ಬುಧವಾರ, ನವೆಂಬರ್ 27, 2019

ಅಜ್ಜಿ ಹೇಳಿದ ಕಾಲ್ದೋಶದ ಕಥೆ



ಹೊತ್ತು ಮುಳುಗುವ ಸಮಯ‌. ಸುತ್ತಲೂ ಅಭೇದ್ಯ ಕಾಡಿನಿಂದಾವೃತವಾಗಿರುವ ಆ ಕಾಲುದಾರಿಯ ಮೇಲೆ ಇಕ್ಕೆಲಗಳಲ್ಲೂ ದಟ್ಟವಾದ ಕೋಟೆ ಕಟ್ಟಿರುವ ಮರಗಳ ನೆರಳು ಗಾಢವಾಗಿ ಹಾಸಿದೆ. ಆಗಲೇ ಮುಳುಗಿದ ಸೂರ್ಯ ಉಳಿಸಿ ಹೋದ ಅಲ್ಪ ಬೆಳಕೂ ಕವಿಯುತ್ತಿರುವ ಕತ್ತಲಿನಲ್ಲಿ ಲೀನವಾಗುತ್ತಿದೆ. ಗಾಳಿಯೂ ಬೀಸುವುದನ್ನು ಮರೆತು ಗಪ್ ಚಿಪ್ ಆಗಿರುವ ಆ ವಾತಾವರಣವನ್ನು ಭಯಾನಕ ಮೌನವೊಂದು ಆವರಿಸಿದೆ. ಅಲ್ಲಲ್ಲಿ ಮರಗಳ ಕಾಂಡಗಳಿಗೆ ಅಂಟಿಕೊಂಡಿರುವ ಜೀರುಂಡೆಗಳು ದೀರ್ಘವಾಗಿ ಶ್ವಾಸವೆಳೆದುಕೊಳ್ಳುತ್ತಾ ಭಯಾನಕ ರಾಗ ಹಾಡಲು ತಯಾರಿಮಾಡಿಕೊಳ್ಳುತ್ತಿವೆ. ದೂರದಲ್ಲೆಲ್ಲೋ ನೀರಿನ ಒರತೆಯೊಂದು ಬಂಡೆಗಳ ಮೇಲೆ ಧುಮುಕುತ್ತಿರುವ ಧ್ವನಿ ಆ ವಾತಾವರಣದ ಗಂಭೀರತೆಗೆ ಸಿಕ್ಕು ವಿಕಾರವಾಗಿ ಕೇಳುತ್ತಿದೆ.

ಅವರು ಬಿರಬಿರನೆ ನಡೆಯುತ್ತಿದ್ದಾರೆ.

ಅವರ ಹೆಸರೇನೆಂಬುದು ಯಾರಿಗೂ ಗೊತ್ತಿಲ್ಲ. ಊರನವರೆಲ್ಲರೂ ಅವರನ್ನು 'ಸಂಭಾವನೆ ಭಟ್ಟರು' ಎಂದೇ ಕರೆಯುತ್ತಾರೆ. ಊರಿಂದ ಊರಿಗೆ ತಿರುಗುತ್ತಾ, ಅರಿಶಿನ, ಕುಂಕುಮ, ವಿಭೂತಿಯೇ ಮುಂತಾದ ಪೂಜಾ ಸಾಮಗ್ರಿಗಳನ್ನು ಮನೆಮನೆಗಳಿಗೆ ಮಾರುವ ಅವರಿಗೆ ಪ್ರತಿಯಾಗಿ ಜನರು ಕೊಡುವ ಅಕ್ಕಿ ಹಾಗೂ ಹಾಕುವ ಆ ಹೊತ್ತಿನ ಊಟಗಳೇ ಜೀವನೋಪಾಯಗಳು‌‌. ಹೆಚ್ಚೂ ಕಡಿಮೆ ಮಲೆನಾಡು, ಪಶ್ಚಿಮ ಘಟ್ಟಗಳ ಎಲ್ಲಾ ಮನೆಬಾಗಿಲಿಗೂ ಹೋಗುವ ಅವರಿಗೆ ಒಮ್ಮೆ ಹೋದ ಹಳ್ಳಿಗೆ ಮತ್ತೆ ಹೋಗಲು ವರ್ಷಗಳೇ ಹಿಡಿಯುತ್ತವೆ. ಇಂತಿಪ್ಪ ಸಂಭಾವನೆ ಭಟ್ಟರು ಈ ದಿನ ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಸರಿಯಾಗಿ ಮುಖ್ಯರಸ್ತೆಯಲ್ಲಿ ಪಟ್ಟಣದ ಬಸ್ಸಿಂದಿಳಿದಿದ್ದರು. ಬಸ್ಸೂ ಸಹಾ ಇಂದಿನ ಅಮವಾಸ್ಯೆಗೆ ಹೆದರಿದಂತೆ ಕತ್ತಲಾಗುವುದರೊಳಗೆ ನಿಲ್ದಾಣ ಸೇರಿಕೊಳ್ಳಬೇಕೆಂಬ ಭಯಕ್ಕೇನೋ ಎಂಬಂತೆ ಅವರನ್ನಿಳಿಸಿ ವೇಗವಾಗಿ ಹೊರಟುಹೋಗಿತ್ತು. ಅವರೀಗ ಇಡೀ ನಾಲ್ಕೈದು ಕಿಲೋಮೀಟರ್ ವ್ಯಾಪ್ತಿಗೆ ಒಂದೇ ಒಂದು ಮನೆಯಿರುವ ಆ ಒಂಟಿ ಮನೆ ಕೇರಿಯತ್ತ ನಡೆಯುತ್ತಿದ್ದಾರೆ. ಅವರಿಗೆ ಗೊತ್ತಿದೆ: ಒಂದು ಸಲ ಕತ್ತಲು ಪೂರ್ತಿಯಾಗಿ ಆವರಿಸಿತೆಂದರೆ ಈ ದಾರಿ ದುಪ್ಪಟ್ಟು ಅಪಾಯಕಾರಿಯಾಗುತ್ತದೆ! ಹೇಳೀಕೇಳೀ ಇಂದು  ಅಮವಾಸ್ಯೆ‌. ಹನಿ ಬೆಳಕೂ ಇಲ್ಲದೆ ಕಗ್ಗತ್ತಲ ಆಕೃತಿಗಳಂತೆ ತನ್ನ ಸುತ್ತಲೂ ಭಯಾನಕವಾಗಿ ನಿಂತಿರುವ ಪೊದೆ-ಮಟ್ಟಿಗಳ ಪೈಕಿ ಯಾವುದರಿಂದ ಬೇಕಾದರೂ ಹುಲಿಯೋ, ಚಿರತೆಯೋ ನುಗ್ಗಿ ತನ್ನ ಮೇಲೆರಗಬಹುದು. ಅವಾದರೂ ಪರವಾಗಿಲ್ಲ, ಹೆಸರು ಹೇಳಬಾರದ, ಪ್ರೇತವೆಂಬ ಆ ಎರೆಡಕ್ಷರದ ಸೃಷ್ಟಿಯೇನಾದರೂ ಅಟಕಾಯಿಸಿಕೊಂಡಿತೆಂದರೆ... ಇವತ್ತಿಗೆ ತನ್ನ ಕಥೆ ಮುಗಿಯಿತೆಂದೇ ಅರ್ಥ!

ಭೂತಗಳ ಸಂಗತಿ ನೆನಪಾಗುತ್ತಿದ್ದಂತೆಯೇ ಸಂಭಾವನೆ ಭಟ್ಟರು ತಮ್ಮ ನಡಿಗೆಯ ವೇಗವನ್ನು ತೀವ್ರಗೊಳಿಸಿದರು. ಗುಡ್ಡದ ಮೇಲೆಲ್ಲಿಂದಲೋ ಇಳಿದು ಬಂಡೆಗಳ ಮೇಲೆ ಜಾರುತ್ತಾ ದಾರಿಗಡ್ಡವಾಗಿ ಹರಿದುಹೋಗುವ ಹಳ್ಳದ ಸದ್ದು ಬರುಬರುತ್ತಾ ಸಮೀಪವಾಗುತ್ತಾ ಬಂದು ಕೊನೆಗೆ ಕಣ್ಣೆದುರೇ ಪ್ರತ್ಯಕ್ಷವಾಯಿತು. ಆ ಹಳ್ಳವೊಂದನ್ನು ದಾಟಿದರೆ ಮುಗಿಯುತು, ಅಲ್ಲಿಂದಾಚೆಗೆ ಅರ್ಧ ಫರ್ಲಾಂಗಿನಲ್ಲೇ ತಾವು ಹೋಗಬೇಕಿರುವ ಮನೆ ಸಿಗುತ್ತದೆ. ಅಲ್ಲಿಗೆ ತಾವು ಸುರಕ್ಷಿತ! ಹಾಗಂದುಕೊಳ್ಳುತ್ತಾ ಭಟ್ಟರು ತಮ್ಮ ಪಂಚೆಯನ್ನು ಎತ್ತಿಕಟ್ಟಿಕೊಂಡು ತಣ್ಣಗೆ ಹರಿಯುತ್ತಿದ್ದ ನೀರಿನಲ್ಲಿ ಹೆಜ್ಜೆಯಿಟ್ಟರು. ಸಂಜೆಯ ಛಳಿ ತಾಕಿದ್ದ ನೀರು ಮತ್ತಷ್ಟು ಶೀತಲವಾಗಿತ್ತು. ಮೊಣಕಾಲಿನ ತನಕ ತುಂಬಿ ಹರಿಯುತ್ತಿರುವ ಹಳ್ಳವನ್ನು ತಳಕ್ ತಳಕ್ ಸದ್ದು ಮಾಡುತ್ತಾ ದಾಟಿ 'ಅಬ್ಬಾ' ಎಂದು ಉಸಿರೆಳೆದುಕೊಂಡರು.

ಆಗ ಮಲೆನಾಡಿನ ಪರಿಸ್ಥತಿಯಿದ್ದುದೇ ಹಾಗೆ. ಅದು ಹತ್ತೊಂಭತ್ತನೇ ಶತಮಾನದ ದ್ವಿತೀಯಾರ್ಧ ಭಾಗ. ಆ ಕಾಲದಲ್ಲಿ ಕತ್ತಲೆಂದರೆ ಘೋರಾಂಡ ಕತ್ತಲೆ. ನಿರ್ಜನವೆಂದರೆ ನರಪ್ರಾಣಿಯೂ ಇಲ್ಲದ ನಿರ್ಜನ. ಕಾಡೆಂದರೆ ಬೆಳಕನ್ನೂ ಒಳಗೆ ಬಿಡದಷ್ಟು ದಟ್ಟ ಕಾಡು! ಆಗ ಈಗಿನಂತೆ ಹತ್ತತ್ತು ನಿಮಿಷಕ್ಕೊಂದು ಬಸ್ಸುಗಳಿರಲಿಲ್ಲ. ಓಡಾಡಲಿಕ್ಕೆ ನೆಟ್ಟಗಿನ ರಸ್ತೆಗಳೇ ಇರಲಿಲ್ಲ. ಎಲ್ಲೋ ಹಗಲಿಗೊಂದು, ರಾತ್ರೆಗೊಂದು ಬರುವ ಬಸ್ಸಿಗೆ ಟಾರು ರಸ್ತೆಯೇ ಯಾಕೆ ಬೇಕು ಹೇಳಿ? ಹಾಗೆ ಬರುತ್ತಿದ್ದ ಬಸ್ಸುಗಳಾದರೋ ಪ್ರಯಾಣಿಕರನ್ನು ನೇರ ಅವರವರ ಮನೆ ಬಾಗಿಲಿಗೆ ಬಿಡುತ್ತಿರಲಿಲ್ಲ. ಮನೆಯಿಂದ ಎಷ್ಟೋ ಕಿಲೋಮೀಟರ್ ದೂರದಲ್ಲಿರುವ ರಹದಾರಿಯಲ್ಲಿ ಅವರನ್ನಿಳಿಸಿ ತನ್ನ ಪಾಡಿಗೆ ತಾನು ಮುಂದೆ ಹೋಗುತ್ತಿತ್ತು. ಅಲ್ಲಿಂದ ಹೊರಟ ಪ್ರಯಾಣಿಕರು ಗುಡ್ಡ ಹತ್ತಿ, ಹೊಳೆದಾಟಿ, ಕಾಡು-ಮಟ್ಟಿಗಳಲ್ಲಿ ಹಾದು ಮನೆ ಸೇರಬೇಕಾಗಿತ್ತು.

ಮಲೆನಾಡಿನಲ್ಲಿ ಮನೆಗಳಿದ್ದದ್ದೂ ಹಾಗೆಯೇ. ಇಲ್ಯಾವುದೋ ಗುಡ್ಡದ ತುದಿಯಲ್ಲಿ ಒಂದು ಮನೆಯಿದ್ದರೆ ಇನ್ನೊಂದು ಅಲ್ಲೆಲ್ಲೋ ಹೊಳೆಯಾಚೆಗಿನ ದಿಬ್ಬದ ಮೇಲಿರುತ್ತಿತ್ತು. ನಡುವೆ ಅಸಂಖ್ಯವಾದ ಮರಗಿಡಗಳ ದಟ್ಟ ಕಾನನ‌. ಸದಾ ತುಂಬಿ ಹರಿಯುವ ರಭಸದ ಹಳ್ಳ-ನದಿಗಳು. ಯಾವ ಅಪಾಯಕರ ಪ್ರಾಣಿಯೇ ಬೇಕಾದರೂ ಅಡಗಿರಬಹುದಾದ ದೈತ್ಯ ಪೊದೆ-ಮಟ್ಟಿಗಳು. ಇಂತಹಾ ವ್ಯ(ಅ)ವಸ್ಥೆಯಲ್ಲಿ ಮನುಷ್ಯರು ಬಿಡಿ, ಸುದ್ದಿ-ವಿಷಯಗಳೂ ಸಹಾ ಒಂದು ಊರಿಂದ ಇನ್ನೊಂದು ಊರಿಗೆ ದಾಟುವುದು ದುರ್ಭರವಾಗಿತ್ತು. ಎಲ್ಲೋ ಯಾರೋ ಸತ್ತ ವಿಷಯ ಅಲ್ಲಿಂದ ಇನ್ನೊಂದೂರಿಗೆ ತಲುಪಬೇಕೆಂದರೆ ಅದನ್ನು ಸ್ವತಃ ಮನುಷ್ಯನೇ ಹೊತ್ತೊಯ್ದು ಹೇಳಬೇಕು. ಹೀಗೆ ಮನುಷ್ಯರಂತೆ ಸುದ್ದಿ, ವಿಷಯಗಳೂ ಸುಲಭವಾಗಿ ಸಂಚರಿಸಲಾರದೆ ಇದ್ದಲ್ಲೇ ಇರುತ್ತಿದ್ದ ಕಾಲವದು.

ಇಂತಿಪ್ಪ ಹೊತ್ತಿನಲ್ಲಿ ಅಂತೂ ಇಂತೂ ಅಪಾಯಕಾರಿ ಕಾಡುದಾರಿಯನ್ನು ದಾಟಿ ಮನುಷ್ಯವಾಸದ ಕನಿಷ್ಠ ಒಂದು ಮನೆಯಾದರೂ ಇರುವ ಸುರಕ್ಷಿತ ವಲಯವನ್ನು ತಲುಪಿದೆನಲ್ಲಾ ಎಂದು ಸಂಭಾವನೆ ಭಟ್ಟರು ನಿಟ್ಟುಸಿರಿಟ್ಟರು. ಆದರೆ ಅವರಿಗೆ ತಿಳಿಯದ ಅತಿಮುಖ್ಯವಾದ ಸಂಗತಿಯೇನೆಂದರೆ..

ಮೃತ್ಯುಕರವಾದ ಪರಮ ಅಪಾಯಕಾರೀ ಕಾರಸ್ಥಾನದೊಳಕ್ಕೆ ಅವರು ಈಗಷ್ಟೇ ಹೆಜ್ಜೆಯಿಟ್ಟಿದ್ದರು!

                  *************

ಅದನ್ನು ಎಲ್ಲರೂ 'ಕಾಲ್ದೋಶ' ಎನ್ನುತ್ತಾರೆ.

ನಂಬಿಕೆಗಳ ಪ್ರಕಾರ ಹುಟ್ಟುವುದಕ್ಕೆ ಹೇಗೆ ಘಳಿಗೆಗಳಿವೆಯೋ ಸಾವಿಗೂ ಹಾಗೇ ಘಳಿಗೆ, ಸಮಯಗಳಿವೆ. ಸರಿಯಾದ ಸಮಯದಲ್ಲಿ ಪ್ರಾಣ ಪಕ್ಷಿ ಹಾರಿಹೋದವರು ನೇರವಾಗಿ ಆ ಲೋಕವನ್ನು ಸೇರಿಕೊಳ್ಳುತ್ತಾರೆ. ಅಂತೆಯೇ ಕೆಟ್ಟ ಘಳಿಗೆಯಲ್ಲಿ ಸತ್ತವರು ಪ್ರೇತಗಳಾಗಿ ಇದೇ ಲೋಕದಲ್ಲಿ ಅಲೆಯತೊಡಗುತ್ತಾರೆ. ಇದು ಸಾಮಾನ್ಯ ಲೆಕ್ಕಾಚಾರ. ಆದರೆ ಇವೆಲ್ಲವನ್ನೂ ಮೀರಿದ ಪರಮ ಕೆಟ್ಟ ಘಳಿಗೆಯೊಂದಿದೆ. ಅಪ್ಪೀತಪ್ಪೀ ಯಾರಾದರೂ ಆ ಕಡುಘಳಿಗೆಯಲ್ಲಿ ಸತ್ತರೆ...

ಅವರು ಸತ್ತ ಏಳನೆಯ ದಿನದಂದು ಭೀಕರ ಕಾಲ್ದೋಶದ ರೂಪದಲ್ಲಿ ಮರಳಿಬರುತ್ತಾರೆ!

ಸತ್ತ ಕಾಲಮಾನದಿಂದ ಉಂಟಾಗುವ ದೋಶವೇ ಕಾಲ ದೋಶ. ಈ ಕಾಲ್ದೋಶವೆಂಬುದು ಎಂತಹಾ ಭೀಕರವೆಂದರೆ ಅದು ಬರುವ ದಿನ ಸತ್ತವನ ಮನೆಮಂದಿಯೆಲ್ಲ ಮನೆಯನ್ನು ಬಿಟ್ಟು ಯಾವುದಾದರೂ ನೆಂಟರ ಮನೆಗೆ ಹೊರಟುಹೋಗುತ್ತಾರೆ. ಮನೆಯವರು ಮಾತ್ರವಲ್ಲ, ಅಲ್ಲಿ ಅಕ್ಕಪಕ್ಕದ ಮನೆಗಳೇನಾದರೂ ಇದ್ದರೆ ಅವರೂ ಸಹಾ ಎರೆಡ್ಮೂರು ದಿನಗಳ ಮಟ್ಟಿಗೆ ಯಾವುದಾದರೂ ನೆಂಟರ ಮನೆಯತ್ತ ಓಟಕೀಳುತ್ತಾರೆ. ಅದರಲ್ಲೂ ಕಾಲ್ದೋಶ ಮನೆಗೆ ಪ್ರವೇಶಿಸುವ ಆ ಏಳನೇ ದಿನ ಅಪ್ಪೀತಪ್ಪಿಯೂ ಯಾರೂ ಆ ಕೇರಿಯತ್ತ ಸುಳಿಯುವುದೇ ಇಲ್ಲ. ಏಕೆಂದರೆ ಆ ದಿನವಿಡೀ ಕಾಲ್ದೋಶ ಆ ಮನೆಯೊಳಗೇ ಓಡಾಡಿಕೊಂಡಿರುತ್ತದೆ. ಗ್ರಹಚಾರ ಕೆಟ್ಟ ಯಾವುದೇ ಮನುಷ್ಯನಾದರೂ ಅದರ ಸಮೀಪಕ್ಕೆ ಸುಳಿದದ್ದೇ ಆದರೆ, ಅವನನ್ನು ಭಯಾನಕವಾಗಿ ಸಾಯಿಸಿ ರಕ್ತ ಕುಡಿಯದ ಹೊರತು ಅದು ಹೊರಟುಹೋಗುವುದಿಲ್ಲ!

ಇಷ್ಟೆಲ್ಲಾ ವಿವರಣೆಗಳ ಹಿಂದಿನ ಅಸಲಿಯತ್ತೇನೆಂದರೆ‌‌‌‌.....

ನಮ್ಮ ಸಂಭಾವನೆ ಭಟ್ಟರು ಧುಸಧುಸನೆ ನಡೆದು ಬರುತ್ತಿದ್ದ ಆ ಒಂಟಿ ಮನೆಗೆ ಅಂದೇ ಕಾಲ್ದೋಶದ ಪ್ರವೇಶವಾಗಿತ್ತು!

                      ************

ತಿಂಗಳ ಕಾಲ ತೀವ್ರವಾಗಿ ಜ್ವರ, ಹೊಟ್ಟೆನೋವುಗಳಿಂದ ಬಳಲಿದ ನಂತರ ಏಳು ತಿಂಗಳ ತುಂಬು ಬಸುರಿಯಾಗಿದ್ದ ಶ್ರೀಧರನ ಹೆಂಡತಿ ಚಂದ್ರಾವತಿ ಕೆಲವೇ ದಿನಗಳ ಕೆಳಗೆ ಸಾವನ್ನಪ್ಪಿದ್ದಳು. ಖಾಯಿಲೆ ಬಂದಿತ್ತಾದರೂ ಅವಳದು ಸಾಯುವ ವಯಸ್ಸಲ್ಲ. ಆಯಸ್ಸು ತುಂಬದ, ಇನ್ನೂ ಬದುಕಿ ಬಾಳಬೇಕಿರುವ ವ್ಯಕ್ತಿ  ಅಕಾಲಿಕ ಮರಣಕ್ಕೀಡಾದರೆ ಪ್ರೇತವಾಗುತ್ತಾನೆ ಎಂಬುದು ನಂಬಿಕೆ‌. ಆದರೆ ಸತ್ತ ಚಂದ್ರಾವತಿಯ ಅಪರ ಕರ್ಮಗಳನ್ನು ಮಾಡಲು ಬಂದ ಪುರೋಹಿತರನ್ನು ಬೆಚ್ಚಿಬೀಳಿಸಿದ ಅಂಶ ಅದಲ್ಲ. ಪರಮ ಕೆಟ್ಟ ಸಮಯದಲ್ಲಿ ಆಕೆಯ ಆತ್ಮ ದೇಹವನ್ನು ತೊರೆದಿತ್ತು. ಅಷ್ಟು ಮಾತ್ರವಲ್ಲದೇ...

ಅದು ಪರಮ ಭೀಕರವಾದ 'ಕಾಲ್ದೋಶ'ದ ಘಳಿಗೆಯಾಗಿತ್ತು!

ಇನ್ನಿಲ್ಲದಂತೆ ಭೀತರಾದ ಪುರೋಹಿತರು ಮನೆಮಂದಿಗೆಲ್ಲಾ ಈ ವಿಷಯವನ್ನು ತಿಳಿಸಿ ಇನ್ನು ನಾಲ್ಕು ದಿನಗಳ ನಂತರ ಎಲ್ಲರೂ ಮನೆಬಿಡಬೇಕೆಂದೂ, ನಂತರ ಮೂರು ದಿನಗಳ ಕಾಲ ಯಾರೂ, ಯಾವ ಕಾರಣಕ್ಕೂ ಮನೆಯ ಸಮೀಪ ಸುಳಿಯಬಾರದೆಂದೂ, ದನಕರುಗಳನ್ನೂ ಅಲ್ಲಿ ಬಿಡದೆ ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕೆಂದೂ ತೀವ್ರವಾಗಿ ಎಚ್ಚರಿಸಿದ್ದರು. ಅಂತೆಯೇ ಚಂದ್ರಾವತಿ ಸತ್ತ ಐದನೇ ದಿನಕ್ಕೆ ಮನೆಮಂದಿಯೆಲ್ಲಾ ಗಂಟು ಮೂಟೆ ಕಟ್ಟಿಕೊಂಡು ಪಕ್ಕದ ಹಳ್ಳಿಯಲ್ಲಿದ್ದ ನೆಂಟರ ಮನೆಯತ್ತ ಮುಖ ಮಾಡಿದ್ದರು. ಅಲ್ಲದೆ ತಮ್ಮ ಮನೆಗೆ ಬರಬಹುದಾದ ಅಕ್ಕಪಕ್ಕದ ಊರು-ಕೇರಿಗಳ ಬಂಧು-ಮಿತ್ರರಿಗೂ ಆ ದಿನ ತಮ್ಮ ಕೇರಿಯತ್ತ ಸುಳಿಯಬಾರದೆಂದು ಗಂಭೀರವಾಗಿ ಎಚ್ಚರಿಸಿದ್ದರು. ಹಾಗೆ ಮೃತ್ಯುಸದೃಶವಾದ ಕಾಲ್ದೋಶದಿಂದ ಎಲ್ಲರನ್ನೂ ಕಾಪಾಡಿದ ನೆಮ್ಮದಿಯಲ್ಲಿ ಮನೆ ಬಿಟ್ಟಿದ್ದರು.

ಆದರೆ ಎರೆಡೋ ಮೂರೋ ವರ್ಷಕ್ಕೊಮ್ಮೆ ಊರಿಗೆ ಬರುವ ಸಂಭಾವನೆ ಭಟ್ಟರು ತಮ್ಮ ಮೃತ್ಯುವನ್ನು ಹುಡುಕಿಕೊಂಡು ಅದೇ ದಿನ ಅಲ್ಲಿಗೆ ಬರಬಹುದೆಂದು ಅವರಿಗಾದರೂ ಏನು ಗೊತ್ತಿತ್ತು?

