ಸೋಮವಾರ, ಜುಲೈ 2, 2018

ಬೆಂಗಳೂರಿಗೆ ಬಂದಿದ್ದು-1

ಇದನ್ನೆಲ್ಲ ಯಾಕೆ ಬರೆಯುತ್ತಿದ್ದೇನಂತ ನನಗೂ ಗೊತ್ತಿಲ್ಲ. ಏನನ್ನೂ ಬರೆಯದೇ ಮೂರು ತಿಂಗಳಾಗಿದೆ. ಏನೇ ಬರೆದರೂ ಅವರಿಗೆ ಏನನಿಸುತ್ತದೋ, ಇವರು ಏನಂತ ಆಡಿಕೊಳ್ತಾರೋ, ಇದರಲದಲಿ ಕ್ವಾಲಿಟಿ ಇದೆಯೋ ಇಲ್ವೋ ಅನ್ನುವ ಇನ್ನೂ ನುಂತಾದ ಅನುಮಾನಗಳು ಅದೆಲ್ಲಿಂದಲೋ ಬಂದು ಮನಸ್ಸನ್ನು ಹೊಕ್ಕಿಕೊಂಡು ಏನೂ ಬರೆಯಲಾಗದೆ ಓದ್ದಾಡಿಹೋಗಿದ್ದೇನೆ‌. ಬಹುಷಃ ಆ ತಳಮಳವನ್ನು ಓಡಿಸಲಿಕ್ಕೆ ಹಾಗೂ ಯಾರೂ ಓದದಿದ್ದರೂ ಕೇವಲ ನನಗೋಸ್ಕರ ಬರೆಯುವ ಆತ್ಮ ಸ್ಥೈರ್ಯವೊಂದನ್ನು ಬೆಳೆಸಿಕೊಳ್ಳಲಿಕ್ಕೆಂದೇ ಇದನ್ನು ಬರೆಯುತ್ತಿದ್ದೇನೆ ಅಥವಾ ಹಾಗಂತ ನಂಬಿಕೊಂಡಿದ್ದೇನೆ. ಅದಕ್ಕೆ ಸರಿಯಾಗಿ, ಇಂದಿಗೆ ನಾನು ಬೆಂಗಳೂರಿಗೆ ಬಂದು ಆರು ವರ್ಷ ತುಂಬಿದೆ. ಅದನ್ನೇ ಹೆಳೆಯಾಗಿಟ್ಟುಕೊಂಡು ಏನೋ ಒಂದು ಬರೆಯುತ್ತಿದ್ದೇನೆ‌.

ನೀವ್ಯಾರೂ ಓದುವ ಸಾಹಸ ಮಾಡುವುದಿಲ್ಲವೆನ್ನುವ ಧೈರ್ಯದ ಮೇಲೆ...

                        *****************

ಆರು ವರ್ಷಗಳು!

ಅದು ಹೇಗೆ ಕಳೆದವೋ ಗೊತ್ತಿಲ್ಲ. ನಿನ್ನೆ-ಮೊನ್ನೆಯಷ್ಟೇ ಊರು ಬಿಟ್ಟಿದ್ದೆ.. ಎಸ್ಸಾರೆಸ್ ನ ಸೀಟಿನಲ್ಲಿ ಬಾರದ ನಿದ್ರೆಗೆ ತೂಕಡಿಸಿದ್ದೆ. ಮೆಜಸ್ಟಿಕ್ಕೆನ್ನುವ ಎಂದೂಕರಗದ ಜನದಟ್ಟಣೆಯಲ್ಲಿ ಕಂಗಾಲಾಗಿ ನಿಂತಿದ್ದೆ.. ಆಗಲೇ ಆರು ವರ್ಷವಾಗಿಹೋಯ್ತೇ? ಬದುಕಿನ ಬಟ್ಟಲಿನಿಂದ ಆರು ವರ್ಷಗಳೆಂಬ ಅತ್ಯಮೂಲ್ಯ ಆರು ಲೋಟದಷ್ಟು ಪನ್ನೀರು ಸುರಿದು ಹೋದದ್ದು ಗೊತ್ತೇ ಆಗಲಿಲ್ಲವಲ್ಲ?

ಅದು 2012ರ ಜೂನ್ ತಿಂಗಳ ಮೂರನೇ ವಾರ. ಆಗಿನ್ನೂ ಡಿಗ್ರಿ ಪರೀಕ್ಷೆ ಮುಗಿಸಿ ಒಂದು ತಿಂಗಳು ಕಳೆದಿತ್ತಷ್ಟೇ. ಗೆಳೆಯರೆಲ್ಲ ಎಲ್ಲೆಲ್ಲೋ ನಡೆಯುವ ಉದ್ಯೋಗ ಮೇಳಗಳಿಗೆ ನುಗ್ಗುತ್ತಾ, ಬೆಂಗಳೂರಿನಲ್ಲಿ ತಮಗಿರುವ ಪ್ರಭಾವಗಳ ಪಟ್ಟಿ ಮಾಡುತ್ತಾ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ನಡೆಯುವ ಇಂಟರ್ವ್ಯೂಗಳ ಕುರಿತಾಗಿ ರೋಚಕ ಕಥೆ ಹೇಳುತ್ತಾ ಭಯಹುಟ್ಟಿಸುತ್ತಿದ್ದರೆ ನಾನು ಮಾತ್ರ ಯಾವ ಇಂಟರ್ವ್ಯೂಗೂ ಹೋಗದೇ ಅಮ್ಮ ಮಾಡಿಹಾಕಿದ ಚಟ್ಣಿಯಲ್ಲಿ ಎಷ್ಟು ಉಪ್ಪು ಕಡಿಮೆಯಾಗಿದೆಯೆಂಬುದನ್ನು ಕಂಡುಹಿಡಿಯುತ್ತಾ ಮನೆಯಲ್ಲೇ ಕುಳಿತುಕೊಂಡಿದ್ದೆ. ಮನಸ್ಸಿನಲ್ಲಿ ಆತಂಕದ ಹೊರತು ಮತ್ತೇನೂ ಇರಲಿಲ್ಲ. ಎಂಕಾಂ ಮಾಡೋಣವೆನ್ನುವ ಅರೆಮನದ ಯೋಚನೆಗೆ ಅಪ್ಪನ ಕೂಗಾಟ ಆಗಷ್ಟೇ ಬ್ರೇಕ್ ಹಾಕಿತ್ತು.

ಆಗ ಬಂದಿತ್ತು ಅಕ್ಕನ ಕಾಲ್. "ಒರಾಕಲ್ ಅಂತ ದೊಡ್ಡ ಕಂಪನಿ ಕಣೋ‌. ಅದೆಷ್ಟೋ ದೇಶದಲ್ಲಿ ಇದರ ಬ್ರಾಂಚ್ ಗಳಿದಾವಂತೆ. ಸ್ಟಾರ್ಟಿಂಗೇ ಹದಿನೈದು ಸಾವಿರ ಸಂಬಳ ಕೊಡ್ತಾರೆ. ನನ್ನ ಫ್ರೆಂಡ್ ರೇಖ ಅಂತ... ಅಲ್ಲೇ ಕೆಲಸ ಮಾಡ್ಕೊಂಡಿದಾಳೆ. ನಿಂಗೆ ಖಂಡಿತ ಕೆಲಸ ಆಗತ್ತೆ ಅಂದಿದಾಳೆ. ನೀನು ನಾಡಿದ್ದೇ ಹೊರಟು ಬಾ!"

ನಂಬಿದರೆ ನಂಬಿ, ಬಿಟ್ಟರೆ ಬಿಡಿ; ಅದೇ ದಿನ ಸಂಜೆ ಗುಡ್ಡದ ತುದಿಯಲ್ಲಿ ಒಬ್ಬನೇ ನಿಂತುಕೊಂಡು ತುಸು ಜೋರಾಗೇ ಹಾಡಿಕೊಂಡಿದ್ದೆ:

"ಸಿಕ್ಕಿದೇ ಸಿಕ್ಕಿದೇ.. ನಂಗೂ ಲೈಫು ಸಿಕ್ಕಿದೆ...
ಲಕ್ಕಿದೇ ಲಕ್ಕಿದೇ.. ನಂಗೂ ಒಂದು ಲುಕ್ಕಿದೆ!"

ಸ್ಟೆಪ್ಪು ಹಾಕೊದೊಂದೇ ಬಾಕಿ. ಅದಾಗಿ ಎರೆಡನೇ ದಿನ ರಾತ್ರಿಗೆಲ್ಲ ಮೂರು ಜೊತೆ ಬಟ್ಟೆ ಹಾಗೂ ಏಳ್ನೂರೈವತ್ತು ರೂಪಾಯಿಗಳ 'ಬೃಹತ್' ಆಸ್ತಿಯನ್ನು ಬ್ಯಾಗಿಗೆ ತುಂಬಿಕೊಂಡು ಬೆಂಗಳೂರಿನ ಬಸ್ಸು ಹತ್ತಿದ್ದೆ.

ಈಗ ಯೋಚಿಸುತ್ತೇನೆ. ಏನಾಗುತ್ತಿತ್ತು ಊರಿನಲ್ಲೇ ಇದ್ದಿದ್ದರೆ? ಅದೇ ತೋಟ, ಆಳು ಬಾರದ ದಿನ "ಉದ್ರು ಹೆಕ್ಕೊಡು ಬಾ ಮಗಾ" ಎಂದು ಕರೆಯುತ್ತಿದ್ದ ಅಪ್ಪ, "ತರಕಾರಿ ತಂದ್ಕೊಡೋ" ಎನ್ನುವ ಅಮ್ಮ, ಇವರಿಬ್ಬರ ಮಾತಿಗೂ ಕಿಂಚಿತ್ ಬೆಲೆ ಕೊಡದೆ ಅಬ್ಬೇಪಾರಿಯಂತೆ  ಓಡಾಡಿಕೊಂಡಿರುವ ಅಹಂಕಾರದ ನಾನು, "ಇವನ ಹಣೆಬರ ಇಷ್ಟೇ" ಎಂದು ಆಡಿಕೊಳ್ಳುವ ಜನ, ಬೆಂಗಳೂರಿನ ಬಸ್ಸಿನಿಂದಿಳಿದು ನನ್ನನ್ನು ನೋಡಿದರೂ ನೋಡದಂತೆ ನಡೆದು ಹೋಗುವ ಹಳೇ ಹುಡುಗಿ, ಬಹಳ ಪ್ರಯಾಸದ ನಂತರ ನಮ್ಮೂರಲ್ಲೇ ಸಿಗುತ್ತಿದ್ದ ಚಿಕ್ಕದೊಂದು ಕೆಲಸ, ಬಂದರೂ ಬಾರದಂತಿರುತ್ತಿದ್ದ ಸಂಬಳ...

