ಸೋಮವಾರ, ಆಗಸ್ಟ್ 14, 2017

ಮಳೆಗಾಲ ಬಂತೋ ಮಲೆನಾಡ ಶಾಲೆಗೆ...



ಅದು ಮೇ ತಿಂಗಳ ಕೊನೆಯ ವಾರ. ಪುಟ್ಟು ಗೋಡೆಗೆ ಎಸೆಯಲ್ಪಟ್ಟು ಒಲ್ಲದ ಮನಸ್ಸಿನಿಂದ ಪುಟಿದು ಬರುತ್ತಿರುವ ಚೆಂಡಿಗೆ ಅಷ್ಟೇ ಒಲ್ಲದ ಮನಸ್ಸಿನಿಂದ ಬ್ಯಾಟು ತಾಗಿಸುತ್ತಾ ಅಂಗಳದಲ್ಲಿ ನಿಂತಿದ್ದಾನೆ. ಇಷ್ಟು ದಿನ ಅವನ ಪುಂಡಾಟ, ಚೇಷ್ಟೆ, ಗಲಾಟೆಗಳಿಗೆ ಜೊತೆಯಾಗಿದ್ದ ಅತ್ತೆ-ಮಾವ-ಚಿಕ್ಕಮ್ಮನ ಮಕ್ಕಳೆಲ್ಲಾ ಕೆಲವೇ ನಿಮಿಷದ ಕೆಳಗೆ ಬಸ್ಸು ಹತ್ತಿ ತಂತಮ್ಮ ಊರಿಗೆ ಹೊರಟುಹೋಗಿದ್ದಾರೆ. ಈ ಬೇಸರ ಒಂದುಕಡೆಯಾದರೆ ಕಳೆದೆರೆಡು ತಿಂಗಳಿಂದ ಸ್ವತಂತ್ರವಾಗಿ ಹಾರಿ, ಕುಣಿದು, ಕುಪ್ಪಳಿಸುವಂತೆ ಮಾಡಿದ್ದ ಬೇಸಿಗೆ ರಜೆ ಇನ್ನು ಮೂರೇ ಮೂರು ದಿನದಲ್ಲಿ ಮುಗಿದು ಹೋಗುತ್ತದೆನ್ನುವ ಸಂಕಟ ಇನ್ನೊಂದುಕಡೆ. ಜೊತೆಗೆ ದಪ್ಪ ಮೀಸೆಯ ಸಿದ್ರಾಮ ಮೇಷ್ಟ್ರು ರಜೆಯಲ್ಲಿ ಮಾಡಲು ಕೊಟ್ಟಿದ್ದ ಹೋಂ ವರ್ಕ್ ಮುಗಿದಿಲ್ಲವೆಂಬ ಆತಂಕಬೇರೆ! ಈಗ ಜಗತ್ತಿನ ಅತ್ಯಂತ ದುಃಖತಪ್ತ ಜೀವಿಗಳಲ್ಲಿ ಪುಟ್ಟುವೂ ಒಬ್ಬ. ಆಟದ ಮೇಲಿನ ಬೇಸರ ಜಾಸ್ತಿಯಾದಾಗಲೇ ಅಮ್ಮ ಮಾಡಿದ ಹಲಸಿನಕಾಯಿ ಚಿಪ್ಸು