ಆ ನವಿರು ನಾದ ನೇರ ತನ್ನ ಭವಿತವ್ಯದ ಪುಟಗಳಿಂದಲೇ ತೇಲಿ ಬರುತ್ತಿರುವಂತೆ ವಿಶಿಷ್ಠ ಭಾವೋನ್ಮಾದದಲ್ಲವಳು ತಬಲ ವಾದನದಲ್ಲಿ ತಲ್ಲೀನಳಾಗಿದ್ದಳು.
"ಗಂಡಿನ ಕಡೆಯವರಿಗೆ ನೀನು ಒಪ್ಪಿಗೆಯಾಗಿದ್ದೀಯಂತೆ!"
ಹಾಗೆನ್ನುತ್ತಾ ಅಮ್ಮ ಕೋಣೆಯ ಹೊಸ್ತಿಲಿನಲ್ಲಿ ಕಾಣಿಸಿಕೊಂಡಳು.
ತಬಲದ ಮೇಲಿನ ಕೈ ಮೆಲ್ಲನೆ ಸ್ತಬ್ಧವಾಯಿತು.
"ಇನ್ನಾದರೂ ಆ ಹಾಳಾದ್ದನ್ನು ಬಡಿಯೋದನ್ನ ನಿಲ್ಲಿಸಿ ಅಡುಗೆ ಮನೆಗೆ ಹೋಗಲಿಕ್ಕೆ ಹೇಳು ಅವಳಿಗೆ. ಅವರದು ಸಂಪ್ರದಾಯಸ್ಥ ಕುಟುಂಬ. ಕಟ್ಟುಕಟ್ಟಳೆ ಜಾಸ್ತಿ. ಅವರು ಒಪ್ಪಿರೋದು ಇವಳನ್ನ ಮಾತ್ರ. ಇವಳ ಈ ಹುಚ್ಚುಗಳನ್ನಲ್ಲ"
ಅಪ್ಪ ಜಗುಲಿಯಿಂದಲೇ ಭುಸುಗುಟ್ಟಿದ, ಚಿಕ್ಕವಳಿದ್ದಾಗ ಏನನ್ನಾದರೂ ಕುತೂಹಲಕ್ಕೆಂದು ಮುಟ್ಟಲು ಹೋದಾಗ ಕಿರುಚುತ್ತಿದ್ದನಲ್ಲಾ, ಥೇಟ್ ಹಾಗೇ.
"ನಾನು ಮಾತ್ರ ಬೇಕು, ನನ್ನ ಭಾವನೆಗಳು ಬೇಡ ಎನ್ನುವವರನ್ನು ನಾನೇಕೆ ಒಪ್ಪಬೇಕು?"
ಹಠದಿಂದೆಂಬಂತೆ ಕೇಳಿದರೂ ಅದು ಸರಿಯಾದ ಪ್ರೆಶ್ನೆಯೇ ಅನ್ನಿಸಿತವಳಿಗೆ.
"ಹೀಗೆ ಮೊಂಡು ಮಾಡಿದ್ದಕ್ಕೇ ವಯಸ್ಸು ಮೊವ್ವತ್ತಾದರೂ ಮದುವೆಯಾಗದೇ ಕೂತಿರೋದು. ನಿನ್ನ ಅಕ್ಕಂದಿರಿಬ್ಬರೂ ತೋರಿಸಿದವರನ್ನ ಮದುವೆಯಾಗಿಲ್ವಾ? ಅವರೀಗ ಬದುಕಿಕೊಂಡಿಲ್ವಾ?"
"ಬರಿದೆ ಉಸಿರಾಡಿಕೊಂಡಿದ್ದರೆ ಅದನ್ನು ಬದುಕು ಎನ್ನಲಾಗುವುದಿಲ್ಲ"
ಅಷ್ಟಂದವಳು ಅಪ್ಪನ ಮುಂದಿನ ಮಾತು ತನ್ನನ್ನಿರಿಯುವ ಮುನ್ನವೇ ಹೊರನಡೆದಳು.
"ಏನಮ್ಮಾ, ಮೊನ್ನೆ ಗಂಡು ಬಂದಿದ್ದನಲ್ಲಾ, ಏನಾಯ್ತದು?"
ಕಸ ಎಸೆಯಲು ಹೊರ ಬಂದಿದ್ದ ಸೀತಕ್ಕ ಕೇಳಿದರು.
