ಸುಲಲಿತ ಪ್ರಬಂಧ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸುಲಲಿತ ಪ್ರಬಂಧ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ನವೆಂಬರ್ 21, 2019

ಬಸ್ಸೆನ್ನುವ ಸಂಭ್ರಮಗಳ ಸಾಗಣೆಕಾರ




ಭಾರತದ ಸಾರಿಗೆ ಇತಿಹಾಸದಲ್ಲಿ ರೈಲಿನ ನಂತರ ಅತಿ ಹೆಚ್ಚು ಜನರಿಂದ ಬಳಸಲ್ಪಡುತ್ತಿರುವ ವಾಹಿನಿಯೆಂದರೆ ಅದು ಬಸ್ಸು. ಇದು, ಮನೆಮನೆಯ ಬಾಗಿಲಿನಲ್ಲೂ ಬೈಕು, ಕಾರು, ಓಮಿನಿಗಳು ನಿಂತಿರುವ ಇಂದಿನ ಕಾಲಕ್ಕೂ ಅನ್ವಯವಾಗುವ ಸತ್ಯ. ಟಾರನ್ನೇ ಕಾಣದ ಹಳ್ಳಿಗಾಡುಗಳ ಮೂಲೆಮೂಲೆಗೂ ತಲುಪಬಲ್ಲದ್ದಾಗಿರುವುದೇ ಬಸ್ಸಿನ ಈ ಯಶಸ್ಸಿಗೆ ಕಾರಣವೆನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಪಟ್ಟಣದಲ್ಲಿ ಅಂಡಲೆಯುವ, ಸುಮಾರು ಮೊವ್ವತ್ತು - ನಲವತ್ತು ವರ್ಷದ ಯಾವುದೇ ಯಾರನ್ನಾದರೂ ನಿಲ್ಲಿಸಿ ಕೇಳಿನೋಡಿ? ಯಾವ ರಾಜ್ಯದ ಯಾವ ಹಳ್ಳಿಯಿಂದ ಬಂದವರಾದರೂ ತಮ್ಮೂರಿನ ಬಸ್ಸುಗಳ ಬಗೆಗೆ ಚಂದದ ಕಥೆಯೊಂದು ಅವರ ನೆನಪಿನ ಮಡತೆಗಳೊಳಗೆ ಇದ್ದೇ ಇರುತ್ತದೆ. ಕಾಡು, ಬೆಟ್ಟ, ನದಿಯಾಚೆಗೆಲ್ಲೋ ಇರುವ ದೂರದ ಪಟ್ಟಣದಿಂದ ಹಾವಿನಂತೆ ಹರಿದುಬಂದಿರುವ ರಸ್ತೆಯ ಮೇಲೆ ಕೇಕೆ ಹಾಕುತ್ತಾ, ಅಲ್ಲಾಡುತ್ತ, ತೇಕುತ್ತಾ, ಏದುಸಿರು ಬಿಡುತ್ತಾ, ಅಲ್ಲಲ್ಲಿ ನಿಲ್ಲುತ್ತಾ ಪ್ರಯಾಣಿಕರನ್ನು ಹೊತ್ತು ತರುವ ಬಸ್ಸೆಂದರೆ ಪ್ರತಿಯೊಬ್ಬರಿಗೂ ಅದೊಂದು ತೆರನಾದ ಪ್ರೀತಿ. ಹೆಚ್ಚೇನೂ ಬೇಡ, ಕಾಲದ ಗಡಿಯಾರವನ್ನು ಕೇವಲ ಇಪ್ಪತ್ತು-ಇಪ್ಪತೈದು ವರ್ಷಗಳಷ್ಟು ಹಿಂದಕ್ಕೆ ತಿರುಗಿಸಿದರೂ ಸಾಕು, ಯಾವ ರೀತಿಯಲ್ಲಿ ಬಸ್ಸೆನ್ನುವ ಬಸ್ಸು ಪ್ರೀಂಪ್ರೀಂ ಎಂದು ಹಾರನ್ ಹೊಡೆಯುತ್ತಾ ಜನಸಾಮಾನ್ಯರ ಮನದಂಗಳಗಳನ್ನು ಹಾದು ಹೋಗುತ್ತಿತ್ತೆನ್ನುವ ಚಿತ್ರ ನಮ್ಮ ಕಣ್ಮುಂದೆಯೇ ಗೋಚರವಾಗತೊಡಗುತ್ತದೆ. ಅದರಲ್ಲೂ ಮತ್ಯಾವ ಪ್ರಭಾವೀ ಸಾರಿಗೆ ವಾಹಿನಿಯೂ ಇಲ್ಲದ ಹಳ್ಳಿಗಳ ಪಾಲಿಗಂತೂ ಬಸ್ಸೆನ್ನುವುದು ಹೃದಯದಿಂದ ದೇಹದೆಲ್ಲ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಸಾಕ್ಷಾತ್ ನರನಾಡಿಯೇ ಆಗಿತ್ತು. ಭರ್ರೋ ಎನ್ನುತ್ತಾ ಹತ್ತಾರು ಏರು ದಿಣ್ಣೆಗಳ ಹತ್ತಿಳಿದು, ರಸ್ತೆಯ ತುಂಬಾ ಬಾಯ್ತೆರೆದು ನಿಂತಿರುವ ಮಿನಿ ಪಾತಾಳದಂತಹಾ ಹೊಂಡಗಳಲ್ಲಿ ಇನ್ನೇನು ಬಿದ್ದೇ ಹೋಯಿತೇನೋ ಎಂಬಂತೆ ವಾಲಿ, ಕೊನೆಯ ಬಿಂದುವಿನಲ್ಲಿ ಸಾವರಿಸಿಕೊಂಡು, ಸಾಕ್ಷಾತ್ ಕಂಬಳದ ಅಂಗಳವೇನೋ ಎಂಬಂತಿರುವ ಕೆಸರಿನ ಜಾರಿಕೆಯ ಜೊತೆ ಸೆಣೆಸುತ್ತಾ, ಉಸಿರಾಡುವ ಗಾಳಿಗೇ ಜಾಗವಿಲ್ಲದಷ್ಟು ರಶ್ಶಾಗಿದ್ದರೂ ಕೊನೆಯ ನಿಲ್ದಾಣದ ಕಟ್ಟಕಡೆಯ ಪ್ರಯಾಣಿಕನನ್ನೂ ಬಿಡದೆ ಅವನ ಸಾಮಾನು-ಸರಂಜಾಮುಗಳ ಸಮೇತ ಹತ್ತಿಸಿಕೊಂಡು ಗಮ್ಯ ತಲುಪಿಸಿದ ನಂತರವೇ ಬಸ್ಸಿಗೆ ನಿದ್ರೆ ಹತ್ತುವುದು. ಬೆಳಗ್ಗೆ ಕೋಳಿಯ ಕೂಗು ಕೇಳಿ ನೂರಾರು ಹಳ್ಳಿಗರು ಎಚ್ಚರಗೊಳ್ಳುವಾಗಲೇ ಊರಿನ ಬಯಲಿನ ಮೂಲೆಯಲ್ಲೆಲ್ಲೋ ನಿಂತೇ ನಿದ್ರಿಸುತ್ತಿದ್ದ ಅದು ಎಚ್ಚರಗೊಳ್ಳುತ್ತದೆ. ಕೊರೆಯುವ ಚಳಿಗೆ ಜನರೆಲ್ಲರೂ ಬಚ್ಚಲಿನ ಒಲೆಯೆದುರು ನಿಂತು ಬಿಸಿಯಾಗುವಾಗ ಬಸ್ಸು ನಿಂತಲ್ಲೇ ಚಾಲೂ ಆಗಿ ಗುರ್ ಗುರ್ ಎನ್ನುತ್ತಾ ಥಂಡಿ ಹಿಡಿದ ತನ್ನ ಎಂಜಿನ್ ಗಳನ್ನು ಬೆಚ್ಚಗಾಗಿಸಿಕೊಳ್ಳುತ್ತದೆ. ಊರ ಹೊರಗಿನ ಬಾವಿಯ ನೀರಿನಲ್ಲಿ ಸ್ನಾನ ಮಾಡಿ ಬರುವ ಡ್ರೈವರ್ ಹಾಗೂ ಕಂಡಕ್ಟರ್ ಗಳು ಗಾಜಿನ ಎದುರುಗಡೆ ತಗುಲಿಸಿರುವ ದೇವರ ಫೋಟೋಗೆ ಊದುಬತ್ತಿ ಹಚ್ಚಿ ಕೈ ಮುಗಿದರೆಂದರೆ ಮುಗಿಯಿತು, ಬಸ್ಸಿನ ಪ್ರಯಾಣ ಶುರು! ಬ್ಯಾಗು ತಗುಲಿಸಿಕೊಂಡು ನಿಂತಿರುವ ಕಾಲೇಜು ಕುಮಾರ-ಕುಮಾರಿಯರು, ಹೇಳದೇ ಕೇಳದೇ ಕೆಟ್ಟು ಕುಳಿತಿರುವ ತೋಟದ ಮೋಟರನ್ನು ರಿಪೇರಿಗೆ ಒಯ್ಯುತ್ತಿರುವ ಬಡ ರೈತ, ಅಡಿಕೆ ಮಂಡಿ ಸೌಕಾರರ ಬಳಿ ಹತ್ತು ಸಾವಿರ ಹೆಚ್ಚಿಗೆ ಸಾಲ ಕೇಳಲೆಂದು ಹೊರಟಿರುವ ಹೆಗ್ಡೇರು, ಎರೆಡು ದಿನದಿಂದ ಬಿಡದೆ ವಾಂತಿ ಮಾಡಿಕೊಳ್ಳುತ್ತಿರುವ ಮಗುವನ್ನು ನಗರದ ದೊಡ್ಡ ಡಾಕ್ಟರಿಗೆ ತೋರಿಸಲೆಂದು ಒಯ್ಯುತ್ತಿರುವ ಆತಂಕದ ತಾಯಿ, ಜೇಬಿನಲ್ಲಿ ತನ್ನ ಅಂಗಡಿಗೆ ಬೇಕಾದ ಸಾಮಾನುಗಳ ಪಟ್ಟಿಯನ್ನೂ, ಕಂಕುಳಲ್ಲಿ ಖಾಲಿ ಚೀಲವನ್ನೂ ಅವುಚಿಕೊಂಡಿರುವ, ಆಗಾಗ ಒಳಜೇಬಿನಲ್ಲಿನ ಹಣವನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಿರುವ ಗೂಡಂಗಡಿಯ ಬಾಬಣ್ಣ, ಸೆಂಟು, ಪೌಡರು ಬಳಿದುಕೊಂಡು ಘಮಘಮಿಸುತ್ತಾ ಪಟ್ಟಣದ ರಸ್ತೆರಸ್ತೆಯನ್ನೂ ಸರ್ವೇ ಮಾಡಲಿಕ್ಕೆ ತಯಾರಾಗಿ ಬಂದಿರುವ ಪಡ್ಡೆ ಹುಡುಗರು, ಎದುರಾದವರೆಲ್ಲರಿಂದ ನಮಸ್ಕಾರ ಹೇಳಿಸಿಕೊಳ್ಳುತ್ತಾ ಪಕ್ಕದೂರ ಶಾಲೆಗೆ ಹೊರಟು ಕಾಯುತ್ತಿರುವ ಮೇಷ್ಟರು, ಈ ಸಲದ ಛಳಿ, ಗಾಳಿ, ಮಳೆ, ಬೆಳೆಗಳ ಬಗ್ಗೆ ಘನಗಂಭೀರವಾದ ಚರ್ಚೆ ನಡೆಸುತ್ತಾ ನಿಂತಿರುವ ಹಿರಿಯದ್ವಯರು, ಅಜ್ಜನ ಮನೆಗೆ ಹೋಗುವ ಸಂಭ್ರಮದಲ್ಲಿ ತೇಲುತ್ತಿರುವ ದೊಗಲೆ ಚಡ್ಡಿಯ ಪೋರ ಮತ್ತು ಜರತಾರಿ ಲಂಗದ ಪೋರಿ, ಹಾಗೂ ಅವರಿಬ್ಬರನ್ನೂ ನಿಭಾಯಿಸುತ್ತಾ ತಾನೂ ಒಳಗೊಳಗೇ ತವರಿಗೆ ಹೋಗುವ ಖುಷಿಯನ್ನನುಭವಿಸುತ್ತಿರುವ ಅಮ್ಮ…. ಹೀಗೆ ಜಗದ, ಜನಜೀವನದ ವಿವಿಧ ಮಜಲುಗಳು ಬಸ್ಸಿನ ದಾರಿಯಲ್ಲಿ ಕಾದುನಿಲ್ಲುತ್ತವೆ.

ಊರಿಂದ ಹೊರಡುವ ಬಸ್ಸುಗಳದೊಂದು ಚಿತ್ರವಾದರೆ ಊರಿಗೆ ಮರಳುವ ಬಸ್ಸುಗಳದು ಇನ್ನೊಂದು ತೆರನಾದ ಸಂಭ್ರಮ. ಅವುಗಳಿಗಾಗಿ ಕಾಯುವ ಜೀವಗಳು ಹಲವು. ಇಳಿಸಂಜೆಯ ತಂಪಿನಲ್ಲಿ ಪೋರನೊಬ್ಬ ಬಣ್ಣದ ಕಾರು ತರುತ್ತೇನೆಂದು ಮಾತು ಕೊಟ್ಟು ಪೇಟೆಗೆ ಹೋಗಿರುವ ಅಪ್ಪನ ಹಾದಿ ಕಾಯುತ್ತಿದ್ದರೆ ಅವನ ತಾಯಿ ಅವರು ತರಲಿರುವ ಹೊಸ ಅಲ್ಯೂಮಿನಿಯಂ ಪಾತ್ರೆಗೆ ಹಾಕಲು ಮಜ್ಜಿಗೆ-ಹೆಪ್ಪನ್ನು ತಯಾರಿಟ್ಟುಕೊಂಡು ಕೂತಿದ್ದಾಳೆ. ರಿಪೇರಿಯಾಗಿ ಬರಲಿರುವ ನೀರುಣಿಸುವ ಮೋಟಾರಿಗಾಗಿ ಬಾಯಾರಿದ ತೋಟ-ಗದ್ದೆಗಳು ಕಾದಿವೆ. ಹೊಸದಾಗಿ ಮದುವೆಯಾಗಿರುವ ಹುಡುಗಿ ಪಟ್ಟಣಕ್ಕೆ ಕೆಲಸಕ್ಕೆ ಹೋಗಿರುವ ಪ್ರಿಯತಮ ತನಗಾಗಿ ತರಲಿರುವ ಮಲ್ಲಿಗೆ-ಮೈಸೂರು ಪಾಕುಗಳನ್ನೂ, ಅವುಗಳ ನಡುವಿನಿಂದ ಹಾದುಬಂದು ತನ್ನನ್ನು ತಬ್ಬಲಿರುವ ಅವನ ತುಂಟ ಕೈಗಳನ್ನೂ ಕಾದಿದ್ದಾಳೆ. ಈ ಎಲ್ಲ ಸಂಭ್ರಮಗಳನ್ನೂ ಹೊತ್ತು ತರುವುದು ಬಸ್ಸೇ ಎಂದು ಬೇರೆ ಹೇಳಬೇಕಿಲ್ಲವಲ್ಲಾ?

ಇನ್ನು ಹಬ್ಬ ಹಾಗೂ ರಜೆದಿನಗಳು ಬಂತೆಂದರೆ ಬಸ್ಸೆನ್ನುವುದು ಅಕ್ಷರಷಃ ಸಂಭ್ರಮದ ಸಾಗಾಣೆಕಾರನಾಗುತ್ತದೆ. ಅದೆಲ್ಲೋ ದೂರದ ಊರಿನಿಂದ ಬೆಳ್ಳಂಬೆಳಗ್ಗೆ ಬಸ್ಸು ಹತ್ತಿ ಬರಲಿರುವ ಅಜ್ಜ, ಮಾವ, ಚಿಕ್ಕಮ್ಮ, ಅತ್ತೆ, ಅವರ ಮಕ್ಕಳು ಮುಂತಾದ ಬಂಧುಬಾಂಧವರನ್ನು ಹೊತ್ತು ತರುವ ತೇರಾಗುತ್ತದೆ. ಮನೆಯಲ್ಲಿನ ಚಿಕ್ಕ ಪೋರ ಬೆಳಗ್ಗೆ ಏಳುತ್ತಿದ್ದಂತೆಯೇ ಬರಲಿರುವ ಅಜ್ಜನ ಜಪ ಆರಂಭಿಸುತ್ತಾನೆ. ಬರುವವರಿಗೆ ನಿಲ್ದಾಣದಿಂದ ಮನೆಗೆ ಬರುವ ದಾರಿ ಗೊತ್ತಿರುತ್ತದಾದರೂ ಅವರನ್ನು ಸ್ವಾಗತಿಸಲಿಕ್ಕೆ ನೇರ ನಿಲ್ದಾಣಕ್ಕೇ ಓಡುತ್ತಾನೆ. ಅಥವಾ “ಅಜ್ಜ ಎಷ್ಟೊತ್ತಿಗೆ ಬರ್ತಾರೆ ಹೇಳೇ” ಎಂದು ಮನೆಯ ತುಂಬಾ ತರಲೆ, ರಗಳೆ ಮಾಡಿಕೊಂಡು ಹಿಂಬಾಲಿಸುವ ಅವನನ್ನು ಕೆಲನಿಮಿಷಗಳ ಮಟ್ಟಿಗಾದರೂ ಸಾಗಹಾಕಲಿಕ್ಕೆಂದು ಅಮ್ಮ “ಗಾಯಿತ್ರಿ ಬಸ್ಸಿಗೆ ಅಜ್ಜ ಬರ್ತಾರೆ. ಕರ್ಕೊಂಡ್ಬಾ ಹೋಗು"  ಎಂದು ಕಳಿಸಿಬಿಡುತ್ತಾಳೆ. ಜಾರುವ ಚಡ್ಡಿಯನ್ನು ಹಿಡಿದುಕೊಂಡು, ಬರಲಿರುವ ಅಜ್ಜನ ಸ್ವಾಗತಕ್ಕಾಗಿ ನಿಲ್ದಾಣಕ್ಕೆ ಓಡಿಬಂದು ಬಸ್ಸು ಬರಲಿರುವ ದಾರಿಯನ್ನೇ ದಿಟ್ಟಿಸುತ್ತಾ ನಿಂತವನನ್ನು ಬಸ್ಸು ನಿಮಿಷಗಳ ಕಾಲ ಕಾಯಿಸುತ್ತದೆ. ಕಾದಷ್ಟೂ ಅವನ ಕಾತರ, ಸಂಭ್ರಮಗಳು ಹೆಚ್ಚುತ್ತವೆಂಬುದು ಅದಕ್ಕೂ ಗೊತ್ತು. ಹೀಗೆ ಕಾದು ಕಾದು ಪೆಚ್ಚುಮೋರೆ ಹಾಕಿಕೊಂಡು ಇನ್ನೇನು ಮನೆಯ ದಾರಿ‌ ಹಿಡಿಯಬೇಕು, ಅಷ್ಟರಲ್ಲಿ, ಅದೋ ಅಲ್ಲಿ, ರಸ್ತೆಯ ದೂರದ ತಿರುವಿನ ಮರೆಯಿಂದ ಪೀಂಪೀಂ ಎನ್ನುವ ಸದ್ದೊಂದು ಕೇಳಿಬರುತ್ತಿದೆ. ನೋಡ ನೋಡುತ್ತಿದ್ದಂತೆಯೇ ಚಿಕ್ಕ ಚುಕ್ಕೆಯೊಂದು ಕದಲುತ್ತಾ ಇತ್ತಲೇ ಬರುತೊಡಗುತ್ತದೆ. ಬರುಬರುತ್ತಾ ಆ ಚುಕ್ಕೆ ಚೌಕವಾಗಿ, ಆಯತವಾಗಿ, ದೊಡ್ಡ ಡಬ್ಬಿಯಾಗಿ ಕೊನೆಗೆ ವಾಲಾಡುತ್ತಾ ಬರುತ್ತಿರುವ ಬಸ್ಸಾಗಿ ಗೋಚರವಾಗತೊಡಗುತ್ತದೆ. ಈಗಾಗಲೇ ಪೋರನ ಖುಷಿ ದುಪ್ಪಟ್ಟಾಗಿದೆ. ಅಜ್ಜನೆನ್ನುವ ಅಕ್ಕರೆಯ ಜೀವವನ್ನು ಹೊತ್ತು ಕುಲುಕುತ್ತಾ ಬಂದು ನಿಂತ ಬಸ್ಸಿನ ಬಾಗಿಲಿನತ್ತ ಅವನು ಓಡುತ್ತಾನೆ. ಮಗಳಿಗೆ ಇಷ್ಟವಾದ ಕಾಟು ಮಾವಿನ ಗೊಜ್ಜು, ಅಳಿಯನಿಗೊಂದು ಶರ್ಟುಪೀಸು, ಮೊಮ್ಮಗನಿಗೆ ಪ್ಯಾಕೇಟಿನ ತುಂಬಾ ಮಹಾಲ್ಯಾಕ್ಟೋ ಚಾಕಲೇಟು.. ಈ ದಿವ್ಯ ಉಡುಗೊರೆಗಳನ್ನು ಜೋಪಾನವಾಗಿಟ್ಟುಕೊಂಡಿರುವ ತಮ್ಮ ಕೈ ಚೀಲದ ಸಮೇತ ಇಳಿದ ಅಜ್ಜ ಹಾಗೂ ಅವರ ಕೈಹಿಡಿದು ಕುಣಿಕುಣಿಯುತ್ತಾ ನಡೆಯುತ್ತಿರುವ ಮೊಮ್ಮಗ.. ಇವರಿಬ್ಬರೂ ಸಾಗಿಹೋಗುವ ಸೊಬಗನ್ನು ಕಣ್ತುಂಬಾ ತುಂಬಿಕೊಂಡ ಬಸ್ಸು ಖುಷಿಯಲ್ಲಿ ಕೇಕೆ ಹಾಕಿದಂತೆ ಹಾರನ್ ಹೊಡೆದು ಮುಂದಿನ ನಿಲ್ದಾಣದ ಮತ್ತೊಬ್ಬ ಮೊಮ್ಮಗನತ್ತ ಮುನ್ನಡೆಯುತ್ತದೆ.

                  *****************

ಬಸ್ಸು ಅದೆಷ್ಟೋ ಹಳ್ಳಿಗಳ ಮುದ್ದಿನ ಮಗ ಅಥವಾ ಮಗಳು. ಮಂದಿ ತಮ್ಮ ಮಕ್ಕಳಿಗಿಟ್ಟಷ್ಟೇ ಚಂದದ ಹೆಸರುಗಳನ್ನು ಬಸ್ಸಿಗೂ ಇಡುತ್ತಾರೆ. ಜಯರಾಮ್, ಶ್ರೀಕಂಠ, ನೀಲಕಂಠ, ಮಲ್ಲಿಕಾರ್ಜುನ, ಗಾಯತ್ರಿ, ಕೊಡಚಾದ್ರಿ, ಹನುಮಾನ್, ಗಜಾನನ, ರೋಸಿ... ಅದೇ ಹೆಸರಿನಿಂದ ಬಸ್ಸು ಊರಿನ ಜನರ ಮನೆಯ, ಮನದ ಅವಿಭಾಜ್ಯ ಅಂಗವಾಗುತ್ತದೆ. ಒಂದು ದಿನ ಬಸ್ಸು ಬಾರದಿದ್ದರೆ ಆ ದಿನವಿಡೀ ಊರು ಏನನ್ನೋ ಕಳೆದುಕೊಂಡಂತೆ ಕೊರಗುತ್ತದೆ. ಸೀನಣ್ಣನ ಕಟಿಂಗ್ ಶಾಪಿನ ಮರದ ಬೆಂಚಿನ ಮೇಲಿರುತ್ತಿದ್ದ ತಾಜಾ ದಿನಪತ್ರಿಕೆ ಇಂದು ಕಾಣೆಯಾಗುತ್ತದೆ. ಪಕ್ಕದೂರ ಹೈಸ್ಕೂಲಿಗೆ ಹೋಗುವ ಮಕ್ಕಳೆಲ್ಲ ನಡೆದೇ ಹೊರಡುತ್ತಾರೆ. ಹೋಗುತ್ತಾ ಹೋಗುತ್ತಾ ಬಾರದ ಬಸ್ಸಿನ ದಾರಿಯನ್ನೇ ತಿರುತಿರುಗಿ ನೋಡುತ್ತಾರೆ‌. ಜನರು ನಿಲ್ದಾಣದೆದುರಿನ ರಸ್ತೆಯಲ್ಲಿ ನಿಂತು ಹಣೆಯೆದುರು ಕೈಯ ಚಪ್ಪರಕಟ್ಟಿ ಬಸ್ಸು ಬಂತಾ? ಎಂದು ಇಣುಕುತ್ತಾರೆ. ಹುಲ್ಲೀಸರದ ಹತ್ತಿರ ಪಂಚರ್ ಆಯ್ತಂತೆ, ಹೊಳೆಮಕ್ಕಿ ಏರಲ್ಲಿ ಚರಂಡಿಗೆ ಹಾರಿತಂತೆ, ಕಂಪದಸರದ ಕೆಸರಲ್ಲಿ ಹೂತುಕೂತಿದೆಯಂತೆ, ಕೈಮರದ ತಿರ್ಕಸ್ಸಲ್ಲಿ ಮರಕ್ಕೆ ಢಿಕ್ಕಿ ಹೊಡೆಯಿತಂತೆ, ಗೂಳಿಮಕ್ಕಿಯಲ್ಲಿ ಯಾರದೋ ದನ ಅಡ್ಡ ಬಂತಂತೆ... ಹೀಗೇ ಅದು ಯಾಕೆ ಬಂದಿಲ್ಲ ಎನ್ನುವುದರ ಬಗ್ಗೆ ಇನ್ನೂ ಮುಂತಾದ ಗುಸುಗುಸು ಗಾಸಿಪ್ ಗಳು ಹರಿದಾಡುತ್ತವೆ.‌

ಇನ್ನು ತಡವಾಗಿ ಬರುವುದು ಬಸ್ಸಿನ ಹುಟ್ಟುಗುಣಗಳಲ್ಲೊಂದು‌. ಎಷ್ಟೇ ಸರಿಯಾದ ಸಮಯಕ್ಕೆ ಮೊದಲ ನಿಲ್ದಾಣದಿಂದ ಹೊರಟರೂ ಅದು ಕೊನೆಯ ನಿಲ್ದಾಣ ತಲುಪುವುದು ಅರ್ಧಗಂಟೆ ತಡವಾಗಿಯೇ.  ಪಾಪ, ಇದರಲ್ಲಿ ಅದರ ತಪ್ಪೇನೂ ಇಲ್ಲ. ಮಾರಿಗೆ ಒಂದರಂತಿರುವ ಪ್ರತಿಯೊಂದು ನಿಲ್ದಾಣದಲ್ಲೂ ನಿಂತು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಾ ನೋಡ ನೋಡುತ್ತಲೇ ನವಮಾಸದ ತುಂಬು ಬಸುರಿಯಂತಾಗುವ ಅದು ನಿಲ್ದಾಣವೇ ಅಲ್ಲದ ಜಾಗದಲ್ಲಿ ಧುತ್ತನೆ ಪ್ರತ್ಯಕ್ಷವಾಗಿ ಕೈಚಾಚುವವರನ್ನೂ ತನ್ನೊಳಗೆ ತುಂಬಿಕೊಳ್ಳುತ್ತದೆ. ಸರಿ, ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಅಗೋ ಅಲ್ಲಿ, ದೂರದ ಕಾಡಿನ ದಾರಿಯಿಂದ ಇಬ್ಬರು ಗಂಡಸರು ಈಗಷ್ಟೇ ಒಲಂಪಿಕ್ಸ್ ಮುಗಿಸಿ ಬಂದ ನುರಿತ ಓಟಗಾರರಂತೆ ಓಡಿ ಬರುತ್ತಿರುವುದು ಕಾಣುತ್ತದೆ. ಒಬ್ಬರನ್ನೊಬ್ಬರು ಮೀರಿಸುತ್ತಾ ಬಿರುಗಾಳಿಯಂತೆ ಧಾವಿಸಿಬರುತ್ತಿರುವ ಅವರನ್ನು ನೋಡಿ ಎರೆಡು ಸೀಟ್ ಹೆಚ್ಚಾಯಿತೆಂಬ ಖುಷಿಯಲ್ಲಿ ಕಂಡಕ್ಟರ್ ಸಹಾ ಸೀಟಿ‌ ಊದಿ ಡ್ರೈವರನಿಗೆ ಕಾಯುವಂತೆ ಸೂಚನೆನೀಡುತ್ತಾನೆ. ಬಿಟ್ಟಬಾಣದಂತೆ ಓಡಿಬಂದು ಬಸ್ಸನ್ನು ಹಿಡಿದುಕೊಂಡ ಅವರು ಚಂಡಮಾರುತದಂತೆ ಏದುಸಿರು ಬಿಡುತ್ತಾ ಬಸ್ಸು ಹತ್ತುವವರು ತಾವಲ್ಲವೆಂದೂ, ವಯಸ್ಸಾದವರೊಬ್ಬರು ಹಿಂದೆ ಬರುತ್ತಿದ್ದಾರೆಂದೂ, ಅವರಿಗಾಗಿ ಕಾಯಬೇಕೆಂದೂ ಕೇಳಿಕೊಳ್ಳುತ್ತಾರೆ. ತಿರುಗಿ ನೋಡಿದರೆ ದೂರದಲ್ಲಿ ವಯೋವೃದ್ಧರೊಬ್ಬರು ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಬರುತ್ತಿರುವುದು ಕಾಣಿಸುತ್ತದೆ.

                 *************

"ದೊಡ್ಡವನಾದ ಮೇಲೆ ಏನಾಗ್ತೀಯ ಪುಟ್ಟೂ?"

"ಗುದುಚತ್ತೀ ಬಚ್ಚಿನ ಡ್ರೈವರ್ ಆತೀನಿ!"

ಹೀಗಂತ ಹೇಳಿ ಎದುರಿರುವವರನ್ನೆಲ್ಲ ಗೊಳ್ಳೆಂಬ ನಗೆಯಲೆಯಲ್ಲಿ ತೇಲಿಸುವ ಚಿಲ್ಟಾರಿಗಳ ಸಂಖ್ಯೆ ಅದೆಷ್ಟೋ? ನಿಜ.. ಬಸ್ಸೊಂದರ ಡ್ರೈವರ್, ಕಂಡಕ್ಟರ್ ಅಥವಾ ಕ್ಲೀನರ್ ಗಳಿಗೆ ವಿಶಿಷ್ಠ ಗೌರವವೊಂದಿದೆ. ಎಲ್ಲರಿಗಿಂತ ಹೆಚ್ಚಾಗಿ ಹಳ್ಳಿಯ ಮಕ್ಕಳ ದೃಷ್ಟಿಯಲ್ಲಿ ಅವರು ಅಘೋಷಿತ ಹೀರೋಗಳು. ಒಂದು ಕಾಲಲ್ಲಿ ಬ್ರೇಕು ಒತ್ತುತ್ತಾ, ಇನ್ನೊಂದರಲ್ಲಿ ಆಕ್ಸಿಲೇಟರ್ ತುಳಿಯುತ್ತಾ ಸರಸರನೆ ಸ್ಟೇರಿಂಗನ್ನು ಆ ಕಡೆ, ಈ ಕಡೆ ತಿರುಗಿಸುವ, ಅಷ್ಟು ದೊಡ್ಡ ಬಸ್ಸನ್ನು ಎಷ್ಟು ಸರಾಗವಾಗಿ ಹೊರಳಿಸಿ, ಚಲಾಯಿಸುವ ಡ್ರೈವರ್, "ಯಾರ್ರೀ ಅಲ್ಲೀ ಟಿಕೇಟ್ ಟಿಕೇಟ್.. ಹೋಗ್ರೀ‌.. ಒಳಗಡೆ ನಡೀರ್ರೀ.." ಎಂದು ಆಜ್ಞಾಪಿಸುತ್ತಾ ಬಣ್ಣದ ಪುಸ್ತಕದಿಂದ ಟಿಕೇಟು ಹರಿದುಕೊಡುವ ಕಂಡಕ್ಟರ್ ಹಾಗೂ ಓಡುವ ಬಸ್ಸಿನ ಬಾಗಿಲಿನಲ್ಲಿ ನಿಂತು, ಬೀಸಿಬರುವ ಗಾಳಿಗೆ ತನ್ನ ಕೂದಲ ಹಾರಿಬಿಟ್ಟುಕೊಂಡು "ಆರಗ, ನೊಣಬೂರ್, ಅರಳಸುರಳಿ, ಸೊನಲೆ, ಬಿಳ್ಳೋಡಿ, ಜಯನಗರ, ಹೊಸನಗರಾ" ಎಂದು ವಿಶಿಷ್ಠ ರಾಗವೊಂದರಲ್ಲಿ ಕೂಗುವ ಕ್ಲೀನರ್.. ಈ ಮೂವರನ್ನು ಅನುಕರಣೆ ಮಾಡದ ಹೊರತು ಊರಿನ ಯಾವೊಬ್ಬ ಪೋರನ ಬಾಲ್ಯವೂ ಸಂಪನ್ನವಾಗುವುದೇ ಇಲ್ಲ! ಅದರಲ್ಲೂ ಕಂಡಕ್ಟರ್ ನ ಕೈಯಲ್ಲಿರುವ ಟಿಕೇಟು ಪುಸ್ತಕ ಹಾಗೂ ಅದರ ಪುಟಗಳ ನಡುವೆ ಅವಿತಿರುವ ಕಾರ್ಬನ್ ಚೀಟಿಗಳಂತೂ ಶಾಲಾ ಮಕ್ಕಳ ದೃಷ್ಟಿಯಲ್ಲಿ ಜಗತ್ತಿನ ಅದ್ಭುತಗಳ ಪಟ್ಟಿಗೆ ಸೇರುವಂತಹಾ ವಸ್ತುಗಳು. ನಿರ್ವಾಹಕ ಎಸೆದುಹೋಗುವ ಖಾಲಿಯಾದ ಟಿಕೆಟ್ ಪುಸ್ತಕ ಹಾಗೂ ಮಂದವಾದ ಕಾರ್ಬನ್ ಹಾಳೆಗಳನ್ನು ಎತ್ತಿಕೊಳ್ಳುವುದಕ್ಕೆ ಹುಡುಗರ ನಡುವೆ ನಡೆಯುವಷ್ಟು ಪೈಪೋಟಿ ಪ್ರಧಾನ ಮಂತ್ರಿಗಳ ಕುರ್ಚಿಗಾಗಿಯೂ ನಡೆಯಲಿಕ್ಕಿಲ್ಲ!

