ಬುಧವಾರ, ಜುಲೈ 8, 2020

ನಿನ್ನ ಹಾಗೆ ಯಾಕೆ ಯಾರಿಲ್ಲ?

ಈಗಷ್ಟೇ ಬೆಳಗಾಗಿದೆ. ಕಿಟಕಿಯಿಂದ ಹಾದ ಬೆಳಕಿನ ಕೋಲು ಕೋಣೆಯ ತುಂಬಾ ಹರಡಿಕೊಂಡು ಬೆಳಕಾಗಿದೆ. ಪುಟ್ಟನಿಗೆ ಎಚ್ಚರವಾಗಿದೆ. ಅವನ ಕೈ ಅಪ್ರಯತ್ನವಾಗಿ ತಡಕಾಡುತ್ತಿದೆ. ಅವನ ಪಕ್ಕದ ಹಾಸಿಗೆಯೀಗ ಬರಿದಾಗಿದೆ. ಅಲ್ಲೀಗ ಅಪ್ಪ ಇಲ್ಲ! ಎಲ್ಲಿಹೋಗಿಬಿಟ್ಟ? ರಾತ್ರೆ ಇದ್ದನಲ್ಲ? ಗುಮ್ಮಣ್ಣನಿಗೆ ಆಂಜನೇಯ ಚಾಮಿ ತಕ್ಕ ಶಾಸ್ತಿ ಮಾಡಿದ ಕಥೆಯನ್ನು ಹೇಳಿದ್ದನಲ್ಲಾ? ಈಗೆಲ್ಲಿ ಹೋದ? ಪುಟ್ಟನಿಗೆ ಭಯವಾಗಿದೆ. ಅಪ್ಪಾ.. ಊಊಊ. ಅವನೀಗ ಅಳುತ್ತಿದ್ದಾನೆ. ಆ ಅಳು ಆಚೆ ಕೊಟ್ಟಿಗೆಯಲ್ಲಿ ಒಲೆಗೆ ಬೆಂಕಿ ಒಟ್ಟುತ್ತಿರುವ ಅಪ್ಪನಿಗಿಂತ ಮೊದಲು ಅಡುಗೆಮನೆಯಲ್ಲಿರುವ ಅಮ್ಮನನ್ನು ತಲುಪಿದೆ.

"ಬೆಳ್ ಬೆಳಗ್ಗೆ ಏನೋ ನಿಂದು? ಕೋಲು ತರ್ತೇನೆ ನೋಡು"
ಅಮ್ಮ ಗದರುತ್ತಿದ್ದಾಳೆ. ಪುಟ್ಟನಿಗೀಗ ಗುಮ್ಮಣ್ಣನ ಭಯದ ಜೊತೆ ಅಮ್ಮನ ಏಟಿನ ಭಯವೂ ಉಂಟಾಗಿ ಮತ್ತಷ್ಟು ಅಳುತ್ತಿದ್ದಾನೆ.

"ಏಯ್, ನೀನು ಸುಮ್ನಿರೇ‌. ತಡಿ ಪಾಪೂ. ನಾನು ಬಂದೆ"
ಅಮ್ಮನನ್ನು ಗದರಿದ ಅಪ್ಪ ಪುಟ್ಟನನ್ನು ಎತ್ತಿಕೊಂಡು ಹೊರಬಂದಿದ್ದಾನೆ.

"ಓಹೋಹೋ, ಇನ್ನೂ ತೊಟ್ಟಿಲಿನ ಮಗು ಇದು‌. ಆಗ್ಲೇ ನಾಲ್ಕು ವರ್ಷ ಆಗಿದೆ. ಆದ್ರೂ ಎತ್ಕೋಬೇಕು. ಇಳಿ, ಕೆಳಗಿಳಿ"
ಅಪ್ಪನ ತೋಳಿನಲ್ಲಿರುವ ಪುಟ್ಟುವನ್ನು ಅಮ್ಮ ಕೆಣಕುತ್ತಿದ್ದಾಳೆ.

