ಶನಿವಾರ, ಮೇ 5, 2018

ಪ್ರೀತಿಸಿದವಳು ಸಿಗದಿರಲಿ!

ಕೊನೆಗೂ ಅವಳು ತಿರುಗಲಿಲ್ಲ.

ನೀನು ನೋಡುತ್ತಿದ್ದೆ.. ಕವಲು ದಾರಿಯಲ್ಲವಳು ತಿರುಗಿ ಮರೆಯಾಗುವವರೆಗೂ ನೋಡುತ್ತಿದ್ದೆ. ಜಗತ್ತಿನ ಮತ್ಯಾವ ಹೆಣ್ಣಿಗೂ ಇಲ್ಲದ ಆ ಮುದ್ದು ಜಡೆಯನ್ನು ತೂಗಾಡಿಸುತ್ತಾ ನಡೆದುಹೋದ ಮೊಲದಂತಹ ಆ ಹುಡುಗಿ ನಡೆಯುತ್ತಲೇ ಇದ್ದಳು. ಯಾವುದೋ ದೂರ ತೀರಕ್ಕೆ ಹೊರಟ ಹಡಗಿನಂತೆ.. ಆಳ ಕಣಿವೆಯೊಳಕ್ಕೆ ಕೈಜಾರಿ ಉರುಳುತ್ತಿರುವ ನವಿಲುಗರಿಯಂತೆ.. ಇನ್ನೆಂದೂ ಮರಳದ ಸೌಭಾಗ್ಯದಂತೆ... ಕಣ್ಣೆದುರೇ ತೊರೆದುಹೋಗುತ್ತಿರುವ ಪ್ರಾಣದಂತೆ...

ಅವಳು ನಡೆಯುತ್ತಲೇ ಇದ್ದಳು.

ಕೆಲವೇ ನಿಮಿಷದ ಕೆಳಗೆ ಕೊಂಚ ಕೈ ಚಾಚಿದರೂ  ಸಿಕ್ಕುಬಿಡುವಷ್ಟು ಸಮೀಪದಲ್ಲಿದ್ದ ಹುಡುಗಿ.. ಕಳೆದ ಎಷ್ಟೋ ವರ್ಷದ ಅಸಂಖ್ಯಾತ ನಿಮಿಷಗಳಿಂದ ನೀನು ಧ್ಯಾನಿಸುತ್ತಲೇ ಬಂದಿರುವ ಹುಡುಗಿ... ಯಾರೆಂದರೆ ಯಾರನ್ನೂ ತನ್ನ ಹತ್ತಿರ ಬಿಟ್ಟುಕೊಳ್ಳದ ಹುಡುಗಿ.. ನಿನ್ನೊಂದಿಗೆ ಮಾತ್ರ ಅದೊಂದು ತೆರನಾದ ಆತ್ಮೀಯತೆಯಿಂದಿದ್ದ ಹುಡುಗಿ.. ನೀನು ಮಾತುಬಿಟ್ಟ ಆ ಸಂಜೆ 'ಯಾಕೆ ನನ್ನೊಂದಿಗೆ ಮಾತಾಡ್ತಿಲ್ಲ?' ಎಂದು ಅಳುಮುಖ ಮಾಡಿಕೊಂಡು ನಿಂತಿದ್ದ ಹುಡುಗಿ.. ನೂರು ಗೆಳತಿಯರ ನಡುವಿನಿಂದಲೂ ನಿನಗೆ ಮಾತ್ರವೇನೋ ಎಂಬಂತಹ ಮುಗುಳ್ನಗು ಬೀರಿದ್ದ ಹುಡುಗಿ.. ಸೀರೆಯುಟ್ಟ ದಿನ ಸಾಕ್ಷಾತ್ ದೇವತೆಯಂತೆ ಕಂಗೊಳಿಸಿದ್ದ ಹುಡುಗಿ..