"ಗಂಡಿಗೆ ಕೊಂಚ ವಯಸ್ಸಾದಂತಿದೆ. ಕಟ್ಟುನಿಟ್ಟಿನ ಕುಟುಂಬವಂತೆ. ನೀನೇ ಸ್ವಲ್ಪ ಹೊಂದಿಕೊಳ್ಳಬೇಕು. ಇದನ್ನಾದರೂ ಒಪ್ಪು. ಇನ್ನು ಮುಂದೆ ಇಂಥಾದ್ದೂ ಸಿಗೋದಿಲ್ಲ ಅಷ್ಟೇ"
ಕಸದಷ್ಟೇ ಸುಲಭದಲ್ಲಿ ಕಿವಿಮಾತನ್ನೂ ಎಸೆದು ಹೊರಟುಹೋದರು ಸೀತಕ್ಕ.
ಯಾಕೆ ತನಗೆ ಸಿಕ್ಕಿದ್ದನ್ನೊಪ್ಪುವಂಥಹಾ ಅನಿವಾರ್ಯ ಸೃಷ್ಟಿಯಾಯಿತು?
"ಅದನ್ನು ಸೃಷ್ಟಿಸಿದವನೇ ನಿನ್ನಪ್ಪ. ಮೊದಲೇ ಗಂಡು ನೋಡಬಹುದಿತ್ತು. ಆದರೆ ದುಡಿಯುತ್ತಿರುವವಳಿಗೆ ಮದುವೆ ಮಾಡಿದರೆ ತಾನು ಕೆಲಸಕ್ಕೆ ಹೋಗಬೇಕಾಗುತ್ತದೆಂದು ಸುಮ್ಮನಿದ್ದ. ಈಗ ಮಗ ದುಡಿಯಲಾರಂಭಿಸಿರುವಾಗ ಇದ್ದಕ್ಕಿದಂತೆಯೇ ನೀನು ಆದಷ್ಟು ಬೇಗ ಕಳೆದುಕೊಳ್ಳಬೇಕಾದ ಹೊರೆಯಂತೆ ಕಾಣುತ್ತಿದ್ದೀಯ"
ಹಾಗೆಂದ ಅಕ್ಕರೆಯ ಚಿಕ್ಕಪ್ಪನ ಮಾತು ನಿಜವೇ ಆಗಿತ್ತು. ಮೂರನೇ ಹೆಣ್ಣುಮಗಳಾದ ತಾನು ಹುಟ್ಟಿದ ದಿನವೇ ಅಪ್ಪ ಕುಪಿತನಾಗಿ ತಂಗಿಯ ಮನೆಗೆ ಹೋಗಿ ಕುಳಿತಿದ್ದನಂತೆ. ಆಮೇಲಾದರೂ ಮಕ್ಕಳ ಪೈಕಿ ಯಾರೇ ತಂಟೆ ಮಾಡಿದರೂ ಅವನ ಬಾರುಕೋಲು ಎರಗುತ್ತಿದ್ದುದು ತನ್ನ ಮೇಲೇ. ತಾನು ದುಡಿದು ಮನೆಗೊಂದಿಷ್ಟು ಕೊಡಲಾರಂಭಿಸಿದ ಮೇಲಾದರೂ ಅದು ಬದಲಾಗಿರಲಿಲ್ಲ.
ಯೋಚಿಸುತ್ತಾ ನಡೆಯುತ್ತಿದ್ದವಳು ಪಕ್ಕದ ರಂಗಮಂದಿರದಲ್ಲಿನ ಸಂಗೀತಲಹರಿ ಕೇಳಿ ಗಕ್ಕನೆ ನಿಂತಳು. ಹಿನ್ನಲೆಯಲ್ಲಿ ಕೇಳಿಬರುತ್ತಿರುವ ತಬಲದ ತಾಳವನ್ನು ಗುರುತಿಸಲು ಪ್ರಯತ್ನಿಸಿದಳು.
"ಸಂಗೀತಲಹರಿಯಲ್ಲಿ ಬಾರಿಸುವಷ್ಟು ತಬಲ ಕಲಿತರೆ ಸಾಕು ನಾನು"
ಅಪ್ಪನ ಭಾರೀ ವಿರೋಧದ ನಡುವೆಯೂ ಚಿಕ್ಕಪ್ಪನ ಬೆಂಬಲದೊಂದಿಗೆ ಅಂದು ತಬಲದ ತರಗತಿಗೆ ಹೋಗಿ ನಿಂತವಳು ಗುರುಗಳೆದುರು ಮುಗ್ಧವಾಗಿ ನುಡಿದಿದ್ದಳು.
