ಶನಿವಾರ, ಜನವರಿ 19, 2019

ಬೆಂಗಳೂರಿಗೆ ಬಂದಿದ್ದು-2

ಈ ಪ್ರೀತಿ ಹಾಗೂ ಬರಹಗಳ ಒಂದು ವಿಚಿತ್ರ ಗುಣ ಏನೆಂದರೆ 'ಬಾ ಇಲ್ಲಿ' ಎಂದು ಪ್ರೀತಿಯಿಂದ ಕರೆದಾಗ ಅವು ಬರುವುದಿಲ್ಲ. ಅದೇ 'ನೀನು ನನಗಲ್ಲ ಬಿಡು' ಎಂದು ವಿಮುಖನಾದರೆ ಓಡಿ ಬಂದು ಅಪ್ಪಿಕೊಳ್ಳುತ್ತವೆ. ಬಸ್ಸು ಬಾರದ ಸಂಜೆಯೊಂದರಲ್ಲಿ ಕಾಯುತ್ತಾ ಕುಳಿತಿದ್ದಾಗ ಬರೆದ 'ಬೆಂಗಳೂರಿಗೆ ಬಂದಿದ್ದು' ಎನ್ನುವ ನನ್ನದೇ ಯಡವಟ್ಟುಗಳ ಸಂಕಲನದಂತಹಾ ಬರಹಕ್ಕೆ ದೊರೆತ ನಿಮ್ಮೆಲ್ಲರ ಪ್ರತಿಕ್ರಿಯೆಯನ್ನು ನೋಡಿ ನಿಜಕ್ಕೂ ಬೆಚ್ಚಿಬಿದ್ದಿದ್ದೇನೆ, ಅಷ್ಟೇ ಕೃತಜ್ಞನೂ ಆಗಿದ್ದೇನೆ. ಅದಕ್ಕೆ ಅಷ್ಟೆಲ್ಲ ಲೈಕು, ಕಮೆಂಟುಗಳು ಬಂದಿರುವಾಗ ಇದು ಎಲ್ಲಿ ಓದಿಸಿಕೊಳ್ಳದೇ ಹೋಗುತ್ತದೋ ಎನ್ನುವ ಭಯದಲ್ಲೇ ಅದರ ಮುಂದಿನ ಭಾಗವನ್ನು ಬರೆದುಮುಗಿಸಿದ್ದೇನೆ.
ಓದುವಿರೆಂಬ ನಂಬಿಕೆಯೊಂದಿಗೆ...

ಬೆಂಗಳೂರಿಗೆ ಬಂದಿದ್ದು-2

ಬೆಂಗಳೂರಿಗೆ ಬಂದ ಮೊದಲ ವಾರದಲ್ಲಿ, ಹೆಚ್ಚೂ ಕಡಿಮೆ ಒಂದೇ ಥರಾ ಕಾಣುವ ಬೆಂಗಳೂರಿನ ಬೀದಿಗಳ ನಡುವೆ ಅದೆಷ್ಟು ಕನ್ಫ್ಯೂಸ್ ಆಗುತ್ತಿದ್ದೆನೆಂದರೆ ನಮ್ಮ ಮನೆಯ ಮುಂದಿನದೇ ಸರ್ಕಲ್ ನಲ್ಲಿ ನಿಲ್ಲಿಸಿ, ಕಣ್ಣು ಮುಚ್ಚಿಸಿ, ಗಿರಗಿರನೆ ನಾಲ್ಕು ಸುತ್ತು ತಿರುಗಿಸಿ ವಾಪಾಸ್ ಮನೆಗೆ ಹೋಗು ನೋಡೋಣ ಎಂದರೂ ಮೇಲೆ ಕೆಳಗೆ ನೋಡುತ್ತಿದ್ದೆನೇನೋ. ಎಲ್ಲೇ ಮೂರು ದಾರಿಗಳು ಕೂಡಿರುವ ಸರ್ಕಲ್ ಕಂಡರೂ, ಅಲ್ಲಿ ನಾನು ತುಳಿಯುತ್ತಿದ್ದುದು ತಪ್ಪುಹಾದಿಯನ್ನೇ. ಯಾವುದೋ ಡೆಡ್ಡೆಂಡ್ ರಸ್ತೆಗೆ ಹೋಗಿ ಗಾಬರಿಯಲ್ಲಿ ಮೇಲೆ ಕೆಳಗೆ ನೋಡುತ್ತಾ, ಸ್ವಲ್ಪ ಹೊತ್ತಿಗೆ ಮುಂಚೆ ಇಲ್ಲೇ ಇದ್ದ ಅಕ್ಕನ ಮನೆ ಅದೆಲ್ಲಿ ಹೋಯ್ತೆಂದು ಅಕ್ಕಪಕ್ಕದಲ್ಲಿ ಓಡಾಡುತ್ತಿದ್ದ ಜನರ ಬಳಿ ವಿಳಾಸ ಕೇಳುತ್ತಿದ್ದೆ. ಇಂತಿಪ್ಪ ನನ್ನೊಬ್ಬನನ್ನೇ ದೂರದಲ್ಲೆಲ್ಲೋ ಇರುವ ಅದ್ಯಾವುದೋ ಕಂಪನಿಗೆ ಇಂಟರ್ವ್ಯೂಗೆ ಕಳಿಸಲು ಅಕ್ಕನಿಗಾದರೂ ಹೇಗೆ ಧೈರ್ಯ ಬಂದೀತು? ತುಸು ಯೋಚಿಸಿ, ಕೊನೆಗೆ ಅವಳೇ ನನ್ನೊಂದಿಗೆ ಹೊರಟು ನಿಂತಳು.
