ಅಂತೂ ಇಂತೂ ಚುನಾವಣೆ ಎಂಬ ಮಹಾಯುದ್ಧ ಮುಗಿದಿದೆ. ಕೆಲವರು ಗೆದ್ದು ಸೋತಿದ್ದಾರೆ. ಕೆಲವರು ಸೋತು ಗೆದ್ದಿದ್ದಾರೆ. ಇನ್ನು ಕೆಲವರು ಸೋತೆವೋ, ಗೆದ್ದೆವೋ ಎಂಬ ಗೊಂದಲದಲ್ಲೇ ಮುನ್ನಡೆಯಿಟ್ಟಿದ್ದಾರೆ. ಒಟ್ಟಾರೆಯಾಗಿ ಕವಿದ ಗೊಂದಲಗಳೆಲ್ಲ ತಾತ್ಕಾಲಿಕವಾಗಿ ಕರಗಿ ಸರ್ಕಾರವೊಂದು ರಚನೆಯಾಗಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳನ್ನು ಗಮನಿಸಿದ್ದೇ ಆದರೆ ರಾಜಕೀಯವೆನ್ನುವುದು ಹಿಂದೆಂದಿಗಿಂತ ಗಾಢವಾಗಿ ಯುವಜನತೆಯನ್ನು ತಟ್ಟಿರುವುದು ಗೋಚರವಾಗುತ್ತದೆ. ಅದು ಸ್ವಾಗತಾರ್ಹವೂ ಹೌದು. ಅದರಲ್ಲೂ ಉದ್ಯೋಗ, ಭಡ್ತಿ, ಸಂಬಳ, ಮನೆ, ಗೆಳೆಯರು, ಪ್ರವಾಸ, ಪಾರ್ಟಿ ಎಂದೆಲ್ಲ ಕೇವಲ ತಮ್ಮದೇ ವಯಕ್ತಿಕ ಚಿಂತೆಗಳೊಳಗೆ ಮುಳುಗಿಹೋಗಿದ್ದ ಸುಶಿಕ್ಷಿತ ಯುವಶಕ್ತಿ ದೇಶದ ರಾಜಕೀಯ ಭವಿಷ್ಯದ ಬಗ್ಗೆಯೂ ಕೊಂಚ ತಲೆ ಖರ್ಚು ಮಾಡಿ ನಾಲ್ಕಾರು ಕೂದಲು ಉದುರಿಸಿಕೊಳ್ಳುವಂತಾಗಿರುವುದು ಒಳ್ಳೆಯ ಲಕ್ಷಣವೂ ಹೌದು. ಆದರೆ ಅವರಲ್ಲಿ ಹೆಚ್ಚಿನವರು ತಂತಮ್ಮ ರಾಜಕೀಯ ಆಸಕ್ತಿಗಳನ್ನು ವ್ಯಕ್ತಪಡಿಸಿದ ರೀತಿಯಿದೆಯಲ್ಲ? ಅದೇ ಕೊಂಚ ಬೇಸರ ತಂದ ಸಂಗತಿ.
