ಬುಧವಾರ, ಜುಲೈ 5, 2017

ಸಮಯ ಅದೆಷ್ಟು ಸುಂದರವಾಗಿ ಹಿಂದಿರುಗಿ ಬರುತ್ತೆ ಅಲ್ವಾ?


ಮಧ್ಯಾಹ್ನ ಹನ್ನೆರೆಡರ ಸಮಯ. ಶ್ರೀನಿವಾಸನಗರದ ಆ ಮನೆಯಲ್ಲಿ ನೆನಪೊಂದು ಚಿಪ್ಪೊಡೆಯಲು ತಯಾರಾಗಿ ನನ್ನೆದುರು ಕುಳಿತಿತ್ತು. ನಾನು ತುಟಿಬಿಚ್ಚದೇ ನೋಡುತ್ತಿದ್ದೆ. 

"ನಾನು ನೈಟ್ ಡ್ಯೂಟಿ ಮುಗಿಸಿ ಆಗಷ್ಟೇ ರೂಮಿಗೆ ಬಂದಿದ್ದೆ" 
ಅವನು ಕೊನೆಗೂ ಮೌನ ಮುರಿದ.

"ಅಂದೇಕೋ ಎಂದೂ ಇಲ್ಲದ ಹಸಿವು. ನಿದ್ರೆ ಹತ್ತಲಿಲ್ಲ. ಬಲವಂತವಾಗಿ ಕಣ್ಮುಚ್ಚಿ ನಿದ್ರಿಸುವ ಪ್ರಯತ್ನದಲ್ಲಿದ್ದೆ. ಆಗಲೇ ರಾಜಾಜೀನಗರದ ಚಿಕ್ಕಮ್ಮನ ಮನೆಯಿಂದ ಕಾಲ್ ಬಂದಿದ್ದು. "ಈಗಲೇ ಹೊರಟು ಬಾ. ಅಪ್ಪಂಗೆ ಹುಷಾರಿಲ್ವಂತೆ" ಎಂದರು. ಆದರೆ ಅವರ ಮನೆ ತಲುಪುವ ಹೊತ್ತಿಗಾಗಲೇ ನನಗೆ ಅರ್ಥವಾಗಿಹೋಯಿತು- ಇದು ಕೇವಲ ಹುಷಾರು ತಪ್ಪಿರುವ ವಿಷಯವಲ್ಲ ಅಂತ"

ಅವನ ಧ್ವನಿಯಲ್ಲಿನ ಕಂಪನ ನೇರ ನನ್ನೆದೆಗೇ ಬಡಿಯುತ್ತಿತ್ತು. "ಮುಂದೇನಾಯ್ತು?" ಎನ್ನುವಂತೆ ನೋಡಿದೆ.

"ಕಾರು ಮಾಡಿಕೊಂಡು ನನ್ನನ್ನು ಊರಿಗೆ ಕರೆದೊಯ್ದರು. ಮನೆಯ ತುಂಬಾ ಜನ- ರಸ್ತೆಯಲ್ಲಿ, ಅಂಗಳದಲ್ಲಿ, ಜಗುಲಿಯಲ್ಲಿ... ನನ್ನನ್ನು ನೋಡುತ್ತಿದ್ದಂತೆ ಎಲ್ಲರೂ ಸರಿದುನಿಂತರು. ಆಗ ಕಂಡಿತು... ಜಗುಲಿಯಲ್ಲಿ ಮಲಗಿಸಿದ್ದ ಅಪ್ಪನ ದೇಹ..."

ಅವನ ಸ್ವರ ಮುಂದೆ ಮಾತನಾಡಲಾರದಷ್ಟು ಗದ್ಗದಿತವಾಯಿತು. ಅರೆ ನಿಮಿಷ ಮೌನವಾದ. ಅಂದು ನಡೆದ ಆ ಘಟನೆಯು ಚಿತ್ರಗಳಾಗಿ ನನ್ನ ಕಲ್ಪನೆಯಲ್ಲಿ ಕದಲತೊಡಗಿದವು.

"ಹಿಂದಿನ ದಿನ ರಾತ್ರೆಯಷ್ಟೇ ನನ್ನೊಂದಿಗೆ ಮಾತನಾಡಿದ್ದರು. ರಜೆ ಹಾಕಿ ಊರಿಗೆ ಬಾ ಎಂದಿದ್ದರು. ಅದೇ ಅವರೊಂದಿಗಿನ ಕೊನೆಯ ಮಾತಾಗಿಹೋಯಿತು"

