ಶನಿವಾರ, ಸೆಪ್ಟೆಂಬರ್ 23, 2017

ಬೆಕ್ಕುಗಳ ಜೊತೆಗೆ ಭಾವ-ಬಂಧ...ಮನುಷ್ಯನಿಗೆ ಅತಿ ಪ್ರಿಯವಾದ ಪ್ರಾಣಿಗಳಲ್ಲಿ ಮೊದಲನೆಯದು ನಾಯಿ. ಅದರ ನಂತರದ ಸ್ಥಾನದಲ್ಲಿ, ಮನುಷ್ಯನಿಗೆ ಅತೀ ಹತ್ತಿರದಲ್ಲಿ, ತೊಡೆಯ ಮೇಲೇ ಕುಳಿತು ಗರ್ವದಿಂದ ಮೀಸೆ ತಿರುವುತ್ತಿರುವ ಇನ್ನೊಂದು ಪ್ರಾಣಿಯೆಂದರೆ ಬೆಕ್ಕು. ಕೆಲವರ ಹೊರತಾಗಿ ನಾಯಿಯನ್ನು ಮನೆಯೊಳಗೆ ಬಿಟ್ಟುಕೊಳ್ಳುವವರು ಕಡಿಮೆ. ನಾಯಿಯ ಸಂಚಾರ ಅಂಗಳ, ವರಾಂಡ, ಇನ್ನೂ ಹೆಚ್ಚೆಂದರೆ ಜಗುಲಿ(ಹಾಲ್) ಗಳಿಗೆ ಸೀಮಿತವಾಗಿರುತ್ತದೆ. ಆದರೆ ಬೆಕ್ಕು ಹಾಗಲ್ಲ. ಅದು ಸರ್ವ ಸ್ವತಂತ್ರಿ. ಅಡಿಗೆಮನೆ, ಮಲಗುವ ಕೋಣೆಯೂ  ಸೇರಿದಂತೆ ಮನೆಯ ಮತ್ಯಾವುದೇ ಕೋಣೆಗಳಲ್ಲಿ, ಮೂಲೆಮೂಲೆಗಳಲ್ಲಿ ಯಾವ ಸಂದರ್ಭದಲ್ಲಾದರೂ ಓಡಾಡುವ ಅಧಿಕಾರ ಅದಕ್ಕಿದೆ. ಪಟ್ಟಣದ ಹಲವಾರು ಮನೆಗಳಲ್ಲಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಮನೆಯ ಯಜಮಾನನಿಗಿಂತಲೂ ಹೆಚ್ಚಿನ ಠೀವಿಯಲ್ಲಿ, ಸೋಫಾಮೇಲೆ ಕಾಲುಚಾಚಿ ಮಲಗಿರುವ ನುಣುಪು ಮೈ-ಕುಡಿಮೀಸೆಯ ಮಾರ್ಜಾಲವನ್ನು ನೀವು ನೋಡಬಹುದು. ಮೆತ್ತಗಿನ ಸೋಫಾಮೇಲೆ ಅಷ್ಟೇ ಮೆತ್ತಗಿರುವ ತನ್ನ ದೇಹವನ್ನು ಚಾಚಿಕೊಂಡು, ತನ್ನ ಮುಂಗೈಯ್ಯಿಗೆ ಬಳಿದುಕೊಂಡ ಎಂಜಲಿನಿಂದ ಮೈ-ಮುಖವನ್ನೆಲ್ಲಾ ವರೆಸಿಕೊಳ್ಳುತ್ತಾ ಗಮ್ಮತ್ತಾಗಿ ಕುಳಿತಿರುವ ಈ ಬೆಕ್ಕಣ್ಣನ ಪಕ್ಕ ನೀವು ಹೋಗಿ ಕುಳಿತುನೋಡಿ; ಅರೆಕ್ಷಣ ತನ್ನ ಕೆಲಸ ನಿಲ್ಲಿಸಿ ಸಾಲ ಕೇಳಲು ಬಂದವನನ್ನು ನೋಡುವ ಸಾವುಕಾರನಂತೆ ನಿಮ್ಮತ್ತ ಗಂಭೀರನೋಟ ಬೀರಿ, ಮತ್ತೆ ತನ್ನ ಕೆಲಸ ಮುಂದುವರೆಸುತ್ತದೆ.

'ಎಷ್ಟೇ ಪ್ರೀತಿಯಿದ್ದರೂ ಬೆಂಗಳೂರಿನಲ್ಲಿ ರಸ್ತೆ-ಕಾಂಪೌಂಡುಗಳ ಮೇಲೆ ಕುಳಿತಿರುವ, ಓಡಾಡುತ್ತಿರುವ ಅಥವಾ ನಿದ್ರಿಸುತ್ತಿರುವ ಯಾವುದೇ ಅಪರಿಚಿತ ಮಾರ್ಜಾಲವನ್ನು ಮಾತನಾಡಿಸುವುದು ಅಪಾಯಕಾರಿ' ಎನ್ನುವುದು ವರ್ಷಗಳ ಕೆಳಗೆ ನನಗೆ ಗೊತ್ತಾದ ಸತ್ಯ. ಹಿಂದೊಮ್ಮೆ ರೊಮ್ಯಾಂಟಿಕ್ ತಂಗಾಳಿಯೊಂದು ಬೀಸುತ್ತಿದ್ದ ಸಂಜೆಯಲ್ಲಿ ಟೆರಾಸ್ ಮೇಲೆ ಕುಳಿತಿದ್ದ ಮಾರ್ಜಾಲ ತರುಣಿಯೊಬ್ಬಳು ನನ್ನ ಕಣ್ಣಿಗೆ ಬಿದ್ದಿದ್ದಳು. ಬಾಯಿಯಿಂದ ಎಂಜಲನ್ನು ತನ್ನ ನುಣುಪು ಕೈಯ್ಯ ಮೂಲಕ ಮುಖಕ್ಕೆಲ್ಲಾ ಸವರಿಕೊಂಡು 'ಮೇಕಪ್' ಮಾಡಿಕೊಳ್ಳುತ್ತಿದ್ದ ಆ ಚೆಲುವೆಯನ್ನು ಕಂಡ, ಮೊದಲೇ ಬೆಕ್ಕುಗಳೆಂದರೆ ಬೆಟ್ಟದಷ್ಟು ಪ್ರೀತಿಯಿರುವ ನಾನು ಮತ್ತಷ್ಟು ರೊಮ್ಯಾಂಟಿಕ್ ಆಗಿಬಿಟ್ಟಿದ್ದೆ. ಅಲ್ಲದೇ ಊರುಬಿಟ್ಟ ಮೇಲೆ ಬೆಕ್ಕು, ನಾಯಿಗಳ ಒಡನಾಟವೂ ಕಮ್ಮಿಯಾಗಿತ್ತಲ್ಲಾ, ಈಗ ಹೇಗಾದರೂ ಇವಳನ್ನು ಒಲಿಸಿಕೊಳ್ಳಲೇಬೇಕೆಂದು ನಿರ್ಧರಿಸಿ ಸಾಧ್ಯವಾದಷ್ಟು ಸುಮಧುರ ದನಿಯಲ್ಲಿ "ತ್ಚುತ್ಚುತ್ಚು.. ಬಾಬಾಬಾ" ಎಂದು ಕರೆದೆ. ಯಾವುದೋ ಕಬಾಬ್ ಹೋಟೆಲ್ ಮುಂದೆ 'ಪೀಸ್'ಗಾಗಿ ಕಾದುನಿಂತಿರುವ ತನ್ನ ಬಾಯ್ ಫ್ರೆಂಡ್ ನ ಯೋಚನೆಯಲ್ಲಿದ್ದಳೋ ಏನೋ, ಅನಿರೀಕ್ಷಿತವಾಗಿ ತೇಲಿಬಂದ ನನ್ನ ಧ್ವನಿ ಕೇಳಿ ಅರೆಕ್ಷಣ ಬೆಚ್ಚಿಬಿದ್ದು ನನ್ನನ್ನೇ ಗುರಾಯಿಸತೊಡಗಿದಳು. ನಾನು ಮತ್ತಷ್ಟು ರೊಮ್ಯಾಂಟಿಕ್ ಸ್ವರದಲ್ಲಿ "ತ್ಚುತ್ಚುತ್ಚೂ... ಮಿಯಾಂವ್.. ಬಾಬಾಬಾ" ಎಂದು ಕರೆಯುತ್ತಾ ಎರೆಡು ಹೆಜ್ಜೆ ಮುಂದಿಟ್ಟಿದ್ದಷ್ಟೇ, ಬಾಯ್ಬಿಟ್ಟರೆ "ಪಿಂಕಿ ಕಮಾನ್... ಮ್ಯೂಮ್ಯೂ" ಎಂದೋ, "ಬಿಲ್ಲಿ ಭಯ್ಯಾ ಆಜಾವೋ" ಎಂದೋ ಕರೆಯುವ ಬಿಟಿಎಮ್ ಬಡಾವಣೆಯ ನಾರ್ಥ್ ಇಂಡಿಯನ್ ಜನರನ್ನೇ ಹೆಚ್ಚಾಗಿ ನೋಡಿ ಅಭ್ಯಾಸವಿದ್ದ ಈ ಮಾರ್ಜಾಲಕುಮಾರಿ ನನ್ನ ಲೋಕಲ್ ಭಾಷೆ ಕೇಳಿ ಕೆರಳಿಹೋದಳು. ಅಲ್ಲದೇ ಕೆದರಿದ ಕೂದಲು, ಕುರುಚಲು ಗಡ್ಡ, ಸೋಡಾಗ್ಲಾಸ್ ತೊಟ್ಟಿದ್ದ ನಾನು  ಬೆಕ್ಕುಗಳನ್ನು ಜೀವಂತ ಸುಟ್ಟುತಿನ್ನುವ 'ಬೆಕ್ಕು ಭಕ್ಷಕ' ಆದಿವಾಸಿಯಂತೆ ಕಂಡೆನೋ ಏನೋ, ತುದಿಗಾಲಿನಲ್ಲಿ ಸೆಟೆದು ನಿಂತು, ತನ್ನ ರೋಮಗಳನ್ನಲ್ಲಾ ನಿಮಿರಿಸಿ, ಬಾಲವನ್ನು ಈಟಿಯಂತೆ ಚೂಪಗೆ ನಿಲ್ಲಿಸಿಕೊಂಡು "ವ್ವ್.. ಈಯಾಂವ್...ಯೂಂವ್..." ಎಂದು ಕಿರುಚತೊಡಗಿದಳು. ನನ್ನ ಇಪ್ಪತ್ನಾಲಕ್ಕು ವರ್ಷಗಳ ಅನುಭವದಲ್ಲಿ ಅದುವರೆಗೆ ಬಾ ಎಂದಾಗ ಬರುವ ಬೆಕ್ಕುಗಳನ್ನು ನೋಡಿದ್ದೆ. ಬಿದ್ದು ಓಡಿಹೋಗಿರುವ ಬೆಕ್ಕುಗಳನ್ನೂ ನೋಡಿದ್ದೆ, ಆದರೆ ಹೀಗೆ 'ಪರಚು'ಯುದ್ಧಕ್ಕೆ ನಿಂತ ಬೆಕ್ಕನ್ನು ನೋಡುತ್ತಿದ್ದುದು ಇದೇ ಮೊದಲು! ಇನ್ನೊಂದು ಮಾತನಾಡಿದರೂ ಒದೆ ಬೀಳುವುದು ಖಂಡಿತವೆಂಬುದು ಅರ್ಥವಾಗಿ "ಕ್ಷಮಾ ಕೀಜಿಯೇ ಬಿಲ್ಲೀ ರಾಣೀ" ಎಂದು ಅಲ್ಲಿಂದ ಕಾಲ್ಕಿತ್ತೆ.

