ಬುಧವಾರ, ಡಿಸೆಂಬರ್ 30, 2015

ನನ್ನೊಳಗಿನ ನಾನು..


ನನ್ನೊಳಗೊಬ್ಬ ಅವನಿದ್ದಾನೆ;
ಮೊಟ್ಟಮೊದಲ ಕೀಳರಿಮೆಯಲ್ಲಿ
ಹುಟ್ಟಿಬಂದವನು;
ನಕ್ಕು ಎಲ್ಲರೊಡನೆ ಬೆರೆಯಬಲ್ಲವನು.
ದುಃಖ ಕಂಡರೆ ಅವನ ಕಂಗಳಲಿ
ಒರೆಸಲು ಹಲವು ಕೈಗಳಿವೆ.
ನನ್ನಂತೆ ಒಂಟಿಯಲ್ಲ ಅವನು.

ನನ್ನಂತೆ ಹೆತ್ತವರ ಪಾಲಿಗವನು
ಹೆಗ್ಗಣವಲ್ಲ;
ದುರ್ಗುಣಗಳಿಲ್ಲ ಅನ್ನುವುದೊಂದೇ
ಅವನ ಸದ್ಗುಣವಲ್ಲ.

ಭಾವನೆಗಳ ಬಚ್ಚಿಟ್ಟ
ಸೆರೆಮನೆಯಲ್ಲ ಅವನ ಹೃದಯ.
ಸ್ವಚ್ಛಂದ ಮಾತುಗಳ ನವಿರಾದ ಕುಂಚದಲಿ
ಮಳೆಬಿಲ್ಲ ಮೂಡಿಸುವ ಮಾತುಗಾರ;
ಮೋಡಿಗಳ ಶರ ಹೂಡಿ ಮನದನ್ನೆಯ ಮನಕೆ
ಅವಳ ಒಲುಮೆಯ ಕದ್ದ ಜಾದೂಗಾರ.

ನನ್ನೆಲ್ಲ 'ಇಲ್ಲ'ಗಳ
ಹುಡುಹುಡುಕಿ ತೋರುವನು,
ಪ್ರತಿಯೊಂದು ಸೋಲಲ್ಲೂ
ಕುಟುಕುಟುಕಿ ಕಾಡುವನು,
'ಹೀಗಿರಬೇಕಿತ್ತು ನೀನು' ಎಂಬುದವನ ಲೇವಡಿ;
ನಾನೆಂಬ ಮಾರ್ಜಾಲದೊಳಮನದ ಹುಲಿಯವನು,
ಹತಾಶೆ ಫಲಿತ ಕಲ್ಪನಾ ನಾಯಕ
'ನನ್ನೊಳಗಿನ ನಾನು'

-ವಿನಾಯಕ ಭಟ್.

ಒಂದೊಳ್ಳೆ ಬ್ಲಾಗ್..

ಸಂಜೆ ಇಂಟರ್ನೆಟ್ನಲ್ಲಿ ಹಾಗೇ ಸುಮ್ಮನೆ ಕಣ್ಣಾಡಿಸುತ್ತಿದ್ದಾಗ ಅಚಾನಕ್ಕಾಗಿ ಕಣ್ಣಿಗೆ ಬಿದ್ದ ಬ್ಲಾಗ್ ಡಾ|ಕೃಷ್ಣಮೂರ್ತಿ ಅವರ "ಕೊಳಲು". ಅವರ ವೈದ್ಯಬದುಕಿನ ಅನುಭವಗಳ ಸ್ವಾರಸ್ಯಕರ ಘಟನೆಗಳು, ಉತ್ತಮ ಚಿಂತನೆಗಳುಳ್ಳ ಕಥೆ, ಲೇಖನಗಳು, ಅರ್ಥಪೂರ್ಣ-ಸುಲಲಿತ ಕವನಗಳು ಹೀಗೇ  ಹಲವಾರು ಚಂದದ  ಬರಹಗಳಿರುವ ಬ್ಲಾಗ್.
ನೀವೂ ಒಮ್ಮೆ ಓದಿ...

http://dtkmurthy.blogspot.in

ಮಂಗಳವಾರ, ಡಿಸೆಂಬರ್ 22, 2015

ಹುಟ್ಟಿದ ಊರನು ಬಿಟ್ಟು ಬಂದ ಮೇಲೆ..