ಮೊಟ್ಟ ಮೊದಲ ಬಾರಿಗೆ ಖುಷಿಯಲ್ಲಿಯೂ ನಿನ್ನ ಕಣ್ತುಂಬಿಬರುವಂತೆ ಮಾಡಿದ್ದ ಹುಡುಗಿ...

ಅವಳು ಕೊನೆಗೂ ನಿನಗೆ ಸಿಗಲಿಲ್ಲ.

ನೀನವಳನ್ನು ಮರೆಯಲೂ ಇಲ್ಲ.

                  **************

ಅಚಾನಕ್ಕಾಗಿ ಕಣ್ಣಿಗೆ ಬಿದ್ದ ಯಾರದೋ ಮದುವೆಯ ಸ್ವಾಗತ ಫಲಕ.. ನೋಡುತ್ತಿದ್ದಂತೆಯೇ ಎದೆಯೊಳಗೆ ಸಾವಿರ ವೋಲ್ಟ್ ವಿದ್ಯುತ್ ಹರಿದ ಅನುಭವ. ಹತ್ತಾರು ಹೂಗಳನ್ನು ಒಂದಕ್ಕೊಂದು ಪೋಣಿಸಿ ಬರೆದಿರುವ ಆ ಫಲಕದಲ್ಲಿರುವ ಮದುಮಗಳ ಹೆಸರು... ಅದು ಅವಳದೇ! ನಿನಗೆ ಗೊತ್ತು: ಹೆಸರು ಅವಳದಾದ ಮಾತ್ರಕ್ಕೆ ಮದುಮಗಳೂ ಅವಳೇ ಆಗಬೇಕಿಲ್ಲ. ಆದರೂ ಭಯ ನಿನಗೆ! ಒಮ್ಮೆ ಕಲ್ಯಾಣ ಮಂಟಪದೊಳಗೆ ಇಣುಕಿ ನೋಡುವ ಕಾತುರ ಅಲ್ವಾ? ಒಂದುವೇಳೆ ಅವಳೇ ಆಗಿದ್ದರೆ? ಇರಬಹುದು.. ಅವಳೇ ಇರಬಹುದು.. ನೀನು ಏನು ತಾನೇ ಮಾಡಬಲ್ಲೆ? ಕನಸಿನಲ್ಲಿ ನೀನು ನೂರು ಬಾರಿ ಹಿಡಿದು ನಡೆದಿದ್ದ ಆ ಕೈಗಳನ್ನು ಇನ್ಯಾರದೋ ಕೈಗಳೊಂದಿಗೆ ಬೆಸೆದು ನಿಂತಿರುವವಳ ಮೇಲೆ ನಾಲ್ಕು ಅಕ್ಷತೆಕಾಳುಗಳನ್ನು ಹಾಕಿ ಆಶೀರ್ವದಿಸುವುದಲ್ಲದೆ.. 'ಹ್ಯಾಪಿ ಮ್ಯಾರೀಡ್ ಲೈಫ್' ಎಂದು ಹಾರೈಸುವುದಲ್ಲದೆ.. ಇರುಳ ಚಾದರದ ತುಂಬಾ ನಿರ್ನಿದಿರೆಯ ಹೊದ್ದುಕೊಂಡು ಹೊರಳಾಡುವುದಲ್ಲದೆ.. 'ಯಾಕೆ ನನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದೇ ಹೋದೆ?' ಎಂದು ಅವಳ ಹಳೆಯ (ನಿರ್)ಭಾವ ಚಿತ್ರವನ್ನು ಪ್ರಶ್ನಿಸುವುದಲ್ಲದೆ...

ಹೇಳು... ಇನ್ನೇನು ತಾನೇ ಮಾಡಬಲ್ಲೆ?

