ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಆಗಸ್ಟ್ 3, 2020

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...



ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕಳಿಕೆ ಶುರುವಾಗಿದೆ. 


“ನೋಡ್ತಿರು...ದೊಡ್ಡ ಸಾಧನೆ ಮಾಡಿ ನಾನೇನು ಅಂತ ತೋರಿಸ್ತೀನಿ ಅವಳಿಗೆ!”

ಅರ್ಧ ಕೆಜಿ ಅಳು, ಎರೆಡು ಕ್ವಿಂಟಾಲ್ ಹತಾಶೆ, ಎರೆಡು ಡಜನ್ ರೊಚ್ಚು, ಐದೂವರೆ ಕ್ವಾಟರ್ ನಶೆ ಹಾಗೂ ಸಾವಿರಾರು ಗ್ಯಾಲನ್ ದುಃಖ… ಇವೆಲ್ಲ ಒಟ್ಟಾಗಿ ಬೆರೆತ ಧ್ವನಿಯೊಂದು ಹಾಗಂತ ಅಬ್ಬರಿಸುತ್ತದೆ.


“ಹೂ ಮಚ್ಚೀ.. ನೀನೇನಾದ್ರೂ ಅಚೀವ್ಮೆಂಟ್ ಮಾಡ್ಲೇಬೇಕು. ನಿನ್ನ ಬಿಟ್ಟೋಗಿದ್ದು ಎಷ್ಟು ದೊಡ್ಡ ಲಾಸ್ ಅಂತ ಅವಳಿಗೆ ರಿಯಲೈಸ್ ಆಗ್ಬೇಕು. ಅದೇ ನನ್ ಆಸೆ ಮಚ್ಚೀ..”

ಪಕ್ಕದಲ್ಲಿ ನಾಲ್ಕನೇ ಕ್ವಾಟರ್ ನ ಹೊಡೆತಕ್ಕೆ ಸಣ್ಣಗೆ ತೊದಲುತ್ತಿರುವ ಧ್ವನಿ ಹಾಗಂತ ಬಡಬಡಿಸುತ್ತದೆ. 


“ನಿಜ ಮಗ.. ನಿನ್ನಿಂದ ಸಾಧ್ಯ ಇದೆ. ಮಾಡು ಮಗಾ ಮಾಡು..”

ಪಕ್ಕದಲ್ಲೇ ಕುಳಿತಿರುವ ಮತ್ತೆರೆಡು ವಾಲುಗಾಡಿಗಳು ಹಾಗಂತ ಬೆನ್ನುತಟ್ಟುತ್ತವೆ. ಇದ್ದಕ್ಕಿದ್ದಂತೆ ಅಲ್ಲಿನ ವಾತಾವರಣವೇ ಬದಲಾಗುತ್ತದೆ. ಈಗ ಅಲ್ಲೊಂದು ವೇದಿಕೆ ಸಿದ್ಧವಾಗಿದೆ. ಪ್ರಧಾನ ಮಂತ್ರಿಗಳೂ ಸೇರಿದಂತೆ ಹಲವಾರು ಘಟಾನುಘಟಿಗಳು ಅಲ್ಲಿ ಆಸೀನರಾಗಿದ್ದಾರೆ.ಅವರೆಲ್ಲ ಸೇರಿ ಆರನೇ ಕ್ವಾಟರನ್ನೂ ಯಶಸ್ವಿಯಾಗಿ ‌ಕುಡಿದು ಮುಗಿಸಿರುವ ನಮ್ಮ ‘ಮಚ್ಚಿ’ಗೆ ಇನ್ನೇನು ಪ್ರಶಸ್ತಿ ಕೊಡಲಿದ್ದಾರೆ. ಅವನ ಗೆಳೆಯರೆಲ್ಲ ಚಪ್ಪಾಳೆ ತಟ್ಟಲು ಹೆಮ್ಮೆಯಿಂದ ತಯಾರಾಗಿದ್ದಾರೆ‌. ಕೈಕೊಟ್ಟುಹೋದ ಹುಡುಗಿಯೀಗ 'ಇಂಥವನನ್ನು ಬಿಟ್ಟುಹೋದೆನಲ್ಲಾ' ಎಂದು ಕೈಕೈ ಹಿಸುಕಿಕೊಳ್ಳುತ್ತಿದ್ದಾಳೆ..


“ಆಆಆಆಆ…. ಹಚೀ"


ಟೆರಾಸು ದೊಡ್ಡದಾಗಿ ಆಕಳಿಸುತ್ತದೆ. ಇಂತಹಾ ಅದೆಷ್ಟೋ ತಡರಾತ್ರಿಯ ಸನ್ಮಾನ ವೇದಿಕೆಗಳನ್ನೂ, ಹತಾಶ ಚಾಲೆಂಜ್ ಗಳನ್ನೂ ನೋಡೀ ನೋಡೀ ಅದಕ್ಕೂ ಬೋರಾಗಿದೆ. ಇನ್ನೇನು ಪ್ರಶಸ್ತಿ ಬಂದೇಬಿಟ್ಟಿತು ಎನ್ನುವಷ್ಟರಲ್ಲಿ ನಷೆಯೇರಿ ಧರಾಶಾಯಿಯಾದ ಧೀರರನ್ನೆಲ್ಲ ತನ್ನ ಎದೆಯ ಮೇಲೆ ಮಲಗಿಸಿಕೊಂಡು ಅದೂ ನಿದ್ರೆಗೆ ಜಾರುತ್ತದೆ.


                       *****************


ಬ್ರಹ್ಮಚಾರಿ ಜೀವನವೆಂದರೆ ಇಂತಹಾ ಅನೇಕ ಎಪಿಸೋಡ್ ಗಳ ಧಾರಾವಾಹಿಯಿದ್ದಂತೆ. ಹುಟ್ಟಿದೂರ ಬಿಟ್ಟುಬಂದು, ಕಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡು, ನಗರದ ಕಟ್ಟಡದ ಟೆರಾಸೊಂದರ ಮೇಲಿನ ರೂಮನ್ನು ಗೊತ್ತುಮಾಡಿಕೊಂಡು, ಜೊತೆಗಿರಲಿಕ್ಕೆ ಹಾಗೂ ಬಾಡಿಗೆಯ ಜೊತೆ ಅದೆಷ್ಟೋ ಬೈಟೂ ಕಾಫಿಗಳನ್ನೂ, ಫುಲ್ ಪ್ಲೇಟಿನ ಅರ್ಧ ಗೋಭೀ ಮಂಚೂರಿಗಳನ್ನೂ ಹಂಚಿಕೊಳ್ಳಲಿಕ್ಕೆ ರೂಮ್ ಮೆಟ್ ಒಬ್ಬನನ್ನು ಹುಡುಕಿಕೊಳ್ಳುತ್ತಿದ್ದಂತೆಯೇ ಬ್ಯಾಚುಲರ್ ಬದುಕು ಆರಂಭವಾಗುತ್ತದೆ. ಹಾಗೆ ಬರುವ ಪ್ರತಿಯೊಬ್ಬ ಬ್ರಹ್ಮಚಾರಿಯ ಹೆಗಲಿನ ಚೀಲದಲ್ಲೂ ಬಿಟ್ಟುಬಂದ ಬಾಲ್ಯದ ನೆನಪುಗಳಿರುತ್ತವೆ. ಆಡಾಡುತ್ತಾ ಅರ್ಧಕ್ಕೇ ಬಿಟ್ಟು ಎದ್ದುಬರುವಾಗ ಜೋಪಾನವಾಗಿ ಎತ್ತಿಟ್ಟುಕೊಂಡುತಂದ ಗೋಲಿಯೊಂದಿರುತ್ತದೆ. ಕಾಲೇಜಿನಲ್ಲಿ ಗೆಳೆಯರ ಜೊತೆ ಕೇಕೆ ಹಾಕಿ ಕುಣಿದ ಸಂಮಭ್ರಮದ ಅವಶೇಷಗಳಿರುತ್ತವೆ. ಶಹರದ ರಂಗ್ ಬಿರಂಗೀ ಬದುಕಿನೆಡೆಗೆ ಭಯ ಬೆರೆತ ಅಚ್ಚರಿಯ ದೃಷ್ಟಿಯಿರುತ್ತದೆ. ಸಿಗಲಿರುವ ಗೆಳೆಯ-ಗೆಳತಿಯರ ಬಗ್ಗೆ ಕುತೂಹಲವಿರುತ್ತದೆ.


ನಗರ ಬ್ರಹ್ಮಚಾರಿಗಳ ಪಾಲಿನ ಸ್ವರ್ಗ. ಇದು ಚಿಟ್ಟೆಯ ಪಾಲಿನ ಹೂದೋಟದಂತೆ; ಡೈನೋಸರ್ ಗಳ ಪಾಲಿನ ಜುರಾಸಿಕ್ ಪಾರ್ಕಿನಂತೆ! ಊರಿನಲ್ಲಿ ಅಪ್ಪ-ಅಮ್ಮನಾದಿಯಾಗಿ ಸರ್ವ ಬಂಧುಮಿತ್ರರಿಂದಲೂ ಪ್ರೀತಿಯಿಂದ ಬೀಳ್ಕೊಡಲ್ಪಟ್ಟ ಹಳ್ಳಿಹೈದನನ್ನು ಮೆಜಸ್ಟಿಕ್ಕಿನ ಅಪರಿಚಿತ ಬೀದಿಯಲ್ಲಿ ಅನಾಥವಾಗಿ ಇಳಿಸಿದ ಬಸ್ಸು ತಿರುವಿನಾಚೆಗೆ ಸಾಗಿ ಮರೆಯಾಗಿಬಿಡುತ್ತದೆ. 'ಹೊಸನಗರ ಟೂ ಬೆಂಗಳೂರು' ಎಂಬ ಬೋರ್ಡಿನಲ್ಲಿ ತನ್ನೂರಿನ ಹೆಸರನ್ನು ಕೊನೆಯಬಾರಿಯೊಮ್ಮೆ ನೋಡಿಕೊಂಡ ಅವನು ನೂರಾರು ಅಪರಿಚಿತರ ಮೆಜಸ್ಟಿಕ್ಕಿನ ಬೀದಿಯಲ್ಲಿ ತನ್ನವರನ್ನು ಹುಡುಕುತ್ತಾ ಮೊದಲ ಹೆಜ್ಜೆಯಿಡುತ್ತಾನೆ. ಯಾವುದೋ ಗೆಳೆಯ/ಅಣ್ಣ/ಬಂಧುವು ಟೆರಾಸಿನ ಮೇಲೆ ಮಾಡಿಕೊಂಡಿರುವ ಒಂಟಿ ರೂಮು ಅಲ್ಯಾವುದೋ ಏರಿಯಾದ ಎಷ್ಟನೆಯದೋ ಕ್ರಾಸಿನಲ್ಲಿ ಅವನ ಹಾದಿಯನ್ನೇ ಕಾಯುತ್ತಿರುತ್ತದೆ.


ನಗರಕ್ಕೆ ಕಾಲಿಟ್ಟ ಮೇಲೆ ಎದುರಾಗುವ ಮೊದಲ ಸವಾಲೆಂದರೆ ಇಂಟರ್ವ್ಯೂ ಎಂಬ ಸ್ವಯಂವರ. ಇಷ್ಟು ವರ್ಷ ಕಾಲೇಜಿನಲ್ಲಿ ಕಲಿತ ಬಿಲ್ವಿದ್ಯೆ, ಕತ್ತಿವರಸೆ, ಕಳರೀಪಯಟ್ ಗಳನ್ನೆಲ್ಲಾ ಇಂಟರ್ವ್ಯೂವರ್ ಎಂಬ ಮಹಾರಾಜನೆದುರು ಎಷ್ಟೇ ವೀರೋಚಿತವಾಗಿ ಪ್ರದರ್ಶಿಸಿದರೂ ಅವನು ಕೆಲಸವೆಂಬ ಯುವರಾಣಿಯನ್ನು ಕೊಡದೇ ಸತಾಯಿಸುತ್ತಾನೆ. ಕೊನೆಗೂ ಯಾವುದೋ ಒಂದು ಕಂಪನಿಯಲ್ಲಿ ಶಿವಧನುಸ್ಸನ್ನು ಮುರಿದು ಕೆಲಸಗಿಟ್ಟಿಸುವ ಹೊತ್ತಿಗೆ ಬೆಂಗಳೂರಿನ ಹಲವಾರು ಏರಿಯಾಗಳ ಹೆಸರುಗಳೂ, ಬಿಎಂಟಿಸಿ ಬಸ್ಸಿನ ನಂಬರ್ ಗಳೂ ಬಾಯಿಪಾಠವಾಗಿ, ಬೆಂಗಳೂರು ವಾರದ ಹಿಂದೆ ಪರಿಚಯವಾದ ಹೊಸ ಗೆಳೆಯನಂತಾಗಿರುತ್ತದೆ. 


ಮೊದಲ ಉದ್ಯೋಗವೆಂದರೆ ಅವನು ಆಯ್ದುಕೊಳ್ಳುವುದಲ್ಲ, ಅವನನ್ನು ಆಯ್ಕೆಮಾಡಿಕೊಳ್ಳುವುದು! ಹಕ್ಕಿಯೊಂದು ಪುಟ್ಟ ಗೂಡಿನಿಂದ ವಿಶಾಲ ಜಗತ್ತಿಗೆ ಬಿದ್ದ ಸಮಯವದು. ಚಿಕ್ಕ ಹಳ್ಳಿಯಿಂದ ರಾಕ್ಷಸ ಪಟ್ಟಣಕ್ಕೆ, ವಿದ್ಯಾರ್ಥಿ ಜೀವನದಿಂದ ಔದ್ಯೋಗಿಕ ಬದುಕಿಗೆ, ಕನ್ನಡವಷ್ಟೇ ಇದ್ದ ಊರಿನಿಂದ ತೆಲುಗು, ತಮಿಳು, ಮಲೆಯಾಳ, ಹಿಂದಿ, ಇಂಗ್ಲೀಷುಗಳೆಲ್ಲದರ ಕಲಸು ಮೆಲೋಗರಕ್ಕೆ, ಅಪ್ಪ-ಅಮ್ಮ-ಗೆಳೆಯರ ಮಡಿಲಿನಿಂದ ಅಪರಿಚಿತ ಪ್ರತಿಸ್ಪರ್ಧಿಗಳಿರುವ ರಂಗಸ್ಥಳಕ್ಕೆ… ಹೀಗೆ ಬದುಕು ಈವರೆಗೆ ಕಾಣದ ಬೇರೆಯದೇ ವಾತಾವರಣಕ್ಕೆ ಥಟ್ಟನೆ ಹೊರಳಿಕೊಂಡುಬಿಟ್ಟಿರುತ್ತದೆ‌. ಬಸ್ಸಿನಲ್ಲಿ ಅಪರಿಚಿತೊಬ್ಬ ಜಗಳಕ್ಕೇ ನಿಲ್ಲುತ್ತಾನೆ. ಯಾರೋ ಮೊಬೈಲು, ಪರ್ಸು ಎಗರಿಸುತ್ತಾರೆ. ಆಫೀಸಿನಲ್ಲಿ ಬಾಸು ಕಿರುಚುತ್ತಾನೆ. ಸೀನಿಯರ್ ಸಿಡುಕುತ್ತಾನೆ. ಬದುಕು ಟ್ರಾಫಿಕ್ಕು-ಆಫೀಸುಗಳೆಂಬ ನಿಂತನೀರಿನಲ್ಲಿ ಮೆಲ್ಲನೆ ಬೆಳೆಯತೊಡಗುತ್ತದೆ. ಬೆಳಗಾಗುತ್ತಿದ್ದಂತೆಯೇ ಹಾಕಿ ಹೊರಟ ರೂಮಿನ ಬಾಗಿಲನ್ನು ಕತ್ತಲಾದ ನಂತರವೇ ತೆರೆಯುವಂತಾಗುತ್ತದೆ. ಸೂರ್ಯ ಅಪರಿಚಿತನಂತನಾಗುತ್ತಾನೆ. ಊರು, ಅಪ್ಪ, ಅಮ್ಮ, ಗೆಳೆಯರ ನೆನಪು ಉಕ್ಕುಕ್ಕಿ ಬರುತ್ತದೆ‌. ಫೋನು ದಿನಕ್ಕೆ ಹತ್ತು ಬಾರಿ ಅಮ್ಮನ ನಂಬರನ್ನು ಡಯಲ್ ಮಾಡುತ್ತದೆ. 'ನಾನು ಊರಿಗೆ ವಾಪಾಸು ಬರ್ತೀನಿ ಅಮ್ಮಾ' ಎಂಬ ಮಾತು ತುಟಿಯಂಚಿನಲ್ಲಿಮತ್ತೆ ಮತ್ತೆ ಜಾರಿಬೀಳುತ್ತದೆ. 


