮಾತು ಅವನ ಕಿವಿಯಲ್ಲಿ ಗುಂಯ್ಗಟ್ಟಿತು. ನೋವಿನ ನೆನಪಿನೊಂದಿಗೆ ತುಂಬಿಬಂದ ಕಣ್ಣಿಂದ ಕಟ್ಟಕಡೆಯ ಕಂಬನಿಯ ಹನಿ ಜಾರಿಹೋಗುವ ಹೊತ್ತಿಗಾಗಲೇ ಅವನು ನಿರ್ಧರಿಸಿಬಿಟ್ಟಿದ್ದ:
"ನನಾಗದ ಈ ಅವಮಾನ ನನ್ನ ತಮ್ಮ-ತಂಗಿಗೆ ಆಗಲು ಖಂಡಿತಾ ಬಿಡಲಾರೆ!"
ಹಾಗೆಂದು ನಿರ್ಧರಿಸಿದ ಮರುಕ್ಷಣವೇ ಅವನು ಹೊರಟಿದ್ದು ನೇರ ಗೋಪಾಲಾಚಾರಿಯ ಮನೆಗೆ. ಮನೆಯೆದುರಿನ ಗುಡ್ಡ ಹತ್ತಿಳಿದು, ಕೆರೆಯಗುಂಟ ಕಾಲುದಾರಿಯಲ್ಲಿ ಸಾಗಿ ಅವನ ಮನೆಯಂಗಳ ತಲುಪುವ ಹೊತ್ತಿಗೆ ಸೂರ್ಯ ಪಶ್ಚಿಮದ ಹಾದಿ ಹಿಡಿದಿದ್ದ. ಕಡುಗೆಂಪು ಕಿರಣಗಳ ಹಿನ್ನೆಲೆಯಲ್ಲಿ ಪುಟ್ಟ ಅರಮನೆಯಂತೆ ಕಾಣುತ್ತಿತ್ತು- ಕೆಲವೇ ತಿಂಗಳ ಹಿಂದೆ ಕಟ್ಟಿದ್ದ ಗೋಪಾಲಾಚಾರಿಯ ಆರ್ಸೀಸಿ ಮನೆ. ನಾಲ್ಕನೇ ಕ್ಲಾಸು ಪಾಸಾಗದ ಗೋಪಾಲಾಚಾರಿಯೇ ಇಷ್ಟು ದೊಡ್ಡ ಮನೆ ಕಟ್ಟಿರುವಾಗ ಎಂಬಿಎ ಓದಿರುವ ನನಗೇಕೆ ಇದು ಸಾಧ್ಯವಾಗುತ್ತಿಲ್ಲ? ಶಿಕ್ಷಣವೇ ನನ್ನ ಸಾಮರ್ಥ್ಯವನ್ನು ಕಟ್ಟಿಹಾಕಿದೆಯಾ? ಹಾಗೆಂದು ಯೋಚಿಸುತ್ತರುವಾಗ ಬಾಯ್ತುಂಬಾ ಎಲೆಯಡಿಕೆ ತುಂಬಿಕೊಂಡ ಗೋಪಾಲಾಚಾರಿ ವರಾಂಡಾದಲ್ಲಿ ಪ್ರತ್ಯಕ್ಷನಾದ.
"ನೀವೆಂತದೇ ಹೇಳಿ ವಿಶಾಲಯ್ಯ, ನಿಮ್ಮಪ್ಪಯ್ಯಂದು ಚುರ್ಕು ಸಾಲ್ದು!"
ನಾಲ್ಕು ಹಣ್ಣುಗಳಿರುವ ಬಾಳೆಗೊನೆಯ ಚಿಪ್ಪನ್ನು ವಿಶಾಲನೆದುರು ಟೀಪಾಯಿಯ ಮೇಲಿರಿಸುತ್ತಾ ನುಡಿದ ಗೋಪಾಲಾಚಾರಿ.
ನಾಲ್ಕು ಹಣ್ಣುಗಳಿರುವ ಬಾಳೆಗೊನೆಯ ಚಿಪ್ಪನ್ನು ವಿಶಾಲನೆದುರು ಟೀಪಾಯಿಯ ಮೇಲಿರಿಸುತ್ತಾ ನುಡಿದ ಗೋಪಾಲಾಚಾರಿ.
"ಇರೋ ಮುಕ್ಕಾಲೆಕ್ರೆ ತ್ವಾಟ್ದಂಗೆ ಅಡ್ಕೆ ಮರ ಒಂದ್ ಬಿಟ್ಟು ಮತ್ತೆಂತದೂ ಇಪ್ಪುಕಾಗ! ಪಾಪ ಆ ಅಮ್ಮ ಆಸೆಯಿಂದ ಏಲಕ್ಕಿ, ಲವಂಗ, ಮೆಣಸನಿನ್ ಬಳ್ಳಿ, ನಿಂಬೆ ಎಂತ ನೆಟ್ರೂ ಕಿತ್ ಒಗೀತ್ರು ನಿಮ್ ಅಪ್ಪಯ್ಯ. ಈ ಕಾಲ್ದಂಗೆ ಬರೀ ಒಂದನ್ನೇ ನಂಬ್ಕಂಡ್ರೆ ಹೆಂಗ್ ಬದ್ಕುಕಾತ್ ನೀವೇ ಹೇಳಿ"
"ಅವರ ಕಾಲ ಹೆಂಗೋ ನಡೀತು ಗೋಪಾಲಣ್ಣ. ಅಷ್ಟಕ್ಕೂ ಎಲ್ಲದಕ್ಕೂ ಅವ್ರನ್ನೇ ದೂರೋದು ತಪ್ಪು. ಇಪ್ಪತ್ತು ವರ್ಷ ಮನೇಲೆ ಇದ್ರೂ ದೊಡ್ಡ ಮಗನಾದ ನಾನು ತೋಟದ ಕಡೆ ಸರಿಯಾಗಿ ಕಾಲೇ ಹಾಕ್ಲೀಲ. ಇತ್ಲಗೆ ಇಂಜಿನಿಯರಿಂಗೋ, ಮತ್ತೆಂತದೋ ಮಾಡಿ ದೊಡ್ಡ ಸಂಬಳದ ಕೆಲಸ ತಂಗೊಂಡ್ನಾ ಅಂದ್ರೆ ಅದೂ ಇಲ್ಲ. ಸಿಕ್ಕ ಕೆಲ್ಸದಲ್ಲೂ ನಾಲ್ಕು ಕಾಸು ಉಳಿಸ್ಲೀಲ.... ಅದೆಲ್ಲ ಈಗ ಮುಗ್ದೋದ ಕಥೆ. ಅದು ಹಂಗಾಯ್ತು, ಇದು ಹಿಂಗಾಯ್ತು ಅಂತ ಕೂತ್ರೆ ನಾನೂ ಮತ್ತೊಬ್ಬ ಚಂದ್ರಶೇಖರ ಆಗ್ತೀನಿ ಅಷ್ಟೇ. ಈಗ ಇರೋದನ್ನೇ ಬಳಸ್ಕೊಂಡು ಹಾಳಾಗಿರೋದ್ನೆಲ್ಲಾ ಹೆಂಗೆ ಸರಿಮಾಡೋದಂತ ಯೋಚ್ನೆ ಮಾಡ್ಬೇಕು"
ವಿಶಾಲ ಗಂಭೀರವಾಗಿ ಹೇಳಿದ.
ವಿಶಾಲ ಗಂಭೀರವಾಗಿ ಹೇಳಿದ.
"ಚಿನ್ದಂತಾ ಮಾತಂದ್ರಿ ವಿಶಾಲಯ್ಯ. ಆದ್ರೆ ಮನೆ ಕಟ್ಟದು ಅಷ್ಟ್ ಸುಲ್ಭಕ್ಕಿಲ್ಲೆ. ನಾಗೋಣಿ ಸುರೇಶ್ ಗೌಡ್ರಿಗೆ ಐವತ್ ಲಕ್ಷ ಖರ್ಚಾಯ್ತಂಬ್ರು. ಕಲ್ಲೋಣಿ ಅಣ್ಣು ಹಾಂಡ್ರು ಮೊವತೈದು ಖರ್ಚ್ ಮಾಡ್ದ್ರಂಬ್ರು. ಎಲ್ಲ ಅವ್ರವ್ರ ಶಕ್ತೀಗ್ ತಕ್ಕಂಗೆ..."
"ನಿಮ್ಮನೆಗೆ ಎಷ್ಟು ಬಿತ್ತು ಗೋಪಾಲಣ್ಣ?"
ವಿಶಾಲ ಮಧ್ಯೆ ಬಾಯಿ ಹಾಕಿದ.
ವಿಶಾಲ ಮಧ್ಯೆ ಬಾಯಿ ಹಾಕಿದ.
"ನಂಗೂ ಇಪ್ಪತ್ಹತ್ರ ಖರ್ಚಾಯ್ತ್ ಮರ್ರೆ. ಮರ್ಗೆಲ್ಸ ಎಲ್ಲ ನಾನೇ ನೋಡ್ಕಂಡೆ. ಮಕ್ಳಿಬ್ರೂ ಗಾರೆ ಮಾಡುವರೆ ಆಯಿದ್ಕೆ ಅದೊಂದ್ ಸುಲ್ಭ ಆಯಿತ್. ಗುತ್ತಿರೋರತ್ರನೇ ತರ್ಸಿದ್ಕೆ ಕಬ್ಣದ್ ಖರ್ಚೂ ಸ್ವಲ್ಪ ಚೀಪೇ ಆಯ್ತ್...."
ಮನೆಯೊಂದನ್ನು ಕಟ್ಟುವುದಕ್ಕೆ ಕೇವಲ ನೆಲ ಮಾತ್ರವಲ್ಲ, ಸ್ನೇಹ, ಸಂಬಂಧ, ಸಂಪರ್ಕಗಳೂ ಗಟ್ಟಿಯಾಗಿರಬೇಕು ಅಂದುಕೊಂಡ ವಿಶಾಲ ಅಲ್ಲಿಂದ ಹೊರಟ. ಅವನ ಕನಸಿನ ಮನೆಯ ಪಾಯಕ್ಕೆ ಮೊದಲ ಕಲ್ಲು ಈಗಷ್ಟೇ ದೊರಕಿತ್ತು.
****************
"ಮನೆ ಕಟ್ಬಣಾಂತಿದೀನಿ ಅಮ್ಮ..."
ವಿಶಾಲ ಹಾಗೆಂದಾಗ ಅಮ್ಮನಿಗಾದ ಆಶ್ಚರ್ಯ, ಸಂತೋಷಕ್ಕೆ ಅವಳ ಕಣ್ಣು ಕತ್ತಲಲ್ಲೂ ಹೊಳೆಯಿತು.
