ಶನಿವಾರ, ಡಿಸೆಂಬರ್ 31, 2016

ಪರಮೇಶಿ ಪ್ರಸಂಗ
ಪರಮೇಶಿ ದೈವಭಕ್ತನೇ. ಆದರೂ ಅವನಿಗೆ ವಿಷ್ಣುವಿನ 'ಅವತಾರ'ಗಳ ಬಗ್ಗೆ ಅನುಮಾನಗಳಿದ್ದವು. ಯಾವುದೋ ಆಪತ್ತು ಬಂದಕೂಡಲೇ ಗಂಡಾಗಿದ್ದವನು ಮೋಹಿನಿಯಾಗುವುದು, ವರಾಹವಾಗುವುದು, ಉಗ್ರ ನರಸಿಂಹನಾಗುವುದು ಹೇಗೆ ಸಾಧ್ಯ? ಅದರಲ್ಲೂ ಎಸ್ಪೆಶಲಿ ಗಂಡಸರು! ಅವರು ಹಾಗೆಲ್ಲಾ ಬದಲಾಗುವವರೇ ಅಲ್ಲ. ಮೆನ್ ಆರ್ ಆಲ್ವೇಸ್ ಮೆನ್! ಆಫಿಸಿನಲ್ಲಿ ಲೇಡಿ ಬಾಸ್ ಭದ್ರಕಾಳಿಯಾಗಿ, ಚಂಡಿಚಾಮುಂಡಿಯಾಗಿ, ಕನ್ನಡದ ಕಿರಣ್ ಬೇಡಿಯಾಗಿ....ಹೀಗೇ ಕ್ಷಣಕ್ಕೊಂದು ಭಯಾನಕ ರೂಪ ತಾಳುತ್ತಾ  ತನ್ನ ಮೇಲೆ ರೌದ್ರ ತಾಂಡವವಾಡಿದರೂ ತಾನು ಮಾತ್ರ ಡಾಬರ್ ಮನ್ ಅನ್ನು ಕಂಡ ಬಡಕಲು ಬೀದಿನಾಯಿಯಂತೆ ಬಾಲ ಮುದುರಿಕೊಂಡೇ ನಿಂತಿರುತ್ತೇನೆ. ತಾನು ಮಾತ್ರ ಅಲ್ಲ; ಹಿಂದಿನ ಜನ್ಮದ ಕೋಪವನ್ನೂ ಈ ಜನ್ಮಕ್ಕೆ 'ಕ್ಯಾರಿ ಫಾರ್ವಡ್' ಮಾಡಿಕೊಂಡು ಬಂದಂತಿರುವ ಅವರೆದುರು ಆರಡಿ ಎತ್ತರದ, ಜಿಮ್ ಬಾಡಿಯ ಕೋದಂಡನೂ ಬರೀ ದಂಡವೇ! 

ಬಾಸ್ ಗೆ ಎದಿರಾಡಬೇಕೆಂದು ಅದೆಷ್ಟೇ  ಪ್ರಯತ್ನಿಸಿದರೂ ಪರಮೇಶಿಗೆ ಸಾಧ್ಯವಾಗುವುದೇ ಇಲ್ಲ.  ಹಿಂದಿನ ರಾತ್ರಿ ನೋಡಿದ ಅಣ್ಣಾವ್ರ ಚಿತ್ರದಿಂದ ಪ್ರೇರಿತನಾಗಿ ಇದ್ದ ಬದ್ದ ಧೈರ್ಯವನ್ನೆಲ್ಲಾ ಜೊತೆಗೂಡಿಸಿ "ಇವತ್ತು ಅವರಿಗೆ ಸರಿಯಾಗಿ ಉತ್ತರಕೊಡ್ತೇನೆ!" ಅಂತ ಎದೆಯುಬ್ಬಿಸಿಕೊಂಡು ಹೊರಡುವುದೇನೋ ನಿಜ. ಆದರೆ ಒಂದು ಸಲ ಅವರ ಬಿಗಿದ ಮುಖ, ದಪ್ಪ ಕನ್ನಡಕದೊಳಗಿಂದ ತನ್ನೆಡೆಗೆ ಬೆಂಕಿಯುಗುಳಲು ಸಿದ್ಧವಾಗಿರುವ ಕಣ್ಣು, ಮೇಲೆರೆಗಲು ತಯಾರಾಗಿರುವಂತೆ ಸೆಟೆದು ಕುಳಿತಿರುವ ಭಂಗಿ- ಇದನ್ನೆಲ್ಲಾ ನೋಡುತ್ತಿದ್ದಂತೆಯೇ ರಿಟೈರ್ಮೆಂಟಿಗೆ ಸನಿಹವಾಗಿದ್ದರೂ ಚಾಂಪಿನ್ ಆಗಿಯೇ ಉಳಿದಿರುವ ಹಳೇ ಜಟ್ಟಿಯನ್ನು ಕಂಡಂತಾಗಿ, ಅವನ ಧೈರ್ಯವೆಲ್ಲಾ ಬಾಗಿಲಿನಲ್ಲೇ ಹಾರಿಹೋಗಿ, ಮತ್ತೆ ಬಾಲ ಮುದುರಿದ ನಾಯಿಯಾಗಿಬಿಡುತ್ತಿದ್ದ! ಎಂದಿನಂತೆ ಕೈಕಟ್ಟಿ, ತಲೆ ತಗ್ಗಿಸಿ ತನ್ನ ಮೇಲಾಗುತ್ತಿರುವ 'ಸಹಸ್ರ ನಾಮಾರ್ಚನೆ'ಯನ್ನು ಶ್ರದ್ಧೆಯಿಂದ ಕೇಳಿಸಿಕೊಂಡು ತನ್ನ ಜಾಗಕ್ಕೆ ಮರಳುತ್ತಿದ್ದ.

ಉದ್ಯೋಗಕ್ಕೆ ಸೇರಿದ ಆರಂಭದಲ್ಲಿ ಕೆಲಸ ಗೊತ್ತಿಲ್ಲದ ಕಾರಣದಿಂದ ಹಾಗೂ ಬಾಸ್ ಮೇಲಿನ ಭಯದಿಂದ ಹೆಚ್ಚೆಚ್ಚು ತಪ್ಪುಗಳಾಗುತ್ತಿದ್ದವು. ಅಲ್ಲದೇ ಮೊದಲೇ ಎಡಬಿಡಂಗಿ ಗುಣದವನೂ ಆಗಿದ್ದರಿಂದ ಒಂದಿಲ್ಲೊಂದು ತಪ್ಪು ಮಾಡುತ್ತಲೇ ಇದ್ದ ಪರಮೇಶಿ. 'ಫರ್ಸ್ಟ್ ಇಂಪ್ರೆಷನ್ ಈಸ್ ದಿ ಬೆಸ್ಟ್ ಇಂಪ್ರಷನ್' ಎಂಬಂತೆ ಮೊದಲ ಹೆಜ್ಜೆಯಲ್ಲೇ 'ಯಡವಟ್ಟು' ಎಂಬ ಹಣೆಪಟ್ಟಿ ಹಚ್ಚಕೊಂಡವನಿಗೆ ಬಾಸ್ ರಿಂದ ಆಗಾಗ ಮಹಾಮಂಗಳಾರತಿ ನಡೆಯುತ್ತಲೇ ಇತ್ತು. ಕೆಲವೊಮ್ಮೆ ತನ್ನದಲ್ಲದ ಅಥವಾ ತೀರಾ ಕ್ಷುಲ್ಲಕ ತಪ್ಪಿಗೂ ತಾರಾಮಾರಿ ಬೈಗಳು ಕೇಳಬೇಕಾಗುತ್ತಿತ್ತು. ತಿರುಗಿ ಹೇಳಲೂ ಆಗದೆ, ತೀರಾ ಸಹಿಸಿಕೊಳ್ಳಲೂ ಆಗದೇ ಬೋನಿಗೆ ಬಿದ್ದ ಕರಡಿಯಂತಾಗಿತ್ತು ಪರಮೇಶಿಯ ಸ್ಥಿತಿ. ಆದರೂ ಅವನೇನು ಸಂಪೂರ್ಣ ತೆಪ್ಪಗಿರುತ್ತಿರಲಿಲ್ಲ. ಅವಕಾಶ ಸಿಕ್ಕಾಗೆಲ್ಲಾ ಆತ್ಮೀಯ ಸಹೋದ್ಯೋಗಿಗಳೆದುರು, ಗೆಳೆಯರುದುರು ಹಾಗೂ ಮನೆಯವರೆದುರು ತನ್ನ ಬಾಸ್ ಅನ್ನು ಕ್ಷುದ್ರಾತಿಕ್ಷುದ್ರ ಜೀವಿಗಳಿಗೆ ಹೋಲಿಸಿ ತಮಾಷೆಮಾಡುವ ಮೂಲಕ ಅಷ್ಟರಮಟ್ಟಿಗೆ ತನ್ನ ಉರಿ ಕಡಿಮೆಮಾಡಿಕೊಳ್ಳುತ್ತಿದ್ದ. 

ಹೀಗಿರುವಾಗ ಅದೊಂದು ದಿನ ಅನಿರೀಕ್ಷಿತ ಘಟನೆಯೊಂದು ನಡೆದುಹೋಯಿತು. ಅದ್ಯಾವುದೋ ಅತಿ ಮುಖ್ಯ ಕಾಗದಪತ್ರವೊಂದು ಅಚಾನಕ್ಕಾಗಿ ಕಾಣೆಯಾಯಿಗಿಬಿಟ್ಟಿತು. ಪರಮೇಶಿಗೋ ಅದನ್ನು ಖುದ್ದು ಬಾಸ್ ಗೆ ಕೊಟ್ಟಂತೆ ಮಾಸಲು ಮಾಸಲು ನೆನಪು; ಆದರೆ ಅವರು ಮಾತ್ರ ನೀನದನ್ನು ಕೊಟ್ಟದ್ದೇ ಸುಳ್ಳು ಎಂದು ವಾದಿಸತೊಡಗಿದ್ದರು. ಸಾಲದ್ದಕ್ಕೆ ಎಲ್ಲರೆದುರೇ ಪರಮೇಶಿಯ ಮರೆವನ್ನು, ಬೇಜಾವಬ್ದಾರಿಗಳನ್ನು ದೊಡ್ಡ ಗಂಟಲಿನಲ್ಲಿ ಹರಾಜು ಹಾಕುತೊಡಗಿದರು. ಈ ಕುರುಕ್ಷೇತ್ರ ನೋಡಲಾಗದೆ ಎಲ್ಲರೂ ಭೂತಕನ್ನಡಿ ಹಿಡಿದುಕೊಂಡು ಹುಡುಕಲಾಗಿ, ಎಷ್ಟೆಲ್ಲಾ ಗಲಾಟೆ ಸೃಷ್ಟಿಸಿದ ಆ ಪತ್ರ ಕೊನೆಗೂ ಬಾಸ್  ಟೇಬಲ್ ಮೇಲೆ ರಾಶಿಬಿದ್ದಿದ್ದ ಕಡತಗಳ ಮಧ್ಯದಿಂದಲೇ ಎದ್ದು ಬಂತು! ಎಲ್ಲರೂ ಅಯ್ಯೋ ಪಾಪ ಎನ್ನುವಂತೆ ತನ್ನೆಡೆಗೆ ನೋಡಿದ್ದೇ ತಡ, ಅದೆಷ್ಟೋ ದಿನದಿಂದ ಸಹಿಸಿಕೊಂಡಿದ್ದ ಉಗ್ರ ಕೋಪವೆಲ್ಲಾ ತಾನೇ ಆಗಿ ಎದ್ದುನಿಂತ ಪರಮೇಶಿ. ಕೈಲಿದ್ದ ಫೈಲನ್ನು ರಪ್ ಎಂದು ಟೇಬಲ್ ಮೇಲೆ ಕುಕ್ಕಿದವನೇ "ಮುಂದಿನ ಸಲ ಮಾತನಾಡುವ ಮೊದಲು ಒಮ್ಮೆ ನಿಮ್ಮ ಕಾಲ ಬುಡ ನೋಡಿಕೊಳ್ಳಿ" ಎಂದು ಗುಡುಗಿ, ದಢಾಲ್ಲೆಂದು ಬಾಗಿಲು ತಳ್ಳಿಕೊಂಡು ನಡೆದೇಬಿಟ್ಟ. 

ಒಂದು ಕ್ಷಣದ ಆವೇಶದಲ್ಲಿ ಹಾಗೊಂದು ಮಾತಂದು ಬಂದವನಿಗೆ ನೆತ್ತಿಗೇರಿದ್ದ ಕೋಪ ಇಳಿದ ಕೂಡಲೇ ನಡುಕ ಶುರುವಾಯಿತು. ತಾನೇನೂ ಎದುರಾಡದೆಯೇ ಅಷ್ಟೆಲ್ಲಾ ಎಗರಾಡುತ್ತಿದ್ದವರು ಇನ್ನು ಮುಂದೆ ಸುಮ್ಮನಿರುತ್ತಾರೆಯೇ? ಕನ್ನಡಕದೊಳಗಿನ ತಮ್ಮೆರೆಡೂ ಹದ್ದಿನ ಕಣ್ಣುಗಳನ್ನೂ ನನ್ನ ಮೇಲೇ ನೆಟ್ಟು ತಪ್ಪುಗಳನ್ನು ಹುಡುಕುತ್ತಾರೆ. ತಾನಾಡಿದ ಮಾತಿಗೆ ಬಡ್ಡಿ ಸಮೇತ ಜಿದ್ದಿ ತೀರಿಸಿಕೊಳ್ಳುತ್ತಾರೆ! ಅವನು ಕ್ಯಾಂಟೀನಿನಲ್ಲಿ ಕೈಯ್ಯಲ್ಲಿ ಅನ್ನದ ತುತ್ತು ಹಿಡಿದು ಹೀಗೆಲ್ಲಾ ಚಿಂತಿಸುತ್ತಿದ್ದಾಗ ಆಕಾಶದಲ್ಲಿ ಅದ್ಯಾವ ದೇವರು 'ಅಸ್ತು' ಅಂದರೋ ಏನೋ, ಮತ್ತೆ ತನ್ನ ಕ್ಯಾಬಿನ್ ಗೆ ಮರಳುವ ಹೊತ್ತಿಗೆ ಅವನ ಜಂಘಾಬಲವನ್ನೇ ಉಡುಗಿಸುವಂತಹ ಸುದ್ದಿಯೊಂದು ಅವನಿಗಾಗಿ ಕಾದು ಕೂತಿತ್ತು. ಅವನು ಆಚೆ ಹೋಗುತ್ತಿದ್ದಂತೆಯೇ ಇತ್ತಕಡೆ ಬ್ಯಾಂಕಿಂದ ಫೋನ್ ಬಂತಂತೆ. ನಾಲ್ಕು ದಿನದ ಹಿಂದೆ ಯಾವುದೋ ಸಪ್ಲೈಯರ್ ಹೆಸರಿಗೆ ಅವನು ಬರೆದಿದ್ದ ಚೆಕ್ಕೊಂದು 'ಸ್ಪೆಲ್ಲಿಂಗ್ ಮಿಸ್ಟೇಕ್' ಎಂಬ ಕಾರಣಕ್ಕೆ ಬೌನ್ಸ್ ಆಗಿತ್ತು! 