ನೆನಪಾಗುತ್ತದೆ. ಅಡಿಗೆಮನೆಗೆ ಬಂದು ಮೆಲ್ಲಗೆ ನಾಗಂದಿಗೆಯ ಮೇಲಿರುವ ಡಬ್ಬಿಯಿಳಿಸಿ, ಒಂದಿಷ್ಟು ಚಿಪ್ಸನ್ನು ತಟ್ಟೆಗೆ ಹಾಕಿಕೊಂಡು ಕ್ರುಂಕ್ರುಂ ಶಬ್ಧಮಾಡುತ್ತಾ ತಿನ್ನುತ್ತಿದ್ದಾನೆ. ಇದ್ದಕ್ಕಿದ್ದಂತೆ ಅವನೆದುರು ನೆಲದಮೇಲೆ ಕಿಟಕಿ ಸರಳುಗಳ ನೆರೆಳಿನ ಸಮೇತ ಬೀಳುತ್ತಿದ್ದ ಬಿಸಿಲು ಮಂದವಾಗುತ್ತಾ ಆಗುತ್ತಾ ಮಾಯವೇ ಆಗಿಬಿಡುತ್ತದೆ. ಪುಟ್ಟು ಕುತೂಹಲದಿಂದ ಹೊರಬಂದು ಆಕಾಶದೆಡೆಗೆ ನೋಡುತ್ತಾನೆ. ಅದೆಲ್ಲಿದ್ದವೋ ಏನೋ, ಆಕಾಶದ ಎಂಟು ಮೂಲೆಗಳಿಂದಲೂ ಹಿರಿ,ಕಿರಿ,ಮರಿ,ಭಾರೀ ಮೋಡಗಳೆಲ್ಲಾ ನುಗ್ಗಿಬಂದು ಸೂರ್ಯನನ್ನು ಮುಚ್ಚಿಬಿಡುತ್ತವೆ. ಬಿಸಿಲಿದ್ದದ್ದೇ ಸುಳ್ಳೇನೋ ಎಂಬಷ್ಟು ಮುಸುಕು. ಗಾಳಿ ಸುಂಯ್ಯನೆ ಬೀಸುತ್ತಾ ಮಾವು, ಅಡಿಕೆ, ತೆಂಗಿನ ಮರಗಳೆಲ್ಲವೂ ಯಾರೋ ಜುಟ್ಟು ಹಿಡಿದೆಳೆಯುತ್ತಿರುವಂತೆ ಅಲ್ಲಾಡತೊಡಗುತ್ತವೆ. ನೋಡ ನೋಡುತ್ತಿದ್ದಂತೆ ಕಪ್ಪು ಮೋಡದಂಚಿನಲ್ಲಿ ಮಿಂಚೊಂದು ಫಳೀರನೆ ಹೊಳೆಯುತ್ತದೆ. ಅದರ ಬೆನ್ನಿಗೇ ಹಂಚುಮಾಡಿನ ಮೇಲೆ ದೈತ್ಯ ಕಲ್ಲುಗುಂಡೊಂದು ಉರುಳಿಬರುತ್ತಿರುವಂತಹಾ ಸದ್ದಿನ ಗುಡುಗುಡು ಗುಡುಗು! 

