ಬುಧವಾರ, ನವೆಂಬರ್ 27, 2019

ಅಜ್ಜಿ ಹೇಳಿದ ಕಾಲ್ದೋಶದ ಕಥೆ



ಹೊತ್ತು ಮುಳುಗುವ ಸಮಯ‌. ಸುತ್ತಲೂ ಅಭೇದ್ಯ ಕಾಡಿನಿಂದಾವೃತವಾಗಿರುವ ಆ ಕಾಲುದಾರಿಯ ಮೇಲೆ ಇಕ್ಕೆಲಗಳಲ್ಲೂ ದಟ್ಟವಾದ ಕೋಟೆ ಕಟ್ಟಿರುವ ಮರಗಳ ನೆರಳು ಗಾಢವಾಗಿ ಹಾಸಿದೆ. ಆಗಲೇ ಮುಳುಗಿದ ಸೂರ್ಯ ಉಳಿಸಿ ಹೋದ ಅಲ್ಪ ಬೆಳಕೂ ಕವಿಯುತ್ತಿರುವ ಕತ್ತಲಿನಲ್ಲಿ ಲೀನವಾಗುತ್ತಿದೆ. ಗಾಳಿಯೂ ಬೀಸುವುದನ್ನು ಮರೆತು ಗಪ್ ಚಿಪ್ ಆಗಿರುವ ಆ ವಾತಾವರಣವನ್ನು ಭಯಾನಕ ಮೌನವೊಂದು ಆವರಿಸಿದೆ. ಅಲ್ಲಲ್ಲಿ ಮರಗಳ ಕಾಂಡಗಳಿಗೆ ಅಂಟಿಕೊಂಡಿರುವ ಜೀರುಂಡೆಗಳು ದೀರ್ಘವಾಗಿ ಶ್ವಾಸವೆಳೆದುಕೊಳ್ಳುತ್ತಾ ಭಯಾನಕ ರಾಗ ಹಾಡಲು ತಯಾರಿಮಾಡಿಕೊಳ್ಳುತ್ತಿವೆ. ದೂರದಲ್ಲೆಲ್ಲೋ ನೀರಿನ ಒರತೆಯೊಂದು ಬಂಡೆಗಳ ಮೇಲೆ ಧುಮುಕುತ್ತಿರುವ ಧ್ವನಿ ಆ ವಾತಾವರಣದ ಗಂಭೀರತೆಗೆ ಸಿಕ್ಕು ವಿಕಾರವಾಗಿ ಕೇಳುತ್ತಿದೆ.

ಅವರು ಬಿರಬಿರನೆ ನಡೆಯುತ್ತಿದ್ದಾರೆ.

ಅವರ ಹೆಸರೇನೆಂಬುದು ಯಾರಿಗೂ ಗೊತ್ತಿಲ್ಲ. ಊರನವರೆಲ್ಲರೂ ಅವರನ್ನು 'ಸಂಭಾವನೆ ಭಟ್ಟರು' ಎಂದೇ ಕರೆಯುತ್ತಾರೆ. ಊರಿಂದ ಊರಿಗೆ ತಿರುಗುತ್ತಾ, ಅರಿಶಿನ, ಕುಂಕುಮ, ವಿಭೂತಿಯೇ ಮುಂತಾದ ಪೂಜಾ ಸಾಮಗ್ರಿಗಳನ್ನು ಮನೆಮನೆಗಳಿಗೆ ಮಾರುವ ಅವರಿಗೆ ಪ್ರತಿಯಾಗಿ ಜನರು ಕೊಡುವ ಅಕ್ಕಿ ಹಾಗೂ ಹಾಕುವ ಆ ಹೊತ್ತಿನ ಊಟಗಳೇ ಜೀವನೋಪಾಯಗಳು‌‌. ಹೆಚ್ಚೂ ಕಡಿಮೆ ಮಲೆನಾಡು, ಪಶ್ಚಿಮ ಘಟ್ಟಗಳ ಎಲ್ಲಾ ಮನೆಬಾಗಿಲಿಗೂ ಹೋಗುವ ಅವರಿಗೆ ಒಮ್ಮೆ ಹೋದ ಹಳ್ಳಿಗೆ ಮತ್ತೆ ಹೋಗಲು ವರ್ಷಗಳೇ ಹಿಡಿಯುತ್ತವೆ. ಇಂತಿಪ್ಪ ಸಂಭಾವನೆ ಭಟ್ಟರು ಈ ದಿನ ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಸರಿಯಾಗಿ ಮುಖ್ಯರಸ್ತೆಯಲ್ಲಿ ಪಟ್ಟಣದ ಬಸ್ಸಿಂದಿಳಿದಿದ್ದರು. ಬಸ್ಸೂ ಸಹಾ ಇಂದಿನ ಅಮವಾಸ್ಯೆಗೆ ಹೆದರಿದಂತೆ ಕತ್ತಲಾಗುವುದರೊಳಗೆ ನಿಲ್ದಾಣ ಸೇರಿಕೊಳ್ಳಬೇಕೆಂಬ ಭಯಕ್ಕೇನೋ ಎಂಬಂತೆ ಅವರನ್ನಿಳಿಸಿ ವೇಗವಾಗಿ ಹೊರಟುಹೋಗಿತ್ತು. ಅವರೀಗ ಇಡೀ ನಾಲ್ಕೈದು ಕಿಲೋಮೀಟರ್ ವ್ಯಾಪ್ತಿಗೆ ಒಂದೇ ಒಂದು ಮನೆಯಿರುವ ಆ ಒಂಟಿ ಮನೆ ಕೇರಿಯತ್ತ ನಡೆಯುತ್ತಿದ್ದಾರೆ. ಅವರಿಗೆ ಗೊತ್ತಿದೆ: ಒಂದು ಸಲ ಕತ್ತಲು ಪೂರ್ತಿಯಾಗಿ ಆವರಿಸಿತೆಂದರೆ ಈ ದಾರಿ ದುಪ್ಪಟ್ಟು ಅಪಾಯಕಾರಿಯಾಗುತ್ತದೆ! ಹೇಳೀಕೇಳೀ ಇಂದು  ಅಮವಾಸ್ಯೆ‌. ಹನಿ ಬೆಳಕೂ ಇಲ್ಲದೆ ಕಗ್ಗತ್ತಲ ಆಕೃತಿಗಳಂತೆ ತನ್ನ ಸುತ್ತಲೂ ಭಯಾನಕವಾಗಿ ನಿಂತಿರುವ ಪೊದೆ-ಮಟ್ಟಿಗಳ ಪೈಕಿ ಯಾವುದರಿಂದ ಬೇಕಾದರೂ ಹುಲಿಯೋ, ಚಿರತೆಯೋ ನುಗ್ಗಿ ತನ್ನ ಮೇಲೆರಗಬಹುದು. ಅವಾದರೂ ಪರವಾಗಿಲ್ಲ, ಹೆಸರು ಹೇಳಬಾರದ, ಪ್ರೇತವೆಂಬ ಆ ಎರೆಡಕ್ಷರದ ಸೃಷ್ಟಿಯೇನಾದರೂ ಅಟಕಾಯಿಸಿಕೊಂಡಿತೆಂದರೆ... ಇವತ್ತಿಗೆ ತನ್ನ ಕಥೆ ಮುಗಿಯಿತೆಂದೇ ಅರ್ಥ!

ಭೂತಗಳ ಸಂಗತಿ ನೆನಪಾಗುತ್ತಿದ್ದಂತೆಯೇ ಸಂಭಾವನೆ ಭಟ್ಟರು ತಮ್ಮ ನಡಿಗೆಯ ವೇಗವನ್ನು ತೀವ್ರಗೊಳಿಸಿದರು. ಗುಡ್ಡದ ಮೇಲೆಲ್ಲಿಂದಲೋ ಇಳಿದು ಬಂಡೆಗಳ ಮೇಲೆ ಜಾರುತ್ತಾ ದಾರಿಗಡ್ಡವಾಗಿ ಹರಿದುಹೋಗುವ ಹಳ್ಳದ ಸದ್ದು ಬರುಬರುತ್ತಾ ಸಮೀಪವಾಗುತ್ತಾ ಬಂದು ಕೊನೆಗೆ ಕಣ್ಣೆದುರೇ ಪ್ರತ್ಯಕ್ಷವಾಯಿತು. ಆ ಹಳ್ಳವೊಂದನ್ನು ದಾಟಿದರೆ ಮುಗಿಯುತು, ಅಲ್ಲಿಂದಾಚೆಗೆ ಅರ್ಧ ಫರ್ಲಾಂಗಿನಲ್ಲೇ ತಾವು ಹೋಗಬೇಕಿರುವ ಮನೆ ಸಿಗುತ್ತದೆ. ಅಲ್ಲಿಗೆ ತಾವು ಸುರಕ್ಷಿತ! ಹಾಗಂದುಕೊಳ್ಳುತ್ತಾ ಭಟ್ಟರು ತಮ್ಮ ಪಂಚೆಯನ್ನು ಎತ್ತಿಕಟ್ಟಿಕೊಂಡು ತಣ್ಣಗೆ ಹರಿಯುತ್ತಿದ್ದ ನೀರಿನಲ್ಲಿ ಹೆಜ್ಜೆಯಿಟ್ಟರು. ಸಂಜೆಯ ಛಳಿ ತಾಕಿದ್ದ ನೀರು ಮತ್ತಷ್ಟು ಶೀತಲವಾಗಿತ್ತು. ಮೊಣಕಾಲಿನ ತನಕ ತುಂಬಿ ಹರಿಯುತ್ತಿರುವ ಹಳ್ಳವನ್ನು ತಳಕ್ ತಳಕ್ ಸದ್ದು ಮಾಡುತ್ತಾ ದಾಟಿ 'ಅಬ್ಬಾ' ಎಂದು ಉಸಿರೆಳೆದುಕೊಂಡರು.