                    ***********

"ಓಹೋಯ್.. ನಾನು ಸಂಭಾವನೆ ಭಟ್ಟ ಬಂದಿದೀನಿ ಬಾಗ್ಲು ತೆಗಿರೋಯ್"

ಅಂಗಳದ ಉಣುಗೋಲಿನ ಸಮೀಪ ನಿಂತ ಭಟ್ಟರು ಎರೆಡನೇ ಬಾರಿಗೆ ಹಾಗೆಂದು ಕೂಗುಹಾಕಿದರು‌. ಮೂರ್ಸಂಜೆಯ ಹೊತ್ತಿಗೆ ಸಣ್ಣ ದೀಪವನ್ನೂ ಹಚ್ಚದೇ ಮನೆಮಂದಿಯೆಲ್ಲ ಕತ್ತಲಲ್ಲಿರುವುದು ಅವರಲ್ಲಿ ಕೊಂಚ ಅನುಮಾನವನ್ನು ಹುಟ್ಟುಹಾಕಿತ್ತು. ಕಾದು ನಿಂತಿರುವ ತಮ್ಮ ಬೆನ್ನ ಹಿಂದಿನ ಅಂಧಕಾರದಲ್ಲಿ ಯಾರೋ ನಿಂತಿರುವಂತೆ ಅವರಿಗೆ ಭಾಸವಾಗತೊಡಗಿತ್ತು. ಬಗಲಿಗೆ ನೇತುಹಾಕಿಕೊಂಡಿದ್ದ ಜೋಳಿಗೆಯನ್ನು ಕೆಳಗಿಡಲೇ ಬೇಡವೇ ಎಂದು ಯೋಚಿಸುತ್ತಲೇ ಮತ್ತೊಮ್ಮೆ ಕೂಗುಹಾಕಲೆಂದು ಬಾಯಿ ತೆರೆದರು..

ಅಷ್ಟರಲ್ಲಿ ಆ ಮನೆಯ ತೆರೆದ ಬಾಗಿಲ ಹಿಂದಿನ ಕತ್ತಲಿನೊಳಗಿಂದ ಕದಲುತ್ತಾ ಆಕೃತಿಯೊಂದು ಹೊರಬಂತು.

ಭಟ್ಟರ ಎಡಗಣ್ಣೇಕೋ ಪಿಟಪಿಟನೆ ಹೊಡೆದುಕೊಳ್ಳತೊಡಗಿತು. ಈ ಸಂಭಾವನೆ ಭಟ್ಟರ ವಿಶೇಷ ಗುಣವೆಂದರೆ, ಯಾವಾಗಲೋ ಒಮ್ಮೆ ಬರುವುದಾದರೂ ಅವರಿಗೆ ತಾವು ಓಡಾಡುವ ಪ್ರತಿ ಊರು, ಪ್ರತಿ ಮನೆ, ಪ್ರತಿ ಮಂದಿಯ ಬಗ್ಗೆಯೂ ತಿಳಿದಿರುತ್ತದೆ. ಯಾವ ಮನೆಯಲ್ಲಿ ಎಷ್ಟು ಜನರಿದ್ದಾರೆ, ಅವರ ನೆಂಟರಿಷ್ಟರು ಯಾವ ಊರಿನಲ್ಲಿದ್ದಾರೆ ಎಂಬ, ತಮಗೆ ಉಪಯೋಗಕ್ಕೆ ಬರುವ ಪರಿಚಯಗಳನ್ನು ಅವರೆಂದಿಗೂ ಮರೆಯುವುದೇ ಇಲ್ಲ. ಬೇರೆ ಬೇರೆ ಊರಿನ ಬೇರೆ ಬೇರೆ ಮನೆಗಳಿಗೆ ಹೋದಾಗ 'ನಾನು ನಿಮ್ಮ ಸಂಬಂಧಿಕರಾದ ಇಂತಹವರಿಗೆ ಪರಿಚಯವಿರುವವನು' ಎಂದು ಹೇಳಿ ಅವರಿಂದ ಆತಿಥ್ಯ ಪಡೆಯುವುದು ಅವರ ಅಭ್ಯಾಸ. ಇಂತಿದ್ದ ಭಟ್ಟರಿಗೆ ಈಗ ಹೊರಬಂದ ಆ ಹೆಂಗಸನ್ನು ನೋಡಿ ಆಶ್ಚರ್ಯವಾಯಿತು. ಅವರಿಗೆ ತಿಳಿದಿರುವಂತೆ ಆ ಮನೆಯಲ್ಲಿದ್ದುದು ಆರೇ ಮಂದಿ. ಮಹಾಬಲ, ಅವನ ಹೆಂಡತಿ ವಿಜಯಮ್ಮ, ಗಂಡು ಮಕ್ಕಳಾದ ಶ್ರೀಧರ ಹಾಗೂ ಶಶಿಧರ. ಹೆಣ್ಮಕ್ಕಳಾದ ಗಂಗಾವತಿ ಮತ್ತು ಶರಾವತಿ. ಈಗ ಇಲ್ಲಿ ಕತ್ತಲಿನ ಕೆತ್ತನೆಯೊಂದು ಗೋಡೆಯಿಂದೆದ್ದು ಬಂದಂತೆ ಕದಲುತ್ತಾ ಬಂದಿರುವ ಹೆಂಗಸನ್ನು ಅವರು ಹಿಂದೆಂದೂ ನೋಡಿರಲಿಲ್ಲ. ಬಹುಷಃ ಹಿರೀಮಗ ಶ್ರೀಧರನಿಗೆ ಮದುವೆಯಾಗಿರಬೇಕೆಂದು ಅಂದುಕೊಂಡು ತಮ್ಮ ಜೋಳಿಗೆಯನ್ನು ಜಗುಲಿ ಕಟ್ಟೆಯ ಮೇಲಿಟ್ಟು "ಉಸ್ಸಪ್ಪಾ" ಎನ್ನುತ್ತಾ ಕುಳಿತುಕೊಂಡರು‌.

"ಏನ್ ಕೂಸೇ.. ಮೂರ್ಸಂಜೇಲಿ ಮನೆ ದೀಪನೆಲ್ಲ ನಂದ್ಸ್ಕ್ಯಂಡು ಎಲ್ಲ ಎಂತ ಮಾಡ್ತಿದೀರಿ ಹಾಂ? ಎಲ್ಲಿ ಮಹಾಬಲರಾಯರು ಮನೇಲಿಲ್ವಾ?"

"ಎಂತ ಮಾಡದು ಮಾವಯ್ಯಾ.. ಕೆಲವ್ರಿಗೆ ಬೆಳಕು ಇಷ್ಟ. ಇನ್ ಕೆಲವ್ರಿಗೆ ಕತ್ಲೆನೇ ಇಷ್ಟ. ಯಾರ್ಯಾರ ಆಟ ಎಲ್ಲೆಲ್ಲಿ ನಡೀತದೋ ಅದದ್ನೇ ಅಲ್ವಾ ಅವ್ರು ಇಷ್ಟ ಪಡೋದು...? ಸುಸ್ತಾಗಿ ಬಂದೀರಿ.. ಒಳಗ್ಬನ್ನಿ. ಎಲ್ರೂ ಪಕ್ದೂರ್ಗೆ ಹೋಗ್ಯಾರೆ. ನಮ್ ಕುಟುಂಬ್ದಲ್ಲೊಂದು ಸಾವಾಗಿದೆ"

ಏನೇನೋ ಮಾತನಾಡುವ ಈ ಹೆಂಗಸಿಗೆಲ್ಲೋ ಸ್ವಲ್ಪ ಮೊಳ್ಳಿರಬೇಕೆಂದೆಣಿಸಿದ ಭಟ್ಟರು "ಏನ್ಕೂಸೇ, ನಿನ್ನೊಬ್ಳನ್ನೆ ಬಿಟ್ಟೊಂಟೋಗಿದಾರಾ? ಅದೂ ಈ ಅಮವಾಸ್ಯೆ ಕತ್ಲಲ್ಲಿ? ಥೋ ಥೋ.. ಎಂತಾ ಕೆಲ್ಸಾಗೋತು.." ಎಂದು ಪಶ್ಚಾತ್ತಾಪ ಸೂಚಕವಾಗಿ ಪ್ಚ್ ಪ್ಚ್ ಎಂದರು.

"ಹೋಗೋರ್ ಹೋಗಿದಾರೆ. ನೀವಾದ್ರೂ ಬಂದಿದೀರಲ್ಲಾ? ಇನ್ನು  ಹೋಗೋದಕ್ಕಂತೂ ಆಗಲ್ಲ. ಒಳಗೇ ಬಂದ್ಬಿಡಿ" ಅವರಿಂದ ಕೆಲವೇ ಅಡಿಗಳಷ್ಟು ದೂರದಲ್ಲಿ ನಿಂತಿದ್ದ ಅವಳ ಮಾತು ಮುಖದ ಮೇಲೆ ಆವರಿಸಿದ್ದ ಕತ್ತಲಿನ ಮರೆಯಿಂದ ಕರ್ಕಶವಾಗಿ ಹೊರಬರುತ್ತಿತ್ತು. "ಸರಿ ಕೂಸೇ" ಎಂದ ಭಟ್ಟರು ಜೋಳಿಗೆ ಹೆಗಲಿಗೆ ಸಿಕ್ಕಿಸಿಕೊಂಡು ಮೇಲೆದ್ದರು. ಇನ್ನೇನು ಒಳಗಡಿಯಿಡಬೇಕು, ಅಷ್ಟರಲ್ಲಿ ಬೆಕ್ಕೊಂದು ಮನೆಯ ಹಿಂಭಾಗದಲ್ಲೆಲ್ಲೋ ವಿಕಾರವಾಗಿ ಕೂಗಿಕೊಂಡಿತು.

"ಊಟಕ್ಕೆ ಒಬ್ರೇ ಅಂದ್ಕೊಂಡಿದ್ದೆ. ಇನ್ನೊಬ್ರೂ ಸಿಕ್ಕಿದ್ರು"
ತಲೆಗೆ ಸೆರಗು ಹೊದ್ದು ಮರೆ ಮಾಡಿಕೊಂಡು ನಿಂತಿದ್ದವಳ ಮುಖದಲ್ಲಿನ ನಗು ಆ ಕತ್ತಲಲ್ಲೂ ತಮಗೆ ಕಂಡಿದ್ದು ಹೇಗೆಂದು ಭಟ್ಟರಿಗೂ ಅರ್ಥವಾಗಲಿಲ್ಲ. ಕೈಕಾಲು ತೊಳೆದುಕೊಂಡು ಒಳಬಂದವರು "ನಾ ಸಂಧ್ಯಾವಂದನೆ ಮಾಡ್ತೀನಿ. ನೀ ಅನ್ನಕ್ಕಿಡದಾರೆ ಇಟ್ಬಿಡು. ಬಹಳ ಹಸಿವಾಗಿದೆ" ಎಂದು ದೇವರ ಮನೆಯತ್ತ ನಡೆದರು. "ನಂಗೂ ಹಸಿವಾಗಿದೆ" ಎಂದ ಆ ಹೆಂಗಸು ಯಾವುದೋ ಆರ್ತನಾದವೊಂದು ಕರೆಯುತ್ತಿರುವಂತೆ ಮನೆಯ ಹಿಂಭಾಗದತ್ತ ನಡೆಯತೊಡಗಿದಳು. ದೇವರಕೋಣೆಯೊಳಗೆ ಅಡಿಯಿಟ್ಟ ಭಟ್ಟರು ಏನೋ ಹೊಳೆದಂತಾಗಿ ಕೂಗಿ ಹೀಗೆ ಕೇಳಿದರು.

"ಅಂದ್ಹಂಗೇ, ಕೇಳೋಕೆ ಮರ್ತೆ. ನಿನ್ ಹೆಸ್ರೆಂತದು ಕೂಸೇ?"

ಕತ್ತಲೊಳಗೆ ಕತ್ತಲಾಗಿ ನಡೆಯುತ್ತಿದ್ದ ಅವಳು ತಿರುಗದೆಯೇ ಉತ್ತರಿಸಿದಳು:

"ಚಂದ್ರಾವತಿ!"

                    *************

ಭಟ್ಟರು ದೇವರವಳ ಪ್ರವೇಶಿಸಿದರು. ಅಲ್ಲಿ ಹಚ್ಚದೇ ಕೆಲ ದಿನಗಳೇ ಕಳೆದಿರುವಂತಿರುವ ದೇವರ ದೀಪ, ಫೋಟೋಗಳಿಗೆ ಏರಿಸಿರುವ- ವಾರದ ಹಿಂದೆಯೇ ಬಾಡಿರುವ ಹೂಗಳನ್ನು ನೋಡಿದವರಿಗೆ ಅನುಮಾನವಾಯಿತಾದರೂ "ನೆಂಟರೊಬ್ಬರ ಸಾವಾಗಿದೆ" ಎಂಬ ಚಂದ್ರಮತಿಯ ಮಾತು ನೆನಪಾಯಿತು‌. ಸೂತಕವಿರುವ ಮನೆಯಲ್ಲಿ ಯಾರು ದೀಪ ಹಚ್ತಾರೆ? ಹಾಗಂದುಕೊಂಡು ಸಂಧ್ಯಾವಂದನೆ ಆರಂಭಿಸಿದರು. ಮನಸ್ಸಿನೊಳಗಿನ ಮಂತ್ರಗಳ ಸದ್ದಲ್ಲದೆ ಬೇರ್ಯಾವ ಶಬ್ದವೂ ಅಲ್ಲಿರಲಿಲ್ಲ‌. ತರ್ಪಣ ಕೊಟ್ಟು, ಆಸನ ಪೂಜೆ ಮಾಡಿ, ಮುದ್ರಾಪೂಜೆ ಮುಗಿಸಿ ಇನ್ನೇನು ಗಾಯತ್ರೀ ಮಂತ್ರ ಜಪಿಸಬೇಕು,

"ಮೀಈಈಯ್ ಯಾಂವ್ssssss...."

ನಿಶ್ಯಬ್ದವನ್ನು ಛಿದ್ರಗೊಳಿಸುತ್ತಾ ಅತೀ ಸಮೀಪದಿಂದಲೇ ಕೇಳಿಬಂದ, ಬೆಕ್ಕೊಂದು ಪರಮ ಯಾತನೆಯಲ್ಲಿ ಚೀತ್ಕರಿಸಿದ  ಆ ಕಿರುಚಾಟದ ತೀವ್ರತೆಗೆ ಜಪಮಾಲೆ ಹಿಡಿದ ಅವರ ಕೈ ಕಂಪಿಸಿತು. ಪಾಪದ ಬೆಕ್ಕು. ಕುರ್ಕಕ್ಕೋ, ನರಿಗೋ ಬಲಿಯಾಗಿರಬೇಕೆಂದು ಭಾವಿಸಿದರಾದರೂ ಯಾವುದಕ್ಕೂ ಇರಲೆಂದು "ಚಂದ್ರಾವತೀ" ಎಂದು ಕರೆದರು. ಅತ್ತಕಡೆಯಿಂದ ನಿಶ್ಯಬ್ದವೇ ಉತ್ತರವಾದಾಗ ಮತ್ತೆರೆಡು ಬಾರಿ ಕರೆದರು.

"ಅನ್ನ ಬೇಯಿಸ್ತಿದೀನಿ ಮಾವಯ್ಯಾ.."
ಉತ್ತರಿಸಿದವಳ ಮಾತು ಈಗಷ್ಟೇ ಏನನ್ನೋ ಕುಡಿದಿರುವ ವದ್ದೆ ಗಂಟಲಿನಿಂದ ಹೊರಬಂದತಿತ್ತು. ಅದನ್ನು ಅಷ್ಟಾಗಿ ತಲೆಗೆ ಹಾಕಿಕೊಳ್ಳದ ಭಟ್ಟರು ಜಪ ಮುಂದುವರಿಸಿದರು. ಕೆಲ ನಿಮಿಷಗಳಲ್ಲಿ ಸಂದ್ಯಾವಂದನೆ ಮುಗಿಸಿದವರು ಜಪ ಮಾಡಿದ ನೀರನ್ನೆಸೆಯಲೆಂದು ಮೊಬ್ಬು ಬೆಳಕಿನ ಬುಡ್ಡಿದೀಪ ಹಿಡಿದುಕೊಂಡು ಮನೆಯ ಹಿಂದಿನ ಅಂಗಳದಂಚಿಗೆ ಬಂದರು‌. ಅಲ್ಲಿ ಸಾಲಾಗಿ ಪೇರಿಸಿರುವ ಎತ್ತರದ ಕಟ್ಟಿಗೆ ರಾಶಿಯ ಪಕ್ಕ ನಿಂತು ಹರಿವಾಣದಲ್ಲಿನ ನೀರನ್ನು ಆಚೆಗಿನ ಕತ್ತಲಿಗೆ ಎಸೆದು ಮರಳಲೆಂದು ತಿರುಗಿದವರ ಹೆಗಲ ಮೇಲೆ ಬೆಚ್ಚಗಿರುವ, ದಪ್ಪನೆಯ ದ್ರವದ ಹನಿಯೊಂದು ತೊಟ್ಟಿಕ್ಕಿತು.‌ ಏನೆಂದು ಮುಟ್ಟಿ ನೋಡುವಷ್ಟರಲ್ಲಿ ಇನ್ನೊಂದು ಹನಿ ಬಿತ್ತು‌. ತಲೆಯೆತ್ತಿ ನೋಡಿದವರಿಗೆ ರಕ್ತವೇ ಹೆಪ್ಪುಗಟ್ಟುವಂತಹಾ ದೃಶ್ಯವೊಂದು ಅಲ್ಲಿ ಕಂಡಿತು..

ಪೇರಿಸಿಟ್ಟ ಕಟ್ಟಿಗೆಗಳ ಚೂಪು ತುದಿಯಲ್ಲಿ ನುಜ್ಜುಗುಜ್ಜಾಗಿರುವ ಕಡುಗಪ್ಪು ಬೆಕ್ಕೊಂದರ ಶರೀರವನ್ನು ಚುಚ್ಚಿ ನೇತುಹಾಕಲಾಗಿತ್ತು! ಬಾಯಿಕಳೆದುಕೊಂಡು, ಕೈಗಳನ್ನಗಲಿಸಿ ಬರ್ಬರವಾಗಿ ನೇತಾಡುತ್ತಿದ್ದ ಅದರ ದೇಹದಿಂದ ತೊಟ್ಟಿಕ್ಕುತ್ತಿದ್ದ ಬಿಸಿರಕ್ತ ಅದು ಕೆಲವೇ ನಿಮಿಷಗಳ ಹಿಂದಷ್ಟೇ ಸತ್ತಿದೆಯೆಂಬುದನ್ನು ಸಾರಿ ಹೇಳುತ್ತಿತ್ತು! ಅದನ್ನು ನೇತುಹಾಕಿರುವ ರೀತಿಯನ್ನು ನೋಡಿದರೆ ಇದನ್ನು ಕೊಂದಿದ್ದು ಯಾವುದೋ ಪ್ರಾಣಿಯಲ್ಲವೆಂಬುದು ಸ್ಪಷ್ಟವಾಗಿತ್ತು!

ತಮ್ಮಿಬ್ಬರ ಹೊರತಾಗಿ ಇಲ್ಯಾರೋ ಇದ್ದಾರೆ. ಅದು ಮನುಷ್ಯನಂತೂ ಖಂಡಿತಾ ಅಲ್ಲ! ಈ ಸಂಗತಿ ಹೊಳೆಯುತ್ತಿದ್ದಂತೆಯೇ ಭೀಕರವಾಗಿ ಬೆಚ್ಚಿಬಿದ್ದ ಭಟ್ಟರು ಹರಿವಾಣವನ್ನು ಅಲ್ಲೇ ಕೈಬಿಟ್ಟು ಚಂದ್ರಾವತಿಯಿರುವ ಅಡಿಗೆಕೋಣೆಯತ್ತ ಓಡಿದರು. ಏದುಸಿರುಬಿಡುತ್ತಾ ಕೋಣೆ ಪ್ರವೇಶಿಸಿದವರಿಗೆ ಜೀವಮಾನದಲ್ಲೆಂದೂ ನೋಡದಂತಹಾ ಪರಮ ಭಯಾನಕ ದೃಶ್ಯವೊಂದು ಅಲ್ಲಿ ಕಂಡಿತು‌.

ಕತ್ತಲಿನಲ್ಲಿ ಮುಳುಗಿದ್ದ ಅಡಿಗೆಮನೆಯ ಆಚೆ ಮೂಲೆಯಲ್ಲಿ ಒಲೆಯೊಂದು ಧಗಧಗನೆ ಉರಿಯುತ್ತಿತ್ತು. ಹತ್ತಾರು ಒಣ ಕಟ್ಟಿಗೆಗಳನ್ನು ಒಟ್ಟಿಗೇ ಹಾಕಿದಂತೆ ಬಿರುಸಾಗಿ ಧಗಧಗಿಸುತ್ತಿದ್ದ ಆ ಅಡುಗೆ ಒಲೆಗೆ ಮುಖಮಾಡಿ ಕುಳಿತಿದ್ದ ಚಂದ್ರಾವತಿಯ ತಲೆ ವಿಕಾರವಾಗಿ ಕೆದರಿತ್ತು. ಅದಕ್ಕಿಂತಲೂ ಭಯಾನಕವಾದ ಇನ್ನೊಂದು ಸಂಗತಿಯೆಂದರೆ...

ಒಲೆಗೆದುರಾಗಿ ಕುಳಿತಿದ್ದ ಅವಳು ತನ್ನ ಎರೆಡು ಕಾಲುಗಳನ್ನೂ ಒಲೆಯೊಳಗೆ ಕಟ್ಟಿಗೆಯಂತೆ ಒಟ್ಟಿಕೊಂಡಿದ್ದಳು! ಅವಳ ಕಾಲಿನ ಮೂಳೆಗಳನ್ನು ಸುಡುತ್ತಿದ್ದ ಬೆಂಕಿಯ ಜ್ವಾಲೆಗಳು ತಕತಕನೆ ಕುಣಿಯುತ್ತಾ ಅಬ್ಬರಿಸುತ್ತಿದ್ದವು!  ಕಥೆಗಳಲ್ಲೂ ಕೇಳದ ಆ ಭಯಾನಕ ದೃಶ್ಯವನ್ನು ನೋಡುತ್ತಿದ್ದಂತೆಯೇ ಅವರ ನರಮಂಡಲದಲ್ಲಿನ ಸಕಲ ನರಗಳೂ ಇಮ್ಮಡಿ ವೇಗದಲ್ಲಿ ಪತರಗುಟ್ಟತೊಡಗಿದವು. "ಅಮ್ಮಯ್ಯೋ" ಎಂದು ವಿಕಾರವಾಗಿ ಚೀರಿಕೊಂಡ ಅವರಿಗೆ ಇದು ಸ್ವಲ್ಪ ಹೊತ್ತಿಗೆ ಮುಂಚೆ ಕೂಗಿದ ಬಡಪಾಯಿ ಬೆಕ್ಕಿನ ಆರ್ತನಾದದ್ದೇ ಮುಂದುವರಿದ ಭಾಗವೇನೋ ಅನ್ನಿಸಿತು. ಆ ಸದ್ದು ಕೇಳುತ್ತಿದ್ದಂತೆಯೇ ಒಲೆಯ ಮುಂದಿದ್ದ ಆ ಭಯಾನಕ ಪ್ರೇತವು ತಲೆಯೆತ್ತಿನೋಡಿತು. ಆಗ ಕಂಡಿತು.. ಜ್ವಾಲೆಯ ಬೆಳಕಿನಲ್ಲಿ ಕೆಂಪಗೆ ಹೊಳೆಯುತ್ತಿದ್ದ, ಇನ್ನೂ ಹಸಿಯಾರದ ರಕ್ತವನ್ನು ಬಾಯಿಗೆಲ್ಲಾ ಬಳಿದುಕೊಂಡಿರುವ ಆ ಭಯಾನಕ ಭೂತದ ವಿಕಾರ ಮುಖ. ಸಾವಿಗೆ ಮಾತ್ರ ಇರಬಹುದಾದ ಕ್ರೂರ ಮುಖ!

ಬದುಕಿನ ಅಷ್ಟೂ ವರ್ಷಗಳಲ್ಲಿ ಸಂಪಾದಿಸಿದ ಶಕ್ತಿಯನ್ನೆಲ್ಲಾ ತಮ್ಮ ಕಾಲಿಗೆ ತಂದುಕೊಂಡ ಸಂಭಾವನೆ ಭಟ್ಟರು ನೇರ ದೇವರ ಮನೆಯತ್ತ ಓಡತೊಡಗಿದರು. ಉರಿಯುತ್ತಿದ್ದ ಕಾಲನ್ನು ಒಲೆಯೊಳಗೇ ಬಿಟ್ಟ ಕಾಲ್ದೋಶವು ಒಂದೇ ಕುಪ್ಪಳಕ್ಕೆ ಮೇಲೆದ್ದು ಕೆಂಪಗೆ ಕಾಯುತ್ತಿದ್ದ ಮೋಟು ಕಾಲಿನಲ್ಲೇ ಅವರನ್ನು ಹಿಂಬಾಲಿಸತೊಡಗಿತು. ಓಡುತ್ತಿದ್ದ ಭಟ್ಟರಿಗೆ ಎರೆಡೇ ಕೋಣೆಗಳಾಚೆಗಿನ ದೂರ ಮೈಲುಮೈಲುಗಳಂತೆ ಅನಿಸತೊಡಗಿತು. ಹೊರಗೆ ಕವಿದಿರುವ ಕಾಳ ಕತ್ತಲೆ, ಸತ್ತ ಬೆಕ್ಕು, ಒಲೆಯ ಬೆಂಕಿ.. ಇವೆಲ್ಲವೂ ಮೃತ್ಯುರೂಪತಾಳಿ ತನ್ನನ್ನು ಬೆನ್ನಟ್ಟಿಬರುತ್ತಿರುವಂತೆ ಅವರಿಗೆ ಭಾಸವಾಯಿತು. ಬದುಕಿನಲ್ಲೆಂದೂ ಜಿಗಿಯದಷ್ಟು ದೂರ ದೂರಕ್ಕೆ ಜಿಗಿಯುತ್ತಾ ಅಂತೂ ದೇವರ ಕೋಣೆಯೊಳಗೆ ನುಗ್ಗಿ ಬಾಗಿಲು ಜಡಿದು ದೇವರೆದುರು ನಡುಗುತ್ತಾ ಕುಳಿತುಬಿಟ್ಟರು‌. ಪ್ರಳಯವೇ ಬೆನ್ನಟ್ಟಿ ಬಂದಂತೆ ಹಿಂಬಾಲಿಸಿ ಬಂದ ಹೆಜ್ಜೆಗಳು ಕೋಣೆಯ ಹೊರಗಡೆ ಸ್ತಬ್ಧವಾದವು. ಮರುಕ್ಷಣವೇ ಕೋಣೆಯ ಮರದ ಬಾಗಿಲು ಧಡಧಡನೆ ಸದ್ದಾಗತೊಡಗಿತು. ಅದರ ಚಿಲಕವಂತೂ ಹೊರಗಿನಿಂದ ಬೀಳುತ್ತಿರುವ ಏಟನ್ನು ತಡೆಯಲಾರದೆ ತಟತಟನೆ ನಡುಗುತ್ತಾ ತೆರೆದುಕೊಳ್ಳತೊಡಗಿತು. ಭಟ್ಟರಿಗೆ ಸಾವು ನಿಶ್ಚಿತವೆಂಬುದು ಗೊತ್ತಿತ್ತು. ಆದರೆ ಅದು ಇಷ್ಟೊಂದು ಭಯಾನಕವೂ, ಬರ್ಬರವೂ ಆಗಿರುತ್ತದೆಂದು ತಿಳಿದಿರಲಿಲ್ಲ. ಇರುವ ಒಂದೇ ಒಂದು ಪ್ರಾಣವನ್ನು ಉಳಿಸಿಕೊಳ್ಳುವ ಕಡೆಯ ಪ್ರಯತ್ನವೆಂಬಂತೆ ಅವರು ದೇವರೆದುರು ಕುಳಿತು ಗಾಯತ್ರೀ ಮಂತ್ರವನ್ನು ಪಠಿಸತೊಡಗಿದರು.

