ಬದುಕು ಕಥೆಯಾಗುವ ಪರಿಯ ನೋಡಿದಾಗ ಅಚ್ಚರಿಯಾಗುತ್ತದೆ. ಇಷ್ಟವಾಗುತ್ತದೋ ಇಲ್ಲವೋ, ಬದುಕೆಂಬ ಕಥೆ ಮುಂದೆ ಸಾಗಲೇಬೇಕು. ನಾವದರಲ್ಲಿ ಪಾತ್ರವಹಿಸಲೇಬೇಕು.
ಸಾಮಾನ್ಯ ಮನುಷ್ಯನೊಬ್ಬ ಬರೆದುಕೊಳ್ಳುವ ಆತ್ಮಕಥೆಯನ್ನು ಡೈರಿ ಎನ್ನಬಹುದೇನೋ? ಡೈರಿಯೆಂದರೆ ನಮ್ಮ ಅಂತರಂಗಕ್ಕೆ ನಾವೇ ಬರೆಯುವ ಓಲೆಯಂತಹದು. ಆ ಆ ಕ್ಷಣದ, ದಿನದ ಭಾವವನ್ನು ಅಂದಂದೇ ದಾಖಲಿಸಿ ಇನ್ನೆಂದೋ ಓದಬೇಕು. ನಾವು ಕಷ್ಟದ ಕ್ಷಣವನ್ನು, ನಮ್ಮ ದೌರ್ಬಲ್ಯಗಳನ್ನು ಬಹಳ ಬೇಗ ಮರೆತು ಬಿಡುತ್ತೇವೆ. ನೆನ್ನೆ ಅತ್ತ ಕ್ಷಣವನ್ನು ನೆನೆದು ಇಂದು ನಕ್ಕು ಬಿಡುತ್ತೇವೆ. ಆದರೆ ಆ ದಿನದ ಅಳು ಅಥವಾ ನಗು ಆ ಕ್ಷಣಕ್ಕೆ ನಮಗೊದಗಿ ಬಂದ ಕಟ್ಟಕಡೆಯ ಆಯ್ಕೆಯಾಗಿತ್ತಲ್ಲವೇ ಅನ್ನುವುದನ್ನು ಮರೆತುಬಿಡುತ್ತೇವೆ.
ಇದೂ ಒಂದು ರೀತಿಯ ಡೈರಿಯೇ..
*****************
ರಕ್ತ ಬಂತು. ಬೆಳಗಿನ ಆರೂಮೊವ್ವತ್ತರ ಹೊತ್ತಿಗೆ ನನ್ನನ್ನು ಐಸಿಯುನ ಪಕ್ಕದ ಕನ್ಸಲ್ಟಿಂಗ್ ಕೋಣೆಯೆದುರು ಬರಬೇಕೆಂದೂ, ಡಾಕ್ಟರು ಏನೋ ಮಾತನಾಡಬೇಕಿದೆಯೆಂದೂ ಹೇಳಿ ಕರೆಸಿದರು. ಅಲ್ಲಿ ನನಗಿಂತ ಮೊದಲೇ ಇನ್ನೊಬ್ಬ ರೋಗಿಯ ಕಡೆಯವರು ವೈದ್ಯರ ಕರೆಗಾಗಿ ಕಾಯುತ್ತಾ ಕುಳಿತಿದ್ದರು. ಅಪ್ಪನಂತೆಯೇ ಅವರ ಕಡೆಯವರ್ಯಾರೋ ಒಳಗಡೆ ಐಸಿಯುನಲ್ಲಿದ್ದರು. ಇಡೀ ಜೀವವನ್ನೇ ಕಣ್ಣಂಚಿಗೆ ತಂದುಕೊಂಡು ಡಾಕ್ಟರ ಕರೆಗಾಗಿ ಕಾಯುತ್ತಾ ಅಲ್ಲಿ ನಿಂತಿದ್ದ ಹೆಂಗಸನ್ನು ನೋಡಿದೊಡನೆಯೇ ನನಗೇಕೋ ಇವರು ಒಳಗಿರುವ ರೋಗಿಯ ತಾಯಿಯೇ ಅನ್ನಿಸಿಬಿಟ್ಟಿತು. ಅವರ ಕೆನ್ನೆಯ ಮೇಲೆ ಬಹಳ ದಿನಗಳಿಂದ ಹರಿದಂತೆ ಕಂಬನಿಯ ಆಳವಾದ ಗುರುತಿತ್ತು. ಅದನ್ನು ವರೆಸಿಕೊಳ್ಳುವುದನ್ನೂ ಮರೆತು ಕನ್ಸಲ್ಟಿಂಗ್ ಕೊಠಡಿಯ ಬಾಗಿಲಿನತ್ತ ನೋಡುತ್ತಾ ನಿಂತಿದ್ದ ಆಕೆಯನ್ನು ಒಳಗೆ ಕರೆಯಲಾಯಿತು. ಬಾಗಿಲು ಮುಚ್ಚಿಕೊಂಡ ಮೇಲೆ ಒಳಗಿನಿಂದ ಸ್ಪಷ್ಟವಾದ ದನಿಯಲ್ಲಿ ಆ ಮಾತು ತೇಲಿಬಂತು.
