ಬುಧವಾರ, ಡಿಸೆಂಬರ್ 30, 2015

ನನ್ನೊಳಗಿನ ನಾನು..


ನನ್ನೊಳಗೊಬ್ಬ ಅವನಿದ್ದಾನೆ;
ಮೊಟ್ಟಮೊದಲ ಕೀಳರಿಮೆಯಲ್ಲಿ
ಹುಟ್ಟಿಬಂದವನು;
ನಕ್ಕು ಎಲ್ಲರೊಡನೆ ಬೆರೆಯಬಲ್ಲವನು.
ದುಃಖ ಕಂಡರೆ ಅವನ ಕಂಗಳಲಿ
ಒರೆಸಲು ಹಲವು ಕೈಗಳಿವೆ.
ನನ್ನಂತೆ ಒಂಟಿಯಲ್ಲ ಅವನು.

ನನ್ನಂತೆ ಹೆತ್ತವರ ಪಾಲಿಗವನು
ಹೆಗ್ಗಣವಲ್ಲ;
ದುರ್ಗುಣಗಳಿಲ್ಲ ಅನ್ನುವುದೊಂದೇ
ಅವನ ಸದ್ಗುಣವಲ್ಲ.

ಭಾವನೆಗಳ ಬಚ್ಚಿಟ್ಟ
ಸೆರೆಮನೆಯಲ್ಲ ಅವನ ಹೃದಯ.
ಸ್ವಚ್ಛಂದ ಮಾತುಗಳ ನವಿರಾದ ಕುಂಚದಲಿ
ಮಳೆಬಿಲ್ಲ ಮೂಡಿಸುವ ಮಾತುಗಾರ;
ಮೋಡಿಗಳ ಶರ ಹೂಡಿ ಮನದನ್ನೆಯ ಮನಕೆ
ಅವಳ ಒಲುಮೆಯ ಕದ್ದ ಜಾದೂಗಾರ.

ನನ್ನೆಲ್ಲ 'ಇಲ್ಲ'ಗಳ
ಹುಡುಹುಡುಕಿ ತೋರುವನು,
ಪ್ರತಿಯೊಂದು ಸೋಲಲ್ಲೂ
ಕುಟುಕುಟುಕಿ ಕಾಡುವನು,
'ಹೀಗಿರಬೇಕಿತ್ತು ನೀನು' ಎಂಬುದವನ ಲೇವಡಿ;
ನಾನೆಂಬ ಮಾರ್ಜಾಲದೊಳಮನದ ಹುಲಿಯವನು,
ಹತಾಶೆ ಫಲಿತ ಕಲ್ಪನಾ ನಾಯಕ
'ನನ್ನೊಳಗಿನ ನಾನು'

-ವಿನಾಯಕ ಭಟ್.

ಒಂದೊಳ್ಳೆ ಬ್ಲಾಗ್..

ಸಂಜೆ ಇಂಟರ್ನೆಟ್ನಲ್ಲಿ ಹಾಗೇ ಸುಮ್ಮನೆ ಕಣ್ಣಾಡಿಸುತ್ತಿದ್ದಾಗ ಅಚಾನಕ್ಕಾಗಿ ಕಣ್ಣಿಗೆ ಬಿದ್ದ ಬ್ಲಾಗ್ ಡಾ|ಕೃಷ್ಣಮೂರ್ತಿ ಅವರ "ಕೊಳಲು". ಅವರ ವೈದ್ಯಬದುಕಿನ ಅನುಭವಗಳ ಸ್ವಾರಸ್ಯಕರ ಘಟನೆಗಳು, ಉತ್ತಮ ಚಿಂತನೆಗಳುಳ್ಳ ಕಥೆ, ಲೇಖನಗಳು, ಅರ್ಥಪೂರ್ಣ-ಸುಲಲಿತ ಕವನಗಳು ಹೀಗೇ  ಹಲವಾರು ಚಂದದ  ಬರಹಗಳಿರುವ ಬ್ಲಾಗ್.
ನೀವೂ ಒಮ್ಮೆ ಓದಿ...

http://dtkmurthy.blogspot.in

ಮಂಗಳವಾರ, ಡಿಸೆಂಬರ್ 22, 2015

ಹುಟ್ಟಿದ ಊರನು ಬಿಟ್ಟು ಬಂದ ಮೇಲೆ..

ಭಟ್ರು ಬರೆದ ಹಾಡುಗಳು ಇಷ್ಟವಾಗೋದೇ  ಈ ಕಾರಣಕ್ಕೆ. ಅವರು ಯಾವ ವಿಷಯದ ಬಗ್ಗೆ ಬರೆದ್ರೂ, ಅದು ಬರೀ ಆ ಸಿನೆಮಾದ ಹಿನ್ನೆಲೆಯಲ್ಲೇ ಉಳಿಯೋದಿಲ್ಲ. ಅವರೇ ಹೇಳುವಂತೆ ಅವು ಸಿನೆಮಾದ ಆಚೆಗೆ, ಸ್ವತಂತ್ರವಾಗಿ ಹಾಡಿಕೊಳ್ಳಬಹುದಾದ, ಎಲ್ಲರ ಮನದಾಳದ ಹಾಡುಗಳಾಗಿರುತ್ತವೆ.