"ಬಾಗಿಲೋ ತೆಗಿಯೋ.. ಹಸಿವಾಗಿದೆ ಅಡುಗೆ ಮಾಡು ಅಂದ್ಯಲ್ಲೋ.. ಈಗ ಊಟ ಮಾಡು ಬಾರೋ.. ಒಲೆ ಉರೀತಿದೆ. ನನ್ನ ಕಾಲು ಖಾಲಿಯಾಯ್ತು, ನಿನ್ನ ಕಾಲು ಕೂಡು ಬಾರೋ... ಲೋ ಭಟ್ಟಾ ಬಾಗಿಲು ತೆಗೆದು ಬಾರೋ... ಅಹ್ಹಹ್ಹಹ್ಹಹ್ಹಾsss.."

ಭಟ್ಟರು ಗಟ್ಟಿಯಾಗಿ ಕಣ್ಮುಚ್ಚಿಕೊಂಡರು. ಹೊರಗಡೆ ಮೃತ್ಯು ಸಂದೇಶ ಮುಂದುವರಿಯಿತು.

"ಇಪ್ಪತ್ತಾರೇ ವರ್ಷ ಕಣೋ.. ನನ್ನ ಸಾಯಿಸಿಯೇ ಬಿಡ್ತಲ್ಲೋ ಆ ದುರ್ವಿಧಿ.. ಆ ಕಾಲ ನನ್ನ ಕೊಂದೇ ಬಿಡ್ತಲ್ಲೋ.. ಹೊಟ್ಟೆಯಲಿದ್ದ ಮಗು ಹೊರಗೆ ಬರೋದಕ್ಕೂ ಬಿಡದೇ ಕೊಂದು ಬಿಡ್ತಲ್ಲೋ. ನಾನು ನರಳಾಡುವಾಗ ಬರಲಿಲ್ಲ. ಒದ್ದಾಡಿ ಸಾಯುವಾಗ ಬರಲಿಲ್ಲ. ಈಗ ಒಪ್ಪತ್ತಿನ ಊಟ ಕೇಳ್ಕೊಂಡು ಬಂದ್ಬಿಟ್ಯೇನೋ? ಹೇಗೆ ತೀರಿಸಿಕೊಳ್ಳಲೋ ಆ ಸೇಡನ್ನ? ನಿಮಗೆಲ್ಲಾ ಹೇಗೆ ಅರ್ಥ ಮಾಡಿಸ್ಲೋ ನಾನು ಅನುಭವಿಸಿದ ನೋವನ್ನ? ನಿನ್ನ ಕತ್ತು ಮುರಿದು ತೋರಿಸ್ಲಾ? ಹೊಟ್ಟೆ ಬಗೆದು ಕೈ ತಿರುಪಲಾ.. ಹೇಳೋ.. ಹೇಗೆ ತೀರಿಸಿಕೊಳ್ಳಲಿ ಹೇಳೋ... ಅಹ್ಹಹ್ಹಹ್ಹಹ್ಹಾsss.."


ಅರ್ಧಕ್ಕೇ ಕೊಲ್ಲಲ್ಪಟ್ಟ ಆಸೆಗಳು ದ್ವೇಶವಾಗಿ ಬದಲಾಗುತ್ತವೆ. ಅಂತಹಾ ದ್ವೇಶಗಳ ಪ್ರತೀಕಾರಕ್ಕೆ ಇಂಥವರೇ ಆಗಬೇಕೆಂದಿಲ್ಲ‌. ಅತೃಪ್ತ ಆತ್ಮಗಳು ವಂಚನೆ ತೋರಿದ ವಿಧಿಯ ಮೇಲಿನ ಮುಯ್ಯನ್ನು ಎದುರಿಗೆ ಸಿಗುವ ಯಾವುದೇ ಬಡಪಾಯಿಯ ಮೆಲೆ ತೀರಿಸಿಕೊಳ್ಳುತ್ತವೆ. ಇವತ್ತಿನ ಈ ಕೆಟ್ಟ ಘಳಿಗೆಯಲ್ಲಿ ಆ ಬಡಪಾಯಿ ತಾನೇ‌. ಹಾಗಂದುಕೊಂಡ ಭಟ್ಟರು ಹಣೆಯ ಮೇಲಿನ ಬೆವರನ್ನು ಒರೆಸಿಕೊಂಡರು. ಅವರ ಉಸಿರಾಟವೂ ಈಗ ಗಾಯತ್ರೀ ಮಂತ್ರವನ್ನೇ ಪಠಿಸುತ್ತಿತ್ತು. ಅವರಿಗೆ ತಿಳಿದಿತ್ತು: ತನಗೂ ಸಾವಿಗೂ ಇರುವ ಅಂತರ ಬರೀ ನಾಲ್ಕೇ ಹೆಜ್ಜೆ. ಕೋಣೆಯೊಳಗಿದ್ದರೆ ಉಳಿವು; ಹೊರಹೋದರೆ ಸಾವು! ಅವರು ಮತ್ತಷ್ಟು ದೃಢವಾಗಿ ಮಂತ್ರ ಜಪಿಸತೊಡಗಿದರು. ಹೊರಗಡೆ ಇದ್ದಕ್ಕಿದ್ದಂತೆ ಎಲ್ಲವೂ ಸ್ತಬ್ದವಾಯಿತು. ಸಣ್ಣ ಹೆಜ್ಜೆಯ ಸಪ್ಪಳವೂ ಇಲ್ಲ, ಚಿಕ್ಕ ಕದಲುವಿಕೆಯ ಶಬ್ದವೂ ಇಲ್ಲ. ಕಾಲವೇ ನಿಂತುಹೋಗಿರುವಂತಹಾ ಭಯಾನಕ ನಿಶ್ಯಬ್ದ! ಭಟ್ಟರು ಕುಳಿತಲ್ಲೇ ಕಿವಿ ನಿಮಿರಿಸಿದರು..

"ಪುರುಷೋತ್ತಮಾ..."

ಕೋಣೆಯ ಮುಚ್ಚಿದ ಬಾಗಿಲೇ ಮಾತನಾಡುತ್ತಿರುವಂತೆ ತುಂಬಾ ಸ್ಪಷ್ಟವಾಗಿತ್ತು ಆ ಮಾತು.ಭಟ್ಟರು ಬೆಚ್ಚಿಬಿದ್ದರು. ಎಷ್ಟೋ ವರ್ಷಗಳ ನಂತರ ತನನ್ನು ತನ್ನ ಹೆಸರಿನಿಂದ ಕರೆಯುತ್ತಿರುವ ಆ ಧ್ವನಿ ಬೇರ್ಯಾರದ್ದೂ ಅಲ್ಲ, ತನ್ನ ಹೆತ್ತ ಅಮ್ಮನದ್ದು!

"ಪುರ್ಷೀ.. ನಾನು ನಿನ್ನಮ್ಮ ಕಣೋ... ಎಷ್ಟು ವರ್ಷದ ನಂತರ ನಿನ್ನ ನೋಡೋಕಂತ ಬಂದಿದೀನಿ, ನೀನು ಕೋಣೆಯೊಳಗೆ ಕೂತುಕೊಂಡಿದೀಯಲ್ಲಾ. ಆಚೆ ಬಾ ಪುರ್ಷೂ.. ನಿನಗೆ ನೆನಪಿಲ್ವಾ? ನಿನ್ನ ಎಷ್ಟೊಂದು ಪ್ರೀತಿಮಾಡ್ತಿದ್ದೆ ನಾನು? ನಿನಗೆ ಜ್ವರ ಬಂದಾಗ ರಾತ್ರೆಯಿಡೀ ಎದ್ದು ನೋಡಿಕೊಂಡಿದ್ದೆ. ನಿಂಗೆ ಇಷ್ಟಾಂತ ಮೆಂತ್ಯದ ದೋಸೆ ಮಾಡಿಕೊಡ್ತಿದ್ದೆ. ಎಲ್ಲಾ ಮರೆತು ಬಿಟ್ಯೇನೋ? ಬಾರೋ.. ಈ ನಿನ್ನ ಅಮ್ಮನ್ನನ್ನ ಈ ಕ್ರೂರ ಕಾಲ್ದೋಶದ ಕೈಯಿಂದ ಬಿಡಿಸ್ಕೋ ಬಾರೋ.."

ಭಟ್ಟರ ಎದೆಯಲ್ಲಿ ಮುಳ್ಳು ಕಲಸಿದಂತಾಯಿತು. ಅಮ್ಮ.. ತನ್ನ ಅಮ್ಮ!  ಇಪ್ಪತ್ತು ವರ್ಷಗಳ ಹಿಂದೆ ದೂರಾದ, ತಾನು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ಅಮ್ಮ!! ಮರಳಿ ಬಂದಿದ್ದಾಳೆ.. ಇಲ್ಲೇ ಬಾಗಿಲ ಬಳಿಯಲ್ಲಿ ನಿಂತು ತನ್ನನ್ನು ಕರೆಯುತ್ತಿದ್ದಾಳೆ.. ಏಳಬೇಕು.. ಆ ಕಾಲ್ದೋಶದ ಕೈಯಿಂದ ಅವಳನ್ನು ಬಿಡಿಸಬೇಕು.. ಏಳಬೇಕು.. ಏ.."
ಮನಸ್ಸಿನ ಒಂದು ಭಾಗ ಹಾಗೆಂದು ಚಡಪಡಿಸುತ್ತಿದ್ದರೆ ಅದನ್ನು ಹಿಡಿತದಲ್ಲಿಡಲು ಭಟ್ಟರು ಮತ್ತಷ್ಟು ಬಿಗಿಯಾಗಿ ಕಣ್ಮುಚ್ಚಿಕೊಂಡರು. ಅಲ್ಲ.. ಇದು ಅಮ್ಮನಲ್ಲ‌. ತನ್ನನ್ನು ಸಾವಿನೆಡೆಗೆ ಕರೆಯುತ್ತಿರುವ ಕಪಟ ದನಿ! ಸೋಲಬಾರದು.

ಹೊರಗೆ ಆ ದೀನ ದನಿ ಮುಂದುವರಿಸಿತು.

"ಮಗನೇ.. ಬಹಳ ನೋವಾಗ್ತಿದೆ ಕಣೋ.. ತಡೆಯೋಕಾಗ್ತಿಲ್ಲ.. ಬಾರೋ.. ಬಂದು ಬಿಡಿಸೋ.. ಈ ಪಿಶಾಚಿಯಿಂದ ನನ್ನ ಉಳಿಸ್.. ಆರ್ವ್ ರ್ರ್ರ್.."
ಆ ಕೊನೆಯ ಮಾತು ಕತ್ತಿನೊಳಗೇ ಉಳಿದು ಯಾವುದೋ ದ್ರವದೊಂದಿಗೆ ಕಲಸಿಹೋದಂತೆ ವಿಕಾರ ಸದ್ದಾಯಿತು. ಭಟ್ಟರಿಗೆ ಹೊಟ್ಟೆಯೆಲ್ಲಾ ತೊಳೆಸಿದಂತೆ ಸಂಕಟವಾಯಿತು‌. ಆದರೆ ಅವರಿಗೆ ಗೊತ್ತಿತ್ತು‌‌. ಇದು ಮರಣ ಪ್ರಹಸನದ ಕೊನೆಯ ಭಾಗ. ಹೊರಗಡೆ ಬೆಳಗಿನ ಎರೆಡನೇ ಜಾವ ಶುರುವಾಗುವ ಹೊತ್ತಿಗೆ ಕಾಲ್ದೋಶ ನಿರ್ಗಮಿಸುತ್ತದೆ. ಅವರು ಅಷ್ಟಂದುಕೊಳ್ಳುವ ಹೊತ್ತಿಗೇ ಹೊರಗಡೆ ಸ್ವರಗಳು ತೀವ್ರರೂಪದಲ್ಲಿ ಅರಚಾಡತೊಡಗಿದವು. ತೀರಿಹೋದ ತಂದೆ, ಬಿಟ್ಟುಹೋದ ಮಡದಿ, ಬಾಲ್ಯದಲ್ಲಿ ಮುದ್ದುಗರೆಯುತ್ತಿದ್ದ ಅಜ್ಜ.. ಬದುಕಿನಲ್ಲಿ ತಾನು ಉತ್ಕಟವಾಗಿ ಪ್ರೀತಿಸಿದವರೆಲ್ಲಾ ಮುಚ್ಚಿದ ಬಾಗಿಲಿನ ಆಚೆಕಡೆ ಅಶರೀರವಾಣಿಗಳಾಗಿ ನಿಂತು ಹೃದಯವಿದ್ರಾವಕವಾಗಿ ಕರೆದುಹೋದರು. ತಮ್ಮ ನಲವತ್ತೂ ಚಿಲ್ಲರೆ ವರ್ಷಗಳ ಇಡೀ ಬದುಕೇ ಹೀಗೆ ಮರುಪ್ರಸಾರವಾಗುವುದನ್ನು ಕೇಳಿಯೂ ಕೇಳದಂತೆ ಭಟ್ಟರು ಒಳಗೇ ಉಳಿದುಬಿಟ್ಟರು.

ಪುರುಷೋತ್ತಮನೆಂಬ ಯಾರಿಗೂ ಗೊತ್ತಿಲ್ಲದ ಹೆಸರಿನ ಸಂಭಾವನೆ ಭಟ್ಟರ ಬದುಕಿನಲ್ಲೆಂದೋ ಬಂದು ಹೋದ ನಾನಾ ಬಂಧುಗಳ ಪಾತ್ರಗಳನ್ನು ತೊಟ್ಟು ಕುಣಿದ ಕಾಲ್ದೋಶವು ಕೊನೆಗೂ ಸೋಲೊಪ್ಪಿದಂತೆ ಕಂಡಿತು. ಅದು ಹೊರಡುವ ಸಮಯ ಹತ್ತಿರಬಂದಿತ್ತು. ತನಗೆ ಸಿಕ್ಕಿದ್ದ ಸಮಯದಲ್ಲಿ ಒಂದು ನರಬಲಿಯನ್ನೂ ಪಡೆಯಲಾರದೇ ಹೋದ ಕೋಪದಲ್ಲಿ ಕತ್ತಲೆಯೂ ಅದುರುವಂತೆ ಅದು ಹೀಗೆ ಅಬ್ಬರಿಸಿತು. "ಬರಲ್ವಾ? ಹೊರಗೆ ಬರಲ್ವಾ? ಹೋಗ್ತೀನೋ. ನಾನೇ ಹೋಗ್ತೀನಿ‌‌. ಆಯುಷ್ಯ ಗಟ್ಟಿ ಇದೆ ನಿಂದು. ಆದರೆ ನೆನಪಿಟ್ಕೋ, ಮುಂದೆ ಯಾವತ್ತೋ ಒಂದಿನ ನೀನು ದಾರಿ ತಪ್ಪಿ ತಲುಪೋ ಯಾವುದೋ ಒಂದು ಮನೆಯಲ್ಲಿ ನಿನ್ನ ಹಿಡಿದೇ ತೀರ್ತೀನಿ"
ಅಷ್ಟಂದ ಆ ಸ್ವರ ಕೀರಲಾಗಿ, ಅಳುವಾಗಿ, ಗಹಗಹಿಕೆಯಾಗಿ ಮೆಲ್ಲನೆ ದೂರವಾಗತೊಡಗಿತು. ಇದೂ ಕಾಲ್ದೋಶದ ಹೊಸತೊಂದು ನಾಟಕವಿರಬೇಕೆಂದೆನಿಣಿಸಿದ ಭಟ್ಟರು ಜಪ ಮುಂದುವರಿಸಿದರು. ಅಷ್ಟರಲ್ಲಿ ಮನೆಯಾಚೆಗೆಲ್ಲೋ ನಾಯಿಯೊಂದು ವಿಕಾರವಾಗಿ ನರಳಿದ ಸದ್ದು ಸುತ್ತಲೂ ಗುಂಯ್ಯನೆ ಪರಿಭ್ರಮಿಸಿ ರಾತ್ರೆಯ ನೀರವದೊಳಗೆ ಲೀನವಾಯಿತು.

ಮರುದಿನ  ಮರಳಿಬಂದ ಮನೆಯ ಸದಸ್ಯರಿಗೆ ಮನೆಯ ಸಮೀಪದ ದಾರಿಯಲ್ಲಿ ವಿಕಾರವಾಗಿ ಸತ್ತು ಬಿದ್ದಿರುವ ಬೀದಿನಾಯಿಯೂ, ಮನೆಯೊಳಗೆ ದೇವರವಳದಲ್ಲಿ ಮೂರ್ತಿಯನ್ನು ತಬ್ಬಿಕೊಂಡು ನಿದ್ರೆಹೋಗಿರುವ ಸಂಭಾವನೆ ಭಟ್ಟರೂ ಕಣ್ಣಿಗೆ ಬಿದ್ದರು.

('ತುಷಾರ'ದ  ಡಿಸೆಂಬರ್ 2019ರ ಸಂಚಿಕೆಯಲ್ಲಿ ಪ್ರಕಟಿತ)

ಗುರುವಾರ, ನವೆಂಬರ್ 21, 2019

ಬಸ್ಸೆನ್ನುವ ಸಂಭ್ರಮಗಳ ಸಾಗಣೆಕಾರ




ಭಾರತದ ಸಾರಿಗೆ ಇತಿಹಾಸದಲ್ಲಿ ರೈಲಿನ ನಂತರ ಅತಿ ಹೆಚ್ಚು ಜನರಿಂದ ಬಳಸಲ್ಪಡುತ್ತಿರುವ ವಾಹಿನಿಯೆಂದರೆ ಅದು ಬಸ್ಸು. ಇದು, ಮನೆಮನೆಯ ಬಾಗಿಲಿನಲ್ಲೂ ಬೈಕು, ಕಾರು, ಓಮಿನಿಗಳು ನಿಂತಿರುವ ಇಂದಿನ ಕಾಲಕ್ಕೂ ಅನ್ವಯವಾಗುವ ಸತ್ಯ. ಟಾರನ್ನೇ ಕಾಣದ ಹಳ್ಳಿಗಾಡುಗಳ ಮೂಲೆಮೂಲೆಗೂ ತಲುಪಬಲ್ಲದ್ದಾಗಿರುವುದೇ ಬಸ್ಸಿನ ಈ ಯಶಸ್ಸಿಗೆ ಕಾರಣವೆನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಪಟ್ಟಣದಲ್ಲಿ ಅಂಡಲೆಯುವ, ಸುಮಾರು ಮೊವ್ವತ್ತು - ನಲವತ್ತು ವರ್ಷದ ಯಾವುದೇ ಯಾರನ್ನಾದರೂ ನಿಲ್ಲಿಸಿ ಕೇಳಿನೋಡಿ? ಯಾವ ರಾಜ್ಯದ ಯಾವ ಹಳ್ಳಿಯಿಂದ ಬಂದವರಾದರೂ ತಮ್ಮೂರಿನ ಬಸ್ಸುಗಳ ಬಗೆಗೆ ಚಂದದ ಕಥೆಯೊಂದು ಅವರ ನೆನಪಿನ ಮಡತೆಗಳೊಳಗೆ ಇದ್ದೇ ಇರುತ್ತದೆ. ಕಾಡು, ಬೆಟ್ಟ, ನದಿಯಾಚೆಗೆಲ್ಲೋ ಇರುವ ದೂರದ ಪಟ್ಟಣದಿಂದ ಹಾವಿನಂತೆ ಹರಿದುಬಂದಿರುವ ರಸ್ತೆಯ ಮೇಲೆ ಕೇಕೆ ಹಾಕುತ್ತಾ, ಅಲ್ಲಾಡುತ್ತ, ತೇಕುತ್ತಾ, ಏದುಸಿರು ಬಿಡುತ್ತಾ, ಅಲ್ಲಲ್ಲಿ ನಿಲ್ಲುತ್ತಾ ಪ್ರಯಾಣಿಕರನ್ನು ಹೊತ್ತು ತರುವ ಬಸ್ಸೆಂದರೆ ಪ್ರತಿಯೊಬ್ಬರಿಗೂ ಅದೊಂದು ತೆರನಾದ ಪ್ರೀತಿ. ಹೆಚ್ಚೇನೂ ಬೇಡ, ಕಾಲದ ಗಡಿಯಾರವನ್ನು ಕೇವಲ ಇಪ್ಪತ್ತು-ಇಪ್ಪತೈದು ವರ್ಷಗಳಷ್ಟು ಹಿಂದಕ್ಕೆ ತಿರುಗಿಸಿದರೂ ಸಾಕು, ಯಾವ ರೀತಿಯಲ್ಲಿ ಬಸ್ಸೆನ್ನುವ ಬಸ್ಸು ಪ್ರೀಂಪ್ರೀಂ ಎಂದು ಹಾರನ್ ಹೊಡೆಯುತ್ತಾ ಜನಸಾಮಾನ್ಯರ ಮನದಂಗಳಗಳನ್ನು ಹಾದು ಹೋಗುತ್ತಿತ್ತೆನ್ನುವ ಚಿತ್ರ ನಮ್ಮ ಕಣ್ಮುಂದೆಯೇ ಗೋಚರವಾಗತೊಡಗುತ್ತದೆ. ಅದರಲ್ಲೂ ಮತ್ಯಾವ ಪ್ರಭಾವೀ ಸಾರಿಗೆ ವಾಹಿನಿಯೂ ಇಲ್ಲದ ಹಳ್ಳಿಗಳ ಪಾಲಿಗಂತೂ ಬಸ್ಸೆನ್ನುವುದು ಹೃದಯದಿಂದ ದೇಹದೆಲ್ಲ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಸಾಕ್ಷಾತ್ ನರನಾಡಿಯೇ ಆಗಿತ್ತು. ಭರ್ರೋ ಎನ್ನುತ್ತಾ ಹತ್ತಾರು ಏರು ದಿಣ್ಣೆಗಳ ಹತ್ತಿಳಿದು, ರಸ್ತೆಯ ತುಂಬಾ ಬಾಯ್ತೆರೆದು ನಿಂತಿರುವ ಮಿನಿ ಪಾತಾಳದಂತಹಾ ಹೊಂಡಗಳಲ್ಲಿ ಇನ್ನೇನು ಬಿದ್ದೇ ಹೋಯಿತೇನೋ ಎಂಬಂತೆ ವಾಲಿ, ಕೊನೆಯ ಬಿಂದುವಿನಲ್ಲಿ ಸಾವರಿಸಿಕೊಂಡು, ಸಾಕ್ಷಾತ್ ಕಂಬಳದ ಅಂಗಳವೇನೋ ಎಂಬಂತಿರುವ ಕೆಸರಿನ ಜಾರಿಕೆಯ ಜೊತೆ ಸೆಣೆಸುತ್ತಾ, ಉಸಿರಾಡುವ ಗಾಳಿಗೇ ಜಾಗವಿಲ್ಲದಷ್ಟು ರಶ್ಶಾಗಿದ್ದರೂ ಕೊನೆಯ ನಿಲ್ದಾಣದ ಕಟ್ಟಕಡೆಯ ಪ್ರಯಾಣಿಕನನ್ನೂ ಬಿಡದೆ ಅವನ ಸಾಮಾನು-ಸರಂಜಾಮುಗಳ ಸಮೇತ ಹತ್ತಿಸಿಕೊಂಡು ಗಮ್ಯ ತಲುಪಿಸಿದ ನಂತರವೇ ಬಸ್ಸಿಗೆ ನಿದ್ರೆ ಹತ್ತುವುದು. ಬೆಳಗ್ಗೆ ಕೋಳಿಯ ಕೂಗು ಕೇಳಿ ನೂರಾರು ಹಳ್ಳಿಗರು ಎಚ್ಚರಗೊಳ್ಳುವಾಗಲೇ ಊರಿನ ಬಯಲಿನ ಮೂಲೆಯಲ್ಲೆಲ್ಲೋ ನಿಂತೇ ನಿದ್ರಿಸುತ್ತಿದ್ದ ಅದು ಎಚ್ಚರಗೊಳ್ಳುತ್ತದೆ. ಕೊರೆಯುವ ಚಳಿಗೆ ಜನರೆಲ್ಲರೂ ಬಚ್ಚಲಿನ ಒಲೆಯೆದುರು ನಿಂತು ಬಿಸಿಯಾಗುವಾಗ ಬಸ್ಸು ನಿಂತಲ್ಲೇ ಚಾಲೂ ಆಗಿ ಗುರ್ ಗುರ್ ಎನ್ನುತ್ತಾ ಥಂಡಿ ಹಿಡಿದ ತನ್ನ ಎಂಜಿನ್ ಗಳನ್ನು ಬೆಚ್ಚಗಾಗಿಸಿಕೊಳ್ಳುತ್ತದೆ. ಊರ ಹೊರಗಿನ ಬಾವಿಯ ನೀರಿನಲ್ಲಿ ಸ್ನಾನ ಮಾಡಿ ಬರುವ ಡ್ರೈವರ್ ಹಾಗೂ ಕಂಡಕ್ಟರ್ ಗಳು ಗಾಜಿನ ಎದುರುಗಡೆ ತಗುಲಿಸಿರುವ ದೇವರ ಫೋಟೋಗೆ ಊದುಬತ್ತಿ ಹಚ್ಚಿ ಕೈ ಮುಗಿದರೆಂದರೆ ಮುಗಿಯಿತು, ಬಸ್ಸಿನ ಪ್ರಯಾಣ ಶುರು! ಬ್ಯಾಗು ತಗುಲಿಸಿಕೊಂಡು ನಿಂತಿರುವ ಕಾಲೇಜು ಕುಮಾರ-ಕುಮಾರಿಯರು, ಹೇಳದೇ ಕೇಳದೇ ಕೆಟ್ಟು ಕುಳಿತಿರುವ ತೋಟದ ಮೋಟರನ್ನು ರಿಪೇರಿಗೆ ಒಯ್ಯುತ್ತಿರುವ ಬಡ ರೈತ, ಅಡಿಕೆ ಮಂಡಿ ಸೌಕಾರರ ಬಳಿ ಹತ್ತು ಸಾವಿರ ಹೆಚ್ಚಿಗೆ ಸಾಲ ಕೇಳಲೆಂದು ಹೊರಟಿರುವ ಹೆಗ್ಡೇರು, ಎರೆಡು ದಿನದಿಂದ ಬಿಡದೆ ವಾಂತಿ ಮಾಡಿಕೊಳ್ಳುತ್ತಿರುವ ಮಗುವನ್ನು ನಗರದ ದೊಡ್ಡ ಡಾಕ್ಟರಿಗೆ ತೋರಿಸಲೆಂದು ಒಯ್ಯುತ್ತಿರುವ ಆತಂಕದ ತಾಯಿ, ಜೇಬಿನಲ್ಲಿ ತನ್ನ ಅಂಗಡಿಗೆ ಬೇಕಾದ ಸಾಮಾನುಗಳ ಪಟ್ಟಿಯನ್ನೂ, ಕಂಕುಳಲ್ಲಿ ಖಾಲಿ ಚೀಲವನ್ನೂ ಅವುಚಿಕೊಂಡಿರುವ, ಆಗಾಗ ಒಳಜೇಬಿನಲ್ಲಿನ ಹಣವನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಿರುವ ಗೂಡಂಗಡಿಯ ಬಾಬಣ್ಣ, ಸೆಂಟು, ಪೌಡರು ಬಳಿದುಕೊಂಡು ಘಮಘಮಿಸುತ್ತಾ ಪಟ್ಟಣದ ರಸ್ತೆರಸ್ತೆಯನ್ನೂ ಸರ್ವೇ ಮಾಡಲಿಕ್ಕೆ ತಯಾರಾಗಿ ಬಂದಿರುವ ಪಡ್ಡೆ ಹುಡುಗರು, ಎದುರಾದವರೆಲ್ಲರಿಂದ ನಮಸ್ಕಾರ ಹೇಳಿಸಿಕೊಳ್ಳುತ್ತಾ ಪಕ್ಕದೂರ ಶಾಲೆಗೆ ಹೊರಟು ಕಾಯುತ್ತಿರುವ ಮೇಷ್ಟರು, ಈ ಸಲದ ಛಳಿ, ಗಾಳಿ, ಮಳೆ, ಬೆಳೆಗಳ ಬಗ್ಗೆ ಘನಗಂಭೀರವಾದ ಚರ್ಚೆ ನಡೆಸುತ್ತಾ ನಿಂತಿರುವ ಹಿರಿಯದ್ವಯರು, ಅಜ್ಜನ ಮನೆಗೆ ಹೋಗುವ ಸಂಭ್ರಮದಲ್ಲಿ ತೇಲುತ್ತಿರುವ ದೊಗಲೆ ಚಡ್ಡಿಯ ಪೋರ ಮತ್ತು ಜರತಾರಿ ಲಂಗದ ಪೋರಿ, ಹಾಗೂ ಅವರಿಬ್ಬರನ್ನೂ ನಿಭಾಯಿಸುತ್ತಾ ತಾನೂ ಒಳಗೊಳಗೇ ತವರಿಗೆ ಹೋಗುವ ಖುಷಿಯನ್ನನುಭವಿಸುತ್ತಿರುವ ಅಮ್ಮ…. ಹೀಗೆ ಜಗದ, ಜನಜೀವನದ ವಿವಿಧ ಮಜಲುಗಳು ಬಸ್ಸಿನ ದಾರಿಯಲ್ಲಿ ಕಾದುನಿಲ್ಲುತ್ತವೆ.

