ಶುಕ್ರವಾರ, ಡಿಸೆಂಬರ್ 27, 2019

ಗುಡ್ಡದ ತುದಿಯಿಂದ ಕಾಣುವ ನಮ್ಮನೆಯ ಚಿತ್ರ...
ಹುಟ್ಟಿ ಇಲ್ಲೇ ಕಳೆದ ಇಪ್ಪತ್ತೊಂದು ವರ್ಷದಲ್ಲಿ ಒಂದು ದಿನವೂ ಈ ಮನೆ, ಸುತ್ತಲಿನ ಮರಗಳು, ಹಿಂಬದಿಯ ಹಸಿರು ಗುಡ್ಡ ಇವೆಲ್ಲ ಒಂದು ಚಂದದ ಚಿತ್ರದಂತೆ, ಕನಸೊಂದರಲ್ಲಿ ಕಂಡ ಸುಂದರ ಲೋಕದಂತೆ ಅನ್ನಿಸಿರಲೇ ಇಲ್ಲ. ಆದರೆ ಇವತ್ತು, ಬೆಂಗಳೂರಿನ ಬಸ್ಸು ಏರಬೇಕಾದ ದಿನ ಸುಮ್ಮನೆ ಗುಡ್ಡ ಹತ್ತಿ ನೋಡಿದರೆ, 'ಅರೆರೇ ಚಿಕ್ಕಂದಿನಲ್ಲಿ ಬಾಲಮಂಗಳ, ಚಂದಮಾಮಗಳಲ್ಲಿ ಬರುತ್ತಿದ್ದ ಹಳ್ಳಿಯ ಮನೆಗಳ ಚಿತ್ರ ಹೀಗೇ ಇರ್ತಿತ್ತಲ್ವ!' ಅನಿಸುತ್ತಿದೆ.

ಎಷ್ಟೇ ಬೇಜಾರು, ಹಿಂಸೆ ಅನ್ನಿಸಿದರೂ ಏನೂ ಮಾಡುವಂತಿಲ್ಲ. ಬೆಂಗಳೂರು ಅನ್ನೋ ಖೂಳವ್ಯಾಘ್ರನಿಗೆ 'ಮೂರು ದಿವಸ ಊರಲಿದ್ದು ಬಂದು ಸೇರುವೆನಿಲ್ಲಿಗೆ' ಎಂದು ಪುಣ್ಯಕೋಟಿಯಂತೆ ಮಾತುಕೊಟ್ಟು ಬಂದಾಗಿದೆ. ಕೊಟ್ಟ ಮಾತಿಗೆ ತಪ್ಪದೇ, ಕೆಟ್ಟ ಯೋಚನೆ ಮಾಡದೇ ಬಸ್ಸುಹತ್ತಿ ಹೊರಡಲೇಬೇಕು :-(

ಚಿನ್ನ ಎಂದೂ ನಗುತಿರು.. ನನ್ನ ಸಂಗ ಬಿಡದಿರು..ಕೆಲವೊಂದು ಪ್ರೀತಿಗಳು ಅತ್ಯಂತ ನಿಷ್ಕಾರಣವಾಗಿರುತ್ತವೆ. ನೀನು ಯಾರು? ನಿನ್ನ ಸಂಬಳ ಎಷ್ಟು? ನೀನು ಸುಂದರನಾ? ಕುರೂಪಿಯಾ? ಕುಳ್ಳನಾ? ಡುಮ್ಮನಾ? ನಿನ್ನಿಂದ ನನಗೇನು ಲಾಭ? ನೀನು ನನ್ನ ಬಳಿ ಆಡುವ ಮಾತು ಸುಳ್ಳಾ? ಸತ್ಯವಾ? ಊಹೂಂ. ಇದ್ಯಾವ ಪ್ರೆಶ್ನೆಯನ್ನೂ ಇವನು ಕೇಳುವುದೇ ಇಲ್ಲ. ನಾನು ಹೇಗಿದ್ದೇನೋ ಹಾಗೆಯೇ ನನ್ನನ್ನು ಹಚ್ಚಿಕೊಳ್ಳುತ್ತಾನೆ‌. ಪ್ರೀತಿಸುತ್ತಾನೆ. ತನ್ನ ಪುಟ್ಟ ಹೃದಯವನ್ನು ಅಂಗೈಯಲ್ಲಿಟ್ಟುಕೊಂಡು ನನಗೋಸ್ಕರ ಓಡೋಡಿ ಬರುತ್ತಾನೆ. 'ಮಾಮು, ಇವತ್ತು ಬೇಡ, ನಾಳೆ ಬೆಂಗ್ಳೂರಿಗೆ ಹೋಗಾ' ಎಂದು ಹಠಹಿಡಿಯುತ್ತಾನೆ.

ಇವನನ್ನು ನಾನು ಪ್ರೀತಿಯಿಂದ ಬೊಮ್ಮಣ್ಣೀ ಎಂದು ಕರೆಯುತ್ತೇನೆ.

ಉಡುಪಿಯಿಂದ ನಾನು ಬೇಲಿ ಹಾರಿ ಓಡಿಬರುವ ಹೊತ್ತಿಗೆ ಇವನು ಬರೀ ಒಂದೂ ಚಿಲ್ಲರೆ ವರ್ಷದ ಪೋರ. ನಾನು ಕಾಲೇಜ್ ಮುಗಿಸಿ ತೀರ್ಥಹಳ್ಳಿಯಿಂದ ಬರುವ ಸಮಯಕ್ಕೆ ಪಕ್ಕದ ಮನೆಯ ಅಂಗಳದ ಚಿಟ್ಟೆಯ ಮೇಲೆ ಇಷ್ಟುದ್ದದ ಜುಟ್ಟು ಬಿಟ್ಟುಕೊಂಡು ಕೀಕೀಕೀ ಎಂದು ನಗುತ್ತಾ ಕುಳಿತಿರುತ್ತಿದ್ದ ಈ ಪುಟಾಣಿಯನ್ನು ಹೇಗೆ ಮಾತನಾಡಿಸಬೇಕೆಂಬುದೇ ನನಗೆ ತಿಳಿಯುತ್ತಿರಲಿಲ್ಲ. ನಿಜ ಹೇಳಬೇಕೆಂದರೆ ನನಗೆ ಮಕ್ಕಳನ್ನು ನೆಟ್ಟಗೆ ಮಾತನಾಡಿಸುವುದಿರಲಿ, ಎತ್ತಿಕೊಳ್ಳಲಿಕ್ಕೂ ಬರುತ್ತಿರಲಿಲ್ಲ‌. ನನ್ನೆಡೆಗೆ ತನ್ನ ಅಬೋಧ ಮುಗ್ದ ಕಣ್ಣಿನಿಂದ ನೋಡುತ್ತಿದ್ದ ಇವನಿಗೆ ಬೇರೇನೂ ಹೇಳಲು ತೋಚದೆ ನಾನು 'ಮ್ಯಾಂವ್ ಮ್ಯಾಂವ್' ಎಂದು ಬೆಕ್ಕಿನಂತೆ ಕೂಗಿ ಮಾತನಾಡಿಸುತ್ತಿದ್ದೆ. ಅಷ್ಟೇ! ಚಿನ್ನೂ, ಮುದ್ದೂ, ಪುಟ್ಟೂ ಎಂದು ಎತ್ತಿಕೊಂಡು ಮುದ್ದಾಡುವ ಇತರರ ಮಧ್ಯೆ ಅಷ್ಟು ದೂರಕ್ಕೆ ನಿಂತು ಮ್ಯಾಂವ್ ಮ್ಯಾಂವ್ ಎಂದು ವಿಚಿತ್ರವಾದ ಸದ್ದು ಹೊರಡಿಸುವ ನಾನು ಇವನ ಕಣ್ಣಿಗೆ ಪ್ಯಾಂಟು, ಶರ್ಟು ತೊಟ್ಟ ಇಷ್ಟೆತ್ತರದ ಬೆಕ್ಕಣ್ಣನಂತೆ ಕಂಡೆನೋ ಏನೋ? ನನ್ನನ್ನು ನೋಡಿದಾಗ ಇವನೂ ಮ್ಯಾಂವ್ ಎಂದೇ ಕರೆಯತೊಡಗಿದ. 'ಮ್ಯಾಂವ್ ಬಂದ ನೋಡೂ' ಎಂದರೆ ಸಾಕು, ಕುಳಿತಲ್ಲೇ ಜಿಗಿಜಿಗಿಜಿಗಿಯುತ್ತಾ, ಹೀಹೀಹೀ ಎಂದು ನಲಿಯುತ್ತಾ ಸಂಭ್ರಮ ಪ್ರಕಟಿಸುತ್ತಿದ್ದ. ನಡೆಯಲು ಕಲಿತ ಮೇಲಂತೂ ನನ್ನನ್ನು ಕಂಡೊಡನೆಯೇ ಎರೆಡೂ ಕೈಗಳನ್ನು ಮೇಲೆತ್ತಿಕೊಂಡು ಪುಟ್ಟ ಗೊಂಬೆಯಂತೆ ತಬ್ಬಲು ಓಡಿಬರುತ್ತಿದ್ದ. ಅರಳಸುರಳಿ ಪೇಟೆಗೆ ಹೊರಟ ನನ್ನೊಂದಿಗೆ ಪುಟ್ಟ ಚಪ್ಪಲಿ ಧರಿಸಿ ತಾನೂ ಹೊರಟು ನಿಲ್ಲುತ್ತಿದ್ದ. ಅಮ್ಮನೇನಾದರೂ ಹೋಗಬೇಡ ಎಂದರೆ ಬೂ ಎಂದು ದೊಡ್ಡ ದನಿಯಲ್ಲಿ ಅಳುತ್ತಿದ್ದ. ಆಗೆಲ್ಲ ನನಗೆ ಹೃದಯ ಹಿಂಡಿದಂತೆ ನೋವಾಗುತ್ತಿತ್ತು. ಇದನ್ನೆಲ್ಲಾ ನೋಡಿದ ಅಮ್ಮಮ್ಮ 'ನೀನು ಅವನನ್ನು ಕೆಣಕುವುದಿಲ್ಲ. ಹಿಚುಕಿ ನೋಯಿಸುವುದಿಲ್ಲ. ಹೇಳಿದ ಹಾಗೆಲ್ಲಾ ಕೇಳ್ತೀಯ. ಅದಕ್ಕೇ ನೀನಂದ್ರೆ ಅಷ್ಟು ಪ್ರೀತಿ ಅವನಿಗೆ' ಎನ್ನುತ್ತಿದ್ದರು. ಆದರೆ ನನಗೆ ಇವತ್ತಿನ ತನಕ ಇವನ ಈ ಅಪಾರ ಅಕ್ಕರೆಗೆ ವಿವರಣೆ ಸಿಕ್ಕಿಲ್ಲ.

ಅದು ನಮ್ಮನೆಯ ನಾಗಪ್ರತಿಷ್ಟೆ ಕಾರ್ಯಕ್ರಮದ ದಿನ. ಮನೆಗೆ ಬಂದ ನೆಂಟರೆಲ್ಲಾ ಸಂಜೆ ಹೊರಟುನಿಂತಿದ್ದರು. ನಾನೂ ಬೆಂಗಳೂರಿನ ಪಯಣಕ್ಕಾಗಿ ಬ್ಯಾಗು ಪ್ಯಾಕುಮಾಡಿಕೊಳ್ಳುತ್ತಿದ್ದೆ. ಅಂಗಳದಿಂದ ಒಳಗಡಿಯಿಟ್ಟ ಇವನು ನನ್ನ ತಯಾರಿ ನೋಡಿ ಅರೆಕ್ಷಣ ಅವಾಕ್ಕಾದ‌. 'ನಾಳೆ ಹೋಗಾ ಮಾಮೂ' ಎಂದು ಎಂದಿನಂತೆ ಒತ್ತಾಯ ಮಾಡಿದ. ನಾನು ಒಪ್ಪಲಿಲ್ಲ. ಮುಖ ಚಿಕ್ಕದು ಮಾಡಿಕೊಂಡು ಮರಳಿಹೋದ. ಊಟ ಮುಗಿಸಿ, ಬ್ಯಾಗೇರಿಸಿಕೊಂಡು, ಹೊರಗಡೆ ಅಂಗಳಕ್ಕೆ ಬಂದ ನಾನು 'ಟಾಟಾ ಆಕಾಂಕೀ' ಎಂದು ಕೈಬೀಸಿ ನಾಲ್ಕೇ ನಾಲ್ಕು ಹೆಜ್ಜೆ ನಡೆದಿದ್ದೆ. ಹಿಂದಿನಿಂದ ಅವನ ಅಮ್ಮ ಹಾಗೂ ಅಮ್ಮಮ್ಮನ ದೊಡ್ಡದನಿಗಳು ಕೇಳತೊಡಗಿದವು. ಏನೆಂದು ತಿರುಗಿನೋಡಿದರೆ ನನ್ನ ಪ್ರೀತಿಯ ಆಕಾಂಕ್ಷು ಅಳುತ್ತಿದ್ದ! ಇಪ್ಫಳಿಸಿ ಇಪ್ಪಳಿಸಿ ಅಳುತ್ತಿದ್ದ! ಅಷ್ಟೇ. ಅಲ್ಲಿಂದ ಮುಂದಕ್ಕೆ ಒಂದು ಹೆಜ್ಜೆಯನ್ನಾದರೂ ಕಿತ್ತಿಡಲು ನನ್ನಿಂದಾಗಲಿಲ್ಲ. ಮರಳಿ ಹೋಗಿ ಬ್ಯಾಗನ್ನು ಮನೆಯೊಳಗೆ ಬಿಸುಟು ಅವನಿದ್ದಲ್ಲಿಗೆ ಬಂದೆ. ಅವನೆದುರು ಮೊಣಕಾಲೂರಿ ಕುಳಿತು  'ನಾನು ಇವತ್ತು ಹೋಗಲ್ಲ. ಅಳ್ಬೇಡ ಆಯ್ತಾ' ಎಂದು ಕೈ ಹಿಡಿದುಕೊಂಡೆ. ಇಷ್ಟು ಹೊತ್ತು ಅಳುತ್ತಿದ್ದವನ ಮುಖ ಅನಂತ ಸಂಭ್ರಮಕ್ಕೆ ತಿರುಗಿತು.

ನನ್ನ ಕಣ್ಣಿನಲ್ಲಿ ನೀರಾಡಿತು.

           ******************

ಈಗಲಾದರೂ 'ನಾನು ಬೆಂಗ್ಳೂರಿಂದ ಬರುವಾಗ ಎಂತ ತರ್ಲೋ?' ಎಂದು ಕೇಳಿದರೆ ಅವನು ಕೊಡುವ ಉತ್ತರ 'ಎಂತ ಬೇಡ ಮಾಮು' ಎನ್ನುವುದೊಂದೇ. ಆದರೂ ಬೆಂಗಳೂರಿನ ಬಸ್ಸಿನಿಂದ ತೀರ್ಥಹಳ್ಳಿಯಲ್ಲಿ ಇಳಿದ ತಕ್ಷಣ ಕಾಲುಗಳು ತಾನಾಗಿಯೇ ಇವನು ಇಷ್ಟಪಡುವ ಕಿಟ್ ಕ್ಯಾಟ್ ಅಂಗಡಿಯತ್ತ ಸಾಗುತ್ತವೆ. ಮನೆಗೆ ಬಂದು ಅರ್ಧ ದಿನವಾದರೂ ಇವನ ಮುಖ ಕಾಣದೇ ಹೋದರೆ ಇನ್ನಿಲ್ಲದಷ್ಟು ಬೇಸರವಾಗುತ್ತದೆ. ಕೊನೆಗೆ ನಾನೇ ಸೋತು ಎರೆಡು ಚಾಕಲೇಟ್ ಹಿಡಿದುಕೊಂಡು ಇವನಿರುವತ್ತ ನಡೆದುಬಿಡುತ್ತೇನೆ. ನಮ್ಮನೆಗೆ ಬರುತ್ತಿರುವ ಅವನನನ್ನು ಅವನ ಅಪ್ಪನೋ, ಅಮ್ಮನೋ ವಾಪಾಸ್ ಕರೆದರೆಂದರೆ ಅವರ ಮೇಲೆ ನನಗೆ ಅಪರಿಮಿತ ಸಿಟ್ಟು ಬರುತ್ತದೆ‌. ಮನೆಗೆ ಬೇರಾರೋ ನೆಂಟರು ಬಂದಿರುವರೆಂದು ಅವನು ನಮ್ಮನೆಗೆ ಬರದೇ ಹೋದಾಗ ಅವನ ಮೇಲೂ ಕೋಪವುಕ್ಕುತ್ತದೆ. ಆ ಸಿಟ್ಟು ತಣಿಯುವುದರೊಳಗೇ ಅವನು 'ಮಾಮು, ಕ್ರಿಕೆಟ್ ಆಡಣ ಬಾರಾ' ಎನ್ನುತ್ತಾ ಅಂಗಳದಲ್ಲಿ ಪ್ರತ್ಯಕ್ಷವಾಗಿಬಿಡುತ್ತಾನೆ. ನಾನೂ ಮುನಿಸೆಲ್ಲವನ್ನೂ ಮರೆತು ಅವನ ಹಿಂದೆ ನಡೆಯುತ್ತೇನೆ. 'ಮಾಮು, ಬೆಂಗ್ಳೂರಲ್ಲಿ ಬಾಕ್ಸರ್, ಮಸ್ತಫ್ ನಾಯಿಗಳೆಲ್ಲ ಬೆಳಿಗ್ಗೆ ವಾಕಿಂಗ್ ಹೋಗ್ತಿರ್ತಾವಂತೆ ಹೌದನಾ?'  'ಅಲ್ಲಿ ಯಾವ ಕಾರು ಜಾಸ್ತಿ ಇರೋದು? ಮರ್ಸಿಡಿಸ್ಸಾ ಲ್ಯಾಂಬೋರ್ಗಿನಿನಾ?' 'ನೆನ್ನೆ ವಿರಾಟ್ ಕೋಹ್ಲಿ ಹೆಂಗೆ ಸಿಕ್ಸರ್ ಹೊಡ್ದ ಗೊತ್ತನಾ?' ಎಂದೆಲ್ಲ ಹರಟುತ್ತಾ ಕ್ರಿಕೆಟ್ ಆಡುತ್ತಾನೆ. ನಾನು ಕೇಳಿಯೇ ಇರದ ಅದೆಷ್ಟೋ ತಳಿಯ ನಾಯಿಗಳನ್ನೂ,  ಹೊಸಹೊಸ ಮಾಡೆಲ್ ಕಾರುಗಳನ್ನೂ ಇವನು ವರ್ಣಿಸುವಾಗ ನಾನು ಅವಾಕ್ಕಾಗುತ್ತೇನೆ. ಅದರ ಬಗ್ಗೆ ಅವನು ಕೇಳುವ ಪ್ರೆಶ್ನೆಗಳ ತಲೆಬುಡವೇ ಗೊತ್ತಿಲ್ಲದಿದ್ದರೂ ಏನೇನೋ ಸುಳ್ಳುಪಳ್ಳು ಉತ್ತರ ಹೇಳಿ ಮರ್ಯಾದೆ ಉಳಿಸಿಕೊಳ್ಳುತ್ತೇನೆ. ತನಗಿಂತ ಹದಿನೈದು ವರ್ಷಕ್ಕೆ ದೊಡ್ಡವನಾದ ನನ್ನನ್ನು ಇವನು ಇಷ್ಟೊಂದು ಅಧಿಕಾರದಿಂದ ನಡೆಸಿಕೊಳ್ಳುವುದನ್ನು ನೋಡಿದಾಗೆಲ್ಲ ನನಗೆ 'ಇವತ್ತಿಗೂ ಇವನ ಕಣ್ಣಿಗೆ ನಾನು ಪ್ಯಾಂಟು ತೊಟ್ಟ ಬೆಕ್ಕಣ್ಣನ ಥರಾ ಕಾಣುತ್ತೀನೇನೋ' ಎಂಬ ಅನುಮಾನ ಕಾಡುತ್ತದೆ!

ಬದುಕಿನ ಅದೆಷ್ಟೋ ಸಮಯವನ್ನು ನಾವು ನಮ್ಮನ್ನು ಪ್ರೀತಿಸಿಯೇ ಇಲ್ಲದವರೆದುರು ಪ್ರೀತಿ ತೋಡಿಕೊಳ್ಳುತ್ತಾ, ಅವರಿಗೆ ಅಗತ್ಯವೇ ಇಲ್ಲದ ಕಾಳಜಿಯನ್ನು ವ್ಯಕ್ತಪಡಿಸುತ್ತಾ ಕಳೆದುಬಿಡುತ್ತೇವೆ. ನಮ್ಮ ನಮ್ಮ ಸ್ವಾರ್ಥಕ್ಕಾಗಿ ಯಾರನ್ನೋ ಓಲೈಸುತ್ತಾ, ಮತ್ಯಾರೆದುರೋ ಹಲ್ಲುಗಿಂಜುತ್ತಾ ವ್ಯರ್ಥವಾಗಿ ಬದುಕುತ್ತೇವೆ. ಆ ಎಲ್ಲ ಸ್ವಾರ್ಥದ ಪ್ರೀತಿಗಳೆದುರು ಈ ಮುಗ್ಧ, ನಿಷ್ಕಲ್ಮಶ ಪ್ರೀತಿ ವಜ್ರದಂತೆ ಹೊಳಪಾಗಿ ಕಾಣುತ್ತದೆ. ಹಾಗಂತ ಈ ಅಕ್ಕರೆಯಾದರೂ ಎಷ್ಟು ದಿನಗಳದ್ದು? ದೊಡ್ಡವನಾಗುತ್ತಾ ಹೋದಂತೆ, ಮನಸ್ಸಿನ ಮುಗ್ಧತೆಯನ್ನು ಕಳೆದುಕೊಳ್ಳುತ್ತಾ ಹೋಗಿ ಈ ಮಾಮುವೆಂಬ ಪ್ಯಾಂಟು ತೊಟ್ಟ ಬೆಕ್ಕಣ್ಣನೂ ಇವನ ಕಣ್ಣಲ್ಲಿ ಎಲ್ಲರಂತೆಯೇ ಸಾಮಾನ್ಯ ಮನುಷ್ಯನಾಗಿ ಬಿಡುತ್ತಾನಾ? 

ಹೀಗೆಲ್ಲ ಅನಿಸಿದಾಗ ಅದೇಕೋ ಬಹಳ ಸಂಕಟವಾಗುತ್ತದೆ.

ಮಂಗಳವಾರ, ಡಿಸೆಂಬರ್ 10, 2019

ನೆಲೆ

ಮಳೆ.. ಎಲ್ಲೆಲ್ಲಿ ನೋಡಿದರೂ ನೀರೋ ನೀರು‌. ಮನೆಯೆದುರಿನ ಅಂಗಳ ಸಣ್ಣ ಹರಿವಿರುವ ಕೊಳದಂತಾಗಿಬಿಟ್ಟಿತ್ತು. ಕೆಂಪು-ಹಳದಿ ನೆಲದ ಸಂಗದಿಂದ ಮಳೆ ನೀರೂ ಸಹಾ ಕೆಂಪು ಮಿಶ್ರಿತ ಹಳದಿಯಾಗಿ ಕಾಣುತ್ತಿತ್ತು. ಅಂಗಳದ ಮಧ್ಯೆಮಧ್ಯೆ ನೀರಿನಿಂದಾಚೆ ತಲೆಹಾಕಿ ನಿಂತಿರುವ ಹುಲ್ಲುಗಳು ಆಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾದ ಕಾಡಿನಂತೆ ಗೋಚರಿಸುತ್ತಿದ್ದವು. ಎದುರುಗಡೆ ಗುಡ್ಡವನ್ನೆಲ್ಲ ಬಳಿದುಕೊಂಡು ಬಂದ ನೀರು ಸಣ್ಣದೊಂದು ಕಾಲುವೆಯ ಮೂಲಕ ಇಪ್ಪತ್ತಡಿ ಆಳದ ಕಣಿಗೆ ಧುಮುಕುತ್ತಾ ಚಿಕ್ಕ ಜಲಪಾತವೊಂದು ರಚನೆಯಾಗಿತ್ತು. ಸುರಿದ ಮಳೆಗೆ ಮತ್ತಷ್ಟು ಹಸಿರಾದ ಗುಡ್ಡದ ಮರಗಳು 'ಬರ್ಸೋರೇ ಮೇಘಾ ಮೇಘಾ..' ಎಂದು ಒಳಗೊಳಗೇ ಹಾಡಿಕೊಳ್ಳುತ್ತಿರುವಂತೆ ತಲೆಯಾಡಿಸುತ್ತಾ ನಿಂತಿದ್ದವು. ಹಿತ್ತಲಿನ ಯಾವ್ಯಾವುದೋ ಮೂಲೆಗಳಿಂದ ಸಣ್ಣ ಸಾಲುಗಳಂತೆ ಹರಿದುಬಂದ ನೀರೆಲ್ಲಾ ಅಂಗಳದಲ್ಲಿ ಗುಂಪುಗೂಡಿ ತಗ್ಗಿನತ್ತ ಹರಿದುಹೋಗುತ್ತಿತ್ತು. ಹಂಚುಮಾಡಿನಿಂದ ಟಪಟಪ ಉದುರುತ್ತಿರುವ ಹನಿಗಳು ನಿಂತ ನೀರಿನಲ್ಲಿ ಅಲೆಯ ಬಳೆಗಳನ್ನು ಮೂಡಿಸುತ್ತಿದ್ದವು‌. 


ಶೀಟು ಹೊದಿಸಿದ ಛಾವಣಿಯ ಕೆಳಗಿನ ಕುರ್ಚಿಯಲ್ಲಿ ಪ್ರತಿಮೆಯಂತೆ ಕುಳಿತು ಪ್ರಕೃತಿಯ ಅಂಗಳದಲ್ಲಿ ಹಬ್ಬದಂತೆ ಜರುಗುತ್ತಿದ್ದ ಈ ಎಲ್ಲ ಚಟುವಟಿಕೆಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ಶಿಶಿರ ಭಾರವಾದ ನಿಟ್ಟುಸಿರಿನೊಂದಿಗೆ ಮೇಲೆದ್ದ.  