ಆಗ ಮಲೆನಾಡಿನ ಪರಿಸ್ಥತಿಯಿದ್ದುದೇ ಹಾಗೆ. ಅದು ಹತ್ತೊಂಭತ್ತನೇ ಶತಮಾನದ ದ್ವಿತೀಯಾರ್ಧ ಭಾಗ. ಆ ಕಾಲದಲ್ಲಿ ಕತ್ತಲೆಂದರೆ ಘೋರಾಂಡ ಕತ್ತಲೆ. ನಿರ್ಜನವೆಂದರೆ ನರಪ್ರಾಣಿಯೂ ಇಲ್ಲದ ನಿರ್ಜನ. ಕಾಡೆಂದರೆ ಬೆಳಕನ್ನೂ ಒಳಗೆ ಬಿಡದಷ್ಟು ದಟ್ಟ ಕಾಡು! ಆಗ ಈಗಿನಂತೆ ಹತ್ತತ್ತು ನಿಮಿಷಕ್ಕೊಂದು ಬಸ್ಸುಗಳಿರಲಿಲ್ಲ. ಓಡಾಡಲಿಕ್ಕೆ ನೆಟ್ಟಗಿನ ರಸ್ತೆಗಳೇ ಇರಲಿಲ್ಲ. ಎಲ್ಲೋ ಹಗಲಿಗೊಂದು, ರಾತ್ರೆಗೊಂದು ಬರುವ ಬಸ್ಸಿಗೆ ಟಾರು ರಸ್ತೆಯೇ ಯಾಕೆ ಬೇಕು ಹೇಳಿ? ಹಾಗೆ ಬರುತ್ತಿದ್ದ ಬಸ್ಸುಗಳಾದರೋ ಪ್ರಯಾಣಿಕರನ್ನು ನೇರ ಅವರವರ ಮನೆ ಬಾಗಿಲಿಗೆ ಬಿಡುತ್ತಿರಲಿಲ್ಲ. ಮನೆಯಿಂದ ಎಷ್ಟೋ ಕಿಲೋಮೀಟರ್ ದೂರದಲ್ಲಿರುವ ರಹದಾರಿಯಲ್ಲಿ ಅವರನ್ನಿಳಿಸಿ ತನ್ನ ಪಾಡಿಗೆ ತಾನು ಮುಂದೆ ಹೋಗುತ್ತಿತ್ತು. ಅಲ್ಲಿಂದ ಹೊರಟ ಪ್ರಯಾಣಿಕರು ಗುಡ್ಡ ಹತ್ತಿ, ಹೊಳೆದಾಟಿ, ಕಾಡು-ಮಟ್ಟಿಗಳಲ್ಲಿ ಹಾದು ಮನೆ ಸೇರಬೇಕಾಗಿತ್ತು.

ಮಲೆನಾಡಿನಲ್ಲಿ ಮನೆಗಳಿದ್ದದ್ದೂ ಹಾಗೆಯೇ. ಇಲ್ಯಾವುದೋ ಗುಡ್ಡದ ತುದಿಯಲ್ಲಿ ಒಂದು ಮನೆಯಿದ್ದರೆ ಇನ್ನೊಂದು ಅಲ್ಲೆಲ್ಲೋ ಹೊಳೆಯಾಚೆಗಿನ ದಿಬ್ಬದ ಮೇಲಿರುತ್ತಿತ್ತು. ನಡುವೆ ಅಸಂಖ್ಯವಾದ ಮರಗಿಡಗಳ ದಟ್ಟ ಕಾನನ‌. ಸದಾ ತುಂಬಿ ಹರಿಯುವ ರಭಸದ ಹಳ್ಳ-ನದಿಗಳು. ಯಾವ ಅಪಾಯಕರ ಪ್ರಾಣಿಯೇ ಬೇಕಾದರೂ ಅಡಗಿರಬಹುದಾದ ದೈತ್ಯ ಪೊದೆ-ಮಟ್ಟಿಗಳು. ಇಂತಹಾ ವ್ಯ(ಅ)ವಸ್ಥೆಯಲ್ಲಿ ಮನುಷ್ಯರು ಬಿಡಿ, ಸುದ್ದಿ-ವಿಷಯಗಳೂ ಸಹಾ ಒಂದು ಊರಿಂದ ಇನ್ನೊಂದು ಊರಿಗೆ ದಾಟುವುದು ದುರ್ಭರವಾಗಿತ್ತು. ಎಲ್ಲೋ ಯಾರೋ ಸತ್ತ ವಿಷಯ ಅಲ್ಲಿಂದ ಇನ್ನೊಂದೂರಿಗೆ ತಲುಪಬೇಕೆಂದರೆ ಅದನ್ನು ಸ್ವತಃ ಮನುಷ್ಯನೇ ಹೊತ್ತೊಯ್ದು ಹೇಳಬೇಕು. ಹೀಗೆ ಮನುಷ್ಯರಂತೆ ಸುದ್ದಿ, ವಿಷಯಗಳೂ ಸುಲಭವಾಗಿ ಸಂಚರಿಸಲಾರದೆ ಇದ್ದಲ್ಲೇ ಇರುತ್ತಿದ್ದ ಕಾಲವದು.

ಇಂತಿಪ್ಪ ಹೊತ್ತಿನಲ್ಲಿ ಅಂತೂ ಇಂತೂ ಅಪಾಯಕಾರಿ ಕಾಡುದಾರಿಯನ್ನು ದಾಟಿ ಮನುಷ್ಯವಾಸದ ಕನಿಷ್ಠ ಒಂದು ಮನೆಯಾದರೂ ಇರುವ ಸುರಕ್ಷಿತ ವಲಯವನ್ನು ತಲುಪಿದೆನಲ್ಲಾ ಎಂದು ಸಂಭಾವನೆ ಭಟ್ಟರು ನಿಟ್ಟುಸಿರಿಟ್ಟರು. ಆದರೆ ಅವರಿಗೆ ತಿಳಿಯದ ಅತಿಮುಖ್ಯವಾದ ಸಂಗತಿಯೇನೆಂದರೆ..

ಮೃತ್ಯುಕರವಾದ ಪರಮ ಅಪಾಯಕಾರೀ ಕಾರಸ್ಥಾನದೊಳಕ್ಕೆ ಅವರು ಈಗಷ್ಟೇ ಹೆಜ್ಜೆಯಿಟ್ಟಿದ್ದರು!

                  *************

ಅದನ್ನು ಎಲ್ಲರೂ 'ಕಾಲ್ದೋಶ' ಎನ್ನುತ್ತಾರೆ.

ನಂಬಿಕೆಗಳ ಪ್ರಕಾರ ಹುಟ್ಟುವುದಕ್ಕೆ ಹೇಗೆ ಘಳಿಗೆಗಳಿವೆಯೋ ಸಾವಿಗೂ ಹಾಗೇ ಘಳಿಗೆ, ಸಮಯಗಳಿವೆ. ಸರಿಯಾದ ಸಮಯದಲ್ಲಿ ಪ್ರಾಣ ಪಕ್ಷಿ ಹಾರಿಹೋದವರು ನೇರವಾಗಿ ಆ ಲೋಕವನ್ನು ಸೇರಿಕೊಳ್ಳುತ್ತಾರೆ. ಅಂತೆಯೇ ಕೆಟ್ಟ ಘಳಿಗೆಯಲ್ಲಿ ಸತ್ತವರು ಪ್ರೇತಗಳಾಗಿ ಇದೇ ಲೋಕದಲ್ಲಿ ಅಲೆಯತೊಡಗುತ್ತಾರೆ. ಇದು ಸಾಮಾನ್ಯ ಲೆಕ್ಕಾಚಾರ. ಆದರೆ ಇವೆಲ್ಲವನ್ನೂ ಮೀರಿದ ಪರಮ ಕೆಟ್ಟ ಘಳಿಗೆಯೊಂದಿದೆ. ಅಪ್ಪೀತಪ್ಪೀ ಯಾರಾದರೂ ಆ ಕಡುಘಳಿಗೆಯಲ್ಲಿ ಸತ್ತರೆ...

ಅವರು ಸತ್ತ ಏಳನೆಯ ದಿನದಂದು ಭೀಕರ ಕಾಲ್ದೋಶದ ರೂಪದಲ್ಲಿ ಮರಳಿಬರುತ್ತಾರೆ!