ಈಗ ನಾನು ಇಷ್ಟೆಲ್ಲಾ ಹೇಳ್ತಿರೋದಕ್ಕೆ ಕಾರಣ ಏನಂದ್ರೆ ಕೆಲವು ದಿನಗಳ ಕೆಳಗೆ ಧ್ವನಿಸುರುಳಿ ಬಿಡುಗಡೆಯಾದ 'ಪರಪಂಚ' ಚಿತ್ರದ 'ಹುಟ್ಟಿದ ಊರನು ಬಿಟ್ಟುಬಂದ ಮೇಲೆ...' ಹಾಡು. ಈಗಾಗಲೇ ಹುಚ್ಚ ವೆಂಕಟ್ ಹಾಡಿದ್ದು ಅನ್ನೋ ಕಾರಣಕ್ಕೆ ಸಾಕಷ್ಟು ಸುದ್ದಿಯಾಗಿದ್ದ ಈ ಹಾಡು ಸಹಜವಾಗಿಯೇ ಬಹಳ ಕುತೂಹಲ ಹುಟ್ಟಿಸಿತ್ತು. ಈಗ ಇದರ ರೆಕಾರ್ಡಿಂಗ್  ದೃಶ್ಯಗಳು Youtubeನಲ್ಲಿ ಬಿಡುಗಡೆಯಾಗಿದೆ. ಇಂಪಾದ ಸಂಗೀತವಿರುವ ಈ ಹಾಡು ವೆಂಕಟ್ ರ  ಸ್ವರದಲ್ಲಿ ವಿಭಿನ್ನವಾಗಿ ಮೂಡಿಬಂದಿದೆ. ಆದರೆ ಎಲ್ಲಕ್ಕಿಂತ ಇಲ್ಲಿ ಯೋಗರಾಜ್ ಭಟ್ ಅವರ ಸಾಹಿತ್ಯವೇ ಹೈಲೈಟ್ ಅಂದ್ರೆ ತಪ್ಪಾಗಲಾರದೇನೋ. ಭಟ್ರು ತಮ್ಮ ಎಂದಿನ ಹಾಸ್ಯ, ವ್ಯಂಗ್ಯ ಬೆರೆತ ಶೈಲಿಯಲ್ಲಿ ಊರುಬಿಟ್ಟು ಪಟ್ಟಣ ಸೇರಿರುವ  ಲಕ್ಷ-ಕೋಟ್ಯಾಂತರ ಮನಸ್ಸುಗಳ ತಳಮಳ-ಭಾವನೆಗಳನ್ನ ಅದ್ಭುತವಾಗಿ ಸಾಹಿತ್ಯವಾಗಿಸಿದ್ದಾರೆ.

ಪ್ರತೀ ಸಾಲು ಮತ್ತೆ ಮತ್ತೆ ಓದುವಂತಿದೆ;  ಹೌದು. ಊರ ದಿಕ್ಕಿನ ಗಾಳಿ, ನಡುವಿನ ಆಲದಮರ, ಬಯ್ಯುವ ದೋಸ್ತ್ ಗಳು, ಕಣ್ಣು ತುಂಬಿ ಬಂದಿದ್ದು, ಅಪ್ಪ/ಅಮ್ಮ ಅಳಬೇಡ ಅಂದಂಗಾಗಿದ್ದು.... ಈ ಎಲ್ಲಾ ತಲ್ಲಣವೂ ನಾವು ಅನುಭವಿಸಿದ್ದೇ ಅಲ್ವಾ..  ಜೀವನಾನುಭವಗಳನ್ನ ಇಷ್ಟೊಂದು ಸುಂದರಸಾಲುಗಳಲ್ಲಿ ಹಿಡಿದಿಡುವ ಕಲೆ ಅವರಿಗೆ ಸಿದ್ಧಿಸಿದ್ದಾದರೂ ಹೇಗೆ?

ನನಗಂತೂ ತುಂಬಾ ಇಷ್ಟ ಆಯ್ತು. ನೀವೂ ಓದಿ, ಇಷ್ಟ ಆಗದಿದ್ರೆ ಆಮೇಲೆ ಹೇಳಿ!

ಹಾಡು: ಹುಟ್ಟಿದ ಊರನು ಬಿಟ್ಟು ಬಂದ ಮೇಲೆ...
ಚಿತ್ರ: ಪರಪಂಚ
ಗಾಯಕರು: ವೆಂಕಟ್
ಸಂಗೀತ: ವೀರ್ ಸಮರ್ಥ್
ಸಾಹಿತ್ಯ: ಯೋಗರಾಜ್ ಭಟ್

ಹುಟ್ಟಿದ ಊರನು ಬಿಟ್ಟು ಬಂದ ಮೇಲೆ
ಇನ್ನೇನು ಬಿಡುವುದು ಬಾಕಿ ಇದೆ..?
ಮಾಡೋದೆಲ್ಲಾ ಮಾಡಿ ಅಳಬ್ಯಾಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೆ..!
ಊರ ದಿಕ್ಕಿನ ಗಾಳಿ ತಂದಿದೆ ಒಂದು ಕಾಣದ ಕೂಗನ್ನು,
ತವರಿಗಿಂತ ಬೆಚ್ಚನೆ ಜಾಗ ಹೇಳು ಎಲ್ಲಿದೆ ನಿಂಗಿನ್ನೂ..?
ನಿಂಗಿದೂ ಬೇಕಿತ್ತಾ ಮಗನೇ?
ವಾಪಸ್ಸು ಹೊಂಟ್ಹೋಗು ಶಿವನೇ!
ಬ್ಯಾಗು ಹಿಡೀ ಸೀದಾ ನಡಿ, ಬೋರ್ಡು ನೋಡಿ ಬಸ್ಸು ಹಿಡಿ..       |ಪ|

ಬ್ಯಾರೆಲ್ಲೆ ಇದ್ದರೂ ಇದ್ದು ಸತ್ತಂಗೆ, ಊರಲ್ಲೇ ನಿನ್ನ ಉಸಿರಿದೆ..
ನಿನ್ನೂರ ನಡುವಿನ ಆಲದ ಮರದಲಿ ನೀ ಕೆತ್ತಿ ಬಂದ ಹೆಸರಿದೆ..
ಕಿತ್ಹೋದ ಕಾಸಿಗೆ ಕಿತ್ತಾಡೋ ಕೀರ್ತಿಗೆ ಹೈವೇಲಿ ಲಾರಿ ಹಿಡಿದು ನೀ ಬಂದೆ,
ಪಟ್ಟಣಕೆ ಬಂದು ಸಗಣಿಯ ಮ್ಯಾಲಿನ ಸಂಕ್ರಾತಿ ಹೂವಿನಂತೆ ನೀನಾದೆ..!