ಅವನಿಗೆ ಮಲೆನಾಡು ಹೊಸತಲ್ಲ. ಮಳೆಯೂ ಹೊಸತಲ್ಲ. ಆದರೆ ಮಲೆನಾಡಿಗನಾಗಿಯೂ ಪಟ್ಟಣದವನಂತೆ ಮಳೆಯನ್ನು ಪ್ರೀತಿಯಿಂದ ನೋಡುತ್ತಿರುವ ಈ ಪರಿಯಿದೆಯಲ್ಲಾ, ಅದು ಮಾತ್ರ ಹೊಸತು. ಇಪ್ಪತ್ತೊಂದು ವರ್ಷಗಳಿಂದ ಹೀಗೇ ಧೋ ಎಂದು ಶಬ್ದ ಮಾಡುತ್ತಾ, ಮರ-ಮನೆ-ಅಂಗಳಗಳನ್ನು ತೋಯಿಸುತ್ತಾ ಸುರಿಯುತ್ತಿದ್ದ ಅದೇ ರಗಳೆ ಮಳೆ ಕಳೆದ ಏಳು ವರ್ಷಗಳಲ್ಲಿ ಹಠಾತ್ತನೆ ನವಿರಾದ ವರ್ಷಧಾರೆಯಾಗಿ ಬದಲಾದ ಬಗೆಗೆ ಅವನಲ್ಲೂ ಅಚ್ಚರಿಯಿದೆ. ಇದೇ ಮಳೆ ಅಲ್ಲಿ, ಬೆಂಗಳೂರೆಂಬ ಧಡಿಯ ಪಟ್ಟಣದಲ್ಲಿ ಮೋರಿಗಳನ್ನು ಉಕ್ಕಿಸುತ್ತಾ, ರಸ್ತೆಗಳ ಮೇಲೆ ಹರಿಯುತ್ತಾ, ಟ್ರಾಫಿಕ್ ಜ್ಯಾಮಾಗಿಸುತ್ತಾ ಸುರಿಯುವಾಗ ಅವನಿಗೆ ಖೇದವಾಗುತ್ತದೆ. ಕೆಲಸ ಸಿಕ್ಕಿದ ಮೊದಲ ವರುಷ ಹಳ್ಳಿಗೆ ಬಂದು ಹಿಂತಿರುಗಿದವನು ಅದೇ ಗುಂಗಿನಲ್ಲಿ ಬೆಂಗಳೂರಿನ ಮಳೆಗೆ ಮೈಕೊಟ್ಟು ಶೀತ-ಜ್ವರಗಳಿಗೊಳಗಾಗಿ ವಾರಗಟ್ಟಲೆ ಪಾಡುಪಟ್ಟಾಗಿನಿಂದ ಬೆಂಗಳೂರಿನ ಮೇಲೆ, ಅಲ್ಲಿಯ ಮಳೆಯ ಮೇಲೆ ತಾತ್ಸಾರವೊಂದು ಹುಟ್ಟಿಕೊಂಡಿತ್ತು. ಈಗ ಈ ಊರಿನ ಮಳೆ ಬಿಡಿಸುತ್ತಿರುವ ಚಂದದ ಚಿತ್ರಗಳನ್ನು ಕಣ್ತುಂಬಿಕೊಳ್ಳುವಾಗ ಆ ತಾತ್ಸಾರ ಮತ್ತಷ್ಟು ಬೆಳೆಯತೊಡಗಿತ್ತು. 


"ಸುರೇಶನ ಅಂಗಡಿಗೆ ಹೋಗ್ತೀನಿ ಅಂದ್ಯಲ್ಲಾ, ಹೋಗೋದಿಲ್ವಾ?"


ಒಳಗಿನಿಂದ ತೇಲಿಬಂದ ಅಮ್ಮನ ಮಾತು ಶಿಶಿರನನ್ನು ಯೋಚನೆಗಳ ಪ್ರಪಂಚದಿಂದ ಹೊರತಂದಿತು‌. ಹೌದು.. ಗೆಳೆಯ ಸೂರಿಯ ಅಂಗಡಿಗೆ ಹೋಗಲಿಕ್ಕಿದೆ. ಸಾಮಾನು ಕೊಳ್ಳಲಿಕ್ಕಲ್ಲ, ಆತ್ಮವಿಶ್ವಾಸವನ್ನು ಖರೀದಿಸಲಿಕ್ಕೆ! ಎರೆಡು ವರ್ಷದ ಹಿಂದೆ 'ಪಟ್ಟಣವೊಂದೇ ಬದುಕಿನ ದಾರಿ' ಎಂಬ ಅಘೋಷಿತ ನಿಯಮವನ್ನು ಮೀರಿ ಬೆಂಗಳೂರಿನಿಂದ ಊರಿಗೆ ಮರಳಿ ಬಂದವನು ಸೂರಿ. ಐದಾರು ತಿಂಗಳ ಕಾಲ ಸಂಪಾದನೆಯಿಲ್ಲದೆ ಅಲೆದಾಡಿದ್ದನಾದರೂ ಕೊನೆಗೆ ಯಾವುದೋ ಗ್ರಾಮಾಭಿವೃದ್ಧಿ ಯೋಜನೆಯಡಿ ಸಾಲ ಪಡೆದುಕೊಂಡು ಪಕ್ಕದೂರಿನಲ್ಲಿ ಅಂಗಡಿಯೊಂದನ್ನು ತೆರೆದಿದ್ದ. ಮೊದಮೊದಲು ಒಂದು ಸಾವಿರ ಇದ್ರೆ ಕೊಡು, ಎರೆಡು ಸಾವಿರ ಇದ್ರೆ ಕೊಡು ಎಂದು ಆಗಾಗ ಕರೆಮಾಡುತ್ತಿದ್ದನಾದರೂ ಈ ನಡುವೆ ತನ್ನ ಮೊಬೈಲ್ ಬದಲಾದಾಗಿನಿಂದ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವನಾಗಿಯೂ ಸಂಪರ್ಕಿಸುವ ಪ್ರಯತ್ನ ಮಾಡಿರಲಿಲ್ಲ. ಬಹುಷಃ ಕಷ್ಟಗಳು ಕಳೆದವೋ ಏನೋ? ಪ್ರಾರಂಭದಲ್ಲಿ ಹೊಯ್ದಾಡಿದ್ದ ವ್ಯಾಪಾರ ಬಹುಷಃ ಈಗ ಕೈಹಿಡಿದಿರಬಹುದು. ಸಾಲ, ಪರದಾಟಗಳ ಸದ್ದಿಲ್ಲದೇ ಶಾಂತವಾಗಿ ಬದುಕುತ್ತಿದ್ದಾನೆಂದು ಕಾಣುತ್ತದೆ. ಪಟ್ಟಣದಾಚೆಗೂ ಬದುಕು ಕಂಡುಕೊಂಡ ಅವನ ಯಶೋಗಾಥೆಯನ್ನೊಮ್ಮೆ ಕಣ್ಣಾರೆ ನೋಡಲಿಕ್ಕೆಂದು, ಆ ಮೂಲಕ ತನ್ನ ಮನದಲ್ಲಿ ಅಸ್ಪಷ್ಟವಾಗಿ ಉರಿಯುತ್ತಿರುವ ಆಸೆಗಳಿಗೊಂದಷ್ಟು ಉರುವಲು ಸಂಪಾದಿಸಲೆಂದು ಅವನೀಗ ಹೊರಟುನಿಂತಿದ್ದ.


ಮಳೆಯ ತಾಂಡವವಿನ್ನೂ ಕಡಿಮೆಯಾಗಿರಲಿಲ್ಲ. ಪರ್ಸನ್ನು ಜೇಬಿಗೆ ತುರುಕಿಕೊಂಡು, ಛತ್ರಿ ಬಿಡಿಸುತ್ತಾ ಅಂಗಳದ ನೀರಿಗಡಿಯಿಟ್ಟನು ಶಿಶಿರ್. ಪಚ್ ಪಚ್ಚೆನ್ನುತ್ತಾ ಸೊಂಟದ ತನಕ ಸಿಡಿಯುತ್ತಿದ್ದ ನೀರಿನಲ್ಲಿ ಬೇಕಂತಲೇ ದಪ್ಪ ದಪ್ಪ ಹೆಜ್ಜೆಗಳನ್ನಿಡುತ್ತಾ ಮುನ್ನಡೆದವನಿಗೆ ಉಣಗೋಲಿನಾಚೆ ನಾಲ್ಕು ತಿಂಗಳ ಕೆಳಗೆ ಕಟ್ಟಿ ಬಿಟ್ಟಿದ್ದ ಹೊಸಮನೆಯ ಪಾಯ ಎದುರಾಯಿತು. ಹೊಸಮನೆ! ತನ್ನ ಜೀವಮಾನದ ಸಾಧನೆ! ಏಳು ವರ್ಷಗಳ ಉದ್ಯೋಗ ಜೀವಿನದುದ್ದಕ್ಕೂ ಲಾಗ ಹಾಕಿ, ಪಲ್ಟಿ ಹೊಡೆದು ಉಳಿಸಿದ್ದ ಹಣದ ಮುಕ್ಕಾಲು ಭಾಗವನ್ನು ಸುರಿದ ಮೇಲೆ ಅಂತೂ ಇಂತೂ ಪಾಯವೊಂದು ಪೂರ್ಣವಾಗಿತ್ತು. ಇನ್ನು ಉಳಿದಿರುವ ಹಣದಿಂದ ಹಿಡಿದು ಜೇಬಿನಲ್ಲಿರುವ ಕಟ್ಟಕಡೆಯ ರೂಪಾಯಿಯ ತನಕ ಎಲ್ಲವನ್ನೂ ಸೇರಿಸಿದರೆ ಗೋಡೆಗಳನ್ನು ಕಟ್ಟಿನಿಲ್ಲಿಸಬಹುದೆಂಬ ಅಮೋಘವಾದ ಲೆಕ್ಕವನ್ನು ರಾಮಯ್ಯ ಮೇಸ್ತ್ರಿ ಕೂಡಿ, ಕಳೆದು, ಗುಣಿಸಿ, ಭಾಗಿಸಿ ಹೇಳಿದ್ದ. 


"ಕನಿಷ್ಠ ಏಳೂವರೆಯಿಂದ ಎಂಟು ಲಕ್ಷ ಸಾಲ ಮಾಡ್ಬೇಕಾತ್ ಕಾಣಿ. ತಿಂಗ್ಳಿಗೆ ಹತ್ ಸಾವ್ರ ಕಟ್ರೂ ತೀರ್ಸೂಕೆ ಹತ್ತು ವರ್ಷ ಬೇಕಾತ್ ನಿಮ್ಗೆ‌..."


ಶಿಶಿರ್ ಅರೆಕ್ಷಣ ಆಕಾಶದತ್ತ ನೋಡಿ ಕಣ್ಮುಚ್ಚಿಕೊಂಡಿದ್ದ. ಎಂಟು ಲಕ್ಷ ಅವನಿಗೆ ದೊಡ್ಡ ಮೊತ್ತವಾಗಿ ಕಂಡಿರಲಿಲ್ಲ. ಅದನ್ನು ತೀರಿಸಲು ಬೇಕಾಗಿದ್ದ ಹತ್ತು ವರ್ಷವೂ ದೊಡ್ಡ ಅವಧಿಯೆನ್ನಿಸಿರಲಿಲ್ಲ. ಆದರೆ ಅದಕ್ಕೋಸ್ಕರ ಬೆಂಗಳೂರಿನ ಕಂಪನಿಗಳಲ್ಲಿ ಜೀತ ಮಾಡುತ್ತಾ, ಬಿಪಿ, ಶುಗರ್, ಬೊಜ್ಜುಗಳನ್ನು ಬೆಳೆಸಿಕೊಳ್ಳುತ್ತಾ ಕಳೆದುಕೊಳ್ಳಬೇಕಾದ ಅಮೂಲ್ಯ ಹತ್ತು ವರ್ಷಗಳಿದ್ದಾವಲ್ಲಾ? ಅದೇ ಅವನನ್ನು ಚಿಂತೆಗೀಡುಮಾಡಿದ್ದು. ಹೀಗೆ ಚಿಕ್ಕ ಚಿಕ್ಕ ಲೆಕ್ಕಾಚಾರಗಳೂ ದೊಡ್ಡ ದೊಡ್ಡ ಋಣಸಂದಾಯಗಳಾಗಿ ಮಧ್ಯಮ ವರ್ಗದವರ ಇಡೀ ಬದುಕನ್ನೇ ನುಂಗಿಹಾಕುವುದೆನ್ನುವ ಸತ್ಯ ಆಗಷ್ಟೇ ಅವನಿಗೆ ಅರಿವಾಗಿತ್ತು.


ಯೋಚನೆಗಳಲ್ಲಿ ಮುಳುಗಿ ನಡೆದವನ ಕಣ್ಣಿಗೆ ಅಲ್ಲೇ ಪಕ್ಕದ ತಗ್ಗಿನಲ್ಲಿ ಗಾಳಿಯ ಭಯಕ್ಕೆ ಪತರುಗುಟ್ಟುವಂತೆ ಹೊಯ್ದಾಡುತ್ತಾ ನಿಂತಿದ್ದ ಅಡಿಕೆ ತೋಟ ಕಂಡಿತು. ಪ್ರತೀ ಬಾರಿ ಗಾಳಿ ಬೀಸಿದಾಗಲೂ ಅಡಿಕೆ ಮರಗಳು ಒಂದಕ್ಕೊಂದು ಜಪ್ಪಿಕೊಂಡು ಕಾಯಿಗಳು ಮರದಿಂದುದುರಿ ಹೆಡಿಲನ ಗರಿಗಳ ಮೇಲೆ ಬೀಳುತ್ತಿದ್ದ ಪಟಪಟ ಸದ್ದು ಕರ್ಕಶವಾಗಿ ಕೇಳುತ್ತಿತ್ತು. ಅಲ್ಲಿ ಕೊಡೆ ಹಿಡಿದು ಮಳೆ ಮಾಡುತ್ತಿರುವ ಅವಾಂತರಗಳನ್ನು ಪರೀಕ್ಷಿಸುತ್ತಾ ನಿಂತಿದ್ದ ಅಪ್ಪ ಹಾಗೂ ಕೊನೆಗಾರ ಮಾದು ಆಡುತ್ತಿದ್ದ ಮಾತುಗಳು ಸ್ಪಷ್ಟವಾಗಿಯೇ ಅವನ ಕಿವಿ ತಲುಪಿದವು.


"ಕೊನೆಗೂ ಕೊಳೆರೋಗ ಬಂದೇ ಬಿಡ್ತಲ್ಲ ರಾಗಯ್ಯ?"


ಮಾದುವಿನ ಮಾತು ಬಾಯೊಳಗೆ ತುಂಬಿಕೊಂಡಿರುವ ಕವಳದ ನಡುವೆ ಕಷ್ಟದಿಂದ ಹಾದು ಹೊರಬಂತು.


"ಹೌದ್ ಮಾರಾಯಾ. ನಾಲ್ಕ್ ಸಲ ಔಸ್ತಿ ಹೊಡೆಸಿದ್ರೂ ಬಂದೇ ಬಿಡ್ತು ಧರಿದ್ರದ ಕೊಳೆ. ಈ ಬಾರಿ ಹೋದ್ಸಲದ ಕಾಲು ಭಾಗ ಬೆಳೆಯೂ ಬರೋದಿಲ್ವಾಂತ..."


ಕೊಳೆತು ಉದುರಿದ ಅಡಿಕೆಯೊಂದನ್ನು ಶವದಂತೆ ಎತ್ತಿಕೊಂಡು ಕೈಯಲ್ಲಿ ಹಿಡಿದಿದ್ದ ಅಪ್ಪ ಭಾರವಾದ ದನಿಯಲ್ಲಿ ಹಾಗಂತ ಹೇಳಿದ.


"ಹ್ವಾದ್ರೆ ಹ್ವಾಗ್ಲಿ.. ತಲೆ ಕೆಡ್ಸ್ಕಬೇಡಿ ಹ್ವಾಯ್. ಹೆಂಗಿದ್ರೂ ಮಗ ಬೆಂಗ್ಳೂರಂಗಿದ್ನಲೆ. ಎಷ್ಟ್ ಮಳಿ ಹೊಯ್ದ್ರೂ ಸಾಫ್ಟ್ ವೇರ್ ಕಂಪ್ನೀಗೆ ಕೊಳಿರೋಗ ಬತ್ತಿಲ್ಲೆ ಬಿಡಿ.."


ಹಲ್ಕಿರಿಯುತ್ತಾ ನುಡಿದ ಮಾದುವಿನ ಕೆಂಪು ಹಲ್ಲುಗಳಿಗಿಂತಲೂ ಅವನ ಮಾತುಗಳೇ ಹೆಚ್ಚು ಸಹಿಸಲಸಾಧ್ಯವೆನಿಸಿತು ಶಿಶಿರನಿಗೆ. ಆ ಮಾತುಗಳಿಂದಲೋ, ಅಲ್ಲಿ ಆ ಕ್ಷಣಕ್ಕೆ ಉತ್ಪತ್ತಿಯಾದ ನಿರೀಕ್ಷೆಯ ಹೊರೆಯಿಂದಲೋ ಪಾರಾಗುವುದಕ್ಕೇನೋ ಎಂಬಂತೆ ಬಿರಬಿರನೆ ಬಸ್ ನಿಲ್ದಾಣದತ್ತ ಹೆಜ್ಜೆಹಾಕತೊಡಗಿದ.


                   **************


"ಓಹೋಹೋ... ಏನು ಶಿಶಿರಣ್ಣೋರ್ ಸವಾರಿ ಎಲ್ಲಿಗೋ ಹೊಂಟಂಗಿದೆ?"


ಗಾಳಿ, ಮಳೆಗಳೊಂದಿಗೆ ಸೆಣೆಸುತ್ತಾ ಛತ್ರಿಯನ್ನು ಒಮ್ಮೆ ಅತ್ತ, ಇಮ್ಮೆ ಇತ್ತ ಹಿಡಿಯುತ್ತಾ ನಡೆಯುತ್ತಿದ್ದ ಶಿಶಿರನನ್ನು ನೋಡಿದ ಅಂಗಡಿಯ ಸೋಮಣ್ಣ ಗಟ್ಟಿಯಾಗಿ ಕೇಳಿದ.


"ಏನಿಲ್ಲ ಸೋಮಣ್ಣ.. ಇಲ್ಲೇ ನೊಣಬೂರಿಗೆ ಹೊರಟಿದ್ದೆ. ಮತ್ತೆ ಅರಾಮಾ..?" ಎನ್ನುತ್ತಾ ಶಿಶಿರ ಅವನ ಅಂಗಡಿಯ ಸೂರನ್ನು ಹೊಕ್ಕ. ಚಿಕ್ಕಂದಿನಿಂದಲೂ ನೋಡುತ್ತಾ ಬಂದಿರುವ, ತೊಂಭತ್ತರ ದಶಕದ ಬಣ್ಣವಿನ್ನೂ ಮಾಸದ ಅಂಗಡಿಯದು. ಹೆಚ್ಚೆಂದರೆ ಎರೆಡು ಮೂರು ಬಾರಿ ಬಣ್ಣ ಹೊಡೆದಿದ್ದನ್ನು ಬಿಟ್ಟರೆ ಹೆಚ್ಚೇನೂ ಬದಲಾಗದೆ, ತನ್ನ ಬಾಲ್ಯದ ಜೀವಂತ ಸ್ಮಾರಕದಂತೆ ಕಾಣುವ ಆ ಅಂಗಡಿಯನ್ನು ಕಂಡರೆ ಶಿಶಿರನಿಗೆ ಅದೇನೋ ಒಂಥರಾ ಪ್ರೀತಿ. ಶೀಟಿನ ತಗಡುಗಳನ್ನಿಟ್ಟು ಕಟ್ಟಿದ ಮಾಡಿನ ಕೆಳಗಿನ ಮರದ ಬೆಂಚಿನ ಮೇಲೆ ಕುಳಿತುಕೊಂಡು ಎದುರುಗಡೆಯಿರುವ  ರಸ್ತೆಯನ್ನು ನೋಡುತ್ತಾ ಸೋಮಣ್ಣ ಮಾಡಿ ಕೊಡುವ ಬಿಸಿಬಿಸಿ ನೀರುಳ್ಳಿ ಬಜೆಯನ್ನು ಕಚ್ಚುವುದು ಅವನು ಜೀವನದಲ್ಲಿ ಅತೀ ಖುಷಿಯಿಂದ ಮಾಡುವ ಕೆಲವೇ ಕೆಲವು ಚಟುವಟಿಕೆಗಳಲ್ಲೊಂದು. ಅಂಗಡಿಯ ಗೋಡೆಯ ಮೇಲೆ ಮಾಲೆಮಾಲೆಯಾಗಿ ನೇತಾಡುತ್ತಿರುವ ಚಿಲ್ಲರೆ ತಿಂಡಿಗಳ ಪೈಕಿ ತನ್ನ ಬಾಲ್ಯಕ್ಕೆ ಸಂಬಂಧಿಸಿದ್ದು ಯಾವುದಾದರೂ ಇದೆಯೇನೋ ಎಂದು ಹುಡುಕುತ್ತಲೇ ಮರದ ಬೆಂಚಿನ ಮೇಲೆ ಕೂತು "ಒಂದು ಬಿಸಿಬಿಸಿ ಚಾ" ಎಂದು ಆರ್ಡರ್ ಮಾಡಿದ.


ಕಂಬಳಿ ಕೊಪ್ಪೆ ಹೊದ್ದ ಕೆಲಸದಾಳುಗಳ ಸಾಲು ಎದುರುಗಡೆ ರಸ್ತೆಯಲ್ಲಿ ಮುದುರಿಕೊಂಡು ನಡೆಯುತ್ತಿತ್ತು. ಅವರನ್ನು ತೋಯಿಸುವ ಹಠದಲ್ಲಿ ಟಪಟಪನೆ ಬೀಳುತ್ತಿದ್ದ ಮಳೆಯ ಹನಿಗಳು ಆ ಕಂಬಳಿ ಕೊಪ್ಪೆಯ ಕರಡಿ ಚರ್ಮದಂತಹಾ ಕಪ್ಪು ಚುಂಗುಗಳೊಳಗೆ ನುಸುಳಿ ಅದೃಶ್ಯವಾಗುತ್ತಿದ್ದವು. ರಸ್ತೆ ಬದಿಯ ತೋಡಿನಲ್ಲಿನ ನೀರು ಝಳ್ಳೆಂಬ ಕೂಗು ಹೊರಡಿಸುತ್ತಾ ಉತ್ಸಾಹದಲ್ಲಿ ಓಡುತ್ತಿತ್ತು. 


"ಓಯ್ ರಮೇಶಾ... ಕಡೀಗೆ ದನ ವಾಪಾಸ್ ಬಂತನೋ ನೆನ್ನೆ?"


ಬುರುಬುರು ನೊರೆ ಲೋಟದ ತುತ್ತತುದಿಯನ್ನು ತಲುಪುವಂತೆ ಇಷ್ಟೆತ್ತರದಿಂದ ಚಹಾವನ್ನು ಸುರಿಯುತ್ತಲೇ ಸೋಮಣ್ಣ ಕೂಗಿ ಕೇಳಿದ ಪ್ರೆಶ್ನೆಗೆ ಕೆಳಗಡೆ ರಸ್ತೆಯಲ್ಲಿ ನಡೆಯುತ್ತಿದ್ದ ಆಳುಗಳ ಸಾಲಿನ ನಡುವಿನಿಂದ ಕಂಬಳಿ ಕೊಪ್ಪೆಯೊಂದು ತಲೆಯೆತ್ತಿ "ಹೋ ಬಂತು" ಎಂದಿತು. ಅದರ ಜೊತೆಗೇ ಮತ್ತೊಂದಿಷ್ಟು ಮುಖಗಳು ಇತ್ತ ಅಂಗಡಿಯತ್ತ ನೋಡಿ ಎಲೆ ಅಡಿಕೆಯಿಂದ ಕೆಂಪಾದ ಹಲ್ಲುಗಳನ್ನು ಕಿರಿದು ಮತ್ತೆ ಕೊಪ್ಪೆಯೊಳಗೆ ಸೇರಿಕೊಂಡವು. 


"ಮಜ್ಗೇಹೊಳೆಲಿ ನೆನ್ನೆ ಯಾವ್ದೋ ದನ ತೇಲ್ಕೊಂಡು ಹೋಗ್ತಿತ್ತಂತೆ. ನಮ್ ಸೀನ, ಪದ್ದು ಹಿಡ್ಯೋಕೆ ನೋಡಿದ್ರೂ ಆಗ್ಲೀಲ್ವಂತೆ. ಇವ್ನ್ ಬೇರೆ ದನ ಮನೇಗ್ ಬಂದಿಲ್ಲಾಂತಿದ್ದ.." 


ಚಾದ ಲೋಟ ಶಿಶಿರನ ಕೈಗಿಡುತ್ತಾ ನುಡಿದ ಸೋಮಣ್ಣ. ಮಳೆಯ ಛಳಿಯೊಂದಿಗೆ ಸೆಣೆಸುವಂತೆ ಬಿಸಿಬಿಸಿ ಹಬೆಯನ್ನು ಸೂಸುತ್ತಿದ್ದ ಚಾವನ್ನು ತುಟಿಗಿಟ್ಟುಕೊಂಡ ಶಿಶಿರನಿಗೆ ಇದೆಲ್ಲ ಒಂದು ಸುಂದರ ಚಲನಚಿತ್ರದಂತೆ, ತಾನೂ ಈ ಕ್ಷಣಕ್ಕೆ ಈ ಚಲನಚಿತ್ರದ ಭಾಗವಾಗಿರುವಂತೆ ಭಾಸವಾಗತೊಡಗಿತು. ಈ ಅಂಗಡಿಯ ಕಟ್ಟೆ, ಇಲ್ಲಿಂದ ಕಾಣುವ ಹಳ್ಳಿಯ ಚಿತ್ರ, ಈ ಮಳೆ, ಕೆಲಸದಾಳುಗಳು, ತನಗೊಂದು ಹನಿ ಹಾಲನ್ನೂ ಕೊಡದ ಯಾರದೋ ಮನೆಯ ದನದ ಮೇಲೆ ಇನ್ಯಾರಿಗೋ ಇರುವ ಕಾಳಜಿ, ವ್ಯವಹಾರವನ್ನು ಮೀರಿದ ಬಂಧವೊಂದರಲ್ಲಿ ಒಬ್ಬರಿಗೊಬ್ಬರು ಬೆಸೆದುಕೊಂಡಿರುವ ಇಲ್ಲಿನ ಸಂಸ್ಕೃತಿ… 


ಆ ಪಟ್ಟಣದಲ್ಲೇಕೆ ಇವೆಲ್ಲಾ ಇಲ್ಲ?


ಹೀಗೆಲ್ಲ ಯೋಚಿಸುತ್ತಿರುವಂತೆಯೇ ಶಿಶಿರನ ಕಣ್ಣು ರಸ್ತೆಯ ಆಚೆ ದಿಬ್ಬದಲ್ಲಿರುವ ಮನೆಯತ್ತ ಹೋಯಿತು. ಅಲ್ಲಿ ಪಾರದರ್ಶಕ ರೈನ್ ಕೋಟ್ ತೊಟ್ಟ ಅಪರಿಚಿತ ಆಕೃತಿಯೊಂದು ಕೈಯಲ್ಲೊಂದು ಗುದ್ದಲಿ ಹಿಡಿದು ಅಂಗಳದಲ್ಲೆಂತದೋ ಕೆಲಸದಲ್ಲಿ ತೊಡಗಿತ್ತು.


"ಅದ್ಯಾರದು ಸೋಮಣ್ಣ? ತೋಡು ಬಿಡಿಸ್ತಿರೋದು?"


ಶಿಶಿರ ಕೇಳಿದ. ಅತ್ತ ಹಣಕಿ ನೋಡಿದ ಸೋಮಣ್ಣನ ಮುಖದ ತುಂಬಾ ಅಚಾನಕ್ಕಾಗಿ ತಾತ್ಸಾರ ತುಂಬಿಕೊಂಡಿತು.


