ಶುಕ್ರವಾರ, ಡಿಸೆಂಬರ್ 27, 2019

ಚಿನ್ನ ಎಂದೂ ನಗುತಿರು.. ನನ್ನ ಸಂಗ ಬಿಡದಿರು..



ಕೆಲವೊಂದು ಪ್ರೀತಿಗಳು ಅತ್ಯಂತ ನಿಷ್ಕಾರಣವಾಗಿರುತ್ತವೆ. ನೀನು ಯಾರು? ನಿನ್ನ ಸಂಬಳ ಎಷ್ಟು? ನೀನು ಸುಂದರನಾ? ಕುರೂಪಿಯಾ? ಕುಳ್ಳನಾ? ಡುಮ್ಮನಾ? ನಿನ್ನಿಂದ ನನಗೇನು ಲಾಭ? ನೀನು ನನ್ನ ಬಳಿ ಆಡುವ ಮಾತು ಸುಳ್ಳಾ? ಸತ್ಯವಾ? ಊಹೂಂ. ಇದ್ಯಾವ ಪ್ರೆಶ್ನೆಯನ್ನೂ ಇವನು ಕೇಳುವುದೇ ಇಲ್ಲ. ನಾನು ಹೇಗಿದ್ದೇನೋ ಹಾಗೆಯೇ ನನ್ನನ್ನು ಹಚ್ಚಿಕೊಳ್ಳುತ್ತಾನೆ‌. ಪ್ರೀತಿಸುತ್ತಾನೆ. ತನ್ನ ಪುಟ್ಟ ಹೃದಯವನ್ನು ಅಂಗೈಯಲ್ಲಿಟ್ಟುಕೊಂಡು ನನಗೋಸ್ಕರ ಓಡೋಡಿ ಬರುತ್ತಾನೆ. 'ಮಾಮು, ಇವತ್ತು ಬೇಡ, ನಾಳೆ ಬೆಂಗ್ಳೂರಿಗೆ ಹೋಗಾ' ಎಂದು ಹಠಹಿಡಿಯುತ್ತಾನೆ.

ಇವನನ್ನು ನಾನು ಪ್ರೀತಿಯಿಂದ ಬೊಮ್ಮಣ್ಣೀ ಎಂದು ಕರೆಯುತ್ತೇನೆ.

