ಗುರುವಾರ, ಜುಲೈ 27, 2017

ಊರ ದಾರಿಯ ಚಿತ್ರಗಳು... (ಚಿತ್ರಬರಹಗಳು)

ಅದೇಕೋ ಗೊತ್ತಿಲ್ಲ, ಊರಿನ ಬಗ್ಗೆ, ಅಲ್ಲಿಯ ಮಳೆಯ ಬಗ್ಗೆ ಎಷ್ಟೇ ಬರೆದರೂ, ಎಷ್ಟೇ ಮಾತಾಡಿದರೂ ಮುಗಿಯೋದೇ ಇಲ್ಲ. ನಾನು ಹಾಗೂ ನನ್ನ ರೂಮ್ ಮೆಟ್ ಸುಮಂತ ಹೊತ್ತಲ್ಲದ ಹೊತ್ತಿನಲ್ಲಿ ಎದ್ದು ಕುಳಿತು ಊರು, ಅಲ್ಲಿಯ ಮಳೆ, ತುಂಬಿ ಹರಿಯುವ ತುಂಗಾ ಹೊಳೆ, ಅಮ್ಮ ಮಾಡುವ ಬಿಸಿಬಿಸಿ ನೀರ್ದೋಸೆ ಹಾಗೂ ಇವನ್ನೆಲ್ಲ ಬಿಟ್ಟು ಈ ಬೆಂಗಳೂರೆನ್ನುವ ಬಂಗಾರದ ಬೋನಿನಲ್ಲಿ ಬಿಕನಾಸಿಗಳಂತೆ ಬದುಕುತ್ತಿರುವ ನಾವು.. ಇವೆಲ್ಲದರ ಬಗ್ಗೆ ಗಂಟೆಗಟ್ಟಲೆ ಮಾತಾಡಿಕೊಳ್ಳುತ್ತೇವೆ. ಅದರಲ್ಲೂ ಆಫೀಸಿನಲ್ಲಿ ಕೆಲಸ ತಲೆಮೇಲೆ ಅಡರಿಕೂತ ವಾರಾರಂಭದ ದಿನಗಳಲ್ಲಂತೂ ಊರು ಹಾಗೂ ಅಲ್ಲಿನ ಮಳೆ ನನ್ನನ್ನು ಇನ್ನಿಲ್ಲದಂತೆ ಕಾಡುತ್ತದೆ. ಬಾಸ್ ಸೀಟಿನಲ್ಲಿ ಇಲ್ಲದ ಚಿಕ್ಕ ಗ್ಯಾಪ್ ನಲ್ಲೇ ಯಾವುದಾದರೊಂದು ಬ್ಲಾಗ್ ತೆರೆದು ಅದರಲ್ಲಿರುವ ಮಲೆನಾಡಿನ ಮಳೆಯ ಲೇಖನಗಳನ್ನೂ, ಚಿತ್ರಗಳನ್ನೂ ನೋಡಿ ಅಷ್ಟರಮಟ್ಟಿಗಾದರೂ 'ತಂಪಾಗಲು' ಪ್ರಯತ್ನಿಸುತ್ತೇನೆ. ಏನೇನೋ ಕವನ, ಲೇಖನ ಗೀಚುತ್ತಾ ಮಾನಸಿಕವಾಗಿ ಊರಿಗೆ ಹತ್ತಿರಾಗಲು ಪ್ರಯತ್ನಿಸುತ್ತೇನೆ. 