ಹಬ್ಬಕ್ಕೆ ಹಳೇ ಹುಡುಗಿ ಬರುತಾಳೋ, ಮಗನಿಗೆ ನಿನ್ನ ಹೆಸರಿಟ್ಟಾಳೋ..
ಈ ಬಾರಿ ಒಳ್ಳೆ ಫಸಲಂತೇ, ಅತ್ತಿಗೆ ತಿರುಗಾ ಬಸಿರಂತೇ.,
ನಿಮ್ ಮಾವ ಎಲೆಕ್ಷನ್ ಗೆದ್ನಂತೇ, ದೊಡ್ಡಪ್ಪ ಸಿಗರೇಟ್ ಬಿಟ್ನಂತೆ.,
ಅತ್ತೆಯ ಮಗಳು ಓದ್ತಾಳೋ, ಆಗಾಗ ನಿನ್ನ ನಂಬರ್ ಕೇಳ್ತಾಳೋ.,
ನಿಂಗೂ ಡಿಮ್ಯಾಂಡಿದೇ ಮಗನೇ, ವಾಪಸ್ಸು ಹೊಂಟ್ಹೋಗು ಶಿವನೇ..!
ಬ್ಯಾಗು ಹಿಡೀ ಸೀದಾ ನಡಿ, ಬೋರ್ಡು ನೋಡೀ ಬಸ್ಸು ಹಿಡಿ!              |೧|

ಇದ್ದಕ್ಕಿದಂತೆ ಏನೇನೋ ಅನ್ನಿಸಿ ಕಣ್ಣು ತುಂಬಿ ಕೊಳ್ಳೋದ್ಯಾಕೆ?
ಅಪ್ಪ ಅಮ್ಮ ಇಬ್ಬ್ರೂ ಹತ್ರ ಕುಂತುಕೊಂಡು ಅಳಬ್ಯಾಡ ಅಂದಂಗಾಗೊದ್ಯಾಕೆ?
ದಿಕ್ಕುಗೆಟ್ಟವನು ಕಾಲಿದ್ದು ಹೆಳವ, ಎತ್ಲಾಗೆ ಹೋದರೂ ಒಂದೇ ನೀನೂ..
ಎಲ್ಲಿಂದ ಬಂದೆಯೋ ಅಲ್ಲೇ ಹುಡುಕಾಡು, ದುರ್ಬಿನು ಹಾಕಿಕೊಂಡು ನಿನ್ನೇ ನೀನು..!

ಚಡ್ಡಿ ದೋಸ್ತ್ರೆಲ್ಲಾ ನಿನ್ನಾ ಬೈತಾರೆ, ಪಕ್ಕದ ಮನೆ ಹುಡುಗಿ ಕಾಯ್ತಾಳೆ.,
ಕಲಿಸಿದ ಮೇಷ್ಟ್ರು ಹೋಗ್ಬಿಟ್ರೂ, ಮತ್ತಜ್ಜನ ಮನೆ ಮಾರ್ಬಿಟ್ರೂ.,
ತಂಗಿಯ ಗಂಡ ಲಾಸಾಗೋದಾ, ಅಣ್ಣನ್ಗೆ ಖಾಯಿಲೆ ಮೊನ್ನೆಯಿಂದಾ.,
ಅಪ್ಪನ್ಗೆ ಉಸಿರೇ ಸಾಕಾಗಿದೆ, ಅವ್ವನ್ಗೆ ನೆನಪೇ ನಿಂತ್ಹೋಗಿದೆ.,
ಕಂಡಿಸನ್ ಹಿಂಗಿದೇ ಮಗನೇ, ವಾಪಸ್ಸು ಹೊಂಟ್ಹೋಗು ಶಿವನೇ..!
ಬ್ಯಾಗು ಹಿಡೀ ಸೀದಾ ನಡಿ, ಬೋರ್ಡು ನೋಡೀ ಬಸ್ಸು ಹಿಡಿ..!                |೨|

ಹಾಡುಕೇಳಿ:


ಬುಧವಾರ, ಡಿಸೆಂಬರ್ 16, 2015

ನೆನಪು ಮರಳಿ..

ನೆನಪು ಮರಳಿ ಸುಳಿಯುತಿದೆ,
ಸೋತ ಮನವ ಕೆಣಕುತಿದೆ,
ಸತ್ತ ಬಳ್ಳಿಯಲ್ಲಿ ಅರಳಿ
ಗತದ ಘಮವ ಸೂಸುತಿದೆ.

ಆಸರೆಗೆ ಅಂಗಲಾಚಿ,
ಹನಿ ಪ್ರೇಮಕೆ ಹೃದಯ ಚಾಚಿ,
ಕಾದು ಸೋತ ಭಾವದುರಿಯ
ಹೊತ್ತು ತರುತಿದೆ
ಮತ್ತೆ ಬರುತಿದೆ.