ಸಾಧ್ಯವಿದೆ..‌

ಎಲ್ಲಿಗೋ ಹೋಗುತ್ತಿರುವಾಗ ಎಲ್ಲಿಂದಲೋ ಅವಳ ಹೆಸರು ಕೇಳಿಬಂದಾಗ ರಸ್ತೆಯ ನಟ್ಟನಡುವೆ ಥಟ್ಟನೆ ನಿಂತುಬಿಡಬಹುದು. ಹಿಂದೊಮ್ಮೆ ಜೊತೆಯಾಗಿ ನಡೆದ ದಾರಿಯುದ್ದಕ್ಕೂ ಮತ್ತೆ ಮತ್ತೆ ನಡಯುತ್ತಾ ಅವಳ ಹೆಜ್ಜೆಗಳನ್ನು ಹುಡುಕಬಹುದು. ಅವಳ ನೆನಪುಗಳೇ ತುಂಬಿರುವ ಹಾಡೊಂದನ್ನು ಕೇಳಿ ಕೇಳಿ ತಣಿಯಬಹುದು. ನಡೆದದ್ದೆಲ್ಲವೂ ಸುಳ್ಳಾಗಿ, ಅವಳು ಮತ್ತೆ ನಿನ್ನವಳೇ ಆಗಿ ಬಳಿಬಂದಂತೆ ಕನಸು ಬಿದ್ದ ಆ ಬೆಳಗಿನ ಜಾವವೊಂದರಲ್ಲಿ ಹೊದ್ದ ಹೊದಿಕೆಗಷ್ಟೇ ತಿಳಿಯುವಂತೆ ಮುಗುಳ್ನಗಬಹುದು. ಕಂಡದ್ದು ಕನಸೆಂದು ಅರಿವಾದ ಮರುಕ್ಷಣ ಬದುಕೇ ಕಳೆದು ಹೋದಂತೆ ಮಂಕಾಗಬಹುದು. ಗಂಡನ ಹೆಗಲು ತಬ್ಬಿ ನಿಂತವಳನ್ನು ಫೋಟೋವೊಂದರಲ್ಲಿ ನೋಡಿ ಜಗತ್ತಿನ ಮತ್ಯಾರಿಗೂ ಅರ್ಥವಾಗದ ವೇದನೆಯಲ್ಲಿ ಮಮ್ಮಲ ಮರುಗಬಹುದು...

ಇನ್ನೂ ಏನೇನೋ ಸಾಧ್ಯವಿದೆ!

                  **************

ಯಾರು ಹೇಳಿದ್ದು ಪ್ರೀತಿಸಿದವರು ಸಿಗಲೇಬೇಕು ಅಂತ?

