ಮಂಗಳವಾರ, ಡಿಸೆಂಬರ್ 22, 2015

ಹುಟ್ಟಿದ ಊರನು ಬಿಟ್ಟು ಬಂದ ಮೇಲೆ..

ಭಟ್ರು ಬರೆದ ಹಾಡುಗಳು ಇಷ್ಟವಾಗೋದೇ  ಈ ಕಾರಣಕ್ಕೆ. ಅವರು ಯಾವ ವಿಷಯದ ಬಗ್ಗೆ ಬರೆದ್ರೂ, ಅದು ಬರೀ ಆ ಸಿನೆಮಾದ ಹಿನ್ನೆಲೆಯಲ್ಲೇ ಉಳಿಯೋದಿಲ್ಲ. ಅವರೇ ಹೇಳುವಂತೆ ಅವು ಸಿನೆಮಾದ ಆಚೆಗೆ, ಸ್ವತಂತ್ರವಾಗಿ ಹಾಡಿಕೊಳ್ಳಬಹುದಾದ, ಎಲ್ಲರ ಮನದಾಳದ ಹಾಡುಗಳಾಗಿರುತ್ತವೆ.

ಈಗ ನಾನು ಇಷ್ಟೆಲ್ಲಾ ಹೇಳ್ತಿರೋದಕ್ಕೆ ಕಾರಣ ಏನಂದ್ರೆ ಕೆಲವು ದಿನಗಳ ಕೆಳಗೆ ಧ್ವನಿಸುರುಳಿ ಬಿಡುಗಡೆಯಾದ 'ಪರಪಂಚ' ಚಿತ್ರದ 'ಹುಟ್ಟಿದ ಊರನು ಬಿಟ್ಟುಬಂದ ಮೇಲೆ...' ಹಾಡು. ಈಗಾಗಲೇ ಹುಚ್ಚ ವೆಂಕಟ್ ಹಾಡಿದ್ದು ಅನ್ನೋ ಕಾರಣಕ್ಕೆ ಸಾಕಷ್ಟು ಸುದ್ದಿಯಾಗಿದ್ದ ಈ ಹಾಡು ಸಹಜವಾಗಿಯೇ ಬಹಳ ಕುತೂಹಲ ಹುಟ್ಟಿಸಿತ್ತು. ಈಗ ಇದರ ರೆಕಾರ್ಡಿಂಗ್  ದೃಶ್ಯಗಳು Youtubeನಲ್ಲಿ ಬಿಡುಗಡೆಯಾಗಿದೆ. ಇಂಪಾದ ಸಂಗೀತವಿರುವ ಈ ಹಾಡು ವೆಂಕಟ್ ರ  ಸ್ವರದಲ್ಲಿ ವಿಭಿನ್ನವಾಗಿ ಮೂಡಿಬಂದಿದೆ. ಆದರೆ ಎಲ್ಲಕ್ಕಿಂತ ಇಲ್ಲಿ ಯೋಗರಾಜ್ ಭಟ್ ಅವರ ಸಾಹಿತ್ಯವೇ ಹೈಲೈಟ್ ಅಂದ್ರೆ ತಪ್ಪಾಗಲಾರದೇನೋ. ಭಟ್ರು ತಮ್ಮ ಎಂದಿನ ಹಾಸ್ಯ, ವ್ಯಂಗ್ಯ ಬೆರೆತ ಶೈಲಿಯಲ್ಲಿ ಊರುಬಿಟ್ಟು ಪಟ್ಟಣ ಸೇರಿರುವ  ಲಕ್ಷ-ಕೋಟ್ಯಾಂತರ ಮನಸ್ಸುಗಳ ತಳಮಳ-ಭಾವನೆಗಳನ್ನ ಅದ್ಭುತವಾಗಿ ಸಾಹಿತ್ಯವಾಗಿಸಿದ್ದಾರೆ.