ಕಳೆದುದರ ಹೊಳಪನರಸಿ,
ಉಳಿದುದರ ಬೆಳಕ ಮರೆಸಿ,
ಸಿಗದ ಮೋಹ ತೀರದೆಡೆಗೆ
ಮನವ ನಡೆಸಿದೆ
ಅಲೆಸಿ ದಣಿಸಿದೆ.

ಯಾರ ಹೃದಯ ಯಾರ ನೆಲೆಯೋ,
ಯಾರ ಸೆಳೆವುದ್ಯಾವ ಸೆಲೆಯೋ,
ಬಯಕೆ ಬೂದಿಯಡಿಯ ಕಾವು
ಹೊತ್ತಿ ಉರಿದಿದೆ,
ಮತ್ತೆ ಸುಡುತಿದೆ.

("ನಿಮ್ಮೆಲ್ಲರ ಮಾನಸ"ದಲ್ಲಿ ಪ್ರಕಟವಾದ ನನ್ನ ಕವನ)

ಭಾನುವಾರ, ಡಿಸೆಂಬರ್ 6, 2015

ಒಲುಮೆದೀಪ

ಮುಂಗುರುಳ ಸುರುಳಿಯಲಿ ಸುಳಿದಿರುವ ತಂಗಾಳಿ
ನನ್ನೆಡೆಗೆ ಬೀಸಿರಲು ಹಿತವಾಗಿದೆ;
ಹೂಗಳನೆ ನಾಚಿಸುವ ಈ ಕೇಷದಾ ಘಮಕೆ
ಭಾವಗಳ ಮೆರವಣಿಗೆ ಅತಿಯಾಗಿದೆ.

ಕೆನ್ನೆಯ ಗಗನದಲಿ ನಾಚಿಕೆಯ ಕೆಂಬಣ್ಣ
ತುಂಬುವ ಸೂರ್ಯನು ನಾನಾಗೊ ಹಂಬಲ;
ನೆನ್ನೆಗಳ ಪುಟಗಳಲಿ ನಾ ಅರಸಿ ಸೋತಿದ್ದ
ಒಲವಿನ ಆಸರೆಯು ನೀನೆಂದು ನಂಬಲ?

ಬಂದ ದಾರಿಯಲೆಲ್ಲ ಬರಿ ಒಂಟಿ ಹೆಜ್ಜೆಗಳೇ,
ಹೊಸದಾಗಿದೆ ಈ ಗೆಜ್ಜೆ ಕಾಲ್ಗಳ ಸಹಯಾನ;
ಲಜ್ಜೆ ತುಂಬಿದ ದನಿಯು ಮೆಲ್ಲ ಕರೆದಿರಲು,
ನನ್ನ ಹೆಸರಿಗೂ ಬಂತು ಎಂತಹ ಹೊಸತನ!

ದಿವ್ಯವಾಗಲಿದೆ ನವ್ಯ ನಾಳೆಯ ಪಯಣ
ಬೆಸೆದ ಕರಗಳೆ ಇದಕೆ ದಿಟ್ಟ ಸಾಕ್ಷಿ!
ಭವ್ಯ ಬಾಳಿನ ಕದವ ಜೊತೆಯಾಗಿ ತೆರೆಯೋಣ
ಅಡಿಯಿಡುವ ಹೊಸಿಲಲ್ಲಿ ಒಲುಮೆ ದೀಪವಿರಿಸಿ.

('ನಿಮ್ಮೆಲ್ಲರ ಮಾನಸ"ದಲ್ಲಿ ಪ್ರಕಟವಾದ ನನ್ನ ಕವನ)

ಬುಧವಾರ, ಡಿಸೆಂಬರ್ 2, 2015

ಮಡದಿಯ ನೆನಪು...

ಕಡಲಿನ ಮಡಿಲಿಗೆ ರವಿ ಕಾತರಿಸಲು,
ಶಶಿಯ ಬರುವನು ನೆನೆದು ಬಾನು ಕೆಂಪಾಗಲು,
ದೀಪವಿರದ ಹೊಸಿಲದಾಟಿ ಇರುಳು ಒಳಗಡಿಯಿಡಲು,
ಮೂಡಿಬರುವುದು ಮರಳಿ ಅವಳ ನೆನಪು.

ಸಂತೆ ಸಾಲಿನ ಬದಿಯ ತೆರೆದ ಬುಟ್ಟಿಗಳಲಿ
ಕಟ್ಟಿ ಇರಿಸಿಹ ಮಲ್ಲೆ ಘಮ್ಮೆಂದು ನಗಲು,
ದೇವಳದಿ ಅರ್ಚಕರು ಪ್ರಸಾದವೆಂದು
ಬಿಡಿ ದಳಗಳ ಬದಲು ಇಡಿ ಹೂವನೆ ಕೊಡಲು,
ಕಾಡಿ ಕೊಲುವುದು ನೀಳ ಜಡೆಯವಳ ನೆನಪು.

ಘಲ್ಲೆನುವ ಗೆಜ್ಜೆದನಿ ಎಲ್ಲಿಂದಲೋ ಕೇಳಿ
ಜೊತೆನಡೆದ ಹೆಜ್ಜೆಗಳೆ ಕಣ್ಮುಂದೆ ಬರಲು,
ಜರತಾರಿಯಂಚಿನ ಹಸಿರು ಸೀರೆಯನುಟ್ಟ
ಗುಡಿಯ ದೇವಿಯ ಪ್ರತಿಮೆ ಮನತುಂಬಿ ನಿಲಲು,
ಕಣ್ಣಂಚಿನಲಿ ಹನಿ ನನ್ನವಳ ನೆನಪು.

