"ಅವಳನ್ನು ನಾನು ಪ್ರೀತಿಸುತ್ತಿದ್ದೇನೆ!"
ಚಂದದ ಘಳಿಗೆಯೊಂದರಲ್ಲಿ ಅವನು ಹಾಗಂತ ನಿರ್ಧರಿಸಿಬಿಡುತ್ತಾನೆ.ಆದರೆ ತನ್ನ ಬಾಳಿನ ಮುಂಬರುವ ಅದೆಷ್ಟೋ ಸಮಯದ ತನಕ ಪ್ರತಿ ಕ್ಷಣದಲ್ಲೂ ತನ್ನನ್ನು ಕಾಡಲಿರುವ, ಅತ್ತ ಸಾಯಿಸಲೂ ಆಗದ, ಇತ್ತ ಬದುಕಲೂ ಬಾರದ ರೋಗಗ್ರಸ್ತ ಮಗುವೊಂದನ್ನ ತಾನು ಸೃಷ್ಟಿಸುತ್ತಿದ್ದೇನೆಂಬ ಸಣ್ಣ ಕಲ್ಪನೆಯೂ ಅವನಿಗಿರುವುದಿಲ್ಲ. ಯಾಕೆ ಪ್ರೀತಿಸುತ್ತಿದ್ದೇನೆ? ಅವಳಲ್ಲಿ ಅಂತಹದ್ದೇನಿದೆ? ಅವಳೂ ನನ್ನನ್ನ ಇಷ್ಟಪಡುತ್ತಾಳಾ? ಅವಳೇನಾದರೂ ಒಪ್ಪದೇ ಹೋದರೆ ಮುಂದೇನು?
ಈ ಪ್ರೆಶ್ನೆಗಳಲ್ಲಿ ಒಂದನ್ನಾದರೂ ಪ್ರೀತಿಸುವ ಮುನ್ನ ಅವನು ತನ್ನಲ್ಲಿ ತಾನು ಕೇಳಿಕೊಂಡಿರುವುದಿಲ್ಲ. ಅವಳ ಮನಸ್ಸೆನ್ನುವ ಆಳ ಅರಿಯದ ಕೊಳದೆಡೆಗೆ ಹುರುಪಿನಿಂದ ಮೊದಲ ಹೆಜ್ಜೆಯಿಡುವಾಗ, ಅವಳೇನಾದರೂ 'ಇಲ್ಲ' ಅಂದರೆ ನಿನ್ನೆಯ ತನಕ ತಾನು ಬದುಕಿದ್ದ, ಅವಳ ನೆರಳೂ ಇಲ್ಲದ ಅದೇ ಹಳೆಯ ಬದುಕಿಗೆ ಇಷ್ಟೇ ಹುರುಪಿನಿಂದ ಮರಳಿ ಬರುವುದು ತನ್ನಿಂದ ಸಾಧ್ಯವಾ ಅಂತ ಅವನು ಒಮ್ಮೆಯೂ ಯೋಚಿಸುವುದಿಲ್ಲ.ಮುದ್ದೆನಿಸುವ ಅವಳ ಮುಖ, ಸೆಳೆಯುವ ಮುಗುಳ್ನಗು, ಹಿತವಾದ ಮಾತು ಇವನ್ನೆಲ್ಲ ಮತ್ತೆ ಮತ್ತೆ ನೋಡುತ್ತಾ, ಸವಿಯುತ್ತಾ ತನ್ನ ಯೋಚನೆಗೆಳ ಪ್ರತಿ ಸೆಕೆಂಡಿನ ಲಕ್ಷದೊಂದನೇ ಭಾಗದಲ್ಲೂ ಅವಳನ್ನೇ ತುಂಬಿಕೊಂಡು ಬಿಡುತ್ತಾನೆ. ಎಷ್ಟೋ ಸಲ ಮುಂಜಾವಿನ ಕನಸುಗಳಲ್ಲಿ ಬಂದು ತನ್ನನ್ನು ಮುದ್ದಿಸಿಹೋಗಿದ್ದ, ಎಚ್ಚರವಾದ ನಂತರವೂ ಸಿಹಿಯಾದ ಅನುಭೂತಿ ಉಳಿಸಿ ಹೋಗಿದ್ದ ಆ ದಿವ್ಯ ರೂಪ ಇವಳದೇ ಎಂದು ನಂಬುತ್ತಾನೆ!