                      *****************

ಮೇಲು-ಕೀಳುಗಳನ್ನೂ, ಪುರುಷ-ಸ್ತ್ರೀ ಎಂಬ ಭೇದ-ಭಾವಗಳನ್ನೂ ಮೌನವಾಗಿಯೇ ಮೀರುವ ಬಸ್ಸು ಕೆಳಗಿನ ಕೇರಿಯ ನಾಗಿಯನ್ನೂ ಹಾಗೂ ಮೇಲಿನಮಕ್ಕಿಯ ಶಾಂತಕ್ಕನನ್ನೂ ಒಟ್ಟಿಗೇ ಕೂರಿಸಿಕೊಂಡು ಸಂತೆಗೆ ಕರೆದೊಯ್ಯುತ್ತದೆ. ಮಹಬೂಬ ಸಾಬರ ಟೊಪ್ಪಿಯೂ, ರಾಮಾಶಾಸ್ತ್ರಿಗಳ ಶಲ್ಯವೂ ಅಡ್ಡಸೀಟಿನಲ್ಲಿ ಒಟ್ಟಿಗೇ ಕುಳಿತು ಡ್ರೈವರ್ ಡಿಸೋಜನ ಜೊತೆ ಪಟ್ಟಂಗ ಹೊಡೆಯುವ ಸಾಮರಸ್ಯದ ದೃಶ್ಯ ಕಂಡುಬರುವುದು ಬಸ್ಸಿನಲ್ಲೇ. ಅಷ್ಟೇ‌ ಅಲ್ಲ, ಒಂದು ವಾರದಿಂದ ಅದೇಕೋ ಸರಿಯಾಗಿ ಮೇವು ತಿನ್ನದೆ ಕುಗುರುತ್ತಿರುವ ಊರಿನ ಕುರಿ, ಕೋಳಿ, ಟಗರುಗಳನ್ನೆಲ್ಲ ಟಿಕೆಟ್‌ ರಹಿತವಾಗಿ ಹೊತ್ತೊಯ್ದು ಪಶುಪಾಲನಾ ಆಸ್ಪತ್ರೆಗೆ ತಲುಪಿಸಿ ಪ್ರಾಣಿದಯೆ ಮೆರೆಯುವುದೂ ಸಹಾ ಬಸ್ಸೇ. ಇಂತಿಪ್ಪ ಅದು ಒಂದರ್ಥದಲ್ಲಿ ಭೂಮಿಯಂತೆಯೇ ಸಹನಾಮಯಿ. ಕಡಲೆಕಾಯಿ ತಿಂದು ಸಿಪ್ಪೆ ಎಸೆದರೂ, ಎಲೆಡಕೆ ಉಗುಳಿ ತನ್ನ ಹೊರಮೈಯನ್ನು ಗಲೀಜು ಮಾಡಿದರೂ, ಸೀಟಿನ ಸ್ಪಂಜು ಕಿತ್ತು ಗಾಯಗೊಳಿಸಿದರೂ ಅದು ಕೋಪಿಸಿಕೊಳ್ಳುವುದಿಲ್ಲ. ತಾವೇ ಎಲೆಅಡಿಕೆ, ಪಾನ್ ಪರಾಗ್, ಗುಟ್ಕಾ ಅಗಿದು ಉಗುಳಿ ಅಂದಗೆಡಿಸಿದ ಬಸ್ಸನ್ನು ಹೊರಗಿನಿಂದ ನೋಡಿದ ಜನ ‘ಥೂ ಎಷ್ಟು ಗಲೀಜಾಗಿದೆ’ ಎಂದು ತಾವೇ ತೆಗಳಿ ಅವಮಾನಿಸಿದಾಗಲೂ ಅದು ಬೇಸರಗೊಳ್ಳುವುದಿಲ್ಲ. ಮಳೆಯ ಹನಿಗೋ, ಹೊಳೆಯ ನೀರಿಗೋ ತನ್ನನ್ನು ಒಡ್ಡಿಕೊಂಡು ಸ್ವಚ್ಛವಾಗಿ ಮತ್ತದೇ ಪ್ರಯಾಣಿಕರ ಬಳಿಗೆ ಮರಳಿಬರುತ್ತದೆ.

ಹೀಗೆ ಸಮತೆ, ಸಹನೆ ಮೆರೆಯುವ ಬಸ್ಸಿನ ಹೃದಯ ಅಷ್ಟೇ ಗಾಢವಾಗಿ ಪ್ರೀತಿ-ಪ್ರೇಮಗಳಿಗೂ ಮಿಡಿಯುತ್ತದೆ. ಪ್ರತಿದಿನವೂ ಅದರ ಸೀಟುಗಳ ಬೆನ್ನಿನಲ್ಲಿ ನೂರಾರು ಪ್ರೀತಿಯ ಅಕ್ಷರಗಳು ಅಚ್ಚಾಗುತ್ತವೆ. ಹತಾಶ ಪ್ರೇಮಿಯೊಬ್ಬ ತಾನು ಮನದಲ್ಲೇ ಆರಾಧಿಸುತ್ತಿರುವ ಪ್ರೇಯಸಿಗೆ ಕೊನೆಗೂ ಹೇಳಲಾಗದ ಮಾತೊಂದನ್ನು ಬಸ್ಸಿನ ಸೀಟಿನ ಹಿಂಭಾಗದಲ್ಲಿ ಕೆತ್ತಿ ಹಗುರಾಗುತ್ತಿದ್ದರೆ ಅವನ‌ ವೇದನೆಗಳನ್ನು ತನ್ನ ಹೃದಯಕ್ಕೆ ಬಸಿದುಕೊಳ್ಳುವ ಬಸ್ಸು ಹೃದಯತುಂಬಿ ಭಾರವಾಗುತ್ತದೆ. ಮುಂದೊಂದು ದಿನ ಅದೇ ಸೀಟಿನಲ್ಲಿ ಕುಳಿತ ಅವನ‌ ಪ್ರೇಯಸಿ ಹುಡುಗಿ ಅದು ತನಗಾಗಿಯೇ ಬರೆದ ಸಾಲೆಂಬುದು ಗೊತ್ತಿಲ್ಲದೆಯೇ ಆ ಅಕ್ಷರಗಳ ಮೇಲೆ ಕೈಯಾಡಿಸಿ ಮುಗುಳ್ನಕ್ಕಾಗ ಬಸ್ಸಿನ ಗಾಜುಗಣ್ಣುಗಳ ಮೇಲೆ ಹನಿಗಳೆರೆಡು ಮೂಡಿ ಜಾರುತ್ತವೆ.

              ***************

ಸದಾ ಜನರನ್ನು ಹೊತ್ತು ತಿರುಗುವ ಬಸ್ಸಿಗೆ ಆಗಾಗ ಜನರಿಂದ ಸೇವೆ ಮಾಡಿಸಿಕೊಳ್ಳುವ ಮನಸ್ಸಾಗುತ್ತದೆ. ಹಾಗನಿಸಿದಾಗೆಲ್ಲ ಅದು ರಸ್ತೆಯ ನಡುಮಧ್ಯದಲ್ಲಿ ಇದ್ದಕ್ಕಿದ್ದಂತೆಯೇ ನಿಂತುಬಿಡುತ್ತದೆ. ಗಾಳಿಯಿಲ್ಲ, ಮಳೆಯಿಲ್ಲ, ಚಕ್ರದಡಿಯಲ್ಲಿ ಚಿಕ್ಕ ಮುಳ್ಳೂ ಇಲ್ಲ. ಬಸ್ಸು ಮಾತ್ರ ರಾಜರ ಕಾಲದ ಶಿಲಾಕುದುರೆಯಂತೆ ದಾರಿ ಮಧ್ಯದಲ್ಲಿ ಸ್ತಬ್ದವಾಗಿಬಿಟ್ಟಿದೆ. ಡ್ರೈವರ್ ಕೀಲಿ ತಿರುಗಿಸಿ, ಬಟನ್ ಒತ್ತಿ, ಗೇರು ಬದಲಿಸಿ ಎಷ್ಟೇ ಪರಿಪರಿಯಾಗಿ ರಮಿಸಿದರೂ ಅದು ಸ್ಟಾರ್ಟ್ ಆಗುವುದೇ ಇಲ್ಲ. ಬದಲಿಗೆ ಗುರ್ ಗುರ್ ಎಂದು ಚಾಲೂ ಆಗಲು ಪ್ರಯತ್ನಿಸುತ್ತಿರುವಂತೆ ನಟಿಸತೊಡಗುತ್ತದೆ. ಕೊನೆಗೆ ಒಳಗಿರುವ ಜನರ ಪೈಕಿ ಅರ್ಧದಷ್ಟು ಗಂಡಸರು ಕೆಳಗಿಳಿದು, ತಮ್ಮ ಪಂಚೆ, ಲುಂಗಿಗಳನ್ನು ಮೇಲೆಕಟ್ಟಿ ಬಸ್ಸಿನ ಬೆನ್ನಿಗೆ ಕೈಕೊಡುತ್ತಾರೆ.

ಅಲ್ಲಲ್ಲಣ್ಣ… ಐಸ್ಸಾ… ಏರಿ ಪಕ್ಡಾ…ಐಸ್ಸಾ….ಜೋರಾಗ್ ತಳ್ಳು… ಐಸ್ಸಾ...ಇನ್ನೂ ತಳ್ಳು…ಐಸ್ಸಾ….

ಹಾಡುತ್ತಾ ತಳ್ಳುತ್ತಾ ಒಂದಷ್ಟು ದೂರ ಹಾಗೇ ಮುಂದೆ ಸಾಗುತ್ತದೆ. ಕೊನೆಗೂ ಅವರೆಲ್ಲರ ಬಕಾಪ್, ಭಲಾ, ಶಹಬ್ಬಾಶ್ ಗಳಿಗೆ ಕರಗಿದ ಬಸ್ಸು ಚಾಲೂ ಆಗಿ ರೊಂಯ್ ಎಂದು ಕೆನೆಯುತ್ತದೆ. ಇಷ್ಟು ಹೊತ್ತು ತಳ್ಳಿ ತಳಕಂಬಳಕ ಆದವರೆಲ್ಲ ಹೋ ಎಂದು ಸಂಭ್ರಮಿಸಿ ತಲೆಗೆ ಕಟ್ಟಿಕೊಂಡಿದ್ದ ಟವಲ್ ಬಿಚ್ಚುತ್ತಾ ಬಸ್ಸಿನೊಳಗೆ ನುಗ್ಗುತ್ತಾರೆ. ಮೈಮುರಿದಂತೆ ಅಲ್ಲಾಡುವ ಬಸ್ಸು ಭರ್ರೋ ಎನ್ನುತ್ತಾ ಮುನ್ನುಗ್ಗುತ್ತದೆ. 

                    **************

ಬಸ್ಸಿಗೆ ಎರೆಡು ಮನೆ: ಒಂದು ಆಚೆ ತುದಿಯ ನಿಲ್ದಾಣವಾದರೆ ಇನ್ನೊಂದು ಈಚೆ ತುದಿಯದು. ಎರೆಡೂ ಬಿಟ್ಟುಬಂದ ಮನೆಗಳು; ಎರೆಡೂ ಸೇರಬೇಕಿರುವ ಮನೆಗಳು. ಬಸ್ಸು ಯಾವ ನಿಲ್ದಾಣಕ್ಕೂ ಸೇರಿದುದಲ್ಲ. ತುಳಿದುಬರುವ ರಸ್ತೆಗೂ ಅದು ಸ್ವಂತವಾಗುವುದಿಲ್ಲ. ನಿಲ್ಲುವ ಡಿಪೋಗೂ ಅದು ದಕ್ಕುವುದಿಲ್ಲ. ‘ಆಗು ನೀ ಅನಿಕೇತನ’ ಎಂಬ ಕವಿವಾಣಿಯನ್ನು ಕಾಯಾ, ವಾಚಾ, ಮನಸಾ ಪಾಲಿಸುವ ಬಸ್ಸು ಓಡುತ್ತಲೇ ಇರುವ ಕಾಲದ ಪ್ರತೀಕ. ಊರು, ತಾಲೋಕು, ಜಿಲ್ಲೆ, ರಾಜ್ಯಗಳೆಲ್ಲದರ ಎಲ್ಲೆ ಮೀರಿ ಸಾಗುವ ಅದು ಮಲೆನಾಡಿನ ಮಹಾಮಳೆಯಲ್ಲಿ ನೆನೆದಿದೆ. ಬಯಲುಸೀಮೆಯ ಬರಗಾಲದಲ್ಲಿ ಒಣಗಿದೆ ಹಾಗೂ ಕರಾವಳಿಯ ಕಡಲಿನಲೆಗಳನ್ನೂ ಕಂಡಿದೆ. ಬೇರೆಬೇರೆ ಊರುಗಳಿಂದ ಒಂದೇ ಗಮ್ಯಕ್ಕೆ ಬರುವ ಹಾಗೂ ಒಂದೇ ನೆಲೆಯಿಂದ ಬೇರೆ ಬೇರೆ ಊರುಗಳಿಗೆ ಹೋಗುವ ಬಸ್ಸುಗಳು ಮಧ್ಯದ ನಿಲ್ದಾಣದಲ್ಲೆಲ್ಲೋ ಸಂಧಿಸುತ್ತವೆ. ಡ್ರೈವರ್, ಕಂಡಕ್ಟರ್, ಪ್ರಯಾಣಿಕರುಗಳೆಲ್ಲ ಟೀ, ಕಾಫಿ, ಊಟಗಳಿಗಾಗಿ ಇಳಿದುಹೋದಾಗ ಅಕ್ಕಪಕ್ಕ ನಿಂತು ಅವು ಒಂದಕ್ಕೊಂದು ಮಾತನಾಡಿಕೊಳ್ಳುತ್ತವೆ. ಸಾಗಿಬಂದ ದಾರಿಯಲ್ಲಿ ತಾವು ಕಂಡ ವಿಸ್ಮಯಗಳನ್ನು ಪರಸ್ಪರ ಹಂಚಿಕೊಳ್ಳುತ್ತವೆ. ಎಪ್ಪತ್ತು ದಾಟಿದ ಅಜ್ಜನೊಬ್ಬನಿಗೆ ತಿಳಿದಿರುವಷ್ಟೇ ಸ್ವಾರಸ್ಯಕರ ಕಥೆಗಳು ಬಸ್ಸಿಗೂ ತಿಳಿದಿದೆ. ಕಾಡಿನ ನಡುವೆ ವಾಲಿ ಬಿದ್ದ ಅಗಾಧ ಗಾತ್ರದ ಮರವೊಂದರಿಂದ ಸ್ವಲ್ಪದರಲ್ಲಿ ಪಾರಾದ ಅದ್ಭುತ ಕಥೆ, ನಡುರಾತ್ರೆಯಲ್ಲಿ ಹೆದ್ದಾರಿಯಲ್ಲಿ ಸಾಗಿಬರುವಾಗ ದಾರಿಗಡ್ಡವಾಗಿ ಹುಲಿಯೊಂದು ಛಂಗನೆ ನೆಗೆದುಬಂದ ಭೀಭತ್ಸಕರ ಕಥೆ, ಕಾಡಾನೆಯೊಂದು ತನ್ನನ್ನು ಅಡ್ಡಗಟ್ಟಿದ ಭಯಾನಕ ಕಥೆ, ಕುಸಿಯುವ ಮೊದಲೇ ತಾನು ಓಡಿದಾಟಿದ ಗತಕಾಲದ ಸೇತುವೆಯೊಂದರ ಸ್ವಾರಸ್ಯಕರ ಕಥೆ, ಚಕ್ರದ ಮಟ್ಟಕ್ಕೆ ಹರಿಯುತ್ತಿದ್ದ ನೆರೆನೀರನ್ನು ಸೀಳಿಕೊಂಡು ಪಾರಾಗಿಬಂದ ಸಾಹಸದ ಕಥೆ, ಜಾರುವ ಘಾಟಿಯ ತಿರುವಿನಂಚಿನಲ್ಲಿ, ಕೂದಲೆಳೆಯಷ್ಟೇ ಅಂತರದಲ್ಲಿ ಕಂಡ ಸಾವಿನ ಅಗಾಧತೆಯ ಕಥೆ, ಗಗನೆತ್ತರಕ್ಕೆ ತಲೆಯೆತ್ತಿನಿಂತು ಅಣಕಿಸಿದ್ದ ಪರ್ವತವೊಂದು ಹತ್ತಿದ ನಂತರ ತನ್ನ ಕಾಲಡಿಗೆ ಬಂದ ಸ್ಪೂರ್ತಿದಾಯಕ ಕಥೆ, ಎಷ್ಟೇ ಪ್ರಯತ್ನಿಸಿದರೂ ತನ್ನಿಂದ ತಪ್ಪಿಸಲಾಗದೇಹೋದ, ತನ್ನ ಚಕ್ರಕ್ಕೆ ಸಿಕ್ಕಿ ಸತ್ತ ಮರಿಜಿಂಕೆಯ ಕರುಳು ಕಲಕುವ ಕಥೆ… ಹೀಗೆ ಹೇಳಲಿಕ್ಕೆ ಬಸ್ಸಿನ ಬಳಿ ಸಾವಿರ ಕಥೆಗಳಿವೆ. ನೆನೆದು ಕೊರಗಲಿಕ್ಕೆ ನೂರಾರು ವ್ಯಥಗಳಿವೆ. ಕೊನೆಯ ನಿಲ್ದಾಣದ ನೀರವ ಮೌನದಲ್ಲಿ ನಿಂತು ಅದು ತನ್ನಿಂದ ಹತವಾದ ಜೀವಗಳ ನೆನೆದು ಮಮ್ಮಲಮರುಗುತ್ತದೆ. ಉಸ್ಸೆಂದು ನಿಟ್ಟಿಸಿರಿಟ್ಟು ಹಗುರಾಗಲು ಯತ್ನಿಸುತ್ತದೆ. ಇಂತಹಾ ಇನ್ನೊಂದು ಹತ್ಯೆಯನ್ನೂ ಮಾಡಿಸಬೇಡವೆಂದು ಒಳಗೆ ಹಾರಹಾಕಿದ ಫೋಟೋದಲ್ಲಿ ನಿಂತಿರುವ ದೇವರನ್ನು ಬೇಡುತ್ತದೆ. ತಾನು ಕಂಡ ಸೃಷ್ಟಿಯ ಅಗಾಧತೆ ಹಾಗೂ ಬದುಕಿನ ಕ್ಷಣಿಕತೆಗಳ ಬಗ್ಗೆ ವೇದಾಂತಿಯಂತೆ ಚಿಂತಿಸುತ್ತದೆ.

                  *************

ಬಸ್ಸಿಗೀಗ ಪೈಪೋಟಿ ಜಾಸ್ತಿಯಾಗಿದೆ. ಸಂದಿಗೊಂದಿಗಳಲ್ಲಿ ನುಗ್ಗಿ ಬಹುಬೇಗ ಮನೆ ತಲುಪಿಸುವ ಬೈಕುಗಳು, ಕರೆದಲ್ಲಿಗೇ ಬಂದು ಕರೆದೊಯ್ಯುವ ಆಟೋ, ಟ್ಯಾಕ್ಸಿ, ಓಲಾ, ಊಬರ್ ಗಳು, ಪಕ್ಕದ ಸೀಟಿನಲ್ಲಿ ನಮ್ಮ ಬಿಂಕ-ಬಿಗುಮಾನಗಳು ಮಾತ್ರ ಕೂರಬಹುದಾದ ಒಂಟಿ ಪ್ರಯಾಣದ ಕಾರುಗಳು.. ಇವೆಲ್ಲದರ ಆಬ್ಬರಾಟಕ್ಕೆ ಸಿಲುಕಿದೆ. ಪುಟ್ಟ ಕಾರಿನೊಳಗಿನ ಮುಚ್ಚಿದ ಕಿಟಕಿಯಿಂದ ಕಾಣುವ ಜಗತ್ತು ಕಿರಿದಾಗುತ್ತಿದೆ. ಕೊನೆಯ ಬಸ್ಸು ತಪ್ಪಿಹೋಗುತ್ತದೆನ್ನುವ ಭಯ ಇಲ್ಲವಾಗಿ ನಮ್ಮನ್ನು ಹಿಡಿಯುವವರಿಲ್ಲವಾಗಿದೆ. ಕಂಡಕ್ಟರ್ ಎಸೆದು ಹೋಗುವ ಟಿಕೆಟ್ ಪುಸ್ತಕ ತನ್ನ ಅಂದ ಕಳೆದುಕೊಂಡು ಬಾಲ್ಯವೇ ಬಣ್ಣಗೆಟ್ಟಂತಾಗಿದೆ. ಅಂದು ಒಂದೇ ಸೀಟಿನಲ್ಲಿ ಕುಳಿತು ಪ್ರಯಾಣಿಸಿದ್ದ ಮಂದಿ ಬೇರೆ ಬೇರೆ ಕಾರುಗಳಲ್ಲಿ ಕುಳಿತು ದೂರದೂರ ಸಾಗುತ್ತಿದ್ದಾರೆ. ತಾನು ಹಾಗೂ ತಾನಷ್ಟೇ ಕುಳಿತು ಪ್ರಯಾಣಿಸುತ್ತಿರುವ ಮನುಷ್ಯ ಒಂಟಿಯಾಗುತ್ತಿದ್ದಾನೆ. ಬೆವರಲು ಬಿಡದ ಎಸಿ, ಕೂಲರ್ ಗಳೊಳಗೆ ತಣ್ಣಗೆ ಕುಳಿತು ನರಳುತ್ತಿದ್ದಾನೆ. ತನಗೇ ಗೊತ್ತಿಲ್ಲದಂತೆ, ತುಂಬಿ ಬರಲಿರುವ ಊರಿನ ಆ ಹಳೇ ಬಸ್ಸಿಗಾಗಿ ಕಾಯುತ್ತಿದ್ದಾನೆ.

ದೂರ ದಾರಿಯ ತಿರುವಿನಲ್ಲಿ ವಾಲಾಡುವ ಚುಕ್ಕೆಯೊಂದು ಸಣ್ಣಗೆ ಮೂಡತೊಡಗಿದೆ..


(ದಿನಾಂಕ 17.11.2019ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ)

ಭಾನುವಾರ, ಫೆಬ್ರವರಿ 17, 2019

ಪಟ್ಟಣದ ಬಸ್ಸಿನಲ್ಲಿ ಅಡಿಕೆ ಕೊಯಿಲು ನೆನಪಾಗಿ...

ಸಮಯ ಬೆಳಗ್ಗೆ ಆರಾಗಿದೆ. ಹಾಗಂತ  ಹೇಳುತ್ತಿರುವುದು "ವೇಕಪ್ ವೇಕಪ್ ವೇಕಪ್, ಇಟ್ಸ್ ಎ ಬ್ರಾಂಡ್ ನ್ಯೂ ಡೇ" ಎಂದು ಬಾಯ್ಬಡಿದುಕೊಳ್ಳುತ್ತಿರುವ ಅಲರಾಂ. ನಿದ್ರೆಗಣ್ಣಿನಲ್ಲೇ ಅದರ ತಲೆಮೇಲೆ ಕುಕ್ಕಿ ಇನ್ನೊಂದರ್ಧ ಗಂಟೆ ಬಾಯ್ತೆರೆದು ಕಾಯುತ್ತಿರುವ ಒತ್ತಡ ತುಂಬಿದ ಹಗಲಿನಿಂದ ಅಡಗಿಕೊಳ್ಳುವವನಂತೆ ಹೊದಿಕೆಯೊಳಗೆ ಹುದುಗಿಕೊಳ್ಳುತ್ತೇನೆ. ಮತ್ತೊಮ್ಮೆ ಅಲರಾಂ ಕೂಗಿದಾಗ ಧಿಗ್ಗನೆದ್ದುಕುಳಿತು, ಕಣ್ಣಿಗೆ ಮೊದಲು ಕಂಡ ಬಾಗಿಲನ್ನೇ ಬಾತ್ರೂಮಿನ ಬಾಗಿಲೆಂದು ತೆಗೆದು, ಮುಖಕ್ಕೆ ಪ್ರಖರ ಬೆಳಕು, ತಂಪುಗಾಳಿ ಸೋಕಿದಾಗ ಅದು ಕೋಣೆಯ ಹೊರಬಾಗಿಲೆಂಬುದು ಅರಿವಾಗಿ ಮತ್ತೆ ಕೋಣೆಯೊಳಗೆ ಮರಳಿ, ಬ್ರಹ್ನಾಂಡವಾಗಿ ಆಕಳಿಸುತ್ತಾ, ತಡಬಡಿಸಿ ತಯಾರಾಗಿ, ಬಿಎಂಟಿಸಿ ಬಸ್ಸಿನಲ್ಲಿ ನೇತಾಡುತ್ತಿರುವ ಇದೇ ಹೊತ್ತಿಗೆ,

ಊರಿನಲ್ಲಿ ಅಡಿಕೆಕುಯಿಲು ಭರದಿಂದ ಸಾಗುತ್ತಿದೆ!


ಈ ಬೆಂಗಳೂರು ತೀರಾ ಯಾಂತ್ರಿಕ ಅನ್ನಿಸುವುದು ಈ ಕಾರಣಕ್ಕೇ. ಇಲ್ಲಿನ ಕಾಯಕದ ಕ್ಯಾಲೆಂಡರ್ ನಲ್ಲಿ ಸಂವತ್ಸರದ ಮೊಟ್ಟಮೊದಲ ದಿನದಿಂದ ಕಟ್ಟಕಡೆಯ ಕ್ಷಣದ ತನಕ ಯಾವುದೇ ಸೀಸನ್ ಎಂಬುದಿಲ್ಲ. ಇಲ್ಲಿನ ಸಿಮೆಂಟು-ಕಾಂಕ್ರೀಟಿನ ಆಫೀಸುಗಳು ಯಾವ ಸುಗ್ಗಿ ಬಂದರೂ ತೆನೆತೂಗಿ ನಿಲ್ಲುವುದಿಲ್ಲ. ಎಷ್ಟೇ ಮಣ್ಣು, ನೀರು, ಗೊಬ್ಬರ ಎರೆದರೂ ಇವು ಚಿಗುರಿಬರುವುದಿಲ್ಲ. ಚೈತ್ರಮಾಸದ ಮೊದಲ ದಿನ ಹೇಗೆ ಬಾಗಿಲು ತೆರೆಯುತ್ತವೆಯೋ ಫಾಲ್ಗುಣದ ಕೊನೆಯ ದಿನವೂ ಹಾಗೇ ಕದ ಮುಚ್ಚಿಕೊಳ್ಳುತ್ತವೆ. ಅದು ಪಟ್ಟಣ ಜೀವನದ ಅತಿದೊಡ್ಡ ಬೇಸರ.


ನಾನಿಲ್ಲಿ ಅಲರಾಂ ಆರಿಸಿಮಲಗಿದ ಅದೇ ಹೊತ್ತಿಗೆ ಅಲ್ಲಿ, ದೂರದ ಊರಿನಲ್ಲಿ ಅಪ್ಪ, ಅಮ್ಮ ಎದ್ದು ನಿಮಿಷಗಳೇ ಕಳೆದಿರುತ್ತವೆ. ಅದೂ ಯಾವುದೇ ಅಲರಾಂ ಬಾಯ್ಬಡಿದುಕೊಳ್ಳದೇ! ಚಂದದ ಛಳಿಯೊಂದು ಮಂಜಿನ ಸಮೇತ ಮನೆಯೆದುರು ಸೂರ್ಯನ ಮೊದಲ ಕಿರಣಗಳಲ್ಲಿ ಛಳಿಕಾಯಿಸಿಕೊಳ್ಳುತ್ತಾ ನಿಂತಿರುವ ಗುಡ್ಡವನ್ನೂ, ಒಳಗೊಳಗೇ ದುಂಬಿಯ ಕನಸುಕಾಣುತ್ತಿರುವ, ಇನ್ನೂ ಪೂರ್ತಿ ಅರಳದ ಅಂಗಳದ ಅರೆನಿದಿರೆಯ ಹೂಗಳನ್ನೂ, ಮುಗಿಲು ತೊಡಿಸಿದ ಇಬ್ಬನಿಯುಂಗುರ ತೊಟ್ಟು ನಿಶ್ಚಿತಾರ್ಥವಾದ ಹುಡುಗಿಯಂತೆ ಬೀಗುತ್ತಿರುವ ಹಸಿರು ಹುಲ್ಲನ್ನೂ, ಬೋನಿನಲ್ಲಿ ಕಾಲು-ಬಾಲಗಳನ್ನೆಲ್ಲ ಒಂದಾಗಿಸಿಕೊಂಡು ಇರಕಿ ಹೊಡೆದು ಬೆಚ್ಚಗೆ ಮಲಗಿರುವ ಟೀಪುವನ್ನೂ ಆವರಿಸಿಕೊಂಡುಬಿಟ್ಟಿರುತ್ತದೆ. ಅಪ್ಪ, ಒಡಲತುಂಬಾ ಸುಲಿದ ಅಡಿಕೆಗಳನ್ನು ತುಂಬಿಕೊಂಡು ಕುಳಿತಿರುವ ಹಂಡೆಯ ಬುಡಕ್ಕೆ ಬೆಂಕಿ ಒಟ್ಟುತ್ತಿರುತ್ತಾನೆ‌. ಕಾಲ್ಗೆಜ್ಜೆ ಸಪ್ಪಳದಿಂದಲೇ ಅಮ್ಮ ಎದ್ದಿದ್ದು ಗೊತ್ತಾದ ಕೊಟ್ಟಿಗೆಯ ಕರು ನಿಂತಲ್ಲೇ ಕುಪ್ಪಳಿಸುತ್ತಿರುತ್ತದೆ. ಕಟ್ಟಿಗೆ, ಕೊನಮಟ್ಟೆ, ಸಿಪ್ಪೆ, ಒಣ ತೆಂಗಿನ ಗರಿಗಳ ನಡುವೆ ಭಗಭಗನೆ ಹೊತ್ತಿಕೊಳ್ಳುವ ಒಲೆಯೊಳಗಿನ ಬೆಂಕಿ ಸುತ್ತಲ ಛಳಿಯೊಡನೆ ಕದನಕ್ಕಿಳಿದಿರುತ್ತದೆ.


ಅದೇ ಇಪ್ಪತ್ತು ಚಿಲ್ಲರೆ ವರ್ಷಗಳಷ್ಟು ಹಿಂದಕ್ಕೆ ಹೋದರೆ? ಇದೇ ದಿನದ ಇದೇ ಕ್ಷಣದಲ್ಲಿ ಆ ಛಳಿ, ಇಬ್ಬನಿ, ಸಿಪ್ಪೆ ರಾಶಿಗಳ ನಡುವೆ ನಾಲ್ಕು ವರ್ಷದ ಪುಟ್ಟು ಕುಳಿತಿರುತ್ತಿದ್ದ! ಒಲೆಯೊಳಗಿನ ಬೆಂಕಿ ಬಣ್ಣಬಣ್ಣದ ಕೆನ್ನಾಲಿಗೆಗಳನ್ನು ಚಾಚಿ ಉರಿಯುತ್ತ ಶಾಖ ಬೀರಿ ಆಗಷ್ಟೇ ಎದ್ದುಬಂದ ಅವನನ್ನು 'ಬಾ ಬಾ' ಎಂದು ಕರೆದರೆ ಸುತ್ತಲಿನ ಛಳಿ ಹಲ್ಲುಗಳನ್ನು ಕಟಗುಟ್ಟಿಸಿ 'ಹೋಗು ಹೋಗು' ಎಂದು ತಳ್ಳಿದಂತಾಗಿ ಹೆಚ್ಚೂಕಡಿಮೆ ಒಲೆಯೊಳಗೇ ಕುಳಿತಂತೆ ಕುಳಿತು, ಒಳಗೆ ನಡೆಯುವ ಬಣ್ಣಬಣ್ಣದ ಜ್ವಾಲೆಗಳ ಲಾಸ್ಯವನ್ನೂ, ಬೆದರಿಸುವ ಚಿಟಪಟ ಸಿಡಿತಗಳನ್ನೂ ನೋಡುತ್ತಾ ನಡುಗುತ್ತಿರುವ ಪ್ರತಿಯೊಂದು ಜೀವಕೋಶದೊಳಕ್ಕೂ ಶಾಖವನ್ನು ತುಂಬಿಕೊಳ್ಳುವುದು ಛಳಿಗಾಲದ ದಿನವೊಂದಕ್ಕೆ ಸಿಗುವ ಅತ್ಯುತ್ತಮ ಆರಂಭ.


ಒಲೆ ಒಟ್ಟಿದ ನಂತರ ಮುಂದಿನ ಕೆಲಸ ಸಿಪ್ಪೆ ಆರಿಸುವುದು. ಪಣತ ಕೊಟ್ಟಿಗೆಯೊಳಗೆ ನಿನ್ನೆ ರಾತ್ರೆ ಹನ್ನೊಂದರ ತನಕ ಭಾಗ್ಯ, ಲಕ್ಷ್ಮಿ, ಶಾರದ, ಮಂಜ, ರಮೇಶರೆಲ್ಲರೂ ಸುಲಿದುಹೋದ ಅಡಿಕೆಯ ಸಿಪ್ಪೆಗಳು ಆ ತುದಿಯಿಂದ ಈ ತುದಿಯತನಕ ಹರಡಿಕೊಂಡಿರುತ್ತವೆ. ಅದರೊಳಗೆ ಅಡಗಿಕೊಂಡಿರುವ, ಅಡಿಕೆ ಸುಲಿಯುವಾಗ ಕೈಜಾರಿದ 'ಸುಲಿಬೇಳೆ'ಗಳನ್ನು ಒಂದೊಂದಾಗಿ ಆರಿಸಿತೆಗೆಯಬೇಕು. ಅಪ್ಪ ಅಮ್ಮ ಪಟಪಟನೆ ಸಿಪ್ಪೆಗಳನ್ನು ಕೆದಕುತ್ತಾ, ತಲೆಮರೆಸಿಕೊಂಡ ಸುಲಿಬೇಳೆಗಳನ್ನು ಆಚೆ ತೆಗೆಯುತ್ತಿದ್ದರೆ ಮೂರು ಸಿಪ್ಪೆಗಳ ಅಗಲದಷ್ಟಿರುವ ಪುಟ್ಟ ಕೈಯಿಂದ ಬೇಗಬೇಗನೆ ಕೆದಕಲಾರದೆ ಹಿಂದುಳಿಯುವ ಪುಟ್ಟುವಿಗೆ ಒಂದೇ ಒಂದು ಸುಲಿಬೇಳೆಯೂ ಸಿಗುವುದಿಲ್ಲ. ಅಷ್ಟರಲ್ಲಿ ಆರಿಸಬೇಕಾದ ಸಿಪ್ಪೆಯೆಲ್ಲ ಮುಗಿದು ಏನೂ ಸಿಗದ ಪುಟ್ಟು 'ವ್ಯಾssss..' ಎಂದು ವರಾತ ತೆಗೆಯಬಾರದೆಂದು ಅಮ್ಮನೇ ಅವನು ಹುಡುಕುವ ಸಿಪ್ಪೆಗಳೊಳಗೆ ಗುಟ್ಟಾಗಿ ಒಂದೆರೆಡು ಅಡಿಕೆಗಳನ್ನು ಹುದುಗಿಸಿಟ್ಟು, ಅವು ಅವನ ಕೈಗೆ ಸಿಗುವಂತೆ ಮಾಡುತ್ತಾಳೆ. ಅಂಗಳದಲ್ಲಿ ರಾಶಿಬಿದ್ದಿರುವ 'ಕೊನಮಟ್ಟೆ'ಗಳನ್ನು ಅಪ್ಪ ಬುಟ್ಟಿಗೆ ತುಂಬಿಸಿಕೊಂಡು 'ಧರೆಹೊಂಡ'ಕ್ಕೆಸೆಯಲು ಹೋಗುವಾಗ ಪುಟಾಣಿ ಕೊನಮಟ್ಟೆಯೊಂದನ್ನು ಕೈಯ್ಯಲ್ಲಿ ಹಿಡಿದ ಪುಟ್ಟು ಹಿಂದೆಯೇ ಪುಟಪುಟನೆ ಓಡುತ್ತಾನೆ. ಸ್ವಲ್ಪ ಹೊತ್ತಿಗೆಲ್ಲಾ ಒಲೆಯ ಮೇಲೆ ಹಂಡೆಯಲ್ಲಿರುವ ಅಡಿಕೆ ಒಳಗಿರುವ ಚೊಗರಿನಲ್ಲಿ ಚೆನ್ನಾಗಿ ಕುದ್ದು  ಕೆಂಪುಬಣ್ಣ ಪಡೆದುಕೊಂಡಿರುತ್ತದೆ. ತಳದ ತುಂಬಾ ತೂತುಗಳಿರುವ 'ಚೊಗರು ಹುಟ್ಟ'ನ್ನು ಹಂಡೆಯೊಳಗಿಳಿಸಿ ಹೊರತೆಗೆದರೆ ಅದರ ತುಂಬಾ ಕುದ್ದು ಕೆಂಪಾದ ಸುಲಿಬೇಳೆಗಳು! ಚೊಗರೆಲ್ಲಾ ತಳದ ತೂತುಗಳಲ್ಲಿ ಬಸಿದುಹೋಗಿ ಉಳಿಯುವ ಅಡಿಕೆಯನ್ನು ಚಿಕ್ಕ ಬುಟ್ಟಿಯೊಂದರಲ್ಲಿ ಸಂಗ್ರಹಿಸುವ ಅಪ್ಪ ಅದನ್ನು ಹೊತ್ತು, ಏಣಿಯ ಮೂಲಕ ಚಪ್ಪರಕ್ಕೆ ಒಯ್ಯುತ್ತಾನೆ. ಅಲ್ಲಿ ಸಾಲಾಗಿ ಹಾಸಿದ 'ಹೊಗದಟ್ಟಿ'ಗಳ ಮೇಲೆ ಮುಂದಿನ ಐದಾರು ಬಿಸಿಲುಗಳಲ್ಲಿ ಚೆನ್ನಾಗಿ ಒಣಗಬೇಕಿರುವ ಅವನ್ನು ಬಿಡಿಬಿಡಿಯಾಗಿ ಹರಡಿ ಕೆಳಗಿಳಿದು ಬರುತ್ತಾನೆ. ಅಷ್ಟರಲ್ಲಿ ಅಮ್ಮ ಇನ್ನೊಂದಿಷ್ಟು ಬೆಂದಡಿಕೆಗಳನ್ನು ಸೋಸಿ ಬುಟ್ಟಿ ತುಂಬಿಸಿ ತಯಾರಿಟ್ಟಿರುತ್ತಾಳೆ. ಇದು, ಹಂಡೆಯೊಳಗಿನ ಅಷ್ಟೂ ಬೆಂದಡಿಕೆ ಚಪ್ಪರದ ಮೇಲಕ್ಕೆ ವರ್ಗಾವಣೆಯಾಗುವ ತನಕ ಹೀಗೇ ಮುಂದುವರಿಯುತ್ತದೆ. ಅಲ್ಲೇ ಪಕ್ಕದಲ್ಲಿ ಎರೆಡು ಇಟ್ಟಿಗೆಗಳನ್ನು ಒಲೆಯಂತೆ ಜೋಡಿಸಿ, ಅದರ ಮೇಲೊಂದು ಚಿಕ್ಕ ಪಾತ್ರೆಯಿಟ್ಟು, ಒಳಗೊಂದಿಷ್ಟು ನೀರು-ಅಡಿಕೆ ಸಿಪ್ಪೆ ತುಂಬಿಸಿಟ್ಟು, ಸೌಟು ಹಾಕಿ ಕುಚುಕುತ್ತಿರುವ ಪುಟ್ಟುವಿನ 'ಆಟದ ಒಲೆ'ಯಲ್ಲೂ ಸಹಾ ಹೀಗೇ ಅಡಿಕೆ ಬೇಯುತ್ತಿದೆ, ಅವನ ಕಲ್ಪನೆಯ ಹಂಡೆಯೊಳಗೆ.