ಬದುಕೆಂಬ ಬದುಕು ಹೇಗೆ ಯಾವ ಸೂಚನೆಯೂ ಇಲ್ಲದೆ ಮಹತ್ವದ 'ಟ್ರ್ಯಾಕ್' ಒಂದಕ್ಕೆ ದಾಟಿಕೊಂಡುಬಿಟ್ಟಿತೆಂಬುದನ್ನು ನೆನೆದರೆ ಈಗ ಆಶ್ಚರ್ಯವೆನಿಸುತ್ತದೆ. ಹಾಗಂತ ಇಂದೇನೋ ಭಾರೀ ದೊಡ್ಡ ಸಾಧನೆ ಮಾಡಿದ ಜ್ಞಾನ-ವೇದಾಂತ ಚಿಂತಾಮಣಿಯೋ, ಮತ್ಯಾವ ಕೋತಪ್ನಾಯ್ಕನೋ ಆಗಿದ್ದೇನೆಂದು ಹೇಳುತ್ತಿಲ್ಲ. ಆದರೆ ಕನಿಷ್ಠ ಅಪ್ಪ-ಅಮ್ಮನೊಂದಿಗೆ ಪ್ರೀತಿಯಿಂದ ಎರೆಡು ಮಾತನಾಡುವ, ಅವರ ಬಗ್ಗೆ, ಮನೆಯ ಬಗ್ಗೆ ಜವಾಬ್ದಾರಿಯಿಂದ ಎರೆಡು ನಿಮಿಷ ಯೋಚಿಸುವ, ನನ್ನೂರಿನ, ನನ್ನ ಜನರ ಮಹತ್ವವನ್ನು ಸ್ವಲ್ಪವಾದರೂ ಅರ್ಥ ಮಾಡಿಕೊಂಡಿರುವ, ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಬದುಕನ್ನು ನಾನೇ ನಡೆಸಬಲ್ಲ ಮನುಷ್ಯನಾಗಿದ್ದೇನೆಂದರೆ ಅದಕ್ಕೆ ಅಂದು ಬೆಂಗಳೂರಿಗೆ ಹೊರಟು ಬಂದ ಆ ಘಳಿಗೆಯೇ ಕಾರಣ.

ಈಗ ಕಥೆಗೆ ಮರಳಿ ಬರೋಣ. ಬಸ್ಸು ಶಹರದತ್ತ ಓಡುತ್ತಿತ್ತು‌. ಊರ ಹೊರಗಿನ ಗುಡ್ಡಗಳ ಹಿಂದೆ ಸೂರ್ಯ ಮುಳುಗಿದ್ದನ್ನು ಬಸ್ಸಿನ ಕಿಟಕಿಯಲ್ಲಿ ನೋಡುವಾಗ ಕಣ್ತುಂಬಿ ಬಂದಿತ್ತಾ? ಸರಿಯಾಗಿ ನೆನಪಿಲ್ಲ. ಆದರೆ ಇನ್ನೂ ಸೂರ್ಯ ಹುಟ್ಟುವ ಮೊದಲೇ ನಮ್ಮೂರ ನಡು ಮಧ್ಯಾಹ್ನದ ತುಂಬು ಸಂತೆಯಷ್ಟು ದಟ್ಟವಾಗಿ, ಬೀದಿದೀಪಗಳ ಬೆಳಕಿನಲ್ಲಿ ಹಗಲಲ್ಲದ ಹಗಲಾಗಿ ಜಗಮಗಿಸುತ್ತಾ ನಿಂತಿದ್ದ ಮೆಜಸ್ಟಿಕ್ನಲ್ಲಿ ನನ್ನನ್ನಿಳಿಸಿದ ಬಸ್ಸು ಹೊರಟೇ ಹೋದಾಗ ಅದೇ ಕಣ್ಣಲ್ಲಿ ಭಯ ಉಕ್ಕಿ ಬಂದಿದ್ದು ಮಾತ್ರ ಸುಳ್ಳಲ್ಲ‌. ನನ್ನನ್ನು 'ರಿಸೀವ್' ಮಾಡಲು ಭಾವನ ಜೊತೆ ಕಾರುಹತ್ತಿ ಬಂದಿದ್ದ ಅಕ್ಕನಂತೂ ನನಗಿಂತ ಅರ್ಧ ಕೆಜಿ ಜಾಸ್ತಿಯೇ ಆತಂಕಗೊಂಡಿದ್ದಳು. "ಸಿಟಿ ನೋಡದವನು. ಎಲ್ಲಿ ಕಳೆದು ಗಿಳೆದು ಹೋದಾನೋ. ಯಾವ ಮಕ್ಕಳ ಕಳ್ಳ ಅವನನ್ನು ಎತ್ತಕೊಂಡು ಹೋಗುತ್ತಾನೋ?" ಎಂಬ ಭಯದಲ್ಲೇ ರಾತ್ರಿಯಿಡೀ ನಿದ್ರೆಯಿಲ್ಲದೇ ಕಳೆದಿದ್ದಳು.
(ನಾವು ಎಷ್ಟೇ ಬೆಳೆದು ಕಳ್ನನ್ ಮಕ್ಳಾದ್ರೂ ಈ ಅಮ್ಮ, ಅಕ್ಕಂದಿರ ಕಣ್ಣಲ್ಲಿ ಮಾತ್ರ ಚಿಕ್ಕ ಮಕ್ಕಳೇ!) ನಾನು ಬೆಂಗಳೂರು ತಲುಪುವ ಅರ್ಧ ಗಂಟೆ ಮೊದಲೇ ಭಾವನನ್ನು ಎಬ್ಬಿಸಿಕೊಂಡು ಮೆಜಸ್ಟಿಕ್ಕಿಗೆ ಬಂದು ಕಾಯುತ್ತಾ  ಕುಳಿತುಬಿಟ್ಟಿದ್ದಳು, ಅಕ್ಕನೆಂಬ ಆ ಎರೆಡನೇ ಅಮ್ಮ.

                       ***********

"ಎಲ್ಲಿದ್ದೀಯ ಪುಟ್ಟ?"

ಹಾಗಂತ ಕೇಳಿದ ಭಾವನಿಗೆ ಹೇಳುವದಕ್ಕೆ ನನ್ನ ಕಣ್ಣೆದುರು ನೂರು ಉತ್ತರಗಳಿದ್ದವು. "ಇದೊಂದು ದೊಡ್ಡ ರೋಡು.. ಯಾಕೋ ಗೊತ್ತಿಲ್ಲ, ಇಲ್ಲಿ ಕಾರು, ಬಸ್ಸುಗಳೆಲ್ಲ ನಿಂತು ನಿಂತು ಹೋಗ್ತಿದಾವೆ.. ಎದುರಿಗೊಂದು ದೊಡ್ಡ ಬಿಲ್ಡಿಂಗಿದೆ... ಪಕ್ಕದಲ್ಲೇ ಒಂದು ಟೀ ಅಂಗಡಿಯಿದೆ... ಅಲ್ಲಿ ಸುಮಾರು ಜನ ಕಾಪಿ ಕುಡಿಯುತ್ತಿದ್ದಾರೆ... ಮುಂದುಗಡೆಯೇ ಒಂದು ಕರ್ನಾಟಕ ಬ್ಯಾಂಕ್ ಎಟಿಎಂ ಇದೆ..."

ನಾನು ಕೊಟ್ಟ ಯಾವ ಸುಳಿವೂ ಭಾವನಿಗೆ ನಾನಿರುವ ನಿರ್ದಿಷ್ಟ ಜಾಗ ಯಾವುದೆಂದು ಅರ್ಥಮಾಡಿಸಲಿಕ್ಕೆ ಸಾಕಾಗುವಂತಿರಲಿಲ್ಲ. ಅಳೆದರೆ ಅರ್ಧ ಕಿಲೋಮೀಟರ್ ಇರಬಹುದಾದ ನನ್ನ ತೀರ್ಥಹಳ್ಳಿ ಪೇಟೆಯಲ್ಲಾದರೆ ಈ ಟೀ ಅಂಗಡಿ, ಎಟಿಎಂಗಳೆಲ್ಲ ದೊಡ್ಡ ದೊಡ್ಡ ಲ್ಯಾಂಡ್ ಮಾರ್ಕ್ ಗಳೇ. ಆದರೆ ಈ ಬೆಂಗಳೂರಿನಲ್ಲಿ? ಅಂಥವು ಮಾರಿಗೆ ಮೂರು ಸಿಗುತ್ತವೆ. ಅದಕ್ಕೇ ಇಲ್ಲಿ ಬಸ್ ಸ್ಟ್ಯಾಂಡ್, ವಾಟರ್ ಟ್ಯಾಂಕ್ ಮುಂತಾದ ದೊಡ್ಡದೊಡ್ಡವನ್ನೇ ಗುರುತಾಗಿ ಹೇಳಬೇಕು!

ಅಂತೂ ಇಂತೂ ಅದು ಹೇಗೋ ನಾನಿದ್ದ ಜಾಗವನ್ನು ಪತ್ತೆಹಚ್ಚಿದ ಭಾವ ಮೃದುವಾಗಿ ಹಾಗೆಂದು ಹೇಳಿದ್ದರು. ಹಾಗೆ ಬೆಂಗಳೂರು ಮೊದಲ ಹೆಜ್ಜೆಯಿಂದಲೇ ದಡ್ಡ ಶಿಖಾಮಣಿಯಾದ ನನಗೆ ಪಾಠ ಮಾಡಲು ಶುರುವಿಟ್ಟುಕೊಂಡಿತ್ತು.

                     ************

"ತಿಂಗಳಿಗೆ ಹದಿನೈದು ಸಾವಿರ!"

ಅಷ್ಟು ಹಣವನ್ನು ಯಾವ್ಯಾವ ಸಂದಿಯಲ್ಲಿ ಮುಚ್ಚಿಡಬೇಕೆಂದು ಯೋಚಿಸಿ ಯೋಚಿಸಿಯೇ ನಾನು ಸುಸ್ತಾಗಿದ್ದೆ. "ನಂಗೆ ತಿಂಗ್ಳಿಗೆ ಹತ್ತು ಸಾವಿರ ಬಂದ್ರೆ ಸಾಕು. ಅರಾಮಾಗಿರ್ತೀನಿ" ಎಂದು ಶುದ್ಧ ಬೋಳೇ ಶಂಕರನಂತೆ ಹೇಳಿಕೊಂಡು ತಿರುಗುತ್ತಿದ್ದವನು ನಾನು. ಈಗ ಅದರ ಮೇಲೆ ಮತೈದು ಸಾವಿರ ಸಿಗಲಿದೆಯೆಂಬ ಕಲ್ಪನೆಗೇ ನಾನು ಶ್ರೀಮಂತರ ಸಾಲಿನಲ್ಲಿ ಕೂತಾಗಿತ್ತು‌. ಅದೂ ಅಲ್ಲದೆ ನನಗಿದ್ದ ಇನ್ನೊಂದು ಪೆದ್ದ ನಂಬಿಕೆಯೆಂದರೆ ಒರಾಕಲ್ ನಲ್ಲಿ ನನಗೆ ಕೆಲಸ ಸಿಕ್ಕೇ ಸಿಗುತ್ತದೆ ಎಂಬುದು. ಅಕ್ಕ ಈಗಾಗಲೇ ತನ್ನ ಗೆಳತಿಗೆ ಹೇಳಿಟ್ಟಿದ್ದಾಳೆ‌. ಅವಳು ಅದೆಂತದೋ ಹೆಸರಿನ ಆ ದೊಡ್ಡ ಕಂಪನಿಯ ಸೀಟೊಂದರ ಮೇಲೆ ಕರ್ಚೀಫು ಹಾಕಿ ಅದನ್ನು ನನಗಾಗೇ ಕಾದಿರಿಸಿದ್ದಾಳೆ. ನಾನು ನೇರ ಹೋಗಿ ಅಲ್ಲಿ ಕೂರುವುದೊಂದೇ ಬಾಕಿ!