"ಓಗೇ ನೀನು, ಹೊದೀತೀನಿ ನಿಂಗೆ ಅಂಗೆಲ್ಲಾ ಅಂದ್ರೆ"
ಜೊತೆಗೆ ಅಪ್ಪನಿದ್ದಾನೆನ್ನುವ ಧೈರ್ಯದಲ್ಲಿ ಪುಟ್ಟ ಅಮ್ಮನಿಗೆ ಆವಾಸ಼್ ಹಾಕುತ್ತಿದ್ದಾನೆ.

"ಓಹೋ, ಹೌದಾ? ಅಪ್ಪ ಇವತ್ತು ಸಾಗರದ ಅಡಿಕೆ ಮಂಡಿಗೆ ಹೋಗ್ತಾರಲ್ಲಾ, ಆಗೇನು ಮಾಡ್ತೀಯ ನೋಡ್ತೀನಿ ನಾನು"
ಅಮ್ಮ ಮತ್ತೆ ಕೆಣಕಿದ್ದಾಳೆ.

"ನಾನೂ ಅಪ್ಪಂಜೊತೆ ಹೋತೀನಿ. ಬರ್ತಾ ನಿಂಗೇನೂ ತರಲ್ಲ.. ಅಪ್ಪ ಇವತ್ತು ಚಾಗ್ರಕ್ಕೆ ನನ್ನೂ ಕರ್ಕಂಡ್ ಹೋಗಾ.."
ಅಪ್ಪನ ತೆಕ್ಕೆಯಿಂದ ಪುಟ್ಟ ಹೇಳುತ್ತಾನೆ. ಹೇಳಹೇಳುತ್ತಲೇ ಅವನ ಮಾತಿನಿಂದ ಅಳು ತುಳುಕಿದೆ.

"ಆಯ್ತು ಪಾಪು‌. ಅಮ್ಮನ್ನ ಬಿಟ್ಟು ನಾನು ನೀನು ಮಾತ್ರ ಪೇಟೆಗೆ ಹೋಗಣ ಆಯ್ತಾ? ಈಗ ಅಳಬಾರ್ದು. ಮುಖ ತೊಳ್ಕಂಡು ಸಾಮಿ ಚಿತ್ತ ಮಾಡು ಆಯ್ತಾ? ಜಾಣಮರಿ"

ಅಪ್ಪನ ರಮಿಕೆಗೆ ಅಳು ದೂರವಾಗಿದೆ. ಹಾಲು ಕುಡಿದ ಪುಟ್ಟ ತನ್ನ ಆಟಿಕೆಯ ಬುಟ್ಟಿಯತ್ತ ನಡೆದಿದ್ದಾನೆ. ಅದರ ತುಂಬಾ ಅಪ್ಪ ಕೊಡಿಸಿದ ಆಟಿಕೆಗಳು! ಡ್ರಂ ಬಾರಿಸುವ ಬೊಂಬೆ, ಮೋಟಾರ್ ಕಾರು, ತೆಂಡೂಲ್ಕರ್ ಚಿತ್ರವಿರುವ ಪ್ಲಾಸ್ಟಿಕ್ ಬ್ಯಾಟು-ಬಾಲು, ನೀಲಿ ಗೋಲಿ, ಕೆಂಪು ಬುಗುರಿ, ಪ್ಲಾಸ್ಟಿಕ್ ಕೋವಿ.. ಸಾಗರದಿಂದ, ತೀರ್ಥಹಳ್ಳಿಯಿಂದ, ಊರ ಜಾತ್ರೆಯಿಂದ, ಊರಿನ ಯಾವ್ಯಾವುದೋ ಮೂಲೆಯಿಂದೆಲ್ಲಾ ಹುಡುಕಿ ಅಪ್ಪ ತಂದುಕೊಟ್ಟ ಆಟಿಕೆಗಳು. ಪುಟ್ಟನ ಆಟ ಆರಂಭವಾಗಿದೆ. ಅರೆರೇ, ಇದೇನಿದು? ಮೋಟಾರ್ ಕಾರು ಓಡುತ್ತಿಲ್ಲವಲ್ಲಾ? ಹಿಂದೆ ತಿರುಗಿಸಿದರೂ ಇಲ್ಲ, ಮುಂದೆ ತಿರುಗಿಸಿದರೂ ಇಲ್ಲ. ತನಗೆ ಹುಷಾರಿಲ್ಲದಾಗ ಕೋಣಂದೂರು ಡಾಕ್ಟರ ಹತ್ತಿರ ಕರೆದೊಯ್ದ ಅಪ್ಪ ಅಲ್ಲೇ ಪಕ್ಕದ ಆಟಿಕೆಯಂಗಡಿಯಲ್ಲಿ ಕೊಡಿಸಿದ ಕಾರು. ಅದೀಗ ಹಾಳಾಗಿದೆ! ಪುಟ್ಟನಿಗೆ ಮತ್ತೆ ಅಳು ಬಂದಿದೆ.