ಈಗಾಗಲೇ ತೆಗೆದ ಅಡಿಕೆ ಕೊನೆಗಳು ಖಾಲಿಯಾಗಿರುವುದರಿಂದ ಕೊನೆ ತೆಗೆಯುವ ತಮ್ಮಯ್ಯ ಕೊಟ್ಟೆಮಣೆ ಹಿಡಿದು ಬಂದಿದ್ದಾನೆ. ಜೊತೆಗೇ ಅವನು ತಂದಿರುವ ಬಳುಕುವ, ತುದಿಯಲ್ಲಿ ಕೊಕ್ಕೆಯಿರುವ ದೋಟಿ ಈ ಲೋಕದ್ದೇ ಅಲ್ಲವೇನೋ ಎಂಬಷ್ಟು ಉದ್ದವಾಗಿರುವುದು ನೋಡಿ ಪುಟ್ಟುವಿಗೆ ಆಶ್ಚರ್ಯವಾಗಿದೆ. ಎಲ್ಲರೂ ತಿಂಡಿ, ಚಾ ಮುಗಿಸಿ ತೋಟದತ್ತ ನಡೆದಿದ್ದಾರೆ. ಅಲ್ಲಿ ತಮ್ಮಯ್ಯ ತನ್ನ ಕಾಲು ಹಾಗೂ ಅಡಿಕೆಮರಗಳ ಸುತ್ತ ಕೊಟ್ಟೆಮಣೆ ತೊಟ್ಟು, ಮರವನ್ನು ತಬ್ಬಿಕೊಂಡು ಕೋತಿಯಂತೆ ಮೇಲೇರಿದ್ದಾನೆ. ಅವನು ಅಪಾಯಕಾರಿಯಾಗಿ ವಾಲಾಡುತ್ತಿರುವ ಅಡಿಕೆ ಮರದ ತುದಿಯಲ್ಲಿ ಕುಳಿತು, ಅಕ್ಕಪಕ್ಕದ ಮರಗಳ ಕತ್ತಿಗೆ ದೋಟಿ ಹಾಕಿ ಅವು ಕತ್ತಿಗೆ ಕಟ್ಟಿಕೊಂಡಿರುವ ಕೊನೆಗಳನ್ನು ಕೀಳುತ್ತಾ, ಸಾಕ್ಷಾತ್ ಆಂಜನೇಯನಷ್ಟೇ ನಿಪುಣತೆಯಲ್ಲಿ ಮರದಿಂದ ಮರಕ್ಕೆ ದಾಟಿಕೊಳ್ಳುತ್ತಾ, ಬೆಳೆದ ಅಡಿಕೆ ಕೊನೆಗಳನ್ನು ಕಿತ್ತು ತನ್ನ ಸೊಂಟಕ್ಕೆ ಸಿಕ್ಕಿಸಿಕೊಂಡ ಹಗ್ಗದಲ್ಲಿ ಜಾರಿಬಿಡುತ್ತಿರುವುದು, ಹಗ್ಗದ ಇನ್ನೊಂದು ತುದಿ ಹಿಡಿದು ಕೆಳಗೆ ನಿಂತಿರುವ ಅಪ್ಪ ಮೇಲಿಂದ ಸುಂಯ್ಯನೆ ಜಾರಿಬರುವ ಕೊನೆ ನೆಲಕ್ಕಪ್ಪಳಿಸದಂತೆ ಹಿಡಿದು ಪಕ್ಕಕ್ಕಿಡುವುದು ಜಗತ್ತಿನ ಅತಿದೊಡ್ಡ ಸಾಹಸದಂತೆ ಕಾಣುತ್ತಿದೆ. ತೆಗೆದ ಕೊನೆಗಳನ್ನೆಲ್ಲ ಬುಟ್ಟಿಗೆ ತುಂಬಿಸಿಕೊಂಡ ಸತೀಶ ಹೊತ್ತು ಮನೆಯಂಗಳಕ್ಕೊಯ್ದು ರಾಶಿಹಾಕುತ್ತಿದ್ದಾನೆ. ಸಂಜೆಯ ಹೊತ್ತಿಗೆ ತೆಗೆದ ಕೊನೆಗಳನ್ನೆಲ್ಲ ಎಣಿಸಿ 'ಕುತ್ತರಿ' ಹಾಕಲಾಗಿದೆ. "ಈ ಸಲ ಗೋಟಡಿಕೆನೇ ಜಾಸ್ತಿ ಅನ್ಸತ್ತೆ" ಎಂದ ಅಪ್ಪನಿಗೆ "ಇಲ್ಲ ಅಯ್ಯ, ಕೇಕೋಡ್ರ ತೋಟ್ದಲ್ಲೂ ಇದೇ ಕತಿ" ಎಂದು ತಮ್ಮಯ್ಯ ಸಮಾಧಾನ ಹೇಳಿದ್ದಾನೆ.  ಸ್ವಲ್ಪ ಹೊತ್ತಿಗೇ ಸಾಕಿ, ಭಾಗ್ಯ, ಲಕ್ಷ್ಮಿ, ಸದೆಯ, ಕಿಟ್ಟರೆಲ್ಲ ಬಂದು ತಂತಮ್ಮ ಕತ್ತಿಹೂಡಿ ಕುಳಿತಿದ್ದಾರೆ. ಕರೆಂಟು ಹೋದರೆ ಎಮರ್ಜೆನ್ಸಿಗೆಂದು ಸೀಮೆ ಎಣ್ಣೆ ಬುಡ್ಡಿಗಳನ್ನು ತಯಾರಿಡಲಾಗಿದೆ. "ಸಣ್ಣಯ್ಯ, ನಿಮ್ ಕೊಟ್ಗಿಗೆ ಹುಲಿ ನುಗ್ಗಿದ್ ಕತಿ ಗೊತ್ತಿತಾ ನಿಮ್ಗೆ?" ಎಂದು ಸದೆಯ ಪುಟ್ಟುವನ್ನು ಮಾತಿಗೆಳೆದಿದ್ದಾನೆ. ಎಷ್ಟೋ ವರ್ಷದ ಹಿಂದೆ ಹುಲಿಯೊಂದು ತೋಟದಾಸಿ ಬಂದು ಕೊಟ್ಟಿಗೆಯಲ್ಲಿದ್ದ ದನದ ಮೇಲೆರಗಿದ್ದು, ಅಲ್ಲೇ ಇದ್ದ ದೈತ್ಯ ಹೋರಿ ಅದರೊಂದಿಗೆ ಹೋರಾಟಕ್ಕಿಳಿದು ಶೌರ್ಯ ಮೆರೆದಿದ್ದು, ಸದ್ದು ಕೇಳಿ ಎಲ್ಲರೂ ಗಲಾಟೆ ಮಾಡುತ್ತ ಎದ್ದು ಬಂದಾಗ ಅನಾಮತ್ತು ಎಂಟಡಿಯೆತ್ತರದ ಗೋಡೆಯಾಚೆಗೆ ನೆಗೆದುಹೋದ ಹುಲಿಯ ಬಾಲವಷ್ಟೇ ಕಂಡಿದ್ದು... ಸದೆಯ ಹೇಳುತ್ತಿರುವ ಈ ಭಯಾಶ್ಚರ್ಯ ಬೆರೆತ ರೋಚಕ ಕಥೆ ದೃಶ್ಯಗಳಾಗಿ ಪುಟ್ಟುವಿನ ಕಲ್ಪನೆಯಲ್ಲಿ ಚಲನಚಿತ್ರದಂತೆ ಮೂಡಿಬರುತ್ತಿದೆ. "ನಮ್ ಶಂಕ್ರಂಗೆ ಮೊನ್ಮೊನ್ನೆ ಕಾಪಿಕಾನ್ ಗುಡ್ದಂಗೆ ಹುಲಿ ಹೆಜ್ಜೆ ಕಂಡೀತಂಬ್ರು" ಎಂದ ಕಿಟ್ಟ ಪುಟ್ಟುವಿನ ಭಯವನ್ನು ದುಪ್ಪಟ್ಟುಗೊಳಿಸಿದ್ದಾನೆ. ಅಂದು ರಾತ್ರೆ ಅವನಿಗೆ ಭೀಕರ ಹುಲಿಯೊಂದು ಅಡಿಕೆ ಮರಹತ್ತಿ ಕೊನೆ ತೆಗೆಯುತ್ತಿರುವಂತೆ, ತೋಟಕ್ಕೆ ಬಂದ ಅವನ ಮೇಲೆ ಘರ್ಜಿಸುತ್ತಾ ಎರಗಿದಂತೆ ವಿಚಿತ್ರ, ಭಯಾನಕ ಕನಸು ಬೀಳಲಿದೆ.


ಹೀಗೆ ಹುತ್ತದೊಳಗಿನ ನಾಗರಹಾವಿನಿಂದ ಹಿಡಿದು ಹಿತ್ತಲಕೇರಿಯ ನಾಗಪ್ಪಣ್ಣನ ತನಕ ಎಲ್ಲಾ ವಿಷಯಗಳೂ ಅಲ್ಲಿ ಚರ್ಚೆಯಾಗುತ್ತಿವೆ. ಅಡಿಕೆ ಸುಲಿಯಲು ಬಂದವರಿಗೆಂದು ಅಮ್ಮ ಪೂರಿ-ಪಲ್ಯ ಮಾಡಿದ್ದಾಳೆ. ಅದನ್ನೇ ತಿಂದು 'ನನಗೆ ಊಟ ಬೇಡ' ಎಂದು ಹಠಮಾಡಿದ ಪುಟ್ಟುವಿಗೆ ಬಲವಂತವಾಗಿ ಮಜ್ಜಿಗೆ ಕಲಸಿದ ಅನ್ನದ ನಾಲ್ಕು ತುತ್ತು ತಿನ್ನಿಸಲಾಗಿದೆ. ಬಲ್ಬಿನೆಡೆಗೆ ಆಕರ್ಶಿತವಾಗಿ ಹೊರಗಿನ ಕತ್ತಲಿನಿಂದ ಗುಂಯ್ ಎನ್ನುತ್ತಾ ಹಾರಿಬಂದ 'ದುಂಬಿ'ಯನ್ನು ಹೊಡೆದು ಸಾಯಿಸಲಾಗಿದೆ. "ಇಂಥಾ ಒಂದು ದುಂಬೀನ ಕೊಂದ್ರೆ ಒಂದು ತೆಂಗಿನ ಮರ ಉಳಿಸಿದಷ್ಟು ಪುಣ್ಯ ಬರೆತ್ತೆ" ಎಂದಿದ್ದಾಳೆ ಅಮ್ಮ. ಸ್ವಲ್ಪ ಹೊತ್ತಿಗೇ ಕರೆಂಟುಹೋಗಿ ಸೀಮೆಣ್ಣೆ ಬುಡ್ಡಿಗಳನ್ನು ಹಚ್ಚಲಾಗಿದೆ. ನುಸಿ, ಹಾತೆಗಳೆಲ್ಲ ದೀಪದ ಸುತ್ತ ಹಾರಾಡಿ ರೆಕ್ಕೆ ಸುಟ್ಟುಕೊಳ್ಳುತ್ತಿವೆ. ಛಳಿ ಹೆಚ್ಚಾಗುತ್ತಿದೆ. ಸದೆಯ ಹೇಳಿದ ಕೊಳ್ಳಿದೆವ್ವದ ಕಥೆಯನ್ನು ಕೇಳಿಸಿಕೊಳ್ಳುತ್ತಾ ಒಲೆಯ ಪಕ್ಕ ಹಾಸಿದ ಗೋಣಿಯಮೇಲೇ ನಿದ್ರೆಹೋದ ಪುಟ್ಟುವನ್ನು ಅಮ್ಮ ಮನೆಯೊಳಗೆ ಮಲಗಿಸಿಬಂದಿದ್ದಾಳೆ. ಸಮಯ ಕಳೆದಂತೆ ನಿದ್ರಾದೇವಿ ಕಾಟ ಜಾಸ್ತಿಯಾಗುತ್ತಾ ಎಲ್ಲರೂ ಹಾ... ಎಂದು ಆಕಳಿಸತೊಡಗಿದ್ದಾರೆ. ಹತ್ತೂ ಮೊವ್ವತ್ತಕ್ಕೆ ಎಲ್ಲರೂ ಎದ್ದು ತಾವು ಸುಲಿದ ಅಡಕೆಯನ್ನು ಕೊಳಗದಲ್ಲಿ ಅಳೆಯತೊಡಗಿದ್ದಾರೆ. ಎಲ್ಲರಿಗಿಂತ ಹೆಚ್ಚು ಕೊಳಗ ಸುಲಿದ ಸಾಕಿ ಗುಟ್ಟಾಗಿ ಒಳ್ಳೊಳ್ಳೇ ಕೊನೆಗಳನ್ನು ಬಡಿದಿಟ್ಟುಕೊಂಡಿದ್ದಳೇನೋ ಎಂದು ಭಾಗ್ಯಳಿಗೆ ಅನುಮಾನವಾಗಿದೆ. ಅಪ್ಪನ ಪುಸ್ತಕದಲ್ಲಿ ಲೆಕ್ಕ ಬರೆಸಿದ ಎಲ್ಲರೂ ಕೈ ತೊಳೆದುಕೊಂಡು ತಂತಮ್ಮ ಮನೆಯತ್ತ ನಡೆದಿದ್ದಾರೆ.

                        ***************

ಹೆಚ್ಚೂಕಡಿಮೆ ಅಕ್ಟೋಬರ್ ಕೊನೆಯ ವಾರದಿಂದ ಫೆಬ್ರವರಿ ಅಂತ್ಯದ ತನಕ (ಅಡಿಕೆ ಆರಿಸಿ ಮೂಟೆಕಟ್ಟುವುದೂ ಸೇರಿ) ವಿವಿಧ ಹಂತಗಳಲ್ಲಿ ಸಾಗುವ 'ಅಡಿಕೆ ಕುಯಿಲು' ನಾಲ್ಕು ವರ್ಷದ ಪುಟ್ಟುವಿನಿಂದ ಹಿಡಿದು ಎಂಭತ್ತು ವರ್ಷದ ಪುಟ್ಟೇಗೌಡರ ತನಕ ಎಲ್ಲರೂ ಒಂದಿಲ್ಲೊಂದು ರೀತಿ ತನ್ನ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತದೆ. ನಾವು ಅದೇ ಆಫೀಸಿನ ಅದೇ ಕಂಪ್ಯೂಟರ್ ಎದುರು ಕುಳಿತು, ಕೀಬೋರ್ಡನ್ನು ದಿನವಿಡೀ ಕಟಕಟನೆ ಕುಟ್ಟಿ ಮನೆಗೆ ಮರಳುವ  ಅವಧಿಯಲ್ಲಿ ಈ ಮಂದಿ ಅದೆಷ್ಟೋ ಅರೋಗ್ಯಕರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ನಿಸರ್ಗದ ಚಿಕ್ಕ ಬದಲಾವಣೆಯನ್ನೂ ತಮ್ಮದಾಗಿಸಿಕೊಳ್ಳುವ ಹಳ್ಳಿಯ ಜೀವನಕ್ರಮಕ್ಕೂ, ನಮ್ಮ ಅನುಕೂಲಕ್ಕಾಗಿ ನಿಸರ್ಗವನ್ನೇ ಬದಲಾಯಿಸುತ್ತಿರುವ ಪಟ್ಟಣ ಜೀವನಕ್ಕೂ ನಡುವಿನ ವ್ಯತ್ಯಾಸವೇನೆಂಬುದನ್ನು ನಮ್ಮ ಇಂದಿನ ಅರೋಗ್ಯ, ವಾತಾವರಣಗಳೇ ಹೇಳುತ್ತಿವೆ. ಆದರೆ ಈಗೀಗ ಮಾರುಕಟ್ಟೆಯ ಅಸ್ಥಿರತೆ ಹಾಗೂ ಕೆಲಸಗಾರರ ಕೊರತೆಯಿಂದ ಅಡಿಕೆ ಕೊಯಿಲು ತನ್ನ ಸಹಜ ಸೊಬಗನ್ನು ಕಳೆದುಕೊಳ್ಳುತ್ತಿದೆ. ಮೊದಲು ಟಿವಿಗಳು ಹಾಗೂ ನಂತರ ಅಡಿಕೆ ಸುಲಿಯುವ ಮೆಶಿನ್ಗಳು ಬಂದಮೇಲೆ ರಾತ್ರೆ ಅಂಗಳವನ್ನು ತುಂಬುತ್ತಿದ್ದ ರೋಚಕ ಕಥೆಗಳು, ತಮಾಷೆಗಳು, ಚರ್ಚೆಗಳೆಲ್ಲಾ ಇಲ್ಲವಾಗುತ್ತಾ, ಹಳೆಯ ತಲೆಮಾರೊಂದರ ಅಗಾಧ ಅನುಭವ, ಕಥೆ, ಹಾಡು, ಪಾಡು, ಜ್ಞಾನಗಳು ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತಿದ್ದ ಇಂತಹಾ ಅಪೂರ್ವ ಸಂದರ್ಭಗಳು ಮಾಯವಾಗುತ್ತಿವೆ. ಓದಿಕೊಂಡವರು ಪಟ್ಟಣ ಸೇರಬೇಕೆನ್ನುವುದು ನದಿಗಳೆಲ್ಲ ಕಡಲು ಸೇರಬೇಕೆನ್ನುವಷ್ಟೇ ಅನಿವಾರ್ಯ ಸಂಗತಿಯೆಂಬ ತಪ್ಪು ಕಲ್ಪನೆ ಹೀಗೇ ಮುಂದುವರೆದಲ್ಲಿ ಮುಂದೊಂದು ದಿನ ಈ ಅಡಿಕೆ ಕೊಯಿಲು, ಗದ್ದೆಕೊಯಿಲು, ನಾಟಿ, ಸುಗ್ಗಿಗಳೆಲ್ಲ ಹೀಗೆ ಕೇವಲ ಪಟ್ಟಣದ ಬಸ್ಸುಗಳಲ್ಲಿ ನೇತಾಡುತ್ತ ಸ್ಮರಿಸಿಕೊಂಡ ನೆನಪುಗಳಲ್ಲಿ, ಸಾಪ್ತಾಹಿಕಗಳಲ್ಲಿ ಓದಿ ಮರೆತ ಬರಹಗಳಲ್ಲಿ ಉಳಿದುಹೋದರೂ ಆಶ್ಚರ್ಯವಿಲ್ಲ.


('ನಿಮ್ಮೆಲ್ಲರ ಮಾನಸ'ಲ್ಲಿ ಪ್ರಕಟಿತ ಲೇಖನ)

ಶನಿವಾರ, ಫೆಬ್ರವರಿ 3, 2018

ಬಾಬಣ್ಣನಂಗಡಿಯೆಂಬ ನಮ್ಮೂರ ಬಿಗ್ ಬಜಾರ್!



ಅಂಗಡಿ ಎಂದರೆ ಹೇಗಿರುತ್ತದೆ?

ನನಗೆ ಈ ಜೆನರಲ್ ಸ್ಟೋರ್ಸ್ ಗೊತ್ತು, ಫ್ಯಾಕ್ಟರಿ ಔಟ್ಲೆಟ್ ಗೊತ್ತು. ಮಾಲ್ ಗೊತ್ತು. ರಿಲಯನ್ಸ್ ಡಿಜಿಟಲ್, ರಿಟೈಲರ್ ಶಾಪ್, ಬಿಗ್ ಬಜಾರ್, ಸೂಪರ್ ಮಾರ್ಕೆಟ್, ಬ್ರ್ಯಾಂಡ್ ಫ್ಯಾಕ್ಟರಿ ಎಲ್ಲವೂ ಗೊತ್ತು. ಇದ್ಯಾವುದಿದು ಅಂಕಲ್ ಅಂಗಡಿ? ಅದು ರಿಲಯನ್ಸ್ ದಾ ಇಲ್ಲಾ ಒರಾಯನ್ ದಾ?

ಮುಂದಿನ ಪೀಳಿಗೆಯ ಚಿಲ್ಟಾರಿಗಳು ಹೀಗಂತ ಕೇಳಿದರೆ ಬೆಚ್ಚಿಬೀಳಬೇಡಿ. ಈಗ ಚಿಕ್ಕ ಚಿಕ್ಕ ನಗರಗಳಲ್ಲೂ ಸೂಪರ್ ಮಾರ್ಕೆಟ್, ಬ್ರಾಂಡ್ ಫ್ಯಾಕ್ಟರಿ, ಫ್ಯಾಶನ್ ಸ್ಟೋರ್ ಗಳು ತುಂಬಿಕೊಳ್ಳುತ್ತಿರುವುದನ್ನು ನೋಡಿದರೆ 'ಅಂಗಡಿ' ಎನ್ನುವ ನಾವು-ನೀವು ನಿಂಬೆಹುಳಿ ಚಾಕ್ಲೇಟ್ ಕೊಳ್ಳುತ್ತಿದ್ದ ಆ ಪುಟ್ಟ ಮಾಯಾಮಳಿಗೆ ಮಾಯವಾಗಿ ಹೋಗುವ ದಿನ ದೂರವಿಲ್ಲವೇನೋ ಅನಿಸುತ್ತದೆ. ಹಾಗಂತ ಇಲ್ಲಿನ ತನಕದ ಪೀಳಿಗೆಯಲ್ಯಾರೂ ಅಂಗಡಿಯನ್ನು ನೋಡದೇ ಬೆಳೆದವರು ಇರಲಿಕ್ಕಿಲ್ಲ. ನಿಮಗೆಲ್ಲ ನಿಮ್ಮೂರಿನ ನಟ್ಟ ನಡುವಿನಲ್ಲಿ ಅಥವಾ ಬಸ್ ಸ್ಟ್ಯಾಂಡಿನ ಪಕ್ಕ ನಾಲ್ಕು ಜನ ಸೇರುವ ಜಾಗದಲ್ಲಿ ಬಾಬಣ್ಣ, ರಾಮಣ್ಣ, ಉಪೇಂದ್ರಣ್ಣ ಎಂಬ ಯಾವುದೋ ಹೆಸರಿನ 'ಅಣ್ಣ'ನೊಬ್ಬ ಇಟ್ಟಿದ್ದ ಅಂಗಡಿ ನೆನಪಿದೆ ತಾನೇ? ಆಗಿನ ಕಾಲಕ್ಕೆ ಇಡೀ ಊರಿಗೇ ಬಿಗ್ ಬಜಾರಾಗಿದ್ದ ಅವುಗಳನ್ನು ಮರೆಯುವುದಾದರೂ ಹೇಗೆ ಅಲ್ವಾ? ನನಗಿನ್ನೂ ಚೆನ್ನಾಗಿ ನೆನಪಿದೆ. ನಮ್ಮೂರಿನ ಬಸ್ ಸ್ಟಾಪಿನ ಎದುರು, ಮುಖ್ಯರಸ್ತೆಯ ಬದಿಯಲ್ಲಿ, ರಸ್ತೆಗಿಂತ ಕೊಂಚ ಎತ್ತರದ ಜಾಗದಲ್ಲಿ ಹಂಚಿನದೊಂದು ಸೂರು. ಅದರ ಕೆಳಗೆ ಮೂರಡಿ ಎತ್ತರದ ಆವರಣ ಎನ್ನಬಹುದಾದ ಚಿಕ್ಕದೊಂದು ಕಟ್ಟೆ. ಚಪ್ಪಲಿಯನ್ನು ಅಲ್ಲೇ ಬಿಚ್ಚಿಟ್ಟು ಒಳಗೆ ನಡೆದರೆ ಮೊದಲು ಎದಿರಾಗುವುದು ನೆಲದ ಮೇಲೆ ಟೊಮೇಟೋ, ಕ್ಯಾರೇಟ್, ಅಲೂಗಡ್ಡೆ ಮುಂತಾದ ತರಕಾರಿಗಳನ್ನು ತುಂಬಿಟ್ಟಿರುವ ಬುಟ್ಟಿಗಳು. ಪಕ್ಕದಲ್ಲಿ ಮರದ ಪೆಟ್ಟಿಗೆಗಳೊಳಗೆ ಶಿಸ್ತಾಗಿ ನಿಂತಿರುವ ಗೋಲಿ ಸೋಡದ ನೀಲಿ ಬಾಟಲ್ ಗಳು‌. ಎದುರುಗಡೆ ಅಂಗಡಿಯ ಬಾಗಿಲಿನಲ್ಲಿ ಪುಟ್ಟದೊಂದು ಮರದ ಸ್ಟ್ಯಾಂಡಿನ ಮೇಲೆ ಸಾಲಾಗಿ ನಿಂತು ತಮ್ಮೊಳಗಿನ ಚಾಕ್ಲೇಟೇ ಇತ್ಯಾದಿ ಸಿಹಿ-ಹುಳಿ ತಿಂಡಿಗಳನ್ನು ಜಗತ್ತಿಗೆ ತೋರಿಸುತ್ತ ಕೈಬೀಸಿ ಕರೆಯುತ್ತಿರುವ ಗಾಜಿನ ಭರಣಿಗಳು. ಪಕ್ಕದ ಗೋಡೆಯ ಮೇಲೆ ಹಾರದಂತೆ ನೇತಾಡುತ್ತಿರುವ, ಲೇಟೆಸ್ಟ್ ಆಗಿ ಮಾರುಕಟ್ಟೆಗೆ ಬಂದಿರುವ ಕಟ್ಟಮಿಟ್ಟ, ಶಕ್ತಮಾನ್ ಚಾಕಲೇಟ್ ಗಳು. ಒಳಗಿನ ಸ್ಟ್ಯಾಂಡುಗಳಲ್ಲಿ ಸಾಲಾಗಿ ಜೋಡಿಸಿಟ್ಟ ದಿನಬಳಕೆಯ ವಸ್ತುಗಳು..‌‌

ಅದು ಬಾಬಣ್ಣನ ಅಂಗಡಿ!

ಪಕ್ಕದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪ್ರತಿಯೊಬ್ಬ ಚಿಣ್ಣನೂ ತಿರುತಿರುಗಿ ನೋಡುತ್ತಾ ಹೋಗುತ್ತಿದ್ದ ಅಂಗಡಿಯದು. ಇಪ್ಪತೈದು ಪೈಸೆಯ ನಿಂಬೆ ಹುಳಿ ಚಾಕ್ಲೆಟ್ ನಿಂದ ಹಿಡಿದು ಇಪ್ಪತೈದು ರುಪಾಯಿಯ ಕ್ಯಾಸ್ಕೋ ಬಾಲಿನ ತನಕ ಮಕ್ಕಳ ಮನಗೆದ್ದುದೆಲ್ಲವೂ ಅಲ್ಲಿ ಲಭ್ಯ. ಸಂಜೆ ಹೊರಗೆ ಹೊರಟ ಅಪ್ಪನ ಜೊತೆ ಹಠ ಮಾಡಿ ತಾನೂ ಹೋರಟುಬಂದು ಆ ಅಂಗಡಿಯ ಬಾಗಿಲಿನಲ್ಲಿ ನಿಂತ ಪೋರನ ಕಣ್ಣೆದುರು ಗೊಂಚಲು ಗೊಂಚಲು ಕನಸುಗಳು! ಆ ಬದಿಯಲ್ಲಿ ನೋಡಿದರೆ ಬಾಟಲಿಯೊಳಗೆ ಬೆರಳು ತೂರಿಸಿ ಫಟ್ ಎಂದು ಒಡೆದುಕೊಡುವ ಗೋಲಿಸೋಡ. ಮಧ್ಯದಲ್ಲಿ ಮರದ ಸ್ಟ್ಯಾಂಡಿನ ಮೇಲೆ ನಮ್ಮ ಜೇಬಿನೊಳಗೇ ಇದೆಯೇನೋ ಎನ್ನುವಷ್ಟು ಪಾರದರ್ಶಕವಾಗಿರುವ ಭರಣಿಗಳೊಳಗೆ ಜೋಡಿಸಿರುವ ಸೋಂಪಾಪುಡಿ, ಮೈಸೂರ್ ಪಾಕು, ಕಂಬಾರ್ ಕಟ್(ಕಡ್ಲೆ ಮಿಠಾಯಿ), ಶುಂಟಿ ಪೇಪರ್ಮೆಂಟ್, ಮಹಾಲ್ಯಾಕ್ಟೋ, ಜೆಲ್ಲಿ, ಲ್ಯಾಕ್ಟೋ ಕಿಂಗ್, ಕಾಫೀ ಬೈಟ್, ನಿಂಬೆಹುಳಿ ಚಾಕ್ಲೇಟ್, ರಸಗುಲ್ಲಗಳು. 'ನನ್ನನ್ನು ಊದು' ಎಂದು ಕೈ ಬೀಸಿ ಕರೆಯುತ್ತಿರುವ ಬಾಟಲಿಯೊಳಗಿನ ಬಣ್ಣಬಣ್ಣದ ಪುಗ್ಗಿಗಳು, ಕೈಮೇಲೆ ಅಂಟಿಸಿಕೊಂಡು ನೀರು ಹಚ್ಚಿ ಗಸಗಸನೆ ಉಜ್ಜಿದಾಗ ಒಳಗಿರುವ ಬೂಮರ್, ಶಕ್ತಿಮಾನ್ ರ ಚಿತ್ರಗಳು ಕೈಯ ಮೇಲಕ್ಕೆ ವರ್ಗಾವಣೆಯಾಗಿಬಿಡುವ ಅದ್ಭುತ ಟ್ಯಾಟೂಗಳು ಫ್ರೀ ಬರುವ ಬೂಮರ್, ಬಿಗ್ ಬಬೂಲ್, ಮಾರ್ಬಲ್ಸ್ ಗಳು...

ಚಿಕ್ಕಚಿಕ್ಕ ಪ್ಯಾಕೇಟುಗಳಲ್ಲಿ ನೇತುಹಾಕಿರುವ ಹಸಿರು ಕಡಲೆ, ಇಂಗ್ಲೀಷ್ ನ ಅಕ್ಷರಗಳೇ ಹಿಡಿಕೆಗಳಾಗಿರುವ ಎಬಿಸಿಡಿ ಲಾಲಿಪಾಪ್, ಕವರ್ ನೊಳಗೆ ಪ್ಲಾಸ್ಟಿಕ್ ಉಂಗುರ, ಸರ, ಪೀಪಿ, ಬಿಲ್ಲು-ಬಾಣ ಮುಂತಾದ 'ಸರ್ಪೈಸ್ ಗಿಫ್ಟ್' ಗಳು ಫ್ರೀ ದೊರೆಯುವ ಶಕ್ತಿಮಾನ್ ಚಾಕಲೇಟ್ ಗಳು, ಚಿಕ್ಕಚಿಕ್ಕ ಕಡ್ಡಿಗೆ ಬಣ್ಣಬಣ್ಣದ ಬ್ಯಾಗಡೆ ಸುತ್ತಿರುವ, ಒಳಗಡೆ ನಾಲಿಗೆ ನಲಿನಲಿದಾಡುವಂತೆ ಮಾಡುವ ಹುಣಿಸೆಯ ಲೇಹ್ಯವಿರುವ ಕಟ್ಟಮಿಟ್ಟ, ಅದೋ ಅಲ್ಲಿ- ಅಂಗಡಿಯೊಳಗಿನ ತುತ್ತತುದಿಯ ಮೂಲೆಯಲ್ಲಿ ಕಾಣುತ್ತಿರುವ ಕೆಂಬಣ್ಣದ ಫ್ರಿಜ್ಜಿನೊಳಗಿನ ಚಿಕ್ಕ ಕವರ್ ನೊಳಗೆ ತುಂಬಿಟ್ಟಿರುವ ಬಣ್ಣಹಚ್ಚಿದ ಹಿಮದಂತಿರುವ ಗಟ್ಟಿ ಪೆಪ್ಸಿ, ಬಾಯಲ್ಲಿ ಕುಡಿದರೆ ಮೂಗಲ್ಲಿ ತೇಗು ಬರುವ ಪೀಲೆ.. ಇಷ್ಟೆಲ್ಲ ವೈವಿಧ್ಯಮಯ ತಿಂಡಿಗಳ ಮಧ್ಯೆ ಒಂದೇ ಒಂದನ್ನು ಆಯ್ಕೆ ಮಾಡಬೇಕೆಂಬುದು ಎಂತಹ ಘೋರ! ಮನೆಗೆ ಬೇಕಾದ ಉಪ್ಪು, ಕಡಲೆಹಿಟ್ಟು, ಅಡಿಗೆ ಎಣ್ಣೆಗಳನ್ನೆಲ್ಲ ಕೊಂಡಾದ ಮೇಲೆ ಅಪ್ಪ ಕೇಳುವ "ನಿಂಗೇನ್ಬೇಕ?" ಎಂಬ ಒಂದೇ ಒಂದು ಪ್ರೆಶ್ನೆಗೆ ಪೋರನ ಬಾಯಿಯಲ್ಲಿ ಹತ್ತು ಉತ್ತರ ತಯಾರಿರುತ್ತಿತ್ತು:

"ಶಕ್ತಿಮಾನ್ ಚಾಕ್ಲೇಟ್.."