ಹೀಗಿರುವಾಗಲೇ ಮೊದಲ ಸಂಬಳವು ಅಪ್ಪನ ಮೈಮೇಲೆ ಹೆಮ್ಮೆಯ ತಿಳಿನೀಲಿ ಅಂಗಿಯಾಗಿ ಮಿರಮಿರ ಹೊಳೆಯುತ್ತದೆ. ಅಮ್ಮನ ಒಡಲಲ್ಲಿ ಸಂಭ್ರಮದ ಜರತಾರಿ ಸೀರೆಯಾಗಿ ಸರಭರಗುಟ್ಟುತ್ತದೆ. ತಂಗಿಯ ಕೈಯಲ್ಲಿ ಹರುಷದ ಬಳೆಯಾಗಿ ಘಲ್ಲೆನ್ನುತ್ತದೆ. ತಮ್ಮನ ಮೊಬೈಲಿಗೆ ಕರೆನ್ಸಿಯಾಗುತ್ತದೆ. ಬದುಕ ದಾರಿಯಲ್ಲಿ ಮೈಲುಗಲ್ಲೊಂದನ್ನು ಸದ್ದಿಲ್ಲದೇ ದಾಟಿಬಂದೆನೆಂಬುದು ಮೆಲ್ಲಗೆ ಅರಿವಾಗುತ್ತದೆ. 'ಕೆಲಸ ಸಿಕ್ತಲ್ಲಾ, ಇನ್ನು ಮದುವೆ ಮಾಡಬಹುದು' ಎಂಬ ಛೇಡಿಕೆ ಸಾಮಾನ್ಯವಾಗುತ್ತದೆ. ಆಫೀಸಿನ ಕ್ಯಾಂಟೀನಿನಲ್ಲಿ ತನ್ನಂತೆಯೇ ಬೆದರಿ ಕುಳಿತಿರುವ ಬಡಪಾಯಿಯೊಬ್ಬ ಪರಿಚಯವಾಗುತ್ತಾನೆ. ತನ್ನದೇ ಟೀಮಿನಲ್ಲಿರುವ ಸಹೋದ್ಯೋಗಿಯೊಬ್ಬಳು ಆತ್ಮೀಯಳಾಗುತ್ತಾಳೆ. ವಾರದ ಕೊನೆಯಲ್ಲಿ ಥಿಯೇಟರ್, ಮಾಲ್, ಪಾರ್ಕುಗಳ ಸುತ್ತಲಿಕ್ಕೆ ಗೆಳೆಯರ ತಂಡವೊಂದು ತಯಾರಾಗುತ್ತದೆ. ಮಗಾ, ಮಚ್ಚೀ, ಡ್ಯೂಡ್, ಡಾ ಗಳು ಒಬ್ಬೊಬ್ಬರಾಗಿ ಬದುಕಿನೊಳಗೆ ಪ್ರವೇಶಿಸತೊಡಗುತ್ತಾರೆ. ಯಾರೋ ಹುರಿದುಂಬಿಸಿದರೆಂದು ಕರೆಸ್ಪಾಂಡೆನ್ಸಿನಲ್ಲಿ ಎಂಬಿಎಗೆ ಸೇರಿಕೊಂಡು ಪಾಸಾಗಲಿಕ್ಕೆ ಪಾಡುಪಡುತ್ತಾನೆ. ಬಸ್ಸಿನಲ್ಲಿ ಪಕ್ಕದ ಸೀಟಿನಲ್ಲಿ ಕೂತ ಅಪರಿಚಿತನೊಬ್ಬ ಅದೆಂಥದೋ ಚೈನ್ ಲಿಂಕ್ ಬ್ಯುಸಿನೆಸ್ಸಿಗೆ ಸಿಕ್ಕಿಸಲು ನೋಡುತ್ತಾನೆ. ಇನ್ನೇನು ಹಣ ಹಾಕಬೇಕೆನ್ನುವಷ್ಟರಲ್ಲಿ ಯಾರೋ ತಡೆಯುತ್ತಾರೆ‌. ಹೀಗೆ ಬೆಂಗಳೂರಿನ ಕೋಟಿಯುಸಿರುಗಳ ಗಾಳಿ ಹಳ್ಳಿ ಹೈದನಿಗೆ ನಿಧಾನಕ್ಕೆ ಅಭ್ಯಾಸವಾಗತೊಡಗುತ್ತದೆ‌.


ಅಪ್ಪ, ಅಮ್ಮ, ತಮ್ಮ, ತಂಗಿಯರು ಶಹರಿಗೆ ಬರುತ್ತಾರೆ. ಒಂದು ಕಾಲದಲ್ಲಿ ಊರ ಜಾತ್ರೆಯಲ್ಲಿ ಕೈಹಿಡಿದು ನಡೆಸಿಕೊಂಡು ಹೋಗಿದ್ದ ಅಪ್ಪ-ಅಮ್ಮನ ಅದೇ ಕೈಯನ್ನು ಇಂದು ತಾನು ಹಿಡಿದು ರಸ್ತೆದಾಟಿಸುವಾಗ ಅವರ್ಣನೀಯ ಭಾವವೊಂದು ಎದೆತುಂಬಿನಿಲ್ಲುತ್ತದೆ. ಮೆಜಸ್ಟಿಕ್ಕಿನ ಸಂದಣಿಯಲ್ಲಿ ತಮ್ಮ ಅರೆಕ್ಷಣ ಕಳೆದುಹೋದಾಗ ಹೃದಯವೇ ನಿಂತುಹೋಗುತ್ತದೆ. ಬೆದರಿದ ಅಮ್ಮನನ್ನು ರಮಿಸಿ ಎಸ್ಕಿಲೇಟರ್ ಮೇಲೆ ಕರೆದೊಯ್ಯುವಾಗ ತಾನೂ ದೊಡ್ಡವನಾದೆ ಎನಿಸತೊಡಗುತ್ತದೆ. ಯಾವ್ಯಾವ ಏರಿಯಾದಲ್ಲಿ ಏನೇನು ಫೇಮಸ್ಸೆನ್ನುವುದನ್ನು ಅಪ್ಪನಿಗೆ ವರ್ಣಿಸಿ ಹೇಳುವ ಮಾತಿನಲ್ಲಿ ಉತ್ಸಾಹ ಪುಟಿಯುತ್ತದೆ. ಕೊನೆಯಲ್ಲಿ ಅವರೆಲ್ಲ ಊರಿನ ಬಸ್ಸುಹತ್ತಿ ಹೊರಟು ನಿಂತಾಗ ಕಣ್ಣಿನಿಂದ ಸಣ್ಣದೊಂದು ಮುಂಗಾರು ಸದ್ದಿಲ್ಲದೇ ಸುರಿದುಹೋಗುತ್ತದೆ.


                       *************************


ಬ್ರಹ್ಮಚಾರಿಯ ಕೋಣೆಯ ಚಿತ್ರಗಳನ್ನು ಮಾಡ್ರನ್ ಆರ್ಟ್ ಗೆ ಹೋಲಿಸಬಹುದು. ಯಾವ ರೇಖೆ ಯಾವುದರೊಂದಿಗೆ ಸುತ್ತಿಕೊಂಡು  ಏನನ್ನು ತೋರುತ್ತಿದೆಯೆಂದು ವಿವರಿಸುವುದೇ ಕಷ್ಟ! 'ಸ್ವಚ್ಛ ಭಾರತ ಅಭಿಯಾನ' ಬಂದನಂತರವಾದರೂ ಈ ರೂಮು ಪ್ರತಿದಿನ ಪೊರಕೆಯ ಮುಖ ನೋಡುವುದಿಲ್ಲ. ಬಿಗ್ ಬಝಾರಿನಿಂದ ಹಿಡಿದು ಬರ್ಮಾ ಬಜಾರಿನ ತನಕ, ಫ್ಲಿಪ್ ಕಾರ್ಟಿನಿಂದ ಹಿಡಿದು  ಚೋರ್ ಬಜಾರಿನ ತನಕ ಎಲ್ಲ ಕಡೆಯಿಂದ ಖರೀದಿಸಿ ತಂದ ವಸ್ತುಗಳನ್ನೂ ಇಲ್ಲಿ ಕಾಣಬಹುದು. ಅಟ್ಟಹಾಸ ಮಾಡುವ ಸ್ಪೀಕರ್ ಗಳು, ಹಾವುಗಳಂತೆ ಸುತ್ತಿಕೊಂಡು ಹೆಣೆಯಾಡುತ್ತಿರುವ ಇಯರ್ ಫೋನ್ ಗಳು, ಮಲ್ಲಯುದ್ಧ ಮಾಡದ ಹೊರತು ಹಾಕಲು ಬರದ ಕಿಟಕಿಯ ಬೋಲ್ಟುಗಳು, ಸಣ್ಣಗೆ ಉಫ್ ಎಂದರೂ ತೆರೆದುಕೊಂಡು, ಒಳಗೆ ಸ್ನಾನ ಮಾಡುತ್ತಿರುವವರ ಮರ್ಯಾದೆ ಹರಾಜು ಹಾಕುವ, ಮುಚ್ಚಲು ಬಾರದ ಬಚ್ಚಲಿನ ಬಾಗಿಲುಗಳು, ಯಾರೋ ಬರ್ಬರವಾಗಿ ಕೊಂದು ನೇತುಹಾಕಿ ಹೋಗಿರುವ ಹೆಣದಂತೆ ನ್ಯಾಲೆಯ ಮೇಲೆ ಯದ್ವಾತದ್ವಾ ನೇತಾಡುವ ಅನಾಥ ಬಟ್ಟೆಗಳು, ಜಿರಳೆಗಳ ಅಪಾರ್ಟ್ಮೆಂಟು, ವಿಲ್ಲಾ, ಫ್ಲಾಟುಗಳಾಗಿ ಬದಲಾಗಿರುವ ಅಡುಗೆ ಪಾತ್ರೆಗಳು, ವಾಸನೆ ಆರದ ಬಾಟಲಿಗಳು, ಎಂತಹಾವರಿಗಾದರೂ ಕ್ಷಣಾರ್ಧದಲ್ಲಿ ಮೂರ್ಛೆತರಿಸುವ 'ಸುವಾಸನೆ'ಯ ಸಾಗ್ಸುಗಳು, ಮದ್ದಾನೆಯೊಂದು ಮಲಗೆದ್ದು ಹೋಗಿರುವಂತೆ ಸದಾ ಅಸ್ತವ್ಯಸ್ತವಾಗಿರುವ ಮಂಚ, ಎಷ್ಟೋ ತಿಂಗಳ ಕೆಳಗೆ ಅರ್ಧ ಓದಿ ಪುಟದ ತುದಿ ಮಡಿಚಿಟ್ಟಿರುವ, ತನ್ನನ್ನು ತಾನೇ ಓದಿಕೊಳ್ಳುತ್ತಿರುವ ಕಾದಂಬರಿ… 