"ಅಪ್ಪಾ, ಇದು ಹಾಳಾಗಿದೆ ನೋಡಾ. ಚರಿ ಮಾಡ್ಕೊಡಾ"
ಅವನು ಅಳುತ್ತಾ ಅಪ್ಪನ ಬಳಿಗೆ ಓಡಿದ್ದಾನೆ.

"ಅಳ್ಬೇಡ ಪಾಪು. ಸರಿ ಮಾಡ್ತೀನಿ ಅದನ್ನ"
ಸ್ಕ್ರೂ ಡ್ರೈವರ್ ಹಿಡಿದ ಅಪ್ಪ ಕಾರಿನ ಮೋಟಾರ್ ಬಿಚ್ಚಿ ಸರಿಮಾಡಿದ್ದಾನೆ. ಡುರ್ ಡುರ್.. ರಿಪೇರಿಯಾದ ಕಾರೀಗ ಮನೆಯ ತುಂಬಾ ಶಬ್ದ ಮಾಡುತ್ತಾ ಓಡುತ್ತಿದೆ.

"ನನ್ನ ನಿನ್ನ ಕಾರಲ್ಲಿ ಒಂಚೂರು ಸಂತೆಗೆ ಬಿಡೋ ಪಾಪು"
ಅಮ್ಮ ಕೇಳಿದ್ದಾಳೆ.

"ಇಲ್ಲ, ನೀನು ನಂಗೆ ಹೊಡೀತಿ. ನಾನು ಕಾರಲ್ಲಿ ಅಪ್ಪನ್ನ ಮಾತ್ರ ಕರ್ಕೊಂಡ್ ಹೋತೀನಿ"
ಪುಟ್ಟ ದಿಟ್ಟವಾಗಿ ಉತ್ತರಿಸಿದ್ದಾನೆ. ಏನೇ ಆದರೂ ಜೊತೆಗೆ ಅಪ್ಪನಿದ್ದಾನೆನ್ನು ಧೈರ್ಯ ಅವನಿಗೆ.

**************

"ನನ್ ಅಪ್ಪಂಗೆ ಎಷ್ಟು ಶಕ್ತಿ ಇದೆ ಗೊತ್ತಾ? ಅವನು ದೊಡ್ಡ ಹಿಂಡಿ ಮೂಟೇನ ಒಂದೇ ಸಲಕ್ಕೆ ಹೇಗೆ ಎತ್ ತಾನೆ ಗೊತ್ತಾ?"
ಪುಟ್ಟು ತನ್ನ ಗೆಳೆಯನಿಗೆ ಹೇಳುತ್ತಿದ್ದಾನೆ.

