ಸೋಮವಾರ, ಮೇ 8, 2017

ಅಜ್ಜನ ಊರು ಹಾಗೂ ಅಲ್ಲಿನ ದೆವ್ವದ ಕಥೆಗಳು...

ನೀವು ಈ ದೆವ್ವ-ಭೂತಗಳನ್ನು ನಂಬ್ತೀರಾ? ನಾನಂತು ನಂಬುತ್ತೇನೆ. ನಾನೇನೋ ಹಗಲಿನ ಹೊತ್ತಿನಲ್ಲಿ ಜೊತೆಗಿರುವ ಮೂರುವರೆ ಪೈಸೆ ಧೈರ್ಯದಲ್ಲಿ 'ಈ ದೆವ್ವ ಗಿವ್ವ ಎಲ್ಲಾ ಸುಳ್ಳು' ಅನ್ನೋದು; ಅದು ಇಲ್ಲೇ ಯಾವುದೋ ಹುಣಿಸೆ ಮರದಲ್ಲಿ ನೇತಾಡುತ್ತಿರುವ ದೆವ್ವವೊಂದರ ಕಿವಿಗೆ ಬೀಳೋದು; ಆಮೇಲೆ ರಾತ್ರಿಯಾಗಿ ಎಲ್ಲರೂ ಮಲಗಿದ ಮೇಲೆ ಅದು ಮರದಿಂದ ಇಳಿದು ನೇರ ನನ್ನ ರೂಮಿಗೆ ಬಂದು "ಏನಂದೆ ಮಗನೇ? ಇನ್ನೊಂದ್ಸಲ ಹೇಳು" ಅಂತ ಕೋರೆಹಲ್ಲು ತೋರಿಸಿ ನಗೋದು; ಆಮೇಲೆ ನಾನು.......
ಇದೆಲ್ಲಾ ಯಾಕೆ ಬೇಕು ಹೇಳಿ? ಅದಕ್ಕೇ ನಾನು ಈ ದೆವ್ವಗಳನ್ನ ಕೆರಳಿಸುವಂತಹ ಯಾವ ಹೇಳಿಕೆಗಳನ್ನು ಕೊಡಬಾರದೂಂತ ನಿರ್ಧರಿಸಿಬಿಟ್ಟಿದ್ದೇನೆ!

ಹಾಗಂತ ನೀವು ನನ್ನ ಹೆದರುಪುಕ್ಲ ಅಂತ ಆಡಿಕೊಳ್ಳೋದೇನೂ ಬೇಡ. ನಮ್ಮ ಮನೆಯಲ್ಲಿ ಇರೋದ್ರಲ್ಲಿ ನಾನೇ ಧೈರ್ಯವಂತ! ಅಪ್ಪ, ಅಮ್ಮ ಹಾಗೂ ತಮ್ಮ ರಾತ್ರಿ ಹೊತ್ತಲ್ಲಿ ಹೊರಗೆ ಓಡಾಡುವ ವಿಷಯದಲ್ಲಿ ಪುಕ್ಕಲರೇ! ಈ ವಿಷಯದಲ್ಲಿ ನಾನೇ ಇದ್ದಿದ್ದರಲ್ಲಿ ಗಟ್ಟಿಗ. ನಮ್ಮ ಮನೆ ಇರೋದು ನಮ್ಮೂರಿನ ಮುಖ್ಯ ರಸ್ತೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ. ಬೀದಿ ದೀಪಗಳಿಲ್ಲದ, ಅಕ್ಕಪಕ್ಕ ಮನೆಗಳೂ ಇಲ್ಲದ ಮಣ್ಣ ದಾರಿಯಲ್ಲಿ ಮರಗಳ ಮಧ್ಯೆ, ಮಧ್ಯರಾತ್ರಿಯಲ್ಲಿ ಸಹಾ ಒಬ್ಬನೇ ನಡೆದುಬರುತ್ತೇನೆಂಬ ಕಾರಣಕ್ಕೆ ನನಗೆ ಈ ಧೈರ್ಯಶಾಲಿಯೆಂಬ ಬಿರುದು ಬಂದಿದ್ದು.

ಆದರೆ ನಿಜದಲ್ಲಿ ನನ್ನ ಅವಸ್ಥೆ ನನಗೆ ಮಾತ್ರ ಗೊತ್ತು! ಮೊದಲು ನಾನು ಊರಿನಲ್ಲಿದ್ದಾಗ ಅಪರೂಪಕ್ಕೆ ಊರಿಗೆ ಬರುತ್ತಿದ್ದ ಗೆಳೆಯರನ್ನು ಭೇಟಿಯಾಗಿ, ರಾತ್ರೆ ಒಂಭತ್ತರ ತನಕ ಊರೆಲ್ಲಾ ತಿರುಗಿ, ನಂತರ ಒಬ್ಬನೇ ನಡೆದು ಮನೆಗೆ ಬರುತ್ತಿದ್ದೆ. ಊರಿನ ಟಾರ್ ರಸ್ತೆಯಿಂದ ನಮ್ಮ ಕೇರಿಯ ಮಣ್ಣ ರಸ್ತೆಗೆ ತಿರುಗಿ ಇಪ್ಪತ್ತು ಮೊವತ್ತು ಹೆಜ್ಜೆ ನಡೆದರೆ ಎಡಭಾಗದಲ್ಲಿರುವ ಇಳಿಜಾರಿನಲ್ಲಿ ತುಂಬಾ ಹಳೆಯ ಕಾಲದ ಬಾವಿಯೊಂದಿದೆ. ಅದರ ಪಕ್ಕದಲ್ಲೇ ದಟ್ಟವಾದ ಪೊದೆಗಳಿಂದಾವೃತವಾದ ಬೃಹತ್ ಅತ್ತಿಯ ಮರವೂ ಇದೆ. ಅದು ಭೀಕರವಾದ ಸರ್ಪಗಳ ವಾಸಸ್ಥಾನವೆಂದು ಅಪ್ಪ ಆಗಾಗ ಹೇಳುತ್ತಾರೆ. ಅಲ್ಲದೇ ಕೆಲವು ವರ್ಷಗಳ ಕೆಳಗೆ ಸುಮಾರು ಹದಿಮೂರು ಅಡಿ ಉದ್ದದ ಕಾಳಿಂಗ ಸರ್ಪವೊಂದು ಅದೇ ಪೊದರಿನಿಂದ ಹೊರಬಂದು ಎದುರೇ ಇರುವ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನುಗ್ಗಿದ್ದನ್ನ ನಾನೇ ಕಣ್ಣಾರೆ ನೋಡಿದ್ದೇನೆ. ಸಾಲದ್ದಕ್ಕೆ ನಾನು ಚಿಕ್ಕವನಿದ್ದಾಗ ಸುಕ್ಕಡ್ಯಾ ಎನ್ನುವವನೊಬ್ಬ ಅದೇ ಬಾವಿಗೆ ಬಿದ್ದು ಸತ್ತಿದ್ದ ಕೂಡಾ! ಬಾವಿಯ ನೀರಿನಲ್ಲಿ ಮುಖ ಕೆಳಗಾಗಿ ತೇಲುತ್ತಿರುವ ಸುಕಡ್ಯಾನ ಚಿತ್ರ ಈಗಲೂ ಕಣ್ಮುಂದೆ ಹಾಗೇ ಇದೆ. ಇಷ್ಟೆಲ್ಲಾ ಭೀಬತ್ಸಗಳಿರುವ ದಾರಿಯಲ್ಲಿ ರಾತ್ರೆ ಒಬ್ಬನೇ ನಡೆಯುವಾಗ ಎಲ್ಲವೂ ನೆನಪಾಗುತ್ತದೆ. ಮತ್ತೆ ಮತ್ತೆ ಹಿಂದಕ್ಕೆ- ಮುಂದಕ್ಕೆ ಮೊಬೈಲ್ ಟಾರ್ಚ್ ಹಾಕಿ ಸಮೀಪದಲ್ಲಿ ಯಾವುದೇ ದೆವ್ವವಾಗಲೀ, ಕಾಳಸರ್ಪವಾಗಲೀ ಇಲ್ಲವೆಂದು ಖಚಿತಪಡಿಸಿಕೊಳ್ಳುತ್ತಾ, ಸಣ್ಣ ಸದ್ದಾದರೂ ಬೆಚ್ಚಿಬೀಳುತ್ತ, ಮನಸ್ಸಿನಲ್ಲೇ ಗಾಯತ್ರೀ ಮಂತ್ರ ಪಠಿಸುತ್ತಾ ಹೇಗೋ ಮನೆತಲುಪದಮೇಲೇ ಗಟ್ಟಿಯಾಗಿ ಉಸಿರಾಡುತ್ತೇನೆಂಬುದು ಗೊತ್ತಿಲ್ಲದ  ಮನೆಯವರು ನನ್ನನ್ನು ಧೈರ್ಯಶಾಲಿ ಎಂದು ತಿಳಿದಿದ್ದರು!