"ಸಾರಿ.. ವಿ ಟ್ರೈಡ್ ಅವರ್ ಲೆವೆಲ್ ಬೆಸ್ಟ್. ಆದರೆ ನಮ್ಮಿಂದ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ..."
ಆಗ ಕೇಳಿತು ಅಳು. ಜಗದ ನೂರು, ಸಾವಿರ ಭಾಷೆಗಳ ಲಕ್ಷ, ಕೋಟಿ ಪದಗಳ್ಯಾವುದೂ ವಿವರಿಸಲಾರದ ತಾಯಿ ಹೃದಯದ ಯಾತನೆಯ ಹೊರಗೆಡವಬಲ್ಲ ಏಕಮಾತ್ರ ಭಾಷೆಯಾದ- ಅಳು. ಇಂಥಹಾ ನೂರಾರು ದೃಶ್ಯಗಳನ್ನು, ಇದೇ ಡೈಲಾಗನ್ನು ಅದೆಷ್ಟೋ ಸಿನೆಮಾಗಳಲ್ಲಿ ನೋಡಿದ್ದೆ. ಆದರೆ ಈ ರೀತಿ ಸರದಿಯಲ್ಲಿ ನಿಂತು ಕೇಳುತ್ತಿರುವುದು ಇದೇ ಮೊದಲು. ಒಂದಷ್ಟು ಸಮಾಧಾನ, ಬಿಕ್ಕಳಿಕೆ, ಯಾಚನೆಗಳ ನಂತರ ಆಕೆ ತನ್ನ ಪತಿಯ ಹೆಗಲಿಗೊರಗಿದ ಸ್ಥಿತಿಯಲ್ಲಿ ಹೊರಬಂದರು. ಕೆಲ ದಿನಗಳ ಕೆಳಗೆ ಆಕ್ಸಿಡೆಂಟಿಗೊಳಗಾಗಿದ್ದ ಅವರ ಇಪ್ಪತ್ತೇಳರ ಮಗ ಮೆದುಳಿನಲ್ಲಾದ ಆಂತರಿಕ ರಕ್ತಸ್ರಾವದಿಂದ ಶಸ್ತ್ರಚಿಕಿತ್ಸೆಗೊಳಪಟ್ಟು, ಅದು ಫಲಕಾರಿಯಾಗದೇ ಇಹದ ಪಯಣ ಮುಗಿಸಿದ್ದ. ಅದರ ಬೆನ್ನಿಗೇ ತೆರೆದುಕೊಂಡ ಬಾಗಿಲಿನಿಂದ ನರ್ಸ್ ಚಹರೆಯೊಂದು ಇಣುಕುತ್ತಾ ನನಗೆ ಹೇಳಿತು-
ಚಪ್ಪಲಿ ಬಿಚ್ಚಿಟ್ಟು ಒಳಗೆ ಬನ್ನಿ. ನೆಕ್ಸ್ಟ್ ನೀವು.. ಮುಂದಿನ ಸರದಿ ನಿಮ್ಮದು!