ತಮಾಷೆ ಇದ್ದದ್ದೇ ಅಲ್ಲಿ. ಮೂರ್ನಾಲ್ಕು ದಿನದ ಹಿಂದೆ ಬೆಂಗಳೂರಿಗೆ ಬಂದಿಳಿದ ನನಗೆ ಈ ಮಹಾನಗರದ ದೂರದ ಏರಿಯಾಗಳು ಅದೆಷ್ಟು ಅಪರಿಚಿತವಾಗಿದ್ದವೋ, ಏಳು ವರ್ಷದ ಹಿಂದೆ ಮದುವೆಯಾಗಿ ಇಲ್ಲಿಗೆ ಬಂದ ಅಕ್ಕನಿಗೂ ಅವು ಅಷ್ಟೇ ಅಪರಿಚಿತವಾಗಿದ್ದವು! ಗಿರಿನಗರ, ಬಸವನಗುಡಿಗಳಾಚೆ ಯಾವೊಂದು ಏರಿಯಾಗೂ ಸ್ವತಂತ್ರವಾಗಿ ಹೋಗದ, ವರ್ಷಕ್ಕೊಂದೆರೆಡು ಬಾರಿ ಹೋದರೂ ಭಾವನ ಜೊತೆ ಬೈಕಿನಲ್ಲಿ ಇಲ್ಲಾ ಆಟೋದಲ್ಲಿ ಹೋಗುತ್ತಿದ್ದ ಅಕ್ಕನ ಪಾಲಿಗೆ ಈ ಬಿಎಂಟಿಸಿ ಪ್ರಯಾಣವೆನನುವುದು ಮೊಟ್ಟ ಮೊದಲ ಬಾರಿಗೆ ಏರುತ್ತಿರುವ ರೋಲಕ್ ಕೋಸ್ಟರ್ರೇ ಆಗಿತ್ತು. ಹೀಗೆ ಹುಟ್ಟಾ ಬೃಹಸ್ಪತಿಗಳಾದ ನಾವಿಬ್ಬರೂ ಜೊತೆಯಾಗಿ ಇಂಟರ್ವ್ಯೂಗೆ ಹೊರಡುವುದೆಂದು ತೀರ್ಮಾನವಾಯಿತು. ಬಿಟಿಎಂ ಎನ್ನುವ ಬರೀ ಇನಿಶಿಯಲ್ ಗಳಿರುವ ಹೆಸರಿನ ಏರಿಯಾಗೆ ಹೋಗಲು ಯಾವ್ಯಾವ ಬಸ್ಸುಗಳಿವೆಯೆಂದು ತಿಳಿದುಕೊಂಡು ಹೇಳುವಂತೆ ಅಕ್ಕ ಭಾವನಿಗೆ ದೊಂಬಾಲುಬಿದ್ದಳು. ಯಾರ್ಯಾರಿಗೋ ಕಾಲ್ ಮಾಡಿ ನಮ್ಮ ಏರಿಯಾದಿಂದ ಬಿಟಿಎಂಗೆ ಹೋಗುವ ಬಸ್ಸುಗಳ ಕುಲ, ಗೋತ್ರ ವಿಚಾರಿಸಿದೆವು. ಅಂತೂ ಇಂತೂ ಅದೊಂದು ಸೋಮವಾರ ಬೆಳಗ್ಗೆ ಒಂಭತ್ತಕ್ಕೆಲ್ಲ ಸೀತಾ ಸರ್ಕಲ್ ನಲ್ಲಿ ನಿಂತು ಬಸ್ಸಿಗಾಗಿ ಕಾಯತೊಡಗಿದೆವು.
ಆಗ ಬಂತು ಟೂ ನಾಟ್ ಒನ್!