ಆದರೆ ಕೊನೆಗೂ ಒಮ್ಮೆ ನಾನೆಂತಹ ರಣಧೀರನೆಂಬುದು ಎಲ್ಲರಿಗೂ ಗೊತ್ತಾಗಿಹೋಯಿತು. ಅದು ನಾನು ಕೊನೆಯ ವರ್ಷದ ಡಿಗ್ರಿ ಓದುತ್ತಿದ್ದ ಸಮಯ. ಆಗಷ್ಟೇ ಹೊಸದಾಗಿ ಮ್ಯೂಸಿಕ್ ಕೇಳಬಲ್ಲ ಮೊಬೈಲ್ ಖರೀದಿಸಿದ್ದೆ. ರಾತ್ರೆ ಎಲ್ಲರೂ ಮಲಗಿದ ಮೇಲೆ ಸ್ವಲ್ಪ ಹೊತ್ತು ಕಿವಿಗೆ ಇಯರ್ ಫೋನ್ ಚುಚ್ಚಿಕೊಂಡು  ಅಂಗಳದ ಕತ್ತಲಲ್ಲಿ ಅತ್ತಿಂದಿತ್ತ ಓಡಾಡುತ್ತಾ ಹಾಡುಕೇಳುವುದು ನನ್ನ ನಿತ್ಯದ ಅಭ್ಯಾಸ. ಎಷ್ಟೇ ಆದರೂ 'ಧೈರ್ಯಶಾಲಿ'ಯಲ್ವಾ! ಅಂದೂ ಕೂಡಾ ಹಾಗೇ ಅತ್ತಿಂದಿತ್ತ, ಇತ್ತಿಂದತ್ತ ನಡೆದಾಡುತ್ತಾ ಹಾಡು ಕೇಳುತ್ತಿದ್ದೆ; ಥಟ್ಟನೆ ಕಾಲಿಗೆ ಏನೋ ಸಿಲುಕಿಂದಂತಾಯಿತು. ಅದೇನೆಂದು ಪರೀಕ್ಷಿಸಲು ಕಾಲನ್ನು ಮೆಲ್ಲಗೆ ಅಲ್ಲಾಡಿಸಿದೆ. ಆಗಲೇ ನನಗೆ ಗೊತ್ತಾಗಿದ್ದು...

ಘಟಸರ್ಪವೊಂದು ನನ್ನ ಕಾಲಿಗೆ ಸುತ್ತಿಕೊಂಡಿತ್ತು!!!

ಕೈಯ್ಯಲ್ಲಿದ್ದ ಇಯರ್ ಫೋನನ್ನು ಮೊಬೈಲ್ ನ ಸಮೇತ ಎಸೆದು "ಅಯ್ಯಯ್ಯಪ್ಪಾ.... ಹಾವೂ..." ಎಂದು ಸೀದಾ ಮನೆಯಕಡೆ ಓಡಿದೆ. ಕಾಲಿಗೆ ಸುತ್ತಿಕೊಂಡಿದ್ದ ಆ ಕ್ರೂರ ಸರ್ಪವೂ ನನ್ನನ್ನು ಹಿಂಬಾಲಿಸಿತು. ನನ್ನ ಹಾಹಾಕಾರ ಕೇಳಿ ಬೆಚ್ಚಿಬಿದ್ದು ಎಚ್ಚರಾದ ಅಪ್ಪ ಅಮ್ಮ, ಕೈಗೆ ಸಿಕ್ಕಿದ ಕಟ್ಟಿಗೆ, ಪೊರಕೆಗಳನ್ನು ಹಿಡಿದುಕೊಂಡು ತಮ್ಮ ಧೀರ ಪುತ್ರನನ್ನು ಬೆನ್ನಟ್ಟಿಬರುತ್ತಿರುವ ಘಟಸರ್ಪಕ್ಕೊಂದು ಗತಿ ಕಾಣಿಸಲು ಸಿದ್ಧರಾಗಿ ನಿಂತರು.. ಅಷ್ಟರಲ್ಲಿ ತಮ್ಮ ಲೈಟ್ ಹಾಕಿದ. ಎಲ್ಲಿ ನೋಡಿದರೂ ಹಾವಿನ ಸುಳಿವೇ ಇಲ್ಲ! ಅಷ್ಟು ಬೇಗ ಎಲ್ಲಿ ಹೋಯಿತೆಂದು ಹುಡುಕುತ್ತಾ ಎಲ್ಲರೂ ಅಂಗಳದೆದುರಿನ ಬಾಗಿಲಿನತ್ತ ಬಂದೆವು. ಅಲ್ಲಿ ಬಿದ್ದಿತ್ತು.... ಗೊಬ್ಬರದ ಚೀಲಗಳನ್ನು ಹೊಲಿಯಲು ಬಳಸುವ ಮಾರುದ್ದದ ಪ್ಲಾಸ್ಟಿಕ್ ಹಗ್ಗ!

ಆಗಿದ್ದಿಷ್ಟೇ: ಅಂಗಳದ ಮಧ್ಯದಲ್ಲಿ ಸುರುಳಿಯಾಗಿ ಬಿದ್ದಿದ್ದ ಹಗ್ಗ ನಡೆದಾಡುವಾಗ ನನ್ನ ಕಾಲಿಗೆ ಸುತ್ತಿಕೊಂಡಿದೆ. ಮೊದಲೇ ತಲೆಯ ತುಂಬಾ ಪ್ರೇತ, ಸರ್ಪಾದಿಗಳನ್ನು ತುಂಬಿಕೊಂಡಿರುವ ನಾನು ಅದನ್ನೇ ಹಾವೆಂದೆಣಿಸಿ ಜೀವಭಯದಲ್ಲಿ ಓಟ ಕಿತ್ತಿದ್ದೆ. ಕಾಲಿಗೆ ಸುತ್ತಿಕೊಂಡು ಬಾಗಿಲ ತನಕ ಜೊತೆಗೇ ಬಂದ ಹಗ್ಗ ಬಾಗಿಲ ಬುಡದಲ್ಲಿ ಜಾರಿಹೋಗಿತ್ತು.

ಸರಿರಾತ್ರಿಯಲ್ಲಿ ನನ್ನನ್ನು ಇಷ್ಟೆಲ್ಲಾ ಅಟ್ಟಾಡಿಸಿದ ಆ ಭಯಾನಕ ಸರ್ಪವನ್ನು ನೋಡುತ್ತಾ ಮೂವರೂ ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದರೆ ನಾನು ಮಾತ್ರ ಅದನ್ನು ಸುಟ್ಟುಬಿಡುವಂತೆ ಗುರಾಯಿಸುತ್ತಾ ನಿಂತೆ....

                  *******************

ದೆವ್ವಗಳು ಇವೆಯೋ ಇಲ್ಲವೋ, ಅವುಗಳ ಹೆಸರಿನಲ್ಲಿ ಹತ್ತುಹಲವು ಸ್ವಾರಸ್ಯಕರ ಕಥೆಗಳಿರುವುದಂತೂ ನಿಜ. ನನ್ನ ಅಜ್ಜನ ಮನೆಯಿರುವುದು ಸಾಗರ ತಾಲೋಕಿನ ಒಂದು ಹಳ್ಳಿಯಲ್ಲಿ.  ಅಲ್ಲಿ ಒಳಗೊಳಗೆ ಹೋದಂತೆಲ್ಲಾ ಪ್ರತೀ ಕಿಲೋಮೀಟರ್ ಗೆ ಮೂರೋ ನಾಲ್ಕೋ ಮನೆಗಳಿವೆ ಅಷ್ಟೇ. ಈಗ ಸಂಖ್ಯೆ ಜಾಸ್ತಿಯಾಗಿದೆ ಬಿಡಿ; ಗುಡ್ಡ, ಬೆಟ್ಟ, ಕಾಡುಗಳೇ ಹೆಚ್ಚಾಗಿರುವ ಆ ಊರಿನಲ್ಲಿ ದೆವ್ವ-ಭೂತದ ಕಥೆಗಳು ಅನೇಕ. ನನಗೆ ಅಜ್ಜ ಹಾಗೂ ಅಮ್ಮ ಹೇಳಿದ ಕೆಲವೊಂದು ಕಥೆಗಳನ್ನು ನಿಮಗೂ ಹೇಳುತ್ತೇನೆ ಕೇಳಿ:

ಅಜ್ಜನ ಮನೆಯಿರುವುದು ಮುಖ್ಯ ರಸ್ತೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಕಾಡಿನ ಮಧ್ಯೆ. ಎಡಗಡೆಯ ಗುಡ್ಡ ಹಾಗೂ ಬಲಗಡೆಯ ಇಳಿಜಾರಿನ ಮಧ್ಯೆ ಸಾಗುತ್ತದೆ ಇಕ್ಕಟ್ಟಾದ ಮಣ್ಣು ರಸ್ತೆ. ಸುತ್ತಲೂ ಕಾಡು, ಪೊದರು ಹಾಗೂ ಹುಲ್ಲು. ಮನೆಗೆ ಏನೇ ಸಣ್ಣದೊಂದು ವಸ್ತು ಬೇಕೆಂದರೂ ಐದು ಕಿಲೋ ಮೀಟರ್ ದೂರದ ತುಮರಿಗೇ ಹೋಗಬೇಕು. ಅಮ್ಮ ಚಿಕ್ಕವಳಿದ್ದಾಗ ಅವಳಪ್ಪ ಅಂದರೆ ನನ್ನ ಅಜ್ಜ ಹಗಲಿಡೀ ದೇವರ ಪೂಜೆ ಹಾಗೂ ತೋಟದ ಕೆಲಸಗಳಲ್ಲಿ ಮುಳುಗಿಹೋಗಿರುತ್ತಿದ್ದ. ಸಂಜೆ ಕಳೆದ ಮೇಲೆ ಮನೆಗೆ ಬೇಕಾದ ವಸ್ತುಗಳನ್ನ ತರಲೆಂದು ದೂರದ ತುಮರಿಗೆ ಹೋಗುತ್ತಿದ್ದ. ಮರಳುವಾಗ ರಾತ್ರೆ ಹತ್ತಾಗುತ್ತಿತ್ತು. ಒಮ್ಮೆ ಆ ಕಿಷ್ಕಿಂದೆಯಂತಹಾ ದಾರಿಯಲ್ಲಿ, ಕಾಳ ಕತ್ತಲಿನಲ್ಲಿ ಒಬ್ಬನೇ ಸಾಮಾನುಗಳ ಮೂಟೆ ಹೊತ್ತು ಬರುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ಯಾರೋ ನಿಂತಂತೆ ಭಾಸವಾಯಿತು. ಅದರತ್ತ ಗಮನ ಹರಿಸದೇ ಮುಂದೆ ಬಂದರೆ ಸ್ವಲ್ಪ ದೂರದಲ್ಲಿ ಮತ್ತೆ ಅದೇ ಆಕೃತಿ ನಿಂತಿದೆ! ಅದನ್ನೂ ಕಡೆಗಣಿಸಿ ಮುಂದೆ ಬಂದರೆ ಹಿಂದಿನಿಂದ "ಚಿದಂಬರಾ... ಚಿದಂಬರಾ..." ಎಂದು ಕರೆದ ಸದ್ದು! ಆದರೆ ದಿನವೂ ಗಂಟೆಗಟ್ಟಲೆ ಜಪತಪಾದಿಗಳನ್ನು ಮಾಡುತ್ತಿದ್ದ ಅಜ್ಜ ಇದ್ಯಾವುದಕ್ಕೂ ಹೆದರದೇ ಮನೆ ತಲುಪಿದನಂತೆ.