ಊರಿಂದ ಹೊರಡುವ ಬಸ್ಸುಗಳದೊಂದು ಚಿತ್ರವಾದರೆ ಊರಿಗೆ ಮರಳುವ ಬಸ್ಸುಗಳದು ಇನ್ನೊಂದು ತೆರನಾದ ಸಂಭ್ರಮ. ಅವುಗಳಿಗಾಗಿ ಕಾಯುವ ಜೀವಗಳು ಹಲವು. ಇಳಿಸಂಜೆಯ ತಂಪಿನಲ್ಲಿ ಪೋರನೊಬ್ಬ ಬಣ್ಣದ ಕಾರು ತರುತ್ತೇನೆಂದು ಮಾತು ಕೊಟ್ಟು ಪೇಟೆಗೆ ಹೋಗಿರುವ ಅಪ್ಪನ ಹಾದಿ ಕಾಯುತ್ತಿದ್ದರೆ ಅವನ ತಾಯಿ ಅವರು ತರಲಿರುವ ಹೊಸ ಅಲ್ಯೂಮಿನಿಯಂ ಪಾತ್ರೆಗೆ ಹಾಕಲು ಮಜ್ಜಿಗೆ-ಹೆಪ್ಪನ್ನು ತಯಾರಿಟ್ಟುಕೊಂಡು ಕೂತಿದ್ದಾಳೆ. ರಿಪೇರಿಯಾಗಿ ಬರಲಿರುವ ನೀರುಣಿಸುವ ಮೋಟಾರಿಗಾಗಿ ಬಾಯಾರಿದ ತೋಟ-ಗದ್ದೆಗಳು ಕಾದಿವೆ. ಹೊಸದಾಗಿ ಮದುವೆಯಾಗಿರುವ ಹುಡುಗಿ ಪಟ್ಟಣಕ್ಕೆ ಕೆಲಸಕ್ಕೆ ಹೋಗಿರುವ ಪ್ರಿಯತಮ ತನಗಾಗಿ ತರಲಿರುವ ಮಲ್ಲಿಗೆ-ಮೈಸೂರು ಪಾಕುಗಳನ್ನೂ, ಅವುಗಳ ನಡುವಿನಿಂದ ಹಾದುಬಂದು ತನ್ನನ್ನು ತಬ್ಬಲಿರುವ ಅವನ ತುಂಟ ಕೈಗಳನ್ನೂ ಕಾದಿದ್ದಾಳೆ. ಈ ಎಲ್ಲ ಸಂಭ್ರಮಗಳನ್ನೂ ಹೊತ್ತು ತರುವುದು ಬಸ್ಸೇ ಎಂದು ಬೇರೆ ಹೇಳಬೇಕಿಲ್ಲವಲ್ಲಾ?

ಇನ್ನು ಹಬ್ಬ ಹಾಗೂ ರಜೆದಿನಗಳು ಬಂತೆಂದರೆ ಬಸ್ಸೆನ್ನುವುದು ಅಕ್ಷರಷಃ ಸಂಭ್ರಮದ ಸಾಗಾಣೆಕಾರನಾಗುತ್ತದೆ. ಅದೆಲ್ಲೋ ದೂರದ ಊರಿನಿಂದ ಬೆಳ್ಳಂಬೆಳಗ್ಗೆ ಬಸ್ಸು ಹತ್ತಿ ಬರಲಿರುವ ಅಜ್ಜ, ಮಾವ, ಚಿಕ್ಕಮ್ಮ, ಅತ್ತೆ, ಅವರ ಮಕ್ಕಳು ಮುಂತಾದ ಬಂಧುಬಾಂಧವರನ್ನು ಹೊತ್ತು ತರುವ ತೇರಾಗುತ್ತದೆ. ಮನೆಯಲ್ಲಿನ ಚಿಕ್ಕ ಪೋರ ಬೆಳಗ್ಗೆ ಏಳುತ್ತಿದ್ದಂತೆಯೇ ಬರಲಿರುವ ಅಜ್ಜನ ಜಪ ಆರಂಭಿಸುತ್ತಾನೆ. ಬರುವವರಿಗೆ ನಿಲ್ದಾಣದಿಂದ ಮನೆಗೆ ಬರುವ ದಾರಿ ಗೊತ್ತಿರುತ್ತದಾದರೂ ಅವರನ್ನು ಸ್ವಾಗತಿಸಲಿಕ್ಕೆ ನೇರ ನಿಲ್ದಾಣಕ್ಕೇ ಓಡುತ್ತಾನೆ. ಅಥವಾ “ಅಜ್ಜ ಎಷ್ಟೊತ್ತಿಗೆ ಬರ್ತಾರೆ ಹೇಳೇ” ಎಂದು ಮನೆಯ ತುಂಬಾ ತರಲೆ, ರಗಳೆ ಮಾಡಿಕೊಂಡು ಹಿಂಬಾಲಿಸುವ ಅವನನ್ನು ಕೆಲನಿಮಿಷಗಳ ಮಟ್ಟಿಗಾದರೂ ಸಾಗಹಾಕಲಿಕ್ಕೆಂದು ಅಮ್ಮ “ಗಾಯಿತ್ರಿ ಬಸ್ಸಿಗೆ ಅಜ್ಜ ಬರ್ತಾರೆ. ಕರ್ಕೊಂಡ್ಬಾ ಹೋಗು"  ಎಂದು ಕಳಿಸಿಬಿಡುತ್ತಾಳೆ. ಜಾರುವ ಚಡ್ಡಿಯನ್ನು ಹಿಡಿದುಕೊಂಡು, ಬರಲಿರುವ ಅಜ್ಜನ ಸ್ವಾಗತಕ್ಕಾಗಿ ನಿಲ್ದಾಣಕ್ಕೆ ಓಡಿಬಂದು ಬಸ್ಸು ಬರಲಿರುವ ದಾರಿಯನ್ನೇ ದಿಟ್ಟಿಸುತ್ತಾ ನಿಂತವನನ್ನು ಬಸ್ಸು ನಿಮಿಷಗಳ ಕಾಲ ಕಾಯಿಸುತ್ತದೆ. ಕಾದಷ್ಟೂ ಅವನ ಕಾತರ, ಸಂಭ್ರಮಗಳು ಹೆಚ್ಚುತ್ತವೆಂಬುದು ಅದಕ್ಕೂ ಗೊತ್ತು. ಹೀಗೆ ಕಾದು ಕಾದು ಪೆಚ್ಚುಮೋರೆ ಹಾಕಿಕೊಂಡು ಇನ್ನೇನು ಮನೆಯ ದಾರಿ‌ ಹಿಡಿಯಬೇಕು, ಅಷ್ಟರಲ್ಲಿ, ಅದೋ ಅಲ್ಲಿ, ರಸ್ತೆಯ ದೂರದ ತಿರುವಿನ ಮರೆಯಿಂದ ಪೀಂಪೀಂ ಎನ್ನುವ ಸದ್ದೊಂದು ಕೇಳಿಬರುತ್ತಿದೆ. ನೋಡ ನೋಡುತ್ತಿದ್ದಂತೆಯೇ ಚಿಕ್ಕ ಚುಕ್ಕೆಯೊಂದು ಕದಲುತ್ತಾ ಇತ್ತಲೇ ಬರುತೊಡಗುತ್ತದೆ. ಬರುಬರುತ್ತಾ ಆ ಚುಕ್ಕೆ ಚೌಕವಾಗಿ, ಆಯತವಾಗಿ, ದೊಡ್ಡ ಡಬ್ಬಿಯಾಗಿ ಕೊನೆಗೆ ವಾಲಾಡುತ್ತಾ ಬರುತ್ತಿರುವ ಬಸ್ಸಾಗಿ ಗೋಚರವಾಗತೊಡಗುತ್ತದೆ. ಈಗಾಗಲೇ ಪೋರನ ಖುಷಿ ದುಪ್ಪಟ್ಟಾಗಿದೆ. ಅಜ್ಜನೆನ್ನುವ ಅಕ್ಕರೆಯ ಜೀವವನ್ನು ಹೊತ್ತು ಕುಲುಕುತ್ತಾ ಬಂದು ನಿಂತ ಬಸ್ಸಿನ ಬಾಗಿಲಿನತ್ತ ಅವನು ಓಡುತ್ತಾನೆ. ಮಗಳಿಗೆ ಇಷ್ಟವಾದ ಕಾಟು ಮಾವಿನ ಗೊಜ್ಜು, ಅಳಿಯನಿಗೊಂದು ಶರ್ಟುಪೀಸು, ಮೊಮ್ಮಗನಿಗೆ ಪ್ಯಾಕೇಟಿನ ತುಂಬಾ ಮಹಾಲ್ಯಾಕ್ಟೋ ಚಾಕಲೇಟು.. ಈ ದಿವ್ಯ ಉಡುಗೊರೆಗಳನ್ನು ಜೋಪಾನವಾಗಿಟ್ಟುಕೊಂಡಿರುವ ತಮ್ಮ ಕೈ ಚೀಲದ ಸಮೇತ ಇಳಿದ ಅಜ್ಜ ಹಾಗೂ ಅವರ ಕೈಹಿಡಿದು ಕುಣಿಕುಣಿಯುತ್ತಾ ನಡೆಯುತ್ತಿರುವ ಮೊಮ್ಮಗ.. ಇವರಿಬ್ಬರೂ ಸಾಗಿಹೋಗುವ ಸೊಬಗನ್ನು ಕಣ್ತುಂಬಾ ತುಂಬಿಕೊಂಡ ಬಸ್ಸು ಖುಷಿಯಲ್ಲಿ ಕೇಕೆ ಹಾಕಿದಂತೆ ಹಾರನ್ ಹೊಡೆದು ಮುಂದಿನ ನಿಲ್ದಾಣದ ಮತ್ತೊಬ್ಬ ಮೊಮ್ಮಗನತ್ತ ಮುನ್ನಡೆಯುತ್ತದೆ.

                  *****************

ಬಸ್ಸು ಅದೆಷ್ಟೋ ಹಳ್ಳಿಗಳ ಮುದ್ದಿನ ಮಗ ಅಥವಾ ಮಗಳು. ಮಂದಿ ತಮ್ಮ ಮಕ್ಕಳಿಗಿಟ್ಟಷ್ಟೇ ಚಂದದ ಹೆಸರುಗಳನ್ನು ಬಸ್ಸಿಗೂ ಇಡುತ್ತಾರೆ. ಜಯರಾಮ್, ಶ್ರೀಕಂಠ, ನೀಲಕಂಠ, ಮಲ್ಲಿಕಾರ್ಜುನ, ಗಾಯತ್ರಿ, ಕೊಡಚಾದ್ರಿ, ಹನುಮಾನ್, ಗಜಾನನ, ರೋಸಿ... ಅದೇ ಹೆಸರಿನಿಂದ ಬಸ್ಸು ಊರಿನ ಜನರ ಮನೆಯ, ಮನದ ಅವಿಭಾಜ್ಯ ಅಂಗವಾಗುತ್ತದೆ. ಒಂದು ದಿನ ಬಸ್ಸು ಬಾರದಿದ್ದರೆ ಆ ದಿನವಿಡೀ ಊರು ಏನನ್ನೋ ಕಳೆದುಕೊಂಡಂತೆ ಕೊರಗುತ್ತದೆ. ಸೀನಣ್ಣನ ಕಟಿಂಗ್ ಶಾಪಿನ ಮರದ ಬೆಂಚಿನ ಮೇಲಿರುತ್ತಿದ್ದ ತಾಜಾ ದಿನಪತ್ರಿಕೆ ಇಂದು ಕಾಣೆಯಾಗುತ್ತದೆ. ಪಕ್ಕದೂರ ಹೈಸ್ಕೂಲಿಗೆ ಹೋಗುವ ಮಕ್ಕಳೆಲ್ಲ ನಡೆದೇ ಹೊರಡುತ್ತಾರೆ. ಹೋಗುತ್ತಾ ಹೋಗುತ್ತಾ ಬಾರದ ಬಸ್ಸಿನ ದಾರಿಯನ್ನೇ ತಿರುತಿರುಗಿ ನೋಡುತ್ತಾರೆ‌. ಜನರು ನಿಲ್ದಾಣದೆದುರಿನ ರಸ್ತೆಯಲ್ಲಿ ನಿಂತು ಹಣೆಯೆದುರು ಕೈಯ ಚಪ್ಪರಕಟ್ಟಿ ಬಸ್ಸು ಬಂತಾ? ಎಂದು ಇಣುಕುತ್ತಾರೆ. ಹುಲ್ಲೀಸರದ ಹತ್ತಿರ ಪಂಚರ್ ಆಯ್ತಂತೆ, ಹೊಳೆಮಕ್ಕಿ ಏರಲ್ಲಿ ಚರಂಡಿಗೆ ಹಾರಿತಂತೆ, ಕಂಪದಸರದ ಕೆಸರಲ್ಲಿ ಹೂತುಕೂತಿದೆಯಂತೆ, ಕೈಮರದ ತಿರ್ಕಸ್ಸಲ್ಲಿ ಮರಕ್ಕೆ ಢಿಕ್ಕಿ ಹೊಡೆಯಿತಂತೆ, ಗೂಳಿಮಕ್ಕಿಯಲ್ಲಿ ಯಾರದೋ ದನ ಅಡ್ಡ ಬಂತಂತೆ... ಹೀಗೇ ಅದು ಯಾಕೆ ಬಂದಿಲ್ಲ ಎನ್ನುವುದರ ಬಗ್ಗೆ ಇನ್ನೂ ಮುಂತಾದ ಗುಸುಗುಸು ಗಾಸಿಪ್ ಗಳು ಹರಿದಾಡುತ್ತವೆ.‌

ಇನ್ನು ತಡವಾಗಿ ಬರುವುದು ಬಸ್ಸಿನ ಹುಟ್ಟುಗುಣಗಳಲ್ಲೊಂದು‌. ಎಷ್ಟೇ ಸರಿಯಾದ ಸಮಯಕ್ಕೆ ಮೊದಲ ನಿಲ್ದಾಣದಿಂದ ಹೊರಟರೂ ಅದು ಕೊನೆಯ ನಿಲ್ದಾಣ ತಲುಪುವುದು ಅರ್ಧಗಂಟೆ ತಡವಾಗಿಯೇ.  ಪಾಪ, ಇದರಲ್ಲಿ ಅದರ ತಪ್ಪೇನೂ ಇಲ್ಲ. ಮಾರಿಗೆ ಒಂದರಂತಿರುವ ಪ್ರತಿಯೊಂದು ನಿಲ್ದಾಣದಲ್ಲೂ ನಿಂತು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಾ ನೋಡ ನೋಡುತ್ತಲೇ ನವಮಾಸದ ತುಂಬು ಬಸುರಿಯಂತಾಗುವ ಅದು ನಿಲ್ದಾಣವೇ ಅಲ್ಲದ ಜಾಗದಲ್ಲಿ ಧುತ್ತನೆ ಪ್ರತ್ಯಕ್ಷವಾಗಿ ಕೈಚಾಚುವವರನ್ನೂ ತನ್ನೊಳಗೆ ತುಂಬಿಕೊಳ್ಳುತ್ತದೆ. ಸರಿ, ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಅಗೋ ಅಲ್ಲಿ, ದೂರದ ಕಾಡಿನ ದಾರಿಯಿಂದ ಇಬ್ಬರು ಗಂಡಸರು ಈಗಷ್ಟೇ ಒಲಂಪಿಕ್ಸ್ ಮುಗಿಸಿ ಬಂದ ನುರಿತ ಓಟಗಾರರಂತೆ ಓಡಿ ಬರುತ್ತಿರುವುದು ಕಾಣುತ್ತದೆ. ಒಬ್ಬರನ್ನೊಬ್ಬರು ಮೀರಿಸುತ್ತಾ ಬಿರುಗಾಳಿಯಂತೆ ಧಾವಿಸಿಬರುತ್ತಿರುವ ಅವರನ್ನು ನೋಡಿ ಎರೆಡು ಸೀಟ್ ಹೆಚ್ಚಾಯಿತೆಂಬ ಖುಷಿಯಲ್ಲಿ ಕಂಡಕ್ಟರ್ ಸಹಾ ಸೀಟಿ‌ ಊದಿ ಡ್ರೈವರನಿಗೆ ಕಾಯುವಂತೆ ಸೂಚನೆನೀಡುತ್ತಾನೆ. ಬಿಟ್ಟಬಾಣದಂತೆ ಓಡಿಬಂದು ಬಸ್ಸನ್ನು ಹಿಡಿದುಕೊಂಡ ಅವರು ಚಂಡಮಾರುತದಂತೆ ಏದುಸಿರು ಬಿಡುತ್ತಾ ಬಸ್ಸು ಹತ್ತುವವರು ತಾವಲ್ಲವೆಂದೂ, ವಯಸ್ಸಾದವರೊಬ್ಬರು ಹಿಂದೆ ಬರುತ್ತಿದ್ದಾರೆಂದೂ, ಅವರಿಗಾಗಿ ಕಾಯಬೇಕೆಂದೂ ಕೇಳಿಕೊಳ್ಳುತ್ತಾರೆ. ತಿರುಗಿ ನೋಡಿದರೆ ದೂರದಲ್ಲಿ ವಯೋವೃದ್ಧರೊಬ್ಬರು ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಬರುತ್ತಿರುವುದು ಕಾಣಿಸುತ್ತದೆ.

                 *************

"ದೊಡ್ಡವನಾದ ಮೇಲೆ ಏನಾಗ್ತೀಯ ಪುಟ್ಟೂ?"

"ಗುದುಚತ್ತೀ ಬಚ್ಚಿನ ಡ್ರೈವರ್ ಆತೀನಿ!"

ಹೀಗಂತ ಹೇಳಿ ಎದುರಿರುವವರನ್ನೆಲ್ಲ ಗೊಳ್ಳೆಂಬ ನಗೆಯಲೆಯಲ್ಲಿ ತೇಲಿಸುವ ಚಿಲ್ಟಾರಿಗಳ ಸಂಖ್ಯೆ ಅದೆಷ್ಟೋ? ನಿಜ.. ಬಸ್ಸೊಂದರ ಡ್ರೈವರ್, ಕಂಡಕ್ಟರ್ ಅಥವಾ ಕ್ಲೀನರ್ ಗಳಿಗೆ ವಿಶಿಷ್ಠ ಗೌರವವೊಂದಿದೆ. ಎಲ್ಲರಿಗಿಂತ ಹೆಚ್ಚಾಗಿ ಹಳ್ಳಿಯ ಮಕ್ಕಳ ದೃಷ್ಟಿಯಲ್ಲಿ ಅವರು ಅಘೋಷಿತ ಹೀರೋಗಳು. ಒಂದು ಕಾಲಲ್ಲಿ ಬ್ರೇಕು ಒತ್ತುತ್ತಾ, ಇನ್ನೊಂದರಲ್ಲಿ ಆಕ್ಸಿಲೇಟರ್ ತುಳಿಯುತ್ತಾ ಸರಸರನೆ ಸ್ಟೇರಿಂಗನ್ನು ಆ ಕಡೆ, ಈ ಕಡೆ ತಿರುಗಿಸುವ, ಅಷ್ಟು ದೊಡ್ಡ ಬಸ್ಸನ್ನು ಎಷ್ಟು ಸರಾಗವಾಗಿ ಹೊರಳಿಸಿ, ಚಲಾಯಿಸುವ ಡ್ರೈವರ್, "ಯಾರ್ರೀ ಅಲ್ಲೀ ಟಿಕೇಟ್ ಟಿಕೇಟ್.. ಹೋಗ್ರೀ‌.. ಒಳಗಡೆ ನಡೀರ್ರೀ.." ಎಂದು ಆಜ್ಞಾಪಿಸುತ್ತಾ ಬಣ್ಣದ ಪುಸ್ತಕದಿಂದ ಟಿಕೇಟು ಹರಿದುಕೊಡುವ ಕಂಡಕ್ಟರ್ ಹಾಗೂ ಓಡುವ ಬಸ್ಸಿನ ಬಾಗಿಲಿನಲ್ಲಿ ನಿಂತು, ಬೀಸಿಬರುವ ಗಾಳಿಗೆ ತನ್ನ ಕೂದಲ ಹಾರಿಬಿಟ್ಟುಕೊಂಡು "ಆರಗ, ನೊಣಬೂರ್, ಅರಳಸುರಳಿ, ಸೊನಲೆ, ಬಿಳ್ಳೋಡಿ, ಜಯನಗರ, ಹೊಸನಗರಾ" ಎಂದು ವಿಶಿಷ್ಠ ರಾಗವೊಂದರಲ್ಲಿ ಕೂಗುವ ಕ್ಲೀನರ್.. ಈ ಮೂವರನ್ನು ಅನುಕರಣೆ ಮಾಡದ ಹೊರತು ಊರಿನ ಯಾವೊಬ್ಬ ಪೋರನ ಬಾಲ್ಯವೂ ಸಂಪನ್ನವಾಗುವುದೇ ಇಲ್ಲ! ಅದರಲ್ಲೂ ಕಂಡಕ್ಟರ್ ನ ಕೈಯಲ್ಲಿರುವ ಟಿಕೇಟು ಪುಸ್ತಕ ಹಾಗೂ ಅದರ ಪುಟಗಳ ನಡುವೆ ಅವಿತಿರುವ ಕಾರ್ಬನ್ ಚೀಟಿಗಳಂತೂ ಶಾಲಾ ಮಕ್ಕಳ ದೃಷ್ಟಿಯಲ್ಲಿ ಜಗತ್ತಿನ ಅದ್ಭುತಗಳ ಪಟ್ಟಿಗೆ ಸೇರುವಂತಹಾ ವಸ್ತುಗಳು. ನಿರ್ವಾಹಕ ಎಸೆದುಹೋಗುವ ಖಾಲಿಯಾದ ಟಿಕೆಟ್ ಪುಸ್ತಕ ಹಾಗೂ ಮಂದವಾದ ಕಾರ್ಬನ್ ಹಾಳೆಗಳನ್ನು ಎತ್ತಿಕೊಳ್ಳುವುದಕ್ಕೆ ಹುಡುಗರ ನಡುವೆ ನಡೆಯುವಷ್ಟು ಪೈಪೋಟಿ ಪ್ರಧಾನ ಮಂತ್ರಿಗಳ ಕುರ್ಚಿಗಾಗಿಯೂ ನಡೆಯಲಿಕ್ಕಿಲ್ಲ!