ಸದಾ ನೆಗಡಿಯಾದಂತೆ ಸೋರುವ, ಕಿವಿಗೆ ಬಾಣಂತಿಯಂತೆ ಬಟ್ಟೆ ಕಟ್ಟಿಕೊಂಡಿರುವ ನಲ್ಲಿ, ಹತ್ತು ಪೈಸೆ ಬಾಡಿಗೆಯನ್ನೂ ಕೊಡದೇ ರೂಮಿನಲ್ಲಿ ಜೊತೆಗೇ ವಾಸಿಸುವ, ಪುಕ್ಕಟೆಯಾಗಿ ನಮ್ಮ ಊಟ, ತಿಂಡಿಗಳನ್ನೂ ಹಂಚಿಕೊಳ್ಳುವ, ಬಾಟಲಿಯ ಸೀಲ್ ಒಡೆಯುವ ಮೊದಲೇ ತುಪ್ಪ, ಎಣ್ಣೆಗಳ ರುಚಿ ನೋಡುವ ಕೀಟ ಪ್ರಬೇಧಗಳು, ಅಂಬಾನಿ ಕೊಟ್ಟ ಫ್ರೀ ಆಫರ್ ಮುಗಿದರೂ ಪ್ರೇಯಸಿಯ ಜೊತೆಗಿನ ಲಲ್ಲೆ ಮುಗಿಸದ ರೂಮ್ ಮೆಟ್, ಸುಖಾಸುಮ್ಮನೆ ಸ್ಮೈಲ್ ಕೊಡುವ ಎದುರು ಪಿಜಿ ಹುಡುಗಿ, ಕಾಡುಮನುಷ್ಯರ ಸೊಪ್ಪಿನ ಉಡುಗೆಗಿಂತಲೂ ಹೆಚ್ಚು ತೂತುಗಳಿರುವ ಮೈಯೊರೆಸುವ ಟವೆಲ್, ಗೋಡೆಗೆ ಮೊಳೆ ಹೊಡೆಯುವುದರಿರಲಿ, ಹಾಗೇ ಸುಮ್ಮನೆ ತಟ್ಟಿದರೂ 'ಯಾವನೋ ಅವ್ನೂ?' ಎಂದು ಓಡಿಬರುವ ಮನೆ ಓನರ್, ಹೊಚ್ಚಹೊಸ ಗಂಡನಿಗೆ ಮುದ್ದು ಮಾಡುತ್ತಿರುವ ಫೋಟೋಗಳನ್ನು ಹಾಕಿ ಮನಸಾರೆ ನೋಯಿಸುವ ಶಾಲೆಯ ದಿನಗಳ ಕ್ರಶ್, ಅಂಕಲ್ ಎಂದು ಕರೆದು ಪಿತ್ತನೆತ್ತಿಗೇರಿಸುವ ಕಾಲೇಜು ಹುಡುಗರು, ಫೋನಿನಲ್ಲಿ 'ಹಲೋ' ಎಂದ ಒಂದು ಶಬ್ದವನ್ನು ಕೇಳಿಕೊಂಡೇ ಮೈಹುಷಾರಿಲ್ಲವೆಂಬುದನ್ನು ಅರಿಯುವ ಅಮ್ಮ, ಯಾವುದೋ ಶಿಲಾಯುಗದ ಮಧ್ಯರಾತ್ರಿ ಹನ್ನೆರೆಡು ಗಂಟೆಗೆ ನಿಂತುಹೋಗಿರುವ ಗೋಡೆ ಗಡಿಯಾರ, ಈ ಕ್ಷಣಕ್ಕೆ ಬೇಕಾಗಿರುವ ವಸ್ತುವೊಂದನ್ನು ಬಿಟ್ಟು ಮತ್ತೆಲ್ಲದೂ ರಾಶಿ ಬಿದ್ದಿರುವ ಟೇಬಲ್, ಆಫರ್ ಇತ್ತೆಂಬ ಒಂದೇ ಒಂದು ಕಾರಣಕ್ಕೆ ಬಾಚಿತಂದ, ಬ್ರ್ಯಾಂಡ್ ಫ್ಯಾಕ್ಟರಿಗಿಂತಲೂ ಹೆಚ್ಚಿನ ಕಲೆಕ್ಷನ್ ಗಳಿರುವ ಬಟ್ಟೆ ಸಂಗ್ರಹ, ಒಳಗಿದ್ದ ಮೊಬೈಲೇ ಹಾಳಾದರೂ ಇನ್ನೂ ಎಸೆಯದ ಅದರ ರಟ್ಟಿನ ಡಬ್ಬ, ರೂಮಿನ ಯಾವ ಮೂಲೆಯಲ್ಲಿ ಬೇಕಾದರೂ ನಿಂತು ಬಟ್ಟೆಯನ್ನು ನೇರ ನ್ಯಾಲೆಯ ಮೇಲೇ ಕೂರುವಂತೆ ಎಸೆಯುವ ಕಲೆ, ಒಬ್ಬ ಎದ್ದು ನಿಂತು ಮೈಮುರಿದರೂ ಇನ್ನೊಬ್ಬ ರೂಮಿನಿಂದಾಚೆಗೆ ಉದುರಿಹೋಗುವ ಕಿಶ್ಕಿಂದೆಯಂತಹಾ ಕೋಣೆಯಲ್ಲಿ ಹೊಂದಿಕೊಂಡು ಹೋಗುವ ಸಹಬಾಳ್ವೆ...


ಯುವ ಭಾರತದ ಸಾವಿರ-ಲಕ್ಷ-ಕೋಟ್ಯಾಂತರ ಅವಿವಾಹಿತ ಬದುಕುಗಳು ಸಾಗುತ್ತಿರುವುದೇ ಇಂತಹಾ ರೋಚಕ, ತಳಕಂಬಳಕ ಹಳಿಗಳ ಮೇಲೆ.


                       *************************


ಹೀಗೆ ಗೆಳೆಯರು, ಉದ್ಯೋಗ, ತಿರುಗಾಟ, ಉಲ್ಲಾಸ… ಎಲ್ಲವೂ ಇರುವ ಹೊತ್ತಿಗೇ ಈ ಬದುಕಿನಲ್ಲೇನೋ ಕಮ್ಮಿಯಿದೆ ಎಂದೆನಿಸಲು ಶುರುವಾಗುತ್ತದೆ. ರೂಮ್ ಮೆಟ್ ನಿಂದ ಹಿಡಿದು ಆಫೀಸಿನ  ಪ್ಯೂನ್ ತನಕ ಪರಿಚಯದ ಎಲ್ಲರೂ ತಮ್ಮ ತಮ್ಮ ಹುಡುಗಿಯ ಜೊತೆ ಗಮ್ಮತ್ತನಿಂದ ತಿರುಗಾಡುತ್ತಾ ಒಬ್ವರನ್ನೊಬ್ಬರು ಮುದ್ದುಗರೆಯುವ ಫೋಟೋಗಳನ್ನು ಹಾಕುತ್ತಿರುವಾಗ ತನ್ನ ಬದುಕಿನ ಡುಯೆಟ್ ಹಾಡು ಹೀರೋಯಿನ್ನೇ ಇಲ್ಲದೆ ಸಾಗುತ್ತಿದೆಯೆಂಬುದು ಅರಿವಾಗುತ್ತದೆ. 


ಆಗ ಅವಳು ಕಣ್ಣಿಗೆ ಬೀಳುತ್ತಾಳೆ.


ಟೀಶರ್ಟು, ಜೀನ್ಸ್ ಪ್ಯಾಂಟುಗಳ ಪಾಶ್ ಹುಡುಗಿಯರ ನಡುವೆ ತಿಳಿಹಸಿರು ಚೂಡಿದಾರ ತೊಟ್ಟು ಸಾಧಾರಣವಾಗಿರುವ ಅವಳ ನೆನಪುಗಳೇಕೋ ಆಫೀಸು ಮುಗಿಸಿ ಬಂದ ಮೇಲೂ ಕೈಮರೆತು ಬ್ಯಾಗಿನಲ್ಲಿ ಸೇರಿಕೊಂಡುಬಿಟ್ಟಿರುವ ಫೈಲಿನಂತೆ ಅವನನ್ನು ಹಿಂಬಾಲಿಸಿಕೊಂಡುಬರುತ್ತವೆ. ಬೆಳಗಿನ ಜಾವ ಬಿದ್ದ, ಅವಳನ್ನೊಳಗೊಂಡ ಸುಂದರ ಕನಸನ್ನು ನೆನೆಯುತ್ತ ಮರುದಿನ ಬೆಳಗ್ಗೆ ಆಫೀಸಿಗೆ ಹೊರಟರೆ ದಾರಿಯಲ್ಲಿ ಅವಳೇ ಸಿಕ್ಕಿಬಿಡುತ್ತಾಳೆ! 'ಬೇಕಂತಲೇ ನಿನ್ನ ಕನಸಿನಲ್ಲಿ ಬಂದೆ' ಎಂಬಂತೆ ಮುಗುಳ್ನಕ್ಕು ಮಾತಿಗೆ ತೊಡಗುತ್ತಾಳೆ. ಅವರಿಬ್ಬರ ಅದೆಷ್ಟೋ ಅಭಿರುಚಿಗಳು ಒಂದೇ ಎನ್ನುವ ಅತ್ಯಮೂಲ್ಯ ಸಂಗತಿ ಅವನಿಗೆ ಅರಿವಾಗುತ್ತದೆ. ಕಾರಿಡಾರ್ ನಲ್ಲಿ ಎದಿರಾಗುತ್ತಾಳೆ. ಕ್ಯಾಂಟೀನ್ ನಲ್ಲಿ ಅಡ್ಡ ಬರುತ್ತಾಳೆ. ಆಫೀಸಿನವರು ಆಯೋಜಿಸಿದ ಪ್ರವಾಸವೊಂದರಲ್ಲಿ ಪಕ್ಕದ ಸೀಟಿನಲ್ಲೇ ಕುಳಿತುಬಿಡುತ್ತಾಳೆ! ಅವಳ ನವಿರಾದ ಮುಂಗುರುಳು ಹಾರಿಹಾರಿ ಅವನೆದೆಯ ಸೋಕುತ್ತಿದ್ದರೆ, ಅವನು ಮೇಲ್ಬರುವ ದಾರಿಯೇ ಇಲ್ಲದ ಸಿಹಿಯಾದ ಆಳವೊಂದಕ್ಕೆ ಜಾರುತ್ತಾ ಹೋಗುತ್ತಾನೆ. ಅವಳಿಗೆ ಹೇಳದೆಯೇ ಅವಳ ಹೆಸರಿನ ಮೊದಲೆರೆಡು ಅಕ್ಷರಗಳನ್ನು ಕದ್ದು ತನ್ನ ಹೆಸರಿನ ಮೊದಲ ಅಕ್ಷರಕ್ಕೆ ಜೋಡಿಸಿ ಪ್ರೇಮ ವರ್ಣಮಾಲೆಯ ಹೊಚ್ಚಹೊಸ ಪದವೊಂದನ್ನು ಕಟ್ಟಿಕೊಂಡುಬಿಡುತ್ತಾನೆ‌. ಮಂಜಿನ ಗಾಜೊಂದರ ಮೇಲೆ ಆ ಪದವನ್ನು ಬರೆದು ಅವಳು ಬರುವಳೆನ್ನುವಾಗ ಅಳಿಸಿ ಪೆಚ್ಚುನಗೆ ನಗುತ್ತಾನೆ. ಕಾಲ ಮೆಲ್ಲಗೆ ಹರಿಯುತ್ತದೆ. ಅವನು ನಡೆಯುವ ದಾರಿಗಳಿಗೆಲ್ಲ ಚಿಕ್ಕ ಚಿಕ್ಕ ತಿರುವುಗಳನ್ನು ನೀಡಿ ಅವಳಿರುವ ತಾಣಗಳಿಗೇ ತಂದು ಸೇರಿಸುತ್ತದೆ. ಆದರೆ ಇಷ್ಟೆಲ್ಲ ಕಾಕತಾಳೀಯಗಳ ಕೊನೆಯ ಫಲಿತಾಂಶ ತಮ್ಮಿಬ್ಬರ ಮಿಲನವೇ ಎಂದವನು ನಂಬಿರುವ ಹೊತ್ತಿಗೇ ಸಮಯ ಮಗ್ಗಲು ಬದಲಾಯಿಸಿಬಿಡುತ್ತದೆ‌. ಅವಳ ನವಿರು ಮುಗುಳ್ನಗೆಯೊಳಗೆ ಮತ್ಯಾರದೋ ಚಹರೆ ಕದಲತೊಡಗುತ್ತದೆ. ಸಂಜೆಯ ಪ್ರಯಾಣದಲ್ಲಿ ಮತ್ಯಾವುದೋ ನೆರಳೊಂದು ಅವಳ ಪಕ್ಕ ಚಲಿಸತೊಡಗುತ್ತದೆ. ಇದು ಹೀಗೇ ಮುಂದುವರೆದರೆ ತನ್ನ ಪ್ರೀತಿ ಪಂಜರದ ಹಕ್ಕಿಯ ಸ್ವಗತವಾಗುತ್ತದೆಂದು ಭೀತಿಗೊಳಗಾಗುವ ಅವನು ಅದೊಂದು ಸಂಜೆ ನಡುಗುತ್ತಿರುವ ಹೃದಯದ ಸಮೇತ ಅವಳೆದುರು ನಿಂತು ತನ್ನೆದೆಯ ಪುಸ್ತಕದಲ್ಲಿ ಹೇಳದೇ ಬರೆದಿಟ್ಟುಕೊಂಡಿರುವ ಅವಳ ಚಿತ್ರಗಳನ್ನೆಲ್ಲಾ ಅವಳೆದುರು ಹರಡಿನಿಲ್ಲುತ್ತಾನೆ.


ಅದೃಷ್ಟ ಚೆನ್ನಾಗಿದ್ದರೆ ಮೊದಲ ಮಾತಿನಲ್ಲೇ ತಿರಸ್ಕರಿಸಲ್ಪಡುತ್ತಾನೆ‌. ಇಲ್ಲವಾದಲ್ಲಿ ಮುಳುಗಲೇಬೇಕಿರುವ ದೋಣಿಯೊಂದು ತುಸು ದೂರ ಹೆಚ್ಚು ತೇಲಿದಂತೆ, ಇಲ್ಲೇ ಮುಳುಗಬೇಕಿದ್ದುದು ಅಲ್ಲೇಲ್ಲೋ ದಡದ ಸಮೀಪದಲ್ಲಿ ಮುಳುಗಿದಂತೆ ಕೆಲದಿನಗಳ ಕಾಲ ಆ ಪ್ರೀತಿ ಮುನ್ನಡೆಯುತ್ತದೆ. ಪಾರ್ಕಿನಲ್ಲಿರುವ ಹಕ್ಕಿಗಳಿಗೆಲ್ಲ ಇವರ ಪರಿಚಯವಾಗಿ, ಮಾಲುಗಳ ಎಸ್ಕಿಲೇಟರ್ ಗಳ ಮೇಲೆಲ್ಲಾ ಇವರ ಹೆಜ್ಜೆಗುರುತು ಜೊತೆಯಾಗಿ ಮೂಡಿ, ತಡರಾತ್ರಿಯ ನೆರಳು ಹಾಸಿದ ನಿರ್ಜನ ರಸ್ತೆಗಳಿಗೆಲ್ಲ ಇವರ ಪಿಸುಮಾತು ಬಾಯಿಪಾಠವಾಗಿ, ಒಲವಿನ ಈ ಬಂಡಿ ಮುಂದೆಸಾಗಿರುವಾಗಲೇ ಜನುಮ ಜನುಮದ್ದೆಂದು ನಂಬಿದ್ದ ಆ ಪಯಣ ಥಟ್ಟನೆ ನಿಂತುಹೋಗುತ್ತದೆ. ಸಣ್ಣ ಮುನಿಸು, ಮನೆಯವರ ಅಸಮ್ಮತಿ, ಎಂಥದೋ ಅಸಮಾಧಾನ.. ಇಂತಹಾ ಯಾವುದೋ ನೆಪದ ಎಡರಿಗೆ ಸಿಲುಕಿ ಅವಳು ಏಕಾಏಕಿ ತನ್ನ ಹಾದಿಯನ್ನೇ ಬದಲಿಸಿಬಿಡುತ್ತಾಳೆ. ವೇದನೆಯ ನೆನಪುಗಳನ್ನು ಯಾವುದೋ ಸಂಜೆಯ ಮೌನಕ್ಕಷ್ಟೇ ಸೀಮಿತಿಗೊಳಿಸಿ, ಅವನು ಮೊದಲ ಬಾರಿಗೆ ಸಿಕ್ಕ ಹಿಂದಿನ ದಿನ ಬೆಳಗ್ಗೆ ಹೇಗೆ ನಗುನಗುತ್ತಾ ಇದ್ದಳೋ ಅಂತಹದೇ ಉಲ್ಲಸವೊಂದನ್ನು ಮುಖದಮೇಲೆ ತಂದುಕೊಂಡುಬಿಡುತ್ತಾಳೆ.