"ಓ ಅದಾ.. ನಮ್ ಸುಬ್ಬಣ್ಣಯ್ಯನೋರ ಮಗ ರಮೇಶ. ನೀವೆಲ್ಲ ದೊಡ್ಡವ್ರಾಗೋದ್ರೊಳ್ಗೇ ಓದು ಮಗ್ಸಿ ಬೆಂಗ್ಳೂರ್ ಸೇರ್ಕಂಡೋರ್ ಅವ್ರು. ಒಂಥರಾ ವಿಚಿತ್ರ ಜನ. ಹತ್-ಹದಿನೈದ್ ವರ್ಷದಿಂದ ಯಾವ್ದೋ ಕಂಪ್ನೀಲಿ ಕೆಲ್ಸಕ್ಕಿದ್ರು. ನಲವತೈವತ್ ಸಾವ್ರ ಸಂಬ್ಳ ಬರ್ತಿತ್ತು‌. ಸುಮ್ನೆ ಮಾಡ್ಕಂಡ್ ಹೋಗೋದ್ ಬಿಟ್ಟು ಟೈಮಿಲ್ಲ, ನೆಮ್ಮದಿ ಇಲ್ಲ, ಊರಲ್ಲಿ ಜಮೀನ್ ಮಾಡ್ತೀನಿ ಅಂತ ಕೆಲ್ಸ ಬಿಟ್ಟು ಊರಿಗೆ ಬಂದ್ರು. ಇರೋ ಶಪ್ಪಡ್ಕಿನ್ ಜಾಗದಲ್ಲಿ ಹಿಂಗೇ ಗುದ್ಲಿ, ಪಿಕಾಸಿ ಹಿಡ್ಕಂಡು ಒಂದಿಷ್ಟು ದಿನ ಗುದ್ದಾಡಿದ್ರು‌. ಅಲ್ಲಿ ಸಿಟೀಲಿ ಸಾವ್ರಸಾವ್ರ ಕಂಡ ಜೀವ್ನಕ್ಕೆ ಇಲ್ಲಿ ಸಿಗೋ ಚಿಲ್ರೆ ಹಣ ಹೆಂಗ್ ಸಾಕಾದೀತು? ಒಂದಷ್ಟ್ ದಿನ ಒದ್ದಾಡಿ ಕೊನೆಗೆ ಮತ್ತೆ ಬೆಂಗ್ಳೂರಿಗೇ ಹೋದ್ರು‌. ಇನ್ನೂ ಕೆಲ್ಸ ಸಿಗ್ದೇ ಎಲ್ಲೆಲ್ಲೋ ಅಲೀತಿದಾರಂತೆ‌. ಪಾಪ ಅವ್ರ ಹೆಂಡ್ತಿ ಯಾವ್ದೋ ಕಂಪ್ನೀಲಿ ಕೆಲ್ಸ ಮಾಡಿ ಮನೆ ನಡೆಸ್ತಿದಾರಂತೆ‌. ಎಂಥಾ ಮರ್ಲ್ ಜನ ನೋಡಿ.‌‌."


ವ್ಯಂಗ್ಯದ ನಗೆಯೊಂದಿಗೆ ಸೋಮಣ್ಣ ಮಾತುಮುಗಿಸಿದ.


ಶಿಶಿರ ನಗಲಿಲ್ಲ. ಯೋಚಿಸತೊಡಗಿದ: ಎಲಾ ಊರ ಮೇಲಿನ ಪ್ರೇಮವೇ! ಬರೀ ಇಪ್ಪತ್ತು-ಮೊವ್ವತ್ತರ ಭಾವುಕ ಮನಸ್ಕರನ್ನಷ್ಟೇ ಕಾಡುತ್ತೀಯೆಂದು ತಿಳಿದರೆ ನಲವತ್ತು ದಾಟಿದವರನ್ನೂ ಈ ಪರಿ ಹಿಂಸಿಸುತ್ತೀಯಲ್ಲಾ? ತನ್ನದೇನೋ ಅವಿವಾಹಿತ ಅಲೆಮಾರಿ ಮನಸ್ಸು‌. ಆದರೆ ವರ್ಷಾನುವರ್ಷಗಳಿಂದ ಅಲ್ಲಿ ಪಟ್ಟಣದಲ್ಲೇ ಮನೆ ಮಾಡಿಕೊಂಡು, ಅಲ್ಲೇ ಹೆಂಡತಿ-ಮಕ್ಕಳು, ಬಂಧು-ಬಳಗ, ಸ್ನೇಹಿತ-ಹಿತೈಶಿಗಳರುವ 'ಸ್ಥಿರ' ಬದುಕನ್ನು ಕಟ್ಟಿಕೊಂಡವರ ಕನವರಿಕೆಯಲ್ಲೂ ಹುಟ್ಟಿದೂರೇ ಇರುತ್ತದೆಂದರೆ!? ಇದೇನು ಹೋಮ್ ಸಿಕ್ನೆಸ್ಸಾ ಅಥವಾ ಇರುವುದನ್ನು ಪ್ರೀತಿಸಲಾಗದೆ ಇನ್ಯಾವುದಕ್ಕೋ ಹಂಬಲಿಸುವ ಚಂಚಲತೆಯಾ? ಈ ಮುಂಚೆ ತಾನು ಕೆಲಸ ಮಾಡುತ್ತಿದ್ದ ದೊಡ್ಡ ಕಂಪನಿಯಲ್ಲಿ ಲಕ್ಷ ಸಂಬಳ ಪಡೆಯುತ್ತಿದ್ದ ತನ್ನ ಮ್ಯಾನೇಜರ್ ಸಹಾ ಅದೊಂದು ದಿನ ಪೆಟ್ಟಿ ಅಂಗಡಿಯಲ್ಲಿ ಜೊತೆಗೆ ಟೀ ಕುಡಿಯುತ್ತಾ ನಿಂತಿದ್ದಾಗ 'ಹಳ್ಳಿಯಲ್ಲೊಂದಿಷ್ಟು ಜಮೀನು ಕೊಳ್ಳುತ್ತೇನೆ. ಎರೆಡು ಹಸು ಕಟ್ಟಿ ಹೈನುಗಾರಿಕೆ ಮಾಡ್ತೇನೆ. ಮನೆಯ ಸುತ್ತ ತರಕಾರಿ ಬೆಳೆಯುತ್ತೇನೆ' ಎಂದೆಲ್ಲಾ ಕನವರಿಸುವವರಂತೆ ಹೇಳಿದ್ದರು. ಹಳ್ಳಿಯವರಿಗೆ 'ಕಾಣುವ' ಪಟ್ಟಣದ ಬದುಕು ಹಾಗೂ ಹಳ್ಳಿಬಿಟ್ಟು ಪಟ್ಟಣ ಸೇರಿಕೊಂಡವರು 'ಅನುಭವಿಸುವ' ಪಟ್ಟಣದ ಬದುಕು- ಒಂದೇ ಎಂಬಂತೆ ಕಾಣುವ ಇವೆರೆಡರ ನಡುವೆ ಅದೆಷ್ಟೊಂದು ವ್ಯತ್ಯಾಸ! ಎರೆಡು ದಿನ ರಜೆ ಹಾಕಿ ಬಂದು, ಗುದ್ದಲಿ ಹಿಡಿದು ಹೀಗೆ ಜಡಿಮಳೆಯಲ್ಲಿ ತೋಯುತ್ತಾ 'ನಾನೂ ಊರ ಮಗ' ಎಂದು ಸಂಭ್ರಮಿಸುವ ರಮೇಶನಂತಹಾ ಅದೆಷ್ಟು ಅತೃಪ್ತ ಜೀವಗಳನ್ನು ಊರು ಕೊನೆಗೂ ತನ್ನ ಮಡಿಲಿಗೆಳೆದುಕೊಳ್ಳುತ್ತದೆ? 


ಯೋಚಿಸುತ್ತಲೇ ಮೇಲೆದ್ದ ಶಿಶಿರನಿಗೆ ಎರೆಡು ವರ್ಷಗಳ ಪ್ರಾಜೆಕ್ಟ್ ಗೆಂದು ಜರ್ಮನಿಗೆ ಹೋಗಿ ಬಂದಿದ್ದ ಗೆಳೆಯ ಶ್ಯಾಮನ ಮಾತುಗಳು ನೆನಪಾದವು‌. ಅಲ್ಲಿ ಹೀಗೆಲ್ಲಾ ಇಲ್ಲವಂತೆ. ಹಳ್ಳಿಯಂತಹಾ ಹಳ್ಳಿಗಳಲ್ಲೂ ಕಂಪನಿಗಳಿದ್ದಾವಂತೆ! ಪಟ್ಟಣದಂತಹಾ ಪಟ್ಟಣಗಳಲ್ಲೂ ಗದ್ದೆ, ತೋಟ, ಹಳ್ಳಗಳಿದ್ದಾವಂತೆ! ಆರು ತಿಂಗಳು ಅಲ್ಲಿದ್ದ ಶ್ಯಾಮ ಪ್ರತಿದಿನ ಆಫೀಸಿಗೆ ಹೋಗಬೇಕಾದರೆ ಗದ್ದೆ-ತೋಟಗಳನ್ನು ದಾಟಿಕೊಂಡು ಹೋಗಬೇಕಿತ್ತಂತೆ! ಅಲ್ಲಿನ ರೈತರೂ ಸಹಾ ಬೆನ್ಜ್ ಕಾರು ಕೊಳ್ಳುತ್ತಾರಂತೆ! ಎಂತಹಾ ಪುಣ್ಯವಂತರು! ನಾವಿಲ್ಲಿ ಆಶ್ಚರ್ಯ ಸೂಚಕ ಚಿಹ್ನೆಗಳಿಂದಲೇ ಕೊನೆಗೊಳಿಸುವ ಅದೆಷ್ಟೋ ಸಂಗತಿಗಳನ್ನು ಅವರು ಸಾಮನ್ಯ ವಿಷಯಗಳೆಂಬಂತೆ ನಿತ್ಯಜೀವನದಲ್ಲಿ ಅನುಭವಿಸುತ್ತಿದ್ದಾರೆ! ಶ್ಯಾಮನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಶಿಶಿರನಿಗೆ ಪಟ್ಟಣದ ಬದುಕನ್ನು ಹೀಗೆ ಅನಿವಾರ್ಯವಾಗಿಸಿರುವ ಸರ್ಕಾರದ ಮೇಲೆ, ರಾಜಕಾರಣಿಗಳ ಮೇಲೆ, ಅದನ್ನೇ ಸಾರ್ವತ್ರಿಕವಾಗಿ ಒಪ್ಪಿಕೊಂಡಿರುವ ಜನರ ಮೇಲೆ, ಕೊನೆಗೆ ತನ್ನ ಮೇಲೂ ಅಸಾಧ್ಯ ಕೋಪವುಕ್ಕಿತ್ತು. 


                      **********


"ಎನಫ್ ಈಸ್ ಎನಫ್"


ಶಿಶಿರ ಸ್ವಲ್ಪ ಜೋರಾಗಿಯೇ ಗೊಣಗಿಕೊಂಡ. ಬೆಂಗಳೂರಿಗೆ ಒಳಹೋಗುವ ದಾರಿಗಳು ಮಾತ್ರ ಅಲ್ಲ, ಹೊರಬರುವ ಮಾರ್ಗಗಳೂ ಇವೆ. ಒಳಬರುತ್ತೇವೋ, ಹೊರಹೋಗುತ್ತೇವೋ ಎನ್ನುವುದು ಯಾವ ಬಸ್ಸನ್ನು ಹತ್ತುತ್ತೇವೆನ್ನುವುದರ ಮೇಲೆ ನಿರ್ಧಾರವಾಗುತ್ತದೆ. 


ತಾನೀಗ ಬಸ್ಸು ಬದಲಿಸುವ ಸಮಯ ಬಂದಿದೆ.


ಭಯವನ್ನು ಕಟ್ಟಿಡಬೇಕು. ಜನ ಏನನ್ನುತ್ತಾರೋ ಎನ್ನುವ ಭಯ. 'ಪೇಟೆಯವನು' ಎನ್ನುವ ಪೇಟ ಎಲ್ಲಿ ಕಳಚಿ ಬೀಳುತ್ತದೋ ಎನ್ನುವ ಭಯ‌. ಪರ್ಸಿನೊಳಗೆ ಏನನ್ನು ತುಂಬಿಕೊಳ್ಳಲಿ ಎನ್ನುವ ಭಯ. 'ಪಟ್ಟಣದ ಹುಡುಗನೇ ಬೇಕು' ಎನ್ನುವ ಹುಡುಗಿಯರ ಭಯ! 


ಸೂರಿಯ ಅಂಗಡಿ ಚೆನ್ನಾಗಿ ನಡೆಯುತ್ತಿದೆ. ಈ ಮೊದಲೇ ಅವನು ಒಂದೆರೆಡು ಬಾರಿ ಕೇಳಿದ್ದ. ಒಂದು - ಒಂದೂವರೆ ಲಕ್ಷ ಹೂಡಿದರೆ ಐಸ್ಕ್ರೀಂ, ಕೋಲ್ಡ್ ಡ್ರಿಂಕ್ಸ್, ಮತ್ತೊಂದಿಷ್ಟು ಬೇಕರಿ ಐಟಮ್ ಗಳನ್ನ ಇಡಬಹುದು. ಊರಲ್ಲಿ ಎಲ್ಲೂ ಅವೆಲ್ಲಾ ಇಲ್ಲ ಎನ್ನುತ್ತಿದ್ದ. ಆ ಒಂದೂವರೆ ಲಕ್ಷವನ್ನು ನಾನೇ ಹೊಂದಿಸಿಕೊಡಬೇಕು. ಬಂದ ಲಾಭದಲ್ಲಿ ಅಷ್ಟಷ್ಟೇ ಕೂಡಿಸುತ್ತಾ ನಿಧಾನಕ್ಕೆ ಒಂದೆಕರೆ ನೀರಾವರಿ ಜಮೀನು ಕೊಳ್ಳಬೇಕು. ಅಲ್ಲಿಗೆ ಬೆಂಗಳೂರಿನ ಹಾದಿ ಪೂರ್ಣವಾಗಿ ಮುಚ್ಚುತ್ತದೆ...


'ಯಾರ್ರೀ ಸಿರ್ಗಾರ್ ಕೈಮರ ಇಳ್ಯೋರೂ?"


ಕಂಡಕ್ಟರ್ ನ ಕೂಗು ಯೋಚನೆಗಳ ಆಳದೊಳಗೆ ಕೊಕ್ಕೆ ಹಾಕಿ ಶಿಶಿರನನ್ನು ಆಚೆ ಎಳೆಯಿತು. ಬಸ್ಸಿಂದ ಇಳಿದು ನೇರ ಸೂರಿಯ ಅಂಗಡಿಯತ್ತ ಹೆಜ್ಜೆ ಹಾಕಿದ. ಹೇಗಿರಬಹುದು ಸುರೇಶ? ಎಷ್ಟಿರಬಹುದು ಅವನ ತಿಂಗಳ ಆದಾಯ? ದಿನಕ್ಕೆ ಮುನ್ನೂರು ರೂಪಾಯಿ ವ್ಯಾಪಾರ ಆದ್ರೂ ಸಾಕು ಮಾರಾಯ ಎನ್ನುತ್ತಿದ್ದ. ಹಳ್ಳಿಯಲ್ಲಿ ನೆಮ್ಮದಿ ಅಷ್ಟು ಅಗ್ಗಕ್ಕೆ ದೊರೆಯುತ್ತದಾ? ಬರೀ ಮುನ್ನೂರು ರೂಪಾಯಿಗೆ? ಇದಕ್ಕೆಲ್ಲ ಉತ್ತರಿಸಬೇಕಾದವನು ಅವನೇ. ಕೇಳಬೇಕು ಅವನನ್ನ: ಓದಿದ್ದೇವೆನ್ನುವ ಒಂದೇ ಒಂದು ಕಾರಣಕ್ಕೆ ಎಲ್ಲರೂ ಬಿಟ್ಟುಹೋಗುವ ಇದೇ ಹಳ್ಳಿಯಲ್ಲಿ ಅದು ಹೇಗೆ ಬದುಕು ಕಂಡುಕೊಂಡೆ ಎಂದು. ನಾನಲ್ಲಿ ಕಂಪ್ಯೂಟರ್ ಮುಂದಿನ ಅಸಹಾಯ ಕುರ್ಚಿಗಳಲ್ಲಿ, ಅರ್ಥವೇ ಇಲ್ಲದ ಫೈಲುಗಳ ಕಡತಗಳಲ್ಲಿ, ಬಾಸ್ ಜೊತೆಗಿನ ಬಿಸಿಬಿಸಿ ಚರ್ಚೆಗಳಲ್ಲಿ, ಇಷ್ಟವೇ ಆಗದ ಡೆಬಿಟ್ ಕ್ರೆಡಿಟ್ ಗಳನ್ನು ಹೊಂದಿಸುವ ಮಂಡೆಬಿಸಿಯಲ್ಲಿ ಮತ್ತೆಮತ್ತೆ ದಣಿಯುತ್ತಾ ಅದನ್ನೇ ಜೀವನವೆಂದು ನಂಬಿರುವಾಗ ಇಲ್ಲಿ ಬಳ್ಳಿ ಹಬ್ಬುವ ಲಯವನ್ನೂ, ಹೂವು ಅರಳುವ ಸೌಂದರ್ಯವನ್ನೂ, ನೆಟ್ಟ ಗಿಡ ಬೆಳೆ ಬೆಳೆಯುವ ಸಂಭ್ರಮವನ್ನೂ ತಮ್ಮ ತಮ್ಮ ಜೀವನೋಪಾಯವಾಗಿಸಿಕೊಂಡು ಬದುಕುವ ಮಹಾಭಾಗ್ಯದ ಕಥೆಯನ್ನಾದರೂ ಕೇಳಿ ಕೃತಾರ್ಥನಾಗಬೇಕು. ಹಾಗೆಂದು ಯೋಚಿಸುವಾಗಲೇ ಶಿಶಿರ ಸುರೇಶನ ಅಂಗಡಿಯ ಅಂಗಳವನ್ನು ಪ್ರವೇಶಿಸಿದ. 'ಸುಸ್ವಾಗತ' ಎಂಬ ಕೊಳೆ ಹಿಡಿದ ದ್ವಾರಬಾಗಿಲಿನ ಮೇಲಿನ ಬರಹವನ್ನು ಓದಿಕೊಂಡು ಒಳಗೆ ಹೋದವನಿಗೆ ಸುರೇಶನ ಅಂಗಲಾಚುವ ದನಿ ಅನಿರೀಕ್ಷಿತವಾಗಿ ಕಿವಿಮೇಲೆ ಬಿತ್ತು.


"ಇನ್ನು ಒಂದೇ ಒಂದು ವಾರ ಟೈಮ್ ಕೊಡಿ ಅಣ್ಣ.. ಪೂರ್ತಿ ಒಂದೂವರೆ ಸಾವ್ರ ನಿಮ್ ಅಕೌಂಟ್ಗೆ ಹಾಕ್ಬಿಡ್ತೀನಿ... ಈ ಸಲ ಖಂಡಿತ ತಪ್ಸಲ್ಲ.. ಖಂಡಿತಾ ಅಣ್ಣ.."


ಮಾತಿನ ನಡುವೆಯೇ ಶಿಶಿರನಿಗೆ ಕುಳಿತುಕೋ ಎಂಬಂತೆ ಸನ್ನೆ ಮಾಡಿದ ಅವನು ಮತ್ತೆರೆಡು ನಿಮಿಷ ಅಂಗಲಾಚುವಿಕೆಯನ್ನ ಮುಂದುವರಿಸಿದ. ಅವನ ಮಾತುಗಳತ್ತ ಕಿವಿನೆಟ್ಟು ಕುರ್ಚಿಯಲ್ಲಿ ತಳವಿಟ್ಟ ಶಿಶಿರ ಅಂಗಡಿಯೊಳಗೆಲ್ಲಾ ದೃಷ್ಟಿ ಹರಿಸಿದ. ಆಗಷ್ಟೇ ಧೂಳಿನ ಸಣ್ಣ ಮಳೆಯೊಂದು ಸುರಿದು ಹೋದಂತಿತ್ತು ಆ ಕೋಣೆಯೊಳಗಿನ ಸ್ಥಿತಿ. ಮರದ ರ್ಯಾಕ್ ನಲ್ಲಿ ಅರ್ಧ ಖರ್ಚಾಗಿ ಉಳಿದ ನೋಟ್ ಪುಸ್ತಕಗಳು ಆ ಧೂಳನ್ನೇ ಹೊದ್ದು ಬಿಮ್ಮನೆ ಕುಳಿತಿದ್ದವು. ಉರುಟು ಕರಡಿಗೆಯೊಳಗೆ ವಾಲಿಸಿಟ್ಟ ಬಣ್ಣದ ಪೆನ್ಸಿಲ್ ಗಳು ನಿಂತಲ್ಲೇ ನಿದ್ರೆ ಹೋದಂತೆ ಕಾಣುತ್ತಿದ್ದವು. ರ್ಯಾಕ್ ತುದಿಯಲ್ಲಿ ನಗುವ ಬುದ್ಧನ ವಿಗ್ರಹವೊಂದು ಶತಮಾನದಿಂದ ಹೀಗೇ ಧ್ಯಾನಿಸುತ್ತಿರುವಂತೆ ಕುಳಿತಿತ್ತು. ಅರ್ಧ ಮುಚ್ಚಿದ ಕಾಗದದ ಬಾಕ್ಸ್ ನೊಳಗಿನ ಎರೇಸರ್, ಶಾರ್ಪ್ನರ್ ಗಳು ಏನನ್ನೂ ಅಳಿಸಲಾಗದೇ, ಏನನ್ನೂ ಹೆರೆಯಲಾಗದೆ ಅಸಹಾಯಕವಾಗಿ ಮಲಗಿದ್ದವು. ಗೋಡೆಗೆ ತೂಗುಹಾಕಿದ ಪ್ಯಾಕೆಟ್ನೊಳಗಿನ ಮೊಬೈಲ್ ನ ಅಂಗಿ-ಚಡ್ಡಿಗಳು ತಮ್ಮನ್ನು ತೊಡುವವರಿಗಾಗಿ ತೀವ್ರವಾಗಿ ಕಾಯುತ್ತಿರುವಂತೆ ಭಾಸವಾಗುತ್ತಿತ್ತು. ಗೋಡೆಯಲ್ಲಿದ್ದ, ಚಂದದ ಹುಡುಗಿಯೊಬ್ಬಳು ಕೈಮುಗಿದು ನಿಂತ ಚಿತ್ರವಿರುವ ಕ್ಯಾಲೆಂಡರ್ ಇನ್ನೂ ಕಳೆದ ತಿಂಗಳನ್ನೇ ತೋರಿಸುತ್ತಾ ನೇತಾಡುತ್ತಿತ್ತು. ಅದನ್ನು ನೋಡಿದ ಶಿಶಿರನಿಗೆ ಇಲ್ಲಿ ಕೆಲದಿನಗಳಿಂದ ಕಾಲ ನಿಂತೇ ಹೋಗಿದೆಯೇನೋ ಎಂದು ತೀವ್ರವಾಗಿ ಅನ್ನಿಸತೊಡಗಿತು. ಅಷ್ಟರಲ್ಲಿ ಕೊನೆಗೂ ಒಂದು ವಾರದ ಸಮಯವನ್ನು ಪಡೆದ ಸೂರಿ ಫೋನಿಟ್ಟು ಉಷ್ಯಪ್ಪಾ ಎಂದು ನಿಟ್ಟುಸಿರಿಟ್ಟ. 


ಯಾಕೋ ಶಿಶಿರನಿಗೆ ಆ ನಿಟ್ಟುಸಿರು ಅವನ ಅಂಗಡಿಯ ಪ್ರತಿಯೊಂದು ಸರಕಿನಿಂದಲೂ ಹೊರಬಂದಂತೆ ಭಾಸವಾಯಿತು.


"ಏನಪ್ಪಾ ಮತ್ತೆ ಸಮಾಚಾರ? ಯಾವಾಗ ಬಂದೆ ಊರಿಗೆ?"


ಹಾಗೆ ಕೇಳುವಾಗ ಸುರೇಶನ ಮುಖದ ಮೇಲೆ ಮೂಡಿದ ನಗು ಇಷ್ಟು ಹೊತ್ತು ತಾನು ಅಂಗಲಾಚಿದ ಮುಜುಗರವನ್ನು ಮರೆಸುವ ವ್ಯಾಪಾರೀನಗೆಯಂತಿತ್ತು. 


"ನಾನು ಮೊನ್ನೆ ಬಂದೆ. ಏನಿದು ನಿನ್ನ ಕಥೆ?"


ಶಿಶಿರ ಕಳವಳದಿಂದ ಕೇಳಿದ.


"ಇದು ಕಥೆ ಅಲ್ಲ ಮಾರಾಯ, ಜೀವನ"


ಸೂರಿ ಜೋರಾಗಿ ನಕ್ಕು ಮುಂದುವರಿಸಿದ.


"ಸಾರಿ, ನಿಂಗೆ ಕಾಲ್ ಮಾಡೋಕಾಗ್ಲೀಲ ಇತ್ತೀಚೆಗೆ. ಹಳ್ಳಿ ಮನೆಯ ಅಂಗಡಿ ಅಂದ್ರೆ ಇನ್ನು ಹೇಗಿರತ್ತೆ ಹೇಳು? ಹೇಳೀಕೇಳೀ ಮಳೆಗಾಲ ಬೇರೆ. ಏನೇನೂ ವ್ಯಾಪಾರ ಇಲ್ಲ ಮಾರಾಯಾ. ಇಲ್ನೋಡು, ಆರು ತಿಂಗಳ ಕೆಳಗೆ ತಂದ ಐಟಮ್ಗಳೆಲ್ಲ ಹಾಗಾಗೇ ಬಿದ್ದಿದಾವೆ. ನಂದು ಮಾತ್ರ ಅಲ್ಲ, ಇಲ್ಲಿನ ಎಲ್ಲರದ್ದೂ ಇದೇ ಕಥೆ. ಇತ್ತೀಚೆಗೆ ಮನೆಗೊಂದು ಕಾರು, ತಲೆಗೊಂದು ಬೈಕು ಬಂದ ಮೇಲೆ ಜನಕ್ಕೆ ಪಟ್ಟಣ ತುಂಬಾ ಹತ್ರ ಆಗಿದೆ. ಎರೆಡು ರೂಪಾಯಿಯ ಪೆನ್ಸಿಲ್ ಕೊಳ್ಳೋದಕ್ಕೂ ಅಲ್ಲಿಗೇ ಹೋಗ್ತಾರೆ. ಐದು ರೂಪಾಯಿ ಕೊತ್ತಂಬರಿ ಕಟ್ಟು ಬೇಕಂದ್ರೂ ಅವರ ಬೈಕು ನೇರ ಸಿಟಿಗೇ ಓಡ್ತದೆ. ನಿನ್ನ ಬದುಕೇ ಪರವಾಗಿಲ್ಲ. ತಿಂಗಳ ಸಂಬಳ ಅಂತ ಒಂದು ಮೊತ್ತವಾದರೂ ತಪ್ಪದೇ ಬರುತ್ತೆ. ಪಾಪ.. ಎದುರುಗಡೆ ಅಂಗಡಿಯ ವಾಲ್ಮೀಕಿ ಮೊನ್ನೆ ಎಂಟ್ಹತ್ತು ಇಂತಿಂಥಾ ದೊಡ್ಡ ಚಿಪ್ಸು, ಮೈದಾಹಿಟ್ಟು, ರಾಗಿ ಹಿಟ್ಟಿನ ವ್ಯಾಪಾರವಾಗದ ಪ್ಯಾಕೇಟುಗಳನ್ನ ತಂದು 'ದನಕ್ಕೆ ಕೊಡು' ಎಂದು ನಂಗೆ ಕೊಟ್ಟು ಹೋದ" ಎನ್ನುತ್ತಾ ಅಂಗಡಿಯ ಮೂಲೆಯತ್ತ ಕೈತೋರಿಸಿದ. ಅಲ್ಲಿ ತಿಂಗಳಾನುಗಟ್ಟಲೆ ಬಿಕರಿಯಾಗಲು ಕಾದೂ ಕಾದೂ ಸೋತಿದ್ದ ವಿವಿಧ ಕಂಪನಿಯ ಲೇಬಲ್ ಹೊತ್ತ ಪ್ಯಾಕೇಟುಗಳು ಅಪರಾಧಿಗಳಂತೆ ತಲೆತಗ್ಗಿಸಿ ನಿಂತಿದ್ದವು.


"ಸಿಟಿ.."


ಅಷ್ಟಂದ ಶಿಶಿರ ಭಾರವಾಗಿ ನಿಟ್ಟುಸಿರಿಟ್ಟ.


"ಈ ಪಟ್ಟಣ ಅನ್ನೋದು ಜನರ ಪಾಲಿಗೆ ಇಂದು ಕೇವಲ ಒಂದು ಹುಚ್ಚಾಗಿ ಉಳಿದಿಲ್ಲ ಸೂರಿ. ಅದೀಗ ಎಲ್ಲರ ಅನಿವಾರ್ಯವಾಗಿಬಿಟ್ಟಿದೆ. ಊರಲ್ಲಿ ಪೂರ್ತಿ ಹೊಟ್ಟೆ ತುಂಬಿಸುವ ಹತ್ತು ಸಾವಿರಕ್ಕಿಂತಲೂ ಪಟ್ಟಣದಲ್ಲಿ ಅರ್ಧ ಹಸಿವನ್ನೂ ನೀಗಿಸದ ಮೊವ್ವತ್ತು ಸಾವಿರವನ್ನೇ ಎಲ್ಲರೂ ಬಯಸುತ್ತಾರೆ. ಪಟ್ಟಣದ ಸರಕೇ ಬೇಕು. ಪಟ್ಟಣದ ಸೇವೇಯೇ ಆಗಬೇಕು. ಪಟ್ಟಣದ ಬೀದಿಗಳಲ್ಲಿ ಅಲೆದಾಡುವುದೇ ಚಂದ... ಇವೆಲ್ಲದರ ನಡುವೆ ಅತ್ತ ಪಟ್ಟಣಿಗರೂ ಆಗದೆ, ಇತ್ತ ಹಳ್ಳಿಯವರೂ ಆಗದೆ ನಡು ಹೊಸಿಲಲ್ಲೇ ಉಳಿದು ಸೊರಗುವ ನನ್ನ-ನಿನ್ನಂಥವರನ್ನು ಕೇಳುವವರಾದರೂ ಯಾರು?"


ತನ್ನಷ್ಟಕ್ಕೇ ಎಂಬಂತೆ ನುಡಿದ ಶಿಶಿರನ ಮಾತಿಗೆ ಏನನ್ನೂ ಹೇಳದಾದ ಸೂರಿ ಏನೋ ಹೊಳೆದಂತೆ ಥಟ್ಟನೆ ಮೇಲೆದ್ದ. "ಲಾಗದಮನೆ ಶಂಕ್ರಣ್ಣನತ್ರ ಐದು ಸಾವಿರ ಇದ್ರೆ ಕೊಡಿ ಅಂದಿದ್ದೆ. ಈಗ ಬಾ ಅಂದಿದ್ರು. ಹೋಗಿ ತರೋಣ ಬರ್ತೀಯಾ?" ಎನ್ನುತ್ತಾ ಹೊರಗೆ ನಡೆದ. ಹಳ್ಳಿ ಬದುಕಿನ ಮತ್ತೊಂದು ಯಾಚನೆ, ಮತ್ತೊಂದು ಬೇಡುವಿಕೆಯನ್ನು ನೋಡಲಿಚ್ಛಿಸದ ಶಿಶಿರ "ಇಲ್ಲ ಹೋಗಿ ಬಾ" ಎನ್ನುತ್ತಾ ಮೇಲೆದ್ದ. ದ್ವಾರಬಾಗಿಲಿನಲ್ಲಿ 'ನಮಸ್ಕಾರ. ಪುನಃ ಬನ್ನಿ' ಎಂಬ ಬರಹದ ಕೆಳಗೆ ಕೈಗಳೆರೆಡು ಮುಗಿದುಕೊಂಡಿದ್ದವು. ಆ ನಮಸ್ಕಾರ, ಆ ಆಶಯ ಇಡೀ ಹಳ್ಳಿ ಬದುಕಿನ ಸಕಲ ಜೀವನದ್ದೆಂಬಂತಿತ್ತು.


ಶಿಶಿರನನ್ನು ಬಸ್ಸು ನಿಲ್ದಾಣದ ತನಕ ಬೈಕಿನಲ್ಲಿ ಬಿಟ್ಟ ಹೊರಡುವ ಮುನ್ನ ಸುರೇಶ ಕೊನೆಯ ಆಘಾತದ ಮಾತನ್ನು ನುಡಿದ:


"ಮುಂದಿನ ತಿಂಗಳಲ್ಲಿ ಅಂಗಡಿ ಖಾಲಿ ಮಾಡಿ ಬೆಂಗಳೂರಿಗೆ ಬರ್ಬೇಕಂತಿದೀನಿ. ಯಾವುದಾದ್ರೂ ಕೆಲಸ ಇದ್ರೆ ಹೇಳು..."


ಶಿಶಿರ ಥಟ್ಟನೆ‌ ತಿರುಗಿದ. ತಾನು ಯಾರ ಬಳಿ 'ನನಗೆ ಆಸರೆಯಾಗು' ಎಂದು ಕೇಳಲು ಬಂದಿದ್ದನೋ ಆ ಆಸರೆಯೇ ಅವನೆದುರು ನಿಂತು 'ನನ್ನನ್ನು ಉಳಿಸು' ಎಂದು ಕೇಳುತ್ತಿರುವುದನ್ನು ನೋಡಿದವನ ಮನದಿಂದ ನಗೆಯೊಂದು ಭಾರವಾಗಿ ಹೊರಬಂತು. 


"ಬಾ ಸೂರಿ.. ಇಷ್ಟಪಡದವರನ್ನೇ ಬಿಡದ ಪಟ್ಟಣ.. ಇನ್ನು ಕಷ್ಟ ಪಡುವವರಿಗೆ ಇಲ್ಲ ಎನ್ನುತ್ತದೆಯೇ? ಧಾರಾಳವಾಗಿ ಬಾ..."


ಸೂರಿಗೆ ಕೈಬೀಸಿದ ಶಿಶಿರ ಬಸ್ಸು ಹತ್ತಿ ಕುಳಿತ. ಮುಚ್ಚಿದ ಕಿಟಕಿ ಗಾಜಿನಾಚೆಗೆ ಸುರಿಯುತ್ತಿದ್ದ ಮಳೆ ತನ್ನದಲ್ಲದ ಯಾವುದೋ ಕನಸಿನ ಲೋಕದಲ್ಲಿ ಸುರಿಯುತ್ತಿರುವಂತೆ ಭಾಸವಾಯಿತು. ತಾನು ಕುಳಿತಿರುವ ಬಸ್ಸೂ ಸೇರಿದಂತೆ ರಸ್ತೆಯ ಮೇಲಿರುವ ಸಕಲ ವಾಹನಗಳೂ ಆ ಮಳೆಯಿಂದ ದೂರ ಸಾಗುತ್ತಾ ದೂರದ ಬೆಂಗಳೂರಿನತ್ತ ಓಡುತ್ತಿವೆಯೇನೋ ಅನ್ನಿಸಿ ಶಿಶಿರ ಸೀಟಿಗೊರಗಿ  ಗಟ್ಟಿಯಾಗಿ ಕಣ್ಮುಚ್ಚಿಕೊಂಡ.

(ಡಿಸೆಂಬರ್ 2019ರ ಮಯೂರದಲ್ಲಿ ಪ್ರಕಟಿತ)
ಬುಧವಾರ, ನವೆಂಬರ್ 27, 2019

ಅಜ್ಜಿ ಹೇಳಿದ ಕಾಲ್ದೋಶದ ಕಥೆಹೊತ್ತು ಮುಳುಗುವ ಸಮಯ‌. ಸುತ್ತಲೂ ಅಭೇದ್ಯ ಕಾಡಿನಿಂದಾವೃತವಾಗಿರುವ ಆ ಕಾಲುದಾರಿಯ ಮೇಲೆ ಇಕ್ಕೆಲಗಳಲ್ಲೂ ದಟ್ಟವಾದ ಕೋಟೆ ಕಟ್ಟಿರುವ ಮರಗಳ ನೆರಳು ಗಾಢವಾಗಿ ಹಾಸಿದೆ. ಆಗಲೇ ಮುಳುಗಿದ ಸೂರ್ಯ ಉಳಿಸಿ ಹೋದ ಅಲ್ಪ ಬೆಳಕೂ ಕವಿಯುತ್ತಿರುವ ಕತ್ತಲಿನಲ್ಲಿ ಲೀನವಾಗುತ್ತಿದೆ. ಗಾಳಿಯೂ ಬೀಸುವುದನ್ನು ಮರೆತು ಗಪ್ ಚಿಪ್ ಆಗಿರುವ ಆ ವಾತಾವರಣವನ್ನು ಭಯಾನಕ ಮೌನವೊಂದು ಆವರಿಸಿದೆ. ಅಲ್ಲಲ್ಲಿ ಮರಗಳ ಕಾಂಡಗಳಿಗೆ ಅಂಟಿಕೊಂಡಿರುವ ಜೀರುಂಡೆಗಳು ದೀರ್ಘವಾಗಿ ಶ್ವಾಸವೆಳೆದುಕೊಳ್ಳುತ್ತಾ ಭಯಾನಕ ರಾಗ ಹಾಡಲು ತಯಾರಿಮಾಡಿಕೊಳ್ಳುತ್ತಿವೆ. ದೂರದಲ್ಲೆಲ್ಲೋ ನೀರಿನ ಒರತೆಯೊಂದು ಬಂಡೆಗಳ ಮೇಲೆ ಧುಮುಕುತ್ತಿರುವ ಧ್ವನಿ ಆ ವಾತಾವರಣದ ಗಂಭೀರತೆಗೆ ಸಿಕ್ಕು ವಿಕಾರವಾಗಿ ಕೇಳುತ್ತಿದೆ.

ಅವರು ಬಿರಬಿರನೆ ನಡೆಯುತ್ತಿದ್ದಾರೆ.

ಅವರ ಹೆಸರೇನೆಂಬುದು ಯಾರಿಗೂ ಗೊತ್ತಿಲ್ಲ. ಊರನವರೆಲ್ಲರೂ ಅವರನ್ನು 'ಸಂಭಾವನೆ ಭಟ್ಟರು' ಎಂದೇ ಕರೆಯುತ್ತಾರೆ. ಊರಿಂದ ಊರಿಗೆ ತಿರುಗುತ್ತಾ, ಅರಿಶಿನ, ಕುಂಕುಮ, ವಿಭೂತಿಯೇ ಮುಂತಾದ ಪೂಜಾ ಸಾಮಗ್ರಿಗಳನ್ನು ಮನೆಮನೆಗಳಿಗೆ ಮಾರುವ ಅವರಿಗೆ ಪ್ರತಿಯಾಗಿ ಜನರು ಕೊಡುವ ಅಕ್ಕಿ ಹಾಗೂ ಹಾಕುವ ಆ ಹೊತ್ತಿನ ಊಟಗಳೇ ಜೀವನೋಪಾಯಗಳು‌‌. ಹೆಚ್ಚೂ ಕಡಿಮೆ ಮಲೆನಾಡು, ಪಶ್ಚಿಮ ಘಟ್ಟಗಳ ಎಲ್ಲಾ ಮನೆಬಾಗಿಲಿಗೂ ಹೋಗುವ ಅವರಿಗೆ ಒಮ್ಮೆ ಹೋದ ಹಳ್ಳಿಗೆ ಮತ್ತೆ ಹೋಗಲು ವರ್ಷಗಳೇ ಹಿಡಿಯುತ್ತವೆ. ಇಂತಿಪ್ಪ ಸಂಭಾವನೆ ಭಟ್ಟರು ಈ ದಿನ ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಸರಿಯಾಗಿ ಮುಖ್ಯರಸ್ತೆಯಲ್ಲಿ ಪಟ್ಟಣದ ಬಸ್ಸಿಂದಿಳಿದಿದ್ದರು. ಬಸ್ಸೂ ಸಹಾ ಇಂದಿನ ಅಮವಾಸ್ಯೆಗೆ ಹೆದರಿದಂತೆ ಕತ್ತಲಾಗುವುದರೊಳಗೆ ನಿಲ್ದಾಣ ಸೇರಿಕೊಳ್ಳಬೇಕೆಂಬ ಭಯಕ್ಕೇನೋ ಎಂಬಂತೆ ಅವರನ್ನಿಳಿಸಿ ವೇಗವಾಗಿ ಹೊರಟುಹೋಗಿತ್ತು. ಅವರೀಗ ಇಡೀ ನಾಲ್ಕೈದು ಕಿಲೋಮೀಟರ್ ವ್ಯಾಪ್ತಿಗೆ ಒಂದೇ ಒಂದು ಮನೆಯಿರುವ ಆ ಒಂಟಿ ಮನೆ ಕೇರಿಯತ್ತ ನಡೆಯುತ್ತಿದ್ದಾರೆ. ಅವರಿಗೆ ಗೊತ್ತಿದೆ: ಒಂದು ಸಲ ಕತ್ತಲು ಪೂರ್ತಿಯಾಗಿ ಆವರಿಸಿತೆಂದರೆ ಈ ದಾರಿ ದುಪ್ಪಟ್ಟು ಅಪಾಯಕಾರಿಯಾಗುತ್ತದೆ! ಹೇಳೀಕೇಳೀ ಇಂದು  ಅಮವಾಸ್ಯೆ‌. ಹನಿ ಬೆಳಕೂ ಇಲ್ಲದೆ ಕಗ್ಗತ್ತಲ ಆಕೃತಿಗಳಂತೆ ತನ್ನ ಸುತ್ತಲೂ ಭಯಾನಕವಾಗಿ ನಿಂತಿರುವ ಪೊದೆ-ಮಟ್ಟಿಗಳ ಪೈಕಿ ಯಾವುದರಿಂದ ಬೇಕಾದರೂ ಹುಲಿಯೋ, ಚಿರತೆಯೋ ನುಗ್ಗಿ ತನ್ನ ಮೇಲೆರಗಬಹುದು. ಅವಾದರೂ ಪರವಾಗಿಲ್ಲ, ಹೆಸರು ಹೇಳಬಾರದ, ಪ್ರೇತವೆಂಬ ಆ ಎರೆಡಕ್ಷರದ ಸೃಷ್ಟಿಯೇನಾದರೂ ಅಟಕಾಯಿಸಿಕೊಂಡಿತೆಂದರೆ... ಇವತ್ತಿಗೆ ತನ್ನ ಕಥೆ ಮುಗಿಯಿತೆಂದೇ ಅರ್ಥ!

ಭೂತಗಳ ಸಂಗತಿ ನೆನಪಾಗುತ್ತಿದ್ದಂತೆಯೇ ಸಂಭಾವನೆ ಭಟ್ಟರು ತಮ್ಮ ನಡಿಗೆಯ ವೇಗವನ್ನು ತೀವ್ರಗೊಳಿಸಿದರು. ಗುಡ್ಡದ ಮೇಲೆಲ್ಲಿಂದಲೋ ಇಳಿದು ಬಂಡೆಗಳ ಮೇಲೆ ಜಾರುತ್ತಾ ದಾರಿಗಡ್ಡವಾಗಿ ಹರಿದುಹೋಗುವ ಹಳ್ಳದ ಸದ್ದು ಬರುಬರುತ್ತಾ ಸಮೀಪವಾಗುತ್ತಾ ಬಂದು ಕೊನೆಗೆ ಕಣ್ಣೆದುರೇ ಪ್ರತ್ಯಕ್ಷವಾಯಿತು. ಆ ಹಳ್ಳವೊಂದನ್ನು ದಾಟಿದರೆ ಮುಗಿಯುತು, ಅಲ್ಲಿಂದಾಚೆಗೆ ಅರ್ಧ ಫರ್ಲಾಂಗಿನಲ್ಲೇ ತಾವು ಹೋಗಬೇಕಿರುವ ಮನೆ ಸಿಗುತ್ತದೆ. ಅಲ್ಲಿಗೆ ತಾವು ಸುರಕ್ಷಿತ! ಹಾಗಂದುಕೊಳ್ಳುತ್ತಾ ಭಟ್ಟರು ತಮ್ಮ ಪಂಚೆಯನ್ನು ಎತ್ತಿಕಟ್ಟಿಕೊಂಡು ತಣ್ಣಗೆ ಹರಿಯುತ್ತಿದ್ದ ನೀರಿನಲ್ಲಿ ಹೆಜ್ಜೆಯಿಟ್ಟರು. ಸಂಜೆಯ ಛಳಿ ತಾಕಿದ್ದ ನೀರು ಮತ್ತಷ್ಟು ಶೀತಲವಾಗಿತ್ತು. ಮೊಣಕಾಲಿನ ತನಕ ತುಂಬಿ ಹರಿಯುತ್ತಿರುವ ಹಳ್ಳವನ್ನು ತಳಕ್ ತಳಕ್ ಸದ್ದು ಮಾಡುತ್ತಾ ದಾಟಿ 'ಅಬ್ಬಾ' ಎಂದು ಉಸಿರೆಳೆದುಕೊಂಡರು.

ಆಗ ಮಲೆನಾಡಿನ ಪರಿಸ್ಥತಿಯಿದ್ದುದೇ ಹಾಗೆ. ಅದು ಹತ್ತೊಂಭತ್ತನೇ ಶತಮಾನದ ದ್ವಿತೀಯಾರ್ಧ ಭಾಗ. ಆ ಕಾಲದಲ್ಲಿ ಕತ್ತಲೆಂದರೆ ಘೋರಾಂಡ ಕತ್ತಲೆ. ನಿರ್ಜನವೆಂದರೆ ನರಪ್ರಾಣಿಯೂ ಇಲ್ಲದ ನಿರ್ಜನ. ಕಾಡೆಂದರೆ ಬೆಳಕನ್ನೂ ಒಳಗೆ ಬಿಡದಷ್ಟು ದಟ್ಟ ಕಾಡು! ಆಗ ಈಗಿನಂತೆ ಹತ್ತತ್ತು ನಿಮಿಷಕ್ಕೊಂದು ಬಸ್ಸುಗಳಿರಲಿಲ್ಲ. ಓಡಾಡಲಿಕ್ಕೆ ನೆಟ್ಟಗಿನ ರಸ್ತೆಗಳೇ ಇರಲಿಲ್ಲ. ಎಲ್ಲೋ ಹಗಲಿಗೊಂದು, ರಾತ್ರೆಗೊಂದು ಬರುವ ಬಸ್ಸಿಗೆ ಟಾರು ರಸ್ತೆಯೇ ಯಾಕೆ ಬೇಕು ಹೇಳಿ? ಹಾಗೆ ಬರುತ್ತಿದ್ದ ಬಸ್ಸುಗಳಾದರೋ ಪ್ರಯಾಣಿಕರನ್ನು ನೇರ ಅವರವರ ಮನೆ ಬಾಗಿಲಿಗೆ ಬಿಡುತ್ತಿರಲಿಲ್ಲ. ಮನೆಯಿಂದ ಎಷ್ಟೋ ಕಿಲೋಮೀಟರ್ ದೂರದಲ್ಲಿರುವ ರಹದಾರಿಯಲ್ಲಿ ಅವರನ್ನಿಳಿಸಿ ತನ್ನ ಪಾಡಿಗೆ ತಾನು ಮುಂದೆ ಹೋಗುತ್ತಿತ್ತು. ಅಲ್ಲಿಂದ ಹೊರಟ ಪ್ರಯಾಣಿಕರು ಗುಡ್ಡ ಹತ್ತಿ, ಹೊಳೆದಾಟಿ, ಕಾಡು-ಮಟ್ಟಿಗಳಲ್ಲಿ ಹಾದು ಮನೆ ಸೇರಬೇಕಾಗಿತ್ತು.

ಮಲೆನಾಡಿನಲ್ಲಿ ಮನೆಗಳಿದ್ದದ್ದೂ ಹಾಗೆಯೇ. ಇಲ್ಯಾವುದೋ ಗುಡ್ಡದ ತುದಿಯಲ್ಲಿ ಒಂದು ಮನೆಯಿದ್ದರೆ ಇನ್ನೊಂದು ಅಲ್ಲೆಲ್ಲೋ ಹೊಳೆಯಾಚೆಗಿನ ದಿಬ್ಬದ ಮೇಲಿರುತ್ತಿತ್ತು. ನಡುವೆ ಅಸಂಖ್ಯವಾದ ಮರಗಿಡಗಳ ದಟ್ಟ ಕಾನನ‌. ಸದಾ ತುಂಬಿ ಹರಿಯುವ ರಭಸದ ಹಳ್ಳ-ನದಿಗಳು. ಯಾವ ಅಪಾಯಕರ ಪ್ರಾಣಿಯೇ ಬೇಕಾದರೂ ಅಡಗಿರಬಹುದಾದ ದೈತ್ಯ ಪೊದೆ-ಮಟ್ಟಿಗಳು. ಇಂತಹಾ ವ್ಯ(ಅ)ವಸ್ಥೆಯಲ್ಲಿ ಮನುಷ್ಯರು ಬಿಡಿ, ಸುದ್ದಿ-ವಿಷಯಗಳೂ ಸಹಾ ಒಂದು ಊರಿಂದ ಇನ್ನೊಂದು ಊರಿಗೆ ದಾಟುವುದು ದುರ್ಭರವಾಗಿತ್ತು. ಎಲ್ಲೋ ಯಾರೋ ಸತ್ತ ವಿಷಯ ಅಲ್ಲಿಂದ ಇನ್ನೊಂದೂರಿಗೆ ತಲುಪಬೇಕೆಂದರೆ ಅದನ್ನು ಸ್ವತಃ ಮನುಷ್ಯನೇ ಹೊತ್ತೊಯ್ದು ಹೇಳಬೇಕು. ಹೀಗೆ ಮನುಷ್ಯರಂತೆ ಸುದ್ದಿ, ವಿಷಯಗಳೂ ಸುಲಭವಾಗಿ ಸಂಚರಿಸಲಾರದೆ ಇದ್ದಲ್ಲೇ ಇರುತ್ತಿದ್ದ ಕಾಲವದು.

ಇಂತಿಪ್ಪ ಹೊತ್ತಿನಲ್ಲಿ ಅಂತೂ ಇಂತೂ ಅಪಾಯಕಾರಿ ಕಾಡುದಾರಿಯನ್ನು ದಾಟಿ ಮನುಷ್ಯವಾಸದ ಕನಿಷ್ಠ ಒಂದು ಮನೆಯಾದರೂ ಇರುವ ಸುರಕ್ಷಿತ ವಲಯವನ್ನು ತಲುಪಿದೆನಲ್ಲಾ ಎಂದು ಸಂಭಾವನೆ ಭಟ್ಟರು ನಿಟ್ಟುಸಿರಿಟ್ಟರು. ಆದರೆ ಅವರಿಗೆ ತಿಳಿಯದ ಅತಿಮುಖ್ಯವಾದ ಸಂಗತಿಯೇನೆಂದರೆ..

ಮೃತ್ಯುಕರವಾದ ಪರಮ ಅಪಾಯಕಾರೀ ಕಾರಸ್ಥಾನದೊಳಕ್ಕೆ ಅವರು ಈಗಷ್ಟೇ ಹೆಜ್ಜೆಯಿಟ್ಟಿದ್ದರು!

                  *************

ಅದನ್ನು ಎಲ್ಲರೂ 'ಕಾಲ್ದೋಶ' ಎನ್ನುತ್ತಾರೆ.

ನಂಬಿಕೆಗಳ ಪ್ರಕಾರ ಹುಟ್ಟುವುದಕ್ಕೆ ಹೇಗೆ ಘಳಿಗೆಗಳಿವೆಯೋ ಸಾವಿಗೂ ಹಾಗೇ ಘಳಿಗೆ, ಸಮಯಗಳಿವೆ. ಸರಿಯಾದ ಸಮಯದಲ್ಲಿ ಪ್ರಾಣ ಪಕ್ಷಿ ಹಾರಿಹೋದವರು ನೇರವಾಗಿ ಆ ಲೋಕವನ್ನು ಸೇರಿಕೊಳ್ಳುತ್ತಾರೆ. ಅಂತೆಯೇ ಕೆಟ್ಟ ಘಳಿಗೆಯಲ್ಲಿ ಸತ್ತವರು ಪ್ರೇತಗಳಾಗಿ ಇದೇ ಲೋಕದಲ್ಲಿ ಅಲೆಯತೊಡಗುತ್ತಾರೆ. ಇದು ಸಾಮಾನ್ಯ ಲೆಕ್ಕಾಚಾರ. ಆದರೆ ಇವೆಲ್ಲವನ್ನೂ ಮೀರಿದ ಪರಮ ಕೆಟ್ಟ ಘಳಿಗೆಯೊಂದಿದೆ. ಅಪ್ಪೀತಪ್ಪೀ ಯಾರಾದರೂ ಆ ಕಡುಘಳಿಗೆಯಲ್ಲಿ ಸತ್ತರೆ...

ಅವರು ಸತ್ತ ಏಳನೆಯ ದಿನದಂದು ಭೀಕರ ಕಾಲ್ದೋಶದ ರೂಪದಲ್ಲಿ ಮರಳಿಬರುತ್ತಾರೆ!