ಇದೆಲ್ಲದರ ಒಟ್ಟಾರೆ ಪರಣಾಮವಾಗಿ ತಾನವಳನ್ನ ಪ್ರೀತಿಸುತ್ತಿದ್ದೇನೆ ಎನ್ನುವ ನಿರ್ಧಾರಕ್ಕೆ ಬರುತ್ತಾನೆ. ಹಾಗೆ ನಿರ್ಧರಿಸುವುದಕ್ಕೆ ಅವಳ ಒಪ್ಪಿಗೆಯೇನೂ ಬೇಕಿಲ್ಲವಲ್ಲ! ಆದರೆ ಆ ಪ್ರೀತಿಯನ್ನು ಪಡೆಯಬೇಕೆಂದಾಗಲೇ ಶುರುವಾಗುವುದು ನಿಜವಾದ ಒದ್ದಾಟ. ಅವಳ ಮನಸ್ಸಿನಲ್ಲೇನಿದೆಯೋ ಗೊತ್ತಿಲ್ಲ. ಅವಳ ಇಷ್ಟ, ಕಷ್ಟಗಳ ಪರಿಚಯವಿಲ್ಲ. ಇಂದಿನ ತನಕ ಅವಳಂತರಂಗದಲ್ಲಿ ಇಲ್ಲದ ತನ್ನನ್ನು ಅಲ್ಲಿಗೆ ಪರಿಚಯಿಸಿ, ಪ್ರತಿಷ್ಠಾಪಿಸುವುದಲ್ಲದೇ ಅವಳ ಎಲ್ಲಾ ನಾಳೆಗಳನ್ನೂ ತನಗಾಗೇ ಮೀಸಲಿಡುವಂತೆ ಮಾಡಬೇಕು!!
ಹೇಗೆ?
ತಾನು ಇದ್ದಂತೆಯೇ ಇರಬೇಕ ಅಥವಾ ಬದಲಾಗಬೇಕಾ? ಬದಲಾಗಬೇಕೆಂದರೆ ಯಾವ ರೀತಿಯಲ್ಲಿ ಬದಲಾಗಬೇಕು? ಏನು ಮಾಡಿದರೆ ಅವಳಿಗೆ ಇಷ್ಟವಾಗುತ್ತದೆ? ಹೀಗೆ ಹತ್ತಾರು ಪ್ರಶ್ನೆಗಳನ್ನ ಮನಸ್ಸಿನೊಳಗಿಟ್ಟುಕೊಂಡೇ ಅವಳಿಗೆ ಹತ್ತಿರವಾಗುವ ಪ್ರಯತ್ನ ಮಾಡುತ್ತಾನೆ. ಮೊದಮೊದಲು ಸಮಯ, ಅದೃಷ್ಟಗಳು ಅವನ ಪರವಾಗಿಯೇ ಇರುತ್ತವೆ. ಅವನನ್ನು ಮತ್ತಷ್ಟು ಮೋಹಿತನನ್ನಾಗಿಸುವ ಅವಳ ಮುಗುಳ್ನಗು, ಸ್ನೇಹ, ಸವಿಯಾದ ಮಾತು ಎಲ್ಲವೂ ಅವನಿಗೆ ದೊರೆಯುತ್ತವೆ. ಎಲ್ಲೇ ಹೊರಟುನಿಂತರೂ ಮತ್ತೆ ಮತ್ತೆ ಅವಳೇ ಎದುರಾದಾಗ, ಗುಂಪಿನ ನಡುವಿನಿಂದಲೂ ತನಗೆ ಮಾತ್ರವೇನೋ ಎಂಬಂತಹ ಮುಗುಳ್ನಗು ಬೀರಿದಾಗ, ಅವಳು ತನಗಾಗೇ ಬಂದಿದ್ದಾಳೆ, ತನಗೆ ಸಿಕ್ಕೇ ಸಿಗುತ್ತಾಳೆ ಎಂದೆಲ್ಲ ಭ್ರಮಿಸಿ ಪುಳಕಗೊಳ್ಳುತ್ತಾನೆ.