ಒಮ್ಮೆ ಯೋಚಿಸಿ ನೋಡು? ಅವಳು ನಿನಗೆ ಸಿಕ್ಕಿದ ಮರುಕ್ಷಣ  ಅವಳ ಊರಿನ ಹೆಸರು ನಿನ್ನೆದೆಯೊಳಗಿದ್ದ ತನ್ನ ಹಿಂದಿನ ವಿಶೇಷತೆಯನ್ನು ಕಳೆದುಕೊಳ್ಳುತ್ತದೆ. ಅವಳ ಪ್ರೀತಿಗಾಗಿ ಹಂಬಲಿಸಿದ ಕ್ಷಣಗಳು ಒಂದೊಂದಾಗಿ ಮರೆತುಹೋಗುತ್ತವೆ. 'ಅವಳು' ಎಂದ ಕೂಡಲೇ ಮೊಗ್ಗಂತೆ ನಾಚುವ ನಿನ್ನೀ ಗಾಢ ಆರಾಧನೆ ಕಡಿಮೆಯಾಗುತ್ತದೆ. ಮಗ್ಗುಲಲ್ಲೇ ಮಲಗಿರುವ ಮಡಿದಿ, ಅಂದೆಂದೋ ಮಿಂಚಿನಂತೆ ಬಳಿಸುಳಿದು ಮರೆಯಾದ ಪ್ರೇಯಸಿಯಂತೆ ಕಾಡಬಲ್ಲಳೇ? ಒಂದೊಂದು ದಿನವನ್ನೂ ಎಣಿಸುತ್ತಾ, ಕಾದು ಬರಮಾಡಿಕೊಂಡ ಅವಳ ಹುಟ್ಟಿದ ದಿನದಂದು ಎಂದೂ ಹೋಗದ ದೇವಸ್ಥಾನಕ್ಕೆ ಹೋಗಿ "ಅವಳು ಖುಷಿಯಾಗಿರಲಿ ದೇವರೇ" ಎಂದು ಕಣ್ಮುಚ್ಚಿ ಪ್ರಾರ್ಥಿಸುವ ಆ ನಿರ್ಮಲ ಕ್ಷಣ ಮುಗಿದೇ ಹೋಗುತ್ತದೆ. ಸಿಕ್ಕುವುದು ಹಾಗೂ ದಕ್ಕುವುದು.. ಇವೆರೆಡರ ನಡುವಿನ ವ್ಯತ್ಯಾಸ ನಿನಗೆ ಗೊತ್ತಿಲ್ಲ ಹುಚ್ಚಾ..  ಪ್ರೀತಿಸಿದವರು ಜೊತೆಗಿಲ್ಲವೆನ್ನುವುದು ಅವರನ್ನು ಅಪಾರವಾಗಿ ಪ್ರೀತಿಸುವುದಕ್ಕೆ ನಿನಗಿರುವ ದಿವ್ಯ ನೆಪ. ನಿಜ ಹೇಳಬೇಕೆಂದರೆ ಅವಳೇನಾದರೂ ಸಿಕ್ಕಿದ್ದರೆ ಎಷ್ಟು ಪ್ರೀತಿಸುತ್ತಿದ್ದೆಯೋ ಅದಕ್ಕಿಂತ ಹತ್ತು ಪಟ್ಟು ಮಿಗಿಲಾಗಿದೆ ನಿನ್ನೀ ಪ್ರೇಮ.. ಪ್ರೀತಿ ಹಾಗೂ ಪ್ರೀತಿಸುವವರು- ಇವೆರೆಡೂ ಒಟ್ಟಾಗಿರುವ ಸಂದರ್ಭಗಳು ತುಂಬಾ ಕಡಿಮೆ.

                  **************

ಮೊದಲೇ ಹೇಳಿಬಿಡ್ತೀನಿ, ನೀನು ಹೀಗೆ ಅವಳನ್ನು ಹಚ್ಚಿಕೊಂಡಿರುವುದರಲ್ಲಿ ಅವಳ ತಪ್ಪು ಕೊಂಚವೂ ಇಲ್ಲ. ಸಂತೆಯ ಜಂಗುಳಿಯಲ್ಲಿ ಎದುರಿಗೆ ಬರುವ ಸಾವಿರಾರು ಅನಾಮಿಕರಂತೆಯೇ ಕಣ್ಮುಂದೆ ಹಾದವಳು ಅವಳು; ಆದರೆ ಅವಳ ಹೆಸರು ತಿಳಿದುಕೊಂಡು, ಅವಳು ನಿನಗೆ ಹೀಗೆ ಎದುರಾಗಿ ಸಿಕ್ಕ ಕಾಕತಾಳೀಯಕ್ಕೆ ಯಾವ್ಯಾವುದೋ ಜನ್ಮಗಳ ಲಿಂಕ್ ಕೊಟ್ಟು, ಅವಳು ಹೆಜ್ಜೆ ಹಾಕುತ್ತಿರುವ ಹಾದಿಯ ಆಚೆ ತುದಿ ನಿನ್ನ ಬದುಕಿನ ಬಾಗಿಲೇ ಎಂದು ಭ್ರಮಿಸಿ, ಈ ಎಲ್ಲ ಪ್ರಹಸನಗಳಿಗೂ 'ಪ್ರೀತಿ' ಎಂಬ ಚಂದದ ಹೆಸರುಕೊಟ್ಟ ಅಧಿಕ ಪ್ರಸಂಗಿ ನೀನೇ. ಅವಳು ಅಂತಹಾ ಸುಂದರಿಯೇನಲ್ಲ; ಆದರೆ ಹಾಗಂತ ಒಪ್ಪಿಕೊಳ್ಳುವುದಕ್ಕೆ ನಿನಗಿಷ್ಟವಿಲ್ಲ. ಅಥವಾ ಆ ಸತ್ಯ ನಿನಿಗೆ ಗೊತ್ತೇ ಇಲ್ಲ! ಹೆಣ್ಣಿನ ಸ್ನೇಹವೆಂದರೇನೆಂದೇ ಗೊತ್ತಿಲ್ಲದ, ಅವಳ ಮುಗುಳ್ನಗು ಮಾತ್ರದಿಂದಲೇ ಹುಟ್ಟಿಕೊಳ್ಳುವ ಆ ನವಿರು ಪುಳಕಗಳನ್ನು ಹಿಂದೆಂದೂ ಅನುಭವಿಸಿರದ, ಮುಡಿದ ಹೆಣ್ಣಿನಿಂದಾಗಿ ಹೂವು ಸುಂದರವಾಯಿತೇ ಹೊರತು, ಹೂವಿನಿಂದ ಹೆಣ್ಣು ಸುಂದರವಾಗಿದ್ದಲ್ಲವೆನ್ನುವ ಪರಮ ಸತ್ಯವನ್ನು ಈಗಷ್ಟೇ ತಿಳಿದುಕೊಳ್ಳುತ್ತಿರುವ ನಿನ್ನೀ ಗಂಡು ಹೃದಯವನ್ನು ಪ್ರೀತಿಯಲ್ಲಿ ಬೀಳಿಸುವವಳು ತ್ರಿಪುರ ಸುಂದರಿಯೇ ಆಗಿರಬೇಕಿಲ್ಲ,
ಆಕೆ ಹೆಣ್ಣಾಗಿದ್ದರೆ ಸಾಕು.

