ಭಾನುವಾರ, ಜುಲೈ 23, 2017

ಮೂಡುಗುಡ್ಡೆ ಪ್ರೀಮಿಯರ್ ಲೀಗ್!



ಚಿಕ್ಕವನಿದ್ದಾಗ ನನಗೆ ಕ್ರಿಕೆಟ್ ಎಂದರೆ ಒಂದು ರೀತಿ ಕೋಪ. ಡಿಡಿ1 ರಲ್ಲಿ ಕಡ್ಡಾಯವಾಗಿ ನೇರ ಪ್ರಸಾರವಾಗುತ್ತಿದ್ದ ಭಾರತದ ಪಂದ್ಯಗಳು ವಾರಕ್ಕೆ ಒಮ್ಮೆ ಮಾತ್ರ ಬರುವ ನನ್ನ ಮೆಚ್ಚಿನ ಭಾನುವಾರದ ಸಿನೆಮಾವನ್ನು ನುಂಗಿ ಹಾಕುತ್ತವೆಂಬುದೇ ನನ್ನ ಬೇಸರಕ್ಕೆ ಕಾರಣವಾಗಿತ್ತು. ಆದ್ದರಿಂದಲೇ ಕ್ರಿಕೆಟ್ ಆಟದ ಅಆಇಈಗಳೇ ಗೊತ್ತಿಲ್ಲದ ನನ್ನ ಅಮ್ಮ "ಈ ರಿಪ್ಲೈ, ಅಡ್ವರ್ಟೈಸ್ ಗಳನ್ನ ಮತ್ತೆಮತ್ತೆ ಹಾಕ್ದೇ ಇದ್ದಿದ್ರೆ ಆಟ ಬೇಗ ಮುಗ್ದು ಪಿಚ್ಚರ್ ನೋಡ್ಲಕ್ಕಿತ್ತು" ಎಂದು ವಾದಿಸುವಾಗ ಹೌದೌದು ಎಂದು ತಲೆ ಆಡಿಸುತ್ತಿದ್ದೆ. ಅದರಲ್ಲೂ ಒಂದು ಇನ್ನಿಂಗ್ಸ್ ಮುಗಿದ ನಂತರ ಬರುತ್ತಿದ್ದ 'ಫೋರ್ಥ್ ಅಂಪಾಯರ್' (ಆಗ ಅದಕ್ಕೇನನ್ನುತ್ತಿದ್ದರೋ ನೆನಪಿಲ್ಲ) ಬಂದಾಗಲಂತೂ ಅಮ್ಮನಿಗೆ ಪಿತ್ತ ನೆತ್ತಿಗೇರುತ್ತಿತ್ತು. "ಹಿಂಗೆ ಕೂತ್ಕಂಡು ಕಟ್ಟೆ ಪಂಚಾಯ್ತಿ ಮಾಡೋ ಬದ್ಲು ಬೇಗ ಬೇಗ ಆಡಿ ಮುಗ್ಸಬಾರ್ದಾ" ಎಂದು ಟೀವಿಯಲ್ಲಿ ಪಂದ್ಯದ ಬಗ್ಗೆ ಚರ್ಚಿಸುತ್ತಾ ಕುಳಿತಿರುವ ಕಪಿಲ್ ದೇವ್, ರವಿ ಶಾಸ್ತ್ರಿಗಳನ್ನೆಲ್ಲಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. 

ಏನೂ ಅರ್ಥವಾಗದಿದ್ದರೂ ಕೆಲವೊಮ್ಮೆ ನಾನು ಓದಲೆಂದು ನಮ್ಮನೆಯಲ್ಲಿದ್ದ ಅಕ್ಕನ ಜೊತೆ ಕುಳಿತು ಕ್ರಿಕೆಟ್ ನೋಡುತ್ತಿದ್ದೆ. ಕ್ರಿಕೆಟ್ ನ ಬಗ್ಗೆ ಅಲ್ಪಸ್ವಲ್ಪ ಗೊತ್ತಿದ್ದ ಅಕ್ಕ ಏನೂ ಗೊತ್ತಿಲ್ಲದ ನನಗೆ "ನೋಡಿಲ್ಲಿ, ಹಿಂಗೆ ಹೊಡೆದ್ರೆ ಸಿಕ್ಸ್, ಹಿಂಗೆ ಹೊಡೆದ್ರೆ ಫೋರ್" ಎಂದು ಸದಭಿನಯಪೂರ್ವಕವಾಗಿ ತೋರಿಸುತ್ತಿದ್ದಳು. ಅವಳನ್ನು ಅನುಕರಿಸಲಾಗದ ನಾನು ಪೆಕರನಂತೆ ಕೈಯ್ಯನ್ನು ಹೇಗ್ಹೇಗೋ ಬೀಸಿ "ಹಿಂಗೆ ಹೊಡೆದ್ರೆ?" ಎಂದು ಕೇಳುತ್ತಿದ್ದೆ. ಇದುವರೆಗೆ ಯಾವ ತಂಡದ ಯಾವ ಬ್ಯಾಟ್ಸ್ ಮನ್ ಕೂಡಾ ಹೊಡೆಯದ ಆ ವಿಚಿತ್ರ ಹೊಡೆತವನ್ನು ಕಂಡು ಗಲಿಬಿಲಿಗೊಂಡ ಅವಳು "ಹಂಗೆ ಹೊಡೆದ್ರೆ ಫರ್ಸ್ಟ್ ಬಾಲಿಗೇ ಓಟ್ ಆಗ್ತೀಯ ಅಷ್ಟೇ" ಎಂದು ಗದರುತ್ತಾ ಮತ್ತೊಮ್ಮೆ ಬರಿಗೈಯ್ಯಲ್ಲಿ ಗಾಳಿಗೆ ಸಿಕ್ಸರ್-ಫೋರ್ ಬಾರಿಸಿ ತೋರಿಸುತ್ತಿದ್ದಳು. ಅವಳ ಪರಮವಿಧೆಯ ಗಾಂಪ ಶಿಶ್ಯನಾದ ನಾನು ಆ ಅದ್ಭುತ 'ಶಾಟ್'ಗೆ ಬೆರಗಾಗಿ ತಲೆದೂಗುತ್ತಿದ್ದೆ.