ಅವನ ಕಣ್ಣು ತುಂಬಿ ಹರಿದವು, ಜೊತೆಗೆ ನನ್ನವೂ... ಅಪ್ಪನ ನೆನಪಿಗೆ ಹಾಗೂ ಹಳೆಯದನ್ನು ನೆನಪಿಸಿ ಅವನನ್ನು ಅಳಿಸಿದ ಪಶ್ಚಾತ್ತಾಪಕ್ಕೆ. ಏನು ಹೇಳಬೇಕೆಂದು ತಿಳಿಯಲಿಲ್ಲ. ಜನ್ಮನೀಡಿದ,  ಇಪ್ಪತ್ತೆರೆಡು ವರ್ಷಗಳ ಕಾಲ ನೆರಳಾಗಿ ಬೆಳೆಸಿದ, ಇನ್ನೂ ಇಪ್ಪತೈದು ವರ್ಷ ಜೊತೆಗಿದ್ದು ಮಗನ ಬದುಕಿನ ಏಳಿಗೆಗಳನ್ನು ಕಣ್ಣಾರೆ ಸವಿಯಬೇಕಿದ್ದ ತಂದೆಯನ್ನು ರಾತ್ರೆ ಬೆಳಗಾಗುವುದರೊಳಗೆ ಕಳಕೊಂಡ ಆ ನಿರ್ಭಾಗ್ಯ ಮಗನೊಂದಿಗೆ ಎರೆಡು ಹನಿ ಕಣ್ಣೀರಿನ ಹೊರತಾಗಿ ಬೇರೇನು ಮಾತನಾಡಲೂ ನನ್ನಿಂದಾಗಲಿಲ್ಲ. 

                    *************

ಪ್ರೀತಿಯ ಅಪ್ಪಾ,

ಈ ಘಟನೆಯನ್ನು ಕೇಳಿದ ಮೇಲೂ ನಿನ್ನ ನೆನಪಾಗದಿರುವುದಕ್ಕೆ ಹೇಗೆ ತಾನೇ ಸಾಧ್ಯ ಹೇಳು? ಯಾರದೋ ಅಪ್ಪನ ಕಥೆಕೇಳಿ ನನ್ನ ಕಣ್ಣಿನಲ್ಲಿ ನೀರಾಗಿ ತುಳುಕಿದ್ದು ನಿನ್ನ ಮಮತೆಯೇ ಅಲ್ವಾ? ಹೌದು... ಇದೇ ನನಗೂ ನಿನಗೂ ಇರುವ ವ್ಯತ್ಯಾಸ. ಪಟ್ಟಣದ ಐಶಾರಾಮಿನಲ್ಲಿ ಹಾಯಾಗಿರುವ ನನಗೆ ನಿನ್ನ ನೆನಪಾಗಬೇಕೆಂದರೆ ಒಂದೋ ಕಷ್ಟ ಬರಬೇಕು; ಇಲ್ಲಾ ಇಂಥಾದ್ದೊಂದು ಕಥೆ ಕೇಳಬೇಕು. ಆದರೆ ನಿನಗೆ ಹಾಗಲ್ಲ. ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರೆ ಮಲಗುವ ತನಕ ನೀನು ಸುರಿಸುವ ಸಾವಿರಾರು ಬೆವರ ಹನಿಗಳಲ್ಲಿ, ದೇವರ ತಲೆಯ ಮೇಲೆ ಹರಿಸುವ ಅಭಿಶೇಕದ ಧಾರೆಯಲ್ಲಿ, ಮಣ್ಣ ಉತ್ತುವ ಏದುಸಿರಿನಲ್ಲಿ, ಫಲವ ಹೊತ್ತುತರುವ ಸಂತಸದಲ್ಲಿ, ಕೊನೆಗೆ ನಡುರಾತ್ರೆಯಲ್ಲಿ ಹೆದರಿಸಿ ಎಚ್ಚರಗೊಳಿಸಿದ ಸ್ವಪ್ನದ ಕನವರಿಕೆಯಲ್ಲೂ ಇರುವುದು 'ಮಗ ಚೆನ್ನಾಗಿರಲಿ' ಎನ್ನುವ ಹಾರೈಕೆಯೊಂದೇ.