ಎದುರಾಳಿಯನ್ನು ಜರಿಯುವುದು, ಶತಾಯಗತಾಯ ಅವರ ಚಾರಿತ್ರ್ಯಹರಣ ಮಾಡುವುದು, ಆ ಮೂಲಕವೇ ತಾನು 'ಯೋಗ್ಯ' ಎನ್ನಿಸಿಕೊಳ್ಳಲು ಪ್ರಯತ್ನಿಸುವುದು ರಾಜಕಾರಣದ ಹುಟ್ಟುಲಕ್ಷಣ. ಈಗಂತೂ ಈ ಪ್ರಕ್ರಿಯೆ ನೂರಕ್ಕೆ ತೊಂಭತ್ತೆಂಟರಷ್ಟು ಮಿತಿಮೀರಿಯೇ ನಡೆಯುತ್ತಿದೆ. ಸುಳ್ಳು ಸುದ್ದಿಗಳಿಗೆ ರೆಕ್ಕೆ-ಪುಕ್ಕ ಕಟ್ಟಿ ಹಾರಿಬಿಡುವುದು ಸರ್ವೇಸಾಮಾನ್ಯ. ಆದು ಯಾವ ರಾಜಕಾರಣಿಗಾಗಲೀ, ರಾಜಕೀಯ ಪಕ್ಷಕ್ಕಾಗಲೀ ಹೊಸತಲ್ಲ. ಆದರೆ ಇಡೀ ನಮ್ಮ ನಾಗರಿಕ ಸಮಾಜವೇ ಈ ಅನಾಗರಿಕ ಕ್ರಮವನ್ನು ಹಿಂಬಾಲಿಸಿಕೊಂಡು ಹೋಯಿತಲ್ಲಾ? ಅದು ಚಿಂತಿಸಲೇಬೇಕಾದ ವಿಷಯ. ಪ್ರಜಾಪ್ರಭುತ್ವದೊಳಗೆ ಪ್ರಜೆಯಾಗಿ ಹುಟ್ಟಿದ ಮೇಲೆ ಯಾವುದೋ ಒಂದು ಪಕ್ಷವನ್ನು ಬೆಂಬಲಿಸುವುದು ಸಹಜ. ತಾನು ನಂಬಿದ ಸಿದ್ಧಾಂತವೇ ಶ್ರೇಷ್ಠವೆಂದು ವಾದಿಸುವುದು, ಎದುರಾಳಿಯ ಹುಳುಕು ಹಲ್ಲುಗಳ ಪಕ್ಕದಲ್ಲಿ ತಮ್ಮವರ ಅಚ್ಚಬಿಳಿಯ ದಂತಪಂಕ್ತಿಗಳನ್ನಿಟ್ಟು "ನೀವೇ ನೋಡಿ" ಎಂದು ನಾಲ್ಕು ಜನರಿಗೆ ತೋರಿಸುವುದು... ಇವೆಲ್ಲವೂ ಸರಿಯೇ. ಇಲ್ಲಿಯ ತನಕದ ಹಣ್ಣಿನಲ್ಲಿ ಯಾವ ಹುಳುವೂ ಇಲ್ಲ. ಆದರೆ ನಾವು ಬೆಂಬಲಿಸದವರು ಎಂಬ ಒಂದೇ ಒಂದು ಕಾರಣಕ್ಕೆ ಎದುರಾಳಿಯನ್ನು ಹೀನಾಮಾನವಾಗಿ ಆಡಿಕೊಳ್ಳುವುದಿದೆಯಲ್ಲಾ? ಅದೇಕೋ ಸರಿಯೆನ್ನಿಸುವುದಿಲ್ಲ. ಅದರಲ್ಲೂ ಸುಳ್ಳು ಎಂದು ಗೊತ್ತಿದ್ದೂ ಕೆಲವೊಂದು 'ಸೃಷ್ಟಿಸಲ್ಪಟ್ಟ' ವದಂತಿಗಳನ್ನು ಹಬ್ಬಿಸುವುದು, ಅಪಾಯಕಾರಿಯಾದ ದ್ವೇಷವನ್ನು ಸಮಾಜದ ಉದ್ದಗಲಕ್ಕೂ ಹರಡುವುದು, ಆದ ಅನಾಹುತಗಳನ್ನು ಜಾತ್ಯಾತೀತವಾಗಿ ಖಂಡಿಸುವ ಬದಲು ನೋವಿಗೂ-ಸಾಂತ್ವನಕ್ಕೂ ಒಂದು