"ಬೇಡಬೇಡ ಭೂಮರ್.."

"ಇದು ಬೇಡ ಪೆಪ್ಸಿ..."

ಹೀಗೆ ಇಡೀ ಅಂಗಡಿಗೆ ಅಂಗಡಿಯೇ ಬೆರಳಂಚಿಗೆ ಬಂದು ನಿಂತುಬಿಡುತ್ತಿದ್ದ ಕ್ಷಣವದು. ಕೊನೆಗೆ ಅಪ್ಪ-ಬಾಬಣ್ಣ ಇಬ್ಬರೂ ಕಣ್ಣಲ್ಲೇ ಮಾತಾಡಿಕೊಂಡು, ಯಾವುದೋ ಒಂದು ಜಾತಿಯ ಚಾಕಲೇಟನ್ನು ಪೋರನ ಕೈಗಿತ್ತು, ಅದೇ ಜಗತ್ತಿನ ಸರ್ವ ಶ್ರೇಷ್ಠ ಚಾಕಲೇಟೆಂದು ಅವನನ್ನು ನಂಬಿಸಿ ಸಾಗಹಾಕುವ ಮೂಲಕ ಈ ಗೊಂದಲ ಕೊನೆಯಾಗುತ್ತದೆ. ಹೀಗೆ ಯಾವುದೋ ಒಂದು ತಿಂಡಿಯನ್ನು ಹಿಡಿದು ಹೊರಟು, ಕೊನೆಯ ಬಾರಿಗೆಂಬಂತೆ ತಿರುಗಿ ನೋಡಿದ ಆ ಚಿಣ್ಣನಿಗೆ ಕೊನೆಗೂ ಅಂಗಡಿಯಲ್ಲೇ ಉಳಿದುಹೋದ, ಅವನು ಕೊಳ್ಳಲಾಗದ ಆ ಚಾಕ್ಲೇಟುಗಳೆಲ್ಲ ಕಣ್ಣೀರು ತುಂಬಿಕೊಂಡು ವಿದಾಯ ಹೇಳುತ್ತವೆ.

ಇದು ಅಲ್ಲಿ ಅಂಗಡಿಯಲ್ಲಿ ದಿನಕ್ಕೆ ಏನಿಲ್ಲವೆಂದರೂ ಹತ್ತು ಬಾರಿಯಂತೆ, ವಾರದ ಏಳೂ ದಿನವೂ ಪುನರಾವರ್ತನೆಯಾಗುತ್ತಿದ್ದ ಘಟನೆ. ಹಂಚಿನ ಮಾಡಿನ ಚಿಕ್ಕ ಜಾಗವಾಗಿತ್ತಾದರೂ ಬಾಬಣ್ಣನ ಅಂಗಡಿ ಕೇವಲ ದಿನಬಳಕೆಯ ದಿನಸಿ ವಸ್ತುಗಳಿಗೆ ಸೀಮಿತವಾಗಿರಲಿಲ್ಲ. ಯಾವುದೇ ಹಬ್ಬವಾದರೂ ಊರಿನಲ್ಲಿ ಮೊದಲು ಕಾಲಿಡುತ್ತಿದ್ದುದು ಇಲ್ಲಿಗೇ. ದೀಪಾವಳಿ, ರಾಖಿ ಹಬ್ಬಗಳೆಲ್ಲ ಸನಿಹ ಬಂದಿದ್ದು ನಮಗೆ ಗೊತ್ತಾಗುತ್ತಿದ್ದುದೇ ಬಾಬಣ್ಣನ ಅಂಗಡಿಯನ್ನು ಹೊಸದಾಗಿ ಅಲಂಕರಿಸಿರುವ ಪಟಾಕಿ, ರಾಖಿಗಳಿಂದ. ಕೋವಿ, ಮದ್ದು, ಪಟಾಕಿಗಳು ಬಾಬಣ್ಣನ ಅಂಗಡಿಯನ್ನು ಪ್ರವೇಶಿಸಿದ ಮರುದಿನ ಸಂಜೆಯೇ ನಮ್ಮ ಶಾಲೆಯ ಹಿಂದಿನ ಗುಡ್ಡದಲ್ಲಿ ಢಮಾರ್ ಎನ್ನುವ ಶಬ್ದ ಮೊಳಗುತ್ತಿತ್ತು. ಅಮ್ಮನನ್ನು ಕಾಡಿ, ಗೊಗರೆದು ಐವತ್ತೋ ಅರವತ್ತೋ ಇಸಿದುಕೊಂಡು ಅಂಗಡಿಗೆ ಬರುವ ಮಕ್ಕಳಿಗೆ ಬಾಬಣ್ಣನಿಂದ ಯಾವ ಒಬಾಮಾನಿಗೂ ಕಡಿಮೆಯಿಲ್ಲದ ಭವ್ಯ ಸ್ವಾಗತ ದೊರೆಯುತ್ತಿತ್ತು. "ಬಾರಾ ಮಾಣಿ.. ಹೊಸ ಹೊಸ ಪಟಾಕಿ ಬಂದಿದೆ ನೋಡಾ" ಎನ್ನುತ್ತಾ ಒಳಗಿನಿಂದ ಬಿಡಿಮದ್ದು, ಕೋವಿ, ಮೆಣಸಿನಕಾಯಿ ಪಟಾಕಿ, ನೆಲಚಕ್ರ, ಸುರುಸುರು ಬತ್ತಿ, ಬಾಳೆಕಂಬ, ರಾಕೆಟ್ ಗಳ ಬಾಕ್ಸ್ ಗಳನ್ನು ತೆಗೆದು ಎದಿರಿಡುತ್ತಿದ್ದ. "ಇಪ್ಪತ್ತು ರೂಪಾಯಿ ವಾಪಾಸು ತರ್ಬೇಕು" ಎಂದು ಹೇಳಿಕಳಿಸಿರುತ್ತಿದ್ದ ಅಮ್ಮನ ಮಾತನ್ನು ನಾವು ಕಣ್ಣೆದುರಿನ ಆ ವೈಭವವನ್ನು ನೋಡನೋಡುತ್ತಲೇ ಮರೆತುಬಿಟ್ಟಿರುತ್ತಿದ್ದೆವು. ಆದರೆ ಕಡಿಮೆ ಬೆಲೆಕೊಟ್ಟು ತಂದ ಕಡಿಮೆ ಗುಣಮಟ್ಟದ್ದಾಗಿತ್ತೋ ಅಥವಾ ಬಾಬಣ್ಣ ಅವನ್ನು ತಣ್ಣಗಿನ ಜಾಗದಲ್ಲಿಟ್ಟಿರುತ್ತಿದ್ದನೋ ಏನೋ, ಅಲ್ಲಿ ಕೊಂಡ ಪಟಾಕಿಗಳಲ್ಲಿ ಹಲವು ಠುಸ್ ಗುಂಪಿಗೆ ಸೇರಿಬಿಡುತ್ತಿದ್ದವು. ಢಮಾರೆಂಬ ದೊಡ್ಡ ಶಬ್ದದೊಂದಿಗೆ ಹೊಟ್ಟಬೇಕಾದ ಮೆಣಸಿನಕಾಯಿ ಪಟಾಕಿ ಸುರುಸುರು ಬತ್ತಿಯಂತೆ ಸುರ್ರನೆ ಬೆಂಕಿಯನ್ನೆರಚುತ್ತ ಚೀರಾಡುತ್ತಿತ್ತು. ನಿಂತಲ್ಲೇ ಅಷ್ಟೆತ್ತರಕ್ಕೆ ನಕ್ಷತ್ರಗಳನ್ನೆರಚಬೇಕಾದ ಬಾಳೆಕಂಬ ಢಮಾರನೆ ಹೊಟ್ಟಿ ಆಕಾಶಕ್ಕೆ ನೆಗೆಯುತ್ತಿತ್ತು. ಇನ್ನು ಬಾಬಣ್ಣ "ಮೂರು ತೆಂಗಿನಮರದಷ್ಟು ಎತ್ತರಕ್ಕೆ ಹಾರತ್ತೆ ನೋಡು!" ಎಂದು ಬೂಸಿ ಹೊಡೆದು ಕೊಟ್ಟಿದ್ದ ರಾಕೆಟ್ ನೆಟ್ಟಗೆ ನಿಲ್ಲಿಸಿ ಉಡಾಯಿಸಿದರೂ ಬೆಂಕಿ ಅಂಟಿಸಿದವನನ್ನೇ ಅಟ್ಟಿಸಿಕೊಂಡು ಹೋಗಿ ಅಂಗಳದ ತುಂಬಾ ಅಟ್ಟಾಡಿಸಿದ ಘಟನೆಗಳೂ ನಡೆದಿದ್ದವು!

ಇನ್ನು ರಾಖಿ ಹಬ್ಬ ಬಂದರಂತೂ ಮುಗಿದೇ ಹೋಯಿತು, ಕೊರಳ ತುಂಬಾ ನಾನಾ ಬಣ್ಣ, ನೂಲು, ಸ್ಪಂಜುಗಳ ರಾಖಿಗಳ ಮಾಲೆ ಕಟ್ಟಿಕೊಂಡ ಬಾಬಣ್ಣನ ಅಂಗಡಿ ಸ್ವರ್ಗಲೋಕದ ಬಾಗಿಲೇ ಆಗಿಬಿಡುತ್ತಿತ್ತು. ರುಪಾಯಿಗೆ ಹತ್ತುಬರುವ ಉದ್ದುದ್ದ ತೆಳು ಎಳೆಗಳಿರುವ ಗೌರೀದಾರ, ರೂಪಾಯಿಗೆ ನಾಲ್ಕು ಬರುವ ಉಲ್ಲನ್ನಿನ ಪುಟ್ಟ, ಉರುಟು ತಲೆಯ ರಾಖಿ, ಅದರಲ್ಲೇ ಕೊಂಚ ದೊಡ್ಡ ತಲೆಯಿರುವ ಐವತ್ತು ಪೈಸೆಯದ್ದು, ಸಂತ್ರದ ತಗಡಿನ ಹಾಳೆಯ ಮೇಲೆ ಸ್ಪಂಜಿನ ಚಕ್ರವಿರುವ ಎರೆಡು ರೂಪಾಯಿಯ, ದೊಡ್ಡ ಗಾತ್ರದ ಅತಿ ದುಬಾರಿ ರಾಖಿ.. ಬೆಲೆಗೆ ತಕ್ಕಷ್ಟು ಗಾತ್ರ, ಗಾತ್ರಕ್ಕೆ ತಕ್ಕಷ್ಟು ಖುಷಿ! ಆ ದಿನ ಸ್ವಲ್ಪ ಬೇಗ ಹೊರಟು ಜೇಬಿನಲ್ಲಿದ್ದ ಐದೋ-ಆರೋ ರುಪಾಯಿಗಳನ್ನು ಬಾಬಣ್ಣನಂಗಡಿಯಲ್ಲಿ ಬಣ್ಣ ಬಣ್ಣದ ರಾಖಿಗಳಾಗಿ ಪರಿವರ್ತಿಸಿಕೊಂಡ ಮೇಲೇ ಎಲ್ಲರೂ ಶಾಲೆಗೆ ಹೋಗುತ್ತಿದ್ದುದು. ಹುಡುಗ-ಹುಡುಗಿಯರೆನ್ನದೆ, ಮೇಷ್ಟ್ರು-ಮಿಸ್ ಗಳೆನ್ನದೆ ಎಲ್ಲರ ಕೈಗೂ ರಾಖಿ ಕಟ್ಟುವ ಮೂಲಕ ಸಂಭ್ರಮ ವರ್ಗಾವಣೆಯಾಗುತ್ತಿತ್ತು. ಕೆಲವರಂತೂ ದಿನದ ಕೊನೆಯಲ್ಲಿ ಅತಿ ಕಷ್ಟದಲ್ಲಿ ಎರೆಡು ರಾಖಿಗಳನ್ನು ಉಳಿಸಿಕೊಂಡು "ಇದು ಅಪ್ಪ-ಅಮ್ಮಂಗೆ ಕಟ್ಟಕ್ಕೆ" ಎಂದು ಜಂಭದಿಂದ ಹೇಳಿಕೊಳ್ಳುತ್ತಿದ್ದರು! ಹೀಗೆ ಪ್ರತಿಯೊಂದು ಹಬ್ಬದ ಮುಗ್ಧ ಸಂಭ್ರಮವೂ ಈ ಅಂಗಡಿಯ ಬಾಗಿಲಿನಿಂದಲೇ ಹೊರಟು ಊರಿನೆಲ್ಲ ಚಳ್ಳೆ-ಪಿಳ್ಳೆಗಳ ಮನಮನಕ್ಕೆ ರವಾನೆಯಾಗುತ್ತಿತ್ತು.

ಬಾಬಣ್ಣ ಅಪ್ಪಿತಪ್ಪಿಯೂ ಮಕ್ಕಳಿಗೆ ಕಡ(ಸಾಲ) ಕೊಡುತ್ತಿರಲಿಲ್ಲ. ಮಕ್ಕಳು ಹೇಳುವ ಸಾಲಕ್ಕೆ ಅವರ ಅಪ್ಪಂದಿರನ್ನು ಹುಡುಕುವ ತಾಪತ್ರಯವನ್ನು ಅವನು ಅಪ್ಪಿತಪ್ಪಿಯೂ ಮೈಮೇಲೆಳೆದುಕೊಳ್ಳುತ್ತಿರಲಿಲ್ಲ. ಅದೊಂದು ಮಧ್ಯಾಹ್ನ ಊಟದ ಪಿರಿಯಡ್ನಲ್ಲಿ ಗೆಳೆಯನ ಜೊತೆ ರಾಖಿ ಕೊಳ್ಳಲು ಹೋದ ನನ್ನನ್ನು ಎರೆಡು ರೂಪಾಯಿಯ, ಅರಿಶಿಣ ಬಣ್ಣದ ದೊಡ್ಡ ಸ್ಪಂಜಿನ ರಾಖಿ ಇನ್ನಿಲ್ಲದಂತೆ ಸೆಳೆದಿತ್ತು‌. ಆದರೆ ಜೇಬಲ್ಲಿದ್ದುದು ಬರೀ ಎಂಟಾಣೆಯ ಬಿಲ್ಲೆ . "ಉಳಿದ ದುಡ್ಡು ಸಂಜೆ ಅಪ್ಪ ಕೊಡ್ತಾರೆ" ಎಂದು ಆಸೆಯಿಂದ ಚಾಚಿದ ಕೈಯ್ಯನ್ನು ಒರಟಾಗಿ ತಳ್ಳಿದ ಬಾಬಣ್ಣ "ಅದೆಲ್ಲ ಆಗಲ್ಲ" ಎಂದುಬಿಟ್ಟ. ಆ ಕ್ಷಣಕ್ಕೆ ಅವಮಾನವಾಗಿ ಕಣ್ತುಂಬಿ ಬಂದಿತ್ತಾದರೂ ಮುಂದೆಂದೂ ನಾನು ಯಾವ ಅಂಗಡಿಯಲ್ಲೂ 'ಕಡ' ಹೇಳುವ ಧೈರ್ಯ ಮಾಡಲಿಲ್ಲ. ಅದು ಬಾಬಣ್ಣನಂಗಡಿ ಕಲಿಸಿದ ಜೀವಮಾನದ ಪಾಠ.

ಅಂಗಡಿಯೊಳಗೇ ಬಾಬಣ್ಣ ಚಿಕ್ಕ ಹೋಟೆಲ್ ಸಹಾ ಇಟ್ಟಿದ್ದ. ಅಲ್ಲಿ ಬೆಳಗಿನ ತಿಂಡಿಗಳಾದ ದೋಸೆ, ಇಡ್ಲಿ, ವಡೆ, ಉಪ್ಪಿಟ್ಟುಗಳ ಜೊತೆ ಸಂಜೆಯ ತುಡು ಕಳೆಯುವ ಗೋಲಿಬಜೆ, ಪಕೋಡ, ಮೆಣಸಿನಕಾಯಿ ಬಜ್ಜಿ, ಟೀ, ಕಾಫಿಗಳು ಸದಾ ಸಿದ್ಧವಾಗಿರುತ್ತಿದ್ದವು. ಸಂಜೆಯ ಹೊತ್ತಿಗೆ ಕುಳಿತು ಹರಟುವವರಿಗೆ ಬಾಬಣ್ಣನ ಅಂಗಡಿಯೆಂಬುದು ಇಂದಿನ ಟಿವಿ9 ಸ್ಟುಡಿಯೋ ಇದ್ದಂತೆ. ಊರಿನ ನುರಿತ ಅರ್ಥಶಾಸ್ತ್ರಜ್ಞರು, ರಾಜಕೀಯ ವಿಶ್ಲೇಷಕರೆಲ್ಲ ಕಚ್ಚಿದ ಮೆಣಸಿನಕಾಯಿ ಬಜ್ಜಿಯ ಖಾರಕ್ಕೆ ಸ್ssssss ಎಂದು ಬಾಯಿಯಿಂದ ಗಾಳಿ ಎಳೆದುಕೊಳ್ಳುತ್ತಾ, ಸೊರ್ರನೆ ಬಿಸಿ ಚಾ ಹೀರುತ್ತಾ ಪರ-ವಿರೋಧದ ಚರ್ಚೆಯಲ್ಲಿ ತೊಡಗುತ್ತಿದ್ದರು. ತೋಟಕ್ಕೆ ಹಂದಿ ನುಗ್ಗಿದ್ದರಿಂದ ಹಿಡಿದು ಜಾರ್ಜ್ ಬುಶ್ ಬಾಂಬು ಹಾಕಿದ್ದರ ತನಕ, ವಾಜಪೇಯಿ ಸರಕಾರ ಗೆದ್ದಿದ್ದರಿಂದ ಹಿಡಿದು ವಾಸಣ್ಣನ ಮಗಳಿಗೆ ಗಂಡು ಗೊತ್ತಾದುದರ ತನಕ ಅದೆಷ್ಟೋ ರಾಷ್ಟ್ರ, ಅಂತರಾಷ್ಟ್ರ ಮಟ್ಟದ ಸಂಗತಿಗಳೆಲ್ಲ ಅಲ್ಲಿ ಕೇವಲ ನಾಲ್ಕು ಪ್ಲೇಟು ಬೋಂಡಾ ಹಾಗೂ ಫೋರ್ ಬೈ ಟೂ ಕಾಫಿಯ ಖರ್ಚಿನಲ್ಲಿ ಚರ್ಚಿತವಾಗಿ ಪರಿಹಾರ ಕಂಡುಕೊಳ್ಳುತ್ತಿದ್ದವು. ಈ ಎಲ್ಲ ಪರ-ವಿರೋಧ ಚರ್ಚೆಗಳ ನಡುವೆ ಆ್ಯಂಕರ್ ಆಗುತ್ತಿದ್ದ ಬಾಬಣ್ಣ ಯಾವ ಕಡೆಯವರಿಗೂ ಬೇಸರವಾಗದಂತೆ, ತನ್ನ ಹೋಟೆಲ್ ನ ಮಾರನೇ ದಿನ ಸಂಜೆಯ ಗೋಲಿಬಜೆಗೆ ಯಾವೊಬ್ಬ ಗಿರಾಕಿಯೂ ಮಿಸ್ ಆಗದಂತೆ ಎಚ್ಚರಿಕೆಯಿಂದ ಇಬ್ಬರ ಪಕ್ಷದಲ್ಲಿಯೂ ಮಾತನಾಡುತ್ತಿದ್ದ. ವಾಗ್ವಾದ ತಾರಕಕ್ಕೇರುವ ಸೂಚನೆ ಕಂಡಾಗೆಲ್ಲ "ಅಣ್ಣು ಹಾಂಡ್ರ ಮನೆ ಯಮ್ಮಿ ಹೊತ್ತಿಗೆ ಐದು ಲೀಟ್ರು ಹಾಲು ಕೊಡ್ತಂಬ್ರು, ಹೌದಾ ಮರ್ರೆ?" ಎಂದು ವಿಷಯ ಬದಲಾಯಿಸಿಬಿಡುತ್ತಿದ್ದ.

ರಸ್ತೆಗಿಂತ ಎತ್ತರದಲ್ಲಿದ್ದ ಬಾಬಣ್ಣನಂಗಡಿಯ ಕಟ್ಟೆಯ ಮೇಲೆ ಕುಳಿತರೆ ಹಳ್ಳಿಯ ಸಂಜೆಯ ದೃಶ್ಯಗಳು ಕಲಾವಿದನೊಬ್ಬನ ಚಂದದ ಚಿತ್ರದಂತೆ ಕಣ್ತುಂಬಿಕೊಳ್ಳುತ್ತಿದ್ದವು. ದಿನಗೆಲಸ ಮುಗಿಸಿ ದೊಡ್ಡದಾಗಿ ಹರಟುತ್ತಾ ತಂತಮ್ಮ ಮನೆಗಳಿಗೆ ಮರಳುತ್ತಿರುವ ಗಂಡಾಳು-ಹೆಣ್ಣಾಳುಗಳು, ಬೆನ್ನಿಗೆ ಬ್ಯಾಗು ತಗುಲಿಸಿಕೊಂಡು ಚಿಲಿಪಿಲಿಗುಟ್ಟುತ್ತಾ ಪುಟಪುಟನೆ ಓಡುವ ಶಾಲೆಯ ಮಕ್ಕಳು, ಪಟ್ಟಣದಿಂದ ಮರಳುವವರನ್ನು ತುಂಬಿಕೊಂಡು ಗಂಟೆಗೊಂದರಂತೆ ವಾಲಾಡುತ್ತಾ ಉಸ್ಸೋ ಎಂದು ಏರು ಹತ್ತಿ ಬರುವ ಬಸ್ಸುಗಳು, ಅದರಿಂದಿಳಿದ ಜಂಭದ ನಡಿಗೆಯ ಕಾಲೇಜು ಹುಡುಗಿಯರು, ಅವರನ್ನು ಹಿಂಬಾಲಿಸುವ ನೇತಾಡುವ ಬ್ಯಾಗಿನ ಹುಡುಗರು, ಪೇಟೆಗೆ ರಿಪೇರಿ ಮಾಡಿಸಲೆಂದು ಒಯ್ದಿದ್ದ, ತೋಟಕ್ಕೆ ಔಷಧಿ ಹೊಡೆಯುವ ಮೆಶಿನ್ನನ್ನು ಹೊತ್ತು ಮನೆಯೆಡೆಗೆ ನಡೆಯುತ್ತಿರುವ ದ್ಯಾಮೇಗೌಡರು, ಇರುವ ಕಾಲುಭಾಗ ರಸ್ತೆಯ ಮುಕ್ಕಾಲುಭಾಗವನ್ನು ಆಕ್ರಮಿಸಿಕೊಂಡು, ಪಿಡಬ್ಲುಡಿಯವರೂ ನಾಚುವಂತೆ ರಸ್ತೆಯನ್ನಳೆಯುತ್ತ ನಡೆಯುವ ಪಾನಮತ್ತ 'ಮಧು'ಲೋಕ ಚಕ್ರವರ್ತಿಗಳು, ಕೆಮ್ಮೋಡಗಳ ಹಿನ್ನಲೆಯಲ್ಲಿ ಹಾರುತ್ತಾ ದೂರ ದಿಗಂತದಲ್ಲೆಲ್ಲೋ ಮರೆಯಾಗಿ ಹೋಗುವ ಹಕ್ಕಿಗಳು, ಅದೇ ಹಾದಿಯಲ್ಲಿ ಕೊನೆಗೆ ತಾನೂ ಮುಳುಗಿಹೋಗುವ ಸೂರ್ಯ... ಹಳ್ಳಿ ಪರಿಸರದ ಪರದೆಯ ಮೇಲೆ ಮೂಡುವ ಪ್ರತಿ ದೃಶ್ಯಕ್ಕೂ ಈ ಅಂಗಡಿ ಕಟ್ಟೆಯೇ ಬಾಲ್ಕನಿ ಸೀಟು. ಕವಿದ ಕತ್ತಲ ನಡುವೆ ಚಲಿಸುವ ಬೆಳಕಿನ ಡಬ್ಬದಂತೆ ಸಾಗಿಬಂದ, ಪಟ್ಟಣದಿಂದ ಬರುವ ಕಟ್ಟಕಡೆಯ ಬಸ್ಸಾದ ಗಾಯತ್ರೀ ಬಸ್ಸೂ ಶೆಡ್ಡು ಸೇರಿದಾಗ ಬಾಬಣ್ಣ ಆಕಳಿಸುತ್ತ ಮೇಲೇಳುತ್ತಿದ್ದ. ಅದೇ ಬಸ್ಸಿಗೆ ಬಂದಿಳಿದವನ್ಯಾರನ್ನೋ "ಕಾಮತ್ ಬಸ್ಸು ತಪ್ಸಿಕೊಂಡ್ಯನೋ" ಎಂದು ಕೇಳುತ್ತ, ಈ ಊರಿಗೆ ಮದುವೆಮಾಡಿಕೊಟ್ಟ ತನ್ನ ಮಗಳನ್ನು ನೋಡಲೆಂದು ದೂರದೂರಿನಿಂದ ಬಂದಿಳಿದ ಹೆಸರು ಗೊತ್ತಿಲ್ಲದ ಹಿರಿಯರನ್ನು "ಏನು ಭಟ್ರೇ, ಅರಾಮಾ?" ಎಂದು ಕುಶಲ ವಿಚಾರಿಸುತ್ತ ಅಂಗಡಿಯ ಬಾಗಿಲು ಮುಚ್ಚುತ್ತಿದ್ದ. ಒಳಗಡೆ ಮಾರಾಟವಾಗದ ಚಾಕ್ಲೇಟು, ಸಿಹಿತಿಂಡಿ, ಆಟಿಕೆಗಳೆಲ್ಲ ಮರುದಿನ ತಮ್ಮನ್ನರಸಿ ಬರಲಿರುವ ಚಿಣ್ಣರಿಗಾಗಿ ಕಾಯುತ್ತ ತಂತಮ್ಮ ಭರಣಿಗಳೊಳಗೆ ನಿದ್ರೆಗೆ ಜಾರುತ್ತಿದ್ದವು.

(ತುಷಾರದ ಫೆಬ್ರವರಿ 2018ರ ಸಂಚಿಕೆಯಲ್ಲಿ ಪ್ರಕಟಿತ)

ಭಾನುವಾರ, ನವೆಂಬರ್ 12, 2017

ಪುಳಿಯೋಗರೆ ಉಡ್ಡಯನ!



ಬ್ರಹ್ಮಚಾರಿ ಜೀವನದ ಸಾರ್ವತ್ರಿಕ ಸಮಸ್ಯೆಗಳಲ್ಲಿ ಅಡಿಗೆ ಮಾಡಿಕೊಳ್ಳುವುದೂ ಒಂದು ಎನ್ನುವುದು ನನಗೆ ತುಂಬಾ ತಡವಾಗಿ ಅರ್ಥವಾದ ಸತ್ಯ. ಈ ಮೊದಲು ಕೆಲವು ಗೆಳೆಯರು "ಹೊರಗಡೆ ತಿಂದೂ ತಿಂದೂ ಸಾಕಾಗಿದೆ ಮಗಾ. ಬೇಗ ಮದುವೆ ಆಗ್ಬೇಕು" ಎಂದರೆ "ಅಲ್ವೋ ಒಂದು ಪ್ಲೇಟ್ ಚಿತ್ರಾನ್ನ, ಎರೆಡು ಪ್ಲೇಟ್ ಸೌತ್ ಮೀಲ್ಸ್'ಗೋಸ್ಕರ ಫೈವ್ ಸ್ಟಾರ್ ಹೋಟೆಲ್ನೇ ಪರ್ಚೇಸ್ ಮಾಡ್ತೀನಿ ಅಂತೀಯಲ್ಲೋ" ಎಂದು ತೀರಾ ಉಡಾಫೆಯಿಂದ ನಗುತ್ತಿದ್ದೆ. ಹುಟ್ಟಿದ ಮೊದಲ ಇಪ್ಪತ್ತೊಂದು ವರ್ಷ ಅಮ್ಮನ ಕೈಯ್ಯಡಿಗೆ ಸವಿಯುತ್ತಾ ಕಳೆದವನು ನಾನು. ನನ್ನ ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ, ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ ಮೊದಲ ಎರೆಡು ಕಂಪನಿಯವರೂ ಅತೀ ಕಡಿಮೆಬೆಲೆಗೆ ಮೂರು ಹೊತ್ತೂ ಊಟ ಕೊಟ್ಟಿದ್ದರು. ಇನ್ನು ರಜೆ ಇದ್ದ ಶನಿವಾರ ಭಾನುವಾರಗಳ ಬೆಳಗ್ಗೆ ಹಸಿವಾದರೆ ಅಕ್ಕಿ ಗಂಜಿ, ಇಲ್ಲದಿದ್ದರೆ ಹಾಪ್ ಕಾಮ್ಸ್'ನ ಬಾಳೇಹಣ್ಣು. ಮಧ್ಯಾಹ್ನ, ರಾತ್ರೆಗಳ ಊಟಕ್ಕೆ ಒಂದೋ ನೆಂಟರ ಮನೆ, ಇಲ್ಲವಾದರೆ ಮುಕ್ಕಾಲು ಲೋಟ ಅಕ್ಕಿಯನ್ನು ಮುಕ್ಕಾಲು ಬಟ್ಟಲು ನೀರಿನಲ್ಲಿ ಮುಳುಗಿಸಿ, ಇಂಡಕ್ಷನ್ ಒಲೆಯಮೇಲಿಟ್ಟು ಬೇಯಿಸಿ ಕೊನೆಗೆ ತಯಾರಾಗುವ, ಹೆಚ್ಚೂಕಡಿಮೆ ಅನ್ನವನ್ನೇ ಹೋಲುವ ಪದಾರ್ಥವನ್ನು ಹತ್ತಿರದ ಹೋಟೆಲ್ನಿಂದ ತಂದ ಸಾಂಬಾರಿನಲ್ಲಿ ಕಲಸಿಕೊಂಡು ತಿನ್ನುತ್ತಾ "ಎಲ್ಲಾ ಸೋಂಬೇರಿಗಳೂ ಹೋಟೆಲ್ನಲ್ಲಿ ತಿನ್ನುವಾಗ ರೂಮ್ನಲ್ಲೇ ಅಡಿಗೆ ಮಾಡಿಕೊಳ್ಳೋ ನಾವೆಷ್ಟು ಶ್ರಮಜೀವಿಗಳು ಅಲ್ವಾ ಮಗಾ?" ಎಂದು ರೂಮ್ ಮೆಟ್ ಹತ್ರ ಜಂಭಕೊಚ್ಚಿಕೊಳ್ಳುತ್ತಿದ್ದೆ.  ಹೀಗೆ ಒಟ್ಟಾರೆ ಬದುಕಿನ ಇಪ್ಪತ್ತಾರು ವರ್ಷಗಳು ಅಡಿಗೆಯೆಂಬ ಉಸಿರಾಟದಷ್ಟೇ ಸಹಜವಾದ, ಆದರೆ ಅಷ್ಟೇ ನಾಜೂಕಾದ ಕ್ರಿಯೆಯನ್ನು ಕಲಿಯದೆಯೇ ಕಳೆದುಹೋಗಿತ್ತು. ಕಾಳುಶ್ರಮವಿಲ್ಲದೇ ತಿನ್ನುತ್ತಿದ್ದ ಆಹಾರವೇನೂ ಸುಮ್ಮನೆ ಗಂಟಲಿಗಿಳಿಯುತ್ತಿರಲಿಲ್ಲ. "ಇದೇನಮ್ಮ, ದಿನಾ ಇದೇ ದೋಸೆ, ಉಪ್ಪಿಟ್ಟು, ರೊಟ್ಟಿ ಮಾಡ್ತೀಯಾ", "ಯಾರ್ ಗುರೂ ಅಡಿಗೆ ಮಾಡಿದ್ದು? ಬರೀ ಬಟಾಣಿ ಹಾಕಿ ಬೇಯ್ಸಿದಾರೆ", " ಏನ್ರೀ ಇವ್ರು, ಅನ್ನ ಸರಿಯಾಗಿ ಬೆಂದೇ ಇಲ್ಲ. ಹೋದವಾರ ಮಾಡಿದ್ದೇ ಮತ್ತೆ ಮಾಡಿದಾರೆ" ಎಂಬ ಇನ್ನೂ ಮುಂತಾದ ಟೀಕೆಗಳು ಅನ್ನ ಇಳಿದ ಅದೇ ಗಂಟಲಿನಿಂದ ಹೊರಬರುತ್ತಿದ್ದವು. ಆದರೆ ಕೇವಲ ಮೊವತೈದು ರುಪಾಯಿಗೆ ತಿಂಗಳಿಡೀ ಊಟ ಕೊಡುತ್ತಿದ್ದ ಎರೆಡನೇ ಕಂಪನಿಯನ್ನೂ ಬಿಟ್ಟೆನೋಡಿ? ಆಗಲೇ ಗೊತ್ತಾಗಿದ್ದು- ಅನ್ನದ ಹಾಗೂ ಅನ್ನದಾತರ ಮಹತ್ವ.

ಊಟದ ಮಟ್ಟಿಗೆ ಹೊಸ ಕಂಪನಿ ಹೊಸ ಹೊಸ ಸಮಸ್ಯೆಗಳನ್ನೊಡ್ಡಿತ್ತು. ಮೊದಲ ದಿನ ಮಧ್ಯಾಹ್ನವೇ ಶುರುವಾಯಿತು ಊಟದ ಬೇಟೆ. ಕಂಪನಿಯಿದ್ದ ಸುಮಾರು ಅರ್ಧ-ಮುಕ್ಕಾಲು ಕಿಲೋಮೀಟರ್ ಸುತ್ತಳತೆಯಲ್ಲಿ ಒಂದೇ ಒಂದು ಚಿಕ್ಕ-ಚೊಕ್ಕ ಹೋಟೆಲ್ ಕಣ್ಣಿಗೆ ಬೀಳಲಿಲ್ಲ. ಇದ್ದ ಒಂದೇ ಒಂದು ಹೋಟೆಲಿಗೆ ನುಗ್ಗಿ 'ಒಂದು ಸೌತ್ ಮೀಲ್ಸ್' ಎಂದು ನೂರರ ನೋಟು ಚಾಚಿದೆ. ನೋಡ ನೋಡುತ್ತಿದ್ದಂತೆ ನನ್ನ ಕೈಲಿದ್ದ ನೂರರ ನೋಟನ್ನು ಕಸಿದುಕೊಂಡ ಕ್ಯಾಶಿಯರ್ ಬಡ್ಡೀಮಗ ಮರಳಿಕೊಟ್ಟಿದ್ದು ಬರೀ ಹತ್ತು ರೂಪಾಯಿಯನ್ನ! ಕೆಲವೇ ಸೆಕೆಂಡ್'ಗಳ ಕೆಳಗೆ ನೂರರ ನೋಟಿದ್ದ ಕೈಗೀಗ ಬರೀ ಹತ್ತರ ಹರಕು ನೋಟು ಬಂದ ಅದ್ಭುತವನ್ನು ಪೆಚ್ಚಾಗಿ ನೋಡುತ್ತಾ ನಿಂತ ನನಗೆ ಬೆಂಗಳೂರು ಸಿಂಗಾಪುರ ಆಗಿದೆ ಅನ್ನುವುದರಲ್ಲಿ ಯಾವ ಅನುಮಾನವೂ ಉಳಿಯಲಿಲ್ಲ.

