ಶನಿವಾರ, ಜನವರಿ 19, 2019

ನಮ್ಮೊಳಗೇ ಬೆಳೆವ ಓದು...





ಸಾಹಿತ್ಯದ ಓದು ತಾಳ್ಮೆ ಹಾಗೂ ಏಕಾಗ್ರತೆಯನ್ನು ಬೇಡುವ ಕ್ರಿಯೆ. ಇನ್ನೊಂದರ್ಥದಲ್ಲಿ ಅದು ತಾಳ್ಮೆ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುವ ಪ್ರಕ್ರಿಯೆ. ದೃಶ್ಯ ಮಾಧ್ಯಮಕ್ಕೆ ತನ್ನದೇ ಆದ ವ್ಯಾಪ್ತಿಯಿದೆ. ಆದರೆ ಓದು ಹಾಗಲ್ಲ. ಅದು ಕಲ್ಪನಾವಿಲಾಸವನ್ನು ಅರಳಿಸುತ್ತದೆ. ಅಪರಿಮಿತ ವ್ಯಾಪ್ತಿಯಲ್ಲಿ ಅರಳಿನಿಲ್ಲುತ್ತದೆ. ಉದಾಹರಣೆಗೆ ತೇಜಸ್ವಿಯವರ ಕಾಡಿನ ಕಥೆಗಳನ್ನು ಓದುವಾಗ ಅರಣ್ಯವೆಂಬುದು ಪ್ರತಿಯೊಬ್ಬ ಓದುಗನ ಮನದಲ್ಲೂ ಒಂದೊಂದು ರೂಪದಲ್ಲಿ, ಬೃಹತ್ ವ್ಯಾಪ್ತಿಯಲ್ಲಿ ಹಬ್ಬಿನಿಲ್ಲುತ್ತದೆ. ಏಕೆಂದರೆ ಅದರ ನೇರ ಸಂಪರ್ಕವಿರುವುದೇ ಮನುಷ್ಯನ ಕಲ್ಪನೆಗಳ ಜೊತೆಗೆ. ಕಥೆಯಾಗಲೀ, ಕವನವಾಗಲೀ ಅಥವಾ ಲೇಖನವೇ ಆಗಲಿ, ತನ್ನ ಕೊನೆಯ ಸಾಲಿನ ಕಟ್ಟಕಡೆಯ ಪೂರ್ಣವಿರಾಮದ ನಂತರವೂ ಅದರ ಮುಂದುವರಿದ ಭಾಗವೊಂದನ್ನು ಓದುಗನ ಮನದಲ್ಲಿ ಬಿತ್ತುವ ಸಾಲು ಸಾಹಿತ್ಯಕ್ಕಿದೆ. ಗೊತ್ತು ಗುರಿಯಿಲ್ಲದೆ ಅಲೆಯುವ ಮನದ ಯೋಚನೆಗಳು ಸತ್ಯದ ಗಾಳಿಯಲ್ಲಿ ಕೇರಲ್ಪಟ್ಟು ಸರಿ-ತಪ್ಪುಗಳಾಗಿ ವಿಂಗಡಿಸಲ್ಪಡುವುದು ಸಾಹಿತ್ಯದ ಮೂಸೆಯಲ್ಲೇ.
ಸಾಹಿತ್ಯ ಹುಟ್ಟಿರುವುದೇ ಅನುಭವದಿಂದ. ಹಾಗಾಗಿಯೇ ಅದು ಒಂದಿಲ್ಲೊಂದು ರೀತಿಯಲ್ಲಿ ಎಲ್ಲರ‌ ಬದುಕಿನೊಂದಿಗೂ ಬೆಸೆದುಕೊಂಡಿದೆ. ಕಾಯ್ಕಿಣಿಯವರ ಕಥೆಯೊಂದರಲ್ಲಿ ಓದಿದ್ದ 'ಸಾವಿಗಾಗಲೀ, ಊರಿಂದ ಬರುವ ಯಾವುದೋ ಕೆಟ್ಟ ಸುದ್ದಿಗಾಗಲೀ ಹೆದರದ ಊರು ಬಿಟ್ಟು ಪಟ್ಟಣಕ್ಕೆ ಬರುವ ಕಾರ್ಮಿಕರು ಖಾಯಿಲೆ ಬೀಳುವುದಕ್ಕೆ ಹೆದರುತ್ತಾರೆ' ಎಂಬ ಸಾಲು, ಮಹಾನಗರಿಯ ಒಂಟಿ ಕೋಣೆಯಲ್ಲಿ ಖಾಯಿಲೆ ಬಂದು ಶೃಶ್ರೂಷೆ ಮಾಡುವರಿಲ್ಲದೆ ಮಲಗಿದ ಕ್ಷಣಗಳಲ್ಲಿ ಮತ್ತೆ ಮತ್ತೆ ನೆನಪಾಗಿ ಕಾಡಿದ್ದಿದೆ‌. ಅಷ್ಟೇ ಅಲ್ಲ, ಸಾಹಿತ್ಯವೆನ್ನುವುದು ಏಕಾಂತದ ಕೋಣೆಯಲ್ಲಿ ಕಣ್ಣೆದುರೇ ಉರಿಯುತ್ತಿರುವ ಆತ್ಮಾವಲೋಕನದ ದೀಪ. ಮನುಷ್ಯ ತನ್ನ ಬದುಕಿನ ಅದೆಷ್ಟೋ ಅಪರಾಧಗಳನ್ನು ಮೌನವಾಗಿ ಒಪ್ಪಿಕೊಳ್ಳುವುದೇ ಅಲ್ಲಿ. ಯಾವುದೋ ಕಥೆಯಲ್ಲಿ ಪಾತ್ರವೊಂದು ತಾನು ಎದುರಿಸಿದ ತಲ್ಲಣಗಳನ್ನು ಹೇಳಿಕೊಳ್ಳುವಾಗ ಪ್ರಾಮಾಣಿಕ ಓದುಗನೊಬ್ಬನ ಮನದಲ್ಲಿ ಅಂತಹದೇ ಶೋಷಣೆಯೊಂದಕ್ಕೆ ತಾನೂ ಕಾರಣನಾದ ಘಟನೆಯೊಂದು ನೆನಪಾಗಿಯೇ ಆಗುತ್ತದೆ. ಪಶ್ಚಾತ್ತಾಪದ ಕಿಡಿಯೊಂದು ಸಣ್ಣಗೆ ಹೊಗೆಯಾಡುತ್ತದೆ. ಏಕೆಂದರೆ ಅಲ್ಲಿ ಓದುಗ ಹಾಗೂ ಅವನ ಅಂತರಾತ್ಮದ ಹೊರತಾಗಿ ಮಾತ್ತಾರೂ ಇರುವುದಿಲ್ಲ. ಹೀಗೆ ಸಾಹಿತ್ಯದ ಪುಟಗಳಲ್ಲಿ ಕಲಿಯುವ ಪಾಠಗಳಿಗೆ ಬದಕಿನ ಕಟ್ಟಕಡೆಯ ಹೆಜ್ಜೆಯ ತನಕ ಜೊತೆಗೇ ನಡೆದುಬರುವ ಕಸುವಿದೆ.
