ಶನಿವಾರ, ಜನವರಿ 19, 2019

ವಂದಲಗನ ಸೊಪ್ಪು ಮರೀಬೇಡೀ..


"ಏನಾದ್ರೂ ಕಳ್ಕೊಂಡ್ರಾ ಅಜ್ಜಿ?"
ಒಂದು ಕೈಯ್ಯಲ್ಲಿ ಕೈಚೀಲವನ್ನು ಹಿಡಿದು, ಇನ್ನೊಂದರಿಂದ ಬಗಲಲ್ಲಿರುವ ವ್ಯಾನಿಟಿ ಬ್ಯಾಗ್ ನೊಳಗೆ ತಡಕಾಡುತ್ತಿದ್ದ ಅಜ್ಜಿ ತಲೆಯೆತ್ತಿ ನೋಡಿದಳು. ಎದುರುಗಡೆ ಹಲ್ಕಿರಿಯುತ್ತಾ ನಿಂತಿದ್ದಾನೆ ಮುದುಕ! ತನಗಿಂತ ವಯಸ್ಸಾದವನು ತನ್ನನ್ನು 'ಅಜ್ಜಿ' ಎಂದದ್ದು ಆಕೆಗೆ ರೇಗಿಹೋಯಿತು. "ಅದೆಲ್ಲಾ ನಿಮಗ್ಯಾಕೆ? ಸುಮ್ಮನೆ ನಿಮ್ಮೆದೆಷ್ಟೋ ಅಷ್ಟು ನೋಡಿಕೊಂಡು ಮುಂದೆ ಹೋಗಿ" ಎಂದು ಮುದುರುಬಿದ್ದ ಕಣ್ಣುಗಳನ್ನು ಕೆಂಪಗೆಮಾಡುತ್ತಾ ಬಿರುಸಾಗಿ ನುಡಿದಳು.
"ಮುಂದೆ ಹೋಗು ಅನ್ನೋದಕ್ಕೆ ನಾನೇನು ಭಿಕ್ಷೆ ಕೇಳಿದೆನಾ? ಪರಿಚಯದ ಅಜ್ಜಿ,
ಪಾಪ ಏನೋ ಹುಡುಕುತ್ತಿದ್ದಾರಲ್ಲಾ ಅಂತ ಕೇಳಿದೆ ಅಷ್ಟೇ" ವೃದ್ಧನ ಮುಖದಲ್ಲಿನ ಮಂದಹಾಸ ಹಾಗೇ ಇತ್ತು.
"ಏನು ಪರಿಚಯ? ನಾನಂತೂ ಇದೇ ಮೊದಲು ನಿಮ್ಮನ್ನ ನೋಡ್ತಿರೋದು. ಇನ್ನೆಲ್ಲಿಂದ ಬರ್ಬೇಕು ಪರಿಚಯ" ಮತ್ತೆ ಮತ್ತೆ ತನ್ನನ್ನು ಅಜ್ಜಿ ಎನ್ನುವ ಅಜ್ಜನ ಮೇಲೆ ಆಕೆಗಿನ್ನೂ ಕೋಪ ಹೋಗಿಲ್ಲ.
"ನೀವು ನೋಡದೇ ಇರಬಹುದು. ಆದರೆ ನಾನು ನೋಡಿದೀನಲ್ಲಾ! ನಿಮ್ಮ ಮನೆಯ ಹತ್ತಿರಾನೇ ನಾನೂ ಇರೋದು."
"ಅಷ್ಟಕ್ಕೇ ಹೀಗೆ ಮದ್ಯ ದಾರಿಯಲ್ಲಿ ಅಡ್ಡಹಾಕಿ ಮಾತನಾಡಿಸಬಹುದೂ ಅಂದುಕೊಂಡ್ರಾ? ಇಷ್ಟು ವಯಸ್ಸಾಗಿದೆ, ಸಭ್ಯತೆ ಬೇಡ್ವಾ?"