ಹುಸಿಮುನಿಸ ತೋರುತಲಿ ನಮ್ಮೊಲವಿನ ಹಸುಳೆ
ಅರೆತೆರೆದ ಕದದ ಮರೆಯಿಂದ ಇಣುಕಲು,
ಆ ಮೊಗದ ಆ ಬಗೆಯು ನಿನ್ನಂತೆಯೇ ಅನಿಸಿ
ಹುಟ್ಟಿ ಬರುತಿದೆ ಮತ್ತೆ ಸಾಲುಸಾಲಾಗಿ
ಅಗಲಿದ ಮಡದಿಯೆ ನಿನ್ನ ಅಮರನೆನಪು.

-ವಿನಾಯಕ ಭಟ್

("3K:ಕನ್ನಡ ಕವಿತೆ ಕಥನ" ತಂಡದವರು ಆಯೋಜಿಸಿದ್ದ "ರಾಜ್ಯೋತ್ಸವ ಕವನ ಸ್ಪರ್ಧೆ ೨೦೧೫" ರಲ್ಲಿ ಮೂರನೇ ಬಹುಮಾನ ಪಡೆದ ನನ್ನ ಕವನ)

ಶುಕ್ರವಾರ, ನವೆಂಬರ್ 13, 2015

ಕಾಣದ ಕೈ ಎಲ್ಲಾ ಕದ್ದು...

"ಡಿಂಗ ಗುಡುಗಿದರೆ ಕಾಡು ನಡುಗೀತು!"
ಬಾಲಮಂಗಳ ಹಿಡಿದ ಅಪ್ಪ ದೊಡ್ಡ ಸ್ವರದಲ್ಲಿ ಕಥೆ ಓದಿ ಹೇಳುತ್ತಿದ್ದರೆ ಪಕ್ಕದಲ್ಲಿ ಕುಳಿತ ಐದು ವರ್ಷದ ಪುಟ್ಟು ಬೆರಗುಗಣ್ಣಿನಿಂದ ಅಪ್ಪನೆಡೆ ನೋಡುತ್ತಾ ತಟ್ಟೆಯಲ್ಲಿ ಅಮ್ಮ ಕಲಸಿಟ್ಟ ಒಂದೊಂದೇ ಅನ್ನದ ತುತ್ತನ್ನು ತನ್ನ ಪುಟ್ಟ ಕೈಗಳಲ್ಲಿ ಎತ್ತಿ ಬಾಯಿಗಿಟ್ಟುಕೊಳ್ಳುತ್ತಾನೆ. ಇದು ನಿತ್ಯದ ಅಭ್ಯಾಸ;

"ಪುಟ್ಟೂ.... ಊಟಕ್ಕೆ ಬಾ"
ಅಮ್ಮ ಕರೆದಾಗ ಪುಟ್ಟು ಕೈಯ್ಯಲ್ಲೊಂದು ಕಥೆಪುಸ್ತಕ  ಹಿಡಿದುಕೊಂಡೇ ಬರುತ್ತಾನೆ. ಅಪ್ಪನಾದರೂ ಅಷ್ಟೇ; ತಾನೆಷ್ಟೇ ಕೋಪಿಷ್ಟನಾದರೂ, ಯಾವ ಕೆಲಸದ ತಲೆಬಿಸಿಯಲ್ಲಿದ್ದರೂ ಪುಟ್ಟುವಿಗೆ ಕಥೆ ಓದಿಹೇಳುವುದನ್ನು ತಪ್ಪಿಸುವುದಿಲ್ಲ.

ಅದು ಬಾಲ್ಯ! ಬಾಲಮಂಗಳ ಎನ್ನುವ ಪುಟ್ಟ ಪುಸ್ತಕದ ಪುಟಗಳಲ್ಲಿ ಬಣ್ಣಬಣ್ಣದ ಚಿತ್ರಗಳಾಗಿ ಮೂಡಿ ಬರುತ್ತಿದ್ದ ಡಿಂಗ, ಲಂಬೋದರ, ಫಕ್ರು, ಕಿಂಗಿಣಿಗಳ ಜೊತೆ ಕನಸಿನಲ್ಲಿ ಆಡುತ್ತಿದ್ದ ಬಾಲ್ಯ; ಬೇಸಿಗೆಯಲ್ಲಿ ಅಡಿಕೆ ತೋಟಕ್ಕೆ ನೀರುಬಿಡಲು ಹೋಗುವ ಅಪ್ಪನ ಹಿಂದೆ ಸಣ್ಣ ಪೈಪೊಂದನ್ನು ಹಿಡಿದ ಪುಟ್ಟು ತಾನೂ ಓಡುತ್ತಿದ್ದ ಬಾಲ್ಯ; ಅಡಿಕೆ ಮರವೇರಿದ ತಮ್ಮಯ್ಯ ಕೊನೆಯನ್ನ ಕಿತ್ತು ತನ್ನ ಸೊಂಟಕ್ಕೆ ಕಟ್ಟಿಕೊಂಡ ಹಗ್ಗದಲ್ಲಿ ಜಾರಿಬಿಡುವುದನ್ನೂ, ಅದನ್ನು ಅಪ್ಪ ಅಷ್ಟೇ ನೈಪುಣ್ಯತೆಯಿಂದ ಹಿಡಿದು ರಾಶಿಹಾಕುವುದನ್ನೂ ಮೈಮರೆತು ನೋಡುತ್ತಿದ್ದ ಬಾಲ್ಯ; "ಬರುವಾಗ ಸೈಕಲ್ ತರ್ತೀನಿ" ಅಂತ ಹೇಳಿ  ಅಡಿಕೆ ಮಂಡಿಗೆ ಹೋಗಿದ್ದ ಅಪ್ಪ ಬರಿಗೈಲಿ ಮರಳಿದಾಗ ಹೊರಳಾಡಿ ಅತ್ತು ರಂಪಾಟಮಾಡಿದ್ದ ಬಾಲ್ಯ; "ಮಂದಿನ್ಸಲ ಅಪ್ನನ್ಜೊತಿಗೆ ನೀನೂ ಹೋಗಿ ಯಾತರದ್ ಬೇಕೋ ಆತರದ್ ಸೈಕಲ್ ತರ್ಲಕ್ಕಡ ಬಿಡಾ..." ಎಂದು ರಮಿಸಿದ್ದ ಅಮ್ಮನ ಮಡಿಲಲ್ಲಿ ಅಳು ಮರೆತಿದ್ದ ಬಾಲ್ಯ....