"ಸಿಡ್ಲು ಹೊಡೀತು. ಬಾ ಅಪ್ಪಿ ಒಳ್ಗೇ" ಅಮ್ಮ ಕೂಗುತ್ತಾಳೆ. ನಾಲ್ಕೂ ಮೊವತ್ತರಿಂದ ಏಕ್ ದಂ ಆರೂ ಮೊವತ್ತಕ್ಕೆ ಜಿಗಿದ ಹವಾಮಾನಕ್ಕೆ ಹೆದರಿದ ಪುಟ್ಟು ಒಳಗೆ ಬರಲೆಂದು ತಿರುಗುತ್ತಾನೆ.

'ಟಪ್!'

ಮೇಘಲೋಕದಿಂದುರುಳಿಬಂದ ತಂಪು ಹನಿಯೊಂದು ಪುಟ್ಟುವಿನ ಕೆನ್ನೆಯ ಮೇಲೆ ಬೀಳುತ್ತದೆ. ಅದು ಆ ವರುಷದ ಮೊದಲ ಮಳೆಹನಿ! ನೋಡುನೋಡುತ್ತಿದ್ದಂತೆ ಮೇಲೆಲ್ಲೋ ನೂರಾರು ಹಳೆಯ ಚಲನಚಿತ್ರ ನಾಯಕಿಯರು ಗೋಳೋ ಎಂದು ಅಳುತ್ತಿರುವಂತೆ ಹನಿಗಳು ಪಟಪಟನೆ ಜಾರತೊಡಗುತ್ತವೆ. ಬಿಸಿಲಿನ ಹೊಡೆತಕ್ಕೆ ಧೂಳುಧೂಳಾಗಿ ಒಡೆದುಹೋಗಿದ್ದ ಅಂಗಳದ ಮಣ್ಣೆಲ್ಲ ಮಳೆಯಲಿ ನೆಂದು, ಛಳಿಗೆ ಒಂದನ್ನೊಂದು ಗಟ್ಟಿಯಾಗಿ ತಬ್ಬಿಕೊಂಡು ಘಮ್ಮೆಂಬ ಕಂಪು ಮೂಗಿಗೆ ರಾಚುತ್ತದೆ. ಹಂಚಿನ ಮಾಡಿನ ಮೇಲೆ ಹನಿಗಳು ಬೀಳುತ್ತಿರುವ ಟಪಟಪ ಸದ್ದು ಹಂತ ಹಂತವಾಗಿ ತಾರಕಕ್ಕೇರುತ್ತದೆ. ಕತ್ತಲೆಂದು ಸ್ವಿಚ್ ಹಾಕಿದರೆ ಮಿಂಚು-ಗುಡುಗುಗಳ ಭಯಕ್ಕೆ ಕರೆಂಟು ಯಾವಾಗಲೋ ಪರಾರಿಯಾಗಿಬಿಟ್ಟಿದೆ. ಅದಿನ್ನು ಮರಳಿ ಬರುವುದು ನಾಳೆಯೋ, ನಾಡಿದ್ದೋ ಇಲ್ಲಾ ಮುಂದಿನ ವಾರವೋ ಎಂಬುದು ಸಾಕ್ಷಾತ್ ಲೈನ್ ಮ್ಯಾನ್ ಮಂಜಣ್ಣನಿಗೂ ಗೊತ್ತಿರಲಿಕ್ಕಿಲ್ಲ.

ಪುಟ್ಟು ಅಪ್ಪ-ಅಮ್ಮನ ಜೊತೆ ವರಾಂಡದಲ್ಲಿ ನಿಂತು ಮೊದಲ ಮಳೆಯಲ್ಲಿ ತೋಯುತ್ತ ನಿಂತಿರುವ ಅಂಗಳವನ್ನೂ, ಮಾಡಿನಿಂದ ಸುಂಯ್ಯನೆ ಜಾರುತ್ತಿರುವ ಹನಿಗಳನ್ನೂ, ಮಿಂದು ಶುಚಿಯಾಗುತ್ತಿರುವ ಮರಗಳನ್ನೂ ಸಂಭ್ರಮದಿಂದ ನೋಡುತ್ತಿದ್ದಾನೆ. ಇದ್ದಕ್ಕಿದ್ದಂತೆ ಹನಿಗಳ ಶಬ್ದ ಹೆಚ್ಚಿ ತಟತಟನೆ ಸದ್ದಾಗುತ್ತದೆ.

"ಅಮ್ಮಾ.. ಆನೆಕಲ್ಲು!"
ಪುಟ್ಟು ಕಿರುಚಿಕೊಳ್ಳುತ್ತಾನೆ.