ಆದರೆ ಬದುಕಿನ ಆ ಕಹಿಸತ್ಯವನ್ನು ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವುದು ಅವನಿಂದ ಸಾಧ್ಯವಾಗುವುದಿಲ್ಲ. ಎದೆಯ ಮೇಲೆ ಅವಳು ತಲೆಯಾನಿಸಿ ನಕ್ಕ ನವಿರಾದ ಗುರುತು ಚಿಟಚಿಟನೆ ಉರಿಯತೊಡಗುತ್ತದೆ. ರಾತ್ರೆಗಳು ನಿದ್ರೆಯನ್ನು ಬಹಿಷ್ಕರಿಸುತ್ತವೆ. ನಗು ಬ್ಯಾನ್ ಆಗುತ್ತದೆ‌. ಯಾವ ದಾರಿಯಲ್ಲಿ ಕಾಲಿಟ್ಟರೂ ಹಳೆಯ ಹೆಜ್ಜೆಗುರುತಿನ ಮುಳ್ಳುಗಳು ಪಾದಕ್ಕೆ ನಾಟಿ ನೋವು ಛಿಲ್ಲನೆ ಚಿಮ್ಮುತ್ತದೆ. ಸಿಗದೇಹೋದ ಒಲವು ಇನ್ನಷ್ಟು, ಮತ್ತಷ್ಟು ಆತ್ಮೀಯವಾಗುತ್ತದೆ.  ಬಿಟ್ಟುಹೋದ ಹುಡುಗಿಯ ಮೇಲಿನ ಪ್ರೀತಿ ಬೆಟ್ಟದಂತೆ ಬೆಳೆಯುತ್ತದೆ. ಈ ಮುನ್ನ ಎಷ್ಟು ಬಾರಿ ಅವಳು ಪ್ರೀತಿ ಹೇಳಿಕೊಂಡಿದ್ದಳೋ ಅದರ ದುಪ್ಪಟ್ಟು ತಿರಸ್ಕಾರ ಅವಳ ನಡವಳಿಕೆಯಲ್ಲಿ ಚಿಮ್ಮುತ್ತದೆ. ಸಂಜೆ ನೆನಪುಗಳ ಪಾಲಾಗುತ್ತದೆ. ಬೆಳಗು ಕೆಟ್ಟಕನಸುಗಳಿಗೀಡಾಗುತ್ತದೆ. ಎದ್ದು ನೋಡಿದರೆ ಪಕ್ಕದ ಮಂಚದಲ್ಲಿ ರೂಮ್ ಮೆಟ್ ಜಗತ್ತಿನ ಅತ್ಯಂತ ಸುಖ ಜೀವಿಯಂತೆ ಗೊರಕೆ ಹೊಡೆಯುತ್ತಿರುತ್ತಾನೆ.


ಟೆರಾಸಿನ ಮೂಲೆಯಲ್ಲಿನ ಬಾಟಲಿಗಳು ಬಹುಸಂಖ್ಯಾತರಾಗುತ್ತವೆ. ಮೊಂಡು ಸಿಗರೇಟುಗಳ ಸಣ್ಣ ಸೈನ್ಯವೇ ತಯಾರಾಗುತ್ತದೆ. ಮನಸ್ಸು ಅಮೀಬಾದಂತೆ ರೂಪ ಬದಲಾಯಿಸತೊಡಗುತ್ತದೆ. ಬೆಳಗ್ಗೆಯಷ್ಟೇ ಅವಳ ನೆನಪುಗಳೇ ಬೇಡವೆಂದು ಗಹಗಹಿಸುತ್ತಿದ್ದದ್ದು ಸಂಜೆಯಾಗುವ ಹೊತ್ತಿಗೆ ಅವಳದೇ ನೆನಪುಗಳನ್ನು ನಾಟಿಸಿಕೊಂಡು ನರಳತೊಡಗುತ್ತದೆ. ‘ಇವತ್ತಿನಿಂದ ಎಲ್ಲರ ಜೊತೆ ಫ್ಲರ್ಟ್ ಮಾಡ್ತೀನಿ’ ಎಂದು ಹೊರಟಿದ್ದು ‘ಇನ್ನು ಯಾರ ಜೊತೆಗೂ ಬೆರೆಯುವುದಿಲ್ಲ’ ಎಂದು ಮೂಲೆಸೇರಿಬಿಡುತ್ತದೆ. ಒಮ್ಮೆ ಅವಳನ್ನು ಬೈದರೆ ಇನ್ನೊಮ್ಮೆ ತನ್ನನ್ನೇ ಘಾಸಿಗೊಳಿಸಿಕೊಂಡಂತೆ ವೇದನೆ ಪಡುತ್ತದೆ. 


ಅವನ ಕೈಯ ರೇಖೆಯೊಂದು ಮೆಲ್ಲನೆ ಸವೆದು ಮರೆಯಾದ ಅದೇ ಹೊತ್ತಿಗೆ ಅವಳ ಅಂಗೈಯ ಮದರಂಗಿಯಲ್ಲಿ ಬೇರ್ಯಾರದೋ ಹೆಸರು ಕೆಂಪಾಗಿ ಮೂಡಿನಿಲ್ಲುತ್ತದೆ. 


                       *************************


ಈ ನಡುವೆಯೇ ಊರಿನಲ್ಲಿನ ಅಪ್ಪನಿಗೆ ಲಘುವಾಗಿ ಆರೋಗ್ಯ ತಪ್ಪುತ್ತದೆ. ಅಮ್ಮ ಕೆಮ್ಮಿದ ಸದ್ದು ಬೆಂಗಳೂರಿಗೂ ಕೇಳುತ್ತದೆ. ಜಮೀನಿನ ಮೇಲಿನ ಸಾಲ ಪಾವತಿಸೆಂದು ಬ್ಯಾಂಕಿನವರು ಕಳಿಸಿದ ನೋಟಿಸು ನೇರ ರೂಮಿನ ಬಾಗಿಲನ್ನೇ ತಟ್ಟುತ್ತದೆ‌. ಹೈಕು, ಪ್ರಮೋಷನ್ನು, ಪ್ಯಾಕೇಜುಗಳ ಹಿಂದಿನ ಓಟ ಅನಿವಾರ್ಯವಾಗಿ ತೀವ್ರಗೊಳ್ಳುತ್ತದೆ. ಕೈಯಲ್ಲಿರುವ ಪುಡಿಗಾಸನ್ನು ಶೇರುಗಳಿಗೆ ಹಾಕುವುದೋ ಇಲ್ಲಾ ಊರಿನಲ್ಲೊಂದು ಜಮೀನು ಕೊಳ್ಳುವುದೋ ಎಂಬ ಗೊಂದಲ ಆರಂಭವಾಗುತ್ತದೆ. ಅಲ್ಯಾವುದೋ ನಗರದಾಚೆಗಿನ ಸೈಟು 'ನನ್ನನ್ನು ಕೊಳ್ಳು' ಎಂದು ಕೈಬೀಸಿ ಕರೆಯುತ್ತದೆ‌. ಇಎಮೈಗಳ ಲೆಕ್ಕ ಜೋರಾಗುತ್ತದೆ. ಗೆಳೆಯರೆಲ್ಲಾ ಬಾಗಿಲಿನಲ್ಲಿ ಸಾಲಾಗಿ ನಿಂತು ಮದುವೆಗೆ ಕರೆದುಹೋಗುತ್ತಾರೆ. ಅವರೆಲ್ಲ ತಮ್ಮ ತಮ್ಮ ಹೆಂಡಿರನ್ನು ತಬ್ಬಿ ಮುದ್ದಾಡುವ ಚಿತ್ರಗಳು ವಾಟ್ಸಾಪ್, ಫೇಸ್ಬುಕ್ಕುಗಳಲ್ಲಿ ರಾರಾಜಿಸುವಾಗ ಹದಿಮೂರೇ ಲೈಕು ಕಂಡ ಇವನ ಒಬ್ಬಂಟಿ ಪ್ರೊಫೈಲು ಫೋಟೋ ಗೋಳೋ ಎಂದು ಅಳತೊಡಗುತ್ತದೆ. ಅವಳ ನೆನಪುಗಳ ನಡುವೆಯೇ ಹೆಣ್ಣುಗಳ ಮನೆಗೆ ಓಡಾಟ ಶುರುವಾಗುತ್ತದೆ. ಕಾಫೀಡೇಗಳ ಜಗುಲಿಯಲ್ಲಿ ಭವಿಷ್ಯದ ಮಡದಿಯ ಜೊತೆ ಮದುವೆ ಚೌಕಾಶಿಯ ಮಾತುಕತೆಗಳಾಗುತ್ತವೆ. ಮುಂದೊಂದು ದಿನ ಅತ್ತ ದೇವತೆಯೂ ಅಲ್ಲದ, ಇತ್ತ ರಾಕ್ಷಸಿಯೂ ಆಗದ ಯಾರೋ ಒಬ್ಬಳು ಅವನ ಬದುಕಿಗೆ ಕಾಲಿಡುತ್ತಾಳೆ. ಅವನು ಮನೆ-ಮನದ ತುಂಬಾ ಚೆಲ್ಲಾಡಿಕೊಂಡಿರುವ ವೇದನೆಗಳನ್ನೆಲ್ಲ ಒಂದೊಂದಾಗಿ ಎತ್ತಿಡುತ್ತಾಳೆ. ಅವನೆಲ್ಲ ಅಸ್ತವ್ಯಸ್ಥ ನೆನಪುಗಳನ್ನು ನೋವಾಗದಂತೆ ಮೆಲ್ಲನೆ ಗುಡಿಸಿ ಚಂದದ ರಂಗೋಲಿಯಿಡುತ್ತಾಳೆ.


ಬ್ರಹ್ಮಚಾರಿ ಬದುಕಿನ ಕಟ್ಟಕಡೆಯ ಅವಶೇಷವಾದ ಟೆರಾಸಿನ ಮೇಲಿನ ತನ್ನ ಒಂಟಿಕೋಣೆಯ ಕೊನೆಯ ತಿಂಗಳ ಬಾಡಿಗೆಯನ್ನೂ ಕಟ್ಟಿದ ಅವನು, ಎಸೆದ ಮೇಲೂ ಉಳಿದ ಸಾಮಾನು ಸರಂಜಾಮುಗಳನ್ನೂ, ಮಧುರ ನೆನಪುಗಳನ್ನೂ ಗಂಟುಕಟ್ಟಿಕೊಂಡು ವಿವಾಹ ಜೀವನವೆಂಬ ಟೂ ಬಿಎಚ್ಕೆ ಮನೆಯತ್ತ ಮೆಲ್ಲನೆ ತನ್ನ ಬೈಕನ್ನು ಚಲಾಯಿಸುತ್ತಾನೆ.


(ಪಂಜು ಪತ್ರಿಕೆಯ 03-08-2020ರ ಸಂಚಿಕೆಯಲ್ಲಿ ಪ್ರಕಟಿತ)


ಬುಧವಾರ, ಜುಲೈ 8, 2020

ಬ್ಯಾಚುಲರ್ ಆಫ್ ಕೊರೋನಾ


ದೂರದ ಚೀನಾದಲ್ಲೆಲ್ಲೋ ಹುಟ್ಟಿದೆಯಂತೆ ಎಂಬ ಸುದ್ದಿ ಕಿವಿಯಿಂದ ತೂರಿ ಮೆದುಳನ್ನು ತಲುಪುವುದರೊಳಗೇ ಕೊರೋನಾ ಅದ್ಯಾವುದೋ ಫ್ಲೈಟಿನಿಂದಿಳಿದು ಇಡೀ ಬೆಂಗಳೂರಿನ ತುಂಬಾ ಓಡಾಡುತ್ತಿದೆ. ಪರಿಣಾಮವಾಗಿ ಜಪ್ಪಯ್ಯ ಎಂದರೂ ರಜೆ ನೀಡದ ಕಠಿಣ ಮ್ಯಾನೇಜ್ಮೆಂಟಿನವರೂ ಮುಖಕ್ಕೊಂದು ಮಾಸ್ಕ್ ಧರಿಸಿಕೊಂಡು ಬಂದು ತುರ್ತು ಮೀಟಿಂಗ್ ನಡೆಸಿ, ಒಂದು ವಾರ 'ವರ್ಕ್ ಫ್ರಂ ಹೋಂ' ಮಾಡಿರೆಂದು ಘೋಷಿಸಿ, ಎರೆಡೆರಡು ಬಾರಿ ಕೈತೊಳೆದುಕೊಂಡು ಹೋಗಿಯೇಬಿಟ್ಟರು.

ಯಾವ ವಿಮಾನದ ಸಮೀಪಕ್ಕೂ ಹೋಗದ, ಕೆಮ್ಮು-ಸೀನುಗಳನ್ನೂ ತಾಕಿಸಿಕೊಳ್ಳದ ನನ್ನ ಬಾಳಲ್ಲಿ ನಿಜವಾದ ಕೊರೋನಾ ಅಟ್ಟಹಾಸ ಶುರುವಾಗಿದ್ದೇ ಆಗ. ರಜೆ ಘೋಷಣೆಯಾದ ಸಂಜೆಯೇ ಹೋಟೆಲ್ ಗೆ ನುಗ್ಗಿದವನು ಸಣ್ಣ ಪಾರ್ಟಿಯ ಮಾದರಿಯಲ್ಲೊಂದಷ್ಟು ತಿಂದು, ನೆತ್ತಿಗೆ ಸಿಲುಕಿ, ಕೋಲ್ಡ್ ವಾಟರ್ ಕುಡಿದುಬಿಟ್ಟೆ. ತಣ್ಣೀರೆಂಬುದು ಕೊರೋನಾ ಕಣ್ತೆರೆಯುವ ಮೊದಲಿನಿಂದಲೇ ಕೆಮ್ಮಿಗೆ ತಾಯಿ. ಇನ್ನು ಇಡೀ ಪ್ರಪಂಚವೇ ಕೆಮ್ಮುತ್ತಿರುವ ಹೊತ್ತಿನಲ್ಲಿ ಅದು ಸುಮ್ಮನ್ನಿದ್ದೀತೇ? ಕುಡಿದು ಕೆಳಗಿಟ್ಟು ಬಿಲ್ ಪಾವತಿಸುವುದರೊಳಗೆ ಕೆಮ್ಮು ಪ್ರತ್ಯಕ್ಷವಾಯಿತು. ಮರುದಿನ ಬೆಳಗ್ಗೆ ಖೊಕ್ ಖೊಕ್ ಎನ್ನುತ್ತಾ ಎದ್ದವನಿಗೆ ನಮ್ಮ ಏರಿಯಾದಲ್ಲೇ ಕೊರೋನಾ ಸೋಂಕಿತನೊಬ್ಬ ಪತ್ತೆಯಾಗಿದ್ದಾನೆಂಬ ಆಘಾತಕಾರಿ ಸುದ್ದಿ ತಿಳಿಯಿತು. ಹೊರಗೆಲ್ಲೂ ತಿನ್ನಬಾರದು, ಕುರುಕಲು ತಿಂಡಿಗಳದಂತೂ ಹೆಸರೂ ಹೇಳಬಾರದು, ಥಂಡಿ ಪಾನೀಯಗಳಿಂದ ಕನಿಷ್ಟ ಒಂದು ಮೈಲಿ ದೂರವನ್ನಾದರೂ ಕಾಯ್ದುಕೊಳ್ಳಬೇಕು ಎಂಬೆಲ್ಲ ಕಟ್ಟಾಜ್ಞೆಗಳನ್ನು ಅಮ್ಮ ಫೋನಿನಲ್ಲೇ ಹೊರಡಿಸಿದಳು. ಅಲ್ಲಿಗೆ ನನ್ನ ಮುಂದಿನ ಒಂದು ವಾರ ವನವಾಸ-ಅಜ್ಞಾತವಾಸಗಳೆರೆಡರ ಭೀಕರ ಮಿಶ್ರಣದಂತಿರುತ್ತದೆಂಬುದು ನನಗೆ ಅರ್ಥವಾಗಿಹೋಯಿತು. ಸಾಲದ್ದಕ್ಕೆ ಆಫೀಸಿಗೆ ಕರೆ ಮಾಡಿದರೆ ಆಕಳಿಸುತ್ತಾ ಫೋನೆತ್ತಿಕೊಂಡ ಆಫೀಸ್ ಬಾಯ್ "ನಮ್ಮ ಏರಿಯಾದಲ್ಲಿ ಜೋರಾಗಿ ಕೆಮ್ಮುತ್ತಿದ್ದ ಮೂವರನ್ನು ಕಾರ್ಪೋರೇಷನ್ ಗಾಡಿಯಲ್ಲಿ ತುಂಬಿಕೊಂಡು ಹೋದ್ರು ಸಾ. ನೀವೂ ಜಾಸ್ತಿ ಕೆಮ್ಬೇಡಿ ಸಾ" ಎಂದುಬಿಟ್ಟ. ಸತ್ಯವೂ ಆಗಿರಬಹುದಾದ ಆ ಸಂಗತಿಯನ್ನು ಕೇಳಿ ಫೋನಿಟ್ಟ ನನಗೆ ಇಲ್ಲೇ ಎಲ್ಲೋ ಕಾರ್ಪೋರೇಷನ್ ಗಾಡಿಯ ಸದ್ದು ಕೇಳಿದಂತಾಗಿ ಕೆಮ್ಮು ಉಬ್ಬರಿಸಿ ಬಂತು.