ವರ್ಗವನ್ನು ಸೃಷ್ಟಿಸುವುದು... ಇವೆಲ್ಲ ನಮ್ಮ ಕೈತೋಟದೊಳಕ್ಕೆ ನಾವೇ ಬಿಟ್ಟುಕೊಳ್ಳುವ ವಿಷ ಕ್ರಿಮಿಗಳಂಥವು. ಏಕೆಂದರೆ ಚುನಾವಣೆಯೇನೋ ನಾಲ್ಕೈದು ತಿಂಗಳಲ್ಲಿ ಮುಗಿದುಹೋಗುತ್ತದೆ. ಗೆದ್ದ ಅಭ್ಯರ್ಥಿ ಕೆಲ ಸಾವಿರಗಳನ್ನು ಕಾರ್ಯಕರ್ತರತ್ತ ಎಸೆದು, ಅಭಿಮಾನಿಗಳತ್ತ ಕೈ ಬೀಸುತ್ತಾ ಎತ್ತರದ, ಬೆಚ್ಚಗಿನ ಸಿಂಹಾಸನದತ್ತ ನಡೆದುಬಿಡುತ್ತಾನೆ. ಆದರೆ ಅವನ ಗೆಲುವಿಗಾಗಿ ದುಡಿದ, ಅವರ ಬಹುಪರಾಕುಗಳನ್ನೂ, ಎದುರಾಳಿಯ ಮುರ್ದಾಬಾದ್ ಗಳನ್ನೂ ಹಂಚಿ ಹರಡಿದ, ಅವನಿಗೋಸ್ಕರ ಆದಷ್ಟೂ ದೊಣ್ಣೆ ಹಿಡಿದು ಬಡಿದಾಡಿದ, ಸಾಧ್ಯವಾದಷ್ಟೂ ಮನೆ-ಮನಗಳನ್ನು ಮುರಿದ ಸಾಮಾನ್ಯ ಜನರಿದ್ದಾರಲ್ಲ? ಅವರು ಮರಳಿ ಬರಬೇಕಿರುವುದು ಮತ್ತದೇ ಸಾಮಾನ್ಯ ಜಗತ್ತಿಗೆ! ನಿನ್ನೆಯ ತನಕ ಅವರೇ ಹರಿಯ ಬಿಟ್ಟಿದ್ದ, ಯಾವಾಗ ಬೇಕಾದರೂ ವಿಷ ಕಕ್ಕಬಲ್ಲ, ಅದೇ ದ್ವೇಷದ ಮಿನ್ನಾಗರಗಳು ಚಾಪೆಯ ಕೆಳಗೆಲ್ಲೋ ಸರಿದಾಡುತ್ತಿರುವ ಕತ್ತಲ ಸಮಾಜಕ್ಕೆ. ತಮ್ಮದಲ್ಲದ ಸೋಲು - ಗೆಲುವುಗಳನ್ನು ಜನ ಬಹಳ ಬೇಗ ಮರೆತು ಹೋಗುತ್ತಾರೆ. ಆದರೆ ಆ ಒಂದು ಗೆಲುವಿಗಾಗಿ ಹರಡಿದ ದ್ವೇಷವಿದೆಯಲ್ಲ? ಅದು ಅಷ್ಟು ಸುಲಭಕ್ಕೆ ವಾಸಿಯಾಗುವುದಿಲ್ಲ.
ಈಗ ಯುವಜನರ ವಿಷಯಕ್ಕೆ ಮರಳಿ ಬರೋಣ. ಈ ಸಲದ ಚುನಾವಣೆ ಮತ್ತೆಲ್ಲ ಮಾಧ್ಯಮಗಳಿಗಿಂತ ಹೆಚ್ಚಾಗಿ ಪ್ರಸಾರವಾಗಿದ್ದು ಸಾಮಾಜಿಕ ಜಾಲತಾಣಗಳ ಮುಖೇನ. ಅತ್ಯಗಾಧ ಸಂಖ್ಯೆಯ ವೀಕ್ಷಕರಿರುವ, ಬೆರಳಂಚಿನ ಮೂಲಕವೇ ಅವರೆಲ್ಲರ ಮನಸ್ಸನ್ನು ತಲುಪಬಲ್ಲ, ಕವಡೆ ಕಾಸಿನ ಶ್ರಮವಿಲ್ಲದೇ ಅವರೆಲ್ಲರೂ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಮಾಡಬಲ್ಲ, ಅವರನ್ನು