ಇನ್ನೊಮ್ಮೆ ಅಜ್ಜನ ಜೊತೆ ಮನೆಯ ಎದುರಿನ ಕಣದಲ್ಲಿಕೆಲಸ ಮಾಡುತ್ತಿದ್ದ ನನ್ನ ದೊಡ್ಡ ಮಾವ (ಆಗಿನ್ನೂ ಅವರು ಚಿಕ್ಕವರಿದ್ದರು) ಗುದ್ದಲಿಯನ್ನು ಅಲ್ಲೇ ಮರೆತು ಬಂದುಬಿಟ್ಟರು. ರಾತ್ರೆ ಊಟ ಮಾಡಿದ ಮೇಲೆ ಅದನ್ನು ತರಲೆಂದು ಮತ್ತೆ ಅಲ್ಲಿಗೆ ಹೋಗಿ ನೋಡಿದರೆ ಆ ಜಾಗದಲ್ಲಿ  ಬಿಳಿಯ ಆಕೃತಿಯೊಂದು ಗುದ್ದಲಿಯನ್ನು ಹಿಡಿದು ನಿಂತುಕೊಂಡಿದೆ! ಇವರು ನೋಡುತ್ತಿರುವಂತೆಯೇ ಅದು ಕುಳ್ಳಗಾಗುತ್ತಾ ಹೋಗಿ ಕೊನೆಗೆ ಮಾಯವೇ ಆಯಿತಂತೆ. ಭೀತರಾಗಿ ಅಳುತ್ತಾ ಮನೆಗೆ ಬಂದ ಮಾವ ಒಂದು ವಾರ ಛಳಿ ಜ್ವರ ಹಿಡಿದು ಮಲಗಿಬಿಟ್ಟರು.

ಇವೆಲ್ಲಾ ನಮಗೆ ಅಜ್ಜ ಹೇಳಿದ ಕಥೆಯಾದ್ದರಿಂದ ಅದನ್ನು ಅಷ್ಟಾಗಿ ನಂಬುವಂತಿಲ್ಲ. ಏಕೆಂದರೆ ಮೊದಲೇ "ಬೋಕಾಳಿ ಮಾಂತ್ರಿಕ" ಎಂದು ತಮಾಷೆ ಮಾಡಲ್ಪಡುತ್ತಿದ್ದ ಅಜ್ಜ ಹೇಳುವುದರಲ್ಲಿ ಅರ್ಧಕ್ಕರ್ಧ ಬೋಕಾಳಿಯೇ ಆಗಿರುತ್ತಿತ್ತು. ಆದರೆ ಮುಂದಿನದು ನನಗೆ ಅಮ್ಮ ಹೇಳಿದ ಕಥೆ. ಇವತ್ತಿಗೂ ಅವಳು ಅದನ್ನು ಸತ್ಯ ಎಂದೇ ವಾದಿಸುತ್ತಾಳೆ.

ಆಗ ಅಮ್ಮ ಇನ್ನೂ ಮಿಡ್ಲಿಸ್ಕೂಲಿನಲ್ಲಿದ್ದಳು. ಒಂದು ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಮನೆಗೆ ಬಂದು ಊಟವಾದ ಮೇಲೆ ಅಕ್ಕ ಪಕ್ಕದ ಮನೆಯ ಹುಡುಗ ಹುಡುಗಿಯರೆಲ್ಲಾ ಒಟ್ಟಾಗಿ ಸ್ವಲ್ಪ ದೂರದಲ್ಲಿದ್ದ ತೋಟಕ್ಕೆ ಪೇರಳೆ ಹಣ್ಣುಕೊಯ್ಯಲು ಹೊರಟರು. ಮಟಮಟ ಮಧ್ಯಾಹ್ನದ ಬಿಸಿಲಿನಲ್ಲಿ ಹೊರಟವರಿಗೆ ಗೊತ್ತಿಲ್ಲದ ಸಂಗತಿಯೆಂದರೆ ಆ ಜಾಗದ ಸಮೀಪದಲ್ಲಿ ಕೆಲವೇ ದಿನಗಳ ಕೆಳಗೆ ಅಕಾಲ ಮರಣಕ್ಕೀಡಾಗಿದ್ದ ಬಾಣಂತಿಯೊಬ್ಬಳನ್ನು ಸುಟ್ಟಿದ್ದರೆಂಬುದು!

ಎಲ್ಲರೂ ಪೇರಳೆ ಮರಕ್ಕೆ ಲಗ್ಗೆಯಿಟ್ಟರು. ಬೇಕಾದಷ್ಟು ಹಣ್ಣು ತಿಂದು ಉಳಿದಿದ್ದನ್ನು ಬಟ್ಟೆಯಲ್ಲಿ ಗಂಟು ಕಟ್ಟಿಕೊಂಡು ಇನ್ನೇನು ಹೊರಡಬೇಕು, ಅಷ್ಟರಲ್ಲಿ ಭಯಾನಕವಾದ ಆರ್ತನಾದವೊಂದು ತೀರಾ ಹತ್ತಿರದಿಂದಲೇ ಕೇಳಿಬಂತು! ಸುತ್ತಲೂ ನೋಡಿದ ಅಮ್ಮನಿಗೆ ಏನೂ ಕಾಣಲಿಲ್ಲ. ಆದರೆ ಜೊತೆಯಲ್ಲಿದ್ದವರೆಲ್ಲಾ 'ದೆವ್ವ ಬರ್ತಿದ್ದು... ಓಡೇ' ಅಂತ ಅರಚಿದಾಗ ಹಿಂದುಮುಂದು ನೋಡದೇ ನಾಗಾಲೋಟ ಕಿತ್ತಿದ್ದಾಳೆ. ಆ ಭಯಾನಕ ಸದ್ದೂ ಇವರನ್ನು ಬೆನ್ನತ್ತಿ ಬಂದಿದೆ. ಓಟದ ಮಧ್ಯೆ ಒಮ್ಮೆ ಅಮ್ಮ ತಿರುಗಿ ನೋಡಿದಳಂತೆ. ವಿವರಣೆಗೆ ನಿಲುಕದ, ವಿಚಿತ್ರ ಆಕಾರವೊಂದು ಕಪ್ಪಿನಿಂದ ಕಪ್ಪಿಗೆ (ಅಡಿಕೆ ತೋಟದಲ್ಲಿ ಎರೆಡು ಸಾಲುಗಳ ನಡುವೆ ಮಾಡಿರುವ ಕಾಲುವೆಯಂತಹ ಉದ್ದದ ತೋಡು) ಹಾರುತ್ತಾ ಬರುತ್ತಿರುವುದು ಕಂಡಿದೆ. ಮತ್ತೇನೂ ಯೋಚಿಸದೆ ಪ್ರತಿಯೊಬ್ಬರೂ ಒಬ್ಬೊಬ್ಬ ಆಂಜನೇಯನಂತೆ ಹೊಂಡ,ಗುಂಡಿ,ಏರು, ತಗ್ಗುಗಳೆಲ್ಲವನ್ನೂ ಒಂದೇ ನೆಗೆತಕ್ಕೆ ನೆಗೆಯುತ್ತಾ ಮನೆ ತಲುಪಿದರು. ತನ್ನ 'ಸೀಮೆ' ಮುಗಿಯುವ ತನಕ ಇವರನ್ನು ಬೆನ್ನಟ್ಟಿದ ಆ ಅವರ್ಣನೀಯ ಆಕೃತಿ ನಂತರ ಮರೆಯಾಯಿತು.