"ನನ್ನಪ್ಪಂಗೆ ಇನ್ನೂ ಜಾಸ್ತಿ ಶಕ್ತಿ ಇದೆ. ಅವನು ಇನ್ನೂ ದೊಡ್ಡ ಮೂಟೇನ ಎತ್ ತಾನೆ‌.. ಒಂದೇ ಕೈಯಲ್ಲಿ!"
ಪುಟ್ಟನ ಗೆಳೆಯ ಹಾಗೆಂದು ಹೇಳಿದ್ದಾನೆ.

"ಏಯ್ ಹೋಗಾ! ನನ್ನಪ್ಪ ಅದ್ಕಿಂತ ದೊಡ್ಡ ಬಂಡೇನ ಎತ್ತಿ ಬಿಸಾಕ್ತಾನೆ ಗೊತ್ತಾ? ನನ್ನಪ್ಪಂಗೇ ಜಾಸ್ತಿ ಶಕ್ತಿ!"
ಪುಟ್ಟು ವಾದವನ್ನು ಬಿಗಿಗೊಳಿಸಿದ್ದಾನೆ.

"ಸಾಕು ಸುಮ್ನಿರಾ, ನಮ್ಮಪ್ಪ ಇಡೀ ಭೂಮೀನೇ ಎತ್ತಿ ಹಿಡ್ಕೋತಾನೆ, ಒಂದೇ ಕೈಯಲ್ಲಿ"
ಗೆಳೆಯ ಹಾಗೆಂದಾಗ ಪುಟ್ಟುವಿಗೆ ಗೊಂದಲವಾಗಿದೆ. ಭೂಮಿಗಿಂತ ದೊಡ್ಡದು ಯಾವುದು? ಗೊತ್ತಿಲ್ಲ. ಅವನಿಗೆ ಗೊತ್ತಿರುವುದು ಒಂದೇ. ಈ ಭೂಮಿಯಲ್ಲಿ ಅತ್ಯಂತ ಶಕ್ತಿವಂತನೆಂದರೆ - ಅದು ತನ್ನ ಅಪ್ಪ!

"ಏಯ್, ಹೋಗಾ ನನ್ನಪ್ಪಂಗೇ ಜಾಸ್ತಿ ಶಕ್ತಿ!"

"ನೀನ್ ಹೋಗಾ, ನನ್ನಪ್ಪಂಗೇ ಜಾಸ್ತಿ ಶಕ್ತಿ!"

ವಾದ ವಿವಾದವಾಗಿ, ವಿವಾದ ಜಗಳವಾಗಿ, ಜಗಳ ಕದನವಾಗಿ ಇಬ್ಬರೂ ಕೈಕೈ ಮಿಲಾಯಿಸಿಕೊಂಡು ಬಯಲಿನ ಮಣ್ಣಿನಲ್ಲಿ ಉರುಳಾಡಿ ಹೊಡೆದಾಡಿಕೊಂಡಿದ್ದಾರೆ. ಗೆಳೆಯನನ್ನು ಪುಟ್ಟನೂ, ಪುಟ್ಟನನ್ನು ಗೆಳೆಯನೂ ತಳ್ಳಾಡಿ ಎಳೆದಾಡಿಕೊಂಡಿದ್ದಾರೆ.

ಹೌದು ಮತ್ತೆ, ಅಪ್ಪನಿಗೇ ಕಡಿಮೆ ಶಕ್ತಿ ಅಂದ್ರೆ ಸುಮ್ನೆ ಬಿಡೋಕಾಗತ್ತಾ?

ನಾನು ಓದೋ ಪಾಠದಲಿ
ಅದು ಯಾಕೆ ನಿನ್ನ ಹೆಸರಿಲ್ಲ?
ನಿನ್ನ ಹಾಗೆ ಯಾಕೆ ಯಾರಿಲ್ಲ?
ನೀನು ಇರುವ ಧೈರ್ಯದಲಿ
ಯಾರೊಂದಿಗೂ ನಾ ಸೋಲಲ್ಲ
ನಿನ್ನ ಪ್ರೀತಿ ಮುಂದೆ ಏನಿಲ್ಲ..