ಉಡುಪಿಯಿಂದ ನಾನು ಬೇಲಿ ಹಾರಿ ಓಡಿಬರುವ ಹೊತ್ತಿಗೆ ಇವನು ಬರೀ ಒಂದೂ ಚಿಲ್ಲರೆ ವರ್ಷದ ಪೋರ. ನಾನು ಕಾಲೇಜ್ ಮುಗಿಸಿ ತೀರ್ಥಹಳ್ಳಿಯಿಂದ ಬರುವ ಸಮಯಕ್ಕೆ ಪಕ್ಕದ ಮನೆಯ ಅಂಗಳದ ಚಿಟ್ಟೆಯ ಮೇಲೆ ಇಷ್ಟುದ್ದದ ಜುಟ್ಟು ಬಿಟ್ಟುಕೊಂಡು ಕೀಕೀಕೀ ಎಂದು ನಗುತ್ತಾ ಕುಳಿತಿರುತ್ತಿದ್ದ ಈ ಪುಟಾಣಿಯನ್ನು ಹೇಗೆ ಮಾತನಾಡಿಸಬೇಕೆಂಬುದೇ ನನಗೆ ತಿಳಿಯುತ್ತಿರಲಿಲ್ಲ. ನಿಜ ಹೇಳಬೇಕೆಂದರೆ ನನಗೆ ಮಕ್ಕಳನ್ನು ನೆಟ್ಟಗೆ ಮಾತನಾಡಿಸುವುದಿರಲಿ, ಎತ್ತಿಕೊಳ್ಳಲಿಕ್ಕೂ ಬರುತ್ತಿರಲಿಲ್ಲ‌. ನನ್ನೆಡೆಗೆ ತನ್ನ ಅಬೋಧ ಮುಗ್ದ ಕಣ್ಣಿನಿಂದ ನೋಡುತ್ತಿದ್ದ ಇವನಿಗೆ ಬೇರೇನೂ ಹೇಳಲು ತೋಚದೆ ನಾನು 'ಮ್ಯಾಂವ್ ಮ್ಯಾಂವ್' ಎಂದು ಬೆಕ್ಕಿನಂತೆ ಕೂಗಿ ಮಾತನಾಡಿಸುತ್ತಿದ್ದೆ. ಅಷ್ಟೇ! ಚಿನ್ನೂ, ಮುದ್ದೂ, ಪುಟ್ಟೂ ಎಂದು ಎತ್ತಿಕೊಂಡು ಮುದ್ದಾಡುವ ಇತರರ ಮಧ್ಯೆ ಅಷ್ಟು ದೂರಕ್ಕೆ ನಿಂತು ಮ್ಯಾಂವ್ ಮ್ಯಾಂವ್ ಎಂದು ವಿಚಿತ್ರವಾದ ಸದ್ದು ಹೊರಡಿಸುವ ನಾನು ಇವನ ಕಣ್ಣಿಗೆ ಪ್ಯಾಂಟು, ಶರ್ಟು ತೊಟ್ಟ ಇಷ್ಟೆತ್ತರದ ಬೆಕ್ಕಣ್ಣನಂತೆ ಕಂಡೆನೋ ಏನೋ? ನನ್ನನ್ನು ನೋಡಿದಾಗ ಇವನೂ ಮ್ಯಾಂವ್ ಎಂದೇ ಕರೆಯತೊಡಗಿದ. 'ಮ್ಯಾಂವ್ ಬಂದ ನೋಡೂ' ಎಂದರೆ ಸಾಕು, ಕುಳಿತಲ್ಲೇ ಜಿಗಿಜಿಗಿಜಿಗಿಯುತ್ತಾ, ಹೀಹೀಹೀ ಎಂದು ನಲಿಯುತ್ತಾ ಸಂಭ್ರಮ ಪ್ರಕಟಿಸುತ್ತಿದ್ದ. ನಡೆಯಲು ಕಲಿತ ಮೇಲಂತೂ ನನ್ನನ್ನು ಕಂಡೊಡನೆಯೇ ಎರೆಡೂ ಕೈಗಳನ್ನು ಮೇಲೆತ್ತಿಕೊಂಡು ಪುಟ್ಟ ಗೊಂಬೆಯಂತೆ ತಬ್ಬಲು ಓಡಿಬರುತ್ತಿದ್ದ. ಅರಳಸುರಳಿ ಪೇಟೆಗೆ ಹೊರಟ ನನ್ನೊಂದಿಗೆ ಪುಟ್ಟ ಚಪ್ಪಲಿ ಧರಿಸಿ ತಾನೂ ಹೊರಟು ನಿಲ್ಲುತ್ತಿದ್ದ. ಅಮ್ಮನೇನಾದರೂ ಹೋಗಬೇಡ ಎಂದರೆ ಬೂ ಎಂದು ದೊಡ್ಡ ದನಿಯಲ್ಲಿ ಅಳುತ್ತಿದ್ದ. ಆಗೆಲ್ಲ ನನಗೆ ಹೃದಯ ಹಿಂಡಿದಂತೆ ನೋವಾಗುತ್ತಿತ್ತು. ಇದನ್ನೆಲ್ಲಾ ನೋಡಿದ ಅಮ್ಮಮ್ಮ 'ನೀನು ಅವನನ್ನು ಕೆಣಕುವುದಿಲ್ಲ. ಹಿಚುಕಿ ನೋಯಿಸುವುದಿಲ್ಲ. ಹೇಳಿದ ಹಾಗೆಲ್ಲಾ ಕೇಳ್ತೀಯ. ಅದಕ್ಕೇ ನೀನಂದ್ರೆ ಅಷ್ಟು ಪ್ರೀತಿ ಅವನಿಗೆ' ಎನ್ನುತ್ತಿದ್ದರು. ಆದರೆ ನನಗೆ ಇವತ್ತಿನ ತನಕ ಇವನ ಈ ಅಪಾರ ಅಕ್ಕರೆಗೆ ವಿವರಣೆ ಸಿಕ್ಕಿಲ್ಲ.

ಅದು ನಮ್ಮನೆಯ ನಾಗಪ್ರತಿಷ್ಟೆ ಕಾರ್ಯಕ್ರಮದ ದಿನ. ಮನೆಗೆ ಬಂದ ನೆಂಟರೆಲ್ಲಾ ಸಂಜೆ ಹೊರಟುನಿಂತಿದ್ದರು. ನಾನೂ ಬೆಂಗಳೂರಿನ ಪಯಣಕ್ಕಾಗಿ ಬ್ಯಾಗು ಪ್ಯಾಕುಮಾಡಿಕೊಳ್ಳುತ್ತಿದ್ದೆ. ಅಂಗಳದಿಂದ ಒಳಗಡಿಯಿಟ್ಟ ಇವನು ನನ್ನ ತಯಾರಿ ನೋಡಿ ಅರೆಕ್ಷಣ ಅವಾಕ್ಕಾದ‌. 'ನಾಳೆ ಹೋಗಾ ಮಾಮೂ' ಎಂದು ಎಂದಿನಂತೆ ಒತ್ತಾಯ ಮಾಡಿದ. ನಾನು ಒಪ್ಪಲಿಲ್ಲ. ಮುಖ ಚಿಕ್ಕದು ಮಾಡಿಕೊಂಡು ಮರಳಿಹೋದ. ಊಟ ಮುಗಿಸಿ, ಬ್ಯಾಗೇರಿಸಿಕೊಂಡು, ಹೊರಗಡೆ ಅಂಗಳಕ್ಕೆ ಬಂದ ನಾನು 'ಟಾಟಾ ಆಕಾಂಕೀ' ಎಂದು ಕೈಬೀಸಿ ನಾಲ್ಕೇ ನಾಲ್ಕು ಹೆಜ್ಜೆ ನಡೆದಿದ್ದೆ. ಹಿಂದಿನಿಂದ ಅವನ ಅಮ್ಮ ಹಾಗೂ ಅಮ್ಮಮ್ಮನ ದೊಡ್ಡದನಿಗಳು ಕೇಳತೊಡಗಿದವು. ಏನೆಂದು ತಿರುಗಿನೋಡಿದರೆ ನನ್ನ ಪ್ರೀತಿಯ ಆಕಾಂಕ್ಷು ಅಳುತ್ತಿದ್ದ! ಇಪ್ಫಳಿಸಿ ಇಪ್ಪಳಿಸಿ ಅಳುತ್ತಿದ್ದ! ಅಷ್ಟೇ. ಅಲ್ಲಿಂದ ಮುಂದಕ್ಕೆ ಒಂದು ಹೆಜ್ಜೆಯನ್ನಾದರೂ ಕಿತ್ತಿಡಲು ನನ್ನಿಂದಾಗಲಿಲ್ಲ. ಮರಳಿ ಹೋಗಿ ಬ್ಯಾಗನ್ನು ಮನೆಯೊಳಗೆ ಬಿಸುಟು ಅವನಿದ್ದಲ್ಲಿಗೆ ಬಂದೆ. ಅವನೆದುರು ಮೊಣಕಾಲೂರಿ ಕುಳಿತು  'ನಾನು ಇವತ್ತು ಹೋಗಲ್ಲ. ಅಳ್ಬೇಡ ಆಯ್ತಾ' ಎಂದು ಕೈ ಹಿಡಿದುಕೊಂಡೆ. ಇಷ್ಟು ಹೊತ್ತು ಅಳುತ್ತಿದ್ದವನ ಮುಖ ಅನಂತ ಸಂಭ್ರಮಕ್ಕೆ ತಿರುಗಿತು.

ನನ್ನ ಕಣ್ಣಿನಲ್ಲಿ ನೀರಾಡಿತು.