ಮೊಮ್ಮಗನ ಹೆಸರೂ ಮರೆತು ಹೋಗಿ ಗಣೇಶ, ವಿಘ್ನೇಶ ಎಂದೆಲ್ಲಾ ಕರೆಯುತ್ತಿದ್ದ ಅಜ್ಜನ ಜೊತೆ ಅರಳೀಮರದ ಕಟ್ಟೆಯ ಮೇಲೆ ಕುಳಿತು ರಸ್ತೆಯಲ್ಲಿ ಹೋಗುವ ಬಸ್ಸಿಗೆ ಟಾಟಾ ಮಾಡುತ್ತಿದ್ದ  ಬಾಲ್ಯ; ಕೊನೆಗೆ ಅಜ್ಜ ಸತ್ತಾಗ ಅವನು ಬರೆದುಕೊಟ್ಟಿದ್ದ ಹಾಡಿನ ಪುಸ್ತಕ ಕೈಯ್ಯಲ್ಲಿ ಹಿಡಿದು ಬಿಕ್ಕಿಬಿಕ್ಕಿ ಅತ್ತಿದ್ದ ಬಾಲ್ಯ;  ನರ್ಸ್ ಕೈಗಳಲ್ಲಿ ಕಣ್ಮುಚ್ಚಿ ಮಲಗಿದ್ದ, ಈಗಷ್ಟೇ ಹುಟ್ಟಿರುವ ತಮ್ಮನ ಕೈಯ್ಯನ್ನೊಮ್ಮೆ ಮೆಲ್ಲನೆ ಮುಟ್ಟಿ ಪುಳಕಗೊಂಡಿದ್ದ ಬಾಲ್ಯ; ರಸ್ತೆಯ ನಡುವೆ ಐಸ್ ಕ್ಯಾಂಡಿ ಕೊಡಿಸೆಂದು ಹಠಹಿಡಿದು ಕುಳಿತ ತಮ್ಮನಿಗೆ ಸಾಲದಲ್ಲಿ ಐಸ್ ಕ್ಯಾಂಡಿ ಕೊಡಿಸಿ ಸುಮ್ಮನಾಗಿಸಿದ್ದ ಬಾಲ್ಯ..

ಅಕ್ಕರೆಯಿಂದ ಮತ್ತೆಮತ್ತೆ ಓದುತ್ತಿದ್ದ ಗೆಳತಿಗೋಸ್ಕರವೇ ಹತ್ತಾರು  ಚುಟುಕುಗಳನ್ನ ಬರೆದೊಯ್ಯುತ್ತಿದ್ದ ಬಾಲ್ಯ; ಶಾಲೆ ಮುಗಿಸಿ ಬರುವ ದಾರಿಯಲ್ಲಿ ಹರಿಯುತ್ತಿದ್ದ ಮಳೆನೀರಿಗೆ ಆಣೆಕಟ್ಟು ಕಟ್ಟುತ್ತಾ ಮನೆಗೆ ಬರುವುದು ತಡವಾದಾಗ ಅಮ್ಮನಿಂದ  ಪೆಟ್ಟು ತಿಂದಿದ್ದ ಬಾಲ್ಯ; ವಾರಕ್ಕೊಮ್ಮೆ ಬರುತ್ತಿದ್ದ ಭಾನುವಾರದ ಸಿನೆಮಾಗಾಗಿ ಚಾತಕಪಕ್ಷಿಯಂತೆ ಕಾದಿರುತ್ತಿದ್ದ ಬಾಲ್ಯ; ಕೊನೆಗೆ ಸಮಯಸಾಗುತ್ತಾ ಕಾಣದ ಕೈಯ್ಯಿ ಎಲ್ಲ ಕದ್ದು ನೆನಪಿನಲ್ಲಷ್ಟೇ ಉಳಿದುಹೋದ ಬಾಲ್ಯ...

