ಭಾರತದ ಸಾರಿಗೆ ಇತಿಹಾಸದಲ್ಲಿ ರೈಲಿನ ನಂತರ ಅತಿ ಹೆಚ್ಚು ಜನರಿಂದ ಬಳಸಲ್ಪಡುತ್ತಿರುವ ವಾಹಿನಿಯೆಂದರೆ ಅದು ಬಸ್ಸು. ಇದು, ಮನೆಮನೆಯ ಬಾಗಿಲಿನಲ್ಲೂ ಬೈಕು, ಕಾರು, ಓಮಿನಿಗಳು ನಿಂತಿರುವ ಇಂದಿನ ಕಾಲಕ್ಕೂ ಅನ್ವಯವಾಗುವ ಸತ್ಯ. ಟಾರನ್ನೇ ಕಾಣದ ಹಳ್ಳಿಗಾಡುಗಳ ಮೂಲೆಮೂಲೆಗೂ ತಲುಪಬಲ್ಲದ್ದಾಗಿರುವುದೇ ಬಸ್ಸಿನ ಈ ಯಶಸ್ಸಿಗೆ ಕಾರಣವೆನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಪಟ್ಟಣದಲ್ಲಿ ಅಂಡಲೆಯುವ, ಸುಮಾರು ಮೊವ್ವತ್ತು - ನಲವತ್ತು ವರ್ಷದ ಯಾವುದೇ ಯಾರನ್ನಾದರೂ ನಿಲ್ಲಿಸಿ ಕೇಳಿನೋಡಿ? ಯಾವ ರಾಜ್ಯದ ಯಾವ ಹಳ್ಳಿಯಿಂದ ಬಂದವರಾದರೂ ತಮ್ಮೂರಿನ ಬಸ್ಸುಗಳ ಬಗೆಗೆ ಚಂದದ ಕಥೆಯೊಂದು ಅವರ ನೆನಪಿನ ಮಡತೆಗಳೊಳಗೆ ಇದ್ದೇ ಇರುತ್ತದೆ. ಕಾಡು, ಬೆಟ್ಟ, ನದಿಯಾಚೆಗೆಲ್ಲೋ ಇರುವ ದೂರದ ಪಟ್ಟಣದಿಂದ ಹಾವಿನಂತೆ ಹರಿದುಬಂದಿರುವ ರಸ್ತೆಯ ಮೇಲೆ ಕೇಕೆ ಹಾಕುತ್ತಾ, ಅಲ್ಲಾಡುತ್ತ, ತೇಕುತ್ತಾ, ಏದುಸಿರು ಬಿಡುತ್ತಾ, ಅಲ್ಲಲ್ಲಿ ನಿಲ್ಲುತ್ತಾ ಪ್ರಯಾಣಿಕರನ್ನು ಹೊತ್ತು ತರುವ ಬಸ್ಸೆಂದರೆ ಪ್ರತಿಯೊಬ್ಬರಿಗೂ ಅದೊಂದು ತೆರನಾದ ಪ್ರೀತಿ. ಹೆಚ್ಚೇನೂ ಬೇಡ, ಕಾಲದ ಗಡಿಯಾರವನ್ನು ಕೇವಲ ಇಪ್ಪತ್ತು-ಇಪ್ಪತೈದು ವರ್ಷಗಳಷ್ಟು ಹಿಂದಕ್ಕೆ ತಿರುಗಿಸಿದರೂ ಸಾಕು, ಯಾವ ರೀತಿಯಲ್ಲಿ ಬಸ್ಸೆನ್ನುವ ಬಸ್ಸು ಪ್ರೀಂಪ್ರೀಂ ಎಂದು ಹಾರನ್ ಹೊಡೆಯುತ್ತಾ ಜನಸಾಮಾನ್ಯರ ಮನದಂಗಳಗಳನ್ನು ಹಾದು ಹೋಗುತ್ತಿತ್ತೆನ್ನುವ ಚಿತ್ರ ನಮ್ಮ ಕಣ್ಮುಂದೆಯೇ ಗೋಚರವಾಗತೊಡಗುತ್ತದೆ. ಅದರಲ್ಲೂ ಮತ್ಯಾವ ಪ್ರಭಾವೀ ಸಾರಿಗೆ ವಾಹಿನಿಯೂ ಇಲ್ಲದ ಹಳ್ಳಿಗಳ ಪಾಲಿಗಂತೂ ಬಸ್ಸೆನ್ನುವುದು ಹೃದಯದಿಂದ ದೇಹದೆಲ್ಲ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಸಾಕ್ಷಾತ್ ನರನಾಡಿಯೇ ಆಗಿತ್ತು. ಭರ್ರೋ ಎನ್ನುತ್ತಾ ಹತ್ತಾರು ಏರು ದಿಣ್ಣೆಗಳ ಹತ್ತಿಳಿದು, ರಸ್ತೆಯ ತುಂಬಾ ಬಾಯ್ತೆರೆದು ನಿಂತಿರುವ ಮಿನಿ ಪಾತಾಳದಂತಹಾ ಹೊಂಡಗಳಲ್ಲಿ ಇನ್ನೇನು ಬಿದ್ದೇ ಹೋಯಿತೇನೋ ಎಂಬಂತೆ ವಾಲಿ, ಕೊನೆಯ ಬಿಂದುವಿನಲ್ಲಿ ಸಾವರಿಸಿಕೊಂಡು, ಸಾಕ್ಷಾತ್ ಕಂಬಳದ ಅಂಗಳವೇನೋ ಎಂಬಂತಿರುವ ಕೆಸರಿನ ಜಾರಿಕೆಯ ಜೊತೆ ಸೆಣೆಸುತ್ತಾ, ಉಸಿರಾಡುವ ಗಾಳಿಗೇ ಜಾಗವಿಲ್ಲದಷ್ಟು ರಶ್ಶಾಗಿದ್ದರೂ ಕೊನೆಯ ನಿಲ್ದಾಣದ ಕಟ್ಟಕಡೆಯ ಪ್ರಯಾಣಿಕನನ್ನೂ ಬಿಡದೆ ಅವನ ಸಾಮಾನು-ಸರಂಜಾಮುಗಳ ಸಮೇತ ಹತ್ತಿಸಿಕೊಂಡು ಗಮ್ಯ ತಲುಪಿಸಿದ ನಂತರವೇ ಬಸ್ಸಿಗೆ ನಿದ್ರೆ ಹತ್ತುವುದು. ಬೆಳಗ್ಗೆ ಕೋಳಿಯ ಕೂಗು ಕೇಳಿ ನೂರಾರು ಹಳ್ಳಿಗರು ಎಚ್ಚರಗೊಳ್ಳುವಾಗಲೇ ಊರಿನ ಬಯಲಿನ ಮೂಲೆಯಲ್ಲೆಲ್ಲೋ ನಿಂತೇ ನಿದ್ರಿಸುತ್ತಿದ್ದ ಅದು ಎಚ್ಚರಗೊಳ್ಳುತ್ತದೆ. ಕೊರೆಯುವ ಚಳಿಗೆ ಜನರೆಲ್ಲರೂ ಬಚ್ಚಲಿನ ಒಲೆಯೆದುರು ನಿಂತು ಬಿಸಿಯಾಗುವಾಗ ಬಸ್ಸು ನಿಂತಲ್ಲೇ ಚಾಲೂ ಆಗಿ ಗುರ್ ಗುರ್ ಎನ್ನುತ್ತಾ ಥಂಡಿ ಹಿಡಿದ ತನ್ನ ಎಂಜಿನ್ ಗಳನ್ನು ಬೆಚ್ಚಗಾಗಿಸಿಕೊಳ್ಳುತ್ತದೆ. ಊರ ಹೊರಗಿನ ಬಾವಿಯ ನೀರಿನಲ್ಲಿ ಸ್ನಾನ ಮಾಡಿ ಬರುವ ಡ್ರೈವರ್ ಹಾಗೂ ಕಂಡಕ್ಟರ್ ಗಳು ಗಾಜಿನ ಎದುರುಗಡೆ ತಗುಲಿಸಿರುವ ದೇವರ ಫೋಟೋಗೆ ಊದುಬತ್ತಿ ಹಚ್ಚಿ ಕೈ ಮುಗಿದರೆಂದರೆ ಮುಗಿಯಿತು, ಬಸ್ಸಿನ ಪ್ರಯಾಣ ಶುರು! ಬ್ಯಾಗು ತಗುಲಿಸಿಕೊಂಡು ನಿಂತಿರುವ ಕಾಲೇಜು ಕುಮಾರ-ಕುಮಾರಿಯರು, ಹೇಳದೇ ಕೇಳದೇ ಕೆಟ್ಟು ಕುಳಿತಿರುವ ತೋಟದ ಮೋಟರನ್ನು ರಿಪೇರಿಗೆ ಒಯ್ಯುತ್ತಿರುವ ಬಡ ರೈತ, ಅಡಿಕೆ ಮಂಡಿ ಸೌಕಾರರ ಬಳಿ ಹತ್ತು ಸಾವಿರ ಹೆಚ್ಚಿಗೆ ಸಾಲ ಕೇಳಲೆಂದು ಹೊರಟಿರುವ ಹೆಗ್ಡೇರು, ಎರೆಡು ದಿನದಿಂದ ಬಿಡದೆ ವಾಂತಿ ಮಾಡಿಕೊಳ್ಳುತ್ತಿರುವ ಮಗುವನ್ನು ನಗರದ ದೊಡ್ಡ ಡಾಕ್ಟರಿಗೆ ತೋರಿಸಲೆಂದು ಒಯ್ಯುತ್ತಿರುವ ಆತಂಕದ ತಾಯಿ, ಜೇಬಿನಲ್ಲಿ ತನ್ನ ಅಂಗಡಿಗೆ ಬೇಕಾದ ಸಾಮಾನುಗಳ ಪಟ್ಟಿಯನ್ನೂ, ಕಂಕುಳಲ್ಲಿ ಖಾಲಿ ಚೀಲವನ್ನೂ ಅವುಚಿಕೊಂಡಿರುವ, ಆಗಾಗ ಒಳಜೇಬಿನಲ್ಲಿನ ಹಣವನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಿರುವ ಗೂಡಂಗಡಿಯ ಬಾಬಣ್ಣ, ಸೆಂಟು, ಪೌಡರು ಬಳಿದುಕೊಂಡು ಘಮಘಮಿಸುತ್ತಾ ಪಟ್ಟಣದ ರಸ್ತೆರಸ್ತೆಯನ್ನೂ ಸರ್ವೇ ಮಾಡಲಿಕ್ಕೆ ತಯಾರಾಗಿ ಬಂದಿರುವ ಪಡ್ಡೆ ಹುಡುಗರು, ಎದುರಾದವರೆಲ್ಲರಿಂದ ನಮಸ್ಕಾರ ಹೇಳಿಸಿಕೊಳ್ಳುತ್ತಾ ಪಕ್ಕದೂರ ಶಾಲೆಗೆ ಹೊರಟು ಕಾಯುತ್ತಿರುವ ಮೇಷ್ಟರು, ಈ ಸಲದ ಛಳಿ, ಗಾಳಿ, ಮಳೆ, ಬೆಳೆಗಳ ಬಗ್ಗೆ ಘನಗಂಭೀರವಾದ ಚರ್ಚೆ ನಡೆಸುತ್ತಾ ನಿಂತಿರುವ ಹಿರಿಯದ್ವಯರು, ಅಜ್ಜನ ಮನೆಗೆ ಹೋಗುವ ಸಂಭ್ರಮದಲ್ಲಿ ತೇಲುತ್ತಿರುವ ದೊಗಲೆ ಚಡ್ಡಿಯ ಪೋರ ಮತ್ತು ಜರತಾರಿ ಲಂಗದ ಪೋರಿ, ಹಾಗೂ ಅವರಿಬ್ಬರನ್ನೂ ನಿಭಾಯಿಸುತ್ತಾ ತಾನೂ ಒಳಗೊಳಗೇ ತವರಿಗೆ ಹೋಗುವ ಖುಷಿಯನ್ನನುಭವಿಸುತ್ತಿರುವ ಅಮ್ಮ…. ಹೀಗೆ ಜಗದ, ಜನಜೀವನದ ವಿವಿಧ ಮಜಲುಗಳು ಬಸ್ಸಿನ ದಾರಿಯಲ್ಲಿ ಕಾದುನಿಲ್ಲುತ್ತವೆ.
ಊರಿಂದ ಹೊರಡುವ ಬಸ್ಸುಗಳದೊಂದು ಚಿತ್ರವಾದರೆ ಊರಿಗೆ ಮರಳುವ ಬಸ್ಸುಗಳದು ಇನ್ನೊಂದು ತೆರನಾದ ಸಂಭ್ರಮ. ಅವುಗಳಿಗಾಗಿ ಕಾಯುವ ಜೀವಗಳು ಹಲವು. ಇಳಿಸಂಜೆಯ ತಂಪಿನಲ್ಲಿ ಪೋರನೊಬ್ಬ ಬಣ್ಣದ ಕಾರು ತರುತ್ತೇನೆಂದು ಮಾತು ಕೊಟ್ಟು ಪೇಟೆಗೆ ಹೋಗಿರುವ ಅಪ್ಪನ ಹಾದಿ ಕಾಯುತ್ತಿದ್ದರೆ ಅವನ ತಾಯಿ ಅವರು ತರಲಿರುವ ಹೊಸ ಅಲ್ಯೂಮಿನಿಯಂ ಪಾತ್ರೆಗೆ ಹಾಕಲು ಮಜ್ಜಿಗೆ-ಹೆಪ್ಪನ್ನು ತಯಾರಿಟ್ಟುಕೊಂಡು ಕೂತಿದ್ದಾಳೆ. ರಿಪೇರಿಯಾಗಿ ಬರಲಿರುವ ನೀರುಣಿಸುವ ಮೋಟಾರಿಗಾಗಿ ಬಾಯಾರಿದ ತೋಟ-ಗದ್ದೆಗಳು ಕಾದಿವೆ. ಹೊಸದಾಗಿ ಮದುವೆಯಾಗಿರುವ ಹುಡುಗಿ ಪಟ್ಟಣಕ್ಕೆ ಕೆಲಸಕ್ಕೆ ಹೋಗಿರುವ ಪ್ರಿಯತಮ ತನಗಾಗಿ ತರಲಿರುವ ಮಲ್ಲಿಗೆ-ಮೈಸೂರು ಪಾಕುಗಳನ್ನೂ, ಅವುಗಳ ನಡುವಿನಿಂದ ಹಾದುಬಂದು ತನ್ನನ್ನು ತಬ್ಬಲಿರುವ ಅವನ ತುಂಟ ಕೈಗಳನ್ನೂ ಕಾದಿದ್ದಾಳೆ. ಈ ಎಲ್ಲ ಸಂಭ್ರಮಗಳನ್ನೂ ಹೊತ್ತು ತರುವುದು ಬಸ್ಸೇ ಎಂದು ಬೇರೆ ಹೇಳಬೇಕಿಲ್ಲವಲ್ಲಾ?