ಕೆರಳಿಸಿ, ಹೊರಳಿಸಬಲ್ಲ ಸುಲಭ ಮಾಧ್ಯಮವೆಂದರೆ ಅದು ಸಾಮಾಜಿಕ ಜಾಲತಾಣಗಳೇ ಎಂಬುದು ಪ್ರತಿಯೊಂದು ಪಕ್ಷವೂ ಅರಿತುಕೊಂಡಿರುವ ಸತ್ಯ. ಅಂತೆಯೇ ಅವರು ಅದನ್ನು ಬಳಸಿಕೊಂಡರು ಕೂಡಾ. ಆದರೆ ಹಿಂದಿನಿಂದಲೂ ಅವರು ನಡೆಸಿಕೊಂಡು ಬಂದಿರುವ ಈ ಮತ ಬೇಟೆಯ ಇಂದ್ರಜಾಲದಾಟಗಳಿಗೆ ಹಿಂದೆಂದಿಗಿಂತ ಸುಲಭವಾಗಿ ಮತ್ತು ಅಗಾಧವಾಗಿ ಸೋತವರು ನಮ್ಮ ಯುವಜನ. ಇದನ್ನು ಅವರ 'ಸೋಲು' ಎಂದು ಏಕೆ ಹೇಳುತ್ತಿದ್ದೇನೆಂದರೆ ತಟಸ್ಥವಾಗಿ ನಿಂತು ಸರಿ-ತಪ್ಪುಗಳ ಗುರುತಿಸಬಲ್ಲ ಬುದ್ಧಿಮತ್ತೆಯಿದ್ದೂ ಶತಮಾನದಿಂದ ನಡೆಯುತ್ತಾ ಬಂದಿರುವ ಕಣ್ಕಟ್ಟು ಪ್ರದರ್ಶನಗಳನ್ನು ಬಹಳ ಸುಲಭವಾಗಿ ಒಪ್ಪಿಕೊಂಡು, ತಾವೂ ಅದನ್ನೇ ಮುಂದುವರಿಸಿದರಲ್ಲಾ? ಅದು ನಿಜಕ್ಕೂ ಸೋಲೇ ಸರಿ!
ಇಲ್ಲಿ ನಾನು ಒಂದು ಪಕ್ಷವನ್ನು ಒಪ್ಪಿ ಅದಕ್ಕೆ ಮತ ಹಾಕುವುದರ ಬಗ್ಗೆ ಹೇಳುತ್ತಿಲ್ಲ. ಆದರೆ ತಾನು ನಂಬುವ ಪಕ್ಷದ ಕೀರ್ತಿ ಪತಾಕೆಯನ್ನು ಹಾರಾಡಿಸುವ ಭರದಲ್ಲಿ ನಾವು ನಡೆದುಕೊಂಡ ರೀತಿಯಿದೆಯಲ್ಲ? ಅದೇ ನಮ್ಮ ನಿಜವಾದ ಸೋಲು! ಚಿಕ್ಕದೊಂದು ಉದಾಹರಣೆ ಕೊಡುತ್ತೇನೆ: ಚುನಾವಣೆಗೆ ಸುಮಾರು ಒಂದು ತಿಂಗಳಿತ್ತೇನೋ. ಫೇಸ್ಬುಕ್ಕಿನಲ್ಲಿ ಸರ್ವಪಕ್ಷಗಳ ಬೆಂಬಲಿಗರೂ ಮನಸೋ ಇಚ್ಛೆ ಕಚ್ಚಾಡುತ್ತಿದ್ದರು. ಎಲ್ಲದರ ಮಧ್ಯೆ ಬಹುದೊಡ್ಡ ಹುದ್ದೆಯಲ್ಲಿರುವ ಮಾನ್ಯ ಮಂತ್ರಿಗಳೊಬ್ಬರು ನೀಡಿದರು ಎನ್ನಲಾದ ತೀರಾ ಕೆಳಮಟ್ಟದ ಹೇಳಿಕೆಯೊಂದನ್ನು ಸಾರುತ್ತಿರುವ ಫೋಟೋವೊಂದು ಯಾರೋ ಹಾಕಿದ್ದರು. ಮೊದಲ ನೋಟಕ್ಕೇ ಅದು ಸುಳ್ಳು ಸೃಷ್ಟಿಯೆಂಬುದು ಎಂತಹಾ ದಡ್ಡನಿಗಾದರೂ ಗೊತ್ತಾಗುವಂತಿತ್ತಾದರೂ ಅದನ್ನೇ ಮುಂದಿಟ್ಟುಕೊಂಡ ಜನ ಶಕ್ತಿ ಮೀರಿ ಬೈದಾಡಿಕೊಳ್ಳುತ್ತಿದ್ದರು. ಬಹು ಮುಖ್ಯವಾಗಿ ಅದು ಎರೆಡು ಪಂಗಡಗಳ ಭಾವನೆಗಳನ್ನು ಕೆರಳಿಸುವಂತಹಾ ಪೋಸ್ಟ್ ಆಗಿತ್ತು. ಇದೆಲ್ಲ ಸಾಮಾನ್ಯ ಸಂಗತಿಯಾದರೂ ಕಟ್ಟಕಡೆಗೆ ಎರಡು ಅಂಶಗಳು ಬಹಳ ಬೇಸರ ತರಿಸಿದವು. ಒಂದು: ತಾನು ಹಾಕುತ್ತಿರುವುದು ಸುಳ್ಳಾಂಬಟ್ಟೆ ಸಂದೇಶವೆಂಬುದು ಗೊತ್ತಿದ್ದೇ ಆ ವ್ಯಕ್ತಿ ಅದನ್ನು ಹಾಕಿದ್ದ. ಕೆಲವರು ಆ ಅಂಶವನ್ನೇ ಎತ್ತಿ ಕೇಳಿದಾಗ "ನಿಮ್ಮ ಪಕ್ಷದವರೂ ಇದನ್ನೇ ಮಾಡುತ್ತಿರುವಾಗ ನಾನೇಕೆ ಮಾಡಬಾರದು?" ಎಂಬ ಉದ್ಧಟತನದ ಉತ್ತರ ಕೊಟ್ಟ. ಎರೆಡು: ಹೀಗೆ ವಿತಂಡ ವಾದದ ಮೂಲಕ ಪ್ರಚಾರ ಪಡೆಯುತ್ತಿದ್ದವನು ಯಾವುದೋ ಪಕ್ಷದ ಕಾರ್ಯಕರ್ತನಾಗಿರದೆ ಪ್ರತಿಷ್ಠಿತ ಕಂಪನಿಯೊಂದರ ಪ್ರತಿಭಾನ್ವಿತ ಎಂಜಿನಿಯರಾಗಿದ್ದ!
ಹೌದು. ಎಂಜಿನಿಯರಾದರೂ, ಮತ್ತೊಬ್ಬನಾದರೂ ಎಲ್ಲರೂ ಮನುಷ್ಯರೇ. ಆದರೆ ಇಲ್ಲಿ ಅಷ್ಟೆಲ್ಲ ಓದಿಕೊಂಡೂ ಕುರುಡು ಅಭಿಮಾನಕ್ಕೋ, ಮತ್ತೊಂದಕ್ಕೋ ತನ್ನ ವಿವೇಚನೆಯನ್ನು ಸೇಲ್ ಮಾಡಿಕೊಂಡ ಈ ಸುಶಿಕ್ಷಿತನಿಗೂ, ಒಂದು ಬಾಟಲಿ ಸಾರಾಯಿಗೆ ತನ್ನ ಮತವನ್ನು ಮಾರಿಕೊಳ್ಳುವ ಒಬ್ಬ ಅಶಿಕ್ಷಿತನಿಗೂ ನಡುವೆ ಏನಾದರೂ ವ್ಯತ್ಯಾಸ ಉಳಿಯಿತಾ? ಇಬ್ಬರೂ ಮಾಡಿರುವುದೂ ಒಂದೇ ಅಚಾತರ್ಯವಲ್ಲವಾ? ಹಾಗೆ ನೋಡಿದರೆ ಆ ಗಾಂಪ ಕುಡಿದು, ಮತ ಹಾಕಿ ತನ್ನ ಪಾಡಿಗೆ ಹೋಗಿ ಯಾವುದೋ ರಸ್ತೆಯ ಮಧ್ಯದಲ್ಲೋ, ಮೋರಿಯ ಮಡಿಲಿನಲ್ಲೋ ಬಿದ್ದುಕೊಳ್ಳುತ್ತಾನೆ. ಆದರೆ ಈ ಪಂಡಿತ ತನಗೇರಿರುವ ಅಂಧ ನಶೆಯ ಜೊತೆ ಇನ್ನೂ ಹತ್ತು ಜನರ ನಡುವೆ ಬೆಂಕಿ ಹಚ್ಚುತ್ತಿದ್ದಾನೆ!