ನಾನು, ನನ್ನ ತಮ್ಮ ಹಾಗೂ ಚಿಕ್ಕಪ್ಪನ ಮಗ- ನಮ್ಮ ಕೇರಿಯಲ್ಲಿದ್ದುದು ಒಟ್ಟು ಮೂವರು ಹುಡುಗರು. ಆಗಿನ್ನೂ ನಮ್ಮ ದೈನಂದಿನ ಆಟಗಳೊಳಗೆ ಕ್ರಿಕೆಟ್ ಪ್ರವೇಶಿಸಿರಲಿಲ್ಲ. ನಮ್ಮ ಮೇಲೆ ಶಕ್ತಿಮಾನ್, ಜೂನಿಯರ್-ಜಿ, ಜೈ ಹನುಮಾನ್ ನಂತಹಾ ಫಿಕ್ಷನ್ ಹಾಗೂ ಪೌರಾಣಿಕ ಧಾರಾವಾಹಿಗಳ ಪ್ರಭಾವ ತುಸು ಹೆಚ್ಚೇ ಇದ್ದುದರಿಂದ ನಾವಾಡುವ ಆಟಗಳಲ್ಲೂ ಸಹಾ ಅವೇ ಇರುತ್ತಿದ್ದವು. ಕೈಗೆ ಸಿಕ್ಕ ದೊಣ್ಣೆ,ಕೋಲು-ಕೊಕ್ರುಗಳನ್ನು ಖಡ್ಗ-ಗದೆಗಳಂತೆ ಹಿಡಿದು ಬಾಯಿಂದ ಠಾಣ್ ಠಾಣ್ ಎನ್ನುವ ಸದ್ದು ಹೊರಡಿಸುತ್ತಾ ಅಂಗಳದಲ್ಲೇ ಭಯಾನಕ ಯುದ್ಧದ ಸನ್ನಿವೇಶವನ್ನು ಸೃಷ್ಟಿಸುತ್ತಿದ್ದೆವು. ನನ್ನ ತಮ್ಮನಂತೂ ಮೋಟುದ್ದದ ಕೋಲನ್ನು ಮಂತ್ರದಂಡದಂತೆ ಬೀಸುತ್ತಾ, ಚಿತ್ರವಿಚಿತ್ರ ಮಂತ್ರಗಳನ್ನು ಪಠಿಸುತ್ತಾ ಎಲ್ಲರನ್ನೂ ಬೆಚ್ಚಿಬೀಳಿಸುತ್ತಿದ್ದ. ಹೀಗಿದ್ದ ನಮ್ಮ 'ಫಿಕ್ಷನ್' ಲೋಕಕ್ಕೆ ಕ್ರಿಕೆಟ್ಟನ್ನು ಪರಿಚಯಿಸಿದವರು ಪಕ್ಕದ ಮನೆಯಲ್ಲೇ ಇದ್ದ ನಮ್ಮ ಅಣ್ಣ (ದೊಡ್ಡಪ್ಪನ ಮಗ). ದೂರದೂರಿನಲ್ಲಿದ್ದ ತಮ್ಮ ಅಂಗಡಿಯನ್ನು ಮುಚ್ಚಿ ಮನೆಯಲ್ಲೇ ಇರಲಾರಂಭಿಸಿದ ಅವರು ಕಾಗೆ-ಗುಬ್ಬಿ ಆಟ ಆಡುತ್ತಿದ್ದ ನಮ್ಮ ಕೈಗೆ ಮೊದಲ ಬಾರಿಗೆ ಚೆಂಡು-ದಾಂಡು ಕೊಟ್ಟರು.