ಈಗ ಮಧ್ಯಾಹ್ನದೂಟಕ್ಕಿರುವ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸತೊಡಗಿದೆ. ಒಂದೊತ್ತಿನ ಊಟಕ್ಕೆ ಸಾವಿರಗಟ್ಟಲೆ ತೆರುವುದಕ್ಕೆ ನಾನು ಯಾವ ಅಂಬಾನಿಯ ಅಳಿಯನೂ ಅಲ್ಲ. ಅಮ್ಮ ಸೂಚಿಸಿದ 'ಮದುವೆ ಆಗ್ಬಿಡು' ಎನ್ನುವುದು ಅತ್ಯಂತ ದುಬಾರಿ ಹಾಗೂ ಅಪಾಯಕಾರಿ ಮಾರ್ಗ. ಇನ್ನುಳಿದ ಏಕೈಕ ದಾರಿ ರೂಮಿನಲ್ಲೇ ಮಾಡಿಕೊಳ್ಳುವುದು. ಅಂದಹಾಗೇ ಇದು ಈಗ ಹೊಳೆದ ಉಪಾಯವೇನೂ ಆಗಿರಲಿಲ್ಲ. ಈ ಕಂಪನಿಗೆ ಆಯ್ಕೆಯಾದಾಗ "ಮಧ್ಯಾಹ್ನ ಊಟಕ್ಕೇನು ಮಾಡ್ತೀಯ?" ಎಂದು ಕೇಳದವರಿಗೆಲ್ಲ "ಪುಳಿಯೋಗರೆ, ಚಿತ್ರಾನ್ನ, ಉಪ್ಪಿಟ್ಟು... ಹೀಗೇ ಏನಾದ್ರೂ ರೂಮಲ್ಲೇ ಮಾಡಿ ತಗೊಂಡೋಗ್ತೀನಿ" ಎಂದು ಎದೆಯುಬ್ಬಿಸಿಕೊಂಡು ಹೇಳಿದ್ದೆ. ಅವರು ಅಚ್ಚರಿಯಲ್ಲಿ "ಅರೆರೇ ಹೌದಾ? ಶಭಾಶ್!" ಎಂದು ಮೆಚ್ಚಿದಾಗ ವೀರ ಕರ್ನಲ್'ನಂತೆ ಮೀಸೆ ತಿರುವಿಕೊಂಡಿದ್ದೆ. ಆದರೆ ಅಪ್ಪೀತಪ್ಪೀ ಯಾರಾದರೂ ಒಬ್ಬ "ಏನು ಹಾಕಿ ಉಪ್ಪಿಟ್ಟು ಮಾಡ್ತೀಯಪ್ಪ ನಳಮಹಾರಾಜ?" ಎಂದು ಕೇಳಿದ್ದರೂ ಉತ್ತರಕ್ಕೆ ನಾಲ್ಕು ಆಪ್ಶನ್ ಕೇಳುತ್ತಿದ್ದೆನೆನ್ನುವುದು ನನಗೆ ಮಾತ್ರ ಗೊತ್ತಿದ್ದ ಸತ್ಯ! ಇನ್ನಷ್ಟೇ ಕಲಿತು ಅಡಿಗೆ ಮಾಡಬೇಕಾದವನು, ಈಗಾಗಲೇ ಬಂಡಿಗಟ್ಟಲೆ ಬೇಯಿಸಿ ಬಿಸಾಕಿರುವ ಬಾಣಸಿಗನಂತೆ ಫೋಸ್ ಕೊಟ್ಟಿದ್ದೆ. ಅದ್ಯಾವ ಶಕುನ ದೇವತೆ ಅಸ್ತು ಅಂದಿದ್ದರೋ ಗೊತ್ತಿಲ್ಲ, ಆ ಸುಳ್ಳು ಸತ್ಯವಾಗುವ ಕಾಲವೀಗ ಬಂದೇಬಿಟ್ಟಿತು.

ಸಂಜೆ ಬಂದವನೇ ನೇರ ಅಂಗಡಿಗೆ ಹೋಗಿ "ಪುಳಿಯೋಗರೆ ಮಿಕ್ಸ್ ಯಾವ್ದ್ಯಾವ್ದಿದೆ?" ಎಂದೆ. ಮುತ್ತಿಕೊಂಡಿದ್ದ ಗ್ರಾಹಕರ ನಡುವೆ ಸುಸ್ತಾಗಿದ್ದ ಅಂಗಡಿಯವನು "ಅಯ್ಯಂಗಾರ್ ಇದೆ ಕೊಡ್ಲಾ ಸರ್?" ಎಂದ. ನನಗೆ ಗೊತ್ತಿರೋ ಮಟ್ಟಿಗೆ ಈ ಅಯ್ಯಂಗಾರಿಗಳು ಎಂದರೆ ತಮಿಳುನಾಡಿನವರೋ, ಕೇರಳದವರೋ ಇರಬೇಕು. "ಅವರ ಶೈಲಿ ನಂಗೆ ಅಷ್ಟಾಗಿ ಆಗಿಬರೋಲ್ಲ. ನಮ್ಮೂರಿನ ಈ ಅಡಿಗ, ಐತಾಳ, ಭಟ್ಟ ಅಂತ ಯಾವ್ದಾದ್ರೂ ಇದ್ಯಾ ಗುರೂ?" ಎಂದು ಕೇಳಬೇಕೆಂದುಕೊಂಡೆ. ಆದರೆ ಅವನ ಪಕ್ಕದಲ್ಲಿದ್ದ ತಕ್ಕಡಿಯ ತೂಕದ ಕಲ್ಲು ಹಾಗೂ ಅವನ ಅಸಮಾಧಾನದ ಮುಖ ನೋಡಿ ಭಯವಾಗಿ 'ಭಾರತೀಯರೆಲ್ಲ ಒಂದೇ' ಎಂಬ ನಿರ್ಧಾರಕ್ಕೆ ಬಂದು "ಸರಿ, ಅಯ್ಯಂಗಾರನ್ನೇ ಕೊಡಿ" ಎಂದೆ. ಜೊತೆಗೆ ಎರೆಡು ವಾರಕ್ಕಾಗುವಷ್ಟು ಅಡಿಗೆ ಎಣ್ಣೆಯನ್ನೂ ಖರೀದಿಸಿ ರೂಮಿಗೆ ಬಂದು ಪವಡಿಸಿದೆ. ನಿದಿರೆಯಲ್ಲಿ ನಾನು ಭರ್ಜರಿ ಪುಳಿಯೋಗರೆ ಮಾಡಿದಂತೆ, ಅದನ್ನು ನನ್ನ ಹೊಸ ಸಹೋದ್ಯೋಗಿಗಳೆಲ್ಲ ಚಪ್ಪರಿಸಿಕೊಂಡು ತಿಂದು ಡರ್ರನೆ ತೇಗಿದಂತೆ ಕನಸು ಕಂಡು ಮಲಗಿದಲ್ಲೇ ಬೆನ್ನು ತಟ್ಟಿಕೊಂಡೆ.

ಕೊನೆಗೂ ನನ್ನ ಪುಳಿಯೋಗರೆ ಪ್ರಯೋಗದ ಹಗಲು ಬಂದೇಬಿಟ್ಟಿತು. ಒಂದು ಗಂಟೆ ಮುಂಚೆಯೇ ಎದ್ದು ಯಾವ ಫೈವ್ ಸ್ಟಾರ್ ಹೋಟೆಲಿನ ಅಡಿಗೆಭಟ್ಟನಿಗೂ ಕಮ್ಮಿ ಇಲ್ಲದಂತೆ ಆಪ್ರೋನ್ ಕ್ಲಾತ್ ಕಟ್ಟಿಕೊಂಡು ತಯಾರಾದೆ. ಒಂದು ಆ್ಯಂಗಲ್'ನಿಂದ ಅನ್ನದಂತೇ ಕಾಣುತ್ತಿದ್ದ ಪದಾರ್ಥವನ್ನು ತಯಾರಿಸಿ ಪಕ್ಕಕ್ಕಿಟ್ಟೆ.

ಮುಂದಿನ ಸರದಿ ಪುಳಿಯೋಗರೆ ಮಿಕ್ಸ್ ನದು!

ಸ್ಟೀಲ್ ಪಾತ್ರೆಯನ್ನು ಇಂಡಕ್ಷನ್ ಒಲೆಯ ಮೇಲಿಟ್ಟು ಚಾಲೂಮಾಡಿದೆ. ಪಾತ್ರೆಯೊಳಕ್ಕೆ ಪಾಮಾಯಿಲನ್ನು ಸುರಿದು ಬಾಯಿ ಒಡೆದ ಪುಳಿಯೋಗರೆ ಪೊಟ್ಟಣ ತೆಗೆದುಕೊಂಡೆ. ಅರೆಕ್ಷಣದಲ್ಲಿ ಎಣ್ಣೆ ಚಿಟಿಚಿಟಿಗುಟ್ಟಲು ಪ್ರಾರಂಭಿಸಿತು. ಅಲ್ಲಿಯ ತನಕ ಎಲ್ಲವೂ ಸರಿಯಾಗಿಯೇ ಇತ್ತು, ಆದರೆ ಕೈಲಿದ್ದ ಪೊಟ್ಟಣದ ಅಷ್ಟೂ ಪುಳಿಯೋಗರೆ ಪುಡಿಯನ್ನು ಪಾತ್ರೆಯೊಳಕ್ಕೆ ಸುರಿದು ಮುಖದ ತುಂಬಾ ಕಣ್ಣಿದ್ದ 'ಕಣ್ ಸೆಟ್ಗ'ದಿಂದ ಅಲ್ಲಾಡಿಸತೊಡಗಿದೆ ನೋಡಿ,  ಇದ್ದಕ್ಕಿದ್ದಂತೆಯೇ ಎದುರಿದ್ದ ಪಾತ್ರೆಯೊಳಗೆ ಕೋಲಾಹಲ ಆರಂಭವಾಯಿತು! ಒಳಗಿದ್ದ ಎಣ್ಣೆ ಈಗಷ್ಟೇ ಬಂದ ಅಪರಿಚಿತ ಪುಳಿಯೋಗರೆ ಪುಡಿಯ ಜೊತೆ ಚಿಟಿಚಿಟಿಯೆನ್ನುತ್ತಾ ಭೀಕರ ಹೋರಾಟಕ್ಕಿಳಿಯಿತು. ಬೇಯುತ್ತಿದ್ದ ಪುಳಿಯೋಗರೆ ಪುಡಿ ಕಪ್ಪುಬಣ್ಣಕ್ಕೆ ತಿರುಗತೊಡಗಿತು. ಈ ಮಾರಾಮಾರಿಕಂಡು ಗಾಬರಿಯಾದ ನಾನು ಒಲೆಯ ಸ್ವಿಚ್ ಆರಿಸಿ ಕೈ ಹಿಂದೆತರುತ್ತಿದ್ದೆ...

ಢಮಾರ್!

ಅದ್ಯಾವ ರಾಸಾಯನಿಕ ಕ್ರಿಯೆ ನಡೆಯಿತೋ, ಎಣ್ಣೆ-ಪುಳಿಯೋಗರೆಪುಡಿಗಳ ಅದ್ಯಾವ ಅಣು-ಪರಮಾಣುಗಳು ಕಚ್ಚಾಡಿಕೊಂಡವೋ ಗೊತ್ತಿಲ್ಲ, ದೊಡ್ಡ ಸದ್ದಿನೊಂದಿಗೆ ಸ್ಫೋಟ ಸಂಭವಿಸಿ ಪಾತ್ರೆಯೇ ಅಲ್ಲಾಡಿಹೋಯಿತು. ಬೆಚ್ಚಿಬಿದ್ದ ನಾನು ಬಾಂಬ್ ಸ್ಫೋಟಕ್ಕ ಸಿಲುಕಿದವನಂತೆ ಛಂಗನೆ ನೆಗೆದು ಪಕ್ಕದಲ್ಲಿದ್ದ ಮಂಚವೇರಿಕುಳಿತೆ!

ಸುಟ್ಟ ಹೊಗೆ, ಕರಟಿದ ವಾಸನೆ, ಮೇಜಿನ ಮೇಲೆಲ್ಲಾ ಚೆಲ್ಲಾಪಿಲ್ಲಿಯಾದ ಕಡಲೆಬೀಜ-ಪುಳಿಯೋಗರೆ ಪುಡಿಗಳು...  ಉಪಗ್ರಹವನ್ನು ಹೊತ್ತ ರಾಕೇಟೊಂದು ಈಗಷ್ಟೇ ಬಾಹ್ಯಾಕಾಶಕ್ಕೆ ಹಾರಿದ ಜಾಗದಲ್ಲಿ ಇರುವಂತಹಾ ಎಲ್ಲಾ ಲಕ್ಷಣಗಳೂ ಅಲ್ಲಿದ್ದವು. ಪುಣ್ಯಕ್ಕೆ ಒಲೆಯ ಸ್ವಿಚ್ಚನ್ನು ನಾನಾಗಲೇ ಆರಿಸಿದ್ದರಿಂದ ಸ್ಫೋಟ ಅಲ್ಲಿಗೇ ನಿಂತಿತು. ಆಗಿದ್ದಾದರೂ ಏನೆಂಬುದೇ ಅರಿವಾಗದೆ ಕಂಗಾಲದ ನಾನು ಮೆಲ್ಲನೆ ಸುಧಾರಿಸಿಕೊಂಡೆ. ನಾನು ಕೊಂಡು ತಂದದ್ದು ಪುಳಿಯೋಗರೆ ಪುಡಿಯೋ ಅಥವಾ ಬೇರ್ಯಾವ ಆಸ್ಫೋಟನಾಕಾರಿ ಸಾಮಗ್ರಿಯೋ ಎಂದು ಪರೀಕ್ಷಿಸಿದೆ. ಯಾರಿಗೆ ಗೊತ್ತು? ಆಲ್-ಖೈದಾದವರೋ, ಇನ್ಯಾವ ಉಗ್ರ ಸಂಘಟನೆಯವರೋ ಪುಳಿಯೋಗರೆ ಪ್ಯಾಕ್ನಲ್ಲಿ ಪುಡಿಪುಡಿ ಬಾಂಬ್ ತುಂಬಿಸಿ ಕಳಿಸಿರಲಿಕ್ಕೂ ಸಾಕು! ಅಥವಾ ಮೊದಲು ನಾನು ಅಯ್ಯಂಗಾರನ್ನು ಬೇಡ ಅಂದಿದ್ದನ್ನೇನಾದರೂ ಕೇಳಿಸಿಕೊಂಡ, ಇಲ್ಲೇ ಎಲ್ಲೋ ತೆಲಾಡುತ್ತಿರುವ ಯಾವದೋ ಅಯ್ಯಂಗಾರಿ ಆತ್ಮ ಹೀಗೆ ಮಾಡಿದ್ದರೂ ಮಾಡಿರಬಹುದು.

ಸಂಜೆ ಈ ಘಟನೆಯ ಕುರಿತಾದ ಸಮಗ್ರ ವರದಿಯೊಂದನ್ನು ತಯಾರಿಸಿ, ಗೆಳತಿಯೊಬ್ಬಳಿಗೆ ಒಪ್ಪಿಸಿ ಅವಳ ತಜ್ಞ ಅಭಿಪ್ರಾಯ ಕೇಳಿದೆ. ಎರೆಡು ನಿಮಿಷಗಳ ಕಾಲ ಸುಧೀರ್ಘವಾಗಿ ನಕ್ಕ ಅವಳು ಒಲೆಯ ಉಷ್ಣದ ಪ್ರಮಾಣ ಜಾಸ್ತಿ ಇದ್ದುದು ಹಾಗೂ ಸ್ಟೀಲ್ ಪಾತ್ರೆಗೆ ಪಾಮಾಯಿಲ್ ಹಿಡಿಸದೇ ಹೋಗಿದ್ದೇ ಈ ಸ್ಫೋಟಕ್ಕೆ ಕಾರಣವೆಂದು ತೀರ್ಪುಕೊಟ್ಟಳು. ಅಲ್ಲದೆ ತಾನು ಅಡಿಗೆ ಮಾಡತೊಡಗಿದ್ದ ಆರಂಭದಲ್ಲೂ ಹೀಗೇ  ಆಗುತ್ತಿತ್ತೆಂದು ಹೇಳಿ 'ಆಸ್ಫೋಟವಿಲ್ಲದೆ ಅಡಿಗೆ ಕಲಿತವರಿಲ್ಲವೈ' ಎಂದು ಸಮಾಧಾನಮಾಡಿದಳು.

ಅಂದು ಮಧ್ಯಾಹ್ನ ಮತ್ತೆ ಹೋಟೆಲ್ನಲ್ಲಿ ಹತ್ತರ ಹರಕು ನೋಟು ಹಿಡಿದುಕೊಂಡು ಸೋಡಬೆರೆಸಿದ ಅನ್ನತಿನ್ನುತ್ತಾ ಕುಳಿತಿದ್ದಾಗ ಹಿಂದಿನ ಕಛೇರಿಯಲ್ಲಿ ಪ್ರೀತಿಯಿಂದ ಬಡಿಸುತ್ತಿದ್ದ ಹೆಡ್ ಕುಕ್ ಅಜ್ಜಿ, ಮನೆಯಿಂದ ತಂದದ್ದನ್ನು ಹಂಚಿಕೊಳ್ಳುತ್ತಿದ್ದ ಸಹೋದ್ಯೋಗಿಗಳು, ಕೇಳಿದ್ದನ್ನೆಲ್ಲ ಬೇಸರವಿಲ್ಲದೆ ಮಾಡಿ ಬಡಿಸುವ ಅಮ್ಮ ಕಣ್ಮುಂದೆ ನಿಂತಂತಾಯಿತು. ಎದ್ದು ಕೈ ತೊಳೆದುಕೊಂಡೆ. ಸಿಂಕಿನಲ್ಲಿ ಮುಖಕ್ಕೆರಚಿಕೊಂಡ ನೀರಿನ ಜೊತೆಗೆ ಒಂದೆರೆಡು ಕಣ್ಣ ಹನಿಗಳೂ ಸದ್ದಿಲ್ಲದೇ ಜಾರಿಹೋದವು.

(12-11-2017ರ ವಿಶ್ವವಾಣಿ 'ವಿರಾಮ' ಸಾಪ್ತಾಹಿಕದಲ್ಲಿ ಪ್ರಕಟಿತ)

ಶನಿವಾರ, ಸೆಪ್ಟೆಂಬರ್ 23, 2017

ಬೆಕ್ಕುಗಳ ಜೊತೆಗೆ ಭಾವ-ಬಂಧ...



ಮನುಷ್ಯನಿಗೆ ಅತಿ ಪ್ರಿಯವಾದ ಪ್ರಾಣಿಗಳಲ್ಲಿ ಮೊದಲನೆಯದು ನಾಯಿ. ಅದರ ನಂತರದ ಸ್ಥಾನದಲ್ಲಿ, ಮನುಷ್ಯನಿಗೆ ಅತೀ ಹತ್ತಿರದಲ್ಲಿ, ತೊಡೆಯ ಮೇಲೇ ಕುಳಿತು ಗರ್ವದಿಂದ ಮೀಸೆ ತಿರುವುತ್ತಿರುವ ಇನ್ನೊಂದು ಪ್ರಾಣಿಯೆಂದರೆ ಬೆಕ್ಕು. ಕೆಲವರ ಹೊರತಾಗಿ ನಾಯಿಯನ್ನು ಮನೆಯೊಳಗೆ ಬಿಟ್ಟುಕೊಳ್ಳುವವರು ಕಡಿಮೆ. ನಾಯಿಯ ಸಂಚಾರ ಅಂಗಳ, ವರಾಂಡ, ಇನ್ನೂ ಹೆಚ್ಚೆಂದರೆ ಜಗುಲಿ(ಹಾಲ್) ಗಳಿಗೆ ಸೀಮಿತವಾಗಿರುತ್ತದೆ. ಆದರೆ ಬೆಕ್ಕು ಹಾಗಲ್ಲ. ಅದು ಸರ್ವ ಸ್ವತಂತ್ರಿ. ಅಡಿಗೆಮನೆ, ಮಲಗುವ ಕೋಣೆಯೂ  ಸೇರಿದಂತೆ ಮನೆಯ ಮತ್ಯಾವುದೇ ಕೋಣೆಗಳಲ್ಲಿ, ಮೂಲೆಮೂಲೆಗಳಲ್ಲಿ ಯಾವ ಸಂದರ್ಭದಲ್ಲಾದರೂ ಓಡಾಡುವ ಅಧಿಕಾರ ಅದಕ್ಕಿದೆ. ಪಟ್ಟಣದ ಹಲವಾರು ಮನೆಗಳಲ್ಲಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಮನೆಯ ಯಜಮಾನನಿಗಿಂತಲೂ ಹೆಚ್ಚಿನ ಠೀವಿಯಲ್ಲಿ, ಸೋಫಾಮೇಲೆ ಕಾಲುಚಾಚಿ ಮಲಗಿರುವ ನುಣುಪು ಮೈ-ಕುಡಿಮೀಸೆಯ ಮಾರ್ಜಾಲವನ್ನು ನೀವು ನೋಡಬಹುದು. ಮೆತ್ತಗಿನ ಸೋಫಾಮೇಲೆ ಅಷ್ಟೇ ಮೆತ್ತಗಿರುವ ತನ್ನ ದೇಹವನ್ನು ಚಾಚಿಕೊಂಡು, ತನ್ನ ಮುಂಗೈಯ್ಯಿಗೆ ಬಳಿದುಕೊಂಡ ಎಂಜಲಿನಿಂದ ಮೈ-ಮುಖವನ್ನೆಲ್ಲಾ ವರೆಸಿಕೊಳ್ಳುತ್ತಾ ಗಮ್ಮತ್ತಾಗಿ ಕುಳಿತಿರುವ ಈ ಬೆಕ್ಕಣ್ಣನ ಪಕ್ಕ ನೀವು ಹೋಗಿ ಕುಳಿತುನೋಡಿ; ಅರೆಕ್ಷಣ ತನ್ನ ಕೆಲಸ ನಿಲ್ಲಿಸಿ ಸಾಲ ಕೇಳಲು ಬಂದವನನ್ನು ನೋಡುವ ಸಾವುಕಾರನಂತೆ ನಿಮ್ಮತ್ತ ಗಂಭೀರನೋಟ ಬೀರಿ, ಮತ್ತೆ ತನ್ನ ಕೆಲಸ ಮುಂದುವರೆಸುತ್ತದೆ.

'ಎಷ್ಟೇ ಪ್ರೀತಿಯಿದ್ದರೂ ಬೆಂಗಳೂರಿನಲ್ಲಿ ರಸ್ತೆ-ಕಾಂಪೌಂಡುಗಳ ಮೇಲೆ ಕುಳಿತಿರುವ, ಓಡಾಡುತ್ತಿರುವ ಅಥವಾ ನಿದ್ರಿಸುತ್ತಿರುವ ಯಾವುದೇ ಅಪರಿಚಿತ ಮಾರ್ಜಾಲವನ್ನು ಮಾತನಾಡಿಸುವುದು ಅಪಾಯಕಾರಿ' ಎನ್ನುವುದು ವರ್ಷಗಳ ಕೆಳಗೆ ನನಗೆ ಗೊತ್ತಾದ ಸತ್ಯ. ಹಿಂದೊಮ್ಮೆ ರೊಮ್ಯಾಂಟಿಕ್ ತಂಗಾಳಿಯೊಂದು ಬೀಸುತ್ತಿದ್ದ ಸಂಜೆಯಲ್ಲಿ ಟೆರಾಸ್ ಮೇಲೆ ಕುಳಿತಿದ್ದ ಮಾರ್ಜಾಲ ತರುಣಿಯೊಬ್ಬಳು ನನ್ನ ಕಣ್ಣಿಗೆ ಬಿದ್ದಿದ್ದಳು. ಬಾಯಿಯಿಂದ ಎಂಜಲನ್ನು ತನ್ನ ನುಣುಪು ಕೈಯ್ಯ ಮೂಲಕ ಮುಖಕ್ಕೆಲ್ಲಾ ಸವರಿಕೊಂಡು 'ಮೇಕಪ್' ಮಾಡಿಕೊಳ್ಳುತ್ತಿದ್ದ ಆ ಚೆಲುವೆಯನ್ನು ಕಂಡ, ಮೊದಲೇ ಬೆಕ್ಕುಗಳೆಂದರೆ ಬೆಟ್ಟದಷ್ಟು ಪ್ರೀತಿಯಿರುವ ನಾನು ಮತ್ತಷ್ಟು ರೊಮ್ಯಾಂಟಿಕ್ ಆಗಿಬಿಟ್ಟಿದ್ದೆ. ಅಲ್ಲದೇ ಊರುಬಿಟ್ಟ ಮೇಲೆ ಬೆಕ್ಕು, ನಾಯಿಗಳ ಒಡನಾಟವೂ ಕಮ್ಮಿಯಾಗಿತ್ತಲ್ಲಾ, ಈಗ ಹೇಗಾದರೂ ಇವಳನ್ನು ಒಲಿಸಿಕೊಳ್ಳಲೇಬೇಕೆಂದು ನಿರ್ಧರಿಸಿ ಸಾಧ್ಯವಾದಷ್ಟು ಸುಮಧುರ ದನಿಯಲ್ಲಿ "ತ್ಚುತ್ಚುತ್ಚು.. ಬಾಬಾಬಾ" ಎಂದು ಕರೆದೆ. ಯಾವುದೋ ಕಬಾಬ್ ಹೋಟೆಲ್ ಮುಂದೆ 'ಪೀಸ್'ಗಾಗಿ ಕಾದುನಿಂತಿರುವ ತನ್ನ ಬಾಯ್ ಫ್ರೆಂಡ್ ನ ಯೋಚನೆಯಲ್ಲಿದ್ದಳೋ ಏನೋ, ಅನಿರೀಕ್ಷಿತವಾಗಿ ತೇಲಿಬಂದ ನನ್ನ ಧ್ವನಿ ಕೇಳಿ ಅರೆಕ್ಷಣ ಬೆಚ್ಚಿಬಿದ್ದು ನನ್ನನ್ನೇ ಗುರಾಯಿಸತೊಡಗಿದಳು. ನಾನು ಮತ್ತಷ್ಟು ರೊಮ್ಯಾಂಟಿಕ್ ಸ್ವರದಲ್ಲಿ "ತ್ಚುತ್ಚುತ್ಚೂ... ಮಿಯಾಂವ್.. ಬಾಬಾಬಾ" ಎಂದು ಕರೆಯುತ್ತಾ ಎರೆಡು ಹೆಜ್ಜೆ ಮುಂದಿಟ್ಟಿದ್ದಷ್ಟೇ, ಬಾಯ್ಬಿಟ್ಟರೆ "ಪಿಂಕಿ ಕಮಾನ್... ಮ್ಯೂಮ್ಯೂ" ಎಂದೋ, "ಬಿಲ್ಲಿ ಭಯ್ಯಾ ಆಜಾವೋ" ಎಂದೋ ಕರೆಯುವ ಬಿಟಿಎಮ್ ಬಡಾವಣೆಯ ನಾರ್ಥ್ ಇಂಡಿಯನ್ ಜನರನ್ನೇ ಹೆಚ್ಚಾಗಿ ನೋಡಿ ಅಭ್ಯಾಸವಿದ್ದ ಈ ಮಾರ್ಜಾಲಕುಮಾರಿ ನನ್ನ ಲೋಕಲ್ ಭಾಷೆ ಕೇಳಿ ಕೆರಳಿಹೋದಳು. ಅಲ್ಲದೇ ಕೆದರಿದ ಕೂದಲು, ಕುರುಚಲು ಗಡ್ಡ, ಸೋಡಾಗ್ಲಾಸ್ ತೊಟ್ಟಿದ್ದ ನಾನು  ಬೆಕ್ಕುಗಳನ್ನು ಜೀವಂತ ಸುಟ್ಟುತಿನ್ನುವ 'ಬೆಕ್ಕು ಭಕ್ಷಕ' ಆದಿವಾಸಿಯಂತೆ ಕಂಡೆನೋ ಏನೋ, ತುದಿಗಾಲಿನಲ್ಲಿ ಸೆಟೆದು ನಿಂತು, ತನ್ನ ರೋಮಗಳನ್ನಲ್ಲಾ ನಿಮಿರಿಸಿ, ಬಾಲವನ್ನು ಈಟಿಯಂತೆ ಚೂಪಗೆ ನಿಲ್ಲಿಸಿಕೊಂಡು "ವ್ವ್.. ಈಯಾಂವ್...ಯೂಂವ್..." ಎಂದು ಕಿರುಚತೊಡಗಿದಳು. ನನ್ನ ಇಪ್ಪತ್ನಾಲಕ್ಕು ವರ್ಷಗಳ ಅನುಭವದಲ್ಲಿ ಅದುವರೆಗೆ ಬಾ ಎಂದಾಗ ಬರುವ ಬೆಕ್ಕುಗಳನ್ನು ನೋಡಿದ್ದೆ. ಬಿದ್ದು ಓಡಿಹೋಗಿರುವ ಬೆಕ್ಕುಗಳನ್ನೂ ನೋಡಿದ್ದೆ, ಆದರೆ ಹೀಗೆ 'ಪರಚು'ಯುದ್ಧಕ್ಕೆ ನಿಂತ ಬೆಕ್ಕನ್ನು ನೋಡುತ್ತಿದ್ದುದು ಇದೇ ಮೊದಲು! ಇನ್ನೊಂದು ಮಾತನಾಡಿದರೂ ಒದೆ ಬೀಳುವುದು ಖಂಡಿತವೆಂಬುದು ಅರ್ಥವಾಗಿ "ಕ್ಷಮಾ ಕೀಜಿಯೇ ಬಿಲ್ಲೀ ರಾಣೀ" ಎಂದು ಅಲ್ಲಿಂದ ಕಾಲ್ಕಿತ್ತೆ.

ಮಲೆನಾಡು ಮೂಲೆಯ ಹಳ್ಳಿಯೊಂದರಲ್ಲಿರುವ ನಮ್ಮನೆಯಲ್ಲಿ ಮೊದಲಿನಿಂದಲೂ ಇಲಿಗಳ ಹಾವಳಿ ಜಾಸ್ತಿ. ಹಗಲು ಹೊತ್ತಿನಲ್ಲಿ ಬಿಲಗಳಲ್ಲಿ, ಗೋಡೆಯ ಸಂದುಗೊಂದಿಯಲ್ಲಿ, ಗೊಬ್ಬರಗುಂಡಿಯ ಹೊಂಡಗಳಲ್ಲಿ ಅಡಗಿಕೊಂಡಿರುವ ಇವುಗಳು ರಾತ್ರೆಯಾಗುತ್ತಿದ್ದಂತೆಯೇ ಸಂಸಾರ ಸಮೇತವಾಗಿ ದರೋಡೆಗಿಳಿಯುತ್ತಿದ್ದವು. ತಡರಾತ್ರಿ ದರೋಡೆಕೋರರಾದ ಈ ಇಲಿಗಳದ್ದೊಂದು ರಗಳೆಯಾದರೆ ಇವನ್ನು ಹಿಡಿಯಲು ಬರುವ ಬೆಕ್ಕು-ಹಾವುಗಳದ್ದು ಇನ್ನೊಂದು ತೆರನಾದ ಹಾವಳಿ. ಇವುಗಳಿಗೆಲ್ಲಾ ಮಣ್ಣಿನ ಗೋಡೆಗಳು, ಪೆಟ್ಟಿಗೆ-ಟ್ರಂಕ್ ಗಳು, ಬುಟ್ಟಿ,ಗುದ್ದಲಿ,ಪಿಕಾಸಿಗಳೇ ಇತ್ಯಾದಿ ಸಾಮಾನು ಸರಂಜಾಮುಗಳಿಂದ ತುಂಬಿಹೋಗಿದ್ದ ನಮ್ಮ ಹಳೆಯ ಮನೆ ಅಮೇಜಾನ್ ಕಾಡಿನಂತೆ ಕಾಣುತ್ತಿತ್ತೋ ಏನೋ, ಇಲ್ಲಿ ಮನುಷ್ಯನೆಂಬ ಎರೆಡುಕಾಲಿನ ಸರ್ವೋಚ್ಛ ಪ್ರಾಣಿ ಇದ್ದಾನೆಂಬುದನ್ನೂ ಲೆಕ್ಕಿಸದೆ ತಮ್ಮ ಬೇಟೆಯನ್ನು ಬೆನ್ನಟ್ಟಿ ಹೊತ್ತಲ್ಲದ ಹೊತ್ತಿನಲ್ಲಿ ಒಳನುಗ್ಗಿಬಿಡುತ್ತಿದ್ದವು. ಹೀಗೆ ಬರುವವುಗಳಲ್ಲಿ ಹಾವುಗಳನ್ನು ಹೆದರಿಸಿ(ಹೆದರಿ!) ಓಡಿಸುತ್ತಿದ್ದೆವು. ಆದರೆ ಇಲಿಗಳ ಹಾವಳಿ ತಪ್ಪಿಸುವ ಈ ಮುದ್ದುಮುಖದ ಮಾರ್ಜಾಲಗಳ ಮೇಲೆ ಯಾರೂ ಕೈಮಾಡುತ್ತಿರಲಿಲ್ಲವಾದ್ದರಿಂದ ಅವುಗಳಿಗೆ ನಮ್ಮ ಮನೆ ಅಕ್ಷರಶಃ ಸ್ವತಂತ್ರ ಅಮೆಜಾನ್ ಕಾಡೇ ಆಗಿತ್ತು.

ಹೀಗೆ ಚಿಕ್ಕಂದಿನಿಂದಲೂ ತರಹೇವಾರಿ ರೀತಿಯ ಬೆಕ್ಕುಗಳನ್ನು ನೋಡುತ್ತಾ ಬಂದಿದ್ದೇನೆ. ಮನೆಯ ಸುತ್ತಮುತ್ತ ಓಡಾಡುತ್ತಿದ್ದ ಬೆಕ್ಕುಗಳಿಗೆ ಅವುಗಳ ಬಣ್ಣ, ಗಾತ್ರ, ರೂಪಗಳಿಗನುಗುಣವಾಗಿ ಅಪ್ಪ ಒಂದೊಂದು ಹೆಸರಿಡುತ್ತಿದ್ದರು. ಮೈಯ್ಯ ಹೆಚ್ಚಿನ ಭಾಗ ಬಿಳಿಯಾಗಿದ್ದು ಮಧ್ಯೆಮಧ್ಯೆ ಕಂದು ಹಾಗೂ ಕೆಂಚು ಮಿಶ್ರಿತ ರೋಮಗಳಿರುವ ದೈತ್ಯಗಾತ್ರದ 'ಪಾಂಡು ಬೆಕ್ಕು', ಪ್ರತೀ ಆರು ತಿಂಗಳಿಗೊಮ್ಮೆ ಬಸುರಿಯಾಗಿ, 'ಬಯಕೆ' ತೀರಿಸಿಕೊಳ್ಳುವುದಕ್ಕೆ ಅಡಿಗೆಮನೆಯಲ್ಲಿ ಕಳ್ಳತನಮಾಡಿ, ಬಸುರಿಯೆಂಬ ಕಾರಣಕ್ಕೆ ಬೀಳಬೇಕಾದ ಒದೆಗಳಿಂದ ಬಚಾವಾಗುತ್ತಿದ್ದ 'ಬಿಲ್ಲಿ ಬೆಕ್ಕು', ಕಂದು-ಪಾಚಿ ಬಣ್ಣ ಮಿಶ್ರಿತ 'ಪಾಚು ಬೆಕ್ಕು', ಪಕ್ಕದ ಗೌಡರ ಮನೆಯಲ್ಲಿ ನಾನ್ವೆಜ್ ತಿಂದು ದಷ್ಟಪುಷ್ಟವಾಗಿ ಬೆಳೆದ ದೈತ್ಯ 'ಕೆಂಚ ರಾಕ್ಷಸ' ಇತ್ಯಾದಿ. ಇವುಗಳಲ್ಲಿ ಸಂಪೂರ್ಣ ಡಿಫರೆಂಟಾಗಿರುವವೆಂದರೆ ದೈತ್ಯ ಪಾಂಡುಬೆಕ್ಕುಗಳು. ಪಾಂಡುಬೆಕ್ಕುಗಳೆಂದರೆ ಯಾರ ಕೈಗೂ ಸಿಗದೆ ಪೋಲಿ ಅಲೆಯುವ 'ಮಾಳ'(ಗಂಡು)ಗಳು. ಶುದ್ಧ ಮಾಂಸಾಹಾರಿಗಳಾದ ಅವುಗಳ ಎದುರೇ ಹಾಲಿನ ಬಟ್ಟಲಿಟ್ಟುಹೋದರೂ ಮುಟ್ಟಿಮೂಸುತ್ತಿರಲಿಲ್ಲ. ಎಷ್ಟೇ ಮುದ್ದಾಗಿ ಬಾಬಾ.. ತ್ಚುತ್ಚು.. ಮಿಯಾಂವ್.... ಎಂದು ಪ್ರೀತಿಯಿಂದ ಕರೆದರೂ ಹತ್ತಿರ ಬರುತ್ತಿರಲಿಲ್ಲ. ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಕಣ್ಣಿಗೆ ಬೀಳುತ್ತಿದ್ದ ಈ ದೈತ್ಯ ಬೆಕ್ಕುಗಳ ಸಾಮರ್ಥ್ಯದ ಮೇಲೆ ನನಗೊಂದು ವಿಧವಾದ ಅಭಿಮಾನ. ಇವೇ ಪ್ರಪಂಚದ ಅತೀ ಶಕ್ತಿಶಾಲಿ ಬೆಕ್ಕುಗಳು ಎನ್ನುವ ನಂಬಿಕೆ. ತಾವು ನೆಲೆನಿಂತ ಸೀಮೆಯಲ್ಲಿ ಮತ್ತೊಂದು ಗಂಡುಬೆಕ್ಕು ಬರುವುದನ್ನು ಇವು ಸುತರಾಂ ಸಹಿಸುತ್ತಿರಲಿಲ್ಲ. ತಮ್ಮ ಇಲಾಖೆಯಲ್ಲಿ ಅಪ್ಪಿತಪ್ಪಿ ಮತ್ಯಾವುದೇ ಮಾಳಬೆಕ್ಕಿನ ನೆರಳು ಕಂಡರೂ ಮುಗಿದೇ ಹೋಯಿತು, ಅದನ್ನು ಅಲ್ಲೇ ಅಡ್ಡಹಾಕಿ, ತಮ್ಮ ಬಲವಾದ ಚೋಟಿನಿಂದ(ಪಂಜ) ಅದರ ಕೆನ್ನೆಗೆ ನಾಲ್ಕು ಬಾರಿಸಿ, ತನ್ನ ಮ್ಯಾಂವ್ ಭಾಷೆಯಲ್ಲಿ "ಇನ್ನೊಮ್ಮೆ ಇಲ್ಲಿಗೆ ಬಂದರೆ ಹುಷಾರ್!" ಎಂದು ಊರಿಗೆಲ್ಲಾ ಕೇಳುವಂತೆ ಎಚ್ಚರಿಕೆ ಕೊಟ್ಟು ದೂರ ಅಟ್ಟುತ್ತಿದ್ದವು. ಆದರೆ ಕೆಲವೊಮ್ಮೆ ಎದುರಾಳಿಯೂ ಪ್ರಬಲನಾಗಿದ್ದಾಗ ಈ ಹೋರಾಟ ಅಷ್ಟು ಸುಲಭವಾಗಿ ಮುಗಿಯುತ್ತಿರಲಿಲ್ಲ. ಸ್ಪರ್ಧಿ-ಪ್ರತಿಸ್ಪರ್ಧಿಗಳೆರೆಡೂ ಎತ್ತರದ ಗೋಡೆಯ ಮೇಲೋ, ಹಂಚು ಮಾಡಿನ ಮೇಲೋ ಎದುರುಬದುರಾಗಿ, ನಿಮಿಷಗಟ್ಟಲೆ ಕದಲದಂತೆ ನಿಂತು ಒಂದನ್ನೊಂದು ಬೈದುಕೊಳ್ಳುತ್ತಿದ್ದವು. "ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ...." ಎಂದು ಮಾತ್ರಾಗಣಸಹಿತ ವಾಕ್ಯುದ್ಧ ನಡೆಸುತ್ತಿದ್ದವೋ, "ಇದು ಈ ಅರ್ಮುಗಂ ಕೋಟೆ ಕಣೋ" ಎಂದು ಮಾಸ್ ಡೈಲಾಗ್ ಹೊಡೆಯುತ್ತಿದ್ದವೋ ಗೊತ್ತಿಲ್ಲ, ಹುಲುಮಾನವರಾದ ನಮಗೆ ಕೇಳುತ್ತಿದ್ದುದು 'ಮೀsssಯಾಂವ್ssss' ಎನ್ನುವ ಕಿರುಚಾಟ ಮಾತ್ರ! ಕೊನೆಗೆ ಅಪ್ಪನೋ ಅಮ್ಮನೋ ಹೋಗಿ, ಭೀಮ-ದುರ್ಯೋಧನರಂತೆ ತೊಡೆತಟ್ಟಿ ('ಪಂಜ' ತಟ್ಟಿ!) ನಿಂತಿರುವ ಇವುಗಳ ಮೇಲೇ ಕಲ್ಲನ್ನೋ, ನೀರನ್ನೋ ಎಸೆದಾಗ ಬೆಚ್ಚಿ ಕೆಳಗೆ ಜಿಗಿದು ಒಂದನ್ನೊಂದು ಬೆನ್ನಟ್ಟುತ್ತಾ ರಾತ್ರೆಯ ಕತ್ತಲಲ್ಲಿ ಅಂತರ್ಧಾನವಾಗುತ್ತಿದ್ದವು.

ಅದೇಕೋ ಗೊತ್ತಿಲ್ಲ, ರೂಪದಲ್ಲಿ ಹುಲಿಯ ಹತ್ತಿರದ ಸಂಬಂಧಿಗಳಂತೆ ಕಾಣುವ ಈ ಬೆಕ್ಕುಗಳ ಮೇಲೆ ಮೊದಲಿನಿಂದಲೂ ನನಗೊಂದು ತೆರನಾದ ಪ್ರೀತಿತುಂಬಿದ ಕುತೂಹಲ. ಎಲ್ಲೇ ಪುಟಾಣಿ ಬೆಕ್ಕುಮರಿ ಕಂಡರೂ ಅದನ್ನು ಮನೆಗೆ ಒಯ್ಯೋಣವೆಂದು ನಾನು ಹಠ ಹಿಡಿಯುವುದು, ಅಮ್ಮ/ಅಪ್ಪ ಗದರಿಸಿ ಸುಮ್ಮನಾಗಿಸುವುದು ನಡೆಯುತ್ತಲೇ ಇರುತ್ತಿತ್ತು. ನಮ್ಮನೆಗೆ ತಾನಾಗೇ ಬಂದು ಸೇರಿಕೊಂಡಿದ್ದ ಪಾಚುಬೆಕ್ಕು ಅಮ್ಮ ಬೆಳಗ್ಗೆ ಏಳುತ್ತಿದ್ದಂತೆಯೇ ಅದೆಲ್ಲಿಂದಲೋ ಓಡಿಬಂದು ಮ್ಯಾಂವ್ ಮ್ಯಾಂವ್ ಎನ್ನುತ್ತಾ, ಅವಳ ಕಾಲಿಗೆ ತನ್ನ ನುಣುಪಾದ ಮೈಯ್ಯನ್ನು ಸವರುತ್ತಾ ಹಾಲು ಹಾಕುವಂತೆ ಪೂಸಿಹೊಡೆಯುವುದನ್ನೂ, ತನಗೆಂದೇ ಮೀಸಲಿಟ್ಟ ಬಟ್ಟಲಿಗೆ ಹಾಕಿದ ಹಾಲನ್ನು ಜಗತ್ತಿನ ಇನ್ಯಾರಿಗೂ ಕಾಣದಂತೆ(!) ಕಣ್ಮುಚ್ಚಿಕೊಂಡು ಕುಡಿಯುವುದನ್ನೂ ನಾನು ಕುತೂಹಲದಿಂದ ನೋಡುತ್ತಿದ್ದೆ. ಕೆಲವೊಮ್ಮೆ ಹಠಮಾಡಿ ನಾನೇ ಬಟ್ಟಲಿಗೆ ಹಾಲು ಹಾಕುತ್ತಿದ್ದೆ. ಅದು ಬಾಲ ನೆಟ್ಟಗೆ ಮಾಡಿಕೊಂಡು ಏರುದನಿಯಲ್ಲಿ ಕೂಗುತ್ತಾ ಹಾಲಿನ ಲೋಟ ಹಿಡಿದ ನನ್ನನ್ನು ಹಿಂಬಾಲಿಸಿಕೊಂಡು ಓಡಿ ಬರುವುದನ್ನು ನೋಡುವುದೇ ನನಗೊಂದು ಹೆಮ್ಮೆ. ತನ್ನ ಬಟ್ಟಲಿಗೆ ಹಾಕಿದ ಹಾಲನ್ನದು ಕಣ್ಮುಚ್ಚಿಕೊಂಡು ಚಪ್ಪರಿಸುವಾಗ ಹಿತವಾಗಿ ಮೈದಡವುತ್ತಾ ಅದರ ಸ್ನೇಹ ಸಂಪಾದಿಸಲು ಪ್ರಯತ್ನಿಸುತ್ತಿದ್ದೆ. ಅಡಿಗೆಮನೆಯಲ್ಲಿ ನಾವು ಸಾಲಾಗಿ ಕುಳಿತು ತಿಂಡಿ ತಿನ್ನುವಾಗ ತಾನೂ ಸಾಲಿನ ಕೊನೆಯಲ್ಲಿ ಕಾಲು ಮಡಿಚಿಕೊಂಡು ಕುಳಿತು, ನಮ್ಮ ತಟ್ಟೆಯಲ್ಲಿದ್ದ ತಿಂಡಿಯನ್ನು ಆಸೆಯಿಂದ ದಿಟ್ಟಿಸುತ್ತ, ಏನಿಲ್ಲವೆಂದರೂ ಎರೆಡು-ಮೂರು ದೋಸೆ/ರೊಟ್ಟಿ/ಚಪಾತಿಗಳನ್ನು ಹೊಟ್ಟೆಗಿಳಿಸುತ್ತಿತ್ತು. ಹಸಿವಾದಾಗ ಜಗತ್ತಿನ ಅತ್ಯಂತ ಸಾಧು ಪ್ರಾಣಿಯಂತೆ ಫೋಸ್ ಕೊಡುತ್ತಾ, ವಿನಮ್ರ ದನಿಯಲ್ಲಿ ಕೂಗುತ್ತಾ ಬಳಿಗೆ ಬರುತ್ತಿದ್ದ ಅದಕ್ಕೆ ಊಟವಾಗುತ್ತಿದ್ದಂತೆಯೇ ಆಟವಾಡವ ಮೂಡ್ ಬಂದು ಒಂದೋ ಅಡಿಗೆಮನೆಯ ಹೊಸಿಲಿನ ಮೇಲೆ ಕುಳಿತು ಆಚೀಚೆ ಓಡಾಡುವರ ಕಾಲನ್ನು ತನ್ನ ಪಂಜದಿಂದ ಹಿಡಿದುಕೊಂಡು ಕಚ್ಚುತ್ತಿತ್ತು; ಇಲ್ಲಾ ಅಂಗಳದ ಕಟ್ಟೆಯಮೇಲೋ, ಹುಲ್ಲುಗೊಣಬೆಯ ಮೇಲೋ ಕುಳಿತು ಮುಖತೊಳೆಯಲಾರಂಭಿಸುತ್ತಿತ್ತು.  ಆಗೇನಾದರೂ ನಾನು ಹತ್ತಿರ ಹೋದರೆ ಕುಳಿತಲ್ಲೇ ಅಂಗಾತ ಬಿದ್ದುಕೊಂಡು ಗುಲಾಬಿ ಮುಳ್ಳುಗಳಂತಿರುವ ಉಗುರುಗಳಿಂದ ಕೂಡಿದ ತನ್ನ ಕೈಯ್ಯನ್ನು ಬೀಸುತ್ತಾ ಆಟಕ್ಕೆ ಬರುವಂತೆ ಸವಾಲೆಸೆಯುತ್ತಿತ್ತು. ಅದರ ಸವಾಲನ್ನು ಸ್ವೀಕರಿಸಿದ ನಾನು ತೆಂಗಿನ ಗರಿಯನ್ನೋ, ಹಿಡಿಕಡ್ಡಿಯನ್ನೋ ಹಿಡಿದು ಅದರ ಮೈ-ಮೂತಿಗಳಿಗೆಲ್ಲಾ ತಾಗಿಸಿದರೆ, ತನ್ನೆರೆಡೂ ಪುಟಾಣಿ ಪಂಜಗಳಿಂದ ಆ ತೆಳ್ಳಗಿನ ಕಡ್ಡಿಯನ್ನು ಹಿಡಿದು ಬಾಯಿಗೆ ಹಾಕಿಕೊಳ್ಳಲೆತ್ನಿಸುತ್ತಾ ನೆಲದ ತುಂಬಾ ಹೊರಳಾಡುತ್ತಿತ್ತು. ಅದು ಉಳುಚಿಹೋಗುವ ಕಡ್ಡಿಯನ್ನು ಹಿಡಿದುಕೊಂಡು ತೆರೆದ ಬಾಯಿಯೊಳಕ್ಕೆ ತುಂಬಿಕೊಳ್ಳುವುದು, ನಾನು ಆ ಕಡ್ಡಿಯನ್ನು ತಪ್ಪಿಸಿ ಮಲಗಿರುವ ಅದರ ಮೃದುವಾದ ಹೊಟ್ಟೆ-ಎದೆಭಾಗಕ್ಕೆ ಅದೇ ಕಡ್ಡಿಯಿಂದ ಕಚಗುಳಿ ಕೊಡುವುದು, ಕಚಗುಳಿ ಇಡಿಸಿಕೊಂಡೂ ನಗಲಾಗದ ಅದು ಮಲಗಿದಲ್ಲೇ ಪಲ್ಟಿ ಹೊಡೆಯುವುದು... ಹೀಗೆ ಮೋಜಿನಿಂದ ಸಾಗುತ್ತಿತ್ತು ನಮ್ಮ ಆಟ.

ಹೀಗೆ ಪ್ರೀತಿಯಿಂದ ಸಾಕಿದ ಬೆಕ್ಕಿನ ಸಂಗ-ಸ್ನೇಹ ಎಷ್ಟು ಖುಷಿ ಕೊಡುತ್ತದೆಯೋ, ಅವುಗಳ ಸಾವು ಅಷ್ಟೇ ನೋವುಂಟುಮಾಡುತ್ತದೆ. ಬೆಕ್ಕೊಂದು ಸರಾಸರಿ ಹತ್ತರಿಂದ ಹನ್ನೆರೆಡು ವರ್ಷ ಬದುಕಬಲ್ಲದೆಂಬ ಅಂದಾಜಿದೆಯಾದರೂ ಆ ಕಾಲಕ್ಕೆ ನಾವು ಸಾಕಿದ್ದ ಯಾವುದೇ ಬೆಕ್ಕು ಆರೇಳು ವರ್ಷಕ್ಕಿಂತ ಹೆಚ್ಚು ಬದುಕಿದ್ದನ್ನು ನಾನು ನೋಡಿಲ್ಲ. ನಾಯಿಗಳ ಬಾಯಿಗೆ ಸಿಕ್ಕಿ, ತಮ್ಮದೇ ಕುಲಬಾಂಧವರಿಂದ ಕಚ್ಚಿಸಿಕೊಂಡು, ವಾಹನಗಳಡಿಗೆ ಅಪ್ಪಚ್ಚಿಯಾಗಿ.. ಹೀಗೇ ಬೆಕ್ಕುಗಳ ಬದುಕು ಒಂದಿಲ್ಲೊಂದು ದುರಂತ ಅಂತ್ಯ ಕಾಣುವುದೇ ಹೆಚ್ಚು. ಹಳ್ಳಿಗಳಲ್ಲಂತೂ ಎಲ್ಲೆಂದರಲ್ಲಿ ಓಡಾಡುವ ಇವುಗಳು ಹೇಳದೇ ಕೇಳದೇ ನಾಪತ್ತೆಯಾಗಿಬಿಡುವುದೇ ಜಾಸ್ತಿ. ಹೀಗಾದಾಗೆಲ್ಲ ಎಲ್ಲೇ, ಯಾವುದೇ ಬೆಕ್ಕಿನ 'ಮ್ಯಾಂವ್' ಕೇಳಿಸಿದರೂ ಒಂದು ಕ್ಷಣ ಅದು ನಮ್ಮ ಮುದ್ದಿನ ಬೆಕ್ಕೇ ಇರಬಹುದೇನೋ ಅನಿಸುವುದು ಸಹಜವಾದರೂ ನನ್ನ ಪ್ರಕಾರ ಪ್ರೀತಿಯಿಂದ ಸಾಕಿದ ಬೆಕ್ಕೊಂದು ಕಣ್ಣೆದುರೇ ಮೃತವಾಗುವುದಕ್ಕಿಂತ ಹೀಗೇ ನಾಪತ್ತೆಯಾಗಿಹೋಗುವುದೇ ಮೇಲು.  ಸಾಕಿದ ಬೆಕ್ಕೊಂದು ನಾಪತ್ತೆಯಾದಾಗ "ಮಾಂಸದ ಆಸೆಗೆ ಅಲ್ಲೆಲ್ಲೋ ಯಾರದೋ ಮನೆಗೆ ಹೋಗಿ ಸೇರಿಕೊಂಡಿದೆಯಂತೆ" ಅಂತ ನಮ್ಮನಮ್ಮಲ್ಲೇ ಮಾತನಾಡಿಕೊಂಡು ಸಮಾಧಾನಮಾಡಿಕೊಳ್ಳಬಹುದು. ಚಿಕ್ಕಂದಿನಲ್ಲಿ ಶಾಲೆಯಿಂದ ಮರಳುವ ನನಗಾಗಿ ಬಾಗಿಲಲ್ಲೇ ಕಾದುಕುಳಿತಿರುತ್ತಿದ್ದ, ಓದುತ್ತಾ ಕುಳಿತ ನನ್ನ ತೊಡೆಯೇರಿ ಮುದ್ದಾಗಿ ನಿದ್ರಿಸುತ್ತಿದ್ದ, ಮನೆಯೊಳಗೆ ಹರಿದು ಬರುತ್ತಿದ್ದ ಹಾವನ್ನು ಅಡ್ಡಹಾಕಿ ತಡೆದು ಶೌರ್ಯ ಮೆರೆದಿದ್ದ, ಬಾಲ ಎತ್ತಿಕೊಂಡು ಮ್ಯಾಂವ್ ಮ್ಯಾಂವ್ ಎಂದು ಮನೆಯ ತುಂಬಾ ಓಡಾಡುತ್ತಾ ಎಲ್ಲರ ಪ್ರೀತಿಪಾತ್ರವಾಗಿದ್ದ ಪಾಚುಬೆಕ್ಕು ಕಾರಣವೇ ಗೊತ್ತಾಗದಂತೆ ಅನ್ನಾಹಾರ ಬಿಟ್ಟು ಕೃಶವಾಗುತ್ತಾ ಆಗುತ್ತಾ ಕೊನೆಗೊಂದು ದಿನ ಅಪ್ಪನ ಕೈಯ್ಯಲ್ಲಿ ಗಂಗಾಜಲ ಬಿಡಿಸಿಕೊಂಡು ಇಹಲೋಕ ತ್ಯಜಿಸಿದ ಕ್ಷಣ ನೆನಪಾದಾಗ ಈಗಲೂ ಸಂಕಟವಾಗುತ್ತದೆ. ಮೊನ್ನೆಮೊನ್ನೆಯವರೆಗೂ ಮುದ್ದಾಗಿ ಓಡಾಡಿಕೊಂಡಿದ್ದ ಆ ಪುಟ್ಟ ಜೀವ ಸಾವಿನ ಸಂಕಟ ತಾಳಲಾರದೆ ಕಟ್ಟಕಡೆಯ ಬಾರಿಗೆಂಬಂತೆ ಕ್ಷೀಣದನಿಯಲ್ಲೊಮ್ಮೆ ನರಳಿ ನಿಶ್ಚಲವಾಗಿಹೋದಾಗ ಮನೆಯವರೆಲ್ಲರ ಕಣ್ಣಲ್ಲೂ ನೀರು. ಕೊನೆಗೆ ಹಿತ್ತಲಲ್ಲೊಂದು ಗುಂಡಿತೋಡಿ ಹೂಳುವ ಕ್ಷಣದಲ್ಲಿ ತೆರೆದೇ ಇದ್ದ ಅದರ ಮೃತ ಕಣ್ಣುಗಳಲ್ಲಿ ಕಂಡ ಆ ಯಾತನೆಯ ಚಿತ್ರ ಇಂದಿಗೂ ಮನಸ್ಸಿನಲ್ಲೇ ಉಳಿದುಹೋಗಿದೆ.

ನಾಯಿಗಳಷ್ಟಲ್ಲದಿದ್ದರೂ ಬೆಕ್ಕುಗಳೂ ಒಂದು ಮಟ್ಟಕ್ಕೆ ಭಾವುಕ ಜೀವಿಗಳು. ಮುಪ್ಪಡರಿ, ಸರಿಯಾಗಿ ನಡೆಯಲೂ ಆಗದೇ, ರೋಮವುದುರಿ ಮೈಯ್ಯೆಲ್ಲಾ ದದ್ದರಿಸಿಹೋಗಿ, ಎಲ್ಲರಿಂದ ಕಡೆಗಣಿಕೆಗೊಳಪಟ್ಟಿದ್ದ ಗಂಡು ಬೆಕ್ಕೊಂದರೆಡೆಗೆ ಅದರ ಯೌವನದ ದಿನಗಳ ಸಂಗಾತಿಯಾಗಿದ್ದ ಹೆಣ್ಣು ಬೆಕ್ಕೊಂದು ತೋರಿಸಿದ್ದ ಪ್ರೀತಿಯನ್ನು ಕಣ್ಣಾರೆ ನೋಡಿದ ಮೇಲೇ ನನಗೆ ಹೀಗನಿಸಿದ್ದು. ಅದೊಂದು ಸುಡುಸುಡು ಬಿಸಿಲಿನ ಮಧ್ಯಾಹ್ನ 'ಅವಳು' ಈಗಷ್ಟೇ ಊಟ ಮುಗಿಸಿ ಅಂಗಳದ ನೆರಳಲ್ಲಿ ವಿಶ್ರಾಂತಿ ಪಡೆಯುತ್ತ ಮಲಗಿದ್ದಳು. ಇದ್ದಕ್ಕಿದ್ದಂತೆ ಹುಲ್ಲುಗೊಣಬೆಯಲ್ಲಿ ಏನೋ ಸರಸರ ಸರಿದಾಟ. ಅವಳು ಕಾಲುಗಳ ಮೇಲಿಟ್ಟುಕೊಂಡಿದ್ದ ತಲೆಯನ್ನು ಫಕ್ಕನೆ ಎತ್ತಿ ಅತ್ತ ನೋಡಿದರೆ ಅಲ್ಲಿದ್ದುದು ಜೀವವೇ ಭಾರವಾದಂತೆ ಆಯಾಸದ ಹೆಜ್ಜೆಯಿಡುತ್ತಾ ಬರುತ್ತಿದ್ದ ತನ್ನ ಮುದಿಗೆಳೆಯ. ಅದೇನಾಯಿತೋ ಏನೋ, ಅವಳು ಮರುಕ್ಷಣವೇ ಮಲಗಿದಲ್ಲಿಂದ ಎದ್ದು ನೇರ ಅಡಿಗೆಮನೆಯ ಒಳಗೋಡಿದಳು‌. ಅಲ್ಲಿದ್ದ ನನ್ನಮ್ಮನೊಂದಿಗೆ ಜಗಳಾಡಿ, ಕೂಗಿ, ಗಲಾಟೆಮಾಡಿ, ತಾನು ಈಗಷ್ಟೇ ಕುಡಿದು ಖಾಲಿ ಮಾಡಿದ್ದ ಬಟ್ಟಲಿಗೆ ಮತ್ತೊಂದಿಷ್ಟು ಹಾಲು ಹಾಕಿಸಿಕೊಂಡಳು. ಆದರೆ ಬಟ್ಟಲಿಗೆ ಹಾಲುಬಿದ್ದ ಮರುಕ್ಷಣವೇ ನೋಡುತ್ತಿದ್ದ ನಾನು-ಅಮ್ಮ ಅಚ್ಚರಿಪಡುವಂತೆ ಒಂದು ತೊಟ್ಟು ಹಾಲನ್ನೂ ಕುಡಿಯದೇ ತಾನು ಇಷ್ಟೊತ್ತು ಗಲಾಟೆ ಮಾಡಿದ್ದೇ ಸುಳ್ಳೇನೋ ಎಂಬಂತೆ ಹೊರನಡೆದು, ಮೊದಲು ಮಲಗಿದ ಜಾಗದಲ್ಲೇ ಕಾಲುಚಾಚಿ ಮಲಗಿಬಿಟ್ಟಳು! ನೋಡನೋಡುತ್ತಿದ್ದಂತೆಯೇ ಅಂಗಳದಲ್ಲಿದ್ದ ಅವಳ ಮುದಿಗೆಳೆಯ ಅದೇ ಆಯಾಸದ ಭಾರ ಹೆಜ್ಜೆಗಳನ್ನಿಡುತ್ತಾ ಒಳಹೊಕ್ಕು ಬಟ್ಟಲಿನಲ್ಲಿದ್ದ ಹಾಲು ಕುಡಿಯತೊಡಗಿದ! ನನಗಂತೂ ಕಣ್ಣು ಹೊರಬರುವಷ್ಟು ಅಚ್ಚರಿ. ನಾವೆಲ್ಲರೂ ಕಡೆಗಣಿಸಿದ್ದ, ಸಾವಿಗೆ ಕೆಲವೇ ಹೆಜ್ಜೆಗಳಷ್ಟು ದೂರದಲ್ಲಿದ್ದ ಆ ಮುದಿಬೆಕ್ಕು.. ಅದು ತನಗೆ ಹಸಿವಾಗಿದೆಯೆಂದಾಗಲೀ, ಹಾಲು ಹಾಕಿಸೆಂದಾಗಲೀ ಒಂದು ಮಾತೂ ಬಾಯ್ಬಿಟ್ಟು ಕೇಳಿರಲಿಲ್ಲ. ಅದ್ಯಾವ ಮೂಕ ಸಂವೇದನೆಯೋ, ಭಾವ ಸಂವಹನೆಯೋ.. ನೂರಾರು ಭಾಷೆಗಳ, ಸಾವಿರಾರು ಪದಗಳ ಮೀರಿದ ಮಾತುಕತೆಯೊಂದು ಅಲ್ಲಿ ಒಂದು ಸಣ್ಣ ಇಶಾರೆಯೂ ಇಲ್ಲದಷ್ಟು ಮೌನದಲ್ಲಿ ನಡೆದುಹೋಗಿತ್ತು.

ಹೇಳುತ್ತಾ ಹೋದರೆ ಮಾರ್ಜಾಲ ಲೋಕದಲ್ಲಿ ಇಂತಹ ಹತ್ತಾರು ಭಾವುಕ ಸಂಗತಿಗಳಿವೆ‌. ತಾನಿಲ್ಲದ ಹೊತ್ತಿನಲ್ಲಿ ಧಾಳಿಮಾಡಿದ 'ಮಾಳ' ಬೆಕ್ಕೊಂದಕ್ಕೆ ಬಲಿಯಾದ ತನ್ನ ಎರೆಡುವಾರ ಪ್ರಾಯದ ಮೂರು ಪುಟಾಣಿ ಮರಿಗಳ ಶವವನ್ನು ತೋರಿಸುತ್ತಾ, ನೋಡಲು ಬಂದವರೆಲ್ಲರ ಕಾಲಿಗೆ ಸುತ್ತುಬರುತ್ತಾ, ಅರ್ಥವಾಗದ ಅದ್ಯಾವುದೋ ಕೂಗಿನಲ್ಲಿ ರೋಧಿಸುತ್ತಿದ್ದ ತಾಯಿಬೆಕ್ಕಿನ ನೋವು ತುಂಬಿದ ಕೂಗು ಇಂದಿಗೂ ನೆನೆಪಿನಲ್ಲುಳಿದಿದೆ.

                 *****************

ತಮ್ಮ ಕುಲಬಾಂಧವರನ್ನೆಲ್ಲ ಬಿಟ್ಟು ಮನುಷ್ಯನೊಂದಿಗೆ ರಾಜಿಮಾಡಿಕೊಂಡು, ಮುದ್ದಿಸಿಕೊಂಡು ಬದುಕುವ ಈ ಕುಡಿಮೀಸೆಯ ಮಾರ್ಜಾಲಗಳ ಒಡನಾಟ ಬೆಂಗಳೂರಿಗೆ ಬಂದಮೇಲೆ ನಿಂತೇಹೋಗಿದೆ. ಇಲ್ಲಿ ನಾಲಿಗೆಗೆ ಉಚ್ಛರಿಸಲಿಕ್ಕೂ ಕಷ್ಟವಾಗುವ ತಳಿಗಳಿಂದ ಗುರುತಿಸಲ್ಪಡುವ, ಡ್ಯಾನಿ, ಮಾರ್ಕೋ, ಸ್ಯಾಮ್ ಮುಂತಾದ ಮನುಷ್ಯರಿಗಿಂತಲೂ ಚಂದದ ಹೆಸರುಗಳಿಂದ ಕರೆಯಿಸಿಕೊಳ್ಳುವ, ಉದ್ದುದ್ದ ರೋಮದ, ಥಟ್ಟನೆ ನೋಡಿದರೆ ವಿಗ್ ಹಾಕಿಕೊಂಡ ಕುಳ್ಳ ನಾಯಿಯಂತೆ ಕಾಣುವ, ತರಹೇವಾರಿ ರೂಪ-ಆಕಾರಗಳ, ತನ್ನ ಒಂದು ಚಿಕ್ಕ ಪಲ್ಟಿಗೂ ಮನೆಯವರೆಲ್ಲರಿಂದ ಶಭಾಶ್ಗಿರಿಯನ್ನು ಪಡೆಯುವ ಮುದ್ದು ಬೆಕ್ಕಣ್ಣಗಳನ್ನು ನೋಡುವಾಗ ಬಾಲ್ಯದ ಬಿಲ್ಲಿ, ಪಾಚು, ಪಾಂಡುಗಳೆಲ್ಲ ಮತ್ತೆ ಜೀವಂತವಾಗಿ ಮೀಸೆ ಕುಣಿಸಿದಂತಾಗುತ್ತದೆ. ಮುಂದೊಂದು ದಿನ ಮತ್ತದೇ ಹಳ್ಳಿ ಜೀವನಕ್ಕೆ ಮರಳಿ, ಹೊಸಿಲ ಮೇಲೆ ಕುಳಿತ ಬೆಕ್ಕನ್ನು ಬೊಗಸೆಯಲ್ಲಿ ಹಿಡಿದು ಮುದ್ದಿಸುವೆನೆಂಬ ಕನಸೊಂದು ಹೊಸತಾಗಿ ಅರಳುತ್ತದೆ.

[ಈ ಬರಹವು ಕೆಲವೊಂದು ಕತ್ತರಿ ಪ್ರಯೋಗಗಳೊಂದಿಗೆ ದಿನಾಂಕ 24-9-2017ರ  ವಿಶ್ವವಾಣಿ ವಿರಾಮ ಸಾಪ್ತಾಹಿಕದ 'ಮಾರ್ಜಾಲ ಮೋಹ' ಅಂಕಣದಲ್ಲಿ 'ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ' ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿದೆ.]

ಬುಧವಾರ, ಜುಲೈ 26, 2017

ಹಾರಾಟದ ಸುತ್ತಮುತ್ತ..




ಪ್ರತಿದಿನ ಬೆಳಗ್ಗೆ ಬೆಂಗಳೂರು-ಹೊಸೂರು ಮುಖ್ಯರಸ್ತೆಯ ರೂಪೇನ ಅಗ್ರಹಾರ ನಿಲ್ದಾಣದಲ್ಲಿ ನಿಂತು ಕಂಪನಿಯ ವಾಹನಕ್ಕಾಗಿ ಕಾಯುವುದು ನನ್ನ ದಿನಚರಿ. 'ಹೊಸೂರು ರೋಡ್' ಎಂದೇ (ಕು)ಖ್ಯಾತವಾದ ಈ ರಸ್ತೆಯನ್ನು ದಾಟುವುದಕ್ಕೂ, ಉಕ್ಕಿ ಹರಿಯುತ್ತಿರುವ ನದಿಯೊಂದನ್ನು ಈಜಿ ದಡಸೇರುವುದಕ್ಕೂ ಹೆಚ್ಚಿನ ವ್ಯತ್ಯಾಸಗಳೇನೂ ಇಲ್ಲ. ಎರೆಡೂ ನಿಲ್ಲದ ಪ್ರವಾಹಗಳೇ! ಸಿಲ್ಕ್ ಬೋರ್ಡ್ ಎನ್ನುವ ಬೃಹತ್ ಜಂಕ್ಷನ್ ನಿಂದ ಕಟ್ಟೆಯೊಡೆದು ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೊಸೂರುಗಳ ಕಡೆಗೆ ಧಾವಿಸುವ ಸಾವಿರಾರು ಬೈಕು, ಕಾರು, ಬಸ್ಸೇ ಇತ್ಯಾದಿ ವಾಹನಗಳು ಭರಗುಡುತ್ತಾ ಓಡುತ್ತಿದ್ದರೆ ಈ ದ್ವಿಪಥ ರಸ್ತೆ ಅಕ್ಷರಶಃ ಬಿಸಿಲು, ಧೂಳು, ಹೊಗೆಗಳಿಂದ ಬೇಯುವ ಅಗ್ನಿಕುಂಡವಾಗಿಬಿಡುತ್ತದೆ. ಇಂತಹಾ ನೂರಾರು ರಸ್ತೆಗಳು ಒಟ್ಟು ಮೊತ್ತವೇ ಆಗಿರುವ ಬೆಂಗಳೂರಿಗೆ ಇದೇನು ಹೆಚ್ಚಲ್ಲ ಬಿಡಿ. ಇಲ್ಲಿ ನಿಂತು ಕಾಯುವಾಗೆಲ್ಲಾ ನನ್ನನ್ನು ವಿಚಿತ್ರ ಬಯಕೆಯೊಂದು ಕಾಡುತ್ತದೆ.