ಇನ್ನೊಂದು ಅವಳ ಶಾಲೆಯಲ್ಲಿ ನಡೆದ ಘಟನೆ: ಆಗ ಶಾಲೆಗಳಲ್ಲಿ ಈಗಿನಂತೆ ಬಿಸಿಯೂಟ ಇರಲಿಲ್ಲ. ಮಧ್ಯಾಹ್ನದ ಊಟಕ್ಕೆ  ಮನೆ ಸಮೀಪವಿರುವವರು ತಮ್ಮ ಮನೆಗೇ ಹೋಗುತ್ತಿದ್ದರೆ, ಉಳಿದವರು ಹತ್ತಿರದಲ್ಲಿರುವ ತಮ್ಮ ಪರಿಚಿತರ ಮನೆಗೋ ಅಥವಾ ನೆಂಟರಿಷ್ಟರ ಮನೆಗೋ ಹೋಗುತ್ತಿದ್ದರು. ಹಾಗಾಗಿ ಮಧ್ಯಾಹ್ನ ಊಟದ ಸಮಯದಲ್ಲಿ ಶಾಲೆಯಲ್ಲಿರುತ್ತಿದ್ದವರು ತೀರಾ ಕಡಿಮೆ. ಕೆಲವೊಂದು ಹುಡುಗಿಯರ ನಡುವೆ ಹೀಗೆ ಊಟಕ್ಕೆ ಹೋಗಿ ಬರುವುದರಲ್ಲೊಂದು ಪೈಪೋಟಿ- ಯಾರು ಮೊದಲು ಊಟ ಮುಗಿಸಿ ಬರುತ್ತಾರೆ ಅಂತ. ಈ ಸ್ಪರ್ಧೆಯಲ್ಲಿ ಸದಾ ಸೋಲುತ್ತಿದ್ದ ಹುಡುಗಿಯೊಬ್ಬಳು ಏನೇ ಆದರೂ ಇಂದು ತಾನು ಗೆಲ್ಲಲೇ ಬೇಕೆಂದು ಒಂದು ದಿನ ಮಧ್ಯಾಹ್ನ ಬಹಳ ಬೇಗ ಊಟ ಮುಗಿಸಿ ಮರಳಿದಳಂತೆ. ತರಗತಿಗೆ ಬಂದು ನೋಡಿದರೆ ಇನ್ನೂ ಯಾರೂ ಬಂದಿಲ್ಲ. ಕೊನೆಗೂ ತಾನು ಗೆದ್ದೆನೆಂದು ಬೀಗುತ್ತಾ, ಗೆಳತಿಯರು ಬಂದ ಮೇಲೆ ಅವರಿಗೆ ಹೇಗೆ ಹೊಟ್ಟೆ ಉರಿಸಬೇಕೆಂದು ಯೋಚಿಸುತ್ತಾ ಒಬ್ಬಳೇ ತರಗತಿಯಲ್ಲಿ ಕೂತಿದ್ದಾಳೆ. ಆಗಲೇ ಕೊಠಡಿಯ ಹಿಂದಿನ ಭಾಗದ, ಕಾಡಿನಕಡೆ ತೆರೆದಿರುವ ಕಿಟಕಿಯಿಂದ ಘಲ್..ಘಲ್.. ಎಂದು ಬಳೆಯ ಸದ್ದು ಕೇಳಿದೆ. ಗೆಳತಿಯರು ಬಂದರೆಂದು ಅವಳು ಇಣುಕಿ ನೋಡಿದರೆ ಯಾರೂ ಇಲ್ಲ! ಅಷ್ಟರಲ್ಲಿ ಮತ್ತದೇ ಕಡೆಯಿಂದ ಬಳೆಯ ಸದ್ದು, ಈ ಬಾರಿ ತುಸು ಜೋರಾಗೇ ಕೇಳಿದೆ. ತಾನು ಗೆದ್ದೆನೆಂಬ ಹೊಟ್ಟೇಕಿಚ್ಚಿಗೆ ತನ್ನ ಗೆಳತಿಯರೇ ಹೀಗೆ ಹೆದರಿಸುತ್ತಿದ್ದಾರೆಂದೆಣಿಸಿದ ಅವಳು "ನನ್ನೇ ಹೆದರಿಸ್ತ್ರಾ? ಹಿಂದಿಂದ ಬಂದ್ರೆ ಯಂಗ್ ಗೊತ್ತಾಗ್ತಲ್ಲೆ ಅಂದ್ಕಂಡ್ರಾ" ಎನ್ನುತ್ತಾ ಕಿಟಕಿಯತ್ತ ನಡೆದಿದ್ದಾಳೆ.

ಆಗಲೇ ಕಿಟಕಿಯ ಸರಳುಗಳ ಮೇಲೆ ಬಣ್ಣಬಣ್ಣದ ಬಳೆಗಳನ್ನು ತೊಟ್ಟಿರುವ ವಿಕಾರವಾದ ಕಡುಗಪ್ಪು ಕೈಯೊಂದು ಕಂಡಿದೆ!