ನಮ್ಮೂರಿನ ಗುರುಶಕ್ತಿ ಬಸ್ಸಿನಲ್ಲಿ ಸೀಟು ಹಿಡಿದಷ್ಟೇ ಸುಲಭಕ್ಕೆ ಒರಾಕಲ್ ಎನ್ನುವ ಭಾರೀ ಎಂಎನ್ಸೀಯೊಂದರ ನೌಕರಿಯನ್ನೂ ಹಿಡಿದುಬಿಡಬಹುದೆಂದು ನಾನಂದುಕೊಂಡಿದ್ದರಲ್ಲಿ ನನ್ನ ತಪ್ಪೇನೂ ಇರಲಿಲ್ಲ. ಏಕೆಂದರೆ ಸಾಕ್ಷಾತ್ ಅಕ್ಕನೇ
ಅಂಥಾದ್ದೊಂದು ನಂಬಿಕೆ ಬರುವಂಥಾ ಧಾಟಿಯಲ್ಲಿ ಮಾತಾಡಿದ್ದಳು. ಹೀಗೆ ನೌಕರಿ ಸಿಗುವ ಮೊದಲೇ ಸಂಬಳ ಇಡಲಿಕ್ಕೆ ತಿಜೋರಿ ಖರೀದಿಸುವಂತಹಾ ಮೂರ್ಖ ಓವರ್ ಕಾ‌ನ್ಫಿಡೆನ್ಸೊಂದು ನಾನು ಬೆಂಗಳೂರಿಗೆ ಹೊರಡುವಾಗಲೇ ನನ್ನೊಳಗೆ ಸೇರಿಕೊಂಡುಬಿಟ್ಟಿತ್ತು. ಬಹುಷಃ ಅಂಥಾದ್ದೊಂದು ಅತಿಯಾದ ಆತ್ಮವಿಶ್ವಾಸವಿಲ್ಲದೇ ಹೋಗಿದ್ದರೆ  ನಾನು ಬೆಂಗಳೂರಿಗೆ ಬರುತ್ತಲೇ ಇರಲಿಲ್ಲವೋ ಏನೋ? ಅದು ಏನೇ ಆದರೂ ಈಗಾಗಲೇ ಕರ್ಚೀಫು ಹಾಸಿ ಕಾಯ್ದಿರಿಸಿರುವ ಸಿಂಹಾಸನಕ್ಕೆ ಪಟ್ಟಾಭಿಷೇಕದ ಶಾಸ್ತ್ರ ಮಾಡಿ ಮುಗಿಸಲೆಂದು ನಾನು ಅಕ್ಕ ಹೊರಟೆವು. ಆ ಪಟ್ಟಾಭಿಷೇಕದ ಹೆಸರೇ

"ಇಂಟರ್ವ್ಯೂ!"

ಜೀವನದ ಮೊಟ್ಟಮೊದಲ ಇಂಟರ್ವ್ಯೂ ಅನ್ನು ನಾನು ಎದುರಿಸಿದ್ದು ಬಲು ತಮಾಷೆಯ ಘಟನೆ.

-ವಿನಾಯಕ ಅರಳಸುರಳಿ.

ಶನಿವಾರ, ಮೇ 5, 2018

ಪ್ರೀತಿಸಿದವಳು ಸಿಗದಿರಲಿ!

ಕೊನೆಗೂ ಅವಳು ತಿರುಗಲಿಲ್ಲ.

ನೀನು ನೋಡುತ್ತಿದ್ದೆ.. ಕವಲು ದಾರಿಯಲ್ಲವಳು ತಿರುಗಿ ಮರೆಯಾಗುವವರೆಗೂ ನೋಡುತ್ತಿದ್ದೆ. ಜಗತ್ತಿನ ಮತ್ಯಾವ ಹೆಣ್ಣಿಗೂ ಇಲ್ಲದ ಆ ಮುದ್ದು ಜಡೆಯನ್ನು ತೂಗಾಡಿಸುತ್ತಾ ನಡೆದುಹೋದ ಮೊಲದಂತಹ ಆ ಹುಡುಗಿ ನಡೆಯುತ್ತಲೇ ಇದ್ದಳು. ಯಾವುದೋ ದೂರ ತೀರಕ್ಕೆ ಹೊರಟ ಹಡಗಿನಂತೆ.. ಆಳ ಕಣಿವೆಯೊಳಕ್ಕೆ ಕೈಜಾರಿ ಉರುಳುತ್ತಿರುವ ನವಿಲುಗರಿಯಂತೆ.. ಇನ್ನೆಂದೂ ಮರಳದ ಸೌಭಾಗ್ಯದಂತೆ... ಕಣ್ಣೆದುರೇ ತೊರೆದುಹೋಗುತ್ತಿರುವ ಪ್ರಾಣದಂತೆ...

ಅವಳು ನಡೆಯುತ್ತಲೇ ಇದ್ದಳು.

ಕೆಲವೇ ನಿಮಿಷದ ಕೆಳಗೆ ಕೊಂಚ ಕೈ ಚಾಚಿದರೂ  ಸಿಕ್ಕುಬಿಡುವಷ್ಟು ಸಮೀಪದಲ್ಲಿದ್ದ ಹುಡುಗಿ.. ಕಳೆದ ಎಷ್ಟೋ ವರ್ಷದ ಅಸಂಖ್ಯಾತ ನಿಮಿಷಗಳಿಂದ ನೀನು ಧ್ಯಾನಿಸುತ್ತಲೇ ಬಂದಿರುವ ಹುಡುಗಿ... ಯಾರೆಂದರೆ ಯಾರನ್ನೂ ತನ್ನ ಹತ್ತಿರ ಬಿಟ್ಟುಕೊಳ್ಳದ ಹುಡುಗಿ.. ನಿನ್ನೊಂದಿಗೆ ಮಾತ್ರ ಅದೊಂದು ತೆರನಾದ ಆತ್ಮೀಯತೆಯಿಂದಿದ್ದ ಹುಡುಗಿ.. ನೀನು ಮಾತುಬಿಟ್ಟ ಆ ಸಂಜೆ 'ಯಾಕೆ ನನ್ನೊಂದಿಗೆ ಮಾತಾಡ್ತಿಲ್ಲ?' ಎಂದು ಅಳುಮುಖ ಮಾಡಿಕೊಂಡು ನಿಂತಿದ್ದ ಹುಡುಗಿ.. ನೂರು ಗೆಳತಿಯರ ನಡುವಿನಿಂದಲೂ ನಿನಗೆ ಮಾತ್ರವೇನೋ ಎಂಬಂತಹ ಮುಗುಳ್ನಗು ಬೀರಿದ್ದ ಹುಡುಗಿ.. ಸೀರೆಯುಟ್ಟ ದಿನ ಸಾಕ್ಷಾತ್ ದೇವತೆಯಂತೆ ಕಂಗೊಳಿಸಿದ್ದ ಹುಡುಗಿ..

ಮೊಟ್ಟ ಮೊದಲ ಬಾರಿಗೆ ಖುಷಿಯಲ್ಲಿಯೂ ನಿನ್ನ ಕಣ್ತುಂಬಿಬರುವಂತೆ ಮಾಡಿದ್ದ ಹುಡುಗಿ...

ಅವಳು ಕೊನೆಗೂ ನಿನಗೆ ಸಿಗಲಿಲ್ಲ.

ನೀನವಳನ್ನು ಮರೆಯಲೂ ಇಲ್ಲ.

                  **************

ಅಚಾನಕ್ಕಾಗಿ ಕಣ್ಣಿಗೆ ಬಿದ್ದ ಯಾರದೋ ಮದುವೆಯ ಸ್ವಾಗತ ಫಲಕ.. ನೋಡುತ್ತಿದ್ದಂತೆಯೇ ಎದೆಯೊಳಗೆ ಸಾವಿರ ವೋಲ್ಟ್ ವಿದ್ಯುತ್ ಹರಿದ ಅನುಭವ. ಹತ್ತಾರು ಹೂಗಳನ್ನು ಒಂದಕ್ಕೊಂದು ಪೋಣಿಸಿ ಬರೆದಿರುವ ಆ ಫಲಕದಲ್ಲಿರುವ ಮದುಮಗಳ ಹೆಸರು... ಅದು ಅವಳದೇ! ನಿನಗೆ ಗೊತ್ತು: ಹೆಸರು ಅವಳದಾದ ಮಾತ್ರಕ್ಕೆ ಮದುಮಗಳೂ ಅವಳೇ ಆಗಬೇಕಿಲ್ಲ. ಆದರೂ ಭಯ ನಿನಗೆ! ಒಮ್ಮೆ ಕಲ್ಯಾಣ ಮಂಟಪದೊಳಗೆ ಇಣುಕಿ ನೋಡುವ ಕಾತುರ ಅಲ್ವಾ? ಒಂದುವೇಳೆ ಅವಳೇ ಆಗಿದ್ದರೆ? ಇರಬಹುದು.. ಅವಳೇ ಇರಬಹುದು.. ನೀನು ಏನು ತಾನೇ ಮಾಡಬಲ್ಲೆ? ಕನಸಿನಲ್ಲಿ ನೀನು ನೂರು ಬಾರಿ ಹಿಡಿದು ನಡೆದಿದ್ದ ಆ ಕೈಗಳನ್ನು ಇನ್ಯಾರದೋ ಕೈಗಳೊಂದಿಗೆ ಬೆಸೆದು ನಿಂತಿರುವವಳ ಮೇಲೆ ನಾಲ್ಕು ಅಕ್ಷತೆಕಾಳುಗಳನ್ನು ಹಾಕಿ ಆಶೀರ್ವದಿಸುವುದಲ್ಲದೆ.. 'ಹ್ಯಾಪಿ ಮ್ಯಾರೀಡ್ ಲೈಫ್' ಎಂದು ಹಾರೈಸುವುದಲ್ಲದೆ.. ಇರುಳ ಚಾದರದ ತುಂಬಾ ನಿರ್ನಿದಿರೆಯ ಹೊದ್ದುಕೊಂಡು ಹೊರಳಾಡುವುದಲ್ಲದೆ.. 'ಯಾಕೆ ನನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದೇ ಹೋದೆ?' ಎಂದು ಅವಳ ಹಳೆಯ (ನಿರ್)ಭಾವ ಚಿತ್ರವನ್ನು ಪ್ರಶ್ನಿಸುವುದಲ್ಲದೆ...

ಹೇಳು... ಇನ್ನೇನು ತಾನೇ ಮಾಡಬಲ್ಲೆ?