ಮಲೆನಾಡು ಮೂಲೆಯ ಹಳ್ಳಿಯೊಂದರಲ್ಲಿರುವ ನಮ್ಮನೆಯಲ್ಲಿ ಮೊದಲಿನಿಂದಲೂ ಇಲಿಗಳ ಹಾವಳಿ ಜಾಸ್ತಿ. ಹಗಲು ಹೊತ್ತಿನಲ್ಲಿ ಬಿಲಗಳಲ್ಲಿ, ಗೋಡೆಯ ಸಂದುಗೊಂದಿಯಲ್ಲಿ, ಗೊಬ್ಬರಗುಂಡಿಯ ಹೊಂಡಗಳಲ್ಲಿ ಅಡಗಿಕೊಂಡಿರುವ ಇವುಗಳು ರಾತ್ರೆಯಾಗುತ್ತಿದ್ದಂತೆಯೇ ಸಂಸಾರ ಸಮೇತವಾಗಿ ದರೋಡೆಗಿಳಿಯುತ್ತಿದ್ದವು. ತಡರಾತ್ರಿ ದರೋಡೆಕೋರರಾದ ಈ ಇಲಿಗಳದ್ದೊಂದು ರಗಳೆಯಾದರೆ ಇವನ್ನು ಹಿಡಿಯಲು ಬರುವ ಬೆಕ್ಕು-ಹಾವುಗಳದ್ದು ಇನ್ನೊಂದು ತೆರನಾದ ಹಾವಳಿ. ಇವುಗಳಿಗೆಲ್ಲಾ ಮಣ್ಣಿನ ಗೋಡೆಗಳು, ಪೆಟ್ಟಿಗೆ-ಟ್ರಂಕ್ ಗಳು, ಬುಟ್ಟಿ,ಗುದ್ದಲಿ,ಪಿಕಾಸಿಗಳೇ ಇತ್ಯಾದಿ ಸಾಮಾನು ಸರಂಜಾಮುಗಳಿಂದ ತುಂಬಿಹೋಗಿದ್ದ ನಮ್ಮ ಹಳೆಯ ಮನೆ ಅಮೇಜಾನ್ ಕಾಡಿನಂತೆ ಕಾಣುತ್ತಿತ್ತೋ ಏನೋ, ಇಲ್ಲಿ ಮನುಷ್ಯನೆಂಬ ಎರೆಡುಕಾಲಿನ ಸರ್ವೋಚ್ಛ ಪ್ರಾಣಿ ಇದ್ದಾನೆಂಬುದನ್ನೂ ಲೆಕ್ಕಿಸದೆ ತಮ್ಮ ಬೇಟೆಯನ್ನು ಬೆನ್ನಟ್ಟಿ ಹೊತ್ತಲ್ಲದ ಹೊತ್ತಿನಲ್ಲಿ ಒಳನುಗ್ಗಿಬಿಡುತ್ತಿದ್ದವು. ಹೀಗೆ ಬರುವವುಗಳಲ್ಲಿ ಹಾವುಗಳನ್ನು ಹೆದರಿಸಿ(ಹೆದರಿ!) ಓಡಿಸುತ್ತಿದ್ದೆವು. ಆದರೆ ಇಲಿಗಳ ಹಾವಳಿ ತಪ್ಪಿಸುವ ಈ ಮುದ್ದುಮುಖದ ಮಾರ್ಜಾಲಗಳ ಮೇಲೆ ಯಾರೂ ಕೈಮಾಡುತ್ತಿರಲಿಲ್ಲವಾದ್ದರಿಂದ ಅವುಗಳಿಗೆ ನಮ್ಮ ಮನೆ ಅಕ್ಷರಶಃ ಸ್ವತಂತ್ರ ಅಮೆಜಾನ್ ಕಾಡೇ ಆಗಿತ್ತು.

ಹೀಗೆ ಚಿಕ್ಕಂದಿನಿಂದಲೂ ತರಹೇವಾರಿ ರೀತಿಯ ಬೆಕ್ಕುಗಳನ್ನು ನೋಡುತ್ತಾ ಬಂದಿದ್ದೇನೆ. ಮನೆಯ ಸುತ್ತಮುತ್ತ ಓಡಾಡುತ್ತಿದ್ದ ಬೆಕ್ಕುಗಳಿಗೆ ಅವುಗಳ ಬಣ್ಣ, ಗಾತ್ರ, ರೂಪಗಳಿಗನುಗುಣವಾಗಿ ಅಪ್ಪ ಒಂದೊಂದು ಹೆಸರಿಡುತ್ತಿದ್ದರು. ಮೈಯ್ಯ ಹೆಚ್ಚಿನ ಭಾಗ ಬಿಳಿಯಾಗಿದ್ದು ಮಧ್ಯೆಮಧ್ಯೆ ಕಂದು ಹಾಗೂ ಕೆಂಚು ಮಿಶ್ರಿತ ರೋಮಗಳಿರುವ ದೈತ್ಯಗಾತ್ರದ 'ಪಾಂಡು ಬೆಕ್ಕು', ಪ್ರತೀ ಆರು ತಿಂಗಳಿಗೊಮ್ಮೆ ಬಸುರಿಯಾಗಿ, 'ಬಯಕೆ' ತೀರಿಸಿಕೊಳ್ಳುವುದಕ್ಕೆ ಅಡಿಗೆಮನೆಯಲ್ಲಿ ಕಳ್ಳತನಮಾಡಿ, ಬಸುರಿಯೆಂಬ ಕಾರಣಕ್ಕೆ ಬೀಳಬೇಕಾದ ಒದೆಗಳಿಂದ ಬಚಾವಾಗುತ್ತಿದ್ದ 'ಬಿಲ್ಲಿ ಬೆಕ್ಕು', ಕಂದು-ಪಾಚಿ ಬಣ್ಣ ಮಿಶ್ರಿತ 'ಪಾಚು ಬೆಕ್ಕು', ಪಕ್ಕದ ಗೌಡರ ಮನೆಯಲ್ಲಿ ನಾನ್ವೆಜ್ ತಿಂದು ದಷ್ಟಪುಷ್ಟವಾಗಿ ಬೆಳೆದ ದೈತ್ಯ 'ಕೆಂಚ ರಾಕ್ಷಸ' ಇತ್ಯಾದಿ. ಇವುಗಳಲ್ಲಿ ಸಂಪೂರ್ಣ ಡಿಫರೆಂಟಾಗಿರುವವೆಂದರೆ ದೈತ್ಯ ಪಾಂಡುಬೆಕ್ಕುಗಳು. ಪಾಂಡುಬೆಕ್ಕುಗಳೆಂದರೆ ಯಾರ ಕೈಗೂ ಸಿಗದೆ ಪೋಲಿ ಅಲೆಯುವ 'ಮಾಳ'(ಗಂಡು)ಗಳು. ಶುದ್ಧ ಮಾಂಸಾಹಾರಿಗಳಾದ ಅವುಗಳ ಎದುರೇ ಹಾಲಿನ ಬಟ್ಟಲಿಟ್ಟುಹೋದರೂ ಮುಟ್ಟಿಮೂಸುತ್ತಿರಲಿಲ್ಲ. ಎಷ್ಟೇ ಮುದ್ದಾಗಿ ಬಾಬಾ.. ತ್ಚುತ್ಚು.. ಮಿಯಾಂವ್.... ಎಂದು ಪ್ರೀತಿಯಿಂದ ಕರೆದರೂ ಹತ್ತಿರ ಬರುತ್ತಿರಲಿಲ್ಲ. ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಕಣ್ಣಿಗೆ ಬೀಳುತ್ತಿದ್ದ ಈ ದೈತ್ಯ ಬೆಕ್ಕುಗಳ ಸಾಮರ್ಥ್ಯದ ಮೇಲೆ ನನಗೊಂದು ವಿಧವಾದ ಅಭಿಮಾನ. ಇವೇ ಪ್ರಪಂಚದ ಅತೀ ಶಕ್ತಿಶಾಲಿ ಬೆಕ್ಕುಗಳು ಎನ್ನುವ ನಂಬಿಕೆ. ತಾವು ನೆಲೆನಿಂತ ಸೀಮೆಯಲ್ಲಿ ಮತ್ತೊಂದು ಗಂಡುಬೆಕ್ಕು ಬರುವುದನ್ನು ಇವು ಸುತರಾಂ ಸಹಿಸುತ್ತಿರಲಿಲ್ಲ. ತಮ್ಮ ಇಲಾಖೆಯಲ್ಲಿ ಅಪ್ಪಿತಪ್ಪಿ ಮತ್ಯಾವುದೇ ಮಾಳಬೆಕ್ಕಿನ ನೆರಳು ಕಂಡರೂ ಮುಗಿದೇ ಹೋಯಿತು, ಅದನ್ನು ಅಲ್ಲೇ ಅಡ್ಡಹಾಕಿ, ತಮ್ಮ ಬಲವಾದ ಚೋಟಿನಿಂದ(ಪಂಜ) ಅದರ ಕೆನ್ನೆಗೆ ನಾಲ್ಕು ಬಾರಿಸಿ, ತನ್ನ ಮ್ಯಾಂವ್ ಭಾಷೆಯಲ್ಲಿ "ಇನ್ನೊಮ್ಮೆ ಇಲ್ಲಿಗೆ ಬಂದರೆ ಹುಷಾರ್!" ಎಂದು ಊರಿಗೆಲ್ಲಾ ಕೇಳುವಂತೆ ಎಚ್ಚರಿಕೆ ಕೊಟ್ಟು ದೂರ ಅಟ್ಟುತ್ತಿದ್ದವು. ಆದರೆ ಕೆಲವೊಮ್ಮೆ ಎದುರಾಳಿಯೂ ಪ್ರಬಲನಾಗಿದ್ದಾಗ ಈ ಹೋರಾಟ ಅಷ್ಟು ಸುಲಭವಾಗಿ ಮುಗಿಯುತ್ತಿರಲಿಲ್ಲ. ಸ್ಪರ್ಧಿ-ಪ್ರತಿಸ್ಪರ್ಧಿಗಳೆರೆಡೂ ಎತ್ತರದ ಗೋಡೆಯ ಮೇಲೋ, ಹಂಚು ಮಾಡಿನ ಮೇಲೋ ಎದುರುಬದುರಾಗಿ, ನಿಮಿಷಗಟ್ಟಲೆ ಕದಲದಂತೆ ನಿಂತು ಒಂದನ್ನೊಂದು ಬೈದುಕೊಳ್ಳುತ್ತಿದ್ದವು. "ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ...." ಎಂದು ಮಾತ್ರಾಗಣಸಹಿತ ವಾಕ್ಯುದ್ಧ ನಡೆಸುತ್ತಿದ್ದವೋ, "ಇದು ಈ ಅರ್ಮುಗಂ ಕೋಟೆ ಕಣೋ" ಎಂದು ಮಾಸ್ ಡೈಲಾಗ್ ಹೊಡೆಯುತ್ತಿದ್ದವೋ ಗೊತ್ತಿಲ್ಲ, ಹುಲುಮಾನವರಾದ ನಮಗೆ ಕೇಳುತ್ತಿದ್ದುದು 'ಮೀsssಯಾಂವ್ssss' ಎನ್ನುವ ಕಿರುಚಾಟ ಮಾತ್ರ! ಕೊನೆಗೆ ಅಪ್ಪನೋ ಅಮ್ಮನೋ ಹೋಗಿ, ಭೀಮ-ದುರ್ಯೋಧನರಂತೆ ತೊಡೆತಟ್ಟಿ ('ಪಂಜ' ತಟ್ಟಿ!) ನಿಂತಿರುವ ಇವುಗಳ ಮೇಲೇ ಕಲ್ಲನ್ನೋ, ನೀರನ್ನೋ ಎಸೆದಾಗ ಬೆಚ್ಚಿ ಕೆಳಗೆ ಜಿಗಿದು ಒಂದನ್ನೊಂದು ಬೆನ್ನಟ್ಟುತ್ತಾ ರಾತ್ರೆಯ ಕತ್ತಲಲ್ಲಿ ಅಂತರ್ಧಾನವಾಗುತ್ತಿದ್ದವು.