ಸಮಯ ಓಡುತ್ತಿದೆ. ಹೃದಯದಾಳದಲ್ಲಿ ಅರಳಿ ತೊನೆದಾಡುತ್ತಿರುವ ನೂರಾರು ಭಾವಪುಷ್ಪಗಳ ಪೈಕಿ ಒಂದನ್ನಾದರೂ ಕೊಯ್ದು ಅವಳೆದುರು ಹಿಡಿಯಬೇಕೆಂದುಕೊಂಡರೂ ಮನಸ್ಸು ಮಾತ್ರ ಅವಳು ಎದುರು ಬಂದಾಗ ಆಟಿಕೆಯಂಗಡಿಯೆದುರು ಮೈಮರೆತ ಮಗುವಾಗಿಬಿಡುತ್ತದೆ. ಅದರ ಹಣೇಬರಹವೇ ಅಷ್ಟು! ತನ್ನೊಳಗಿನ ಉತ್ಕಟವಾದ ಹಂಬಲಗಳನ್ನದು ಮಾತಿನ ರಾಜಬೀದಿಗೆ ಹರಿಯಬಿಡುವುದೇ ಇಲ್ಲ.
ಹೊರಗೆ ಮೌನ ಹೆಚ್ಚಿದಷ್ಟೂ ಅಂತರಾಳದ ಒದ್ದಾಟಗಳು ಇಮ್ಮಡಿಯಾಗುತ್ತವೆ. ಅವಳದೊಂದು ನಗುವಿಗಾಗಿ ಹಾತೊರೆಯುತ್ತಾನೆ.ಸಣ್ಣದೊಂದು ಮಾತಿಗಾಗಿ ನೆಪಗಳನ್ನು ಹುಡುಕುತ್ತಾ ಅಲೆದಾಡುತ್ತಾನೆ.ಅವಳು ಓಡಾಡುವ ದಾರಿಯಲ್ಲಿ ಲೆಕ್ಕವಿಲ್ಲದಷ್ಟು ಸಮಯ ಕಾಯುತ್ತಾ ನಿಂತುಬಿಡುತ್ತಾನೆ.ಅವಳೊಮ್ಮೆ ನಕ್ಕರೂ ಸಾಕು, ಆ ನಗು ಅವನ ಇಡೀ ದಿನವನ್ನ ಉಲ್ಲಾಸಮಯವಾಗಿಸುತ್ತದೆ. ಅದೇ ಅವಳ ಚಿಕ್ಕದೊಂದು ಕಡೆಗಣಿಕೆ ದಿನಪೂರ್ತಿ ಅವನು ಒದ್ದಾಡುವಂತೆ ಮಾಡಿಬಿಡುತ್ತದೆ. ಹೀಗೆ ಒಮ್ಮೆ ಆತ್ಮೀಯವೆನಿಸಿ, ಮತ್ತೊಮ್ಮೆ ತೀರಾ ಸಾಮಾನ್ಯವೆನಿಸುವ ಅವಳ ವರ್ತನೆ ಉತ್ತರ ಹೊಳೆಯದ ಒಗಟಾಗಿ ಕಾಡತೊಡಗುತ್ತದೆ. ಪ್ರೀತಿಯನ್ನ ಹೇಳಿಬಿಡಬೇಕೋ ಅಥವಾ ಇನ್ನೂ ಕಾಯಬೇಕೋ ತಿಳಿಯುವುದಿಲ್ಲ. ಅಷ್ಟರಲ್ಲಿ ಇನ್ಯಾರೋ ಅವಳಿಗೆ ಹತ್ತಿರವಾಗುತ್ತಿದ್ದಾರೆನ್ನುವ ಆತಂಕವೊಂದು ಹುಟ್ಟಿನಿಲ್ಲುತ್ತದೆ. ತಡಮಾಡದರೆ ಎಲ್ಲಿ ಕಣ್ಣೆದರೇ ತನ್ನ ಪ್ರೀತಿ ಕೈತಪ್ಪಿ ಹೋಗುತ್ತದೋ ಎಂದು ಭಯಪಡುತ್ತಾನೆ. ಏನಾದರಾಗಲಿ, ಹೇಳಿಯೇಬಿಡೋಣವೆಂಬ ನಿರ್ಧಾರಕ್ಕೆ ಬರುತ್ತಾನೆ.