                      *****************

ಮೇಲು-ಕೀಳುಗಳನ್ನೂ, ಪುರುಷ-ಸ್ತ್ರೀ ಎಂಬ ಭೇದ-ಭಾವಗಳನ್ನೂ ಮೌನವಾಗಿಯೇ ಮೀರುವ ಬಸ್ಸು ಕೆಳಗಿನ ಕೇರಿಯ ನಾಗಿಯನ್ನೂ ಹಾಗೂ ಮೇಲಿನಮಕ್ಕಿಯ ಶಾಂತಕ್ಕನನ್ನೂ ಒಟ್ಟಿಗೇ ಕೂರಿಸಿಕೊಂಡು ಸಂತೆಗೆ ಕರೆದೊಯ್ಯುತ್ತದೆ. ಮಹಬೂಬ ಸಾಬರ ಟೊಪ್ಪಿಯೂ, ರಾಮಾಶಾಸ್ತ್ರಿಗಳ ಶಲ್ಯವೂ ಅಡ್ಡಸೀಟಿನಲ್ಲಿ ಒಟ್ಟಿಗೇ ಕುಳಿತು ಡ್ರೈವರ್ ಡಿಸೋಜನ ಜೊತೆ ಪಟ್ಟಂಗ ಹೊಡೆಯುವ ಸಾಮರಸ್ಯದ ದೃಶ್ಯ ಕಂಡುಬರುವುದು ಬಸ್ಸಿನಲ್ಲೇ. ಅಷ್ಟೇ‌ ಅಲ್ಲ, ಒಂದು ವಾರದಿಂದ ಅದೇಕೋ ಸರಿಯಾಗಿ ಮೇವು ತಿನ್ನದೆ ಕುಗುರುತ್ತಿರುವ ಊರಿನ ಕುರಿ, ಕೋಳಿ, ಟಗರುಗಳನ್ನೆಲ್ಲ ಟಿಕೆಟ್‌ ರಹಿತವಾಗಿ ಹೊತ್ತೊಯ್ದು ಪಶುಪಾಲನಾ ಆಸ್ಪತ್ರೆಗೆ ತಲುಪಿಸಿ ಪ್ರಾಣಿದಯೆ ಮೆರೆಯುವುದೂ ಸಹಾ ಬಸ್ಸೇ. ಇಂತಿಪ್ಪ ಅದು ಒಂದರ್ಥದಲ್ಲಿ ಭೂಮಿಯಂತೆಯೇ ಸಹನಾಮಯಿ. ಕಡಲೆಕಾಯಿ ತಿಂದು ಸಿಪ್ಪೆ ಎಸೆದರೂ, ಎಲೆಡಕೆ ಉಗುಳಿ ತನ್ನ ಹೊರಮೈಯನ್ನು ಗಲೀಜು ಮಾಡಿದರೂ, ಸೀಟಿನ ಸ್ಪಂಜು ಕಿತ್ತು ಗಾಯಗೊಳಿಸಿದರೂ ಅದು ಕೋಪಿಸಿಕೊಳ್ಳುವುದಿಲ್ಲ. ತಾವೇ ಎಲೆಅಡಿಕೆ, ಪಾನ್ ಪರಾಗ್, ಗುಟ್ಕಾ ಅಗಿದು ಉಗುಳಿ ಅಂದಗೆಡಿಸಿದ ಬಸ್ಸನ್ನು ಹೊರಗಿನಿಂದ ನೋಡಿದ ಜನ ‘ಥೂ ಎಷ್ಟು ಗಲೀಜಾಗಿದೆ’ ಎಂದು ತಾವೇ ತೆಗಳಿ ಅವಮಾನಿಸಿದಾಗಲೂ ಅದು ಬೇಸರಗೊಳ್ಳುವುದಿಲ್ಲ. ಮಳೆಯ ಹನಿಗೋ, ಹೊಳೆಯ ನೀರಿಗೋ ತನ್ನನ್ನು ಒಡ್ಡಿಕೊಂಡು ಸ್ವಚ್ಛವಾಗಿ ಮತ್ತದೇ ಪ್ರಯಾಣಿಕರ ಬಳಿಗೆ ಮರಳಿಬರುತ್ತದೆ.

ಹೀಗೆ ಸಮತೆ, ಸಹನೆ ಮೆರೆಯುವ ಬಸ್ಸಿನ ಹೃದಯ ಅಷ್ಟೇ ಗಾಢವಾಗಿ ಪ್ರೀತಿ-ಪ್ರೇಮಗಳಿಗೂ ಮಿಡಿಯುತ್ತದೆ. ಪ್ರತಿದಿನವೂ ಅದರ ಸೀಟುಗಳ ಬೆನ್ನಿನಲ್ಲಿ ನೂರಾರು ಪ್ರೀತಿಯ ಅಕ್ಷರಗಳು ಅಚ್ಚಾಗುತ್ತವೆ. ಹತಾಶ ಪ್ರೇಮಿಯೊಬ್ಬ ತಾನು ಮನದಲ್ಲೇ ಆರಾಧಿಸುತ್ತಿರುವ ಪ್ರೇಯಸಿಗೆ ಕೊನೆಗೂ ಹೇಳಲಾಗದ ಮಾತೊಂದನ್ನು ಬಸ್ಸಿನ ಸೀಟಿನ ಹಿಂಭಾಗದಲ್ಲಿ ಕೆತ್ತಿ ಹಗುರಾಗುತ್ತಿದ್ದರೆ ಅವನ‌ ವೇದನೆಗಳನ್ನು ತನ್ನ ಹೃದಯಕ್ಕೆ ಬಸಿದುಕೊಳ್ಳುವ ಬಸ್ಸು ಹೃದಯತುಂಬಿ ಭಾರವಾಗುತ್ತದೆ. ಮುಂದೊಂದು ದಿನ ಅದೇ ಸೀಟಿನಲ್ಲಿ ಕುಳಿತ ಅವನ‌ ಪ್ರೇಯಸಿ ಹುಡುಗಿ ಅದು ತನಗಾಗಿಯೇ ಬರೆದ ಸಾಲೆಂಬುದು ಗೊತ್ತಿಲ್ಲದೆಯೇ ಆ ಅಕ್ಷರಗಳ ಮೇಲೆ ಕೈಯಾಡಿಸಿ ಮುಗುಳ್ನಕ್ಕಾಗ ಬಸ್ಸಿನ ಗಾಜುಗಣ್ಣುಗಳ ಮೇಲೆ ಹನಿಗಳೆರೆಡು ಮೂಡಿ ಜಾರುತ್ತವೆ.

              ***************

ಸದಾ ಜನರನ್ನು ಹೊತ್ತು ತಿರುಗುವ ಬಸ್ಸಿಗೆ ಆಗಾಗ ಜನರಿಂದ ಸೇವೆ ಮಾಡಿಸಿಕೊಳ್ಳುವ ಮನಸ್ಸಾಗುತ್ತದೆ. ಹಾಗನಿಸಿದಾಗೆಲ್ಲ ಅದು ರಸ್ತೆಯ ನಡುಮಧ್ಯದಲ್ಲಿ ಇದ್ದಕ್ಕಿದ್ದಂತೆಯೇ ನಿಂತುಬಿಡುತ್ತದೆ. ಗಾಳಿಯಿಲ್ಲ, ಮಳೆಯಿಲ್ಲ, ಚಕ್ರದಡಿಯಲ್ಲಿ ಚಿಕ್ಕ ಮುಳ್ಳೂ ಇಲ್ಲ. ಬಸ್ಸು ಮಾತ್ರ ರಾಜರ ಕಾಲದ ಶಿಲಾಕುದುರೆಯಂತೆ ದಾರಿ ಮಧ್ಯದಲ್ಲಿ ಸ್ತಬ್ದವಾಗಿಬಿಟ್ಟಿದೆ. ಡ್ರೈವರ್ ಕೀಲಿ ತಿರುಗಿಸಿ, ಬಟನ್ ಒತ್ತಿ, ಗೇರು ಬದಲಿಸಿ ಎಷ್ಟೇ ಪರಿಪರಿಯಾಗಿ ರಮಿಸಿದರೂ ಅದು ಸ್ಟಾರ್ಟ್ ಆಗುವುದೇ ಇಲ್ಲ. ಬದಲಿಗೆ ಗುರ್ ಗುರ್ ಎಂದು ಚಾಲೂ ಆಗಲು ಪ್ರಯತ್ನಿಸುತ್ತಿರುವಂತೆ ನಟಿಸತೊಡಗುತ್ತದೆ. ಕೊನೆಗೆ ಒಳಗಿರುವ ಜನರ ಪೈಕಿ ಅರ್ಧದಷ್ಟು ಗಂಡಸರು ಕೆಳಗಿಳಿದು, ತಮ್ಮ ಪಂಚೆ, ಲುಂಗಿಗಳನ್ನು ಮೇಲೆಕಟ್ಟಿ ಬಸ್ಸಿನ ಬೆನ್ನಿಗೆ ಕೈಕೊಡುತ್ತಾರೆ.

ಅಲ್ಲಲ್ಲಣ್ಣ… ಐಸ್ಸಾ… ಏರಿ ಪಕ್ಡಾ…ಐಸ್ಸಾ….ಜೋರಾಗ್ ತಳ್ಳು… ಐಸ್ಸಾ...ಇನ್ನೂ ತಳ್ಳು…ಐಸ್ಸಾ….

ಹಾಡುತ್ತಾ ತಳ್ಳುತ್ತಾ ಒಂದಷ್ಟು ದೂರ ಹಾಗೇ ಮುಂದೆ ಸಾಗುತ್ತದೆ. ಕೊನೆಗೂ ಅವರೆಲ್ಲರ ಬಕಾಪ್, ಭಲಾ, ಶಹಬ್ಬಾಶ್ ಗಳಿಗೆ ಕರಗಿದ ಬಸ್ಸು ಚಾಲೂ ಆಗಿ ರೊಂಯ್ ಎಂದು ಕೆನೆಯುತ್ತದೆ. ಇಷ್ಟು ಹೊತ್ತು ತಳ್ಳಿ ತಳಕಂಬಳಕ ಆದವರೆಲ್ಲ ಹೋ ಎಂದು ಸಂಭ್ರಮಿಸಿ ತಲೆಗೆ ಕಟ್ಟಿಕೊಂಡಿದ್ದ ಟವಲ್ ಬಿಚ್ಚುತ್ತಾ ಬಸ್ಸಿನೊಳಗೆ ನುಗ್ಗುತ್ತಾರೆ. ಮೈಮುರಿದಂತೆ ಅಲ್ಲಾಡುವ ಬಸ್ಸು ಭರ್ರೋ ಎನ್ನುತ್ತಾ ಮುನ್ನುಗ್ಗುತ್ತದೆ. 

                    **************

ಬಸ್ಸಿಗೆ ಎರೆಡು ಮನೆ: ಒಂದು ಆಚೆ ತುದಿಯ ನಿಲ್ದಾಣವಾದರೆ ಇನ್ನೊಂದು ಈಚೆ ತುದಿಯದು. ಎರೆಡೂ ಬಿಟ್ಟುಬಂದ ಮನೆಗಳು; ಎರೆಡೂ ಸೇರಬೇಕಿರುವ ಮನೆಗಳು. ಬಸ್ಸು ಯಾವ ನಿಲ್ದಾಣಕ್ಕೂ ಸೇರಿದುದಲ್ಲ. ತುಳಿದುಬರುವ ರಸ್ತೆಗೂ ಅದು ಸ್ವಂತವಾಗುವುದಿಲ್ಲ. ನಿಲ್ಲುವ ಡಿಪೋಗೂ ಅದು ದಕ್ಕುವುದಿಲ್ಲ. ‘ಆಗು ನೀ ಅನಿಕೇತನ’ ಎಂಬ ಕವಿವಾಣಿಯನ್ನು ಕಾಯಾ, ವಾಚಾ, ಮನಸಾ ಪಾಲಿಸುವ ಬಸ್ಸು ಓಡುತ್ತಲೇ ಇರುವ ಕಾಲದ ಪ್ರತೀಕ. ಊರು, ತಾಲೋಕು, ಜಿಲ್ಲೆ, ರಾಜ್ಯಗಳೆಲ್ಲದರ ಎಲ್ಲೆ ಮೀರಿ ಸಾಗುವ ಅದು ಮಲೆನಾಡಿನ ಮಹಾಮಳೆಯಲ್ಲಿ ನೆನೆದಿದೆ. ಬಯಲುಸೀಮೆಯ ಬರಗಾಲದಲ್ಲಿ ಒಣಗಿದೆ ಹಾಗೂ ಕರಾವಳಿಯ ಕಡಲಿನಲೆಗಳನ್ನೂ ಕಂಡಿದೆ. ಬೇರೆಬೇರೆ ಊರುಗಳಿಂದ ಒಂದೇ ಗಮ್ಯಕ್ಕೆ ಬರುವ ಹಾಗೂ ಒಂದೇ ನೆಲೆಯಿಂದ ಬೇರೆ ಬೇರೆ ಊರುಗಳಿಗೆ ಹೋಗುವ ಬಸ್ಸುಗಳು ಮಧ್ಯದ ನಿಲ್ದಾಣದಲ್ಲೆಲ್ಲೋ ಸಂಧಿಸುತ್ತವೆ. ಡ್ರೈವರ್, ಕಂಡಕ್ಟರ್, ಪ್ರಯಾಣಿಕರುಗಳೆಲ್ಲ ಟೀ, ಕಾಫಿ, ಊಟಗಳಿಗಾಗಿ ಇಳಿದುಹೋದಾಗ ಅಕ್ಕಪಕ್ಕ ನಿಂತು ಅವು ಒಂದಕ್ಕೊಂದು ಮಾತನಾಡಿಕೊಳ್ಳುತ್ತವೆ. ಸಾಗಿಬಂದ ದಾರಿಯಲ್ಲಿ ತಾವು ಕಂಡ ವಿಸ್ಮಯಗಳನ್ನು ಪರಸ್ಪರ ಹಂಚಿಕೊಳ್ಳುತ್ತವೆ. ಎಪ್ಪತ್ತು ದಾಟಿದ ಅಜ್ಜನೊಬ್ಬನಿಗೆ ತಿಳಿದಿರುವಷ್ಟೇ ಸ್ವಾರಸ್ಯಕರ ಕಥೆಗಳು ಬಸ್ಸಿಗೂ ತಿಳಿದಿದೆ. ಕಾಡಿನ ನಡುವೆ ವಾಲಿ ಬಿದ್ದ ಅಗಾಧ ಗಾತ್ರದ ಮರವೊಂದರಿಂದ ಸ್ವಲ್ಪದರಲ್ಲಿ ಪಾರಾದ ಅದ್ಭುತ ಕಥೆ, ನಡುರಾತ್ರೆಯಲ್ಲಿ ಹೆದ್ದಾರಿಯಲ್ಲಿ ಸಾಗಿಬರುವಾಗ ದಾರಿಗಡ್ಡವಾಗಿ ಹುಲಿಯೊಂದು ಛಂಗನೆ ನೆಗೆದುಬಂದ ಭೀಭತ್ಸಕರ ಕಥೆ, ಕಾಡಾನೆಯೊಂದು ತನ್ನನ್ನು ಅಡ್ಡಗಟ್ಟಿದ ಭಯಾನಕ ಕಥೆ, ಕುಸಿಯುವ ಮೊದಲೇ ತಾನು ಓಡಿದಾಟಿದ ಗತಕಾಲದ ಸೇತುವೆಯೊಂದರ ಸ್ವಾರಸ್ಯಕರ ಕಥೆ, ಚಕ್ರದ ಮಟ್ಟಕ್ಕೆ ಹರಿಯುತ್ತಿದ್ದ ನೆರೆನೀರನ್ನು ಸೀಳಿಕೊಂಡು ಪಾರಾಗಿಬಂದ ಸಾಹಸದ ಕಥೆ, ಜಾರುವ ಘಾಟಿಯ ತಿರುವಿನಂಚಿನಲ್ಲಿ, ಕೂದಲೆಳೆಯಷ್ಟೇ ಅಂತರದಲ್ಲಿ ಕಂಡ ಸಾವಿನ ಅಗಾಧತೆಯ ಕಥೆ, ಗಗನೆತ್ತರಕ್ಕೆ ತಲೆಯೆತ್ತಿನಿಂತು ಅಣಕಿಸಿದ್ದ ಪರ್ವತವೊಂದು ಹತ್ತಿದ ನಂತರ ತನ್ನ ಕಾಲಡಿಗೆ ಬಂದ ಸ್ಪೂರ್ತಿದಾಯಕ ಕಥೆ, ಎಷ್ಟೇ ಪ್ರಯತ್ನಿಸಿದರೂ ತನ್ನಿಂದ ತಪ್ಪಿಸಲಾಗದೇಹೋದ, ತನ್ನ ಚಕ್ರಕ್ಕೆ ಸಿಕ್ಕಿ ಸತ್ತ ಮರಿಜಿಂಕೆಯ ಕರುಳು ಕಲಕುವ ಕಥೆ… ಹೀಗೆ ಹೇಳಲಿಕ್ಕೆ ಬಸ್ಸಿನ ಬಳಿ ಸಾವಿರ ಕಥೆಗಳಿವೆ. ನೆನೆದು ಕೊರಗಲಿಕ್ಕೆ ನೂರಾರು ವ್ಯಥಗಳಿವೆ. ಕೊನೆಯ ನಿಲ್ದಾಣದ ನೀರವ ಮೌನದಲ್ಲಿ ನಿಂತು ಅದು ತನ್ನಿಂದ ಹತವಾದ ಜೀವಗಳ ನೆನೆದು ಮಮ್ಮಲಮರುಗುತ್ತದೆ. ಉಸ್ಸೆಂದು ನಿಟ್ಟಿಸಿರಿಟ್ಟು ಹಗುರಾಗಲು ಯತ್ನಿಸುತ್ತದೆ. ಇಂತಹಾ ಇನ್ನೊಂದು ಹತ್ಯೆಯನ್ನೂ ಮಾಡಿಸಬೇಡವೆಂದು ಒಳಗೆ ಹಾರಹಾಕಿದ ಫೋಟೋದಲ್ಲಿ ನಿಂತಿರುವ ದೇವರನ್ನು ಬೇಡುತ್ತದೆ. ತಾನು ಕಂಡ ಸೃಷ್ಟಿಯ ಅಗಾಧತೆ ಹಾಗೂ ಬದುಕಿನ ಕ್ಷಣಿಕತೆಗಳ ಬಗ್ಗೆ ವೇದಾಂತಿಯಂತೆ ಚಿಂತಿಸುತ್ತದೆ.

                  *************

ಬಸ್ಸಿಗೀಗ ಪೈಪೋಟಿ ಜಾಸ್ತಿಯಾಗಿದೆ. ಸಂದಿಗೊಂದಿಗಳಲ್ಲಿ ನುಗ್ಗಿ ಬಹುಬೇಗ ಮನೆ ತಲುಪಿಸುವ ಬೈಕುಗಳು, ಕರೆದಲ್ಲಿಗೇ ಬಂದು ಕರೆದೊಯ್ಯುವ ಆಟೋ, ಟ್ಯಾಕ್ಸಿ, ಓಲಾ, ಊಬರ್ ಗಳು, ಪಕ್ಕದ ಸೀಟಿನಲ್ಲಿ ನಮ್ಮ ಬಿಂಕ-ಬಿಗುಮಾನಗಳು ಮಾತ್ರ ಕೂರಬಹುದಾದ ಒಂಟಿ ಪ್ರಯಾಣದ ಕಾರುಗಳು.. ಇವೆಲ್ಲದರ ಆಬ್ಬರಾಟಕ್ಕೆ ಸಿಲುಕಿದೆ. ಪುಟ್ಟ ಕಾರಿನೊಳಗಿನ ಮುಚ್ಚಿದ ಕಿಟಕಿಯಿಂದ ಕಾಣುವ ಜಗತ್ತು ಕಿರಿದಾಗುತ್ತಿದೆ. ಕೊನೆಯ ಬಸ್ಸು ತಪ್ಪಿಹೋಗುತ್ತದೆನ್ನುವ ಭಯ ಇಲ್ಲವಾಗಿ ನಮ್ಮನ್ನು ಹಿಡಿಯುವವರಿಲ್ಲವಾಗಿದೆ. ಕಂಡಕ್ಟರ್ ಎಸೆದು ಹೋಗುವ ಟಿಕೆಟ್ ಪುಸ್ತಕ ತನ್ನ ಅಂದ ಕಳೆದುಕೊಂಡು ಬಾಲ್ಯವೇ ಬಣ್ಣಗೆಟ್ಟಂತಾಗಿದೆ. ಅಂದು ಒಂದೇ ಸೀಟಿನಲ್ಲಿ ಕುಳಿತು ಪ್ರಯಾಣಿಸಿದ್ದ ಮಂದಿ ಬೇರೆ ಬೇರೆ ಕಾರುಗಳಲ್ಲಿ ಕುಳಿತು ದೂರದೂರ ಸಾಗುತ್ತಿದ್ದಾರೆ. ತಾನು ಹಾಗೂ ತಾನಷ್ಟೇ ಕುಳಿತು ಪ್ರಯಾಣಿಸುತ್ತಿರುವ ಮನುಷ್ಯ ಒಂಟಿಯಾಗುತ್ತಿದ್ದಾನೆ. ಬೆವರಲು ಬಿಡದ ಎಸಿ, ಕೂಲರ್ ಗಳೊಳಗೆ ತಣ್ಣಗೆ ಕುಳಿತು ನರಳುತ್ತಿದ್ದಾನೆ. ತನಗೇ ಗೊತ್ತಿಲ್ಲದಂತೆ, ತುಂಬಿ ಬರಲಿರುವ ಊರಿನ ಆ ಹಳೇ ಬಸ್ಸಿಗಾಗಿ ಕಾಯುತ್ತಿದ್ದಾನೆ.

ದೂರ ದಾರಿಯ ತಿರುವಿನಲ್ಲಿ ವಾಲಾಡುವ ಚುಕ್ಕೆಯೊಂದು ಸಣ್ಣಗೆ ಮೂಡತೊಡಗಿದೆ..


(ದಿನಾಂಕ 17.11.2019ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ)

ಮಂಗಳವಾರ, ನವೆಂಬರ್ 12, 2019

ಸ್ವಚ್ಛಂದ



ರಾತ್ರೆ ಸುರಿದ ಮಳೆಯಿಂದಾಗಿ ಶಿವಮೊಗ್ಗದಿಂದ ಕೊಡಚನಹಳ್ಳಿಗೆ ಹೋಗುವ ಎರೆಡು ಮಾರ್ಗಗಳಲ್ಲೂ ವಾಹನ ಸಂಚಾರ ಸ್ಥಗಿತಗೊಂಡಿದೆಯೆಂಬ ವಿಷಯ ತಿಳಿಯುವ ಹೊತ್ತಿಗಾಗಲೇ ನಾನು ಶಿವಮೊಗ್ಗದ ರೈಲ್ವೇ ನಿಲ್ದಾಣದಲ್ಲಿ ಇಳಿದಾಗಿತ್ತು. ಹೋಗೋಣವೆಂದರೆ ಒಬ್ಬನೇ ಒಬ್ಬ ಪರಿಚಿತನ ಮನೆಯೂ ಶಿವಮೊಗ್ಗದಲ್ಲಿಲ್ಲ. ದೂರದ ಪಟ್ಟಣಸೇರಿ ನನ್ನ ಜಿಲ್ಲೆಗೇ ನಾನು ಅದೆಷ್ಟು ಅಪರಿಚಿತನಾಗಿಬಿಟ್ಟೆನೆಂದು ಯೋಚಿಸುತ್ತಿದ್ದಾಗಲೇ ರಿಶಿಕೇಶ್ ನ ನೆನಪಾಗಿದ್ದು. 

