ಇವತ್ತು ಸ್ನೇಹಿತರ ದಿನ. ಬೆಳಗ್ಗೆ ಎದ್ದ ಹಾಸಿಗೆಯಲ್ಲೇ ವಾಟ್ಸಾಪ್ ತೆರೆದು ಚಂದದ ಪೋಸ್ಟೊಂದನ್ನು ಸೆಲೆಕ್ಟ್ ಮಾಡಿ ಕಾಂಟ್ಯಾಕ್ಟ್ ಲೀಸ್ಟ್ ನಲ್ಲಿರುವ ಎಲ್ಲ ಸ್ನೇಹಿತರಿಗೂ ಕಳಿಸಿದೆ. ಅವರಲ್ಲಿ ಹಲವರಿಂದ ಅಂಥಾದ್ದೇ ಒಂದು ಪೋಸ್ಟ್ ತಿರುಗಿಬಂತು. ಜೋಶ್ ನಲ್ಲಿ ನಮ್ಮ ಹಾಲಿ ಕಂಪನಿಯ ಬಾಸ್ ಗೂ ಒಂದು ಪೋಸ್ಟ್ ಇನ್ನೇನು ಫಾರ್ವರ್ಡ್ ಆಗುವುದರಲ್ಲಿತ್ತು! ಪುಣ್ಯಕ್ಕೆ ಕೊನೆಯ ಕ್ಷಣದಲ್ಲಿ ಮತ್ತೊಮ್ಮೆ ಚೆಕ್ ಮಾಡಿದ್ದರಿಂದ ಆಗಲಿದ್ದ ಅನಾಹುತ ತಪ್ಪಿಹೋಯಿತು. ಇಲ್ಲದಿದ್ದರೆ ಮುಂದೊಮ್ಮೆ ಏನಾದರೂ ಯಡವಟ್ಟು ಮಾಡಿ ಸಿಕ್ಕಿಹಾಕಿಕೊಂಡಾಗ "ನಿಮಗೆ ಫ್ರೆಂಡ್ಶಿಪ್ ಡೇ ಮೆಸೇಜ್ ನ ತಪ್ಪಿಲ್ದೇ ಕಳಿಸೋಕೆ ಬರುತ್ತೆ. ಅದೇ ಆಫೀಸ್ ಕೆಲಸ ಸರಿಯಾಗಿ ಮಾಡೋಕೆ ಬರಲ್ಲ ಅಲ್ವಾ?" ಎಂದು ಬೈಸಿಕೊಳ್ಳುವ ಅಪಾಯವಿತ್ತು. ಪುಣ್ಯ. ದೇವರು ದೊಡ್ಡವನು. ತಪ್ಪಿಸಿಬಿಟ್ಟ.
ಬಿಡಿ, ವಿಷಯ ಅದಲ್ಲ. ಸ್ನೇಹಿತರ ದಿನದಂದು ಇರುವವರು ನೆನಪಾಗುವುದು ವಾಡಿಕೆ. ಆದರೆ ಇವತ್ತೇಕೋ ಇಲ್ಲದೇ ಇರುವವನೊಬ್ಬ ಅಚಾನಕ್ಕಾಗಿ ನೆನಪಾದ. ನಿಜ ಹೇಳಬೇಕೆಂದರೆ ಅವನು ನನ್ನ ಗೆಳೆಯನೇ ಅಲ್ಲ. ಅವನ ಜೊತೆಗೆ ಕಳೆದ ಯಾವ ನೆನಪೂ ನನಗಿಲ್ಲ, ಇದೊಂದರ ಹೊರತಾಗಿ:
ಅದು ಬಹುಷಃ ನನ್ನ ಶಾಲೆಯ ಮೊದಲ ದಿನ. ಆಗೆಲ್ಲ ಈಗಿನಂತೆ ಮಾತನಾಡಲಿಕ್ಕೂ ಬಾರದ ವಯಸ್ಸಗೇ ಶಾಲೆಗೆ ಕಳಿಸುವ ಪರಿಪಾಠ ಇದ್ದಿರಲಿಲ್ಲ ನೋಡೀ? ನನಗಾಗಲೇ ಆರು ವರ್ಷ ತುಂಬಿತ್ತು. ಜೀವನದಲ್ಲಿ ಮೊದಲ ಬಾರಿಗೆ ಅಪ್ಪ-ಅಮ್ಮನನ್ನ, ಅದರಲ್ಲೂ ಎಸ್ಪೆಷಲೀ ಅಪ್ಪನನ್ನ ಬಿಟ್ಟು ಒಂದಿಡೀ ದಿನ ಕಳೆದಿದ್ದೆ. ಸಂಜೆ ನಾಲ್ಕೂ ಮೊವ್ವತ್ತಾಗಿತ್ತು. ಇನ್ನೇನು ಲಾಂಗ್ ಬೆಲ್ ಹೊಡೆದು ನಾವೆಲ್ಲ ಮನೆಗೆ ಹೊರಡಬೇಕಿತ್ತು.