"ಅದು ಆನೆಕಲ್ಲಲ್ದ ಅಪ್ಪಿ, ಆಲೀಕಲ್ಲು. ತಡೀ. ಪಾತ್ರೆ ತರ್ತಿ" ಅಮ್ಮ ಒಳಗಿನಿಂದ ಪುಟ್ಟ ಬಟ್ಟಲೊಂದನ್ನು ತರುತ್ತಾಳೆ. ಹಂಚಿನ ಮೇಲೆ, ಮಣ್ಣಿನ ಮೇಲೆ, ಅಂಗಳದ ಚಪ್ಪಡಿ ಕಲ್ಲಿನ ಮೇಲೆ ಟಪಟಪನೆ ಬೀಳುತ್ತಿರುವ ಮೋಡದ ತುಣುಕುಗಳನ್ನು ಮೂವರೂ ಆಯ್ದು ಬಟ್ಟಲಿನೊಳಕ್ಕೆ ತುಂಬಿಕೊಳ್ಳುತ್ತಾರೆ. ಹೆಕ್ಕುತ್ತಿರುವಾಗಲೇ ಮೂರ್ನಾಲ್ಕು ಆಲಿಕಲ್ಲುಗಳನ್ನು ಪುಟ್ಟು ಮೆತ್ತಗೆ, ಅಪ್ಪ-ಅಮ್ಮನಿಗೆ ಕಾಣದಂತೆ ಬಾಯಿಗೆಸೆದುಕೊಳ್ಳುತ್ತಾನೆ. ಕರೆಂಟಿಲ್ಲದ ರಾತ್ರಿ ಚಿಮಣಿ ದೀಪದ ಬೆಳಕಲ್ಲಿ ಊಟ ಮುಗಿಸಿ ಬೇಗನೆ ಮಲಗಿಕೊಳ್ಳುತ್ತಾರೆ. ಮನೆಯೆದುರು ಗುಡ್ಡದ ನೀರೆಲ್ಲ ಮೇಲಿಂದ ಧುಮುಕುತ್ತಿರುವ ಧಡಧಡ ಸದ್ದು ಕೇಳಿಸಿಕೊಳ್ಳುತ್ತಲೇ ಪುಟ್ಟು ನಿದ್ರೆಗೆ ಜಾರುತ್ತಾನೆ.

                       *************

ಶಾಲೆ ಆರಂಭವಾಗಿದೆ. ಬೆನ್ನಿಗೆ ಬ್ಯಾಗು ಏರಿಸಿಕೊಂಡು ಅಪ್ಪ ತಂದುಕೊಟ್ಟ, ಗುಂಡಿ ಒತ್ತಿದೊಡನೆ ಥಟ್ಟನೆ ತರೆದುಕೊಳ್ಳುವ ಬಟನ್ ಛತ್ರಿಯನ್ನು ಮೆಲ್ಲಗೆ ತಿರುಗಿಸುತ್ತಾ ಪುಟ್ಟು ಶಾಲೆಗೆ ಹೋಗುತ್ತಿದ್ದಾನೆ. ರಸ್ತೆಯ ಎರೆಡೂ ಬದಿ ತೋಡಿನಲ್ಲಿ ಹರಿಯುತ್ತಿರುವ ನೀರು ಅವನನ್ನು ಆಟಕ್ಕೆ ಕರೆಯುತ್ತಿದೆ. ಶಾಲೆಗೆ ತಡವಾಗುತ್ತದೆನ್ನುವ ಭಯಕ್ಕೆ ನೀರಿನಾಟವನ್ನು ಸಂಜೆಗೆ ಮುಂದೂಡಿ ನಡೆಯುತ್ತಿದ್ದಾನೆ. ಮುಖ್ಯ ರಸ್ತೆ ತಲುಪಿದೊಡನೆ ಮೇಲಿನಮಕ್ಕಿಯಿಂದ ಬರುತ್ತಿರುವ ಸುಮಂತ ಎದುರಾಗಿದ್ದಾನೆ. ಅವನೂ ಸಹಾ ತನ್ನಂತೆಯೇ ಅರ್ಧ ಹೋಂ ವರ್ಕ್ ಮಾಡಿರುವುದು ಕೇಳಿ ಪುಟ್ಟುವಿಗೆ ಕೊಂಚ ಧೈರ್ಯ ಬಂದಿದೆ. ಅವನ ಬಣ್ಣಬಣ್ಣದ ಛತ್ರಿಯಂಚಿನಲ್ಲಿ ನೇತಾಡುತ್ತಿರುವ 'ಸೀಟಿ'ಯನ್ನೊಮ್ಮೆ ಊದಲು ಪುಟ್ಟುವಿಗೆ ಆಸೆಯಾಗಿದೆ.