ಕೊಲ್ಲಲು ಬಂದವನ ಕೈಗೆ ಕೋವಿ ಕೊಟ್ಟಂತಾಯಿತು ಪರಮೇಶಿಯ ಸ್ಥಿತಿ. ಮೊದಲೇ ಗಾಯಗೊಂಡ ಹುಲಿಯಾಗಿದ್ದ ಬಾಸ್ ಈ ಸುದ್ದಿ ಕೇಳಿ ಸಾಕ್ಷಾತ್ ಸಿಂಹಿಣಿಯೇ ಆಗಿದ್ದರು. 'ಬರಲಿ ಅವನು. ಸರಿಯಾಗಿ ಮಾಡ್ತೀನಿ!' ಎಂದು ಘರ್ಜಿಸಿದ್ದರು. ಆದರೆ ಅದೇ ಸಮಯಕ್ಕೆ ಯಾವುದೋ ಕಸ್ಟಮರ್ ಜೊತೆಗೆ ಮೀಟಿಂಗ್ ಹಾಗೂ ಲಂಚ್ ಇದ್ದಿದ್ದರಿಂದ ಅಲ್ಲಿಗೆ ಹೋಗಿದ್ದರು. ಬಂದಮೇಲೆ ಅವರು ಮಾಡುವ ಮೊದಲ ಕೆಲಸವೇ ತನಗೊಂದು ಗತಿ ಕಾಣಿಸುವುದು. ಮುಗಿದೇ ಹೋಯ್ತು ತನ್ನ ಕಥೆ!

ಪರಮೇಶಿ ನಡುಗಿಹೋದ. ಎಂದೋ ಮರೆತಿದ್ದ ಮನೆದೇವರಿಗೆ ಹರಕೆಹೊತ್ತ. ಕುಳಿತಲ್ಲಿಂದಲೇ ದೂರದಲ್ಲಿರುವ ಇಷ್ಟದೈವ ಗುಡಿಬಂಡೆ ಆಂಜನೇಯನಿಗೆ ಅಡ್ಡಬಿದ್ದ. ಯಾರೇ ಬಂದು ತನ್ನ ಡಿಪಾರ್ಟ್ ಮೆಂಟಿನ ಬಾಗಿಲು ತೆಗೆದರೂ ಅದು 'ಅವರೇ' ಎಂದೆಣಿಸಿ ಅವನ ಎದೆ ಧಸಕ್ ಎನ್ನುತ್ತಿತ್ತು. ಮುಂದಿನ ಒಂದು ಗಂಟೆಯ ಒಂದೊಂದು ನಿಮಿಷವನ್ನೂ ಎರಗಲಿರುವ ಸಿಡಿಲಿನ ಉದ್ದಗಲಗಳನ್ನು ಕಲ್ಪಿಸಿಕೊಳ್ಳುತ್ತಲೇ  ಕಳೆದುಬಿಟ್ಟ.

ಆಗ ತೆರೆಯಿತು ಬಾಗಿಲು. ಜೊತೆಗೇ ಔವ್ssssss ಎಂಬ ಭಯಾನಕ ತೇಗಿನ ಶಬ್ದ! ತನ್ನ ಪಾಲಿನ ಯಮರಾಯನ ಕೋಣ ತನ್ನ ಡಿಪಾರ್ಟ್ಮೆಂಟಿನ ಬಾಗಿಲಿನಲ್ಲಿಯೇ ಬಾಲ ಬೀಸುತ್ತಾ ನಿಂತಿದೆ ಎಂಬುದು ಗೊತ್ತಾಗಿಹೋಯಿತು ಪರಮೇಶಿಗೆ. ಕಣ್ಣು ಕೂಡಾ ಅಲುಗಿಸದೇ ತನ್ನೆದುರಿನ ಕಂಪ್ಯೂಟರ್ ನೋಡುತ್ತಾ ಕುಳಿತುಬಿಟ್ಟ. ಮುಂದೆ ಧಕ್ ಎಂದು ಆಟೋಮ್ಯಾಟಿಕ್ ಬಾಗಿಲು ಹಾಕಿಕೊಂಡ ಸದ್ದು; ಟಕ್ ಟುಕ್, ಟಕ್ ಟುಕ್ ಎಂಬ ಕಾಲ್ನಡಿಗೆ; ಕರ್ರ್... ಎಂದು ಈಸಿ ಚೇರಿನಮೇಲೆ ಕುಳಿತ ಶಬ್ದ. ಮುಂದಿನ ಎರೆಡು ನಿಮಿಷ ಅಸಹನೀಯ ಮೌನ. ಕೂಡಲೇ "ಪರಮೇಶಿ, ಬನ್ನಿ ಇಲ್ಲಿ" ಎಂಬ ಮರಣಕರೆ!

ಬಲಿಪೀಠದೆಡೆಗೆ ನಡೆಯವ ಕುರಿಯಂತೆ ನಡೆದು ಬಂದು "ಯೆಸ್ ಮ್ಯಾಡಮ್" ಎಂದು ಕೈಕಟ್ಟಿ ನಿಂತ. "ಏನ್ ಕೆಲಸ ಮಾಡ್ತೀರ್ರೀ ನೀವು????" ಎಂಬ ಘರ್ಜನೆಯನ್ನು ನಿರೀಕ್ಷಿಸಿದ್ದವನಿಗೆ ತನ್ನ ಕಿವಿಗಳನ್ನು ತಾನೇ ನಂಬಲಾಗಲಿಲ್ಲ. "ಚೆಕ್ ಬರೆಯುವಾಗ ಹುಷಾರಾಗಿ ಬರೀರಿ ಆಯ್ತಾ? ತಪ್ಪಾದರೆ ಕ್ಯಾನ್ಸಲ್ ಮಾಡಿ. ಅದನ್ನೇ ಕಳಿಸ್ಬೇಡಿ" ತೀರಾ ತಗ್ಗಿದ, ಮೃದುವಾದ, ಸಣ್ಣನೆಯ ದನಿಯಲ್ಲಿ ನುಡಿದಿದ್ದರು, ತೀರಾ ಚಿಕ್ಕ ಮಗುವೊಂದಕ್ಕೆ ಹೇಳುವಂತೆ! ಇದು ನಿಜವೆಂದು ನಂಬುವುದಕ್ಕೆ ಪರಮೇಶಿಗೆ ನಿಮಿಷಗಳೇ ಹಿಡಿದವು. ಅದಾಗಿ ಕೆಲವೇ ನಿಮಿಷಗಳಲ್ಲಿ ಹೊರಟೇಹೋಗಿಬಿಟ್ಟರು ಪರಮೇಶಿಯ ಉರಿಗೋಪದ ಮೇಡಮ್.

ನಿಜವಾಗಿ ನಡೆದದ್ದು ಏನೆಂದು ಪರಮೇಶಿಗೆ ಗೊತ್ತಾದದ್ದೇ ಸಂಜೆ. ಕೆಲಸ ಮುಗಿಸಿ ಮನೆಗೆ ಹೊರಟವನನ್ನು ಮರೆಗೆ ಕರೆದುಕೊಂಡುಹೋದ ಆಫೀಸಿನ ಸಹಾಯಕ ಸಿಬ್ಬಂದಿಯಲ್ಲೊಬ್ಬನಾದ ರಮೇಶಣ್ಣ ಗುಟ್ಟಾಗಿ ಕೇಳಿದರು: 
"ನಿಮ್ಮ ಬಾಸ್ ಇದಾರಾ ಸರ್?" 
"ಇಲ್ಲರೀ. ಬೇಗ ಹೊರಟೋದ್ರು. ಯಾಕೆ ಏನ್ ವಿಷ್ಯ?"
"ಅಯ್ಯೋ ಯಾಕೆ ಕೇಳ್ತೀರ. ಅನಾಹುತ ಆಗೋಯ್ತು ಸರ್. ಇವತ್ತು ಬಂದಿದ್ದ ಕಸ್ಟಮರ್ಸ್ ಗಂತ ನಾನ್ ವೆಜ್ ಊಟ ತರ್ಸಿದ್ವಾ. ಅವರ ಊಟ ಮುಗಿದ್ರೂ ಒಂದು ಐಟಮ್ ಸ್ವಲ್ಪ ಜಾಸ್ತೀನೇ ಉಳಿದುಬಿಡ್ತು. ಅದ್ಕೇ ನಾನೂ, ನಮ್ ಹುಡುಗ್ರೂ ಸ್ವಲ್ಪ್ ಸ್ವಲ್ಪ ಹಾಕ್ಕೊಂಡ್ ತಿಂದ್ವಿ. ಅದೇನ್ ಹಾಕಿ ಆ ದರಿದ್ರದ ಚಿಕನ್ ಮಡಿದ್ರೋ ಏನೋ, ಸ್ವಲ್ಪ ಹೊತ್ತಿಗೇ ಎಲ್ರಿಗೂ ಹೊಟ್ಟೆಯೊಳ್ಗೆ ಗುಡಗುಡಾಂತ ಶುರುವಾಯ್ತು ನೋಡಿ, ಆಗಿಂದ ಈಗಿನ್ ತನಕ ಸುಮಾರ್ ಆರ್ಸಲ ಟಾಯ್ಲೆಟ್ ಗೆ ಹೋಗ್ಬಂದೆ. ನನ್ ಪುಣ್ಯ, ಕಸ್ಟಮರ್ಸ್ಯಾರೂ ತಿನ್ಲೀಲ ಆ ದರಿದ್ರಾನ. ಆದ್ರೆ ನಿಮ್ ಬಾಸ್ ಗೆ ಮಾತ್ರ ನಾನೇ ಒತ್ತಾಯ ಮಾಡಿ ಎರೆಡೆರೆಡ್ಸಲ ಬಡ್ಸಿ ತಿನ್ಸ್ಬಿಟ್ಟೆ ಸಾರ್! ಅದ್ಕೇ ಕೇಳ್ದೆ ಹೇಗಿದಾರೇಂತ. ಯಾರಿಗೂ ಹೇಳ್ಬೇಡಿ ಆಯ್ತಾ?" ಎಂದವನೇ ಮತ್ತೆ ಟಾಯ್ಲೆಟ್ ಕಡೆಗೆ ಓಡಿದ!

ಬಾಲಕ್ಕೆ ಅಷ್ಟೆಲ್ಲಾ ಬೆಂಕಿ ಹಿಡಿದಿದ್ದ ಆಟಂ ಬಾಂಬ್ ಸಿಡಿಯದೇ ಯಾಕೆ ಠುಸ್ಸಾಯಿತೆಂಬುದು ಆಗ ಗೊತ್ತಾಯ್ತು ಪರಮೇಶಿಗೆ. ರಮೇಶಣ್ಣನ ಒತ್ತಾಯಕ್ಕೆ ಸಿಕ್ಕಿ ದೋಷವಿದ್ದ ಚಿಕನನ್ನು ತುಸು ಹೆಚ್ಚೇ ತಿಂದಿದ್ದ ಬಾಸ್ ಗೆ ಸ್ವಲ್ಪ ಹೊತ್ತಿನಲ್ಲೇ ಹೊಟ್ಟೆಯೊಳಗೆ 'ಗುಡಗುಡ' ಆರಂಭವಾಗಿತ್ತು ಹಾಗೂ ಕ್ಯಾಬಿನ್ ಗೆ ಮರಳುವ ಹೊತ್ತಿಗದು ಉಲ್ಬಣಿಸಿತ್ತು. ತನ್ನೆದುರು ಗಟ್ಟಿಯಾಗಿ "ಏಯ್ss" ಎಂದು ಉಸುರಿದ್ದರೂ ಕುಳಿತಲ್ಲೇ 'ಅನಾಹುತ'ವಾಗಿಬಿಡುವ ಸಂಭವವಿದ್ದರಿಂದ ಮೆತ್ತಗೆ ಪಾಠಹೇಳಿ ಕಳಿಸಿಬಿಟ್ಟರು. ಆ 'ಬಾಧೆ'ಯ ನಡುವೆಯೂ ತನ್ನನ್ನು ಕರೆದು ಚೆಕ್ಕಿನ ವಿಷಯ ಮಾತನಾಡಿದ್ದರೆಂದರೆ ಅವರೊಳಗೆ ಅದೆಷ್ಟು ಕೋಪವಿದ್ದಿರಬೇಡ! ಅಂತೂ ಇಂತೂ ಚಿಕನ್ ರೂಪದಲ್ಲಿ ಬಂದು ತನ್ನನ್ನು ಬೀಸುವ ದೊಣ್ಣೆಯಿಂದ ಪಾರುಮಾಡಿದ ದೇವರಿಗೆ ಹಾಗೂ ಅದನ್ನು ತಿನ್ನಿಸಿದ ರಮೇಶಣ್ಣನಿಗೆ ಮನದೊಳಗೇ ವಂದಸಿ ಮನೆಕಡೆ ಹೆಜ್ಜೆಹಾಕಿದ ಪರಮೇಶಿ.

(ಡಿಸೆಂಬರ್ 2016ರ 'ತುಷಾರ'ದಲ್ಲಿ ಪ್ರಕಟಿತ)

ಶನಿವಾರ, ನವೆಂಬರ್ 5, 2016

ಹಾರೆನ್ನ ಹೃದಯವೇ...