ಅದೇಕೋ ಗೊತ್ತಿಲ್ಲ, ರೂಪದಲ್ಲಿ ಹುಲಿಯ ಹತ್ತಿರದ ಸಂಬಂಧಿಗಳಂತೆ ಕಾಣುವ ಈ ಬೆಕ್ಕುಗಳ ಮೇಲೆ ಮೊದಲಿನಿಂದಲೂ ನನಗೊಂದು ತೆರನಾದ ಪ್ರೀತಿತುಂಬಿದ ಕುತೂಹಲ. ಎಲ್ಲೇ ಪುಟಾಣಿ ಬೆಕ್ಕುಮರಿ ಕಂಡರೂ ಅದನ್ನು ಮನೆಗೆ ಒಯ್ಯೋಣವೆಂದು ನಾನು ಹಠ ಹಿಡಿಯುವುದು, ಅಮ್ಮ/ಅಪ್ಪ ಗದರಿಸಿ ಸುಮ್ಮನಾಗಿಸುವುದು ನಡೆಯುತ್ತಲೇ ಇರುತ್ತಿತ್ತು. ನಮ್ಮನೆಗೆ ತಾನಾಗೇ ಬಂದು ಸೇರಿಕೊಂಡಿದ್ದ ಪಾಚುಬೆಕ್ಕು ಅಮ್ಮ ಬೆಳಗ್ಗೆ ಏಳುತ್ತಿದ್ದಂತೆಯೇ ಅದೆಲ್ಲಿಂದಲೋ ಓಡಿಬಂದು ಮ್ಯಾಂವ್ ಮ್ಯಾಂವ್ ಎನ್ನುತ್ತಾ, ಅವಳ ಕಾಲಿಗೆ ತನ್ನ ನುಣುಪಾದ ಮೈಯ್ಯನ್ನು ಸವರುತ್ತಾ ಹಾಲು ಹಾಕುವಂತೆ ಪೂಸಿಹೊಡೆಯುವುದನ್ನೂ, ತನಗೆಂದೇ ಮೀಸಲಿಟ್ಟ ಬಟ್ಟಲಿಗೆ ಹಾಕಿದ ಹಾಲನ್ನು ಜಗತ್ತಿನ ಇನ್ಯಾರಿಗೂ ಕಾಣದಂತೆ(!) ಕಣ್ಮುಚ್ಚಿಕೊಂಡು ಕುಡಿಯುವುದನ್ನೂ ನಾನು ಕುತೂಹಲದಿಂದ ನೋಡುತ್ತಿದ್ದೆ. ಕೆಲವೊಮ್ಮೆ ಹಠಮಾಡಿ ನಾನೇ ಬಟ್ಟಲಿಗೆ ಹಾಲು ಹಾಕುತ್ತಿದ್ದೆ. ಅದು ಬಾಲ ನೆಟ್ಟಗೆ ಮಾಡಿಕೊಂಡು ಏರುದನಿಯಲ್ಲಿ ಕೂಗುತ್ತಾ ಹಾಲಿನ ಲೋಟ ಹಿಡಿದ ನನ್ನನ್ನು ಹಿಂಬಾಲಿಸಿಕೊಂಡು ಓಡಿ ಬರುವುದನ್ನು ನೋಡುವುದೇ ನನಗೊಂದು ಹೆಮ್ಮೆ. ತನ್ನ ಬಟ್ಟಲಿಗೆ ಹಾಕಿದ ಹಾಲನ್ನದು ಕಣ್ಮುಚ್ಚಿಕೊಂಡು ಚಪ್ಪರಿಸುವಾಗ ಹಿತವಾಗಿ ಮೈದಡವುತ್ತಾ ಅದರ ಸ್ನೇಹ ಸಂಪಾದಿಸಲು ಪ್ರಯತ್ನಿಸುತ್ತಿದ್ದೆ. ಅಡಿಗೆಮನೆಯಲ್ಲಿ ನಾವು ಸಾಲಾಗಿ ಕುಳಿತು ತಿಂಡಿ ತಿನ್ನುವಾಗ ತಾನೂ ಸಾಲಿನ ಕೊನೆಯಲ್ಲಿ ಕಾಲು ಮಡಿಚಿಕೊಂಡು ಕುಳಿತು, ನಮ್ಮ ತಟ್ಟೆಯಲ್ಲಿದ್ದ ತಿಂಡಿಯನ್ನು ಆಸೆಯಿಂದ ದಿಟ್ಟಿಸುತ್ತ, ಏನಿಲ್ಲವೆಂದರೂ ಎರೆಡು-ಮೂರು ದೋಸೆ/ರೊಟ್ಟಿ/ಚಪಾತಿಗಳನ್ನು ಹೊಟ್ಟೆಗಿಳಿಸುತ್ತಿತ್ತು. ಹಸಿವಾದಾಗ ಜಗತ್ತಿನ ಅತ್ಯಂತ ಸಾಧು ಪ್ರಾಣಿಯಂತೆ ಫೋಸ್ ಕೊಡುತ್ತಾ, ವಿನಮ್ರ ದನಿಯಲ್ಲಿ ಕೂಗುತ್ತಾ ಬಳಿಗೆ ಬರುತ್ತಿದ್ದ ಅದಕ್ಕೆ ಊಟವಾಗುತ್ತಿದ್ದಂತೆಯೇ ಆಟವಾಡವ ಮೂಡ್ ಬಂದು ಒಂದೋ ಅಡಿಗೆಮನೆಯ ಹೊಸಿಲಿನ ಮೇಲೆ ಕುಳಿತು ಆಚೀಚೆ ಓಡಾಡುವರ ಕಾಲನ್ನು ತನ್ನ ಪಂಜದಿಂದ ಹಿಡಿದುಕೊಂಡು ಕಚ್ಚುತ್ತಿತ್ತು; ಇಲ್ಲಾ ಅಂಗಳದ ಕಟ್ಟೆಯಮೇಲೋ, ಹುಲ್ಲುಗೊಣಬೆಯ ಮೇಲೋ ಕುಳಿತು ಮುಖತೊಳೆಯಲಾರಂಭಿಸುತ್ತಿತ್ತು.  ಆಗೇನಾದರೂ ನಾನು ಹತ್ತಿರ ಹೋದರೆ ಕುಳಿತಲ್ಲೇ ಅಂಗಾತ ಬಿದ್ದುಕೊಂಡು ಗುಲಾಬಿ ಮುಳ್ಳುಗಳಂತಿರುವ ಉಗುರುಗಳಿಂದ ಕೂಡಿದ ತನ್ನ ಕೈಯ್ಯನ್ನು ಬೀಸುತ್ತಾ ಆಟಕ್ಕೆ ಬರುವಂತೆ ಸವಾಲೆಸೆಯುತ್ತಿತ್ತು. ಅದರ ಸವಾಲನ್ನು ಸ್ವೀಕರಿಸಿದ ನಾನು ತೆಂಗಿನ ಗರಿಯನ್ನೋ, ಹಿಡಿಕಡ್ಡಿಯನ್ನೋ ಹಿಡಿದು ಅದರ ಮೈ-ಮೂತಿಗಳಿಗೆಲ್ಲಾ ತಾಗಿಸಿದರೆ, ತನ್ನೆರೆಡೂ ಪುಟಾಣಿ ಪಂಜಗಳಿಂದ ಆ ತೆಳ್ಳಗಿನ ಕಡ್ಡಿಯನ್ನು ಹಿಡಿದು ಬಾಯಿಗೆ ಹಾಕಿಕೊಳ್ಳಲೆತ್ನಿಸುತ್ತಾ ನೆಲದ ತುಂಬಾ ಹೊರಳಾಡುತ್ತಿತ್ತು. ಅದು ಉಳುಚಿಹೋಗುವ ಕಡ್ಡಿಯನ್ನು ಹಿಡಿದುಕೊಂಡು ತೆರೆದ ಬಾಯಿಯೊಳಕ್ಕೆ ತುಂಬಿಕೊಳ್ಳುವುದು, ನಾನು ಆ ಕಡ್ಡಿಯನ್ನು ತಪ್ಪಿಸಿ ಮಲಗಿರುವ ಅದರ ಮೃದುವಾದ ಹೊಟ್ಟೆ-ಎದೆಭಾಗಕ್ಕೆ ಅದೇ ಕಡ್ಡಿಯಿಂದ ಕಚಗುಳಿ ಕೊಡುವುದು, ಕಚಗುಳಿ ಇಡಿಸಿಕೊಂಡೂ ನಗಲಾಗದ ಅದು ಮಲಗಿದಲ್ಲೇ ಪಲ್ಟಿ ಹೊಡೆಯುವುದು... ಹೀಗೆ ಮೋಜಿನಿಂದ ಸಾಗುತ್ತಿತ್ತು ನಮ್ಮ ಆಟ.