ಇನ್ನು ಹಬ್ಬ ಹಾಗೂ ರಜೆದಿನಗಳು ಬಂತೆಂದರೆ ಬಸ್ಸೆನ್ನುವುದು ಅಕ್ಷರಷಃ ಸಂಭ್ರಮದ ಸಾಗಾಣೆಕಾರನಾಗುತ್ತದೆ. ಅದೆಲ್ಲೋ ದೂರದ ಊರಿನಿಂದ ಬೆಳ್ಳಂಬೆಳಗ್ಗೆ ಬಸ್ಸು ಹತ್ತಿ ಬರಲಿರುವ ಅಜ್ಜ, ಮಾವ, ಚಿಕ್ಕಮ್ಮ, ಅತ್ತೆ, ಅವರ ಮಕ್ಕಳು ಮುಂತಾದ ಬಂಧುಬಾಂಧವರನ್ನು ಹೊತ್ತು ತರುವ ತೇರಾಗುತ್ತದೆ. ಮನೆಯಲ್ಲಿನ ಚಿಕ್ಕ ಪೋರ ಬೆಳಗ್ಗೆ ಏಳುತ್ತಿದ್ದಂತೆಯೇ ಬರಲಿರುವ ಅಜ್ಜನ ಜಪ ಆರಂಭಿಸುತ್ತಾನೆ. ಬರುವವರಿಗೆ ನಿಲ್ದಾಣದಿಂದ ಮನೆಗೆ ಬರುವ ದಾರಿ ಗೊತ್ತಿರುತ್ತದಾದರೂ ಅವರನ್ನು ಸ್ವಾಗತಿಸಲಿಕ್ಕೆ ನೇರ ನಿಲ್ದಾಣಕ್ಕೇ ಓಡುತ್ತಾನೆ. ಅಥವಾ “ಅಜ್ಜ ಎಷ್ಟೊತ್ತಿಗೆ ಬರ್ತಾರೆ ಹೇಳೇ” ಎಂದು ಮನೆಯ ತುಂಬಾ ತರಲೆ, ರಗಳೆ ಮಾಡಿಕೊಂಡು ಹಿಂಬಾಲಿಸುವ ಅವನನ್ನು ಕೆಲನಿಮಿಷಗಳ ಮಟ್ಟಿಗಾದರೂ ಸಾಗಹಾಕಲಿಕ್ಕೆಂದು ಅಮ್ಮ “ಗಾಯಿತ್ರಿ ಬಸ್ಸಿಗೆ ಅಜ್ಜ ಬರ್ತಾರೆ. ಕರ್ಕೊಂಡ್ಬಾ ಹೋಗು" ಎಂದು ಕಳಿಸಿಬಿಡುತ್ತಾಳೆ. ಜಾರುವ ಚಡ್ಡಿಯನ್ನು ಹಿಡಿದುಕೊಂಡು, ಬರಲಿರುವ ಅಜ್ಜನ ಸ್ವಾಗತಕ್ಕಾಗಿ ನಿಲ್ದಾಣಕ್ಕೆ ಓಡಿಬಂದು ಬಸ್ಸು ಬರಲಿರುವ ದಾರಿಯನ್ನೇ ದಿಟ್ಟಿಸುತ್ತಾ ನಿಂತವನನ್ನು ಬಸ್ಸು ನಿಮಿಷಗಳ ಕಾಲ ಕಾಯಿಸುತ್ತದೆ. ಕಾದಷ್ಟೂ ಅವನ ಕಾತರ, ಸಂಭ್ರಮಗಳು ಹೆಚ್ಚುತ್ತವೆಂಬುದು ಅದಕ್ಕೂ ಗೊತ್ತು. ಹೀಗೆ ಕಾದು ಕಾದು ಪೆಚ್ಚುಮೋರೆ ಹಾಕಿಕೊಂಡು ಇನ್ನೇನು ಮನೆಯ ದಾರಿ ಹಿಡಿಯಬೇಕು, ಅಷ್ಟರಲ್ಲಿ, ಅದೋ ಅಲ್ಲಿ, ರಸ್ತೆಯ ದೂರದ ತಿರುವಿನ ಮರೆಯಿಂದ ಪೀಂಪೀಂ ಎನ್ನುವ ಸದ್ದೊಂದು ಕೇಳಿಬರುತ್ತಿದೆ. ನೋಡ ನೋಡುತ್ತಿದ್ದಂತೆಯೇ ಚಿಕ್ಕ ಚುಕ್ಕೆಯೊಂದು ಕದಲುತ್ತಾ ಇತ್ತಲೇ ಬರುತೊಡಗುತ್ತದೆ. ಬರುಬರುತ್ತಾ ಆ ಚುಕ್ಕೆ ಚೌಕವಾಗಿ, ಆಯತವಾಗಿ, ದೊಡ್ಡ ಡಬ್ಬಿಯಾಗಿ ಕೊನೆಗೆ ವಾಲಾಡುತ್ತಾ ಬರುತ್ತಿರುವ ಬಸ್ಸಾಗಿ ಗೋಚರವಾಗತೊಡಗುತ್ತದೆ. ಈಗಾಗಲೇ ಪೋರನ ಖುಷಿ ದುಪ್ಪಟ್ಟಾಗಿದೆ. ಅಜ್ಜನೆನ್ನುವ ಅಕ್ಕರೆಯ ಜೀವವನ್ನು ಹೊತ್ತು ಕುಲುಕುತ್ತಾ ಬಂದು ನಿಂತ ಬಸ್ಸಿನ ಬಾಗಿಲಿನತ್ತ ಅವನು ಓಡುತ್ತಾನೆ. ಮಗಳಿಗೆ ಇಷ್ಟವಾದ ಕಾಟು ಮಾವಿನ ಗೊಜ್ಜು, ಅಳಿಯನಿಗೊಂದು ಶರ್ಟುಪೀಸು, ಮೊಮ್ಮಗನಿಗೆ ಪ್ಯಾಕೇಟಿನ ತುಂಬಾ ಮಹಾಲ್ಯಾಕ್ಟೋ ಚಾಕಲೇಟು.. ಈ ದಿವ್ಯ ಉಡುಗೊರೆಗಳನ್ನು ಜೋಪಾನವಾಗಿಟ್ಟುಕೊಂಡಿರುವ ತಮ್ಮ ಕೈ ಚೀಲದ ಸಮೇತ ಇಳಿದ ಅಜ್ಜ ಹಾಗೂ ಅವರ ಕೈಹಿಡಿದು ಕುಣಿಕುಣಿಯುತ್ತಾ ನಡೆಯುತ್ತಿರುವ ಮೊಮ್ಮಗ.. ಇವರಿಬ್ಬರೂ ಸಾಗಿಹೋಗುವ ಸೊಬಗನ್ನು ಕಣ್ತುಂಬಾ ತುಂಬಿಕೊಂಡ ಬಸ್ಸು ಖುಷಿಯಲ್ಲಿ ಕೇಕೆ ಹಾಕಿದಂತೆ ಹಾರನ್ ಹೊಡೆದು ಮುಂದಿನ ನಿಲ್ದಾಣದ ಮತ್ತೊಬ್ಬ ಮೊಮ್ಮಗನತ್ತ ಮುನ್ನಡೆಯುತ್ತದೆ.