ಹಾರೆನ್ನ ಹೃದಯವೇ ಆ ನೀಲ ನಭಕೆ
ನರಳುವೆಯೇಕೆ ಸೆರೆಗೆ ಸಿಕ್ಕಿ?
ನೀನೇ ಹರಡಿಕೊಂಡ ಬಲೆಯ ಹರಿದು ಹಾರಿಬಿಡು
ಬೇಕಿಲ್ಲ ಬೇರ್ಯಾರ ರೆಕ್ಕೆ.

ಕದವೇ ಇಲ್ಲದ ತೆರೆದ ಬಾಳಿದು
ಆಗಮನ, ನಿರ್ಗಮನ ಉಚಿತ;
ಕೈ ಚಾಚಿ ಬಂದಂತೇ ಕೈ ಬೀಸಿ ನಡೆದುಬಿಡು
ನಿನ್ನದೇನಿದೆ? ಎಲ್ಲ ಪೂರ್ವ ಲಿಖಿತ.

ಇರುವಷ್ಟು ಹೊತ್ತಷ್ಟೇ ಈ ಗೂಡು ನಿನದು
ಋಣ ಮುಗಿಯಿತೆಂದು ಹಾರಿಬಿಡು;
ಬಾಡಿಗೆಯ ಕೇಳದು ಸ್ವಚ್ಛಂದ ಬಾನು
ತ್ರಾಣವಿರುವಷ್ಟು ಜಗವ ಸುತ್ತಿಬಿಡು.

ಅರಿತವಗೆ ತಲೆಬಾಗಿ, ಕಿರಿಯರಿಗೆ ಗುರುವಾಗಿ,
ಹಾರಲಾಗದವಗೆ ತುತ್ತು ಗುಟಕನೀಡು;
ಹಿಗ್ಗು, ಕುಗ್ಗುಗಳಿಗೆ ಸೋಲದೇ ಸಾಗುತಿರು
ಬಾನೆಲ್ಲ ಮೊಳಗಲಿ ನಿನ್ನ ಹಾಡು.

ಸೊತಿತೇ ರೆಕ್ಕೆ? ಉಡುಗಿತೇ ತ್ರಾಣ?
ಸಾಕಿನ್ನು ಇಳಿ ಆ ಮಣ್ಣಿನೆಡೆಗೆ;
ಹಾದ ದಾರಿಯನೆಲ್ಲ ಮನದುಂಬಿ ನೆನೆದೊಮ್ಮೆ
ಒಂದಾಗಿ ಬಿಡು ಆ ಅನಂತದೊಳಗೆ.

(ತುಷಾರದ 'ಚಿತ್ರಕವನಸ್ಪರ್ಧೆ'ಯಲ್ಲಿ ಪ್ರಕಟಿತ)

ಮಂಗಳವಾರ, ಅಕ್ಟೋಬರ್ 25, 2016

ಮೊದಲ ತೊದಲಿಗೆ ಈಗ ಒಂದು ವರುಷ....!

ಇಂದು, ಒಂದು ವರುಷದ ಕೆಳಗೆ ನಾನು 'ಯಾನ' ಆರಂಭಿಸಿದ ದಿನ.... ಸಾಗರ ಬಹಳ ದೊಡ್ಡದಿದೆ, ಅಲೆಗಳ ಹೊಡೆತ ಜೋರಾಗೇ ಇದೆ, ಮುಳುಗಿ ಹೋಗುತ್ತೀನೇನೋ, ನನಗೆಲ್ಲಿದೆ ಈಜುವ ತಾಕತ್ತು?ಎಂದೆಲ್ಲಾ ಯೋಚಿಸುತ್ತಾ ದಡದಲ್ಲೇ ನಿಂತು ಅದೆಷ್ಟೋ ಸಮಯ ನೋಡುತ್ತಲೇ ಉಳಿದಿದ್ದವನು ಕೊನೆಗೂ ಧೈರ್ಯಮಾಡಿ ನನ್ನ ಪುಟ್ಟ ನೌಕೆಯ ಜೊತೆ ನೀರಿಗಿಳಿದ ದಿನ. ಈ ಒಂದು ವರುಷದಲ್ಲಿ ಸಾಗಿದ ದೂರ ಅತ್ಯಲ್ಪವಾದರೂ ಕಲಿತದ್ದು ಮಾತ್ರ ತುಂಬ.

ಬ್ಲಾಗ್ ಎನ್ನುವುದೊಂದು ಮಾಯಾಲೋಕ; ಸಣ್ಣ ಕೋಣೆಯ ನಾಲ್ಕು ಇಕ್ಕಟ್ಟು ಗೋಡೆಗಳ ನಡುವೆ ಅರೆನಿದ್ರೆಯ ಮಂಪರಿನಲ್ಲಿ ಹೊಳೆದ ಸಾಲೊಂದಕ್ಕೆ ಕೊಂಬು, ಬಾಲ ಸೇರಿಸಿ ರೂಪಿಸಿದ ಕವನವನ್ನು ದೂರದ ಅಮೇರಿಕದಲ್ಲೆಲ್ಲೋ ಕುಳಿತ ಕನ್ನಡಿಗರೊಬ್ಬರು ಓದುತ್ತಾರೆಂದರೆ ಇದು ಅದ್ಭುತವೇ ಅಲ್ವಾ? ಮೊದಲ ಬರಹವನ್ನು ಬ್ಲಾಗ್ ನ ಗೋಡೆಯಮೇಲೆ ಚಿತ್ರಿಸಿ, ನನ್ನ ಚಿತ್ತಾರವನ್ನು ನೋಡಲು ಬರುವ ಸಹೃದಯರಿಗಾಗಿ ಕಾಯುತ್ತಾ ಕೂತಿದ್ದ ಆ ಪ್ರತೀ ಕ್ಷಣವೂ ಈಗ ಮತ್ತೆ ಮರುಕಳಿಸಿದಂತೆ ಅನಿಸುತ್ತಿದೆ. 'ಯಾರು ಬರ್ತಾರೆ?' ಎನ್ನುವ ಪ್ರೆಶ್ನೆಗೆ ಉತ್ತರವೆಂಬಂತೆ ಹಲವಾರು ಓದುಗರು ಬಂದುಹೋದರು. ಪ್ರತಿದಿನ ಬ್ಲಾಗಣ್ಣನ ಬಳಿ 'ಬಂದವರ' ಬಗ್ಗೆ ವಿಚಾರಿಸಿದಾಗಲೆಲ್ಲಾ 'ನೋಡು- ನಿನ್ನೆ ಇಷ್ಟು ಜನ ಬಂದರು, ಈ ವಾರದಲ್ಲಿ ಇಷ್ಟು, ಈ ತಿಂಗಳಿನಲ್ಲಿ ಇಷ್ಟು, ಒಟ್ಟು ಇಂತಿಷ್ಟು....' ಎಂದು ಅತ್ತ ಹೆಚ್ಚೂ ಅಲ್ಲದ, ಇತ್ತ ಕಡಿಮೆಯೂ ಅಲ್ಲದ ಅಂಕೆ-ಸಂಖ್ಯೆಗಳ ತೋರಿಸುತ್ತಾ ಬಂದಿದ್ದಾನೆ. ಅವರು ಬಂದ ದಾರಿ, ಅವರ ದೇಶ ಎಲ್ಲವನ್ನೂ ತೋರಿಸಿ ಖುಷಿಪಡಿಸುತ್ತಾ ಬಂದಿದ್ದಾನೆ, ನನ್ನ ಬ್ಲಾಗಣ್ಣ.

ಕೆಲವೊಮ್ಮೆ ಈ ಬ್ಲಾಗಣ್ಣನ ಲೆಕ್ಕಾಚಾರದ ಬಗ್ಗೆ ಅನುಮಾನ ಕಾಡಿದ್ದುಂಟು. ಮೊದಲ ಪೋಸ್ಟ್ ನ ಹೊರತಾಗಿ ಉಳಿದ ಬರಹಗಳಲ್ಲಿ ಒಂದಕ್ಕೂ ಒಂದೇ ಒಂದು ಕಮೆಂಟ್ ಸಿಕ್ಕಿಲ್ಲ; ನಿಜಕ್ಕೂ ಇಷ್ಟುಜನ ನನ್ನ ಬ್ಲಾಗ್ ಓದಿರುವುದು ನಿಜಾನಾ ಎಂದು ಬ್ಲಾಗಣ್ಣನ ಲೆಕ್ಕಾಚಾರವನ್ನೇ ಅನುಮಾನಿಸಿದೆ. ತನ್ನ ಪ್ರೊಡಕ್ಟ್ ವ್ಯಾಪಾರವಾಗಲೆಂಬ ಕಾರಣಕ್ಕೆ ಗೂಗಲ್ ದೊಡ್ಡಪ್ಪನ ಕಿರಿಯ ಮಗನಾದ ಈ ಬ್ಲಾಗಣ್ಣ ಅಮೇರಿಕಾ, ಇಟಲಿ, ರಷ್ಯಾ ಎಂದೆಲ್ಲಾ ದೊಡ್ಡ ದೊಡ್ಡ ದೇಶಗಳ ಹೆಸರು ತೋರಿಸಿ ಕಾಗೆ ಹಾರಿಸುತ್ತಿಲ್ಲವಷ್ಟೇ ಎಂದು ಹುಬ್ಬು ಗಂಟಿಕ್ಕಿದೆ. ಈ ರಹಸ್ಯವನ್ನು ಬೇಧಿಸಲು ಒಂದು ಉಪಾಯ ಮಾಡಿದೆ. ಇತ್ತೀಚೆಗೆ ದುಬೈ ಸೇರಿದ ಗೆಳೆಯನೊಬ್ಬನಿಗೆ ನನ್ನ ಬ್ಲಾಗ್ ಐಡಿ ಕೊಟ್ಟು ಓಪನ್ ಮಾಡು ಎಂದೆ. ಮರುಕ್ಷಣವೇ ಯುಏಇ ಓದುಗರ ಸಂಖ್ಯೆ ಒಂದು ಜಾಸ್ತಿ ಆಯಿತು! 'ನನ್ನ ಪ್ರಾಮಾಣಿಕತೆಯನ್ನೇ ಅನುಮಾನಿಸಿದೆ ಅಲ್ವಾ' ಎಂದು ಬ್ಲಾಗಣ್ಣ ಮುಖ ಚಿಕ್ಕದು ಮಾಡಿಕೊಂಡ."ಅನುಮಾನ ಸುಳ್ಳಾದಾಗಲೇ ನಂಬಿಕೆ ಬಲವಾಗುವುದು ಬ್ಲಾಗಣ್ಣ!" ಎಂದು  ಅವನಿಗೆ ಸಮಾಧಾನ ಮಾಡಿ, ಕಾಂಪನ್ಷೇಶನ್ ಎಂದು ಹೊಸದೊಂದು ಕವನ ಪೋಸ್ಟ್ ಮಾಡಿದೆ. ಬೇಸರ ಮರೆತು ಎಂದಿನಂತೆ ನನ್ನ ಕವನವನ್ನು ಹೊತ್ತು ಪ್ರಪಂಚದಾದ್ಯಂತ ಹಬ್ಬಿಹೋದ.

ಬ್ಲಾಗ್ ಗಾಗಿಯೇ ಅಂತ ನಾನು ಬರೆಯಲಿಲ್ಲ. ಅಲ್ಲಿ-ಇಲ್ಲಿ ಪ್ರಕಟವಾದವನ್ನೇ ಎತ್ತಿ ಬ್ಲಾಗ್ ಗೆ ಹಾಕಿದೆ. ಅಂದಹಾಗೆ ಬ್ಲಾಗಣ್ಣನ ಲೆಕ್ಕ ಪುಸ್ತಕದಲ್ಲಿ ದಾಖಲಾಗಿರುವ ಕಳೆದ ಒಂದುವರ್ಷದ ಅಂಕೆ-ಸಂಖ್ಯೆಗಳ ಹೀಗಿದೆ ನೋಡಿ:
ಒಟ್ಟು ಪೋಸ್ಟ್ ಗಳು: 25
ಕವನಗಳು: 14
ಲೇಖನಗಳು: 4
ಕಥೆ: 1
ಇತರೆ: 6

ಬಂದುಹೋದವರ ಅಂಕೆ-ಸಂಖ್ಯೆ:
ಭಾರತ:1288
(ಇದರಲ್ಲಿ 25% ನನ್ನದೇ!)
ಯುನೈಟೆಡ್ ಸ್ಟೇಟ್ಸ್:264
ಫ್ರಾನ್ಸ್:111
ಯುಎಇ: 33
ರಷ್ಯಾ: 31
ಸಿಂಗಾಪೂರ್: 11
ನೆದರ್ಲ್ಯಾಂಡ್: 9
ಕೆನಡಾ: 6
ರೊಮೇನಿಯಾ: 5
ಯೂಕೆ: 4
ಒಟ್ಟು: 1762

ಈ ಬರಹ ನಿಜಕ್ಕೂ ತೀರಾ ಚಂಚಲೆ. ಥೇಟ್ 'ಅವಳ' ಮನಸ್ಸಿನಂತೆ! ತಲೆಗೆ ಎಷ್ಟೇ ಹುಳ ಬಿಟ್ಟುಕೊಂಡರೂ ಅವಳ ಅಂತರಂಗ ಅರ್ಥವಾಗುವುದೇ ಇಲ್ಲ. ನಾನಾಗಿ ಒಲಿದು ಕೈ ಹಿಡಿದಾಗ ದೂರ ಓಡುತ್ತಾಳೆ.  ಬಿಡುವಾಗಿ ಕುಳಿತು ಪೆನ್ನು- ಹಾಳೆ ಹಿಡಿದು, ಸರ್ವ ಸನ್ನದ್ಧನಾಗಿ ಪರಿಪರಿಯಾಗಿ ಕರೆದರೂ ಅವಳು ಬರುವುದೇ ಇಲ್ಲ. ಆದರೆ ಇನ್ಯಾವಾಗಲೋ ನಾನು ಗಡಿಬಿಡಿಯಲ್ಲಿ ಆಫೀಸಿಗೆ ಓಡುತ್ತಿರುವಾಗ, ಮಂಡೆಬಿಸಿ ಮಾಡಿಕೊಂಡು ಏನೋ ಮಾಡುತ್ತಿರುವಾಗ, ನಾಲ್ಕು ಜನರ ಗುಂಪಿನಲ್ಲಿ ಹರಟುತ್ತಿರುವಾಗ ಓಡಿಬಂದು ತಬ್ಬಿಕೊಂಡುಬಿಡುತ್ತಾಳೆ! ಬೇಸರದಲ್ಲೋ, ಹಿಂಜರಿಕೆಯಲ್ಲೋ, ಯಾವುದೋ ನೆನಪಿನಲ್ಲೋ ನಾನು ಕರಗಿಹೋಗುತ್ತಿರುವಾಗ ಬಳಿಬಂದು ' ನಿನ್ನ ಜೊತೆ ನಾನಿದ್ದೇನೆ' ಎಂದು ತಲೆನೇವರಿಸುತ್ತಾಳೆ. 'ಅವಳು' ನಡೆದ ದಾರಿಯಲ್ಲಿ ನಾನೊಂದು ಹೆಜ್ಜೆಯಿಟ್ಟರೆ ಸಾಕು, ನನ್ನ ಮೇಲೆ ಕವನಗಳ ಮಳೆಯನ್ನೇ ಸುರಿಸುತ್ತಾಳೆ! ಮುಗಿಯದ ಜೀವನ ಪ್ರೀತಿಯೊಂದನ್ನು ನನ್ನೊಳಗೆ ತುಂಬಿದ್ದಾಳೆ, ಈ ಬರಹವೆಂಬ ಮಾಯಗಾತಿ....