ಸಾಧ್ಯವಿದೆ..‌

ಎಲ್ಲಿಗೋ ಹೋಗುತ್ತಿರುವಾಗ ಎಲ್ಲಿಂದಲೋ ಅವಳ ಹೆಸರು ಕೇಳಿಬಂದಾಗ ರಸ್ತೆಯ ನಟ್ಟನಡುವೆ ಥಟ್ಟನೆ ನಿಂತುಬಿಡಬಹುದು. ಹಿಂದೊಮ್ಮೆ ಜೊತೆಯಾಗಿ ನಡೆದ ದಾರಿಯುದ್ದಕ್ಕೂ ಮತ್ತೆ ಮತ್ತೆ ನಡಯುತ್ತಾ ಅವಳ ಹೆಜ್ಜೆಗಳನ್ನು ಹುಡುಕಬಹುದು. ಅವಳ ನೆನಪುಗಳೇ ತುಂಬಿರುವ ಹಾಡೊಂದನ್ನು ಕೇಳಿ ಕೇಳಿ ತಣಿಯಬಹುದು. ನಡೆದದ್ದೆಲ್ಲವೂ ಸುಳ್ಳಾಗಿ, ಅವಳು ಮತ್ತೆ ನಿನ್ನವಳೇ ಆಗಿ ಬಳಿಬಂದಂತೆ ಕನಸು ಬಿದ್ದ ಆ ಬೆಳಗಿನ ಜಾವವೊಂದರಲ್ಲಿ ಹೊದ್ದ ಹೊದಿಕೆಗಷ್ಟೇ ತಿಳಿಯುವಂತೆ ಮುಗುಳ್ನಗಬಹುದು. ಕಂಡದ್ದು ಕನಸೆಂದು ಅರಿವಾದ ಮರುಕ್ಷಣ ಬದುಕೇ ಕಳೆದು ಹೋದಂತೆ ಮಂಕಾಗಬಹುದು. ಗಂಡನ ಹೆಗಲು ತಬ್ಬಿ ನಿಂತವಳನ್ನು ಫೋಟೋವೊಂದರಲ್ಲಿ ನೋಡಿ ಜಗತ್ತಿನ ಮತ್ಯಾರಿಗೂ ಅರ್ಥವಾಗದ ವೇದನೆಯಲ್ಲಿ ಮಮ್ಮಲ ಮರುಗಬಹುದು...

ಇನ್ನೂ ಏನೇನೋ ಸಾಧ್ಯವಿದೆ!

                  **************

ಯಾರು ಹೇಳಿದ್ದು ಪ್ರೀತಿಸಿದವರು ಸಿಗಲೇಬೇಕು ಅಂತ?

ಒಮ್ಮೆ ಯೋಚಿಸಿ ನೋಡು? ಅವಳು ನಿನಗೆ ಸಿಕ್ಕಿದ ಮರುಕ್ಷಣ  ಅವಳ ಊರಿನ ಹೆಸರು ನಿನ್ನೆದೆಯೊಳಗಿದ್ದ ತನ್ನ ಹಿಂದಿನ ವಿಶೇಷತೆಯನ್ನು ಕಳೆದುಕೊಳ್ಳುತ್ತದೆ. ಅವಳ ಪ್ರೀತಿಗಾಗಿ ಹಂಬಲಿಸಿದ ಕ್ಷಣಗಳು ಒಂದೊಂದಾಗಿ ಮರೆತುಹೋಗುತ್ತವೆ. 'ಅವಳು' ಎಂದ ಕೂಡಲೇ ಮೊಗ್ಗಂತೆ ನಾಚುವ ನಿನ್ನೀ ಗಾಢ ಆರಾಧನೆ ಕಡಿಮೆಯಾಗುತ್ತದೆ. ಮಗ್ಗುಲಲ್ಲೇ ಮಲಗಿರುವ ಮಡಿದಿ, ಅಂದೆಂದೋ ಮಿಂಚಿನಂತೆ ಬಳಿಸುಳಿದು ಮರೆಯಾದ ಪ್ರೇಯಸಿಯಂತೆ ಕಾಡಬಲ್ಲಳೇ? ಒಂದೊಂದು ದಿನವನ್ನೂ ಎಣಿಸುತ್ತಾ, ಕಾದು ಬರಮಾಡಿಕೊಂಡ ಅವಳ ಹುಟ್ಟಿದ ದಿನದಂದು ಎಂದೂ ಹೋಗದ ದೇವಸ್ಥಾನಕ್ಕೆ ಹೋಗಿ "ಅವಳು ಖುಷಿಯಾಗಿರಲಿ ದೇವರೇ" ಎಂದು ಕಣ್ಮುಚ್ಚಿ ಪ್ರಾರ್ಥಿಸುವ ಆ ನಿರ್ಮಲ ಕ್ಷಣ ಮುಗಿದೇ ಹೋಗುತ್ತದೆ. ಸಿಕ್ಕುವುದು ಹಾಗೂ ದಕ್ಕುವುದು.. ಇವೆರೆಡರ ನಡುವಿನ ವ್ಯತ್ಯಾಸ ನಿನಗೆ ಗೊತ್ತಿಲ್ಲ ಹುಚ್ಚಾ..  ಪ್ರೀತಿಸಿದವರು ಜೊತೆಗಿಲ್ಲವೆನ್ನುವುದು ಅವರನ್ನು ಅಪಾರವಾಗಿ ಪ್ರೀತಿಸುವುದಕ್ಕೆ ನಿನಗಿರುವ ದಿವ್ಯ ನೆಪ. ನಿಜ ಹೇಳಬೇಕೆಂದರೆ ಅವಳೇನಾದರೂ ಸಿಕ್ಕಿದ್ದರೆ ಎಷ್ಟು ಪ್ರೀತಿಸುತ್ತಿದ್ದೆಯೋ ಅದಕ್ಕಿಂತ ಹತ್ತು ಪಟ್ಟು ಮಿಗಿಲಾಗಿದೆ ನಿನ್ನೀ ಪ್ರೇಮ.. ಪ್ರೀತಿ ಹಾಗೂ ಪ್ರೀತಿಸುವವರು- ಇವೆರೆಡೂ ಒಟ್ಟಾಗಿರುವ ಸಂದರ್ಭಗಳು ತುಂಬಾ ಕಡಿಮೆ.

                  **************

ಮೊದಲೇ ಹೇಳಿಬಿಡ್ತೀನಿ, ನೀನು ಹೀಗೆ ಅವಳನ್ನು ಹಚ್ಚಿಕೊಂಡಿರುವುದರಲ್ಲಿ ಅವಳ ತಪ್ಪು ಕೊಂಚವೂ ಇಲ್ಲ. ಸಂತೆಯ ಜಂಗುಳಿಯಲ್ಲಿ ಎದುರಿಗೆ ಬರುವ ಸಾವಿರಾರು ಅನಾಮಿಕರಂತೆಯೇ ಕಣ್ಮುಂದೆ ಹಾದವಳು ಅವಳು; ಆದರೆ ಅವಳ ಹೆಸರು ತಿಳಿದುಕೊಂಡು, ಅವಳು ನಿನಗೆ ಹೀಗೆ ಎದುರಾಗಿ ಸಿಕ್ಕ ಕಾಕತಾಳೀಯಕ್ಕೆ ಯಾವ್ಯಾವುದೋ ಜನ್ಮಗಳ ಲಿಂಕ್ ಕೊಟ್ಟು, ಅವಳು ಹೆಜ್ಜೆ ಹಾಕುತ್ತಿರುವ ಹಾದಿಯ ಆಚೆ ತುದಿ ನಿನ್ನ ಬದುಕಿನ ಬಾಗಿಲೇ ಎಂದು ಭ್ರಮಿಸಿ, ಈ ಎಲ್ಲ ಪ್ರಹಸನಗಳಿಗೂ 'ಪ್ರೀತಿ' ಎಂಬ ಚಂದದ ಹೆಸರುಕೊಟ್ಟ ಅಧಿಕ ಪ್ರಸಂಗಿ ನೀನೇ. ಅವಳು ಅಂತಹಾ ಸುಂದರಿಯೇನಲ್ಲ; ಆದರೆ ಹಾಗಂತ ಒಪ್ಪಿಕೊಳ್ಳುವುದಕ್ಕೆ ನಿನಗಿಷ್ಟವಿಲ್ಲ. ಅಥವಾ ಆ ಸತ್ಯ ನಿನಿಗೆ ಗೊತ್ತೇ ಇಲ್ಲ! ಹೆಣ್ಣಿನ ಸ್ನೇಹವೆಂದರೇನೆಂದೇ ಗೊತ್ತಿಲ್ಲದ, ಅವಳ ಮುಗುಳ್ನಗು ಮಾತ್ರದಿಂದಲೇ ಹುಟ್ಟಿಕೊಳ್ಳುವ ಆ ನವಿರು ಪುಳಕಗಳನ್ನು ಹಿಂದೆಂದೂ ಅನುಭವಿಸಿರದ, ಮುಡಿದ ಹೆಣ್ಣಿನಿಂದಾಗಿ ಹೂವು ಸುಂದರವಾಯಿತೇ ಹೊರತು, ಹೂವಿನಿಂದ ಹೆಣ್ಣು ಸುಂದರವಾಗಿದ್ದಲ್ಲವೆನ್ನುವ ಪರಮ ಸತ್ಯವನ್ನು ಈಗಷ್ಟೇ ತಿಳಿದುಕೊಳ್ಳುತ್ತಿರುವ ನಿನ್ನೀ ಗಂಡು ಹೃದಯವನ್ನು ಪ್ರೀತಿಯಲ್ಲಿ ಬೀಳಿಸುವವಳು ತ್ರಿಪುರ ಸುಂದರಿಯೇ ಆಗಿರಬೇಕಿಲ್ಲ,
ಆಕೆ ಹೆಣ್ಣಾಗಿದ್ದರೆ ಸಾಕು.

ಅವಳು ಮಾಮೂಲಾಗಿಯೇ ನೋಡಿದಳು. ನಿನ್ನ ಎದೆಯಲ್ಲಿ ಮಿಂಚು ಹರಿಯಿತು. ಅವಳು ತನ್ನ ಕಪ್ಪು ಮಲ್ಲಿಗೆಯಂತಹಾ ಜಡೆಯನ್ನು ಕತ್ತಿನ ಮುಂಭಾಗದಲ್ಲಿ ಇಳಿಬಿಟ್ಟುಕೊಂಡಳು. ನಿನ್ನ ಹೃದಯ ಬಡಿತವೊಂದನ್ನು ಸ್ಕಿಪ್ ಮಾಡಿತು. ಅವಳು ಸೀರೆಯುಟ್ಟು ಕಣ್ಮುಂದೆ ಹಾದಳು. ಅಂದು ರಾತ್ರೆಯಿಡೀ ನೀನು ನಿದ್ರಿಸಲಿಲ್ಲ. ಅವಳೊಮ್ಮೆ ನಿನ್ನೆಡೆಗೆ ನೋಡಿ ಮುಗುಳ್ನಕ್ಕಳು...

ಆ ದಿವ್ಯ ಘಳಿಗೆಯನ್ನು ನೀನು ಮತ್ತೆಂದೂ ಮರೆಯಲೇ ಇಲ್ಲ.

                  **************

ಹೇಗೆ ತಾನೇ ಒಪ್ಪಿಯಾಳು ನಿನ್ನ?