ಸರಿ, ಈಗ ತಿಂಡಿಯ ಶಾಸ್ತ್ರವಾಗಬೇಕಲ್ಲ? ಅಮ್ಮನಂತೂ ಹೋಟಲ್ ಗಳನ್ನು ಕೊರೋನಾ ಗೆಸ್ಟ್ ಹೌಸ್ ಮಾಡಿಕೊಂಡಿದೆಯೆಂಬಂತೆ ಹೆದರಿಸಿದ್ದಳು. ಅಡುಗೆ ಸೌಟನ್ನು ಬಾಹ್ಯಗ್ರಹದ ಏಲಿಯನ್ ನ ಅಸ್ತ್ರದಂತೆ ನೋಡುತ್ತಿದ್ದ ನನಗೆ ಗೊತ್ತಿದ್ದುದು ಉಪ್ಪಿಟ್ಟು, ಚಿತ್ರಾನ್ನಗಳು ಮಾತ್ರ. ಅದನ್ನೇ ಮಾಡೋಣವೆಂದು ಮುಖಕ್ಕೊಂದು ಕರ್ಚೀಫು ಸುತ್ತಿಕೊಂಡು ಸಮೀಪದ ಅಂಗಡಿಗೆ ಹೊರಟೆ. ಕೆಮ್ಮನ್ನು ಆದಷ್ಟೂ ಗಂಟಲಿನಲ್ಲೇ ತಡೆಹಿಡಿದು ಉಪ್ಪಿಟ್ಟು ಮಿಕ್ಸ್ ಕೊಡುವಂತೆ ಅಂಗಡಿಯಾತನಿಗೆ ಕೇಳಿದೆ. ಆದರೆ ಬಹಳ ಗಿರಾಕಿಗಳಿದ್ದರಿಂದ ಅಂಗಡಿಯಾತ ನನ್ನತ್ತ ಅಷ್ಟು ಬೇಗನೆ ತಿರುಗಲೇ ಇಲ್ಲ. ಗಂಟಲಿನಲ್ಲೇ ಒತ್ತಿ ಹಿಡಿದಿದ್ದ ಕೆಮ್ಮಾಗಲೇ ಸುನಾಮಿಯ ರೂಪ ತಾಳಿತ್ತು. ಇನ್ನೂ ತಡವಾದರೆ ಕಷ್ಟವೆಂದು "ಬೇಗ ಕೊಡಿ" ಎಂದು ಕೇಳಲು ಬಾಯಿತೆರೆದದ್ದೇ ತಡ, ತಡೆಹಿಡಿದಿದ್ದ ಕೆಮ್ಮು ಖೊಕ್ ಖೊಕ್ ಎಂಬ ಭೀಕರ ಸದ್ದಿನೊಂದಿಗೆ ಹೊರಬಂದೇ ಬಿಟ್ಟಿತು‌. ಅಷ್ಟೇ! ಸುತ್ತ ನಿಂತವರೆಲ್ಲಾ ಹುಲಿಯ ಘರ್ಜನೆಯನ್ನು ಕೇಳಿದಂತೆ ಕಂಗಾಲಾಗಿ ನನ್ನತ್ತ ನೋಡತೊಡಗಿದರು. ಅಂಗಡಿಯವನಂತೂ ಸಾಕ್ಷಾತ್ ಕೊರೋನಾ ವೈರಸ್ಸೇ ಐದಡಿ ಎತ್ತರಕ್ಕೆ ಬೆಳೆದು ಎದುರು ನಿಂತಿರುವಂತೆ ಬೆಚ್ಚಿಬಿದ್ದು ಉಪ್ಪಿಟ್ಟು ಮಿಕ್ಸ್ ನ ಪ್ಯಾಕೇಟಿನೊಂದಿಗೆ ಓಡೋಡಿಬಂದ. ಇನ್ನೊಂದು ಕೆಮ್ಮು ಕೆಮ್ಮಿದರೂ ಇವರೆಲ್ಲಾ ಸೇರಿ ನನ್ನನ್ನು ಮುನ್ಸಿಪಾಲಿಟಿಯ ಗಾಡಿಗೆ ಹತ್ತಿಸುವುದು ಗ್ಯಾರಂಟಿಯೆಂದು ಹೆದರಿ ರೂಮಿನತ್ತ ಓಟಕಿತ್ತೆ.

ಒಲೆಯ ಮೇಲೆ ಮುಚ್ಚಿಟ್ಟ ಬಾಂಡ್ಲಿಯೊಳಗೆ ಉಪ್ಪಿಟ್ಟು ತಕತಕ ಬೇಯುತ್ತಾ ಸಿದ್ಧವಾಯಿತು. ತಟ್ಟೆಗೆ ಬಡಿಸಿಕೊಳ್ಳಲೆಂದು ಸೌಟು ಹಾಕಿ ನೋಡಿದರೆ ಉಪ್ಪಿಟ್ಟು ಎದುರುಗಡೆ ರಸ್ತೆಯಲ್ಲಿ ಮನೆಕಟ್ಟಲು ಕಲಸುತ್ತಿರುವ ಕಾಂಕ್ರೀಟಿನಂತೆ ಗಟ್ಟಿಗಟ್ಟಿ! ಕೊರೋನಾಗೆ ವ್ಯಾಕ್ಸಿನ್ನಾದರೂ ಸಿಗಬಹುದು, ಆದರೆ 'ಒಂದು ಲೋಟ ರವೆಗೆ ಎಷ್ಟು ನೀರು ಹಾಕಬೇಕು?' ಎಂಬ ಬ್ಯಾಚುಲರ್ ಜೀವನದ ಮಿಲಿಯನ್ ಡಾಲರ್ ಪ್ರೆಶ್ನೆಗೆ ಉತ್ತರ ದೊರಕಲಾರದೇನೋ ಎಂದುಕೊಳ್ಳುತ್ತಲೇ ಉಪ್ಪಿಟ್ಟನ್ನು ಬಾಯಿಗಿಟ್ಟುಕೊಂಡೆ. ಮೊದಲೇ ಕಿಚಕಿಚ ಎನ್ನುತ್ತಿದ್ದ ಗಂಟಲು ಕಾಂಕ್ರೀಟಿನಂತಹಾ ಉಪ್ಪಿಟ್ಟು ತನ್ನ ಮೂಲಕ ಹಾದುಹೋಗುವಾಗ ಖೊಕ್ ಖೊಕ್ ಎಂದು ಪ್ರತಿಭಟಿಸತೊಡಗಿತು.

ಹೀಗೆ ಬೆಳಗಿನ ತಿಂಡಿಯಲ್ಲಿ ಅಮೋಘವಾಗಿ ಹೋದ ಮರ್ಯಾದೆಯನ್ನು ಮಧ್ಯಾಹ್ನದೂಟದಲ್ಲಿ ಚಿತ್ರಾನ್ನ ಮಾಡುವ ಮೂಲಕ ಮರಳಿ ಗಳಿಸಬೇಕೆಂದು ದೃಢನಿರ್ಧಾರ ಮಾಡಿದೆ. ಒಂದು ಕೈಯಲ್ಲಿ ಬೋಂಡಾ ಕರಿಯುತ್ತಾ ಇನ್ನೊಂದು ಕೈಯಲ್ಲಿ ಚಪಾತಿ ಹಿಟ್ಟಿನ ಕತ್ತು ಹಿಸುಕುವ ನಮ್ಮೂರಿನ ನುರಿತ ಅಡುಗೆ ಭಟ್ಟರೊಬ್ಬರನ್ನು ಮನಸ್ಸಿನಲ್ಲೇ ನೆನೆಯುತ್ತಾ ಒಗ್ಗರಣೆ ಬಾಂಡಲಿಯನ್ನು ಒಲೆಯ ಮೇಲಿಟ್ಟೆ. ಅದ್ಯಾವ ಜನ್ಮದ ಸಿಟ್ಟಿತ್ತೋ ಏನೋ, ನಾನು ಒಂದೊಂದೇ ಪದಾರ್ಥವನ್ನು ಹಾಕಿದಾಗಲೂ ಬಾಂಡಲಿ ಫಿರಂಗಿಯಂತೆ ಢಮಾರೆಂದು ಸಿಡಿಯುತ್ತಾ ಬಿಸಿಯೆಣ್ಣೆಯಲ್ಲಿ ಬೆಂದ ಸಾಸಿವೆ ಕಾಳುಗಳನ್ನು ನನ್ನತ್ತ ಉಗುಳುತ್ತಿತ್ತು. ಅದರಿಂದ ಪಾರಾಗುತ್ತಾ ಅಂತೂಇಂತೂ ಒಗ್ಗರಣೆ ಮುಗಿಸಿ ಅಕ್ಕಿ ತೊಳೆಯಲೆಂದು ನೋಡಿದರೆ ನೀರು ಇಷ್ಟೇ ಇಷ್ಟಿದೆ! ಸರಿ, ಹೆಂಡತಿ ಗಂಡನಿಗೆ ಅಡ್ಜಸ್ಟ್ ಆಗದಿದ್ದರೆ ಗಂಡನೇ ಹೆಂಡತಿಗೆ ಹೊಂದಿಕೊಳ್ಳಬೇಕು ತಾನೇ? ಅಂತೆಯೇ ನೀರಿಗೆ ತಕ್ಕಷ್ಟು ಅಕ್ಕಿಯಿಟ್ಟು ಅಂತೂಇಂತೂ (ವಿ)ಚಿತ್ರಾನ್ನವೊಂದು ತಯಾರಾಯಿತು. ಆ ಕಡೆಯಿಂದ ಉಪ್ಪಿಟ್ಟಿನಂತೆ, ಈ ಕಡೆಯಿಂದ ಬಿಸಿಬೇಳೆ ಬಾತಿನಂತೆ ಕಾಣುತ್ತಿದ್ದ ಅದನ್ನು ನೋಡಿದಾಗ ಬಹುಷಃ ಮನುಷ್ಯ ಮೊಟ್ಟಮೊದಲಬಾರಿಗೆ ತಯಾರಿಸಿದ ಚಿತ್ರಾನ್ನ ಹೀಗೇ ಇದ್ದಿರಬಹುದೇನೋ ಎಂಬ ಅನುಮಾನವುಂಟಾಯಿತು. ಇಂತಹಾ ವಿಚಿತ್ರ ಸೃಷ್ಟಿಗೆ ಕಾರಣವಾದ ಕೊರೋನಾದ ಮೇಲೆ ಕೋಪವುಕ್ಕಿ ಬಂತು.
ಹೀಗೆ ಉಪ್ಪಿಟ್ಟು, ವಿಚಿತ್ರಾನ್ನಗಳ ತಿಂದು ಕೆಮ್ಮುತ್ತಿದ್ದವನಿಗೆ ಟೆರಾಸಿನಲ್ಲೇನೋ ಸದ್ದು ಕೇಳಿ ಹೊರಬಂದರೆ ತನ್ನ ಹುಡುಗಿಯ ಜೊತೆ ಫೋನಿನಲ್ಲಿ ಮಾತನಾಡುತ್ತಿರುವ ಕೆಳಗಿನ ಮನೆಯ ನಾರ್ಥೀ ಹುಡುಗ ಕಣ್ಣಿಗೆ ಬಿದ್ದ. ಕೆಮ್ಮಿದಾಗ ಸಿರಪ್ ಕುಡಿಸಲಿಕ್ಕಾದರೂ ನನಗೊಬ್ಬ ಗೆಳತಿಯಿಲ್ಲವಲ್ಲಾ ಎಂದು ಹತಾಷೆಯಿಂದ ಮೊಬೈಲ್ ನೋಡಿಕೊಂಡವನಿಗೆ ಅಲ್ಲಿ ಅಮ್ಮ ಫಾರ್ವರ್ಡ್ ಮಾಡಿದ್ದ 'ಶುಂಠಿಕಷಾಯ ಮಾಡಿಕೊಳ್ಳುವ ಬಗೆ' ಎಂಬ ಮೆಸೇಜ್ ಕಣ್ಣಿಗೆ ಬಿತ್ತು. ಅಮ್ಮನೆಂಬ ಅಮ್ಮನೇ ಆರೈಕೆಗೆ ನಿಂತಿರುವಾಗ ಯಾವ ಕೊರೋನಾ ತಾನೇ ಏನು ಮಾಡೀತೆಂದು ಧೈರ್ಯಹೇಳಿಕೊಳ್ಳುತ್ತಾ ರೂಮಿನೊಳಗೆ ನಡೆದೆ.

(ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ)

ನಿನ್ನ ಹಾಗೆ ಯಾಕೆ ಯಾರಿಲ್ಲ?