ಪ್ರತೀ ಸಾಲು ಮತ್ತೆ ಮತ್ತೆ ಓದುವಂತಿದೆ;  ಹೌದು. ಊರ ದಿಕ್ಕಿನ ಗಾಳಿ, ನಡುವಿನ ಆಲದಮರ, ಬಯ್ಯುವ ದೋಸ್ತ್ ಗಳು, ಕಣ್ಣು ತುಂಬಿ ಬಂದಿದ್ದು, ಅಪ್ಪ/ಅಮ್ಮ ಅಳಬೇಡ ಅಂದಂಗಾಗಿದ್ದು.... ಈ ಎಲ್ಲಾ ತಲ್ಲಣವೂ ನಾವು ಅನುಭವಿಸಿದ್ದೇ ಅಲ್ವಾ..  ಜೀವನಾನುಭವಗಳನ್ನ ಇಷ್ಟೊಂದು ಸುಂದರಸಾಲುಗಳಲ್ಲಿ ಹಿಡಿದಿಡುವ ಕಲೆ ಅವರಿಗೆ ಸಿದ್ಧಿಸಿದ್ದಾದರೂ ಹೇಗೆ?

ನನಗಂತೂ ತುಂಬಾ ಇಷ್ಟ ಆಯ್ತು. ನೀವೂ ಓದಿ, ಇಷ್ಟ ಆಗದಿದ್ರೆ ಆಮೇಲೆ ಹೇಳಿ!

ಹಾಡು: ಹುಟ್ಟಿದ ಊರನು ಬಿಟ್ಟು ಬಂದ ಮೇಲೆ...
ಚಿತ್ರ: ಪರಪಂಚ
ಗಾಯಕರು: ವೆಂಕಟ್
ಸಂಗೀತ: ವೀರ್ ಸಮರ್ಥ್
ಸಾಹಿತ್ಯ: ಯೋಗರಾಜ್ ಭಟ್

ಹುಟ್ಟಿದ ಊರನು ಬಿಟ್ಟು ಬಂದ ಮೇಲೆ
ಇನ್ನೇನು ಬಿಡುವುದು ಬಾಕಿ ಇದೆ..?
ಮಾಡೋದೆಲ್ಲಾ ಮಾಡಿ ಅಳಬ್ಯಾಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೆ..!
ಊರ ದಿಕ್ಕಿನ ಗಾಳಿ ತಂದಿದೆ ಒಂದು ಕಾಣದ ಕೂಗನ್ನು,
ತವರಿಗಿಂತ ಬೆಚ್ಚನೆ ಜಾಗ ಹೇಳು ಎಲ್ಲಿದೆ ನಿಂಗಿನ್ನೂ..?
ನಿಂಗಿದೂ ಬೇಕಿತ್ತಾ ಮಗನೇ?
ವಾಪಸ್ಸು ಹೊಂಟ್ಹೋಗು ಶಿವನೇ!
ಬ್ಯಾಗು ಹಿಡೀ ಸೀದಾ ನಡಿ, ಬೋರ್ಡು ನೋಡಿ ಬಸ್ಸು ಹಿಡಿ..       |ಪ|

ಬ್ಯಾರೆಲ್ಲೆ ಇದ್ದರೂ ಇದ್ದು ಸತ್ತಂಗೆ, ಊರಲ್ಲೇ ನಿನ್ನ ಉಸಿರಿದೆ..
ನಿನ್ನೂರ ನಡುವಿನ ಆಲದ ಮರದಲಿ ನೀ ಕೆತ್ತಿ ಬಂದ ಹೆಸರಿದೆ..
ಕಿತ್ಹೋದ ಕಾಸಿಗೆ ಕಿತ್ತಾಡೋ ಕೀರ್ತಿಗೆ ಹೈವೇಲಿ ಲಾರಿ ಹಿಡಿದು ನೀ ಬಂದೆ,
ಪಟ್ಟಣಕೆ ಬಂದು ಸಗಣಿಯ ಮ್ಯಾಲಿನ ಸಂಕ್ರಾತಿ ಹೂವಿನಂತೆ ನೀನಾದೆ..!