"ನೀವು ಏನು ಹುಡುಕ್ತಿದೀರಾಂತ ನಂಗೆ ಗೊತ್ತು ಅಜ್ಜೀ" ಅವಳ ಕೋಪವನ್ನ ಗಮನಿಸಿಯೇ ಇಲ್ಲದಂತೆ ನಗುತ್ತಾ ನುಡಿದರು.
"ಏನು?"
"ನಿಮ್ಮ ಮನೆಯ ವಿಳಾಸವಿರುವ ಚೀಟಿಯನ್ನ ತಾನೇ?"
"ಅದು..... ನಿಮಗ್ಹೇಗೆ ಗೊತ್ತಾಯ್ತು?" ಅಜ್ಜಿಗೆ ಪರಮಾಶ್ಚರ್ಯ.
"ನನಗೆಲ್ಲಾ ಗೊತ್ತು. ನಾನೂ ಅತ್ತಕಡೆಯೇ ಹೊರಟಿದ್ದೇನೆ. ಬನ್ನಿ ನಿಮ್ಮನ್ನೂ ಮನೆ ತಲುಪಿಸ್ತೇನೆ" ಅಜ್ಜನ ಮುಖದಲ್ಲಿ ಗೆಲುವಿನ ಮಂದಹಾಸ.
"ನಾನ್ಯಾಕೆ ನಿಮ್ಮ ಜೊತೆ ಬರ್ಲಿ? ನನಗೆ ನಮ್ಮ ಮನೆಯ ದಾರಿ ಗೊತ್ತಿದೆ" ಅಜ್ಜಿಯ ಬಿಂಕದ ನುಡಿ.
"ಹಾಗಾದರೆ ಮತ್ಯಾಕೆ ವಿಳಾಸದ ಚೀಟಿ ಹುಡುಕ್ತಿದ್ರಿ?"
".................."
"ಪರವಾಗಿಲ್ಲ ಬನ್ನಿ. ನೀವು ಮನೇ ದಾರಿ ಮರೆತ್ರೀಂತ ನಿಮ್ಮ ಯಜಮಾನ್ರಿಗೆ ಹೇಳಲ್ಲ ನಾನು"
"ಅವರು ನಿಮಗೆ ಗೊತ್ತಾ?" ಅಜ್ಜಿಗೆ ಮತ್ತೊಮ್ಮೆ ಅಚ್ಚರಿ.
"ಬುದ್ಧಿ ಬಂದಾಗಿಂದಾನೂ ಗೊತ್ತು"
"ಆದ್ರೆ ನಾನ್ಯಾವತ್ತೂ ನಿಮ್ಮನ್ನು ನೋಡೇ ಇಲ್ವಲ್ಲಾ?"
"ನಾನು ನೋಡಿದೀನಲ್ಲ"
ಹೆಜ್ಜೆಗಳು ಬೆರೆತು ಮುನ್ನಡೆದವು.
"ಅಲ್ಲಾ... ಮನೆ ದಾರಿ ಮರೆಯೋರು ಹೊರಗ್ಯಾಕೆ ಬರ್ತೀರ?" ಅಜ್ಜನ ಕುಹುಕ.
"ನಾನೇನು ದಾರಿ ಮರ್ತಿಲ್ಲ. ಈ ಬೆಂಗ್ಳೂರಲ್ಲಿ ಎಲ್ಲಾ ಬೀದಿಗಳು ಒಂದೇ ಥರಾ ಕಾಣ್ತಾವೆ. ಅದ್ಕೆ ಸ್ವಲ್ಪ ಗೊಂದಲ ಅಷ್ಟೇ"
ಸಮರ್ಥಿಸಿಕೊಳ್ಳುತ್ತಾ ಮುಂದುವರಿಸಿದಳು:
"ನಾಳೆಯಿಂದ ಬೇಸಿಗೆ ರಜೆ ಆರಂಭ. ನನ್ನ ಮೊಮ್ಮಗ ಬರ್ತಿದಾನೆ ಅಮೆರಿಕಾದಿಂದ. ಅವನಿಗೆ ದೂದ್ ಪೇಡ ಅಂದ್ರೆ ತುಂಬಾ ಇಷ್ಟ. ಆದ್ರೆ ಅವನಮ್ಮ ಇದೆಲ್ಲಾ ತಿನ್ನೋಕೆ ಬಿಡಲ್ಲ. ಅವಳಿಲ್ಲದಾಗ ನನ್ಹತ್ರ ಗಲಾಟೆ ಮಾಡ್ತಾನೆ ಪೇಡ ಕೊಡಿಸು ಅಂತ. ಅದಕ್ಕೆ ಈಗಲೇ ತಗೊಂಡೆ, ಅವರು ಬಂದ್ಮೇಲೆ ಪುರ್ಸೊತ್ತಾಗಲ್ಲ ಅಂತ."