ಸತ್ತ ಕಾಲಮಾನದಿಂದ ಉಂಟಾಗುವ ದೋಶವೇ ಕಾಲ ದೋಶ. ಈ ಕಾಲ್ದೋಶವೆಂಬುದು ಎಂತಹಾ ಭೀಕರವೆಂದರೆ ಅದು ಬರುವ ದಿನ ಸತ್ತವನ ಮನೆಮಂದಿಯೆಲ್ಲ ಮನೆಯನ್ನು ಬಿಟ್ಟು ಯಾವುದಾದರೂ ನೆಂಟರ ಮನೆಗೆ ಹೊರಟುಹೋಗುತ್ತಾರೆ. ಮನೆಯವರು ಮಾತ್ರವಲ್ಲ, ಅಲ್ಲಿ ಅಕ್ಕಪಕ್ಕದ ಮನೆಗಳೇನಾದರೂ ಇದ್ದರೆ ಅವರೂ ಸಹಾ ಎರೆಡ್ಮೂರು ದಿನಗಳ ಮಟ್ಟಿಗೆ ಯಾವುದಾದರೂ ನೆಂಟರ ಮನೆಯತ್ತ ಓಟಕೀಳುತ್ತಾರೆ. ಅದರಲ್ಲೂ ಕಾಲ್ದೋಶ ಮನೆಗೆ ಪ್ರವೇಶಿಸುವ ಆ ಏಳನೇ ದಿನ ಅಪ್ಪೀತಪ್ಪಿಯೂ ಯಾರೂ ಆ ಕೇರಿಯತ್ತ ಸುಳಿಯುವುದೇ ಇಲ್ಲ. ಏಕೆಂದರೆ ಆ ದಿನವಿಡೀ ಕಾಲ್ದೋಶ ಆ ಮನೆಯೊಳಗೇ ಓಡಾಡಿಕೊಂಡಿರುತ್ತದೆ. ಗ್ರಹಚಾರ ಕೆಟ್ಟ ಯಾವುದೇ ಮನುಷ್ಯನಾದರೂ ಅದರ ಸಮೀಪಕ್ಕೆ ಸುಳಿದದ್ದೇ ಆದರೆ, ಅವನನ್ನು ಭಯಾನಕವಾಗಿ ಸಾಯಿಸಿ ರಕ್ತ ಕುಡಿಯದ ಹೊರತು ಅದು ಹೊರಟುಹೋಗುವುದಿಲ್ಲ!

ಇಷ್ಟೆಲ್ಲಾ ವಿವರಣೆಗಳ ಹಿಂದಿನ ಅಸಲಿಯತ್ತೇನೆಂದರೆ‌‌‌‌.....

ನಮ್ಮ ಸಂಭಾವನೆ ಭಟ್ಟರು ಧುಸಧುಸನೆ ನಡೆದು ಬರುತ್ತಿದ್ದ ಆ ಒಂಟಿ ಮನೆಗೆ ಅಂದೇ ಕಾಲ್ದೋಶದ ಪ್ರವೇಶವಾಗಿತ್ತು!

                      ************

ತಿಂಗಳ ಕಾಲ ತೀವ್ರವಾಗಿ ಜ್ವರ, ಹೊಟ್ಟೆನೋವುಗಳಿಂದ ಬಳಲಿದ ನಂತರ ಏಳು ತಿಂಗಳ ತುಂಬು ಬಸುರಿಯಾಗಿದ್ದ ಶ್ರೀಧರನ ಹೆಂಡತಿ ಚಂದ್ರಾವತಿ ಕೆಲವೇ ದಿನಗಳ ಕೆಳಗೆ ಸಾವನ್ನಪ್ಪಿದ್ದಳು. ಖಾಯಿಲೆ ಬಂದಿತ್ತಾದರೂ ಅವಳದು ಸಾಯುವ ವಯಸ್ಸಲ್ಲ. ಆಯಸ್ಸು ತುಂಬದ, ಇನ್ನೂ ಬದುಕಿ ಬಾಳಬೇಕಿರುವ ವ್ಯಕ್ತಿ  ಅಕಾಲಿಕ ಮರಣಕ್ಕೀಡಾದರೆ ಪ್ರೇತವಾಗುತ್ತಾನೆ ಎಂಬುದು ನಂಬಿಕೆ‌. ಆದರೆ ಸತ್ತ ಚಂದ್ರಾವತಿಯ ಅಪರ ಕರ್ಮಗಳನ್ನು ಮಾಡಲು ಬಂದ ಪುರೋಹಿತರನ್ನು ಬೆಚ್ಚಿಬೀಳಿಸಿದ ಅಂಶ ಅದಲ್ಲ. ಪರಮ ಕೆಟ್ಟ ಸಮಯದಲ್ಲಿ ಆಕೆಯ ಆತ್ಮ ದೇಹವನ್ನು ತೊರೆದಿತ್ತು. ಅಷ್ಟು ಮಾತ್ರವಲ್ಲದೇ...

ಅದು ಪರಮ ಭೀಕರವಾದ 'ಕಾಲ್ದೋಶ'ದ ಘಳಿಗೆಯಾಗಿತ್ತು!

ಇನ್ನಿಲ್ಲದಂತೆ ಭೀತರಾದ ಪುರೋಹಿತರು ಮನೆಮಂದಿಗೆಲ್ಲಾ ಈ ವಿಷಯವನ್ನು ತಿಳಿಸಿ ಇನ್ನು ನಾಲ್ಕು ದಿನಗಳ ನಂತರ ಎಲ್ಲರೂ ಮನೆಬಿಡಬೇಕೆಂದೂ, ನಂತರ ಮೂರು ದಿನಗಳ ಕಾಲ ಯಾರೂ, ಯಾವ ಕಾರಣಕ್ಕೂ ಮನೆಯ ಸಮೀಪ ಸುಳಿಯಬಾರದೆಂದೂ, ದನಕರುಗಳನ್ನೂ ಅಲ್ಲಿ ಬಿಡದೆ ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕೆಂದೂ ತೀವ್ರವಾಗಿ ಎಚ್ಚರಿಸಿದ್ದರು. ಅಂತೆಯೇ ಚಂದ್ರಾವತಿ ಸತ್ತ ಐದನೇ ದಿನಕ್ಕೆ ಮನೆಮಂದಿಯೆಲ್ಲಾ ಗಂಟು ಮೂಟೆ ಕಟ್ಟಿಕೊಂಡು ಪಕ್ಕದ ಹಳ್ಳಿಯಲ್ಲಿದ್ದ ನೆಂಟರ ಮನೆಯತ್ತ ಮುಖ ಮಾಡಿದ್ದರು. ಅಲ್ಲದೆ ತಮ್ಮ ಮನೆಗೆ ಬರಬಹುದಾದ ಅಕ್ಕಪಕ್ಕದ ಊರು-ಕೇರಿಗಳ ಬಂಧು-ಮಿತ್ರರಿಗೂ ಆ ದಿನ ತಮ್ಮ ಕೇರಿಯತ್ತ ಸುಳಿಯಬಾರದೆಂದು ಗಂಭೀರವಾಗಿ ಎಚ್ಚರಿಸಿದ್ದರು. ಹಾಗೆ ಮೃತ್ಯುಸದೃಶವಾದ ಕಾಲ್ದೋಶದಿಂದ ಎಲ್ಲರನ್ನೂ ಕಾಪಾಡಿದ ನೆಮ್ಮದಿಯಲ್ಲಿ ಮನೆ ಬಿಟ್ಟಿದ್ದರು.

ಆದರೆ ಎರೆಡೋ ಮೂರೋ ವರ್ಷಕ್ಕೊಮ್ಮೆ ಊರಿಗೆ ಬರುವ ಸಂಭಾವನೆ ಭಟ್ಟರು ತಮ್ಮ ಮೃತ್ಯುವನ್ನು ಹುಡುಕಿಕೊಂಡು ಅದೇ ದಿನ ಅಲ್ಲಿಗೆ ಬರಬಹುದೆಂದು ಅವರಿಗಾದರೂ ಏನು ಗೊತ್ತಿತ್ತು?

                    ***********

"ಓಹೋಯ್.. ನಾನು ಸಂಭಾವನೆ ಭಟ್ಟ ಬಂದಿದೀನಿ ಬಾಗ್ಲು ತೆಗಿರೋಯ್"

ಅಂಗಳದ ಉಣುಗೋಲಿನ ಸಮೀಪ ನಿಂತ ಭಟ್ಟರು ಎರೆಡನೇ ಬಾರಿಗೆ ಹಾಗೆಂದು ಕೂಗುಹಾಕಿದರು‌. ಮೂರ್ಸಂಜೆಯ ಹೊತ್ತಿಗೆ ಸಣ್ಣ ದೀಪವನ್ನೂ ಹಚ್ಚದೇ ಮನೆಮಂದಿಯೆಲ್ಲ ಕತ್ತಲಲ್ಲಿರುವುದು ಅವರಲ್ಲಿ ಕೊಂಚ ಅನುಮಾನವನ್ನು ಹುಟ್ಟುಹಾಕಿತ್ತು. ಕಾದು ನಿಂತಿರುವ ತಮ್ಮ ಬೆನ್ನ ಹಿಂದಿನ ಅಂಧಕಾರದಲ್ಲಿ ಯಾರೋ ನಿಂತಿರುವಂತೆ ಅವರಿಗೆ ಭಾಸವಾಗತೊಡಗಿತ್ತು. ಬಗಲಿಗೆ ನೇತುಹಾಕಿಕೊಂಡಿದ್ದ ಜೋಳಿಗೆಯನ್ನು ಕೆಳಗಿಡಲೇ ಬೇಡವೇ ಎಂದು ಯೋಚಿಸುತ್ತಲೇ ಮತ್ತೊಮ್ಮೆ ಕೂಗುಹಾಕಲೆಂದು ಬಾಯಿ ತೆರೆದರು..

ಅಷ್ಟರಲ್ಲಿ ಆ ಮನೆಯ ತೆರೆದ ಬಾಗಿಲ ಹಿಂದಿನ ಕತ್ತಲಿನೊಳಗಿಂದ ಕದಲುತ್ತಾ ಆಕೃತಿಯೊಂದು ಹೊರಬಂತು.

ಭಟ್ಟರ ಎಡಗಣ್ಣೇಕೋ ಪಿಟಪಿಟನೆ ಹೊಡೆದುಕೊಳ್ಳತೊಡಗಿತು. ಈ ಸಂಭಾವನೆ ಭಟ್ಟರ ವಿಶೇಷ ಗುಣವೆಂದರೆ, ಯಾವಾಗಲೋ ಒಮ್ಮೆ ಬರುವುದಾದರೂ ಅವರಿಗೆ ತಾವು ಓಡಾಡುವ ಪ್ರತಿ ಊರು, ಪ್ರತಿ ಮನೆ, ಪ್ರತಿ ಮಂದಿಯ ಬಗ್ಗೆಯೂ ತಿಳಿದಿರುತ್ತದೆ. ಯಾವ ಮನೆಯಲ್ಲಿ ಎಷ್ಟು ಜನರಿದ್ದಾರೆ, ಅವರ ನೆಂಟರಿಷ್ಟರು ಯಾವ ಊರಿನಲ್ಲಿದ್ದಾರೆ ಎಂಬ, ತಮಗೆ ಉಪಯೋಗಕ್ಕೆ ಬರುವ ಪರಿಚಯಗಳನ್ನು ಅವರೆಂದಿಗೂ ಮರೆಯುವುದೇ ಇಲ್ಲ. ಬೇರೆ ಬೇರೆ ಊರಿನ ಬೇರೆ ಬೇರೆ ಮನೆಗಳಿಗೆ ಹೋದಾಗ 'ನಾನು ನಿಮ್ಮ ಸಂಬಂಧಿಕರಾದ ಇಂತಹವರಿಗೆ ಪರಿಚಯವಿರುವವನು' ಎಂದು ಹೇಳಿ ಅವರಿಂದ ಆತಿಥ್ಯ ಪಡೆಯುವುದು ಅವರ ಅಭ್ಯಾಸ. ಇಂತಿದ್ದ ಭಟ್ಟರಿಗೆ ಈಗ ಹೊರಬಂದ ಆ ಹೆಂಗಸನ್ನು ನೋಡಿ ಆಶ್ಚರ್ಯವಾಯಿತು. ಅವರಿಗೆ ತಿಳಿದಿರುವಂತೆ ಆ ಮನೆಯಲ್ಲಿದ್ದುದು ಆರೇ ಮಂದಿ. ಮಹಾಬಲ, ಅವನ ಹೆಂಡತಿ ವಿಜಯಮ್ಮ, ಗಂಡು ಮಕ್ಕಳಾದ ಶ್ರೀಧರ ಹಾಗೂ ಶಶಿಧರ. ಹೆಣ್ಮಕ್ಕಳಾದ ಗಂಗಾವತಿ ಮತ್ತು ಶರಾವತಿ. ಈಗ ಇಲ್ಲಿ ಕತ್ತಲಿನ ಕೆತ್ತನೆಯೊಂದು ಗೋಡೆಯಿಂದೆದ್ದು ಬಂದಂತೆ ಕದಲುತ್ತಾ ಬಂದಿರುವ ಹೆಂಗಸನ್ನು ಅವರು ಹಿಂದೆಂದೂ ನೋಡಿರಲಿಲ್ಲ. ಬಹುಷಃ ಹಿರೀಮಗ ಶ್ರೀಧರನಿಗೆ ಮದುವೆಯಾಗಿರಬೇಕೆಂದು ಅಂದುಕೊಂಡು ತಮ್ಮ ಜೋಳಿಗೆಯನ್ನು ಜಗುಲಿ ಕಟ್ಟೆಯ ಮೇಲಿಟ್ಟು "ಉಸ್ಸಪ್ಪಾ" ಎನ್ನುತ್ತಾ ಕುಳಿತುಕೊಂಡರು‌.

"ಏನ್ ಕೂಸೇ.. ಮೂರ್ಸಂಜೇಲಿ ಮನೆ ದೀಪನೆಲ್ಲ ನಂದ್ಸ್ಕ್ಯಂಡು ಎಲ್ಲ ಎಂತ ಮಾಡ್ತಿದೀರಿ ಹಾಂ? ಎಲ್ಲಿ ಮಹಾಬಲರಾಯರು ಮನೇಲಿಲ್ವಾ?"

"ಎಂತ ಮಾಡದು ಮಾವಯ್ಯಾ.. ಕೆಲವ್ರಿಗೆ ಬೆಳಕು ಇಷ್ಟ. ಇನ್ ಕೆಲವ್ರಿಗೆ ಕತ್ಲೆನೇ ಇಷ್ಟ. ಯಾರ್ಯಾರ ಆಟ ಎಲ್ಲೆಲ್ಲಿ ನಡೀತದೋ ಅದದ್ನೇ ಅಲ್ವಾ ಅವ್ರು ಇಷ್ಟ ಪಡೋದು...? ಸುಸ್ತಾಗಿ ಬಂದೀರಿ.. ಒಳಗ್ಬನ್ನಿ. ಎಲ್ರೂ ಪಕ್ದೂರ್ಗೆ ಹೋಗ್ಯಾರೆ. ನಮ್ ಕುಟುಂಬ್ದಲ್ಲೊಂದು ಸಾವಾಗಿದೆ"

ಏನೇನೋ ಮಾತನಾಡುವ ಈ ಹೆಂಗಸಿಗೆಲ್ಲೋ ಸ್ವಲ್ಪ ಮೊಳ್ಳಿರಬೇಕೆಂದೆಣಿಸಿದ ಭಟ್ಟರು "ಏನ್ಕೂಸೇ, ನಿನ್ನೊಬ್ಳನ್ನೆ ಬಿಟ್ಟೊಂಟೋಗಿದಾರಾ? ಅದೂ ಈ ಅಮವಾಸ್ಯೆ ಕತ್ಲಲ್ಲಿ? ಥೋ ಥೋ.. ಎಂತಾ ಕೆಲ್ಸಾಗೋತು.." ಎಂದು ಪಶ್ಚಾತ್ತಾಪ ಸೂಚಕವಾಗಿ ಪ್ಚ್ ಪ್ಚ್ ಎಂದರು.

"ಹೋಗೋರ್ ಹೋಗಿದಾರೆ. ನೀವಾದ್ರೂ ಬಂದಿದೀರಲ್ಲಾ? ಇನ್ನು  ಹೋಗೋದಕ್ಕಂತೂ ಆಗಲ್ಲ. ಒಳಗೇ ಬಂದ್ಬಿಡಿ" ಅವರಿಂದ ಕೆಲವೇ ಅಡಿಗಳಷ್ಟು ದೂರದಲ್ಲಿ ನಿಂತಿದ್ದ ಅವಳ ಮಾತು ಮುಖದ ಮೇಲೆ ಆವರಿಸಿದ್ದ ಕತ್ತಲಿನ ಮರೆಯಿಂದ ಕರ್ಕಶವಾಗಿ ಹೊರಬರುತ್ತಿತ್ತು. "ಸರಿ ಕೂಸೇ" ಎಂದ ಭಟ್ಟರು ಜೋಳಿಗೆ ಹೆಗಲಿಗೆ ಸಿಕ್ಕಿಸಿಕೊಂಡು ಮೇಲೆದ್ದರು. ಇನ್ನೇನು ಒಳಗಡಿಯಿಡಬೇಕು, ಅಷ್ಟರಲ್ಲಿ ಬೆಕ್ಕೊಂದು ಮನೆಯ ಹಿಂಭಾಗದಲ್ಲೆಲ್ಲೋ ವಿಕಾರವಾಗಿ ಕೂಗಿಕೊಂಡಿತು.

"ಊಟಕ್ಕೆ ಒಬ್ರೇ ಅಂದ್ಕೊಂಡಿದ್ದೆ. ಇನ್ನೊಬ್ರೂ ಸಿಕ್ಕಿದ್ರು"
ತಲೆಗೆ ಸೆರಗು ಹೊದ್ದು ಮರೆ ಮಾಡಿಕೊಂಡು ನಿಂತಿದ್ದವಳ ಮುಖದಲ್ಲಿನ ನಗು ಆ ಕತ್ತಲಲ್ಲೂ ತಮಗೆ ಕಂಡಿದ್ದು ಹೇಗೆಂದು ಭಟ್ಟರಿಗೂ ಅರ್ಥವಾಗಲಿಲ್ಲ. ಕೈಕಾಲು ತೊಳೆದುಕೊಂಡು ಒಳಬಂದವರು "ನಾ ಸಂಧ್ಯಾವಂದನೆ ಮಾಡ್ತೀನಿ. ನೀ ಅನ್ನಕ್ಕಿಡದಾರೆ ಇಟ್ಬಿಡು. ಬಹಳ ಹಸಿವಾಗಿದೆ" ಎಂದು ದೇವರ ಮನೆಯತ್ತ ನಡೆದರು. "ನಂಗೂ ಹಸಿವಾಗಿದೆ" ಎಂದ ಆ ಹೆಂಗಸು ಯಾವುದೋ ಆರ್ತನಾದವೊಂದು ಕರೆಯುತ್ತಿರುವಂತೆ ಮನೆಯ ಹಿಂಭಾಗದತ್ತ ನಡೆಯತೊಡಗಿದಳು. ದೇವರಕೋಣೆಯೊಳಗೆ ಅಡಿಯಿಟ್ಟ ಭಟ್ಟರು ಏನೋ ಹೊಳೆದಂತಾಗಿ ಕೂಗಿ ಹೀಗೆ ಕೇಳಿದರು.

"ಅಂದ್ಹಂಗೇ, ಕೇಳೋಕೆ ಮರ್ತೆ. ನಿನ್ ಹೆಸ್ರೆಂತದು ಕೂಸೇ?"

ಕತ್ತಲೊಳಗೆ ಕತ್ತಲಾಗಿ ನಡೆಯುತ್ತಿದ್ದ ಅವಳು ತಿರುಗದೆಯೇ ಉತ್ತರಿಸಿದಳು:

"ಚಂದ್ರಾವತಿ!"

                    *************

ಭಟ್ಟರು ದೇವರವಳ ಪ್ರವೇಶಿಸಿದರು. ಅಲ್ಲಿ ಹಚ್ಚದೇ ಕೆಲ ದಿನಗಳೇ ಕಳೆದಿರುವಂತಿರುವ ದೇವರ ದೀಪ, ಫೋಟೋಗಳಿಗೆ ಏರಿಸಿರುವ- ವಾರದ ಹಿಂದೆಯೇ ಬಾಡಿರುವ ಹೂಗಳನ್ನು ನೋಡಿದವರಿಗೆ ಅನುಮಾನವಾಯಿತಾದರೂ "ನೆಂಟರೊಬ್ಬರ ಸಾವಾಗಿದೆ" ಎಂಬ ಚಂದ್ರಮತಿಯ ಮಾತು ನೆನಪಾಯಿತು‌. ಸೂತಕವಿರುವ ಮನೆಯಲ್ಲಿ ಯಾರು ದೀಪ ಹಚ್ತಾರೆ? ಹಾಗಂದುಕೊಂಡು ಸಂಧ್ಯಾವಂದನೆ ಆರಂಭಿಸಿದರು. ಮನಸ್ಸಿನೊಳಗಿನ ಮಂತ್ರಗಳ ಸದ್ದಲ್ಲದೆ ಬೇರ್ಯಾವ ಶಬ್ದವೂ ಅಲ್ಲಿರಲಿಲ್ಲ‌. ತರ್ಪಣ ಕೊಟ್ಟು, ಆಸನ ಪೂಜೆ ಮಾಡಿ, ಮುದ್ರಾಪೂಜೆ ಮುಗಿಸಿ ಇನ್ನೇನು ಗಾಯತ್ರೀ ಮಂತ್ರ ಜಪಿಸಬೇಕು,

"ಮೀಈಈಯ್ ಯಾಂವ್ssssss...."

ನಿಶ್ಯಬ್ದವನ್ನು ಛಿದ್ರಗೊಳಿಸುತ್ತಾ ಅತೀ ಸಮೀಪದಿಂದಲೇ ಕೇಳಿಬಂದ, ಬೆಕ್ಕೊಂದು ಪರಮ ಯಾತನೆಯಲ್ಲಿ ಚೀತ್ಕರಿಸಿದ  ಆ ಕಿರುಚಾಟದ ತೀವ್ರತೆಗೆ ಜಪಮಾಲೆ ಹಿಡಿದ ಅವರ ಕೈ ಕಂಪಿಸಿತು. ಪಾಪದ ಬೆಕ್ಕು. ಕುರ್ಕಕ್ಕೋ, ನರಿಗೋ ಬಲಿಯಾಗಿರಬೇಕೆಂದು ಭಾವಿಸಿದರಾದರೂ ಯಾವುದಕ್ಕೂ ಇರಲೆಂದು "ಚಂದ್ರಾವತೀ" ಎಂದು ಕರೆದರು. ಅತ್ತಕಡೆಯಿಂದ ನಿಶ್ಯಬ್ದವೇ ಉತ್ತರವಾದಾಗ ಮತ್ತೆರೆಡು ಬಾರಿ ಕರೆದರು.

"ಅನ್ನ ಬೇಯಿಸ್ತಿದೀನಿ ಮಾವಯ್ಯಾ.."
ಉತ್ತರಿಸಿದವಳ ಮಾತು ಈಗಷ್ಟೇ ಏನನ್ನೋ ಕುಡಿದಿರುವ ವದ್ದೆ ಗಂಟಲಿನಿಂದ ಹೊರಬಂದತಿತ್ತು. ಅದನ್ನು ಅಷ್ಟಾಗಿ ತಲೆಗೆ ಹಾಕಿಕೊಳ್ಳದ ಭಟ್ಟರು ಜಪ ಮುಂದುವರಿಸಿದರು. ಕೆಲ ನಿಮಿಷಗಳಲ್ಲಿ ಸಂದ್ಯಾವಂದನೆ ಮುಗಿಸಿದವರು ಜಪ ಮಾಡಿದ ನೀರನ್ನೆಸೆಯಲೆಂದು ಮೊಬ್ಬು ಬೆಳಕಿನ ಬುಡ್ಡಿದೀಪ ಹಿಡಿದುಕೊಂಡು ಮನೆಯ ಹಿಂದಿನ ಅಂಗಳದಂಚಿಗೆ ಬಂದರು‌. ಅಲ್ಲಿ ಸಾಲಾಗಿ ಪೇರಿಸಿರುವ ಎತ್ತರದ ಕಟ್ಟಿಗೆ ರಾಶಿಯ ಪಕ್ಕ ನಿಂತು ಹರಿವಾಣದಲ್ಲಿನ ನೀರನ್ನು ಆಚೆಗಿನ ಕತ್ತಲಿಗೆ ಎಸೆದು ಮರಳಲೆಂದು ತಿರುಗಿದವರ ಹೆಗಲ ಮೇಲೆ ಬೆಚ್ಚಗಿರುವ, ದಪ್ಪನೆಯ ದ್ರವದ ಹನಿಯೊಂದು ತೊಟ್ಟಿಕ್ಕಿತು.‌ ಏನೆಂದು ಮುಟ್ಟಿ ನೋಡುವಷ್ಟರಲ್ಲಿ ಇನ್ನೊಂದು ಹನಿ ಬಿತ್ತು‌. ತಲೆಯೆತ್ತಿ ನೋಡಿದವರಿಗೆ ರಕ್ತವೇ ಹೆಪ್ಪುಗಟ್ಟುವಂತಹಾ ದೃಶ್ಯವೊಂದು ಅಲ್ಲಿ ಕಂಡಿತು..

ಪೇರಿಸಿಟ್ಟ ಕಟ್ಟಿಗೆಗಳ ಚೂಪು ತುದಿಯಲ್ಲಿ ನುಜ್ಜುಗುಜ್ಜಾಗಿರುವ ಕಡುಗಪ್ಪು ಬೆಕ್ಕೊಂದರ ಶರೀರವನ್ನು ಚುಚ್ಚಿ ನೇತುಹಾಕಲಾಗಿತ್ತು! ಬಾಯಿಕಳೆದುಕೊಂಡು, ಕೈಗಳನ್ನಗಲಿಸಿ ಬರ್ಬರವಾಗಿ ನೇತಾಡುತ್ತಿದ್ದ ಅದರ ದೇಹದಿಂದ ತೊಟ್ಟಿಕ್ಕುತ್ತಿದ್ದ ಬಿಸಿರಕ್ತ ಅದು ಕೆಲವೇ ನಿಮಿಷಗಳ ಹಿಂದಷ್ಟೇ ಸತ್ತಿದೆಯೆಂಬುದನ್ನು ಸಾರಿ ಹೇಳುತ್ತಿತ್ತು! ಅದನ್ನು ನೇತುಹಾಕಿರುವ ರೀತಿಯನ್ನು ನೋಡಿದರೆ ಇದನ್ನು ಕೊಂದಿದ್ದು ಯಾವುದೋ ಪ್ರಾಣಿಯಲ್ಲವೆಂಬುದು ಸ್ಪಷ್ಟವಾಗಿತ್ತು!

ತಮ್ಮಿಬ್ಬರ ಹೊರತಾಗಿ ಇಲ್ಯಾರೋ ಇದ್ದಾರೆ. ಅದು ಮನುಷ್ಯನಂತೂ ಖಂಡಿತಾ ಅಲ್ಲ! ಈ ಸಂಗತಿ ಹೊಳೆಯುತ್ತಿದ್ದಂತೆಯೇ ಭೀಕರವಾಗಿ ಬೆಚ್ಚಿಬಿದ್ದ ಭಟ್ಟರು ಹರಿವಾಣವನ್ನು ಅಲ್ಲೇ ಕೈಬಿಟ್ಟು ಚಂದ್ರಾವತಿಯಿರುವ ಅಡಿಗೆಕೋಣೆಯತ್ತ ಓಡಿದರು. ಏದುಸಿರುಬಿಡುತ್ತಾ ಕೋಣೆ ಪ್ರವೇಶಿಸಿದವರಿಗೆ ಜೀವಮಾನದಲ್ಲೆಂದೂ ನೋಡದಂತಹಾ ಪರಮ ಭಯಾನಕ ದೃಶ್ಯವೊಂದು ಅಲ್ಲಿ ಕಂಡಿತು‌.