ನನ್ನ ತೊದಲು ಬರಹಗಳನ್ನು ಓದಿ, ಲೈಕ್-ಕಮೆಂಟ್ ಮಾಡಿ, ಬ್ಲಾಗ್ ಗೆ ಭೇಟಿಕೊಡುವ ಮೂಲಕ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನನ್ನನ್ನು ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ನಾನು ಋಣಿ. ಸಾಗಬೇಕಿರುವ ದೂರ ಬಹಳವಿದೆ. ಈ ಅಂಬೆಗಾಲು ನಡೆಯಾಗಿ, ಓಟವಾಗಬೇಕಿದೆ. ಪೆನ್ನೆಂಬ ಮಂತ್ರದಂಡ ನನ್ನೊಳಗೆ ಬರೆದಿರುವ ಕನಸುಗಳು ನೂರಿವೆ. ಅವೆಲ್ಲಾ ನನಸಾದರೂ, ಆಗದಿದ್ದರೂ ನೀಮ್ಮೆಲ್ಲರ ಪ್ರೋತ್ಸಾಹ ಮಾತ್ರ ಹೀಗೇ ಇರಲಿ.

ಸ್ನೇಹಾಭಿಲಾಷೆಯೊಂದಿಗೆ
ವಿನಾಯಕ ಅರಳಸುರಳಿ

ಶನಿವಾರ, ಜುಲೈ 23, 2016

ನೆನಪುಗಳು...

ಗಾಯವೊಂದಿರಲಿ ಬಿಡು, ಮುಲಾಮು ಹುಡುಕದಿರು
ಮಾಯದೇ ಉಳಿದಿರಲಿ ಅದರಷ್ಟಕೇ;
ಏನೋ ತಾಕಿದಾಗ, ಯಾರನೋ ನೆನೆದಾಗ,
ನೋವಾಗಿ ಅಳಲಿ ಅದು ತನ್ನಷ್ಟಕೇ.

ಎಲ್ಲ ಅಳಿಸಿದ ಮೇಲೂ ಗುರುತೊಂದು ಇರಬೇಕು
ಬೆಳಗಿದ ಜ್ಯೋತಿಯುಳಿಸಿದ ಕರಿ ಬತ್ತಿಯಂತೆ;
ಪಾಲು ಯಾರದೇ ಆಗಿರಲಿ, ಪ್ರೀತಿ ನಿನ್ನದು ತಾನೇ?
ನೆನಪುಗಳು ನಗುತಿರಲಿ ತಮ್ಮಷ್ಟಕೇ.

ಕರೆದವರ, ಬರದವರ, ಬಂದು ಮರೆಯಾದವರ,
ಕದ ತೆರೆದು ಕಾದಿದ್ದು ನಿಜವಲ್ಲವೇ?
ಹಿಂದೆಂದೋ ಕನಸಲ್ಲಿ ಕಾರ್ಮುಗಿಲ ದನಿ ಕೇಳಿ
ನವಿಲಾಗಿ ನಲಿದದ್ದು ಒಲವಲ್ಲವೇ?

ನಿನ್ನೆಗಳ ಪುಟಗಳಲಿ ಸರಸದಲೋ, ವಿರಸದಲೋ
ಸಹಿ ಮಾಡಿ ಹೋದವರ ಕಿರು ಹೊತ್ತಿಗೆ,
ಸಂಜೆಗಾಳಿಗೆ ಸಿಲುಕಿ ತಾನಾಗೇ ತೆರೆದಾಗ
ಕಣ್ತುಂಬಿ ನಕ್ಕುಬಿಡು ನಿನ್ನಷ್ಟಕೇ.

(ಮಂಗಳ 27.7.2016 ರಲ್ಲಿ ಪ್ರಕಟಿತ)

ಶುಕ್ರವಾರ, ಜುಲೈ 15, 2016

ಪ್ರಳಯವಾಗಲಿ ಇಂದೇ...!

ಇಳಿದು ಬಾ ಸೂರ್ಯನೇ ಇಳೆಗೆ
ಪ್ರಳಯಾಗ್ನಿ ಮಳೆಯಾಗಿ;
ಮೇಘಗಳ ಕೊಳ್ಳಿಯಾಗಿಸಿ ಹಿರಿದು 
ಕೆಂಡದುಂಡೆಗಳ ಸುರಿಸು ಬಾ!
ಮಾನವತೆ ಸತ್ತು ಮೆರೆದಾಡುತಿಹ
ಜೀವಂತ ಶವಗಳ
ಸುಟ್ಟು ಬೂದಿಯಾಗಿಸು ಬಾ!

ಮೇಲೆದ್ದು ಬಾ ಕಡಲೇ
ಅಗಾಧ ಸುನಾಮಿ ಅಲೆಗಳೊಡನೆ!
ಸುತ್ತಿ ತಳಕೆಳೆಯುವ ಸುಳಿಗಳೊಡನೆ!
ನಿನ್ನ ಬಾಹುಗಳ ಚಾಚಿ
ಈ ಕ್ರಿಮಿಗಳ ಬಾಚಿಕೋ!
ಮರಳಿ ಮೇಲೇಳದಂತೆ ನಿನ್ನ
ಕಗ್ಗತ್ತಲ ಒಡಲೊಳಗೆ ಸೆಳೆದುಕೋ!

ಬಿರಿದು ಬಾಯ್ಬಿಡು ಭುವಿಯೇ
ನಡುಗಿ ಕೆಡವು ಎಲ್ಲರನು!
ಯುಗಯಗಾಂತರವೇ ಗತಿಸಿದರೂ
ಮತ್ತೆಂದೂ ಹುಟ್ಟಿಬರದಂತೆ
ನುಂಗಿಬಿಡು ನರರಾಕ್ಷಸರನು!

ಇಳಿದು ಬಾ ಶಿವನೆ ಇಳೆಗೆ
ಪ್ರಳಯ ರುದ್ರನಾಗಿ!
ಇಂದೇ ಈ ಪರಿಯ ವಿಷಕಾರುತಲಿ
ಬೆಳೆಯುತಿದೆ ಜಗದಲಿ ಪಾಪದಬಳ್ಳಿ;
ನಾಳೆಯಾಗುವುದೇ ಬೇಡ,
ಪ್ರಳಯವಾಗಲಿ ಇಂದೇ!
ನವಮನ್ವಂತರವುದಿಸಿ
ಜಗವು ಜನಿಸಲಿ ಮತ್ತೆ ಮೊದಲಿನಿಂದ...

('ಮಂಗಳ'ದಲ್ಲಿ ಪ್ರಕಟಿತ)

ಭಾನುವಾರ, ಜುಲೈ 3, 2016

ನಿರಾಕರಣೆ...

'ಇಲ್ಲ' ಎನ್ನುವ ಒಂದು ಮಾತಲಿ
ಎನಿತು ಕನಸಿನ ಕಗ್ಗೊಲೆ;
ಗೆಲ್ಲಲಾರದೆ ಹೋದ ಒಲವದು
ಎಂದೂ ಮಾಯದ ಕಾಯಿಲೆ.

ಮಾತು-ಮಾತನು ಪೋಣಿಸಿ ತಂದೆನಾ
ಒಲವ ಬಿನ್ನಹ ಹಾರವ;
ಭ್ರಮಿತ ಮತಿಯಲಿ ಅರಿಯದಾದೆನೆ
ಮನಸು-ಮನಸಿನ ದೂರವ?

ಸಮಯದಾಟದಿ ಕಂಡ ಸೋಜಿಗ
ಸತ್ಯವೆಂದೇ ನಂಬಿದೆ;
ನಿಜದ ಬಣ್ಣವು ಕಾಣದಾಯಿತೇ
ಸ್ವಪ್ನ ಮುಸುಕಿದ ಕಣ್ಣಿಗೆ?

ಮರೆಯಬೇಕೇ, ಕಾಯಬೇಕೇ
ಬೆಳಗದೇ ಹೋದ ಜ್ಯೋತಿಯ?
ಬರುವ ನಾಳೆಯ ತಿರುವಲೆಲ್ಲೋ
ಮತ್ತೆ ಸಿಗುವುದೇ ಈ ಪ್ರೀತಿಯು?

(ಮಂಗಳ 6-7-2016ರ ಸಂಚಿಕೆಯಲ್ಲಿ ಪ್ರಕಟವಾದ ಕವನ)

ಬುಧವಾರ, ಜೂನ್ 22, 2016

ಮೊದಲ ದಿನ ಮೌನ, ಅಳುವೇ...

ಹುಟ್ಟಿನ ಹೊರತಾಗಿ ಪ್ರತಿಯೊಂದು 'ಮೊದಲ ದಿನ'ದ ಹಿಂದೆಯೂ ಮುಗಿದುಹೋದ 'ಕೊನೆಯ ದಿನ'ವೊಂದಿರುತ್ತದೆ ಹಾಗೂ ಈ ಮೊದಲ ದಿನಗಳಲ್ಲದು ನೆನಪಾಗಿ ಕಾಡುತ್ತದೆ. ಶಾಲೆಯ ಮೊದಲ ದಿನ, ಪ್ರೌಢಶಾಲೆಯ  ಮೊದಲ ದಿನ, ಕಾಲೇಜ್ ನ  ಮೊದಲ ದಿನ, ನೌಕರಿಯ ಮೊದಲ ದಿನ, ಹೊಸಕಂಪನಿಯಲ್ಲಿನ  ಮೊದಲ ದಿನ, ಹೆಣ್ಣಿಗೆ ಮದುವೆಯ ನಂತರದ  ಮೊದಲ ದಿನ..... ಹೀಗೇ ಜೀವನದಲ್ಲಿ ಅದೆಷ್ಟೋ ಮೊದಲ ದಿನಗಳು ಬರುತ್ತಲೇ ಇರುತ್ತವೆ. ಇಲ್ಲಿ ಮೊದಲ ದಿನ ಎಂದರೆ ಮೊಟ್ಟ ಮೊದಲ ದಿನ ಮಾತ್ರವಲ್ಲ, ಮನಸ್ಸು ಹೊಸ ಸ್ಥಳ, ವಾತಾವರಣಗಳಿಗೆ ಹೊಂದಿಕೊಳ್ಳುವ ತನಕದ ಪ್ರತಿಯೊಂದು ದಿನವೂ ಮೊದಲ ದಿನವೇ! 

ಬಹುಷಃ ಎಲ್ಲರಿಗೂ ಹೀಗೇ ಅನ್ನಿಸುವುದಿಲ್ಲವೇನೋ. ತೀರಾ ಭಾವುಕವಾಗಿ ಯೋಚಿಸುವ, ಬಂದೊದಗಿದ ಹೊಸ ಪರಿಸರದಲ್ಲಿ ಬೇಗನೇ ಬೆರೆಯಲಾಗದೇ ಒದ್ದಾಡುವವರನ್ನ ಈ initial day's sindrome ಗಾಢವಾಗಿ ಕಾಡುತ್ತದೆ. ಆದರೆ ಎಲ್ಲರನ್ನೂ ಕಾಡುವ ಹಾಗೂ ಎಲ್ಲರ ನೆನಪಿನಲ್ಲಿ ಉಳಿಯುವ ದಿನವೆಂದರೆ ಮೊದಲ ಬಾರಿಗೆ ಶಾಲೆಗೆ ಸೇರಿದ ದಿನಗಳು....