ಭೀತಳಾದ ಹುಡುಗಿ ಕಿರುಚಿಕೊಂಡು ಕೊಠಡಿಯಿಂದ ಹೊರಾಗೋಡಿದಳು. ಮುಖ ಬಿಳುಚಿಕೊಂಡು ಓಡಿ ಬರುತ್ತಿರುವವಳನ್ನು ಆಗಷ್ಟೇ ಶಾಲೆ ಪ್ರವೇಶಿಸುತ್ತಿದ್ದ ಮಾಸ್ತರು ನಿಲ್ಲಿಸಿ ಏನಾಯಿತೆಂದು ಕೇಳಿದರು. ಅವಳು ನಡೆದದ್ದೆಲ್ಲವನ್ನೂ ಹೇಳಿ, ಅವರೂ ಬಂದು ನೋಡಿದರೆ ಕೊಠಡಿಯಲ್ಲಿ ಯಾವ ಬಳೆಯೂ ಇಲ್ಲ, ಕೈಯ್ಯೂ ಇಲ್ಲ!

ಹೆದರಿದ ಹುಡುಗಿ ವಾರ ಪೂರಾ ಛಳಿ ಜ್ವರ ಬಂದು ಮಲಗಿದ್ದಳೆಂದು ಪ್ರತ್ಯೇಕಾವಾಗಿ ಹೇಳಬೇಕಿಲ್ಲವಲ್ಲಾ?

                       ****************

ಇವೆಲ್ಲವೂ ನಾನು ಹುಟ್ಟುವ ಮೊದಲೇ ನಡೆದ ಅಥವಾ ಸೃಷ್ಟಿಸಿದ ಕಥೆಗಳು. ಆದರೆ ಇಂದಿಗೂ ಜೀವಂತವಾಗಿರುವ ಘಟನೆಯೊಂದು ದೆವ್ವ ಭೂತಗಳ ಬಗ್ಗೆ ತೀರಾ ಹಗುರವಾಗಿ ಯೋಚಿಸದಂತೆ ಮಾಡಿದೆ.

ನನ್ನ ಅಜ್ಜಿಯ (ಅಮ್ಮನ ಅಮ್ಮ) ಕೊನೆಯ ತಂಗಿ ಆಗ ಎರೆಡು-ಮೂರು ತಿಂಗಳ ಬಾಣಂತಿಯಾಗಿದ್ದರು. ಒಂದು ದಿನ ರಾತ್ರಿ ಮನೆಯವರೆಲ್ಲಾ ಊಟ ಮಾಡಿದ ಬಾಳೇ ಎಲೆಗಳನ್ನು ಎಸೆಯಲೆಂದು ಮನೆಯ ಹಿಂದಿನ ಗೊಬ್ಬರದ ಗುಂಡಿಯತ್ತ ಹೋದವರು ಭಯದಿಂದ ನಡುಗುತ್ತಾ ವಾಪಾಸು ಬಂದರು. ಏನಾಯಿತೆಂದು ಕೇಳಿದರೆ ಅಲ್ಲಿ ಯಾರೋ ಇದ್ದಾರೆಂದು ಹೊರಗಿನ ಕತ್ತಲಿನತ್ತ ಕೈ ತೋರಿಸುತ್ತಾ ಮತ್ತಷ್ಟು ನಡುಗಿದರು.

ಆ ಘಟನೆ ನಡೆದ ಕೆಲ ದಿನಗಳಿಗೆಲ್ಲಾ ಅವರ ವರ್ತನೆ ಬದಲಾಗುತ್ತಾ ಹೋಯಿತು. ಏನೋ ಕೆಲಸ ಮಾಡುತ್ತಿದ್ದವರು ಇದ್ದಕ್ಕಿದ್ದಂತೆ ಒಂದು ಮೂಲೆ ಸೇರಿ ಕುಳಿತುಬಿಡುತ್ತಿದ್ದರು. ತಮ್ಮಷ್ಟಕ್ಕೆ ತಾವೇ ಗಿಟಿಗಿಟಿ ಅಂತ ನಗಲಾರಂಭಿಸುತ್ತಿದ್ದರು. ಬರುಬರುತ್ತಾ ಅದು ವಿಪರೀತಕ್ಕೆ ತಿರುಗಿತ್ತು. 'ಆ' ಸ್ಥಿತಿಗೆ ಹೋದಾಗ ಎದುರಿಗಿದ್ದವರ ಮೇಲೆ ಹರಿಹಾಯಲಾರಂಭಿಸಿದರು. ಕೊನೆಗೆ ನಾನಾ ಜಪ-ತಪಾದಿ ಮಂತ್ರ-ಪೂಜೆಗಳಿಂದ ಅವರನ್ನು ಒಂದು ಹಂತಕ್ಕೆ ಸುಧಾರಿಸಿದರಂತೆ.

ಅವರು ಈಗಲೂ ಹಾಗೇ ಇದ್ದಾರೆ. ಚೆನ್ನಾಗಿ ಮಾತನಾಡುತ್ತಿರುವವರ ಧಾಟಿ ಇದ್ದಕ್ಕಿದ್ದಂತೆಯೇ ಬದಲಾಗಿಬಿಡುತ್ತದೆ. ಒಮ್ಮೆಗೇ ವಿಚಿತ್ರವಾದ ನಗು, ಸ್ವರದಲ್ಲೊಂದು ಗಡಸುತನ ಬಂದುಬಿಡುತ್ತದೆ. ಆ ಇಳಿವಯಸ್ಸಿನ ದೇಹದಲ್ಲೂ ಅಗಾಧವಾದ ಶಕ್ತಿ ಅದೆಲ್ಲಿಂದ ಬರುತ್ತದೋ ಏನೋ, ಅಪ್ರಿಯವಾಗಿ ಮಾತನಾಡಿದವರ ಹಾಗೂ ತಡೆಯಲು ಬಂದವರ ಮೇಲೆ ಧಾಳಿ ಮಾಡುತ್ತಾರೆ. ಒಮ್ಮೆ ಅವರು ಒಳಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಹೊರಗೆ ಅವರ ಸಂಬಂಧಿಕರಲ್ಲೇ ಒಬ್ಬರು 'ಭೂತ-ಪ್ರೇತ ಎಂತದೂ ಇಲ್ಲೆ. ಎಲ್ಲ ಬರೀ ನಾಟ್ಕ!' ಅಂದರಂತೆ. ಒಳಗಿದ್ದ ಯಾರಿಗೂ ಕೇಳಿಸದ್ದು ಅವರಿಗೆ ಮಾತ್ರ ಹೇಗೆ ಕೆಳಿಸಿತೋ ಏನೋ,  'ಏನೋ ಅಂದೆ? ಇನ್ನೊಂದ್ಸಲ ಹೇಳು ನೋಡಣ' ಎನ್ನುತ್ತಾ ಸೀರೆ ಎತ್ತಿಕಟ್ಟಿ ನುಗ್ಗಿಬಂದೇಬಿಟ್ಟರು. ಕಕ್ಕಾಬಿಕ್ಕಿಯಾದ ಆ ಆಸಾಮಿ ಒಂದೇ ನೆಗೆತಕ್ಕೆ ಬೇಲಿ ಹಾರಿ ತಮ್ಮ ಮನೆಯತ್ತ ಓಟ ಕಿತ್ತರು!
                        ******************