ಇಂದು ಬೇಕೆಂದದ್ದನ್ನು ಮರುಕ್ಷಣವೇ ಕೊಂಡುಕೊಳ್ಳುವ ಸಾಮರ್ಥ್ಯವಿದೆ; ಆದರೆ ಬಯಸಿದ್ದು ದೊರಕಿತೆಂದು ಮನಸಾರೆ ಸಂಭ್ರಮಿಸಲು ಯಾಕೆ ಆಗುತ್ತಿಲ್ಲ? ದಿನದ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದ ಆ ತೋಟಕ್ಕೆ ಕಾಲಿಟ್ಟು ಅದೆಷ್ಟು ತಿಂಗಳಾಯಿತು? ಬೇಕೆಂದಾಗ ಸಿಡಿ ಕೊಂಡೋ,  ಡೌನ್ ಲೋಡ್ ಮಾಡಿಯೋ ನೋಡಬಹುದಾದ ಸಿನೆಮಾಗಳು ಆ 'ಭಾನುವಾರದ ಸಿನೆಮಾ'ದಷ್ಟು ಸೊಗಾಸಾಗೇಕಿಲ್ಲ? ವಿಷಯವೇ ಇಲ್ಲದೇ ಗಂಟೆಗಟ್ಟಲೇ ಹರಟುತ್ತಿದ್ದ ಗೆಳತಿಗೆ ಇಂದು ನಾನು ಮರೆತೇ ಹೋದದ್ದಾದರೂ ಹೇಗೆ? ಜೊತೆಯಲ್ಲಿ ಆಡಿ, ಜಗಳಾಡಿ, ಅಳಿಸಿ ಕೊನೆಗೆ ರಮಿಸುತ್ತಿದ್ದ ತಮ್ಮನೊಂದಿಗೆ ಎರೆಡು ಮಾತಾಡಲೂ ಇಂದೇಕೆ ಸಮಯವೇ ಸಿಗುತ್ತಿಲ್ಲ?
ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತೇನೆ; ರಜೆ ಹಾಕಿ ಊರಿಗೆ ಬಂದಾಗ ಕೆಲವೊಂದು ತಂಪು ಸಂಜೆಗಳಲ್ಲಿ ಸುಮ್ಮನೆ ಹೊರಗೆ ಹೊರಟುಬಿಡುತ್ತೇನೆ; ಅದೇ ತೋಟದ ದಾರಿಯಲ್ಲಿ, ಗುಡ್ಡದ ಏರಿಯಲ್ಲಿ, ಹಳ್ಳದ ದಂಡೆಯಮೇಲೆ ನಡೆಯುತ್ತಾ ಮತ್ತದೇ ಖುಷಿಗಾಗಿ ಅರಸುತ್ತೇನೆ. ಅಪ್ಪ ಬಾಳೇದಿಂಡನ್ನು ಕೆತ್ತಿ ಗಾಡಿ ಮಾಡಿಕೊಟ್ಟಿದ್ದ ಜಾಗವನ್ನು ದಿಟ್ಟಿಸುತ್ತಾ ನಿಮಿಷಗಟ್ಟಲೆ ನಿಲ್ಲುತ್ತೇನೆ. ಮುದ್ದಿನ ಬೆಕ್ಕು ನರಳುತ್ತಾ ಪ್ರಾಣಬಿಟ್ಟ ಅಂಗಳದ ಮೂಲೆಯನ್ನೊಮ್ಮೆ ಮೆಲ್ಲನೆ ಸವರುತ್ತೇನೆ. ಗೆಳತಿ ಹೊರಳಿನೋಡಿ ನಕ್ಕು ಮುನ್ನಡೆದಿದ್ದ ದಾರಿಯಲ್ಲಿ ಸುಮ್ಮನೆ ನಡೆಯುತ್ತೇನೆ.....

ಬಿಡುವಿನ ಅರ್ಥವನ್ನೇ ಮರೆಸುತ್ತಿರುವ ಬೆಂಗಳೂರು, ಕೆಲಸದಾಚೆಗಿನ ಸಂಗತಿಗಳನ್ನೇ ಅರಿಯದಂತಿರುವ ಎಂಡಿ, ಬಾಸ್, ಮ್ಯಾನೇಜರ್ ಗಳು, ಎಷ್ಟೇ ಬುದ್ಧಿವಂತನಾದರೂ ಭಾವನೆಗಳಿಗೆ ಸ್ಪಂದಿಸಲಾರದ ಕಂಪ್ಯೂಟರ್ ಎದುರು ಯಾಂತ್ರಿಕವಾಗಿ ಕಳೆದುಹೋಗುತ್ತಿರುವ ದಿನಗಳು, ಅನಿರೀಕ್ಷಿತ ಸಮಯದಲ್ಲಿ ರಿಂಗಾಗತೊಡಗಿದ ಮೊಬೈಲ್ನಲ್ಲಿ ಮೂಡಿಬರುತ್ತಿರುವ ಅಮ್ಮನ ನಂಬರ್ ಮೂಡಿಸುವ ಆತಂಕ, ಎಷ್ಟೇ ದುಡಿದರೂ ವಸತಿ, ಬಟ್ಟೆ, ಆಹಾರಗಳಿಗಿಂತ ಹೆಚ್ಚಿನದೇನನ್ನೂ ಕೊಡಲಾರದ ಸಂಪಾದನೆ... ಇದೆಲ್ಲದರ ನಡುವೆ ಕಳೆದುಹೋಗಿರುವ ನನ್ನನ್ನು ಹುಡುಕುವುದಾದರೂ ಹೇಗೆ?
ಹಳೆಯದೊಂದು ಅಪ್ಪ-ಅಮ್ಮನ ಜೊತೆ ತೆಗೆಸಿಕೊಂಡ  ಫೋಟೋ ನೋಡುತ್ತಾ ಯೋಚಿಸುತ್ತೇನೆ. ತಮ್ಮನ ಹೆಗಲಮೇಲೆ ಕೈಹಾಕಿ ನಿಂತಿರುವ 'ಪುಟ್ಟು' ತಣ್ಣಗೆ ನಗುತ್ತಾನೆ...

("ನಿಮ್ಮೆಲ್ಲರ ಮಾನಸ"ದ ನವೆಂಬರ್೨೦೧೫ ನೇ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)

ಬುಧವಾರ, ಅಕ್ಟೋಬರ್ 28, 2015

ಮೊದಲ ತೊದಲು...