ನಿನಗೆ ಗೊತ್ತಾ.. ಅವಳ ಕನಸಿನಲ್ಲಿ ಬರುವ ರಾಜಕುಮಾರ ಅದೆಷ್ಟು ಸುಂದರನೆಂಬುದು? ಬಡತನವನ್ನೇ ಹಾಸಿ ಹೊದ್ದವಳು ಕಲ್ಪನೆಯಲ್ಲಿ ಕಟ್ಟಿಕೊಂಡ ಅರಮನೆಯ ಒಂದು ಮೆಟ್ಟಿಲನ್ನೂ ಕಟ್ಟಲಾರೆ ನೀನು! ಇದ್ದಿರಬಹುದು, "ನಂಗೆ ಪಪ್ಪ ಇಲ್ಲ" ಎಂದು ವಿಷಾದದಿಂದ ಹೇಳಿಕೊಂಡವಳ ಎದೆಯೊಳಗೆಲ್ಲೋ ನಿನ್ನ ಬಗ್ಗೆ ಸೆಳೆತದ ಅಲೆಯೊಂದು ಎದ್ದಿರಬಹುದು. ಅಂದ ಮಾತ್ರಕ್ಕೇ ಅದು ಪ್ರೇಮವೇ ಆಗಬೇಕಿಲ್ಲ. ಅವಳನ್ನು ಪ್ರೀತಿಸುವವರು ಹಲವರು. ಆದರೆ ಅವಳಿಂದ ಪ್ರೀತಿಸಲ್ಪಟ್ಟವರು? ಅಷ್ಟಕ್ಕೂ ಅವಳು ಅರ್ಥವಾಗಿದ್ದಾದರೂ ಯಾರಿಗೆ ಹೇಳು? ಕಾಳಜಿಯ ನಾಟಕವಾಡಿ, ಪ್ರೀತಿಸುವೆನೆಂದು ನಂಬಿಸಿ ಘಾಸಿಗೊಳಿಸಿದ ಅವನಿಗೆ ಅರ್ಥವಾದಳೇ? ಹಿಂದಿನಿಂದ ಆಡಿಕೊಂಡು ನಕ್ಕ ಗೆಳೆಯ-ಗೆಳತಿಯರಿಗೆ ಅರ್ಥವಾದಳೇ? ತಂದೆಯಿಲ್ಲದ ಅವಳು ತಮಗೇ ಸೇರಬೇಕೆಂದು ಹಕ್ಕು ಚಲಾಯಿಸಿದ ಬಂಧುಗಳಿಗೆ ಅರ್ಥವಾದಳೇ?

ಬಿಡು.. ಅವಳು ಯಾರಿಗೂ ದಕ್ಕುವಳಲ್ಲ. ಅವಳ ಪಾಡು ಅವಳಿಗಿರಲಿ..

                  **************

ಫೋನಿನಲ್ಲಿರುವ, ಪ್ರೊಫೈಲ್ ಫೋಟೋ ಕಾಣದ ಅವಳ ವಾಟ್ಸಾಪ್ ಖಾತೆ ಹಾಗೇ ಉಳಿದುಬಿಡಲಿ. ಎಲ್ಲ ಡಿಲೀಟ್ ಮಾಡಿದ ಮೇಲೂ ಗ್ಯಾಲರಿಯ ಮೂಲೆಯೊಂದರಲ್ಲಿ ಉಳಿದು ಹೋದ, ಅವಳು ನಗುತ್ತಾ ನಿಂತಿರುವ ಆ ಚಿತ್ರ ಅಳಿಯದಿರಲಿ. ವಿಳಾಸದ ಕಾಲಂನಲ್ಲಿ ನೀನು 'ಅವಳಿಗೆ' ಎಂದು ಬರೆದಿಟ್ಟುಕೊಂಡಿರುವ ಪತ್ರಗಳು ಅವಳನ್ನೆಂದೂ ತಲುಪದಿರಲಿ. ಮುಂದೆಂದೋ ಹುಟ್ಟಲಿರುವ ನಿನ್ನ ಮಗಳಿಗೆ ಇಡಬೇಕಾದ ಅವಳ ಆ ಮುದ್ದು ಹೆಸರು ಅಲ್ಲಿ, ಇಲ್ಲಿ, ಎಲ್ಲೆಲ್ಲಿಂದಲೂ ಕೇಳಿಬಂದು ನಿನ್ನನ್ನು ಕಾಡುತ್ತಿರಲಿ..

ಪ್ರೀತಿಸಿದವಳು ಸಿಗದಿರಲಿ.

(ಮಾನಸ ಮೇ 2018 ಸಂಚಿಕೆಯಲ್ಲಿ ಪ್ರಕಟಿತ)

ಶನಿವಾರ, ಫೆಬ್ರವರಿ 3, 2018

ಬಾಬಣ್ಣನಂಗಡಿಯೆಂಬ ನಮ್ಮೂರ ಬಿಗ್ ಬಜಾರ್!ಅಂಗಡಿ ಎಂದರೆ ಹೇಗಿರುತ್ತದೆ?

ನನಗೆ ಈ ಜೆನರಲ್ ಸ್ಟೋರ್ಸ್ ಗೊತ್ತು, ಫ್ಯಾಕ್ಟರಿ ಔಟ್ಲೆಟ್ ಗೊತ್ತು. ಮಾಲ್ ಗೊತ್ತು. ರಿಲಯನ್ಸ್ ಡಿಜಿಟಲ್, ರಿಟೈಲರ್ ಶಾಪ್, ಬಿಗ್ ಬಜಾರ್, ಸೂಪರ್ ಮಾರ್ಕೆಟ್, ಬ್ರ್ಯಾಂಡ್ ಫ್ಯಾಕ್ಟರಿ ಎಲ್ಲವೂ ಗೊತ್ತು. ಇದ್ಯಾವುದಿದು ಅಂಕಲ್ ಅಂಗಡಿ? ಅದು ರಿಲಯನ್ಸ್ ದಾ ಇಲ್ಲಾ ಒರಾಯನ್ ದಾ?

ಮುಂದಿನ ಪೀಳಿಗೆಯ ಚಿಲ್ಟಾರಿಗಳು ಹೀಗಂತ ಕೇಳಿದರೆ ಬೆಚ್ಚಿಬೀಳಬೇಡಿ. ಈಗ ಚಿಕ್ಕ ಚಿಕ್ಕ ನಗರಗಳಲ್ಲೂ ಸೂಪರ್ ಮಾರ್ಕೆಟ್, ಬ್ರಾಂಡ್ ಫ್ಯಾಕ್ಟರಿ, ಫ್ಯಾಶನ್ ಸ್ಟೋರ್ ಗಳು ತುಂಬಿಕೊಳ್ಳುತ್ತಿರುವುದನ್ನು ನೋಡಿದರೆ 'ಅಂಗಡಿ' ಎನ್ನುವ ನಾವು-ನೀವು ನಿಂಬೆಹುಳಿ ಚಾಕ್ಲೇಟ್ ಕೊಳ್ಳುತ್ತಿದ್ದ ಆ ಪುಟ್ಟ ಮಾಯಾಮಳಿಗೆ ಮಾಯವಾಗಿ ಹೋಗುವ ದಿನ ದೂರವಿಲ್ಲವೇನೋ ಅನಿಸುತ್ತದೆ. ಹಾಗಂತ ಇಲ್ಲಿನ ತನಕದ ಪೀಳಿಗೆಯಲ್ಯಾರೂ ಅಂಗಡಿಯನ್ನು ನೋಡದೇ ಬೆಳೆದವರು ಇರಲಿಕ್ಕಿಲ್ಲ. ನಿಮಗೆಲ್ಲ ನಿಮ್ಮೂರಿನ ನಟ್ಟ ನಡುವಿನಲ್ಲಿ ಅಥವಾ ಬಸ್ ಸ್ಟ್ಯಾಂಡಿನ ಪಕ್ಕ ನಾಲ್ಕು ಜನ ಸೇರುವ ಜಾಗದಲ್ಲಿ ಬಾಬಣ್ಣ, ರಾಮಣ್ಣ, ಉಪೇಂದ್ರಣ್ಣ ಎಂಬ ಯಾವುದೋ ಹೆಸರಿನ 'ಅಣ್ಣ'ನೊಬ್ಬ ಇಟ್ಟಿದ್ದ ಅಂಗಡಿ ನೆನಪಿದೆ ತಾನೇ? ಆಗಿನ ಕಾಲಕ್ಕೆ ಇಡೀ ಊರಿಗೇ ಬಿಗ್ ಬಜಾರಾಗಿದ್ದ ಅವುಗಳನ್ನು ಮರೆಯುವುದಾದರೂ ಹೇಗೆ ಅಲ್ವಾ? ನನಗಿನ್ನೂ ಚೆನ್ನಾಗಿ ನೆನಪಿದೆ. ನಮ್ಮೂರಿನ ಬಸ್ ಸ್ಟಾಪಿನ ಎದುರು, ಮುಖ್ಯರಸ್ತೆಯ ಬದಿಯಲ್ಲಿ, ರಸ್ತೆಗಿಂತ ಕೊಂಚ ಎತ್ತರದ ಜಾಗದಲ್ಲಿ ಹಂಚಿನದೊಂದು ಸೂರು. ಅದರ ಕೆಳಗೆ ಮೂರಡಿ ಎತ್ತರದ ಆವರಣ ಎನ್ನಬಹುದಾದ ಚಿಕ್ಕದೊಂದು ಕಟ್ಟೆ. ಚಪ್ಪಲಿಯನ್ನು ಅಲ್ಲೇ ಬಿಚ್ಚಿಟ್ಟು ಒಳಗೆ ನಡೆದರೆ ಮೊದಲು ಎದಿರಾಗುವುದು ನೆಲದ ಮೇಲೆ ಟೊಮೇಟೋ, ಕ್ಯಾರೇಟ್, ಅಲೂಗಡ್ಡೆ ಮುಂತಾದ ತರಕಾರಿಗಳನ್ನು ತುಂಬಿಟ್ಟಿರುವ ಬುಟ್ಟಿಗಳು. ಪಕ್ಕದಲ್ಲಿ ಮರದ ಪೆಟ್ಟಿಗೆಗಳೊಳಗೆ ಶಿಸ್ತಾಗಿ ನಿಂತಿರುವ ಗೋಲಿ ಸೋಡದ ನೀಲಿ ಬಾಟಲ್ ಗಳು‌. ಎದುರುಗಡೆ ಅಂಗಡಿಯ ಬಾಗಿಲಿನಲ್ಲಿ ಪುಟ್ಟದೊಂದು ಮರದ ಸ್ಟ್ಯಾಂಡಿನ ಮೇಲೆ ಸಾಲಾಗಿ ನಿಂತು ತಮ್ಮೊಳಗಿನ ಚಾಕ್ಲೇಟೇ ಇತ್ಯಾದಿ ಸಿಹಿ-ಹುಳಿ ತಿಂಡಿಗಳನ್ನು ಜಗತ್ತಿಗೆ ತೋರಿಸುತ್ತ ಕೈಬೀಸಿ ಕರೆಯುತ್ತಿರುವ ಗಾಜಿನ ಭರಣಿಗಳು. ಪಕ್ಕದ ಗೋಡೆಯ ಮೇಲೆ ಹಾರದಂತೆ ನೇತಾಡುತ್ತಿರುವ, ಲೇಟೆಸ್ಟ್ ಆಗಿ ಮಾರುಕಟ್ಟೆಗೆ ಬಂದಿರುವ ಕಟ್ಟಮಿಟ್ಟ, ಶಕ್ತಮಾನ್ ಚಾಕಲೇಟ್ ಗಳು. ಒಳಗಿನ ಸ್ಟ್ಯಾಂಡುಗಳಲ್ಲಿ ಸಾಲಾಗಿ ಜೋಡಿಸಿಟ್ಟ ದಿನಬಳಕೆಯ ವಸ್ತುಗಳು..‌‌

ಅದು ಬಾಬಣ್ಣನ ಅಂಗಡಿ!