ಕೊಟ್ಟಿದ್ದನ್ನು ಶಿಸ್ತಾಗಿ ತೆಗೆದುಕೊಂಡಿದ್ದೇನೋ ಹೌದು, ಆದರೆ ಆಡಲು ಬರಬೇಕಲ್ಲ? ಬ್ಯಾಟನ್ನು ಗದೆಯಂತೆಯೂ, ಬಾಲನ್ನು ಬಾಂಬಂತೆಯೂ ಬೀಸುತ್ತಾ ಕ್ರಿಕೆಟ್ಟನ್ನೂ ಪೌರಾಣಿಕ-ಫಿಕ್ಷನ್ ಮಿಶ್ರಿತ ಹೈಬ್ರೀಡ್ ಯುದ್ಧದಂತೆ ಆಡುತ್ತಿರುವ ನಮ್ಮ ಶೈಲಿ ನೋಡಿ ಅಕ್ಷರಷಃ ಬೆಚ್ಚಿಬಿದ್ದ ಅಣ್ಣ ಕೊನೆಗೆ ಸ್ವತಃ ತಾವೇ ಅಂಗಳಕ್ಕಿಳಿದರು. ನಮಗೆ ಕಲಿಸುತ್ತಾ, ತಾವೂ ಆಡುತ್ತಾ ಕ್ರಿಕೆಟ್ ಎನ್ನುವ ಎಂದೂ ವಾಸಿಯಾಗದ ಹುಚ್ಚನ್ನು ನಮ್ಮ ತಲೆಯೊಳಕ್ಕೆ ತುಂಬಿದರು. ನೂರುಕೋಟಿ ಭಾರತೀಯರ ಉಸಿರಾಟವಾಗಿರುವ, ಆಡಿದಷ್ಟೂ ಆಡಬೇಕೆನಿಸುವ ಈ ಆಟ ನಮಗೆ ಇನ್ನಿಲ್ಲದಷ್ಟು ಇಷ್ಟವಾಗಿಹೋಯಿತು. ಶನಿವಾರ ಮಧ್ಯಾಹ್ನವಾದರೆ ಸಾಕು, ಯಾವ ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ ಕಡಿಮೆಯಿಲ್ಲದ ಸಂಭ್ರಮವೊಂದು ನಮ್ಮನೆಯ ಅಂಗಳದಲ್ಲಿ ಜಮಾಯಿಸುತ್ತಿತ್ತು. ಆದರೆ ಇಲ್ಲಿ ನಮ್ಮ ಆಟಕ್ಕೆ ಹತ್ತಾರು ಅಡೆತಡೆಗಳು. ನಮ್ಮನೆ ಇರುವುದು ಗುಡ್ಡದ ಇಳಿಜಾರಿನ ನಡುವೆಯಾಗಿರುವುದರಿಂದ ಸುತ್ತಲೂ ಆಳವಾದ ತಗ್ಗು-ಹೊಂಡಗಳಿವೆ. ಸಾಲದ್ದಕ್ಕೆ ಈ ಹೊಂಡ-ತಗ್ಗುಗಳ ತುಂಬಾ ತರಹೇವಾರಿ ಗಿಡ,ಗಂಟಿ, ಪೊದೆಗಳು ಒತ್ತಾಗಿ ಬೆಳೆದು ಅಲ್ಲೆಲ್ಲೂ ಕಾಲಿಡದಂತಾಗಿದೆ. ನೇರವಾಗಿ ಅಥವಾ ಬಲಭಾಗದಲ್ಲಿ ಸ್ವಲ್ಪ ಜೋರಾಗಿ ಹೊಡೆದರೂ ಚೆಂಡು ಛಂಗನೆ ಹಾರಿ ಈ ಆಳಹೊಂಡದ ಪೊದೆಗಳ ನಡುವೆಲ್ಲೋ ಮರೆಯಾಗಿ, ಆಡಿದ್ದಕ್ಕಿಂತಲೂ ಹೆಚ್ಚಿನ ಸಮಯ ಚೆಂಡು ಹುಡುಕಲಿಕ್ಕೇ ವ್ಯಯವಾಗುತ್ತಿತ್ತು. ಬಹುಷಃ ಬೇರೆಲ್ಲಾದರೂ ಇಷ್ಟು ಹುಡುಕಿದ್ದರೆ ಭಾರೀ ಖಜಾನೆಯೇ ಸಿಗುತ್ತಿತ್ತೋ ಏನೋ, ಚೆಂಡು ಮಾತ್ರ ಸಿಗುತ್ತಿರಲಿಲ್ಲ. ಹುಡುಕುವ ಕಣ್ಣಿಗೆ ಹಳದಿ ಬಣ್ಣದ ವಸ್ತುಗಳೆಲ್ಲವೂ ಬಾಲ್ ನಂತೆಯೇ ಕಂಡು ದಾರಿ ತಪ್ಪಿಸುತ್ತಿದ್ದವು. ಇದು ಸಾಯಲಿ ಎಂದು ಎಡಕ್ಕೇನಾದರೂ ಹೊಡೆದರೆ ಮುಗಿದೇ ಹೋಯಿತು. ಚೆಂಡು ಮನೆಗೆ ತಗುಲಿ, ಮಣ್ಣಿನ ಗೋಡೆಯಿಂದ ಮಣ್ಣು ಧಸಾಲ್ಲನೆ ಉದುರಿ, ಒಳಗಿದ್ದ ಅಪ್ಪನಿಗೆ ಪಿತ್ತ ಕೆದರಿ, ನಾವು ಹುಗಿದ ವಿಕೆಟನ್ನೇ ಕಿತ್ತು ನಮಗೆ ನಾಲ್ಕು ಬಿಗಿಯುವುದರಲ್ಲಿ ಅನುಮಾನವೇ ಇರಲಿಲ್ಲ.