ಸತ್ತ ಕಾಲಮಾನದಿಂದ ಉಂಟಾಗುವ ದೋಶವೇ ಕಾಲ ದೋಶ. ಈ ಕಾಲ್ದೋಶವೆಂಬುದು ಎಂತಹಾ ಭೀಕರವೆಂದರೆ ಅದು ಬರುವ ದಿನ ಸತ್ತವನ ಮನೆಮಂದಿಯೆಲ್ಲ ಮನೆಯನ್ನು ಬಿಟ್ಟು ಯಾವುದಾದರೂ ನೆಂಟರ ಮನೆಗೆ ಹೊರಟುಹೋಗುತ್ತಾರೆ. ಮನೆಯವರು ಮಾತ್ರವಲ್ಲ, ಅಲ್ಲಿ ಅಕ್ಕಪಕ್ಕದ ಮನೆಗಳೇನಾದರೂ ಇದ್ದರೆ ಅವರೂ ಸಹಾ ಎರೆಡ್ಮೂರು ದಿನಗಳ ಮಟ್ಟಿಗೆ ಯಾವುದಾದರೂ ನೆಂಟರ ಮನೆಯತ್ತ ಓಟಕೀಳುತ್ತಾರೆ. ಅದರಲ್ಲೂ ಕಾಲ್ದೋಶ ಮನೆಗೆ ಪ್ರವೇಶಿಸುವ ಆ ಏಳನೇ ದಿನ ಅಪ್ಪೀತಪ್ಪಿಯೂ ಯಾರೂ ಆ ಕೇರಿಯತ್ತ ಸುಳಿಯುವುದೇ ಇಲ್ಲ. ಏಕೆಂದರೆ ಆ ದಿನವಿಡೀ ಕಾಲ್ದೋಶ ಆ ಮನೆಯೊಳಗೇ ಓಡಾಡಿಕೊಂಡಿರುತ್ತದೆ. ಗ್ರಹಚಾರ ಕೆಟ್ಟ ಯಾವುದೇ ಮನುಷ್ಯನಾದರೂ ಅದರ ಸಮೀಪಕ್ಕೆ ಸುಳಿದದ್ದೇ ಆದರೆ, ಅವನನ್ನು ಭಯಾನಕವಾಗಿ ಸಾಯಿಸಿ ರಕ್ತ ಕುಡಿಯದ ಹೊರತು ಅದು ಹೊರಟುಹೋಗುವುದಿಲ್ಲ!

ಇಷ್ಟೆಲ್ಲಾ ವಿವರಣೆಗಳ ಹಿಂದಿನ ಅಸಲಿಯತ್ತೇನೆಂದರೆ‌‌‌‌.....

ನಮ್ಮ ಸಂಭಾವನೆ ಭಟ್ಟರು ಧುಸಧುಸನೆ ನಡೆದು ಬರುತ್ತಿದ್ದ ಆ ಒಂಟಿ ಮನೆಗೆ ಅಂದೇ ಕಾಲ್ದೋಶದ ಪ್ರವೇಶವಾಗಿತ್ತು!

                      ************

ತಿಂಗಳ ಕಾಲ ತೀವ್ರವಾಗಿ ಜ್ವರ, ಹೊಟ್ಟೆನೋವುಗಳಿಂದ ಬಳಲಿದ ನಂತರ ಏಳು ತಿಂಗಳ ತುಂಬು ಬಸುರಿಯಾಗಿದ್ದ ಶ್ರೀಧರನ ಹೆಂಡತಿ ಚಂದ್ರಾವತಿ ಕೆಲವೇ ದಿನಗಳ ಕೆಳಗೆ ಸಾವನ್ನಪ್ಪಿದ್ದಳು. ಖಾಯಿಲೆ ಬಂದಿತ್ತಾದರೂ ಅವಳದು ಸಾಯುವ ವಯಸ್ಸಲ್ಲ. ಆಯಸ್ಸು ತುಂಬದ, ಇನ್ನೂ ಬದುಕಿ ಬಾಳಬೇಕಿರುವ ವ್ಯಕ್ತಿ  ಅಕಾಲಿಕ ಮರಣಕ್ಕೀಡಾದರೆ ಪ್ರೇತವಾಗುತ್ತಾನೆ ಎಂಬುದು ನಂಬಿಕೆ‌. ಆದರೆ ಸತ್ತ ಚಂದ್ರಾವತಿಯ ಅಪರ ಕರ್ಮಗಳನ್ನು ಮಾಡಲು ಬಂದ ಪುರೋಹಿತರನ್ನು ಬೆಚ್ಚಿಬೀಳಿಸಿದ ಅಂಶ ಅದಲ್ಲ. ಪರಮ ಕೆಟ್ಟ ಸಮಯದಲ್ಲಿ ಆಕೆಯ ಆತ್ಮ ದೇಹವನ್ನು ತೊರೆದಿತ್ತು. ಅಷ್ಟು ಮಾತ್ರವಲ್ಲದೇ...

ಅದು ಪರಮ ಭೀಕರವಾದ 'ಕಾಲ್ದೋಶ'ದ ಘಳಿಗೆಯಾಗಿತ್ತು!

ಇನ್ನಿಲ್ಲದಂತೆ ಭೀತರಾದ ಪುರೋಹಿತರು ಮನೆಮಂದಿಗೆಲ್ಲಾ ಈ ವಿಷಯವನ್ನು ತಿಳಿಸಿ ಇನ್ನು ನಾಲ್ಕು ದಿನಗಳ ನಂತರ ಎಲ್ಲರೂ ಮನೆಬಿಡಬೇಕೆಂದೂ, ನಂತರ ಮೂರು ದಿನಗಳ ಕಾಲ ಯಾರೂ, ಯಾವ ಕಾರಣಕ್ಕೂ ಮನೆಯ ಸಮೀಪ ಸುಳಿಯಬಾರದೆಂದೂ, ದನಕರುಗಳನ್ನೂ ಅಲ್ಲಿ ಬಿಡದೆ ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕೆಂದೂ ತೀವ್ರವಾಗಿ ಎಚ್ಚರಿಸಿದ್ದರು. ಅಂತೆಯೇ ಚಂದ್ರಾವತಿ ಸತ್ತ ಐದನೇ ದಿನಕ್ಕೆ ಮನೆಮಂದಿಯೆಲ್ಲಾ ಗಂಟು ಮೂಟೆ ಕಟ್ಟಿಕೊಂಡು ಪಕ್ಕದ ಹಳ್ಳಿಯಲ್ಲಿದ್ದ ನೆಂಟರ ಮನೆಯತ್ತ ಮುಖ ಮಾಡಿದ್ದರು. ಅಲ್ಲದೆ ತಮ್ಮ ಮನೆಗೆ ಬರಬಹುದಾದ ಅಕ್ಕಪಕ್ಕದ ಊರು-ಕೇರಿಗಳ ಬಂಧು-ಮಿತ್ರರಿಗೂ ಆ ದಿನ ತಮ್ಮ ಕೇರಿಯತ್ತ ಸುಳಿಯಬಾರದೆಂದು ಗಂಭೀರವಾಗಿ ಎಚ್ಚರಿಸಿದ್ದರು. ಹಾಗೆ ಮೃತ್ಯುಸದೃಶವಾದ ಕಾಲ್ದೋಶದಿಂದ ಎಲ್ಲರನ್ನೂ ಕಾಪಾಡಿದ ನೆಮ್ಮದಿಯಲ್ಲಿ ಮನೆ ಬಿಟ್ಟಿದ್ದರು.

ಆದರೆ ಎರೆಡೋ ಮೂರೋ ವರ್ಷಕ್ಕೊಮ್ಮೆ ಊರಿಗೆ ಬರುವ ಸಂಭಾವನೆ ಭಟ್ಟರು ತಮ್ಮ ಮೃತ್ಯುವನ್ನು ಹುಡುಕಿಕೊಂಡು ಅದೇ ದಿನ ಅಲ್ಲಿಗೆ ಬರಬಹುದೆಂದು ಅವರಿಗಾದರೂ ಏನು ಗೊತ್ತಿತ್ತು?