ಹೀಗೆ ಪ್ರೀತಿಯಿಂದ ಸಾಕಿದ ಬೆಕ್ಕಿನ ಸಂಗ-ಸ್ನೇಹ ಎಷ್ಟು ಖುಷಿ ಕೊಡುತ್ತದೆಯೋ, ಅವುಗಳ ಸಾವು ಅಷ್ಟೇ ನೋವುಂಟುಮಾಡುತ್ತದೆ. ಬೆಕ್ಕೊಂದು ಸರಾಸರಿ ಹತ್ತರಿಂದ ಹನ್ನೆರೆಡು ವರ್ಷ ಬದುಕಬಲ್ಲದೆಂಬ ಅಂದಾಜಿದೆಯಾದರೂ ಆ ಕಾಲಕ್ಕೆ ನಾವು ಸಾಕಿದ್ದ ಯಾವುದೇ ಬೆಕ್ಕು ಆರೇಳು ವರ್ಷಕ್ಕಿಂತ ಹೆಚ್ಚು ಬದುಕಿದ್ದನ್ನು ನಾನು ನೋಡಿಲ್ಲ. ನಾಯಿಗಳ ಬಾಯಿಗೆ ಸಿಕ್ಕಿ, ತಮ್ಮದೇ ಕುಲಬಾಂಧವರಿಂದ ಕಚ್ಚಿಸಿಕೊಂಡು, ವಾಹನಗಳಡಿಗೆ ಅಪ್ಪಚ್ಚಿಯಾಗಿ.. ಹೀಗೇ ಬೆಕ್ಕುಗಳ ಬದುಕು ಒಂದಿಲ್ಲೊಂದು ದುರಂತ ಅಂತ್ಯ ಕಾಣುವುದೇ ಹೆಚ್ಚು. ಹಳ್ಳಿಗಳಲ್ಲಂತೂ ಎಲ್ಲೆಂದರಲ್ಲಿ ಓಡಾಡುವ ಇವುಗಳು ಹೇಳದೇ ಕೇಳದೇ ನಾಪತ್ತೆಯಾಗಿಬಿಡುವುದೇ ಜಾಸ್ತಿ. ಹೀಗಾದಾಗೆಲ್ಲ ಎಲ್ಲೇ, ಯಾವುದೇ ಬೆಕ್ಕಿನ 'ಮ್ಯಾಂವ್' ಕೇಳಿಸಿದರೂ ಒಂದು ಕ್ಷಣ ಅದು ನಮ್ಮ ಮುದ್ದಿನ ಬೆಕ್ಕೇ ಇರಬಹುದೇನೋ ಅನಿಸುವುದು ಸಹಜವಾದರೂ ನನ್ನ ಪ್ರಕಾರ ಪ್ರೀತಿಯಿಂದ ಸಾಕಿದ ಬೆಕ್ಕೊಂದು ಕಣ್ಣೆದುರೇ ಮೃತವಾಗುವುದಕ್ಕಿಂತ ಹೀಗೇ ನಾಪತ್ತೆಯಾಗಿಹೋಗುವುದೇ ಮೇಲು.  ಸಾಕಿದ ಬೆಕ್ಕೊಂದು ನಾಪತ್ತೆಯಾದಾಗ "ಮಾಂಸದ ಆಸೆಗೆ ಅಲ್ಲೆಲ್ಲೋ ಯಾರದೋ ಮನೆಗೆ ಹೋಗಿ ಸೇರಿಕೊಂಡಿದೆಯಂತೆ" ಅಂತ ನಮ್ಮನಮ್ಮಲ್ಲೇ ಮಾತನಾಡಿಕೊಂಡು ಸಮಾಧಾನಮಾಡಿಕೊಳ್ಳಬಹುದು. ಚಿಕ್ಕಂದಿನಲ್ಲಿ ಶಾಲೆಯಿಂದ ಮರಳುವ ನನಗಾಗಿ ಬಾಗಿಲಲ್ಲೇ ಕಾದುಕುಳಿತಿರುತ್ತಿದ್ದ, ಓದುತ್ತಾ ಕುಳಿತ ನನ್ನ ತೊಡೆಯೇರಿ ಮುದ್ದಾಗಿ ನಿದ್ರಿಸುತ್ತಿದ್ದ, ಮನೆಯೊಳಗೆ ಹರಿದು ಬರುತ್ತಿದ್ದ ಹಾವನ್ನು ಅಡ್ಡಹಾಕಿ ತಡೆದು ಶೌರ್ಯ ಮೆರೆದಿದ್ದ, ಬಾಲ ಎತ್ತಿಕೊಂಡು ಮ್ಯಾಂವ್ ಮ್ಯಾಂವ್ ಎಂದು ಮನೆಯ ತುಂಬಾ ಓಡಾಡುತ್ತಾ ಎಲ್ಲರ ಪ್ರೀತಿಪಾತ್ರವಾಗಿದ್ದ ಪಾಚುಬೆಕ್ಕು ಕಾರಣವೇ ಗೊತ್ತಾಗದಂತೆ ಅನ್ನಾಹಾರ ಬಿಟ್ಟು ಕೃಶವಾಗುತ್ತಾ ಆಗುತ್ತಾ ಕೊನೆಗೊಂದು ದಿನ ಅಪ್ಪನ ಕೈಯ್ಯಲ್ಲಿ ಗಂಗಾಜಲ ಬಿಡಿಸಿಕೊಂಡು ಇಹಲೋಕ ತ್ಯಜಿಸಿದ ಕ್ಷಣ ನೆನಪಾದಾಗ ಈಗಲೂ ಸಂಕಟವಾಗುತ್ತದೆ. ಮೊನ್ನೆಮೊನ್ನೆಯವರೆಗೂ ಮುದ್ದಾಗಿ ಓಡಾಡಿಕೊಂಡಿದ್ದ ಆ ಪುಟ್ಟ ಜೀವ ಸಾವಿನ ಸಂಕಟ ತಾಳಲಾರದೆ ಕಟ್ಟಕಡೆಯ ಬಾರಿಗೆಂಬಂತೆ ಕ್ಷೀಣದನಿಯಲ್ಲೊಮ್ಮೆ ನರಳಿ ನಿಶ್ಚಲವಾಗಿಹೋದಾಗ ಮನೆಯವರೆಲ್ಲರ ಕಣ್ಣಲ್ಲೂ ನೀರು. ಕೊನೆಗೆ ಹಿತ್ತಲಲ್ಲೊಂದು ಗುಂಡಿತೋಡಿ ಹೂಳುವ ಕ್ಷಣದಲ್ಲಿ ತೆರೆದೇ ಇದ್ದ ಅದರ ಮೃತ ಕಣ್ಣುಗಳಲ್ಲಿ ಕಂಡ ಆ ಯಾತನೆಯ ಚಿತ್ರ ಇಂದಿಗೂ ಮನಸ್ಸಿನಲ್ಲೇ ಉಳಿದುಹೋಗಿದೆ.