ನನಗಿನ್ನೂ ಚೆನ್ನಾಗಿ ನೆನಪಿದೆ ಅಪ್ಪಾ... ಬೆಳ್ಳಂಬೆಳಗ್ಗೆ ಅಳುತ್ತಾ ಏಳುತ್ತಿದ್ದ ನನ್ನ ಮುಖ ತೊಳೆಸಿ ನೀನು 'ಸಾಮಿ ಚಿತ್ತ ಮಾಡು' ಎಂದು ದೇವರೆದುರು ನಿಲ್ಲಿಸುತ್ತಿದ್ದುದು, 'ನಾನೂ ಬತ್ತೀನಿ ತಡಿಯಾ' ಎಂದು ಕೂಗುತ್ತಾ ಒಂದು ಕೈಯ್ಯಲ್ಲಿ ಜಾರಿಹೋಗುತ್ತಿರುವ ಚಡ್ಡಿಯನ್ನೂ, ಇನ್ನೊಂದು ಕೈಯ್ಯಲ್ಲಿ ಮೋಟುದ್ದದ ಪೈಪನ್ನೂ ಹಿಡಿದುಕೊಂಡು ಹಿಂದೆಹಿಂದೆ ಓಡಿ ಬರುತ್ತಿದ್ದ ನನ್ನ ಕೈ ಹಿಡಿದು ತೋಟಕ್ಕೆ ಕರೆದೊಯ್ಯುತ್ತಿದ್ದುದು, ಶಬ್ದಕ್ಕೇ ಹೆದರುವ ನನ್ನನ್ನು ಅಡಿಕೆಮರದ ಮರೆಯಲ್ಲಿ ನಿಲ್ಲಿಸಿ ನೀನು ಮೋಟಾರು ಸ್ಟಾರ್ಟ್ ಮಾಡುತ್ತಿದ್ದುದು, 'ಕೊನೆ ಬೀಳತ್ತೆ ಇಲ್ಲೇ ನಿಂತ್ಕ' ಎಂದು ನನ್ನನ್ನು ದೂರನಿಲ್ಲಿಸಿ ನೀನು ಅಡಿಕೆ ಕೊನೆ ಹಿಡಿಯುತ್ತಿದ್ದುದು..... ಎಲ್ಲವೂ ನಿನ್ನೆಯೋ ಮೊನ್ನೆಯೋ ನಡೆದಷ್ಟು ಹಸಿರಾಗಿವೆ. ನಿನ್ನಂತೆಯೇ ಕೈ ಕಟ್ಟಿ ನಿಲ್ಲುತ್ತಿದ್ದ ನನ್ನನ್ನು ನೋಡಿದವರೆಲ್ಲಾ "ಥೇಟ್ ಅಪ್ಪನ ಥರಾನೇ" ಎಂದಾಗ ನನಗೇನೋ ಒಂದು ಹೆಮ್ಮೆ. ಏಕೆಂದರೆ ಅವತ್ತಿನ ನನ್ನ ಪುಟ್ಟ ಪ್ರಪಂಚದಲ್ಲಿ ನೀನೇ ಹೀರೋ. ನನ್ನ ಬಿಟ್ಟು ನೀನು ಅಡಿಕೆ ಮಂಡಿಗೋ, ಅಜ್ಜನ ಮನೆಗೋ ಹೊರಟುನಿಂತಾಗ ನಾನು ಅದೆಷ್ಟು ಅಳುತ್ತಿದ್ದೆ! ನೀನು "ಪೇಪಿ ತರ್ತೀನಿ ಅಕಾ" ಎಂದು ಪೂಸಿ ಹೊಡೆದರೂ ಕೇಳುತ್ತಿರಲಿಲ್ಲ. "ನಾನೂ ಬತ್ತೀನಾ" ಎಂದು ರಚ್ಚೆ ಹಿಡಿದು ಹೊರಳಾಡುತ್ತಿದ್ದೆ. ನಿನ್ನ ಹಿಂದೆಯೇ ಬಸ್ಸಿನೊಳಕ್ಕೆ ನುಗ್ಗಲು ಬಂದ ನನ್ನನ್ನು ಅಮ್ಮ ಬಲವಂತವಾಗಿ ಎಳೆದೊಯ್ದು ಚುಳುಕೆಯೇಟು ಕೊಡುವವರೆಗೂ ನನ್ನ ಅಳು ನಿಲ್ಲುತ್ತಿರಲಿಲ್ಲ. ಸಾಗರದಿಂದ ಮರಳುವಾಗ ನೀನು ಹೊತ್ತು ತಂದಿದ್ದ ಮೂರು ಚಕ್ರದ ಸೈಕಲ್, ಪ್ರತಿದಿನ ಸಂಜೆ ಉಪೇಂದ್ರನ ಅಂಗಡಿಯಿಂದ ತರುತ್ತಿದ್ದ ಕಂಬಾರ್ ಕಟ್ಟು - ಬೆಣ್ಣೆ ಬಿಸ್ಕತ್ತು, ಸಾಗರದ ಅಡಿಕೆ ಮಂಡಿಯೆದುರಿನ ಮರದ ಬೆಂಚಿನಮೇಲೆ ಕೂರಿಸಿಕೊಂಡು ಓದಿಹೇಳಿದ ಡಿಂಗನ ಕಥೆ, ಯಾವುದೋ ಹೆಸರಿಲ್ಲದ ಗೂಡಂಗಡಿಯಲ್ಲಿ ಕೊಡಿಸಿದ ಪೀಲೆ, ನನ್ನನ್ನು ಮಾತ್ರ ಉಪ್ಪರಿಗೆಗೆ ಕರೆದೊಯ್ದು ತೋರಿಸಿದ್ದ ಹಳದಿಬಣ್ಣದ ಟಿಂಟಿಂ ಗಾಡಿ.... ಇವೆಲ್ಲವೂ ಇಂದಿಗೂ ನನ್ನ ಸ್ಮೃತಿಪೆಟ್ಟಿಗೆಯೊಳಗೆ ಭದ್ರವಾಗಿವೆ. ಮನಸ್ಸು ಮಗುವಾಗಿ ಹಠಹಿಡಿದ ಸಂಜೆಗಳಲ್ಲಿ ಅವನ್ನೆಲ್ಲಾ ಒಂದೊಂದಾಗಿ ಆಚೆ ತೆಗೆಯುತ್ತೇನೆ. ಮತ್ತದೇ ಸೈಕಲ್ ತುಳಿದು, ಕಂಬಾರ್ಕಟ್ಟು ಮೆಂದು, ಟಿಂಟಿಂ ಗಾಡಿಯನ್ನು ನೂಕಿ ಸಂಭ್ರಮಿಸುತ್ತೇನೆ, ಮನತುಂಬಿಕೊಳ್ಳುತ್ತೇನೆ.