ಕತ್ತಲಿನಲ್ಲಿ ಮುಳುಗಿದ್ದ ಅಡಿಗೆಮನೆಯ ಆಚೆ ಮೂಲೆಯಲ್ಲಿ ಒಲೆಯೊಂದು ಧಗಧಗನೆ ಉರಿಯುತ್ತಿತ್ತು. ಹತ್ತಾರು ಒಣ ಕಟ್ಟಿಗೆಗಳನ್ನು ಒಟ್ಟಿಗೇ ಹಾಕಿದಂತೆ ಬಿರುಸಾಗಿ ಧಗಧಗಿಸುತ್ತಿದ್ದ ಆ ಅಡುಗೆ ಒಲೆಗೆ ಮುಖಮಾಡಿ ಕುಳಿತಿದ್ದ ಚಂದ್ರಾವತಿಯ ತಲೆ ವಿಕಾರವಾಗಿ ಕೆದರಿತ್ತು. ಅದಕ್ಕಿಂತಲೂ ಭಯಾನಕವಾದ ಇನ್ನೊಂದು ಸಂಗತಿಯೆಂದರೆ...

ಒಲೆಗೆದುರಾಗಿ ಕುಳಿತಿದ್ದ ಅವಳು ತನ್ನ ಎರೆಡು ಕಾಲುಗಳನ್ನೂ ಒಲೆಯೊಳಗೆ ಕಟ್ಟಿಗೆಯಂತೆ ಒಟ್ಟಿಕೊಂಡಿದ್ದಳು! ಅವಳ ಕಾಲಿನ ಮೂಳೆಗಳನ್ನು ಸುಡುತ್ತಿದ್ದ ಬೆಂಕಿಯ ಜ್ವಾಲೆಗಳು ತಕತಕನೆ ಕುಣಿಯುತ್ತಾ ಅಬ್ಬರಿಸುತ್ತಿದ್ದವು!  ಕಥೆಗಳಲ್ಲೂ ಕೇಳದ ಆ ಭಯಾನಕ ದೃಶ್ಯವನ್ನು ನೋಡುತ್ತಿದ್ದಂತೆಯೇ ಅವರ ನರಮಂಡಲದಲ್ಲಿನ ಸಕಲ ನರಗಳೂ ಇಮ್ಮಡಿ ವೇಗದಲ್ಲಿ ಪತರಗುಟ್ಟತೊಡಗಿದವು. "ಅಮ್ಮಯ್ಯೋ" ಎಂದು ವಿಕಾರವಾಗಿ ಚೀರಿಕೊಂಡ ಅವರಿಗೆ ಇದು ಸ್ವಲ್ಪ ಹೊತ್ತಿಗೆ ಮುಂಚೆ ಕೂಗಿದ ಬಡಪಾಯಿ ಬೆಕ್ಕಿನ ಆರ್ತನಾದದ್ದೇ ಮುಂದುವರಿದ ಭಾಗವೇನೋ ಅನ್ನಿಸಿತು. ಆ ಸದ್ದು ಕೇಳುತ್ತಿದ್ದಂತೆಯೇ ಒಲೆಯ ಮುಂದಿದ್ದ ಆ ಭಯಾನಕ ಪ್ರೇತವು ತಲೆಯೆತ್ತಿನೋಡಿತು. ಆಗ ಕಂಡಿತು.. ಜ್ವಾಲೆಯ ಬೆಳಕಿನಲ್ಲಿ ಕೆಂಪಗೆ ಹೊಳೆಯುತ್ತಿದ್ದ, ಇನ್ನೂ ಹಸಿಯಾರದ ರಕ್ತವನ್ನು ಬಾಯಿಗೆಲ್ಲಾ ಬಳಿದುಕೊಂಡಿರುವ ಆ ಭಯಾನಕ ಭೂತದ ವಿಕಾರ ಮುಖ. ಸಾವಿಗೆ ಮಾತ್ರ ಇರಬಹುದಾದ ಕ್ರೂರ ಮುಖ!

ಬದುಕಿನ ಅಷ್ಟೂ ವರ್ಷಗಳಲ್ಲಿ ಸಂಪಾದಿಸಿದ ಶಕ್ತಿಯನ್ನೆಲ್ಲಾ ತಮ್ಮ ಕಾಲಿಗೆ ತಂದುಕೊಂಡ ಸಂಭಾವನೆ ಭಟ್ಟರು ನೇರ ದೇವರ ಮನೆಯತ್ತ ಓಡತೊಡಗಿದರು. ಉರಿಯುತ್ತಿದ್ದ ಕಾಲನ್ನು ಒಲೆಯೊಳಗೇ ಬಿಟ್ಟ ಕಾಲ್ದೋಶವು ಒಂದೇ ಕುಪ್ಪಳಕ್ಕೆ ಮೇಲೆದ್ದು ಕೆಂಪಗೆ ಕಾಯುತ್ತಿದ್ದ ಮೋಟು ಕಾಲಿನಲ್ಲೇ ಅವರನ್ನು ಹಿಂಬಾಲಿಸತೊಡಗಿತು. ಓಡುತ್ತಿದ್ದ ಭಟ್ಟರಿಗೆ ಎರೆಡೇ ಕೋಣೆಗಳಾಚೆಗಿನ ದೂರ ಮೈಲುಮೈಲುಗಳಂತೆ ಅನಿಸತೊಡಗಿತು. ಹೊರಗೆ ಕವಿದಿರುವ ಕಾಳ ಕತ್ತಲೆ, ಸತ್ತ ಬೆಕ್ಕು, ಒಲೆಯ ಬೆಂಕಿ.. ಇವೆಲ್ಲವೂ ಮೃತ್ಯುರೂಪತಾಳಿ ತನ್ನನ್ನು ಬೆನ್ನಟ್ಟಿಬರುತ್ತಿರುವಂತೆ ಅವರಿಗೆ ಭಾಸವಾಯಿತು. ಬದುಕಿನಲ್ಲೆಂದೂ ಜಿಗಿಯದಷ್ಟು ದೂರ ದೂರಕ್ಕೆ ಜಿಗಿಯುತ್ತಾ ಅಂತೂ ದೇವರ ಕೋಣೆಯೊಳಗೆ ನುಗ್ಗಿ ಬಾಗಿಲು ಜಡಿದು ದೇವರೆದುರು ನಡುಗುತ್ತಾ ಕುಳಿತುಬಿಟ್ಟರು‌. ಪ್ರಳಯವೇ ಬೆನ್ನಟ್ಟಿ ಬಂದಂತೆ ಹಿಂಬಾಲಿಸಿ ಬಂದ ಹೆಜ್ಜೆಗಳು ಕೋಣೆಯ ಹೊರಗಡೆ ಸ್ತಬ್ಧವಾದವು. ಮರುಕ್ಷಣವೇ ಕೋಣೆಯ ಮರದ ಬಾಗಿಲು ಧಡಧಡನೆ ಸದ್ದಾಗತೊಡಗಿತು. ಅದರ ಚಿಲಕವಂತೂ ಹೊರಗಿನಿಂದ ಬೀಳುತ್ತಿರುವ ಏಟನ್ನು ತಡೆಯಲಾರದೆ ತಟತಟನೆ ನಡುಗುತ್ತಾ ತೆರೆದುಕೊಳ್ಳತೊಡಗಿತು. ಭಟ್ಟರಿಗೆ ಸಾವು ನಿಶ್ಚಿತವೆಂಬುದು ಗೊತ್ತಿತ್ತು. ಆದರೆ ಅದು ಇಷ್ಟೊಂದು ಭಯಾನಕವೂ, ಬರ್ಬರವೂ ಆಗಿರುತ್ತದೆಂದು ತಿಳಿದಿರಲಿಲ್ಲ. ಇರುವ ಒಂದೇ ಒಂದು ಪ್ರಾಣವನ್ನು ಉಳಿಸಿಕೊಳ್ಳುವ ಕಡೆಯ ಪ್ರಯತ್ನವೆಂಬಂತೆ ಅವರು ದೇವರೆದುರು ಕುಳಿತು ಗಾಯತ್ರೀ ಮಂತ್ರವನ್ನು ಪಠಿಸತೊಡಗಿದರು.

"ಬಾಗಿಲೋ ತೆಗಿಯೋ.. ಹಸಿವಾಗಿದೆ ಅಡುಗೆ ಮಾಡು ಅಂದ್ಯಲ್ಲೋ.. ಈಗ ಊಟ ಮಾಡು ಬಾರೋ.. ಒಲೆ ಉರೀತಿದೆ. ನನ್ನ ಕಾಲು ಖಾಲಿಯಾಯ್ತು, ನಿನ್ನ ಕಾಲು ಕೂಡು ಬಾರೋ... ಲೋ ಭಟ್ಟಾ ಬಾಗಿಲು ತೆಗೆದು ಬಾರೋ... ಅಹ್ಹಹ್ಹಹ್ಹಹ್ಹಾsss.."

ಭಟ್ಟರು ಗಟ್ಟಿಯಾಗಿ ಕಣ್ಮುಚ್ಚಿಕೊಂಡರು. ಹೊರಗಡೆ ಮೃತ್ಯು ಸಂದೇಶ ಮುಂದುವರಿಯಿತು.

"ಇಪ್ಪತ್ತಾರೇ ವರ್ಷ ಕಣೋ.. ನನ್ನ ಸಾಯಿಸಿಯೇ ಬಿಡ್ತಲ್ಲೋ ಆ ದುರ್ವಿಧಿ.. ಆ ಕಾಲ ನನ್ನ ಕೊಂದೇ ಬಿಡ್ತಲ್ಲೋ.. ಹೊಟ್ಟೆಯಲಿದ್ದ ಮಗು ಹೊರಗೆ ಬರೋದಕ್ಕೂ ಬಿಡದೇ ಕೊಂದು ಬಿಡ್ತಲ್ಲೋ. ನಾನು ನರಳಾಡುವಾಗ ಬರಲಿಲ್ಲ. ಒದ್ದಾಡಿ ಸಾಯುವಾಗ ಬರಲಿಲ್ಲ. ಈಗ ಒಪ್ಪತ್ತಿನ ಊಟ ಕೇಳ್ಕೊಂಡು ಬಂದ್ಬಿಟ್ಯೇನೋ? ಹೇಗೆ ತೀರಿಸಿಕೊಳ್ಳಲೋ ಆ ಸೇಡನ್ನ? ನಿಮಗೆಲ್ಲಾ ಹೇಗೆ ಅರ್ಥ ಮಾಡಿಸ್ಲೋ ನಾನು ಅನುಭವಿಸಿದ ನೋವನ್ನ? ನಿನ್ನ ಕತ್ತು ಮುರಿದು ತೋರಿಸ್ಲಾ? ಹೊಟ್ಟೆ ಬಗೆದು ಕೈ ತಿರುಪಲಾ.. ಹೇಳೋ.. ಹೇಗೆ ತೀರಿಸಿಕೊಳ್ಳಲಿ ಹೇಳೋ... ಅಹ್ಹಹ್ಹಹ್ಹಹ್ಹಾsss.."


ಅರ್ಧಕ್ಕೇ ಕೊಲ್ಲಲ್ಪಟ್ಟ ಆಸೆಗಳು ದ್ವೇಶವಾಗಿ ಬದಲಾಗುತ್ತವೆ. ಅಂತಹಾ ದ್ವೇಶಗಳ ಪ್ರತೀಕಾರಕ್ಕೆ ಇಂಥವರೇ ಆಗಬೇಕೆಂದಿಲ್ಲ‌. ಅತೃಪ್ತ ಆತ್ಮಗಳು ವಂಚನೆ ತೋರಿದ ವಿಧಿಯ ಮೇಲಿನ ಮುಯ್ಯನ್ನು ಎದುರಿಗೆ ಸಿಗುವ ಯಾವುದೇ ಬಡಪಾಯಿಯ ಮೆಲೆ ತೀರಿಸಿಕೊಳ್ಳುತ್ತವೆ. ಇವತ್ತಿನ ಈ ಕೆಟ್ಟ ಘಳಿಗೆಯಲ್ಲಿ ಆ ಬಡಪಾಯಿ ತಾನೇ‌. ಹಾಗಂದುಕೊಂಡ ಭಟ್ಟರು ಹಣೆಯ ಮೇಲಿನ ಬೆವರನ್ನು ಒರೆಸಿಕೊಂಡರು. ಅವರ ಉಸಿರಾಟವೂ ಈಗ ಗಾಯತ್ರೀ ಮಂತ್ರವನ್ನೇ ಪಠಿಸುತ್ತಿತ್ತು. ಅವರಿಗೆ ತಿಳಿದಿತ್ತು: ತನಗೂ ಸಾವಿಗೂ ಇರುವ ಅಂತರ ಬರೀ ನಾಲ್ಕೇ ಹೆಜ್ಜೆ. ಕೋಣೆಯೊಳಗಿದ್ದರೆ ಉಳಿವು; ಹೊರಹೋದರೆ ಸಾವು! ಅವರು ಮತ್ತಷ್ಟು ದೃಢವಾಗಿ ಮಂತ್ರ ಜಪಿಸತೊಡಗಿದರು. ಹೊರಗಡೆ ಇದ್ದಕ್ಕಿದ್ದಂತೆ ಎಲ್ಲವೂ ಸ್ತಬ್ದವಾಯಿತು. ಸಣ್ಣ ಹೆಜ್ಜೆಯ ಸಪ್ಪಳವೂ ಇಲ್ಲ, ಚಿಕ್ಕ ಕದಲುವಿಕೆಯ ಶಬ್ದವೂ ಇಲ್ಲ. ಕಾಲವೇ ನಿಂತುಹೋಗಿರುವಂತಹಾ ಭಯಾನಕ ನಿಶ್ಯಬ್ದ! ಭಟ್ಟರು ಕುಳಿತಲ್ಲೇ ಕಿವಿ ನಿಮಿರಿಸಿದರು..

"ಪುರುಷೋತ್ತಮಾ..."

ಕೋಣೆಯ ಮುಚ್ಚಿದ ಬಾಗಿಲೇ ಮಾತನಾಡುತ್ತಿರುವಂತೆ ತುಂಬಾ ಸ್ಪಷ್ಟವಾಗಿತ್ತು ಆ ಮಾತು.ಭಟ್ಟರು ಬೆಚ್ಚಿಬಿದ್ದರು. ಎಷ್ಟೋ ವರ್ಷಗಳ ನಂತರ ತನನ್ನು ತನ್ನ ಹೆಸರಿನಿಂದ ಕರೆಯುತ್ತಿರುವ ಆ ಧ್ವನಿ ಬೇರ್ಯಾರದ್ದೂ ಅಲ್ಲ, ತನ್ನ ಹೆತ್ತ ಅಮ್ಮನದ್ದು!

"ಪುರ್ಷೀ.. ನಾನು ನಿನ್ನಮ್ಮ ಕಣೋ... ಎಷ್ಟು ವರ್ಷದ ನಂತರ ನಿನ್ನ ನೋಡೋಕಂತ ಬಂದಿದೀನಿ, ನೀನು ಕೋಣೆಯೊಳಗೆ ಕೂತುಕೊಂಡಿದೀಯಲ್ಲಾ. ಆಚೆ ಬಾ ಪುರ್ಷೂ.. ನಿನಗೆ ನೆನಪಿಲ್ವಾ? ನಿನ್ನ ಎಷ್ಟೊಂದು ಪ್ರೀತಿಮಾಡ್ತಿದ್ದೆ ನಾನು? ನಿನಗೆ ಜ್ವರ ಬಂದಾಗ ರಾತ್ರೆಯಿಡೀ ಎದ್ದು ನೋಡಿಕೊಂಡಿದ್ದೆ. ನಿಂಗೆ ಇಷ್ಟಾಂತ ಮೆಂತ್ಯದ ದೋಸೆ ಮಾಡಿಕೊಡ್ತಿದ್ದೆ. ಎಲ್ಲಾ ಮರೆತು ಬಿಟ್ಯೇನೋ? ಬಾರೋ.. ಈ ನಿನ್ನ ಅಮ್ಮನ್ನನ್ನ ಈ ಕ್ರೂರ ಕಾಲ್ದೋಶದ ಕೈಯಿಂದ ಬಿಡಿಸ್ಕೋ ಬಾರೋ.."

ಭಟ್ಟರ ಎದೆಯಲ್ಲಿ ಮುಳ್ಳು ಕಲಸಿದಂತಾಯಿತು. ಅಮ್ಮ.. ತನ್ನ ಅಮ್ಮ!  ಇಪ್ಪತ್ತು ವರ್ಷಗಳ ಹಿಂದೆ ದೂರಾದ, ತಾನು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ಅಮ್ಮ!! ಮರಳಿ ಬಂದಿದ್ದಾಳೆ.. ಇಲ್ಲೇ ಬಾಗಿಲ ಬಳಿಯಲ್ಲಿ ನಿಂತು ತನ್ನನ್ನು ಕರೆಯುತ್ತಿದ್ದಾಳೆ.. ಏಳಬೇಕು.. ಆ ಕಾಲ್ದೋಶದ ಕೈಯಿಂದ ಅವಳನ್ನು ಬಿಡಿಸಬೇಕು.. ಏಳಬೇಕು.. ಏ.."
ಮನಸ್ಸಿನ ಒಂದು ಭಾಗ ಹಾಗೆಂದು ಚಡಪಡಿಸುತ್ತಿದ್ದರೆ ಅದನ್ನು ಹಿಡಿತದಲ್ಲಿಡಲು ಭಟ್ಟರು ಮತ್ತಷ್ಟು ಬಿಗಿಯಾಗಿ ಕಣ್ಮುಚ್ಚಿಕೊಂಡರು. ಅಲ್ಲ.. ಇದು ಅಮ್ಮನಲ್ಲ‌. ತನ್ನನ್ನು ಸಾವಿನೆಡೆಗೆ ಕರೆಯುತ್ತಿರುವ ಕಪಟ ದನಿ! ಸೋಲಬಾರದು.

ಹೊರಗೆ ಆ ದೀನ ದನಿ ಮುಂದುವರಿಸಿತು.

"ಮಗನೇ.. ಬಹಳ ನೋವಾಗ್ತಿದೆ ಕಣೋ.. ತಡೆಯೋಕಾಗ್ತಿಲ್ಲ.. ಬಾರೋ.. ಬಂದು ಬಿಡಿಸೋ.. ಈ ಪಿಶಾಚಿಯಿಂದ ನನ್ನ ಉಳಿಸ್.. ಆರ್ವ್ ರ್ರ್ರ್.."
ಆ ಕೊನೆಯ ಮಾತು ಕತ್ತಿನೊಳಗೇ ಉಳಿದು ಯಾವುದೋ ದ್ರವದೊಂದಿಗೆ ಕಲಸಿಹೋದಂತೆ ವಿಕಾರ ಸದ್ದಾಯಿತು. ಭಟ್ಟರಿಗೆ ಹೊಟ್ಟೆಯೆಲ್ಲಾ ತೊಳೆಸಿದಂತೆ ಸಂಕಟವಾಯಿತು‌. ಆದರೆ ಅವರಿಗೆ ಗೊತ್ತಿತ್ತು‌‌. ಇದು ಮರಣ ಪ್ರಹಸನದ ಕೊನೆಯ ಭಾಗ. ಹೊರಗಡೆ ಬೆಳಗಿನ ಎರೆಡನೇ ಜಾವ ಶುರುವಾಗುವ ಹೊತ್ತಿಗೆ ಕಾಲ್ದೋಶ ನಿರ್ಗಮಿಸುತ್ತದೆ. ಅವರು ಅಷ್ಟಂದುಕೊಳ್ಳುವ ಹೊತ್ತಿಗೇ ಹೊರಗಡೆ ಸ್ವರಗಳು ತೀವ್ರರೂಪದಲ್ಲಿ ಅರಚಾಡತೊಡಗಿದವು. ತೀರಿಹೋದ ತಂದೆ, ಬಿಟ್ಟುಹೋದ ಮಡದಿ, ಬಾಲ್ಯದಲ್ಲಿ ಮುದ್ದುಗರೆಯುತ್ತಿದ್ದ ಅಜ್ಜ.. ಬದುಕಿನಲ್ಲಿ ತಾನು ಉತ್ಕಟವಾಗಿ ಪ್ರೀತಿಸಿದವರೆಲ್ಲಾ ಮುಚ್ಚಿದ ಬಾಗಿಲಿನ ಆಚೆಕಡೆ ಅಶರೀರವಾಣಿಗಳಾಗಿ ನಿಂತು ಹೃದಯವಿದ್ರಾವಕವಾಗಿ ಕರೆದುಹೋದರು. ತಮ್ಮ ನಲವತ್ತೂ ಚಿಲ್ಲರೆ ವರ್ಷಗಳ ಇಡೀ ಬದುಕೇ ಹೀಗೆ ಮರುಪ್ರಸಾರವಾಗುವುದನ್ನು ಕೇಳಿಯೂ ಕೇಳದಂತೆ ಭಟ್ಟರು ಒಳಗೇ ಉಳಿದುಬಿಟ್ಟರು.

ಪುರುಷೋತ್ತಮನೆಂಬ ಯಾರಿಗೂ ಗೊತ್ತಿಲ್ಲದ ಹೆಸರಿನ ಸಂಭಾವನೆ ಭಟ್ಟರ ಬದುಕಿನಲ್ಲೆಂದೋ ಬಂದು ಹೋದ ನಾನಾ ಬಂಧುಗಳ ಪಾತ್ರಗಳನ್ನು ತೊಟ್ಟು ಕುಣಿದ ಕಾಲ್ದೋಶವು ಕೊನೆಗೂ ಸೋಲೊಪ್ಪಿದಂತೆ ಕಂಡಿತು. ಅದು ಹೊರಡುವ ಸಮಯ ಹತ್ತಿರಬಂದಿತ್ತು. ತನಗೆ ಸಿಕ್ಕಿದ್ದ ಸಮಯದಲ್ಲಿ ಒಂದು ನರಬಲಿಯನ್ನೂ ಪಡೆಯಲಾರದೇ ಹೋದ ಕೋಪದಲ್ಲಿ ಕತ್ತಲೆಯೂ ಅದುರುವಂತೆ ಅದು ಹೀಗೆ ಅಬ್ಬರಿಸಿತು. "ಬರಲ್ವಾ? ಹೊರಗೆ ಬರಲ್ವಾ? ಹೋಗ್ತೀನೋ. ನಾನೇ ಹೋಗ್ತೀನಿ‌‌. ಆಯುಷ್ಯ ಗಟ್ಟಿ ಇದೆ ನಿಂದು. ಆದರೆ ನೆನಪಿಟ್ಕೋ, ಮುಂದೆ ಯಾವತ್ತೋ ಒಂದಿನ ನೀನು ದಾರಿ ತಪ್ಪಿ ತಲುಪೋ ಯಾವುದೋ ಒಂದು ಮನೆಯಲ್ಲಿ ನಿನ್ನ ಹಿಡಿದೇ ತೀರ್ತೀನಿ"
ಅಷ್ಟಂದ ಆ ಸ್ವರ ಕೀರಲಾಗಿ, ಅಳುವಾಗಿ, ಗಹಗಹಿಕೆಯಾಗಿ ಮೆಲ್ಲನೆ ದೂರವಾಗತೊಡಗಿತು. ಇದೂ ಕಾಲ್ದೋಶದ ಹೊಸತೊಂದು ನಾಟಕವಿರಬೇಕೆಂದೆನಿಣಿಸಿದ ಭಟ್ಟರು ಜಪ ಮುಂದುವರಿಸಿದರು. ಅಷ್ಟರಲ್ಲಿ ಮನೆಯಾಚೆಗೆಲ್ಲೋ ನಾಯಿಯೊಂದು ವಿಕಾರವಾಗಿ ನರಳಿದ ಸದ್ದು ಸುತ್ತಲೂ ಗುಂಯ್ಯನೆ ಪರಿಭ್ರಮಿಸಿ ರಾತ್ರೆಯ ನೀರವದೊಳಗೆ ಲೀನವಾಯಿತು.

ಮರುದಿನ  ಮರಳಿಬಂದ ಮನೆಯ ಸದಸ್ಯರಿಗೆ ಮನೆಯ ಸಮೀಪದ ದಾರಿಯಲ್ಲಿ ವಿಕಾರವಾಗಿ ಸತ್ತು ಬಿದ್ದಿರುವ ಬೀದಿನಾಯಿಯೂ, ಮನೆಯೊಳಗೆ ದೇವರವಳದಲ್ಲಿ ಮೂರ್ತಿಯನ್ನು ತಬ್ಬಿಕೊಂಡು ನಿದ್ರೆಹೋಗಿರುವ ಸಂಭಾವನೆ ಭಟ್ಟರೂ ಕಣ್ಣಿಗೆ ಬಿದ್ದರು.