ನಮಸ್ಕಾರ.. ಸ್ವಾಗತ ನನ್ನ ಬ್ಲಾಗ್ ಗೆ... :-)

ನಾನು ವಿನಾಯಕ ಭಟ್. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಅನ್ನೋ ಚಂದದ ಮಲೆನಾಡಿನ ಹಳ್ಳಿ ನನ್ನೂರು. ಸದ್ಯಕ್ಕೆ ಅನ್ನ ಹುಡುಕಿಕೊಂಡಿರೋದು ಬೆಂಗಳೂರಿನಲ್ಲಿ.
ಹುಟ್ಟಿ ಬೆಳೆದ ಊರಿನಲ್ಲಿ ಉದ್ಯೋಗ ಹುಟ್ಟದೇ ಅದೃಷ್ಟವನ್ನ ಅರಸಿಕೊಂಡು ಪಟ್ಟಣ ಸೇರಿ,  Settle ಆಗಲು ಸರ್ಕಸ್ ಮಾಡುತ್ತಿರವ  ಲಕ್ಷಾಂತರ ಎಡಬಿಡಂಗಿಗಳಲ್ಲಿ ನಾನೂ ಒಬ್ಬ. ಹೇಳಿಕೊಳ್ಳುವಂತಹ ವಿಶೇಷತೆಗಳಿಲ್ಲದ ಸಾಮಾನ್ಯ ವ್ಯಕ್ತಿ; ಜೀವನದ ಪ್ರತಿಯೊಂದು ಸಂಗತಿಯನ್ನೂ ಭಾವುಕ ನೆಲೆಯಲ್ಲೇ ನೋಡುವವನು.
ಬರೆಯಬೇಕು ಅನ್ನೋದು ತೀರಾ ಚಿಕ್ಕಂದಿನಲ್ಲೇ ನನಗಂಟಿಕೊಂಡ "ಹುಚ್ಚು". ಓದು ಮುಗಿಸಿ ಬೆಂಗಳೂರಿಗೆ ಬಂದಮೇಲೆ ಇಲ್ಲಿನ ಜನರ ವೇಗ, ಬದುಕಿನ ಓಘವನ್ನ ನೋಡಿ ಕಾಡಲಾರಂಭಿಸಿದ "ನಾನು ಏನೂ ಅಲ್ಲ" ಎನ್ನುವ ಕೀಳರಿಮೆಯಿಂದ ಹೊರಬರಲು ನೆರವಾದ ಗೆಳೆಯ - ಮತ್ತದೇ ಬರಹ. ಹಾಗಂತ ತೀರ ಗಂಭೀರ ವಿಷಯಗಳ ಬಗ್ಗೆ ಬರೆಯುವಷ್ಟು ಬರಹಗಾರನಂತೂ ಖಂಡಿತ ಅಲ್ಲ. ತೋಚಿದ್ದನ್ನ-ಗೀಚಿದ್ದನ್ನ ನಾಲ್ಕು ಜನರೊಂದಿಗೆ ಹಂಚಿಕೊಳ್ಳಬೇಕೆಂಬ ಅಭಿಲಾಶೆಯೊಂದಿಗೆ, "ನಾಲ್ಕು ಜನ ಓದುವ ಮಟ್ಟಕ್ಕೆ ನಾನು ಬರೆಯಬಲ್ಲೆನಾ?" ಅನ್ನುವ ಭಯದ ಗುಮ್ಮನನ್ನ ಜೊತೆಯಲ್ಲಿಟ್ಟುಕೊಂಡೇ ಈ "ಬ್ಲಾಗ್" ಲೋಕಕ್ಕೆ ಕಾಲಿಡುತ್ತಿದ್ದೇನೆ.

ಕೆದಕಿದಷ್ಟೂ ಹೊಸತನದ ಪದರಗಳನ್ನ ಬಿಚ್ಚುವ ಬೆಂಗಳೂರು,  ಮುಗಿಯದ ಮಮತೆ ತೋರುವ ಅಪ್ಪ-ಅಮ್ಮ, ಕಾಡುವ ಬಾಲ್ಯದ ನೆನಪು, ಒಮ್ಮೆ ಖುಷಿಯ ಆಕಾಶದಲ್ಲಿ ತೇಲಿಸಿ, ಮರುಕ್ಷಣವೇ ಖಿನ್ನತೆಯ ಪಾತಾಳಕ್ಕೆ ನೂಕಿಬಿಡುವ ಹುಚ್ಚು ಭಾವನೆಗಳು, "ಹೆದರ್ಬೇಡ್ವೋ ಭಟ್ಟ, ನಾವಿದೀವಿ" ಅಂತ ಪ್ರತಿ ಗಂಡಾಂತರದಲ್ಲೂ ಜೊತೆನಿಲ್ಲುವ ಗೆಳೆಯರು, ಸನಿಹವೂ ನಿಲ್ಲದೇ, ದೂರನೂ ಹೋಗದೇ ಒಗಟಾಗಿ ಕಾಡುವ ಒಲವು.... ಇನ್ನೇನು ವಿಷಯ ಬೇಕು ಹೇಳಿ ಬರೆಯೋದಕ್ಕೆ? ತಿದ್ದಿತೀಡೋದಕ್ಕೆ ನೀವಿದ್ದೀರಿ; ಇನ್ನು ನನ್ನ "ಯಾನ"ವನ್ನ ಆರಂಭಿಸಬಹುದಲ್ವ....?

ಸ್ನೇಹಾಭಿಲಾಷೆಯೊಂದಿಗೆ
ವಿನಾಯಕ ಭಟ್

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...