ಭಟ್ರು ಬರೆದ ಹಾಡುಗಳು ಇಷ್ಟವಾಗೋದೇ  ಈ ಕಾರಣಕ್ಕೆ. ಅವರು ಯಾವ ವಿಷಯದ ಬಗ್ಗೆ ಬರೆದ್ರೂ, ಅದು ಬರೀ ಆ ಸಿನೆಮಾದ ಹಿನ್ನೆಲೆಯಲ್ಲೇ ಉಳಿಯೋದಿಲ್ಲ. ಅವರೇ ಹೇಳುವಂತೆ ಅವು ಸಿನೆಮಾದ ಆಚೆಗೆ, ಸ್ವತಂತ್ರವಾಗಿ ಹಾಡಿಕೊಳ್ಳಬಹುದಾದ, ಎಲ್ಲರ ಮನದಾಳದ ಹಾಡುಗಳಾಗಿರುತ್ತವೆ.

ಈಗ ನಾನು ಇಷ್ಟೆಲ್ಲಾ ಹೇಳ್ತಿರೋದಕ್ಕೆ ಕಾರಣ ಏನಂದ್ರೆ ಕೆಲವು ದಿನಗಳ ಕೆಳಗೆ ಧ್ವನಿಸುರುಳಿ ಬಿಡುಗಡೆಯಾದ 'ಪರಪಂಚ' ಚಿತ್ರದ 'ಹುಟ್ಟಿದ ಊರನು ಬಿಟ್ಟುಬಂದ ಮೇಲೆ...' ಹಾಡು. ಈಗಾಗಲೇ ಹುಚ್ಚ ವೆಂಕಟ್ ಹಾಡಿದ್ದು ಅನ್ನೋ ಕಾರಣಕ್ಕೆ ಸಾಕಷ್ಟು ಸುದ್ದಿಯಾಗಿದ್ದ ಈ ಹಾಡು ಸಹಜವಾಗಿಯೇ ಬಹಳ ಕುತೂಹಲ ಹುಟ್ಟಿಸಿತ್ತು. ಈಗ ಇದರ ರೆಕಾರ್ಡಿಂಗ್  ದೃಶ್ಯಗಳು Youtubeನಲ್ಲಿ ಬಿಡುಗಡೆಯಾಗಿದೆ. ಇಂಪಾದ ಸಂಗೀತವಿರುವ ಈ ಹಾಡು ವೆಂಕಟ್ ರ  ಸ್ವರದಲ್ಲಿ ವಿಭಿನ್ನವಾಗಿ ಮೂಡಿಬಂದಿದೆ. ಆದರೆ ಎಲ್ಲಕ್ಕಿಂತ ಇಲ್ಲಿ ಯೋಗರಾಜ್ ಭಟ್ ಅವರ ಸಾಹಿತ್ಯವೇ ಹೈಲೈಟ್ ಅಂದ್ರೆ ತಪ್ಪಾಗಲಾರದೇನೋ. ಭಟ್ರು ತಮ್ಮ ಎಂದಿನ ಹಾಸ್ಯ, ವ್ಯಂಗ್ಯ ಬೆರೆತ ಶೈಲಿಯಲ್ಲಿ ಊರುಬಿಟ್ಟು ಪಟ್ಟಣ ಸೇರಿರುವ  ಲಕ್ಷ-ಕೋಟ್ಯಾಂತರ ಮನಸ್ಸುಗಳ ತಳಮಳ-ಭಾವನೆಗಳನ್ನ ಅದ್ಭುತವಾಗಿ ಸಾಹಿತ್ಯವಾಗಿಸಿದ್ದಾರೆ.