ನಾನು ಶಾಲೆಗೆ ಹೋಗಲಾರಂಭಿಸಿದಾಗ ನನ್ನನ್ನು 'ಡ್ರಾಪ್' ಮಾಡುವುದಕ್ಕೆ ಅಮ್ಮ ಬರುತ್ತಿದ್ದಳೇ ಹೊರತು ನಿನ್ನನ್ನು ಕಳಿಸುತ್ತಿರಲಿಲ್ಲ. ಏಕೆಂದರೆ ಶಾಲೆಯ ಗೇಟು ತಲುಪಿದಕೂಡಲೇ 'ಹೋ..' ಎಂದು ಅಳುತ್ತಾ "ನಾನು ಶಾಲೆಗೆ ಹೋಗಲ್ಲಾ.." ಎಂದು ಹಠಹಿಡಿಯುತ್ತಿದ್ದ ನನಗೆ ಬೈದು ಬೆದರಿಸುವ ಮನಸ್ಸಿರದ ನೀನು "ನಾಳೆಯಿಂದ ಹೋದ್ರಾಯ್ತು ಬಾ" ಎಂದು ಮರಳಿ ಮನೆಗೆ ಕರೆತರುತ್ತಿದ್ದೆ. ಆದರೆ ನನ್ನೀ ಅಳು ಹಠಗಳೆಲ್ಲಾ ಅಮ್ಮನ ಹತ್ತಿರ ನಡೆಯುತ್ತಿರಲಿಲ್ಲ. "ಹೋಗ್ತೀಯಾ ಇಲ್ವಾ" ಎಂದು ದಾಸವಾಳಗಿಡದ ಬರಲು ಹಿಡಿದು ಬೆನ್ನಟ್ಟಿಬರಲಾರಂಭಿಸಿದಳೆಂದರೆ, ನಾನು ಶಾಲೆ ತಲುಪುವತನಕ ಅವಳ 'ಚೇಸಿಂಗ್' ನಿಲ್ಲುತ್ತಿರಲಿಲ್ಲ.

ನಿನ್ನದು ಒಂದು ಥರಾ ಕರಡಿಪ್ರೀತಿ! ನನಗೆ ಹೊಡೆದನೆಂಬ ಕಾರಣಕ್ಕೆ ಮಾವನ ಮಗನನ್ನು ಗಿರಿಗಿರಿ ತಿರುಗಿಸಿ ಬಿಸುಟಿದ್ದೆಯಲ್ಲಾ.... ಅದನ್ನು ನೆನಪಿಸಿಕೊಂಡಾಗಲೆಲ್ಲಾ ಹಾಗನಿಸುತ್ತದೆ. ಕೋಪವನ್ನು ಸದಾ ನಿನ್ನ ಪಟಾಪಟಿ ಚಡ್ಡಿಯ ಜೇಬಿನಲ್ಲೇ ಇಟ್ಟುಕೊಂಡಿರುತ್ತೀಯ ಅಲ್ವಾ? ಈ ವಿಷಯದಲ್ಲಿ ನಿನ್ನ ಆವೇಶಕ್ಕೆ ಸಿಲುಕುವವೆಂದರೆ ಮನುಷ್ಯರಿಗಿಂತ ಹೆಚ್ಚಾಗಿ ವಸ್ತುಗಳು! ಕಾರಣವೇ ಇಲ್ಲದೆ ಕನೆಕ್ಷನ್ ಕಳಚಿಹೋದ ನೀರಿನ ಪೈಪು, ಏನನ್ನೋ ಕಡಿಯುವಾಗ ಕೈಮೇಲೆಬಂದ ಕತ್ತಿ, ಒದ್ದೆಯಾಗಿ ನಿನ್ನ ಕಾಲು ಜಾರುವಂತೆ ಮಾಡಿದ ಸಿಮೆಂಟುನೆಲ, ನಡೆಯುವಾಗ ತಲೆಗೆತಾಗಿ ನೋವುಂಟುಮಾಡಿದ ಬಾಗಿಲಿನ ಛಾವಣಿ, ಸರಿಯಾಗಿ ಹಾಡದೆ ಕೊರ್ ಎನ್ನುವ ರೇಡಿಯೋ... ಇವೆಲ್ಲವೂ ನಿನ್ನಿಂದ ಬಿಸಾಡಿಸಿಕೊಂಡು, 'ಸಾಯಿ' ಎಂದು ಬೈಸಿಕೊಂಡವುಗಳೇ. ಆಗೆಲ್ಲಾ ಅಮ್ಮ ಮರೆಯಲ್ಲಿ ನಿಂತು ಮುಸಿಮುಸಿ ನಗುತ್ತಿದ್ದಳು, ಜೊತೆಗೆ ನಾನೂ. ಆದರೆ ಈಗ ಅನಿಸುತ್ತಿದೆ: ಠೀಕುಠಾಕಿನ ಬಣ್ಣದ ಜಗತ್ತಿಗೆ ಹೊಂದಿಕೊಳ್ಳಲಾಗದ, ಕಡೆಗಣಿಸಿ ಮೂಲೆಗುಂಪು ಮಾಡಿದವರಿಗೆ ಎದುರು ಹೇಳಲಾರದ ಬಡತನದ ಅಸಹಾಯಕತೆಯನ್ನು ಹೀಗೆ ವಸ್ತುಗಳ ಮೇಲೆ ತೀರಿಸಿಕೊಳ್ಳುವುದನ್ನ ಅಭ್ಯಾಸಮಾಡಿಕೊಂಡಿದ್ದೆಯೆಂದು.