ಖಾಲಿ ಗೋಡೆಯೆದುರು ಅವಳನ್ನ ಕಲ್ಪಿಸಿಕೊಂಡು ಪ್ರೀತಿ ಹೇಳಿಕೊಳ್ಳುತ್ತಾನೆ. ಅವಳೂ ತನ್ನನ್ನು ಒಪ್ಪಿದಂತೆ ಹಗಲುಗನಸು ಕಾಣುತ್ತಾ ಪುಳಕಗೊಳ್ಳುತ್ತಾನೆ. ಅವಳೊಡನೆ ಸುಂದರ ನಾಳೆಗಳನ್ನ ಕಳೆದಂತೆ ಭ್ರಮೆ ಪಡುತ್ತಾನೆ. ಸುಮ್ಮನೇ ಸಂಭ್ರಮಿಸುತ್ತಾನೆ, ಮರುಕ್ಷಣವೇ ಮೌನಿಯಾಗುತ್ತಾನೆ. ಕೊನೆಗೊಂದು ದಿನ ತನ್ನೆಲ್ಲಾ ಧೈರ್ಯವನ್ನ ಒಗ್ಗೂಡಿಸಿ ಇಷ್ಟು ದಿನ ತನ್ನಂತರಾಳದಲ್ಲಿ ಮುಚ್ಚಿಟ್ಟುಕೊಂಡಿದ್ದ ಮಾತುಗಳನ್ನೆಲ್ಲಾ ತೊದಲುತ್ತಾ, ತಡವರಿಸುತ್ತಾ ಅವಳೆದುರು ಹೇಳಿಯೇಬಿಡುತ್ತಾನೆ..
ಒಮ್ಮುಖ ಒಲವೆನ್ನುವ ಪ್ರತಿಫಲ ದೊರೆಯದ ಪ್ರೀತಿಯಲ್ಲಿ ಅಂದುಕೊಂಡಂತೆ ನಡೆಯುವುದು ಆರಂಭದಲ್ಲಿ ಮಾತ್ರ! ಎರೆಡನೇ ಮಾತಿಗೆ ಅವಕಾಶವೇ ಇಲ್ಲದಂತೆ ಅವನ ಬಿನ್ನಹವನ್ನವಳು ತಿರಸ್ಕರಿಸಿಬಿಡುತ್ತಾಳೆ. ನಿನ್ನೆಡೆಗೆ ಅಂತಹ ಭಾವನೆಗಳೇ ಇಲ್ಲ ಎನ್ನುತ್ತಾಳೆ. ಗೆಳೆಯನಾಗಿದ್ದುಬಿಡುವಂತೆ ಉಪದೇಶಿಸಿ ನಡುರಸ್ತೆಯಲ್ಲಿ ಈಗಷ್ಟೇ ಒಡೆದ ಹೃದಯವನ್ನ ಹಿಡಿದು, ಅನಾಥನಂತೆ ನಿಂತಿರುವ ಅವನೆಡೆ ತಿರುಗಿಯೂ ನೋಡದೇ ನಡೆದುಬಿಡುತ್ತಾಳೆ. ಮುಂಬರಲಿರುವ ಸರಣಿ ನೋವುಗಳ ಸಾಲಿನ ಮೊದಲ ಪೆಟ್ಟು ಹಾಗೆ ಬಿದ್ದಿರುತ್ತದೆ.
ಮರುದಿನದಿಂದ ಅವಳ ವರ್ತನೆಯೇ ಬದಲಾಗುತ್ತದೆ. ಪರಸ್ಪರ ಎದುರುಬದುರಾದಾಗ ಅವಳ ಮುಖದಲ್ಲರಳುತ್ತಿದ್ದ ಮುಗುಳ್ನಗು ಆತ್ಮಹತ್ಯೆ ಮಾಡಿಕೊಂಡಿರುತ್ತದೆ. ಅವನಾಗಿ ಮಾತನಾಡಿಸಿದರೂ ಅವಳಿಂದ ಉತ್ತರವಿರುವುದಿಲ್ಲ. ಉತ್ತರಿಸಿದರೂ ಅದು ತೀರ ಕೃತಕವಾಗಿರುತ್ತದೆ. ಅವನಿರುವ ಯಾವುದೇ ಜಾಗದಲ್ಲಿ ಅವಳು ತಪ್ಪಿಯೂ ಸುಳಿಯುವುದಿಲ್ಲ. ಅವನ್ಯಾರೋ ರಸ್ತೆಯಲ್ಲೆದುರಾದ ಅಪರಿಚಿತನೆಂಬಂತೆ ವರ್ತಿಸತೊಡಗುತ್ತಾಳೆ.