('ತುಷಾರ'ದ  ಡಿಸೆಂಬರ್ 2019ರ ಸಂಚಿಕೆಯಲ್ಲಿ ಪ್ರಕಟಿತ)

ಗುರುವಾರ, ನವೆಂಬರ್ 21, 2019

ಬಸ್ಸೆನ್ನುವ ಸಂಭ್ರಮಗಳ ಸಾಗಣೆಕಾರ
ಭಾರತದ ಸಾರಿಗೆ ಇತಿಹಾಸದಲ್ಲಿ ರೈಲಿನ ನಂತರ ಅತಿ ಹೆಚ್ಚು ಜನರಿಂದ ಬಳಸಲ್ಪಡುತ್ತಿರುವ ವಾಹಿನಿಯೆಂದರೆ ಅದು ಬಸ್ಸು. ಇದು, ಮನೆಮನೆಯ ಬಾಗಿಲಿನಲ್ಲೂ ಬೈಕು, ಕಾರು, ಓಮಿನಿಗಳು ನಿಂತಿರುವ ಇಂದಿನ ಕಾಲಕ್ಕೂ ಅನ್ವಯವಾಗುವ ಸತ್ಯ. ಟಾರನ್ನೇ ಕಾಣದ ಹಳ್ಳಿಗಾಡುಗಳ ಮೂಲೆಮೂಲೆಗೂ ತಲುಪಬಲ್ಲದ್ದಾಗಿರುವುದೇ ಬಸ್ಸಿನ ಈ ಯಶಸ್ಸಿಗೆ ಕಾರಣವೆನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಪಟ್ಟಣದಲ್ಲಿ ಅಂಡಲೆಯುವ, ಸುಮಾರು ಮೊವ್ವತ್ತು - ನಲವತ್ತು ವರ್ಷದ ಯಾವುದೇ ಯಾರನ್ನಾದರೂ ನಿಲ್ಲಿಸಿ ಕೇಳಿನೋಡಿ? ಯಾವ ರಾಜ್ಯದ ಯಾವ ಹಳ್ಳಿಯಿಂದ ಬಂದವರಾದರೂ ತಮ್ಮೂರಿನ ಬಸ್ಸುಗಳ ಬಗೆಗೆ ಚಂದದ ಕಥೆಯೊಂದು ಅವರ ನೆನಪಿನ ಮಡತೆಗಳೊಳಗೆ ಇದ್ದೇ ಇರುತ್ತದೆ. ಕಾಡು, ಬೆಟ್ಟ, ನದಿಯಾಚೆಗೆಲ್ಲೋ ಇರುವ ದೂರದ ಪಟ್ಟಣದಿಂದ ಹಾವಿನಂತೆ ಹರಿದುಬಂದಿರುವ ರಸ್ತೆಯ ಮೇಲೆ ಕೇಕೆ ಹಾಕುತ್ತಾ, ಅಲ್ಲಾಡುತ್ತ, ತೇಕುತ್ತಾ, ಏದುಸಿರು ಬಿಡುತ್ತಾ, ಅಲ್ಲಲ್ಲಿ ನಿಲ್ಲುತ್ತಾ ಪ್ರಯಾಣಿಕರನ್ನು ಹೊತ್ತು ತರುವ ಬಸ್ಸೆಂದರೆ ಪ್ರತಿಯೊಬ್ಬರಿಗೂ ಅದೊಂದು ತೆರನಾದ ಪ್ರೀತಿ. ಹೆಚ್ಚೇನೂ ಬೇಡ, ಕಾಲದ ಗಡಿಯಾರವನ್ನು ಕೇವಲ ಇಪ್ಪತ್ತು-ಇಪ್ಪತೈದು ವರ್ಷಗಳಷ್ಟು ಹಿಂದಕ್ಕೆ ತಿರುಗಿಸಿದರೂ ಸಾಕು, ಯಾವ ರೀತಿಯಲ್ಲಿ ಬಸ್ಸೆನ್ನುವ ಬಸ್ಸು ಪ್ರೀಂಪ್ರೀಂ ಎಂದು ಹಾರನ್ ಹೊಡೆಯುತ್ತಾ ಜನಸಾಮಾನ್ಯರ ಮನದಂಗಳಗಳನ್ನು ಹಾದು ಹೋಗುತ್ತಿತ್ತೆನ್ನುವ ಚಿತ್ರ ನಮ್ಮ ಕಣ್ಮುಂದೆಯೇ ಗೋಚರವಾಗತೊಡಗುತ್ತದೆ. ಅದರಲ್ಲೂ ಮತ್ಯಾವ ಪ್ರಭಾವೀ ಸಾರಿಗೆ ವಾಹಿನಿಯೂ ಇಲ್ಲದ ಹಳ್ಳಿಗಳ ಪಾಲಿಗಂತೂ ಬಸ್ಸೆನ್ನುವುದು ಹೃದಯದಿಂದ ದೇಹದೆಲ್ಲ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಸಾಕ್ಷಾತ್ ನರನಾಡಿಯೇ ಆಗಿತ್ತು. ಭರ್ರೋ ಎನ್ನುತ್ತಾ ಹತ್ತಾರು ಏರು ದಿಣ್ಣೆಗಳ ಹತ್ತಿಳಿದು, ರಸ್ತೆಯ ತುಂಬಾ ಬಾಯ್ತೆರೆದು ನಿಂತಿರುವ ಮಿನಿ ಪಾತಾಳದಂತಹಾ ಹೊಂಡಗಳಲ್ಲಿ ಇನ್ನೇನು ಬಿದ್ದೇ ಹೋಯಿತೇನೋ ಎಂಬಂತೆ ವಾಲಿ, ಕೊನೆಯ ಬಿಂದುವಿನಲ್ಲಿ ಸಾವರಿಸಿಕೊಂಡು, ಸಾಕ್ಷಾತ್ ಕಂಬಳದ ಅಂಗಳವೇನೋ ಎಂಬಂತಿರುವ ಕೆಸರಿನ ಜಾರಿಕೆಯ ಜೊತೆ ಸೆಣೆಸುತ್ತಾ, ಉಸಿರಾಡುವ ಗಾಳಿಗೇ ಜಾಗವಿಲ್ಲದಷ್ಟು ರಶ್ಶಾಗಿದ್ದರೂ ಕೊನೆಯ ನಿಲ್ದಾಣದ ಕಟ್ಟಕಡೆಯ ಪ್ರಯಾಣಿಕನನ್ನೂ ಬಿಡದೆ ಅವನ ಸಾಮಾನು-ಸರಂಜಾಮುಗಳ ಸಮೇತ ಹತ್ತಿಸಿಕೊಂಡು ಗಮ್ಯ ತಲುಪಿಸಿದ ನಂತರವೇ ಬಸ್ಸಿಗೆ ನಿದ್ರೆ ಹತ್ತುವುದು. ಬೆಳಗ್ಗೆ ಕೋಳಿಯ ಕೂಗು ಕೇಳಿ ನೂರಾರು ಹಳ್ಳಿಗರು ಎಚ್ಚರಗೊಳ್ಳುವಾಗಲೇ ಊರಿನ ಬಯಲಿನ ಮೂಲೆಯಲ್ಲೆಲ್ಲೋ ನಿಂತೇ ನಿದ್ರಿಸುತ್ತಿದ್ದ ಅದು ಎಚ್ಚರಗೊಳ್ಳುತ್ತದೆ. ಕೊರೆಯುವ ಚಳಿಗೆ ಜನರೆಲ್ಲರೂ ಬಚ್ಚಲಿನ ಒಲೆಯೆದುರು ನಿಂತು ಬಿಸಿಯಾಗುವಾಗ ಬಸ್ಸು ನಿಂತಲ್ಲೇ ಚಾಲೂ ಆಗಿ ಗುರ್ ಗುರ್ ಎನ್ನುತ್ತಾ ಥಂಡಿ ಹಿಡಿದ ತನ್ನ ಎಂಜಿನ್ ಗಳನ್ನು ಬೆಚ್ಚಗಾಗಿಸಿಕೊಳ್ಳುತ್ತದೆ. ಊರ ಹೊರಗಿನ ಬಾವಿಯ ನೀರಿನಲ್ಲಿ ಸ್ನಾನ ಮಾಡಿ ಬರುವ ಡ್ರೈವರ್ ಹಾಗೂ ಕಂಡಕ್ಟರ್ ಗಳು ಗಾಜಿನ ಎದುರುಗಡೆ ತಗುಲಿಸಿರುವ ದೇವರ ಫೋಟೋಗೆ ಊದುಬತ್ತಿ ಹಚ್ಚಿ ಕೈ ಮುಗಿದರೆಂದರೆ ಮುಗಿಯಿತು, ಬಸ್ಸಿನ ಪ್ರಯಾಣ ಶುರು! ಬ್ಯಾಗು ತಗುಲಿಸಿಕೊಂಡು ನಿಂತಿರುವ ಕಾಲೇಜು ಕುಮಾರ-ಕುಮಾರಿಯರು, ಹೇಳದೇ ಕೇಳದೇ ಕೆಟ್ಟು ಕುಳಿತಿರುವ ತೋಟದ ಮೋಟರನ್ನು ರಿಪೇರಿಗೆ ಒಯ್ಯುತ್ತಿರುವ ಬಡ ರೈತ, ಅಡಿಕೆ ಮಂಡಿ ಸೌಕಾರರ ಬಳಿ ಹತ್ತು ಸಾವಿರ ಹೆಚ್ಚಿಗೆ ಸಾಲ ಕೇಳಲೆಂದು ಹೊರಟಿರುವ ಹೆಗ್ಡೇರು, ಎರೆಡು ದಿನದಿಂದ ಬಿಡದೆ ವಾಂತಿ ಮಾಡಿಕೊಳ್ಳುತ್ತಿರುವ ಮಗುವನ್ನು ನಗರದ ದೊಡ್ಡ ಡಾಕ್ಟರಿಗೆ ತೋರಿಸಲೆಂದು ಒಯ್ಯುತ್ತಿರುವ ಆತಂಕದ ತಾಯಿ, ಜೇಬಿನಲ್ಲಿ ತನ್ನ ಅಂಗಡಿಗೆ ಬೇಕಾದ ಸಾಮಾನುಗಳ ಪಟ್ಟಿಯನ್ನೂ, ಕಂಕುಳಲ್ಲಿ ಖಾಲಿ ಚೀಲವನ್ನೂ ಅವುಚಿಕೊಂಡಿರುವ, ಆಗಾಗ ಒಳಜೇಬಿನಲ್ಲಿನ ಹಣವನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಿರುವ ಗೂಡಂಗಡಿಯ ಬಾಬಣ್ಣ, ಸೆಂಟು, ಪೌಡರು ಬಳಿದುಕೊಂಡು ಘಮಘಮಿಸುತ್ತಾ ಪಟ್ಟಣದ ರಸ್ತೆರಸ್ತೆಯನ್ನೂ ಸರ್ವೇ ಮಾಡಲಿಕ್ಕೆ ತಯಾರಾಗಿ ಬಂದಿರುವ ಪಡ್ಡೆ ಹುಡುಗರು, ಎದುರಾದವರೆಲ್ಲರಿಂದ ನಮಸ್ಕಾರ ಹೇಳಿಸಿಕೊಳ್ಳುತ್ತಾ ಪಕ್ಕದೂರ ಶಾಲೆಗೆ ಹೊರಟು ಕಾಯುತ್ತಿರುವ ಮೇಷ್ಟರು, ಈ ಸಲದ ಛಳಿ, ಗಾಳಿ, ಮಳೆ, ಬೆಳೆಗಳ ಬಗ್ಗೆ ಘನಗಂಭೀರವಾದ ಚರ್ಚೆ ನಡೆಸುತ್ತಾ ನಿಂತಿರುವ ಹಿರಿಯದ್ವಯರು, ಅಜ್ಜನ ಮನೆಗೆ ಹೋಗುವ ಸಂಭ್ರಮದಲ್ಲಿ ತೇಲುತ್ತಿರುವ ದೊಗಲೆ ಚಡ್ಡಿಯ ಪೋರ ಮತ್ತು ಜರತಾರಿ ಲಂಗದ ಪೋರಿ, ಹಾಗೂ ಅವರಿಬ್ಬರನ್ನೂ ನಿಭಾಯಿಸುತ್ತಾ ತಾನೂ ಒಳಗೊಳಗೇ ತವರಿಗೆ ಹೋಗುವ ಖುಷಿಯನ್ನನುಭವಿಸುತ್ತಿರುವ ಅಮ್ಮ…. ಹೀಗೆ ಜಗದ, ಜನಜೀವನದ ವಿವಿಧ ಮಜಲುಗಳು ಬಸ್ಸಿನ ದಾರಿಯಲ್ಲಿ ಕಾದುನಿಲ್ಲುತ್ತವೆ.

ಊರಿಂದ ಹೊರಡುವ ಬಸ್ಸುಗಳದೊಂದು ಚಿತ್ರವಾದರೆ ಊರಿಗೆ ಮರಳುವ ಬಸ್ಸುಗಳದು ಇನ್ನೊಂದು ತೆರನಾದ ಸಂಭ್ರಮ. ಅವುಗಳಿಗಾಗಿ ಕಾಯುವ ಜೀವಗಳು ಹಲವು. ಇಳಿಸಂಜೆಯ ತಂಪಿನಲ್ಲಿ ಪೋರನೊಬ್ಬ ಬಣ್ಣದ ಕಾರು ತರುತ್ತೇನೆಂದು ಮಾತು ಕೊಟ್ಟು ಪೇಟೆಗೆ ಹೋಗಿರುವ ಅಪ್ಪನ ಹಾದಿ ಕಾಯುತ್ತಿದ್ದರೆ ಅವನ ತಾಯಿ ಅವರು ತರಲಿರುವ ಹೊಸ ಅಲ್ಯೂಮಿನಿಯಂ ಪಾತ್ರೆಗೆ ಹಾಕಲು ಮಜ್ಜಿಗೆ-ಹೆಪ್ಪನ್ನು ತಯಾರಿಟ್ಟುಕೊಂಡು ಕೂತಿದ್ದಾಳೆ. ರಿಪೇರಿಯಾಗಿ ಬರಲಿರುವ ನೀರುಣಿಸುವ ಮೋಟಾರಿಗಾಗಿ ಬಾಯಾರಿದ ತೋಟ-ಗದ್ದೆಗಳು ಕಾದಿವೆ. ಹೊಸದಾಗಿ ಮದುವೆಯಾಗಿರುವ ಹುಡುಗಿ ಪಟ್ಟಣಕ್ಕೆ ಕೆಲಸಕ್ಕೆ ಹೋಗಿರುವ ಪ್ರಿಯತಮ ತನಗಾಗಿ ತರಲಿರುವ ಮಲ್ಲಿಗೆ-ಮೈಸೂರು ಪಾಕುಗಳನ್ನೂ, ಅವುಗಳ ನಡುವಿನಿಂದ ಹಾದುಬಂದು ತನ್ನನ್ನು ತಬ್ಬಲಿರುವ ಅವನ ತುಂಟ ಕೈಗಳನ್ನೂ ಕಾದಿದ್ದಾಳೆ. ಈ ಎಲ್ಲ ಸಂಭ್ರಮಗಳನ್ನೂ ಹೊತ್ತು ತರುವುದು ಬಸ್ಸೇ ಎಂದು ಬೇರೆ ಹೇಳಬೇಕಿಲ್ಲವಲ್ಲಾ?

ಇನ್ನು ಹಬ್ಬ ಹಾಗೂ ರಜೆದಿನಗಳು ಬಂತೆಂದರೆ ಬಸ್ಸೆನ್ನುವುದು ಅಕ್ಷರಷಃ ಸಂಭ್ರಮದ ಸಾಗಾಣೆಕಾರನಾಗುತ್ತದೆ. ಅದೆಲ್ಲೋ ದೂರದ ಊರಿನಿಂದ ಬೆಳ್ಳಂಬೆಳಗ್ಗೆ ಬಸ್ಸು ಹತ್ತಿ ಬರಲಿರುವ ಅಜ್ಜ, ಮಾವ, ಚಿಕ್ಕಮ್ಮ, ಅತ್ತೆ, ಅವರ ಮಕ್ಕಳು ಮುಂತಾದ ಬಂಧುಬಾಂಧವರನ್ನು ಹೊತ್ತು ತರುವ ತೇರಾಗುತ್ತದೆ. ಮನೆಯಲ್ಲಿನ ಚಿಕ್ಕ ಪೋರ ಬೆಳಗ್ಗೆ ಏಳುತ್ತಿದ್ದಂತೆಯೇ ಬರಲಿರುವ ಅಜ್ಜನ ಜಪ ಆರಂಭಿಸುತ್ತಾನೆ. ಬರುವವರಿಗೆ ನಿಲ್ದಾಣದಿಂದ ಮನೆಗೆ ಬರುವ ದಾರಿ ಗೊತ್ತಿರುತ್ತದಾದರೂ ಅವರನ್ನು ಸ್ವಾಗತಿಸಲಿಕ್ಕೆ ನೇರ ನಿಲ್ದಾಣಕ್ಕೇ ಓಡುತ್ತಾನೆ. ಅಥವಾ “ಅಜ್ಜ ಎಷ್ಟೊತ್ತಿಗೆ ಬರ್ತಾರೆ ಹೇಳೇ” ಎಂದು ಮನೆಯ ತುಂಬಾ ತರಲೆ, ರಗಳೆ ಮಾಡಿಕೊಂಡು ಹಿಂಬಾಲಿಸುವ ಅವನನ್ನು ಕೆಲನಿಮಿಷಗಳ ಮಟ್ಟಿಗಾದರೂ ಸಾಗಹಾಕಲಿಕ್ಕೆಂದು ಅಮ್ಮ “ಗಾಯಿತ್ರಿ ಬಸ್ಸಿಗೆ ಅಜ್ಜ ಬರ್ತಾರೆ. ಕರ್ಕೊಂಡ್ಬಾ ಹೋಗು"  ಎಂದು ಕಳಿಸಿಬಿಡುತ್ತಾಳೆ. ಜಾರುವ ಚಡ್ಡಿಯನ್ನು ಹಿಡಿದುಕೊಂಡು, ಬರಲಿರುವ ಅಜ್ಜನ ಸ್ವಾಗತಕ್ಕಾಗಿ ನಿಲ್ದಾಣಕ್ಕೆ ಓಡಿಬಂದು ಬಸ್ಸು ಬರಲಿರುವ ದಾರಿಯನ್ನೇ ದಿಟ್ಟಿಸುತ್ತಾ ನಿಂತವನನ್ನು ಬಸ್ಸು ನಿಮಿಷಗಳ ಕಾಲ ಕಾಯಿಸುತ್ತದೆ. ಕಾದಷ್ಟೂ ಅವನ ಕಾತರ, ಸಂಭ್ರಮಗಳು ಹೆಚ್ಚುತ್ತವೆಂಬುದು ಅದಕ್ಕೂ ಗೊತ್ತು. ಹೀಗೆ ಕಾದು ಕಾದು ಪೆಚ್ಚುಮೋರೆ ಹಾಕಿಕೊಂಡು ಇನ್ನೇನು ಮನೆಯ ದಾರಿ‌ ಹಿಡಿಯಬೇಕು, ಅಷ್ಟರಲ್ಲಿ, ಅದೋ ಅಲ್ಲಿ, ರಸ್ತೆಯ ದೂರದ ತಿರುವಿನ ಮರೆಯಿಂದ ಪೀಂಪೀಂ ಎನ್ನುವ ಸದ್ದೊಂದು ಕೇಳಿಬರುತ್ತಿದೆ. ನೋಡ ನೋಡುತ್ತಿದ್ದಂತೆಯೇ ಚಿಕ್ಕ ಚುಕ್ಕೆಯೊಂದು ಕದಲುತ್ತಾ ಇತ್ತಲೇ ಬರುತೊಡಗುತ್ತದೆ. ಬರುಬರುತ್ತಾ ಆ ಚುಕ್ಕೆ ಚೌಕವಾಗಿ, ಆಯತವಾಗಿ, ದೊಡ್ಡ ಡಬ್ಬಿಯಾಗಿ ಕೊನೆಗೆ ವಾಲಾಡುತ್ತಾ ಬರುತ್ತಿರುವ ಬಸ್ಸಾಗಿ ಗೋಚರವಾಗತೊಡಗುತ್ತದೆ. ಈಗಾಗಲೇ ಪೋರನ ಖುಷಿ ದುಪ್ಪಟ್ಟಾಗಿದೆ. ಅಜ್ಜನೆನ್ನುವ ಅಕ್ಕರೆಯ ಜೀವವನ್ನು ಹೊತ್ತು ಕುಲುಕುತ್ತಾ ಬಂದು ನಿಂತ ಬಸ್ಸಿನ ಬಾಗಿಲಿನತ್ತ ಅವನು ಓಡುತ್ತಾನೆ. ಮಗಳಿಗೆ ಇಷ್ಟವಾದ ಕಾಟು ಮಾವಿನ ಗೊಜ್ಜು, ಅಳಿಯನಿಗೊಂದು ಶರ್ಟುಪೀಸು, ಮೊಮ್ಮಗನಿಗೆ ಪ್ಯಾಕೇಟಿನ ತುಂಬಾ ಮಹಾಲ್ಯಾಕ್ಟೋ ಚಾಕಲೇಟು.. ಈ ದಿವ್ಯ ಉಡುಗೊರೆಗಳನ್ನು ಜೋಪಾನವಾಗಿಟ್ಟುಕೊಂಡಿರುವ ತಮ್ಮ ಕೈ ಚೀಲದ ಸಮೇತ ಇಳಿದ ಅಜ್ಜ ಹಾಗೂ ಅವರ ಕೈಹಿಡಿದು ಕುಣಿಕುಣಿಯುತ್ತಾ ನಡೆಯುತ್ತಿರುವ ಮೊಮ್ಮಗ.. ಇವರಿಬ್ಬರೂ ಸಾಗಿಹೋಗುವ ಸೊಬಗನ್ನು ಕಣ್ತುಂಬಾ ತುಂಬಿಕೊಂಡ ಬಸ್ಸು ಖುಷಿಯಲ್ಲಿ ಕೇಕೆ ಹಾಕಿದಂತೆ ಹಾರನ್ ಹೊಡೆದು ಮುಂದಿನ ನಿಲ್ದಾಣದ ಮತ್ತೊಬ್ಬ ಮೊಮ್ಮಗನತ್ತ ಮುನ್ನಡೆಯುತ್ತದೆ.

                  *****************

ಬಸ್ಸು ಅದೆಷ್ಟೋ ಹಳ್ಳಿಗಳ ಮುದ್ದಿನ ಮಗ ಅಥವಾ ಮಗಳು. ಮಂದಿ ತಮ್ಮ ಮಕ್ಕಳಿಗಿಟ್ಟಷ್ಟೇ ಚಂದದ ಹೆಸರುಗಳನ್ನು ಬಸ್ಸಿಗೂ ಇಡುತ್ತಾರೆ. ಜಯರಾಮ್, ಶ್ರೀಕಂಠ, ನೀಲಕಂಠ, ಮಲ್ಲಿಕಾರ್ಜುನ, ಗಾಯತ್ರಿ, ಕೊಡಚಾದ್ರಿ, ಹನುಮಾನ್, ಗಜಾನನ, ರೋಸಿ... ಅದೇ ಹೆಸರಿನಿಂದ ಬಸ್ಸು ಊರಿನ ಜನರ ಮನೆಯ, ಮನದ ಅವಿಭಾಜ್ಯ ಅಂಗವಾಗುತ್ತದೆ. ಒಂದು ದಿನ ಬಸ್ಸು ಬಾರದಿದ್ದರೆ ಆ ದಿನವಿಡೀ ಊರು ಏನನ್ನೋ ಕಳೆದುಕೊಂಡಂತೆ ಕೊರಗುತ್ತದೆ. ಸೀನಣ್ಣನ ಕಟಿಂಗ್ ಶಾಪಿನ ಮರದ ಬೆಂಚಿನ ಮೇಲಿರುತ್ತಿದ್ದ ತಾಜಾ ದಿನಪತ್ರಿಕೆ ಇಂದು ಕಾಣೆಯಾಗುತ್ತದೆ. ಪಕ್ಕದೂರ ಹೈಸ್ಕೂಲಿಗೆ ಹೋಗುವ ಮಕ್ಕಳೆಲ್ಲ ನಡೆದೇ ಹೊರಡುತ್ತಾರೆ. ಹೋಗುತ್ತಾ ಹೋಗುತ್ತಾ ಬಾರದ ಬಸ್ಸಿನ ದಾರಿಯನ್ನೇ ತಿರುತಿರುಗಿ ನೋಡುತ್ತಾರೆ‌. ಜನರು ನಿಲ್ದಾಣದೆದುರಿನ ರಸ್ತೆಯಲ್ಲಿ ನಿಂತು ಹಣೆಯೆದುರು ಕೈಯ ಚಪ್ಪರಕಟ್ಟಿ ಬಸ್ಸು ಬಂತಾ? ಎಂದು ಇಣುಕುತ್ತಾರೆ. ಹುಲ್ಲೀಸರದ ಹತ್ತಿರ ಪಂಚರ್ ಆಯ್ತಂತೆ, ಹೊಳೆಮಕ್ಕಿ ಏರಲ್ಲಿ ಚರಂಡಿಗೆ ಹಾರಿತಂತೆ, ಕಂಪದಸರದ ಕೆಸರಲ್ಲಿ ಹೂತುಕೂತಿದೆಯಂತೆ, ಕೈಮರದ ತಿರ್ಕಸ್ಸಲ್ಲಿ ಮರಕ್ಕೆ ಢಿಕ್ಕಿ ಹೊಡೆಯಿತಂತೆ, ಗೂಳಿಮಕ್ಕಿಯಲ್ಲಿ ಯಾರದೋ ದನ ಅಡ್ಡ ಬಂತಂತೆ... ಹೀಗೇ ಅದು ಯಾಕೆ ಬಂದಿಲ್ಲ ಎನ್ನುವುದರ ಬಗ್ಗೆ ಇನ್ನೂ ಮುಂತಾದ ಗುಸುಗುಸು ಗಾಸಿಪ್ ಗಳು ಹರಿದಾಡುತ್ತವೆ.‌

ಇನ್ನು ತಡವಾಗಿ ಬರುವುದು ಬಸ್ಸಿನ ಹುಟ್ಟುಗುಣಗಳಲ್ಲೊಂದು‌. ಎಷ್ಟೇ ಸರಿಯಾದ ಸಮಯಕ್ಕೆ ಮೊದಲ ನಿಲ್ದಾಣದಿಂದ ಹೊರಟರೂ ಅದು ಕೊನೆಯ ನಿಲ್ದಾಣ ತಲುಪುವುದು ಅರ್ಧಗಂಟೆ ತಡವಾಗಿಯೇ.  ಪಾಪ, ಇದರಲ್ಲಿ ಅದರ ತಪ್ಪೇನೂ ಇಲ್ಲ. ಮಾರಿಗೆ ಒಂದರಂತಿರುವ ಪ್ರತಿಯೊಂದು ನಿಲ್ದಾಣದಲ್ಲೂ ನಿಂತು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಾ ನೋಡ ನೋಡುತ್ತಲೇ ನವಮಾಸದ ತುಂಬು ಬಸುರಿಯಂತಾಗುವ ಅದು ನಿಲ್ದಾಣವೇ ಅಲ್ಲದ ಜಾಗದಲ್ಲಿ ಧುತ್ತನೆ ಪ್ರತ್ಯಕ್ಷವಾಗಿ ಕೈಚಾಚುವವರನ್ನೂ ತನ್ನೊಳಗೆ ತುಂಬಿಕೊಳ್ಳುತ್ತದೆ. ಸರಿ, ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಅಗೋ ಅಲ್ಲಿ, ದೂರದ ಕಾಡಿನ ದಾರಿಯಿಂದ ಇಬ್ಬರು ಗಂಡಸರು ಈಗಷ್ಟೇ ಒಲಂಪಿಕ್ಸ್ ಮುಗಿಸಿ ಬಂದ ನುರಿತ ಓಟಗಾರರಂತೆ ಓಡಿ ಬರುತ್ತಿರುವುದು ಕಾಣುತ್ತದೆ. ಒಬ್ಬರನ್ನೊಬ್ಬರು ಮೀರಿಸುತ್ತಾ ಬಿರುಗಾಳಿಯಂತೆ ಧಾವಿಸಿಬರುತ್ತಿರುವ ಅವರನ್ನು ನೋಡಿ ಎರೆಡು ಸೀಟ್ ಹೆಚ್ಚಾಯಿತೆಂಬ ಖುಷಿಯಲ್ಲಿ ಕಂಡಕ್ಟರ್ ಸಹಾ ಸೀಟಿ‌ ಊದಿ ಡ್ರೈವರನಿಗೆ ಕಾಯುವಂತೆ ಸೂಚನೆನೀಡುತ್ತಾನೆ. ಬಿಟ್ಟಬಾಣದಂತೆ ಓಡಿಬಂದು ಬಸ್ಸನ್ನು ಹಿಡಿದುಕೊಂಡ ಅವರು ಚಂಡಮಾರುತದಂತೆ ಏದುಸಿರು ಬಿಡುತ್ತಾ ಬಸ್ಸು ಹತ್ತುವವರು ತಾವಲ್ಲವೆಂದೂ, ವಯಸ್ಸಾದವರೊಬ್ಬರು ಹಿಂದೆ ಬರುತ್ತಿದ್ದಾರೆಂದೂ, ಅವರಿಗಾಗಿ ಕಾಯಬೇಕೆಂದೂ ಕೇಳಿಕೊಳ್ಳುತ್ತಾರೆ. ತಿರುಗಿ ನೋಡಿದರೆ ದೂರದಲ್ಲಿ ವಯೋವೃದ್ಧರೊಬ್ಬರು ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಬರುತ್ತಿರುವುದು ಕಾಣಿಸುತ್ತದೆ.