ಶ್.... ಅಮ್ಮನಿಗೆ ಕೇಳದಂತೆ ಮೆತ್ತಗೆ ಹೇಳು. ದಿನವಿಡೀ ತೋಟದಲ್ಲಿ, ಬೇಲಿ-ಪೊದರುಗಳ ಇರುಕಿನಲ್ಲೇ ಓಡಾಡುವವನಾಗಿದ್ದರೂ ನಿನಗೆ ಹಾವು-ಚೇಳುಗಳೆಂದರೆ, ಕಾಡು ಪ್ರಾಣಿಗಳೆಂದರೆ ತುಂಬಾ ಭಯ ಅಲ್ವಾ? ಮದುವೆಯಾದ ಹೊಸತರಲ್ಲಿ ಅಮ್ಮನಜೊತೆ ತೋಟದಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಹಾರ್ಬೆಕ್ಕೊಂದು (ಮರದ ಮೇಲೆ ವಾಸಿಸುವ ಬೆಕ್ಕಿನ ಜಾತಿಗೆ ಸೇರಿದ ಪುಟ್ಟ ಪ್ರಾಣಿ) ಮರದಿಂದ ಮರಕ್ಕೆ ಹಾರುತ್ತಾ ಬರುತ್ತಿರುವುದನ್ನು ನೋಡಿ ಗಾಬರಿಯಾದ ನೀನು ಜೊತೆಗಿದ್ದ ಹೆಂಡತಿಯನ್ನು ಅಲ್ಲೇ ಬಿಟ್ಟು ಓಟಕಿತ್ತಿದ್ದೆಯಂತೆ? ತೋಟದ ಅಂಚಿನ ಸುರಕ್ಷಿತ ಜಾಗ ತಲುಪಿ 'ಹೆಂಡತಿ ಇದಾಳಾ ಇಲ್ಲಾ ಹಾರ್ಬೆಕ್ಕು ಕಚ್ಕೊಂಡೋಯ್ತಾ' ಎನ್ನುವಂತೆ ತಿರುಗಿ ನೋಡಿದ್ದೆಯಂತೆ? ನಿನ್ನ ಓಟದ ರಭಸವನ್ನು ತನ್ನ ಪಾಡಿಗೆ ತಾನು ಆಡುತ್ತಿದ್ದ ಆ ಪುಟ್ಟ ಪ್ರಾಣಿಯೂ ಬೆರಗಾಗಿ ನಿಂತು ನೋಡಿತಂತೆ. ಅಮ್ಮ ಆಗಾಗ ಹೇಳಿಕೊಂಡು ನಗುತ್ತಿರುತ್ತಾಳೆ. ಆದರೂ ಕಾಡು ಪ್ರಾಣಿಗಳೆಂದರೆ ನಿನಗೆ ತುಂಬಾ ಕುತೂಹಲ. ಅದಕ್ಕೆಂದೇ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲನ್ನು ಹಾಕಿಸಿಕೊಂಡಿದ್ದೀಯ. ಅದರಲ್ಲಿ ಬರುವ ಹುಲಿ, ಸಿಂಹ, ಚಿರತೆಗಳನ್ನೆಲ್ಲಾ ನೋಡುತ್ತಾ ಮೈಮರೆಯುತ್ತೀಯ. ಮುಂದಿನಸಲ ನೀನು ಬೆಂಗಳೂರಿಗೆ ಬಂದಾಗ ಬನ್ನೇರುಘಟ್ಟದ ಸಂರಕ್ಷಿತಾರಣ್ಯದಲ್ಲಿ 'ಸಫಾರಿ'ಗೆ ಕರೆದೊಯ್ಯುತ್ತೇನೆ. ನಿನ್ನ ನೆಚ್ಚಿನ ಹುಲಿ, ಸಿಂಹ, ಕರಡಿ, ಹೆಬ್ಬಾವುಗಳನ್ನೆಲ್ಲಾ ಹತ್ತಿರದಿಂದ ನೋಡಿದಾಗ ನಿನ್ನ ಮುಖದಲ್ಲಿ ಮೂಡುವ ಬೆರಗನ್ನು ಒಮ್ಮೆ ನೋಡಬೇಕೆಂಬ ಆಸೆ ನನಗೆ.