ಆದರೆ ಬೆಲ್ ಹೊಡೆಯಲೇ ಇಲ್ಲ.
ನಾನಂತೂ ಗಾಬರಿಯಾಗಿಬಿಟ್ಟಿದ್ದೆ. ಯಾಕೆ ಬೆಲ್ ಹೊಡೆದಿಲ್ಲ? ನಾನು ಇವತ್ತಿಡೀ ಶಾಲೆಯಲ್ಲೇ ಇರಬೇಕಾಗತ್ತಾ? ಇನ್ನೂ ಏನೇನೋ ಯೋಚನೆಗಳು ಮನಸ್ಸಿನಲ್ಲಿ ಬಂದು ಅಳು ಬರುವಂತಾಗಿತ್ತು. ಆಗಲೇ ನಾನವನನ್ನು ಮಾತನಾಡಿಸಿದ್ದು.
ಸರಿಯಾಗಿ ನೆನಪಿದೆ. ಅವನ ಹೆಸರು ನವೀನ. ಮುಖದ ಎರೆಡೂ ಕಡೆ ಇಳಿಬಿದ್ದ ಉದ್ದ ಕೂದಲು. ಗುಂಡಿ ಅಂಗಿ. ಚಡ್ಡಿ. ಉದ್ದದ ಕ್ಯಾಟೆಲ್ ಒಂದರಲ್ಲಿ ಮಧ್ಯಾಹ್ನದ ಊಟ ತುಂಬಿಸಿಕೊಂಡು ಬರುತ್ತಿದ್ದ. ಜೋಗಿ ಚಿತ್ರದಲ್ಲಿ ಶಿವಣ್ಣ ಚಿಕ್ಕವರಿದ್ದಾಗಿನದೊಂದು ಪಾತ್ರ ಬರುತ್ತದಲ್ಲ? ಥೇಟ್ ಹಾಗೇ ಇದ್ದ. ಬಹುಷಃ ನನ್ನ ಪಕ್ಕವೇ ಕುಳಿತಿದ್ದನೋ ಏನೋ, ಸರಿಯಾಗಿ ನೆನಪಿಲ್ಲ. ಅಳು ಮುಖ ಮಾಡಿಕೊಂಡೇ 'ಶಾಲೆ ಯಾವಾಗ ಬಿಡ್ತಾರೆ?' ಅಂತ ಕೇಳಿದ್ದೆ. ಅವನು ತನ್ನ ಗೊಜಗೊಜ ಧ್ವನಿಯಲ್ಲಿ ಉತ್ತರಿಸಿದ್ದ:
"ದಾಂತಿ ಆದ್ಮೇಲೆ ಬಿಡ್ತಾರೆ!"