*****************
ಬಸ್ಸು ಅದೆಷ್ಟೋ ಹಳ್ಳಿಗಳ ಮುದ್ದಿನ ಮಗ ಅಥವಾ ಮಗಳು. ಮಂದಿ ತಮ್ಮ ಮಕ್ಕಳಿಗಿಟ್ಟಷ್ಟೇ ಚಂದದ ಹೆಸರುಗಳನ್ನು ಬಸ್ಸಿಗೂ ಇಡುತ್ತಾರೆ. ಜಯರಾಮ್, ಶ್ರೀಕಂಠ, ನೀಲಕಂಠ, ಮಲ್ಲಿಕಾರ್ಜುನ, ಗಾಯತ್ರಿ, ಕೊಡಚಾದ್ರಿ, ಹನುಮಾನ್, ಗಜಾನನ, ರೋಸಿ... ಅದೇ ಹೆಸರಿನಿಂದ ಬಸ್ಸು ಊರಿನ ಜನರ ಮನೆಯ, ಮನದ ಅವಿಭಾಜ್ಯ ಅಂಗವಾಗುತ್ತದೆ. ಒಂದು ದಿನ ಬಸ್ಸು ಬಾರದಿದ್ದರೆ ಆ ದಿನವಿಡೀ ಊರು ಏನನ್ನೋ ಕಳೆದುಕೊಂಡಂತೆ ಕೊರಗುತ್ತದೆ. ಸೀನಣ್ಣನ ಕಟಿಂಗ್ ಶಾಪಿನ ಮರದ ಬೆಂಚಿನ ಮೇಲಿರುತ್ತಿದ್ದ ತಾಜಾ ದಿನಪತ್ರಿಕೆ ಇಂದು ಕಾಣೆಯಾಗುತ್ತದೆ. ಪಕ್ಕದೂರ ಹೈಸ್ಕೂಲಿಗೆ ಹೋಗುವ ಮಕ್ಕಳೆಲ್ಲ ನಡೆದೇ ಹೊರಡುತ್ತಾರೆ. ಹೋಗುತ್ತಾ ಹೋಗುತ್ತಾ ಬಾರದ ಬಸ್ಸಿನ ದಾರಿಯನ್ನೇ ತಿರುತಿರುಗಿ ನೋಡುತ್ತಾರೆ. ಜನರು ನಿಲ್ದಾಣದೆದುರಿನ ರಸ್ತೆಯಲ್ಲಿ ನಿಂತು ಹಣೆಯೆದುರು ಕೈಯ ಚಪ್ಪರಕಟ್ಟಿ ಬಸ್ಸು ಬಂತಾ? ಎಂದು ಇಣುಕುತ್ತಾರೆ. ಹುಲ್ಲೀಸರದ ಹತ್ತಿರ ಪಂಚರ್ ಆಯ್ತಂತೆ, ಹೊಳೆಮಕ್ಕಿ ಏರಲ್ಲಿ ಚರಂಡಿಗೆ ಹಾರಿತಂತೆ, ಕಂಪದಸರದ ಕೆಸರಲ್ಲಿ ಹೂತುಕೂತಿದೆಯಂತೆ, ಕೈಮರದ ತಿರ್ಕಸ್ಸಲ್ಲಿ ಮರಕ್ಕೆ ಢಿಕ್ಕಿ ಹೊಡೆಯಿತಂತೆ, ಗೂಳಿಮಕ್ಕಿಯಲ್ಲಿ ಯಾರದೋ ದನ ಅಡ್ಡ ಬಂತಂತೆ... ಹೀಗೇ ಅದು ಯಾಕೆ ಬಂದಿಲ್ಲ ಎನ್ನುವುದರ ಬಗ್ಗೆ ಇನ್ನೂ ಮುಂತಾದ ಗುಸುಗುಸು ಗಾಸಿಪ್ ಗಳು ಹರಿದಾಡುತ್ತವೆ.
ಇನ್ನು ತಡವಾಗಿ ಬರುವುದು ಬಸ್ಸಿನ ಹುಟ್ಟುಗುಣಗಳಲ್ಲೊಂದು. ಎಷ್ಟೇ ಸರಿಯಾದ ಸಮಯಕ್ಕೆ ಮೊದಲ ನಿಲ್ದಾಣದಿಂದ ಹೊರಟರೂ ಅದು ಕೊನೆಯ ನಿಲ್ದಾಣ ತಲುಪುವುದು ಅರ್ಧಗಂಟೆ ತಡವಾಗಿಯೇ. ಪಾಪ, ಇದರಲ್ಲಿ ಅದರ ತಪ್ಪೇನೂ ಇಲ್ಲ. ಮಾರಿಗೆ ಒಂದರಂತಿರುವ ಪ್ರತಿಯೊಂದು ನಿಲ್ದಾಣದಲ್ಲೂ ನಿಂತು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಾ ನೋಡ ನೋಡುತ್ತಲೇ ನವಮಾಸದ ತುಂಬು ಬಸುರಿಯಂತಾಗುವ ಅದು ನಿಲ್ದಾಣವೇ ಅಲ್ಲದ ಜಾಗದಲ್ಲಿ ಧುತ್ತನೆ ಪ್ರತ್ಯಕ್ಷವಾಗಿ ಕೈಚಾಚುವವರನ್ನೂ ತನ್ನೊಳಗೆ ತುಂಬಿಕೊಳ್ಳುತ್ತದೆ. ಸರಿ, ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಅಗೋ ಅಲ್ಲಿ, ದೂರದ ಕಾಡಿನ ದಾರಿಯಿಂದ ಇಬ್ಬರು ಗಂಡಸರು ಈಗಷ್ಟೇ ಒಲಂಪಿಕ್ಸ್ ಮುಗಿಸಿ ಬಂದ ನುರಿತ ಓಟಗಾರರಂತೆ ಓಡಿ ಬರುತ್ತಿರುವುದು ಕಾಣುತ್ತದೆ. ಒಬ್ಬರನ್ನೊಬ್ಬರು ಮೀರಿಸುತ್ತಾ ಬಿರುಗಾಳಿಯಂತೆ ಧಾವಿಸಿಬರುತ್ತಿರುವ ಅವರನ್ನು ನೋಡಿ ಎರೆಡು ಸೀಟ್ ಹೆಚ್ಚಾಯಿತೆಂಬ ಖುಷಿಯಲ್ಲಿ ಕಂಡಕ್ಟರ್ ಸಹಾ ಸೀಟಿ ಊದಿ ಡ್ರೈವರನಿಗೆ ಕಾಯುವಂತೆ ಸೂಚನೆನೀಡುತ್ತಾನೆ. ಬಿಟ್ಟಬಾಣದಂತೆ ಓಡಿಬಂದು ಬಸ್ಸನ್ನು ಹಿಡಿದುಕೊಂಡ ಅವರು ಚಂಡಮಾರುತದಂತೆ ಏದುಸಿರು ಬಿಡುತ್ತಾ ಬಸ್ಸು ಹತ್ತುವವರು ತಾವಲ್ಲವೆಂದೂ, ವಯಸ್ಸಾದವರೊಬ್ಬರು ಹಿಂದೆ ಬರುತ್ತಿದ್ದಾರೆಂದೂ, ಅವರಿಗಾಗಿ ಕಾಯಬೇಕೆಂದೂ ಕೇಳಿಕೊಳ್ಳುತ್ತಾರೆ. ತಿರುಗಿ ನೋಡಿದರೆ ದೂರದಲ್ಲಿ ವಯೋವೃದ್ಧರೊಬ್ಬರು ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಬರುತ್ತಿರುವುದು ಕಾಣಿಸುತ್ತದೆ.