ಮನುಷ್ಯನಿಗೂ ಹಾರಲು ಬರಬೇಕಿತ್ತು!

ಚಿಕ್ಕವನಿದ್ದಾಗ ದೂರ್ ದರ್ಶನ್ ದಲ್ಲಿ 'ಜೈ ಹನುಮಾನ್' ಧಾರಾವಾಹಿಯಲ್ಲಿ ಆಂಜನೇಯ ಬಾನಿಗೆ ನೆಗೆದು ಹಾರಾಡುವುದನ್ನು ನೋಡುವಾಗಲೂ ಹೀಗೇ ಅನಿಸುತ್ತಿತ್ತು. ಹ...  ಒಂದು ನಿಮಿಷ. ರೆಕ್ಕೆಯಿಲ್ಲದಿದ್ದರೂ ವಿಧಾನಸೌಧದ ಸೂರು ಕಿತ್ತುಹೋಗುವಂತೆ ಹಾರಾಡುವ, ನೆಗೆದಾಡುವ ರಾಜಕಾರಣಿಗಳನ್ನು ನಾನೂ ನೋಡಿದ್ದೇನೆ. ಆದರೆ ನಾನು ಹೇಳುತ್ತಿರುವುದು ಆ ಹಾರಾಟದ ಬಗ್ಗೆಯಲ್ಲ; ಹಾತೆಹುಳಗಳಿಂದ ಹಿಡಿದು ದೈತ್ಯ ಹದ್ದುಗಳತನಕ ನೂರಾರು ಜಾತಿಯ ಕೀಟ-ಪಕ್ಷಿಗಳು ಸಣ್ಣ ಸದ್ದನ್ನೂ ಮಾಡದೇ ರೆಕ್ಕೆ-ಪುಕ್ಕ ಬಿಚ್ಚಿ ಬಾನಿನೆತ್ತರದಲ್ಲಿ ತೇಲಾಡುತ್ತಾವಲ್ಲಾ, ಆ ಹಾರಾಟದ ಬಗ್ಗೆ. ನಾವು ಮನುಷ್ಯರೂ ಹೀಗೇ ಹಾರುವಂತಿದ್ದರೆ ನಮ್ಮ ಪೃಥ್ವಿಯ ಎಷ್ಟೋ ಸಮಸ್ಯೆಗಳು ಹುಟ್ಟುತ್ತಲೇ ಇರಲಿಲ್ಲ ಅಲ್ವಾ?!

ನಮ್ಮ ಕಥೆಗಳನ್ನೇ ತೆಗೆದುಕೊಳ್ಳೋಣ. ನಾವು ಬೆಳಗ್ಗೆ ಎದ್ದವರೇ ಶಾಲೆಗೋ, ಕಾಲೇಜುಗೋ, ಆಫೀಸಿಗೋ ಹೊರಡುತ್ತೇವೆ. ಇನ್ನೂ ತಿಂಡಿ ತಿಂದಿಲ್ಲ, ಟೈ ಕಟ್ಟಿಕೊಂಡಿಲ್ಲ, ಶೂ ಪಾಲಿಶ್ ಆಗಿಲ್ಲ. ಶಾಲೆಯ/ಕಛೇರಿಯ ಬಸ್ಸು/ಕ್ಯಾಬು ಬರುವುದರೊಳಗೆ ಎಷ್ಟೆಲ್ಲಾ ಕೆಲಸ ಮುಗಿಸಿ ತಯಾರಾಗಬೇಕು. ಆ ಗಡಿಬಿಡಿಯಲ್ಲಿ ಏನೇನ್ನೋ ಮರೆತುಬಿಡುತ್ತೇವೆ. ವಿದ್ಯಾರ್ಥಿಗಳು ಅರ್ಧರಾತ್ರೆಯ ತನಕ ಕುಳಿತು ಬರೆದಿದ್ದ ಹೋಂ ವರ್ಕನ್ನು ಟೇಬಲ್ ಮೇಲೇ ಬಿಟ್ಟುಹೋಗುತ್ತಾರೆ. ಕಛೇರಿಯ ಯಾವುದೋ ಪ್ರಮುಖ ಫೈಲು ಸೋಫಾ ಮೇಲೇ ಉಳಿದುಬಿಟ್ಟಿರುತ್ತದೆ. ಬಸ್ ಪಾಸು ಯಾವುದೋ ಪ್ಯಾಂಟಿನ ಜೇಬಿನಲ್ಲಿ ಅವಿತಿರುತ್ತದೆ. ಐಡಿ ಕಾರ್ಡು ಮತ್ತೆಲ್ಲೋ ಕೈತಪ್ಪುತ್ತದೆ. ಬಸ್ಸಿನಲ್ಲಿ 'ಪಾಸ್' ಎಂದು ಹೇಳಿ ಜೇಬಿನಲ್ಲಿ ಪಾಸ್ ಇಲ್ಲದೇಹೋದಾಗ ಕಂಡಕ್ಟರ್ 'ಸಂಸ್ಕೃತ'ದಲ್ಲಿ ಬುದ್ಧಿಮಾತು ಹೇಳುತ್ತಾನೆ. ಹೋಂ ವರ್ಕ್ ತಂದಿಲ್ಲವೆಂದೊಡನೆಯೇ ಶಾಲೆಯ ಮಾಸ್ತರು ಕೈಯ್ಯಲ್ಲಿರುವ ಬೆತ್ತವನ್ನು ಟಿಪ್ಪೂಸುಲ್ತಾನನ ಖಡ್ಗದಂತೆ ಝಳಪಿಸುತ್ತಾರೆ. ಆಫೀಸಿನಲ್ಲಿ ಬಾಸು ಮರೆತ ಫೈಲನ್ನು ನೆನೆನೆನೆದು ತಾಂಡವ ನೃತ್ಯವನ್ನೇ ಆಡುತ್ತಾನೆ. ಇದಕ್ಕೆಲ್ಲಾ ಮೂಲಕಾರಣ ನಮಗಾಗಿ ಕಾಯದ ಕ್ಯಾಬು ಹಾಗೂ ಬಸ್ಸುಗಳು!

ಇರುವ ಒಂದೇ ಒಂದು ಭೂಮಿಯನ್ನು ಈ ವಾಹನಗಳು ಗಬ್ಬೆಬ್ಬಸುತ್ತಿರುವ ಬಗ್ಗೆ ಹೊಸತಾಗಿ ಏನೂ ಹೇಳಬೇಕಿಲ್ಲ. ವಿಜ್ಞಾನಿಗಳ ಮಾತನ್ನೇ ನಂಬುವುದಾದರೆ ಇನ್ನು ಮೊವತ್ತು-ನಲವತ್ತು ವರ್ಷಗಳಲ್ಲಿ ಪ್ರಪಂಚದ ಪೆಟ್ರೋಲ್, ಡೀಸೆಲ್ ಗಳೆಲ್ಲಾ ಮುಗಿದುಹೋಗುತ್ತವೆ. ದುಬೈನ ಕಟ್ಟಕಡೆಯ ಬಾವಿಯಲ್ಲೂ ಪೆಟ್ರೋಲ್ ಬತ್ತಿಹೋಗಿ ಫುಸ್ಸೆನ್ನುವ ಗಾಳಿಯೊಂದೇ ಉಳಿಯುವ ಆ ದಿನವನ್ನು, ವಿಪರೀತ ಎನ್ನುವಷ್ಟು ವಾಹನಗಳ ಮೇಲೆ ಅವಲಂಬಿತವಾಗಿರುವ ನಾವು-ನೀವು ಕಲ್ಪಿಸಿಕೊಳ್ಳುವುದೂ ಕಷ್ಟ. ವಿದೇಶಗಳಲ್ಲಿ, ನಮ್ಮ ಕೆಲವು ಪಟ್ಟಣಗಳಲ್ಲಿ ವಿದ್ಯುತ್ ಚಾಲಿತ ವಾಹನಗಳು ಬರಬಹುದು. ಆದರೆ ಮೊಬೈಲನ್ನು ಚಾರ್ಜ್ ಮಾಡಿಕೊಳ್ಳುವುದಕ್ಕೇ ಪರದಾಡುವಷ್ಟು ಕರೆಂಟ್ ನ ಅಭಾವವಿರುವ ನಮ್ಮ ಹಳ್ಳಿಗಳ ಕಥೆ? ಅವರೆಲ್ಲಾ ಮತ್ತೆ ಕುದುರೆ, ಎತ್ತುಗಳ ಕಾಲಿಗೇ ಬೀಳಬೇಕು! ಇದೆಲ್ಲವನ್ನೂ ಯೋಚಿಸಿದಾಗ 'ಮಿಲಿಯನ್ ಡಾಲರ್' ಪ್ರೆಶ್ನೆಯೊಂದು ನನ್ನೊಳಗೆ ಮೂಡುತ್ತದೆ:

ಕಾಗೆ, ಗೂಬೆಗಳಿಗೂ ಇರುವ ರೆಕ್ಕೆ ಮನುಷ್ಯನಿಗೇಕಿಲ್ಲ?

ಒಮ್ಮೆ ಕಲ್ಪನೆ ಮಾಡಿಕೊಳ್ಳೋಣ. ಹಾರುವ ಶಕ್ತಿಯೊಂದಿದ್ದರೆ ಬೆಳಗ್ಗೆ ಒಂಭತ್ತಕ್ಕೋ, ಹತ್ತಕ್ಕೋ ಶುರುವಾಗುವ ಕಛೇರಿ, ಶಾಲೆಗಾಗಿ ಏಳೂ ಮೊವತ್ತಕ್ಕೇ ಮನೆಬಿಡುವ ಅಗತ್ಯವಿರುತ್ತಿರಲ್ಲಿಲ್ಲ. ನಿಧಾನಕ್ಕೆ ಎದ್ದು ಬೇಕಾದಷ್ಟು ಬಾರಿ ಆಕಳಿಸಬಹುದಿತ್ತು. ಬಿಸಿಬಿಸಿ ಕಾಫಿಯನ್ನು ಮೆಲ್ಲಗೆ ಹೀರುತ್ತಾ ನ್ಯೂಸ್ ಪೇಪರ್ ನ ಕಟ್ಟಕಡೆಯ ಮೂಲೆಯಲ್ಲಿರುವ ಜಾಹೀರಾತನ್ನೂ ಬಿಡದಂತೆ ಸಕಲ ಜ್ಞಾನವನ್ನೂ ತಲೆಯೊಳಗೆ ತುಂಬಿಕೊಳ್ಳಬಹುದಿತ್ತು. ತಿಂಡಿ ಬೇಯಿಸಿತ್ತಿರುವ ಹೆಂಡತಿಗೆ ತಿಳಿಯದಂತೆ ಎರೆಡು ಸುತ್ತು 'ದಮ್' ಎಳೆಯಬಹುದಿತ್ತು. ಇಷ್ಟದ ಹಾಡನ್ನು ಕೋರಸ್ ನ ಸಮೇತ ಹಾಡಿಕೊಳ್ಳುತ್ತಾ ಸ್ನಾನ ಮಾಡಬಹುದಿತ್ತು. ಈ ಸಂಭ್ರಮಗಳೆಲ್ಲಾ ಮುಗಿದು, ಇನ್ನೇನು ಅರ್ಧಗಂಟೆಯಷ್ಟೇ ಉಳಿದಿದೆಯೆನ್ನುವಾಗ ಅಂಗಳಕ್ಕೋ, ಟೆರಾಸಿಗೋ ಬಂದು ದೀರ್ಘವಾಗಿ ಉಸಿರೆಳೆದುಕೊಂಡು, ಎರೆಡೂ ಕೈಯ್ಯನ್ನು ಪಟಪಟನೆ ಆಡಿಸಿದರಾಯಿತು, ನಮ್ಮ ಪ್ರಯಾಣ ಶುರು! ಹೊಂಡಗುಂಡಿಗಳಿಗೆ ಬರೆದುಕೊಟ್ಟಿರುವ ರಸ್ತೆಗಳು, ತೊಟ್ಟಿಗಿಂತ ಜಾಸ್ತಿ ರಸ್ತೆಯ ಮೇಲೇ ಬಿದ್ದಿರುವ ಕಸಕಡ್ಡಿಗಳು, ತೋಡಿರಾಗ ಹಾಡುತ್ತಾ ಹಾರಿಬಂದು ನಮ್ಮಿಂದ ಬಲವಂತವಾಗಿ ರಕ್ತದಾನ ಮಾಡಿಸಿಕೊಳ್ಳುವ   ಸೊಳ್ಳೆಗಳು, ರಸ್ತೆಯನ್ನೇ ಮೋರಿಯನ್ನಾಗಿಸಿಕೊಂಡು ನಿಂತಿರುವ ಕೊಳಚೆ ನೀರು.... ಇದ್ಯಾವುದರ ತಲೆಬಿಸಿಯಿಲ್ಲದೇ, ವೇಲು, ಕರ್ಚೀಫೇ ಇತ್ಯಾದಿಗಳನ್ನು ಮೂತಿಗೆ ಬಿಗಿದುಕೊಳ್ಳುವ ರಗಳೆಯಿಲ್ಲದೇ ಹಾಯಾಗಿ ಹಾರುತ್ತಾ ಆಫೀಸು/ಶಾಲೆಗಳನ್ನು ತಲುಪಬಹುದಿತ್ತು. ಹೋಗಿ ಟೆರಾಸಿನ ಮೇಲೆ 'ಲ್ಯಾಂಡ್' ಆಗಿ ಒಮ್ಮೆ ಮೇಲಕ್ಕೆ ನೋಡಿದರೆ ಬಾಸ್ ಕೂಡಾ ಸೇರಿದಂತೆ ಸೂಟು-ಬೂಟು ತೊಟ್ಟ ನೂರಾರು ಉದ್ಯೋಗಿಗಳು ಹಾರುತ್ತಾ ಬರುತ್ತಿರುವ ವಿಹಂಗಮ ದೃಶ್ಯ ಕಣ್ಣಿಗೆ ಬೀಳುತ್ತಿತ್ತು!

ಹಾರಾಟದಿಂದ ತಪ್ಪಿಹೋಗುವ ಇನ್ನೊಂದು ಅಪಾಯವೆಂದರೆ ಬೀದಿನಾಯಿಗಳ ಧಾಳಿ. ಹಗಲಿನ ಹೊತ್ತಿನಲ್ಲಿ ಪಾಪಚ್ಚಿಗಳಂತೆ ಬಿದ್ದುಕೊಂಡಿರುವ ಈ ನಿರ್ಗತಿಕ ಶ್ವಾನಗಳು ರಾತ್ರೆಯಾಗುತ್ತಿರುವಂತೆಯೇ 'ಗ್ರಾಮಸಿಂಹ'ಗಳಾಗಿಬಿಡುತ್ತವೆ. ಇಡೀ ಏರಿಯಾವನ್ನೇ ತಮ್ಮ ಸುಪರ್ದಿಗೆ ತೆಗೆದುಕೊಂಡು ಗಸ್ತು ತಿರುಗುತ್ತಾ ಎದುರಿಗೆ ಸಿಗುವ ಒಬ್ಬಂಟಿ ಯಾತ್ರಿಕರನ್ನು ಬೆದರಿಸುತ್ತವೆ. ಅದರಲ್ಲೂ ಚಿಂದಿ ಜೀನ್ಸ್, ನಾಲ್ಕಾರು ಜೇಬು-ಬಾಲಗಳಿರುವ ಕಾರ್ಗೋ ಪ್ಯಾಂಟ್ ನಂತಹಾ 'ಡಿಂಗ್ರಿ' ಉಡುಪು ತೊಟ್ಟವರು ಕಂಡರಂತೂ ಮುಗಿದೇಹೋಯಿತು, ಹೀನಾಮಾನವಾಗಿ ಬೊಗಳುತ್ತಾ ಧಾಳಿಮಾಡಿಬಿಡುತ್ತವೆ. ಹೀಗಾಗಿ ರಾತ್ರೆ ಒಬ್ಬಂಟಿಯಾಗಿ ಓಡಾಡುವರು ಹಾಗೂ 'ಡಿಂಗ್ರಿ' ವಸ್ತ್ರ ತೊಡುವವರಿಗೆ ಹಾರುವ ಶಕ್ತಿ ವರದಾನವಾಗಲಿದೆ. ಇನ್ನು ಲಕ್ಷಾಂತರ ಪತಿರಾಯರುಗಳಿಗೆ ಈ 'ಹಾರಾಟ'ದಿಂದ ಅದೆಷ್ಟು ಉಪಯೋಗವಾಗುತ್ತದೆ ಗೊತ್ತಾ? ಅವರಿನ್ನು ಪದೇ ಪದೇ ತಮ್ಮ ಹೆಂಡತಿಯನ್ನು ಶಾಪಿಂಗ್ ಗೆ ಕರೆದುಕೊಂಡು ಹೋಗುವ ಅಗತ್ಯವೇ ಇರುವುದಿಲ್ಲ. ಕ್ರೆಡಿಟ್ ಕಾರ್ಡನ್ನು ಅದರ ಪಾಸ್ ವರ್ಡಿನ ಸಮೇತ ಕೈಲಿಟ್ಟು ಕಳಿಸಿಕೊಟ್ಟರಾಯಿತು, ಮಹಿಳಾಮಣಿಗಳು ತಮ್ಮ ಪಾಡಿಗೆ ಹಾರಿಕೊಂಡು ಹೊರಟುಬಿಡುತ್ತಾರೆ.  ತಮಗೆ ಬೇಕಾದಷ್ಟು ಶಾಪಿಂಗ್ ಮಾಡಿಕೊಂಡು, ಅಂಗಡಿಯಲ್ಲಿರುವ ಅಷ್ಟೂ ವೆರೈಟಿಗಳನ್ನೂ ಆಚೆ ತರಿಸಿ, ಯಾವ ವಾಹನದ ಹಂಗಿಲ್ಲದೇ ಸ್ವತಂತ್ರವಾಗಿ ಹಾರುತ್ತಾ ಬಂದುಬಿಡುತ್ತಾರೆ. ಹಾಂ, ಈ ಒಡವೆ, ಬಟ್ಟೆ ಅಂಗಡಿಗಳ ಸೇಲ್ಸ್ ಮ್ಯಾನ್ ಗಳಿಗೆ ಮಾತ್ರ ಈ 'ಹಾರಾಟ'ದಿಂದ ತೊಂದರೆಯಾಗುತ್ತಿತ್ತೆನ್ನುವುದರಲ್ಲಿ ಸಂಶಯವೇ ಇಲ್ಲ. ಇಲ್ಲದ ಟ್ರಾಫಿಕ್ನಿಂದ ಉಳಿಯುವ ಸಮಯವನ್ನೂ ಈ ಮಹಿಳಾಮಣಿಗಳು ಅಂಗಡಿಯಲ್ಲಿ ಸೆಲೆಕ್ಷನ್ ಗೆಂದೇ ವ್ಯಯಿಸುವುದರಿಂದ ಅವರ ಶ್ರಮ ಹೆಚ್ಚಾಗುತ್ತದೆ. ಹೀಗಾಗಿ ಅವರೆಲ್ಲಾ ಒಟ್ಟಾಗಿ ನಮ್ಮೀ 'ಹಾರು ಸಿದ್ಧಾಂತ'ದ ವಿರುದ್ಧ ಹೋರಾಟನಡೆಸುವ ಅಪಾಯವೂ ಇಲ್ಲದಿಲ್ಲ.

ಹಾಗಂತ ಹಾರಾಟದಿಂದ ಬರೀ ಉಪಯೋಗಗಳು ಮಾತ್ರ ಇವೆಯೆಂದು ಹೇಳುವಂತಿಲ್ಲ. ಎಲ್ಲೆಲ್ಲಿ 'ಹಾರಾಟ' ಹೆಚ್ಚಾಗುತ್ತದೋ ಅಲ್ಲೆಲ್ಲಾ ನಿಯಮಾವಳಿಗಳು ಹುಟ್ಟಿಕೊಳ್ಳುತ್ತವೆ. ಇಲ್ಲೂ ಅಷ್ಟೇ. ಎತ್ತರದ ಟವರ್ ಗಳನ್ನು ಕಟ್ಟಿಸಿ, ಜೇಬಿಗೆ ಪೀಪಿ ಸಿಕ್ಕಿಸಿಕೊಂಡ ಟ್ರಾಫಿಕ್ ಪೋಲೀಸರನ್ನು ಅಲ್ಲಲ್ಲಿ ನಿಲ್ಲಿಸಿ ಹಾರುತ್ತಾ ಬರುವವರ ಮೇಲೊಂದು ಕಣ್ಣಿಡಬೇಕಾಗುತ್ತದೆ. ಏಕೆಂದರೆ ಈಗ ರಸ್ತೆಗಳಲ್ಲಿ ವೀಲಿಂಗ್ ಮಾಡುವ, ಹ್ಯಾಂಡಲ್ ಬಿಟ್ಟು ಬೈಕ್ ಓಡಿಸುವ ಬಿಸಿರಕ್ತದ ಹುಡುಗರು ಆಕಾಶದಲ್ಲಿ  ಒಂದೇ ಕೈ ಬಡಿಯುವುದು, ಗಾಳಿಯಲ್ಲಿ ಪಲ್ಟಿ ಹೊಡೆಯುವುದೇ ಮುಂತಾದ ಕಪಿಚೇಷ್ಟೆಗಳನ್ನ ಮಾಡಲಿಕ್ಕೂ ಸಾಕು. ಇನ್ನು ಕೆಲವು ಮುರುಷಪುಂಗವರು ಕುಡಿದು ಹಾರುತ್ತಾ ಬಂದು 'ಶಿವಾ' ಎಂದು ತಮ್ಮಪಾಡಿಗೆ ಹೋಗುತ್ತಿರುವ ಬಡಪಾಯಿಗಳಿಗೆ ಢೀ ಕುಟ್ಟಿ, ಕೊನೆಗೆ ಇಬ್ಬರೂ ಕಾಲುಮೇಲಾಗಿ ನೆಲಕ್ಕೆ ಬೀಳುವ ಅಪಾಯವನ್ನೂ ಅಲ್ಲಗಳೆಯುವಂತಿಲ್ಲ!  ಸಿಗ್ನಲ್ ಗಳಲ್ಲಿ ಕಡಲೆಕಾಯಿ, ಸೊಳ್ಳೆ ಬ್ಯಾಟ್, ನೀರಿನ ಬಾಟಲಿ,  ಇತ್ಯಾದಿಗಳನ್ನು ಮಾರುವ ರಸ್ತೆ ವ್ಯಾಪಾರಿಗಳೆಲ್ಲಾ ಹಾರುತ್ತಾ ಹಿಂದೆ ಬಂದು ತಮ್ಮ ಉತ್ಪನ್ನಗಳನ್ನು ಕೊಳ್ಳುವಂತೆ ಬೇಡಿಕೆ (ಬೆದರಿಕೆ!) ಇಡುತ್ತಾ ಬೆನ್ನಟ್ಟಿಬರುವ ಸಂಭವವೂ ಇಲ್ಲದಿಲ್ಲ. ಸರಗಳ್ಳರೇ ಮುಂತಾದವರು ಹಾರುಗಳ್ಳರುಗಳಾಗಿ ಬದಲಾಗಿ ನಡುಆಕಾಶದಲ್ಲೇ ಧಾಳಿನಡೆಸುವ ಸಾಧ್ಯತೆಗಳೂ ಹೆಚ್ಚಿವೆ. ಈ ಎಲ್ಲಾ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಈಗಿರುವ ರಸ್ತೆ ನಿಯಮಗಳಂತೆಯೇ 'ಹಾರಾಟ ವಿಧೇಯಕ'ಗಳನ್ನು ರೂಪಿಸಬೇಕಾಗುತ್ತದೆ. 

ಈ ಒಂದೆರೆಡು ದುಷ್ಪರಿಣಾಮಗಳ ಹೊರತಾಗಿ ಹೇಳುವುದಾದರೆ ಹಾರಾಟ ಒಂದು ಅದ್ಭುತ ಶಕ್ತಿ. ನಿಮಗೆಲ್ಲಾ ಜೀವವಿಕಾಸದ ಸಿದ್ಧಾಂತ ನೆನಪಿದೆಯಾ? ಸಮುದ್ರದಲ್ಲಿ ಮಾತ್ರವಿದ್ದ ಜೀವಿಸಂಕುಲ ನೀರಿನಿಂದ ಮೇಲಕ್ಕೆ ಎಗರುತ್ತಾ ಎಗರುತ್ತಾ ಕ್ರಮೇಣ ಅವುಗಳಲ್ಲಿ ನೆಲದಮೇಲಿನ ವಾತಾವರಣಕ್ಕೆ ಬೇಕಾದ ರಚನೆಗಳು ಮೈಗೂಡಿದವಂತೆ. ಅಂತೆಯೇ ನಾವುಗಳೂ ಇವತ್ತಿನಿಂದಲೇ ದಿನಕ್ಕೆ ಅರ್ಧಗಂಟೆಯಾದರೂ ಕೈಯ್ಯನ್ನು ರೆಕ್ಕೆಯಂತೆ ಬಡಿಯುತ್ತಾ ಮಂಚ, ಕಟ್ಟೆ, ದಿಬ್ಬ ಮುಂತಾದ ಚಿಕ್ಕ ಎತ್ತರಗಳಿಂದ ಹಾರಲು ಪ್ರಯತ್ನಿಸುವುದು ಒಳ್ಳೆಯದು. ಯಾರಿಗೆ ಗೊತ್ತು? ಕೊನೆಗೆ ನಮ್ಮ ಮೊಮ್ಮಕ್ಕಳು, ಮರಿಮಕ್ಕಳ ಕಾಲಕ್ಕಾದರೂ ಕನಿಷ್ಟ ಬಾವಲಿಗಿರುವಂತಹಾ ರೆಕ್ಕೆಗಳು ಮೂಡಿದರೂ ಮೂಡಬಹುದು! ಆಗ ನನ್ನೀ ಲೇಖನವು 'ಹ್ಯೂಮನ್ ಫ್ಲೈ ಥಿಯರಿ' ಅಂತಲೋ, 'ಮನುಷ್ಯನ ಹಾರು ಸಿದ್ಧಾಂತ' ಅಂತಲೋ ಪ್ರಸಿದ್ಧವಾಗಿ ನನಗೆ ನೊಬೆಲ್ ಬಹುಮಾನ ದೊರೆತರೂ ದೊರೆಯಬಹುದು. ಇಂತಹಾ ಒಂದು ಮಹಾನ್ ವಿಕಾಸದ ಮುನ್ನುಡಿಕಾರರಾದ ನಾನು-ನೀವು 'ಹಾರು ಸಿದ್ಧಾಂತದ ಹರಿಕಾರರು' ಎಂದು ಮೋಡಗಳ ಮೇಲಿನ ವೇದಿಕೆಯಲ್ಲಿ ಹಾರಾಡುತ್ತಾ ಪ್ರಶಸ್ತಿ ಸ್ವೀಕರಿಸುವ ಸಂದರ್ಭ ಸೃಷ್ಟಿಯಾದರೂ ಆಗಬಹುದು. ಏನಂತೀರಾ?

ವಿಶೇಷ ಸೂಚನೆ: ಈ ಲೇಖನದಿಂದ ಪ್ರೇರಿತರಾಗಿ ಬೇಗ ರೆಕ್ಕೆಗಳು ಬರಬೇಕೆಂಬ ಅತಿಯಾಸೆಯಿಂದ, ಹಾರಿಯೇ ಬಿಡುತ್ತೇನೆಂಬ ಓವರ್ ಕಾನ್ಫಿಡೆನ್ಸ್ ನಿಂದ ಎತ್ತರದ ಮಹಡಿಯಿಂದಲೋ, ಮರದಿಂದಲೋ ಧುಮುಕಿ ಕೈ, ಕಾಲು, ಸೊಂಟ ಮುರಿದುಕೊಂಡರೆ ಅದಕ್ಕೆ ಲೇಖಕರು ಜವಾಬ್ದಾರರಾಗಿರುವುದಿಲ್ಲ!

(ಮಂಗಳ 24-5-2017ರ ಸಂಚಿಕೆಯಲ್ಲಿ ಪ್ರಕಟವಾದ ನಗೆಬರಹ)

ಭಾನುವಾರ, ಜುಲೈ 23, 2017

ಮೂಡುಗುಡ್ಡೆ ಪ್ರೀಮಿಯರ್ ಲೀಗ್!



ಚಿಕ್ಕವನಿದ್ದಾಗ ನನಗೆ ಕ್ರಿಕೆಟ್ ಎಂದರೆ ಒಂದು ರೀತಿ ಕೋಪ. ಡಿಡಿ1 ರಲ್ಲಿ ಕಡ್ಡಾಯವಾಗಿ ನೇರ ಪ್ರಸಾರವಾಗುತ್ತಿದ್ದ ಭಾರತದ ಪಂದ್ಯಗಳು ವಾರಕ್ಕೆ ಒಮ್ಮೆ ಮಾತ್ರ ಬರುವ ನನ್ನ ಮೆಚ್ಚಿನ ಭಾನುವಾರದ ಸಿನೆಮಾವನ್ನು ನುಂಗಿ ಹಾಕುತ್ತವೆಂಬುದೇ ನನ್ನ ಬೇಸರಕ್ಕೆ ಕಾರಣವಾಗಿತ್ತು. ಆದ್ದರಿಂದಲೇ ಕ್ರಿಕೆಟ್ ಆಟದ ಅಆಇಈಗಳೇ ಗೊತ್ತಿಲ್ಲದ ನನ್ನ ಅಮ್ಮ "ಈ ರಿಪ್ಲೈ, ಅಡ್ವರ್ಟೈಸ್ ಗಳನ್ನ ಮತ್ತೆಮತ್ತೆ ಹಾಕ್ದೇ ಇದ್ದಿದ್ರೆ ಆಟ ಬೇಗ ಮುಗ್ದು ಪಿಚ್ಚರ್ ನೋಡ್ಲಕ್ಕಿತ್ತು" ಎಂದು ವಾದಿಸುವಾಗ ಹೌದೌದು ಎಂದು ತಲೆ ಆಡಿಸುತ್ತಿದ್ದೆ. ಅದರಲ್ಲೂ ಒಂದು ಇನ್ನಿಂಗ್ಸ್ ಮುಗಿದ ನಂತರ ಬರುತ್ತಿದ್ದ 'ಫೋರ್ಥ್ ಅಂಪಾಯರ್' (ಆಗ ಅದಕ್ಕೇನನ್ನುತ್ತಿದ್ದರೋ ನೆನಪಿಲ್ಲ) ಬಂದಾಗಲಂತೂ ಅಮ್ಮನಿಗೆ ಪಿತ್ತ ನೆತ್ತಿಗೇರುತ್ತಿತ್ತು. "ಹಿಂಗೆ ಕೂತ್ಕಂಡು ಕಟ್ಟೆ ಪಂಚಾಯ್ತಿ ಮಾಡೋ ಬದ್ಲು ಬೇಗ ಬೇಗ ಆಡಿ ಮುಗ್ಸಬಾರ್ದಾ" ಎಂದು ಟೀವಿಯಲ್ಲಿ ಪಂದ್ಯದ ಬಗ್ಗೆ ಚರ್ಚಿಸುತ್ತಾ ಕುಳಿತಿರುವ ಕಪಿಲ್ ದೇವ್, ರವಿ ಶಾಸ್ತ್ರಿಗಳನ್ನೆಲ್ಲಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. 

ಏನೂ ಅರ್ಥವಾಗದಿದ್ದರೂ ಕೆಲವೊಮ್ಮೆ ನಾನು ಓದಲೆಂದು ನಮ್ಮನೆಯಲ್ಲಿದ್ದ ಅಕ್ಕನ ಜೊತೆ ಕುಳಿತು ಕ್ರಿಕೆಟ್ ನೋಡುತ್ತಿದ್ದೆ. ಕ್ರಿಕೆಟ್ ನ ಬಗ್ಗೆ ಅಲ್ಪಸ್ವಲ್ಪ ಗೊತ್ತಿದ್ದ ಅಕ್ಕ ಏನೂ ಗೊತ್ತಿಲ್ಲದ ನನಗೆ "ನೋಡಿಲ್ಲಿ, ಹಿಂಗೆ ಹೊಡೆದ್ರೆ ಸಿಕ್ಸ್, ಹಿಂಗೆ ಹೊಡೆದ್ರೆ ಫೋರ್" ಎಂದು ಸದಭಿನಯಪೂರ್ವಕವಾಗಿ ತೋರಿಸುತ್ತಿದ್ದಳು. ಅವಳನ್ನು ಅನುಕರಿಸಲಾಗದ ನಾನು ಪೆಕರನಂತೆ ಕೈಯ್ಯನ್ನು ಹೇಗ್ಹೇಗೋ ಬೀಸಿ "ಹಿಂಗೆ ಹೊಡೆದ್ರೆ?" ಎಂದು ಕೇಳುತ್ತಿದ್ದೆ. ಇದುವರೆಗೆ ಯಾವ ತಂಡದ ಯಾವ ಬ್ಯಾಟ್ಸ್ ಮನ್ ಕೂಡಾ ಹೊಡೆಯದ ಆ ವಿಚಿತ್ರ ಹೊಡೆತವನ್ನು ಕಂಡು ಗಲಿಬಿಲಿಗೊಂಡ ಅವಳು "ಹಂಗೆ ಹೊಡೆದ್ರೆ ಫರ್ಸ್ಟ್ ಬಾಲಿಗೇ ಓಟ್ ಆಗ್ತೀಯ ಅಷ್ಟೇ" ಎಂದು ಗದರುತ್ತಾ ಮತ್ತೊಮ್ಮೆ ಬರಿಗೈಯ್ಯಲ್ಲಿ ಗಾಳಿಗೆ ಸಿಕ್ಸರ್-ಫೋರ್ ಬಾರಿಸಿ ತೋರಿಸುತ್ತಿದ್ದಳು. ಅವಳ ಪರಮವಿಧೆಯ ಗಾಂಪ ಶಿಶ್ಯನಾದ ನಾನು ಆ ಅದ್ಭುತ 'ಶಾಟ್'ಗೆ ಬೆರಗಾಗಿ ತಲೆದೂಗುತ್ತಿದ್ದೆ.