ಪ್ರತೀ ಸಾಲು ಮತ್ತೆ ಮತ್ತೆ ಓದುವಂತಿದೆ;  ಹೌದು. ಊರ ದಿಕ್ಕಿನ ಗಾಳಿ, ನಡುವಿನ ಆಲದಮರ, ಬಯ್ಯುವ ದೋಸ್ತ್ ಗಳು, ಕಣ್ಣು ತುಂಬಿ ಬಂದಿದ್ದು, ಅಪ್ಪ/ಅಮ್ಮ ಅಳಬೇಡ ಅಂದಂಗಾಗಿದ್ದು.... ಈ ಎಲ್ಲಾ ತಲ್ಲಣವೂ ನಾವು ಅನುಭವಿಸಿದ್ದೇ ಅಲ್ವಾ..  ಜೀವನಾನುಭವಗಳನ್ನ ಇಷ್ಟೊಂದು ಸುಂದರಸಾಲುಗಳಲ್ಲಿ ಹಿಡಿದಿಡುವ ಕಲೆ ಅವರಿಗೆ ಸಿದ್ಧಿಸಿದ್ದಾದರೂ ಹೇಗೆ?

ನನಗಂತೂ ತುಂಬಾ ಇಷ್ಟ ಆಯ್ತು. ನೀವೂ ಓದಿ, ಇಷ್ಟ ಆಗದಿದ್ರೆ ಆಮೇಲೆ ಹೇಳಿ!

ಹಾಡು: ಹುಟ್ಟಿದ ಊರನು ಬಿಟ್ಟು ಬಂದ ಮೇಲೆ...
ಚಿತ್ರ: ಪರಪಂಚ
ಗಾಯಕರು: ವೆಂಕಟ್
ಸಂಗೀತ: ವೀರ್ ಸಮರ್ಥ್
ಸಾಹಿತ್ಯ: ಯೋಗರಾಜ್ ಭಟ್

ಹುಟ್ಟಿದ ಊರನು ಬಿಟ್ಟು ಬಂದ ಮೇಲೆ
ಇನ್ನೇನು ಬಿಡುವುದು ಬಾಕಿ ಇದೆ..?
ಮಾಡೋದೆಲ್ಲಾ ಮಾಡಿ ಅಳಬ್ಯಾಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೆ..!
ಊರ ದಿಕ್ಕಿನ ಗಾಳಿ ತಂದಿದೆ ಒಂದು ಕಾಣದ ಕೂಗನ್ನು,
ತವರಿಗಿಂತ ಬೆಚ್ಚನೆ ಜಾಗ ಹೇಳು ಎಲ್ಲಿದೆ ನಿಂಗಿನ್ನೂ..?
ನಿಂಗಿದೂ ಬೇಕಿತ್ತಾ ಮಗನೇ?
ವಾಪಸ್ಸು ಹೊಂಟ್ಹೋಗು ಶಿವನೇ!
ಬ್ಯಾಗು ಹಿಡೀ ಸೀದಾ ನಡಿ, ಬೋರ್ಡು ನೋಡಿ ಬಸ್ಸು ಹಿಡಿ..       |ಪ|

ಬ್ಯಾರೆಲ್ಲೆ ಇದ್ದರೂ ಇದ್ದು ಸತ್ತಂಗೆ, ಊರಲ್ಲೇ ನಿನ್ನ ಉಸಿರಿದೆ..
ನಿನ್ನೂರ ನಡುವಿನ ಆಲದ ಮರದಲಿ ನೀ ಕೆತ್ತಿ ಬಂದ ಹೆಸರಿದೆ..
ಕಿತ್ಹೋದ ಕಾಸಿಗೆ ಕಿತ್ತಾಡೋ ಕೀರ್ತಿಗೆ ಹೈವೇಲಿ ಲಾರಿ ಹಿಡಿದು ನೀ ಬಂದೆ,
ಪಟ್ಟಣಕೆ ಬಂದು ಸಗಣಿಯ ಮ್ಯಾಲಿನ ಸಂಕ್ರಾತಿ ಹೂವಿನಂತೆ ನೀನಾದೆ..!