ಮಳೆಯ ಕಾರಣ ಶಾಲೆಯ ಅಂಗಳದಲ್ಲಿ ನಡೆಯಬೇಕಿದ್ದ ಪ್ರಾರ್ಥನೆ 'ಹಾಲ್ ರೂಮ್'ಗೆ ವರ್ಗಾವಣೆಯಾಗಿದೆ. ತಡವಾಗಿ ಓಡುತ್ತಾ ಬಂದ ಗೋಪಿ ಅಂಗಳದಲ್ಲಿ ಜಾರಿಬಿದ್ದು ಅಂಗಿಯೆಲ್ಲಾ ಕೆಸರುಮಾಡಿಕೊಂಡಿದ್ದಾನೆ. ಹೊರಗೆ ಭರ್ರೆಂದು ಸುರಿಯುತ್ತಿರುವ ಮಳೆಯ ಸದ್ದಿನ ನಡುವೆಯೇ ಕನ್ನಡ ಮೇಷ್ಟ್ರು ದೊಡ್ಡ ದನಿಯಲ್ಲಿ ರಾಗವಾಗಿ ಪದ್ಯ ಹಾಡುತ್ತಿದ್ದಾರೆ:

"ಮಳೆ ಬಂತು ಮಳೆ
ಅಂಗಳದಲ್ಲಿ ಹೊಳೆ;
ನಾನು ಓಡಿ ಜಾರಿಬಿದ್ದು 
ಅಂಗಿಯೆಲ್ಲ ಕೊಳೆ!"

ಎಲ್ಲರೂ ಗೋಪಿಯತ್ತ ನೋಡಿ ಮುಸಿಮುಸಿ ನಕ್ಕಿದ್ದಾರೆ. ನಾಚಿಕೊಂಡ ಗೋಪಿ ಕುಳಿತಲ್ಲೇ ಮತ್ತಷ್ಟು ಮುರುಟಿಕೊಂಡಿದ್ದಾನೆ. ಸಿದ್ರಾಮ ಮೇಷ್ಟ್ರು ರಜೆಯ ಹೋಂ ವರ್ಕನ್ನು ನಾಳೆ ನೋಡುವುದಾಗಿ ಹೇಳಿದ್ದು ಕೇಳಿ ಪುಟ್ಟುವಿಗೆ ಸಮಾಧಾನವಾಗಿದೆ. ಸಂಜೆ ಮಳೆ ಕಡಿಮೆಯಾಗಿದ್ದರಿಂದ ನಾಲ್ಕು ಗಂಟೆಗೆ 'ಆಟದ ಬೆಲ್ಲು' ಹೊಡೆಯಲಾಗಿದೆ. ಮಕ್ಕಳೆಲ್ಲಾ ಹೋ ಎನ್ನುತ್ತಾ ಹೊರಗೋಡಿಬರುತ್ತಿದ್ದಾರೆ. ಜಪ್ಪೆ ಆಡುತ್ತಿದ್ದ ಚೈತ್ರ ಧಸಾಲ್ಲನೆ ಜಾರಿಬಿದ್ದದ್ದು ನೋಡಿ ಹುಡುಗರೆಲ್ಲ ಕಿಸಕ್ಕನೆ ನಕ್ಕಿದ್ದಾರೆ. ಪುಟ್ಟು ಗೋಪಿ-ಸುಮಂತರ ಜೊತೆಸೇರಿ ರಸ್ತೆಯ ಪಕ್ಕದ ತೋಡಿನಲ್ಲಿ ಹರಿಯುತ್ತಿರುವ ನೀರಿಗೆ ಆಣೆಕಟ್ಟು ಕಟ್ಟುತ್ತಿದ್ದಾನೆ. ಹರಿದು ಬಂದ ನೀರನ್ನು ತಡೆದು ನಿಲ್ಲಿಸಿ ಆಡುತ್ತಿರುವ ಕಿಲಾಡಿಗಳ ಮೇಲೆ ಸಿದ್ರಾಮ ಮಾಸ್ತರ ಕೆಂಗಣ್ಣು ಬಿದ್ದಿದೆ. ಮೂವರನ್ನೂ ಸಾಲಾಗಿ ನಿಲ್ಲಿಸಿ ಎರೆಡೆರೆಡು ಬಾರಿಸಲಾಗಿದೆ. ಏಟು ತಿಂದು ನೋವಾದ ಅಂಗೈಯ್ಯನ್ನು ಛತ್ರಿಯ ಕಡ್ಡಿಯಂಚಿನಿಂದ ಜಾರುತ್ತಿರುವ ಹನಿಗಳಿಗೆ ಚಾಚಿಕೊಂಡು ಪುಟ್ಟು ಮನೆಯತ್ತ ನಡೆಯುತ್ತಿದ್ದಾನೆ. 