ಹೀಗೆಲ್ಲ ಇರುವಾಗಲೇ ಕಳೆದೈದು ವರುಷಗಳಿಂದ ಕಾಯುತ್ತಿದ್ದ ದಿವ್ಯಘಳಿಗೆಯೊಂದು ಈ ವರ್ಷ ಬಂದುಬಿಟ್ಟಿದೆ. ಒಂದು ಕಂಪನಿ ಬಿಟ್ಟು ಇನ್ನೊಂದನ್ನು ಸೇರಿಕೊಳ್ಳುವ ಚಿಕ್ಕ ಗ್ಯಾಪ್ನಲ್ಲಿ ಒಂದು ವಾರದ ರಜೆಸಿಕ್ಕಿಬಿಟ್ಟಿದೆ. ಅದೂ ಜುಲೈ ತಿಂಗಳ ಕೊನೆಯ ವಾರದಲ್ಲಿ! ಕಳೆದ ಒಂದೂವರೆ ತಿಂಗಳಿಂದ ಸರಿಯಾಗಿ ಬಾರದೇ ಕಾಡಿದ್ದ ಮುಂಗಾರು ಈಗ ಒಂದುವಾರದ ಹಿಂದಷ್ಟೇ ಮುನಿಸುಬಿಟ್ಟು ಸುರಿಯಲಾರಂಭಿಸಿದೆ. ಯಾವಾಗ ಪೋನ್ ಮಾಡಿದರೂ ಅಮ್ಮ ಹೇಳುವ "ಮಳೆ ಶಬ್ದ ಕಣೋ, ನಿನ್ ಮಾತು ಸರಿಯಾಗಿ ಕೇಳಿಸ್ತಿಲ್ಲ" ಎನ್ನುವ ಮಾತುಗಳು ಮತ್ತಷ್ಟು ಖುಷಿ ಕೊಡುತ್ತವೆ. ಅಲ್ಲದೇ ಕಳೆದ ವಾರ ಊರಿಗೆ ಹೋಗಿಬಂದ ಸುಮಂತ ತೀರ್ಥಹಳ್ಳಿಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯ ಚಿತ್ರಗಳನ್ನು ಕಣ್ಣ ತುಂಬಾ ತುಂಬಿಕೊಂಡು ಬಂದಿದ್ದಾನೆ. ಫೆಸ್ಬುಕ್ಕಿನಲ್ಲಿ ಕುರುವಳ್ಳಿ ಸೇತುವೆಯ ಎದೆಮಟ್ಟಕ್ಕೆ ತುಂಬಿ ಹರಿಯುತ್ತಿರುವ ತುಂಗೆಯ ಫೋಟೋಗಳು ಒಂದರ ಹಿಂದೊಂದರಂತೆ ಅಪ್ಲೋಡಾಗುತ್ತಿವೆ. ಇದೆಲ್ಲದರಿಂದ ಉದ್ವೇಗಗೊಂಡ ಮನಸ್ಸು ತೆಂಗಿನಕಾಯಿ ಕಂಡ ಓತಿಕೇತದಂತೆ ಊರಿನತ್ತ ಓಡತೊಡಗಿದೆ...

ಇದೊಂದು ಶುಭ್ರವಾದ ಭಾನುವಾರ ಹಿಂದೆಂದೂ ಇಲ್ಲದ ಸಂಭ್ರಮದೊಂದಿಗೆ ನನ್ನೆದುರು ತೆರೆದುಕೊಂಡಿದೆ. ಬಸ್ ಸ್ಟಾಂಡಿನತನಕ ಬಂದು ಬೈ ಹೇಳಿದ ಸುಮಂತನಿಗೆ ಕೈ ಬೀಸಿ ಮೆಜಸ್ಟಿಕ್ಕಿನ ಬಸ್ಸೇರಿ ಕುಳಿತಿದ್ದೇನೆ. 

"ಮುಂಜಾವಿನ ಅಭಿಶೇಕಕೆ ಮೃದುವಾಯಿತು ನೆಲವು..."
"ಎಂದೆಂದೂ ಮುಗಿಯದೆ ಇರಲಿ.. ಈ ಪಯಣ ಸಾಗುತಲಿರಲಿ.." 
ಇಯರ್ ಫೋನಿನೊಳಗೆ ಕುಳಿತ ಬಿ.ಆರ್. ಛಾಯಾ, ಹರಿಹರನ್ ಖುಷಿಯಿಂದ ಹಾಡುತ್ತಿದ್ದಾರೆ. 