ಹಬ್ಬಕ್ಕೆ ಹಳೇ ಹುಡುಗಿ ಬರುತಾಳೋ, ಮಗನಿಗೆ ನಿನ್ನ ಹೆಸರಿಟ್ಟಾಳೋ..
ಈ ಬಾರಿ ಒಳ್ಳೆ ಫಸಲಂತೇ, ಅತ್ತಿಗೆ ತಿರುಗಾ ಬಸಿರಂತೇ.,
ನಿಮ್ ಮಾವ ಎಲೆಕ್ಷನ್ ಗೆದ್ನಂತೇ, ದೊಡ್ಡಪ್ಪ ಸಿಗರೇಟ್ ಬಿಟ್ನಂತೆ.,
ಅತ್ತೆಯ ಮಗಳು ಓದ್ತಾಳೋ, ಆಗಾಗ ನಿನ್ನ ನಂಬರ್ ಕೇಳ್ತಾಳೋ.,
ನಿಂಗೂ ಡಿಮ್ಯಾಂಡಿದೇ ಮಗನೇ, ವಾಪಸ್ಸು ಹೊಂಟ್ಹೋಗು ಶಿವನೇ..!
ಬ್ಯಾಗು ಹಿಡೀ ಸೀದಾ ನಡಿ, ಬೋರ್ಡು ನೋಡೀ ಬಸ್ಸು ಹಿಡಿ!              |೧|

ಇದ್ದಕ್ಕಿದಂತೆ ಏನೇನೋ ಅನ್ನಿಸಿ ಕಣ್ಣು ತುಂಬಿ ಕೊಳ್ಳೋದ್ಯಾಕೆ?
ಅಪ್ಪ ಅಮ್ಮ ಇಬ್ಬ್ರೂ ಹತ್ರ ಕುಂತುಕೊಂಡು ಅಳಬ್ಯಾಡ ಅಂದಂಗಾಗೊದ್ಯಾಕೆ?
ದಿಕ್ಕುಗೆಟ್ಟವನು ಕಾಲಿದ್ದು ಹೆಳವ, ಎತ್ಲಾಗೆ ಹೋದರೂ ಒಂದೇ ನೀನೂ..
ಎಲ್ಲಿಂದ ಬಂದೆಯೋ ಅಲ್ಲೇ ಹುಡುಕಾಡು, ದುರ್ಬಿನು ಹಾಕಿಕೊಂಡು ನಿನ್ನೇ ನೀನು..!

ಚಡ್ಡಿ ದೋಸ್ತ್ರೆಲ್ಲಾ ನಿನ್ನಾ ಬೈತಾರೆ, ಪಕ್ಕದ ಮನೆ ಹುಡುಗಿ ಕಾಯ್ತಾಳೆ.,
ಕಲಿಸಿದ ಮೇಷ್ಟ್ರು ಹೋಗ್ಬಿಟ್ರೂ, ಮತ್ತಜ್ಜನ ಮನೆ ಮಾರ್ಬಿಟ್ರೂ.,
ತಂಗಿಯ ಗಂಡ ಲಾಸಾಗೋದಾ, ಅಣ್ಣನ್ಗೆ ಖಾಯಿಲೆ ಮೊನ್ನೆಯಿಂದಾ.,
ಅಪ್ಪನ್ಗೆ ಉಸಿರೇ ಸಾಕಾಗಿದೆ, ಅವ್ವನ್ಗೆ ನೆನಪೇ ನಿಂತ್ಹೋಗಿದೆ.,
ಕಂಡಿಸನ್ ಹಿಂಗಿದೇ ಮಗನೇ, ವಾಪಸ್ಸು ಹೊಂಟ್ಹೋಗು ಶಿವನೇ..!
ಬ್ಯಾಗು ಹಿಡೀ ಸೀದಾ ನಡಿ, ಬೋರ್ಡು ನೋಡೀ ಬಸ್ಸು ಹಿಡಿ..!                |೨|

ಹಾಡುಕೇಳಿ:


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...