ನಿಮಗೆಲ್ಲಾ ಶಾಲೆಯ ಮೊದಲ ದಿನ ನೆನಪಿರಬೇಕಲ್ಲಾ? ನನಗಂತೂ ಈಗಲೂ ಕಣ್ಣ ಮುಂದೆ ಬಣ್ಣದ ಚಿತ್ರದಂತೆ ಸರಿದಾಡುತ್ತಿದೆ ಆ ದಿನ... ಹುಟ್ಟಿದ ಮೊದಲ ಆರು ವರ್ಷಗಳು ಅಪ್ಪ-ಅಮ್ಮನ ಜೊತೆ ಆರಾಮವಾಗಿ ಕಳೆದುಹೋಗಿತ್ತು. ಶಕ್ತಿಮಾನ್ ಹಾಗೂ ಕನ್ನಡ ಸಿನೆಮಾದ ಹೊಡೆದಾಟದ ದೃಶ್ಯಗಳಿಂದ ಪ್ರಭಾವಿತನಾಗಿ ಬಾಯಲ್ಲಿ ಡಿಶೂಂ ಡಿಶೂಂ ಅನ್ನುತ್ತಾ, ಕೈ ಕಾಲು ಬೀಸುತ್ತಾ ಮನೆ, ಅಂಗಳ, ತೋಟಗಳಲ್ಲೆಲ್ಲಾ ಸ್ವಚ್ಛಂದವಾಗಿ ನನ್ನ ಪಾಡಿಗೆ ಆಟಾಡಿಕೊಂಡಿದ್ದೆ. ಬೆಳಗ್ಗೆ ಬೆಲ್ಲ-ಬೆಣ್ಣೆಯ ಜೊತೆ ಅಮ್ಮ ಮಾಡುತ್ತಿದ್ದ ದೋಸೆ, ರೊಟ್ಟಿ, ಚಪಾತಿಗಳು, ಅಪ್ಪನ ಜೊತೆ ಅಡ್ಡಾಡುತ್ತಿದ್ದ ಹಸಿರು ಹಸಿರು ಅಡಿಕೆ ತೋಟ, ಅಲ್ಲಿ ಕುತೂಹಲ ಹುಟ್ಟಿಸುತ್ತಿದ್ದ ಏಡಿಕುಣಿ, ಡುರ್ರ್ ಎಂದು ಘರ್ಜಿಸಿ ಹೆದರಿಸುತ್ತಿದ್ದ ನೀರು ಬಿಡುವ ಮೋಟರ್, ಸಂಜೆ ಅಪ್ಪ ತರುತ್ತಿದ್ದ ಕಂಬಾರ್ ಕಟ್(ಕಡ್ಲೆ ಮಿಠಾಯಿ), ನಿಂಬೆಹುಳಿ ಚಾಕ್ಲೇಟ್, ಆಗಾಗ  ಅಮ್ಮನ ಜೊತೆ ಹೋಗಿ ನೋಡುತ್ತಿದ್ದ ತೀರ್ಥಹಳ್ಳಿ ಪೇಟೆ.... ಅದೊಂದು ಪುಟ್ಟ, ಸುಂದರ ಪ್ರಪಂಚ. 

ಹೀಗಿರುವಾಗ ಅದೊಂದು ಘೋರ ದಿನ ಬಂದೇ ಬಿಟ್ಟಿತು. ಶಾಲೆಗೆ ಸೇರಬೇಕಾದ ದಿನ! ಬೆಳಗ್ಗೆ ಬೇಗ ಎಬ್ಬಿಸಿದ ಅಮ್ಮ ಒಳ್ಳೆಯ ಅಂಗಿ-ಚಡ್ಡಿ ತೊಡಿಸಿ, ಪೌಡರ್ ಹಚ್ಚಿ, ಕುಂಕುಮ ಇಡಿಸಿ ನನ್ನನ್ನ ತಯಾರು ಮಾಡಿದಳು. ಮೊನ್ನೆಯಷ್ಟೇ ತಂದ ಹೊಚ್ಚ ಹೊಸ, ಬಣ್ಣದ ಬ್ಯಾಗ್ ಗೆ ಹೊಸ ಸ್ಲೇಟು-ಕಡ್ಡಿ (ಬಳಪ), ನೀರಿನ ಬಾಟಲಿ, ವರೆಸೋ ಬಟ್ಟೆ ಎಲ್ಲಾ ತುಂಬಿ ನನ್ನ ಬೆನ್ನಿಗೇರಿಸಿದಳು. ಅಪ್ಪನ ಕೈ ಹಿಡಿದು ಹೊರಟಾಗ ಗೇಟಿನ ತನಕ ಬಂದು ಟಾಟಾ ಮಾಡಿ ಕಳಿಸಿದಳು. ಸಾಲು ಕಂಬಗಳ ಬೇಲಿಯ ನಡುವಿದ್ದ ಗೇಟನ್ನ ದಾಟಿ ಶಾಲೆಯ ಆವರಣದೊಳಗಡಿಯಿಡುತ್ತಿದ್ದಂತೆಯೇ ಅಪ್ಪನ ಕೈ ಹಿಡಿದಿದ್ದ ನನ್ನ ಕೈಗಳ ಹಿಡಿತ ಬಿಗಿಯಾಯಿತು. ಅಲ್ಲಿ ನಮ್ಮನೆಗಿಂತ ಮೂರು ಪಟ್ಟು ದೊಡ್ಡದಿರುವ, ಸಾಲು ಸಾಲು ಕೊಠಡಿಗಳ ಶಾಲೆ, ಯೂನಿಫಾಂ ತೊಟ್ಟು ಕಾರಿಡಾರ್ ಮೇಲೆ ಓಡಾಡುತ್ತಿರುವ ಮಕ್ಕಳು, ಆಫೀಸ್ ರೂಮೆದುರು ನಿಂತಿರುವ ಬಿಗಿಮುಖದ ಮೇಷ್ಟ್ರು... ಹಿಂದೆಂದೂ ನೋಡದ ಈ ಅಪರಿಚಿತ ದೃಶ್ಯಗಳು ದಿಗಿಲು ಹುಟ್ಟಿಸಿದವು. ಅಪ್ಪ ನೇರವಾಗಿ ಆಫೀಸ್ ರೂಮೊಳಗೆ ನಡೆದ. ಅಲ್ಲಿ ಕೂತಿದ್ದರು ಹೆಡ್ ಮೇಷ್ಟ್ರು. ಮೊದಲು ಅಪ್ಪನ ಜೊತೆ ಮಾತಾಡಿದವರು ಆಮೇಲೆ ನನ್ನನ್ನ ಕೇಳಿದರು:
'ಏನೋ? ಇಪ್ಪತ್ತರ ತನಕ ಮಗ್ಗಿ ಬರುತ್ತಂತೆ ಹೌದಾ?'
ನನಗೆ 'ಹೂಂ' ಅನ್ನಲೂ ಆಗದಷ್ಟು ಭಯ! ನನ್ನ ದಿಗಿಲುಬಿದ್ದ ಮುಖವನ್ನ ನೋಡಿ ನಗುತ್ತಾ, ನನ್ನ ಕೈಗೊಂದು ಪುಸ್ತಕ ಕೊಟ್ಟರು. ಹುಲಿಮುಖದ ಚಿತ್ರವಿರುವ ಮುಖಪುಟವಿದ್ದ ಒಂದನೇ ತರಗತಿಯ ಪಠ್ಯ ಪುಸ್ತಕವದು. ಅದನ್ನ ಬ್ಯಾಗಿನೊಳಗಿಟ್ಟುಕೊಟ್ಟ ಅಪ್ಪ ನನ್ನನ್ನು ಒಂದನೇ ತರಗತಿಯ ಕೊಠಡಿಯೊಳಗೆ ಕೂರಿಸಿ 'ಸಂಜೆ ಬಂದು ಕರ್ಕೊಂಡೋಗ್ತೀನಿ ಆಯ್ತಾ?' ಅಂತ ಹೇಳಿ ಹೊರನಡೆದ.  ತುಂಬಿ ನಿಂತಿದ್ದ ಕಣ್ಗಳಲ್ಲೇ ಒಮ್ಮೆ ಸುತ್ತ ನೋಡಿದೆ. ಮರದ ಹಲಗೆಯ ಮೇಲೆ ಕೂತು ದೊಡ್ಡ ದನಿಯಲ್ಲಿ ಮಾತಾಡುತ್ತಾ, ಒಬ್ಬರಿಗೊಬ್ಬರು ಎಳೆದಾಡುತ್ತಾ, ಗಲಾಟೆ ಮಾಡುತ್ತಾ ಕೂತಿರುವ ನನ್ನದೇ ವಯಸ್ಸಿನ ಹತ್ತಾರು ಅಪರಿಚಿತ ಮುಖಗಳು....

ಅಪ್ಪ ಇನ್ನೂ ಶಾಲೆಯ ಗೇಟ್ ದಾಟಿರಲಿಲ್ಲ. ಅಷ್ಟು ಹೊತ್ತು ಕಷ್ಟದಿಂದ ತಡೆದಿಟ್ಟುಕೊಂಡಿದ್ದ ಅಳುವೆಲ್ಲಾ ಕಿತ್ತುಕೊಂಡುಬಂದು "ಅಪ್ಪಾ....ನಾನೂ ಬರ್ತೀನಿ.. " ಅಂತ ಅಳುತ್ತಾ ಅಪ್ಪನ ಹಿಂದೆಯೇ ಓಡಿದೆ! ಅಪ್ಪ ಏನೇನೋ ಬಣಿಸಿ ನೋಡಿದ. ಏನೇ ರಮಿಸಿದರೂ ನಾನು ಒಪ್ಪಲಿಲ್ಲ.ಅಪ್ಪ ಕೊನೆಗೂ ಸೋತು 'ಸರಿ ನಾಳೆಯಿಂದ ಬಂದ್ರಾಯ್ತು ಬಾ' ಅಂತ ಮನೆಗೆ ವಾಪಾಸ್ ಕರೆದುಕೊಂಡು ಬಂದ. ಆದರೆ ಮರುದಿನವೂ ಇದೇ ಘಟನೆ ಮರುಕಳಿಸಿದಾಗ ಅಕ್ಷರಷಃ ವ್ಯಗ್ರಳಾಗಿದ್ದು ಮಾತ್ರ ಅಮ್ಮ! ಹೋದ ಚಂದದಲ್ಲೇ ಮರಳಿಬರುತ್ತಿದ್ದ ನನಗಾಗಿ ದಾಸವಾಳ ಗಿಡದ ಬರಲು (ಕೋಲು) ಹಿಡಿದು ಕಾಯುತ್ತಿದ್ದಳು! 'ಬರಲು ಸೇವೆ' ಬಾಗಿಲಲ್ಲೇ ಆರಂಭವಾಯಿತು. ಅತ್ತು, ಮುಖ ಕೆಂಪಾಗಿ ನಿಂತಿದ್ದ ನನಗೆ ನಾಲ್ಕು ಬಾರಿಸಿ, ಕೈಗೊಂದು ಸ್ಲೇಟು-ಕಡ್ಡಿ ಕೊಟ್ಟು " ಸಂಜೆ ತನಕ ಅಆಇಈ, ಮಗ್ಗಿ, ಕಾಗುಣಿತ ಬರೀತ ಕೂತಿರು. ಶಾಲೆಗೆ ಹೋಗ್ದಿದ್ದಕ್ಕೆ ಇದೇ ಶಿಕ್ಷೆ ನಿಂಗೆ!"  ಎಂದು ಅಬ್ಬರಿಸಿದಳು. ಮಾರನೇ ದಿನ "ಇವತ್ತು ಅವನ್ನ ನಾನು ಶಾಲೆಗೆ ಬಿಡ್ತೀನಿ" ಅಂತ ಮತ್ತೊಂದು ಬರಲು ಹಿಡಿದು ಹೊರಟೇ ಬಿಟ್ಟಳು! ಮನೆಯಿಂದ ಶಾಲೆಯ ತನಕ ರಸ್ತೆಯುದ್ದಕ್ಕೂ ಅಳುತ್ತಾ ಓಡುತ್ತಿದ್ದ ನನ್ನನ್ನೂ, ಕೋಲು ಹಿಡಿದು ಹಿಂದೆಯೇ ಅಟ್ಟಿಸಿಕೊಂಡು ಬರುತ್ತಿದ್ದ ಅಮ್ಮನನ್ನೂ ಇಡೀ ಅರಳಸುರಳಿ ಊರಿಗೆ ಊರೇ ಮುಸಿಮುಸಿ ನಗುತ್ತಾ ನೋಡುತ್ತಿತ್ತು! 

ಅಂತೂ ಇಂತೂ ಅಮ್ಮನ ಏಟಿಗೆ ಹೆದರಿ ನಾನು ಶಾಲೆಗೆ ಹೋಗುವಂತಾಯಿತು. ಎಷ್ಟೇ ತಡೆದರೂ ಮನೆಯ ನೆನಪುಗಳು ನಿಲ್ಲುತ್ತಿರಲಿಲ್ಲ.  ಆಗಾಗ ಅದು ಅಳುವಾಗಿ ಉಕ್ಕಿ ಬರುತ್ತಿತ್ತು. ದಪ್ಪ ಮೀಸೆಯ ಮೇಷ್ಟರುಗಳಂತೂ ನಮಗೆ ಹೊಡೆಯಲೆಂದೇ ಈ ಭೂಮಿಗೆ ಬಂದವರಂತೆ ಕಾಣುತ್ತಿದ್ದರು. ಅದೊಂದು ಸಲ ಪಾಠ ಮಾಡುತ್ತಿದ್ದ ಯೋಗೀಶ್ವರಪ್ಪ ಮೇಷ್ಟ್ರನ್ನ ಮನೆಯ ಗುಂಗಿನಲ್ಲಿ 'ಅಪ್ಪ' ಅಂತ ಕೂಗಿ ನಗೆಪಾಟಲಾಗಿದ್ದೆ! ಅಪರಿಚಿತ ಮುಖಗಳ ನಡುವೆ ಶಾಲೆ ಮುಗಿಯುವ ಸಮಯದ 'ಲಾಂಗ್ ಬೆಲ್'ಗಾಗಿ ಕಾಯುತ್ತಾ ಕೂತಿರುತ್ತಿದ್ದೆ. ಅದರೆ ಮುಂದೆ ಅವೇ ಅಪರಿಚಿತ ಮುಖಗಳು ನನ್ನ ಗೆಳೆಯರಾದವು. ಕೈ ಹಿಡಿದು ಆಟದ ಬೈಲಿಗೆ ಕರೆದೊಯ್ದವು. ಜೊತೆಯಲ್ಲಿ ಆಡಿದವು. ನೆಲ್ಲಿಕಾಯಿ, ಸಂಪಿಗೆ ಹಣ್ಣು ತಂದು ತಿನ್ನಲು ಕೊಟ್ಟವು. ಜಗಳಾಡಿ ಅಳಿಸಿದವು, ತಮಾಷೆಮಾಡಿ ನಗಿಸಿದವು. ಮುಂದೆ ಶಾಲೆ ಆತ್ಮೀಯವಾಯಿತು. ಕೊನೆಗೆ ಏಳನೇ ತರಗತಿ ಮುಗಿಸಿ ಹೊರಟುನಿಂತಾಗ ಥೇಟ್ ನನ್ನ ಮನೆಯಂತೆಯೇ ಕಂಡಿತು. ವರ್ಷಗಳೇ ಕಳೆದರೂ ಇಂದಿಗೂ ಹಚ್ಚ ಹಸಿರಾಗಿರುವ, ಚಂದದ ನೆನಪಾಗಿ ಉಳಿದುಬಿಟ್ಟಿತು....