ಈ ಹಗಲು ಪ್ರಯಾಣವೆಂದರೆ ನನಗೆ ಒಂಥರಾ ಖುಷಿ. ಬೀದಿ ದೀಪಗಳು ಹಲ್ಲುಕಿರಿಯುವ ಹೊತ್ತಿಗೆ ಬಸ್ಸುಹತ್ತಿ, ಸೂರ್ಯ ಹಲ್ಲುಜ್ಜುವ ಹೊತ್ತಿಗೆ ಊರಿಗೆ ಬಂದಿಳಿಯುವ ಕತ್ತಲ ಪ್ರಯಾಣ ನಿಜಕ್ಕೂ ಬೇಸರದಾಯಕ. ಹತ್ತಿದ ಊರಿನಿಂದ ಇಳಿಯುವ ಊರಿನ ತನಕ ಎದಿರಾಗುವ ಹತ್ತಾರು ಗದ್ದೆ, ಬಯಲು, ಕೆರೆ, ಹಳ್ಳಿ, ಪಟ್ಟಣ, ತೋಟಗಳನ್ನೆಲ್ಲಾ ಕಣ್ಕಾಣದ ಕತ್ತಲಿನಲ್ಲೇ ಹಾದುಬರುವ ಈ ರಾತ್ರಿಯಾನದಲ್ಲಿ ನಾವು ಸಾಗಿಬಂದ ದೂರ ನಿಜಕ್ಕೂ ಸೊನ್ನೆ. ಅದಕ್ಕೇ ಒಂದು ವಾರದಷ್ಟು ದೀರ್ಘ ರಜೆ ಸಿಕ್ಕ ಸಂದರ್ಭಗಳಲ್ಲಿ ನಾನು ಹಗಲಿನ ಪ್ರಯಾಣವನ್ನೇ ಆಯ್ದುಕೊಳ್ಳುತ್ತೇನೆ. ಬೆಂಗಳೂರಿನ ಕಟ್ಟಡಮಯ ಹಾದಿ ಕೊನೆಯಾದ ಮೇಲೆ ಒಂದೊಂದಾಗಿ ಎದಿರಾಗುವ ತುಮಕೂರು, ಗುಬ್ಬಿ, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ, ಭದ್ರಾವತಿಗಳನ್ನು ನೋಡುತ್ತಲೇ ಹಗಲು-ಮಧ್ಯಾಹ್ನ-ಸಂಜೆಗಳು ಸವೆಯಬೇಕು. ಇಲ್ಲಿ ತಂತಮ್ಮ ದಿನಚರಿಯಲ್ಲಿ ಮುಳುಗಿಹೋಗಿರುವ ನೂರಾರು ಜನರ ನಡುವೆ ಹಾದುಬರುವಾಗ "ಬದುಕುವುದಕ್ಕೆ ಬೆಂಗಳೂರೊಂದೇ ಕಟ್ಟಕಡೆಯ ಕರ್ಮಭೂಮಿಯಲ್ಲ" ಎನ್ನುವ ದಿವ್ಯ ನೆಮ್ಮದಿಯೊಂದು ಬಲವಾಗುತ್ತಾ ಹೋಗುತ್ತದೆ. ಮುಂದೊಂದು ದಿನ ನಾನೂ ಆ ಕಾಂಕ್ರೀಟ್ ಕಾಡನ್ನು ತೊರೆದು ಇವರಂತೆಯೇ ನನ್ನೂರಿನಲ್ಲಿ ಬದುಕುತ್ತೇನೆನ್ನುವ ಚಂದದ ಹಗಲುಗನಸೊಂದು ರೆಪ್ಪೆಗಳನ್ನಪ್ಪಿ ಚಂದದ ನಿದಿರೆಗೆ ನನ್ನನ್ನು ತಳ್ಳುತ್ತದೆ.

ಇವು ಬೆಂಗಳೂರು-ಶಿವಮೊಗ್ಗ ಹಾದಿಯಲ್ಲಿ ಕಂಡ ಕೆಲ ಚಿತ್ರಗಳು. ನಾನೇನೂ ಭಯಂಕರ ಫೋಟೋಗ್ರಾಫರ್ ಅಲ್ಲದಿರುವುದರಿಂದ, ಗಡಗಡನೆ ನಡುಗುತ್ತಾ ಓಡುವ ಬಸ್ಸಿನಿಂದ ತೆಗೆದವಾಗಿರುವುದರಿಂದ, ನನ್ನ ಮೊಬೈಲ್ನದು ಅಷ್ಟೇನೂ ನುರಿತ ಕ್ಯಾಮರಾ ಅಲ್ಲದಿದ್ದರಿಂದ, ಅದರಲ್ಲಿ ಸಾಕಷ್ಟು ಚಾರ್ಜ್ ಕೂಡಾ ಇಲ್ಲದಿದ್ದರಿಂದ ಇಲ್ಲಿನ ಫೋಟೋಗಳು ಭಾರೀ ಚಂದ ಬಂದಿಲ್ಲವೆನ್ನುವುದನ್ನು ಮೊದಲೇ ಹೇಳಿಬಿಡುತ್ತೇನೆ. ನೋಡಿ, ಹೇಗಿದೆ ಅಂತ ಹೇಳಿ...

1)

ಮುರುಕು ಮರದಾಚೆಗೆ ಕೆಮ್ಮಣ್ಣ ಹೊಲ. ನಡುವಿನ ಹಸಿರು ದಾರಿಯಲ್ಲಿ ಸಾಗಿದರೆ ತುದಿಯಲ್ಲೊಂದು ಬೋಳುಗುಡ್ಡ. ಅದನ್ನು ಹತ್ತಿ ನೋಡಿದರೆ ಈ ಹೊಲ, ಮರ, ಟಾರು ರಸ್ತೆ, ಭರ್ರನೆ ಓಡುತ್ತಿರುವ ನಾನು ಕುಳಿತಿರುವ ಈ ಬಸ್ಸು... ಇವೆಲ್ಲ ಎಷ್ಟು ಚಂದ ಕಾಣಬಹುದು ಅಲ್ವಾ?