                    ***********

"ಓಹೋಯ್.. ನಾನು ಸಂಭಾವನೆ ಭಟ್ಟ ಬಂದಿದೀನಿ ಬಾಗ್ಲು ತೆಗಿರೋಯ್"

ಅಂಗಳದ ಉಣುಗೋಲಿನ ಸಮೀಪ ನಿಂತ ಭಟ್ಟರು ಎರೆಡನೇ ಬಾರಿಗೆ ಹಾಗೆಂದು ಕೂಗುಹಾಕಿದರು‌. ಮೂರ್ಸಂಜೆಯ ಹೊತ್ತಿಗೆ ಸಣ್ಣ ದೀಪವನ್ನೂ ಹಚ್ಚದೇ ಮನೆಮಂದಿಯೆಲ್ಲ ಕತ್ತಲಲ್ಲಿರುವುದು ಅವರಲ್ಲಿ ಕೊಂಚ ಅನುಮಾನವನ್ನು ಹುಟ್ಟುಹಾಕಿತ್ತು. ಕಾದು ನಿಂತಿರುವ ತಮ್ಮ ಬೆನ್ನ ಹಿಂದಿನ ಅಂಧಕಾರದಲ್ಲಿ ಯಾರೋ ನಿಂತಿರುವಂತೆ ಅವರಿಗೆ ಭಾಸವಾಗತೊಡಗಿತ್ತು. ಬಗಲಿಗೆ ನೇತುಹಾಕಿಕೊಂಡಿದ್ದ ಜೋಳಿಗೆಯನ್ನು ಕೆಳಗಿಡಲೇ ಬೇಡವೇ ಎಂದು ಯೋಚಿಸುತ್ತಲೇ ಮತ್ತೊಮ್ಮೆ ಕೂಗುಹಾಕಲೆಂದು ಬಾಯಿ ತೆರೆದರು..

ಅಷ್ಟರಲ್ಲಿ ಆ ಮನೆಯ ತೆರೆದ ಬಾಗಿಲ ಹಿಂದಿನ ಕತ್ತಲಿನೊಳಗಿಂದ ಕದಲುತ್ತಾ ಆಕೃತಿಯೊಂದು ಹೊರಬಂತು.

ಭಟ್ಟರ ಎಡಗಣ್ಣೇಕೋ ಪಿಟಪಿಟನೆ ಹೊಡೆದುಕೊಳ್ಳತೊಡಗಿತು. ಈ ಸಂಭಾವನೆ ಭಟ್ಟರ ವಿಶೇಷ ಗುಣವೆಂದರೆ, ಯಾವಾಗಲೋ ಒಮ್ಮೆ ಬರುವುದಾದರೂ ಅವರಿಗೆ ತಾವು ಓಡಾಡುವ ಪ್ರತಿ ಊರು, ಪ್ರತಿ ಮನೆ, ಪ್ರತಿ ಮಂದಿಯ ಬಗ್ಗೆಯೂ ತಿಳಿದಿರುತ್ತದೆ. ಯಾವ ಮನೆಯಲ್ಲಿ ಎಷ್ಟು ಜನರಿದ್ದಾರೆ, ಅವರ ನೆಂಟರಿಷ್ಟರು ಯಾವ ಊರಿನಲ್ಲಿದ್ದಾರೆ ಎಂಬ, ತಮಗೆ ಉಪಯೋಗಕ್ಕೆ ಬರುವ ಪರಿಚಯಗಳನ್ನು ಅವರೆಂದಿಗೂ ಮರೆಯುವುದೇ ಇಲ್ಲ. ಬೇರೆ ಬೇರೆ ಊರಿನ ಬೇರೆ ಬೇರೆ ಮನೆಗಳಿಗೆ ಹೋದಾಗ 'ನಾನು ನಿಮ್ಮ ಸಂಬಂಧಿಕರಾದ ಇಂತಹವರಿಗೆ ಪರಿಚಯವಿರುವವನು' ಎಂದು ಹೇಳಿ ಅವರಿಂದ ಆತಿಥ್ಯ ಪಡೆಯುವುದು ಅವರ ಅಭ್ಯಾಸ. ಇಂತಿದ್ದ ಭಟ್ಟರಿಗೆ ಈಗ ಹೊರಬಂದ ಆ ಹೆಂಗಸನ್ನು ನೋಡಿ ಆಶ್ಚರ್ಯವಾಯಿತು. ಅವರಿಗೆ ತಿಳಿದಿರುವಂತೆ ಆ ಮನೆಯಲ್ಲಿದ್ದುದು ಆರೇ ಮಂದಿ. ಮಹಾಬಲ, ಅವನ ಹೆಂಡತಿ ವಿಜಯಮ್ಮ, ಗಂಡು ಮಕ್ಕಳಾದ ಶ್ರೀಧರ ಹಾಗೂ ಶಶಿಧರ. ಹೆಣ್ಮಕ್ಕಳಾದ ಗಂಗಾವತಿ ಮತ್ತು ಶರಾವತಿ. ಈಗ ಇಲ್ಲಿ ಕತ್ತಲಿನ ಕೆತ್ತನೆಯೊಂದು ಗೋಡೆಯಿಂದೆದ್ದು ಬಂದಂತೆ ಕದಲುತ್ತಾ ಬಂದಿರುವ ಹೆಂಗಸನ್ನು ಅವರು ಹಿಂದೆಂದೂ ನೋಡಿರಲಿಲ್ಲ. ಬಹುಷಃ ಹಿರೀಮಗ ಶ್ರೀಧರನಿಗೆ ಮದುವೆಯಾಗಿರಬೇಕೆಂದು ಅಂದುಕೊಂಡು ತಮ್ಮ ಜೋಳಿಗೆಯನ್ನು ಜಗುಲಿ ಕಟ್ಟೆಯ ಮೇಲಿಟ್ಟು "ಉಸ್ಸಪ್ಪಾ" ಎನ್ನುತ್ತಾ ಕುಳಿತುಕೊಂಡರು‌.

"ಏನ್ ಕೂಸೇ.. ಮೂರ್ಸಂಜೇಲಿ ಮನೆ ದೀಪನೆಲ್ಲ ನಂದ್ಸ್ಕ್ಯಂಡು ಎಲ್ಲ ಎಂತ ಮಾಡ್ತಿದೀರಿ ಹಾಂ? ಎಲ್ಲಿ ಮಹಾಬಲರಾಯರು ಮನೇಲಿಲ್ವಾ?"

"ಎಂತ ಮಾಡದು ಮಾವಯ್ಯಾ.. ಕೆಲವ್ರಿಗೆ ಬೆಳಕು ಇಷ್ಟ. ಇನ್ ಕೆಲವ್ರಿಗೆ ಕತ್ಲೆನೇ ಇಷ್ಟ. ಯಾರ್ಯಾರ ಆಟ ಎಲ್ಲೆಲ್ಲಿ ನಡೀತದೋ ಅದದ್ನೇ ಅಲ್ವಾ ಅವ್ರು ಇಷ್ಟ ಪಡೋದು...? ಸುಸ್ತಾಗಿ ಬಂದೀರಿ.. ಒಳಗ್ಬನ್ನಿ. ಎಲ್ರೂ ಪಕ್ದೂರ್ಗೆ ಹೋಗ್ಯಾರೆ. ನಮ್ ಕುಟುಂಬ್ದಲ್ಲೊಂದು ಸಾವಾಗಿದೆ"

ಏನೇನೋ ಮಾತನಾಡುವ ಈ ಹೆಂಗಸಿಗೆಲ್ಲೋ ಸ್ವಲ್ಪ ಮೊಳ್ಳಿರಬೇಕೆಂದೆಣಿಸಿದ ಭಟ್ಟರು "ಏನ್ಕೂಸೇ, ನಿನ್ನೊಬ್ಳನ್ನೆ ಬಿಟ್ಟೊಂಟೋಗಿದಾರಾ? ಅದೂ ಈ ಅಮವಾಸ್ಯೆ ಕತ್ಲಲ್ಲಿ? ಥೋ ಥೋ.. ಎಂತಾ ಕೆಲ್ಸಾಗೋತು.." ಎಂದು ಪಶ್ಚಾತ್ತಾಪ ಸೂಚಕವಾಗಿ ಪ್ಚ್ ಪ್ಚ್ ಎಂದರು.

"ಹೋಗೋರ್ ಹೋಗಿದಾರೆ. ನೀವಾದ್ರೂ ಬಂದಿದೀರಲ್ಲಾ? ಇನ್ನು  ಹೋಗೋದಕ್ಕಂತೂ ಆಗಲ್ಲ. ಒಳಗೇ ಬಂದ್ಬಿಡಿ" ಅವರಿಂದ ಕೆಲವೇ ಅಡಿಗಳಷ್ಟು ದೂರದಲ್ಲಿ ನಿಂತಿದ್ದ ಅವಳ ಮಾತು ಮುಖದ ಮೇಲೆ ಆವರಿಸಿದ್ದ ಕತ್ತಲಿನ ಮರೆಯಿಂದ ಕರ್ಕಶವಾಗಿ ಹೊರಬರುತ್ತಿತ್ತು. "ಸರಿ ಕೂಸೇ" ಎಂದ ಭಟ್ಟರು ಜೋಳಿಗೆ ಹೆಗಲಿಗೆ ಸಿಕ್ಕಿಸಿಕೊಂಡು ಮೇಲೆದ್ದರು. ಇನ್ನೇನು ಒಳಗಡಿಯಿಡಬೇಕು, ಅಷ್ಟರಲ್ಲಿ ಬೆಕ್ಕೊಂದು ಮನೆಯ ಹಿಂಭಾಗದಲ್ಲೆಲ್ಲೋ ವಿಕಾರವಾಗಿ ಕೂಗಿಕೊಂಡಿತು.