                 *************

"ದೊಡ್ಡವನಾದ ಮೇಲೆ ಏನಾಗ್ತೀಯ ಪುಟ್ಟೂ?"

"ಗುದುಚತ್ತೀ ಬಚ್ಚಿನ ಡ್ರೈವರ್ ಆತೀನಿ!"

ಹೀಗಂತ ಹೇಳಿ ಎದುರಿರುವವರನ್ನೆಲ್ಲ ಗೊಳ್ಳೆಂಬ ನಗೆಯಲೆಯಲ್ಲಿ ತೇಲಿಸುವ ಚಿಲ್ಟಾರಿಗಳ ಸಂಖ್ಯೆ ಅದೆಷ್ಟೋ? ನಿಜ.. ಬಸ್ಸೊಂದರ ಡ್ರೈವರ್, ಕಂಡಕ್ಟರ್ ಅಥವಾ ಕ್ಲೀನರ್ ಗಳಿಗೆ ವಿಶಿಷ್ಠ ಗೌರವವೊಂದಿದೆ. ಎಲ್ಲರಿಗಿಂತ ಹೆಚ್ಚಾಗಿ ಹಳ್ಳಿಯ ಮಕ್ಕಳ ದೃಷ್ಟಿಯಲ್ಲಿ ಅವರು ಅಘೋಷಿತ ಹೀರೋಗಳು. ಒಂದು ಕಾಲಲ್ಲಿ ಬ್ರೇಕು ಒತ್ತುತ್ತಾ, ಇನ್ನೊಂದರಲ್ಲಿ ಆಕ್ಸಿಲೇಟರ್ ತುಳಿಯುತ್ತಾ ಸರಸರನೆ ಸ್ಟೇರಿಂಗನ್ನು ಆ ಕಡೆ, ಈ ಕಡೆ ತಿರುಗಿಸುವ, ಅಷ್ಟು ದೊಡ್ಡ ಬಸ್ಸನ್ನು ಎಷ್ಟು ಸರಾಗವಾಗಿ ಹೊರಳಿಸಿ, ಚಲಾಯಿಸುವ ಡ್ರೈವರ್, "ಯಾರ್ರೀ ಅಲ್ಲೀ ಟಿಕೇಟ್ ಟಿಕೇಟ್.. ಹೋಗ್ರೀ‌.. ಒಳಗಡೆ ನಡೀರ್ರೀ.." ಎಂದು ಆಜ್ಞಾಪಿಸುತ್ತಾ ಬಣ್ಣದ ಪುಸ್ತಕದಿಂದ ಟಿಕೇಟು ಹರಿದುಕೊಡುವ ಕಂಡಕ್ಟರ್ ಹಾಗೂ ಓಡುವ ಬಸ್ಸಿನ ಬಾಗಿಲಿನಲ್ಲಿ ನಿಂತು, ಬೀಸಿಬರುವ ಗಾಳಿಗೆ ತನ್ನ ಕೂದಲ ಹಾರಿಬಿಟ್ಟುಕೊಂಡು "ಆರಗ, ನೊಣಬೂರ್, ಅರಳಸುರಳಿ, ಸೊನಲೆ, ಬಿಳ್ಳೋಡಿ, ಜಯನಗರ, ಹೊಸನಗರಾ" ಎಂದು ವಿಶಿಷ್ಠ ರಾಗವೊಂದರಲ್ಲಿ ಕೂಗುವ ಕ್ಲೀನರ್.. ಈ ಮೂವರನ್ನು ಅನುಕರಣೆ ಮಾಡದ ಹೊರತು ಊರಿನ ಯಾವೊಬ್ಬ ಪೋರನ ಬಾಲ್ಯವೂ ಸಂಪನ್ನವಾಗುವುದೇ ಇಲ್ಲ! ಅದರಲ್ಲೂ ಕಂಡಕ್ಟರ್ ನ ಕೈಯಲ್ಲಿರುವ ಟಿಕೇಟು ಪುಸ್ತಕ ಹಾಗೂ ಅದರ ಪುಟಗಳ ನಡುವೆ ಅವಿತಿರುವ ಕಾರ್ಬನ್ ಚೀಟಿಗಳಂತೂ ಶಾಲಾ ಮಕ್ಕಳ ದೃಷ್ಟಿಯಲ್ಲಿ ಜಗತ್ತಿನ ಅದ್ಭುತಗಳ ಪಟ್ಟಿಗೆ ಸೇರುವಂತಹಾ ವಸ್ತುಗಳು. ನಿರ್ವಾಹಕ ಎಸೆದುಹೋಗುವ ಖಾಲಿಯಾದ ಟಿಕೆಟ್ ಪುಸ್ತಕ ಹಾಗೂ ಮಂದವಾದ ಕಾರ್ಬನ್ ಹಾಳೆಗಳನ್ನು ಎತ್ತಿಕೊಳ್ಳುವುದಕ್ಕೆ ಹುಡುಗರ ನಡುವೆ ನಡೆಯುವಷ್ಟು ಪೈಪೋಟಿ ಪ್ರಧಾನ ಮಂತ್ರಿಗಳ ಕುರ್ಚಿಗಾಗಿಯೂ ನಡೆಯಲಿಕ್ಕಿಲ್ಲ!

                      *****************

ಮೇಲು-ಕೀಳುಗಳನ್ನೂ, ಪುರುಷ-ಸ್ತ್ರೀ ಎಂಬ ಭೇದ-ಭಾವಗಳನ್ನೂ ಮೌನವಾಗಿಯೇ ಮೀರುವ ಬಸ್ಸು ಕೆಳಗಿನ ಕೇರಿಯ ನಾಗಿಯನ್ನೂ ಹಾಗೂ ಮೇಲಿನಮಕ್ಕಿಯ ಶಾಂತಕ್ಕನನ್ನೂ ಒಟ್ಟಿಗೇ ಕೂರಿಸಿಕೊಂಡು ಸಂತೆಗೆ ಕರೆದೊಯ್ಯುತ್ತದೆ. ಮಹಬೂಬ ಸಾಬರ ಟೊಪ್ಪಿಯೂ, ರಾಮಾಶಾಸ್ತ್ರಿಗಳ ಶಲ್ಯವೂ ಅಡ್ಡಸೀಟಿನಲ್ಲಿ ಒಟ್ಟಿಗೇ ಕುಳಿತು ಡ್ರೈವರ್ ಡಿಸೋಜನ ಜೊತೆ ಪಟ್ಟಂಗ ಹೊಡೆಯುವ ಸಾಮರಸ್ಯದ ದೃಶ್ಯ ಕಂಡುಬರುವುದು ಬಸ್ಸಿನಲ್ಲೇ. ಅಷ್ಟೇ‌ ಅಲ್ಲ, ಒಂದು ವಾರದಿಂದ ಅದೇಕೋ ಸರಿಯಾಗಿ ಮೇವು ತಿನ್ನದೆ ಕುಗುರುತ್ತಿರುವ ಊರಿನ ಕುರಿ, ಕೋಳಿ, ಟಗರುಗಳನ್ನೆಲ್ಲ ಟಿಕೆಟ್‌ ರಹಿತವಾಗಿ ಹೊತ್ತೊಯ್ದು ಪಶುಪಾಲನಾ ಆಸ್ಪತ್ರೆಗೆ ತಲುಪಿಸಿ ಪ್ರಾಣಿದಯೆ ಮೆರೆಯುವುದೂ ಸಹಾ ಬಸ್ಸೇ. ಇಂತಿಪ್ಪ ಅದು ಒಂದರ್ಥದಲ್ಲಿ ಭೂಮಿಯಂತೆಯೇ ಸಹನಾಮಯಿ. ಕಡಲೆಕಾಯಿ ತಿಂದು ಸಿಪ್ಪೆ ಎಸೆದರೂ, ಎಲೆಡಕೆ ಉಗುಳಿ ತನ್ನ ಹೊರಮೈಯನ್ನು ಗಲೀಜು ಮಾಡಿದರೂ, ಸೀಟಿನ ಸ್ಪಂಜು ಕಿತ್ತು ಗಾಯಗೊಳಿಸಿದರೂ ಅದು ಕೋಪಿಸಿಕೊಳ್ಳುವುದಿಲ್ಲ. ತಾವೇ ಎಲೆಅಡಿಕೆ, ಪಾನ್ ಪರಾಗ್, ಗುಟ್ಕಾ ಅಗಿದು ಉಗುಳಿ ಅಂದಗೆಡಿಸಿದ ಬಸ್ಸನ್ನು ಹೊರಗಿನಿಂದ ನೋಡಿದ ಜನ ‘ಥೂ ಎಷ್ಟು ಗಲೀಜಾಗಿದೆ’ ಎಂದು ತಾವೇ ತೆಗಳಿ ಅವಮಾನಿಸಿದಾಗಲೂ ಅದು ಬೇಸರಗೊಳ್ಳುವುದಿಲ್ಲ. ಮಳೆಯ ಹನಿಗೋ, ಹೊಳೆಯ ನೀರಿಗೋ ತನ್ನನ್ನು ಒಡ್ಡಿಕೊಂಡು ಸ್ವಚ್ಛವಾಗಿ ಮತ್ತದೇ ಪ್ರಯಾಣಿಕರ ಬಳಿಗೆ ಮರಳಿಬರುತ್ತದೆ.

ಹೀಗೆ ಸಮತೆ, ಸಹನೆ ಮೆರೆಯುವ ಬಸ್ಸಿನ ಹೃದಯ ಅಷ್ಟೇ ಗಾಢವಾಗಿ ಪ್ರೀತಿ-ಪ್ರೇಮಗಳಿಗೂ ಮಿಡಿಯುತ್ತದೆ. ಪ್ರತಿದಿನವೂ ಅದರ ಸೀಟುಗಳ ಬೆನ್ನಿನಲ್ಲಿ ನೂರಾರು ಪ್ರೀತಿಯ ಅಕ್ಷರಗಳು ಅಚ್ಚಾಗುತ್ತವೆ. ಹತಾಶ ಪ್ರೇಮಿಯೊಬ್ಬ ತಾನು ಮನದಲ್ಲೇ ಆರಾಧಿಸುತ್ತಿರುವ ಪ್ರೇಯಸಿಗೆ ಕೊನೆಗೂ ಹೇಳಲಾಗದ ಮಾತೊಂದನ್ನು ಬಸ್ಸಿನ ಸೀಟಿನ ಹಿಂಭಾಗದಲ್ಲಿ ಕೆತ್ತಿ ಹಗುರಾಗುತ್ತಿದ್ದರೆ ಅವನ‌ ವೇದನೆಗಳನ್ನು ತನ್ನ ಹೃದಯಕ್ಕೆ ಬಸಿದುಕೊಳ್ಳುವ ಬಸ್ಸು ಹೃದಯತುಂಬಿ ಭಾರವಾಗುತ್ತದೆ. ಮುಂದೊಂದು ದಿನ ಅದೇ ಸೀಟಿನಲ್ಲಿ ಕುಳಿತ ಅವನ‌ ಪ್ರೇಯಸಿ ಹುಡುಗಿ ಅದು ತನಗಾಗಿಯೇ ಬರೆದ ಸಾಲೆಂಬುದು ಗೊತ್ತಿಲ್ಲದೆಯೇ ಆ ಅಕ್ಷರಗಳ ಮೇಲೆ ಕೈಯಾಡಿಸಿ ಮುಗುಳ್ನಕ್ಕಾಗ ಬಸ್ಸಿನ ಗಾಜುಗಣ್ಣುಗಳ ಮೇಲೆ ಹನಿಗಳೆರೆಡು ಮೂಡಿ ಜಾರುತ್ತವೆ.

              ***************

ಸದಾ ಜನರನ್ನು ಹೊತ್ತು ತಿರುಗುವ ಬಸ್ಸಿಗೆ ಆಗಾಗ ಜನರಿಂದ ಸೇವೆ ಮಾಡಿಸಿಕೊಳ್ಳುವ ಮನಸ್ಸಾಗುತ್ತದೆ. ಹಾಗನಿಸಿದಾಗೆಲ್ಲ ಅದು ರಸ್ತೆಯ ನಡುಮಧ್ಯದಲ್ಲಿ ಇದ್ದಕ್ಕಿದ್ದಂತೆಯೇ ನಿಂತುಬಿಡುತ್ತದೆ. ಗಾಳಿಯಿಲ್ಲ, ಮಳೆಯಿಲ್ಲ, ಚಕ್ರದಡಿಯಲ್ಲಿ ಚಿಕ್ಕ ಮುಳ್ಳೂ ಇಲ್ಲ. ಬಸ್ಸು ಮಾತ್ರ ರಾಜರ ಕಾಲದ ಶಿಲಾಕುದುರೆಯಂತೆ ದಾರಿ ಮಧ್ಯದಲ್ಲಿ ಸ್ತಬ್ದವಾಗಿಬಿಟ್ಟಿದೆ. ಡ್ರೈವರ್ ಕೀಲಿ ತಿರುಗಿಸಿ, ಬಟನ್ ಒತ್ತಿ, ಗೇರು ಬದಲಿಸಿ ಎಷ್ಟೇ ಪರಿಪರಿಯಾಗಿ ರಮಿಸಿದರೂ ಅದು ಸ್ಟಾರ್ಟ್ ಆಗುವುದೇ ಇಲ್ಲ. ಬದಲಿಗೆ ಗುರ್ ಗುರ್ ಎಂದು ಚಾಲೂ ಆಗಲು ಪ್ರಯತ್ನಿಸುತ್ತಿರುವಂತೆ ನಟಿಸತೊಡಗುತ್ತದೆ. ಕೊನೆಗೆ ಒಳಗಿರುವ ಜನರ ಪೈಕಿ ಅರ್ಧದಷ್ಟು ಗಂಡಸರು ಕೆಳಗಿಳಿದು, ತಮ್ಮ ಪಂಚೆ, ಲುಂಗಿಗಳನ್ನು ಮೇಲೆಕಟ್ಟಿ ಬಸ್ಸಿನ ಬೆನ್ನಿಗೆ ಕೈಕೊಡುತ್ತಾರೆ.

ಅಲ್ಲಲ್ಲಣ್ಣ… ಐಸ್ಸಾ… ಏರಿ ಪಕ್ಡಾ…ಐಸ್ಸಾ….ಜೋರಾಗ್ ತಳ್ಳು… ಐಸ್ಸಾ...ಇನ್ನೂ ತಳ್ಳು…ಐಸ್ಸಾ….

ಹಾಡುತ್ತಾ ತಳ್ಳುತ್ತಾ ಒಂದಷ್ಟು ದೂರ ಹಾಗೇ ಮುಂದೆ ಸಾಗುತ್ತದೆ. ಕೊನೆಗೂ ಅವರೆಲ್ಲರ ಬಕಾಪ್, ಭಲಾ, ಶಹಬ್ಬಾಶ್ ಗಳಿಗೆ ಕರಗಿದ ಬಸ್ಸು ಚಾಲೂ ಆಗಿ ರೊಂಯ್ ಎಂದು ಕೆನೆಯುತ್ತದೆ. ಇಷ್ಟು ಹೊತ್ತು ತಳ್ಳಿ ತಳಕಂಬಳಕ ಆದವರೆಲ್ಲ ಹೋ ಎಂದು ಸಂಭ್ರಮಿಸಿ ತಲೆಗೆ ಕಟ್ಟಿಕೊಂಡಿದ್ದ ಟವಲ್ ಬಿಚ್ಚುತ್ತಾ ಬಸ್ಸಿನೊಳಗೆ ನುಗ್ಗುತ್ತಾರೆ. ಮೈಮುರಿದಂತೆ ಅಲ್ಲಾಡುವ ಬಸ್ಸು ಭರ್ರೋ ಎನ್ನುತ್ತಾ ಮುನ್ನುಗ್ಗುತ್ತದೆ. 

                    **************

ಬಸ್ಸಿಗೆ ಎರೆಡು ಮನೆ: ಒಂದು ಆಚೆ ತುದಿಯ ನಿಲ್ದಾಣವಾದರೆ ಇನ್ನೊಂದು ಈಚೆ ತುದಿಯದು. ಎರೆಡೂ ಬಿಟ್ಟುಬಂದ ಮನೆಗಳು; ಎರೆಡೂ ಸೇರಬೇಕಿರುವ ಮನೆಗಳು. ಬಸ್ಸು ಯಾವ ನಿಲ್ದಾಣಕ್ಕೂ ಸೇರಿದುದಲ್ಲ. ತುಳಿದುಬರುವ ರಸ್ತೆಗೂ ಅದು ಸ್ವಂತವಾಗುವುದಿಲ್ಲ. ನಿಲ್ಲುವ ಡಿಪೋಗೂ ಅದು ದಕ್ಕುವುದಿಲ್ಲ. ‘ಆಗು ನೀ ಅನಿಕೇತನ’ ಎಂಬ ಕವಿವಾಣಿಯನ್ನು ಕಾಯಾ, ವಾಚಾ, ಮನಸಾ ಪಾಲಿಸುವ ಬಸ್ಸು ಓಡುತ್ತಲೇ ಇರುವ ಕಾಲದ ಪ್ರತೀಕ. ಊರು, ತಾಲೋಕು, ಜಿಲ್ಲೆ, ರಾಜ್ಯಗಳೆಲ್ಲದರ ಎಲ್ಲೆ ಮೀರಿ ಸಾಗುವ ಅದು ಮಲೆನಾಡಿನ ಮಹಾಮಳೆಯಲ್ಲಿ ನೆನೆದಿದೆ. ಬಯಲುಸೀಮೆಯ ಬರಗಾಲದಲ್ಲಿ ಒಣಗಿದೆ ಹಾಗೂ ಕರಾವಳಿಯ ಕಡಲಿನಲೆಗಳನ್ನೂ ಕಂಡಿದೆ. ಬೇರೆಬೇರೆ ಊರುಗಳಿಂದ ಒಂದೇ ಗಮ್ಯಕ್ಕೆ ಬರುವ ಹಾಗೂ ಒಂದೇ ನೆಲೆಯಿಂದ ಬೇರೆ ಬೇರೆ ಊರುಗಳಿಗೆ ಹೋಗುವ ಬಸ್ಸುಗಳು ಮಧ್ಯದ ನಿಲ್ದಾಣದಲ್ಲೆಲ್ಲೋ ಸಂಧಿಸುತ್ತವೆ. ಡ್ರೈವರ್, ಕಂಡಕ್ಟರ್, ಪ್ರಯಾಣಿಕರುಗಳೆಲ್ಲ ಟೀ, ಕಾಫಿ, ಊಟಗಳಿಗಾಗಿ ಇಳಿದುಹೋದಾಗ ಅಕ್ಕಪಕ್ಕ ನಿಂತು ಅವು ಒಂದಕ್ಕೊಂದು ಮಾತನಾಡಿಕೊಳ್ಳುತ್ತವೆ. ಸಾಗಿಬಂದ ದಾರಿಯಲ್ಲಿ ತಾವು ಕಂಡ ವಿಸ್ಮಯಗಳನ್ನು ಪರಸ್ಪರ ಹಂಚಿಕೊಳ್ಳುತ್ತವೆ. ಎಪ್ಪತ್ತು ದಾಟಿದ ಅಜ್ಜನೊಬ್ಬನಿಗೆ ತಿಳಿದಿರುವಷ್ಟೇ ಸ್ವಾರಸ್ಯಕರ ಕಥೆಗಳು ಬಸ್ಸಿಗೂ ತಿಳಿದಿದೆ. ಕಾಡಿನ ನಡುವೆ ವಾಲಿ ಬಿದ್ದ ಅಗಾಧ ಗಾತ್ರದ ಮರವೊಂದರಿಂದ ಸ್ವಲ್ಪದರಲ್ಲಿ ಪಾರಾದ ಅದ್ಭುತ ಕಥೆ, ನಡುರಾತ್ರೆಯಲ್ಲಿ ಹೆದ್ದಾರಿಯಲ್ಲಿ ಸಾಗಿಬರುವಾಗ ದಾರಿಗಡ್ಡವಾಗಿ ಹುಲಿಯೊಂದು ಛಂಗನೆ ನೆಗೆದುಬಂದ ಭೀಭತ್ಸಕರ ಕಥೆ, ಕಾಡಾನೆಯೊಂದು ತನ್ನನ್ನು ಅಡ್ಡಗಟ್ಟಿದ ಭಯಾನಕ ಕಥೆ, ಕುಸಿಯುವ ಮೊದಲೇ ತಾನು ಓಡಿದಾಟಿದ ಗತಕಾಲದ ಸೇತುವೆಯೊಂದರ ಸ್ವಾರಸ್ಯಕರ ಕಥೆ, ಚಕ್ರದ ಮಟ್ಟಕ್ಕೆ ಹರಿಯುತ್ತಿದ್ದ ನೆರೆನೀರನ್ನು ಸೀಳಿಕೊಂಡು ಪಾರಾಗಿಬಂದ ಸಾಹಸದ ಕಥೆ, ಜಾರುವ ಘಾಟಿಯ ತಿರುವಿನಂಚಿನಲ್ಲಿ, ಕೂದಲೆಳೆಯಷ್ಟೇ ಅಂತರದಲ್ಲಿ ಕಂಡ ಸಾವಿನ ಅಗಾಧತೆಯ ಕಥೆ, ಗಗನೆತ್ತರಕ್ಕೆ ತಲೆಯೆತ್ತಿನಿಂತು ಅಣಕಿಸಿದ್ದ ಪರ್ವತವೊಂದು ಹತ್ತಿದ ನಂತರ ತನ್ನ ಕಾಲಡಿಗೆ ಬಂದ ಸ್ಪೂರ್ತಿದಾಯಕ ಕಥೆ, ಎಷ್ಟೇ ಪ್ರಯತ್ನಿಸಿದರೂ ತನ್ನಿಂದ ತಪ್ಪಿಸಲಾಗದೇಹೋದ, ತನ್ನ ಚಕ್ರಕ್ಕೆ ಸಿಕ್ಕಿ ಸತ್ತ ಮರಿಜಿಂಕೆಯ ಕರುಳು ಕಲಕುವ ಕಥೆ… ಹೀಗೆ ಹೇಳಲಿಕ್ಕೆ ಬಸ್ಸಿನ ಬಳಿ ಸಾವಿರ ಕಥೆಗಳಿವೆ. ನೆನೆದು ಕೊರಗಲಿಕ್ಕೆ ನೂರಾರು ವ್ಯಥಗಳಿವೆ. ಕೊನೆಯ ನಿಲ್ದಾಣದ ನೀರವ ಮೌನದಲ್ಲಿ ನಿಂತು ಅದು ತನ್ನಿಂದ ಹತವಾದ ಜೀವಗಳ ನೆನೆದು ಮಮ್ಮಲಮರುಗುತ್ತದೆ. ಉಸ್ಸೆಂದು ನಿಟ್ಟಿಸಿರಿಟ್ಟು ಹಗುರಾಗಲು ಯತ್ನಿಸುತ್ತದೆ. ಇಂತಹಾ ಇನ್ನೊಂದು ಹತ್ಯೆಯನ್ನೂ ಮಾಡಿಸಬೇಡವೆಂದು ಒಳಗೆ ಹಾರಹಾಕಿದ ಫೋಟೋದಲ್ಲಿ ನಿಂತಿರುವ ದೇವರನ್ನು ಬೇಡುತ್ತದೆ. ತಾನು ಕಂಡ ಸೃಷ್ಟಿಯ ಅಗಾಧತೆ ಹಾಗೂ ಬದುಕಿನ ಕ್ಷಣಿಕತೆಗಳ ಬಗ್ಗೆ ವೇದಾಂತಿಯಂತೆ ಚಿಂತಿಸುತ್ತದೆ.

                  *************

ಬಸ್ಸಿಗೀಗ ಪೈಪೋಟಿ ಜಾಸ್ತಿಯಾಗಿದೆ. ಸಂದಿಗೊಂದಿಗಳಲ್ಲಿ ನುಗ್ಗಿ ಬಹುಬೇಗ ಮನೆ ತಲುಪಿಸುವ ಬೈಕುಗಳು, ಕರೆದಲ್ಲಿಗೇ ಬಂದು ಕರೆದೊಯ್ಯುವ ಆಟೋ, ಟ್ಯಾಕ್ಸಿ, ಓಲಾ, ಊಬರ್ ಗಳು, ಪಕ್ಕದ ಸೀಟಿನಲ್ಲಿ ನಮ್ಮ ಬಿಂಕ-ಬಿಗುಮಾನಗಳು ಮಾತ್ರ ಕೂರಬಹುದಾದ ಒಂಟಿ ಪ್ರಯಾಣದ ಕಾರುಗಳು.. ಇವೆಲ್ಲದರ ಆಬ್ಬರಾಟಕ್ಕೆ ಸಿಲುಕಿದೆ. ಪುಟ್ಟ ಕಾರಿನೊಳಗಿನ ಮುಚ್ಚಿದ ಕಿಟಕಿಯಿಂದ ಕಾಣುವ ಜಗತ್ತು ಕಿರಿದಾಗುತ್ತಿದೆ. ಕೊನೆಯ ಬಸ್ಸು ತಪ್ಪಿಹೋಗುತ್ತದೆನ್ನುವ ಭಯ ಇಲ್ಲವಾಗಿ ನಮ್ಮನ್ನು ಹಿಡಿಯುವವರಿಲ್ಲವಾಗಿದೆ. ಕಂಡಕ್ಟರ್ ಎಸೆದು ಹೋಗುವ ಟಿಕೆಟ್ ಪುಸ್ತಕ ತನ್ನ ಅಂದ ಕಳೆದುಕೊಂಡು ಬಾಲ್ಯವೇ ಬಣ್ಣಗೆಟ್ಟಂತಾಗಿದೆ. ಅಂದು ಒಂದೇ ಸೀಟಿನಲ್ಲಿ ಕುಳಿತು ಪ್ರಯಾಣಿಸಿದ್ದ ಮಂದಿ ಬೇರೆ ಬೇರೆ ಕಾರುಗಳಲ್ಲಿ ಕುಳಿತು ದೂರದೂರ ಸಾಗುತ್ತಿದ್ದಾರೆ. ತಾನು ಹಾಗೂ ತಾನಷ್ಟೇ ಕುಳಿತು ಪ್ರಯಾಣಿಸುತ್ತಿರುವ ಮನುಷ್ಯ ಒಂಟಿಯಾಗುತ್ತಿದ್ದಾನೆ. ಬೆವರಲು ಬಿಡದ ಎಸಿ, ಕೂಲರ್ ಗಳೊಳಗೆ ತಣ್ಣಗೆ ಕುಳಿತು ನರಳುತ್ತಿದ್ದಾನೆ. ತನಗೇ ಗೊತ್ತಿಲ್ಲದಂತೆ, ತುಂಬಿ ಬರಲಿರುವ ಊರಿನ ಆ ಹಳೇ ಬಸ್ಸಿಗಾಗಿ ಕಾಯುತ್ತಿದ್ದಾನೆ.

ದೂರ ದಾರಿಯ ತಿರುವಿನಲ್ಲಿ ವಾಲಾಡುವ ಚುಕ್ಕೆಯೊಂದು ಸಣ್ಣಗೆ ಮೂಡತೊಡಗಿದೆ..


(ದಿನಾಂಕ 17.11.2019ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...