ರಿಶಿ ನನ್ನ ಎಕ್ಸ್ ಕಲೀಗ್ ಕಮ್ ರೂಮ್ ಮೆಟ್. ತೀರ್ಥಹಳ್ಳಿಯವನು. ನಾಲ್ಕು ಜನರೆದುರು ನಿಂತು ಎರೆಡು ಮಾತನಾಡಲೂ ಅಂಜುತ್ತಲೇ ಗಣಪತಿ ಹಬ್ಬದ ರಾಜಬೀದಿ ಮೆರವಣಿಗೆಯಲ್ಲಿ ತಮಟೆಯ ಸದ್ದಿಗೆ ಕುಣಿಯಬೇಕೆಂದು ಆಸೆ ಪಡುತ್ತಿದ್ದವನು. ಇಪ್ಪತ್ತೋ, ಮೊವ್ವತ್ತೋ ಉಳಿಸಲು ರಾತ್ರೆ ಮಾಡಿದ ಗಂಜಿಯನ್ನೇ ಹಗಲೂ ಕುಡಿಯುತ್ತಾ ಖಾಯಿಲೆ ಬಿದ್ದು ಕೊನೆಗೆ ನೂರಾರು ರೂಪಾಯಿ ಮಾತ್ರೆ, ಔಷಧಗಳಿಗೆ ಚೆಲ್ಲುತ್ತಿದ್ದವನು. ನಿದ್ರೆಗಣ್ಣಿನಲ್ಲಿ ಎಬ್ಬಿಸಿ ಕೇಳಿದರೂ ತನ್ನ ಬಾಸ್, ಮ್ಯಾನೇಜರ್ ಗಳನ್ನು ಬೈಯ್ಯುತ್ತಲೇ ಮಾತು ಆರಂಭಿಸುತ್ತಿದ್ದವನು. ಕೊನೆಗೊಂದು ದಿನ  ನಿದ್ರೆಯಿಂದೆದ್ದಂತೆಯೇ ಎದ್ದು ತನಗೆ ಇಷ್ಟವಿಲ್ಲದ ಕೆಲಸದ ಜೊತೆ ಬೆಂಗಳೂರನ್ನೂ ಬಿಟ್ಟು ಹೊರಟುಹೋದವನು. ಅದಾಗಿ ನಾಲ್ಕು ವರ್ಷ ಅವನು ಸಂಪರ್ಕವೇ ತಪ್ಪಿಹೋಗಿತ್ತು. ಊರಿನಲ್ಲಿ ಯಾವುದೋ ಆಡಿಟರ್ ಫರ್ಮ್'ನಲ್ಲಿದ್ದಾನಂತೆ, ಕೃಷಿ ಮಾಡುತ್ತಿದ್ದಾನಂತೆ, ಮತ್ತೆ ಬೆಂಗಳೂರಿಗೆ ಬಂದ್ನಂತೆ, ಯಾವುದೋ ಧಾರಾವಾಹಿಗೆ ಸಂಭಾಷಣೆ ಬರೆಯುತ್ತಿದ್ದಾನಂತೆ... ಪ್ರತೀ ಬಾರಿ ವಿಚಾರಿಸಿದಾಗಲೂ ಅವನ ಕುರಿತಾದ ಹೊಸ ಸಮಾಚಾರವೊಂದು ಕಿವಿಗೆ ಬೀಳುತ್ತಿತ್ತು. ಸ್ಥಿರವಾದ ಒಂದು ನೆಲೆಯಿಲ್ಲದ ಅವನ ಈ ಅಲೆದಾಟದ ಸಮಾಚಾರಗಳನ್ನು ಹೇಳಿದವರೆಲ್ಲ ಇಷ್ಟು ವರ್ಷದಿಂದ ಬೆಂಗಳೂರಿನಲ್ಲೇ ಉಳಿದಿರುವ ನನ್ನ ತಾಳ್ಮೆ, ಶ್ರದ್ಧೆಗಳನ್ನು ಹಾಡಿಹೊಗಳಿದ್ದರು. ಆಗೆಲ್ಲ, ಪ್ರತಿದಿನ ಬೆಳಗ್ಗೆ ಒತ್ತಡದ ಮನಸ್ಸಿನೊಂದಿಗೆ ಕೆಲಸಕ್ಕೆ ಹೋಗುವಾಗ ರಿಶಿ ಮಾಡಿದ್ದೇ ಸರಿಯೆಂದೂ, ಸಂಜೆ ತಣ್ಣಗೆ ಮರಳಿಬರುವಾಗ ನಾನು ಸರಿಯೆಂದೂ ಯೋಚಿಸುವ ನಾನು, ಈ ಬೆಂಗಳೂರಿನೊಂದಿಗೆ ಯಾವುದೇ ಕ್ಷಣದಲ್ಲಾದರೂ ಕಳಚಿಹೋಗಬಹುದಾದ ಸೂಕ್ಷ್ಮ ನಂಟಿನೆಳೆಯಲ್ಲೇ ಬದುಕುತ್ತಿರುವೆನೆಂಬ ಸತ್ಯ ನೆನಪಾಗಿ ಅವರ ಶಭಾಶ್ಗಿರಿಯನ್ನು ನುಂಗಲೂ ಆಗದೇ, ಉಗುಳಲೂ ಆಗದೇ ಪೆಚ್ಚುನಗೆ ನಗುತ್ತಿದ್ದೆ. 

ಈಗ ರಿಶಿ ಇಲ್ಲೇ ಎಲ್ಲೋ ಶಿವಮೊಗ್ಗ ಪಟ್ಟಣದಲ್ಲೇ ಇದ್ದಾನೆಂಬ ಪಕ್ಕಾ ಸುದ್ದಿಯಿತ್ತು. ಅವನಿಗೆ ಕರೆಮಾಡುವುದೇ ಉಳಿದಿರುವ ಮಾರ್ಗವೆನಿಸಿ ಮೊಬೈಲ್ ಕೈಗೆತ್ತಿಕೊಂಡು ಫೋನಾಯಿಸಿದೆ‌. ಮೂರನೇ ರಿಂಗಿಗೇ ಫೋನು ಎತ್ತಿದ, ಖಾಲಿ ಕೂತವನಂತೆ.

"ಹಲೋ, ಅರೆರೇ ಭಟ್ರು! ಹೇಳಿ ಭಟ್ರೇ ಹೇಗಿದೀರ? ಅಪರೂಪಕ್ಕೆ ನೆನಪಿಸಿಕೊಂಡಿದೀರ? ಏನ್ ಸಮಾಚಾರ?"
ನಾಲ್ಕು ವರ್ಷಗಳ ಹಿಂದಿನ ಅದೇ ಹಳೇ ಧ್ವನಿಯಲ್ಲಿನ ಆತ್ಮೀಯತೆ ಮಾತ್ರ ಹೊಚ್ಚಹೊಸತರಂತಿತ್ತು.

"ಹಲೋ ರಿಶಿ! ನಾನು ಚೆನ್ನಾಗಿದೀನಿ. ನೀನು ಹೇಗಿದ್ದಿ? ಜಸ್ಟ್ ಈಗ ಶಿವಮೊಗ್ಗಕ್ಕೆ ಬಂದಿಳಿದೆ. ಇಲ್ಲಿ ನೋಡಿದ್ರೆ ನಮ್ಮೂರಿನ ದಾರಿನೇ ಬಂದ್ ಆಗಿದ್ಯಂತೆ..."

"ಓಹ್ ಹೌದಾ? ರಾತ್ರೆಯಿಡೀ ಭಯಂಕರ ಮಳೆ ಹುಯ್ದಿದೆ. ಒಂದ್ಕೆಲಸ ಮಾಡಿ. ನೇರ ನನ್ನ ರೂಮಿಗೆ ಬಂದ್ಬಿಡಿ. ದುರ್ಗಿಗುಡಿ ಗೊತ್ತಲ್ಲ, ಅದರ ಪಕ್ಕದ ರಸ್ತೆಯ ನಾಲ್ಕನೇ ಕ್ರಾಸಲ್ಲೇ ಇರೋದು ನನ್ನ ರೂಮು"

ಇಷ್ಟು ದಿನ ಹೇಗಿದ್ದೀ ಎಂದೂ ವಿಚಾರಿಸದೇ ಈಗ ಸಂಕಟ ಬಂದಿರುವಾಗ ನೆನಪಿಸಿಕೊಳ್ಳುತ್ತಿದ್ದೇನೆಂಬ ಮುಜುಗರದಿಂದ ತೊದಲುತ್ತಿದ್ದ ನನ್ನ ಮಾತಿನೊಳಗಿನ ದಾಕ್ಷಿಣ್ಯವನ್ನು ಅರಿತವನಂತೆ, ಬೇಡುವ ಮೊದಲೇ ಸಹಾಯಹಸ್ತ ಚಾಚಿದ ಅವನ ಅದೇ ಹಳೆಯ ಆತ್ಮೀಯತೆಗೆ ಅರೆಕ್ಷಣ ಮನಸ್ಸು ತುಂಬಿಬಂತು. ಬ್ಯಾಗ್ ಏರಿಸಿಕೊಂಡು ಅವನು ಹೇಳಿದ ವಿಳಾಸದತ್ತ ನಡೆಯತೊಡಗಿದೆ.

ಮಳೆ ಮುದ್ದಿಸಿಹೋದ ಚುಮುಚುಮು ಬೆಳಗೊಂದು ಶಿವಮೊಗ್ಗೆಯಲ್ಲಿ ಮೆಲ್ಲನೆ ಅರಳುತ್ತಿತ್ತು. ರಜೆಯ ಮೇಲೆ ತವರಿಗೆ ಬರುತ್ತಿರುವ ಅದೆಷ್ಟೋ ಹೃದಯಗಳನ್ನು ಹೊತ್ತ ಸಂಭ್ರಮದಿಂದೆಂಬಂತೆ ಹತ್ತಾರು ಬಸ್ಸುಗಳು ಲವಲವಿಕೆಯಿಂದ ನಿಲ್ದಾಣದೊಳಕ್ಕೆ ನುಗ್ಗುತ್ತಿದ್ದವು. ಅಲ್ಲಲ್ಲಿ ಬಟಾವಡೆಯಾಗಬೇಕಾದ ಅಂದಿನ ದಿನಪತ್ರಿಕೆಗಳನ್ನು ಗುಡ್ಡೆಹಾಕಿಕೊಂಡ ಹುಡುಗರು ಗಡಿಬಿಡಿಯಿಂದ ಕೆದಕಾಡುತ್ತಿದ್ದರು. ಜೊತೆಗೇ ಹಾಲಿನವರು, ಹೂವಿನವರು, ಹಬೆಯಾಡುತ್ತಿರುವ ಚಹಾದವರು.... ಹೀಗೆ ತಾಜಾ ಮುಂಜಾನೆಯೊಂದನ್ನು ಮತ್ತಷ್ಟು ತಾಜಾ ಆಗಿಸುವ ಎಲ್ಲ ರೀತಿಯ ಚಟುವಟಿಕೆಗಳೂ ಹನಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಜರುಗುತ್ತಿದ್ದವು. ನನ್ನೂರಿನ ಜನಜೀವನದ ಮುಖಗಳನ್ನು ಕಣ್ತುಂಬಿಕೊಳ್ಳುತ್ತಾ ದುರ್ಗಿಗುಡಿ ರಸ್ತೆಯತ್ತ ನಡೆಯತೊಡಗಿದೆ.

ಬೆಂಗಳೂರಿನಿಂದ ಊರಿಗೆ ಬಂದಿಳಿಯುವ ಈ ಮುಂಜಾನೆಗಳು, ಕಳೆದ ಏಳು ವರ್ಷಗಳಿಂದ ನನ್ನ ಬದುಕಿನ ಅತೀ ಸಂತಸದ ಕ್ಷಣಗಳು. ನಾನು ಕೇವಲ ನಾನಾಗಿ ಇರಬಲ್ಲ, ಆಫೀಸಿನ ಮುಗಿಯದ ಮಂಡೆಬಿಸಿಗಳ ಕರಿನೆರಳಿಲ್ಲದ, ಅಮ್ಮನ ಬೆಚ್ಚಗಿನ ಮಡಿಲಿನಂತಹ ಈ ಎರೆಡು-ಮೂರು ರಜಾದಿನಗಳು ನನ್ನೆದುರಿವೆಯೆಂಬ ಈ ದಿವ್ಯ ನೆಮ್ಮದಿಗೆ ಸಮನಾದ ಇನ್ನೊಂದು ಸಂಭ್ರಮವಿಲ್ಲ. ಈಗಷ್ಟೇ ಅಂಗಡಿ ಮುಂಗಟ್ಟುಗಳ ಕದ ತೆರೆಯುತ್ತಿರುವ, ಮನೆಯೆದುರು ರಂಗೋಲಿ ಹಾಕುತ್ತಿರುವ, ಸಿಟಿ ಬಸ್ಸಿಗಾಗಿ ಕಾಯುತ್ತಿರುವ, ತಮ್ಮದೇ ಊರಿನಲ್ಲಿ ಬದುಕು ಕಂಡುಕೊಂಡ ಇಲ್ಲಿನ ಪುಣ್ಯಪುರುಷರನ್ನೆಲ್ಲ ಕಣ್ತುಂಬಿಕೊಳ್ಳುವಾಗ ಮುಂದೊಂದು ದಿನ ಇವರಲ್ಲಿ ನಾನೂ ಒಬ್ಬನಾಗುವ ಹಗಲುಗನಸು ತನ್ನಷ್ಟಕ್ಕೆ ತಾನೇ ಮನದೊಳಗೆ ಬಿತ್ತರವಾಗುತ್ತದೆ. ನಾನು ಸಧ್ಯಕ್ಕೆ ಕಲ್ಪನೆಯಲ್ಲಿ ಮಾತ್ರ ಕಾಣಬಹುದಾದ ಈ ಬದುಕನ್ನು ಈಗಾಗಲೇ ಬದುಕುತ್ತಿರುವ ರಿಶಿಯನ್ನು ಭೇಟಿಯಾಗುತ್ತಿರುವುದಕ್ಕೆ ಒಂದು ತೆರನಾದ ಕುತೂಹಲ ಬೆರೆತ ಸಂತೋಷ ತಂತಾನೇ ಅರಳಿಕೊಂಡಿತ್ತು. ಈಗ ಹೇಗಿರಬಹುದು ರಿಶಿ? ಅಂದು ಐಟಿ ಬದುಕಿನ ಬಂಗಾರದ ಪಂಜರದಂತಹಾ ಬಂಧನದೊಳಗೆ ಕುಳಿತು ಅವನು ಹಂಬಲಿಸುತ್ತಿದ್ದ ಸ್ವತಂತ್ರ ಜೀವನ ಅವನಿಗೆ ಸಿಕ್ಕಿದೆಯಾ? ಪಟ್ಟಣದಾಚೆಗೂ ಇರುವ ಬದುಕುವ ದಾರಿ ಅವನ ಕೈ ಹಿಡಿದಿದೆಯಾ? ಯೋಚಿಸುತ್ತಿದ್ದಾಗಲೇ ಹೆಜ್ಜೆಗಳು ರಿಶಿ ಹೇಳಿದ ರಸ್ತೆಯ ತಿರುವಿನಲ್ಲಿದ್ದವು. ನಾಲ್ಕನೇ ಕ್ರಾಸಿನಲ್ಲಿ ನಾಲ್ಕು ಹೆಜ್ಜೆ ನಡೆಯುವಷ್ಟರಲ್ಲೇ ಎದುರಿದ್ದ ಎರೆಡು ಮಹಡಿ ಕಟ್ಟಡದ ಟೆರಾಸಿನ ಮೇಲೆ ಕೈಬೀಸುತ್ತ ನಿಂತಿದ್ದ ರಿಶಿ ಕಣ್ಣಿಗೆಬಿದ್ದ.

"ಓಹೋಹೋ ಬನ್ನಿ ಬನ್ನಿ... ಎಂತದಿದು ಭಟ್ರೇ. ನಾಲ್ಕು ವರ್ಷ ಆಯ್ತು, ಒಂಚೂರು ತ್ವಾರ-ಗೀರ ಎಂತದೂ ಆಗೇ ಇಲ್ವಲ್ಲ ನೀವು! ಹೊಟ್ಟೆಗೇನಾದ್ರೂ ತಿಂತಿದೀರೋ ಇಲ್ವೋ?"
ಮುಖದ ಮೇಲೆ ನಗೆ ತುಂಬಿಕೊಂಡು ಮೆಟ್ಟಿಲೇರುತ್ತಾ ಬಂದ ನನ್ನನ್ನು ಬ್ಯಾಗಿನ ಸಮೇತ ತಬ್ಬಿಕೊಳ್ಳುತ್ತಾ ಹೇಳಿದವನ ಮಾತು ಮಲೆನಾಡಿನ ಮಳೆಯಷ್ಟೇ ತಿಳಿಯಾಗಿತ್ತು.

"ಎಂತ ಮಾಡೋದು ಮಾರಾಯ? ಆಫೀಸಲ್ಲಿ ಬಾಸಿನ ಕಾಟ. ರೂಮಲ್ಲಿ ಓನರ್ ಕಾಟ. ಊರಿಗೆ ಬಂದ್ರೆ ಮದುವೆ ಅಗು ಅಂತ ಅಮ್ಮನ ಕಾಟ. ಎಲ್ಲದರ ಮಧ್ಯೆ ಹೋಟೆಲಿನ ಸೋಡಾ ಬೆರೆಸಿದ ಊಟ! ದಪ್ಪ ಆಗೋದಾದ್ರೂ ಹೆಂಗೆ ಹೇಳು?" 

"ಹ..ಹ.. ಬೆಂಗಳೂರಿನ ಬದುಕೇ ಹಾಗೆ. ಒಂಥರಾ ಶೋಕೇಸ್ ಇದ್ದಹಾಗೆ! ನೋಡೋದಕ್ಕೆ, ಹೇಳಿಕೊಳ್ಳೋದಕ್ಕೆ ತುಂಬಾ ಚಂದ. ಆದರೆ ಅನುಭವಿಸೋದಕ್ಕೆ ಬರೋದಿಲ್ಲ!" ಎನ್ನುತ್ತಾ ಹೆಗಲಮೇಲಿನ ಕೈ ತೆಗೆಯದೆಯೇ ರೂಮಿನೊಳಕ್ಕೆ ಕರೆದೊಯ್ದ. ಎತ್ತರದ ಮರದ ಮೇಲಿನ ಪುಟ್ಟ ಗೂಡಿನಂತಿತ್ತು ಅವನ ರೂಮು. ಕೋಣೆಯೆದುರಿನ ಖಾಲಿ ಜಾಗದಲ್ಲಿ ಪುಟ್ಟಪುಟ್ಟಗೆ ಹೂಬಿಟ್ಟುನಿಂತ ಪಾಟ್ ಗಳು, ಕೋಣೆಯೊಳಗೆ ಆಗಷ್ಟೇ ಹಚ್ಚಿದ್ದ ಅಗರಬತ್ತಿಯ ಘಮಲು, ಹಣತೆಯುರಿಯುತ್ತಿದ್ದ ದೇವರ ಫೋಟೋ, ಕಪಾಟಿನಲ್ಲಿ ಮಟ್ಟಸವಾಗಿ ಜೋಡಿಸಿಟ್ಟ ಪುಸ್ತಕಗಳು, ತಂತಮ್ಮ ಜಾಗದಲ್ಲಿ ಶಿಸ್ತಾಗಿ ಕುಳಿತಿರುವ, ಅವನು ತನ್ನ ಅಡಿಗೆಯನ್ನು ತಾನೇ ಮಾಡಿಕೊಳ್ಳುತ್ತಿದ್ದಾನೆಂದು ಸಾರುತ್ತಿರುವ ವಿವಿಧ ಪಾತ್ರೆಗಳು.. ಪರವಾಗಿಲ್ಲ ಆಸಾಮಿ, ಕೆಲಸ ಬಿಟ್ಟರೂ ಶಿಸ್ತು ಬಿಟ್ಟಿಲ್ಲ ಎಂದುಕೊಳ್ಳುತ್ತಲೇ ಹಾಸಿಗೆ ಹಾಸಿಕೊಂಡೇ ಇದ್ದ ಮಂಚದಮೇಲೆ ಕುಳಿತೆ. 

"ಮತ್ತೇನ್ರೀ ಸಮಾಚಾರ? ಹಬ್ಬಕ್ಕೆ ಎಷ್ಟುದಿನ ರಜೆ?"
ಕಾಫಿಪುಡಿ ಪ್ಯಾಕೇಟಿನ ತುದಿ ಕತ್ತರಿಸುತ್ತಾ ಕೇಳಿದ.

"ಮ್ಯಾನೇಜರ್ ಕೊಟ್ಟಿರೋದು ಒಂದು ದಿನ, ನಾನು ತಗೊಳ್ತಿರೋದು ಎರೆಡು ದಿನ."
ಮುಗುಳ್ನಕ್ಕು ಉತ್ತರಿಸಿದೆ.

"ಇನ್ನೂ ನಿಮಗೊಬ್ಬ ಒಳ್ಳೇ ಬಾಸ್ ಸಿಕ್ಕಿಲ್ಲ ಅಂತಾಯ್ತು ಹಂಗಾದ್ರೆ!"

"ನನ್ನ ಜಾತಕದಲ್ಲೇ ಆ ಯೋಗ ಇಲ್ಲಾಂತ ಕಾಣತ್ತೆ ರಿಶಿ. ಬಿಡು. ಮತ್ತೇನು ಸಮಾಚಾರ? ಹೇಗಿದೆ ಊರಿನ ಲೈಫು? ಈಗೆಲ್ಲಿ ಕೆಲಸ ಮಾಡ್ತಿದ್ದೀ?"
ಮತ್ತದೇ ಬೆಂಗಳೂರು, ಆಫೀಸು, ಬಾಸ್'ಗಳನ್ನು ನೆನಪಿಸಿಕೊಳ್ಳಲಿಕ್ಕೆ ಇಷ್ಟವಿಲ್ಲದೇ ಮಾತಿನ ದಿಕ್ಕು ಬದಲಿಸುವ ಜೊತಗೆ ಅವನ ಬದುಕಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲವೂ ಜೊತೆಯಾಗಿ ಆ ಪ್ರೆಶ್ನೆ ಕೇಳಿದೆ.

"ಸಧ್ಯಕ್ಕೆ ಎಲ್ಲೂ ಇಲ್ಲ!"
ನನ್ನ ಕಣ್ಣು, ಬಾಯಿಗಳು ಇಷ್ಟಗಲಕ್ಕೆ ತೆರೆದುಕೊಳ್ಳುವಂತಹಾ ಅಚ್ಚರಿಯ ಉತ್ತರವನ್ನು ತೀರಾ ತಣ್ಣಗಿನ ದನಿಯಲ್ಲಿ  ಕೊಟ್ಟುಬಿಟ್ಟ.

"ಉದ್ಯೋಗವೇ ಇಲ್ವಾ? ಹಾಗಾದರೆ ಬದುಕಿಗೇನು ಮಾಡ್ತಿದ್ದೀಯಪ್ಪಾ?"
ಅರ್ಧ ಅಚ್ಚರಿ, ಇನ್ನರ್ಧ ಆಘಾತದಿಂದೆಂಬಂತೆ ಕೇಳಿದೆ.

"ಉದ್ಯೋಗವೊಂದೇ ಆದಾಯದ ಮೂಲ ಅಲ್ಲ ಅಲ್ವ ಭಟ್ರೇ. ಅಷ್ಟಕ್ಕೂ ಈ ಉದ್ಯೋಗ ಬದುಕಿನ ಪರಕೀಯತೆಯಿಂದಾಚೆ ಬರಬೇಕೆಂದೇ ಅಲ್ವ ನಾನು ಬೆಂಗಳೂರು ಬಿಟ್ಟು ಬಂದದ್ದು? ಕಳೆದ ವರ್ಷ ಹೊಸದಾಗಿ ಮುಕ್ಕಾಲೆಕರೆ ತೋಟ ಖರೀದಿಸಿದೆ. ಮಳೆಗಾಲ ನೋಡೀ, ತೋಟಕ್ಕೆ ಔಷಧಿ ಹೊಡೆಯೋದಿತ್ತು. ಈ ತೋಟ ತಗೊಂಡಿದ್ದು ಅಪ್ಪನಿಗೆ ಒಂಚೂರೂ ಇಷ್ಟವಿಲ್ಲ. ಅಪ್ಪೀತಪ್ಪೀ ಕಾಲೆಡವಿದಾಗಲೂ ತೋಟದಾಚೆಗಿನ ಹಳ್ಳಕ್ಕಾದರೂ ಬೀಳುತ್ತಾರೆಯೇ ಹೊರತೂ ನನ್ನ ತೋಟಕ್ಕೆ ಕಾಲು ಇಡೋದಿಲ್ಲ! ಅದಕ್ಕೆ ನಾನೇ ಹೋಗಿ ಎಲ್ಲ ಕೆಲಸ ಮುಗಿಸಿ ಬಂದೆ..."

"ಅದೇನೋ ಸರಿ, ತೋಟ, ಮನೆ, ಅಪ್ಪ, ಅಮ್ಮ ಎಲ್ಲ ಅಲ್ಲಿರುವಾಗ ನೀನು ಇಲ್ಲೇನು ಮಡ್ತಿದ್ದೀಯ?"
ಅವನ ಉತ್ತರ ನನ್ನೊಳಗೆ ಮತ್ತೊಂದು ಪ್ರೆಶ್ನೆಯನ್ನು ಹುಟ್ಟುಹಾಕಿತ್ತು.

"ಇರೋ ಮುಕ್ಕಾಲೆಕರೆ ಜಮೀನಿಗೆ ಪೂರ್ತಿ ಜೀವನವನ್ನೇ ಬರೆದುಕೊಡೋಕಾಗತ್ತಾ ಹೇಳಿ? ಇಲ್ಲೊಬ್ಬರು ಆಡಿಟರ್ ಪರಿಚಯವಾಗಿದ್ದಾರೆ. ಅವರ ಕೆಲಸಗಳಲ್ಲಿ ಚಿಕ್ಕಪುಟ್ಟದನ್ನ ನನಗೆ ಕೊಡ್ತಾರೆ. ಒಂದಿಷ್ಟು ಪುಡಿಗಾಸೂ ಬರತ್ತೆ. ಅಲ್ಲದೇ ಇಲ್ಲೇ ಬೇಗೂರಲ್ಲಿ ನನ್ನ ಪರಿಚಯದವರೊಬ್ಬರ ಹೊಸದೊಂದು ಸೀರಿಯಲ್ ನ ಶೂಟಿಂಗ್ ನಡೀತಿದೆ. ಅದಕ್ಕೆ ಸಂಭಾಷಣೆ ನಾನೇ ಬರೀತಿದೀನಿ. ಹಾಗಾಗಿಯೇ ಈ ಟೆರಾಸು, ರೂಮು ಎಲ್ಲ..."

"ಓಹ್.. ಊರಿಗೆ ಬಂದು ಆಲ್ರೌಂಡರ್ ಆಗಿದೀಯ ಅನ್ನು! ಇನ್ನೂ ಏನೇನು ಧಂಧೆ ಮಾಡ್ತೀಯಪ್ಪಾ ಸಕಲ ಕಲಾವಲ್ಲಭ?"