ವಿಶಾಲ ಹಾಗೆಂದಾಗ ಅಮ್ಮನಿಗಾದ ಆಶ್ಚರ್ಯ, ಸಂತೋಷಕ್ಕೆ ಅವಳ ಕಣ್ಣು ಕತ್ತಲಲ್ಲೂ ಹೊಳೆಯಿತು.
"ಇನ್ನೂ ಎಷ್ಟು ದಿನಾಂತ ಹೀಗೆ ಮುರಿದು ಬಿದ್ದಿದ್ದನ್ನೇ ಎತ್ತೆತ್ತಿ ನಿಲ್ಸೋದು? ಆಗಿದ್ದಾಗ್ಲಿ, ಈ ವರ್ಷ ಮಳೆಗಾಲ ಮುಗೀತಿದ್ಹಂಗೆ ಪಾಯ ಹಾಕ್ಸೇಬಿಡ್ಬೇಕು!"
"ಹೌದು ವಿಶೂ. ಹತ್ರಿಂದ ಹನ್ನೆರ್ಡು ಲಕ್ಷಕ್ಕೆಲ್ಲ ಒಳ್ಳೆ ಮನೆ ಕಟ್ಬೋದು. ಮೇಲಿನ್ಮನೆ ಪದ್ಮಿನಿ ಕಟ್ಸಿದ್ಳಲ್ಲಾ, ಅಂಥಾದ್ದು!"
ಅವಳ ದನಿಯ ತುಂಬಾ ಹೊಸ ಉತ್ಸಾಹ.
ಅವಳ ದನಿಯ ತುಂಬಾ ಹೊಸ ಉತ್ಸಾಹ.
"ಅಪ್ಪ ಎಷ್ಟು ಕೊಡ್ತಾರೆ ಅಮ್ಮ?"
ಥಟ್ಟನೆ ವಿಶಾಲ ಮುಖ್ಯ ವಿಷಯಕ್ಕೆ ಬಂದಾಗ ಇಷ್ಟುಹೊತ್ತು ನಕ್ಷತ್ರವಾಗಿದ್ದ ಅಮ್ಮನ ಕಣ್ಣು ಕಳೆಗುಂದಿತು.
"ಕೊಡೋಕೆ ಏನಿದೆ ಹೇಳು ವಿಶು? ತುಂಡೆಕ್ರೆ ತೋಟ್ದಲ್ಲಿ ಬೆಳ್ದಿದ್ದು ಊಟಕ್ಕೇ ಸಾಕಾಗತ್ತೆ....."
ಥಟ್ಟನೆ ವಿಶಾಲ ಮುಖ್ಯ ವಿಷಯಕ್ಕೆ ಬಂದಾಗ ಇಷ್ಟುಹೊತ್ತು ನಕ್ಷತ್ರವಾಗಿದ್ದ ಅಮ್ಮನ ಕಣ್ಣು ಕಳೆಗುಂದಿತು.
"ಕೊಡೋಕೆ ಏನಿದೆ ಹೇಳು ವಿಶು? ತುಂಡೆಕ್ರೆ ತೋಟ್ದಲ್ಲಿ ಬೆಳ್ದಿದ್ದು ಊಟಕ್ಕೇ ಸಾಕಾಗತ್ತೆ....."
"ತೋಟದ ಮೇಲೆ ಬ್ಯಾಂಕಲ್ಲಿ ಸಾಲ ಕೊಡಲ್ವಾ?"
"ಎಲ್ಲಿಂದ ಕೊಡ್ತಾರೆ? ಈಗಾಗ್ಲೇ ಎರೆಡೂವರೆ ಲಕ್ಷ ಬೆಳೆಸಾಲ ಇದೆ ಅದ್ರ ಮೇಲೆ... ಕಳೆದ್ಸಲ ಗವರ್ಮೆಂಟೋರು ನೆಟ್ಟಗೆ ಬಡ್ಡೀ ಕಟ್ದೆ ಓಡಾಡ್ತಿದ್ದೋರದ್ದೆಲ್ಲ ಪೂರ್ತಿ ಸಾಲಮನ್ನ ಮಾಡಿದ್ರು. ತಿಂಗ್ಳು ತಿಂಗ್ಳು ತಪ್ದೇ ಕಂತು ಕಟ್ತಿದ್ದ ನಮ್ದು ಮನ್ನಾ ಆಗಿದ್ದು ಬರೀ ಏಳ್ನೂರೈವತ್ತು ರೂಪಾಯಿ! ಈಗ ಮತ್ತೆ ಆ ಕಡೆ ಏನಾದ್ರೂ ಹೋದ್ರೆ ಬಾಕಿ ಕಟ್ಟಿ ಅಂತ ಹಿಡ್ಕೋತಾರೆ..."
ಉತ್ತರ ತೀರಾ ನಿರೀಕ್ಷಿಸಿದ್ದೇ ಆದರೂ ತುಂಬಾ ನಿರಾಸೆಯಾಯಿತು ವಿಶಾಲನಿಗೆ. ಅವನ ಉತ್ಸಾಹ ಬತ್ತಿದ್ದು ಕಂಡ ಅಮ್ಮ ಏನೋ ಹೊಳೆದವಳಂತೆ ಥಟ್ಟನೆ ಎದ್ದುಹೋದಳು. ನಿಮಿಷಗಳ ನಂತರ ದೇವರ ಮನೆಯ ದೀಪದ ಬೆಳಕಿನೊಳಗಿನಿಂದ ನಡೆದುಬಂದವಳ ಕೈಯ್ಯಲ್ಲಿ ಪುಟ್ಟ ಬಟ್ಟೆಯ ಗಂಟೊಂದಿತ್ತು.
"ಇದನ್ನ ತಗೋ ವಿಶು... ಅರವತ್ತು ಸಾವಿರ ಇದೆ ಇದ್ರಲ್ಲಿ. ಯಾವ್ದಾರೂ ಒಂದು ಖರ್ಚಿಗೆ ಆಗತ್ತೆ"
"ಇದೆಲ್ಲಿತ್ತಮ್ಮ?"
"ನಿಮ್ಮಪ್ಪಂಗೆ ದುಡ್ಡು ಉಳ್ಸೋದೇ ಗೊತ್ತಿಲ್ಲ. ಅದ್ಕೆ ನಾನೇ ಮೊದ್ಲಿಂದನೂ ತುಪ್ಪ, ಹಪ್ಳ, ಉಪ್ಪಿನ್ಕಾಯಿ, ಮೆಣಸು ಮಾರಿದ ದುಡ್ಡನ್ನ ಸ್ವಲ್ಪಸ್ವಲ್ಪ ಎತ್ತಿಡ್ತಿದ್ದೆ, ವೈಶು ಮದುವೇಗೆ ಬೇಕಾಗುತ್ತೆ ಅಂತ! ತೀರ ಬಡವರ ಥರಾ ಮದುವೆ ಮಾಡಿದ್ರೆ ಸೇರಿದ ಮನೇಲಿ ಅವ್ಳಿಗೆ ಬೆಲೆ ಇರಲ್ಲ ನೋಡು. ಹಾಂ... ಇದ್ರ ಜೊತೆಗೆ ಒಂದೆಳೆಯ ಸರಾನೂ ಇದೆ, ಅಪ್ಪಯ್ಯ ನನ್ ಮದುವೇಲಿ ಕೊಟ್ಟಿದ್ದು. ಹಳೇದು... ಒಂದು ಹತ್ತಿಪ್ಪತ್ ಸಾವ್ರ ಬರ್ಬೋದೇನೋ.. ತಗೋ ಇದನ್ನ"
ವಿಶಾಲನ ಕಣ್ಣು ತುಂಬಿ ಬಂತು. ಎಷ್ಟೊಂದು ಕನಸುಗಳಿವೆ ಈ ತಾಯಿಯೊಳಗೆ... ತನ್ನ ಸಂಸಾರದ ಬಗ್ಗೆ, ಮಕ್ಕಳ ಬಗ್ಗೆ, ಮನೆಯ ಬಗ್ಗೆ. ಮುಗಿಯದ ಬಡತನ, ಕಳೆಯದ ಕಷ್ಟಗಳ ನಡುವೆಯೇ ತನ್ನವರಿಗೆಂದು ಪುಟ್ಟ ಅಳಿಲಿನಂತೆ ಕನಸುಗಳನ್ನು ಕೂಡಿಡುತ್ತಿದ್ದಾಳೆ... ತಾನು ಹರಕು ಚಾಪೆಯಲ್ಲಿ ಮಲಗಿದರೂ ತನ್ನ ಮಕ್ಕಳು ಸುಖದ ಸುಪ್ಪತ್ತಿಗೆಯಲ್ಲಿರಲೆಂಬ ಕನಸು ಕಾಣುತ್ತಾಳೆ...
"ಏ... ಮರೆತೇ ಬಿಟ್ಟಿದ್ದೆ! ಈಗ ಬಡವ್ರಿಗೆಲ್ಲ ಸ್ವಂತ ಮನೆ ಆಗ್ಬೇಕೂಂತ ಸರ್ಕಾರ ಅದೆಷ್ಟೋ ಹಣ ಕೊಡ್ತಿದ್ಯಂತೆ ವಿಶು... ಗ್ರಾಮಪಂಚಾಯ್ತಿ ಸವಿತಾನ ಕೇಳಿದ್ರೆ ಗೊತ್ತಾಗತ್ತೆ. ನಾಳೇನೇ ಕೇಳ್ತೀನಿ ತಡಿ!"
ಗಂಟನ್ನು ಅವನ ಕೈಯ್ಯಲ್ಲಿಟ್ಟು ಅಷ್ಟು ದೂರ ನಡೆದವಳು ಏನೋ ಹೊಳದಂತೆ ಥಟ್ಟನೆ ತಿರುಗಿ ಹೇಳಿದಳು. ತನ್ನ ಕನಸಿನ ದೀಪಕ್ಕೆ ಬಿದ್ದ ಮತ್ತೊಂದು ಬೊಗಸೆ ಎಣ್ಣೆಯಿಂದಾಗಿ ವಿಶಾಲನ ಕಣ್ಣು ದೇದೀಪ್ಯವಾಯಿತು.
ಗಂಟನ್ನು ಅವನ ಕೈಯ್ಯಲ್ಲಿಟ್ಟು ಅಷ್ಟು ದೂರ ನಡೆದವಳು ಏನೋ ಹೊಳದಂತೆ ಥಟ್ಟನೆ ತಿರುಗಿ ಹೇಳಿದಳು. ತನ್ನ ಕನಸಿನ ದೀಪಕ್ಕೆ ಬಿದ್ದ ಮತ್ತೊಂದು ಬೊಗಸೆ ಎಣ್ಣೆಯಿಂದಾಗಿ ವಿಶಾಲನ ಕಣ್ಣು ದೇದೀಪ್ಯವಾಯಿತು.
**************
"ನಿಮ್ ಜಾತಿಯವರಿಗೆ ಯಾವ ಸ್ಕೀಮೂ ಇಲ್ವಲ್ಲ ಸೀತಮ್ಮಾ..."