ಇನ್ನು ಹಳೆಯ ಸಿನೆಮಾಗಳೆಂದರೆ ನಿನಗೆ ಇನ್ನಿಲ್ಲದಷ್ಟು ಹುಚ್ಚು. ಟಿವಿಯಲ್ಲಿ ಚಾನೆಲ್ ಚೇಂಜ್ ಮಾಡುವಾಗ ಮಧ್ಯದಲ್ಲೆಲ್ಲೋ ಅಪ್ಪಿತಪ್ಪಿ ಡಾ. ರಾಜಕುಮಾರ್ ರ ಮುಖ ಕಂಡರೆ ಸಾಕು "ಹೇ ತಡಿತಡಿ, ಹಾಕು ಅದನ್ನ" ಎಂದು ಕುಳಿತುಬಿಡ್ತೀಯ. ಅವರ ಪ್ರತಿಯೊಂದು ಸಿನೆಮಾವನ್ನೂ ನಿನ್ನ ಯಾವುದೋಒಂದು ಹಳೆಯ, ಮಧುರ ನೆನಪಿನೊಂದಿಗೆ ಬೆಸೆದುಕೊಂಡಿದ್ದೀಯ. ಯಾವ ಸಿನೆಮಾ ಯಾವ ವರ್ಷ ರಿಲೀಸ್ ಆಯ್ತು, ಅದರ ನಟರು, ಸಂಗೀತ-ಸಾಹಿತ್ಯ ನಿರ್ದೇಶಕರು ಯಾರ್ಯಾರು, ಅಂದಿನ ಗ್ರಾಮಪಂಚಾಯತಿಯ ಗ್ರಾಮಾಫೋನು ಆ ಹಾಡುಗಳನ್ನು ಹೇಗೆ ಹಾಡುತ್ತಿತ್ತು, ಕಾಮೆಂಟರಿ ಕೇಳುವ ಅಣ್ಣನ ಜೊತೆ 'ಚಿತ್ರಗೀತೆ ಹಾಕು' ಎಂದು ಹೇಗೆಲ್ಲಾ ಜಗಳಾಡಿದ್ದೆ... ಇದನ್ನೆಲ್ಲಾ ಮತ್ತೆಮತ್ತೆ ನೆನಪಿಸಿಕೊಂಡು ಹೇಳುತ್ತೀಯ, ತೀರಾ ನಮಗೂ ಬಾಯಿಪಾಠವಾಗುವಷ್ಟು! ಚಿಕ್ಕ ಮಗುವೊಂದು ತನ್ಮಯನಾಗಿ ಕಾರ್ಟೂನು ನೋಡುವಷ್ಟೇ ಶ್ರದ್ಧೆಯಿಂದ ಚಲನಚಿತ್ರದೊಳಗೆ ಮುಳುಗಿಹೋಗ್ತೀಯ ಅಲ್ವಾ?ಅವತ್ತು ಪಕ್ಕದಮನೆಯಲ್ಲಿ ಮನೆಯವರು, ಕೆಲಸದವರು ಎಲ್ಲರೂ ಅಡಿಕೆಸುಲಿಯುತ್ತಾ ಕುಳಿತಿದ್ದಾಗ ಹಾಕಿದ್ದ ಫಿಲಮ್ಮೊಂದರಲ್ಲಿ ವಿಲನ್ ಹೀರೋನನ್ನು ಹೊಡೆಯುವ ದೃಶ್ಯನೋಡಿ ರೊಚ್ಚಿಗೆದ್ದ ನೀನು "ಯಾಕೋ ಹೊಡೆತ ತಿಂತೀಯಾ? ತಿರುಗಿ ಒದೆಯೋ ಅವ್ನಿಗೆ!" ಎಂದು ಕೂಗುತ್ತಾ ಟೀವಿಯತ್ತ ನುಗ್ಗಿದ್ದ ದೃಶ್ಯ ಈಗಲೂ ಕಣ್ಣಿಮುಂದಿದೆ. ಎಲ್ಲರೂ "ಹೋ" ಎಂದು ಕಿರುಚಿ ನಿನ್ನನ್ನು ಪಿಚ್ಚರ್ರಿನ ಹೊಡೆದಾಟದ ಕಣದಿಂದ ಈ ಲೋಕಕ್ಕೆ ಮರಳಿತರದೇಹೋಗಿದ್ದರೆ ವಿಲನ್ ನ ಮೇಲಿನ ಕೋಪಕ್ಕೆ ಟಿವಿಗೊಂದು ಗತಿ ಕಾಣಿಸುತ್ತಿದ್ದಿ ಅಲ್ವಾ? ಅಂದು ಅದು ತಮಾಷೆಯಾಗಿ ಕಂಡಿತ್ತಾದರೂ ಈಗ ಅನಿಸುತ್ತಿದೆ- ನಿನ್ನ ಈ ಕಳೆದುಹೋಗುವಿಕೆ, ತನ್ಮಯತೆ, ಭಾವುಕತೆಗಳು ನನ್ನೊಳಗೂ ಹರಿದುಬಂದಿವೆಯೇನೋ ಎಂದು.