ಬಸ್ಸೊಂದು ಈ ಪಾಟಿ ರಶ್ಶಾಗಿದ್ದನ್ನು ನಾನು ನೋಡಿದ್ದೇ ಕಡಿಮೆ. ಮುಂದುಗಡೆ ಬಾಗಿಲಿನ ತುದಿಯಿಂದ ಹಿಡಿದು ಹಿಂದಿನ ಸೀಟಿನ ಮೂಲೆಯ ತನಕ ಒಂದೊಂದು ಅಡಿ ಜಾಗಕ್ಕೂ ಒಬ್ಬೊಬ್ಬ ಮನುಷ್ಯನನ್ನು ನಿಲ್ಲಿಸಿಕೊಂಡು ಬಂದಿದ್ದ ಆ ಬಸ್ಸನ್ನು ನೋಡಿ ನನಗಿಂತ ಭಯಂಕರವಾಗಿ ಬೆಚ್ಚಿಬಿದ್ದವಳು ಅಕ್ಕ. ಎಷ್ಟೋ ವರ್ಷಗಳ ಕೆಳಗೆ ಸಮಾಜ ಪುಸ್ತಕದಲ್ಲಿ ಓದಿದ್ದ 'ಜನಸಂಖ್ಯಾ ಸ್ಫೋಟ'ದ ಅರ್ಥ ಏನೆಂಬುದು ಈಗ ಇಬ್ಬರಿಗೂ ಗೊತ್ತಾಗಿತ್ತು. ಹಾಗಂತ ಮುಂದಿನ ಬಸ್ಸಿಗೆ ಕಾಯುವಷ್ಟು ಸಮಯವಿರಲಿಲ್ಲ. ಹಾಗೆ ಕಾದರೂ ಬರಲಿರುವ ಬಸ್ಸು ಇದರ ಅಜ್ಜನಂತಿದ್ದರೆ? ಎಂಬ ಭಯ ಬೇರೆ. ಅಂತೂ ಇಂತೂ ಹೇಗೋ ದಾರಿ ಮಾಡಿಕೊಂಡು ಬಸ್ಸಿನೊಳಗೆ ತೂರಿಕೊಂಡೆವು. ಒಳಗಿನ ಪರಿಸ್ಥಿತಿ ಇನ್ನೂ ಭಯಂಕರವಾಗಿತ್ತು. ಸೊಂಟ ಬಳುಕಿದ ತೆಂಗಿನ ಮರಗಳಂತೆ ನಿಂತು ನೇತಾಡಿಕೊಂಡಿದ್ದ ಜನರ ಕಾಲೊಂದು ಕಡೆ ಇದ್ದರೆ, ತಲೆ-ಕೈಗಳು ಮೇಲೆಲ್ಲೋ ಇರುವ ಪೋಲ್ ಸರಳಿನ ಕಡೆಗೆ ಓರೆಯಾಗಿ ಚಾಚಿಕೊಂಡಿದ್ದವು. ಪ್ರತಿಯೊಂದು ಹೆಜ್ಜೆಗೂ ಯಾರದೋ ಕಾಲು ತುಳಿಯುತ್ತಾ, ಅವರ ಕೆಂಗಣ್ಣಿನ ನೋಟಕ್ಕೀಡಾಗುತ್ತಾ ಹೇಗೋ ಒಳಸೇರಿಕೊಂಡೆ. ಮಹಿಳೆಯರು ಬಸ್ಸಿನ ಮುಂಭಾಗದಲ್ಲಿ ನಿಲ್ಲಬೇಕಾದ್ದರಿಂದ ಅಕ್ಕ ಅನಿವಾರ್ಯವಾಗಿ ಮುಂದೆಲ್ಲೋ ನಡೆದುಹೋದಳು. ಕಿಕ್ಕಿರಿದಿದ್ದ ಜಡೆ, ಚೂಡಿದಾರ, ಸೀರೆಗಳ ನಡುವೆ ಕರಗಿಹೋದ ಅವಳನ್ನು ಹುಡುಕುವ ವಿಫಲ ಪ್ರಯತ್ನ ಮಾಡುತ್ತಾ, ನಿಂತಲ್ಲೇ ಇಣುಕಾಡುತ್ತ ಬಸ್ಸಿನ ಪೋಲ್ ಗೆ ನೇತಾಡತೊಡಗಿದೆ.