**************

ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದುಗಾರ ಅಪ್ಪ..
ಹಗಲು ಬೆವರಿನ ಕೂಲಿಕಾರ
ರಾತ್ರೆ ಮನೆಯಲಿ ಚೌಕಿದಾರ
ಎಲ್ಲ ಕೊಡಿಸುವ ಸಾಹುಕಾರ ಅಪ್ಪ..
ಗದರೋಮೀಸೆಗಾರ ಮನಸೇ ಕೋಮಲ
ನಿನ್ನ ಹೋಲೋ ಕರ್ಣ ಯಾರಿಲ್ಲ..

ಅಪ್ಪನೆಂದರೆ ಬಾಲ್ಯದ ಹೀರೋ. ಅವನು ಅಮ್ಮನಂತೆ ವಾಸ್ತವವಾದಿಯಲ್ಲ. ಅವನು ಭಾವುಕ. ಅವನ ಗಂಭೀರ ಮುಖ, ಎತ್ತರದ ನಿಲುವು ನೋಡಿದರೆ ಭಯವಾಗುತ್ತದೆ ನಿಜ, ಆದರೆ ಅವನ ಮನಸ್ಸು ಕೋಮಲ. ಶಾಲೆಯ ಮೊದಲ ದಿನ ತರಗತಿಯಲ್ಲಿ ಬಿಟ್ಟು ಹೊರಟವನ ಹಿಂದೆ "ಅಪ್ಪಾ, ನಾನೂ ನಿಂಜೊತೆ ಬತ್ತೀನಾ, ನಾನು ಚಾಲೆಗೆ ಹೋಗಲ್ವಾ" ಎಂದು ಮಗ ಅಳುತ್ತಾ ಓಡಿಬಂದಾಗ ಅಪ್ಪ ಕರಗಿಹೋಗಿದ್ದ. "ಸರಿ ಪಾಪು. ನಾಳೆಯಿಂದ ಶಾಲೆಗೆ ಹೋಗು ಆಯ್ತಾ" ಎಂದು ಅಳುತ್ತಿದ್ದ ಮಗನನ್ನು ರಮಿಸಿ ಮನೆಗೆ ಕರೆದೊಯ್ದಿದ್ದ‌‌.

ಯಾವ ಜಾತ್ರೆಗೇ ಹೋಗಲಿ, ಪೇಟೆಗೇ ಹೋಗಲಿ, ಜೇಬಿನಲ್ಲಿ ಚಾಕಲೇಟಿಲ್ಲದೇ ಅವನು ಮರಳಿದ್ದೇ ಇಲ್ಲ. ಬೆಳೆಗೆ ಕೊಂಚ ಒಳ್ಳೆಯ ಬೆಲೆ ಸಿಕ್ಕಿದಾಗಲಂತೂ ಮುಗಿದೇ ಹೋಯಿತು. ಬೋಟಿ, ಕಂಬಾರ್ ಕಟ್ಟು, ಡಣಟಣ ಗಾಡಿ.. ಅಪ್ಪ ಚೀಲದ ತುಂಬಾ ಅದೆಷ್ಟೋ ವಿಸ್ಮಯಗಳ ತುಂಬಿಕೊಂಡು ಮರಳುತ್ತಾನೆ. ಬೆಳೆದ ಬೆಳೆಗೆ ತೀರಾ ಅರ್ಧದಷ್ಟು ರೇಟು ಸಿಕ್ಕದೇ ಹೋದಾಗಲೂ ಅವನ ಜೇಬಿನಲ್ಲಿ ಚಾಕಲೇಟು ತಪ್ಪಿಲ್ಲ. ಇನ್ನು ಸಂಜೆ ಊರಿನ ಅಂಗಡಿಗೆ ಕರೆದೊಯ್ದಾಗಲಂತೂ "ಅಮ್ಮನಿಗೆ ಹೇಳ್ಬೇಡ ಆಯ್ತಾ?" ಎಂದು ಹಳದಿ ಪೀಲೆ ಕೊಡಿಸುತ್ತಾನೆ. ಜಗತ್ತಿನ ಸಕಲ ಗುಮ್ಮ, ದೆವ್ವ, ರಾಕ್ಷಸಗಳೆಲ್ಲವನ್ನೂ ಹೆದರಿಸುವ ಅಪ್ಪ ಅಮ್ಮನಿಗೆ ಹೆದರುತ್ತಾನಾ? ಹಾಗೊಂದು ಅನುಮಾನ ಪುಟ್ಟುವಿಗಿದೆ.