ಈಗಷ್ಟೇ ಬೆಳಗಾಗಿದೆ. ಕಿಟಕಿಯಿಂದ ಹಾದ ಬೆಳಕಿನ ಕೋಲು ಕೋಣೆಯ ತುಂಬಾ ಹರಡಿಕೊಂಡು ಬೆಳಕಾಗಿದೆ. ಪುಟ್ಟನಿಗೆ ಎಚ್ಚರವಾಗಿದೆ. ಅವನ ಕೈ ಅಪ್ರಯತ್ನವಾಗಿ ತಡಕಾಡುತ್ತಿದೆ. ಅವನ ಪಕ್ಕದ ಹಾಸಿಗೆಯೀಗ ಬರಿದಾಗಿದೆ. ಅಲ್ಲೀಗ ಅಪ್ಪ ಇಲ್ಲ! ಎಲ್ಲಿಹೋಗಿಬಿಟ್ಟ? ರಾತ್ರೆ ಇದ್ದನಲ್ಲ? ಗುಮ್ಮಣ್ಣನಿಗೆ ಆಂಜನೇಯ ಚಾಮಿ ತಕ್ಕ ಶಾಸ್ತಿ ಮಾಡಿದ ಕಥೆಯನ್ನು ಹೇಳಿದ್ದನಲ್ಲಾ? ಈಗೆಲ್ಲಿ ಹೋದ? ಪುಟ್ಟನಿಗೆ ಭಯವಾಗಿದೆ. ಅಪ್ಪಾ.. ಊಊಊ. ಅವನೀಗ ಅಳುತ್ತಿದ್ದಾನೆ. ಆ ಅಳು ಆಚೆ ಕೊಟ್ಟಿಗೆಯಲ್ಲಿ ಒಲೆಗೆ ಬೆಂಕಿ ಒಟ್ಟುತ್ತಿರುವ ಅಪ್ಪನಿಗಿಂತ ಮೊದಲು ಅಡುಗೆಮನೆಯಲ್ಲಿರುವ ಅಮ್ಮನನ್ನು ತಲುಪಿದೆ.

"ಬೆಳ್ ಬೆಳಗ್ಗೆ ಏನೋ ನಿಂದು? ಕೋಲು ತರ್ತೇನೆ ನೋಡು"
ಅಮ್ಮ ಗದರುತ್ತಿದ್ದಾಳೆ. ಪುಟ್ಟನಿಗೀಗ ಗುಮ್ಮಣ್ಣನ ಭಯದ ಜೊತೆ ಅಮ್ಮನ ಏಟಿನ ಭಯವೂ ಉಂಟಾಗಿ ಮತ್ತಷ್ಟು ಅಳುತ್ತಿದ್ದಾನೆ.

"ಏಯ್, ನೀನು ಸುಮ್ನಿರೇ‌. ತಡಿ ಪಾಪೂ. ನಾನು ಬಂದೆ"
ಅಮ್ಮನನ್ನು ಗದರಿದ ಅಪ್ಪ ಪುಟ್ಟನನ್ನು ಎತ್ತಿಕೊಂಡು ಹೊರಬಂದಿದ್ದಾನೆ.

"ಓಹೋಹೋ, ಇನ್ನೂ ತೊಟ್ಟಿಲಿನ ಮಗು ಇದು‌. ಆಗ್ಲೇ ನಾಲ್ಕು ವರ್ಷ ಆಗಿದೆ. ಆದ್ರೂ ಎತ್ಕೋಬೇಕು. ಇಳಿ, ಕೆಳಗಿಳಿ"
ಅಪ್ಪನ ತೋಳಿನಲ್ಲಿರುವ ಪುಟ್ಟುವನ್ನು ಅಮ್ಮ ಕೆಣಕುತ್ತಿದ್ದಾಳೆ.

"ಓಗೇ ನೀನು, ಹೊದೀತೀನಿ ನಿಂಗೆ ಅಂಗೆಲ್ಲಾ ಅಂದ್ರೆ"
ಜೊತೆಗೆ ಅಪ್ಪನಿದ್ದಾನೆನ್ನುವ ಧೈರ್ಯದಲ್ಲಿ ಪುಟ್ಟ ಅಮ್ಮನಿಗೆ ಆವಾಸ಼್ ಹಾಕುತ್ತಿದ್ದಾನೆ.

"ಓಹೋ, ಹೌದಾ? ಅಪ್ಪ ಇವತ್ತು ಸಾಗರದ ಅಡಿಕೆ ಮಂಡಿಗೆ ಹೋಗ್ತಾರಲ್ಲಾ, ಆಗೇನು ಮಾಡ್ತೀಯ ನೋಡ್ತೀನಿ ನಾನು"
ಅಮ್ಮ ಮತ್ತೆ ಕೆಣಕಿದ್ದಾಳೆ.

"ನಾನೂ ಅಪ್ಪಂಜೊತೆ ಹೋತೀನಿ. ಬರ್ತಾ ನಿಂಗೇನೂ ತರಲ್ಲ.. ಅಪ್ಪ ಇವತ್ತು ಚಾಗ್ರಕ್ಕೆ ನನ್ನೂ ಕರ್ಕಂಡ್ ಹೋಗಾ.."
ಅಪ್ಪನ ತೆಕ್ಕೆಯಿಂದ ಪುಟ್ಟ ಹೇಳುತ್ತಾನೆ. ಹೇಳಹೇಳುತ್ತಲೇ ಅವನ ಮಾತಿನಿಂದ ಅಳು ತುಳುಕಿದೆ.

"ಆಯ್ತು ಪಾಪು‌. ಅಮ್ಮನ್ನ ಬಿಟ್ಟು ನಾನು ನೀನು ಮಾತ್ರ ಪೇಟೆಗೆ ಹೋಗಣ ಆಯ್ತಾ? ಈಗ ಅಳಬಾರ್ದು. ಮುಖ ತೊಳ್ಕಂಡು ಸಾಮಿ ಚಿತ್ತ ಮಾಡು ಆಯ್ತಾ? ಜಾಣಮರಿ"

ಅಪ್ಪನ ರಮಿಕೆಗೆ ಅಳು ದೂರವಾಗಿದೆ. ಹಾಲು ಕುಡಿದ ಪುಟ್ಟ ತನ್ನ ಆಟಿಕೆಯ ಬುಟ್ಟಿಯತ್ತ ನಡೆದಿದ್ದಾನೆ. ಅದರ ತುಂಬಾ ಅಪ್ಪ ಕೊಡಿಸಿದ ಆಟಿಕೆಗಳು! ಡ್ರಂ ಬಾರಿಸುವ ಬೊಂಬೆ, ಮೋಟಾರ್ ಕಾರು, ತೆಂಡೂಲ್ಕರ್ ಚಿತ್ರವಿರುವ ಪ್ಲಾಸ್ಟಿಕ್ ಬ್ಯಾಟು-ಬಾಲು, ನೀಲಿ ಗೋಲಿ, ಕೆಂಪು ಬುಗುರಿ, ಪ್ಲಾಸ್ಟಿಕ್ ಕೋವಿ.. ಸಾಗರದಿಂದ, ತೀರ್ಥಹಳ್ಳಿಯಿಂದ, ಊರ ಜಾತ್ರೆಯಿಂದ, ಊರಿನ ಯಾವ್ಯಾವುದೋ ಮೂಲೆಯಿಂದೆಲ್ಲಾ ಹುಡುಕಿ ಅಪ್ಪ ತಂದುಕೊಟ್ಟ ಆಟಿಕೆಗಳು. ಪುಟ್ಟನ ಆಟ ಆರಂಭವಾಗಿದೆ. ಅರೆರೇ, ಇದೇನಿದು? ಮೋಟಾರ್ ಕಾರು ಓಡುತ್ತಿಲ್ಲವಲ್ಲಾ? ಹಿಂದೆ ತಿರುಗಿಸಿದರೂ ಇಲ್ಲ, ಮುಂದೆ ತಿರುಗಿಸಿದರೂ ಇಲ್ಲ. ತನಗೆ ಹುಷಾರಿಲ್ಲದಾಗ ಕೋಣಂದೂರು ಡಾಕ್ಟರ ಹತ್ತಿರ ಕರೆದೊಯ್ದ ಅಪ್ಪ ಅಲ್ಲೇ ಪಕ್ಕದ ಆಟಿಕೆಯಂಗಡಿಯಲ್ಲಿ ಕೊಡಿಸಿದ ಕಾರು. ಅದೀಗ ಹಾಳಾಗಿದೆ! ಪುಟ್ಟನಿಗೆ ಮತ್ತೆ ಅಳು ಬಂದಿದೆ.

"ಅಪ್ಪಾ, ಇದು ಹಾಳಾಗಿದೆ ನೋಡಾ. ಚರಿ ಮಾಡ್ಕೊಡಾ"
ಅವನು ಅಳುತ್ತಾ ಅಪ್ಪನ ಬಳಿಗೆ ಓಡಿದ್ದಾನೆ.

"ಅಳ್ಬೇಡ ಪಾಪು. ಸರಿ ಮಾಡ್ತೀನಿ ಅದನ್ನ"
ಸ್ಕ್ರೂ ಡ್ರೈವರ್ ಹಿಡಿದ ಅಪ್ಪ ಕಾರಿನ ಮೋಟಾರ್ ಬಿಚ್ಚಿ ಸರಿಮಾಡಿದ್ದಾನೆ. ಡುರ್ ಡುರ್.. ರಿಪೇರಿಯಾದ ಕಾರೀಗ ಮನೆಯ ತುಂಬಾ ಶಬ್ದ ಮಾಡುತ್ತಾ ಓಡುತ್ತಿದೆ.

"ನನ್ನ ನಿನ್ನ ಕಾರಲ್ಲಿ ಒಂಚೂರು ಸಂತೆಗೆ ಬಿಡೋ ಪಾಪು"
ಅಮ್ಮ ಕೇಳಿದ್ದಾಳೆ.

"ಇಲ್ಲ, ನೀನು ನಂಗೆ ಹೊಡೀತಿ. ನಾನು ಕಾರಲ್ಲಿ ಅಪ್ಪನ್ನ ಮಾತ್ರ ಕರ್ಕೊಂಡ್ ಹೋತೀನಿ"
ಪುಟ್ಟ ದಿಟ್ಟವಾಗಿ ಉತ್ತರಿಸಿದ್ದಾನೆ. ಏನೇ ಆದರೂ ಜೊತೆಗೆ ಅಪ್ಪನಿದ್ದಾನೆನ್ನು ಧೈರ್ಯ ಅವನಿಗೆ.

**************

"ನನ್ ಅಪ್ಪಂಗೆ ಎಷ್ಟು ಶಕ್ತಿ ಇದೆ ಗೊತ್ತಾ? ಅವನು ದೊಡ್ಡ ಹಿಂಡಿ ಮೂಟೇನ ಒಂದೇ ಸಲಕ್ಕೆ ಹೇಗೆ ಎತ್ ತಾನೆ ಗೊತ್ತಾ?"
ಪುಟ್ಟು ತನ್ನ ಗೆಳೆಯನಿಗೆ ಹೇಳುತ್ತಿದ್ದಾನೆ.

"ನನ್ನಪ್ಪಂಗೆ ಇನ್ನೂ ಜಾಸ್ತಿ ಶಕ್ತಿ ಇದೆ. ಅವನು ಇನ್ನೂ ದೊಡ್ಡ ಮೂಟೇನ ಎತ್ ತಾನೆ‌.. ಒಂದೇ ಕೈಯಲ್ಲಿ!"
ಪುಟ್ಟನ ಗೆಳೆಯ ಹಾಗೆಂದು ಹೇಳಿದ್ದಾನೆ.

"ಏಯ್ ಹೋಗಾ! ನನ್ನಪ್ಪ ಅದ್ಕಿಂತ ದೊಡ್ಡ ಬಂಡೇನ ಎತ್ತಿ ಬಿಸಾಕ್ತಾನೆ ಗೊತ್ತಾ? ನನ್ನಪ್ಪಂಗೇ ಜಾಸ್ತಿ ಶಕ್ತಿ!"
ಪುಟ್ಟು ವಾದವನ್ನು ಬಿಗಿಗೊಳಿಸಿದ್ದಾನೆ.

"ಸಾಕು ಸುಮ್ನಿರಾ, ನಮ್ಮಪ್ಪ ಇಡೀ ಭೂಮೀನೇ ಎತ್ತಿ ಹಿಡ್ಕೋತಾನೆ, ಒಂದೇ ಕೈಯಲ್ಲಿ"
ಗೆಳೆಯ ಹಾಗೆಂದಾಗ ಪುಟ್ಟುವಿಗೆ ಗೊಂದಲವಾಗಿದೆ. ಭೂಮಿಗಿಂತ ದೊಡ್ಡದು ಯಾವುದು? ಗೊತ್ತಿಲ್ಲ. ಅವನಿಗೆ ಗೊತ್ತಿರುವುದು ಒಂದೇ. ಈ ಭೂಮಿಯಲ್ಲಿ ಅತ್ಯಂತ ಶಕ್ತಿವಂತನೆಂದರೆ - ಅದು ತನ್ನ ಅಪ್ಪ!

"ಏಯ್, ಹೋಗಾ ನನ್ನಪ್ಪಂಗೇ ಜಾಸ್ತಿ ಶಕ್ತಿ!"

"ನೀನ್ ಹೋಗಾ, ನನ್ನಪ್ಪಂಗೇ ಜಾಸ್ತಿ ಶಕ್ತಿ!"

ವಾದ ವಿವಾದವಾಗಿ, ವಿವಾದ ಜಗಳವಾಗಿ, ಜಗಳ ಕದನವಾಗಿ ಇಬ್ಬರೂ ಕೈಕೈ ಮಿಲಾಯಿಸಿಕೊಂಡು ಬಯಲಿನ ಮಣ್ಣಿನಲ್ಲಿ ಉರುಳಾಡಿ ಹೊಡೆದಾಡಿಕೊಂಡಿದ್ದಾರೆ. ಗೆಳೆಯನನ್ನು ಪುಟ್ಟನೂ, ಪುಟ್ಟನನ್ನು ಗೆಳೆಯನೂ ತಳ್ಳಾಡಿ ಎಳೆದಾಡಿಕೊಂಡಿದ್ದಾರೆ.

ಹೌದು ಮತ್ತೆ, ಅಪ್ಪನಿಗೇ ಕಡಿಮೆ ಶಕ್ತಿ ಅಂದ್ರೆ ಸುಮ್ನೆ ಬಿಡೋಕಾಗತ್ತಾ?

ನಾನು ಓದೋ ಪಾಠದಲಿ
ಅದು ಯಾಕೆ ನಿನ್ನ ಹೆಸರಿಲ್ಲ?
ನಿನ್ನ ಹಾಗೆ ಯಾಕೆ ಯಾರಿಲ್ಲ?
ನೀನು ಇರುವ ಧೈರ್ಯದಲಿ
ಯಾರೊಂದಿಗೂ ನಾ ಸೋಲಲ್ಲ
ನಿನ್ನ ಪ್ರೀತಿ ಮುಂದೆ ಏನಿಲ್ಲ..

**************

ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದುಗಾರ ಅಪ್ಪ..
ಹಗಲು ಬೆವರಿನ ಕೂಲಿಕಾರ
ರಾತ್ರೆ ಮನೆಯಲಿ ಚೌಕಿದಾರ
ಎಲ್ಲ ಕೊಡಿಸುವ ಸಾಹುಕಾರ ಅಪ್ಪ..
ಗದರೋಮೀಸೆಗಾರ ಮನಸೇ ಕೋಮಲ
ನಿನ್ನ ಹೋಲೋ ಕರ್ಣ ಯಾರಿಲ್ಲ..