ಕನ್ಫ್ಯೂಸ್ ಆದ್ರಾ? ಹೆದರಬೇಡಿ. ನಿಮ್ಮ ಜೊತೆಗೆ ನಾನೂ ಇದ್ದೇನೆ. ದೇವರಾಣೆಗೂ ನನಗೂ ಏನೂ ಅರ್ಥವಾಗಿರಲಿಲ್ಲ. ಇವತ್ತಿಗೂ ಆಗಿಲ್ಲ. ನಾನು ಸುಮಾರು ಸಲ ಅವನನ್ನು ಪ್ರಶ್ನಿಸಿದ್ದೆ. ಅವನು ಮತ್ತೆ ಮತ್ತೆ ಅದೇ ಉತ್ತರ ಕೊಟ್ಟಿದ್ದ:
"ದಾಂತಿ.. ದಾಂತಿ ಆದ್ಮೇಲೆ ಬಿಡ್ತಾರೆ!"
ಈ ದಾಂತಿ ಅಂದರೆ ಏನು? ದಾಂತಿ ಮಾಡೋದಂದ್ರೆ ಏನು ಮಾಡಬೇಕು? ಅಷ್ಟಕ್ಕೂ ಅದು ಈ ಗ್ರಹದ ಮನುಷ್ಯರು ಮಾಡುವ ಕೆಲಸವೇ ಹೌದಾ? ಈ ಯಾವ ಪ್ರೆಶ್ನೆಯನ್ನೂ ದಯವಿಟ್ಟು ಕೇಳಬೇಡಿ. ಉತ್ತರ ನನಗೂ ಗೊತ್ತಿಲ್ಲ. ಆದರೆ ಅವನು ಮಾತ್ರ ಅದೊಂದು ಉತ್ತರವನ್ನು ಬಿಟ್ಟು ಮತ್ತೇನೂ ಹೇಳಿರಲಿಲ್ಲ. ಅವನ ಈ ಅನ್ಯಗ್ರಹ ಭಾಷೆಯಿಂದ ಮತ್ತಷ್ಟು ಕನ್ಫ್ಯೂಸ್ ಆದ ನಾನು ಕುಳಿತಲ್ಲೇ ಇಪ್ಪಳಿಸಿ ಇಪ್ಪಳಿಸಿ ಅಳಲಾರಂಭಿಸಿದ್ದೆ. ನಿಜ ಹೇಳಬೇಕೆಂದರೆ ಆ ಹೊತ್ತಿಗಾಗಲೇ ಶಾಲೆ ಬಿಡುವ ಲಾಂಗ್ ಬೆಲ್ ಹೊಡೆದಾಗಿತ್ತು. ಆದರೆ ನಮ್ಮ ಕ್ಲಾಸಿನವರು ಸೂರು ಹಾರಿಹೋಗುವಂತೆ ಗಲಾಟೆ ಮಾಡಿಕೊಂಡಿದ್ದರಿಂದ ಆ ಶಬ್ದ ಯಾರಿಗೂ ಕೇಳಿಸಿಯೇ ಇರಲಿಲ್ಲ. ಕೊನೆಗೆ ಕೋಲಿನ ಸಮೇತ ಬಂದ ಮಾಸ್ತರು ನಮಗದನ್ನು ಮನವರಿಕೆ ಮಾಡಿಕೊಟ್ಟರು.
ಹಾಗೆ ಗೊಜಗೊಜ ಮಾತಾಡುತ್ತಿದ್ದ ನವೀನ ಎಷ್ಟು ಸಮಯ ನಮ್ಮ ಶಾಲೆಯಲ್ಲಿದ್ದ? ಆಮೇಲೇನಾದ? ಅವನ ಊರು ಯಾವುದು? ಈಗೆಲ್ಲಿದ್ದಾನೆ? ಯಾವುದೂ ಗೊತ್ತಿಲ್ಲ. ಆದರೆ "ದಾಂತಿ ಆದ್ಮೇಲೆ" ಎನ್ನುವ ವಾಕ್ಯ ಹಾಗೂ ಉದ್ದ ಕೂದಲು ಗಿಡ್ಡ ಚಡ್ಡಿಯ ಆ ಅಸ್ಪಷ್ಟ ಆಕಾರ ಮಾತ್ರ ಮನಸ್ಸಿನಲ್ಲಿ ಉಳಿದುಹೋಗಿದೆ.
-ವಿನಾಯಕ ಅರಳಸುರಳಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