"ಓಹೋ ಹೌದಾ....."
"ಸಣ್ಣವನಿದ್ದಾಗ ನನ್ನ ಮಗನಿಗೂ ಹಾಗೇ, ಪೇಡ ಅಂದ್ರೆ ಪ್ರಾಣ. ಆಗೆಲ್ಲಾ ನಾನು ಮನೆಲೇ ಮಾಡಿಕೊಡ್ತಿದ್ದೆ. ಈಗ ವಯಸ್ಸಾಯ್ತು ನೋಡಿ. ಮಾಡೋಕಾಗಲ್ಲ"
"ಹಾಂ. ನಿಜ ನಿಜ. ಆದ್ರೂ ಅದಕ್ಕೆ ನೀವೇ ಬರ್ಬೇಕ? ಎಷ್ಟೊಂದು ವಾಹನಗಳು ಓಡಾಡೋ ರಸ್ತೆ ಇದು"
"ಇನ್ಯಾರಿದಾರೆ ಹೇಳಿ? ನನ್ನ ಹೆಂಡತಿ ಮಕ್ಕಳಷ್ಟೇ ನನ್ನ ಪ್ರಪಂಚ ಅಂತ ಮಗ ದೂರ ಹೋದ. ಇರೋ ಒಂದು ಕಿರಾಣಿ ಅಂಗಡಿಯೇ ನನ್ನ ಜಗತ್ತು ಎನ್ನುತ್ತಾ ಗಂಡ ಹೊರಗೆ ಹೋಗ್ತಾರೆ. ಅಂದ್ಮೇಲೆ ಇವರೆಲ್ಲರೂ ನನ್ನ ಪ್ರಪಂಚ ಅಂದುಕೊಂಡಿರುವ ನಾನೇ ಈ ಎಲ್ಲಾ ಕೆಲಸ ಮಾಡಬೇಕಲ್ವಾ.....?"
ಮುದುಕನ ಮುಖದಲ್ಲಿ ಕಳವಳಿಕೆಯೊಂದು ಹಾದು ಹೋಯಿತು.
"ಅಂದಹಾಗೇ ನಿಮ್ಮನೆಯಲ್ಲಿ ಈ ವಂದಲಗ ಏನಾದ್ರೂ ಬೆಳೆದಿದೀರ? ಇದ್ದರೆ ಇವರ ಹತ್ರ ಕೊಟ್ಟು ಕಳಿಸ್ತೀರ? ಅದರ ಲೇಹ ಮಾಡಿ ಕಳಿಸ್ಬೇಕು. ದಿನಾ ಬೆಳಗ್ಗೆ ತಿಂದ್ರೆ ಮೊಮ್ಮಗನ ನೆನಪಿನ ಶಕ್ತಿ ಹೆಚ್ಚಾಗುತ್ತೆ. ಪಾಪ, ಚಿಕ್ಕ ವಯಸ್ಸಿಗೇ ಅದೆಷ್ಟೆಲ್ಲಾ ಕಲೀಬೇಕು ಅವ್ನು ."