                    ************

ಬಹುಷಃ ನೆನಪುಗಳಷ್ಟು ಗಾಢವಾಗಿ ಮನುಷ್ಯನನ್ನು ಮತ್ತೇನೂ ಕಾಡಲಾರದೇನೋ. ಹಿಂದೆಂದೋ ಜೊತೆಯಾಗಿ ನಕ್ಕ ನೆನಪುಗಳು ಇಂದು ಕಂಬನಿಯಾಗಿ ಕಾಡುತ್ತವೆ; ಅತ್ತ ನೆನಪುಗಳು ತುಟಿಯಂಚಲ್ಲಿ ಮುಗುಳ್ನಗೆಯಾಗಿ ಮೂಡುತ್ತವೆ. ಒಟ್ಟಿನಲ್ಲಿ ಎಂದೋ ಸವಿದ ಸವಿಯೊಂದನ್ನ ಮತ್ತೆ ನಾಲಿಗೆಯಂಚಲ್ಲಿ ಮೂಡಿಸಿ ಹೃದಯದ ಹಸಿವನ್ನು ಹೆಚ್ಚಿಸುತ್ತವೆ ಈ ಹಾಳು ನೆನಪುಗಳು...

ಹೊಸ ಕಂಪನಿಗೆ ಸೇರಿ ಒಂದು ವಾರವಷ್ಟೇ ಆಗಿದೆ. ಮೊದಲೇ ಹೇಳಿದಂತೆ ಹೊಸ ವಾತಾವರಣದ ಈ ಮೊದಮೊದಲ ದಿನಗಳೆಂದರೆ ನೆನಪುಗಳ ಪರ್ವ ಕಾಲ. ಹಳೆಯ ಕಂಪನಿ ಬಿಟ್ಟು ಇಲ್ಲಿ ಸೇರುವ ಮಧ್ಯಂತರದ ಮೂರು ವಾರ ಊರಿನಲ್ಲಿದ್ದು ಬಂದುದ್ದರಿಂದ ಮನೆಯ ನೆನಪುಗಳೂ ಇವಕ್ಕೆ ಜೊತೆ ಸೇರಿಕೊಂಡು ಮನಸ್ಸು ಅಕ್ಷರಷಃ ಮಗುವಾಗಿಬಿಟ್ಟಿದೆ. ಬೆಳಗ್ಗೆ ಎದ್ದೊಡನೆಯೇ 'ನಾನಿವತ್ತು ಆಫೀಸಿಗೆ ಹೋಗಲ್ಲ' ಅಂತ ಹಠಮಾಡತೊಡಗುತ್ತದೆ. ಅದನ್ನ ರಮಿಸುತ್ತಾ,  ಸಮಾಧಾನ ಮಾಡುತ್ತಾ ದಟ್ಟ ಟ್ರಾಫಿಕ್ನ ನಡುವೆ, ರಶ್ ಬಸ್ನಲ್ಲಿ ಒಂಟಿ ಕಾಲಲ್ಲಿ ನಿಂತು ಆಫೀಸ್ ಗೆ ಬರುವಷ್ಟರಲ್ಲಿ ಸಾಕುಸಾಕಾಗುತ್ತದೆ. ಇಲ್ಲಿ ನೂರಾರು ಅಪರಿಚಿತ ಮುಖಗಳು. ಕೇಳೇ ಇರದ ರೂಲ್ಸ್ ಗಳು. ತರಹೇವಾರಿ ಯಂತ್ರಗಳು. ವಿಭಿನ್ನ ಹಾವಭಾವಗಳು. ಸಂತೆಯಂತೆ ಸದಾ ಗಿಜಿಗುಡುವ ಸಂದಣಿ. ಇದೆಲ್ಲದರ ನಡುವೆ ಗೆಳೆಯರಿಲ್ಲದೆ ಒಂಟಿಯಾಗಿ ಮುದುಡುವ ಮನಸ್ಸು ಮತ್ತೆ ಮತ್ತೆ ಓಡುವುದು ಒಮ್ಮೆ ಬಾಲ್ಯಕ್ಕೆ,  ಮತ್ತೊಮ್ಮೆ ಹಳೇ ಕಂಪನಿಗೆ!

ಐದು ನಿಮಿಷ ತಡವಾಗಿ ಹೋದರೂ ಆಫೀಸ್ನಲ್ಲಿ ತಿಂಡಿ ಸಿಗುವುದಿಲ್ಲ. ಉಪವಾಸ ಆಚೆ ಬರುವಾಗ 'ತಿಂಡಿಗೆ ಬಾರೋ' ಅಂತ ಕರೆಯುವ ಅಮ್ಮನ ನೆನಪಾಗುತ್ತದೆ.
ಎಷ್ಟೇ ತಡವಾಗಿ ಹೋದರೂ 'ಕರೆದ್ಕೂಡ್ಲೇ ಬರೋಕಾಗಲ್ಲ' ಅಂತ ಬಯ್ಯುತ್ತಲೇ ತಟ್ಟೆಗೆ ತಿಂಡಿ ಹಾಕಿ 'ಕಾಫಿ ಬೇಕಾ, ಹಾಲಾ?' ಎಂದು ಕೇಳುವ ಅವಳ ಪ್ರೀತಿಯ ದನಿ ಕಿವಿಯಲ್ಲಿ ಗುಂಯ್ಗುಟ್ಟುತ್ತದೆ...

ಮೊದಲ ಉದ್ಯೋಗ ಕೊಟ್ಟು, ಕೆಲಸ ಕಲಿಸಿ, ಸಂಬಳ ನೀಡಿ, ನಾಲ್ಕು ವರ್ಷಗಳ ಕಾಲ ತನ್ನ 'Family'ಯ ಸದಸ್ಯನಾಗಿ ಸಲಹಿದ ಸಂಸ್ಥೆ ಹೆಜ್ಜೆಗೊಮ್ಮೆ ನೆನಪಾಗುತ್ತದೆ. ಹತ್ತಾರು ಮುಖಗಳ ನಡುವೆಲ್ಲೋ 'ಅಲ್ಲಿಯ' ಗೆಳೆಯನನ್ನು ಕಂಡಂತಾಗುತ್ತದೆ. ಯಾರದೋ ಮಾತಿನ ಧಾಟಿ ಇನ್ಯಾರನ್ನೋ ನೆನಪಿಸುತ್ತದೆ. ಹಿಂಡು ಹಿಂಡು ಜನರ ನಡುವಲ್ಲಿ ನನ್ನವರನ್ನು ಹುಡುಕಿ ಸೋಲುತ್ತೇನೆ. ಖಾಲಿ ಟೇಬಲ್ನಲ್ಲಿ ಕೂತು ಉಣ್ಣುವಾಗ ಸದಾ ಜೊತೆಗಿರುತ್ತಿದ್ದ ಗೆಳೆಯರ ದಂಡು ಕಣ್ಣೆದುರು ಮೂಡುತ್ತದೆ. ಎಲ್ಲೋ  ಹಸಿರುಡುಗೆ ತೊಟ್ಟ ಆಕೃತಿಯೊಂದು ಕಂಡಾಗ 'ಅವಳೇ' ಎದುರು ನಿಂತಂತಾಗುತ್ತದೆ......

                    **************
ಹೆಚ್ಚುತ್ತಿರುವ ಜವಾಬ್ದಾರಿಗಳಿಗನುಗುಣವಾಗಿ ಹೆಚ್ಚಿಸಿಕೊಳ್ಳಲೇಬೇಕಾಗಿರುವ ಸಂಪಾದನೆ, ಬೆಳೆಸಲೇಬೇಕಾಗಿರುವ ಕರಿಯರ್, ತಲುಪಲೇಬೇಕಾಗಿರುವ ಗೋಲ್ ಗಳು, ಕಟ್ಟಲೇಬೆಕಾಗಿರುವ ಮನೆ.... ಈ ಜವಾಬ್ದಾರಿಗಳು ಮನುಷ್ಯನನ್ನು ಎಷ್ಟೊಂದು ಅಲೆಸುತ್ತವೆ ಅಲ್ವಾ? ಒಂದು ಕಡೆ ನೆಲೆಯಾಗಿ ನಿಲ್ಲುವುದಕ್ಕೆ ಬಿಡುವುದೇ ಇಲ್ಲ. 'ಇದು ನನ್ನ ಜಾಗ' ಅನ್ನಿಸುವ ಹೊತ್ತಿಗೆ ಅಲ್ಲಿಂದ ಕಾಲ್ಕೀಳುವ ಸಮಯ ಬಂದುಬಿಡುತ್ತದೆ....

ಇವೆಲ್ಲಾ ನನ್ನ ಖಾಸಗೀ ಭಾವನೆಗಳು, ನನಗೆ ಮಾತ್ರ ಸಂಬಂಧಿಸಿದವು. ಇವನ್ನೆಲ್ಲಾ ಹೀಗೆ ಹೇಳಿಕೊಳ್ಳುವುದು ಸರಿಯೋ, ತಪ್ಪೋ ಗೊತ್ತಿಲ್ಲ. ಆದರೆ ಒಳಗೆ ಮಡುಗಟ್ಟಿ ನಿಂತ ಭಾವನೆಗಳನ್ನ ಕೊಂಚವಾದರೂ ಹೊರಹರಿಸಿ ಅಷ್ಟಾದರೂ ಹಗುರಾಗಲೆಂದು ಇಷ್ಟೆಲ್ಲಾ ಗೀಚಿದ್ದೇನೆ, ಇದರಲ್ಲಿ ಕೆಲವು ನಿಮ್ಮದೂ ಆಗಿರಬಹುದೆಂಬ ನಂಬಿಕೆಯೊಂದಿಗೆ.....

ಸೋಮವಾರ, ಜೂನ್ 13, 2016

ಶಾಲೆಯ ನೆನೆದು...

೧. ಶಾಲೆಯ ದಿನಗಳು...

ಹರಿಯದ ಬಾಲ್ಯದ ಬಣ್ಣದ ಪುಟದಲಿ
ಬರೆದಿಹ ತೊದಲಿನ ಪದಗಳವು;
ತಿರುಗಿ ನೋಡಿದರೆ ಎಂದಿಗೂ ಹಸಿರು,
ಮರೆಯದ ಶಾಲೆಯ ದಿನಗಳವು.

ಬೇಧವಿಲ್ಲದೆ ಸ್ನೇಹ ಲತೆಯಲಿ
ಹೂಗಳು ಅರಳುವ ಕಾಲವದು;
ಜಾತಿ-ಧರ್ಮಗಳ ನೀತಿ ಮರೆಯುತಲಿ
ಮನಗಳ ಬೆಸೆಯುವ ಜಾಲವದು.

ಮಳೆಯ ನೀರಿನಲಿ ಬಿಟ್ಟ ದೋಣಿಯಲಿ
ಮನಸು ತೇಲಿದ ಯಾನವದು;
ಚಿಕ್ಕ ಖುಷಿಗಲೆ ಮೈಯ್ಯ ಮರೆಯುವ
ಎಳೆಯ ಹೃದಯಗಳ ಗಾನವದು.

ಪುಟಗಳ ನಡುವಳಿಕೆ ಪಟಾಕಿ ಎಲೆಯು
ಚಿಗುರಿದ ಹರುಷವು ಇಂದೆಲ್ಲಿ?
ಕಾಲವು ಕಸಿದಾ ಮರಳದ ಸೊಬಗದು
ಮಾಸದೆ ಉಳಿಯಿತು ಸ್ಮೃತಿಯಲ್ಲಿ.

೨. ಶಾಲೆಯ ನೆನೆದು...

ಮರಳಿ ಬರಬಾರದೇ ಒಮ್ಮೆ
ಕಳೆದ ಸಮಯ?
ಸೇರಬೇಕು ಮತ್ತೆ ಮಗುವಾಗಿ
ನಿನ್ನ ಹೃದಯ!

ಈ ನಿನ್ನ ಅಂಗಳದಾಳದಲಿ
ನಮ್ಮದೇ ಕೋಟಿ ಹೆಜ್ಜೆಗಳು;
ಆಳದಿಂದಲೇ ಪಿಸುಗುಡುತ್ತಿವೆ,
ಹೊಸ ಸಮಯ ತಂದ ಹೊಸ
ಮಣ್ಣಿನಡಿಯಲಿ ಹುದುಗಿ ಹೋದರೂ!
ಸದ್ದಿರದೆ ಬಹುದೂರ
ನಡೆದು ಬಂದಾಗಿದೆ,
ಹಿಂಬಾಲಿಸುತಿದೆ ಸ್ಮರಣೆಗಳಾ ನೆರಳು
ಒಂಚೂರೂ ಸವೆಯದೇ!

ಎದೆಯಾಳದಲೆಲ್ಲೋ ಮೌನವಾಗಿ
ಹೊದ್ದು ಮಲಗಿದ್ದ ನೆನಪುಗಳು
'ಸುವರ್ಣ ಸಂಭ್ರಮ'ದ ಗದ್ದಲಕೆ
ಎದ್ದು ಹೊರಟಿವೆ ಮೆರವಣಿಗೆ;
ಊರು ತೊರೆದಿಹ ಅಲೆಮಾರಿ ನಾ..
ಕೊಡದಾದೆನು ಹಿರಿದಾದುದೇನನೂ..
ಅಳಿಲು ಕೊಡುಗೆ ಈ ನನ್ನ ಬರವಣಿಗೆ....


               ***********
(ನಾನು ಓದಿದ ಶಾಲೆ ಸ.ಹಿ.ಪ್ರಾ. ಅರಳಸುರಳಿ ಐವತ್ತು ವಸಂತಗಳನ್ನ ಪೂರೈಸಿದೆ. ಕಳೆದ ವರ್ಷ ಜರುಗಿದ 'ಸುವರ್ಣ ಮಹೋತ್ಸವ'ದ ಸ್ಮರಣ ಸಂಚಿಕೆ 'ಅರಳಸುರಳಿ'ಯಲ್ಲಿ ಪ್ರಕಟವಾದ ನನ್ನ ಕವನಗಳಿವು)


ಬುಧವಾರ, ಜೂನ್ 8, 2016

ಅಭಿವೃದ್ದಿ, ನಗರೀಕರಣ ಮತ್ತು ನಾವು...