ಟ್ರಾಫಿಕ್ ಎನ್ನುವ, ಮಹಾಮಹಾಶಹರಗಳ ಜನರನ್ನೆಲ್ಲ ಬೆಚ್ಚಿ ಬೀಳಿಸುವ ಸಮಸ್ಯಾಸುರನನ್ನು ನಾನು ಕಣ್ಣಾರೆ ನೋಡಿದ್ದು ಅದೇ ಮೊದಲು. ಇಳಿಯಬೇಕಾದ ನಿಲ್ದಾಣ ಮುಂದೆಲ್ಲಿದೆ? ಗೊತ್ತಿಲ್ಲ. ಅದಕ್ಕಿನ್ನೂ ಎಷ್ಟು ದೂರ? ಗೊತ್ತಿಲ್ಲ. ನಿಜಕ್ಕೂ ಅದು ಮುಂದೆಯೇ ಇದೆಯಾ ಅಥವಾ ಹಿಂದೆಲ್ಲೋ ದಾಟಿ ಹೋಯಿತಾ? ಅದೂ ಗೊತ್ತಿಲ್ಲ. ಆಗಲೇ ಒಂದು ಗಂಟೆ ಕಳೆದಿದೆ. ಮುಂದಿರುವ ಅಕ್ಕ ನನಗೆ ಗೊತ್ತಾಗದಂತೆ ಎಲ್ಲಾದರೂ ಇಳಿದುಕೊಂಡು ಬಿಟ್ಟರೆ ಏನಪ್ಪಾ ಗತಿ ಎಂದು ನಾನು ಯೋಚಿಸುತ್ತಿದ್ದರೆ ಅವಳು, ಹಿಂದೆಲ್ಲೋ ಇರುವ ತನ್ನ ಸಣಕಲ ತಮ್ಮ ಈ ನೂಕಾಟದ ನಡುವೆ ಅದ್ಯಾವ ಕಿಟಕಿಯ ಸಂದಿಯಿಂದ ತೂರಿ ಆಚೆ ಬಿದ್ದುಹೋಗುತ್ತಾನೋ ಎಂದು ಚಿಂತಿಸುತ್ತಾ ಹೈರಾಣಾಗಿದ್ದಳು. ಪ್ರತಿ ಎರೆಡು-ಮೂರು ನಿಲ್ದಾಣ ಸರಿದಾಗಲೂ ಇದು ಬಿಟಿಎಮ್ಮಾ ಎಂದು ಕೇಳಿ ಕಂಡೆಕ್ಟರ್ ನಿಂದ ಬೈಸಿಕೊಂಡಿದ್ದಳು. ಹೀಗೆ ಖಾಲಿ ಹತ್ತೂ ಚಿಲ್ಲರೆ ಕಿಲೋಮೀಟರ್ ಕ್ರಮಿಸಲಿಕ್ಕೆ ಒಂದೂವರೆ ಗಂಟೆ ಕಾಲ ಅಲ್ಲಾಡುತ್ತಾ, ಕುಲುಕಿ ಬಳುಕುತ್ತಾ, ಹೋಗುತ್ತಲೇ ಇರಬೇಕಾದ ಪ್ರಯಾಣ ನಿಜಕ್ಕೂ ಕಿರಿಕಿರಿ ಹುಟ್ಟಿಸುವಂತಿತ್ತು.
*******************
ಕೊನೆಗೂ ಕಂಡಕ್ಟರ್ 'ಈಸ್ಟೆಂಡ್, ಈಸ್ಟೆಂಡ್...' ಎಂದು ಕೂಗಿಕೊಂಡಾಗ ಹೋದ ಜೀವ ಬಂದಂತಾಯಿತು. ಇನ್ನೂ ಖಾಲಿಯಾಗದ ಬಸ್ಸಿನಿಂದ ಅದು ಹೇಗೋ ಎಗರಿಕೊಂಡೆ. ಇನ್ನೊಂದರ್ಥದಲ್ಲಿ ಬಾಗಿಲಿನತ್ತ ಮುಖ ಮಾಡಿ ನಿಂತ ನನ್ನನ್ನು ಜನರೇ ತಳ್ಳಿಕೊಂಡುಬಂದು ಕೆಳಗಿಳಿಸಿದರು. ನಮ್ನಮ್ಮ ಕೈ, ಕಾಲು, ತಲೆಗಳೆಲ್ಲ ನಮ್ನಮ್ಮ ಬಳಿಯೇ ಇದೆಯೆಂಬುದನ್ನು ಖಾತರಿ ಪಡಿಸಿಕೊಂಡ ನಂತರ ನಾನು-ಅಕ್ಕ ಒರಾಕಲ್ ನತ್ತ ಹೊರಟೆವು. ಎದುರು ಸಿಕ್ಕವರ ಬಳಿಯೆಲ್ಲ ಹೆಸರೊಂದು ಬಿಟ್ಟು ಮತ್ಯಾವ ವಿವರವೂ ಗೊತ್ತಿಲ್ಲದ ಒರಾಕಲ್ ನ ವಿಳಾಸ ಕೇಳುತ್ತಾ, ಗೊಂದಲದಲ್ಲಿ ಒಬ್ಬರು ಇನ್ನೊಬ್ಬರ ದಾರಿ ತಪ್ಪಿಸುತ್ತಾ, ಹೆಜ್ಜೆಗೊಂದು ಬಾರಿ ನಾವು ಹೋಗುತ್ತಿರುವ ಮಾರ್ಗವನ್ನು ಅನುಮಾನಿಸುತ್ತ ಅಂತೂ ಇಂತೂ ಒರಾಕಲ್ ನ ಅಂಗಳ ತಲುಪಿನಿಂತೆವು.