ಪಕ್ಕದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪ್ರತಿಯೊಬ್ಬ ಚಿಣ್ಣನೂ ತಿರುತಿರುಗಿ ನೋಡುತ್ತಾ ಹೋಗುತ್ತಿದ್ದ ಅಂಗಡಿಯದು. ಇಪ್ಪತೈದು ಪೈಸೆಯ ನಿಂಬೆ ಹುಳಿ ಚಾಕ್ಲೆಟ್ ನಿಂದ ಹಿಡಿದು ಇಪ್ಪತೈದು ರುಪಾಯಿಯ ಕ್ಯಾಸ್ಕೋ ಬಾಲಿನ ತನಕ ಮಕ್ಕಳ ಮನಗೆದ್ದುದೆಲ್ಲವೂ ಅಲ್ಲಿ ಲಭ್ಯ. ಸಂಜೆ ಹೊರಗೆ ಹೊರಟ ಅಪ್ಪನ ಜೊತೆ ಹಠ ಮಾಡಿ ತಾನೂ ಹೋರಟುಬಂದು ಆ ಅಂಗಡಿಯ ಬಾಗಿಲಿನಲ್ಲಿ ನಿಂತ ಪೋರನ ಕಣ್ಣೆದುರು ಗೊಂಚಲು ಗೊಂಚಲು ಕನಸುಗಳು! ಆ ಬದಿಯಲ್ಲಿ ನೋಡಿದರೆ ಬಾಟಲಿಯೊಳಗೆ ಬೆರಳು ತೂರಿಸಿ ಫಟ್ ಎಂದು ಒಡೆದುಕೊಡುವ ಗೋಲಿಸೋಡ. ಮಧ್ಯದಲ್ಲಿ ಮರದ ಸ್ಟ್ಯಾಂಡಿನ ಮೇಲೆ ನಮ್ಮ ಜೇಬಿನೊಳಗೇ ಇದೆಯೇನೋ ಎನ್ನುವಷ್ಟು ಪಾರದರ್ಶಕವಾಗಿರುವ ಭರಣಿಗಳೊಳಗೆ ಜೋಡಿಸಿರುವ ಸೋಂಪಾಪುಡಿ, ಮೈಸೂರ್ ಪಾಕು, ಕಂಬಾರ್ ಕಟ್(ಕಡ್ಲೆ ಮಿಠಾಯಿ), ಶುಂಟಿ ಪೇಪರ್ಮೆಂಟ್, ಮಹಾಲ್ಯಾಕ್ಟೋ, ಜೆಲ್ಲಿ, ಲ್ಯಾಕ್ಟೋ ಕಿಂಗ್, ಕಾಫೀ ಬೈಟ್, ನಿಂಬೆಹುಳಿ ಚಾಕ್ಲೇಟ್, ರಸಗುಲ್ಲಗಳು. 'ನನ್ನನ್ನು ಊದು' ಎಂದು ಕೈ ಬೀಸಿ ಕರೆಯುತ್ತಿರುವ ಬಾಟಲಿಯೊಳಗಿನ ಬಣ್ಣಬಣ್ಣದ ಪುಗ್ಗಿಗಳು, ಕೈಮೇಲೆ ಅಂಟಿಸಿಕೊಂಡು ನೀರು ಹಚ್ಚಿ ಗಸಗಸನೆ ಉಜ್ಜಿದಾಗ ಒಳಗಿರುವ ಬೂಮರ್, ಶಕ್ತಿಮಾನ್ ರ ಚಿತ್ರಗಳು ಕೈಯ ಮೇಲಕ್ಕೆ ವರ್ಗಾವಣೆಯಾಗಿಬಿಡುವ ಅದ್ಭುತ ಟ್ಯಾಟೂಗಳು ಫ್ರೀ ಬರುವ ಬೂಮರ್, ಬಿಗ್ ಬಬೂಲ್, ಮಾರ್ಬಲ್ಸ್ ಗಳು...

ಚಿಕ್ಕಚಿಕ್ಕ ಪ್ಯಾಕೇಟುಗಳಲ್ಲಿ ನೇತುಹಾಕಿರುವ ಹಸಿರು ಕಡಲೆ, ಇಂಗ್ಲೀಷ್ ನ ಅಕ್ಷರಗಳೇ ಹಿಡಿಕೆಗಳಾಗಿರುವ ಎಬಿಸಿಡಿ ಲಾಲಿಪಾಪ್, ಕವರ್ ನೊಳಗೆ ಪ್ಲಾಸ್ಟಿಕ್ ಉಂಗುರ, ಸರ, ಪೀಪಿ, ಬಿಲ್ಲು-ಬಾಣ ಮುಂತಾದ 'ಸರ್ಪೈಸ್ ಗಿಫ್ಟ್' ಗಳು ಫ್ರೀ ದೊರೆಯುವ ಶಕ್ತಿಮಾನ್ ಚಾಕಲೇಟ್ ಗಳು, ಚಿಕ್ಕಚಿಕ್ಕ ಕಡ್ಡಿಗೆ ಬಣ್ಣಬಣ್ಣದ ಬ್ಯಾಗಡೆ ಸುತ್ತಿರುವ, ಒಳಗಡೆ ನಾಲಿಗೆ ನಲಿನಲಿದಾಡುವಂತೆ ಮಾಡುವ ಹುಣಿಸೆಯ ಲೇಹ್ಯವಿರುವ ಕಟ್ಟಮಿಟ್ಟ, ಅದೋ ಅಲ್ಲಿ- ಅಂಗಡಿಯೊಳಗಿನ ತುತ್ತತುದಿಯ ಮೂಲೆಯಲ್ಲಿ ಕಾಣುತ್ತಿರುವ ಕೆಂಬಣ್ಣದ ಫ್ರಿಜ್ಜಿನೊಳಗಿನ ಚಿಕ್ಕ ಕವರ್ ನೊಳಗೆ ತುಂಬಿಟ್ಟಿರುವ ಬಣ್ಣಹಚ್ಚಿದ ಹಿಮದಂತಿರುವ ಗಟ್ಟಿ ಪೆಪ್ಸಿ, ಬಾಯಲ್ಲಿ ಕುಡಿದರೆ ಮೂಗಲ್ಲಿ ತೇಗು ಬರುವ ಪೀಲೆ.. ಇಷ್ಟೆಲ್ಲ ವೈವಿಧ್ಯಮಯ ತಿಂಡಿಗಳ ಮಧ್ಯೆ ಒಂದೇ ಒಂದನ್ನು ಆಯ್ಕೆ ಮಾಡಬೇಕೆಂಬುದು ಎಂತಹ ಘೋರ! ಮನೆಗೆ ಬೇಕಾದ ಉಪ್ಪು, ಕಡಲೆಹಿಟ್ಟು, ಅಡಿಗೆ ಎಣ್ಣೆಗಳನ್ನೆಲ್ಲ ಕೊಂಡಾದ ಮೇಲೆ ಅಪ್ಪ ಕೇಳುವ "ನಿಂಗೇನ್ಬೇಕ?" ಎಂಬ ಒಂದೇ ಒಂದು ಪ್ರೆಶ್ನೆಗೆ ಪೋರನ ಬಾಯಿಯಲ್ಲಿ ಹತ್ತು ಉತ್ತರ ತಯಾರಿರುತ್ತಿತ್ತು:

"ಶಕ್ತಿಮಾನ್ ಚಾಕ್ಲೇಟ್.."

"ಬೇಡಬೇಡ ಭೂಮರ್.."

"ಇದು ಬೇಡ ಪೆಪ್ಸಿ..."

ಹೀಗೆ ಇಡೀ ಅಂಗಡಿಗೆ ಅಂಗಡಿಯೇ ಬೆರಳಂಚಿಗೆ ಬಂದು ನಿಂತುಬಿಡುತ್ತಿದ್ದ ಕ್ಷಣವದು. ಕೊನೆಗೆ ಅಪ್ಪ-ಬಾಬಣ್ಣ ಇಬ್ಬರೂ ಕಣ್ಣಲ್ಲೇ ಮಾತಾಡಿಕೊಂಡು, ಯಾವುದೋ ಒಂದು ಜಾತಿಯ ಚಾಕಲೇಟನ್ನು ಪೋರನ ಕೈಗಿತ್ತು, ಅದೇ ಜಗತ್ತಿನ ಸರ್ವ ಶ್ರೇಷ್ಠ ಚಾಕಲೇಟೆಂದು ಅವನನ್ನು ನಂಬಿಸಿ ಸಾಗಹಾಕುವ ಮೂಲಕ ಈ ಗೊಂದಲ ಕೊನೆಯಾಗುತ್ತದೆ. ಹೀಗೆ ಯಾವುದೋ ಒಂದು ತಿಂಡಿಯನ್ನು ಹಿಡಿದು ಹೊರಟು, ಕೊನೆಯ ಬಾರಿಗೆಂಬಂತೆ ತಿರುಗಿ ನೋಡಿದ ಆ ಚಿಣ್ಣನಿಗೆ ಕೊನೆಗೂ ಅಂಗಡಿಯಲ್ಲೇ ಉಳಿದುಹೋದ, ಅವನು ಕೊಳ್ಳಲಾಗದ ಆ ಚಾಕ್ಲೇಟುಗಳೆಲ್ಲ ಕಣ್ಣೀರು ತುಂಬಿಕೊಂಡು ವಿದಾಯ ಹೇಳುತ್ತವೆ.