           ******************

ಈಗಲಾದರೂ 'ನಾನು ಬೆಂಗ್ಳೂರಿಂದ ಬರುವಾಗ ಎಂತ ತರ್ಲೋ?' ಎಂದು ಕೇಳಿದರೆ ಅವನು ಕೊಡುವ ಉತ್ತರ 'ಎಂತ ಬೇಡ ಮಾಮು' ಎನ್ನುವುದೊಂದೇ. ಆದರೂ ಬೆಂಗಳೂರಿನ ಬಸ್ಸಿನಿಂದ ತೀರ್ಥಹಳ್ಳಿಯಲ್ಲಿ ಇಳಿದ ತಕ್ಷಣ ಕಾಲುಗಳು ತಾನಾಗಿಯೇ ಇವನು ಇಷ್ಟಪಡುವ ಕಿಟ್ ಕ್ಯಾಟ್ ಅಂಗಡಿಯತ್ತ ಸಾಗುತ್ತವೆ. ಮನೆಗೆ ಬಂದು ಅರ್ಧ ದಿನವಾದರೂ ಇವನ ಮುಖ ಕಾಣದೇ ಹೋದರೆ ಇನ್ನಿಲ್ಲದಷ್ಟು ಬೇಸರವಾಗುತ್ತದೆ. ಕೊನೆಗೆ ನಾನೇ ಸೋತು ಎರೆಡು ಚಾಕಲೇಟ್ ಹಿಡಿದುಕೊಂಡು ಇವನಿರುವತ್ತ ನಡೆದುಬಿಡುತ್ತೇನೆ. ನಮ್ಮನೆಗೆ ಬರುತ್ತಿರುವ ಅವನನನ್ನು ಅವನ ಅಪ್ಪನೋ, ಅಮ್ಮನೋ ವಾಪಾಸ್ ಕರೆದರೆಂದರೆ ಅವರ ಮೇಲೆ ನನಗೆ ಅಪರಿಮಿತ ಸಿಟ್ಟು ಬರುತ್ತದೆ‌. ಮನೆಗೆ ಬೇರಾರೋ ನೆಂಟರು ಬಂದಿರುವರೆಂದು ಅವನು ನಮ್ಮನೆಗೆ ಬರದೇ ಹೋದಾಗ ಅವನ ಮೇಲೂ ಕೋಪವುಕ್ಕುತ್ತದೆ. ಆ ಸಿಟ್ಟು ತಣಿಯುವುದರೊಳಗೇ ಅವನು 'ಮಾಮು, ಕ್ರಿಕೆಟ್ ಆಡಣ ಬಾರಾ' ಎನ್ನುತ್ತಾ ಅಂಗಳದಲ್ಲಿ ಪ್ರತ್ಯಕ್ಷವಾಗಿಬಿಡುತ್ತಾನೆ. ನಾನೂ ಮುನಿಸೆಲ್ಲವನ್ನೂ ಮರೆತು ಅವನ ಹಿಂದೆ ನಡೆಯುತ್ತೇನೆ. 'ಮಾಮು, ಬೆಂಗ್ಳೂರಲ್ಲಿ ಬಾಕ್ಸರ್, ಮಸ್ತಫ್ ನಾಯಿಗಳೆಲ್ಲ ಬೆಳಿಗ್ಗೆ ವಾಕಿಂಗ್ ಹೋಗ್ತಿರ್ತಾವಂತೆ ಹೌದನಾ?'  'ಅಲ್ಲಿ ಯಾವ ಕಾರು ಜಾಸ್ತಿ ಇರೋದು? ಮರ್ಸಿಡಿಸ್ಸಾ ಲ್ಯಾಂಬೋರ್ಗಿನಿನಾ?' 'ನೆನ್ನೆ ವಿರಾಟ್ ಕೋಹ್ಲಿ ಹೆಂಗೆ ಸಿಕ್ಸರ್ ಹೊಡ್ದ ಗೊತ್ತನಾ?' ಎಂದೆಲ್ಲ ಹರಟುತ್ತಾ ಕ್ರಿಕೆಟ್ ಆಡುತ್ತಾನೆ. ನಾನು ಕೇಳಿಯೇ ಇರದ ಅದೆಷ್ಟೋ ತಳಿಯ ನಾಯಿಗಳನ್ನೂ,  ಹೊಸಹೊಸ ಮಾಡೆಲ್ ಕಾರುಗಳನ್ನೂ ಇವನು ವರ್ಣಿಸುವಾಗ ನಾನು ಅವಾಕ್ಕಾಗುತ್ತೇನೆ. ಅದರ ಬಗ್ಗೆ ಅವನು ಕೇಳುವ ಪ್ರೆಶ್ನೆಗಳ ತಲೆಬುಡವೇ ಗೊತ್ತಿಲ್ಲದಿದ್ದರೂ ಏನೇನೋ ಸುಳ್ಳುಪಳ್ಳು ಉತ್ತರ ಹೇಳಿ ಮರ್ಯಾದೆ ಉಳಿಸಿಕೊಳ್ಳುತ್ತೇನೆ. ತನಗಿಂತ ಹದಿನೈದು ವರ್ಷಕ್ಕೆ ದೊಡ್ಡವನಾದ ನನ್ನನ್ನು ಇವನು ಇಷ್ಟೊಂದು ಅಧಿಕಾರದಿಂದ ನಡೆಸಿಕೊಳ್ಳುವುದನ್ನು ನೋಡಿದಾಗೆಲ್ಲ ನನಗೆ 'ಇವತ್ತಿಗೂ ಇವನ ಕಣ್ಣಿಗೆ ನಾನು ಪ್ಯಾಂಟು ತೊಟ್ಟ ಬೆಕ್ಕಣ್ಣನ ಥರಾ ಕಾಣುತ್ತೀನೇನೋ' ಎಂಬ ಅನುಮಾನ ಕಾಡುತ್ತದೆ!