                     ****************

ದಿನ ಕಳೆದಂತೆಲ್ಲಾ ಮುಂಗಾರಿನ ಆಟಾಟೋಪ ಹೆಚ್ಚಿದೆ. ತುಂಗಾನದಿಯಲ್ಲಿ ಯಾರದೋ ಶವ ತೇಲಿಹೋಗುತ್ತಿತ್ತೆಂಬ ಸುದ್ದಿ ಎಲ್ಲೆಡೆ ಸುಳಿದಾಡುತ್ತಿದೆ. ತೀರ್ಥಹಳ್ಳಿಯ ಬೀದಿಗಳಲ್ಲಿ ಓಡಾಡುತ್ತಿದ್ದ ಹುಚ್ಚನೊಬ್ಬ ಏಕಾಏಕಿ ನಾಪತ್ತೆಯಾಗಿದ್ದು ಆ ಶವ ಅವನದೇ ಇರಬಹುದೆಂಬ ಗುಮಾನಿ ಎದ್ದಿದೆ. ನೆಲ್ಲೀಸರದಲ್ಲಿ ಸೇತುವೆಯೇ ಕೊಚ್ಚಿಹೋಗಿರುವುದರಿಂದ ಗೋಪಿ ಎರೆಡು ದಿನದಿಂದ ಶಾಲೆಗೆ ಬಂದಿಲ್ಲ. ತನ್ನ ಮನೆಯ ಬಳಿಯೂ ಸೇತುವೆ ಕೊಚ್ಚಿಹೋಗುವಂತಹಾ ದೊಡ್ಡ ಹಳ್ಳ ಇರಬಾರದಿತ್ತಾ ಎಂದು ಚಿಂತಿಸುತ್ತಲೇ ಪುಟ್ಟು ಶಾಲೆಗೆ ಹೊರಟಿದ್ದಾನೆ. ಬೆಳಗ್ಗೆ ಪ್ರಾರ್ಥನೆಯಾಗುತ್ತಿದ್ದಂತೆಯೇ ಹೆಡ್ ಮೇಷ್ಟ್ರು "ಜಿಲ್ಲಾಧಿಕಾರಿಗಳ ಘೋಷಣೆಯಂತೆ ಇವತ್ತು ಶಾಲೆಗೆ ರಜೆ ನೀಡುತ್ತಿದ್ದೇವೆ. ಎಲ್ರೂ ಹುಷಾರಾಗಿ ಮನೆ ತಲುಪಿಕೊಳ್ಳಿ. ಹಳ್ಳ, ಸೇತುವೆ ದಾಟಿ ಹೋಗಬೇಕಾದ ಮಕ್ಳೆಲ್ಲ ಆಫೀಸ್ ರೂಮಿಗೆ ಬನ್ನಿ" ಎಂದಿದ್ದಾರೆ. ಮಕ್ಕಳೆಲ್ಲಾ "ಹೋss......" ಎಂದು ಕೂಗುತ್ತಾ ಚದುರಿದ್ದಾರೆ. ಪುಟ್ಟು ನೇರ ಮನೆಗೆ ಹೋಗದೇ ಮೊದಲೇ ಮಾತಾಡಿಕೊಂಡಂತೆ ಸುಮಂತನ ಮನೆಯ ಹಿಂದಿನ ಗುಡ್ಡಕ್ಕೆ ಹೋಗಿದ್ದಾನೆ. ಅಲ್ಲಿ ಕೈಗೆಟುಕುವ ಎತ್ತರದಲ್ಲೇ ಬಿಟ್ಟಿರುವ ನೇರಳೆ ಹಣ್ಣುಗಳನ್ನು ಕೈ-ಬಾಯಿಗಳೆಲ್ಲಾ ನೀಲಿಯಾಗುವಷ್ಟು ಇಬ್ಬರೂ ತಿಂದಿದ್ದಾರೆ. ಮರಳಿ ಬರುವಾಗ ಕೇರೆ ಹಾವೊಂದು ಸರ್ರನೆ ಹರಿಯುತ್ತಾ ಅವರ ದಾರಿಗೆ ಅಡ್ಡಹೋಗಿದೆ. ಭೀತರಾದ ಇಬ್ಬರೂ ಓಡೋಡಿ ಮನೆಸೇರಿಕೊಂಡಿದ್ದಾರೆ. ಅಂಗಳದಲ್ಲೇ ಒಂದಡಿ ಆಳದ ಬಾವಿ ತೋಡಿ, ಪೆನ್ನಿನ ಕೊಳವೆಗಳನ್ನು ಪೈಪಿನಂತೆ ಸಿಕ್ಕಿಸಿದ್ದಾರೆ. ಬಾವಿ ತುಂಬಿ ಪೈಪಿನಲ್ಲಿ ನೀರುಕ್ಕಿ ಬರುತ್ತಿರುವ ಸಂಭ್ರಮವನ್ನು ನೋಡಿ ಮೈಮರೆಯುತ್ತಿದ್ದಾರೆ.