ಇದು ಅಲ್ಲಿ ಅಂಗಡಿಯಲ್ಲಿ ದಿನಕ್ಕೆ ಏನಿಲ್ಲವೆಂದರೂ ಹತ್ತು ಬಾರಿಯಂತೆ, ವಾರದ ಏಳೂ ದಿನವೂ ಪುನರಾವರ್ತನೆಯಾಗುತ್ತಿದ್ದ ಘಟನೆ. ಹಂಚಿನ ಮಾಡಿನ ಚಿಕ್ಕ ಜಾಗವಾಗಿತ್ತಾದರೂ ಬಾಬಣ್ಣನ ಅಂಗಡಿ ಕೇವಲ ದಿನಬಳಕೆಯ ದಿನಸಿ ವಸ್ತುಗಳಿಗೆ ಸೀಮಿತವಾಗಿರಲಿಲ್ಲ. ಯಾವುದೇ ಹಬ್ಬವಾದರೂ ಊರಿನಲ್ಲಿ ಮೊದಲು ಕಾಲಿಡುತ್ತಿದ್ದುದು ಇಲ್ಲಿಗೇ. ದೀಪಾವಳಿ, ರಾಖಿ ಹಬ್ಬಗಳೆಲ್ಲ ಸನಿಹ ಬಂದಿದ್ದು ನಮಗೆ ಗೊತ್ತಾಗುತ್ತಿದ್ದುದೇ ಬಾಬಣ್ಣನ ಅಂಗಡಿಯನ್ನು ಹೊಸದಾಗಿ ಅಲಂಕರಿಸಿರುವ ಪಟಾಕಿ, ರಾಖಿಗಳಿಂದ. ಕೋವಿ, ಮದ್ದು, ಪಟಾಕಿಗಳು ಬಾಬಣ್ಣನ ಅಂಗಡಿಯನ್ನು ಪ್ರವೇಶಿಸಿದ ಮರುದಿನ ಸಂಜೆಯೇ ನಮ್ಮ ಶಾಲೆಯ ಹಿಂದಿನ ಗುಡ್ಡದಲ್ಲಿ ಢಮಾರ್ ಎನ್ನುವ ಶಬ್ದ ಮೊಳಗುತ್ತಿತ್ತು. ಅಮ್ಮನನ್ನು ಕಾಡಿ, ಗೊಗರೆದು ಐವತ್ತೋ ಅರವತ್ತೋ ಇಸಿದುಕೊಂಡು ಅಂಗಡಿಗೆ ಬರುವ ಮಕ್ಕಳಿಗೆ ಬಾಬಣ್ಣನಿಂದ ಯಾವ ಒಬಾಮಾನಿಗೂ ಕಡಿಮೆಯಿಲ್ಲದ ಭವ್ಯ ಸ್ವಾಗತ ದೊರೆಯುತ್ತಿತ್ತು. "ಬಾರಾ ಮಾಣಿ.. ಹೊಸ ಹೊಸ ಪಟಾಕಿ ಬಂದಿದೆ ನೋಡಾ" ಎನ್ನುತ್ತಾ ಒಳಗಿನಿಂದ ಬಿಡಿಮದ್ದು, ಕೋವಿ, ಮೆಣಸಿನಕಾಯಿ ಪಟಾಕಿ, ನೆಲಚಕ್ರ, ಸುರುಸುರು ಬತ್ತಿ, ಬಾಳೆಕಂಬ, ರಾಕೆಟ್ ಗಳ ಬಾಕ್ಸ್ ಗಳನ್ನು ತೆಗೆದು ಎದಿರಿಡುತ್ತಿದ್ದ. "ಇಪ್ಪತ್ತು ರೂಪಾಯಿ ವಾಪಾಸು ತರ್ಬೇಕು" ಎಂದು ಹೇಳಿಕಳಿಸಿರುತ್ತಿದ್ದ ಅಮ್ಮನ ಮಾತನ್ನು ನಾವು ಕಣ್ಣೆದುರಿನ ಆ ವೈಭವವನ್ನು ನೋಡನೋಡುತ್ತಲೇ ಮರೆತುಬಿಟ್ಟಿರುತ್ತಿದ್ದೆವು. ಆದರೆ ಕಡಿಮೆ ಬೆಲೆಕೊಟ್ಟು ತಂದ ಕಡಿಮೆ ಗುಣಮಟ್ಟದ್ದಾಗಿತ್ತೋ ಅಥವಾ ಬಾಬಣ್ಣ ಅವನ್ನು ತಣ್ಣಗಿನ ಜಾಗದಲ್ಲಿಟ್ಟಿರುತ್ತಿದ್ದನೋ ಏನೋ, ಅಲ್ಲಿ ಕೊಂಡ ಪಟಾಕಿಗಳಲ್ಲಿ ಹಲವು ಠುಸ್ ಗುಂಪಿಗೆ ಸೇರಿಬಿಡುತ್ತಿದ್ದವು. ಢಮಾರೆಂಬ ದೊಡ್ಡ ಶಬ್ದದೊಂದಿಗೆ ಹೊಟ್ಟಬೇಕಾದ ಮೆಣಸಿನಕಾಯಿ ಪಟಾಕಿ ಸುರುಸುರು ಬತ್ತಿಯಂತೆ ಸುರ್ರನೆ ಬೆಂಕಿಯನ್ನೆರಚುತ್ತ ಚೀರಾಡುತ್ತಿತ್ತು. ನಿಂತಲ್ಲೇ ಅಷ್ಟೆತ್ತರಕ್ಕೆ ನಕ್ಷತ್ರಗಳನ್ನೆರಚಬೇಕಾದ ಬಾಳೆಕಂಬ ಢಮಾರನೆ ಹೊಟ್ಟಿ ಆಕಾಶಕ್ಕೆ ನೆಗೆಯುತ್ತಿತ್ತು. ಇನ್ನು ಬಾಬಣ್ಣ "ಮೂರು ತೆಂಗಿನಮರದಷ್ಟು ಎತ್ತರಕ್ಕೆ ಹಾರತ್ತೆ ನೋಡು!" ಎಂದು ಬೂಸಿ ಹೊಡೆದು ಕೊಟ್ಟಿದ್ದ ರಾಕೆಟ್ ನೆಟ್ಟಗೆ ನಿಲ್ಲಿಸಿ ಉಡಾಯಿಸಿದರೂ ಬೆಂಕಿ ಅಂಟಿಸಿದವನನ್ನೇ ಅಟ್ಟಿಸಿಕೊಂಡು ಹೋಗಿ ಅಂಗಳದ ತುಂಬಾ ಅಟ್ಟಾಡಿಸಿದ ಘಟನೆಗಳೂ ನಡೆದಿದ್ದವು!

ಇನ್ನು ರಾಖಿ ಹಬ್ಬ ಬಂದರಂತೂ ಮುಗಿದೇ ಹೋಯಿತು, ಕೊರಳ ತುಂಬಾ ನಾನಾ ಬಣ್ಣ, ನೂಲು, ಸ್ಪಂಜುಗಳ ರಾಖಿಗಳ ಮಾಲೆ ಕಟ್ಟಿಕೊಂಡ ಬಾಬಣ್ಣನ ಅಂಗಡಿ ಸ್ವರ್ಗಲೋಕದ ಬಾಗಿಲೇ ಆಗಿಬಿಡುತ್ತಿತ್ತು. ರುಪಾಯಿಗೆ ಹತ್ತುಬರುವ ಉದ್ದುದ್ದ ತೆಳು ಎಳೆಗಳಿರುವ ಗೌರೀದಾರ, ರೂಪಾಯಿಗೆ ನಾಲ್ಕು ಬರುವ ಉಲ್ಲನ್ನಿನ ಪುಟ್ಟ, ಉರುಟು ತಲೆಯ ರಾಖಿ, ಅದರಲ್ಲೇ ಕೊಂಚ ದೊಡ್ಡ ತಲೆಯಿರುವ ಐವತ್ತು ಪೈಸೆಯದ್ದು, ಸಂತ್ರದ ತಗಡಿನ ಹಾಳೆಯ ಮೇಲೆ ಸ್ಪಂಜಿನ ಚಕ್ರವಿರುವ ಎರೆಡು ರೂಪಾಯಿಯ, ದೊಡ್ಡ ಗಾತ್ರದ ಅತಿ ದುಬಾರಿ ರಾಖಿ.. ಬೆಲೆಗೆ ತಕ್ಕಷ್ಟು ಗಾತ್ರ, ಗಾತ್ರಕ್ಕೆ ತಕ್ಕಷ್ಟು ಖುಷಿ! ಆ ದಿನ ಸ್ವಲ್ಪ ಬೇಗ ಹೊರಟು ಜೇಬಿನಲ್ಲಿದ್ದ ಐದೋ-ಆರೋ ರುಪಾಯಿಗಳನ್ನು ಬಾಬಣ್ಣನಂಗಡಿಯಲ್ಲಿ ಬಣ್ಣ ಬಣ್ಣದ ರಾಖಿಗಳಾಗಿ ಪರಿವರ್ತಿಸಿಕೊಂಡ ಮೇಲೇ ಎಲ್ಲರೂ ಶಾಲೆಗೆ ಹೋಗುತ್ತಿದ್ದುದು. ಹುಡುಗ-ಹುಡುಗಿಯರೆನ್ನದೆ, ಮೇಷ್ಟ್ರು-ಮಿಸ್ ಗಳೆನ್ನದೆ ಎಲ್ಲರ ಕೈಗೂ ರಾಖಿ ಕಟ್ಟುವ ಮೂಲಕ ಸಂಭ್ರಮ ವರ್ಗಾವಣೆಯಾಗುತ್ತಿತ್ತು. ಕೆಲವರಂತೂ ದಿನದ ಕೊನೆಯಲ್ಲಿ ಅತಿ ಕಷ್ಟದಲ್ಲಿ ಎರೆಡು ರಾಖಿಗಳನ್ನು ಉಳಿಸಿಕೊಂಡು "ಇದು ಅಪ್ಪ-ಅಮ್ಮಂಗೆ ಕಟ್ಟಕ್ಕೆ" ಎಂದು ಜಂಭದಿಂದ ಹೇಳಿಕೊಳ್ಳುತ್ತಿದ್ದರು! ಹೀಗೆ ಪ್ರತಿಯೊಂದು ಹಬ್ಬದ ಮುಗ್ಧ ಸಂಭ್ರಮವೂ ಈ ಅಂಗಡಿಯ ಬಾಗಿಲಿನಿಂದಲೇ ಹೊರಟು ಊರಿನೆಲ್ಲ ಚಳ್ಳೆ-ಪಿಳ್ಳೆಗಳ ಮನಮನಕ್ಕೆ ರವಾನೆಯಾಗುತ್ತಿತ್ತು.

ಬಾಬಣ್ಣ ಅಪ್ಪಿತಪ್ಪಿಯೂ ಮಕ್ಕಳಿಗೆ ಕಡ(ಸಾಲ) ಕೊಡುತ್ತಿರಲಿಲ್ಲ. ಮಕ್ಕಳು ಹೇಳುವ ಸಾಲಕ್ಕೆ ಅವರ ಅಪ್ಪಂದಿರನ್ನು ಹುಡುಕುವ ತಾಪತ್ರಯವನ್ನು ಅವನು ಅಪ್ಪಿತಪ್ಪಿಯೂ ಮೈಮೇಲೆಳೆದುಕೊಳ್ಳುತ್ತಿರಲಿಲ್ಲ. ಅದೊಂದು ಮಧ್ಯಾಹ್ನ ಊಟದ ಪಿರಿಯಡ್ನಲ್ಲಿ ಗೆಳೆಯನ ಜೊತೆ ರಾಖಿ ಕೊಳ್ಳಲು ಹೋದ ನನ್ನನ್ನು ಎರೆಡು ರೂಪಾಯಿಯ, ಅರಿಶಿಣ ಬಣ್ಣದ ದೊಡ್ಡ ಸ್ಪಂಜಿನ ರಾಖಿ ಇನ್ನಿಲ್ಲದಂತೆ ಸೆಳೆದಿತ್ತು‌. ಆದರೆ ಜೇಬಲ್ಲಿದ್ದುದು ಬರೀ ಎಂಟಾಣೆಯ ಬಿಲ್ಲೆ . "ಉಳಿದ ದುಡ್ಡು ಸಂಜೆ ಅಪ್ಪ ಕೊಡ್ತಾರೆ" ಎಂದು ಆಸೆಯಿಂದ ಚಾಚಿದ ಕೈಯ್ಯನ್ನು ಒರಟಾಗಿ ತಳ್ಳಿದ ಬಾಬಣ್ಣ "ಅದೆಲ್ಲ ಆಗಲ್ಲ" ಎಂದುಬಿಟ್ಟ. ಆ ಕ್ಷಣಕ್ಕೆ ಅವಮಾನವಾಗಿ ಕಣ್ತುಂಬಿ ಬಂದಿತ್ತಾದರೂ ಮುಂದೆಂದೂ ನಾನು ಯಾವ ಅಂಗಡಿಯಲ್ಲೂ 'ಕಡ' ಹೇಳುವ ಧೈರ್ಯ ಮಾಡಲಿಲ್ಲ. ಅದು ಬಾಬಣ್ಣನಂಗಡಿ ಕಲಿಸಿದ ಜೀವಮಾನದ ಪಾಠ.