ಅವನು ಅಕ್ಷರಷಃ ತತ್ತರಿಸಿಹೋಗುತ್ತಾನೆ. ಇಲ್ಲದ ಪ್ರೀತಿಯನ್ನ ಪಡೆಯಲು ಹೋಗಿ ನಿನ್ನೆಯ ತನಕ ಇದ್ದ ಕನಿಷ್ಟ ಸ್ನೇಹವನ್ನೂ ಕಳೆದುಕೊಂಡೆನಲ್ಲ ಎಂದು ಪರಿತಪಿಸುತ್ತಾನೆ. ತುಂಡಾದ ಬೆಸುಗೆಯನ್ನ ಮತ್ತೆ ಹೆಣೆಯಲು ಒದ್ದಾಡುತ್ತಾನೆ, ಕಾಡಿಬೇಡುತ್ತಾನೆ. ಜೀವನೋತ್ಸಾಹವೇ ಬತ್ತಿ ಹೋದ ಬಂಜರಿನಂತೆ ಸುಡು ವೇದನೆಯಲ್ಲಿ ಬೇಯುತ್ತಾ ತನ್ನನ್ನು ತಾನೇ ಶಿಕ್ಷಿಸಿಕೊಳ್ಳುತ್ತಾನೆ. ಅವಳು ಮಾತ್ರ ಇದ್ಯಾವುದರ ಅರಿವೇ ಇಲ್ಲದಂತೆ ಆರಾಮವಾಗಿರುತ್ತಾಳೆ. ಏನೂ ನಡೆದೇ ಇಲ್ಲವೆಂಬಂತೆ ಎಲ್ಲರೊಂದಿಗೆ ಎಂದಿನಂತೆ ನಕ್ಕು ಮಾತನಾಡಿಕೊಂಡಿರುತ್ತಾಳೆ, ಅವನೊಬ್ಬನ ಹೊರತಾಗಿ....!
ಅವಳ ಸ್ನೇಹದ ಪರಿಧಿಯಿಂದ ಉಚ್ಛಾಟಿಸಲ್ಪಟ್ಟ ಅವನ ವೇದನೆ ಮೇರೆ ಮೀರುತ್ತದೆ. ಪ್ರಪಂಚದ ಪ್ರತಿಯೊಂದು ಸಂಗತಿಯೂ ಅವಳನ್ನೇ ನೆನಪಿಸಿ ಹೃದಯ ಹಿಂಡತೊಡಗುತ್ತದೆ. ಅವಳೊಂದಿಗೆ ನಕ್ಕ, ಮಾತನಾಡಿದ, ಜೊತೆನಡೆದ ನೆನಪುಗಳೆಲ್ಲ ಇರಿಯುವ ಮುಳ್ಳುಗಳಾಗಿಬಿಡುತ್ತವೆ. ಇಂತಹಾ ಪ್ರಕ್ಷುಬ್ಧ ಮನಸ್ತಿಥಿಯಲ್ಲೇ ಮತ್ತೆ ಮತ್ತೆ ಅವಳಿಗೆ ಹತ್ತಿರವಾಗುವ ವಿಫಲ ಪ್ರಯತ್ನಗಳಲ್ಲಿ ತೊಡಗುತ್ತಾನೆ. ಆದರೆ ಅವೆಲ್ಲವೂ ಅವನನ್ನ ಅವಳಿಂದ ಮತ್ತಷ್ಟು ದೂರಕ್ಕೇ ಒಯ್ಯುತ್ತವೆ. ಅವಳನ್ನ ಗೆಲ್ಲಲಾರದೇ ಹೋದ ತನ್ನ ಬಗ್ಗೆ ಇನ್ನಿಲ್ಲದಂತೆ ಕೀಳರಿಮೆಗೊಳಗಾಗುತ್ತಾನೆ. ಇದು ಬರೀ ತನ್ನ ಸೋಲಲ್ಲ, ಇಡೀ ತನ್ನ ವ್ಯಕ್ತಿತ್ವದ ಪರಾಜಯವೆಂಬಮಟ್ಟಿಗೆ ನಿರಾಶನಾಗುತ್ತಾನೆ. ಗುಂಪಿನ ನಡುವೆಯೂ ಏಕಾಂಗಿಯಾಗುತ್ತಾನೆ. ಅದರೂ ಹೃದಯ ಮಾತ್ರ ಸೋಲೊಪ್ಪುವುದಿಲ್ಲ. ಇಂದಲ್ಲ ನಾಳೆ ಅವಳು ತನನ್ನು ಒಪ್ಪುವ ದಿವ್ಯ ಘಳಿಗೆಯೊಂದು ಬಂದೀತೆಂಬ ಕುಟುಕು ಆಸೆಯೊಂದನ್ನ ಅವನಲ್ಲಿ ಉರಿಸುತ್ತಾ, ವೇದನೆಗಳಲ್ಲೇ ದಿನದೂಡುವಂತೆ ಮಾಡುತ್ತದೆ. ಹಿಂಬಾಲಿಸುವ ಅವನು, ಹಿಂದಿರುಗಿ ನೋಡದ ಅವಳು, ಹೀಗೆ ಮುಂದುವರಿಯುತ್ತದೆ ಈ ಒಮ್ಮುಖ ಪಯಣ...