ಜೀವ ಧಸಾಲ್ಲೆಂದಿತು. ಮುಂದಿನ ಸರದಿಯೆಂದರೆ? ವೈದ್ಯರೊಂದಿಗೆ ಮಾತನಾಡುವ ಸರದಿಯಾ ಅಥವಾ ಅಳುವ ಸರದಿಯಾ? ಜೀವ ಅಂಗೈಯಲ್ಲಿಟ್ಟುಕೊಂಡೇ ಒಳಗೆ ಹೋದೆ. ಈ ಬಾರಿ ನನ್ನನ್ನು ಎದುರುಗೊಂಡಿದ್ದು ಶಸ್ತ್ರಚಿಕಿತ್ಸಕರಾದ ಡಾಕ್ಟರ್ ಸಾತ್ವಿಕ್. ಇಷ್ಟು ಹೊತ್ತು ಅಡ್ಡಗೋಡೆಯ ಮೇಲಿದ್ದ ದೀಪವನ್ನವರು ಮತ್ತಷ್ಟು ಆಚೆ ಬದಿಗೇ ತಳ್ಳಿದರು. ಆಗಬೇಕಿರುವ ಶಸ್ತ್ರಚಿಕಿತ್ಸೆಯನ್ನೂ, ಅದರ ಗಂಭೀರತೆಯನ್ನೂ ವಿವರಿಸಿದ ಅವರು ಉಳಿವಿನ ಸಾಧ್ಯತೆಯನ್ನು 30 ರಿಂದ 20% ಗೆ ಇಳಿಸಿದರು. ಎಲ್ಲದಕ್ಕೂ ಹೂಂಗುಟ್ಟಿ, ಅವರು ಮುಂಗಡವಾಗಿ ಕಟ್ಟಿರೆಂದು ಹೇಳಿದ ಆಪರೇಶನ್ ನ 70 ಪ್ರತಿಶತ ಭಾಗವನ್ನು ಐವತ್ತಕ್ಕಿಳಿಸುವಂತೆ ವಿನಂತಿಸಿಕೊಂಡು, ಪೇಮೆಂಟ್ ಮಾಡಿ ಐಸಿಯುನ ಹೊರ ಕಾರಿಡಾರ್ ಗೆ ಮರಳಿದೆ. ಅದೇಕೋ ಆಪರೇಶನ್ ಗೆ ಮುನ್ನ ಅಪ್ಪನನ್ನೊಮ್ಮೆ ನೋಡಬೇಕೆಂದು ತುಂಬಾ ಅನ್ನಿಸತೊಡಗಿತು. ಆಗಾಗ ಐಸಿಯು ಬಾಗಿಲು ತೆರೆದು ಹೊರಗಿಣುಕುತ್ತಿದ್ದ ನರ್ಸೊಬ್ಬರ ಬಳಿ ಕೇಳಿಕೊಂಡಾಗ ಅವರು ಆಪರೇಶನ್ ಥಿಯೇಟರ್ ಗೆ ಸಾಗಿಸುವಾಗ ನೋಡಬಹುದೆಂದೂ, ಇಲ್ಲೇ ಕಾಯುತ್ತಾ ಕೂತಿರೆಂದೂ ಹೇಳಿದರು.