ಅವಳು ಮಾಮೂಲಾಗಿಯೇ ನೋಡಿದಳು. ನಿನ್ನ ಎದೆಯಲ್ಲಿ ಮಿಂಚು ಹರಿಯಿತು. ಅವಳು ತನ್ನ ಕಪ್ಪು ಮಲ್ಲಿಗೆಯಂತಹಾ ಜಡೆಯನ್ನು ಕತ್ತಿನ ಮುಂಭಾಗದಲ್ಲಿ ಇಳಿಬಿಟ್ಟುಕೊಂಡಳು. ನಿನ್ನ ಹೃದಯ ಬಡಿತವೊಂದನ್ನು ಸ್ಕಿಪ್ ಮಾಡಿತು. ಅವಳು ಸೀರೆಯುಟ್ಟು ಕಣ್ಮುಂದೆ ಹಾದಳು. ಅಂದು ರಾತ್ರೆಯಿಡೀ ನೀನು ನಿದ್ರಿಸಲಿಲ್ಲ. ಅವಳೊಮ್ಮೆ ನಿನ್ನೆಡೆಗೆ ನೋಡಿ ಮುಗುಳ್ನಕ್ಕಳು...

ಆ ದಿವ್ಯ ಘಳಿಗೆಯನ್ನು ನೀನು ಮತ್ತೆಂದೂ ಮರೆಯಲೇ ಇಲ್ಲ.

                  **************

ಹೇಗೆ ತಾನೇ ಒಪ್ಪಿಯಾಳು ನಿನ್ನ?