ತಲೆಯೆತ್ತಿದಷ್ಟೂ ಎತ್ತರಕ್ಕೆ ಮಹಡಿ ಮಹಡಿಯಾಗಿ ಬೆಳೆದು ನಿಂತಿದ್ದ ಆ ಕಟ್ಟಡವನ್ನು ನೋಡಿಯೇ ನನ್ನ ಅರ್ಧ ಜೀವ ಬಾಯಿಗೆ ಬಂತು. ನನ್ನಂತೆಯೇ ಇಂಟರ್ವ್ಯೂಗೆ ಬಂದಿದ್ದ ಹತ್ತಾರು ಯುವಕರು ನಮ್ಮ ಸುತ್ತ ಸೇರಿಕೊಂಡು ಪಕ್ಕಾ ಇಂಗ್ಲೀಷಿನಲ್ಲಿ ಪಿಸುಗುಟ್ಟುತ್ತ ನಿಂತಿದ್ದರು. ಅಕ್ಕನಂತೂ ಒಂದು ಕಣ್ಣಿನಲ್ಲಿ ಸುತ್ತ ನೆರೆದ ಇನ್ನಿತರ ಕ್ಯಾಂಡಿಡೇಟ್ ಗಳನ್ನೂ, ಮತ್ತೊಂದು ಕಣ್ಣಿನಲ್ಲಿ ಪೆಕರನಂತೆ ಬಾಯ್ಬಿಟ್ಟುಕೊಂಡು ಬಿಲ್ಡಿಂಗನ್ನೇ ನೋಡುತ್ತಾ ನಿಂತಿದ್ದ ನನ್ನನ್ನೂ ನೋಡುತ್ತಿದ್ದಳು- ಹುಟ್ಟುವಾಗಲೇ ಫಾರ್ಮಲ್ಸ್ ಹಾಕಿಕೊಂಡು ಹುಟ್ಟಿರುವ ಈ ಬುದ್ಧಿವಂತರನ್ನೆಲ್ಲ ಹಿಂದಿಕ್ಕಿ ಈ ನನ್ನ ತಮ್ಮ ಕೆಲಸ ಗಿಟ್ಟಿಸುವುದು ಹೌದಾ ಎಂಬಂತೆ. ನಾನೇನೂ ಅವಳ ಈ ಅನುಮಾನವನ್ನು ಸುಳ್ಳಾಗಿಸಲಿಲ್ಲ ಬಿಡಿ, ಅದು ಬೇರೆ ವಿಷಯ. ಆದರೆ ಅದಕ್ಕೂ ಮೊದಲು ನಾನು ತೋರಿಸಿದ ಓವರ್ ಕಾನ್ಫಿಡೆನ್ಸ್ ಇದೆಯಲ್ಲಾ? ಅದೇ ನಿಜವಾದ ತಮಾಷೆ.
ಲಿಫ್ಟ್ ನೊಳಗೆ ತೂರಿಕೊಂಡ ನಮ್ಮೆದುರಿಗೆ ಪಕ್ಕಾ ಹುಡುಗನಂತೆ ಫಾರ್ಮಲ್ಸ್ ತೊಟ್ಟಿದ್ದ ಹುಡುಗಿಯೊಬ್ಬಳು ಬಂದು ನಿಂತಳು. ಕೈಯಲ್ಲಿದ್ದ ಫೈಲನ್ನು ಎದೆಗವುಚಿಕೊಂಡು, ಇನ್ನೇನು ಸಾವಿರಾರು ಅಡಿ ಎತ್ತರದ ಬೆಟ್ಟದ ಮೇಲಿಂದ ನೆಗೆಯಲಿರುವವಳಂತೆ ಭಯಕ್ಕೊಳಗಾಗಿ ನಿಂತಿದ್ದ ಅವಳನ್ನು ನೋಡಿ ಅಕ್ಕನಿಗೆ ಏನನಿಸಿತೋ ಏನೋ, "ಯಾಕೆ ಅಷ್ಟೊಂದು ಟೆನ್ಷನ್ ಆಗಿದೀರ? ಇಂಟರ್ವ್ಯೂ ಭಯಾನಾ?" ಎಂದು ಕೇಳಿಯೇ ಬಿಟ್ಟಳು. ಆ ಹುಡುಗಿ ಹೌದೆಂಬಂತೆ ತಲೆಯಾಡಿಸಿ ಸಣ್ಣಗೆ ನಕ್ಕಳು. ಅವಳ ಹೆಸರು, ಊರು ಎಲ್ಲಾ ಕೇಳಿದ ಅಕ್ಕ ಕೊನೆಗೆ "ಹೆದರಬೇಡಿ. ಧೈರ್ಯವಾಗಿರಿ. ಅರಾಮಾಗಿ ಆನ್ಸರ್ ಮಾಡಿ" ಎಂದು ಧೈರ್ಯ ಹೇಳಿ ನನ್ನತ್ತ ಒಮ್ಮೆ ನೋಡಿದಳು. ನಾನು ಮಾತ್ರ ಸುತ್ತಲಿನ ಪರಿಸ್ಥಿತಿಗೂ ನನಗೂ ಸಂಬಂಧವೇ ಇಲ್ಲವೆಂಬಂತೆ, ಮದುವೆ ಮನೆಯೊಂದಕ್ಕೆ ಬಂದಿರುವ ಗಂಡಿನ ಕಡೆಯ ನೆಂಟನಂತೆ ಠೀವಿಯಿಂದ ನಿಂತುಕೊಂಡಿದ್ದೆ! ಬೆಂಗಳೂರಂಥಾ ಬೆಂಗಳೂರಲ್ಲಿ ಬೆಳದ ಹುಡುಗಿಯೇ ಹೀಗೆ ಟೆನ್ಷನ್ ಆಗಿ ನಡುಗುತ್ತಿರುವಾಗ ಅದೆಲ್ಲಿಯೋ ಇರುವ ಹಳ್ಳಿ ಮೂಲೆಯಿಂದ ಬಂದಿರುವ ನನ್ನ ಕಾನ್ಫಿಡೆನ್ಸ್, ಧೈರ್ಯಗಳನ್ನು ನೋಡಿ ಅವಳಿಗೆ ಬಹಳ ಆಶ್ಚರ್ಯವಾಗಿತ್ತು.