ಭಯದ ಕಣ್ಣಿಗೆ ಪ್ರತಿಯೊಂದೂ ಭೂತವೇ. ಉದಾಹರಣೆಗೆ ನಮಗೆಲ್ಲ ನಮ್ನಮ್ಮ ಬಾಸ್ ಗಳು ದೆವ್ವದಂತೆ ಕಾಣುವುದು ಯಾಕೆ ಹೇಳಿ? ಒಳಗೆಲ್ಲೋ ಅವರಮೇಲಿರುವ ಭಯದಿಂದ ತಾನೇ? ಇತ್ತೀಚೆಗೆ ಭೂತಗಳ ಚೇಷ್ಟೆ ಕಡಿಮೆಯಾಗಿದೆ ಅಂತ ನಾವೆಲ್ಲ ನಿರಾಳರಾಗಿದ್ದೇವೆ ನಿಜ; ಆದರೆ ಯಾರಿಗೆ ಗೊತ್ತು, ಅವೂ ಸಹಾ ನಮ್ಮಂತೇ 'ಅಪ್ಡೇಟ್' ಆಗಿ ಕತ್ತಲ ಸ್ಮಶಾನಗಳಿಂದ, ಪಾಳುಬಿದ್ದ ಬಂಗಲೆಗಳಿಂದ ಹೊರಬಂದು ಈ ರಾಜಕಾರಣಿಗಳ, ಭ್ರಷ್ಟ ಅಧಿಕಾರಿಗಳ, ಆಫೀಸಿನ ಬಾಸ್ ಗಳ ದೇಹಸೇರಿ 'ಆಧುನಿಕ' ರೀತಿಯಲ್ಲಿ ನಮ್ಮನ್ನು ಕಾಡುತ್ತಿರಬಹುದಲ್ಲವೇ?!

ಭೂತಗಳ ನಾಡಾಗಿದ್ದ ನಮ್ಮ ಅಜ್ಜನಮನೆಯಲ್ಲಿ ನಾನು ಬೇಸ್ತುಬಿದ್ದ ಈ ಕೆಳಗಿನ ಕಥೆಯ ಮೂಲಕ ನನ್ನೀ ಲೇಖನವನ್ನು ಮುಗಿಸುತ್ತೇನೆ.

ಸುಮಾರು ಹದಿನೈದು ವರ್ಷಗಳ ಕೆಳಗೆ, ತೀರಿಹೋದ ಅಜ್ಜಿಯ ಅಪರಕರ್ಮಗಳಿದ್ದುದರಿಂದ ಅಮ್ಮ ಹಾಗೂ ಅವಳ ಅಣ್ಣ, ತಂಗಿಯರೆಲ್ಲ ಅಜ್ಜನ ಮನೆಯಲ್ಲಿ ಒಟ್ಟಾಗಿದ್ದರು. ಒಳಗೆ ವಿವಿಧ ಕ್ರಿಯಾಕರ್ಮಗಳು ನಡೆಯುತ್ತಿದ್ದರೆ ಮಕ್ಕಳಾದ ನಾವು ಹೊರಗಡೆ ಆಡಿಕೊಳ್ಳುತ್ತಿದ್ದೆವು. ಭೂತಗಳ ಬಗ್ಗೆ ಎಷ್ಟೇ ಭಯವಿದ್ದರೂ ಹಗಲಿಡೀ ನಾವು ಆಡುತ್ತಿದ್ದುದು ಭೂತದ ಆಟಗಳನ್ನೇ. ರಾತ್ರೆಯಾದರೆ ಎಲ್ಲರೂ ಒಂದು ಕೋಣೆಯಲ್ಲಿ ಒಟ್ಟಾಗಿ ಭೂತದ ಕಥೆಗಳನ್ನು ಹೇಳುವ ಸ್ಪರ್ಧೆಯನ್ನೇ ಏರ್ಪಡಿಸುತ್ತಿದ್ದೆವು. ಒಬ್ಬರಿಗಿಂತ ಒಬ್ಬರು ಭಯಾನಕ, ಭೀಭತ್ಸಕರವಾದ ಭೂತಗಳ ಕಥೆ ಹೇಳುತ್ತಾ, ನಾವು ಸೃಷ್ಟಿಸಿದ ಪ್ರೇತಗಳನ್ನು ನೆನೆದು ನಾವೇ ಗಡಗಡ ನಡುಗುತ್ತಾ ಸ್ಪರ್ಧೆ ಮುಂದುವರಿಸಿತ್ತಿದ್ದೆವು.

ಆದಿನ ಮಧ್ಯಾಹ್ನವೂ ಅಂತಹದ್ದೇ ಆಟವೊಂದನ್ನ ಆಯೋಜಿಸಲಾಗಿತ್ತು. ಮನೆಯಿಂದ ಸ್ವಲ್ಪ ದೂರದಲ್ಲಿ ಅಡಿಕೆ ದಬ್ಬೆಯ ಹಳೆಯ ಬೇಲಿಗಳನ್ನು ಇರಿಸಿದ್ದರು. ಅಲ್ಲೇ ನಮ್ಮ ಆಟ ಶುರುವಾಯಿತು. ಆಟದ ಕಥೆ ಇಷ್ಟೇ. ಅದೊಂದು ಭೂತದ ಬಂಗಲೆ. ನಾವು ಹೇಗೋ ಅದರೊಳಗೆ ಸಿಕ್ಕಿಕೊಳ್ಳುತ್ತೇವೆ. ಭೂತ ನಮ್ಮನ್ನು ಕಾಡಿಸುತ್ತದೆ. ಕೊನೆಗೆ ಕಥೆಯ ಹೀರೋ ಬಂದು ಭೂತವನ್ನು ಸಾಯಿಸಿ (!!) ನಮ್ಮನ್ನೆಲ್ಲಾ ಕಾಪಾಡುತ್ತಾನೆ.