*************
"ದೊಡ್ಡವನಾದ ಮೇಲೆ ಏನಾಗ್ತೀಯ ಪುಟ್ಟೂ?"
"ಗುದುಚತ್ತೀ ಬಚ್ಚಿನ ಡ್ರೈವರ್ ಆತೀನಿ!"
ಹೀಗಂತ ಹೇಳಿ ಎದುರಿರುವವರನ್ನೆಲ್ಲ ಗೊಳ್ಳೆಂಬ ನಗೆಯಲೆಯಲ್ಲಿ ತೇಲಿಸುವ ಚಿಲ್ಟಾರಿಗಳ ಸಂಖ್ಯೆ ಅದೆಷ್ಟೋ? ನಿಜ.. ಬಸ್ಸೊಂದರ ಡ್ರೈವರ್, ಕಂಡಕ್ಟರ್ ಅಥವಾ ಕ್ಲೀನರ್ ಗಳಿಗೆ ವಿಶಿಷ್ಠ ಗೌರವವೊಂದಿದೆ. ಎಲ್ಲರಿಗಿಂತ ಹೆಚ್ಚಾಗಿ ಹಳ್ಳಿಯ ಮಕ್ಕಳ ದೃಷ್ಟಿಯಲ್ಲಿ ಅವರು ಅಘೋಷಿತ ಹೀರೋಗಳು. ಒಂದು ಕಾಲಲ್ಲಿ ಬ್ರೇಕು ಒತ್ತುತ್ತಾ, ಇನ್ನೊಂದರಲ್ಲಿ ಆಕ್ಸಿಲೇಟರ್ ತುಳಿಯುತ್ತಾ ಸರಸರನೆ ಸ್ಟೇರಿಂಗನ್ನು ಆ ಕಡೆ, ಈ ಕಡೆ ತಿರುಗಿಸುವ, ಅಷ್ಟು ದೊಡ್ಡ ಬಸ್ಸನ್ನು ಎಷ್ಟು ಸರಾಗವಾಗಿ ಹೊರಳಿಸಿ, ಚಲಾಯಿಸುವ ಡ್ರೈವರ್, "ಯಾರ್ರೀ ಅಲ್ಲೀ ಟಿಕೇಟ್ ಟಿಕೇಟ್.. ಹೋಗ್ರೀ.. ಒಳಗಡೆ ನಡೀರ್ರೀ.." ಎಂದು ಆಜ್ಞಾಪಿಸುತ್ತಾ ಬಣ್ಣದ ಪುಸ್ತಕದಿಂದ ಟಿಕೇಟು ಹರಿದುಕೊಡುವ ಕಂಡಕ್ಟರ್ ಹಾಗೂ ಓಡುವ ಬಸ್ಸಿನ ಬಾಗಿಲಿನಲ್ಲಿ ನಿಂತು, ಬೀಸಿಬರುವ ಗಾಳಿಗೆ ತನ್ನ ಕೂದಲ ಹಾರಿಬಿಟ್ಟುಕೊಂಡು "ಆರಗ, ನೊಣಬೂರ್, ಅರಳಸುರಳಿ, ಸೊನಲೆ, ಬಿಳ್ಳೋಡಿ, ಜಯನಗರ, ಹೊಸನಗರಾ" ಎಂದು ವಿಶಿಷ್ಠ ರಾಗವೊಂದರಲ್ಲಿ ಕೂಗುವ ಕ್ಲೀನರ್.. ಈ ಮೂವರನ್ನು ಅನುಕರಣೆ ಮಾಡದ ಹೊರತು ಊರಿನ ಯಾವೊಬ್ಬ ಪೋರನ ಬಾಲ್ಯವೂ ಸಂಪನ್ನವಾಗುವುದೇ ಇಲ್ಲ! ಅದರಲ್ಲೂ ಕಂಡಕ್ಟರ್ ನ ಕೈಯಲ್ಲಿರುವ ಟಿಕೇಟು ಪುಸ್ತಕ ಹಾಗೂ ಅದರ ಪುಟಗಳ ನಡುವೆ ಅವಿತಿರುವ ಕಾರ್ಬನ್ ಚೀಟಿಗಳಂತೂ ಶಾಲಾ ಮಕ್ಕಳ ದೃಷ್ಟಿಯಲ್ಲಿ ಜಗತ್ತಿನ ಅದ್ಭುತಗಳ ಪಟ್ಟಿಗೆ ಸೇರುವಂತಹಾ ವಸ್ತುಗಳು. ನಿರ್ವಾಹಕ ಎಸೆದುಹೋಗುವ ಖಾಲಿಯಾದ ಟಿಕೆಟ್ ಪುಸ್ತಕ ಹಾಗೂ ಮಂದವಾದ ಕಾರ್ಬನ್ ಹಾಳೆಗಳನ್ನು ಎತ್ತಿಕೊಳ್ಳುವುದಕ್ಕೆ ಹುಡುಗರ ನಡುವೆ ನಡೆಯುವಷ್ಟು ಪೈಪೋಟಿ ಪ್ರಧಾನ ಮಂತ್ರಿಗಳ ಕುರ್ಚಿಗಾಗಿಯೂ ನಡೆಯಲಿಕ್ಕಿಲ್ಲ!