"ಅದೂ ಇದೂ ಅಂತ ಏನಿಲ್ಲ ಸರ್. ಪುರ್ಸೊತ್ತಿದ್ದಾಗ ಬಂದು ಬಾಗಿಲು ಬಡಿಯೋ ಯಾವ ಕೆಲಸಕ್ಕೂ ಇಲ್ಲ ಅನ್ನೋದಿಲ್ಲ. ಊರಿನಲ್ಲಿ ಗೆಳೆಯನೊಬ್ಬನ ಓಮಿನಿ ಇದೆ. ಅವನು ಬ್ಯುಸಿ ಇದ್ದಾಗ ಅದಕ್ಕೆ ನಾನೇ ಡ್ರೈವರ್. ಆಗಾಗ ಕ್ಯಾಟರಿಂಗ್ ಗೂ ಹೋಗ್ತೀನಿ... ಬಿಡಿ. ಹೇಳೋದಕ್ಕೇನು? ಹತ್ತಾರು ಕೆಲಸಗಳಿವೆ. ಆದರೆ ಪಕ್ಕಾ ಉದ್ಯೋಗ ಅನ್ನುವಂಥಾದ್ದು, ನಿಶ್ಚಿತ ಕಮಾಯಿ ಆಗುವಂಥಾದ್ದು, ಬಹು ಮುಖ್ಯವಾಗಿ ಹೆಣ್ಣು ಕೊಡಬೇಕಾದ ಮಾವಂದಿರಿಗೆ ತೋರಿಸಬಹುದಾದಂಥಾದ್ದು ಒಂದೂ ಇಲ್ಲ... ಸರಿ ಭಟ್ರೇ, ನೀವೀಗ ರೆಸ್ಟ್ ಮಾಡಿ. ನಿಮ್ಮೂರಿನ ರೂಟು ಸರಿಯಾಗಲಿಕ್ಕೆ ಏನಿಲ್ಲವೆಂದರೂ ಸಂಜೆಯಾಗುತ್ತೆ. ಮಧ್ಯಾಹ್ನ ಅರಾಮಾಗಿ ಕೂತು ಮಾತಾಡೋಣ. ನನಗೊಂದು ಚಿಕ್ಕ ಕೆಲಸ ಇದೆ. ಹನ್ನೊಂದು ಗಂಟೆಗೆಲ್ಲ ವಾಪಾಸು ಬಂದು ಬಿಡ್ತೀನಿ. ನಿನ್ನೆಯ ಊಟಕ್ಕೇ ಒಗ್ಗರಣೆ ಹಾಕಿ ಹೆಚ್ಚೂ ಕಡಿಮೆ ಚಿತ್ರಾನ್ನ ಅನ್ನಬಹುದಾಂದಂಥಾದ್ದೊಂದನ್ನು ಮಾಡಿದೀನಿ. ತಗೊಳ್ಳಿ.. ಬೇಜಾರಾದ್ರೆ ಟಿವಿ ನೋಡಿ. ಏನೂ ಅಂದ್ಕೋಬೇಡಿ.." 
ಚಿತ್ರಾನ ತುಂಬಿದ ತಟ್ಟೆಯನ್ನು ಕೈಯ್ಯಲ್ಲಿಟ್ಟು, ನಾನು ಬೇಡವೆನ್ನುವ ಮೊದಲೇ ಬಾಗಿಲಿನಾಚೆ ಮಾರೆಯಾಗಿಬಿಟ್ಟ. 

ಇವನ ಬದುಕೂ ಬಣ್ಣ ಹಚ್ಚಿಕೊಂಡ ಈ ತಂಗಳಿನಂತಾಗಿಲ್ಲ ತಾನೇ?
ಚಿತ್ರಾನ್ನದ ತಟ್ಟೆ ಹಿಡಿದುಕೊಂಡು ಯೋಚಿಸತೊಡಗಿದೆ.

                      ****************

ಮೂರೂಕಾಲು ವರ್ಷಗಳ ಕಾಲ ಒಂದೇ ಸೂರಡಿಯಲ್ಲಿ ಬಾಡಿಗೆಯ ಜೊತೆ ಲೆಕ್ಕವಿಲ್ಲದಷ್ಟು ಬೈಟೂ ಕಾಫಿಗಳನ್ನೂ, ಫುಲ್ ಪ್ಲೇಟ್ ನ ಅರ್ಧಭಾಗ ಗೋಭೀಮಂಚೂರಿಗಳನ್ನು, ತಡ ರಾತ್ರೆಗೆ ನೆನಪಿಗೆ ಬರುತ್ತಿದ್ದ ಬಾಲ್ಯದ ತಮಾಷೆಗಳನ್ನೂ, ಹೊತ್ತಲ್ಲದ ಹೊತ್ತಿನಲ್ಲಿ ಊರಿನ ನೆನಪು ತರುತ್ತಿದ್ದ ಬಡಬಡಿಕೆಗಳನ್ನೂ, ಬೆಂಗಳೂರೆಂಬ ಬೆಂಗಾಡಿನಲ್ಲಿ ಬಂದೊದಗುತ್ತಿದ್ದ ಬೇಸರ-ತಲ್ಲಣಗಳನ್ನೂ ಹಂಚಿಕೊಂಡು ಜೊತೆಗಿದ್ದ ರಿಶಿಕೇಶ್ ಒಮ್ಮೊಮ್ಮೆ ಕನ್ನಡಿಯೊಳಗಿನ ನನ್ನದೇ ಬಿಂಬದಂತೆ ಕಾಣುತ್ತಿದ್ದ. ನಾಮಫಲಕದ ಅಕ್ಷರಗಳೇ ಮಾಸಿಹೋಗಿದ್ದ ಕಾಲೇಜೊಂದರಲ್ಲಿ ಓದು ಮುಗಿಸಿ, ಕಣ್ಮುಚ್ಚಿಕೊಂಡು ತಗ್ಗಿನೆಡೆಗೆ ಹರಿಯುವ ನೀರಿನಂತೆ ಬೆಂಗಳೂರೆಡೆಗೆ ಹರಿದುಬಂದಿದ್ದ ಇವನು, ಬದುಕು-ಭವಿಷ್ಯಗಳ ಬಗ್ಗೆ ಇಂತಹದೇ ಎನ್ನುವ ಸ್ಪಷ್ಟ ಕಲ್ಪನೆಗಳಿಲ್ಲದೆ ಯಾರೋ ಕೊಡಿಸುವ ಕೆಲಸವನ್ನು ನಂಬಿ ನಡುರಾತ್ರೆಯಲ್ಲಿ ಬಸ್ಸು ಹತ್ತಿ ಬಂದಿದ್ದ ಪಕ್ಕಾ ಹಳ್ಳಿಹೈದ. ತನ್ನ ಮೊದಲ ವೇತನ ಭಡ್ತಿಯಲ್ಲಿ ಎಲ್ಲರಿಗಿಂತ ಹೆಚ್ಚಿನ 'ಹೈಕ್' ಸಿಕ್ಕಾಗಲೂ "ಎಲ್ಲರಿಗಿಂತಲೂ ನನಗೇ ಜಾಸ್ತಿ ಹೈಕ್ ಕೊಟ್ಟಿದಾರೆ. ಇನ್ನು ನನ್ನ ಟೀಮಿನವರೆಲ್ಲ ನನ್ನನ್ನು ಪರಕೀಯನಂತೆ ನೋಡ್ತಾರೆ" ಎಂದು ಪೆಚ್ಚುಮುಖ ಹಾಕಿಕೊಂಡು ನುಡಿದವನು ಮುಗ್ಧನೋ, ಪೆದ್ದನೋ, ನಟನೋ ಎಂದು ನಿರ್ಧರಿಸಲಾಗದೆ ನಕ್ಕಿದ್ದೆ‌. ಹಿಂಜರಿಕೆ, ಅತಿಯಾದ ಚಿಂತಿಸುವಿಕೆ, ನಕಾರಾತ್ಮಕ ಯೋಚನೆ, ಕೀಳರಿಮೆ, ಭಾವುಕತೆಗಳ ಅಕ್ಷಯಪಾತ್ರೆಯಂತಿದ್ದವನನ್ನು ಬೆಂಗಳೂರಿನ ರೀತಿನೀತಿಗಳಿಗೆ 'ಅಪ್ಡೇಟ್' ಮಾಡಲು ಹೆಣಗಾಡಿದ್ದ ಗೆಳೆಯರಿಗೆಲ್ಲ ಅವನ ಕಾಲಿನ ಚಪ್ಪಲಿಯನ್ನೂ ಬದಲಾಯಿಸಲು ಸಾಧ್ಯವಾಗಿರಲಿಲ್ಲ. ಆದರೆ ಹೀಗೆ ಜೋಬದ್ರನಂತೆ ಆಫೀಸಿಗೆ ಹೋಗಿಬರುತ್ತಿದ್ದವನು ಅದೊಂದು ಸಂಜೆ ಮಾತ್ರ ಕಣ್ತುಂಬಾ ಪ್ರೀತಿ ಸುರಕೊಂಡು ಮರಳಿದ್ದ.

ಜ್ಯೋತಿ!

ಆ ಎರೆಡೂವರೆ ಅಕ್ಷರದ ಹೆಸರನ್ನು ಕೇವಲ ತನ್ನ ಹೃದಯಕ್ಕೆ ಮಾತ್ರ ಕೇಳಿಸುವಂತೆ ಪಿಸುಗುಟ್ಟಿದವನ ಕಣ್ಣಲ್ಲಿ ಈಗಷ್ಟೇ ಹುಟ್ಟಿದ ಕನಸೊಂದು ನವಿರಾಗಿ ಮೈಮುರಿಯುತ್ತಿತ್ತು. 

"ಯಾರೊಂದಿಗೂ ಅಷ್ಟಾಗಿ ಬೆರೆಯಲ್ಲ. ಗಟ್ಟಿಯಾಗಿ ಒಂದೂ ಮಾತಾಡಲ್ಲ. ಪಕ್ಕಾ ಗೌರಮ್ಮ.. ನಿನಗಂತಲೇ ಹೇಳಿ ಮಾಡಿಸಿದ ಹುಡುಗಿ!"

ಗೆಳೆಯರು ಹಾಗೆಂದು ತಮಾಷೆಮಾಡಿದಾಗ ನೂರು ದೀಪಗಳು ಒಮ್ಮಗೇ ಹೊತ್ತಿಕೊಂಡಂತೆ ಫಕ್ಕನೆ ಅವನ ಕೆನ್ನೆಯಲ್ಲರಳಿದ ನಾಚಿಕೆಯ ನಗುವಿತ್ತಲ್ಲ, ಅದು ಅವನು ಹೇಳದುದ್ದೆಲ್ಲವನ್ನೂ ಹೇಳಿಬಿಟ್ಟಿತ್ತು. ಅವಳೂ ಅಷ್ಟೇ, ಮೌನದ ಗೂಡೊಳಗಿನ ಮುದ್ದುಗಿಳಿಯಂತೆ ಸದಾ ಒಬ್ಬಳೇ ಇರುತ್ತಿದ್ದವಳು ಈ ರಿಶಿಯ ಬಳಿ ಮಾತ್ರ ತನ್ನೆಲ್ಲ ನಿನ್ನೆ, ನಾಳೆಗಳ ಸಂಗತಿಗಳನ್ನು ಪಿಸುಗುಟ್ಟಿಬಿಟ್ಟಿದ್ದಳು. ಯಾರದೋ ಪ್ರಾಜೆಕ್ಟ್ ನ ಕೆಲಸಕ್ಕಾಗಿ ಸಾಲ್ಡರ್ ಮಾಡುತ್ತಾ ಕೈಸುಟ್ಟುಕೊಂಡ ಅವನ ತೋರುಬೆರಳು ತನ್ನದೇ ಎಂಬಷ್ಟು ಅಕ್ಕರೆಯಿಂದ ಮುಲಾಮು ಹಚ್ಚಿದ್ದಳು. ನಮ್ಮೆಲ್ಲರ ಮುಖ ನೋಡಿ ಮಾತಾನಾಡಲೂ ಅಂಜುತ್ತಿದ್ದವಳು ಇವನ ಜೊತೆ ಮಾತ್ರ ಭವಿತವ್ಯದ ಯಾವುದೋ ಮಧುರ ಪಯಣಕ್ಕೆ ಅಣಿಯಾದವಳಂತೆ ನಗುನಗುತ್ತಾ ರಸ್ತೆಯುದ್ದಕ್ಕೂ ನಡೆದುಬಿಡುತ್ತಿದ್ದಳು. ಉಳಿದ ಹುಡುಗ-ಹುಡುಗಿಯರಂತೆ ತಂಟೆ, ತಕರಾರು, ಗೌಜು, ಗಲಾಟೆಗಳಲ್ಲದೆ ಹೀಗೆ ಸುಮ್ಮನೆ ನಡೆದುಹೋಗುವ ಇವರಿಬ್ಬರೂ ಮುಂದೊಮ್ಮೆ ಯಾರಿಗೂ ಹೇಳದೇ ದಾರಿಯ ನಡುವೆಯೇ ಯಾವುದೋ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡು ಬಂದರೂ ಆಶ್ಚರ್ಯವಿಲ್ಲ ಎಂದು ನಾವೆಲ್ಲ ತಮಾಷೆಮಾಡಿ ಛೇಡಿಸಿದ್ದೆವು.

ರಿಶಿ ಕೆನ್ನೀರಿನಲ್ಲಿ ಮಿಂದಂತೆ ನಾಚಿದ್ದ.

                  *****************

"ಜ್ಯೋತಿ ಅಮೇರಿಕಾಗೆ ಹೋದ್ಲಂತೆ?"
ಬಿಸಿಯಾರದ ಹಾಲಿನ ಪಾತ್ರೆಯನ್ನು ಬರಿಗೈಯ್ಯಲ್ಲಿಳಿಸಲುಹೋಗಿ ಸುಟ್ಟಕೊಂಡ ತನ್ನ ಕೈಯ್ಯನ್ನು ತಣ್ಣೀರಿಗದ್ದುತ್ತಾ ಕೇಳಿದ ರಿಶಿಕೇಶ್. ಸುಟ್ಟ ಬೆರಳನ್ನು ಸವರಿಕೊಂಡವನ ಸ್ಪರ್ಷಕ್ಕೆ ಅದೆಷ್ಟು ಮಧುರ ನೆನಪುಗಳು ತಾಕಿದ್ದವೋ?

"ಕೆಲವೊಂದು ಗಾಯಗಳು ಹೊಸತಾದರೂ ನೋವು ಮಾತ್ರ ಹಳತೇ ಆಗಿರುತ್ತದೆ, ಅಲ್ವಾ ಭಟ್ರೇ? ಅದೃಷ್ಟವಂತೆ.. ಕೊನೆಗೂ ತನ್ನಿಷ್ಟದಂತೆಯೇ ಶ್ರೀಮಂತ ಹುಡುಗನನ್ನೇ ಮಾದುವೆಯಾದಳು. ಈಗ್ಲೂ ಒಮ್ಮೊಮ್ಮೆ ಅನಿಸುತ್ತೆ, ಬೆಂಗಳೂರು ಬಿಟ್ಟುಬರದೇ ಸುಮ್ಮನೆ ಕೈಲಿದ್ದ ಕೆಲಸವನ್ನೇ ಮುಂದುವರೆಸಿಕೊಂಡು ಹೋಗಿದ್ದರೆ ಇವತ್ತು ನಾನೂ ಮೊವ್ವತ್ತು-ಮೊವ್ವತೈದು ಸಾವಿರ ಸಂಬಳ ತೆಗೆದುಕೊಳ್ಳುತ್ತಿದ್ದೆನೇನೋ, ಸಿರಿವಂತನನ್ನೇ ಮದುವೆಯಾಗುತ್ತೇನೆಂದು ನನ್ನ ಪ್ರೀತಿಯನ್ನು ತಿರಸ್ಕರಿಸಿದ್ದ ಅವಳು ಆಗಲಾದರೂ ನನ್ನನ್ನು ಒಪ್ಪುತ್ತಿದ್ದಳೇನೋ ಅಂತ.."
ನಿಟ್ಟುಸಿರಿಟ್ಟು ಮುಂದುವರಿಸಿದ.

"ನಾವೇನೇ ಮಾಡಿದರೂ ಆಗಬೇಕಾದುದು ಆಗಿಯೇ ತೀರುತ್ತದೆ ಅಲ್ವಾ... ಅಂದು ನಾನು ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು ಅಂತ ಅಂದುಕೊಳ್ಳೋದೆಲ್ಲ ಆಗಿ ಹೋದ ಗಾಯವನ್ನು ಜೀವಂತವಾಗಿರಿಸಲು ನಮಗೆ ನಾವೇ ಕೊಟ್ಟುಕೊಳ್ಳುವ ಏಟುಗಳಷ್ಟೇ..." 

ಅವನೇ ಪ್ರೆಶ್ನೆ ಕೇಳಿಕೊಂಡ, ಉತ್ತರವನ್ನೂ ಕೊಟ್ಟುಕೊಂಡ. ಹೀಗೆ ಸಮಸ್ಯೆ-ಸಮಾಧಾನಗಳೆರೆಡೂ ತಿಳಿದಿದ್ದೂ ಒಗಟು ಒಗಾಟಾಗಿಯೇ ಉಳಿಯುವ ಸ್ಥಿತಿಯೇ ಬದುಕೇ? 

ಅವನು ಮುಂದುವರೆಸಿದ‌.

"ಎಷ್ಟೊಂದು ಒದ್ದಾಡುತ್ತಿದ್ವಿ ಅಲ್ವಾ ಆ ದಿನಗಳಲ್ಲಿ? ಮೊವ್ವತ್ತು ರೂಪಾಯಿಗೆ ಊಟ ಸಿಗುತ್ತೇಂತ ಮೈಲು ದೂರದ ಎಲ್ಲೈಸಿ ಕ್ಯಾಂಟೀನಿಗೆ ನಡಕೊಂಡು ಹೋಗುತ್ತಿದ್ದಿದ್ದು, ಜ್ಯೂಸ್ ಅಂಗಡೀಲಿ ಪ್ರತೀಸಲ ಬಟರ್ ಫ್ರೂಟ್ ಜ್ಯೂಸಿನ ಬೆಲೆ ವಿಚಾರಿಸಿ ನಿಂಬೆ ಶರಬತ್ತು ಕುಡಿಯುತ್ತದ್ದಿದ್ದು, ಬ್ರಾಂಡೆಡ್ ಬಟ್ಟೆ ಕಡಿಮೆ ರೇಟಿಗೆ ಸಿಗುತ್ತೇಂತ ಅದ್ಯಾವುದೋ ಬೀದಿಗೆ ಹೋಗಿ ಟೋಪಿ ಹಾಕಿಸಿಕೊಂಡು ಬಂದಿದ್ದು... ಇವೆಲ್ಲ ಆಗಾಗ ನೆನಪಾಗಿ ಒಳಗೊಳಗೇ ನಗ್ತಿರ್ತೀನಿ, ಪಕ್ಕದಲ್ಲಿರುವವರು ನನ್ನ ಹುಚ್ಚ ಅಂದುಕೊಳ್ಳುವ ಮಟ್ಟಿಗೆ! ಆದರೆ ಆರುದಿನ ಕಾದಮೇಲೆ ಒಂದು ಭಾನುವಾರ ಸಿಗುತಿದ್ದ ಆ ಬದುಕಿನ ಖುಷಿ, ಜೀವನ ಪೂರ್ತಿ ಭಾನುವಾರವೇ ಆಗಿಹೋದ ಈ ಬದುಕಿನಲ್ಲೇಕೋ ಸಿಗ್ತಿಲ್ಲ."

ವಿಷಾದವೊಂದು ಮುನ್ನಡೆಸುತ್ತಿರುವಂತಿತ್ತು ಅವನ ಮಾತು. ನಿಜ ಹೇಳಬೇಕೆಂದರೆ ಅಂದು ರಿಶಿ  ತೆಗೆದುಕೊಂಡಿದ್ದು ತುಂಬಾ ದೊಡ್ಡ ನಿರ್ಧಾರವೇ ಆಗಿತ್ತು. ಅವನೇ ಹೇಳಿದಂತೆ ಶೋಕೇಶ್ ನಂತಿರುವ ಈ ಪಟ್ಟಣದ ಬದುಕಿನ ವೈಭವಗಳಾಚೆಗೆ ಕಾಲಿರಿಸಲು ಹಲವರಿಗೆ ಪೂರ್ಣ ಜೀವಮಾನವೇ ಸಾಕಾಗುವುದಿಲ್ಲ. 'ಮಗ ಬೆಂಗಳೂರಲ್ಲಿ ದುಡಿಯುತ್ತಿದ್ದಾನೆ' ಅನ್ನೋ ಮಾತನ್ನು ಅಪ್ಪ-ಅಮ್ಮ ಊರಿನಲ್ಲಿ ಎಲ್ಲರೆದುರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವಾಗ, 'ನೋಡು ಇವನನ್ನ, ಆರೂವರೆ ಸಾವಿರ ಸಂಬಳಕ್ಕೆ ಕೆಲಸಕ್ಕೆ ಸೇರಿದವನು. ಇವತ್ತು ಮೊವ್ವತ್ತು ಸಾವಿರ ತಗೋತಿದಾನೆ' ಎಂದು ಎಷ್ಟೋ ಕಿರಿಯರಿಗೆ ನಮ್ಮನ್ನು ಮಾದರಿಯಾಗಿ ಉದಾಹರಿಸಿ ಹೊಗಳುತ್ತಿರುವಾಗ, ಏನೇ ಒದ್ದಾಟಗಳಿದ್ದರೂ ತಿಂಗಳ ಕೊನೆಗೆ ನಿಗದಿತ ಮೊತ್ತವೊಂದು ಅಕೌಂಟಿಗೆ ಬಂದು ಬೀಳುತ್ತಿರುವಾಗ, ನಾವಾಗಿ ಕೇಳದಿದ್ದರೂ ಈ ಬೆಂಗಳೂರಿನ ಬದುಕು ನಮ್ಮವರ ನಡುವೆ ನಮಗೊಂದು ಘನತೆ-ಗೌರವಗಳನ್ನು ತಂದು ಕೊಟ್ಟಿರುವಾಗ, ಪಟ್ಟಣದಲ್ಲಿ ಕೆಲಸದಲ್ಲಿಲ್ಲದ ಹುಡುಗನಿಗೆ ಯಾವುದೇ ಕಾರಣಕ್ಕೂ ಮಗಳನ್ನು ಕೊಡಬಾರದೆಂದು ಜಗತ್ತಿನ ಮಾವಂದಿರೆಲ್ಲ ಗಟ್ಟಿಯಾಗಿ ನಿರ್ಧಾರಿಸಿ ಕುಳಿತಿರುವಾಗ.. ಮನಸ್ಸಿನ ಮಾತು ಕೇಳಿ, ಅಪ್ಪ-ಅಮ್ಮನನ್ನು ನೋಯಿಸಿ, ಇರುವ ಆದಾಯ-ಗೌರವಗಳನ್ನು ಕಳೆದುಕೊಳ್ಳುವುದಾದರೂ ಹೇಗೆ? ಎನ್ನುವ ಗೊಂದಲದಲ್ಲೇ ಹಲವರ ಬದುಕು ಮುಗಿದುಹೋಗುತ್ತದೆ. 

ಇವೆಲ್ಲ ಸಂದಿಗ್ಧಗಳಾಚೆಗೂ ತನ್ನ ಅಂತರಂಗದ ಮಾತು ಕೇಳಿ ರಿಶಿ ತಪ್ಪು ಮಾಡಿದನೇ?

"ಹೀಗೆ ಹೇಳ್ತೀನಂತ ಬೇಜಾರುಮಾಡಿಕೋಬೇಡ ರಿಶಿ. ಇಲ್ಲಿಗೆ ಬರೋಕೆ ಮುಂಚೆ ನೀನು ಮಾಡಿದ್ದು ಸರಿ ಅಂತಾನೇ ನಂಬಿದ್ದೆ. ನನಗೆ ನಿಲುಕದ ನೆಮ್ಮದಿಯೊಂದು ನಿನಗೆ ದಕ್ಕಿರಬಹುದೆಂದು ನಿರೀಕ್ಷಿಸಿದ್ದೆ. ಆದರೆ ಈಗ, ಸ್ಥಿರವಾದ ಒಂದು ನೆಲೆಯಿಲ್ಲ. ಹೇಳಿಕೊಳ್ಳುವಂತಹಾ ವರಮಾನವಿಲ್ಲ. 'ಒಂದು ಮಟ್ಟದ್ದು' ಎನ್ನುವಂತಹಾ ಉದ್ಯೋಗವೂ ಇಲ್ಲ.. ಸಿಗಬಹುದಾಗಿದ್ದ ಹೆಚ್ಚಿನ ಗೌರವದ ಬದುಕೊಂದನ್ನು ನೀನು ಕಳೆದುಕೊಂಡೆಯೇನೋ ಅನಿಸ್ತಿದೆ."

ಕೊಂಚ ಹಿಂಜರಿಕೆಯಿಂದಲೇ ಹೇಳಿಮುಗಿಸಿದೆ. ಈ ಮಾತುಗಳನ್ನು ಈ ಮೊದಲೇ ಹತ್ತಾರುಬಾರಿ ಕೇಳಿದಂತೆ  ಗಾಢ ಮುಗುಳ್ನಗುವೊಂದು ಅವನ ಮುಖದಮೇಲೆ ಮೂಡಿತು.

"ಹೌದು ಭಟ್ರೇ. ಒಂದು ಕಡೆಯಿಂದ ನೋಡಿದಾಗ ನೀವು ಹೇಳಿದ್ದೆಲ್ಲ ನಿಜವೇ. ಆ ಅನುಮಾನ ನನಗೂ ಇದೆ. ಆದರೆ ನಿಮಗೆ ನನ್ನದೊಂದು ಪ್ರೆಶ್ನೆ: ನೀವು ಹೇಳಿದ ಈ ಸ್ಥಿರವಾದ ನೆಲೆ, ಹೇಳಿಕೊಳ್ಳುವಂತಹಾ ವರಮಾನ, ಒಂದು ಮಟ್ಟದ ಉದ್ಯೋಗ... ಇವೆಲ್ಲವೂ ಇರುವ ನೀವು ಖುಷಿಯಾಗಿದ್ದೀರಾ?"
ಸದ್ದಿಲ್ಲದೇ ತೂರಿದ ಬುಲೆಟ್ನಂತಿತ್ತು ಅವನ ಪ್ರೆಶ್ನೆ.

"ನಾನು ಖುಷಿಯಾಗಿದ್ದೇನಾ?"
ಈ ಬಾರಿ ನನ್ನನ್ನು ನಾನೇ ಕೇಳಿಕೊಂಡೆ.

ನಾಳೆಗಳ ಬಗೆಗಿದ್ದ ವರ್ಷಗಳ ಹಿಂದಿನ ಅದೇ ತಳಮಳ, ಇಂದಲ್ಲ ನಾಳೆ ಹಳ್ಳಿಗೆ ಮರಳುವೆನೆಂಬ ಭರವಸೆಯೊಂದಿಗೇ ಆರಂಭವಾಗುವ ಪ್ರತಿದಿನದ ಹಗಲುಗಳು, ಕಾಡುವ ನಿನ್ನೆಯ ನೆನಪುಗಳು, ಎಷ್ಟೇ ಮಾಡಿದರೂ ಇಷ್ಟವಾಗದ ಕೆಲಸ, ಬಾಸ್ ಮೇಲಿನ ಕೋಪ, ಆಗಾಗ ಕಾಡುವ ನಾನು ತೀರಾ ಏಕಾಂಗಿಯೆಂಬ ನೋವು, ಇಲ್ಲದ್ದೇನನ್ನೋ ಪಡೆದುಕೊಳ್ಳಬೇಕೆಂಬ ಒದ್ದಾಟ... ಇಂದಿಗೂ ಇವೆಲ್ಲದರ ಜೊತೆಗೇ ಬದುಕಿದ್ದೇನೆ. ಒಂದುದಿನ ಎಲ್ಲದರಿಂದ ಮುಕ್ತಿಹೊಂದುವ ಕನಸು ಕಾಣುತ್ತಲೇ ಇವೆಲ್ಲವನ್ನೂ ಮೈಮೇಲೆಳೆದುಕೊಂಡು ಸಹಿಸುತ್ತಿದ್ದೇನೆ.