"ಹೂಂ, ಇರ್ಬೇಕು ನೋಡ್ತೀನಿ"
ಮನೆ ಬಂತು. ಬಾಗಿಲು ತೆರೆದ ಕೆಲಸದವಳು ವೃದ್ಧನನ್ನು ನೋಡಿ ತಲೆತಗ್ಗಿಸಿ ನಿಂತಳು. ಒಳಗೆ ಬಂದೊಡನೆಯೇ ಕೈಲಿದ್ದ ಪೇಡದ ಪೊಟ್ಟಣವನ್ನು ಫ್ರಿಜ್ಜಿನಲ್ಲಿಡಲೆಂದು ಅಡುಗೆ ಕೋಣೆಗೆ ನಡೆದವಳನ್ನೇ ನೋಡುತ್ತಾ ಅಜ್ಜ ಜೇಬಿನಿಂದ ಮೊಬೈಲ್ ತೆಗೆದು ಕಿವಿಗಿಟ್ಟುಕೊಂಡರು. "ಹಲೋ ಮಾಣಿ... ಹುಡುಕೋದು ಬೇಡ, ಅನುಸೂಯ ಸಿಕ್ಕಿದ್ಲು... ಮತ್ತೆ ಸ್ವೀಟ್ಸ್ ಅಂಗಡಿಗೆ ಹೋಗಿದ್ಲು, ಮೊಮ್ಮಗನಿಗೆ ಪೇಡ ತರ್ತೀನಿ ಅಂತ. ಮನೇಗೆ ಕರ್ಕೊಂಡ್ಬಂದೆ. ಕೆಲಸವಳು ಇದಾಳೆ ಜೊತೆಗೆ. ನೀನು ಅಂಗ್ಡೀಗೆ ಬಾ. ನಾನೂ ಹೊರ್ಟಿದೀನಿ....."
ಮೊಬೈಲ್ ಜೇಬಿಗಿಳಿಸಸಿದವರು ಅಲ್ಲೇ ನಿಂತಿದ್ದ ಕೆಲಸದವಳಿಗೆ "ಜೋಪಾನ. ಮತ್ತೆ ಆಚೆ ಹೋಗದಂಗೆ ನೋಡ್ಕೋ" ಎಂದು ಗಡುಸುದನಿಯಲ್ಲಿ ತಾಕೀತು ಮಾಡಿದರು. ಅಷ್ಟರಲ್ಲಿ ಅವರ ನೋಟ ಗೋಡೆಯತ್ತ ಸರಿಯಿತು....
ಅಲ್ಲಿ ತನ್ನ ಸುತ್ತಲೂ ಗಂಧದ ಹಾರ ಹಾಕಿಸಿಕೊಂಡು ತಣ್ಣಗೆ ನಗುತ್ತಾ ನಿಂತಿತ್ತು, ವರುಷದ ಕೆಳಗೆ ಅಪಘಾತಕ್ಕೀಡಾದ ಅವರ ಮಗ, ಸೊಸೆ ಹಾಗೂ ಮೊಮ್ಮಗನ ಫೋಟೋ....
ಅದನ್ನೇ ಅರೆಕ್ಷಣ ದಿಟ್ಟಿಸಿ ನಿಟ್ಟುಸಿರಿಟ್ಟು ಅಡಿಗೆ ಮನೆಯತ್ತ ಮತ್ತೊಮ್ಮೆ ತುಂಬುಗಣ್ಣಿಂದ ನೋಡಿದರು. ಭಾರವಾದ ಹೆಜ್ಜೆಗಳನ್ನಿಡುತ್ತಾ ಹೊರಗೆ ನಡೆದವರಿಗೆ ಬಾಗಿಲಿನಿಂದ ಹೇಳಿತು ಆ ದನಿ..
"ವಂದಲಗನ ಸೊಪ್ಪು ಮರೀಬೇಡೀ....."
(ವಿಶ್ವವಾಣಿಯಲ್ಲಿ ಪ್ರಕಟವಾದ ನನ್ನ ಕಿರು ಕಥೆ.)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...