'ಮುಂಗಡ ಕಟ್ಟಿ ಬಂದೆ' ಎನ್ನುವುದು ತೀರಾ ಸರಳ ಮಾತು. ಆದರೆ ರಾತ್ರೋ ರಾತ್ರೆ ಉದ್ಭವವಾಗಿಬಿಡುವ, ನಮ್ಮ ಆ ಕ್ಷಣದ ಸಾಮರ್ಥ್ಯವನ್ನು ಮೀರಿದ ಖರ್ಚನ್ನು ಹೊಂದಿಸುವುದು ಮೇಲೆ ಬರೆದಷ್ಟು ಸುಲಭವಲ್ಲ. ಮಧ್ಯಮ ವರ್ಗದ ವ್ಯಕ್ತಿಯೊಬ್ಬ ತನ್ನ ಜೀವಮಾನದಲ್ಲಿ ಎರೆಡರಿಂದ ಮೂರು ದೊಡ್ಡ ಖರ್ಚುಗಳನ್ನು ಸಂಭಾಳಿಸಿ, ಸುಧಾರಿಸಿಕೊಳ್ಳಬಲ್ಲನೆಂಬುದು ನನ್ನ ನಂಬಿಕೆ. ಅವುಗಳ ಪೈಕಿ ಮೊದಲನೆಯದು ಸ್ವಂತದ್ದೊಂದು ಮನೆ ಕಟ್ಟುವುದು. ಎರೆಡನೆಯದು ಮದುವೆಯಾಗುವುದು. ಮೂರನೆಯದು ತಂದೆ, ತಾಯಿ, ಹೆಂಡತಿ ಅಥವಾ ಮಕ್ಕಳಿಗೆ ಅಚಾನಕ್ಕಾಗಿ ಬಂದೊದಗುವ ದೊಡ್ಡ ಪ್ರಮಾಣದ ಅನಾರೋಗ್ಯವನ್ನು ನಿಭಾಯಿಸುವುದು. ಇವುಗಳ ಪೈಕಿ ಮೊದಲನೆಯದಿನ್ನೂ ಜಾರಿಯಲ್ಲಿದ್ದಾಗಲೇ ಮೂರನೆಯದು ಬಂದಿದ್ದೇ ನಮ್ಮೀ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಿತ್ತು. ಈ ಹೊಯ್ದಾಟ ಹಾಗೂ ಅಂಥಹಾ ಸ್ಥಿತಿಯಲ್ಲಿ ನೆರವಿಗೆ ಬಂದವರ, ಬರುತ್ತಿರುವವರ ಕುರಿತಾಗಿಯೇ ಒಂದು ಅಧ್ಯಾಯವನ್ನೇ ಬರೆಯಬಹುದು. ಬರೆಯುತ್ತೇನೆ ಕೂಡಾ.
ಕಾಯುತ್ತಾ ಕುಳಿತಿದ್ದ ನನ್ನನ್ನು ಎಂಟೂ ಮುಕ್ಕಾಲದ ಹೊತ್ತಿಗೆ ಆಪರೇಶನ್ ಥಿಯೇಟರ್ ನ ಹೊರಕೋಣೆಗೆ ಕರೆದು 'ಅಪ್ಪನಿಗೇನೇನೇ ಆದರೂ ಅದಕ್ಕೆ ಆಸ್ಪತ್ರೆ ಅಥವಾ ವೈದ್ಯರು ಹೊಣೆಯಲ್ಲ' ಎಂಬ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಯಿತು. ಬರೆದು ಸಹಿಹಾಕುವಾಗಲೇ ಆಚೆ ಬಾಗಿಲ ಬಳಿ ಸ್ಟ್ರೆಚ್ಚರೊಂದರ ನೆರಳು ಕಂಡಂತಾಗಿ ಹೊರಗೋಡಿದೆ. ಇನ್ನೇನು ಮುಖ್ಯ ಆಪರೇಶನ್ ಕೊಠಡಿಗೆ ನುಗ್ಗಲಿದ್ದ ಆ ಸ್ಟ್ರೆಚ್ಚರ್ ನ ಮೇಲೆ ಎಡ ತಲೆಯನ್ನು ನೀವಿಕೊಳ್ಳುತ್ತಾ ಮಲಗಿದ್ದ..
ಅಪ್ಪ!
ಆಪರೇಶನ್ ಗೆ ಮುನ್ನ ನೋಡಿದ ಅಪ್ಪನ ಕೊನೆಯ ಚಿತ್ರವದು.
'ಅಪ್ಪನಿಗೆ ಏನು ಬೇಕಾದರೂ ಆಗಬಹುದು' ಎಂಬ, ನಾನು ಈಗಷ್ಟೇ ಬರೆದು ಸಹಿಹಾಕಿದ್ದ ಡಿಕ್ಲೇರೇಶನ್ ಅದೇಕೋ ಥಟ್ಟನೆ ನೆನಪಾಗಿ ಜೀವ ಝಲ್ಲೆಂದಿತು. ತಳ್ಳಿಕೊಂಡು ಹೋದ ಸ್ಟ್ರೆಚರ್ ನ ಮೇಲೆ ಸಾಗುತ್ತಾ ಸಾಗುತ್ತಾ ಅಪ್ಪನ ಚಿತ್ರ ಕಣ್ಣಂಚಿನಿಂದ ಮರೆಯಾಯಿತು.