ಅರವತ್ತು ವರ್ಷಗಳ ಜೀವನದಲ್ಲಿ ನೀನು ಸೃಷ್ಟಿಸಿಕೊಂಡ ಪ್ರಪಂಚದೊಳಗೊಮ್ಮೆ ಇಣುಕಿದರೆ ಅಚ್ಚರಿಯಾಗುತ್ತದೆ. ಕೊಳೆರೋಗ ಬಂದರೂ, ಬೆಳೆ ನೆಲಕಚ್ಚಿದರೂ ಯಾವ ಸರಕಾರದೆದುರೂ ಕೈಚಾಚಲಿಲ್ಲ. ಯಾರೊಬ್ಬರ ನಯಾಪೈಸೆಯ ಋಣವನ್ನೂ ಇಟ್ಟುಕೊಳ್ಳಲಿಲ್ಲ. ನಿನ್ನ ಖಾಯಿಲೆಗಳಿಗೆ ನಿನ್ನದೇ ವೈದ್ಯ, ನಿನ್ನದೇ ಪಥ್ಯ. ಹೊಟ್ಟೆನೋವು ಬಂದಾಗ ಪಣತಕೊಟ್ಟಿಗೆಗೆ ಹೋಗಿ ತಲೆಕೆಳಗಾಗಿ ನಿಲ್ಲುವುದು, ಟೀ ಕುಡಿಯುವುದು, ದ್ರಾಕ್ಷಿ ತಿನ್ನುವುದು.... ಇದನ್ನೆಲ್ಲಾ ನಿನಗೆ ಯಾವ ವೈದ್ಯಪುಸ್ತಕ ಹೇಳಿಕೊಟ್ಟಿತೋ ಗೊತ್ತಿಲ್ಲ. ನಿನ್ನ ನಂಬಿಕೆಗಳೇ ನಿನಗೆ ಔಷಧಿ! ಉಪ್ಪು- ಹುಳಿಗಳಿಲ್ಲದ ಸಾದಾ ಊಟ ತಿಂದುಕೊಂಡೇ ದಿನಪೂರ್ತಿ ಮನೆಯಂಗಳದ ಈ ಅಂಚಿನಿಂದ ತೋಟದಕೊನೆಯ ಆ ಅಂಚಿನತನಕದ ಒಂದೊಂದು ಹುಲ್ಲುಕಡ್ಡಿಯನ್ನೂ ವಿಚಾರಿಸಿಕೊಳ್ಳುವ ಚೈತನ್ಯ, ಶ್ರದ್ಧೆಯನ್ನು ಕೇವಲ ಎಸೆಸ್ಸೆಲ್ಸಿ ಕಲಿತ ನಿನಗೆ ಅದ್ಯಾವ ಶಾಲೆ ಕಲಿಸಿಕೊಟ್ಟಿತೆಂಬುದೇ ನನಗೆ ದೊಡ್ಡ ಅಚ್ಚರಿ. ಈ ವಯಸ್ಸಿನಲ್ಲೂ ನೀನು ದೂರದ ಗುಡ್ಡದಿಂದ ಹೊತ್ತು ತರುವ ದೈತ್ಯ ಸೊಪ್ಪಿನ ಹೊರೆಯನ್ನು ಅಲ್ಲಾಡಿಸಲೂ ನನ್ನಿಂದಾಗುವುದಿಲ್ಲ!

                       ****************

ಬೆಳೆದಂತೆಲ್ಲಾ ಮಕ್ಕಳು ದೊಡ್ಡವರಾಗುತ್ತಾರೆ, ಹೆತ್ತವರು ಮಕ್ಕಳಾಗುತ್ತಾರೆ. ವರ್ಷಗಳ ಕೆಳಗೆ ನೀನು ಮೊದಲಬಾರಿಗೆ ಬೆಂಗಳೂರಿಗೆ ಬಂದು ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡಿದ್ದೆ. ಹಳ್ಳಿಯ ಹಸಿರು, ನಿಶ್ಯಬ್ದತೆಗಳಲ್ಲಿ ಬೆರೆತುಹೋಗಿದ್ದ ನಿನಗೆ ಈ ಬೆಂಗಳೂರಿನ ಸಂದಣಿ, ಸದ್ದುಗದ್ದಲಗಳನ್ನು ನೋಡಿ ಆತಂಕವಾಗಿತ್ತು. ರಾತ್ರೆ ಮಲಗುವುದಕ್ಕೆ ಜಾಗ ಸಾಲುವುದಿಲ್ಲವೆಂದು ನಿನ್ನನ್ನು ಅಲ್ಲೇ ಬಿಟ್ಟ ನಾನು ಇನ್ನೊಬ್ಬ ಚಿಕ್ಕಮ್ಮನ ಮನೆಗೆ ಹೊರಟುನಿಂತಾಗ "ಪುಟ್ಟು ಇಲ್ಲೇ ಇರಲಿ" ಎಂದು ಹಠಮಾಡುವಂತೆ ಹೇಳಿದೆಯಲ್ಲಾ, ಆಗೇಕೋ ಅಪರಿಚಿತ ಊರಿನಲ್ಲಿ ಅಮ್ಮ ಜೊತೆಗೇ ಇರಬೇಕೆಂದು ಹಠಮಾಡುವ ಮುಗ್ಧ ಮಗುವಿನಂತೆ ಕಂಡುಬಿಟ್ಟೆ. ಬಸವನಗುಡಿಯ ಭರಗುಟ್ಟುವ ಟ್ರಾಫಿಕ್ನಲ್ಲಿ ನಿನ್ನ ಕೈಹಿಡಿದು ರಸ್ತೆ ದಾಟಿಸುತ್ತಿದ್ದಾಗ ಹಿಂದೆಂದೋ ಇದೇ ಕೈ ಹಿಡಿದು ನಾನು ಹೆದರುತ್ತಾ ರಸ್ತೆದಾಟಿದ್ದ ನೆನಪೊಂದು ಮನದಾಳದಲ್ಲಿ ಮುಗುಳ್ನಕ್ಕಿತ್ತು.