ಜೊತೆಗೆ ನನಗೂ.
*******************
ರಿಜಿಸ್ಟರ್ ಗಳಿಗೆ ಸಹಿ ಹಾಕಿ, ರೆಸ್ಯೂಮ್ ಕೊಟ್ಟು, ಕಿಲಕಿಲನೆ ನಡೆದಾಡುತ್ತಿರುವ ಹುಡುಗಿ-ಹುಡುಗರನ್ನು ನೋಡುತ್ತಾ ಒಂದಿಷ್ಟು ಹೊತ್ತು ಕಾದಮೇಲೆ 'ರಿಟನ್ ಟೆಸ್ಟ್' ಬರೆಯಲೆಂದು ನಮ್ಮನ್ನೆಲ್ಲ ಕೋಣೆಯೊಂದರೊಳಕ್ಕೆ ಕರೆದೊಯ್ದರು. ಆಗಷ್ಟೇ ಡಿಗ್ರಿ ಎಕ್ಸಾಮ್ ಬರೆದು ಬಂದಿದ್ದ ನನಗೆ ಆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದೇನೂ ದೊಡ್ಡ ವಿಷಯವಾಗಲಿಲ್ಲ. ಫಲಿತಾಂಶಕ್ಕಾಗಿ ಮತ್ತಷ್ಟು ಹೊತ್ತು ಕಾಯಿಸಿದರೂ ಕೊನೆಗೆ ಶುಭ ಸುದ್ದಿಯನ್ನೇ ಹೇಳಿ, ಊಟ ಮಾಡಿಕೊಂಡು ಬರುವಂತೆ ಸೂಚಿಸಿ ಕಳಿಸಿದರು. ಆಪರೇಷನ್ ಥಿಯೇಟರ್ ನ ಹೊರಗೆ ಕಾಯುವಂತೆ ಆತಂಕದಲ್ಲಿ ಕೂತಿದ್ದ ಅಕ್ಕನಿಗೆ ಈ ಶುಭಸುದ್ದಿ ತಿಳಿಸಿದ ನಂತರ ಇಬ್ಬರೂ ಊಟ ಮಾಡಲೆಂದು ಮೇಲ್ಮಹಡಿಯತ್ತ ಹೊರಟೆವು.
ಹುಡುಗರಂತೆ ಪ್ಯಾಂಟು-ಶರ್ಟು ತೊಟ್ಟ ಹುಡುಗಿಯರು, ಹುಡುಗಿಯರಂತೆ ಕಿವಿ ಚುಚ್ಚಿಸಿಕೊಂಡ ಹುಡುಗರು, ಅವರೆಲ್ಲ ನಡೆದಾಡುವ ಸ್ಟೈಲ್, ಕ್ಷಣಾರ್ಧದಲ್ಲಿ ಬೆರಳುಗಳನ್ನು ಕೀಬೋರ್ಡಿನ ತುಂಬಾ ಓಡಾಡಿಸುವ ಚಾಕಚಕ್ಯತೆ.. ಹೀಗೆ ಸುತ್ತಲಿನ ಪ್ರತಿಯೊಂದು ಸಂಗತಿಯನ್ನೂ ಮೊದಲ ಬಾರಿಗೆ ಕಣ್ತುಂಬಿಕೊಳ್ಳುತ್ತಿದ್ದ ನನಗೆ ಇದೂ ಸಹಾ ನಾವು ನಿಂತಿರುವ ಮಣ್ಣಿನ ಮೇಲೇ ಇರುವ ಒಂದು ಜಾಗ ಎಂದು ನಂಬುವುದಕ್ಕೆ ನಿಮಿಷಗಳೇ ಹಿಡಿದವು
"ಇನ್ನೊಂದು ಆರು ತಿಂಗಳು ಕಣೋ, ನೀನೂ ಹಿಂಗೇ ಆಗ್ತೀಯ ನೋಡ್ತಿರು"
ಅಕ್ಕ ಆಗಲೇ ಕನಸು ಕಾಣಲಾರಂಭಿಸಿಯಾಗಿತ್ತು. ನಾನೂ ಹೀಗೇ, ಒಂದು ಕಿವಿ ಚುಚ್ಚಿಸಿಕೊಂಡು, ಜೀನ್ಸು ಪ್ಯಾಂಟಿನ ಹುಡುಗಿಯೊಬ್ಬಳ ಜೊತೆ ಇಂಗ್ಲೀಷಿನಲ್ಲಿ ಹರಟುತ್ತಿರುವ ಚಿತ್ರವೊಂದು ನನ್ನ ಕಣ್ಮುಂದೆ ಹಾದುಹೋಯಿತು. ಊಟ ಮುಗಿಸಿ ಬಂದ ನನ್ನನ್ನು ಹದಿನಾರು ಜನರ ಗುಂಪೊಂದರಲ್ಲಿ ಸೇರಿಸಿ ಕೋಣೆಯೊಂದರೊಳಕ್ಕೆ ತುಂಬಿದರು. ಹೊರಜಗತ್ತಿನ ಗಾಳಿ-ಬೆಳಕಿನ ಸಣ್ಣ ಹನಿಯೂ ಇಲ್ಲದ ಆ ಹವಾನಿಯಂತ್ರಿತ ಕೋಣೆಯನ್ನು ನೋಡಿ ಯಾವುದೋ ಕಥೆಯಲ್ಲಿ ಓದಿದ್ದ ಹಿಟ್ಲರನ ಗ್ಯಾಸ್ ಚೇಂಬರ್ ನೆನಪಾಯಿತು. ಸುತ್ತಲಿದ್ದ ಎಲ್ಲರೂ ಜಗತ್ತಿನ ಗಂಭೀರತೆಯನ್ನೆಲ್ಲಾ ಅರ್ಧ ಗಂಟೆಯ ಮಟ್ಟಿಗೆ ಗುತ್ತಿಗೆ ಪಡೆದವರಂತೆ ಮುಖ ಬಿಗಿದುಕೊಂಡು ಕುಳಿತಿದ್ದರು. ಆಯತಾಕಾರದ ಟೇಬಲ್ ನ ಆಚೆ ಸಾಲಿನಲ್ಲಿ ನಾನು ಬೆಳಗ್ಗೆ ನೋಡಿದ್ದ ಹುಡುಗಿ, ನನಗೆ ಎದಿರಾಗಿ ಕುಳಿತಿದ್ದಳು. ಆಚೀಚೆ ನೋಡುತ್ತ ನನ್ನೆಡೆಗೊಮ್ಮೆ ನೋಡಿ ಪರಿಚಯದ ನಗೆ ನಕ್ಕಳು. ಕೆಲಸಕ್ಕೆ ಸೇರಿದ ಮೇಲೆ ಇವಳೇ ನನಗೆ ಮೊದಲ ಫ್ರೆಂಡಾಗಬಹುದೆಂದು ಕುಳಿತಲ್ಲೇ ಯೋಚಿಸಿದೆ.
"ಹಲೋ ಆಲ್. ಆಲ್ ಆಫ್ ಯು ಹ್ಯಾಡ್ ಯುವರ್ ಲಂಚ್?"
ನಗುತ್ತಾ ಒಳಬಂದ ಆಸಾಮಿ ನಮ್ಮೂರಿನ ಯಾರನ್ನೋ ಹೋಲುತ್ತಾನೆನ್ನಿಸಿತು. ಎಲ್ಲರೂ ನಾಲ್ಕೇ ನಾಲ್ಕು ಹಲ್ಲು ಬಿಟ್ಟು "ಹಲೋ ಸರ್" ಎಂದು ಮತ್ತೆ ಮುಖ ಬಿಗಿದುಕೊಂಡರು.
ಆಗ ಶುರುವಾಯಿತು ಗ್ರೂಪ್ ಡಿಸ್ಕಶನ್!
"ಭಾರತಕ್ಕೆ ಐಟಿಬಿಟಿ ಬೇಕೇ ಬೇಡವೇ? ಇದು ನಿಮ್ಮ ಈ ಹೊತ್ತಿನ ಡಿಸ್ಕಶನ್ ನ ವಿಷಯ."
ಅವನು ಅಷ್ಟಂದದ್ದೇ ತಡ, ಇಷ್ಟು ಹೊತ್ತು ಮುಖ ಬಿಮ್ಮನೆ ಮಾಡಿಕೊಂಡು ಕುಳಿತಿದ್ದವರೆಲ್ಲರೂ ಸಂಸತ್ತಿನಲ್ಲಿರುವ ರಾಜಕಾರಣಿಗಳ ಆತ್ಮಗಳನ್ನು ಮೈಮೇಲೆ ಬರಿಸಿಕೊಂಡವರಂತೆ ಮಾತನಾಡಲು ಶುರುವಿಟ್ಟುಕೊಂಡರು. ನನ್ನೆದುರೇ ಬೆಳಗ್ಗೆ ಫೈಲು ಅಪ್ಪಿಕೊಂಡು ಸಣ್ಣಗೆ ನಡುಗುತ್ತ ನಿಂತಿದ್ದ ಬೆಂಗಳೂರಿನ ಹುಡುಗಿ ಸಾಕ್ಷಾತ್ ಮಮತಾ ಬ್ಯಾನರ್ಜಿಯೂ ನಾಚುವಂತೆ ವಾದ ಮಾಡತೊಡಗಿದಳು. ಇವರನ್ನೇನಾದರೂ ಬಿಟ್ಟಿದ್ರೆ ಮೂರೇ ದಿನದಲ್ಲಿ ಭಾರತಕ್ಕೆ ಸ್ವಾತಂತ್ರ ತರುತ್ತಿದ್ದರೇನೋ ಎಂಬಂತೆ ಮಾತನಾಡಿದರು ಎಲ್ಲರೂ. ಒಬ್ಬರ ಮಾತು ಮುಗಿಯುವುದರೊಳಗೆ ಇನ್ನೊಬ್ಬರದ್ದು ಶುರುವಾಗುತ್ತಿತ್ತು. ಅದಾದಕೂಡಲೇ ಮತ್ತೊಬ್ಬರು.. ನಾನು ಮಾತ್ರ ಕಿವಿಗೆ ಹೆಡ್ ಫೋನ್ ತೊಟ್ಟ ಸದನದ ಸ್ಪೀಕರ್'ನಂತೆ ಬಾಯಿತೆರದುಕೊಂಡು ನೋಡುತ್ತಲೇ ಇದ್ದೆ.