ನಾನು, ನನ್ನ ತಮ್ಮ ಹಾಗೂ ಚಿಕ್ಕಪ್ಪನ ಮಗ- ನಮ್ಮ ಕೇರಿಯಲ್ಲಿದ್ದುದು ಒಟ್ಟು ಮೂವರು ಹುಡುಗರು. ಆಗಿನ್ನೂ ನಮ್ಮ ದೈನಂದಿನ ಆಟಗಳೊಳಗೆ ಕ್ರಿಕೆಟ್ ಪ್ರವೇಶಿಸಿರಲಿಲ್ಲ. ನಮ್ಮ ಮೇಲೆ ಶಕ್ತಿಮಾನ್, ಜೂನಿಯರ್-ಜಿ, ಜೈ ಹನುಮಾನ್ ನಂತಹಾ ಫಿಕ್ಷನ್ ಹಾಗೂ ಪೌರಾಣಿಕ ಧಾರಾವಾಹಿಗಳ ಪ್ರಭಾವ ತುಸು ಹೆಚ್ಚೇ ಇದ್ದುದರಿಂದ ನಾವಾಡುವ ಆಟಗಳಲ್ಲೂ ಸಹಾ ಅವೇ ಇರುತ್ತಿದ್ದವು. ಕೈಗೆ ಸಿಕ್ಕ ದೊಣ್ಣೆ,ಕೋಲು-ಕೊಕ್ರುಗಳನ್ನು ಖಡ್ಗ-ಗದೆಗಳಂತೆ ಹಿಡಿದು ಬಾಯಿಂದ ಠಾಣ್ ಠಾಣ್ ಎನ್ನುವ ಸದ್ದು ಹೊರಡಿಸುತ್ತಾ ಅಂಗಳದಲ್ಲೇ ಭಯಾನಕ ಯುದ್ಧದ ಸನ್ನಿವೇಶವನ್ನು ಸೃಷ್ಟಿಸುತ್ತಿದ್ದೆವು. ನನ್ನ ತಮ್ಮನಂತೂ ಮೋಟುದ್ದದ ಕೋಲನ್ನು ಮಂತ್ರದಂಡದಂತೆ ಬೀಸುತ್ತಾ, ಚಿತ್ರವಿಚಿತ್ರ ಮಂತ್ರಗಳನ್ನು ಪಠಿಸುತ್ತಾ ಎಲ್ಲರನ್ನೂ ಬೆಚ್ಚಿಬೀಳಿಸುತ್ತಿದ್ದ. ಹೀಗಿದ್ದ ನಮ್ಮ 'ಫಿಕ್ಷನ್' ಲೋಕಕ್ಕೆ ಕ್ರಿಕೆಟ್ಟನ್ನು ಪರಿಚಯಿಸಿದವರು ಪಕ್ಕದ ಮನೆಯಲ್ಲೇ ಇದ್ದ ನಮ್ಮ ಅಣ್ಣ (ದೊಡ್ಡಪ್ಪನ ಮಗ). ದೂರದೂರಿನಲ್ಲಿದ್ದ ತಮ್ಮ ಅಂಗಡಿಯನ್ನು ಮುಚ್ಚಿ ಮನೆಯಲ್ಲೇ ಇರಲಾರಂಭಿಸಿದ ಅವರು ಕಾಗೆ-ಗುಬ್ಬಿ ಆಟ ಆಡುತ್ತಿದ್ದ ನಮ್ಮ ಕೈಗೆ ಮೊದಲ ಬಾರಿಗೆ ಚೆಂಡು-ದಾಂಡು ಕೊಟ್ಟರು.

ಕೊಟ್ಟಿದ್ದನ್ನು ಶಿಸ್ತಾಗಿ ತೆಗೆದುಕೊಂಡಿದ್ದೇನೋ ಹೌದು, ಆದರೆ ಆಡಲು ಬರಬೇಕಲ್ಲ? ಬ್ಯಾಟನ್ನು ಗದೆಯಂತೆಯೂ, ಬಾಲನ್ನು ಬಾಂಬಂತೆಯೂ ಬೀಸುತ್ತಾ ಕ್ರಿಕೆಟ್ಟನ್ನೂ ಪೌರಾಣಿಕ-ಫಿಕ್ಷನ್ ಮಿಶ್ರಿತ ಹೈಬ್ರೀಡ್ ಯುದ್ಧದಂತೆ ಆಡುತ್ತಿರುವ ನಮ್ಮ ಶೈಲಿ ನೋಡಿ ಅಕ್ಷರಷಃ ಬೆಚ್ಚಿಬಿದ್ದ ಅಣ್ಣ ಕೊನೆಗೆ ಸ್ವತಃ ತಾವೇ ಅಂಗಳಕ್ಕಿಳಿದರು. ನಮಗೆ ಕಲಿಸುತ್ತಾ, ತಾವೂ ಆಡುತ್ತಾ ಕ್ರಿಕೆಟ್ ಎನ್ನುವ ಎಂದೂ ವಾಸಿಯಾಗದ ಹುಚ್ಚನ್ನು ನಮ್ಮ ತಲೆಯೊಳಕ್ಕೆ ತುಂಬಿದರು. ನೂರುಕೋಟಿ ಭಾರತೀಯರ ಉಸಿರಾಟವಾಗಿರುವ, ಆಡಿದಷ್ಟೂ ಆಡಬೇಕೆನಿಸುವ ಈ ಆಟ ನಮಗೆ ಇನ್ನಿಲ್ಲದಷ್ಟು ಇಷ್ಟವಾಗಿಹೋಯಿತು. ಶನಿವಾರ ಮಧ್ಯಾಹ್ನವಾದರೆ ಸಾಕು, ಯಾವ ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ ಕಡಿಮೆಯಿಲ್ಲದ ಸಂಭ್ರಮವೊಂದು ನಮ್ಮನೆಯ ಅಂಗಳದಲ್ಲಿ ಜಮಾಯಿಸುತ್ತಿತ್ತು. ಆದರೆ ಇಲ್ಲಿ ನಮ್ಮ ಆಟಕ್ಕೆ ಹತ್ತಾರು ಅಡೆತಡೆಗಳು. ನಮ್ಮನೆ ಇರುವುದು ಗುಡ್ಡದ ಇಳಿಜಾರಿನ ನಡುವೆಯಾಗಿರುವುದರಿಂದ ಸುತ್ತಲೂ ಆಳವಾದ ತಗ್ಗು-ಹೊಂಡಗಳಿವೆ. ಸಾಲದ್ದಕ್ಕೆ ಈ ಹೊಂಡ-ತಗ್ಗುಗಳ ತುಂಬಾ ತರಹೇವಾರಿ ಗಿಡ,ಗಂಟಿ, ಪೊದೆಗಳು ಒತ್ತಾಗಿ ಬೆಳೆದು ಅಲ್ಲೆಲ್ಲೂ ಕಾಲಿಡದಂತಾಗಿದೆ. ನೇರವಾಗಿ ಅಥವಾ ಬಲಭಾಗದಲ್ಲಿ ಸ್ವಲ್ಪ ಜೋರಾಗಿ ಹೊಡೆದರೂ ಚೆಂಡು ಛಂಗನೆ ಹಾರಿ ಈ ಆಳಹೊಂಡದ ಪೊದೆಗಳ ನಡುವೆಲ್ಲೋ ಮರೆಯಾಗಿ, ಆಡಿದ್ದಕ್ಕಿಂತಲೂ ಹೆಚ್ಚಿನ ಸಮಯ ಚೆಂಡು ಹುಡುಕಲಿಕ್ಕೇ ವ್ಯಯವಾಗುತ್ತಿತ್ತು. ಬಹುಷಃ ಬೇರೆಲ್ಲಾದರೂ ಇಷ್ಟು ಹುಡುಕಿದ್ದರೆ ಭಾರೀ ಖಜಾನೆಯೇ ಸಿಗುತ್ತಿತ್ತೋ ಏನೋ, ಚೆಂಡು ಮಾತ್ರ ಸಿಗುತ್ತಿರಲಿಲ್ಲ. ಹುಡುಕುವ ಕಣ್ಣಿಗೆ ಹಳದಿ ಬಣ್ಣದ ವಸ್ತುಗಳೆಲ್ಲವೂ ಬಾಲ್ ನಂತೆಯೇ ಕಂಡು ದಾರಿ ತಪ್ಪಿಸುತ್ತಿದ್ದವು. ಇದು ಸಾಯಲಿ ಎಂದು ಎಡಕ್ಕೇನಾದರೂ ಹೊಡೆದರೆ ಮುಗಿದೇ ಹೋಯಿತು. ಚೆಂಡು ಮನೆಗೆ ತಗುಲಿ, ಮಣ್ಣಿನ ಗೋಡೆಯಿಂದ ಮಣ್ಣು ಧಸಾಲ್ಲನೆ ಉದುರಿ, ಒಳಗಿದ್ದ ಅಪ್ಪನಿಗೆ ಪಿತ್ತ ಕೆದರಿ, ನಾವು ಹುಗಿದ ವಿಕೆಟನ್ನೇ ಕಿತ್ತು ನಮಗೆ ನಾಲ್ಕು ಬಿಗಿಯುವುದರಲ್ಲಿ ಅನುಮಾನವೇ ಇರಲಿಲ್ಲ.

ಆ ದಿನಗಳಲ್ಲಿ ನೂರಿನ್ನೂರು ರೂಪಾಯಿ ಬೆಲೆ ಬಾಳುತ್ತಿದ್ದ ಹೊಸ ಬ್ಯಾಟು ಬೇಕೆಂದೇನಾದರೂ ಕೇಳಿದ್ದೇ ಆದರೆ ಅಪ್ಪ ಕೋಪದಲ್ಲಿ 'ಮಾಸ್ಟರ್-ಬ್ಲಾಸ್ಟರ್' ಆಗಿಬಿಡುವ ಅಪಾಯವಿದ್ದುದರಿಂದ ನಾವು ಆ 'ರಿಸ್ಕ್' ತೆಗೆದುಕೊಂಡಿರಲಿಲ್ಲ. ಯಥೇಚ್ಚವಾಗಿ ಬಿದ್ದಿರುತ್ತಿದ್ದ ತೆಂಗಿನ ಗರಿಗಳಲ್ಲಿ ಒಳ್ಳೆಯದೊಂದನ್ನು ಆಯ್ದು, ಅದರ ತಲೆಯನ್ನು ಅಗತ್ಯಕ್ಕೆ ತಕ್ಕಂತೆ ಕೊಯ್ದು, ಬುಡವನ್ನು ಹಿಡಿಕೆಯಂತೆ ಚಿಕ್ಕದಾಗಿ ಕತ್ತರಿಸಿ, ಮಧ್ಯದಲ್ಲಿ 'MRF' ಎಂದು ದೊಡ್ಡಕ್ಷರಗಳಲ್ಲಿ ಕೆತ್ತಿ ನಮ್ಮದೇ ಆದ ಬ್ಯಾಟನ್ನು ಸಿದ್ಧಪಡಿಸಿಕೊಂಡಿದ್ದೆವು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ನನ್ನ ಗೆಳೆಯನೊಬ್ಬ ಅಡಿಕೆ ಮರದ ಹಾಳೆಯನ್ನೇ ಕತ್ತರಿಸಿ 'ಪ್ಯಾಡ್' ನಂತೆ ಕೈ-ಕಾಲುಗಳಿಗೆ ಕಟ್ಟಿಕೊಂಡು ಯಾವ ತೆಂಡೂಲ್ಕರ್ ಗೂ ಕಮ್ಮಿ ಇಲ್ಲದಂತೆ ಸರ್ವಸನ್ನದ್ಧನಾಗಿ ತನ್ನ ಆರು ವರ್ಷದ ತಂಗಿಯ ಜೊತೆ ಆಡಲು ಅಂಗಳಕ್ಕಿಳಿಯುತ್ತಿದ್ದ! 

ವಯಸ್ಸಿನಲ್ಲಿ ನನಗಿಂತ ಚಿಕ್ಕವರಾದ ತಮ್ಮಂದಿರನ್ನು ಜೊತೆಗೂಡಿಸಿಕೊಂಡು ಆಟವನ್ನು ಪೂರ್ಣಗೊಳಿಸುವುದು ನನ್ನ ಪಾಲಿಗೆ ದೊಡ್ಡ ಸವಾಲಾಗಿತ್ತು. ಸದಾ ತಾವೇ ಬ್ಯಾಟಿಂಗ್ ಮಾಡಬೇಕು ಹಾಗೂ ತಾವೇ ಗೆಲ್ಲಬೇಕು ಎಂದು ಹಟ ಮಾಡುತ್ತಿದ್ದ ಅವರಿಬ್ಬರೂ ಅದು ಸಾಧ್ಯವಾಗದೇ ಹೋದಾಗ ರಗಳೆ ತೆಗೆಯುತ್ತಿದ್ದರು. ಎಷ್ಟೋ ಸಲ ಕ್ರಿಕೆಟ್ ನಲ್ಲಿ ಆರಂಭವಾದ ಆಟ ಮಲ್ಲಯುದ್ಧ-ಮುಷ್ಠಿಯುದ್ಧಗಳಲ್ಲಿ ಅಂತ್ಯವಾಗುತ್ತಿತ್ತು. ಕೊನೆಗೆ ಈ ಹೊಡೆದಾಟವನ್ನು ತಡೆಯಲು ನಾವು ಅದ್ಭುತ ಉಪಾಯವೊಂದನ್ನು ಕಂಡುಕೊಂಡೆವು. ಅದೇನೆಂದರೆ ನಾವು ನಮ್ಮದೇ ಹೆಸರಿನಲ್ಲಿ ಆಡುವ ಬದಲು ಅಂತರಾಷ್ಟ್ರೀಯ ಆಟಗಾರರ ಹೆಸರಿನಲ್ಲಿ ಆಡುವುದು! ಒಮ್ಮೆ 'ಸಚಿನ್' ಆಗಿ ಔಟಾದ ನನ್ನ ತಮ್ಮ ಸ್ವಲ್ಪ ದೂರ ನಡೆದುಹೋಗಿ 'ಸೆಹ್ವಾಗ್' ಆಗಿ ಮರಳಿಬರುತ್ತಿದ್ದ. ನಾನ್ ಸ್ಟ್ರೈಕರ್ ನಲ್ಲಿರುವ ನನ್ನ ಚಿಕ್ಕಪ್ಪನ ಮಗ ದ್ರಾವಿಡ್ ಆದರೆ ಇವರಿಬ್ಬರಿಗೂ ಬೌಲಿಂಗ್ ಮಾಡುತ್ತಿರುವ ನಾನು ಜಹೀರ್ ಖಾನ್! ಹೀಗೆ ಕೋಟಿಕೋಟಿ ಬೆಲೆಬಾಳುವ ಆಟಗಾರರೆಲ್ಲಾ ನಮ್ಮ ಮುರುಕು ಮನೆಯಂಗಳದಲ್ಲಿ ತೆಂಗಿನ ಗರಿಯ ಬ್ಯಾಟ್ ಹಿಡಿದು ಬಿಟ್ಟಿಯಾಗಿ ಆಡಿ ಔಟಾಗುವ 'ಅದ್ಭುತ'ವನ್ನು ನೋಡಿ ನಮಗೆ ಕ್ರಿಕೆಟ್ ಕಲಿಸಿದ್ದ ನಮ್ಮಣ್ಣ ತಲೆತಲೆ ಚಚ್ಚಿಕೊಳ್ಳುತ್ತಿದ್ದರು.

ಆಗಷ್ಟೇ ಶುರುವಾಗಿದ್ದ ಐಪಿಎಲ್ ನಿಂದ ಪ್ರಭಾವಿತರಾದ ನಾವು 'ಎಂಪಿಎಲ್' (ಮೂಡುಗುಡ್ಡೆ ಪ್ರೀಮಿಯರ್ ಲೀಗ್!) ಎನ್ನುವ ಹೊಸ ಪಂದ್ಯಾವಳಿಯನ್ನೇ ಆರಂಭಿಸಿಬಿಟ್ಟೆವು. ಕೇವಲ ವಿದೇಶೀ ಆಟಗಾರರು ಮಾತ್ರವಲ್ಲದೆ ಎಷ್ಟೋ ವರ್ಷಗಳ ಕೆಳಗೆ ರಿಟೈರ್ಡ್ ಆಗಿರುವ ಆಟಗಾರರೂ ನಮ್ಮೀ ಪಂದ್ಯಾವಳಿಯಲ್ಲಿ ಬಿಡ್ ಆಗಿದ್ದರು. (ಒಮ್ಮೆಯಂತೂ ನನ್ನ ತಮ್ಮಂದಿರೇ ಕಟ್ಟಿದ ತಂಡವೊಂದರಲ್ಲಿ ಎರೆಡು ಮೂರು ಜನ ಡಬ್ಲ್ಯೂ.ಡಬ್ಲ್ಯೂ.ಇ. 'ಹೊಡೆದಾಟ'ಗಾರರೂ ಸೇರಿಕೊಂಡುಬಿಟ್ಟಿದ್ದರು! ಹೇಗಿದ್ದರೂ ಆಟದ ಕೊನೆಯಲ್ಲಿ ಬಡಿದಾಡಲಿಕ್ಕೆ ಬೇಕಾಗುತ್ತಾರೆಂದು ನಾನೂ ಸುಮ್ಮನಿದ್ದೆ.) ಒಮ್ಮೆ ಹೀಗೇ 'ಗಂಗೂಲಿ ಹೋದ್ನಂತೆ, ಗಿಲ್ ಕ್ರಿಸ್ಟ್ ಬಂದ್ನಂತೆ' ಎಂದು ಗಟ್ಟಿಯಾಗಿ ಮಾತನಾಡುತ್ತಾ ಆಡುತ್ತಿದ್ದಾಗ ಅಲ್ಲೇ ಇದ್ದ ಅಣ್ಣ "ಯಾರ್ಯಾರನ್ನೋ ಕರ್ಸ್ತೀರಲ್ಲಾ, ಹಂಗೇ ನಮ್ಮ ಕೊನೆ ತೆಗೆಯೋ ಮಂಜನನ್ನೂ ಕರ್ಸ್ರೋ ಮಾರಾಯಾ. ಅಡಿಕೆ ಕೊನೆ ಎಲ್ಲಾ ಹಣ್ಣಾಗಿದೆ" ಎಂದಾಗ ಕೆಲಸದಾಳುಗಳೆಲ್ಲ ಗೊಳ್ಳನೆ ನಕ್ಕಿದ್ದರು.

ಪಂದ್ಯದ ಪ್ರತೀ ಬಾಲಿನ ಸ್ಕೋರ್ ಮಾತ್ರವಲ್ಲದೇ, ನಂತರ ಆ ಪಂದ್ಯದ ಕುರಿತಾಗಿ ಪತ್ರಿಕೆಯಲ್ಲಿ ಬರುವ ವರದಿಯನ್ನೂ ಸಹಾ ಬರೆಯುತ್ತಿದ್ದೆವು. ಒರಿಜಿನಲ್ ಐಪಿಎಲ್ ನಂತೆ ಇಲ್ಲಿಯೂ ಸಹಾ ವಿವಾದಗಳಿಗೇನೂ ಕೊರತೆಯಿರಲಿಲ್ಲ. ತಮ್ಮ ಇಷ್ಟದ ಆಟಗಾರನ ಹೆಸರು ಬಂದಾಗ ತುಂಬಾ ಚೆನ್ನಾಗಿ ಆಡುತ್ತಿದ್ದ ನನ್ನ ತಮ್ಮಂದಿರು, ತಮಗೆ ಇಷ್ಟವಿಲ್ಲದವನು ಬಂದಾಗ ಬೇಕೆಂದೇ ಔಟಾಗುತ್ತಿದ್ದರು. ನೈಜ ಕ್ರಿಕೆಟ್ನಲ್ಲಿ ಭಾರತದ ವಿರುದ್ಧ ಸದಾ ಹೆಚ್ಚೆಚ್ಚು ರನ್ ಗಳಿಸುತ್ತಾ ನಮ್ಮ ಕೋಪಕ್ಕೆ ಗುರಿಯಗಿದ್ದ ರಿಕಿ ಪಾಂಟಿಂಗ್ ನಂತಹಾ ಆಟಗಾರರು ನಮ್ಮ ಆಟದಲ್ಲಿ ಒಂದೂ ರನ್ ಹೊಡೆಯದೇ ತಮಗೆ ತಾವೇ ವಿಕೆಟ್ ಗೆ ಹೊಡೆದುಕೊಂಡು 'ಹಿಟ್ ವಿಕೆಟ್' ಆಗಿಬಿಡುತ್ತಿದ್ದರು! ಇದನ್ನು ಸಮರ್ಥಿಸಿಕೊಳ್ಳುವುದಕ್ಕೆ 'ಇಂಟರ್ನ್ಯಾಷನಲ್ ಮ್ಯಾಚ್ ಗಳೂ ಹೀಗೇ ಆಗೋದು' ಎನ್ನುವ ಹೊಸ ವಾದವನ್ನೇ ಸೃಷ್ಟಿಸಿದ್ದೆವು!

ನಮ್ಮ ಕ್ರಿಕೆಟ್ ಗಿದ್ದ ಅತಿದೊಡ್ಡ ವಿರೋಧಿಯೆಂದರೆ ನಮ್ಮ ದೊಡ್ಡಪ್ಪ. ಸದಾ ಏನಾದರೊಂದು ಉಪಯೋಗಕಾರಿ ಕೆಲಸ ಮಾಡುತ್ತಲೇ ಇರುತ್ತಿದ್ದ ಅವರ ಕಣ್ಣಿಗೆ ಈ ಕ್ರಿಕೆಟ್ ಎನ್ನುವುದು ಜಗತ್ತಿನ ಅತ್ಯಂತ ನಿರುಪಯುಕ್ತ ಚಟುವಟಿಕೆಯಂತೆ ಕಾಣುತ್ತಿತ್ತು. ಇತ್ತಕಡೆ ನಮ್ಮ ಅಟ ಶುರುವಾಗುತ್ತಿದ್ದಂತೆಯೇ ಅತ್ತಕಡೆ ಅವರ ಗೊಣಗಾಟದ ಕಾಮೆಂಟ್ರಿ ಶುರುವಾಗುತ್ತಿತ್ತು. ಒಂದು ಮಧ್ಯಾಹ್ನ ಎಂದಿನಂತೆ ನಮ್ಮ ಎಂಪಿಎಲ್ ಶುರುವಾಗಿತ್ತು. ದೊಡ್ಡಪ್ಪ ಮಲಗಿದ್ದಾರೆಂಬ ಧೈರ್ಯದಲ್ಲಿ ಟಾಸ್ ಹಾರಿಸಿ ಮೊದಲು ಬ್ಯಾಟಿಂಗ್ ಮಾಡುವ ತಂಡದ ಪರವಾಗಿ ಆಗಷ್ಟೇ ಆಟ ಆರಂಭಿಸಿದ್ದೆವು. ಅದೆಲ್ಲಿದ್ದರೋ ಗೊತ್ತಿಲ್ಲ, "ಮತ್ತೆ ಶುರುವಾಯ್ತಾ ನಿಮ್ ಗಲಾಟೆ?" ಎಂದು ಸೈಲೆನ್ಸರ್ ಅಳವಡಿಸಿರುವ ಗುಡುಗಿನಂತೆ ಗುಡುಗುತ್ತಾ ಅಂಗಳದಲ್ಲಿ ಪ್ರತ್ಯಕ್ಷವಾಗಿಯೇಬಿಟ್ಟರು. ನಾವು ಆಟ ನಿಲ್ಲಿಸಲಿಲ್ಲವಾದರೂ ಚೆಂಡು ಅವರ ಮನೆಯಂಗಳಕ್ಕೆ ಹೋಗದಂತೆ ನಿಧಾನವಾಗಿ ಆಡತೊಡಗಿದೆವು. ಪರಿಣಾಮವಾಗಿ ಮೊದಲು ಬ್ಯಾಟ್ ಮಾಡಿದ ತಂಡ 20 ಓವರ್ ಗಳಲ್ಲಿ ಕೇವಲ 99 ರನ್ ಗಳನ್ನಷ್ಟೇ ಗಳಿಸುವಂತಾಯಿತು. ಆದರೆ ಇನ್ನೊಂದು ತಂಡದ ಬ್ಯಾಟಿಂಗ್ ಮಾಡುವಾಗ ದೊಡ್ಡಪ್ಪ ಮನೆಯಲ್ಲಿರಲಿಲ್ಲವಾದ್ದರಿಂದ ಬಿಡುಬೀಸಾಗಿ ಬ್ಯಾಟ್ ಬೀಸಿ ಆ ಚಿಕ್ಕ ಮೊತ್ತವನ್ನು ಸುಲಭದಲ್ಲಿ 'ಚೇಸ್' ಮಾಡಲಾಯಿತು. ಪಂದ್ಯದ ಕೊನೆಗೆ 'ಮ್ಯಾನ್ ಆಫ್ ದಿ ಮ್ಯಾಚ್' ಕೊಡಬೇಕಲ್ಲಾ? ಮೊದಲ ಇನ್ನಿಂಗ್ಸ್ ಆಡುವಾಗ ನಮ್ಮನ್ನೆಲ್ಲಾ ಹೆದರಿಸಿ, ಚಿಕ್ಕ ಮೊತ್ತಕ್ಕೆ ಕಟ್ಟಿಹಾಕಲು ಪ್ರತ್ಯಕ್ಷ ಹಾಗೂ ಪರೊಕ್ಷ ಕಾರಣವಾಗಿದ್ದ ದೊಡ್ಡಪ್ಪನನ್ನೇ 'ಪಂದ್ಯ ಪುರುಷ' ಎಂದು ಒಮ್ಮತದಿಂದ ಘೋಷಿಸಲಾಯಿತು. 'ಮ್ಯಾನ್ ಆಫ್ ದಿ ಮ್ಯಾಚ್: ರಂಗಣ್ಣ ದೊಡ್ಡಪ್ಪ' ಎಂದು ಬರೆದುಕೊಂಡಿರುವ ಆ ಪುಸ್ತಕ ಹಳೆಯ ಟ್ರಂಕ್ ಒಂದರ ಮೂಲೆಯಲ್ಲಿ ಇಂದಿಗೂ ಹಾಗೇ ಇದೆ. ಗದರುತ್ತಿದ್ದ ದೊಡ್ಡಪ್ಪ ಮಾತ್ರ ಶಾಶ್ವತವಾಗಿ ಮಾತು ನಿಲ್ಲಿಸಿಬಿಟ್ಟಿದ್ದಾರೆ.

                        ****************

ಊರಿನಲ್ಲಿ, ಖಾಲಿ ಅಂಗಳ-ಬಯಲುಗಳಲ್ಲಿ ಕ್ರಿಕೆಟ್ ಆಡುವುದು ಒಂದು ಕಥೆಯಾದರೆ ಬೆಂಗಳೂರಿನಂತಹಾ ನಗರಗಳ ತುಂಬಿ ತುಳುಕುವ ಮೈದಾನಗಳಲ್ಲಿ ಆಡುವವರದು ಇನ್ನೊಂದು ಕಥೆ. ಇಲ್ಲಿ ಒಂದು ಮೈದಾನದಲ್ಲಿ ಏನಿಲ್ಲವೆಂದರೂ ಹದಿನೈದರಿಂದ ಇಪ್ಪತ್ತು ತಂಡಗಳು ಒಟ್ಟಿಗೇ ಕ್ರಿಕೆಟ್ ಆಡುತ್ತಿರುತ್ತವೆ. ಒಬ್ಬರ ಪಿಚ್ ಕೊನೆಯಾದ ಸ್ವಲ್ಪ ಅಂತರದಲ್ಲೇ ಇನ್ನೊಬ್ಬರದು ಆರಂಭವಾಗಿರುತ್ತದೆ. ಈ ಇಬ್ಬರ ಮಧ್ಯದ ಚಿಕ್ಕ ಗ್ಯಾಪ್ನಲ್ಲೇ ಪ್ಲಾಸ್ಟಿಕ್ ಬ್ಯಾಟು ಬಾಲು ಹಿಡದ ನಾಲ್ಕಾರು ಚಿಲ್ಟಾರಿಗಳ 'ಅಂಡರ್ ನೈಂಟೀನ್' ಮ್ಯಾಚ್ ನಡೆದಿರುತ್ತದೆ! ಆ ಕಡೆಯಿಂದೊಬ್ಬ ಬೌಲಿಂಗ್ ಮಾಡಲು ಓಡಿಬಂದರೆ ಇತ್ತಲಿಂದ ಇನ್ನೊಬ್ಬ ರನ್ ಗಳಿಸಲು ಓಡಿಹೋಗುತ್ತಾನೆ. ಇಬ್ಬರ ಮಧ್ಯದಲ್ಲಿ ಫೀಲ್ಡಿಂಗ್ ಮಾಡುವನೊಬ್ಬ ಅದೆಲ್ಲಿಂದಲೋ ನುಗ್ಗಿಬಂದು ಧಸಾಲ್ಲನೆ ಬೀಳುತ್ತಾನೆ. ಯಾರನ್ನು ಎತ್ತಬೇಕೋ, ಯಾರನ್ನು ಔಟ್ ಮಾಡಬೇಕೋ, ಯಾರಿಗೆ ಚೆಂಡು ಮರಳಿಸಬೇಕೋ... ಸಾಕ್ಷಾತ್ ದೇವರೇ ಬಂದರೂ ಕನ್ಫ್ಯೂಸ್ ಆಗುವುದರಲ್ಲಿ ಸಂಶಯವಿಲ್ಲ. ಇನ್ನು ಈ ಗೊಂದಲವೇ ಬೇಡವೆಂದು ಬೌಂಡರಿ ಕಾಯಲು ಸೀಮಾರೇಖೆಯ ಬಳಿ ನಿಂತು ಮೇಲೆ ನೋಡಿದರೆ ಒಂದೇ ಸಲಕ್ಕೆ ನಾಲ್ಕು ಚೆಂಡುಗಳು ಸಂಸಾರ ಸಮೇತ ಗಾಳಿಯಲ್ಲಿ ಹಾರಿಬರುತ್ತವೆ! ಅತ್ತಲಿಂದ ಯಾರೋ 'ಬಾಲ್ss.. ಬಾಲ್ss..' ಎಂದು ಕಿರುಚಿಕೊಳ್ಳುತ್ತಾರೆ. 'ಅಂಚಿ, ಪಿಂಚಿ, ಚಾವಲ ಚುಂಚಿ..' ಎಂದು ಕವಡೆ ಶಾಸ್ತ್ರ ಬಳಸಿ ಯಾವುದೋ ಒಂದು ಚೆಂಡನ್ನು ಕೊನೆಗೂ ಹಿಡಿದು, ಎದುರಾಳಿಯನ್ನು ಔಟ್ ಮಾಡಿದ ಸಂಭ್ರಮದಲ್ಲಿ 'ಹೀ ಯಾ.. ಹೂssss' ಎಂದು ಸಂಭ್ರಮಿಸವಾಗ ನಮ್ಮ ತಂಡದ ಆಟಗಾರರೆಲ್ಲ ಕೆಂಗಣ್ಣು ಬೀರುತ್ತಾ ನಿಂತಿರುತ್ತಾರೆ. ಏಕೆಂದು ತಿರುಗಿ ನೋಡಿದರೆ ನಾವು ನಿಜವಾಗಿ ಹಿಡಿಯಬೇಕಿದ್ದ ಚೆಂಡು ಬೌಂಡರಿ ಗೆರೆ ದಾಟಿ ಮೈದಾನದಾಚೆಗಿನ ಮೋರಿಯತ್ತ ಓಡುತ್ತಿರುತ್ತದೆ!

                        ****************

ವಯಸ್ಸು ಹೆಚ್ಚಿದಂತೆಲ್ಲ ಮೈದಾನ ದೂರವಾಗಿ ಆಸ್ಪತ್ರೆ ಹತ್ತಿರವಾಗುತ್ತಿದೆ. ಕ್ರಿಕೆಟ್ ಆಡುತ್ತಿದ್ದಾಗ ಒಳಗೆಲ್ಲೋ ಇದ್ದ ಹೊಟ್ಟೆ ಈಗ ಆಟವೆನ್ನುವುದು ಬರೀ ಟೀವಿಯಲ್ಲಿ ನೋಡುವ ಸರಕಾಗಿರುವುದರಿಂದ ಹೊರಬಂದು ಮತ್ತೆ ಸರಾಗವಾಗಿ ಕ್ರಿಕೆಟ್ ಆಡಲಾಗದಂತೆ ಮಾಡಿದೆ. ಅಲ್ಲದೇ ಉತ್ಸಾಹದಿಂದ ಪಂದ್ಯಗಳನ್ನೂ, ಪಂದ್ಯಾವಳಿಗಳನ್ನೂ ಆಯೋಜಿಸುತ್ತಿದ್ದ ಗೆಳೆಯರಿಂದು ಮನೆ, ಮಕ್ಕಳು, ಸಂಸಾರ ಎಂದು ಬಿಡುವಿಲ್ಲದಾಗಿದ್ದಾರೆ. ಅಲ್ಲಿ ಊರಿನಲ್ಲೂ ಅಮ್ಮ ಸಗಣಿನೀರು ಬಳಿದ ಅಂಗಳದಲ್ಲೀಗ ಆಡಿ ಧೂಳೆಬ್ಬಿಸುವ ಮಕ್ಕಳ ಕಲರವವಿಲ್ಲ. ಹತ್ತಾರು ಚೆಂಡುಗಳ ಬಚ್ಚಿಟ್ಟುಕೊಂಡು ಕಾಡಿಸುತ್ತಿದ್ದ ಪೊದೆಯಿಂದಾವೃತವಾದ ಹೊಂಡವಿಂದು ಹುಡುಕಲು ಬರುವ ಹುಡುಗರಿಲ್ಲದೇ ಹಾಳು ಬಿದ್ದಿದೆ.
ತಮ್ಮೊಡಲ ತುಂಬಾ ಹತ್ತಾರು ಸ್ಕೋರ್ ಹೆಸರಿನ ಸವಿಸವಿ ನೆನಪುಗಳನ್ನು ಬರೆದುಕೊಂಡಿರುವ ಪುಸ್ತಕಗಳು ಪೆಟ್ಟಿಗೆಯಲ್ಲಿ ಬೆಚ್ಚಗೆ ಕುಳಿತುಬಿಟ್ಟಿವೆ. ಊರಿಗೆ ಹೋದ ರಜೆಯ ಸಂಜೆಯೊಂದರಲ್ಲಿ ನಿಂತು ನೋಡುವಾಗ ಖಾಲೀ ಹೊಡೆಯುತ್ತಿರುವ ಅಂಗಳ ಮುಂದೆಂದೋ ಸಚಿನ್, ದ್ರಾವಿಡ್ ಗಳಾಗಿ ಮತ್ತೆ ಆಡಲು ಬರಲಿರುವ ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ಕಾಯುತ್ತಿರುವಂತೆ ಭಾಸವಾಗುತ್ತದೆ. 

ನಾನು ಹೀಗೆಲ್ಲಾ ಯೋಚಿಸುತ್ತಾ ನಿಂತಿರುವಾಗಲೇ ಅಂದು ನಮಗೆ ಕ್ರಿಕೆಟ್ ಕಲಿಸಿದ್ದ ಅಣ್ಣನ ಹತ್ತು ವರ್ಷದ ಮಗ "ಅಣ್ಣಾ.." ಎನ್ನುತ್ತಾ ನನ್ನತ್ತ ಓಡಿಬರುತ್ತಾನೆ. ಅವನ ಕೈಯ್ಯಲ್ಲಿ ಮತ್ತದೇ ಮೋಟುದ್ದದ ಬ್ಯಾಟು, ಟೆನ್ನಿಸ್ ಬಾಲು! ನೋಡುತ್ತಾ ನಿಂತ ನನ್ನ ಕೈಗೆ ಚೆಂಡು ಕೊಡುತ್ತಾ ಹೇಳುತ್ತಾನೆ:

"ಕ್ರಿಕೆತ್ ಆಡಣ ಕಣಾ... ನಾನು ವಿರಾಟ್ ಕೋಹ್ಲಿ, ನೀನು ಭುವನೇಶ್ವರ್ ಕುಮಾರ್!"

('ವಿಶ್ವವಾಣಿ'ಯ 23.7.2017ರ 'ವಿರಾಮ' ಸಾಪ್ತಾಹಿಕದಲ್ಲಿ ಪ್ರಕಟಿತ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...