ಸಾಹಿತ್ಯವೆನ್ನುವುದು ಮನುಷ್ಯ ತನ್ನನ್ನು ತಾನೇ ಸಂಧಿಸುವ ದಿವ್ಯ ತಾಣ. ವಸುಧೇಂದ್ರರು ತಮ್ಮ ಲಲಿತ ಪ್ರಬಂಧಗಳ ಮೂಲಕ ಕಟ್ಟಿಕೊಡುವ ಬಾಲ್ಯ ನಮ್ಮದೇ ಅಲ್ಲವೇ? ಅಲ್ಲಿ ಬರುವ ಊರು, ಊರ ಹೊರಗಿನ ಬೆಟ್ಟ, ಬೆಟ್ಟದ ಮೇಲಿನ‌ ಗುಡಿ,‌ ಊರ ನಡುವಿರುವ ಶಾಲೆ, ಆ ಶಾಲೆಗೆ ಲೇಖಕರನ್ನು ತಯಾರುಮಾಡಿ ಕಳಿಸಿಕೊಡುವ ಅವರ ತಾಯಿ... ಹೀಗೆ ಹಿಂದೆಂದೋ ನಾವು ಬಿಟ್ಟುಬಂದ ನಮ್ಮದೇ ಬದುಕಿನ ತುಣುಕುಗಳೆಲ್ಲ ಪುಸ್ತಕದ ಪುಟವೊಂದರಲ್ಲಿ ಬಿಡಿಬಿಡಿಯಾಗಿ ಮತ್ತೆ ಸಿಗುವ ಅದ್ಭುತವಿರುವುದು ಸಾಹಿತ್ಯದಲ್ಲಿ ಮಾತ್ರ. ಯಾವುದೋ ಬರಹವೊಂದರಲ್ಲಿ ಬರುವ ತಾಯಿಯ ಪಾತ್ರಕ್ಕೆ ನಮ್ಮ ಅಮ್ಮನದೇ ಮುಗ್ಧ ಮುಖವನ್ನು ನೆನಪಿಸುವ ತಾಕತ್ತಿದೆ. ನಮ್ಮ ಜೊತೆಯಲ್ಲೇ ಇರುವ ಸಂಬಂಧವೊಂದರ ಮಹತ್ವವನ್ನು ನಾವು ಕಥೆಯ ಪಾತ್ರವೊಂದರಿಂದ ತಿಳಿದುಕೊಳ್ಳುತ್ತೇವೆ. ಏಕೆಂದರೆ ಇರುವ ಒಂದೇ ಬದುಕನ್ನು, ಕಣ್ಣೆದುರಿನ ಅದೇ ಜಗತ್ತನ್ನು ಬೇರೆಬೇರೆ ದೃಷ್ಟಿಕೋನಗಳಿಂದ ಚಿತ್ರಿಸುವ ಹಾಗೂ ಬೇರೊಬ್ಬರ ಕಣ್ಣಿನಿಂದ ನೋಡುವಂತೆ ಮಾಡುವ ಅದಮ್ಯ ಶಕ್ತಿ ಸಾಹಿತ್ಯಕ್ಕಿದೆ.
ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಮನುಷ್ಯ ತನ್ನ ಅಂತರಂಗದಿಂದ ತಾನೇ ದೂರಾಗುತ್ತಿದ್ದಾನೆಂಬುದು ನಿಜವಾದರೂ ಕಾಲದ ಚಕ್ರ ತಿರುಗಿದಂತೆ ಮುಂದೊಂದು ದಿನ ನಾವು ಕಳೆದುಕೊಳ್ಳುತ್ತಿರುವುದೇನೆಂಬುದು ನಮಗೆ ಅರಿವಾಗಿಯೇ ಆಗುತ್ತದೆ.
(ವಿಜಯಕರ್ನಾಟಕದ ಲವಲVKಯಲ್ಲಿ ಪ್ರಕಟವಾದ ಬರಹ)
-ವಿನಾಯಕ ಅರಳಸುರಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...