*****************
ಮೇಲು-ಕೀಳುಗಳನ್ನೂ, ಪುರುಷ-ಸ್ತ್ರೀ ಎಂಬ ಭೇದ-ಭಾವಗಳನ್ನೂ ಮೌನವಾಗಿಯೇ ಮೀರುವ ಬಸ್ಸು ಕೆಳಗಿನ ಕೇರಿಯ ನಾಗಿಯನ್ನೂ ಹಾಗೂ ಮೇಲಿನಮಕ್ಕಿಯ ಶಾಂತಕ್ಕನನ್ನೂ ಒಟ್ಟಿಗೇ ಕೂರಿಸಿಕೊಂಡು ಸಂತೆಗೆ ಕರೆದೊಯ್ಯುತ್ತದೆ. ಮಹಬೂಬ ಸಾಬರ ಟೊಪ್ಪಿಯೂ, ರಾಮಾಶಾಸ್ತ್ರಿಗಳ ಶಲ್ಯವೂ ಅಡ್ಡಸೀಟಿನಲ್ಲಿ ಒಟ್ಟಿಗೇ ಕುಳಿತು ಡ್ರೈವರ್ ಡಿಸೋಜನ ಜೊತೆ ಪಟ್ಟಂಗ ಹೊಡೆಯುವ ಸಾಮರಸ್ಯದ ದೃಶ್ಯ ಕಂಡುಬರುವುದು ಬಸ್ಸಿನಲ್ಲೇ. ಅಷ್ಟೇ ಅಲ್ಲ, ಒಂದು ವಾರದಿಂದ ಅದೇಕೋ ಸರಿಯಾಗಿ ಮೇವು ತಿನ್ನದೆ ಕುಗುರುತ್ತಿರುವ ಊರಿನ ಕುರಿ, ಕೋಳಿ, ಟಗರುಗಳನ್ನೆಲ್ಲ ಟಿಕೆಟ್ ರಹಿತವಾಗಿ ಹೊತ್ತೊಯ್ದು ಪಶುಪಾಲನಾ ಆಸ್ಪತ್ರೆಗೆ ತಲುಪಿಸಿ ಪ್ರಾಣಿದಯೆ ಮೆರೆಯುವುದೂ ಸಹಾ ಬಸ್ಸೇ. ಇಂತಿಪ್ಪ ಅದು ಒಂದರ್ಥದಲ್ಲಿ ಭೂಮಿಯಂತೆಯೇ ಸಹನಾಮಯಿ. ಕಡಲೆಕಾಯಿ ತಿಂದು ಸಿಪ್ಪೆ ಎಸೆದರೂ, ಎಲೆಡಕೆ ಉಗುಳಿ ತನ್ನ ಹೊರಮೈಯನ್ನು ಗಲೀಜು ಮಾಡಿದರೂ, ಸೀಟಿನ ಸ್ಪಂಜು ಕಿತ್ತು ಗಾಯಗೊಳಿಸಿದರೂ ಅದು ಕೋಪಿಸಿಕೊಳ್ಳುವುದಿಲ್ಲ. ತಾವೇ ಎಲೆಅಡಿಕೆ, ಪಾನ್ ಪರಾಗ್, ಗುಟ್ಕಾ ಅಗಿದು ಉಗುಳಿ ಅಂದಗೆಡಿಸಿದ ಬಸ್ಸನ್ನು ಹೊರಗಿನಿಂದ ನೋಡಿದ ಜನ ‘ಥೂ ಎಷ್ಟು ಗಲೀಜಾಗಿದೆ’ ಎಂದು ತಾವೇ ತೆಗಳಿ ಅವಮಾನಿಸಿದಾಗಲೂ ಅದು ಬೇಸರಗೊಳ್ಳುವುದಿಲ್ಲ. ಮಳೆಯ ಹನಿಗೋ, ಹೊಳೆಯ ನೀರಿಗೋ ತನ್ನನ್ನು ಒಡ್ಡಿಕೊಂಡು ಸ್ವಚ್ಛವಾಗಿ ಮತ್ತದೇ ಪ್ರಯಾಣಿಕರ ಬಳಿಗೆ ಮರಳಿಬರುತ್ತದೆ.
ಹೀಗೆ ಸಮತೆ, ಸಹನೆ ಮೆರೆಯುವ ಬಸ್ಸಿನ ಹೃದಯ ಅಷ್ಟೇ ಗಾಢವಾಗಿ ಪ್ರೀತಿ-ಪ್ರೇಮಗಳಿಗೂ ಮಿಡಿಯುತ್ತದೆ. ಪ್ರತಿದಿನವೂ ಅದರ ಸೀಟುಗಳ ಬೆನ್ನಿನಲ್ಲಿ ನೂರಾರು ಪ್ರೀತಿಯ ಅಕ್ಷರಗಳು ಅಚ್ಚಾಗುತ್ತವೆ. ಹತಾಶ ಪ್ರೇಮಿಯೊಬ್ಬ ತಾನು ಮನದಲ್ಲೇ ಆರಾಧಿಸುತ್ತಿರುವ ಪ್ರೇಯಸಿಗೆ ಕೊನೆಗೂ ಹೇಳಲಾಗದ ಮಾತೊಂದನ್ನು ಬಸ್ಸಿನ ಸೀಟಿನ ಹಿಂಭಾಗದಲ್ಲಿ ಕೆತ್ತಿ ಹಗುರಾಗುತ್ತಿದ್ದರೆ ಅವನ ವೇದನೆಗಳನ್ನು ತನ್ನ ಹೃದಯಕ್ಕೆ ಬಸಿದುಕೊಳ್ಳುವ ಬಸ್ಸು ಹೃದಯತುಂಬಿ ಭಾರವಾಗುತ್ತದೆ. ಮುಂದೊಂದು ದಿನ ಅದೇ ಸೀಟಿನಲ್ಲಿ ಕುಳಿತ ಅವನ ಪ್ರೇಯಸಿ ಹುಡುಗಿ ಅದು ತನಗಾಗಿಯೇ ಬರೆದ ಸಾಲೆಂಬುದು ಗೊತ್ತಿಲ್ಲದೆಯೇ ಆ ಅಕ್ಷರಗಳ ಮೇಲೆ ಕೈಯಾಡಿಸಿ ಮುಗುಳ್ನಕ್ಕಾಗ ಬಸ್ಸಿನ ಗಾಜುಗಣ್ಣುಗಳ ಮೇಲೆ ಹನಿಗಳೆರೆಡು ಮೂಡಿ ಜಾರುತ್ತವೆ.
***************

ಸದಾ ಜನರನ್ನು ಹೊತ್ತು ತಿರುಗುವ ಬಸ್ಸಿಗೆ ಆಗಾಗ ಜನರಿಂದ ಸೇವೆ ಮಾಡಿಸಿಕೊಳ್ಳುವ ಮನಸ್ಸಾಗುತ್ತದೆ. ಹಾಗನಿಸಿದಾಗೆಲ್ಲ ಅದು ರಸ್ತೆಯ ನಡುಮಧ್ಯದಲ್ಲಿ ಇದ್ದಕ್ಕಿದ್ದಂತೆಯೇ ನಿಂತುಬಿಡುತ್ತದೆ. ಗಾಳಿಯಿಲ್ಲ, ಮಳೆಯಿಲ್ಲ, ಚಕ್ರದಡಿಯಲ್ಲಿ ಚಿಕ್ಕ ಮುಳ್ಳೂ ಇಲ್ಲ. ಬಸ್ಸು ಮಾತ್ರ ರಾಜರ ಕಾಲದ ಶಿಲಾಕುದುರೆಯಂತೆ ದಾರಿ ಮಧ್ಯದಲ್ಲಿ ಸ್ತಬ್ದವಾಗಿಬಿಟ್ಟಿದೆ. ಡ್ರೈವರ್ ಕೀಲಿ ತಿರುಗಿಸಿ, ಬಟನ್ ಒತ್ತಿ, ಗೇರು ಬದಲಿಸಿ ಎಷ್ಟೇ ಪರಿಪರಿಯಾಗಿ ರಮಿಸಿದರೂ ಅದು ಸ್ಟಾರ್ಟ್ ಆಗುವುದೇ ಇಲ್ಲ. ಬದಲಿಗೆ ಗುರ್ ಗುರ್ ಎಂದು ಚಾಲೂ ಆಗಲು ಪ್ರಯತ್ನಿಸುತ್ತಿರುವಂತೆ ನಟಿಸತೊಡಗುತ್ತದೆ. ಕೊನೆಗೆ ಒಳಗಿರುವ ಜನರ ಪೈಕಿ ಅರ್ಧದಷ್ಟು ಗಂಡಸರು ಕೆಳಗಿಳಿದು, ತಮ್ಮ ಪಂಚೆ, ಲುಂಗಿಗಳನ್ನು ಮೇಲೆಕಟ್ಟಿ ಬಸ್ಸಿನ ಬೆನ್ನಿಗೆ ಕೈಕೊಡುತ್ತಾರೆ.