ನಾಯಿಗಳಷ್ಟಲ್ಲದಿದ್ದರೂ ಬೆಕ್ಕುಗಳೂ ಒಂದು ಮಟ್ಟಕ್ಕೆ ಭಾವುಕ ಜೀವಿಗಳು. ಮುಪ್ಪಡರಿ, ಸರಿಯಾಗಿ ನಡೆಯಲೂ ಆಗದೇ, ರೋಮವುದುರಿ ಮೈಯ್ಯೆಲ್ಲಾ ದದ್ದರಿಸಿಹೋಗಿ, ಎಲ್ಲರಿಂದ ಕಡೆಗಣಿಕೆಗೊಳಪಟ್ಟಿದ್ದ ಗಂಡು ಬೆಕ್ಕೊಂದರೆಡೆಗೆ ಅದರ ಯೌವನದ ದಿನಗಳ ಸಂಗಾತಿಯಾಗಿದ್ದ ಹೆಣ್ಣು ಬೆಕ್ಕೊಂದು ತೋರಿಸಿದ್ದ ಪ್ರೀತಿಯನ್ನು ಕಣ್ಣಾರೆ ನೋಡಿದ ಮೇಲೇ ನನಗೆ ಹೀಗನಿಸಿದ್ದು. ಅದೊಂದು ಸುಡುಸುಡು ಬಿಸಿಲಿನ ಮಧ್ಯಾಹ್ನ 'ಅವಳು' ಈಗಷ್ಟೇ ಊಟ ಮುಗಿಸಿ ಅಂಗಳದ ನೆರಳಲ್ಲಿ ವಿಶ್ರಾಂತಿ ಪಡೆಯುತ್ತ ಮಲಗಿದ್ದಳು. ಇದ್ದಕ್ಕಿದ್ದಂತೆ ಹುಲ್ಲುಗೊಣಬೆಯಲ್ಲಿ ಏನೋ ಸರಸರ ಸರಿದಾಟ. ಅವಳು ಕಾಲುಗಳ ಮೇಲಿಟ್ಟುಕೊಂಡಿದ್ದ ತಲೆಯನ್ನು ಫಕ್ಕನೆ ಎತ್ತಿ ಅತ್ತ ನೋಡಿದರೆ ಅಲ್ಲಿದ್ದುದು ಜೀವವೇ ಭಾರವಾದಂತೆ ಆಯಾಸದ ಹೆಜ್ಜೆಯಿಡುತ್ತಾ ಬರುತ್ತಿದ್ದ ತನ್ನ ಮುದಿಗೆಳೆಯ. ಅದೇನಾಯಿತೋ ಏನೋ, ಅವಳು ಮರುಕ್ಷಣವೇ ಮಲಗಿದಲ್ಲಿಂದ ಎದ್ದು ನೇರ ಅಡಿಗೆಮನೆಯ ಒಳಗೋಡಿದಳು‌. ಅಲ್ಲಿದ್ದ ನನ್ನಮ್ಮನೊಂದಿಗೆ ಜಗಳಾಡಿ, ಕೂಗಿ, ಗಲಾಟೆಮಾಡಿ, ತಾನು ಈಗಷ್ಟೇ ಕುಡಿದು ಖಾಲಿ ಮಾಡಿದ್ದ ಬಟ್ಟಲಿಗೆ ಮತ್ತೊಂದಿಷ್ಟು ಹಾಲು ಹಾಕಿಸಿಕೊಂಡಳು. ಆದರೆ ಬಟ್ಟಲಿಗೆ ಹಾಲುಬಿದ್ದ ಮರುಕ್ಷಣವೇ ನೋಡುತ್ತಿದ್ದ ನಾನು-ಅಮ್ಮ ಅಚ್ಚರಿಪಡುವಂತೆ ಒಂದು ತೊಟ್ಟು ಹಾಲನ್ನೂ ಕುಡಿಯದೇ ತಾನು ಇಷ್ಟೊತ್ತು ಗಲಾಟೆ ಮಾಡಿದ್ದೇ ಸುಳ್ಳೇನೋ ಎಂಬಂತೆ ಹೊರನಡೆದು, ಮೊದಲು ಮಲಗಿದ ಜಾಗದಲ್ಲೇ ಕಾಲುಚಾಚಿ ಮಲಗಿಬಿಟ್ಟಳು! ನೋಡನೋಡುತ್ತಿದ್ದಂತೆಯೇ ಅಂಗಳದಲ್ಲಿದ್ದ ಅವಳ ಮುದಿಗೆಳೆಯ ಅದೇ ಆಯಾಸದ ಭಾರ ಹೆಜ್ಜೆಗಳನ್ನಿಡುತ್ತಾ ಒಳಹೊಕ್ಕು ಬಟ್ಟಲಿನಲ್ಲಿದ್ದ ಹಾಲು ಕುಡಿಯತೊಡಗಿದ! ನನಗಂತೂ ಕಣ್ಣು ಹೊರಬರುವಷ್ಟು ಅಚ್ಚರಿ. ನಾವೆಲ್ಲರೂ ಕಡೆಗಣಿಸಿದ್ದ, ಸಾವಿಗೆ ಕೆಲವೇ ಹೆಜ್ಜೆಗಳಷ್ಟು ದೂರದಲ್ಲಿದ್ದ ಆ ಮುದಿಬೆಕ್ಕು.. ಅದು ತನಗೆ ಹಸಿವಾಗಿದೆಯೆಂದಾಗಲೀ, ಹಾಲು ಹಾಕಿಸೆಂದಾಗಲೀ ಒಂದು ಮಾತೂ ಬಾಯ್ಬಿಟ್ಟು ಕೇಳಿರಲಿಲ್ಲ. ಅದ್ಯಾವ ಮೂಕ ಸಂವೇದನೆಯೋ, ಭಾವ ಸಂವಹನೆಯೋ.. ನೂರಾರು ಭಾಷೆಗಳ, ಸಾವಿರಾರು ಪದಗಳ ಮೀರಿದ ಮಾತುಕತೆಯೊಂದು ಅಲ್ಲಿ ಒಂದು ಸಣ್ಣ ಇಶಾರೆಯೂ ಇಲ್ಲದಷ್ಟು ಮೌನದಲ್ಲಿ ನಡೆದುಹೋಗಿತ್ತು.