**********
ಬೆಳಗ್ಗೆ ಒಂಭತ್ತರ ಸುಮಾರಿಗೆ ಆರಂಭವಾದ ಆಪರೇಶನ್ ಮಧ್ಯಾಹ್ನದ ಹನ್ನೆರಡರ ಸುಮಾರಿಗೆ ಮುಕ್ತಾಯವಾಯಿತು. ಆ ಹೊತ್ತಿಗೆ ಸಮೀಪದ ಅತ್ತೆಯ ಮನೆಯಲ್ಲಿದ್ದ ನನಗೆ ಆಪರೇಶನ್ ಸಕ್ಸಸ್ ಆಗಿದೆ ಹಾಗೂ ತಲೆಯೊಳಗೆ ರಕ್ತಸ್ರಾವ ನಿಂತಿದೆಯೆಂಬ ಸುದ್ದಿ ಬಂತು.
'ಆಪರೇಶನ್ ಸಕ್ಸಸ್ ಆಗಿದೆ' ಎನ್ನುವುದು ನಾವು ಕೇಳಿದ ಅತ್ಯಂತ ಕ್ಷಣಿಕವಾದ ಸಿಹಿಸುದ್ದಿಯಾಗಿತ್ತು. ಅದೇ ವಾಕ್ಯದ ಮುಂದೆ 'ಕಾದು ನೋಡಬೇಕು, ಏನು ಬೇಕಾದರೂ ಆಗಬಹುದು' ಎಂಬ ಅಡ್ಡ ಗೋಡೆಯ ಮೇಲಿನ ದೀಪದಂಥಹಾ ಮಾತನ್ನಾಡಿದ ಡಾಕ್ಟರು 'ಹಿಂದೊಮ್ಮೆ ಇಂಥಾದ್ದೇ ಆಪರೇಶನ್ ಆಗಿ ಚೇತರಿಸಿಕೊಳ್ಳುತ್ತಿದ್ದ ರೋಗಿಯೊಬ್ಬನನ್ನು ಮಾತನಾಡಿಸಿಕೊಂಡು ವಾರ್ಡಿನಿಂದ ಹೋಗುತ್ತಿದ್ದೆ. ಇದ್ದಕ್ಕಿದ್ದಂತೆ ಅವನ ಪರಿಸ್ಥಿತಿ ಗಂಭೀರವಾಗಿ ಕೆಲವೇ ನಿಮಿಷದಲ್ಲವನು ತೀರಿಕೊಂಡು ಬಿಟ್ಟ. ಕೊನೆಗೆ ನೋಡಿದರೆ ಅವನಿಗೆ ಹೃದಯಸ್ತಂಭನವಾಗಿತ್ತು' ಎಂದು ಭಯದ ಬಾಂಬೊಂದನ್ನು ಹಚ್ಚಿ ಮನದೊಳಕ್ಕೆಸೆದುಬಿಟ್ಟರು. ಅಂದರೆ ಈ ಆಪರೇಶನ್ ಸಕ್ಸಸ್ ಆದಮೇಲಾದರೂ ಜೀವಕ್ಕೆ ಗ್ಯಾರಂಟಿಯಿಲ್ಲ ಹಾಗೂ ಅದಕ್ಕೆ ನಾವು ಜವಾಬ್ದಾರರಲ್ಲ ಎಂಬ ಎಂದೂ ಆರದ ಆತಂಕವೊಂದನ್ನು ಉದ್ದೇಶಪೂರ್ವಕವಾಗಿಯೇ ಅವರು ಬಿತ್ತಿದ್ದರು.