ಅಲ್ಲಲ್ಲಣ್ಣ… ಐಸ್ಸಾ… ಏರಿ ಪಕ್ಡಾ…ಐಸ್ಸಾ….ಜೋರಾಗ್ ತಳ್ಳು… ಐಸ್ಸಾ...ಇನ್ನೂ ತಳ್ಳು…ಐಸ್ಸಾ….
ಹಾಡುತ್ತಾ ತಳ್ಳುತ್ತಾ ಒಂದಷ್ಟು ದೂರ ಹಾಗೇ ಮುಂದೆ ಸಾಗುತ್ತದೆ. ಕೊನೆಗೂ ಅವರೆಲ್ಲರ ಬಕಾಪ್, ಭಲಾ, ಶಹಬ್ಬಾಶ್ ಗಳಿಗೆ ಕರಗಿದ ಬಸ್ಸು ಚಾಲೂ ಆಗಿ ರೊಂಯ್ ಎಂದು ಕೆನೆಯುತ್ತದೆ. ಇಷ್ಟು ಹೊತ್ತು ತಳ್ಳಿ ತಳಕಂಬಳಕ ಆದವರೆಲ್ಲ ಹೋ ಎಂದು ಸಂಭ್ರಮಿಸಿ ತಲೆಗೆ ಕಟ್ಟಿಕೊಂಡಿದ್ದ ಟವಲ್ ಬಿಚ್ಚುತ್ತಾ ಬಸ್ಸಿನೊಳಗೆ ನುಗ್ಗುತ್ತಾರೆ. ಮೈಮುರಿದಂತೆ ಅಲ್ಲಾಡುವ ಬಸ್ಸು ಭರ್ರೋ ಎನ್ನುತ್ತಾ ಮುನ್ನುಗ್ಗುತ್ತದೆ.
********** ****
ಬಸ್ಸಿಗೆ ಎರೆಡು ಮನೆ: ಒಂದು ಆಚೆ ತುದಿಯ ನಿಲ್ದಾಣವಾದರೆ ಇನ್ನೊಂದು ಈಚೆ ತುದಿಯದು. ಎರೆಡೂ ಬಿಟ್ಟುಬಂದ ಮನೆಗಳು; ಎರೆಡೂ ಸೇರಬೇಕಿರುವ ಮನೆಗಳು. ಬಸ್ಸು ಯಾವ ನಿಲ್ದಾಣಕ್ಕೂ ಸೇರಿದುದಲ್ಲ. ತುಳಿದುಬರುವ ರಸ್ತೆಗೂ ಅದು ಸ್ವಂತವಾಗುವುದಿಲ್ಲ. ನಿಲ್ಲುವ ಡಿಪೋಗೂ ಅದು ದಕ್ಕುವುದಿಲ್ಲ. ‘ಆಗು ನೀ ಅನಿಕೇತನ’ ಎಂಬ ಕವಿವಾಣಿಯನ್ನು ಕಾಯಾ, ವಾಚಾ, ಮನಸಾ ಪಾಲಿಸುವ ಬಸ್ಸು ಓಡುತ್ತಲೇ ಇರುವ ಕಾಲದ ಪ್ರತೀಕ. ಊರು, ತಾಲೋಕು, ಜಿಲ್ಲೆ, ರಾಜ್ಯಗಳೆಲ್ಲದರ ಎಲ್ಲೆ ಮೀರಿ ಸಾಗುವ ಅದು ಮಲೆನಾಡಿನ ಮಹಾಮಳೆಯಲ್ಲಿ ನೆನೆದಿದೆ. ಬಯಲುಸೀಮೆಯ ಬರಗಾಲದಲ್ಲಿ ಒಣಗಿದೆ ಹಾಗೂ ಕರಾವಳಿಯ ಕಡಲಿನಲೆಗಳನ್ನೂ ಕಂಡಿದೆ. ಬೇರೆಬೇರೆ ಊರುಗಳಿಂದ ಒಂದೇ ಗಮ್ಯಕ್ಕೆ ಬರುವ ಹಾಗೂ ಒಂದೇ ನೆಲೆಯಿಂದ ಬೇರೆ ಬೇರೆ ಊರುಗಳಿಗೆ ಹೋಗುವ ಬಸ್ಸುಗಳು ಮಧ್ಯದ ನಿಲ್ದಾಣದಲ್ಲೆಲ್ಲೋ ಸಂಧಿಸುತ್ತವೆ. ಡ್ರೈವರ್, ಕಂಡಕ್ಟರ್, ಪ್ರಯಾಣಿಕರುಗಳೆಲ್ಲ ಟೀ, ಕಾಫಿ, ಊಟಗಳಿಗಾಗಿ ಇಳಿದುಹೋದಾಗ ಅಕ್ಕಪಕ್ಕ ನಿಂತು ಅವು ಒಂದಕ್ಕೊಂದು ಮಾತನಾಡಿಕೊಳ್ಳುತ್ತವೆ. ಸಾಗಿಬಂದ ದಾರಿಯಲ್ಲಿ ತಾವು ಕಂಡ ವಿಸ್ಮಯಗಳನ್ನು ಪರಸ್ಪರ ಹಂಚಿಕೊಳ್ಳುತ್ತವೆ. ಎಪ್ಪತ್ತು ದಾಟಿದ ಅಜ್ಜನೊಬ್ಬನಿಗೆ ತಿಳಿದಿರುವಷ್ಟೇ ಸ್ವಾರಸ್ಯಕರ ಕಥೆಗಳು ಬಸ್ಸಿಗೂ ತಿಳಿದಿದೆ. ಕಾಡಿನ ನಡುವೆ ವಾಲಿ ಬಿದ್ದ ಅಗಾಧ ಗಾತ್ರದ ಮರವೊಂದರಿಂದ ಸ್ವಲ್ಪದರಲ್ಲಿ ಪಾರಾದ ಅದ್ಭುತ ಕಥೆ, ನಡುರಾತ್ರೆಯಲ್ಲಿ ಹೆದ್ದಾರಿಯಲ್ಲಿ ಸಾಗಿಬರುವಾಗ ದಾರಿಗಡ್ಡವಾಗಿ ಹುಲಿಯೊಂದು ಛಂಗನೆ ನೆಗೆದುಬಂದ ಭೀಭತ್ಸಕರ ಕಥೆ, ಕಾಡಾನೆಯೊಂದು ತನ್ನನ್ನು ಅಡ್ಡಗಟ್ಟಿದ ಭಯಾನಕ ಕಥೆ, ಕುಸಿಯುವ ಮೊದಲೇ ತಾನು ಓಡಿದಾಟಿದ ಗತಕಾಲದ ಸೇತುವೆಯೊಂದರ ಸ್ವಾರಸ್ಯಕರ ಕಥೆ, ಚಕ್ರದ ಮಟ್ಟಕ್ಕೆ ಹರಿಯುತ್ತಿದ್ದ ನೆರೆನೀರನ್ನು