ಆ ದಿನಗಳಲ್ಲಿ ನೂರಿನ್ನೂರು ರೂಪಾಯಿ ಬೆಲೆ ಬಾಳುತ್ತಿದ್ದ ಹೊಸ ಬ್ಯಾಟು ಬೇಕೆಂದೇನಾದರೂ ಕೇಳಿದ್ದೇ ಆದರೆ ಅಪ್ಪ ಕೋಪದಲ್ಲಿ 'ಮಾಸ್ಟರ್-ಬ್ಲಾಸ್ಟರ್' ಆಗಿಬಿಡುವ ಅಪಾಯವಿದ್ದುದರಿಂದ ನಾವು ಆ 'ರಿಸ್ಕ್' ತೆಗೆದುಕೊಂಡಿರಲಿಲ್ಲ. ಯಥೇಚ್ಚವಾಗಿ ಬಿದ್ದಿರುತ್ತಿದ್ದ ತೆಂಗಿನ ಗರಿಗಳಲ್ಲಿ ಒಳ್ಳೆಯದೊಂದನ್ನು ಆಯ್ದು, ಅದರ ತಲೆಯನ್ನು ಅಗತ್ಯಕ್ಕೆ ತಕ್ಕಂತೆ ಕೊಯ್ದು, ಬುಡವನ್ನು ಹಿಡಿಕೆಯಂತೆ ಚಿಕ್ಕದಾಗಿ ಕತ್ತರಿಸಿ, ಮಧ್ಯದಲ್ಲಿ 'MRF' ಎಂದು ದೊಡ್ಡಕ್ಷರಗಳಲ್ಲಿ ಕೆತ್ತಿ ನಮ್ಮದೇ ಆದ ಬ್ಯಾಟನ್ನು ಸಿದ್ಧಪಡಿಸಿಕೊಂಡಿದ್ದೆವು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ನನ್ನ ಗೆಳೆಯನೊಬ್ಬ ಅಡಿಕೆ ಮರದ ಹಾಳೆಯನ್ನೇ ಕತ್ತರಿಸಿ 'ಪ್ಯಾಡ್' ನಂತೆ ಕೈ-ಕಾಲುಗಳಿಗೆ ಕಟ್ಟಿಕೊಂಡು ಯಾವ ತೆಂಡೂಲ್ಕರ್ ಗೂ ಕಮ್ಮಿ ಇಲ್ಲದಂತೆ ಸರ್ವಸನ್ನದ್ಧನಾಗಿ ತನ್ನ ಆರು ವರ್ಷದ ತಂಗಿಯ ಜೊತೆ ಆಡಲು ಅಂಗಳಕ್ಕಿಳಿಯುತ್ತಿದ್ದ! 

ವಯಸ್ಸಿನಲ್ಲಿ ನನಗಿಂತ ಚಿಕ್ಕವರಾದ ತಮ್ಮಂದಿರನ್ನು ಜೊತೆಗೂಡಿಸಿಕೊಂಡು ಆಟವನ್ನು ಪೂರ್ಣಗೊಳಿಸುವುದು ನನ್ನ ಪಾಲಿಗೆ ದೊಡ್ಡ ಸವಾಲಾಗಿತ್ತು. ಸದಾ ತಾವೇ ಬ್ಯಾಟಿಂಗ್ ಮಾಡಬೇಕು ಹಾಗೂ ತಾವೇ ಗೆಲ್ಲಬೇಕು ಎಂದು ಹಟ ಮಾಡುತ್ತಿದ್ದ ಅವರಿಬ್ಬರೂ ಅದು ಸಾಧ್ಯವಾಗದೇ ಹೋದಾಗ ರಗಳೆ ತೆಗೆಯುತ್ತಿದ್ದರು. ಎಷ್ಟೋ ಸಲ ಕ್ರಿಕೆಟ್ ನಲ್ಲಿ ಆರಂಭವಾದ ಆಟ ಮಲ್ಲಯುದ್ಧ-ಮುಷ್ಠಿಯುದ್ಧಗಳಲ್ಲಿ ಅಂತ್ಯವಾಗುತ್ತಿತ್ತು. ಕೊನೆಗೆ ಈ ಹೊಡೆದಾಟವನ್ನು ತಡೆಯಲು ನಾವು ಅದ್ಭುತ ಉಪಾಯವೊಂದನ್ನು ಕಂಡುಕೊಂಡೆವು. ಅದೇನೆಂದರೆ ನಾವು ನಮ್ಮದೇ ಹೆಸರಿನಲ್ಲಿ ಆಡುವ ಬದಲು ಅಂತರಾಷ್ಟ್ರೀಯ ಆಟಗಾರರ ಹೆಸರಿನಲ್ಲಿ ಆಡುವುದು! ಒಮ್ಮೆ 'ಸಚಿನ್' ಆಗಿ ಔಟಾದ ನನ್ನ ತಮ್ಮ ಸ್ವಲ್ಪ ದೂರ ನಡೆದುಹೋಗಿ 'ಸೆಹ್ವಾಗ್' ಆಗಿ ಮರಳಿಬರುತ್ತಿದ್ದ. ನಾನ್ ಸ್ಟ್ರೈಕರ್ ನಲ್ಲಿರುವ ನನ್ನ ಚಿಕ್ಕಪ್ಪನ ಮಗ ದ್ರಾವಿಡ್ ಆದರೆ ಇವರಿಬ್ಬರಿಗೂ ಬೌಲಿಂಗ್ ಮಾಡುತ್ತಿರುವ ನಾನು ಜಹೀರ್ ಖಾನ್! ಹೀಗೆ ಕೋಟಿಕೋಟಿ ಬೆಲೆಬಾಳುವ ಆಟಗಾರರೆಲ್ಲಾ ನಮ್ಮ ಮುರುಕು ಮನೆಯಂಗಳದಲ್ಲಿ ತೆಂಗಿನ ಗರಿಯ ಬ್ಯಾಟ್ ಹಿಡಿದು ಬಿಟ್ಟಿಯಾಗಿ ಆಡಿ ಔಟಾಗುವ 'ಅದ್ಭುತ'ವನ್ನು ನೋಡಿ ನಮಗೆ ಕ್ರಿಕೆಟ್ ಕಲಿಸಿದ್ದ ನಮ್ಮಣ್ಣ ತಲೆತಲೆ ಚಚ್ಚಿಕೊಳ್ಳುತ್ತಿದ್ದರು.