ಪಾಚಿ ಕಟ್ಟಿ ಜಾರುತ್ತಿರುವ ಅಂಗಳಕ್ಕೆ ಅಪ್ಪ ಅಡಿಕೆ ದಬ್ಬೆಗಳ 'ಸಾರ' ಹಾಕಿದ್ದಾನೆ. ಅಂಗಳದ ತುಂಬಾ ಡೇರೆ ಗಿಡಗಳು ಹೂಬಿಟ್ಟು ನಿಂತಿವೆ. ಎಲೆಗಳ ಮಧ್ಯೆ ಅಡಗಿಕೊಂಡು ಹೂವು ತಿನ್ನುವ ಕಂಬಳಿಹುಳು, ಸಿಂಬಳದ ಹುಳುಗಳಿಗೆ ಅಮ್ಮ ಬೈಯ್ಯುತ್ತಲೇ ಬೂದಿ ಎರಚುತ್ತಿದ್ದಾಳೆ. ಅಪ್ಪ ತೋಟಕ್ಕೆ ಔಷಧಿ ಹೊಡೆಯಲು ತಯಾರಿ ಮಾಡುತ್ತಿದ್ದಾನೆ. ಕೇವಲ ಚಡ್ಡಿಯನ್ನಷ್ಟೇ ಧರಿಸಿರುವ ಸೀನ ಕಾಲಿಗೆ 'ಕೊಟ್ಟೆ ಮಣೆ' ಹಾಕಿಕೊಂಡು ಅಡಿಕೆ ಮರ ಹತ್ತಲು ತಯಾರಾಗಿದ್ದಾನೆ. ಗುಡ್ಡದಲ್ಲಿ ಅಲ್ಲಲ್ಲಿ 'ಜಲ' ಎದ್ದು ತಿಳಿಯಾದ ನೀರು ಮಳೆ ನೀರಿನ ಜೊತೆ ಸೇರಿಕೊಂಡು ಜುಳಜುಳನೆ ಹರಿದುಬರುತ್ತಿದೆ. ದಡದ ಮೇಲೆ ಕುಳಿತ ದೈತ್ಯ 'ಗ್ವಾಂಟ್ರು ಕಪ್ಪೆ'ಯೊಂದು ಕ್ರೋಂ ಕ್ರೋಂ ಎಂದು ಹಾಡುತ್ತಿದೆ. ಹಸಿರು ಹಾವೊಂದು ಬೇಲಿಯ ಗಿಡದ ಮೇಲೆ ಅಡಗಿಕೊಂಡು ಆ ದೊಳ್ಳ ಕಪ್ಪೆಯನ್ನು ನುಂಗುವ ಕನಸು ಕಾಣುತ್ತಿದೆ. ಚಕ್ಕುಲಿ ಹುಳವೊಂದು ದಾರಿ ತಪ್ಪಿ ಜಗುಲಿಗೆ ಬಂದು ಪುಟ್ಟ ಮಗುವಿನ ಕೈಯ್ಯಲ್ಲಿ ಸಿಕ್ಕಿಹಾಕಿಕೊಂಡಿದೆ. ಇನ್ನೂ ವರುಷ ತುಂಬದ ಮಗು ತಾನು ಮುಟ್ಟಿದೊಡನೆ ಚಕ್ಕುಲಿಯಾಗಿ ಬಿದ್ದುಕೊಂಡ ಆ ವಿಚಿತ್ರದತ್ತ ತನ್ನ ಪುಟಾಣಿ ಬೆರಳು ಚಾಚಿ 'ಕಚ್ಚೂ...' ಎನ್ನುತ್ತಿದೆ. ಹಳ್ಳದಲ್ಲಿ ಪುಟ್ಟು ತೇಲಿಬಿಟ್ಟ ದೋಣಿ ಓಲಾಡುತ್ತಾ ಮುಂದಮುಂದಕ್ಕೆ ಸಾಗುತ್ತಿದೆ.