ನಾಲ್ಕು ಜನರೊಂದಿಗೆ ಬೆರೆಯದ ನಿನ್ನ ಏಕಾಂಗಿತನ, ಸಿಟ್ಟನ್ನು ದೊಡ್ಡದನಿಯಲ್ಲಿ ವ್ಯಕ್ತಪಡಿಸುವ ನಿನ್ನ ಕೋಪಗಳನ್ನು ನೋಡಿದವರೆಲ್ಲಾ ನಿನ್ನನ್ನು 'ಒಂಟಿಗ', 'ರಾಕ್ಷಸ' ಎನ್ನುತ್ತಾರೆ. ಆದರೆ ನನಗೆ ಮಾತ್ರ ಗೊತ್ತು ಅಪ್ಪಾ.. ಹೆರಿಗೆಯ ಸಮಯದಲ್ಲಿ ಅಮ್ಮನನ್ನು ಆಸ್ಪತ್ರೆಗೆ ಸೇರಿಸಲು ನೆರವಾದ ಹಿರಿಯನೆದುರು, ಮನೆಗೆ ಕರೆದು ಅಕ್ಕರೆಯಿಂದ ಉಪಚರಿಸಿದ ಅಣ್ಣನ ಮಗನೆದುರು, ಬಹಳ ವರ್ಷಗಳ ನಂತರ ನೋಡಿದ ಗ್ರಾಮದೇವರ ಉತ್ಸವದೆದುರು ನಿಂತು ಭಾವುಕನಾಗಿ ಕಣ್ಣೊರೆಸಿಕೊಂಡ ನಿನ್ನ ಮನಸ್ಸು ಅದೆಷ್ಟು ಮೃದುವೆನ್ನುವುದು. ನಿನ್ನೊಳಗೆ ಹತ್ತಾರು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡ, ಯಾರೂ ಗುರುತಿಸದೇ ಹೋದರೂ ಇಂದಿಗೂ ಜೀವಂತವಾಗಿರುವ ನಟನೊಬ್ಬನಿದ್ದಾನೆ. ಎಂತಹಾ ರೇಡಿಯೋವನ್ನೂ ಹಾಡಿಸಬಲ್ಲ 'ಮೆಕ್ಯಾನಿಕ್' ಇದ್ದಾನೆ. ಯಾವ ಸಂಘ-ಸಂಸ್ಥೆಯೂ ಗುರುತಿಸಿ ಸನ್ಮಾನಿಸದೇಹೋದ ಪ್ರಗತಿಪರ ಕೃಷಿಕನಿದ್ದಾನೆ. ಕೊನೆಗೆ ಸಮಾಜಕ್ಕೆ ಹೆದರಿ ತನ್ನ ಸಾಮರ್ಥ್ಯಗಳನ್ನು ತನ್ನೊಳಗೇ ಮುಚ್ಚಿಟ್ಟುಕೊಂಡು ಕೊಂದುಕೊಂಡ ಮುಗ್ಧ ಅಸಹಾಯಕನಿದ್ದಾನೆ....

ಆದರೇನಂತೆ? ನಾನಿದ್ದೇನೆ.. ನೀನು ಅರ್ಧ ಹೆಣೆದು ಪಕ್ಕಕ್ಕಿಟ್ಟ ಕಸೂತಿಗಳಿಂದು ನನ್ನ ಕೈಯ್ಯಲ್ಲಿವೆ. ನಿನ್ನ ಕನಸಿನ ಮುಂದುವರಿದ ಭಾಗವೇ ನಾನಾಗಿ ಎಲ್ಲವನ್ನೂ ಪೂರ್ಣಗೊಳಿಸುತ್ತೇನೆ. ನೀ ನೆಟ್ಟ ಪ್ರತಿ ಗಿಡದ ಹಸಿರನ್ನೂ ನನ್ನ ಉಸಿರಿನಂತೆ ಕಾಯುತ್ತೇನೆ...

ಹೇಳೋಕೆ ಮರೆತೆ. ಮೊನ್ನೆ ನನಗೊಂದು ಕನಸು ಬಿತ್ತು. ಬೆಳಗಿನಜಾವ ಬಿದ್ದ ನಿಜವಾಗುವ ಕನಸು! ಅದರಲ್ಲಿ ನೀನು ಮುಂದೆಂದೋ ಹುಟ್ಟಲಿರುವ ನನ್ನ ಪುಟಾಣಿ ಮಗಳ ಕೈಹಿಡಿದು ತೋಟಕ್ಕೆ ನಡೆಸಿಕೊಂಡು ಹೋಗುತ್ತಿದ್ದೆ. ಅಂದು ನನ್ನ ನಡೆಸಿಕೊಂಡು ಹೋಗಿದ್ದೆಯಲ್ಲಾ, ಹಾಗೇ!

ಸಮಯ ಅದೆಷ್ಟು ಸುಂದರವಾಗಿ ಹಿಂದಿರುಗಿಬರುತ್ತದೆ ಅಲ್ವಾ?

ಇಂತಿ ನಿನ್ನ ಪ್ರೀತಿಯ
ಪುಟ್ಟು

(ಶ್ರೀ. ಗುರುಪ್ರಸಾದ ಕುರ್ತಕೋಟಿ ಅವರು ಸಂಪಾದಿಸಿದ 'ಎಲ್ಲರಂಥವನಲ್ಲ ನನ್ನಪ್ಪ' ಕೃತಿಯಲ್ಲಿ ಪ್ರಕಟವಾದ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...