ಆಗಷ್ಟೇ ಶುರುವಾಗಿದ್ದ ಐಪಿಎಲ್ ನಿಂದ ಪ್ರಭಾವಿತರಾದ ನಾವು 'ಎಂಪಿಎಲ್' (ಮೂಡುಗುಡ್ಡೆ ಪ್ರೀಮಿಯರ್ ಲೀಗ್!) ಎನ್ನುವ ಹೊಸ ಪಂದ್ಯಾವಳಿಯನ್ನೇ ಆರಂಭಿಸಿಬಿಟ್ಟೆವು. ಕೇವಲ ವಿದೇಶೀ ಆಟಗಾರರು ಮಾತ್ರವಲ್ಲದೆ ಎಷ್ಟೋ ವರ್ಷಗಳ ಕೆಳಗೆ ರಿಟೈರ್ಡ್ ಆಗಿರುವ ಆಟಗಾರರೂ ನಮ್ಮೀ ಪಂದ್ಯಾವಳಿಯಲ್ಲಿ ಬಿಡ್ ಆಗಿದ್ದರು. (ಒಮ್ಮೆಯಂತೂ ನನ್ನ ತಮ್ಮಂದಿರೇ ಕಟ್ಟಿದ ತಂಡವೊಂದರಲ್ಲಿ ಎರೆಡು ಮೂರು ಜನ ಡಬ್ಲ್ಯೂ.ಡಬ್ಲ್ಯೂ.ಇ. 'ಹೊಡೆದಾಟ'ಗಾರರೂ ಸೇರಿಕೊಂಡುಬಿಟ್ಟಿದ್ದರು! ಹೇಗಿದ್ದರೂ ಆಟದ ಕೊನೆಯಲ್ಲಿ ಬಡಿದಾಡಲಿಕ್ಕೆ ಬೇಕಾಗುತ್ತಾರೆಂದು ನಾನೂ ಸುಮ್ಮನಿದ್ದೆ.) ಒಮ್ಮೆ ಹೀಗೇ 'ಗಂಗೂಲಿ ಹೋದ್ನಂತೆ, ಗಿಲ್ ಕ್ರಿಸ್ಟ್ ಬಂದ್ನಂತೆ' ಎಂದು ಗಟ್ಟಿಯಾಗಿ ಮಾತನಾಡುತ್ತಾ ಆಡುತ್ತಿದ್ದಾಗ ಅಲ್ಲೇ ಇದ್ದ ಅಣ್ಣ "ಯಾರ್ಯಾರನ್ನೋ ಕರ್ಸ್ತೀರಲ್ಲಾ, ಹಂಗೇ ನಮ್ಮ ಕೊನೆ ತೆಗೆಯೋ ಮಂಜನನ್ನೂ ಕರ್ಸ್ರೋ ಮಾರಾಯಾ. ಅಡಿಕೆ ಕೊನೆ ಎಲ್ಲಾ ಹಣ್ಣಾಗಿದೆ" ಎಂದಾಗ ಕೆಲಸದಾಳುಗಳೆಲ್ಲ ಗೊಳ್ಳನೆ ನಕ್ಕಿದ್ದರು.

ಪಂದ್ಯದ ಪ್ರತೀ ಬಾಲಿನ ಸ್ಕೋರ್ ಮಾತ್ರವಲ್ಲದೇ, ನಂತರ ಆ ಪಂದ್ಯದ ಕುರಿತಾಗಿ ಪತ್ರಿಕೆಯಲ್ಲಿ ಬರುವ ವರದಿಯನ್ನೂ ಸಹಾ ಬರೆಯುತ್ತಿದ್ದೆವು. ಒರಿಜಿನಲ್ ಐಪಿಎಲ್ ನಂತೆ ಇಲ್ಲಿಯೂ ಸಹಾ ವಿವಾದಗಳಿಗೇನೂ ಕೊರತೆಯಿರಲಿಲ್ಲ. ತಮ್ಮ ಇಷ್ಟದ ಆಟಗಾರನ ಹೆಸರು ಬಂದಾಗ ತುಂಬಾ ಚೆನ್ನಾಗಿ ಆಡುತ್ತಿದ್ದ ನನ್ನ ತಮ್ಮಂದಿರು, ತಮಗೆ ಇಷ್ಟವಿಲ್ಲದವನು ಬಂದಾಗ ಬೇಕೆಂದೇ ಔಟಾಗುತ್ತಿದ್ದರು. ನೈಜ ಕ್ರಿಕೆಟ್ನಲ್ಲಿ ಭಾರತದ ವಿರುದ್ಧ ಸದಾ ಹೆಚ್ಚೆಚ್ಚು ರನ್ ಗಳಿಸುತ್ತಾ ನಮ್ಮ ಕೋಪಕ್ಕೆ ಗುರಿಯಗಿದ್ದ ರಿಕಿ ಪಾಂಟಿಂಗ್ ನಂತಹಾ ಆಟಗಾರರು ನಮ್ಮ ಆಟದಲ್ಲಿ ಒಂದೂ ರನ್ ಹೊಡೆಯದೇ ತಮಗೆ ತಾವೇ ವಿಕೆಟ್ ಗೆ ಹೊಡೆದುಕೊಂಡು 'ಹಿಟ್ ವಿಕೆಟ್' ಆಗಿಬಿಡುತ್ತಿದ್ದರು! ಇದನ್ನು ಸಮರ್ಥಿಸಿಕೊಳ್ಳುವುದಕ್ಕೆ 'ಇಂಟರ್ನ್ಯಾಷನಲ್ ಮ್ಯಾಚ್ ಗಳೂ ಹೀಗೇ ಆಗೋದು' ಎನ್ನುವ ಹೊಸ ವಾದವನ್ನೇ ಸೃಷ್ಟಿಸಿದ್ದೆವು!