ಪಾತ್ರಗಳ ಹಂಚಿಕೆ ಶುರುವಾಯಿತು. ಒಬ್ಬಳಿಗೆ ಮುಖಕ್ಕೆ ಭೂತದಂತೆ ಬಿಳೀ ಬಟ್ಟೆ ಹೊದಿಸಿ ನಿಲ್ಲಿಸಲಾಯಿತು. ಮಾತಿನಲ್ಲಿ ಜೋರಿನವನಾದ, ನನ್ನ ದೊಡ್ಡ ಮಾವನ ಮಗ ಎಲ್ಲರನ್ನೂ ಕಾಪಾಡುವ ಹೀರೋ ಆಗಿ ಕೈಯ್ಯಲ್ಲೊಂದು ಮಂತ್ರದಂಡ ಹಿಡಿದು ನಿಂತ. ಉಳಿದವರೆಲ್ಲರೂ ದಾರಿ ತಪ್ಪಿದವರಾಗಿ ಬೇಲಿಯ ಬಂಗಲೆಯೊಳಗೆ ಕುಳಿತೆವು. ಆಟ ಇನ್ನೇನು ಆರಂಭವಾಗಬೇಕು.

"ಅಲ್ನೋಡಿ ಅಲ್ಲಿ.... ದೆವ್ವ!"
ತಂಗಿ ಕೈ ತೋರಿಸಿದ ದಿಕ್ಕಿನತ್ತಲೇ ಎಲ್ಲರೂ ನೋಡಿದೆವು. ಕುಳ್ಳಗೆ ದಪ್ಪಗಿರುವ, ಕೊರಳಲ್ಲಿ ಮೂಳೆಯ ಮಾಲೆ ಧರಿಸಿರುವ ಭಯಾನಕ ದೆವ್ವವೊಂದು ವಿಕಾರವಾಗಿ ಬಾಯಿ ತೆರೆದುಕೊಂಡು ನಮ್ಮತ್ತಲೇ ನಡೆದು ಬರುತ್ತಿತ್ತು!!!

ಅಷ್ಟೇ! ಕಥೆಯಲ್ಲಷ್ಟೇ ಬರಬೇಕಿದ್ದ ದೆವ್ವ ಹೀಗೆ ಭೀಕರ ರೂಪದಲ್ಲಿ ಕಣ್ಣೆದುರೇ ಬರುತ್ತಿರುವುದನ್ನು ನೋಡಿ ಕಕ್ಕಾಬಿಕ್ಕಿಯಾದ ಪಾತ್ರಧಾರಿಗಳೆಲ್ಲಾ ಕಣ್ಮುಚ್ಚಿ ತರೆಯುವುದರೊಳಗೆ ಸತ್ತೆನೋ ಕೆಟ್ಟೆನೋ ಎಂದು ಎದ್ದು ಓಡತೊಡಗಿದೆವು. ದೆವ್ವದ ಜೊತೆ ಬಡಿದಾಡುವ 'ಹೀರೋ' ಆಗಿದ್ದ ಮಾವನ ಮಗ ಕೈಯ್ಯಲ್ಲಿದ್ದ ದಂಡವನ್ನ ಎತ್ತಲೋ ಬಿಸಾಡಿ ಎಲ್ಲರಿಗಿಂತಲೂ ಮುಂದೆ ಓಡುತ್ತಿದ್ದ. "ಕಾಪಾಡೀsss..." ಎಂದು ಕಿರುಚುತ್ತಾ  ಮನೆಯ ಆವರಣ ತಲುಪಿ ಒಮ್ಮೆ ತಿರುಗಿ ನೋಡಿದರೆ ದೆವ್ವ ಅಟ್ಟಹಾಸ ಮಾಡುತ್ತಾ ಗೇಟು ತೆರೆದುಕೊಂಡು ಒಳಗೇ ಬರಿತ್ತಿದೆ! ಮತ್ತಷ್ಟು ಹೆದರಿದ ಪುಟ್ಟ ಹುಡುಗಿಯೊಬ್ಬಳು ಜೋರಾಗಿ ಕಿರುಚಿಕೊಂಡುಬಿಟ್ಟಳು. ಅಷ್ಟರಲ್ಲಿ ಒಳಗಿಂದ ಓಡಿಬಂದ ಚಿಕ್ಕಮ್ಮ ಒಂದೊಂದು ಬಾರಿಸಿ ಎಲ್ಲರನ್ನೂ ಈ ಲೋಕಕ್ಕೆ  ಇಳಿಸಿದರು.

ಆಗಿದ್ದೇನೆಂದರೆ, ಯಾವುದೋ ಶಾಸ್ತ್ರದ ಪೂರೈಕೆಗಾಗಿ ಹೊಳೆಗೆ ಹೋಗಿದ್ದ ನಮ್ಮ ಮಾವ ಬಿಳಿಬಣ್ಣದ ತುಂಡು ಪಂಚೆ ತೊಟ್ಟು ನಡೆದು ಬರುತ್ತಿದ್ದರು. ಸದಾ ಬಾಯಿಗೆ ಹಲ್ಸೆಟ್ ಹಾಕಿಕೊಳ್ಳುತ್ತಿದ್ದ ಅವರು ಇಂದು ಹಾಗೇ ಬೊಚ್ಚುಬಾಯಿ ಬಿಟ್ಟುಕೊಂಡು ಬರುತ್ತಿದ್ದರಲ್ಲದೇ ಹೊಳೆಯ ಕೆಸರಿನಲ್ಲಿ ಕಾಲು ಜಾರಿದ್ದರಿಂದ ಮೈ ಮಣ್ಣಾಗಿತ್ತು. ಸೊಂಟ ಹಾಗೂ ಕೊರಳಲ್ಲಿ ಕೊಳಕಾದ ತುಂಡು ಪಾಣಿ ಪಂಚೆ, ಕತ್ತಲ ಗುಹೆಯೊಂದರ ದ್ವಾರದಂತಿರುವ ಬೊಚ್ಚುಬಾಯಿ, ಬೊಕ್ಕ ತಲೆ, ಕುಳ್ಳ ನಿಲುವು, ಕಪ್ಪು- ಗುಂಡು ದೇಹ.... ನಮ್ಮ ಕಲ್ಪನೆಯ ಭೂತಕ್ಕಿಂತ ಒಂದು ಕೈ ಹೆಚ್ಚೇ ಭಯಾನಕವಾಗಿ ಕಾಣುತ್ತಿದ್ದರು ನಮ್ಮ ಮಾವ. ಎಲ್ಲರೂ ಹೆದರಿದೆವಾದರೂ ಪುಣ್ಯಕ್ಕೆ ಯಾರಿಗೂ ಛಳಿ ಜ್ವರ ಬರಲಿಲ್ಲ. ಇಲ್ಲವಾದರೆ ಎಲ್ಲರೂ ಇನ್ನೊಂದು ಸುತ್ತು ಒದೆ ತಿನ್ನಬೇಕಾಗುತ್ತಿತ್ತು...!

('ಪ್ರತಿಲಿಪಿ ಕನ್ನಡ'ದಲ್ಲಿ ಪ್ರಕಟಿತ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...