ಆಪರೇಶನ್ ಮುಗಿಸಿದ ಅಪ್ಪನನ್ನು ಐಸಿಯುನಲ್ಲಿಡಲಾಯಿತು. ಒಂದಿಡೀ ದಿನ ಕಾದ ನಂತರ ಆದರ ಬಾಗಿಲುಗಳು ಅಪ್ಪನ ದರ್ಶನಕ್ಕಾಗಿ ತೆರೆದುಕೊಂಡವು. ನಡುಗುತ್ತಿದ್ದ ಹೃದಯವ ಸಂಭಾಳಿಸುತ್ತಲೇ ಒಳಗಡಿಯಿಟ್ಟೆ. ಅತ್ಯಂತ ಭಯಾನಕವಾಗಿತ್ತು ಮೊದಲ ಬಾರಿಗೆ ನೋಡಿದ ಐಸಿಯುನ ದೃಶ್ಯ. ತೆರೆದ ಬಾಗಿಲಿನ ಎದುರೇ ಇದ್ದ ಮಂಚದ ಮೇಲೆ ರೋಗಿಯೊಬ್ಬ ಮುಖ ಊದಿ, ಕಣ್ಣುಗಳು ಹೊರಬಂದಂತಿದ್ದ ಸ್ಥಿತಿಯಲ್ಲಿ ಕನವರಿಸುತ್ತಿದ್ದ. ಪಕ್ಕದಲ್ಲಿ ತಲೆ ಕ್ಷೌರ ಮಾಡಿದ, ಹಣ್ಣೋ ಗಂಡೋ ಗೊತ್ತಾಗದ ಜೀವವೊಂದು ಬಾಯಿ ತೆರೆದುಕೊಂಡು ನಿದ್ರೆಯೋ, ಅಮಲೋ ಗೊತ್ತಾಗದ ಅವಸ್ಥೆಯಲ್ಲಿ ಮಲಗಿತ್ತು. ಬೆನ್ನ ಹಿಂದಿನ ಮಂಚದ ಮೇಲೆ ಎಪ್ಪತ್ತು ದಾಟಿರಬಹುದಾದ ದೈತ್ಯದೇಹದ ವೃದ್ಧರೊಬ್ಬರು ದೊಡ್ಡದನಿಯಲ್ಲಿ ತಮ್ಮಷ್ಟಕ್ಕೆ ತಾವೇ ಏನೇನೋ ಬಡಬಡಿಸುತ್ತಾ, ಯಾರನ್ನೋ ಬೈಯುತ್ತಾ ಒಬ್ಬರೇ ಮಲಗಿದ್ದರು. ಅವರ ಕೈಕಾಲುಗಳನ್ನು ಮಂಚಕ್ಕೆ ಕಟ್ಟಲಾಗಿತ್ತು. ಎಲ್ಲೆಲ್ಲಿ ನೋಡಿದರೂ ರಕ್ತ ತುಂಬಿದ ಬಾಟಲಿಗಳು, ಇಂಜಕ್ಷನ್ ಸೂಜಿಗಳು, ತಟತಟನೆ ತೊಟ್ಟಿಕ್ಕುವ ನೆತ್ತರು... ಒಂದೊಂದು ಮಂಚವನ್ನು ದಾಟುವಾಗಲೂ ಹೃದಯ ಬಡಿತ ಜೋರಾಗುತ್ತಿತ್ತು. ಸ್ವಲ್ಪ ನಡೆದವನು ನಾಲ್ಕನೇ ಮಂಚದೆದುರು ಗಕ್ಕನೆ ನಿಂತುಬಿಟ್ಟೆ. ಅಲ್ಲಿ ಮಲಗಿದ್ದ..
ಬೋಳಿಸಿದ ತಲೆಯ ನಟ್ಟನಡುವೆ ಕಂದು ಬಣ್ಣದ ಬ್ಯಾಂಡೇಜು ಸುತ್ತಿಸಿಕೊಂಡು, ಮೂಗು, ಬಾಯಿ, ಎದೆಗೆಲ್ಲಾ ಕೊಳವೆಗಳ ಸಿಕ್ಕಿಸಿಕೊಂಡು, ಕತ್ತನ್ನು ಒಂದು ಕಡೆಗೆ ವಾಲಿಸಿಕೊಂಡು, ಇಷ್ಟು ವರ್ಷಗಳ ಬದುಕಿನಲ್ಲಿ ನಾನು ಹಿಂದೆಂದೂ ನೋಡದ ಭೀಕರ ವೇಷ ತೊಟ್ಟುಕೊಂಡು..
ಅಪ್ಪ! ನನ್ನ ಅಪ್ಪ!