ಬಹುತೇಕ ಒಮ್ಮುಖ ಪ್ರೀತಿಯ ಕಥೆಗಳಲ್ಲಿ ನಡೆಯುವುದು ಇದೇ. ಪ್ರೀತಿಯ ಅತ್ಯಂತ ಯಾತನಾಮಯ ಅಧ್ಯಾಯವೆಂದರೆ ಈ ಒಮ್ಮುಖ ಒಲವು..... ದಿ ಒನ್ ಸೈಡೆಡ್ ಲವ್. ಹಗಲಿರುಳು ಹಾತೊರೆದು, ಹಂಬಲಿಸಿ, ಅಂತರಾಳದಲ್ಲಿ ದೇವತೆಯಂತೆ ಅರ್ಚಿಸಿದ ವ್ಯಕ್ತಿ ತನ್ನೆಡೆ ತಿರುಗಿಯೂ ನೋಡದೇ ಹೋಗುವ ದುರಂತಮಯ ಸ್ಥಿತಿಯಿದು. ಇಲ್ಲಿ ಯಾರ ತಪ್ಪೂ ಇಲ್ಲವಾದರೂ ಪ್ರೀತಿಸಲ್ಪಟ್ಟ ವ್ಯಕ್ತಿಯ ತಿರಸ್ಕಾರ ಪ್ರೀತಿಸಿದವರ ಪಾಲಿಗೆ ಶಿಕ್ಷೆಗಳ ಸರಮಾಲೆಯಾಗುತ್ತದೆ.
ಆಸೆಯಿಂದ ಕಟ್ಟಿಕೊಂಡ ನಂಬಿಕೆಯ ಸೌಧದ ಕಟ್ಟಕಡೆಯ ಸ್ತಂಭವೂ ನೆಲಕ್ಕುರುಳಿ, ಇನ್ನಿಲ್ಲದಂತೆ ತಿರಸ್ಕರಿಸಲ್ಪಟ್ಟಮೇಲೂ, ಯಾವುದೋ ಪವಾಡವೊಂದು ನಡೆಯಬಹುದೆಂಬ ಸಣ್ಣ ಆಸೆಯೊಂದು ಉಳಿದಿರುತ್ತದಲ್ಲಾ, ಆದೇ ಈ ಎಲ್ಲಾ ವೇದನೆಗಳ ಮೂಲ. ಆ ಆಸೆ ಪ್ರತಿ ಬಾರಿಯೂ ಪೆಟ್ಟು ತಿನ್ನುತ್ತಲೇ ಇರುತ್ತದೆ, ಮತ್ತೆ ಏಳುತ್ತಲೇ ಇರುತ್ತದೆ. ನನಸಾಗುವುದಿಲ್ಲವೆಂದು ಗೊತ್ತಿದ್ದರೂ ಕೆಲವೊಂದು ಕನಸುಗಳನ್ನು ಜೀವಂತವಾಗಿಟ್ಟುಕೊಂಡು ಬದುಕುತ್ತೇವಲ್ಲ, ಬಹುಷಃ ಇದರಂತಹ ನೋವು ಮತ್ತೊಂದಿಲ್ಲ. ಇಂದಿನ ತನಕ ತಾನು ಉಸಿರಾಡಿಕೊಂಡುಬಂದಿದ್ದ ಭರವಸೆಯೊಂದು ಮುಂದಿನ ಕ್ಷಣದಿಂದ ತನ್ನ ಪಾಲಿಗಿಲ್ಲ ಎನ್ನುವ ಕಟು ಸತ್ಯವನ್ನ ಮನಸ್ಸು ಅರಗಿಸಿಕೊಳ್ಳದಾಗುತ್ತದೆ. ತಾನು ಮಾಡದ ತಪ್ಪನ್ನ ತಿದ್ದಿಕೊಳ್ಳಲೆಂದು ಒದ್ದಾಡುತ್ತದೆ. ಪ್ರತಿ ಪ್ರಯತ್ನದ ಫಲವಾಗಿ ಹತಾಶೆ, ನಿರಾಶೆಗಳನ್ನೇ ಪಡೆಯುತ್ತದೆ.