ಮೂರನೇ ಬಾರಿಗೆ ಸರ್ಕಾರದ ಅದೇಶಗಳಿರುವ ಕಡತಗಳನ್ನು ಪರೀಕ್ಷಿಸಿದ ಸವಿತಾ ತನ್ನೆದುರಿನ ಖುರ್ಚಿಯಲ್ಲಿ ನೂರು ನಿರೀಕ್ಷೆಗಳನ್ನು ಕಣ್ಣಲ್ಲೇ ತುಂಬಿಕೊಂಡಂತೆ ಕುಳಿತಿರುವ ಸೀತಮ್ಮನಿಗೆ ಕನಿಕರದಿಂದ ಹೇಳಿದಳು.
ಮೂರನೇ ಬಾರಿಗೆ ಸರ್ಕಾರದ ಅದೇಶಗಳಿರುವ ಕಡತಗಳನ್ನು ಪರೀಕ್ಷಿಸಿದ ಸವಿತಾ ತನ್ನೆದುರಿನ ಖುರ್ಚಿಯಲ್ಲಿ ನೂರು ನಿರೀಕ್ಷೆಗಳನ್ನು ಕಣ್ಣಲ್ಲೇ ತುಂಬಿಕೊಂಡಂತೆ ಕುಳಿತಿರುವ ಸೀತಮ್ಮನಿಗೆ ಕನಿಕರದಿಂದ ಹೇಳಿದಳು.
"ಅದೇನೋ ಜಾನುವಾರು ಕೊಟ್ಗೆ ಕಟ್ಟೋಕೆ ಐವತ್ತು ಸಾವ್ರ ಕೊಡ್ತಾರಂತಲ್ಲಾ... ಅದಾದ್ರೂ ಇದೆಯಾ ನೋಡು"
"ಇಲ್ಲ ಸೀತಮ್ಮ. ಅದು ಹಳೆಯ ಗವರ್ಮೆಂಟಿನೋರು ಮಾಡಿದ್ದ ರೂಲ್ಸು. ಈಗಿನವ್ರು ಅದನ್ನ ತೆಗೆದಾಕಿದಾರೆ"
ಮುಖ ಚಿಕ್ಕದು ಮಾಡಿಕೊಂಡು ಗ್ರಾಮಪಂಚಾಯ್ತಿ ಆಫೀಸಿನಿಂದ ಹೊರಬಂದಳು ಸೀತಮ್ಮ. ಮನೆ ಕಟ್ಟುತ್ತೇನೆಂದ ಮಗನಿಗೆ ಚಿಕ್ಕ ಸಿಹಿಸುದ್ದಿಯನ್ನೂ ಕೊಡಲಾಗದ ಬೇಸರ ಅವಳ ಮುಖದತುಂಬಾ ಬೆವರಾಗಿ ಹರಿಯತೊಡಗಿತು.
"ಯಾರ ಭಿಕ್ಷೆಯೂ ನಮಗೆ ಬೇಕಾಗಿಲ್ಲ ಬಿಡಮ್ಮ. ನಾವು ಮಧ್ಯಮವರ್ಗದವರು. ಅವರಿಗೆ ಓಟು ಹಾಕಲಿಕ್ಕಲ್ಲದೆ ಮತ್ಯಾವುದಕ್ಕೂ ಉಪಯೋಗಕ್ಕೆ ಬಾರದವರು. ಅವರ ಸ್ಕೀಮು, ರೂಲ್ಸುಗಳನ್ನ ಅವರೇ ಇಟ್ಕೊಳ್ಳಿ. ನಾವು ನಮ್ಮ ಬೆವರಿನಿಂದಾನೇ ಮನೆ ಕಟ್ಟೋಣ!"
ವಿಶಾಲನ ಆವೇಶದ ಧ್ವನಿಯಲ್ಲಿದ್ದ ನಿರಾಸೆಯ ಎಳೆ ಸೀತಮ್ಮನಿಗೆ ಮಾತ್ರ ಅರ್ಥವಾಯಿತು.
***************
"ಮೂರು ಬೆಡ್ರೂಮ್. ನಮಗೆ ಒಂದು, ಶಶಿಗೆ ಇನ್ನೊಂದು, ಮುಂದೆ ಮದುವೆ ಆದ್ಮೇಲೆ ನೀನು, ವೈಶು ಅಥವಾ ಇನ್ಯಾರಾದ್ರೂ ನೆಂಟ್ರು ಬಂದಾಗ ಇರೋಕೆ ಮತ್ತೊಂದು. ಎರೆಡು ಸ್ವಲ್ಪ ದೊಡ್ಡದಿರ್ಬೇಕು. ಇನ್ನೊಂದು ಚಿಕ್ಕದಾದ್ರೂ ಪರ್ವಾಗಿಲ್ಲ. ಈಗ ಜಗುಲಿ ಇರುವಲ್ಲಿ ಹಾಲ್ ಬರತ್ತೆ. ಅದರ ತುದೀಲಿ ದೇವರ ಕೋಣೆ. ಅದೇನೂ ಅಷ್ಟೊಂದು ದೊಡ್ಡ ಬೇಡ ಬಿಡು. ಅದ್ರ ಮುಂದ್ಗಡೆ ಕಿಚನ್. ಎಡಗಡೆ ಸಾಲಾಗಿ ಮೂರು ರೂಮು. ಬಾತ್ ರೂಮು, ಟಾಯ್ಲೆಟ್ಟು ಎಲ್ಲಾ ಹಿಂದ್ಗಡೆ. ಅಂಗಳದ ಆಚೆಗೆ ಸ್ವಲ್ಪ ಜಾಗ ಉಳಿಯತ್ತಲ್ಲಾ ಅಲ್ಲೊಂದು ಪುಟ್ಟ ಹಿತ್ಲು ಮಾಡ್ಬೋದು...."
ಇನ್ನಷ್ಟೇ ಕಟ್ಟಬೇಕಿರುವ ಮನೆಯ ನೀಲಿನಕ್ಷೆ ಅಮ್ಮನ ಮನದಲ್ಲಿ ಎಂದಿನಿಂದಲೋ ತಯಾರಿತ್ತು. ವಿಶಾಲನ ಜೊತೆಗೆ ಮಾತ್ರವಲ್ಲದೇ ಗೋಪಾಲಾಚಾರಿಯ ಜೊತೆಗೆ, ಪಕ್ಕದ ಮನೆಯ ಸುಬ್ಬಲಕ್ಷ್ಮಿಯ ಜೊತೆಗೆ, ಕೊನೆಗೆ ದರುಗು ತರುವ ರತ್ನನ ಜೊತೆಗೂ ಇದನ್ನೇ ಚರ್ಚಿಸುತ್ತಿದ್ದಳು. ಅವಳ ಆಸಕ್ತಿ, ಉತ್ಸಾಹಗಳನ್ನು ನೋಡಿದ ವಿಶಾಲ ಮನದಲ್ಲೇ ಬೇಡಿಕೊಂಡ:
"ಅಮ್ಮನ ಈ ಸಂಭ್ರಮ ಸುಳ್ಳಾಗದಿರಲಿ ದೇವರೇ!"
ಮುರಿದ ಗೋಡೆಗೆ ತೇಪೆಹಾಕಿ ಬೆಂಗಳೂರಿಗೆ ಮರಳಿದ ದಿನದಿಂದ ಅವನು ಗಂಭೀರನಾಗಿದ್ದ. ಅಮ್ಮನ ಮುಗ್ಧ ಮನದೊಳಗೆ ಕನಸೊಂದನ್ನು ತುಂಬಿ ಬಂದಿದ್ದನಲ್ಲಾ, ಆ ಕನಸು ಅವನನ್ನು ನಿದ್ರಿಸಗೊಡಲಿಲ್ಲ. ಆದಾಯ ಹೆಚ್ಚದೇ ಹೋದರೆ ಖರ್ಚುನ್ನೇ ಕಡಿಮೆ ಮಾಡಬೇಕು ಎಂಬ ನಿಯಮವನ್ನು ತನಗೆ ತಾನೇ ಹೇರಿಕೊಂಡ. ನಾಲ್ಕು ಸಾವಿರ ಕೀಳುವ ಆರ್ಸೀಸಿ ರೂಮನ್ನು ತೊರೆದು ಎರಡೂವರೆ ಸಾವಿರದ ಶೀಟ್ ಛಾವಣಿಯ ಕೋಣೆ ಹಿಡಿದ. ಕೋಣೆಯಲ್ಲೇ ಗಂಜಿ ಬೇಯಿಸಿಕೊಂಡು ಬೆಳಗಿನ ತಿಂಡಿ, ರಾತ್ರೆಯ ಊಟಗಳಿಗೆ ಸಮಾಧಾನ ಹೇಳಿದ. ಬೈಕು ಬೇಕು, ಲ್ಯಾಪ್ ಟಾಪ್ ಬೇಕು ಎನ್ನುವ ತನ್ನ ಅಸೆಗಳನ್ನೆಲ್ಲಾ ಕಷ್ಟಪಟ್ಟು ಕಟ್ಟಿ ಅಟ್ಟಕ್ಕೆಸೆದ. ಹಳೆಯ ಬಟ್ಟೆ ತೊಳೆಯುವಾಗ ಹರಿಯದಂತೆ ಮೆಲ್ಲಗೆ ಉಜ್ಜತೊಡಗಿದ. ಉಳಿತಾಯವೆನ್ನುವ ಮಂತ್ರವನ್ನು ಉಸಿರಾಟದಷ್ಟೇ ನಿರಂತರವಾಗಿ ಉಚ್ಛರಿಸತೊಡಗಿದವನಿಗೆ ಚೆನ್ನಾಗಿ ಗೊತ್ತಿತ್ತು, ತಾನಿಂದು ಉಳಿಸುವ ಒಂದೊಂದು ಪೈಸೆಯೂ ಮುಂದೊಂದು ದಿನ ತನ್ನ ಕನಸಿನ ಮನೆಯ ಒಂದೊಂದು ಇಟ್ಟಿಗೆಯಾಗಲಿದೆ! ಸ್ವಂತದ ಸೂರೆಂಬ ಆ ದಿವ್ಯ ಸ್ವಪ್ನದೆದುರು ಉಳಿದ ಬಯಕೆಗಳೆಲ್ಲ ತೃಣದಂತೆ ಕಾಣುತೊಡಗಿದವು ವಿಶಾಲನಿಗೆ. ಆತ್ಮೀಯರೆನಿಸಿದ ಪ್ರತಿಯೊಬ್ಬರ ಜೊತೆಯೂ ತನ್ನ ಕನಸನ್ನು ಹೇಳಿಕೊಂಡು ಅವರ ಸಲಹೆ ಪಡೆಯತೊಡಗಿದ. ಒಬ್ಬೊಬ್ಬರ ಮನೆ ಒಂದೊಂದು ರೀತಿಯಿತ್ತು:
"ಕಟ್ಟೋದು ಕಟ್ತೀಯ, ಚೆನ್ನಾಗೇ ಕಟ್ಟು. ಮೊವತ್ತು ಲಕ್ಷ ಖರ್ಚಾದ್ರೂ ಪರವಾಗಿಲ್ಲ. ಬ್ಯಾಂಕಲ್ಲಿ ಲೋನ್ ಕೊಡ್ತಾರೆ. ತಿಂಗ್ಳಾ ತಿಂಗ್ಳಾ ಕಟ್ಗೊಂಡ್ ಹೋಗ್ಬೋದು" ಎಂದ ಇಂಜಿನಿಯರ್ ಗೆಳೆಯ.