ಉಸಿರಾಟದ ಹೊರತಾಗಿ ಮತ್ಯಾವ ಚಲನೆಯಿಲ್ಲದ ಸ್ಥಿತಿಯಲ್ಲಿ ಮಲಗಿದ್ದ. ಬಾಯಿ ಯಾವುದೋ ಮಾತನ್ನಾಡುತ್ತಾ ಅರ್ಧಕ್ಕೇ ಸ್ತಬ್ಧವಾಗಿರುವಂತೆ ಓರೆಯಾಗಿ ತೆರೆದುಕೊಂಡಿತ್ತು. ರೆಪ್ಪೆಗೆ ಏನನ್ನೋ ಕಟ್ಟಿ ಎಳೆದಿಟ್ಟಿರುವಂತೆ ಕಣ್ಣು ಅರೆಬರೆ ತೆರೆದಿತ್ತು. ಯಾತನೆಯೆಂಬುದು ಮುಖದ ಇಂಚಿಂಚಿನಲ್ಲೂ ಹೆಪ್ಪುಗಟ್ಟಿ ನಿಂತಿತ್ತು.
ಹುಲ್ಲು ಕೊಯ್ಯುತ್ತಾ ಕೈಗೆ ಗಾಯವಾಗಿ ಒಂದೇ ಒಂದು ಬ್ಯಾಂಡೇಜು ಸುತ್ತಿದರೂ ಸಹಿಸಿಕೊಳ್ಳದೆ ಕಿತ್ತೆಸೆಯುತ್ತಿದ್ದವನು, ಒಂದು ಜ್ವರದ ಮಾತ್ರೆ ನುಂಗೆಂದರೂ ಸಿಟ್ಟು ಮಾಡುತ್ತಿದ್ದವನು.. ಈಗ ಇಷ್ಟೆಲ್ಲಾ ಬ್ಯಾಂಡೇಜುಗಳ ಸುತ್ತಿಸಿಕೊಂಡು, ಮಾತ್ರೆ-ಇಂಜಕ್ಷನ್ ಗಳ ಸಹಿಸಿಕೊಂಡು ಹೇಗಿದ್ದೀಯ ಅಪ್ಪಾ? ನೋವಾಗುತ್ತಿದೆಯಾ ತುಂಬಾ? ನನ್ನ ಕೈಯಲ್ಲಿ ಸಣ್ಣ ಅಲರ್ಜಿಯ ಕಜ್ಜಿಯ ಕಂಡೇ ಸಹಿಸದವ ನೀನು. ಈಗ ನೀನೇ ಇಷ್ಟೆಲ್ಲಾ ಗಾಯ ಮಾಡಿಕೊಂಡು ಮಲಗಿದ್ದೀಯಲ್ಲಾ, ನಾನು ಹೇಗೆ ನೋಡಲಿ?
ಕಣ್ಣು ತೆರೆಯಲು ಪ್ರಯತ್ನಿಸುತ್ತಿದ್ದಾರೆ, ಎಡದ ಕೈ-ಕಾಲು ಆಡಿಸುತ್ತಾರೆ, ಕತ್ತು ಕೊಂಚ ಹೊರಳಿಸುತ್ತಾರೆ.. ಹೀಗೆ ಐಸಿಯುನ ದಿನಕ್ಕೆರೆಡು ಬಾರಿ ಮಾತ್ರ ತೆರೆದುಕೊಳ್ಳುವ ಬಾಗಿಲುಗಳ ಹಿಂದೆ ಮಲಗಿದ್ದ, ದಿನದಲ್ಲಿ ಐದು ನಿಮಿಷಕ್ಕಷ್ಟೇ ಕಾಣ ಸಿಗುತ್ತಿದ್ದ ಅಪ್ಪನ ಚಲನವಲನಗಳು ಡಾಕ್ಟರ್ ಹಾಗೂ ನರ್ಸುಗಳ ಬಾಯಿಂದ ಕೇಳಿದ ಸುದ್ದಿಯಾಗಿಯಷ್ಟೇ ನಮ್ಮನ್ನು ತಲುಪುತ್ತಿದ್ದವು.
ನಾವು ನೋಡುವಾಗ ಮಾತ್ರ ಅಪ್ಪ ಉಸಿರಾಟವೊಂದನ್ನು ಕಲಿತ ವಿಗ್ರಹದಂತೆ ಮಲಗಿಕೊಂಡೇ ಇರುತ್ತಿದ್ದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