"ಅಭಿವೃದ್ಧಿ " ಅನ್ನುವುದು ಜಗತ್ತಿನ ಮೂಲಭೂತ ಲಕ್ಷಣ. ಇಂದಿನ ಪ್ರಪಂಚ ನಿಂತಿರುವುದೇ ಅಭಿವೃದ್ಧಿ ಸೂತ್ರದ ಮೇಲೆ. ಸಕಾರಾತ್ಮಕವಾದ, ಏಳಿಗೆಯೆಡೆಗಿನ ಪ್ರತಿಯೊಂದೂ ಬದಲಾವಣೆಯೂ ಅಭಿವೃದ್ಧಿಯೇ. ಪ್ರತಿಯೊಂದು  ನಿನ್ನೆ  ಮತ್ತು ನಾಳೆಯ ಮಧ್ಯೆ ಜಗದ ಯಾವುದೋ ಒಂದು ಮೂಲೆಯಲ್ಲಾದರೂ ಸೂಕ್ಮಾತಿಸೂಕ್ಮ ಅಭಿವೃದ್ಧಿ ನಡೆದೇ ಇರುತ್ತದೆ, ನಡೆಯಲೇ ಬೇಕು! ಸೃಷ್ಟಿಯಲ್ಲಿ ಸಾವಿರಾರು ವರ್ಷಗಳ ಹಿಂದೆ ಘಟಿಸಿದ 'ಮಾನವ ವಿಕಾಸ'ವೂ ಸಹಾ ಒಂದರ್ಥದಲ್ಲಿ ಅವನು ಸಾಧಿಸಿದ ಅಭಿವೃದ್ಧಿಯೇ. ಕಾಡಿನಲ್ಲಿ ಮರದ, ಕಲ್ಲಿನ ಅಯುಧಗಳನ್ನ ಹಿಡಿದು ಪ್ರಾಣಿಗಳ ಹಿಂದೆ ಓಡುತ್ತದ್ದ ವಾನರರೂಪಿ ಆದಿಮಾನವ ಇಂದು ಭೂಮಂಡಲವನ್ನೇ ದಾಟಿ ಮಂಗಳನೆಡೆಗೆ ಹಾರಿದ್ದಾನೆಂದರೆ ಅವನಲ್ಲಿ ಉರಿಯುತ್ತಿರುವ ಅಭಿವೃದ್ಧಿಯ ತೀವ್ರತೆ ಎಷ್ಟಿರಬಹುದು!

ಪೊದೆಗಳಲ್ಲಿ, ಮರದ ಪೊಟರೆಗಳಲ್ಲಿ, ಗುಹೆಗಳಲ್ಲಿ ವಾಸಿಸುತ್ತಿದ್ದ ಅವನು ಮೆಲ್ಲನೆ ಕಲ್ಲು, ಬಂಡೆ, ರೆಂಬೆ-ಕೊಂಬೆಗಳನ್ನ ಬಳಸಿ ಕೃತಕ ಮನೆ ನಿರ್ಮಿಸಿಕೊಂಡು. ಮುಂದೆ ಅವು ಮಣ್ಣಿನ ಗೋಡೆ ಹಾಗೂ ಹುಲ್ಲು ಮಾಡಿನ ಗುಡಿಸಲುಗಳಾದವು. ಹತ್ತಾರು ಗುಡಿಸಲುಗಳು ಸೇರಿ ಊರು-ಕೇರಿಗಳು ರೂಪುಗೊಂಡವು.

ಮಾನವ ಜೀವನದ ಅಗತ್ಯತೆಗಳನ್ನೇ ಬಂಡವಾಳವಾಗಿಟ್ಟುಕೊಂಡು ಹೊಸ-ಹೊಸ ಸಂಶೋಧನೆಗಳಾಗುತ್ತಾ ಹೋದವು. ದೈನಂದಿನ ಕೆಲಸಕಾರ್ಯಗಳಿಗೆ ನೆರವಾಗುವ ಪರಿಕರಗಳ ಅವಿಷ್ಕಾರಗಳಾಗಿ, ಅವುಗಳ ಬಳಕೆ ಸಾಗರಗಳಾಚೆಗಿನ ದೇಶ-ವಿದೇಶಗಳಿಗೂ ಹಬ್ಬಿದವು. ಮುಂದೆ ಕೈಗಾರಿಕಾ ಕ್ರಾಂತಿ, ಜಾಗತೀಕರಣಗಳ ಪ್ರಭಾವದಿಂದ ಜಗತ್ತಿನ ನಾನಾ ದೇಶಗಳ ಜನರು ಕಾರ್ಖಾನೆ,ಕೈಗಾರಿಕೆಗಳ ಸ್ಥಾಪನೆಯಲ್ಲಿ ಆಸಕ್ತರಾದರು. ಅದಕ್ಕೆ ಸೂಕ್ತವಾದ ವಾತಾವರಣ, ಸೌಕರ್ಯಗಳ ಲಭ್ಯತೆ ಮುಂತಾದ ಅನುಕೂಲಗಳಿರುವ ಪ್ರದೇಶಗಳಲ್ಲಿ ಕಾರ್ಖನೆ, ಕೈಗಾರಿಕೆ, ಸಂಸ್ಥೆಗಳು ಚಿಗುರಿಕೊಂಡವು. ಅಲ್ಲಿ ಸಹಜವಾಗಿಯೇ ಉದ್ಯೋಗ ಸೃಷ್ಟಿಯಾಯಿತು. ಬೇರೆಬೇರೆ ಪ್ರದೇಶಗಳ ಜನರು ಅತ್ತ ಮುಖಮಾಡಿದರು. ಹೀಗೆ ಜನಸಾಂದ್ರತೆ ಹೆಚ್ಚಿದ ಪರಿಣಾಮವಾಗಿ ಅವರ ಅಗತ್ಯತೆಗಳನ್ನ ಪೂರೈಸುವುದನ್ನೇ 'ವ್ಯಾಪಾರ'ವನ್ನಾಗಿಸಿಕೊಂಡ ಅಂಗಡಿ-ಮುಂಗಟ್ಟುಗಳೂ, ಸೇವಾಸಂಸ್ಥೆಗಳೂ ಹುಟ್ಟಿಕೊಂಡವು. ಜೀವನ ಸುಲಭವಾಗುತ್ತಾ ಹೋಯಿತು. ಮತ್ತಷ್ಟು ಜನ ಬಂದರು. ನಗರ ತನ್ನ ಗಡಿಗಳನ್ನ ಒಡೆದುಕೊಂಡು ಬೆಳೆಯತೊಡಗಿತು. ಹೀಗೆ ಕಗ್ಗಾಡುಗಳಾಗಿದ್ದ ಪ್ರದೇಶಗಳು ಕಾಲದ ಕುಲುಮೆಯಲ್ಲಿ ಅರಳುತ್ತಾ ಗುಡಿಸಲುಗಳಾಗಿ, ಮನೆಗಳಾಗಿ, ಊರು-ಕೇರಿಗಳಾಗಿ, ಪಟ್ಟಣಗಳಾಗಿ, ಕೊನೆಗೆ ಮಹಾನಗರಗಳಾಗಿ ಬೆಳೆದು ನಿಂತವು.

ಹಳ್ಳಿ ಮತ್ತು ನಗರಗಳು ದೇಶವೊಂದರ ಎರೆಡು ಕಣ್ಣುಗಳಿದ್ದಂತೆ. ಯಾವುದರಲ್ಲಿ ಧೂಳು ಬಿದ್ದರೂ ಎರೆಡೂ ಅಳಲೇಬೇಕು! ಅಷ್ಟರ ಮಟ್ಟಿಗೆ ಎರೆಡು ಆಂತರಿಕವಾಗಿ ಒಂದಕ್ಕೊಂದು ಬೆಸೆದುಕೊಂಡಿವೆ. ಮೇಲ್ನೋಟಕ್ಕೆ ಈ ಮಾತು ಅಸಂಬದ್ಧವೆನಿಸಿದರೂ ಸೂಕ್ಷವಾಗಿ ಗಮನಿಸಿದರೆ ಇದು ಹೌದೆಂಬುದು ಅರಿವಾಗುತ್ತದೆ. ಹಳ್ಳಿ ಮತ್ತು ನಗರಗಳ ಸಮತೋಲನವೇ ದೇಶದ ಸಮತೋಲನ. ಆದರೆ ಕಳೆದ ಕೆಲವು ದಶಕಗಳಲ್ಲಿ ಜನರು ಪಟ್ಟಣಗಳತ್ತ ಹೆಚ್ಚು ಆಕರ್ಶಿತರಾಗುತ್ತಿದ್ದಾರೆ. ಹೆಚ್ಚಿಗೆ ಓದಿಕೊಂಡರೆ, ಒಳ್ಳೆಯ ಉದ್ಯೋಗ ಬೇಕೆಂದರೆ, ಹಣ ಗಳಿಸಬೇಕೆಂದರೆ, ಅನುಕೂಲಕರ ಬದುಕನ್ನ ಬಯಸುವುದಾದರೆ ನಗರವಾಸಿಗಳಾಗಬೇಕೆಂಬುದು ನದಿ-ಹೊಳೆಗಳು ಸಮುದ್ರ ಸೇರುವಷ್ಟೇ ಅನಿವಾರ್ಯ ಮತ್ತು ಸಾಮಾನ್ಯ ಸಂಗತಿಯಾಗಿದೆ. 

ಈ ಸಮಸ್ಯೆಗೆ ಮೂಲ ಕಾರಣವಾಗಿರುವ, ಇಂತಹದ್ದೊಂದು ಅಭಿವೃದ್ಧಿಯು ಮಾನವ ಜಗತ್ತಿಗೆ, ಈ ಪ್ರಪಂಚಕ್ಕೆ ಬೇಕಿತ್ತ ಅಂತ ಕೇಳಿಕೊಂಡರೆ, 'ಹೌದು' ಎನ್ನುವ ಉತ್ತರವೇ ಸರಿ ಎನ್ನಿಸುತ್ತದೆ. ಬದಲಾವಣೆ ಮತ್ತು ಬೆಳವಣಿಗೆಗಳು ಬರೀ ಮನುಷ್ಯನ ಅನುಕೂಲಕ್ಕಾಗಿ ಅದುದಲ್ಲ. ಅವು ಮನುಷ್ಯನ ಅಸ್ತಿತ್ವದ ಉಳಿವಿಗೆ ನೆರವಾದ ಅಂಶಗಳೂ ಹೌದು. ಬದಲಾವಣೆಗೆ ತೆರೆದುಕೊಳ್ಳದ ತಪ್ಪಿಗೆ ದೈತ್ಯ ಡೈನೋಸಾರ್ ಗಳೇ ತಮ್ಮ ಅಸ್ತಿತ್ವ ಕಳೆದುಕೊಂಡು ನಿರ್ನಾಮವಾದವು ಎಂಬ ವಾದವನ್ನು ನಾವು ಕೇಳಿದ್ದೇವೆ. ಇನ್ನೊಂದು ತಾಜಾ ಉದಾಹರಣೆ ಹೇಳುವುದಾದರೆ 'ನೋಕಿಯ'ದಂತಹ ಜಗತ್ಪ್ರಸಿದ್ಧ ಮೊಬೈಲ್ ತಯಾರಕ ಕಂಪನಿಯು ಯಾವ ತಪ್ಪನ್ನೆಸಗದಿದ್ದರೂ ಇದ್ದಕ್ಕಿದ್ದಂತೇ ಮಾರುಕಟ್ಟೆಯಲ್ಲಿ ಮಣ್ಣಾಗಲು ಮುಖ್ಯ ಕಾರಣವೆಂದರೆ ಕ್ಷಣ-ಕ್ಷಣವೂ ಬದಲಾಗುತ್ತಿದ್ದ ಮಾರುಕಟ್ಟೆಯ ಬೆಳವಣಿಗೆಗೆ ತನ್ನನ್ನು ತಾನು ತೆರೆದುಕೊಳ್ಳದೇ ಹೋದುದು!

ಹೌದು. ಮನುಷ್ಯ ಅದೇ ಗೊಂಡಾರಣ್ಯದ ಗುಹೆಗಳಲ್ಲಿ, ಮುರುಕಲು ಗುಡಿಸಲುಗಳಲ್ಲಿ, ಉಳಿಯುವುದು ಸಾಧ್ಯವಿರಲಿಲ್ಲ. ಅವನು ಕಾಲದ ಜೊತೆಗೇ ಬದಲಾಗಬೇಕಿತ್ತು, ಬದಲಾದ. ವ್ಯವಸ್ಥೆಗಳನ್ನ ಅಭಿವೃದ್ಧಿಗೊಳಿಸುತ್ತಾ ನಗರ, ಮಹಾನಗರಗಳನ್ನ ಕಟ್ಟಿಕೊಂಡದ್ದೂ ಕೂಡ ತಪ್ಪಲ್ಲ.ಆದರೆ ಯಾವಾಗ ಅದು ಒಂದು ಹಂತವನ್ನ ಮೀರಿತೋ ಅಗಲೇ ಅದು ಸಮಸ್ಯೆಯಾಗಿದ್ದು.ಉದಾಹರಣೆಗೆ ನಮ್ಮ ಬೆಂಗಳೂರನ್ನೇ ತೆಗೆದುಕೊಳ್ಳೋಣ: ಬರೀ ಒಂದೂಕಾಲು ದಶಕದ ಕೆಳಗೆ ನಗರದ ಹೃದಯ ಭಾಗವಾಗಿರುವ ಮೆಜಸ್ಟಿಕ್ಕನ್ನ ಕೇಂದ್ರವಾಗಿಟ್ಟುಕೊಂಡು ಒಂದು ವೃತ್ತ ಎಳೆದರೆ ಹತ್ತು-ಹನ್ನೆರೆಡು ಕಿಲೋಮೀಟರ್ ಪರಿಧಿಯೊಳಗೆ ಇಡೀ ಬೆಂಗಳೂರೇ ಮುಗಿದುಹೋಗುತ್ತಿತ್ತು. ಆದರೆ ಇಂದು ಅದರ ಮೂರುಪಟ್ಟು ವಿಸ್ತಾರಗೊಂಡಿದೆ ಬೆಂಗಳೂರು. ಇನ್ನು ಕೆಲವೇ ವರುಷಗಳಲ್ಲಿ ಒಂದುಕಡೆ ನೆಲಮಂಗಲದವರೆಗೆ, ಇನೊಂದುಕಡೆ ಹೊಸೂರಿನವರೆಗೆ, ಮತ್ತೊಂದುಕಡೆ ಚಿಕ್ಕ-ದೊಡ್ಡ ಬಳ್ಳಾಪುರಗಳಾಚೆಗೂ 'ಬೆಂಗಳೂರು ನಗರ'ವೇ ವ್ಯಾಪಿಸಿ ನಿಂತರೂ ಅಚ್ಚರಿಪಡುವಂತಿಲ್ಲ. ಇದರಿಂದ ಜನರಿಗೆ, ರಾಜ್ಯಕ್ಕೆ ಹಾಗೂ ದೇಶಕ್ಕೂ ಲಾಭವಿದೆ. ಲಕ್ಷಾಂತರ ಜನರಿಗೆ ಉದ್ಯೋಗ ದೊರೆತು, ದೇಶದ ಆರ್ಥೀಕ ಸ್ಥತಿ ಸುಧಾರಿಸುತ್ತದೆ. ಸಂಪನ್ಮೂಲಗಳು ಸದ್ಬಳಕೆಯಾಗುತ್ತವೆ. ವಾಣಿಜ್ಯ-ವಹಿವಾಟು ವ್ಯಾಪಾರವೂ ವೃದ್ಧಿಸುತ್ತದೆ. ಇದೆಲ್ಲಾ ಸರಿಯೇ. ಅದರೆ ಈ ಎಲ್ಲಾ ಬದಲಾವಣೆ, ಅಭಿವೃದ್ಧಿ, ಬೆಳವಣಿಗೆಗಳೂ ವ್ಯವಸ್ತಿತವಾಗಿ ಅಗುತ್ತಿವೆಯ? ಖಂಡಿತ ಇಲ್ಲ!