"ಈ ಅರ್ಸೀಸಿ ಎಲ್ಲ ನಿಮ್ಮ ಮಲ್ನಾಡಿನ ಮಳೆನ ತಡಿಯಲ್ಲರೀ. ಶಿಸ್ತಾಗಿ ಹಂಚಿನ ಮನೆ ಕಟ್ಟಿ. ಹೇಗೂ ನಿಮ್ಕಡೆ ಈ ನಾಟ, ಪಕಾಸಿ ಎಲ್ಲ ಚೀಪಾಗಿ ಸಿಗ್ತಾವೆ ಅಲ್ವಾ" ಎಂಬುದು ಸಹೋದ್ಯೋಗಿಯ ಸಲಹೆ.
"ಸಾಲ ಮಾಡಿ ಊರಲ್ಲೆಲ್ಲಾ ಯಾಕೆ ಮನೆ ಕಟ್ತೀರ್ರೀ? ಇಲ್ಲೇ ಆಫೀಸಿಗೆ ಹತ್ರದ ಏರಿಯಾದಲ್ಲೇ ಯಾವ್ದಾದ್ರೂ ಫ್ಲಾಟ್ ತಗೊಂಡು ಫ್ಯಾಮಿಲಿನ ಇಲ್ಲಿಗೇ ಕರ್ಸ್ಕೊಂಡ್ಬಿಡಿ" ಎಂದರು ಆಫೀಸಿನ ಬಾಸ್.
"ಒಂದೇ ಸಲಕ್ಕೆ ಮನೆ ಕಟ್ಟುಕಾತಿಲ್ಲೆ. ದುಡ್ಡಿದ್ಹಂಗೂ ಅಷ್ಟಷ್ಟೇ ಮರ್ಳು, ಜಲ್ಲಿಕಲ್ಲು, ಕಬ್ಣ, ಟೈಲ್ಸು ಎಲ್ಲ ತಂದ್ಹಾಕ್ಕಣಿ. ಆಮೆಲ್ ಸುಲ್ಭ ಆತ್" ಎಂದವನು ಗೋಪಾಲಾಚಾರಿ.
"ನೋಡು ತಮ್ಮಾ, ಈಗಿನ ಕಾಲ್ದಲ್ಲಿ ಯಾರನ್ನೂ ನಂಬೋಕಾಗಲ್ಲ. ಹುಟ್ತಾ ಅಣ್ಣ-ತಮ್ಮ, ಬೆಳೀತಾ ದಾಯಾದಿಗಳು ಅಂತ ಗಾದೇನೇ ಇದೆ. ಮುಂದೆ ಮೇಲ್ಗಡೆ ಕಟ್ಗೊಂತಾ ಹೋಗೋಕೆ ಅನುಕೂಲ ಇರೋಹಾಗೆ ಟೆರಾಸ್ ಮನೇನೆ ಕಟ್ಟು. ಇವತ್ತಲ್ಲಾ ನಾಳೆ ಅಣ್ಣ-ತಮ್ಮನ್ ಮಧ್ಯ ಒಂದು ಮಾತು ಬಂದೇ ಬರತ್ತೆ. ಆಗ ಇಷ್ಟೆಲ್ಲಾ ಖರ್ಚು ಮಾಡಿ ಕಟ್ಟಿರೋ ಮನೆ ಬಿಟ್ಟು ಖಾಲಿ ಕೈಲಿ ಹೋಗೋಹಂಗಾಗ್ಬಾರ್ದು ನೋಡು...." ಎಂದು ಹೆದರಿಸಿದವಳು ದೊಡ್ಡತ್ತೆ.
ತಲೆಗೊಂದು ಸಲಹೆ, ವ್ಯಕ್ತಿಗೊಂದು ಐಡಿಯಾ, ಮಾತಿಗೊಂದು ವಾಸ್ತು... ಇವೆಲ್ಲದರ ನಡುವೆ ತನ್ನ ಕನಸಿನ ಮನೆ ಯಾವುದೆಂದು ನಿರ್ಧರಿಸಲು ವಿಶಾಲನಿಗೆ ಕೊಂಚ ಕಷ್ಟವೇ ಆಯಿತು. ಹಳೆಯದೊಂದು ಆರ್ಡಿ, ಸರ್ಕಾರದವರು ಕಡ್ಡಾಯವಾಗಿ ಉಳಿಸಿಕೊಟ್ಟ ಪಿಎಫ್, ಗೆಳೆಯ ವಾಪಾಸು ಕೊಟ್ಟಿದ್ದು, ಅತ್ತೆ ಬಲವಂತವಾಗಿ ಕಟ್ಟಿಸಿಕೊಂಡ ಚೀಟಿ ಹಣ, ಹೊಟ್ಟೆಬಟ್ಟೆ ಕಟ್ಟಿ ಉಳಿಸಿದ್ದು... ಹೀಗೆ ಆರು ತಿಂಗಳು ಕಳೆಯುವಷ್ಟರಲ್ಲಿ ಸುಮಾರು ಎರೆಡೂಮುಕ್ಕಾಲು ಲಕ್ಷ ಹಣ ಬೇರೆಬೇರೆ ಮೂಲೆಗಳಲ್ಲಿ ನಿಂತು ಅವನ ಮನೆಯ ಕನಸಿಗೆ ಕಂಬಗಳಾದವು. ಅವನ ಸಂಬಳದ ರಶೀತಿ, ಬ್ಯಾಂಕ್ ಸ್ಟೇಟ್ಮೆಂಟ್ ಗಳನ್ನು ನೋಡಿದ ಬ್ಯಾಂಕಿನವರು ಆರರಿಂದ ಏಳು ಲಕ್ಷದ ತನಕ ಲೋನ್ ಕೊಡುವುದಾಗಿ ಹೇಳಿದರು. ಇನ್ನೇನು ಬರುವ ಸಂಕ್ರಾಂತಿಯ ಬೆಳಗ್ಗೆ ಪೂಜೆ ಮಾಡಿಸಿಕೊಂಡ ಗುದ್ದಲಿ, ಹಾರೆಗಳು ಪಾಯದ ಮೊದಲ ಅಗೆತ ಅಗೆಯುತ್ತವೆ... ಅವನು ಹಾಗಂದುಕೊಂಡು ನೆಮ್ಮದಿಯ ನಿದ್ರೆಗೆ ಜಾರಿದ ಮರುದಿನ ಬೆಳಗ್ಗೆಯೇ ಹೊಸದೊಂದು ಸುದ್ದಿ ಹೊತ್ತು ರಿಂಗಾದ ಮೊಬೈಲ್ ಅವನನ್ನು ಆ ಕನಸಿನಿಂದ ಎಬ್ಬಿಸಿತ್ತು:
"ವೈಷ್ಣವಿಗೆ ಒಳ್ಳೇಕಡೆಯಿಂದ ಸಂಬಂಧ ಬಂದಿದೆ!"
"ಅಷ್ಟೊಂದ್ ಗಡಿಬಿಡಿ ಯಾಕೆ. ಅವ್ಳಿಗಿನ್ನೂ ಇಪ್ಪತ್ತೊಂದ್ ವರ್ಷ. ಸರಿಯಾಗಿ ಮನೆಗಿನೆ ಕಟ್ಕೊಂಡು ಆಮೇಲೆ....."
ಅವನ ಮಾತಿನ್ನೂ ಪೂರ್ತಿಯಾಗಿರಲಿಲ್ಲ, ಅಷ್ಟರಲ್ಲೇ ಸಂಬಂಧ ತಂದ ದೂರದ ಸಂಬಂಧಿ ಶೇಖರ ಮಾವನ ಕ್ಯಾಸೆಟ್ ಚಾಲೂ ಆಯಿತು.
ಅವನ ಮಾತಿನ್ನೂ ಪೂರ್ತಿಯಾಗಿರಲಿಲ್ಲ, ಅಷ್ಟರಲ್ಲೇ ಸಂಬಂಧ ತಂದ ದೂರದ ಸಂಬಂಧಿ ಶೇಖರ ಮಾವನ ಕ್ಯಾಸೆಟ್ ಚಾಲೂ ಆಯಿತು.
"ನೋಡ್ತಮ್ಮಾ, ಮನೇಲಿರೋ ಕೂಸಿಗೆ ಇವತ್ತಲ್ಲ ನಾಳೆ ಮದುವೆ ಮಾಡದೇಯ, ಗಂಡನ್ ಮನಿಗೆ ಕಳ್ಸದೇಯ. ಹುಡ್ಗ ನಿನ್ನಮ್ಮನ ಊರೋನೇ. ನಿನ್ ದೊಡ್ಮಾವ, ಅತ್ತೆ ಎಲ್ರಿಗೂ ಗೊತ್ತಿರೋ ಮಾಣಿ. ಬೆಂಗ್ಳೂರಲ್ ಇಂಜಿನಿಯರ್ ಆಗಿದ್ನ. ಎಪ್ಪತ್ತೂ ಚಿಲ್ರೆ ಸಾವ್ರ ಸಂಬ್ಳ ತಗಂತ್ನ. ಅಮ್ಮಂಗೆ ಹುಷಾರಿಲ್ಲೆ ಹೇಳಿ ಮದ್ವೆಗೆ ಗಡಿಬಿಡಿ ಮಾಡ್ತಿದ್ದ. ಇಲ್ಲಾಂದಿದ್ರೆ....."
ಬಾಯ್ತುಂಬಾ ರಸವಾಗಿ ತುಂಬಿಕೊಂಡ ಕವಳವನ್ನು ಉಗಿದುಬಂದು ಮಾತು ಮುಂದುವರೆಸಿದ ಶೇಖರಮಾವ.
ಬಾಯ್ತುಂಬಾ ರಸವಾಗಿ ತುಂಬಿಕೊಂಡ ಕವಳವನ್ನು ಉಗಿದುಬಂದು ಮಾತು ಮುಂದುವರೆಸಿದ ಶೇಖರಮಾವ.