"ಊಟಕ್ಕೆ ಒಬ್ರೇ ಅಂದ್ಕೊಂಡಿದ್ದೆ. ಇನ್ನೊಬ್ರೂ ಸಿಕ್ಕಿದ್ರು"
ತಲೆಗೆ ಸೆರಗು ಹೊದ್ದು ಮರೆ ಮಾಡಿಕೊಂಡು ನಿಂತಿದ್ದವಳ ಮುಖದಲ್ಲಿನ ನಗು ಆ ಕತ್ತಲಲ್ಲೂ ತಮಗೆ ಕಂಡಿದ್ದು ಹೇಗೆಂದು ಭಟ್ಟರಿಗೂ ಅರ್ಥವಾಗಲಿಲ್ಲ. ಕೈಕಾಲು ತೊಳೆದುಕೊಂಡು ಒಳಬಂದವರು "ನಾ ಸಂಧ್ಯಾವಂದನೆ ಮಾಡ್ತೀನಿ. ನೀ ಅನ್ನಕ್ಕಿಡದಾರೆ ಇಟ್ಬಿಡು. ಬಹಳ ಹಸಿವಾಗಿದೆ" ಎಂದು ದೇವರ ಮನೆಯತ್ತ ನಡೆದರು. "ನಂಗೂ ಹಸಿವಾಗಿದೆ" ಎಂದ ಆ ಹೆಂಗಸು ಯಾವುದೋ ಆರ್ತನಾದವೊಂದು ಕರೆಯುತ್ತಿರುವಂತೆ ಮನೆಯ ಹಿಂಭಾಗದತ್ತ ನಡೆಯತೊಡಗಿದಳು. ದೇವರಕೋಣೆಯೊಳಗೆ ಅಡಿಯಿಟ್ಟ ಭಟ್ಟರು ಏನೋ ಹೊಳೆದಂತಾಗಿ ಕೂಗಿ ಹೀಗೆ ಕೇಳಿದರು.

"ಅಂದ್ಹಂಗೇ, ಕೇಳೋಕೆ ಮರ್ತೆ. ನಿನ್ ಹೆಸ್ರೆಂತದು ಕೂಸೇ?"

ಕತ್ತಲೊಳಗೆ ಕತ್ತಲಾಗಿ ನಡೆಯುತ್ತಿದ್ದ ಅವಳು ತಿರುಗದೆಯೇ ಉತ್ತರಿಸಿದಳು:

"ಚಂದ್ರಾವತಿ!"

                    *************

ಭಟ್ಟರು ದೇವರವಳ ಪ್ರವೇಶಿಸಿದರು. ಅಲ್ಲಿ ಹಚ್ಚದೇ ಕೆಲ ದಿನಗಳೇ ಕಳೆದಿರುವಂತಿರುವ ದೇವರ ದೀಪ, ಫೋಟೋಗಳಿಗೆ ಏರಿಸಿರುವ- ವಾರದ ಹಿಂದೆಯೇ ಬಾಡಿರುವ ಹೂಗಳನ್ನು ನೋಡಿದವರಿಗೆ ಅನುಮಾನವಾಯಿತಾದರೂ "ನೆಂಟರೊಬ್ಬರ ಸಾವಾಗಿದೆ" ಎಂಬ ಚಂದ್ರಮತಿಯ ಮಾತು ನೆನಪಾಯಿತು‌. ಸೂತಕವಿರುವ ಮನೆಯಲ್ಲಿ ಯಾರು ದೀಪ ಹಚ್ತಾರೆ? ಹಾಗಂದುಕೊಂಡು ಸಂಧ್ಯಾವಂದನೆ ಆರಂಭಿಸಿದರು. ಮನಸ್ಸಿನೊಳಗಿನ ಮಂತ್ರಗಳ ಸದ್ದಲ್ಲದೆ ಬೇರ್ಯಾವ ಶಬ್ದವೂ ಅಲ್ಲಿರಲಿಲ್ಲ‌. ತರ್ಪಣ ಕೊಟ್ಟು, ಆಸನ ಪೂಜೆ ಮಾಡಿ, ಮುದ್ರಾಪೂಜೆ ಮುಗಿಸಿ ಇನ್ನೇನು ಗಾಯತ್ರೀ ಮಂತ್ರ ಜಪಿಸಬೇಕು,

"ಮೀಈಈಯ್ ಯಾಂವ್ssssss...."

ನಿಶ್ಯಬ್ದವನ್ನು ಛಿದ್ರಗೊಳಿಸುತ್ತಾ ಅತೀ ಸಮೀಪದಿಂದಲೇ ಕೇಳಿಬಂದ, ಬೆಕ್ಕೊಂದು ಪರಮ ಯಾತನೆಯಲ್ಲಿ ಚೀತ್ಕರಿಸಿದ  ಆ ಕಿರುಚಾಟದ ತೀವ್ರತೆಗೆ ಜಪಮಾಲೆ ಹಿಡಿದ ಅವರ ಕೈ ಕಂಪಿಸಿತು. ಪಾಪದ ಬೆಕ್ಕು. ಕುರ್ಕಕ್ಕೋ, ನರಿಗೋ ಬಲಿಯಾಗಿರಬೇಕೆಂದು ಭಾವಿಸಿದರಾದರೂ ಯಾವುದಕ್ಕೂ ಇರಲೆಂದು "ಚಂದ್ರಾವತೀ" ಎಂದು ಕರೆದರು. ಅತ್ತಕಡೆಯಿಂದ ನಿಶ್ಯಬ್ದವೇ ಉತ್ತರವಾದಾಗ ಮತ್ತೆರೆಡು ಬಾರಿ ಕರೆದರು.

"ಅನ್ನ ಬೇಯಿಸ್ತಿದೀನಿ ಮಾವಯ್ಯಾ.."
ಉತ್ತರಿಸಿದವಳ ಮಾತು ಈಗಷ್ಟೇ ಏನನ್ನೋ ಕುಡಿದಿರುವ ವದ್ದೆ ಗಂಟಲಿನಿಂದ ಹೊರಬಂದತಿತ್ತು. ಅದನ್ನು ಅಷ್ಟಾಗಿ ತಲೆಗೆ ಹಾಕಿಕೊಳ್ಳದ ಭಟ್ಟರು ಜಪ ಮುಂದುವರಿಸಿದರು. ಕೆಲ ನಿಮಿಷಗಳಲ್ಲಿ ಸಂದ್ಯಾವಂದನೆ ಮುಗಿಸಿದವರು ಜಪ ಮಾಡಿದ ನೀರನ್ನೆಸೆಯಲೆಂದು ಮೊಬ್ಬು ಬೆಳಕಿನ ಬುಡ್ಡಿದೀಪ ಹಿಡಿದುಕೊಂಡು ಮನೆಯ ಹಿಂದಿನ ಅಂಗಳದಂಚಿಗೆ ಬಂದರು‌. ಅಲ್ಲಿ ಸಾಲಾಗಿ ಪೇರಿಸಿರುವ ಎತ್ತರದ ಕಟ್ಟಿಗೆ ರಾಶಿಯ ಪಕ್ಕ ನಿಂತು ಹರಿವಾಣದಲ್ಲಿನ ನೀರನ್ನು ಆಚೆಗಿನ ಕತ್ತಲಿಗೆ ಎಸೆದು ಮರಳಲೆಂದು ತಿರುಗಿದವರ ಹೆಗಲ ಮೇಲೆ ಬೆಚ್ಚಗಿರುವ, ದಪ್ಪನೆಯ ದ್ರವದ ಹನಿಯೊಂದು ತೊಟ್ಟಿಕ್ಕಿತು.‌ ಏನೆಂದು ಮುಟ್ಟಿ ನೋಡುವಷ್ಟರಲ್ಲಿ ಇನ್ನೊಂದು ಹನಿ ಬಿತ್ತು‌. ತಲೆಯೆತ್ತಿ ನೋಡಿದವರಿಗೆ ರಕ್ತವೇ ಹೆಪ್ಪುಗಟ್ಟುವಂತಹಾ ದೃಶ್ಯವೊಂದು ಅಲ್ಲಿ ಕಂಡಿತು..

ಪೇರಿಸಿಟ್ಟ ಕಟ್ಟಿಗೆಗಳ ಚೂಪು ತುದಿಯಲ್ಲಿ ನುಜ್ಜುಗುಜ್ಜಾಗಿರುವ ಕಡುಗಪ್ಪು ಬೆಕ್ಕೊಂದರ ಶರೀರವನ್ನು ಚುಚ್ಚಿ ನೇತುಹಾಕಲಾಗಿತ್ತು! ಬಾಯಿಕಳೆದುಕೊಂಡು, ಕೈಗಳನ್ನಗಲಿಸಿ ಬರ್ಬರವಾಗಿ ನೇತಾಡುತ್ತಿದ್ದ ಅದರ ದೇಹದಿಂದ ತೊಟ್ಟಿಕ್ಕುತ್ತಿದ್ದ ಬಿಸಿರಕ್ತ ಅದು ಕೆಲವೇ ನಿಮಿಷಗಳ ಹಿಂದಷ್ಟೇ ಸತ್ತಿದೆಯೆಂಬುದನ್ನು ಸಾರಿ ಹೇಳುತ್ತಿತ್ತು! ಅದನ್ನು ನೇತುಹಾಕಿರುವ ರೀತಿಯನ್ನು ನೋಡಿದರೆ ಇದನ್ನು ಕೊಂದಿದ್ದು ಯಾವುದೋ ಪ್ರಾಣಿಯಲ್ಲವೆಂಬುದು ಸ್ಪಷ್ಟವಾಗಿತ್ತು!