ಹೇಳುತ್ತಾ ಹೋದರೆ ಮಾರ್ಜಾಲ ಲೋಕದಲ್ಲಿ ಇಂತಹ ಹತ್ತಾರು ಭಾವುಕ ಸಂಗತಿಗಳಿವೆ‌. ತಾನಿಲ್ಲದ ಹೊತ್ತಿನಲ್ಲಿ ಧಾಳಿಮಾಡಿದ 'ಮಾಳ' ಬೆಕ್ಕೊಂದಕ್ಕೆ ಬಲಿಯಾದ ತನ್ನ ಎರೆಡುವಾರ ಪ್ರಾಯದ ಮೂರು ಪುಟಾಣಿ ಮರಿಗಳ ಶವವನ್ನು ತೋರಿಸುತ್ತಾ, ನೋಡಲು ಬಂದವರೆಲ್ಲರ ಕಾಲಿಗೆ ಸುತ್ತುಬರುತ್ತಾ, ಅರ್ಥವಾಗದ ಅದ್ಯಾವುದೋ ಕೂಗಿನಲ್ಲಿ ರೋಧಿಸುತ್ತಿದ್ದ ತಾಯಿಬೆಕ್ಕಿನ ನೋವು ತುಂಬಿದ ಕೂಗು ಇಂದಿಗೂ ನೆನೆಪಿನಲ್ಲುಳಿದಿದೆ.

                 *****************

ತಮ್ಮ ಕುಲಬಾಂಧವರನ್ನೆಲ್ಲ ಬಿಟ್ಟು ಮನುಷ್ಯನೊಂದಿಗೆ ರಾಜಿಮಾಡಿಕೊಂಡು, ಮುದ್ದಿಸಿಕೊಂಡು ಬದುಕುವ ಈ ಕುಡಿಮೀಸೆಯ ಮಾರ್ಜಾಲಗಳ ಒಡನಾಟ ಬೆಂಗಳೂರಿಗೆ ಬಂದಮೇಲೆ ನಿಂತೇಹೋಗಿದೆ. ಇಲ್ಲಿ ನಾಲಿಗೆಗೆ ಉಚ್ಛರಿಸಲಿಕ್ಕೂ ಕಷ್ಟವಾಗುವ ತಳಿಗಳಿಂದ ಗುರುತಿಸಲ್ಪಡುವ, ಡ್ಯಾನಿ, ಮಾರ್ಕೋ, ಸ್ಯಾಮ್ ಮುಂತಾದ ಮನುಷ್ಯರಿಗಿಂತಲೂ ಚಂದದ ಹೆಸರುಗಳಿಂದ ಕರೆಯಿಸಿಕೊಳ್ಳುವ, ಉದ್ದುದ್ದ ರೋಮದ, ಥಟ್ಟನೆ ನೋಡಿದರೆ ವಿಗ್ ಹಾಕಿಕೊಂಡ ಕುಳ್ಳ ನಾಯಿಯಂತೆ ಕಾಣುವ, ತರಹೇವಾರಿ ರೂಪ-ಆಕಾರಗಳ, ತನ್ನ ಒಂದು ಚಿಕ್ಕ ಪಲ್ಟಿಗೂ ಮನೆಯವರೆಲ್ಲರಿಂದ ಶಭಾಶ್ಗಿರಿಯನ್ನು ಪಡೆಯುವ ಮುದ್ದು ಬೆಕ್ಕಣ್ಣಗಳನ್ನು ನೋಡುವಾಗ ಬಾಲ್ಯದ ಬಿಲ್ಲಿ, ಪಾಚು, ಪಾಂಡುಗಳೆಲ್ಲ ಮತ್ತೆ ಜೀವಂತವಾಗಿ ಮೀಸೆ ಕುಣಿಸಿದಂತಾಗುತ್ತದೆ. ಮುಂದೊಂದು ದಿನ ಮತ್ತದೇ ಹಳ್ಳಿ ಜೀವನಕ್ಕೆ ಮರಳಿ, ಹೊಸಿಲ ಮೇಲೆ ಕುಳಿತ ಬೆಕ್ಕನ್ನು ಬೊಗಸೆಯಲ್ಲಿ ಹಿಡಿದು ಮುದ್ದಿಸುವೆನೆಂಬ ಕನಸೊಂದು ಹೊಸತಾಗಿ ಅರಳುತ್ತದೆ.

[ಈ ಬರಹವು ಕೆಲವೊಂದು ಕತ್ತರಿ ಪ್ರಯೋಗಗಳೊಂದಿಗೆ ದಿನಾಂಕ 24-9-2017ರ  ವಿಶ್ವವಾಣಿ ವಿರಾಮ ಸಾಪ್ತಾಹಿಕದ 'ಮಾರ್ಜಾಲ ಮೋಹ' ಅಂಕಣದಲ್ಲಿ 'ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ' ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿದೆ.]

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...