ನಿನಗೆ ಗೊತ್ತಾ.. ಅವಳ ಕನಸಿನಲ್ಲಿ ಬರುವ ರಾಜಕುಮಾರ ಅದೆಷ್ಟು ಸುಂದರನೆಂಬುದು? ಬಡತನವನ್ನೇ ಹಾಸಿ ಹೊದ್ದವಳು ಕಲ್ಪನೆಯಲ್ಲಿ ಕಟ್ಟಿಕೊಂಡ ಅರಮನೆಯ ಒಂದು ಮೆಟ್ಟಿಲನ್ನೂ ಕಟ್ಟಲಾರೆ ನೀನು! ಇದ್ದಿರಬಹುದು, "ನಂಗೆ ಪಪ್ಪ ಇಲ್ಲ" ಎಂದು ವಿಷಾದದಿಂದ ಹೇಳಿಕೊಂಡವಳ ಎದೆಯೊಳಗೆಲ್ಲೋ ನಿನ್ನ ಬಗ್ಗೆ ಸೆಳೆತದ ಅಲೆಯೊಂದು ಎದ್ದಿರಬಹುದು. ಅಂದ ಮಾತ್ರಕ್ಕೇ ಅದು ಪ್ರೇಮವೇ ಆಗಬೇಕಿಲ್ಲ. ಅವಳನ್ನು ಪ್ರೀತಿಸುವವರು ಹಲವರು. ಆದರೆ ಅವಳಿಂದ ಪ್ರೀತಿಸಲ್ಪಟ್ಟವರು? ಅಷ್ಟಕ್ಕೂ ಅವಳು ಅರ್ಥವಾಗಿದ್ದಾದರೂ ಯಾರಿಗೆ ಹೇಳು? ಕಾಳಜಿಯ ನಾಟಕವಾಡಿ, ಪ್ರೀತಿಸುವೆನೆಂದು ನಂಬಿಸಿ ಘಾಸಿಗೊಳಿಸಿದ ಅವನಿಗೆ ಅರ್ಥವಾದಳೇ? ಹಿಂದಿನಿಂದ ಆಡಿಕೊಂಡು ನಕ್ಕ ಗೆಳೆಯ-ಗೆಳತಿಯರಿಗೆ ಅರ್ಥವಾದಳೇ? ತಂದೆಯಿಲ್ಲದ ಅವಳು ತಮಗೇ ಸೇರಬೇಕೆಂದು ಹಕ್ಕು ಚಲಾಯಿಸಿದ ಬಂಧುಗಳಿಗೆ ಅರ್ಥವಾದಳೇ?

ಬಿಡು.. ಅವಳು ಯಾರಿಗೂ ದಕ್ಕುವಳಲ್ಲ. ಅವಳ ಪಾಡು ಅವಳಿಗಿರಲಿ..

                  **************

ಫೋನಿನಲ್ಲಿರುವ, ಪ್ರೊಫೈಲ್ ಫೋಟೋ ಕಾಣದ ಅವಳ ವಾಟ್ಸಾಪ್ ಖಾತೆ ಹಾಗೇ ಉಳಿದುಬಿಡಲಿ. ಎಲ್ಲ ಡಿಲೀಟ್ ಮಾಡಿದ ಮೇಲೂ ಗ್ಯಾಲರಿಯ ಮೂಲೆಯೊಂದರಲ್ಲಿ ಉಳಿದು ಹೋದ, ಅವಳು ನಗುತ್ತಾ ನಿಂತಿರುವ ಆ ಚಿತ್ರ ಅಳಿಯದಿರಲಿ. ವಿಳಾಸದ ಕಾಲಂನಲ್ಲಿ ನೀನು 'ಅವಳಿಗೆ' ಎಂದು ಬರೆದಿಟ್ಟುಕೊಂಡಿರುವ ಪತ್ರಗಳು ಅವಳನ್ನೆಂದೂ ತಲುಪದಿರಲಿ. ಮುಂದೆಂದೋ ಹುಟ್ಟಲಿರುವ ನಿನ್ನ ಮಗಳಿಗೆ ಇಡಬೇಕಾದ ಅವಳ ಆ ಮುದ್ದು ಹೆಸರು ಅಲ್ಲಿ, ಇಲ್ಲಿ, ಎಲ್ಲೆಲ್ಲಿಂದಲೂ ಕೇಳಿಬಂದು ನಿನ್ನನ್ನು ಕಾಡುತ್ತಿರಲಿ..

ಪ್ರೀತಿಸಿದವಳು ಸಿಗದಿರಲಿ.

(ಮಾನಸ ಮೇ 2018 ಸಂಚಿಕೆಯಲ್ಲಿ ಪ್ರಕಟಿತ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...