ನಮ್ಮ ಕ್ರಿಕೆಟ್ ಗಿದ್ದ ಅತಿದೊಡ್ಡ ವಿರೋಧಿಯೆಂದರೆ ನಮ್ಮ ದೊಡ್ಡಪ್ಪ. ಸದಾ ಏನಾದರೊಂದು ಉಪಯೋಗಕಾರಿ ಕೆಲಸ ಮಾಡುತ್ತಲೇ ಇರುತ್ತಿದ್ದ ಅವರ ಕಣ್ಣಿಗೆ ಈ ಕ್ರಿಕೆಟ್ ಎನ್ನುವುದು ಜಗತ್ತಿನ ಅತ್ಯಂತ ನಿರುಪಯುಕ್ತ ಚಟುವಟಿಕೆಯಂತೆ ಕಾಣುತ್ತಿತ್ತು. ಇತ್ತಕಡೆ ನಮ್ಮ ಅಟ ಶುರುವಾಗುತ್ತಿದ್ದಂತೆಯೇ ಅತ್ತಕಡೆ ಅವರ ಗೊಣಗಾಟದ ಕಾಮೆಂಟ್ರಿ ಶುರುವಾಗುತ್ತಿತ್ತು. ಒಂದು ಮಧ್ಯಾಹ್ನ ಎಂದಿನಂತೆ ನಮ್ಮ ಎಂಪಿಎಲ್ ಶುರುವಾಗಿತ್ತು. ದೊಡ್ಡಪ್ಪ ಮಲಗಿದ್ದಾರೆಂಬ ಧೈರ್ಯದಲ್ಲಿ ಟಾಸ್ ಹಾರಿಸಿ ಮೊದಲು ಬ್ಯಾಟಿಂಗ್ ಮಾಡುವ ತಂಡದ ಪರವಾಗಿ ಆಗಷ್ಟೇ ಆಟ ಆರಂಭಿಸಿದ್ದೆವು. ಅದೆಲ್ಲಿದ್ದರೋ ಗೊತ್ತಿಲ್ಲ, "ಮತ್ತೆ ಶುರುವಾಯ್ತಾ ನಿಮ್ ಗಲಾಟೆ?" ಎಂದು ಸೈಲೆನ್ಸರ್ ಅಳವಡಿಸಿರುವ ಗುಡುಗಿನಂತೆ ಗುಡುಗುತ್ತಾ ಅಂಗಳದಲ್ಲಿ ಪ್ರತ್ಯಕ್ಷವಾಗಿಯೇಬಿಟ್ಟರು. ನಾವು ಆಟ ನಿಲ್ಲಿಸಲಿಲ್ಲವಾದರೂ ಚೆಂಡು ಅವರ ಮನೆಯಂಗಳಕ್ಕೆ ಹೋಗದಂತೆ ನಿಧಾನವಾಗಿ ಆಡತೊಡಗಿದೆವು. ಪರಿಣಾಮವಾಗಿ ಮೊದಲು ಬ್ಯಾಟ್ ಮಾಡಿದ ತಂಡ 20 ಓವರ್ ಗಳಲ್ಲಿ ಕೇವಲ 99 ರನ್ ಗಳನ್ನಷ್ಟೇ ಗಳಿಸುವಂತಾಯಿತು. ಆದರೆ ಇನ್ನೊಂದು ತಂಡದ ಬ್ಯಾಟಿಂಗ್ ಮಾಡುವಾಗ ದೊಡ್ಡಪ್ಪ ಮನೆಯಲ್ಲಿರಲಿಲ್ಲವಾದ್ದರಿಂದ ಬಿಡುಬೀಸಾಗಿ ಬ್ಯಾಟ್ ಬೀಸಿ ಆ ಚಿಕ್ಕ ಮೊತ್ತವನ್ನು ಸುಲಭದಲ್ಲಿ 'ಚೇಸ್' ಮಾಡಲಾಯಿತು. ಪಂದ್ಯದ ಕೊನೆಗೆ 'ಮ್ಯಾನ್ ಆಫ್ ದಿ ಮ್ಯಾಚ್' ಕೊಡಬೇಕಲ್ಲಾ? ಮೊದಲ ಇನ್ನಿಂಗ್ಸ್ ಆಡುವಾಗ ನಮ್ಮನ್ನೆಲ್ಲಾ ಹೆದರಿಸಿ, ಚಿಕ್ಕ ಮೊತ್ತಕ್ಕೆ ಕಟ್ಟಿಹಾಕಲು ಪ್ರತ್ಯಕ್ಷ ಹಾಗೂ ಪರೊಕ್ಷ ಕಾರಣವಾಗಿದ್ದ ದೊಡ್ಡಪ್ಪನನ್ನೇ 'ಪಂದ್ಯ ಪುರುಷ' ಎಂದು ಒಮ್ಮತದಿಂದ ಘೋಷಿಸಲಾಯಿತು. 'ಮ್ಯಾನ್ ಆಫ್ ದಿ ಮ್ಯಾಚ್: ರಂಗಣ್ಣ ದೊಡ್ಡಪ್ಪ' ಎಂದು ಬರೆದುಕೊಂಡಿರುವ ಆ ಪುಸ್ತಕ ಹಳೆಯ ಟ್ರಂಕ್ ಒಂದರ ಮೂಲೆಯಲ್ಲಿ ಇಂದಿಗೂ ಹಾಗೇ ಇದೆ. ಗದರುತ್ತಿದ್ದ ದೊಡ್ಡಪ್ಪ ಮಾತ್ರ ಶಾಶ್ವತವಾಗಿ ಮಾತು ನಿಲ್ಲಿಸಿಬಿಟ್ಟಿದ್ದಾರೆ.