ಇಲ್ಲಿ ಅರ್ಥಮಾಡಿಕೊಳ್ಳಬೇಕಾದ ಮುಖ್ಯ ಸಂಗತಿಯೆಂದರೆ ತನ್ನಿಂದಾಗುವ ಪ್ರಯತ್ನಗಳನ್ನೆಲ್ಲ ಅವನು ಮಾಡಿಯಾಗಿದೆ. ಅವನ ಹಿಡಿತದಲ್ಲಿರದ ಸಂಗತಿಗಳಿಗೆ ಅವನು ಏನು ತಾನೇ ಮಾಡಲು ಸಾಧ್ಯ? ತನ್ನ ಸನಿಹವನ್ನ ಇಷ್ಟಪಡದ ವ್ಯಕ್ತಿಯ ಹಿಂದೆ ಬೀಳುವುದರಿಂದ, ಅವರನ್ನ ಬಲವಂತವಾಗಿ ಮಾತಿಗೆಳೆಯುವುದರಿಂದ ಅವರಿಗೆ ಮತ್ತಷ್ಟು ಕಿರಿಕಿರಿಯಾಗುತ್ತದೇ ಹೊರತು, ಅಲ್ಲಿ ಆತ್ಮೀಯತೆ ಹುಟ್ಟಲಾರದು. ಅಲ್ಲದೇ ಅವರ ಪ್ರತಿಯೊಂದು ನಕಾರಾತ್ಮಕ ಪ್ರತಿಕ್ರಿಯೆಯೂ ಅವನನ್ನ ನೋವಿನಾಳಕ್ಕೇ ನೂಕುತ್ತದೆ. ತಾನು ಹೀಗಿರದೇ ಹಾಗಿದ್ದಿದ್ದರೆ ಅವಳಿಗೆ ಇಷ್ಟವಾಗುತ್ತಿತ್ತೇನೋ, ತನ್ನ ಭಾವನೆಗಳನ್ನ ಬೇರೆ ರೀತಿಯಲ್ಲಿ ಹೇಳಿಕೊಂಡಿದ್ದರೆ ಅವಳು ಒಪ್ಪುತ್ತಿದ್ದಳೇನೋ ಎಂಬುದೆಲ್ಲ ತೀರಾ ಅಸಂಬದ್ಧ ಯೋಚನೆಗಳು. ಇದ್ದುದ್ದನ್ನ ಇದ್ದಂತೆಯೇ ಇಷ್ಟಪಡುವುದೇ ನಿಜವಾದ ಪ್ರೀತಿ. ನಡೆದು ಹೋದದ್ದನ್ನ ಬದಲಾಯಿಸಲು ಸಾಧ್ಯವಿಲ್ಲ. ಹೀಗೆ ಕಳೆದುದರ ಬಗ್ಗೆಯೇ ಕೊರಗುತ್ತಿರುವುದು ಅವನನ್ನ ದೈಹಿಕವಾಗಿ, ಮಾನಸಿಕವಾಗಿ ಮತ್ತಷ್ಟು ಕೃಷವಾಗಿಸುತ್ತದೆಯೇ ಹೊರತು ಅದರಿಂದ ನಯಾಪೈಸೆಯಷ್ಟೂ ಪ್ರಯೋಜನವಾಗಲಾರದು. ಹತಾಶೆ, ದುಃಖಗಳಲ್ಲಿ ವ್ಯಯಿಸಿದ ಸಮಯದಷ್ಟು ದೊಡ್ಡ ನಷ್ಟ ಮತ್ತೊಂದಿಲ್ಲ! ಇಂದಿನ ದಾರಿಯಲ್ಲಿ ಅದೆಷ್ಟೇ ದೊಡ್ಡ ಮುಳ್ಳು ಕಾಲಿಗೆ ನಾಟಿದರೂ ಸಾವರಿಸಿಕೊಂಡು, ಹೊಸ ಹುರುಪಿನೊಂದಿಗೆ ನಾಳೆಯ ಪಯಣಕ್ಕೆ ಅಣಿಯಾಗಲೇಬೇಕು.