ಅಪ್ಪ ಶಕ್ತಿಶಾಲಿ. ಮಣ ಭಾರದ ಒಳಕಲ್ಲನ್ನು ಅನಾಮತ್ತಾಗಿ ಎತ್ತಿ ಸಾಗಿಸುತ್ತಾನೆ. ಅಪ್ಪ ಗಾಯಕ. ಹುಲ್ಲು ಕೊಯ್ಯುವಾಗ "ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು" ಎಂದು ಇಂಪಾಗಿ ಹಾಡುತ್ತಾನೆ. ಅಪ್ಪ ಮೆಕ್ಯಾನಿಕ್. ಕೆಟ್ಟು ನಿಂತ ತೋಟದ ಮೋಟಾರನ್ನು, ಹಾಳಾದ ರೇಡಿಯೋವನ್ನೂ ತಾನೇ ಸರಿಪಡಿಸುತ್ತಾನೆ. ಅಪ್ಪ ಭಾವುಕ. ಟಿವಿಯಲ್ಲಿ ರಾಜ್ ಕುಮಾರ್ "ಎಲ್ಲೂ ಹೋಗೊಲ್ಲ ಮಾಮಾ ಎಲ್ಲೂ ಹೋಗೊಲ್ಲ" ಎಂದು ಅತ್ತಿದ್ದನ್ನು ನೋಡಿ ತಾನೂ ಅಳುತ್ತಾನೆ‌.‌ ಅಪ್ಪ ನಟ. ಊರಿನ ನಾಟಕದಲ್ಲಿ ಗಯ್ಯಾಳಿ ಅತ್ತೆಯ ಪಾತ್ರಮಾಡುತ್ತಾನೆ. ಅಪ್ಪ ಕರುಣಾಮಯಿ. ಕೊಟ್ಟಿಗೆಯಲ್ಲಿ ನರಳುತ್ತಾ ಮಲಗಿರುವ ಎಮ್ಮೆಗೆ ಶ್ರುಶ್ರೂಷೆ ಮಾಡುತ್ತಾನೆ. ಅಪ್ಪ ಮುಗ್ಧ. ಬ್ಯಾಣದ ವಿಚಾರದಲ್ಲಿ ಯಾರಿಂದಲೋ ಮೋಸಹೋಗುತ್ತಾನೆ. ಅಪ್ಪ ಪ್ರೇಮಿ. ಅಮ್ಮನಿಗೆ ಹುಷಾರಿಲ್ಲವೆಂದು ಮನೆಯ ಕೆಲಸಗಳೆಲ್ಲವನ್ನೂ ತಾನೇ ಮಾಡುತ್ತಾನೆ. ಅಪ್ಪ ಎಂದೂ ದಣಿಯದ ಕೆಲಸಗಾರ. ಸಣ್ಣಗೆ ಏದುಸಿರು ಬಿಡುತ್ತಾ, ಒಡೆದ ಹಿಮ್ಮಡಿಗೆ ಎಣ್ಣೆ ಹಚ್ಚುತ್ತಾ, ಸುರಿವ ಬೆವರ ಒರೆಸಿಕೊಳ್ಳುತ್ತಾ ವರುಷಾನುವರುಷ ದುಡಿಯುತ್ತಾನೆ.