ಅಂಗಡಿಯೊಳಗೇ ಬಾಬಣ್ಣ ಚಿಕ್ಕ ಹೋಟೆಲ್ ಸಹಾ ಇಟ್ಟಿದ್ದ. ಅಲ್ಲಿ ಬೆಳಗಿನ ತಿಂಡಿಗಳಾದ ದೋಸೆ, ಇಡ್ಲಿ, ವಡೆ, ಉಪ್ಪಿಟ್ಟುಗಳ ಜೊತೆ ಸಂಜೆಯ ತುಡು ಕಳೆಯುವ ಗೋಲಿಬಜೆ, ಪಕೋಡ, ಮೆಣಸಿನಕಾಯಿ ಬಜ್ಜಿ, ಟೀ, ಕಾಫಿಗಳು ಸದಾ ಸಿದ್ಧವಾಗಿರುತ್ತಿದ್ದವು. ಸಂಜೆಯ ಹೊತ್ತಿಗೆ ಕುಳಿತು ಹರಟುವವರಿಗೆ ಬಾಬಣ್ಣನ ಅಂಗಡಿಯೆಂಬುದು ಇಂದಿನ ಟಿವಿ9 ಸ್ಟುಡಿಯೋ ಇದ್ದಂತೆ. ಊರಿನ ನುರಿತ ಅರ್ಥಶಾಸ್ತ್ರಜ್ಞರು, ರಾಜಕೀಯ ವಿಶ್ಲೇಷಕರೆಲ್ಲ ಕಚ್ಚಿದ ಮೆಣಸಿನಕಾಯಿ ಬಜ್ಜಿಯ ಖಾರಕ್ಕೆ ಸ್ssssss ಎಂದು ಬಾಯಿಯಿಂದ ಗಾಳಿ ಎಳೆದುಕೊಳ್ಳುತ್ತಾ, ಸೊರ್ರನೆ ಬಿಸಿ ಚಾ ಹೀರುತ್ತಾ ಪರ-ವಿರೋಧದ ಚರ್ಚೆಯಲ್ಲಿ ತೊಡಗುತ್ತಿದ್ದರು. ತೋಟಕ್ಕೆ ಹಂದಿ ನುಗ್ಗಿದ್ದರಿಂದ ಹಿಡಿದು ಜಾರ್ಜ್ ಬುಶ್ ಬಾಂಬು ಹಾಕಿದ್ದರ ತನಕ, ವಾಜಪೇಯಿ ಸರಕಾರ ಗೆದ್ದಿದ್ದರಿಂದ ಹಿಡಿದು ವಾಸಣ್ಣನ ಮಗಳಿಗೆ ಗಂಡು ಗೊತ್ತಾದುದರ ತನಕ ಅದೆಷ್ಟೋ ರಾಷ್ಟ್ರ, ಅಂತರಾಷ್ಟ್ರ ಮಟ್ಟದ ಸಂಗತಿಗಳೆಲ್ಲ ಅಲ್ಲಿ ಕೇವಲ ನಾಲ್ಕು ಪ್ಲೇಟು ಬೋಂಡಾ ಹಾಗೂ ಫೋರ್ ಬೈ ಟೂ ಕಾಫಿಯ ಖರ್ಚಿನಲ್ಲಿ ಚರ್ಚಿತವಾಗಿ ಪರಿಹಾರ ಕಂಡುಕೊಳ್ಳುತ್ತಿದ್ದವು. ಈ ಎಲ್ಲ ಪರ-ವಿರೋಧ ಚರ್ಚೆಗಳ ನಡುವೆ ಆ್ಯಂಕರ್ ಆಗುತ್ತಿದ್ದ ಬಾಬಣ್ಣ ಯಾವ ಕಡೆಯವರಿಗೂ ಬೇಸರವಾಗದಂತೆ, ತನ್ನ ಹೋಟೆಲ್ ನ ಮಾರನೇ ದಿನ ಸಂಜೆಯ ಗೋಲಿಬಜೆಗೆ ಯಾವೊಬ್ಬ ಗಿರಾಕಿಯೂ ಮಿಸ್ ಆಗದಂತೆ ಎಚ್ಚರಿಕೆಯಿಂದ ಇಬ್ಬರ ಪಕ್ಷದಲ್ಲಿಯೂ ಮಾತನಾಡುತ್ತಿದ್ದ. ವಾಗ್ವಾದ ತಾರಕಕ್ಕೇರುವ ಸೂಚನೆ ಕಂಡಾಗೆಲ್ಲ "ಅಣ್ಣು ಹಾಂಡ್ರ ಮನೆ ಯಮ್ಮಿ ಹೊತ್ತಿಗೆ ಐದು ಲೀಟ್ರು ಹಾಲು ಕೊಡ್ತಂಬ್ರು, ಹೌದಾ ಮರ್ರೆ?" ಎಂದು ವಿಷಯ ಬದಲಾಯಿಸಿಬಿಡುತ್ತಿದ್ದ.

ರಸ್ತೆಗಿಂತ ಎತ್ತರದಲ್ಲಿದ್ದ ಬಾಬಣ್ಣನಂಗಡಿಯ ಕಟ್ಟೆಯ ಮೇಲೆ ಕುಳಿತರೆ ಹಳ್ಳಿಯ ಸಂಜೆಯ ದೃಶ್ಯಗಳು ಕಲಾವಿದನೊಬ್ಬನ ಚಂದದ ಚಿತ್ರದಂತೆ ಕಣ್ತುಂಬಿಕೊಳ್ಳುತ್ತಿದ್ದವು. ದಿನಗೆಲಸ ಮುಗಿಸಿ ದೊಡ್ಡದಾಗಿ ಹರಟುತ್ತಾ ತಂತಮ್ಮ ಮನೆಗಳಿಗೆ ಮರಳುತ್ತಿರುವ ಗಂಡಾಳು-ಹೆಣ್ಣಾಳುಗಳು, ಬೆನ್ನಿಗೆ ಬ್ಯಾಗು ತಗುಲಿಸಿಕೊಂಡು ಚಿಲಿಪಿಲಿಗುಟ್ಟುತ್ತಾ ಪುಟಪುಟನೆ ಓಡುವ ಶಾಲೆಯ ಮಕ್ಕಳು, ಪಟ್ಟಣದಿಂದ ಮರಳುವವರನ್ನು ತುಂಬಿಕೊಂಡು ಗಂಟೆಗೊಂದರಂತೆ ವಾಲಾಡುತ್ತಾ ಉಸ್ಸೋ ಎಂದು ಏರು ಹತ್ತಿ ಬರುವ ಬಸ್ಸುಗಳು, ಅದರಿಂದಿಳಿದ ಜಂಭದ ನಡಿಗೆಯ ಕಾಲೇಜು ಹುಡುಗಿಯರು, ಅವರನ್ನು ಹಿಂಬಾಲಿಸುವ ನೇತಾಡುವ ಬ್ಯಾಗಿನ ಹುಡುಗರು, ಪೇಟೆಗೆ ರಿಪೇರಿ ಮಾಡಿಸಲೆಂದು ಒಯ್ದಿದ್ದ, ತೋಟಕ್ಕೆ ಔಷಧಿ ಹೊಡೆಯುವ ಮೆಶಿನ್ನನ್ನು ಹೊತ್ತು ಮನೆಯೆಡೆಗೆ ನಡೆಯುತ್ತಿರುವ ದ್ಯಾಮೇಗೌಡರು, ಇರುವ ಕಾಲುಭಾಗ ರಸ್ತೆಯ ಮುಕ್ಕಾಲುಭಾಗವನ್ನು ಆಕ್ರಮಿಸಿಕೊಂಡು, ಪಿಡಬ್ಲುಡಿಯವರೂ ನಾಚುವಂತೆ ರಸ್ತೆಯನ್ನಳೆಯುತ್ತ ನಡೆಯುವ ಪಾನಮತ್ತ 'ಮಧು'ಲೋಕ ಚಕ್ರವರ್ತಿಗಳು, ಕೆಮ್ಮೋಡಗಳ ಹಿನ್ನಲೆಯಲ್ಲಿ ಹಾರುತ್ತಾ ದೂರ ದಿಗಂತದಲ್ಲೆಲ್ಲೋ ಮರೆಯಾಗಿ ಹೋಗುವ ಹಕ್ಕಿಗಳು, ಅದೇ ಹಾದಿಯಲ್ಲಿ ಕೊನೆಗೆ ತಾನೂ ಮುಳುಗಿಹೋಗುವ ಸೂರ್ಯ... ಹಳ್ಳಿ ಪರಿಸರದ ಪರದೆಯ ಮೇಲೆ ಮೂಡುವ ಪ್ರತಿ ದೃಶ್ಯಕ್ಕೂ ಈ ಅಂಗಡಿ ಕಟ್ಟೆಯೇ ಬಾಲ್ಕನಿ ಸೀಟು. ಕವಿದ ಕತ್ತಲ ನಡುವೆ ಚಲಿಸುವ ಬೆಳಕಿನ ಡಬ್ಬದಂತೆ ಸಾಗಿಬಂದ, ಪಟ್ಟಣದಿಂದ ಬರುವ ಕಟ್ಟಕಡೆಯ ಬಸ್ಸಾದ ಗಾಯತ್ರೀ ಬಸ್ಸೂ ಶೆಡ್ಡು ಸೇರಿದಾಗ ಬಾಬಣ್ಣ ಆಕಳಿಸುತ್ತ ಮೇಲೇಳುತ್ತಿದ್ದ. ಅದೇ ಬಸ್ಸಿಗೆ ಬಂದಿಳಿದವನ್ಯಾರನ್ನೋ "ಕಾಮತ್ ಬಸ್ಸು ತಪ್ಸಿಕೊಂಡ್ಯನೋ" ಎಂದು ಕೇಳುತ್ತ, ಈ ಊರಿಗೆ ಮದುವೆಮಾಡಿಕೊಟ್ಟ ತನ್ನ ಮಗಳನ್ನು ನೋಡಲೆಂದು ದೂರದೂರಿನಿಂದ ಬಂದಿಳಿದ ಹೆಸರು ಗೊತ್ತಿಲ್ಲದ ಹಿರಿಯರನ್ನು "ಏನು ಭಟ್ರೇ, ಅರಾಮಾ?" ಎಂದು ಕುಶಲ ವಿಚಾರಿಸುತ್ತ ಅಂಗಡಿಯ ಬಾಗಿಲು ಮುಚ್ಚುತ್ತಿದ್ದ. ಒಳಗಡೆ ಮಾರಾಟವಾಗದ ಚಾಕ್ಲೇಟು, ಸಿಹಿತಿಂಡಿ, ಆಟಿಕೆಗಳೆಲ್ಲ ಮರುದಿನ ತಮ್ಮನ್ನರಸಿ ಬರಲಿರುವ ಚಿಣ್ಣರಿಗಾಗಿ ಕಾಯುತ್ತ ತಂತಮ್ಮ ಭರಣಿಗಳೊಳಗೆ ನಿದ್ರೆಗೆ ಜಾರುತ್ತಿದ್ದವು.

(ತುಷಾರದ ಫೆಬ್ರವರಿ 2018ರ ಸಂಚಿಕೆಯಲ್ಲಿ ಪ್ರಕಟಿತ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...