ಅಷ್ಟಕ್ಕೂ ಪ್ರೀತಿಗೆ ಬದಲಾಗಿ ಪ್ರೀತಿಯೇ ದೊರೆಯಬೇಕೆಂದೂನೂ ಇಲ್ಲವಲ್ಲ. ಪ್ರಯತ್ನಕ್ಕೆ ತಕ್ಕ ಪ್ರತಿಫಲವನ್ನು ಕೇಳುವುದಕ್ಕೆ ಇದೇನೂ ವ್ಯವಹಾರ ಅಲ್ಲವಲ್ಲ! 'ಅವಳೆಂದರೆ ನನಗಿಷ್ಟ, ಪ್ರೀತಿಸುತ್ತೇನೆ. ನನ್ನನ್ನ ಇಷ್ಟಪಡುವುದು, ಬಿಡುವುದು ಅವಳಿಗೆ ಬಿಟ್ಟ ವಿಷಯ' ಅಂದುಕೊಂಡು ಪ್ರೀತಿಸಲಿಕ್ಕಾಗುವುದಿಲ್ಲವಾ? ಪರಿಶುದ್ಧವಾದ ಪ್ರತಿಯೊಂದು ಪ್ರೇಮವೂ ಇಂದಲ್ಲ ನಾಳೆ, ಯಾವುದೋ ಒಂದು ರೂಪದಲ್ಲಿ ಸಾಕ್ಷಾತ್ಕಾರವಾಗಿಯೇ ತೀರುತ್ತದೆಂಬ ಸಣ್ಣ ನಂಬಿಕೆಯೊಂದಿದ್ದರೆ ಸಾಲದೇ?
ಒಮ್ಮುಖ ಒಲವೆನ್ನುವುದೊಂದು ಪವಿತ್ರವಾದ ಭಾವನೆ. ಇಲ್ಲಿ ಅಸಂಖ್ಯ ನೋವುಗಳ ನಡುವೆಯೂ ವಿವರಿಸಲಾಗದ ಸಾರ್ಥಕತೆಯೊಂದಿದೆ. ಎಂದೆಂದಿಗೂ ತನ್ನವರಾಗದ ವ್ಯಕ್ತಿಯೊಬ್ಬರ ನೋವು, ನಲಿವುಗಳಿಗೆ ಮಿಡಿಯುವ, ಅವರು ಸದಾ ಖುಷಿಯಾಗಿರಲೆಂದು ಹಾರೈಸುವ ಉದಾತ್ತ ಪ್ರೇಮವಿದೆ. ಗೆಲುವು, ಸೋಲುಗಳಾಚೆಗೆ ಆ ಪ್ರೀತಿಯನ್ನು ಆರಾಧಿಸುವ ನಿರ್ಮಲ ಮನಸ್ಸಿದೆ. ಪ್ರೀತಿಸಿ ಸೋತಿದ್ದೇವೆ, ಇರಲಿ; ಇದು ದ್ವೇಶಿಸಿ, ಮೋಸಮಾಡಿ ಗೆಲ್ಲುವಷ್ಟು ಕೆಟ್ಟದ್ದೇನೂ ಅಲ್ಲವಲ್ಲ?!!
('ನಿಮ್ಮೆಲ್ಲರ ಮಾನಸ'ದಲ್ಲಿ ಪ್ರಕಟವಾದ ಬರಹ)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