ತಮ್ಮಿಬ್ಬರ ಹೊರತಾಗಿ ಇಲ್ಯಾರೋ ಇದ್ದಾರೆ. ಅದು ಮನುಷ್ಯನಂತೂ ಖಂಡಿತಾ ಅಲ್ಲ! ಈ ಸಂಗತಿ ಹೊಳೆಯುತ್ತಿದ್ದಂತೆಯೇ ಭೀಕರವಾಗಿ ಬೆಚ್ಚಿಬಿದ್ದ ಭಟ್ಟರು ಹರಿವಾಣವನ್ನು ಅಲ್ಲೇ ಕೈಬಿಟ್ಟು ಚಂದ್ರಾವತಿಯಿರುವ ಅಡಿಗೆಕೋಣೆಯತ್ತ ಓಡಿದರು. ಏದುಸಿರುಬಿಡುತ್ತಾ ಕೋಣೆ ಪ್ರವೇಶಿಸಿದವರಿಗೆ ಜೀವಮಾನದಲ್ಲೆಂದೂ ನೋಡದಂತಹಾ ಪರಮ ಭಯಾನಕ ದೃಶ್ಯವೊಂದು ಅಲ್ಲಿ ಕಂಡಿತು‌.

ಕತ್ತಲಿನಲ್ಲಿ ಮುಳುಗಿದ್ದ ಅಡಿಗೆಮನೆಯ ಆಚೆ ಮೂಲೆಯಲ್ಲಿ ಒಲೆಯೊಂದು ಧಗಧಗನೆ ಉರಿಯುತ್ತಿತ್ತು. ಹತ್ತಾರು ಒಣ ಕಟ್ಟಿಗೆಗಳನ್ನು ಒಟ್ಟಿಗೇ ಹಾಕಿದಂತೆ ಬಿರುಸಾಗಿ ಧಗಧಗಿಸುತ್ತಿದ್ದ ಆ ಅಡುಗೆ ಒಲೆಗೆ ಮುಖಮಾಡಿ ಕುಳಿತಿದ್ದ ಚಂದ್ರಾವತಿಯ ತಲೆ ವಿಕಾರವಾಗಿ ಕೆದರಿತ್ತು. ಅದಕ್ಕಿಂತಲೂ ಭಯಾನಕವಾದ ಇನ್ನೊಂದು ಸಂಗತಿಯೆಂದರೆ...

ಒಲೆಗೆದುರಾಗಿ ಕುಳಿತಿದ್ದ ಅವಳು ತನ್ನ ಎರೆಡು ಕಾಲುಗಳನ್ನೂ ಒಲೆಯೊಳಗೆ ಕಟ್ಟಿಗೆಯಂತೆ ಒಟ್ಟಿಕೊಂಡಿದ್ದಳು! ಅವಳ ಕಾಲಿನ ಮೂಳೆಗಳನ್ನು ಸುಡುತ್ತಿದ್ದ ಬೆಂಕಿಯ ಜ್ವಾಲೆಗಳು ತಕತಕನೆ ಕುಣಿಯುತ್ತಾ ಅಬ್ಬರಿಸುತ್ತಿದ್ದವು!  ಕಥೆಗಳಲ್ಲೂ ಕೇಳದ ಆ ಭಯಾನಕ ದೃಶ್ಯವನ್ನು ನೋಡುತ್ತಿದ್ದಂತೆಯೇ ಅವರ ನರಮಂಡಲದಲ್ಲಿನ ಸಕಲ ನರಗಳೂ ಇಮ್ಮಡಿ ವೇಗದಲ್ಲಿ ಪತರಗುಟ್ಟತೊಡಗಿದವು. "ಅಮ್ಮಯ್ಯೋ" ಎಂದು ವಿಕಾರವಾಗಿ ಚೀರಿಕೊಂಡ ಅವರಿಗೆ ಇದು ಸ್ವಲ್ಪ ಹೊತ್ತಿಗೆ ಮುಂಚೆ ಕೂಗಿದ ಬಡಪಾಯಿ ಬೆಕ್ಕಿನ ಆರ್ತನಾದದ್ದೇ ಮುಂದುವರಿದ ಭಾಗವೇನೋ ಅನ್ನಿಸಿತು. ಆ ಸದ್ದು ಕೇಳುತ್ತಿದ್ದಂತೆಯೇ ಒಲೆಯ ಮುಂದಿದ್ದ ಆ ಭಯಾನಕ ಪ್ರೇತವು ತಲೆಯೆತ್ತಿನೋಡಿತು. ಆಗ ಕಂಡಿತು.. ಜ್ವಾಲೆಯ ಬೆಳಕಿನಲ್ಲಿ ಕೆಂಪಗೆ ಹೊಳೆಯುತ್ತಿದ್ದ, ಇನ್ನೂ ಹಸಿಯಾರದ ರಕ್ತವನ್ನು ಬಾಯಿಗೆಲ್ಲಾ ಬಳಿದುಕೊಂಡಿರುವ ಆ ಭಯಾನಕ ಭೂತದ ವಿಕಾರ ಮುಖ. ಸಾವಿಗೆ ಮಾತ್ರ ಇರಬಹುದಾದ ಕ್ರೂರ ಮುಖ!

ಬದುಕಿನ ಅಷ್ಟೂ ವರ್ಷಗಳಲ್ಲಿ ಸಂಪಾದಿಸಿದ ಶಕ್ತಿಯನ್ನೆಲ್ಲಾ ತಮ್ಮ ಕಾಲಿಗೆ ತಂದುಕೊಂಡ ಸಂಭಾವನೆ ಭಟ್ಟರು ನೇರ ದೇವರ ಮನೆಯತ್ತ ಓಡತೊಡಗಿದರು. ಉರಿಯುತ್ತಿದ್ದ ಕಾಲನ್ನು ಒಲೆಯೊಳಗೇ ಬಿಟ್ಟ ಕಾಲ್ದೋಶವು ಒಂದೇ ಕುಪ್ಪಳಕ್ಕೆ ಮೇಲೆದ್ದು ಕೆಂಪಗೆ ಕಾಯುತ್ತಿದ್ದ ಮೋಟು ಕಾಲಿನಲ್ಲೇ ಅವರನ್ನು ಹಿಂಬಾಲಿಸತೊಡಗಿತು. ಓಡುತ್ತಿದ್ದ ಭಟ್ಟರಿಗೆ ಎರೆಡೇ ಕೋಣೆಗಳಾಚೆಗಿನ ದೂರ ಮೈಲುಮೈಲುಗಳಂತೆ ಅನಿಸತೊಡಗಿತು. ಹೊರಗೆ ಕವಿದಿರುವ ಕಾಳ ಕತ್ತಲೆ, ಸತ್ತ ಬೆಕ್ಕು, ಒಲೆಯ ಬೆಂಕಿ.. ಇವೆಲ್ಲವೂ ಮೃತ್ಯುರೂಪತಾಳಿ ತನ್ನನ್ನು ಬೆನ್ನಟ್ಟಿಬರುತ್ತಿರುವಂತೆ ಅವರಿಗೆ ಭಾಸವಾಯಿತು. ಬದುಕಿನಲ್ಲೆಂದೂ ಜಿಗಿಯದಷ್ಟು ದೂರ ದೂರಕ್ಕೆ ಜಿಗಿಯುತ್ತಾ ಅಂತೂ ದೇವರ ಕೋಣೆಯೊಳಗೆ ನುಗ್ಗಿ ಬಾಗಿಲು ಜಡಿದು ದೇವರೆದುರು ನಡುಗುತ್ತಾ ಕುಳಿತುಬಿಟ್ಟರು‌. ಪ್ರಳಯವೇ ಬೆನ್ನಟ್ಟಿ ಬಂದಂತೆ ಹಿಂಬಾಲಿಸಿ ಬಂದ ಹೆಜ್ಜೆಗಳು ಕೋಣೆಯ ಹೊರಗಡೆ ಸ್ತಬ್ಧವಾದವು. ಮರುಕ್ಷಣವೇ ಕೋಣೆಯ ಮರದ ಬಾಗಿಲು ಧಡಧಡನೆ ಸದ್ದಾಗತೊಡಗಿತು. ಅದರ ಚಿಲಕವಂತೂ ಹೊರಗಿನಿಂದ ಬೀಳುತ್ತಿರುವ ಏಟನ್ನು ತಡೆಯಲಾರದೆ ತಟತಟನೆ ನಡುಗುತ್ತಾ ತೆರೆದುಕೊಳ್ಳತೊಡಗಿತು. ಭಟ್ಟರಿಗೆ ಸಾವು ನಿಶ್ಚಿತವೆಂಬುದು ಗೊತ್ತಿತ್ತು. ಆದರೆ ಅದು ಇಷ್ಟೊಂದು ಭಯಾನಕವೂ, ಬರ್ಬರವೂ ಆಗಿರುತ್ತದೆಂದು ತಿಳಿದಿರಲಿಲ್ಲ. ಇರುವ ಒಂದೇ ಒಂದು ಪ್ರಾಣವನ್ನು ಉಳಿಸಿಕೊಳ್ಳುವ ಕಡೆಯ ಪ್ರಯತ್ನವೆಂಬಂತೆ ಅವರು ದೇವರೆದುರು ಕುಳಿತು ಗಾಯತ್ರೀ ಮಂತ್ರವನ್ನು ಪಠಿಸತೊಡಗಿದರು.

