ಬುಧವಾರ, ಡಿಸೆಂಬರ್ 2, 2015

ಮಡದಿಯ ನೆನಪು...

ಕಡಲಿನ ಮಡಿಲಿಗೆ ರವಿ ಕಾತರಿಸಲು,
ಶಶಿಯ ಬರುವನು ನೆನೆದು ಬಾನು ಕೆಂಪಾಗಲು,
ದೀಪವಿರದ ಹೊಸಿಲದಾಟಿ ಇರುಳು ಒಳಗಡಿಯಿಡಲು,
ಮೂಡಿಬರುವುದು ಮರಳಿ ಅವಳ ನೆನಪು.

ಸಂತೆ ಸಾಲಿನ ಬದಿಯ ತೆರೆದ ಬುಟ್ಟಿಗಳಲಿ
ಕಟ್ಟಿ ಇರಿಸಿಹ ಮಲ್ಲೆ ಘಮ್ಮೆಂದು ನಗಲು,
ದೇವಳದಿ ಅರ್ಚಕರು ಪ್ರಸಾದವೆಂದು
ಬಿಡಿ ದಳಗಳ ಬದಲು ಇಡಿ ಹೂವನೆ ಕೊಡಲು,
ಕಾಡಿ ಕೊಲುವುದು ನೀಳ ಜಡೆಯವಳ ನೆನಪು.

ಘಲ್ಲೆನುವ ಗೆಜ್ಜೆದನಿ ಎಲ್ಲಿಂದಲೋ ಕೇಳಿ
ಜೊತೆನಡೆದ ಹೆಜ್ಜೆಗಳೆ ಕಣ್ಮುಂದೆ ಬರಲು,
ಜರತಾರಿಯಂಚಿನ ಹಸಿರು ಸೀರೆಯನುಟ್ಟ
ಗುಡಿಯ ದೇವಿಯ ಪ್ರತಿಮೆ ಮನತುಂಬಿ ನಿಲಲು,
ಕಣ್ಣಂಚಿನಲಿ ಹನಿ ನನ್ನವಳ ನೆನಪು.

ಹುಸಿಮುನಿಸ ತೋರುತಲಿ ನಮ್ಮೊಲವಿನ ಹಸುಳೆ
ಅರೆತೆರೆದ ಕದದ ಮರೆಯಿಂದ ಇಣುಕಲು,
ಆ ಮೊಗದ ಆ ಬಗೆಯು ನಿನ್ನಂತೆಯೇ ಅನಿಸಿ
ಹುಟ್ಟಿ ಬರುತಿದೆ ಮತ್ತೆ ಸಾಲುಸಾಲಾಗಿ
ಅಗಲಿದ ಮಡದಿಯೆ ನಿನ್ನ ಅಮರನೆನಪು.

-ವಿನಾಯಕ ಭಟ್

("3K:ಕನ್ನಡ ಕವಿತೆ ಕಥನ" ತಂಡದವರು ಆಯೋಜಿಸಿದ್ದ "ರಾಜ್ಯೋತ್ಸವ ಕವನ ಸ್ಪರ್ಧೆ ೨೦೧೫" ರಲ್ಲಿ ಮೂರನೇ ಬಹುಮಾನ ಪಡೆದ ನನ್ನ ಕವನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...