"ಏಕೋ ಗೊತ್ತಿಲ್ಲ ರಿಶಿ, ಈ ಬದುಕಿನ ಬಗ್ಗೆ ಅದೊಂದು ತೀರದ ಅಸಮಾಧಾನ ಹಾಗೇ ಉಳಿದುಬಿಟ್ಟಿದೆ. ನಾನು ಮಾಡುತ್ತಿರುವ ಕೆಲಸವೊಂದನ್ನು ಬಿಟ್ಟು ಉಳಿದುದೆಲ್ಲವೂ ನೆಮ್ಮದಿಯ ಉದ್ಯೋಗಗಳಂತೆ ಕಾಣುತ್ತವೆ. ಬಿಟ್ಟುಬಂದ ಪ್ರತಿಯೊಂದು ಜಾಗದಲ್ಲೂ ಖುಷಿಯಿತ್ತು, ಈಗ ಇರುವಲ್ಲಿ ಮಾತ್ರ ಇಲ್ಲ ಎನಿಸಿ ಒದ್ದಾಡುತ್ತೇನೆ. ನೀನು ನಂಬ್ತೀಯೋ ಇಲ್ವೋ, ಆಫೀಸಿನ ಹೊರಗೆ ನಿಂತಿರೋ ಸೆಕ್ಯುರಿಟಿ ಗಾರ್ಡ್'ನ ಕೆಲಸವೇ ಎಷ್ಟು ಚೆನ್ನಾಗಿದೆ ಅಂತ ಅದೆಷ್ಟೋ ಸಲ ಯೋಚಿಸಿದ್ದೇನೆ! ಇದೆಲ್ಲವನ್ನೂ ಬಿಟ್ಟು ಊರಿಗೆ ಹೋಗಿಬಿಡಬೇಕೆಂದು ಈ ಏಳು ವರ್ಷಗಳಲ್ಲಿ  ದಿನಕ್ಕೊಮ್ಮೆಯಾದರೂ ಯೋಚಿಸಿದ್ದೇನೆ. ಆದರೆ ಎಲ್ಲಿ ಈ ಸಮಾಜದೆದುರು, ವಿರೋಧಿಗಳೆದುರು, ಆಡಿಕೊಳ್ಳುವವರೆದುರು ಸೋತುಬಿಡುತ್ತೇನೋ ಎನ್ನುವ ಭಯ ನನ್ನನ್ನು ಕಟ್ಟಿಹಾಕಿದೆ."

ಕ್ಷಣಕಾಲ ಯೋಚಿಸುವನಂತೆ ಗಂಭೀರವಾದ ರಿಶಿ ದೀರ್ಘವಾಗೊಮ್ಮೆ ಉಸಿರೆಳೆದುಕೊಂಡು ಹೇಳಲಾರಂಭಿಸಿದ.

"ಗೆಲ್ಲೋದು ಹಾಗೂ ಸೋಲೋದು- ಇದರಲ್ಲಿ ಎರೆಡು ರೀತಿಯಿದೆ ಭಟ್ರೆ. ಒಂದು ನಮ್ಮೀ ಜನರು, ಸಮಾಜಗಳೆಂಬ ಕನ್ನಡಕಗಳಿಂದ ನೋಡಿ ನಿರ್ಧರಿಸುವುದು. ಇನ್ನೊಂದು ನಮ್ಮನಮ್ಮ ಸ್ವಂತ ಕಣ್ಣಲ್ಲೇ ನೋಡಿಕೊಳ್ಳುವುದು. ಅಂದು ಮಹಾನಗರದ ಆ ಒಂಟಿ ರೂಮಿನಿಂದೆದ್ದು ಕೆಎಸ್ಸಾರ್ಟಿಸಿ ಬಸ್ಸು ಹತ್ತಿ ಬಂದಿದ್ದ ನಾನು ಇಂದೇನಾದರೂ ಹುಂಡೈ ಕಾರಿನಲ್ಲಿ ಓಡಾಡುತ್ತಿದ್ದರೆ ಜಗತ್ತಿನ ದೃಷ್ಟಿಯಲ್ಲದು ಗೆಲುವು. ಆದರೆ ನಾನು ಹೀಗೆ, ಮತ್ತದೇ ಸರ್ಕಾರೀ ಬಸ್ಸಿನಲ್ಲಿ ಅಲೆಯುತ್ತಿರುವುದರಿಂದ ನನ್ನದು ಸೋಲು! ಪರರ ಅಳತೆಗೋಲಿಗೆ ಎಟಕುವುದು ಇಷ್ಟೇ. ಇನ್ನೂ ಆಳದಲ್ಲಿರುವ ನನ್ನ-ನಿಮ್ಮಂಥವರ ವಯಕ್ತಿಕ ತಳಮಳ, ಆಸೆ, ಕನಸು, ದುಃಖ, ದುಮ್ಮಾನಗಳೆಲ್ಲ ನಮ್ಮ ಹೊರತು ಮತ್ಯಾರಿಗೂ ಕಾಣುವುದಿಲ್ಲ. ಕಂಡರೂ ಸಮಾಜದ ದೃಷ್ಟಿಯಲ್ಲಿ ಅವೆಲ್ಲ ಎಲ್ಲರೂ ಅನುಭವಿಸುವ, ದಿನನಿತ್ಯದ ಸಾಮಾನ್ಯ ಜಂಜಾಟವಷ್ಟೇ. ಆದರೆ ಎರೆಡನೆಯದಿದೆಯಲ್ಲಾ ನಮ್ಮದೇ ಕಣ್ಣು, ಅದರಲ್ಲಿ ಇವೆಲ್ಲವೂ ಬಿಂಬಗಳಾಗಿ ಕದಲುತ್ತಿವೆ. ಕ್ಷಣಕ್ಷಣಕ್ಕೂ ನೆನಪಾಗಿ, ನೋವಾಗಿ, ಪ್ರೇಮವಾಗಿ, ತುಡಿತವಾಗಿ, ಹಂಬಲವಾಗಿ ತುಂಬಿ ಹರಿಯುತ್ತಿವೆ. ನಮ್ಮ ಬದುಕನ್ನು ನಾವು ನೋಡಿಕೊಳ್ಳಬೇಕಿರುವುದು ಆ ಕಣ್ಣಿನಿಂದಲೇ. ಆದರೆ ದುರಂತವೇನು ಗೊತ್ತಾ? ನಾವು ನಮ್ಮ ಕಣ್ಣಿಗೆ ಒಂದೋ ಆ ಸಮಾಜದ ದೃಷ್ಟಿಕೋನದ ಕನ್ನಡಕವನ್ನು ತೊಟ್ಟುಕೊಳ್ಳುತ್ತೇವೆ‌. ಇಲ್ಲ, ನಾವೇನೇ ಮಾಡಿದರೂ ಸರಿಯೆಂಬ ಮೊಂಡುತನದ ಪೊರೆಯನ್ನು ಬೆಳೆಸಿಕೊಳ್ಳುತ್ತೇವೆ. ಇವೆರೆಡರ ನಡುವಿನ ಸಮಚಿತ್ತವೆಂಬ ನಿಜವಾದ ನೇತ್ರಗಳಿಂದ ನಮ್ಮೀ ಬದುಕನ್ನು ನೋಡಿಕೊಳ್ಳುವುದೇ ಇಲ್ಲ!"

"ಆದರೆ ರಿಶಿ, ನಾವು ಬೇಡವೆನ್ನುತ್ತಿರುವ ಇದೇ ಯಾಂತ್ರಿಕ ಬದುಕಿನಲ್ಲಿ ಲಕ್ಷಾಂತರ ಜನ ಬದುಕುತ್ತಿರುವಾಗ ನಾವು ಮಾತ್ರ ಹೀಗೆ ಒಂದು ಕಡೆ ಹೋದಮೇಲೆ, ಇಲ್ಲಿಗಿಂತ ಅಲ್ಲೇ ಚೆನ್ನಾಗಿತ್ತು ಅಂದುಕೊಳ್ಳುವುದು, ಇಲ್ಲದಿರುವುದೇನನ್ನೋ ನೆನೆದು ಸುಮ್ಮನೆ ಕೊರಗುವುದು, ಎಲ್ಲ ಕಡೆಯೂ ಇರಬಹುದಾದ ಚಿಕ್ಕಪುಟ್ಟ ಸವಾಲುಗಳನ್ನೇ ದೊಡ್ಡ ಸಮಸ್ಯೆಗಳೆಂಬಂತೆ ಭ್ರಮಿಸಿ ಬಿಟ್ಟುಓಡುವುದು... ಇವೆಲ್ಲ ಮನಸ್ಸಿನ ದೌರ್ಬಲ್ಯ, ಹೊಣೆಗೇಡಿತನ, ದುಡುಕಿನ ನಿರ್ಧಾರ ಅಂತ ಅನಿಸ್ತಿಲ್ವಾ ನಿನಗೆ?"

"ಇಲ್ಲ ಭಟ್ರೇ... ನನ್ನ ಪ್ರಕಾರ ಬೆಂಗಳೂರು ಬದುಕನ್ನು ಇಷ್ಟ ಎಂದು ಅಪ್ಪಿಕೊಂಡವರಿಗಿಂತ ಅನಿವಾರ್ಯ ಎಂದು ಒಪ್ಪಿಕೊಂಡವರೇ ಜಾಸ್ತಿ. ನನ್ನ-ನಿಮ್ಮ ನಿಜವಾದ ಸಮಸ್ಯೆಯೇನು ಗೊತ್ತಾ? ನಮಗೆ ಸ್ವತಂತ್ರ ಬೇಕು. ಯಾರದೋ ಮೂಗಿನ ನೇರದ ಆದೇಶಗಳಿಗೆ ಕೈಕಾಲಾಡಿಸುವ ಹಂಗಿನ ಬದುಕಿನಿಂದ ಮುಕ್ತಿ ಬೇಕು. ನಮ್ಮದೇ ಆಸಕ್ತಿಗಳು, ಅಭಿರುಚಿಗಳು, ಕನಸುಗಳು.. ಇವುಗಳ ಜೊತೆ ಒಡನಾಡಲಿಕ್ಕೆ ಒಂದಿಷ್ಟು ಖಾಸಗೀ ಸಮಯಬೇಕು. ಮನಸ್ಸು ಹೇಳಿದ ತಾಣದಲ್ಲಿ ನಿಶ್ಚಿಂತರಾಗಿ ಅಲೆದಾಡುವ ಸ್ವಚ್ಛಂದತೆ ಬೇಕು. ಹಸಿರಿನ ತೋಟ, ಗದ್ದೆ ಬದಿಯ ಕಾಲುದಾರಿ, ಹೊಳೆಯ ನೀರಿನ ತಂಪು, ಹಿತ್ತಲ ಮಲ್ಲಿಗೆಯ ಪರಿಮಳ.. ಇವೆಲ್ಲವೂ ನಮಗೆ ಬೇಕು. ಇವೆಲ್ಲವನ್ನೂ ನಾವು ನಮಗೇ ತಿಳಿಯದಂತೆ ಮಿಸ್ ಮಾಡಿಕೊಳ್ಳುತ್ತಿರುತ್ತೇವೆ. ಆದ್ದರಿಂದಲೇ ಎಷ್ಟೇ ಕಾಲ ಉಸಿರಾಡಿಕೊಂಡಿದ್ದರೂ  ಪಟ್ಟಣದ ಗಾಳಿ ನಮ್ಮುಸಿರಿನಲ್ಲಿ ಬೆರೆಯುವುದೇ ಇಲ್ಲ. ಇದು ನಮ್ಮ ಅಂತರಾಳದ ಹಂಬಲವೇ ಹೊರತು ಹೊಣೆಗೇಡಿತನವೋ, ದುರ್ಬಲ ಮನಸ್ಥಿತಿಯೋ ಖಂಡಿತಾ ಅಲ್ಲ!"

"ನಿಜ. ಆದರೆ, ಹಂಬಲಿಸಿ ಮಣ್ಣಿಗೆ ಮರಳುವವನನ್ನು ಈ ಸಮಾಜ ಸ್ವಾಗತಿಸುತ್ತದಾ? ಚುಚ್ಚು ಮಾತುಗಳಿಂದ ನೋಯಿಸುವುದಿಲ್ವ?"
ಕೊನೆಯ ಸಂದಿಗ್ಧವನ್ನು ಕೇಳಿಬಿಟ್ಟೆ.

"ನಿಮ್ಮ ಮಾತು ನಿಜ.. ಅಂದು ಆ ವಿದೇಶೀ ಕಂಪನಿಯ ಪ್ರತಿಷ್ಠಿತ ಕೆಲಸ, ಏನೇ ಆದರೂ ತಿಂಗಳ ಕೊನೆಗೆ ಜೇಬು ತುಂಬುತ್ತಿದ್ದ ಸಂಬಳ, ಐಟಿ ಉದ್ಯೋಗಿಯೆಂಬ ಗೌರವದ ಲೇಬಲ್... ಇವನ್ನೆಲ್ಲ ಕಳಚಿಟ್ಟು ಬರಿಗಾಲಿನಲ್ಲಿ ಊರಿನ ಮಣ್ಣಿನ ಮೇಲಿಟ್ಟ ಆ ಹೆಜ್ಜೆ ನನಗಿನ್ನೂ ಚೆನ್ನಾಗಿ ನೆನಪಿದೆ... ಅದನ್ನು ಎಲ್ಲರೂ ಆಡಿಕೊಂಡರು. ಸೋತ ಹೆಜ್ಜೆ ಎಂದರು. ಬಿಟ್ಟೋಡಿಬಂದ ಬರಿಗಾಲು ಎಂದರು. ಆದರೆ ಯಾಕಾಗಿ ಬಿಟ್ಟುಬಂದೆ? ದಿಕ್ಕೆಟ್ಟುಬಂದ ಆ ಪಾದದಲ್ಲಿ ಅದೆಷ್ಟು ಬೊಬ್ಬೆಗಳಿದ್ದವು? ಅದನ್ನು ಮಾತ್ರ ಯಾರೂ ಕೇಳಲೇ ಇಲ್ಲ..."

ದೀರ್ಘ ಮೌನವೊಂದು ಇಬ್ಬರನ್ನೂ ಆವರಿಸಿತು. ದೂರ ಆಕಾಶದಲ್ಲಾಗಲೇ ಸೂರ್ಯ ತನ್ನ ಅವರೋಹಣ ಯಾತ್ರೆ ಆರಂಭಿಸಿದ್ದ. ಆಗಸದಲ್ಲಿ ಅಪರೂಪಕ್ಕೆ ಎದಿರಾದ ಹಳೆಯ ಗೆಳೆಯರಂತೆ ಜೊತೆ ನಿಂತಿದ್ದ ತುಂಡು ಮೋಡಗಳೆರೆಡು ದಿಗಂತದ ಬೇರೆ ಬೇರೆ ಅಂಚುಗಳತ್ತ ಹೊರಡಲು ಅಣಿಯಾಗುತ್ತಿದ್ದವು.

"ಬಿಡಿ ಭಟ್ರೇ.. ಈ ಗೊಂದಲಗಳೆಲ್ಲ ಜೀವನದಷ್ಟೇ ನಿರಂತರ. ಬನ್ನಿ, ನನ್ನ ಕೈತೋಟ ತೋರಿಸ್ತೀನಿ"

ಯೋಚನೆಗಳೊಳಗೆ ಮುಳುಗಿ ಹೋಗಿದ್ದ ನನ್ನನ್ನು ಕೆಳಗಿನ ಮನೆಯೆದುರಿನ ಪುಟ್ಟ ತೋಟಕ್ಕೆ ಕರೆದೊಯ್ದು. ಅಲ್ಲಿ ಸಾಲಾಗಿ ಡೇರೆ, ಗುಲಾಬಿ, ದಾಸವಾಳ, ಜಿನಿಯಾಗಳ ಜೊತೆ ಟೊಮೇಟೋ, ಬದನೇಕಾಯಿ, ಬೀನ್ಸ್ ಮುಂತಾದ ಗಿಡ-ಬಳ್ಳಿಗಳೆಲ್ಲ ಹೂ, ಹಣ್ಣು, ಕಾಯಿ ಧರಿಸಿನಿಂತಿದ್ದವು.

"ಇದು ನಮ್ಮ ಓನರ್ ಜಾಗ. ಪಾಪದ ಅಜ್ಜ. ಖಾಲಿ ಜಾಗದಲ್ಲಿ ನಿಂತು ಹೂದೋಟದ ಕನಸು ಕಾಣುತ್ತಿದ್ದರು. ನನಗೀಗ ಹಚ್ಚಿಕೊಳ್ಳೋಕೆ ಯಾವ ಜ್ಯೋತಿಯೂ ಇಲ್ಲ ನೋಡಿ, ಅದಕ್ಕೆ ಇವನ್ನು ಹಚ್ಚಿಕೊಂಡೆ!  ಈ ಗಿಡವಿದೆಯಲ್ಲ, ಇದು ಬಿಳಿ ಮತ್ತೆ ಕೆಂಪು ಗುಲಾಬಿಗಳೆರಡನ್ನೂ ಕಸಿ ಮಾಡಿದ್ದು. ಹೇಗೆ ಹೂಬರುತ್ತೇಂತ ನೋಡಬೇಕು. ಕಳೆದ ಸಲ ತುಂಬಾ ಡೇರೆಗಳು ಹುಟ್ಕೊಂಡಿದ್ವು, ಈ ಸಲ ಯಾಕೋ ಅಷ್ಟು ಇಲ್ಲ..." ರಿಶಿ ಹೇಳುತ್ತಲೇ ಇದ್ದ. 

ಯೋಚಿಸತೊಡಗಿದೆ: ಗಟ್ಟಿಯಾಗಿ ಎರೆಡು ಮಾತನಾಡಲೂ ಅಂಜುತ್ತಿದ್ದ. ಬಾಸ್ ಹೆಸರಿನಲ್ಲಿ ಫೋನ್ ರಿಂಗಾದಾಗೆಲ್ಲ ಬೆಚ್ಚಿಬೀಳುತ್ತಿದ್ದ. ತನ್ನಿಷ್ಟದ ಕೆಲಸಗಳನ್ನು ಮಾಡಲು ಸಮಯವೇ ಇಲ್ಲವೆಂದು ದೂರುತ್ತಿದ್ದ. ತಮಟೆಯ ಸದ್ದಿಗೆ ಕುಣಿಯಬೇಕೆನ್ನುತ್ತಿದ್ದ.  ತಿರಸ್ಕರಿಸಿಹೋದ ತನ್ನ ಹುಡುಗಿಯ ದಾರಿಯಲ್ಲಿ ಗಂಟೆಗಟ್ಟಲೆ ನಿಂತುಕಾಯುತ್ತಿದ್ದ. ಇಂದಲ್ಲ ನಾಳೆ ಅದ್ಯಾವುದೋ ಪವಾಡ ಜರುಗಿ ಅವಳು ತನ್ನನ್ನು ಒಪ್ಪಿಯೇ ಒಪ್ಪುತ್ತಾಳೆಂದು ಹಗಲುಗನಸು ಕಾಣುತ್ತಿದ್ದ. ಅವಳು ಮೆಚ್ಚುವಂತಹಾ ಲಕ್ಷಾಧಿಪತಿಯಾಗುತ್ತೇನೆಂದು ಕಂಪನಿಯಿಂದ ಕಂಪನಿಗೆ ಜಿಗಿದಿದ್ದ.

ಕೊನೆಗೊಂದು ದಿನ ಅದ್ಯಾವುದೋ ದಿವ್ಯ ನೆಮ್ಮದಿಯನ್ನರಸಿ ಈ ಎಲ್ಲಾ ಒದ್ದಾಟಗಳಿಗೂ ವಿದಾಯ ಹೇಳಿ ಎದ್ದು ನಡೆದಿದ್ದ...

ಅಸಮಾಧಾನದ ಅಪ್ಪ, ನೆನಪಾಗಿ ಉಳಿದುಹೋದ ಜ್ಯೋತಿ, ನಾಳೆ ಮತ್ತೆ ಸಿಕ್ಕೀತೆಂಬ ಖಾತ್ರಿಯಿಲ್ಲದ ಆದರೆ ಯಾವ ಗೋಡೆಗಳ ನಡುವಿನ ಬಂಧನಕ್ಕೂ ಒಳಪಡದ ಈ ಸ್ವಚ್ಛಂದ ಕಾಯಕ, ಆದಾಯ, ಪರಕೀಯತೆಗಳ ಹಂಗಿಲ್ಲದೆ ಯಾರದೋ ಜಾಗದಲ್ಲಿ ಇವನು ಅರಳಿಸಿಕೊಂಡಿರುವ ಈ ಹೂದೋಟ... 

ರಿಶಿ ಗೆದ್ದನಾ, ಸೋತನಾ? 

ಮತ್ತದೇ ಕಗ್ಗಂಟು ಬಿಗಿದುಕೊಳ್ಳುತ್ತಿದ್ದ ಹೊತ್ತಿಗೆ ನಮ್ಮೆದುರಿನ ಬೀದಿಯಲ್ಲಿ ಯಾವುದೋ ದೇವರ ಮೆರವಣಿಗೆಯೊಂದು ಸಾಗಿಬಂತು. ಅದರ ಎದುರಲ್ಲಿ ತಲೆಗೆ ಬಣ್ಣದ ಟೇಪು ಕಟ್ಟಿಕೊಂಡು ಕುಣಿಯುತ್ತಿದ್ದ ಯುವಕರ ಗುಂಪಿನ ನಡುವಿನಿಂದ ಇಬ್ಬರು ನಮ್ಮತ್ತ ನೋಡಿ ರಿಶಿಗೆ ಬಾ ಎಂಬಂತೆ ಕೈ ಬೀಸಿದರು. ರಿಶಿ ಪಕ್ಕದಲ್ಲಿದ್ದ ನನ್ನನ್ನು ತೋರಿಸಿ ಆಗುವುದಿಲ್ಲವೆಂಬಂತೆ ತಲೆಯಾಡಿಸಿದ. ಅವನ ಇಶಾರೆ ಕಂಡರೂ ಕಾಣದಂತೆ ಒಳಬಂದ ಅವರು ನೋಡನೋಡುತ್ತಿದ್ದಂತೆಯೇ ರಿಶಿಯ ಕೈಹಿಡಿದು ಮೆರವಣಿಗೆಯತ್ತ ಎಳೆದೊಯ್ದೇಬಿಟ್ಟರು.

ರಿಶಿ ಕುಣಿದ.. ಮೊದಲ ಬಾರಿಗೆ ಅಂಗಳಕ್ಕಿಳಿದ ಕರುವಿನಂತೆ.. ಬೋನು ಮುರಿದುಕೊಂಡು ಬಾನಿಗೇರಿದ ಸ್ವಚ್ಛಂದ ಹಕ್ಕಿಯಂತೆ.. ಏಳೇಳು ಜನ್ಮಗಳ ಕನಸೊಂದನ್ನು ನನಸಾಗಿಸಿಕೊಂಡ ಪ್ರೇಮಿಯಂತೆ.. ತನ್ನ ಬದುಕಿನ ಸಂಭ್ರಮವೆಲ್ಲ ತಮಟೆಯ ಸದ್ದಾಗಿ ಹೊಮ್ಮುತ್ತಿದೆಯೇನೋ ಎಂಬಂತೆ... ಬದುಕಿನ ಬೇಸರಗಳನ್ನೆಲ್ಲ ನೆಲದಾಳಕ್ಕೆ ಅದುಮಿಬಿಡುವವನಂತೆ... ರಿಶಿ ಕುಣಿದೇ ಕುಣಿದ.

ಸ್ವಚ್ಛಂದ ಆಗಸದಲ್ಲಿ ಹಾರುತ್ತಿದ್ದ ಹಕ್ಕಿಯೊಂದು ತನ್ನದೇ ಹಾಡು ಹಾಡಿಕೊಳ್ಳುತ್ತಿತ್ತು.

ನೋಡುತ್ತಾ ನಿಂತಿದ್ದ ನನ್ನ ಮನವೇಕೋ ತುಂಬಿಬಂತು. ರೂಮಿಗೆ ಮರಳಿ ಬ್ಯಾಗು ಏರಿಸಿಕೊಂಡು ಮೆಟ್ಟಿಲಿಳಿದೆ. ರಿಶಿ ನನ್ನನ್ನು ಬೀಳ್ಕೊಡಲು ಬಸ್ಸು ನಿಲ್ದಾಣದ ತನಕ ಬಂದ. 

"ಹೊರಟೇ ಬಿಟ್ರ ಭಟ್ರೆ? ಇತ್ತೀಚೆಗೇಕೋ ಗೊತ್ತಿಲ್ಲ, ಬಂದವರೆಲ್ಲ ಜೊತೆಗೇ ಇರಬೇಕು ಅನಿಸುತ್ತದೆ.. ಹಹ.. ಹೋದವರು ಹೋಗಿಯೇ ಬಿಡಬೇಡಿ. ಟಚ್ಚಲ್ಲಿರಿ..."

ನಗುವಿಗಿಂತ ಹೆಚ್ಚಿನದೇನೋ ಆಗಿದ್ದ ನಗು ನಕ್ಕು ಕೈಕುಲುಕಿದವನನ್ನು ಮೆಲ್ಲಗೆ ತಬ್ಬಿಕೊಂಡೆ. ಬಾಯ್ ಎಂದು ಕೈ ಬೀಸಿ ನಡೆದವನು ಈಗ ಮೆರವಣಿಗೆ ಮುಗಿದಿರಬಹುದಾದ ಬೀದಿಯ ಅದೇ ಒಂಟಿ ಕೋಣೆಯತ್ತ ನಡೆಯುತ್ತಾ, ನಿಲ್ದಾಣದೊಳಗಿನ ಜನಜಂಗುಳಿಯಲ್ಲಿ ಬೆರೆತುಹೋದ. 

('ನಿಮ್ಮೆಲ್ಲರ ಮಾನಸ'ಲ್ಲಿ ಪ್ರಕಟಿತ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...