ಹಬ್ಬಕ್ಕೆ ಹಳೇ ಹುಡುಗಿ ಬರುತಾಳೋ, ಮಗನಿಗೆ ನಿನ್ನ ಹೆಸರಿಟ್ಟಾಳೋ..
ಈ ಬಾರಿ ಒಳ್ಳೆ ಫಸಲಂತೇ, ಅತ್ತಿಗೆ ತಿರುಗಾ ಬಸಿರಂತೇ.,
ನಿಮ್ ಮಾವ ಎಲೆಕ್ಷನ್ ಗೆದ್ನಂತೇ, ದೊಡ್ಡಪ್ಪ ಸಿಗರೇಟ್ ಬಿಟ್ನಂತೆ.,
ಅತ್ತೆಯ ಮಗಳು ಓದ್ತಾಳೋ, ಆಗಾಗ ನಿನ್ನ ನಂಬರ್ ಕೇಳ್ತಾಳೋ.,
ನಿಂಗೂ ಡಿಮ್ಯಾಂಡಿದೇ ಮಗನೇ, ವಾಪಸ್ಸು ಹೊಂಟ್ಹೋಗು ಶಿವನೇ..!
ಬ್ಯಾಗು ಹಿಡೀ ಸೀದಾ ನಡಿ, ಬೋರ್ಡು ನೋಡೀ ಬಸ್ಸು ಹಿಡಿ!              |೧|

ಇದ್ದಕ್ಕಿದಂತೆ ಏನೇನೋ ಅನ್ನಿಸಿ ಕಣ್ಣು ತುಂಬಿ ಕೊಳ್ಳೋದ್ಯಾಕೆ?
ಅಪ್ಪ ಅಮ್ಮ ಇಬ್ಬ್ರೂ ಹತ್ರ ಕುಂತುಕೊಂಡು ಅಳಬ್ಯಾಡ ಅಂದಂಗಾಗೊದ್ಯಾಕೆ?
ದಿಕ್ಕುಗೆಟ್ಟವನು ಕಾಲಿದ್ದು ಹೆಳವ, ಎತ್ಲಾಗೆ ಹೋದರೂ ಒಂದೇ ನೀನೂ..
ಎಲ್ಲಿಂದ ಬಂದೆಯೋ ಅಲ್ಲೇ ಹುಡುಕಾಡು, ದುರ್ಬಿನು ಹಾಕಿಕೊಂಡು ನಿನ್ನೇ ನೀನು..!

ಚಡ್ಡಿ ದೋಸ್ತ್ರೆಲ್ಲಾ ನಿನ್ನಾ ಬೈತಾರೆ, ಪಕ್ಕದ ಮನೆ ಹುಡುಗಿ ಕಾಯ್ತಾಳೆ.,
ಕಲಿಸಿದ ಮೇಷ್ಟ್ರು ಹೋಗ್ಬಿಟ್ರೂ, ಮತ್ತಜ್ಜನ ಮನೆ ಮಾರ್ಬಿಟ್ರೂ.,
ತಂಗಿಯ ಗಂಡ ಲಾಸಾಗೋದಾ, ಅಣ್ಣನ್ಗೆ ಖಾಯಿಲೆ ಮೊನ್ನೆಯಿಂದಾ.,
ಅಪ್ಪನ್ಗೆ ಉಸಿರೇ ಸಾಕಾಗಿದೆ, ಅವ್ವನ್ಗೆ ನೆನಪೇ ನಿಂತ್ಹೋಗಿದೆ.,
ಕಂಡಿಸನ್ ಹಿಂಗಿದೇ ಮಗನೇ, ವಾಪಸ್ಸು ಹೊಂಟ್ಹೋಗು ಶಿವನೇ..!
ಬ್ಯಾಗು ಹಿಡೀ ಸೀದಾ ನಡಿ, ಬೋರ್ಡು ನೋಡೀ ಬಸ್ಸು ಹಿಡಿ..!                |೨|

ಹಾಡುಕೇಳಿ:


ಬುಧವಾರ, ಡಿಸೆಂಬರ್ 16, 2015

ನೆನಪು ಮರಳಿ..