                        ****************

ಊರಿನಲ್ಲಿ, ಖಾಲಿ ಅಂಗಳ-ಬಯಲುಗಳಲ್ಲಿ ಕ್ರಿಕೆಟ್ ಆಡುವುದು ಒಂದು ಕಥೆಯಾದರೆ ಬೆಂಗಳೂರಿನಂತಹಾ ನಗರಗಳ ತುಂಬಿ ತುಳುಕುವ ಮೈದಾನಗಳಲ್ಲಿ ಆಡುವವರದು ಇನ್ನೊಂದು ಕಥೆ. ಇಲ್ಲಿ ಒಂದು ಮೈದಾನದಲ್ಲಿ ಏನಿಲ್ಲವೆಂದರೂ ಹದಿನೈದರಿಂದ ಇಪ್ಪತ್ತು ತಂಡಗಳು ಒಟ್ಟಿಗೇ ಕ್ರಿಕೆಟ್ ಆಡುತ್ತಿರುತ್ತವೆ. ಒಬ್ಬರ ಪಿಚ್ ಕೊನೆಯಾದ ಸ್ವಲ್ಪ ಅಂತರದಲ್ಲೇ ಇನ್ನೊಬ್ಬರದು ಆರಂಭವಾಗಿರುತ್ತದೆ. ಈ ಇಬ್ಬರ ಮಧ್ಯದ ಚಿಕ್ಕ ಗ್ಯಾಪ್ನಲ್ಲೇ ಪ್ಲಾಸ್ಟಿಕ್ ಬ್ಯಾಟು ಬಾಲು ಹಿಡದ ನಾಲ್ಕಾರು ಚಿಲ್ಟಾರಿಗಳ 'ಅಂಡರ್ ನೈಂಟೀನ್' ಮ್ಯಾಚ್ ನಡೆದಿರುತ್ತದೆ! ಆ ಕಡೆಯಿಂದೊಬ್ಬ ಬೌಲಿಂಗ್ ಮಾಡಲು ಓಡಿಬಂದರೆ ಇತ್ತಲಿಂದ ಇನ್ನೊಬ್ಬ ರನ್ ಗಳಿಸಲು ಓಡಿಹೋಗುತ್ತಾನೆ. ಇಬ್ಬರ ಮಧ್ಯದಲ್ಲಿ ಫೀಲ್ಡಿಂಗ್ ಮಾಡುವನೊಬ್ಬ ಅದೆಲ್ಲಿಂದಲೋ ನುಗ್ಗಿಬಂದು ಧಸಾಲ್ಲನೆ ಬೀಳುತ್ತಾನೆ. ಯಾರನ್ನು ಎತ್ತಬೇಕೋ, ಯಾರನ್ನು ಔಟ್ ಮಾಡಬೇಕೋ, ಯಾರಿಗೆ ಚೆಂಡು ಮರಳಿಸಬೇಕೋ... ಸಾಕ್ಷಾತ್ ದೇವರೇ ಬಂದರೂ ಕನ್ಫ್ಯೂಸ್ ಆಗುವುದರಲ್ಲಿ ಸಂಶಯವಿಲ್ಲ. ಇನ್ನು ಈ ಗೊಂದಲವೇ ಬೇಡವೆಂದು ಬೌಂಡರಿ ಕಾಯಲು ಸೀಮಾರೇಖೆಯ ಬಳಿ ನಿಂತು ಮೇಲೆ ನೋಡಿದರೆ ಒಂದೇ ಸಲಕ್ಕೆ ನಾಲ್ಕು ಚೆಂಡುಗಳು ಸಂಸಾರ ಸಮೇತ ಗಾಳಿಯಲ್ಲಿ ಹಾರಿಬರುತ್ತವೆ! ಅತ್ತಲಿಂದ ಯಾರೋ 'ಬಾಲ್ss.. ಬಾಲ್ss..' ಎಂದು ಕಿರುಚಿಕೊಳ್ಳುತ್ತಾರೆ. 'ಅಂಚಿ, ಪಿಂಚಿ, ಚಾವಲ ಚುಂಚಿ..' ಎಂದು ಕವಡೆ ಶಾಸ್ತ್ರ ಬಳಸಿ ಯಾವುದೋ ಒಂದು ಚೆಂಡನ್ನು ಕೊನೆಗೂ ಹಿಡಿದು, ಎದುರಾಳಿಯನ್ನು ಔಟ್ ಮಾಡಿದ ಸಂಭ್ರಮದಲ್ಲಿ 'ಹೀ ಯಾ.. ಹೂssss' ಎಂದು ಸಂಭ್ರಮಿಸವಾಗ ನಮ್ಮ ತಂಡದ ಆಟಗಾರರೆಲ್ಲ ಕೆಂಗಣ್ಣು ಬೀರುತ್ತಾ ನಿಂತಿರುತ್ತಾರೆ. ಏಕೆಂದು ತಿರುಗಿ ನೋಡಿದರೆ ನಾವು ನಿಜವಾಗಿ ಹಿಡಿಯಬೇಕಿದ್ದ ಚೆಂಡು ಬೌಂಡರಿ ಗೆರೆ ದಾಟಿ ಮೈದಾನದಾಚೆಗಿನ ಮೋರಿಯತ್ತ ಓಡುತ್ತಿರುತ್ತದೆ!