ಬದುಕಿನ ಅದೆಷ್ಟೋ ಸಮಯವನ್ನು ನಾವು ನಮ್ಮನ್ನು ಪ್ರೀತಿಸಿಯೇ ಇಲ್ಲದವರೆದುರು ಪ್ರೀತಿ ತೋಡಿಕೊಳ್ಳುತ್ತಾ, ಅವರಿಗೆ ಅಗತ್ಯವೇ ಇಲ್ಲದ ಕಾಳಜಿಯನ್ನು ವ್ಯಕ್ತಪಡಿಸುತ್ತಾ ಕಳೆದುಬಿಡುತ್ತೇವೆ. ನಮ್ಮ ನಮ್ಮ ಸ್ವಾರ್ಥಕ್ಕಾಗಿ ಯಾರನ್ನೋ ಓಲೈಸುತ್ತಾ, ಮತ್ಯಾರೆದುರೋ ಹಲ್ಲುಗಿಂಜುತ್ತಾ ವ್ಯರ್ಥವಾಗಿ ಬದುಕುತ್ತೇವೆ. ಆ ಎಲ್ಲ ಸ್ವಾರ್ಥದ ಪ್ರೀತಿಗಳೆದುರು ಈ ಮುಗ್ಧ, ನಿಷ್ಕಲ್ಮಶ ಪ್ರೀತಿ ವಜ್ರದಂತೆ ಹೊಳಪಾಗಿ ಕಾಣುತ್ತದೆ. ಹಾಗಂತ ಈ ಅಕ್ಕರೆಯಾದರೂ ಎಷ್ಟು ದಿನಗಳದ್ದು? ದೊಡ್ಡವನಾಗುತ್ತಾ ಹೋದಂತೆ, ಮನಸ್ಸಿನ ಮುಗ್ಧತೆಯನ್ನು ಕಳೆದುಕೊಳ್ಳುತ್ತಾ ಹೋಗಿ ಈ ಮಾಮುವೆಂಬ ಪ್ಯಾಂಟು ತೊಟ್ಟ ಬೆಕ್ಕಣ್ಣನೂ ಇವನ ಕಣ್ಣಲ್ಲಿ ಎಲ್ಲರಂತೆಯೇ ಸಾಮಾನ್ಯ ಮನುಷ್ಯನಾಗಿ ಬಿಡುತ್ತಾನಾ? 

ಹೀಗೆಲ್ಲ ಅನಿಸಿದಾಗ ಅದೇಕೋ ಬಹಳ ಸಂಕಟವಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...