2)

ಪೊದೆಗಳ ಹಿಂದಿನ ತೆಂಗಿನ ಮರಗಳು ನೆಟ್ಟಿದ್ದೋ ತಾವಾಗೇ ಹುಟ್ಟಿಕೊಂಡದ್ದೋ ಗೊತ್ತಿಲ್ಲ. ಅದರ ಹಿಂಭಾಗದಲ್ಲಿನ ಗುಡ್ಡದ ಮೇಲಿರುವ ಮನೆಗಳಲ್ಲಿ ವಾಸಿಸುವ ಜನರು ಮಾತ್ರ ಪುಣ್ಯವಂತರೇ ಸರಿ!3)

ಕವಿಯುತ್ತಿರುವ ಕರಿಮೋಡ ಇನ್ನೇನು ಸುರಿಸಲಿರುವ ಮಳೆಯಲ್ಲಿ ನೆನೆಯಲು ತಯಾರಾಗಿ ನಿಂತಿರುವ ಅರೆಬೋಳು ಮರ, ಕೆಮ್ಮಣ್ಣ ನೆಲೆ ಹಾಗೂ ದಿಗಂತದಂಚಿನ ಬೆಟ್ಟ!


4)


ಮೋಡವೇ ನೋಡು ಬಾ.. ವೃಕ್ಷದಾ ನರ್ತನ...!


5)

ಒಂದ್ಸಲನಾದ್ರೂ ಈ ದಾರೀಗುಂಟ ಸೈಕಲ್ ಹೊಡ್ಕಂಡು ಹೋಗ್ಬೇಕು ನೋಡಿ...


6)


ಅದೇ ಬಾನು, ಅದೇ ನೆಲ,
ಅದೇ ಹಳಿ, ಅದೇ ಹೊಲ,
ಈ ಪಯಣ ನೂತನ!


7)

ಮೋಡದ ಎದೆಗೆ ತಿವಿದು ನಿಂತಿರುವ ವಿದ್ಯುತ್ ಸ್ಥಾವರ. ನನ್ನಂತೆಯೆ ಊರಿಗೆ ಹೋಗುವ ಸಡಗರದಲ್ಲಿ ಕುಣಿಯುತ್ತಿರುವ ನೂರಾರು ಮನಸ್ಸುಗಳನ್ನು ಹೊತ್ತು ಬರಲಿರುವ ರೈಲಿಗಾಗಿ ಕಾಯುತ್ತಾ ಮೇಘಗಳ ಚಪ್ಪರಕಟ್ಟಿ ನಿಂತಿರುವ ರೈಲ್ವೇಹಳಿ!

ಮೊಬೈಲ್ನಲ್ಲಿ ಚಾರ್ಜ್ ಇಲ್ಲದಿದ್ದರಿಂದ, ನಾನು ನುರಿತ ಫೋಟೋ ಗ್ರಾಫರ್ ಅಲ್ಲದಿರುವುದರಿಂದ ಹೆಚ್ಚಿನ ಹಾಗೂ ಚಂದದ ಫೋಟೋಗಳನ್ನು ತೆಗೆಯಲಾಗಲಿಲ್ಲ. ಕವಿದ ಮೋಡ, ಬೀಸುತ್ತಿದ್ದ ತಂಗಾಳಿಗಳು "ಮಳೆಬರುವ ಹಾಗಿದೆ..." ಎಂದು ಹಾಡುತ್ತಿದ್ದವಾದರೂ ಬೆಂಗಳೂರಿನಿಂದ ಭದ್ರಾವತಿಯ ತನಕ ಸಣ್ಣ ಕೆಸರಿನ ಪಸೆಯೂ ಕಾಣಲಿಲ್ಲ. ಆದರೆ ಶಿವಮೊಗ್ಗ ಹತ್ತಿರವಾದಂತೆಲ್ಲ ಮಳೆಯ ಕುರುಹುಗಳು ದಟ್ಟವಾಗುತ್ತಾಹೋದವು. ಇಷ್ಟೆಲ್ಲ ಖುಷಿಗಳ ನಡುವೆಯೇ ಮುಂದಿನವಾರ ಇದೇ ದಿನ, ಇದೇ ದಾರಿಯಲ್ಲಿ, ಇಂದಿನ ಖುಷಿಗಿಂತ ದುಪ್ಪಟ್ಟು ಬೇಸರದಲ್ಲಿ, ಇಂದು ಹೋಗುತ್ತಿರುವ ದಿಕ್ಕಿಗೆ ತದ್ವಿರುದ್ಧವಾದ ದಾರಿಯಲ್ಲಿ ಬೆಂಗಳೂರಿನ ಕಡೆಗೆ ಸಾಗುತ್ತಿರುತ್ತೇನೆನ್ನುವುದು ನೆನಪಾಗಿ ಸಣ್ಣಗೆ ಹೊಟ್ಟೆ ತೊಳೆಸಿದಂತಾಗಿದ್ದು ಸುಳ್ಳಲ್ಲ. 

                     **************

ಊರೊಳಗಿನ ಚಿತ್ರಗಳು:ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...