"ಬಾಗಿಲೋ ತೆಗಿಯೋ.. ಹಸಿವಾಗಿದೆ ಅಡುಗೆ ಮಾಡು ಅಂದ್ಯಲ್ಲೋ.. ಈಗ ಊಟ ಮಾಡು ಬಾರೋ.. ಒಲೆ ಉರೀತಿದೆ. ನನ್ನ ಕಾಲು ಖಾಲಿಯಾಯ್ತು, ನಿನ್ನ ಕಾಲು ಕೂಡು ಬಾರೋ... ಲೋ ಭಟ್ಟಾ ಬಾಗಿಲು ತೆಗೆದು ಬಾರೋ... ಅಹ್ಹಹ್ಹಹ್ಹಹ್ಹಾsss.."

ಭಟ್ಟರು ಗಟ್ಟಿಯಾಗಿ ಕಣ್ಮುಚ್ಚಿಕೊಂಡರು. ಹೊರಗಡೆ ಮೃತ್ಯು ಸಂದೇಶ ಮುಂದುವರಿಯಿತು.

"ಇಪ್ಪತ್ತಾರೇ ವರ್ಷ ಕಣೋ.. ನನ್ನ ಸಾಯಿಸಿಯೇ ಬಿಡ್ತಲ್ಲೋ ಆ ದುರ್ವಿಧಿ.. ಆ ಕಾಲ ನನ್ನ ಕೊಂದೇ ಬಿಡ್ತಲ್ಲೋ.. ಹೊಟ್ಟೆಯಲಿದ್ದ ಮಗು ಹೊರಗೆ ಬರೋದಕ್ಕೂ ಬಿಡದೇ ಕೊಂದು ಬಿಡ್ತಲ್ಲೋ. ನಾನು ನರಳಾಡುವಾಗ ಬರಲಿಲ್ಲ. ಒದ್ದಾಡಿ ಸಾಯುವಾಗ ಬರಲಿಲ್ಲ. ಈಗ ಒಪ್ಪತ್ತಿನ ಊಟ ಕೇಳ್ಕೊಂಡು ಬಂದ್ಬಿಟ್ಯೇನೋ? ಹೇಗೆ ತೀರಿಸಿಕೊಳ್ಳಲೋ ಆ ಸೇಡನ್ನ? ನಿಮಗೆಲ್ಲಾ ಹೇಗೆ ಅರ್ಥ ಮಾಡಿಸ್ಲೋ ನಾನು ಅನುಭವಿಸಿದ ನೋವನ್ನ? ನಿನ್ನ ಕತ್ತು ಮುರಿದು ತೋರಿಸ್ಲಾ? ಹೊಟ್ಟೆ ಬಗೆದು ಕೈ ತಿರುಪಲಾ.. ಹೇಳೋ.. ಹೇಗೆ ತೀರಿಸಿಕೊಳ್ಳಲಿ ಹೇಳೋ... ಅಹ್ಹಹ್ಹಹ್ಹಹ್ಹಾsss.."


ಅರ್ಧಕ್ಕೇ ಕೊಲ್ಲಲ್ಪಟ್ಟ ಆಸೆಗಳು ದ್ವೇಶವಾಗಿ ಬದಲಾಗುತ್ತವೆ. ಅಂತಹಾ ದ್ವೇಶಗಳ ಪ್ರತೀಕಾರಕ್ಕೆ ಇಂಥವರೇ ಆಗಬೇಕೆಂದಿಲ್ಲ‌. ಅತೃಪ್ತ ಆತ್ಮಗಳು ವಂಚನೆ ತೋರಿದ ವಿಧಿಯ ಮೇಲಿನ ಮುಯ್ಯನ್ನು ಎದುರಿಗೆ ಸಿಗುವ ಯಾವುದೇ ಬಡಪಾಯಿಯ ಮೆಲೆ ತೀರಿಸಿಕೊಳ್ಳುತ್ತವೆ. ಇವತ್ತಿನ ಈ ಕೆಟ್ಟ ಘಳಿಗೆಯಲ್ಲಿ ಆ ಬಡಪಾಯಿ ತಾನೇ‌. ಹಾಗಂದುಕೊಂಡ ಭಟ್ಟರು ಹಣೆಯ ಮೇಲಿನ ಬೆವರನ್ನು ಒರೆಸಿಕೊಂಡರು. ಅವರ ಉಸಿರಾಟವೂ ಈಗ ಗಾಯತ್ರೀ ಮಂತ್ರವನ್ನೇ ಪಠಿಸುತ್ತಿತ್ತು. ಅವರಿಗೆ ತಿಳಿದಿತ್ತು: ತನಗೂ ಸಾವಿಗೂ ಇರುವ ಅಂತರ ಬರೀ ನಾಲ್ಕೇ ಹೆಜ್ಜೆ. ಕೋಣೆಯೊಳಗಿದ್ದರೆ ಉಳಿವು; ಹೊರಹೋದರೆ ಸಾವು! ಅವರು ಮತ್ತಷ್ಟು ದೃಢವಾಗಿ ಮಂತ್ರ ಜಪಿಸತೊಡಗಿದರು. ಹೊರಗಡೆ ಇದ್ದಕ್ಕಿದ್ದಂತೆ ಎಲ್ಲವೂ ಸ್ತಬ್ದವಾಯಿತು. ಸಣ್ಣ ಹೆಜ್ಜೆಯ ಸಪ್ಪಳವೂ ಇಲ್ಲ, ಚಿಕ್ಕ ಕದಲುವಿಕೆಯ ಶಬ್ದವೂ ಇಲ್ಲ. ಕಾಲವೇ ನಿಂತುಹೋಗಿರುವಂತಹಾ ಭಯಾನಕ ನಿಶ್ಯಬ್ದ! ಭಟ್ಟರು ಕುಳಿತಲ್ಲೇ ಕಿವಿ ನಿಮಿರಿಸಿದರು..

"ಪುರುಷೋತ್ತಮಾ..."

ಕೋಣೆಯ ಮುಚ್ಚಿದ ಬಾಗಿಲೇ ಮಾತನಾಡುತ್ತಿರುವಂತೆ ತುಂಬಾ ಸ್ಪಷ್ಟವಾಗಿತ್ತು ಆ ಮಾತು.ಭಟ್ಟರು ಬೆಚ್ಚಿಬಿದ್ದರು. ಎಷ್ಟೋ ವರ್ಷಗಳ ನಂತರ ತನನ್ನು ತನ್ನ ಹೆಸರಿನಿಂದ ಕರೆಯುತ್ತಿರುವ ಆ ಧ್ವನಿ ಬೇರ್ಯಾರದ್ದೂ ಅಲ್ಲ, ತನ್ನ ಹೆತ್ತ ಅಮ್ಮನದ್ದು!

"ಪುರ್ಷೀ.. ನಾನು ನಿನ್ನಮ್ಮ ಕಣೋ... ಎಷ್ಟು ವರ್ಷದ ನಂತರ ನಿನ್ನ ನೋಡೋಕಂತ ಬಂದಿದೀನಿ, ನೀನು ಕೋಣೆಯೊಳಗೆ ಕೂತುಕೊಂಡಿದೀಯಲ್ಲಾ. ಆಚೆ ಬಾ ಪುರ್ಷೂ.. ನಿನಗೆ ನೆನಪಿಲ್ವಾ? ನಿನ್ನ ಎಷ್ಟೊಂದು ಪ್ರೀತಿಮಾಡ್ತಿದ್ದೆ ನಾನು? ನಿನಗೆ ಜ್ವರ ಬಂದಾಗ ರಾತ್ರೆಯಿಡೀ ಎದ್ದು ನೋಡಿಕೊಂಡಿದ್ದೆ. ನಿಂಗೆ ಇಷ್ಟಾಂತ ಮೆಂತ್ಯದ ದೋಸೆ ಮಾಡಿಕೊಡ್ತಿದ್ದೆ. ಎಲ್ಲಾ ಮರೆತು ಬಿಟ್ಯೇನೋ? ಬಾರೋ.. ಈ ನಿನ್ನ ಅಮ್ಮನ್ನನ್ನ ಈ ಕ್ರೂರ ಕಾಲ್ದೋಶದ ಕೈಯಿಂದ ಬಿಡಿಸ್ಕೋ ಬಾರೋ.."