ನೆನಪು ಮರಳಿ ಸುಳಿಯುತಿದೆ,
ಸೋತ ಮನವ ಕೆಣಕುತಿದೆ,
ಸತ್ತ ಬಳ್ಳಿಯಲ್ಲಿ ಅರಳಿ
ಗತದ ಘಮವ ಸೂಸುತಿದೆ.

ಆಸರೆಗೆ ಅಂಗಲಾಚಿ,
ಹನಿ ಪ್ರೇಮಕೆ ಹೃದಯ ಚಾಚಿ,
ಕಾದು ಸೋತ ಭಾವದುರಿಯ
ಹೊತ್ತು ತರುತಿದೆ
ಮತ್ತೆ ಬರುತಿದೆ.

ಕಳೆದುದರ ಹೊಳಪನರಸಿ,
ಉಳಿದುದರ ಬೆಳಕ ಮರೆಸಿ,
ಸಿಗದ ಮೋಹ ತೀರದೆಡೆಗೆ
ಮನವ ನಡೆಸಿದೆ
ಅಲೆಸಿ ದಣಿಸಿದೆ.

ಯಾರ ಹೃದಯ ಯಾರ ನೆಲೆಯೋ,
ಯಾರ ಸೆಳೆವುದ್ಯಾವ ಸೆಲೆಯೋ,
ಬಯಕೆ ಬೂದಿಯಡಿಯ ಕಾವು
ಹೊತ್ತಿ ಉರಿದಿದೆ,
ಮತ್ತೆ ಸುಡುತಿದೆ.

("ನಿಮ್ಮೆಲ್ಲರ ಮಾನಸ"ದಲ್ಲಿ ಪ್ರಕಟವಾದ ನನ್ನ ಕವನ)

ಭಾನುವಾರ, ಡಿಸೆಂಬರ್ 6, 2015

ಒಲುಮೆದೀಪ

ಮುಂಗುರುಳ ಸುರುಳಿಯಲಿ ಸುಳಿದಿರುವ ತಂಗಾಳಿ
ನನ್ನೆಡೆಗೆ ಬೀಸಿರಲು ಹಿತವಾಗಿದೆ;
ಹೂಗಳನೆ ನಾಚಿಸುವ ಈ ಕೇಷದಾ ಘಮಕೆ
ಭಾವಗಳ ಮೆರವಣಿಗೆ ಅತಿಯಾಗಿದೆ.

ಕೆನ್ನೆಯ ಗಗನದಲಿ ನಾಚಿಕೆಯ ಕೆಂಬಣ್ಣ
ತುಂಬುವ ಸೂರ್ಯನು ನಾನಾಗೊ ಹಂಬಲ;
ನೆನ್ನೆಗಳ ಪುಟಗಳಲಿ ನಾ ಅರಸಿ ಸೋತಿದ್ದ
ಒಲವಿನ ಆಸರೆಯು ನೀನೆಂದು ನಂಬಲ?

ಬಂದ ದಾರಿಯಲೆಲ್ಲ ಬರಿ ಒಂಟಿ ಹೆಜ್ಜೆಗಳೇ,
ಹೊಸದಾಗಿದೆ ಈ ಗೆಜ್ಜೆ ಕಾಲ್ಗಳ ಸಹಯಾನ;
ಲಜ್ಜೆ ತುಂಬಿದ ದನಿಯು ಮೆಲ್ಲ ಕರೆದಿರಲು,
ನನ್ನ ಹೆಸರಿಗೂ ಬಂತು ಎಂತಹ ಹೊಸತನ!