ಸೀಳಿಕೊಂಡು ಪಾರಾಗಿಬಂದ ಸಾಹಸದ ಕಥೆ, ಜಾರುವ ಘಾಟಿಯ ತಿರುವಿನಂಚಿನಲ್ಲಿ, ಕೂದಲೆಳೆಯಷ್ಟೇ ಅಂತರದಲ್ಲಿ ಕಂಡ ಸಾವಿನ ಅಗಾಧತೆಯ ಕಥೆ, ಗಗನೆತ್ತರಕ್ಕೆ ತಲೆಯೆತ್ತಿನಿಂತು ಅಣಕಿಸಿದ್ದ ಪರ್ವತವೊಂದು ಹತ್ತಿದ ನಂತರ ತನ್ನ ಕಾಲಡಿಗೆ ಬಂದ ಸ್ಪೂರ್ತಿದಾಯಕ ಕಥೆ, ಎಷ್ಟೇ ಪ್ರಯತ್ನಿಸಿದರೂ ತನ್ನಿಂದ ತಪ್ಪಿಸಲಾಗದೇಹೋದ, ತನ್ನ ಚಕ್ರಕ್ಕೆ ಸಿಕ್ಕಿ ಸತ್ತ ಮರಿಜಿಂಕೆಯ ಕರುಳು ಕಲಕುವ ಕಥೆ… ಹೀಗೆ ಹೇಳಲಿಕ್ಕೆ ಬಸ್ಸಿನ ಬಳಿ ಸಾವಿರ ಕಥೆಗಳಿವೆ. ನೆನೆದು ಕೊರಗಲಿಕ್ಕೆ ನೂರಾರು ವ್ಯಥಗಳಿವೆ. ಕೊನೆಯ ನಿಲ್ದಾಣದ ನೀರವ ಮೌನದಲ್ಲಿ ನಿಂತು ಅದು ತನ್ನಿಂದ ಹತವಾದ ಜೀವಗಳ ನೆನೆದು ಮಮ್ಮಲಮರುಗುತ್ತದೆ. ಉಸ್ಸೆಂದು ನಿಟ್ಟಿಸಿರಿಟ್ಟು ಹಗುರಾಗಲು ಯತ್ನಿಸುತ್ತದೆ. ಇಂತಹಾ ಇನ್ನೊಂದು ಹತ್ಯೆಯನ್ನೂ ಮಾಡಿಸಬೇಡವೆಂದು ಒಳಗೆ ಹಾರಹಾಕಿದ ಫೋಟೋದಲ್ಲಿ ನಿಂತಿರುವ ದೇವರನ್ನು ಬೇಡುತ್ತದೆ. ತಾನು ಕಂಡ ಸೃಷ್ಟಿಯ ಅಗಾಧತೆ ಹಾಗೂ ಬದುಕಿನ ಕ್ಷಣಿಕತೆಗಳ ಬಗ್ಗೆ ವೇದಾಂತಿಯಂತೆ ಚಿಂತಿಸುತ್ತದೆ.
*************
ಬಸ್ಸಿಗೀಗ ಪೈಪೋಟಿ ಜಾಸ್ತಿಯಾಗಿದೆ. ಸಂದಿಗೊಂದಿಗಳಲ್ಲಿ ನುಗ್ಗಿ ಬಹುಬೇಗ ಮನೆ ತಲುಪಿಸುವ ಬೈಕುಗಳು, ಕರೆದಲ್ಲಿಗೇ ಬಂದು ಕರೆದೊಯ್ಯುವ ಆಟೋ, ಟ್ಯಾಕ್ಸಿ, ಓಲಾ, ಊಬರ್ ಗಳು, ಪಕ್ಕದ ಸೀಟಿನಲ್ಲಿ ನಮ್ಮ ಬಿಂಕ-ಬಿಗುಮಾನಗಳು ಮಾತ್ರ ಕೂರಬಹುದಾದ ಒಂಟಿ ಪ್ರಯಾಣದ ಕಾರುಗಳು.. ಇವೆಲ್ಲದರ ಆಬ್ಬರಾಟಕ್ಕೆ ಸಿಲುಕಿದೆ. ಪುಟ್ಟ ಕಾರಿನೊಳಗಿನ ಮುಚ್ಚಿದ ಕಿಟಕಿಯಿಂದ ಕಾಣುವ ಜಗತ್ತು ಕಿರಿದಾಗುತ್ತಿದೆ. ಕೊನೆಯ ಬಸ್ಸು ತಪ್ಪಿಹೋಗುತ್ತದೆನ್ನುವ ಭಯ ಇಲ್ಲವಾಗಿ ನಮ್ಮನ್ನು ಹಿಡಿಯುವವರಿಲ್ಲವಾಗಿದೆ. ಕಂಡಕ್ಟರ್ ಎಸೆದು ಹೋಗುವ ಟಿಕೆಟ್ ಪುಸ್ತಕ ತನ್ನ ಅಂದ ಕಳೆದುಕೊಂಡು ಬಾಲ್ಯವೇ ಬಣ್ಣಗೆಟ್ಟಂತಾಗಿದೆ. ಅಂದು ಒಂದೇ ಸೀಟಿನಲ್ಲಿ ಕುಳಿತು ಪ್ರಯಾಣಿಸಿದ್ದ ಮಂದಿ ಬೇರೆ ಬೇರೆ ಕಾರುಗಳಲ್ಲಿ ಕುಳಿತು ದೂರದೂರ ಸಾಗುತ್ತಿದ್ದಾರೆ. ತಾನು ಹಾಗೂ ತಾನಷ್ಟೇ ಕುಳಿತು ಪ್ರಯಾಣಿಸುತ್ತಿರುವ ಮನುಷ್ಯ ಒಂಟಿಯಾಗುತ್ತಿದ್ದಾನೆ. ಬೆವರಲು ಬಿಡದ ಎಸಿ, ಕೂಲರ್ ಗಳೊಳಗೆ ತಣ್ಣಗೆ ಕುಳಿತು ನರಳುತ್ತಿದ್ದಾನೆ. ತನಗೇ ಗೊತ್ತಿಲ್ಲದಂತೆ, ತುಂಬಿ ಬರಲಿರುವ ಊರಿನ ಆ ಹಳೇ ಬಸ್ಸಿಗಾಗಿ ಕಾಯುತ್ತಿದ್ದಾನೆ.
ದೂರ ದಾರಿಯ ತಿರುವಿನಲ್ಲಿ ವಾಲಾಡುವ ಚುಕ್ಕೆಯೊಂದು ಸಣ್ಣಗೆ ಮೂಡತೊಡಗಿದೆ..
(ದಿನಾಂಕ 17.11.2019ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