ತಾಯಿ ಮಾತ್ರ ತವರಲ್ಲ
ತಂದೆ ಇರದೆ ತಾಯಿಲ್ಲ
ಆಕಾಶದಂತೆ ನಿನ್ನ ಮನಸಪ್ಪಾ..
ನಾನು ಎಂದೂ ಹೇಳಿಲ್ಲ
ಯಾಕಂತ ನಂಗೂ ತಿಳಿದಿಲ್ಲ
ನೀನು ಅಂದ್ರೆ ಅಚ್ಚುಮೆಚ್ಚಪ್ಪ..

ಅಪ್ಪ.‌. ಐ ಲವ್ ಯೂ ಅಪ್ಪಾ..

*************

ಅಪ್ಪನಿಗೀಗ ವೃದ್ದಾಪ್ಯ. ಐವತ್ತು ವರ್ಷಗಳಿಂದ ಬಾಕಿಯಿದ್ದ ಖಾಯಿಲೆಗಳೆಲ್ಲ ಯಾವ ಜನ್ಮದ ಹಗೆಯೋ ಎಂಬಂತೆ ಸಾಲು ಸಾಲಾಗಿ ಬಂದು ಕಾಡುತ್ತಿವೆ. ಹಿಂದೆ ಯುವಕನಾಗಿದ್ದಾಗ ಬಂದಿದ್ದ ರೋಗಗಳಿಗೆ "ನಾನು ನನ್ನ ಹೆಂಡತಿ ಮಕ್ಕಳನ್ನು ಸಾಕಬೇಕು. ದಯವಿಟ್ಟು ಈಗ ಬರಬೇಡಿ" ಎಂದು ಬೇಡಿಕೊಂಡಿದ್ದನೋ ಏನೂ? ಆಗ ಏನೂ ಇಲ್ಲದ್ದು ಈಗ ಎಲ್ಲವೂ ಬಂದು ಒಕ್ಕರಿಸಿವೆ. ಸ್ಟ್ರೋಕ್ ಆಗಿ ಕೈ-ಕಾಲು ಸ್ತಬ್ದವಾಗಿದೆ. ಕಣ್ಣು ಮಂಜಾಗಿದೆ. ದೊಡ್ಡ ಆಪರೇಶನ್ ಗೊಳಗಾದ ತಲೆ ನಿರಂತರ ನೋವಿಗೀಡಾಗಿದೆ. ಒಂದೇ ಸಮನೆ ಕೆಮ್ಮು. ಅಪ್ಪನೀಗ ಮಂಚದ ಮೇಲೆ ಬಂಧಿ.

ಈಗ ಅಪ್ಪನ ಲೋಕವೇ ಬೇರೆ. ಹೊರ ಜಗತ್ತಿನ ಕದಲಿಕೆಗಳು ಕೇವಲ ಶಬ್ದಗಳಾಗಿ ಅವನನ್ನು ತಲುಪುತ್ತಿವೆ. ಹೊರಗೆ ಅಂಗಳದಲ್ಲಿ ಮಳೆ ಬಿದ್ದ ಸದ್ದು. ಅಲ್ಲೆಲ್ಲೋ ಸಿಡಿಲು ಬಡಿದ ಮೊರೆತ. ಅಡಿಗೆ ಮನೆಯಲ್ಲಿ ಅಮ್ಮ ಮಾಡುತ್ತಿರುವ ಪಾತ್ರೆಗಳ ಟಣಟಣ. ಅಂಗಳದಲ್ಲಿ ಮೊಮ್ಮಕ್ಕಳು ಹಚ್ಚಿರುವ ಪಟಾಕಿ. ಪಕ್ಕದ ಕೋಣೆಯಲ್ಲಿ ಮಗ-ಸೊಸೆ ಮಾಡುತ್ತಿರುವ ವಾದ. ಜಗುಲಿಯಲ್ಲಿ ಅದ್ಯಾರೋ ನೆಂಟರು ಹೊಡೆಯುತ್ತಿರುವ ಹರಟೆ. ಕಿಡಕಿಯಿಂದ ನುಸುಳಿ ಬರುತ್ತಿರುವ ಡೇರೆ ಹೂವಿನ ಪರಿಮಳ..