"ಚಿನ್ದಂಥಾ ಗಂಡು ತಮ್ಮಾ... ಎಲೆಡ್ಕೆ ಕೂಡಾ ಹಾಕಿ ಗೊತ್ತಿಲ್ಲೆ. ಅಮ್ಮಂಗೆ ಹುಷಾರಿಲ್ಲೆ ಹೇಳಿ ಮನೆ ಬಾಗ್ಲಿಗೆ ತಾನೇ ರಂಗೋಲಿ ಹಾಕ್ತ್ನ. ಅಡ್ಗೆ ಪಡ್ಗೆ ಎಲ್ಲಾನೂ ಗೊತ್ತಿದ್ದು. ಹಾಡಲೂ ಬತ್ತು ಮಾಣಿಗೆ.... ನೀವು ಸೀಐಡಿಗಳನ್ನ ಬಿಟ್ಟು ಹುಡುಕ್ಸಿದ್ರೂ ಇಂಥಾ ಗಂಡು ಸಿಗ್ತಲ್ಲೆ ಹಾಂ...."
ಪ್ರಪಂಚದಲ್ಲಿ ಹಿಂದೆಂದೂ ಹುಟ್ಟಿರದ, ಮುಂದೆಂದೂ ಹುಟ್ಟದ ಇಂತಹಾ ಸಕಲಕಲಾವಲ್ಲಭ ವರನನ್ನು ಬೇಡವೆನ್ನಲು ವಿಶಾಲನಿಗೆ ಯಾವ ಕಾರಣವೂ ಉಳಿದಿರಲಿಲ್ಲ.
"ಅಂಥಾದ್ದೇನೂ ಕೇಳ್ತಿಲ್ಲೆ ಗಂಡಿನ ಕಡ್ಯೋರು. ಅವ್ರದ್ದೇ ಕೂಸು, ಏನೇ ಹಾಕ್ಸಿದ್ರೂ ಅವ್ಳಿಗೇ ಹೇಳಿದ್ದ. ಗಂಡಿಗೊಂದ್ ಬ್ರೆಸ್ಲೆಟ್ಟು, ಕೂಸಿಗೆ ಒಂದೆಳೆ ಸರ, ಒಂದ್ಜೊತೆ ಬಳೆ. ಎಲ್ಲೂ ಶಾಸ್ತ್ರಕ್ಕೆ ಕಮ್ಮಿ ಆಗ್ದಂಗೆ ಮದುವೆ.... ಇಷ್ಟೇ ಅವ್ರು ಕೇಳ್ತಿರೋದು. ಹಾಂ... ಅವ್ರ ದಿಬ್ಣದ್ ಖರ್ಚೊಂದು ನೀವೇ ಕೊಡವಡ"
ಕೈಯ್ಯಲ್ಲಿದ್ದ ಮೂರೂವರೆ ಲಕ್ಷ ಸಾಲದ ಹಣ ಯಕಶ್ಚಿತ್ ಕಾಗದದ ಚೂರಿನಂತೆ ಭಾಸವಾಯಿತು ವಿಶಾಲನಿಗೆ. ಆದರೆ 'ಹೆಣ್ಣಿನ ಕಡೆಯವರು ಮದುವೆಯಲ್ಲಿ ಬಡತನ ತೋರಿಸಿದರೆ ಮನೆಮಗಳು ಗಂಡನ ಮನೆಯಲ್ಲಿ ಸಸಾರವಾಗುತ್ತಾಳೆ' ಎಂಬ ಕಾಳಜಿಯ ಮುಂದೆ ಅವನ ಉಳಿದೆಲ್ಲಾ ಆತಂಕಗಳೂ ಗೌಣವಾದವು. ಹಳೆಯ ಮನೆಗೇ ಹೊಸಗೋಡೆ ಕಟ್ಟಿ ಬಣ್ಣ ಬಳಿಸಿದ. ವರಲೆ ತಿಂದು ವಿಕಾರವಾಗಿದ್ದ ಕಂಬ, ಜಂತಿಗಳನ್ನೆಲ್ಲಾ ತಾತ್ಕಾಲಿಕವಾಗಿ ಅಂದಗಾಣಿಸಲಾಯಿತು. ನೆಲದಲ್ಲಿ ಸಿಮೆಂಟು ಕಿತ್ತಹೋದಲ್ಲೆಲ್ಲಾ ಅಮ್ಮ ಸಗಣಿನೀರು ಬಳಿದಳು.
'ಈ ಮನೆ ಇನ್ನೊಂದು ಮೂರು ವರ್ಷ ಹೀಗೇ ನಿಂತರೆ ಸಾಕಪ್ಪಾ ದೇವ್ರೇ!'
ಮೈತುಂಬಾ ತೇಪೆ ಹಾಕಿಸಿಕೊಂಡು ಸಿಂಗರಿಸಿಕೊಂಡ ಹಣ್ಣುಹಣ್ಣು ಮುದಿಕಿಯಂತೆ ಕಾಣುತ್ತಿದ್ದ ಮನೆಯನ್ನು ನೋಡುತ್ತಾ ವಿಶಾಲ ಹಾಗಂದುಕೊಂಡ. ಈಗ ಆಗಿರುವ ಸಾಲಕ್ಕೆ ಮುಂದಿನ ಮೂರ್ನಾಲ್ಕು ವರ್ಷಗಳ ತನಕ ಹೊಸಮನೆಯ ಮಾತಿಲ್ಲವೆಂಬುದರಲ್ಲಿ ಯಾವ ಅನುಮಾನವೂ ಇರಲಿಲ್ಲ.
ಮದುವೆ ಭರ್ಜರಿಯಾಗಿಯೇ ನಡೆಯಿತು. ಸಿಂಗರಿಸಿಕೊಂಡು ಪುಟ್ಟ ದೇವತೆಯಂತೆ ಕಾಣುತ್ತಿದ್ದ ತಂಗಿ ಗಂಡನ ಜೊತೆಯಲ್ಲಿ ಹೊರಟು ನಿಂತಾಗ ಮನೆಯವರೆಲ್ಲಾ ಮನಸಾರೆ ಕಣ್ತುಂಬಿಕೊಂಡು ಕಳಿಸಿಕೊಟ್ಟರು. ಜೊತೆಯಲ್ಲಿ ಆಡುತ್ತಾ ಬೆಳೆದವಳ ಬಾಳು ಹಸಿರಾಗಿರಲೆಂಬ ಹಾರೈಕೆಯೊಂದಿಗೆ ಕಟ್ಟಿದ ತೋರಣ, ಮಂಟಪಗಳನ್ನು ಬಿಚ್ಚುತ್ತಿದ್ದವನ ಮನಸ್ಸೇಕೋ ಇನ್ನಿಲ್ಲದಂತೆ ತುಂಬಿಬಂತು.
**************
ಕಾಲ ನಾಲ್ಕು ವರ್ಷಗಳನ್ನು ಅನಾಮತ್ತಾಗಿ ತನ್ನ ಜೋಳಿಗೆಗೆ ಸೇರಿಸಿಕೊಂಡು ಮುನ್ನಡೆಯುತ್ತಿತ್ತು. ಎಷ್ಟು ತುಂಬಿದರೂ ಮತ್ತೆ ಬಾಯ್ಬಿಡುವ ಖರ್ಚುಗಳು, ನೋಟೀಸು ಕೊಟ್ಟು ಬೆದರಿಸುವ ಬ್ಯಾಂಕಿನವರು, ಯಾವ ನೋಟೀಸನ್ನೂ ಕೊಡದೆ ನೇರ ಮನೆಯಂಗಳಕ್ಕೇ ಬಂದು ನಿಲ್ಲುವ ಸಾಲಗಾರರು... ಇವೆಲ್ಲದರ ಭಾರ ಕಡಿಮೆ ಮಾಡಿಕೊಂಡು ಕೊಂಚ ನಿರಾಳವಾಗುವ ಹೊತ್ತಿಗೆ ವಿಶಾಲನಿಗೆ ಮೊವತ್ತು ಹೊಸಿಲಿಗೆ ಬಂದು ನಿಂತಿತ್ತು. ಈ ನಾಲ್ಕು ವರ್ಷದಲ್ಲಿ ಭಾರೀ ಅಲ್ಲದಿದ್ದರೂ ಕೆಲವಾರು ಮದುವೆ ಸಂಬಂಧಗಳಾದರೂ ಬಂದು ಬಾಗಿಲು ತಟ್ಟಿದ್ದವು. ಮೊದಮೊದಲು ಇವನು ಬಾಗಿಲು ತೆರೆಯುವ ಧೈರ್ಯ ಮಾಡಿರಲಿಲ್ಲ. ಕೊನೆಗೊಂದೆರೆಡು ಬಾರಿ ಗಟ್ಟಿ ಮನಸ್ಸು ಮಾಡಿ ತೆರೆದನಾದರೂ ಬಾಗಿಲು ಬಡಿದವರು ಒಳಬರುವ ಧೈರ್ಯ ಮಾಡಲಿಲ್ಲ!
ಹರಕು ಗೋಡೆಗಳ ಮುರುಕು ಬಾಳಿಗೆ ಯಾವ ಹೆಣ್ಣೂ ಬರಲಿಚ್ಛಿಸುವುದಿಲ್ಲ. ಇದು ಐದು ವರ್ಷಗಳ ಕೆಳಗೇ ಅವನಿಗೆ ಅರ್ಥವಾಗಿದ್ದ ಸತ್ಯ. ಸ್ವತಃ ತನ್ನ ತಂಗಿಯನ್ನು ಕೊಡುವಾಗಲೇ ಗಂಡಿನ ಮನೆ, ಆಸ್ತಿ, ಸಂಬಳಗಳನ್ನೆಲ್ಲಾ ನಾಲ್ಕುನಾಲ್ಕು ಬಾರಿ ಅಳೆದು ನೋಡಿದ್ದ. ಹೀಗಿರುವಾಗ ತಲೆಗೆಳೆದರೆ ಕಾಲಿಗಿಲ್ಲ, ಕಾಲಿಗೆಳೆದರೆ ತಲೆಗಿಲ್ಲ ಎನ್ನುವ ತನ್ನ ಬಾಳಿಗೆ ಬಾ ಎಂದು ಯಾರನ್ನು ತಾನೇ ಕರೆಯುತ್ತಾನೆ?
"ಕರೆಯಲೇಬೇಕು ವಿಶು. ಗೆಲುವು ಕರೆದರೆ ಮಾತ್ರ ಬರುತ್ತದೆ!"
ಅಮ್ಮನ ಮಾತು ಎಷ್ಟು ಮೃದುವಾಗಿತ್ತೋ ಅಷ್ಟೇ ದೃಢವಾಗಿತ್ತು.
ಅಮ್ಮನ ಮಾತು ಎಷ್ಟು ಮೃದುವಾಗಿತ್ತೋ ಅಷ್ಟೇ ದೃಢವಾಗಿತ್ತು.