                        ****************

ವಯಸ್ಸು ಹೆಚ್ಚಿದಂತೆಲ್ಲ ಮೈದಾನ ದೂರವಾಗಿ ಆಸ್ಪತ್ರೆ ಹತ್ತಿರವಾಗುತ್ತಿದೆ. ಕ್ರಿಕೆಟ್ ಆಡುತ್ತಿದ್ದಾಗ ಒಳಗೆಲ್ಲೋ ಇದ್ದ ಹೊಟ್ಟೆ ಈಗ ಆಟವೆನ್ನುವುದು ಬರೀ ಟೀವಿಯಲ್ಲಿ ನೋಡುವ ಸರಕಾಗಿರುವುದರಿಂದ ಹೊರಬಂದು ಮತ್ತೆ ಸರಾಗವಾಗಿ ಕ್ರಿಕೆಟ್ ಆಡಲಾಗದಂತೆ ಮಾಡಿದೆ. ಅಲ್ಲದೇ ಉತ್ಸಾಹದಿಂದ ಪಂದ್ಯಗಳನ್ನೂ, ಪಂದ್ಯಾವಳಿಗಳನ್ನೂ ಆಯೋಜಿಸುತ್ತಿದ್ದ ಗೆಳೆಯರಿಂದು ಮನೆ, ಮಕ್ಕಳು, ಸಂಸಾರ ಎಂದು ಬಿಡುವಿಲ್ಲದಾಗಿದ್ದಾರೆ. ಅಲ್ಲಿ ಊರಿನಲ್ಲೂ ಅಮ್ಮ ಸಗಣಿನೀರು ಬಳಿದ ಅಂಗಳದಲ್ಲೀಗ ಆಡಿ ಧೂಳೆಬ್ಬಿಸುವ ಮಕ್ಕಳ ಕಲರವವಿಲ್ಲ. ಹತ್ತಾರು ಚೆಂಡುಗಳ ಬಚ್ಚಿಟ್ಟುಕೊಂಡು ಕಾಡಿಸುತ್ತಿದ್ದ ಪೊದೆಯಿಂದಾವೃತವಾದ ಹೊಂಡವಿಂದು ಹುಡುಕಲು ಬರುವ ಹುಡುಗರಿಲ್ಲದೇ ಹಾಳು ಬಿದ್ದಿದೆ.
ತಮ್ಮೊಡಲ ತುಂಬಾ ಹತ್ತಾರು ಸ್ಕೋರ್ ಹೆಸರಿನ ಸವಿಸವಿ ನೆನಪುಗಳನ್ನು ಬರೆದುಕೊಂಡಿರುವ ಪುಸ್ತಕಗಳು ಪೆಟ್ಟಿಗೆಯಲ್ಲಿ ಬೆಚ್ಚಗೆ ಕುಳಿತುಬಿಟ್ಟಿವೆ. ಊರಿಗೆ ಹೋದ ರಜೆಯ ಸಂಜೆಯೊಂದರಲ್ಲಿ ನಿಂತು ನೋಡುವಾಗ ಖಾಲೀ ಹೊಡೆಯುತ್ತಿರುವ ಅಂಗಳ ಮುಂದೆಂದೋ ಸಚಿನ್, ದ್ರಾವಿಡ್ ಗಳಾಗಿ ಮತ್ತೆ ಆಡಲು ಬರಲಿರುವ ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ಕಾಯುತ್ತಿರುವಂತೆ ಭಾಸವಾಗುತ್ತದೆ. 

ನಾನು ಹೀಗೆಲ್ಲಾ ಯೋಚಿಸುತ್ತಾ ನಿಂತಿರುವಾಗಲೇ ಅಂದು ನಮಗೆ ಕ್ರಿಕೆಟ್ ಕಲಿಸಿದ್ದ ಅಣ್ಣನ ಹತ್ತು ವರ್ಷದ ಮಗ "ಅಣ್ಣಾ.." ಎನ್ನುತ್ತಾ ನನ್ನತ್ತ ಓಡಿಬರುತ್ತಾನೆ. ಅವನ ಕೈಯ್ಯಲ್ಲಿ ಮತ್ತದೇ ಮೋಟುದ್ದದ ಬ್ಯಾಟು, ಟೆನ್ನಿಸ್ ಬಾಲು! ನೋಡುತ್ತಾ ನಿಂತ ನನ್ನ ಕೈಗೆ ಚೆಂಡು ಕೊಡುತ್ತಾ ಹೇಳುತ್ತಾನೆ:

"ಕ್ರಿಕೆತ್ ಆಡಣ ಕಣಾ... ನಾನು ವಿರಾಟ್ ಕೋಹ್ಲಿ, ನೀನು ಭುವನೇಶ್ವರ್ ಕುಮಾರ್!"

('ವಿಶ್ವವಾಣಿ'ಯ 23.7.2017ರ 'ವಿರಾಮ' ಸಾಪ್ತಾಹಿಕದಲ್ಲಿ ಪ್ರಕಟಿತ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...