ಭಟ್ಟರ ಎದೆಯಲ್ಲಿ ಮುಳ್ಳು ಕಲಸಿದಂತಾಯಿತು. ಅಮ್ಮ.. ತನ್ನ ಅಮ್ಮ!  ಇಪ್ಪತ್ತು ವರ್ಷಗಳ ಹಿಂದೆ ದೂರಾದ, ತಾನು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ಅಮ್ಮ!! ಮರಳಿ ಬಂದಿದ್ದಾಳೆ.. ಇಲ್ಲೇ ಬಾಗಿಲ ಬಳಿಯಲ್ಲಿ ನಿಂತು ತನ್ನನ್ನು ಕರೆಯುತ್ತಿದ್ದಾಳೆ.. ಏಳಬೇಕು.. ಆ ಕಾಲ್ದೋಶದ ಕೈಯಿಂದ ಅವಳನ್ನು ಬಿಡಿಸಬೇಕು.. ಏಳಬೇಕು.. ಏ.."
ಮನಸ್ಸಿನ ಒಂದು ಭಾಗ ಹಾಗೆಂದು ಚಡಪಡಿಸುತ್ತಿದ್ದರೆ ಅದನ್ನು ಹಿಡಿತದಲ್ಲಿಡಲು ಭಟ್ಟರು ಮತ್ತಷ್ಟು ಬಿಗಿಯಾಗಿ ಕಣ್ಮುಚ್ಚಿಕೊಂಡರು. ಅಲ್ಲ.. ಇದು ಅಮ್ಮನಲ್ಲ‌. ತನ್ನನ್ನು ಸಾವಿನೆಡೆಗೆ ಕರೆಯುತ್ತಿರುವ ಕಪಟ ದನಿ! ಸೋಲಬಾರದು.

ಹೊರಗೆ ಆ ದೀನ ದನಿ ಮುಂದುವರಿಸಿತು.

"ಮಗನೇ.. ಬಹಳ ನೋವಾಗ್ತಿದೆ ಕಣೋ.. ತಡೆಯೋಕಾಗ್ತಿಲ್ಲ.. ಬಾರೋ.. ಬಂದು ಬಿಡಿಸೋ.. ಈ ಪಿಶಾಚಿಯಿಂದ ನನ್ನ ಉಳಿಸ್.. ಆರ್ವ್ ರ್ರ್ರ್.."
ಆ ಕೊನೆಯ ಮಾತು ಕತ್ತಿನೊಳಗೇ ಉಳಿದು ಯಾವುದೋ ದ್ರವದೊಂದಿಗೆ ಕಲಸಿಹೋದಂತೆ ವಿಕಾರ ಸದ್ದಾಯಿತು. ಭಟ್ಟರಿಗೆ ಹೊಟ್ಟೆಯೆಲ್ಲಾ ತೊಳೆಸಿದಂತೆ ಸಂಕಟವಾಯಿತು‌. ಆದರೆ ಅವರಿಗೆ ಗೊತ್ತಿತ್ತು‌‌. ಇದು ಮರಣ ಪ್ರಹಸನದ ಕೊನೆಯ ಭಾಗ. ಹೊರಗಡೆ ಬೆಳಗಿನ ಎರೆಡನೇ ಜಾವ ಶುರುವಾಗುವ ಹೊತ್ತಿಗೆ ಕಾಲ್ದೋಶ ನಿರ್ಗಮಿಸುತ್ತದೆ. ಅವರು ಅಷ್ಟಂದುಕೊಳ್ಳುವ ಹೊತ್ತಿಗೇ ಹೊರಗಡೆ ಸ್ವರಗಳು ತೀವ್ರರೂಪದಲ್ಲಿ ಅರಚಾಡತೊಡಗಿದವು. ತೀರಿಹೋದ ತಂದೆ, ಬಿಟ್ಟುಹೋದ ಮಡದಿ, ಬಾಲ್ಯದಲ್ಲಿ ಮುದ್ದುಗರೆಯುತ್ತಿದ್ದ ಅಜ್ಜ.. ಬದುಕಿನಲ್ಲಿ ತಾನು ಉತ್ಕಟವಾಗಿ ಪ್ರೀತಿಸಿದವರೆಲ್ಲಾ ಮುಚ್ಚಿದ ಬಾಗಿಲಿನ ಆಚೆಕಡೆ ಅಶರೀರವಾಣಿಗಳಾಗಿ ನಿಂತು ಹೃದಯವಿದ್ರಾವಕವಾಗಿ ಕರೆದುಹೋದರು. ತಮ್ಮ ನಲವತ್ತೂ ಚಿಲ್ಲರೆ ವರ್ಷಗಳ ಇಡೀ ಬದುಕೇ ಹೀಗೆ ಮರುಪ್ರಸಾರವಾಗುವುದನ್ನು ಕೇಳಿಯೂ ಕೇಳದಂತೆ ಭಟ್ಟರು ಒಳಗೇ ಉಳಿದುಬಿಟ್ಟರು.

ಪುರುಷೋತ್ತಮನೆಂಬ ಯಾರಿಗೂ ಗೊತ್ತಿಲ್ಲದ ಹೆಸರಿನ ಸಂಭಾವನೆ ಭಟ್ಟರ ಬದುಕಿನಲ್ಲೆಂದೋ ಬಂದು ಹೋದ ನಾನಾ ಬಂಧುಗಳ ಪಾತ್ರಗಳನ್ನು ತೊಟ್ಟು ಕುಣಿದ ಕಾಲ್ದೋಶವು ಕೊನೆಗೂ ಸೋಲೊಪ್ಪಿದಂತೆ ಕಂಡಿತು. ಅದು ಹೊರಡುವ ಸಮಯ ಹತ್ತಿರಬಂದಿತ್ತು. ತನಗೆ ಸಿಕ್ಕಿದ್ದ ಸಮಯದಲ್ಲಿ ಒಂದು ನರಬಲಿಯನ್ನೂ ಪಡೆಯಲಾರದೇ ಹೋದ ಕೋಪದಲ್ಲಿ ಕತ್ತಲೆಯೂ ಅದುರುವಂತೆ ಅದು ಹೀಗೆ ಅಬ್ಬರಿಸಿತು. "ಬರಲ್ವಾ? ಹೊರಗೆ ಬರಲ್ವಾ? ಹೋಗ್ತೀನೋ. ನಾನೇ ಹೋಗ್ತೀನಿ‌‌. ಆಯುಷ್ಯ ಗಟ್ಟಿ ಇದೆ ನಿಂದು. ಆದರೆ ನೆನಪಿಟ್ಕೋ, ಮುಂದೆ ಯಾವತ್ತೋ ಒಂದಿನ ನೀನು ದಾರಿ ತಪ್ಪಿ ತಲುಪೋ ಯಾವುದೋ ಒಂದು ಮನೆಯಲ್ಲಿ ನಿನ್ನ ಹಿಡಿದೇ ತೀರ್ತೀನಿ"
ಅಷ್ಟಂದ ಆ ಸ್ವರ ಕೀರಲಾಗಿ, ಅಳುವಾಗಿ, ಗಹಗಹಿಕೆಯಾಗಿ ಮೆಲ್ಲನೆ ದೂರವಾಗತೊಡಗಿತು. ಇದೂ ಕಾಲ್ದೋಶದ ಹೊಸತೊಂದು ನಾಟಕವಿರಬೇಕೆಂದೆನಿಣಿಸಿದ ಭಟ್ಟರು ಜಪ ಮುಂದುವರಿಸಿದರು. ಅಷ್ಟರಲ್ಲಿ ಮನೆಯಾಚೆಗೆಲ್ಲೋ ನಾಯಿಯೊಂದು ವಿಕಾರವಾಗಿ ನರಳಿದ ಸದ್ದು ಸುತ್ತಲೂ ಗುಂಯ್ಯನೆ ಪರಿಭ್ರಮಿಸಿ ರಾತ್ರೆಯ ನೀರವದೊಳಗೆ ಲೀನವಾಯಿತು.

ಮರುದಿನ  ಮರಳಿಬಂದ ಮನೆಯ ಸದಸ್ಯರಿಗೆ ಮನೆಯ ಸಮೀಪದ ದಾರಿಯಲ್ಲಿ ವಿಕಾರವಾಗಿ ಸತ್ತು ಬಿದ್ದಿರುವ ಬೀದಿನಾಯಿಯೂ, ಮನೆಯೊಳಗೆ ದೇವರವಳದಲ್ಲಿ ಮೂರ್ತಿಯನ್ನು ತಬ್ಬಿಕೊಂಡು ನಿದ್ರೆಹೋಗಿರುವ ಸಂಭಾವನೆ ಭಟ್ಟರೂ ಕಣ್ಣಿಗೆ ಬಿದ್ದರು.

('ತುಷಾರ'ದ  ಡಿಸೆಂಬರ್ 2019ರ ಸಂಚಿಕೆಯಲ್ಲಿ ಪ್ರಕಟಿತ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...