"ಗುಡಿಸಲಿನಲ್ಲೂ ಇರುವ ಪ್ರೀತಿ ಹಾಗೂ ಮಹಲಿನಲ್ಲೂ ಇರುವ ಖಾಲಿತನ... ಇವನ್ನು ಗುರುತಿಸುವಷ್ಟು ನಾವಿನ್ನೂ ಪ್ರಬುಧ್ದರಾಗಿಲ್ಲ. ನನಗೆ ಗೊತ್ತು... ಅಪ್ಪನ ಮೇಲೆ ನಿನ್ನೊಳಗೊಂದು ಬೇಸರವಿದೆ. ಎಲ್ಲೋ ಒಂದು ಕಡೆ ಅದಕ್ಕೆ ನಾನೂ ಕಾರಣ. ಅವರು ಎಂದೋ ಯಾರೋ ಹೇಳಿದ ಅಥವಾ ಕಾಲಕಾಲಕ್ಕೆ ಅವರಿವರು ಹೇಳುತ್ತಾ ಬಂದ 'ಇದೆಲ್ಲಾ ನಿನ್ನಿಂದ ಆಗೋಲ್ಲ' ಎನ್ನುವ ಮಾತನ್ನು ನಂಬಿದಷ್ಟೇ ದೃಢವಾಗಿ ತಮ್ಮ ಸಾಮರ್ಥ್ಯವನ್ನು ನಂಬಲಿಲ್ಲ. ಹಾಗೆ ನೋಡಿದರೆ ನನ್ನ ನಿನ್ನ ಬೇಸರ ಸರಿಯಾದದ್ದೇ. ಆದರೆ ಅದನ್ನೇ ನೆಪವಾಗಿಟ್ಟುಕೊಂಡು ಅದೇ ಸ್ಥಿತಿಯಲ್ಲಿ ಮುಂದುವರೆಯುವುದಿದೆಯಲ್ಲ, ಅದು ಘೋರ ತಪ್ಪು ವಿಶು..."
"ಹೌದು.. ನಮ್ಮ ಬದುಕಿನ ಎಲ್ಲಾ ಇಲ್ಲಗಳಿಗೂ ಕಟ್ಟಕಡೆಗೆ ನಾವೇ ಹೊಣೆಗಾರರು. ಕಛೇರಿಯೊಳಗೆ ಕುಳಿತ ಅಧಿಕಾರಿಗೂ ಒಂದು ಸಾಮರ್ಥ್ಯವಿದೆ; ಹೊರಗೆ ಕಾವಲು ಕಾಯುತ್ತಿರುವ ಜವಾನನಿಗೂ ಒಂದು ಸಾಮರ್ಥ್ಯವಿದೆ. ಆದರೆ ತಂತಮ್ಮ ಸಾಮರ್ಥ್ಯಗಳನ್ನು ಅವರು ಬಳಸಿಕೊಂಡ ರೀತಿಯಿದೆಯಲ್ಲ, ಅದು ಅವರ ಬದುಕನ್ನು ನಿರ್ಧರಿಸಿದೆ! ನಾನು, ನಿನ್ನ ಅಪ್ಪ ಇವನ್ನೆಲ್ಲ ಈಗ ಅರ್ಥಮಾಡಿಕೊಂಡು ಕೊರಗುತ್ತಿದ್ದೇವೆ. ನಾಳೆ ನೀನೂ ಈ ಜಾಗದಲ್ಲಿ ನಿಲ್ಲಬಾರದು ಅಂತಿದ್ರೆ ಬದಲಾವಣೆಗಳನ್ನು ಇವತ್ತೇ ಆರಂಭಿಸು. ನೀನು ಮಾಡಬಲ್ಲೆ. ನಾವೆಲ್ಲರೂ ನಿನ್ನ ಜೊತೆಗಿದ್ದೇವೆ!"
ಎಂದೂ ಇಲ್ಲದ ಅಮ್ಮ ಇಂದು ಇಷ್ಟೊಂದು ವಿಶ್ವಾಸದಿಂದ ಆಡಿದ ಮಾತುಗಳು ನೇರವಾಗಿ ಗುರಿತಾಕಿದ್ದವು. ಸೋಲಿನ ಪಾತಾಳದತ್ತ ಜಾರುತ್ತಿರುವವನಿಗೆ ಬೇಕಾಗಿರುವುದು ಅದೇ: ನಾಲ್ಕೇ ನಾಲ್ಕು ಆತ್ಮವಿಶ್ವಾಸದ ಮಾತು. ನೀನು ಮಾಡಬಲ್ಲೆ, ಜೊತೆಗೆ ನಾನಿದ್ದೇನೆ ಎಂಬ ಧೈರ್ಯದ ಮಾತು.
ಅಮ್ಮ ಅದನ್ನೇ ಮಾಡಿದ್ದಳು.
ಹೀಗೆಲ್ಲಾ ಇದ್ದಾಗಲೇ ಇದ್ದಕ್ಕಿದ್ದಂತೆ ಅಡಿಕೆಗೆ ಒಳ್ಳೆಯ ರೇಟು ಬಂತು. ಕ್ವಿಂಟಾಲ್ಗೆ ಇಪ್ಪತ್ತೂ ಚಿಲ್ಲರೆ ಸಾವಿರ ಇದ್ದದ್ದು ಅನಾಮತ್ತು ಅರವತ್ತು ಸಾವಿರವಾಯ್ತು. ಹೇಗೆ ಲೆಕ್ಕ ಹಾಕಿದರೂ ಪ್ರತೀ ವರ್ಷಕ್ಕಿಂತ ಎರೆಡು ಲಕ್ಷ ಹೆಚ್ಚೇ ಕೈಗೆ ಬಂದಿತ್ತು. ಜೊತೆಗೆ ತಮ್ಮನೂ ದುಡಿಯುತ್ತಿದ್ದಾನೆ. ಐದು ವರ್ಷಗಳಿಂದ ಬರೀ ಯೋಜನೆಯಾಗಿಯೇ ಉಳಿದಿದ್ದ ಮನೆಯ ಕೆಲಸ ಆರಂಭಿಸುವುದಕ್ಕೆ ಇದೇ ಸರಿಯಾದ ಸಮಯ... ಹಾಗೊಂದು ವಿಶ್ವಾಸ ಮೂಡಿದ ನಂತರ ವಿಶಾಲ ಹಿಂದುಮುಂದು ನೋಡಲಿಲ್ಲ. ತನ್ನ ಸಕಲ ಸ್ನೇಹ-ಸಂಬಂಧ-ಸಂಪರ್ಕಗಳ ಮನೆಗೂ ಹೊಕ್ಕ. ಅವರ ಮಾತಿನ ಗುಡ್ಡೆಯಿಂದ ತನಗೆ ಬೇಕಾದ ಸಲಹೆ-ಸಹಾಯಗಳನ್ನಷ್ಟೇ ಆಯ್ದುಕೊಂಡು ಹೊರಬಂದ. ಇಷ್ಟೇ ಸುತ್ತಳತೆ, ಇಷ್ಟೇ ಕೋಣೆಗಳು, ಇಂತಹದೇ ವಿನ್ಯಾಸವಿರುವ ಪಕ್ಕಾ ಮನೆಯನ್ನು ನೆಲದಲ್ಲಿ ಕಟ್ಟುವ ಮೊದಲು ಮನದೊಳಗೆ ಕಟ್ಟಿನಿಲ್ಲಿಸಿಕೊಂಡ.
ನೋಡು ನೋಡುತ್ತಿದ್ದಂತೆಯೇ ಕಬ್ಬಿಣ, ಇಟ್ಟಿಗೆ, ಟೈಲ್ಸ್ ಗಳು ಮನೆಯೆದುರು ಬಂದು ರಾಶಿ ಬಿದ್ದವು. ಬ್ಯಾಂಕಿನಿಂದ ಬಿಡುಗಡೆಯಾದ ಸಾಲದ ಮೊದಲ ಕಂತು ಅಕೌಂಟ್ ಸೇರಿತು. ಇದ್ದುದರಲ್ಲೇ ಚೀಪ್ ಅಂಡ್ ಬೆಸ್ಟ್ ಆದ ಕಾಪಿಕಾನಿನ ಅಣ್ಣಯ್ಯ ಮೇಸ್ತ್ರಿಗೆ ಗಾರೆಯ ಜವಾಬ್ದಾರಿ ವಹಿಸಲಾಯಿತು. ಗೋಪಾಲಾಚಾರಿ ತನ್ನ ಗರಗಸಕ್ಕೆ ಸಾಣೆಹೆಣೆಯತೊಡಗಿದ. ಒಡಲತುಂಬಾ ಮರಳು ತುಂಬಿಕೊಂಡ ನಾಗರಾಜ ಮೇಸ್ತ್ರಿಯ ಲಾರಿ ಮನೆಯಂಗಳ ಪ್ರವೇಶಿಸಿತು. ಮೊವ್ವತ್ತು ವರ್ಷಗಳಿಂದ ಗರ್ಭದಲ್ಲೇ ಇದ್ದ ಕೂಸು ಭೂಮಿಗೆ ಬರುವ ದಿನ ಕೊನೆಗೂ ಬಂದಿತ್ತು!
*************
ಸಮಯ ರಾತ್ರೆ ಹನ್ನೊಂದಾಗಿತ್ತು. ಕೆಲವು ಕ್ಷಣಗಳ ಹಿಂದಷ್ಟೇ ಬೆಂಗಳೂರಿನಿಂದ ಬಂದಿಳಿದಿದ್ದ ವಿಶಾಲ ಅಂಗಳದಲ್ಲಿ ನಿಂತಿದ್ದ. ನಾಳೆ ಭೂಮಿ ಹುಣ್ಣಿಮೆ, ಗುದ್ದಲಿಪೂಜೆಯೊಂದಿಗೆ ಕೆಲಸ ಆರಂಭವಾಗಲಿರುವ ದಿನ! ಮೊಗೆದಷ್ಟೂ ಚಿಮ್ಮುತ್ತಿದ್ದ ಆತಂಕ, ಸಂಭ್ರಮಗಳಿಂದ ಮನಸ್ಸು ತುಂಬಿಹೋಗಿತ್ತು. ತಲೆಯೆತ್ತಿ ಬಾನಿನೆಡೆ ನೋಡಿದ. ಹಳೆಯ ಸ್ವಪ್ನವೊಂದು ಸಾಕಾರವಾದಂತೆ ಸಂಭ್ರಮದ ನಗೆ ನಗುತ್ತಿರುವ ಚಂದಿರ...
ಕನಸೊಂದು ನನಸಾಗಲಿಕ್ಕೆ ಇಷ್ಟೊಂದು ಸಮಯ ಬೇಕಾ?
ಸುಮಾರು ಇಪ್ಪತೈದು ವರ್ಷಗಳ ಕೆಳಗೆ ಮಟಮಟ ಮಧ್ಯಾಹ್ನದಲ್ಲಿ ಅಮ್ಮ ಹಂಚಿಕೊಂಡಿದ್ದ ಕನಸು.. ಮರುಕ್ಷಣವೇ ಅಮ್ಮನ ನೆನಪಾಯಿತು. ಒಳಗೆ ಹೋಗಲೆಂದು ಮನೆಯತ್ತ ತಿರುಗಿದ. ಅಮ್ಮ ಅಲ್ಲಿಯೇ ನಿಂತಿದ್ದಳು.