"ನಿನಗಿರುವ ಆಸಕ್ತಿಗೆ ಬರೀ ಭಜನೆಗೆ ಮಾತ್ರವಲ್ಲ, ಊರಿನ ವಾರ್ಷಿಕೋತ್ಸವದಲ್ಲೇ ತಬಲ ಬಾರಿಸುತ್ತೀಯ"
ಗುರುಗಳು ಮೆಚ್ಚುಗೆಯ ಮಾತಂದಾಗ ಹಿಂದಲೆಯನ್ನು ಪ್ರೀತಿಯಿಂದ ಸವರಿದ್ದ ಚಿಕ್ಕಪ್ಪ. ಇಡೀ ಕುಟುಂಬದಲ್ಲಿ ತನ್ನನ್ನು ಹೆಣ್ಣುಮಗಳಾಗಿ ಅಲ್ಲದೇ ಕೇವಲ ಮಗುವಾಗಿ ನೋಡುವ ಏಕೈಕ ಬಂಧು ಆತ. ಅದೇಕೋ ಅವನೊಂದಿಗೆ ಮಾತನಾಡಬೇಕೆನ್ನಿಸಿ ಫೋನು ಆಚೆ ತೆಗೆಯಬೇಕೆನ್ನುವಷ್ಟರಲ್ಲಿ ಅದು ತಾನಾಗಿಯೇ ರಿಂಗಣಿಸತೊಡಗಿತು. ನೋಡಿದರೆ ಸ್ಕ್ರೀನಿನಲ್ಲಿ ಚಿಕ್ಕನದೇ ಹೆಸರು!
"ನೋಡು ಚಿಕ್ಕಾ, ಅಪ್ಪ ಹೇಗೆ ಮಾತಾಡ್ತಾನೆ ಅಂತ. ನನ್ನ ಭಾವನೆಗಳಿಗೆ, ಹವ್ಯಾಸಗಳಿಗೆ ಬೆಲೆ ಕೊಡದ ಯಾರಿಗೋ ನನ್ನನ್ನ ಮದುವೆಮಾಡಿಕೊಡ್ತೀನಿ ಅಂತಿದ್ದಾನೆ"
ನೊಂದ ಮಗುವೊಂದು ಅಪ್ಪನ ಬಳಿ ಅಹವಾಲು ಹೇಳುವಂತೆ ಹೇಳಿದವಳ ಕಣ್ಣಲ್ಲಿ ಮಗುವಿನ ಕಣ್ಣಿನಲ್ಲಿರುವಷ್ಟೇ ಮುಗ್ಧವಾದ ಹನಿಯಿತ್ತು.
"ಬದುಕಿನಲ್ಲಿ ಆಯ್ಕೆಯ ಸ್ವತಂತ್ರ ಸದಾ ನಮ್ಮದೇ ಆಗಿರುವುದಿಲ್ಲ ಕುಸುಮಾ..."
ಚಿಕ್ಕನ ಮಾತು ಹಿಂದೆಂದಿಗಿಂತ ಗಂಭೀರವಾಗಿತ್ತು.
"ಅಪ್ಪನ ಮಾತು ಸರಿಯಾಗಿದೆ. ಪರಿಸ್ಥಿತಿ ಬದಲಾಗಿದೆ. ನೀನಾಗಿ ಆಯ್ಕೆ ಮಾಡಿಕೊಳ್ಳುವ ವಯಸ್ಸು ದಾಟಿಯಾಗಿದೆ. ಇದೊಂದು ಬಾರಿ ಹಠಮಾಡದೆ...."
ಆ ಕೊನೆಯ ಮಾತು ಕೇಳಿಸಲೇ ಇಲ್ಲ. ಬದಲಿಗೆ ರಂಗಮಂದಿರದಲ್ಲಿ ಹಾಡುತ್ತಿದ್ದ ಹಾಡಿನ ಸಾಲೊಂದು ಅದೇ ಮಾತಿನ ಇನ್ನೊಂದು ರೂಪದಂತೆ ತೇಲಿಬಂತು:
"ಆಸೆಯೆಂಬ ತಳ ಒಡೆದ ದೋಣಿಯಲಿ
ದೂರ ತೀರ ಯಾನ..
ಯಾರ ಲೀಲೆಗೋ ಯಾರೋ ಏನೋ
ಗುರಿಯಿರದೆ ಬಿಟ್ಟ ಬಾಣ..."
(ವಿಜಯ ಕರ್ನಾಟಕದ ಲವಲವಿಕೆ ಸಾಪ್ತಾಹಿಕದಲ್ಲಿ ಪ್ರಕಟಿತ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