ಅಪ್ಪನೆಂದರೆ ಬಾಲ್ಯದ ಹೀರೋ. ಅವನು ಅಮ್ಮನಂತೆ ವಾಸ್ತವವಾದಿಯಲ್ಲ. ಅವನು ಭಾವುಕ. ಅವನ ಗಂಭೀರ ಮುಖ, ಎತ್ತರದ ನಿಲುವು ನೋಡಿದರೆ ಭಯವಾಗುತ್ತದೆ ನಿಜ, ಆದರೆ ಅವನ ಮನಸ್ಸು ಕೋಮಲ. ಶಾಲೆಯ ಮೊದಲ ದಿನ ತರಗತಿಯಲ್ಲಿ ಬಿಟ್ಟು ಹೊರಟವನ ಹಿಂದೆ "ಅಪ್ಪಾ, ನಾನೂ ನಿಂಜೊತೆ ಬತ್ತೀನಾ, ನಾನು ಚಾಲೆಗೆ ಹೋಗಲ್ವಾ" ಎಂದು ಮಗ ಅಳುತ್ತಾ ಓಡಿಬಂದಾಗ ಅಪ್ಪ ಕರಗಿಹೋಗಿದ್ದ. "ಸರಿ ಪಾಪು. ನಾಳೆಯಿಂದ ಶಾಲೆಗೆ ಹೋಗು ಆಯ್ತಾ" ಎಂದು ಅಳುತ್ತಿದ್ದ ಮಗನನ್ನು ರಮಿಸಿ ಮನೆಗೆ ಕರೆದೊಯ್ದಿದ್ದ‌‌.

ಯಾವ ಜಾತ್ರೆಗೇ ಹೋಗಲಿ, ಪೇಟೆಗೇ ಹೋಗಲಿ, ಜೇಬಿನಲ್ಲಿ ಚಾಕಲೇಟಿಲ್ಲದೇ ಅವನು ಮರಳಿದ್ದೇ ಇಲ್ಲ. ಬೆಳೆಗೆ ಕೊಂಚ ಒಳ್ಳೆಯ ಬೆಲೆ ಸಿಕ್ಕಿದಾಗಲಂತೂ ಮುಗಿದೇ ಹೋಯಿತು. ಬೋಟಿ, ಕಂಬಾರ್ ಕಟ್ಟು, ಡಣಟಣ ಗಾಡಿ.. ಅಪ್ಪ ಚೀಲದ ತುಂಬಾ ಅದೆಷ್ಟೋ ವಿಸ್ಮಯಗಳ ತುಂಬಿಕೊಂಡು ಮರಳುತ್ತಾನೆ. ಬೆಳೆದ ಬೆಳೆಗೆ ತೀರಾ ಅರ್ಧದಷ್ಟು ರೇಟು ಸಿಕ್ಕದೇ ಹೋದಾಗಲೂ ಅವನ ಜೇಬಿನಲ್ಲಿ ಚಾಕಲೇಟು ತಪ್ಪಿಲ್ಲ. ಇನ್ನು ಸಂಜೆ ಊರಿನ ಅಂಗಡಿಗೆ ಕರೆದೊಯ್ದಾಗಲಂತೂ "ಅಮ್ಮನಿಗೆ ಹೇಳ್ಬೇಡ ಆಯ್ತಾ?" ಎಂದು ಹಳದಿ ಪೀಲೆ ಕೊಡಿಸುತ್ತಾನೆ. ಜಗತ್ತಿನ ಸಕಲ ಗುಮ್ಮ, ದೆವ್ವ, ರಾಕ್ಷಸಗಳೆಲ್ಲವನ್ನೂ ಹೆದರಿಸುವ ಅಪ್ಪ ಅಮ್ಮನಿಗೆ ಹೆದರುತ್ತಾನಾ? ಹಾಗೊಂದು ಅನುಮಾನ ಪುಟ್ಟುವಿಗಿದೆ.

ಅಪ್ಪ ಶಕ್ತಿಶಾಲಿ. ಮಣ ಭಾರದ ಒಳಕಲ್ಲನ್ನು ಅನಾಮತ್ತಾಗಿ ಎತ್ತಿ ಸಾಗಿಸುತ್ತಾನೆ. ಅಪ್ಪ ಗಾಯಕ. ಹುಲ್ಲು ಕೊಯ್ಯುವಾಗ "ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು" ಎಂದು ಇಂಪಾಗಿ ಹಾಡುತ್ತಾನೆ. ಅಪ್ಪ ಮೆಕ್ಯಾನಿಕ್. ಕೆಟ್ಟು ನಿಂತ ತೋಟದ ಮೋಟಾರನ್ನು, ಹಾಳಾದ ರೇಡಿಯೋವನ್ನೂ ತಾನೇ ಸರಿಪಡಿಸುತ್ತಾನೆ. ಅಪ್ಪ ಭಾವುಕ. ಟಿವಿಯಲ್ಲಿ ರಾಜ್ ಕುಮಾರ್ "ಎಲ್ಲೂ ಹೋಗೊಲ್ಲ ಮಾಮಾ ಎಲ್ಲೂ ಹೋಗೊಲ್ಲ" ಎಂದು ಅತ್ತಿದ್ದನ್ನು ನೋಡಿ ತಾನೂ ಅಳುತ್ತಾನೆ‌.‌ ಅಪ್ಪ ನಟ. ಊರಿನ ನಾಟಕದಲ್ಲಿ ಗಯ್ಯಾಳಿ ಅತ್ತೆಯ ಪಾತ್ರಮಾಡುತ್ತಾನೆ. ಅಪ್ಪ ಕರುಣಾಮಯಿ. ಕೊಟ್ಟಿಗೆಯಲ್ಲಿ ನರಳುತ್ತಾ ಮಲಗಿರುವ ಎಮ್ಮೆಗೆ ಶ್ರುಶ್ರೂಷೆ ಮಾಡುತ್ತಾನೆ. ಅಪ್ಪ ಮುಗ್ಧ. ಬ್ಯಾಣದ ವಿಚಾರದಲ್ಲಿ ಯಾರಿಂದಲೋ ಮೋಸಹೋಗುತ್ತಾನೆ. ಅಪ್ಪ ಪ್ರೇಮಿ. ಅಮ್ಮನಿಗೆ ಹುಷಾರಿಲ್ಲವೆಂದು ಮನೆಯ ಕೆಲಸಗಳೆಲ್ಲವನ್ನೂ ತಾನೇ ಮಾಡುತ್ತಾನೆ. ಅಪ್ಪ ಎಂದೂ ದಣಿಯದ ಕೆಲಸಗಾರ. ಸಣ್ಣಗೆ ಏದುಸಿರು ಬಿಡುತ್ತಾ, ಒಡೆದ ಹಿಮ್ಮಡಿಗೆ ಎಣ್ಣೆ ಹಚ್ಚುತ್ತಾ, ಸುರಿವ ಬೆವರ ಒರೆಸಿಕೊಳ್ಳುತ್ತಾ ವರುಷಾನುವರುಷ ದುಡಿಯುತ್ತಾನೆ.

ತಾಯಿ ಮಾತ್ರ ತವರಲ್ಲ
ತಂದೆ ಇರದೆ ತಾಯಿಲ್ಲ
ಆಕಾಶದಂತೆ ನಿನ್ನ ಮನಸಪ್ಪಾ..
ನಾನು ಎಂದೂ ಹೇಳಿಲ್ಲ
ಯಾಕಂತ ನಂಗೂ ತಿಳಿದಿಲ್ಲ
ನೀನು ಅಂದ್ರೆ ಅಚ್ಚುಮೆಚ್ಚಪ್ಪ..

ಅಪ್ಪ.‌. ಐ ಲವ್ ಯೂ ಅಪ್ಪಾ..

*************

ಅಪ್ಪನಿಗೀಗ ವೃದ್ದಾಪ್ಯ. ಐವತ್ತು ವರ್ಷಗಳಿಂದ ಬಾಕಿಯಿದ್ದ ಖಾಯಿಲೆಗಳೆಲ್ಲ ಯಾವ ಜನ್ಮದ ಹಗೆಯೋ ಎಂಬಂತೆ ಸಾಲು ಸಾಲಾಗಿ ಬಂದು ಕಾಡುತ್ತಿವೆ. ಹಿಂದೆ ಯುವಕನಾಗಿದ್ದಾಗ ಬಂದಿದ್ದ ರೋಗಗಳಿಗೆ "ನಾನು ನನ್ನ ಹೆಂಡತಿ ಮಕ್ಕಳನ್ನು ಸಾಕಬೇಕು. ದಯವಿಟ್ಟು ಈಗ ಬರಬೇಡಿ" ಎಂದು ಬೇಡಿಕೊಂಡಿದ್ದನೋ ಏನೂ? ಆಗ ಏನೂ ಇಲ್ಲದ್ದು ಈಗ ಎಲ್ಲವೂ ಬಂದು ಒಕ್ಕರಿಸಿವೆ. ಸ್ಟ್ರೋಕ್ ಆಗಿ ಕೈ-ಕಾಲು ಸ್ತಬ್ದವಾಗಿದೆ. ಕಣ್ಣು ಮಂಜಾಗಿದೆ. ದೊಡ್ಡ ಆಪರೇಶನ್ ಗೊಳಗಾದ ತಲೆ ನಿರಂತರ ನೋವಿಗೀಡಾಗಿದೆ. ಒಂದೇ ಸಮನೆ ಕೆಮ್ಮು. ಅಪ್ಪನೀಗ ಮಂಚದ ಮೇಲೆ ಬಂಧಿ.

ಈಗ ಅಪ್ಪನ ಲೋಕವೇ ಬೇರೆ. ಹೊರ ಜಗತ್ತಿನ ಕದಲಿಕೆಗಳು ಕೇವಲ ಶಬ್ದಗಳಾಗಿ ಅವನನ್ನು ತಲುಪುತ್ತಿವೆ. ಹೊರಗೆ ಅಂಗಳದಲ್ಲಿ ಮಳೆ ಬಿದ್ದ ಸದ್ದು. ಅಲ್ಲೆಲ್ಲೋ ಸಿಡಿಲು ಬಡಿದ ಮೊರೆತ. ಅಡಿಗೆ ಮನೆಯಲ್ಲಿ ಅಮ್ಮ ಮಾಡುತ್ತಿರುವ ಪಾತ್ರೆಗಳ ಟಣಟಣ. ಅಂಗಳದಲ್ಲಿ ಮೊಮ್ಮಕ್ಕಳು ಹಚ್ಚಿರುವ ಪಟಾಕಿ. ಪಕ್ಕದ ಕೋಣೆಯಲ್ಲಿ ಮಗ-ಸೊಸೆ ಮಾಡುತ್ತಿರುವ ವಾದ. ಜಗುಲಿಯಲ್ಲಿ ಅದ್ಯಾರೋ ನೆಂಟರು ಹೊಡೆಯುತ್ತಿರುವ ಹರಟೆ. ಕಿಡಕಿಯಿಂದ ನುಸುಳಿ ಬರುತ್ತಿರುವ ಡೇರೆ ಹೂವಿನ ಪರಿಮಳ..

ಅಪ್ಪನ ಲೋಕವೀಗ ಬೇರೆಯಾಗಿದೆ. ಅವನೀಗ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಾನೆ. ಯಾವುದೋ ಹಳೆಯ ಹಾಸ್ಯವನ್ನು ನೆನೆದು ತನ್ನಷ್ಟಕ್ಕೇ ನಗುತ್ತಾನೆ. ತನ್ನೊಡನೆ ಮಾತನಾಡಲು ಯಾರಾದರೂ ಬರುವರೇನೋ ಎಂದು ಬಾಗಿಲಿನತ್ತ ನೋಡುತ್ತಾನೆ. ಸ್ನಾನ ಮಾಡಿಸು, ಊಟ ಕೊಡು, ಬಟ್ಟೆ ಬದಲಾಯಿಸು ಎಂದೆಲ್ಲಾ ಕೇಳಿ ಮನೆಯವರಿಂದ ಬೈಸಿಕೊಳ್ಳುತ್ತಾನೆ. ಮತ್ತೆ ಮತ್ತೆ ಎದ್ದು ಕೂರಲು ನೋಡಿ ಬೀಳುತ್ತಾನೆ. ಕೋಣೆಗೆ ಬಂದ ಮೊಮ್ಮಗನನ್ನು ಬಾಚಿತಬ್ಬಲೆಂದು ಕೈಚಾಚುತ್ತಾನೆ.

ಐವತ್ತು ವರ್ಷಗಳ ಕಾಲ ತಾನೇ ದುಡಿದು, ಕಟ್ಟಿ, ಬೆಳೆಸಿದ ಮನೆ, ತೋಟ, ಕುಟುಂಬಗಳಿಂದ ತಾನೇ ಹೊರತಾಗಿ, ಹೊರ ಕುಳಿತು ಒಂಟಿಯಾಗಿ ನರಳುತ್ತಿದ್ದಾನೆ.

ತುಸು ಮೆಲ್ಲ ಬಡಿಯೇ ಸಿಡಿಲೇ
ಇಲ್ಲೊಂದು ನಿದಿರೆ ಜಾರಿಯಲ್ಲಿದೆ;
ತೂಗಿ ದಣಿದು ಮಲಗಿಹನು ಅಪ್ಪ
ಅವನ ನಿದಿರೆಗೆ ಲಾಲಿಯೆಲ್ಲಿದೆ?

ವರುಷಾನುವರುಷ ದುಡಿದ ಅನವರತ
ಈಗಷ್ಟೇ ವಿಶ್ರಾಂತಿ ಶುರುವಾಗಿದೆ;
ಛಳಿಯನೆರಚದಿರು ಓ ಸಂಜೆ ಗಾಳಿ
ನಡುಗುವ ತ್ರಾಣ ಈ ಪ್ರಾಯಕೆಲ್ಲಿದೆ?

ತುತ್ತುಗಳ ತಿನ್ನಿಸಿ ಸವೆದಂಥ ಕೈಯಿದು
ಕತ್ತರಿಸಿದೆಯೇಕೆ ಓ ದೇವರೇ?
ಕಹಿಗಳ ತಾ ನುಂಗಿ ಸಿಹಿಯಷ್ಟೇ ಹಂಚಿದ
ಅವನ ಪಾತ್ರೆಯಲೇಕೆ ನೋವುಳಿದಿದೆ?

ಎಷ್ಟೊಂದು ಪ್ರೀತಿ ಈ ತಂದೆ ಕಣ್ಣಲಿ
ಕೇಳದೆಯೇ ಕೊಟ್ಟನು ಈ ಜೀವಕೆ;
ಏನೆಲ್ಲ ಯಾತನೆಯು ಮಡುವುಗಟ್ಟಿದೆ ಇಂದು
ನಮಗಿನಿತೂ ಕೊಡುತಿಲ್ಲ ಇಂದೇತಕೆ?