"ನಿನಗೆ ನೂರು ವರ್ಷ ಆಯಸ್ಸು ನೋಡು. ನಿನ್ನತ್ರ ಮಾತಾಡೋಕೇ ಹೊರಟಿದ್ದೆ!"
"ನೂರು ವರ್ಷ ಇದ್ದು ಏನು ಮಾಡ್ಲಿ? ಮಗ ಕಟ್ಟಿದ ಮನೆಯಲ್ಲಿ ಗಂಡ, ಮಗ, ಸೊಸೆ, ಮೊಮ್ಮಕ್ಕಳ ಜೊತೆ ಹತ್ತು ವರ್ಷ ಇದ್ದರೆ ಸಾಕು!"
"ಮೂರು ರೂಮಿನ ಮನೆ, ರೂಮುರೂಮಿಗೆ ಫ್ಯಾನು... ಅಂತೂ ನಿನ್ನ 'ಅನಂತನಿಲಯ' ಕೊನೆಗೂ ನಿಜವಾಗ್ತಿದೆ. ಖುಷೀ ತಾನೇ?"
ಅಮ್ಮ ನಿರ್ಮಲವಾಗಿ ನಕ್ಕಳು, ಥೇಟ್ ಚಂದಿರನಂತೆ.
"ಆಗದೇ ಇರುತ್ತಾ ಮತ್ತೆ? ಮಗ ಮನೆ ಕಟ್ತಿದಾನಂದ್ರೆ ಸುಮ್ನೇನ...." ಅವಳ ಮಾತು ಮೌನದ ದಿಬ್ಬವೊಂದನ್ನು ಹಾದು ಮುಂದುವರೆಯಿತು.
"ನೀನು ಕಟ್ತಿರೋದು ಕೇವಲ ಮನೆಯಲ್ಲ ವಿಶು, ಇದು ನಾವು ಅನುಭವಿಸಿದ ಎಷ್ಟೋ ಅವಮಾನಗಳಿಗೆ ಉತ್ತರ. ನಿನಗೆ ಗೊತ್ತಾ? ನಮ್ಮನೆಯ ಒರಲೆಹಿಡಿದ ಜಂತಿಗಳನ್ನು ನೋಡಿ ಓರೆಗಿತ್ತಿಯರು ನಕ್ಕರು. ಮಣ್ಣು ಗೋಡೆಗಳಿಗೆ ಸಗಣಿ-ನೀರು ಬಳಿಯುವಾಗ ಅಕ್ಕಪಕ್ಕದಮನೆಯವರು ಕುಹುಕದ ದೃಷ್ಟಿ ಬೀರಿದರು. ತನ್ನ ಮನೆಯ ಗೃಹಪ್ರವೇಶಕ್ಕೆ ಕರೆಯಲು ಬಂದ ಅತ್ತಿಗೆ ನನ್ನ ಮಣ್ಣಿನೊಲೆಗಳನ್ನು ನೋಡಿದ ನೋಟವಿದೆಯಲ್ಲ, ಅದು ಇಂದಿಗೂ ನೆನಪಿದೆ ನನಗೆ. ಅಲ್ಲಿದ್ದದ್ದು 'ನಿನ್ನ ಜೀವನ ಇಷ್ಟೇ' ಎಂಬ ಕುಹುಕ. ಅಂದು ಅವರ ಟೀಕೆ, ಕುಹುಕ, ಕಡೆಗಣಿಕೆಗಳೆಲ್ಲದಕ್ಕೆ ನನ್ನ ಬಳಿ ಇದ್ದ ಒಂದೇ ಒಂದು ಉತ್ತರ ನೀನು!"
"ನೀನು ಕಟ್ತಿರೋದು ಕೇವಲ ಮನೆಯಲ್ಲ ವಿಶು, ಇದು ನಾವು ಅನುಭವಿಸಿದ ಎಷ್ಟೋ ಅವಮಾನಗಳಿಗೆ ಉತ್ತರ. ನಿನಗೆ ಗೊತ್ತಾ? ನಮ್ಮನೆಯ ಒರಲೆಹಿಡಿದ ಜಂತಿಗಳನ್ನು ನೋಡಿ ಓರೆಗಿತ್ತಿಯರು ನಕ್ಕರು. ಮಣ್ಣು ಗೋಡೆಗಳಿಗೆ ಸಗಣಿ-ನೀರು ಬಳಿಯುವಾಗ ಅಕ್ಕಪಕ್ಕದಮನೆಯವರು ಕುಹುಕದ ದೃಷ್ಟಿ ಬೀರಿದರು. ತನ್ನ ಮನೆಯ ಗೃಹಪ್ರವೇಶಕ್ಕೆ ಕರೆಯಲು ಬಂದ ಅತ್ತಿಗೆ ನನ್ನ ಮಣ್ಣಿನೊಲೆಗಳನ್ನು ನೋಡಿದ ನೋಟವಿದೆಯಲ್ಲ, ಅದು ಇಂದಿಗೂ ನೆನಪಿದೆ ನನಗೆ. ಅಲ್ಲಿದ್ದದ್ದು 'ನಿನ್ನ ಜೀವನ ಇಷ್ಟೇ' ಎಂಬ ಕುಹುಕ. ಅಂದು ಅವರ ಟೀಕೆ, ಕುಹುಕ, ಕಡೆಗಣಿಕೆಗಳೆಲ್ಲದಕ್ಕೆ ನನ್ನ ಬಳಿ ಇದ್ದ ಒಂದೇ ಒಂದು ಉತ್ತರ ನೀನು!"
ವಿಶಾಲನ ದೃಷ್ಟಿ ಅಮ್ಮನಲ್ಲೇ ಸ್ಥಿರವಾಗಿತ್ತು. ಅಮ್ಮ ಮುಂದುವರೆಸಿದಳು.
"ನಂಗೆ ಗೊತ್ತಿತ್ತು ವಿಶು, ಇವತ್ತಲ್ಲ ನಾಳೆ ನಾವೂ ನಾಲ್ಕು ಜನರೆದುರು ತಲೆಯೆತ್ತಿ ನಡೆಯೋ ಕಾಲ ಬಂದೇ ಬರುತ್ತೆ ಅಂತ. ಆ ಸಮಯವನ್ನು ನೀನು ತಂದೇ ತರ್ತೀಯ ಅಂತ! ಕೊನೆಗೂ ನೀನು ನನ್ನ ನಂಬಿಕೆಯನ್ನು ನಿಜಮಾಡಿದೆ. ನನ್ನ ಮನಸ್ಸಿಗೀಗ ನೆಮ್ಮದಿ ಸಿಕ್ಕಿದೆ"
ತಾನು ಹೀಗೆ ನೆನಪಿಸಿಕೊಂಡು ಹಾಗೆ ಮರೆಯುತ್ತಿದ್ದ ಹೊಸ ಮನೆಯೆಂಬ ಕನಸು ಅಮ್ಮನ ಪಾಲಿಗೆ ಇಷ್ಟೊಂದು ಭಾವಾನಾತ್ಮಕವಾಗಿತ್ತೆಂಬುದು ವಿಶಾಲನಿಗೆ ಅರಿವಾದದ್ದು ಆಗಲೇ. ಯಾಕೋ ತುಂಬಾ ತಡಮಾಡಿಬಿಟ್ಟೆನೇನೋ ಅನ್ನಿಸಿತು. ಹಾಸಿಗೆಗೊರಗಿದವನ ಮನದ ತುಂಬಾ ಬಾಲ್ಯದಿಂದ ಇಂದಿನ ತನಕ ನೋಡುತ್ತಾ ಬಂದಿರುವ ಅಮ್ಮನ ನೆನಪುಗಳು ಚಿತ್ರಗಳಾಗಿ ಕದಲತೊಡಗಿದವು.
***************
ಕಣ್ತೆರೆದು ನೋಡಿದ. ಇನ್ನೇನು ಬೆಳಗಾಗುವುದರಲ್ಲಿತ್ತು. ಕನಸು ನನಸಾಗಿಸಲಿರುವ ಬೆಳಗು! ತಡಬಡಾಯಿಸಿ ಎದ್ದ. ಅಮ್ಮ ಇನ್ನೂ ಎದ್ದಿರಲಿಲ್ಲ. ಪಾಪ.. ನಡುರಾತ್ರೆಯವರೆಗೂ ಎಚ್ಚರವಿದ್ದಳು. ಇನ್ನೂ ಸ್ವಲ್ಪ ಹೊತ್ತು ಆರಾಮವಾಗಿ ಮಲಗಲಿ. ಎದ್ದ ಮೇಲೆ ದಿನವಿಡೀ ದುಡಿಯುವುದು ಇದ್ದೇ ಇದೆ. ತಾನೇ ದೇವರಿಗೆ ದೀಪ ಹಚ್ಚಿ ಪೂಜೆಗೆ ಹೂ ಕೊಯ್ದ. ದನಗಳ ಹಾಲು ಕರೆದು, ಒಲೆಯಮೇಲಿಟ್ಟ. ಅಪ್ಪ ಆಗಲೇ ಎದ್ದು ತೋಟದತ್ತ ಹೋಗಿದ್ದರು. ಅಮ್ಮನನ್ನು ಎಬ್ಬಿಸಲೆಂದು ಕೋಣೆಯತ್ತ ನಡೆದ.
"ಅಮ್ಮಾ... ಅಮ್ಮಾ...."
"ಅಮ್ಮಾ... ಅಮ್ಮಾ...."
"....................."
"ಸೀತಮ್ಮೋರೆ... ಏಳೇಳಿ ಸಾಕು. ಏನಿದು.. ಯಾವತ್ತೂ ಇಲ್ಲದ ನಿದ್ರೆ ಇವತ್ತು?"
ಮಗ್ಗಲಾಗಿ ಮಲಗಿದ್ದವಳ ಹೆಗಲು ಕದಲಿಸಲೆಂದು ಚಾಚಿದವನ ಕೈ ಬೆಂಕಿಸೋಕಿದಂತಾಗಿ ಛಕ್ಕನೆ ಹಿಂದಕ್ಕೆ ಬಂತು. ಇನ್ನಿಲ್ಲದಂತೆ ನಡುಗತೊಡಗಿದ ಆ ಕೈಗಳಿಂದ ಹಾಸಿಗೆಯ ಮೇಲೆ ಪವಡಿಸಿದ್ದ ಅವಳ ಕೈಯ್ಯನ್ನು ಮೆಲ್ಲಗೆ ಸ್ಪರ್ಷಿಸಿದ...