ಇದೊಂದು ಚಿಕ್ಕ ಉದಾಹರಣೆಯಷ್ಟೇ. ಹೀಗೆ, ಎಲುಬಿದ್ದೂ ಇಲ್ಲದಂತಿರುವ ಬೆರಳ ತುದಿಯಿಂದ ಸಾವಿರಾರು ನೀಚ ಸುದ್ದಿಗಳನ್ನು ಸೃಷ್ಟಿಸಿ ಸಮಾಜದ ಸ್ವಾಸ್ಥ್ಯದ ನಡುವೆ ಹರಿಯಬಿಟ್ಟವರು ಹಲವರಿದ್ದಾರೆ. ಅವುಗಳ ಸತ್ಯಾಸತ್ಯತೆಗಳ ತಿಳಿಯುವ ತಾಳ್ಮೆಯಿಲ್ಲದೆ, ಕೆಲವೊಮ್ಮೆ ತಿಳಿದೂ ತಿಳಿಯದಂತೆ ಶೇರ್, ಲೈಕ್ ಕಮೆಂಟ್ ಮಾಡುವ ಮೂಲಕ ನಾವೂ ಅದರ ಭಾಗವಾಗಿದ್ದೇವೆ. ಎದುರಾಳಿಯನ್ನು ವಾಚಾಮಗೋಚರ ನಿಂದಿಸುವುದೇ ದಿಟ್ಟತನದ ಪರಮಾವಧಿಯೆಂಬಂತೆ ವರ್ತಿಸಿದ್ದೇವೆ. ನಮ್ಮನ್ನು ನಾವೇ ನೇರ-ದಿಟ್ಟ-ನಿರಂತರರೆಂದು ಘೋಷಿಸಿಕೊಂಡು ಹೆಗಲು ತಟ್ಟಿಕೊಂಡಿದ್ದೇವೆ. ಎದುರಾಳಿ ಹೇಳಿದ ಒಂದು ಮಾತು ಕಿವಿಗೆ ಬಿದ್ದರೆ ಸಾಕು, ಅವನ ವಂಶವೃಕ್ಷಕ್ಕೇ ಕೈ ಹಾಕಿ ಅಲ್ಲಡಿಸಿಬಿಡುತ್ತೇವೆ. ಅವನು ಏನು ಹೇಳುತ್ತಿದ್ದಾನೆ? ಯಾವ ವಿಷಯದ ಬಗ್ಗೆ ಮಾತನಾಡುತ್ತಿದ್ದಾನೆ? ಅಲ್ಲಿ ಸತ್ಯವಿದೆಯಾ? ಅದರಿಂದೇನಾದರೂ ಕಲಿಯುವುದಿದೆಯಾ? ಊಹೂಂ... ಅಷ್ಟು ಮಾತ್ರದ ತಾಳ್ಮೆ ನಮಗ್ಯಾರಿಗೂ ಇಲ್ಲವೇ ಇಲ್ಲ. ಪ್ರತಿಯೊಬ್ಬ ವ್ಯಕ್ತಿಯನ್ನೂ ಈಗಾಗಲೇ ನಮ್ಮ (ಮೂಢ)ನಂಬಿಕೆಗೆ ತಕ್ಕಂತೆ ಒಂದು ಪಕ್ಷದ ಪ್ರಚಾರಕನೆಂದು ನಮಗೆ ನಾವೇ ನಿರ್ಧರಿಸಿಕೊಂಡಿದ್ದೇವೆ. ಅವನ ಪ್ರತಿಯೊಂದು ಕ್ರಮವನ್ನೂ ಹಳಿಯಲು ತಯಾರಾಗಿಯೇ ನಿಂತಿರುತ್ತೇವೆ. ಸಾಲದೆಂಬಂತೆ ನಾವು ಬೆಂಬಲಿಸುವವರ ವಿರುದ್ಧ ಒಂದೇ ಒಂದು ಹೆಜ್ಜೆಯಿಟ್ಟ ಕಾರಣಕ್ಕೇ ಹೀನಾತಿಹೀನ ಮಾತುಗಳನ್ನಾಡಿ ತಣಿಯುತ್ತೇವೆ. ಪರಿಸ್ಥಿತಿಯ, ವಾಸ್ತವದ ನಿಜವಾದ ಚಿತ್ರ ನಮ್ಮ ಕಣ್ಣುಗಳನ್ನು ತಲುಪುವುದೇ ಇಲ್ಲ. ಇದು ಅತಿಯಾದ ಬುದ್ಧಿವಂತಿಕೆ, ಅಭಿಮಾನ ಹಾಗೂ ಅಹಂನ ಪರಾಕಾಷ್ಠೆಗಳು ತಂದಿಟ್ಟಿರುವ ವಿವೇಚನಾಹೀನತೆಯಲ್ಲದೆ ಮತ್ತೇನಲ್ಲ. ನಾವಾಡುವ ಅವಾಚ್ಯಗಳು ನಮ್ಮ ವ್ಯಕ್ತಿತ್ವವನ್ನು ತಗ್ಗಿಸುತ್ತವೇ ಹೊರತು ಎದುರಾಳಿಯನ್ನಲ್ಲ.
ಈ ಎಲ್ಲ ಆವೇಶಗಳಾಚೆ ನಾವು ಮರೆತಿರುವ ಸಂಗತಿಯೆಂದರೆ, ಯಾವ ಪ್ರಚಾರ, ಪ್ರಹಸನ, ವಿಕಾಸ, ಕ್ರಾಂತಿಗಳಾದರೂ ಅವು ನಡೆಯಬೇಕಿರುವುದು ಸಾವಿರಾರು ಜನರಿರುವ ಈ ಸಮಾಜದೊಳಗೆಯೇ. ಇಲ್ಲಿ ನಾವು ಹಚ್ಚುವ ಸಣ್ಣ ಕಿಡಿಗೂ ಹೊತ್ತಿ ಉರಿಯಬಲ್ಲ ನೂರು ತರಗೆಲೆಗಳಿವೆ. ಇಂದು ಯಾರದೋ ತಾತ್ಕಾಲಿಕ ಗೆಲುವಿಗಾಗಿ ನಾವು ಅನುಸರಿಸುತ್ತಿರುವ ಕೀಳು ಹಾದಿಗಳು, ಹರಡುತ್ತಿರುವ ಮುಳ್ಳುಗಳು ಮುಂದೊಂದು ದಿನ ಮುಳ್ಳು ಹಾಗು ಮುಳ್ಳು ಮಾತ್ರವೇ ಬೆಳೆಯಬಲ್ಲ ಜಾಲಿಯ ಮರವಾಗಲಿದೆಯೆಂಬ ಸತ್ಯ ನಮಗೆಲ್ಲ ಅರಿವಾಗಬೇಕಿದೆ. ಎದುರಾಳಿಯನ್ನು ಕೆರಳಿಸುವ ಮೂಲಕ ನಾವು ಹೊಂದಲೆತ್ನಿಸುತ್ತಿರುವ ವಿಕೃತ ಆನಂದ ಕೊನೆಯಾಗಬೇಕಿದೆ. ದ್ವೇಷ ಮತ್ತೆ ಮತ್ತೆ ತನ್ನನ್ನು ಹೊಂದುವಂತೆ 'ಟೆಮ್ಟ್' ಮಾಡುವ ನಿಕೋಟಿನ್ ನಂತೆ. ಅದನ್ನು ದೂರವಿಡುವುದೊಂದೇ ಅದರಿಂದ ಪಾರಾಗಲು ಇರುವ ದಾರಿ.
-ವಿನಾಯಕ ಅರಳಸುರಳಿ.
(ನಿಮ್ಮೆಲ್ಲರ ಮಾನಸ ಜುಲೈ 2018ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ.)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