                     ****************

ಜೂನ್, ಜುಲೈಗಳು ಮಳೆಯಲ್ಲಿ ಕೊಚ್ಚಿಹೋಗಿ ಕೊಂಚ ಬಿಸಿಲಿನ ಆಗಸ್ಟ್ ಬಂದಿದೆ. ಆಗಸ್ಟ್ ಹದಿನೈದರ ಸ್ವತಂತ್ರ ದಿನಾಚರಣೆಗೆ ಶಾಲೆಯಲ್ಲಿ ತಯಾರಿಗಳು ಮುಗಿದಿವೆ. ಗ್ರಾಮಪಂಚಾಯ್ತಿ ಅಧ್ಯಕ್ಷರ ಕೈಯ್ಯಂದ ಎಳೆಯಲ್ಪಟ್ಟು ಧ್ವಜಕಂಬದ ತುತ್ತತುದಿಯಲ್ಲಿ ತನ್ನ ಅಶೋಕ ಚಕ್ರಸಹಿತ ತ್ರಿವರ್ಣವನ್ನು ಬಾನಿಗೆ ಬೀಸುತ್ತಾ ನಿಂತಿರುವ ಧ್ವಜವನ್ನು ನೋಡಲು ಸೂರ್ಯನೂ ತನ್ನ ಎಳೆಯ ಕಿರಣಗಳ ಜೊತೆ ಹಾಜರಾಗಿದ್ದಾನೆ. ಮಕ್ಕಳೆಲ್ಲರೂ 'ಸೆಲ್ಯೂಟ್' ಹೊಡೆದು ರಾಷ್ಟ್ರಗೀತೆ ಹಾಡುತ್ತಿದ್ದಾರೆ. ಒಳಗಡೆ ಆಫೀಸು ರೂಮಿನಲ್ಲಿ ಮಕ್ಕಳಿಗೆ ಹಂಚಲೆಂದು ಡಬ್ಬಿಯೊಳಗಿಟ್ಟಿರುವ ಚಾಕ್ಲೇಟುಗಳೂ ತಮ್ಮ ಬ್ಯಾಗಡೆಯಂಚನ್ನು ಮೇಲಕ್ಕೆತ್ತಿ 'ಸೆಲ್ಯೂಟ್' ಸ್ಥಿತಿಯಲ್ಲಿ ರಾಷ್ಟ್ರಗೀತೆಯನ್ನು ಆಲಿಸುತ್ತಿವೆ.


('ಮಾನಸ'ದ ಆಗಸ್ಟ್ 2017ರ ಸಂಚಿಕೆಯಲ್ಲಿ ಪ್ರಕಟಿತ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...