ಮಗ್ಗಲಾಗಿ ಮಲಗಿದ್ದವಳ ಹೆಗಲು ಕದಲಿಸಲೆಂದು ಚಾಚಿದವನ ಕೈ ಬೆಂಕಿಸೋಕಿದಂತಾಗಿ ಛಕ್ಕನೆ ಹಿಂದಕ್ಕೆ ಬಂತು. ಇನ್ನಿಲ್ಲದಂತೆ ನಡುಗತೊಡಗಿದ ಆ ಕೈಗಳಿಂದ ಹಾಸಿಗೆಯ ಮೇಲೆ ಪವಡಿಸಿದ್ದ ಅವಳ ಕೈಯ್ಯನ್ನು ಮೆಲ್ಲಗೆ ಸ್ಪರ್ಷಿಸಿದ...
ಚಂದಮಾಮನ ತೋರಿಸುತ್ತಾ ತುತ್ತುಣಿಸಿದ್ದ ಕೈ.. ತನ್ನ ಹರಿದ ಅಂಗಿಯ ಹುಲಿಯುತ್ತಾ ಸೂಜಿ ಚುಚ್ಚಿಸಿಕೊಂಡಿದ್ದ ಕೈ.. ತನ್ನನ್ನು ಎದೆಗಪ್ಪಿಕೊಂಡು ಮುದ್ದಾಡಿದ್ದ ಕೈ... ಮೊಮ್ಮಗುವಿನ ತೊಟ್ಟಿಲು ತೂಗಿ ಲಾಲಿ ಹಾಡುವ ಕನಸು ಕಂಡಿದ್ದ ಕೈ... ಇನ್ನೇನು ನನಸಾಗಲಿದ್ದ ಮೊವ್ವತ್ತು ವರ್ಷಗಳ ಕನಸಿನ ಮನೆಯ ಪಾಯಕ್ಕೆ ಕುಂಕುಮವಿರಿಸಬೇಕಿದ್ದ ಕೈ....
ಅದೀಗ ನಿರ್ಜೀವವಾಗಿ ಬಿದ್ದಿತ್ತು.
ತಾಯಿಯೊಬ್ಬಳು ಮಗನಿಗೆ ಕೊಡಬಹುದಾದ ಅತಿದೊಡ್ಡ ಆಘಾತವದು... ಹೃದಯ ಚಿಟ್ಟನೆ ಚೀರಿಕೊಂಡಿತು. ಆದರೆ ಗಂಟಲು ಕೂಗದಾಯಿತು. ಕಾಲುಗಳು ಕುಸಿದವು. ಕಣ್ಣು ಕತ್ತಲೆಬಂತು....
ಎಲಾ ದುರ್ದೈವಿ ಜೀವವೇ... ಇಂದಲ್ಲ ನಾಳೆ ಗಂಡ ಸರಿಹೋಗುತ್ತಾನೆಂದು ವರುಷಗಟ್ಟಲೆ ಕಾದೆ.. ಮಕ್ಕಳು ಕೈಗೆ ಬರಲೆಂದು ಮೊವ್ವತ್ತು ವರುಷ ಕಾದೆ.. ಕಲ್ಲು ದೇವರ ಬೇಡುತ್ತಾ ಲೆಕ್ಕವಿಲ್ಲದಷ್ಟು ದಿನ ಕಾದೆ..
ಇನ್ನೊಂದು ವರುಷ ಕಾಯದೇಹೋದೆಯ?
ಗೃಹ ಪ್ರವೇಶದ ದಿನ ಸೀರೆಯುಟ್ಟು ಸಂಭ್ರಮದಿಂದ ಓಡಾಡುವುದಿತ್ತು. ಉರಿಬಿಸಿಲ ಮಧ್ಯಾಹ್ನ ನಿನಗೆಂದೇ ಕಟ್ಟಿಸಿದ ಕೋಣೆಯಲ್ಲಿ, ತಿರುಗುವ ಫ್ಯಾನ್ ಕೆಳಗೆ ಮಲಗಿ ನೆಮ್ಮದಿಯಿಂದ ನಿದ್ರಿಸುವುದಿತ್ತು. ವರ್ಷಗಟ್ಟಲೆ ಒರಟು ಸಿಮೆಂಟು ನೆಲವನ್ನು ತಿಕ್ಕಿ ತಿಕ್ಕಿ ಸವೆದ ಕೈಗಳು ಮಗ ಕಟ್ಟಿದ ನಯವಾದ ನೆಲವನ್ನೊಮ್ಮೆ ಸಂಭ್ರಮದಿಂದ ಸವರುವುದಿತ್ತು. ಇನ್ನೂ ಏನೇನೋ ಸಂಭ್ರಮಗಳು ಬಾಕಿ ಇತ್ತು...
ಆಗಲೇ ಹೋಗಿಬಿಟ್ಟೆಯಾ?
ವಿಶಾಲ ನಿಂತಲ್ಲೇ ಕುಸಿದುಹೋದ. ಯಾರೋ ಎತ್ತಿ ಕೂರಿಸುತ್ತಿದ್ದರು. ಇನ್ಯಾರೋ ನೀರು ಕುಡಿಸುತ್ತಿದ್ದರು. ಮತ್ಯಾರೋ ಸಮಾಧಾನ ಹೇಳುತ್ತಿದ್ದರು...
ಅಮ್ಮ ಮಾತ್ರ ಮಲಗಿಯೇ ಇದ್ದಳು.
ಎಂದಿನಂತೆ ಬಂದು ಅಳುತ್ತಿರುವ ತನ್ನ ಮೈದಡವದೇ, ಬಾಚಿ ಅಪ್ಪಿಕೊಳ್ಳದೇ ಮಲಗಿಯೇ ಇದ್ದಳು. ಇನ್ನೆಂದೂ ತೆರೆಯದ ಚಿರ ನಿದಿರೆಯಲ್ಲಿ ಶಾಂತವಾಗಿ ಮುಚ್ಚಿಕೊಂಡಿದ್ದ ಆ ಕಂಗಳಲ್ಲಿ ದಿವ್ಯ ನೆಮ್ಮದಿಯೊಂದು ಉಳಿದುಹೋಗಿತ್ತು.
ಹಿರಿಯ ಕಿರಿಯರೆಲ್ಲ ಬಂದರು.
"ಪುಣ್ಯವಂತೆ. ಹಾಸಿಗೆ ಹಿಡಿಯದೇ, ನೆಪೆಯದೇ ಹೇಗೆ ನಿದ್ರೆ ಮಾಡಿದಷ್ಟೇ ಸುಲಭದಲ್ಲಿ ಹೋಗ್ಬಿಟ್ಳು!" ಯಾರೋ ಮಾತನಾಡಿಕೊಂಡರು. ನಡೆಯಬೇಕಿದ್ದ ಕಾರ್ಯಗಳೆಲ್ಲ ನಡೆದವು. ಅಪರಕರ್ಮಗಳೆಲ್ಲ ಮುಗಿದ ಮಾರನೇ ದಿನ ಬಿರು ಬಿಸಿಲು ಸುಡುತ್ತಿದ್ದ ಮಧ್ಯಾಹ್ನ ಒರಲೆ ತಿಂದ ಮಾಡನ್ನು ನೋಡುತ್ತಾ ಮಲಗಿದ್ದ ವಿಶಾಲನಿಗೆ ಅದೇನನ್ನಿಸಿತೋ ಏನೋ, ಗೋಪಾಲಾಚಾರಿಯನ್ನು ಕರೆಸಿ, ಅಮ್ಮನ ಶರೀರ ಪಂಚಭೂತಗಳಲ್ಲೊಂದಾದ ಅದೇ ಹಳ್ಳದ ಬದುವಿನಲ್ಲಿ ಗೋರಿಯೊಂದನ್ನು ಕಟ್ಟಿಸಿದ. ಪಕ್ಕದಲ್ಲಿ ಕೆಂಗುಲಾಬಿಯ ಗಿಡವೊಂದನ್ನು ಕೈಯ್ಯಾರೆ ನೆಟ್ಟು ಬೊಗಸೆ ತುಂಬಾ ನೀರೆರೆದ. ಈಗಷ್ಟೇ ಕಟ್ಟಿದ ಪುಟ್ಟ ಮನೆಯಂತೆ ಕಾಣುತ್ತಿದ್ದ ಆ ಗೋರಿಯ ಹಣೆಯ ಮೇಲೆ ದಪ್ಪಕ್ಷರಗಳಲ್ಲಿ ಕೆತ್ತಲಾಗಿತ್ತು:
"ಪುಣ್ಯವಂತೆ. ಹಾಸಿಗೆ ಹಿಡಿಯದೇ, ನೆಪೆಯದೇ ಹೇಗೆ ನಿದ್ರೆ ಮಾಡಿದಷ್ಟೇ ಸುಲಭದಲ್ಲಿ ಹೋಗ್ಬಿಟ್ಳು!" ಯಾರೋ ಮಾತನಾಡಿಕೊಂಡರು. ನಡೆಯಬೇಕಿದ್ದ ಕಾರ್ಯಗಳೆಲ್ಲ ನಡೆದವು. ಅಪರಕರ್ಮಗಳೆಲ್ಲ ಮುಗಿದ ಮಾರನೇ ದಿನ ಬಿರು ಬಿಸಿಲು ಸುಡುತ್ತಿದ್ದ ಮಧ್ಯಾಹ್ನ ಒರಲೆ ತಿಂದ ಮಾಡನ್ನು ನೋಡುತ್ತಾ ಮಲಗಿದ್ದ ವಿಶಾಲನಿಗೆ ಅದೇನನ್ನಿಸಿತೋ ಏನೋ, ಗೋಪಾಲಾಚಾರಿಯನ್ನು ಕರೆಸಿ, ಅಮ್ಮನ ಶರೀರ ಪಂಚಭೂತಗಳಲ್ಲೊಂದಾದ ಅದೇ ಹಳ್ಳದ ಬದುವಿನಲ್ಲಿ ಗೋರಿಯೊಂದನ್ನು ಕಟ್ಟಿಸಿದ. ಪಕ್ಕದಲ್ಲಿ ಕೆಂಗುಲಾಬಿಯ ಗಿಡವೊಂದನ್ನು ಕೈಯ್ಯಾರೆ ನೆಟ್ಟು ಬೊಗಸೆ ತುಂಬಾ ನೀರೆರೆದ. ಈಗಷ್ಟೇ ಕಟ್ಟಿದ ಪುಟ್ಟ ಮನೆಯಂತೆ ಕಾಣುತ್ತಿದ್ದ ಆ ಗೋರಿಯ ಹಣೆಯ ಮೇಲೆ ದಪ್ಪಕ್ಷರಗಳಲ್ಲಿ ಕೆತ್ತಲಾಗಿತ್ತು:
"ಅನಂತ ನಿಲಯ"
('ತರಂಗ'ದ 15 ಆಗಸ್ಟ್ 2019ನೇ ಸಂಚಿಕೆಯಲ್ಲಿ ಪ್ರಕಟಿತ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