ಭಾನುವಾರ, ಫೆಬ್ರವರಿ 9, 2020

ಆ ಕನ್ನಡ 'ಇ' ಕನ್ನಡ..




ಆ ಕನ್ನಡ 'ಇ' ಕನ್ನಡ

"ನೀವು ಏನೇ ಹೇಳಿ, ಪುಸ್ತಕದಲ್ಲಿ ಓದುವ ಖುಷಿ ಈ ಮೊಬೈಲ್ನಲ್ಲಿ, ಕಂಪ್ಯೂಟರ್ನಲ್ಲಿ ಬರೋದಿಲ್ಲ"


ಈ ಮಾತನ್ನು ಸರ್ವೇಸಾಮಾನ್ಯವಾಗಿ ಎಲ್ಲರೂ ಆಡಿಯೇ ಆಡುತ್ತಾರೆ. ನಿಜ. ಕಥೆಯನ್ನಾಗಲೀ, ಕಾದಂಬರಿಯನ್ನಾಗಲೀ ಪುಸ್ತಕದಲ್ಲಿ ಓದುವ ಮಜವೇ ಬೇರೆ. ಒಂದು ಕೈಯಲ್ಲಿ ಪುಸ್ತಕವನ್ನು ಹಿಡಿದು, ಇನ್ನೊಂದು ಕೈಯನ್ನು ತಲೆಗಾನಿಸಿಕೊಂಡು ಸಾಕ್ಷಾತ್ ಶ್ರೀಮನ್ನಾರಾಯಣನ ಶೈಲಿಯಲ್ಲಿ ಪವಡಿಸಿ ಓದುತ್ತಿದ್ದರೆ ಅಂದಿನ ಕುವೆಂಪು, ಕಾರಾಂತ, ಬೇಂದ್ರೆ, ತೇಜಸ್ವಿಯಿವರಿಂದ ಹಿಡಿದು ಇಂದಿನ ಜಯಂತ ಕಾಯ್ಕಿಣಿ, ಭೈರಪ್ಪ, ಜೋಗಿ, ಎಚ್ಚೆಸ್ವಿಯವರ ತನಕ ಎಲ್ಲರೂ ಕಣ್ಮುಂದೆಯೇ ಪ್ರತ್ಯಕ್ಷವಾಗಿ ಕಥೆ ಹೇಳಿದಂತೆ, ಕವನ ವಾಚಿಸಿದಂತೆ ರಸವತ್ತಾಗಿರುತ್ತದೆ. ಜೊತೆಗೊಂದು ಲೋಟ ಕಾಫಿಯಿದ್ದರಂತೂ ಆ ಸ್ವಾದವೇ ಬೇರೆ! ಒಂದೊಂದು ಪುಟ ಮುಂದಕ್ಕೆ ಹೋದಾಗಲೂ ಹಾಯಿದೋಣಿಯಲ್ಲಿ ಒಂದೊಂದು ಮೈಲು ಮುಂದೆ ತೇಲಿದಂತಿರುತ್ತದೆ. ಪುಸ್ತಕದ ಭೌತಿಕ ಸ್ಪರ್ಷ, ಪುಟಗಳ ಘಮಗಳೆಲ್ಲ ಮಿಶ್ರಿತವಾಗಿ ಕೊಡುವ ಅನುಭೂತಿ ಮೊಬೈಲ್, ಕಂಪ್ಯೂಟರ್ ಗಳ ಪರದೆಯಲ್ಲಿ ಸಿಗುವುದಿಲ್ಲ. 


ಆದರೆ ಆಫೀಸು-ಟ್ರಾಫಿಕ್ಕು-ಮನೆಗಳ ನಡುವೆ ಹರಿದು ಹಂಚಿಹೋಗಿರುವ ಇಂದಿನ ಭಾಗ್ ದೌಡ್ ಭರೀ ಜೀವನದಲ್ಲಿ ಪುಸ್ತಕವನ್ನು ಕೊಂಡೊಯ್ಯುವ ತಾಳ್ಮೆ ಯಾರಿಗಿದೆ? ಹೇಳೀಕೇಳೀ ಇದು ಟ್ವೆಂಟಿಟ್ವೆಂಟಿ ಕಾಲ. ಎಲ್ಲವೂ ಚುಟುಕಾಗಿ, ಸ್ವಾದಭರಿತವಾಗಿ, ಇಷ್ಟೇಇಷ್ಟಿರಬೇಕೆಂದು ಬಯಸುವ 'ಚಿಕ್ಕ ಹಾಗೂ ಚೊಕ್ಕ'ದ ಕಾಲಘಟ್ಟವಿದು. ಆಫೀಸಿನಲ್ಲಿ ಬಾಸ್ ಎದ್ದುಹೋದಾಗ, ಟ್ರಾಫಿಕ್ಕಿನಲ್ಲಿ ಸಿಲುಕಿ ಚಲನೆಯೆಂಬ ಚಲನೆಯೇ ಕಾಣೆಯಾದಾಗ, ಬಸ್ಸಿನಲ್ಲಿ ನಿಂತು ನೇತಾಡುತ್ತಿರುವಾಗ.. ಇಂತಹಾ ಕಿರು ಘಳಿಗೆಗಳಲ್ಲಿಯೇ ಓದು, ಬರಹ ಮುಂತಾದ ಸದಭಿರುಚಿಯ ಕೈಂಕರ್ಯಗಳು ಜರುಗಬೇಕು. ಹೀಗೆ ಆಗಾಗ ಕಿರು ವಿರಾಮ ದೊರೆತಾಗೆಲ್ಲಾ ಇಂತಿಂಥಾ ದಪ್ಪದ ಪುಸ್ತಕವನ್ನು ಹೊರ ತೆರೆದು ಓದಲು ಸಾಧ್ಯವೇ? ಖಂಡಿತಾ ಇಲ್ಲ! ಅದಕ್ಕಿರುವ ಏಕೈಕ ಸಾಧನ ಮೊಬೈಲ್.


ಇಂದಿನ ಬಿಡುವುರಹಿತ, ಒತ್ತಡಭರಿತ ಜೀವನದಲ್ಲಿ ಓದು-ಬರಹಗಳು ಮರೆಯಾಗಬಾರದೆಂದೇ ಮನುಷ್ಯ ಅವನ್ನು ಸದಾ ತನ್ನೊಂದಿಗಿರುವ ಮೊಬೈಲ್, ಕಂಪ್ಯೂಟರ್ ಗಳೊಳಗೆ ಸೇರಿಸಿಕೊಂಡಿದ್ದಾನೆ. ಓದು-ಬರಹಗಳು ಬ್ಲಾಗ್, ಸೋಶಿಯಲ್ ಮೀಡಿಯಾ, ಪಿಡಿಎಫ್ ಮುಂತಾದ ಆಧುನಿಕ ಅವತಾರಗಳನ್ನು ತಾಳಿ ಮತ್ತೆ ಮನುಷ್ಯನ ಅಂತರಂಗ ಸೇರಿಕೊಂಡಿವೆ. ಆದರೆ ಇಷ್ಟೇ ಇಷ್ಟಿರುವ ಮೊಬೈಲ್ ಗಳಿಂದಾದ ದುಷ್ಪರಿಣಾಮವೆಂದರೆ ಅವು ನಮ್ಮ ತಾಳ್ಮೆಯನ್ನೂ ತಮ್ಮ ಗಾತ್ರಕ್ಕೇ ಕುಗ್ಗಿಸಿರುವುದು. ಎಲ್ಲವೂ ಚಿಕ್ಕ ಹಾಗೂ ಚೊಕ್ಕದಾಗಿರಬೇಕು, ಇಡೀ ಭಗವದ್ಗೀತೆಯೇ ನಾಲ್ಕು ಸಾಲಿನಲ್ಲಿ ಮುಗಿದುಹೋಗಬೇಕು, ಮಹಾಕಾವ್ಯಗಳೂ ಟೀ ವಿರಾಮದಲ್ಲಿ ಸಿಗುವ ಐದು ನಿಮಿಷದ ಬಿಡುವಿನಲ್ಲಿ ಓದುವಂತಿರಬೇಕು ಎಂಬ ಗಡಿಬಿಡಿಯೇ ಎಲ್ಲರಲ್ಲೂ. ಮುನ್ನೂರು ಪುಟದ ಪುಸ್ತಕವೊಂದನ್ನು ಹಿಡಿದಾಗ ಮನಸ್ಸಿನಲ್ಲಿದ್ದ ತಾಳ್ಮೆಯನ್ನು ಮೂರೂವರೆ ಇಂಚಿನ ಮೊಬೈಲ್ ಸದ್ದಲ್ಲದಂತೆ ನುಂಗುತ್ತಿರುವುದು ಅದನ್ನು ಕಂಡುಹಿಡಿದವನಾಣೆಗೂ ಸತ್ಯ!


                       ***************


ಜಗತ್ತಿನ ಹಲವಾರು ಭಾಷೆಗಳಂತೆ ಕನ್ನಡವೂ 'ಇ' ಮಾಧ್ಯಮಕ್ಕೆ ಹೊಂದಿಕೊಳ್ಳುತ್ತಿದೆ. ಇದನ್ನು, ಒಂದಾನೊಂದು ಕಾಲದಲ್ಲಿ ತಾಳೆಗರಿಯಲ್ಲಿದ್ದ ಲಿಪಿಯು ಪುಸ್ತಕ ಮಾಧ್ಯಮಕ್ಕೆ ತೇರ್ಗಡೆಯಾದ ಬೆಳವಣಿಗೆಗೆ ಹೋಲಿಸುವಂತಿಲ್ಲವಾದರೂ ಇಂದಿನ ಕಾಲಮಾನಕ್ಕಿದು ಸೂಕ್ತ ಬೆಳವಣಿಗೆಯೇ. ಯಾವ ಭಾಷೆ ಮನುಷ್ಯನ ಭಾವನೆಗಳ ಹರಿವಿನ ಮಾಧ್ಯಮವಾಗಿರುತ್ತದೋ ಆ ಭಾಷೆ ನಿರಂತರವಾಗಿರುತ್ತದೆ. ನಾವು ಊಟ ಆಯ್ತಾ, ತಿಂಡಿ ಆಯ್ತಾಗಳಿಂದ ಹಿಡಿದು ತತ್ ಕ್ಷಣಕ್ಕೆ ಹೊಳೆವ ಯೋಚೆನೆಗಳ ತನಕ ಎಲ್ಲವನ್ನೂ ಕನ್ನಡದಲ್ಲೇ ಟೈಪಿಸಿ ಸೋಶಿಯಲ್ ಮೀಡಿಯಾದಲ್ಲೋ, ಮತ್ತೆಲ್ಲೋ ಸಂಭಾಷಿಸುತ್ತೇವೆ, ಅಂಟಿಸುತ್ತೇವೆ. ಅಷ್ಟರ ಮಟ್ಟಿಗೆ ಅದು ನಮ್ಮೊಳಗೆ ನಿರಂತರವಾಗಿದೆ. ತೀರಾ ಪುಸ್ತಕವನ್ನೇ ತೆರೆಯದವರೂ ಸಹಾ ಮೊಬೈಲ್ನಲ್ಲಿ ಕಣ್ಣಿಗೆಟಕುವ ಬರಹಗಳೊಳಗೆ ಸಣ್ಣಗೊಂದು ಸುತ್ತು ಅಡ್ಡಾಡುತ್ತಾರೆ. ಇನ್ನು ಪುಸ್ತಕದ 'ಸ್ವಾದ'ವನ್ನರಿತವರು ಎರೆಡೂ ಮಾಧ್ಯಮಗಳಲ್ಲಿ ಓದಿಗೆ ತೊಡಗುತ್ತಾರೆ. ಹೀಗೆ 'ಇ' ಅವತರಿಣಿಕೆಯು ಕನ್ನಡದ ಹರಿವಿಗೆ ಹೊಸದಾದ ಉಪನದಿಯಂತಾಗಿದೆ. 


ಇತ್ತೀಚೆಗೆ ಕನ್ನಡದ ಬಹಳ ಹಳೆಯ ಮಾಸಿಕ ಪತ್ರಿಕೆಯೊಂದು 1960-70ರ ದಶಕದ ಸಂಚಿಕೆಗಳೂ ಸೇರಿದಂತೆ ತನ್ನ ಅನೇಕ ಹಳೆಯ ಸಂಚಿಕೆಗಳ ಸ್ಕ್ಯಾನ್ ಪ್ರತಿಗಳನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿತು. ತೆರೆದೋದಿದವರಿಗೆ ಅವು ಆ ಕಾಲಘಟ್ಟವನ್ನು ಮರುಸೃಷ್ಟಿಸುವ ಪಳೆಯುಳಿಕೆಗಳಂತೆ ಭಾಸವಾಗುತ್ತವೆ. ಅಲ್ಲದೇ ಮರುಮುದ್ರಣ ಕಾಣದ ಅದೆಷ್ಟೋ ಹಳೆಯ ಕೃತಿಗಳ ಪಿಡಿಎಫ್ ಪ್ರತಿಗಳು ದೇಹ ನಶಿಸಿದ ಮೇಲೂ ಉಳಿದ ಆತ್ಮಗಳಂತೆ ಅಂತರ್ಜಾಲದಲ್ಲಿ ಕುಳಿತಿವೆ. ಇವೆಲ್ಲ ಸಾಧ್ಯವಾಗಿರುವುದು 'ಇ' ಮಾಧ್ಯಮದಿಂದ. ಹೀಗೆ ಮನುಷ್ಯ ತನ್ನ ಹೃದಯಕ್ಕೆ ತೀರಾ ಹತ್ತಿರದಲ್ಲಿಟ್ಟುಕೊಳ್ಳುವ ಮೊಬೈಲ್ ನೊಳಗಿನಿಂದ ಕನ್ನಡವು ಚಿಗುರೊಡೆದಿರುವುದು ಸ್ವಾಗತಾರ್ಹವೇ. ಆದರೆ ಪುಸ್ತಕಗಳು ದೂರಮಾಡಬಾರದಷ್ಟು ಅನಿವಾರ್ಯವಾದ ವ್ಯಕ್ತಿತ್ವದ ಅಂಗಗಳು. ಎರೆಡರಲ್ಲೂ ಇರುವುದು ಅಕ್ಷರಗಳೇ ಆದರೂ ಎರೆಡೂ ಉಂಟುಮಾಡುವ ಅನುಭೂತಿ ವಿಭಿನ್ನವಾದುದು. ತಮ್ಮತಮ್ಮ ಮಿತಿಯಲ್ಲೇ ಮನುಷ್ಯನ ವ್ಯಕ್ತಿತ್ವಕ್ಕೆ ನಿರಂತರ ಕಾವು ಕೊಡುತ್ತಾ ಈ ಎರೆಡೂ ಕವಲುಗಳೂ ಕನ್ನಡದ ಹೆಮ್ಮರವನ್ನು ಮತ್ತಷ್ಟು ಹಬ್ಬಿಸುತ್ತಿವೆ.


(09-02-2020 ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...