ಅಪ್ಪನ ಲೋಕವೀಗ ಬೇರೆಯಾಗಿದೆ. ಅವನೀಗ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಾನೆ. ಯಾವುದೋ ಹಳೆಯ ಹಾಸ್ಯವನ್ನು ನೆನೆದು ತನ್ನಷ್ಟಕ್ಕೇ ನಗುತ್ತಾನೆ. ತನ್ನೊಡನೆ ಮಾತನಾಡಲು ಯಾರಾದರೂ ಬರುವರೇನೋ ಎಂದು ಬಾಗಿಲಿನತ್ತ ನೋಡುತ್ತಾನೆ. ಸ್ನಾನ ಮಾಡಿಸು, ಊಟ ಕೊಡು, ಬಟ್ಟೆ ಬದಲಾಯಿಸು ಎಂದೆಲ್ಲಾ ಕೇಳಿ ಮನೆಯವರಿಂದ ಬೈಸಿಕೊಳ್ಳುತ್ತಾನೆ. ಮತ್ತೆ ಮತ್ತೆ ಎದ್ದು ಕೂರಲು ನೋಡಿ ಬೀಳುತ್ತಾನೆ. ಕೋಣೆಗೆ ಬಂದ ಮೊಮ್ಮಗನನ್ನು ಬಾಚಿತಬ್ಬಲೆಂದು ಕೈಚಾಚುತ್ತಾನೆ.

ಐವತ್ತು ವರ್ಷಗಳ ಕಾಲ ತಾನೇ ದುಡಿದು, ಕಟ್ಟಿ, ಬೆಳೆಸಿದ ಮನೆ, ತೋಟ, ಕುಟುಂಬಗಳಿಂದ ತಾನೇ ಹೊರತಾಗಿ, ಹೊರ ಕುಳಿತು ಒಂಟಿಯಾಗಿ ನರಳುತ್ತಿದ್ದಾನೆ.

ತುಸು ಮೆಲ್ಲ ಬಡಿಯೇ ಸಿಡಿಲೇ
ಇಲ್ಲೊಂದು ನಿದಿರೆ ಜಾರಿಯಲ್ಲಿದೆ;
ತೂಗಿ ದಣಿದು ಮಲಗಿಹನು ಅಪ್ಪ
ಅವನ ನಿದಿರೆಗೆ ಲಾಲಿಯೆಲ್ಲಿದೆ?

ವರುಷಾನುವರುಷ ದುಡಿದ ಅನವರತ
ಈಗಷ್ಟೇ ವಿಶ್ರಾಂತಿ ಶುರುವಾಗಿದೆ;
ಛಳಿಯನೆರಚದಿರು ಓ ಸಂಜೆ ಗಾಳಿ
ನಡುಗುವ ತ್ರಾಣ ಈ ಪ್ರಾಯಕೆಲ್ಲಿದೆ?

ತುತ್ತುಗಳ ತಿನ್ನಿಸಿ ಸವೆದಂಥ ಕೈಯಿದು
ಕತ್ತರಿಸಿದೆಯೇಕೆ ಓ ದೇವರೇ?
ಕಹಿಗಳ ತಾ ನುಂಗಿ ಸಿಹಿಯಷ್ಟೇ ಹಂಚಿದ
ಅವನ ಪಾತ್ರೆಯಲೇಕೆ ನೋವುಳಿದಿದೆ?

ಎಷ್ಟೊಂದು ಪ್ರೀತಿ ಈ ತಂದೆ ಕಣ್ಣಲಿ
ಕೇಳದೆಯೇ ಕೊಟ್ಟನು ಈ ಜೀವಕೆ;
ಏನೆಲ್ಲ ಯಾತನೆಯು ಮಡುವುಗಟ್ಟಿದೆ ಇಂದು
ನಮಗಿನಿತೂ ಕೊಡುತಿಲ್ಲ ಇಂದೇತಕೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...