ಭಾರತಕ್ಕೆ ಐಟಿ ಬೇಕು ಅಂದೋರಿಗೆ ಕೆಲಸ ಕೊಡ್ತಾರಾ ಅಥವಾ ಬೇಡ ಅಂದೋರಿಗಾ? ಐಟಿ ಕಂಪನಿಯ ಕೆಲಸಕ್ಕೇ ಬಂದುಕೊಂಡು ಐಟಿ ಇಂಡಸ್ಟ್ರಿಯೇ ಬೇಡ ಅನ್ನೋ ಮೂರ್ಖನಿಗೆ ಯಾರು ತಾನೇ ಕೆಲಸ ಕೊಡ್ತಾರೆ? ಅಥವಾ ಐಟಿ ಕೆಲಸಕ್ಕೇ ಬಂದು ಐಟಿಯೇ ಬೇಡ ಅನ್ನೋ ಭೂಪ ಅಂತ ಮೆಚ್ಚಿ ಕೆಲಸ ಕೊಟ್ಟು ಬಿಟ್ರೆ?
ಐಟಿ ಭಾರತಕ್ಕೆ ಬೇಕು ಅನ್ಲಾ, ಬೇಡ ಅನ್ಲಾ?
ಈ ಮಿಲಿಯನ್ ಡಾಲರ್ ಪ್ರೆಶ್ನೆಗೆ ನಾನು ಉತ್ತರ ಹುಡುಕಿಕೊಳ್ಳುವಷ್ಟರಲ್ಲಿ ದಿವ್ಯವಾಣಿಯೊಂದು ಮೊಳಗಿತು:
"ಡಿಸ್ಕಶನ್ ಈಸ್ ಓವರ್!"
ಡಿಸ್ಕಶನ್ ಕೋಣೆಯಿಂದ ನಗುತ್ತಾ ಒಬ್ಬನೇ ಹೊರಬಂದ ನನ್ನನ್ನು ಅಕ್ಕ ಉದ್ವೇಗದಿಂದ ಪ್ರಶ್ನಿಸಿದಳು:
"ಒಬ್ನೇ ಬರ್ತಿದೀಯಲ್ಲೋ? ಏನಾಯ್ತೋ? ನೀನೊಬ್ನೇ ಸೆಲೆಕ್ಟ್ ಆದ್ಯಾ?"
ನಾನು ಮತ್ತೂ ನಗುತ್ತಲೇ ಹೇಳಿದೆ:
"ನಡಿ. ಮನೆಗೆ ಹೋಗೋಣ. ನಾನೊಬ್ನೇ ರಿಜೆಕ್ಟ್ ಆದೆ!"
ಆಕಾಶವೆನ್ನುವ ಆಕಾಶ ಕಳಚಿ ಎದುರಿದ್ದ ಅಕ್ಕನ ತಲೆಯಮೇಲೆ ಧಡಾಲ್ಲನೆ ಬಿತ್ತು.
"ಅದನ್ನ ಇಷ್ಟೊಂದು ನಕ್ಕೊಂಡು ಹೇಳ್ತೀಯಲ್ಲೋ?!" ಅಕ್ಕ ಕುಸಿದಂತೆ ಕುಳಿತಳು.
ಕೆಲವೊಮ್ಮೆ ನಗೆಯೆನ್ನುವುದು ನಮ್ಮ ಅಂತರಾಳದಲ್ಲಿ ನಡೆಯುತ್ತಿರುವ ಹೊಯ್ದಾಟಗಳ ತದ್ವಿರುದ್ಧ ರೂಪವಾಗಿ, ಆದ ಮುಖಭಂಗವನ್ನು ಮರೆಮಾಚುವ ಮುಖವಾಡವಾಗಿ, ಕುಸಿದ ನಂಬಿಕೆಯ ಗಾಯವೊಂದನ್ನು ಕಾಣದಂತೆ ಮಾಡುವ ತೇಪೆಯಾಗಿ ಮುಖದ ಮೇಲೆ ಮೂಡುತ್ತದೆನ್ನುವುದು ನನಗೆ ಅರ್ಥವಾದದ್ದೇ ಆಗ.
-ವಿನಾಯಕ ಅರಳಸುರಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...