ದಿವ್ಯವಾಗಲಿದೆ ನವ್ಯ ನಾಳೆಯ ಪಯಣ
ಬೆಸೆದ ಕರಗಳೆ ಇದಕೆ ದಿಟ್ಟ ಸಾಕ್ಷಿ!
ಭವ್ಯ ಬಾಳಿನ ಕದವ ಜೊತೆಯಾಗಿ ತೆರೆಯೋಣ
ಅಡಿಯಿಡುವ ಹೊಸಿಲಲ್ಲಿ ಒಲುಮೆ ದೀಪವಿರಿಸಿ.

('ನಿಮ್ಮೆಲ್ಲರ ಮಾನಸ"ದಲ್ಲಿ ಪ್ರಕಟವಾದ ನನ್ನ ಕವನ)

ಬುಧವಾರ, ಡಿಸೆಂಬರ್ 2, 2015

ಮಡದಿಯ ನೆನಪು...

ಕಡಲಿನ ಮಡಿಲಿಗೆ ರವಿ ಕಾತರಿಸಲು,
ಶಶಿಯ ಬರುವನು ನೆನೆದು ಬಾನು ಕೆಂಪಾಗಲು,
ದೀಪವಿರದ ಹೊಸಿಲದಾಟಿ ಇರುಳು ಒಳಗಡಿಯಿಡಲು,
ಮೂಡಿಬರುವುದು ಮರಳಿ ಅವಳ ನೆನಪು.

ಸಂತೆ ಸಾಲಿನ ಬದಿಯ ತೆರೆದ ಬುಟ್ಟಿಗಳಲಿ
ಕಟ್ಟಿ ಇರಿಸಿಹ ಮಲ್ಲೆ ಘಮ್ಮೆಂದು ನಗಲು,
ದೇವಳದಿ ಅರ್ಚಕರು ಪ್ರಸಾದವೆಂದು
ಬಿಡಿ ದಳಗಳ ಬದಲು ಇಡಿ ಹೂವನೆ ಕೊಡಲು,
ಕಾಡಿ ಕೊಲುವುದು ನೀಳ ಜಡೆಯವಳ ನೆನಪು.

ಘಲ್ಲೆನುವ ಗೆಜ್ಜೆದನಿ ಎಲ್ಲಿಂದಲೋ ಕೇಳಿ
ಜೊತೆನಡೆದ ಹೆಜ್ಜೆಗಳೆ ಕಣ್ಮುಂದೆ ಬರಲು,
ಜರತಾರಿಯಂಚಿನ ಹಸಿರು ಸೀರೆಯನುಟ್ಟ
ಗುಡಿಯ ದೇವಿಯ ಪ್ರತಿಮೆ ಮನತುಂಬಿ ನಿಲಲು,
ಕಣ್ಣಂಚಿನಲಿ ಹನಿ ನನ್ನವಳ ನೆನಪು.

ಹುಸಿಮುನಿಸ ತೋರುತಲಿ ನಮ್ಮೊಲವಿನ ಹಸುಳೆ
ಅರೆತೆರೆದ ಕದದ ಮರೆಯಿಂದ ಇಣುಕಲು,
ಆ ಮೊಗದ ಆ ಬಗೆಯು ನಿನ್ನಂತೆಯೇ ಅನಿಸಿ
ಹುಟ್ಟಿ ಬರುತಿದೆ ಮತ್ತೆ ಸಾಲುಸಾಲಾಗಿ
ಅಗಲಿದ ಮಡದಿಯೆ ನಿನ್ನ ಅಮರನೆನಪು.

-ವಿನಾಯಕ ಭಟ್

("3K:ಕನ್ನಡ ಕವಿತೆ ಕಥನ" ತಂಡದವರು ಆಯೋಜಿಸಿದ್ದ "ರಾಜ್ಯೋತ್ಸವ ಕವನ ಸ್ಪರ್ಧೆ ೨೦೧೫" ರಲ್ಲಿ ಮೂರನೇ ಬಹುಮಾನ ಪಡೆದ ನನ್ನ ಕವನ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...