ಹಿಗ್ಗುತ್ತಾ ಹೋಗುವ ಮಹಾನಗರ ತನ್ನ ಸುತ್ತಮುತ್ತಲಿನ ಮರಗಿಡ, ಗದ್ದೆ, ತೋಟ, ಹುಲ್ಲುಬಯಲು ಮುಂತಾದ ನೈಸರ್ಗಿಕ ಪರಿಸರವನ್ನೂ ನುಂಗಿಕೊಂಡೇ ಬೆಳೆಯಬೇಕು; ಗುಡ್ಡ-ಬೆಟ್ಟಗಳನ್ನ ಕತ್ತರಿಸಲೇಬೇಕು. ಸಾವಿರಾರು ಮರಗಳನ್ನ ಕಡಿದುರುಳಿಸುವ ಮನುಷ್ಯ ಅದರ ಹತ್ತು ಭಾಗದಷ್ಟಾದರೂ ಮತ್ತೆ ನೆಟ್ಟುಬೆಳೆಸಬೇಕೆಂದು ಯೋಚಿಸುವುದೇ ಇಲ್ಲ. ಆದುನಿಕ ನಗರಿಯಲ್ಲಿ ದಿನವೂ ಟನ್ ಗಟ್ಟಲೆ  ಸೃಷ್ಟಿಯಾಗುವ ತ್ಯಾಜ್ಯವೂ ಅತ್ಯಾಧುನಿಕವಾಗೇ ಇರುತ್ತದೆ. ವರುಷಗಳೇ ಕಳೆದರೂ ಅವು ಮಣ್ಣಿನಲ್ಲಿ ಮಣ್ಣಾಗುವುದೇ ಇಲ್ಲ. ಇನ್ನು ನಾವು ಬಾಡಿಗೆಗೆ ಪಡೆದ ಮನೆಯನ್ನೇ ಸ್ವಂತದ್ದರಂತೆ ಸ್ವಚ್ಚವಾಗಿಟ್ಟುಕೊಳ್ಳಲು ಯೋಚಿಸುವ 'ನಾಗರೀಕ'ರಾದ ನಾವು, ನಮ್ಮ ನಗರವನ್ನು ಹೇಗೆತಾನೇ ಶುಚಿಯಾಗಿಟ್ಟುಕೊಂಡೇವು? ಕಂಡಲ್ಲಿ ಉಗುಳುತ್ತೇವೆ,  ರಾತ್ರೆ 9 ದಾಟಿದ ಮೇಲೆ ಮೆಲ್ಲನೆ ಕಸದ ಕಂತೆಯನ್ನ ಹಿಡಿದು ಹೊರಬಂದು 'ಇಲ್ಲಿ ಕಸ ಹಾಕಬಾರದು' ಎಂಬ ಫಲಕವೇ ಮುಚ್ಚಿಹೋಗುವಷ್ಟು ಕಸದ ರಾಶಿಯನ್ನೆಸೆದು ತಣ್ಣಗೆ ನಮ್ಮ-ನಮ್ಮ ಮನೆ ರೂಮುಗಳನ್ನ ಸೇರಿಕೊಳ್ಳುತ್ತೇವೆ. 

ನಾಲ್ಕೈದು ಜನ ಕೂರಬಹುದಾದ ದೈತ್ಯ ಕಾರಿನಲ್ಲಿ ನಮ್ಮ 'ಘನತೆ'ಯನ್ನಷ್ಟೇ ಪಕ್ಕದಲ್ಲಿ ಕೂರಿಸಿಕೊಂಡು, ಟ್ರಾಫಿಕ್ ಜ್ಯಾಮ್, ಇಂಧನವ್ಯಯ, ಮಾಲಿನ್ಯಗಳ ಬಗ್ಗೆ ಯೋಚಿಸದೇ ಪ್ರಯಾಣಿಸುತ್ತೇವೆ. ಬತ್ತಿಹೋದ ಕೆರೆಯ ತುಂಬಾ ಮಣ್ಣುಹೊಯ್ದು ಎತ್ತರೆತ್ತರದ ಅಪಾರ್ಟಮೆಂಟಗಳನ್ನ ಕಟ್ಟುತ್ತೇವೆ. ಅಪ್ಪಿತಪ್ಪಿ ನೀರಿರುವ ಕೆರೆಯೇನಾದರೂ ಕಂಡರೆ ನಗರದ ಸಕಲ ಮೋರಿಗಳ ನೀರನ್ನೂ ಅಲ್ಲಿಗೇ ಹರಿಸುತ್ತೇವೆ. ಹೀಗೆ ಮಾಲಿನ್ಯ-ಅಸಮತೋಲನಗಳಿಗೆ ನಮ್ಮ ಕೈಲಾದಷ್ಟೂ ಕೊಡುಗೆಗಳನ್ನು ಬಿಚ್ಚುಗೈಯಿಂದ ನೀಡುತ್ತೇವೆ!

ಹೌದು. ಇಂದು ಜಾಗತಿಕ ಮಟ್ಟದಲ್ಲಿ ಕಾಡುತ್ತಿರುವ ಸಮಸ್ಯೆಗಳಾದ ಗಾಳಿ,ಜಲ,ಶಬ್ದ ಮತ್ತು ಭೂ ಮಾಲಿನ್ಯಗಳಾಗಲೀ, ಹೆಚ್ಚುತ್ತಿರುವ ತಾಪಮಾನಕ್ಕಾಗಲೀ, ಹಿಮಕರಗಿ ಏರುತ್ತಿರುವ ಸಮುದ್ರಮಟ್ಟಕ್ಕಾಗಲೀ, ಅತಿವೃಷ್ಟಿ-ಅನಾವೃಷ್ಟಿಗಳಿಗಾಗಲೀ ಸಿಂಹಪಾಲು ಕಾರಣವಾಗಿರುವುದು ನಗರಗಳೇ. ಚೀನಾದ ಕೆಲವು ನಗರಗಳಲ್ಲಿ ಬೆಳಗಿನಜಾವದ ಮಜಿಗಿಂತಲೂ ಗಾಢವಾಗಿ ಕವಿದಿರುವ ಹೊಗೆಯ ಮೋಡಗಳನ್ನು ಕಾಣಬಹುದೆದಂದು ಪತ್ರಿಕೆಗಳು ವರದಿಮಾಡಿದ್ದವು. ಹಾಗಾದರೇ ಆಧುನೀಕರಣ ಬರಲೇಬಾರದಿತ್ತಾ? ನಗರೀಕರಣವಾದದ್ದೇ ತಪ್ಪಾ? ಖಂಡಿತ ಅಲ್ಲ. ಪ್ರತಿಯೊಂದು ಸಂಗತಿಯಲ್ಲೂ ಅನುಕೂಲ ಹಾಗೂ ಅನಾನುಕೂಲಗಳೆಂಬ ಎರೆಡು ಮುಖಗಳಿದ್ದೇ ಇರುತ್ತವೆ. ಅನುಕೂಲಕ್ಕಾಗಿ ಅದನ್ನು ಬಳಸಿಕೊಳ್ಳುವ ನಾವು ಅದರಿಂದಾಗುವ ಸಮಸ್ಯೆಗಳ ಅರಿವಿದ್ದೂ ಅದನ್ನ ಗಂಭೀರವಾಗಿ ಪರಿಗಣಿಸದೇ ಹೋದದ್ದು ಮಾತ್ರ ತಪ್ಪು. 

ಹೇಗೆ ಸಮಸ್ಯೆ ನಮ್ಮಿಂದಾರಂಭವಾಗಿದೆಯೋ ಹಾಗೆಯೇ ಅದರ ಪರಿಹಾರವೂ ನಮ್ಮೊಳಗೇ ಇದೆ. ಅದಕ್ಕಾಗಿ ನಾವೇನೂ ಬಸ್ಸು, ಕಾರು, ವಿಮಾನಗಳನ್ನೆಲ್ಲ ಕುಟ್ಟಿ ಪುಡಿಮಾಡಿ ಸಮುದ್ರಕ್ಕೆಸೆಯಬೇಕಿಲ್ಲ; ಆಧುನಿಕ ಉಪಕರಣಾದಿಗಳನ್ನ ಬದಿಗೊತ್ತಿ ಸೊಪ್ಪ-ತೊಗಟೆಗಳನ್ನ ಮೈಗೆ ಸುತ್ತಿಕೊಂಡು ಮತ್ತೆ ಆದಿಮಾನವರಾಗಬೇಕಿಲ್ಲ.ಬರೀ ನಮ್ಮ ಅನುಕೂಲದ ಪರಿಧಿಯಲ್ಲಿ ಕುಳಿತು ಯೋಚಿಸುವುದನ್ನು ಬಿಟ್ಟು, ಅದರಾಚೆಗೆ ಬಂದು ನಮ್ಮ ಸುತ್ತಲಿನ ಹದಗೆಟ್ಟ ಪರಿಸ್ಥಿತಯನ್ನ ಒಮ್ಮೆ ನೋಡಬೇಕು. ಅದರಲ್ಲಿ ನಮ್ಮ ಪಾತ್ರ ಏನೆಂಬುದನ್ನ ಮನಗಾಣಬೇಕು ಮತ್ತು ತಿದ್ದಿಕೊಳ್ಳಬೇಕು. ಬಲುಮುಖ್ಯವಾಗಿ ಮಿತಿಮೀರಿದ ಹಾಗೂ ಪರಿಸರದ ಸಮತೋಲನವನ್ನು ಹಾಳುಮಾಡುವಂತಹ ಕಾರ್ಯಚಟುವಟಿಕೆಗಳನ್ನು ನಿಯಂತ್ರಣದಲ್ಲಿಡಬೇಕು.ಹೀಗೆ ವ್ಯಕ್ತಿ-ವ್ಯಕ್ತಿಯಿಂದ ಆರಂಭವಾಗುವ ಬದಲಾವಣೆಗಳು ಮುಂದೆ ಸಮಾಜವನ್ನೇ ಸುಧಾರಿಸುತ್ತವೆ. 

ಇವೆಲ್ಲಾ ಆಧುನೀಕರಣ ಹಾಗೂ ನಗರೀಕರಣದಿಂದ ಪರಿಸರದ ಮೇಲಾದ ಪರಿಣಾಮಗಳು. ಹಾಗೆಯೇ ಇಷ್ಟೇ ಪ್ರಮಾಣದಲ್ಲಿ ಇವುಗಳ ಪ್ರಭಾವಕ್ಕೊಳಗಾದ ಮತ್ತೆರೆಡು ಸಂಗತಿಗಳೆಂದರೆ ನಮ್ಮ ಸಂಸ್ಕೃತಿ ಮತ್ತು ನಮ್ಮ ಹಳ್ಳಿಗಳು. ಆಧುನೀಕರಣದ ಹೆಸರಲ್ಲಿ ಬೆಳೆದುನಿಂತ ನಗರಗಳಲ್ಲಿ ಮೆಲ್ಲನೆ ಹಬ್ಬುತ್ತಾ ಹೋದದ್ದು ಪಾಶ್ಚಾತ್ಯ ಸಂಸ್ಖೃತಿಯ ಪ್ರಭಾವ. ಅಲ್ಲಿನ ವಸ್ತ್ರ ವಿನ್ಯಾಸ, ಶಿಕ್ಷಣ, ಜೀವನ ಶೈಲಿಗಳು ಮಾತ್ರವಲ್ಲದೇ ಕೊನೆಗೆ ಅಲ್ಲಿರುವ ವ್ಯಕ್ತಿ-ವ್ಯಕ್ತಿಗಳ ನಡುವಿನ ಸಂಬಂಧಗಳ ಪರಿಕಲ್ಪನೆಯನ್ನೂ ಸಹಾ ನಗರಗಳು ಮೈಗೂಡಿಸಿಕೊಂಡವು. ಒಂದು ಮಟ್ಟಕ್ಕೆ ಇದರಿಂದ ಸಮಾಜಕ್ಕೆ ಒಳಿತೇ ಆಯಿತು. ಎಷ್ಟೋ ಮೌಢ್ಯಗಳೂ, ಕುರುಡು ಆಚಾರಗಳ ಕುರಿತಾದ ನಂಬಿಕೆಗಳು ಬದಲಾದವು.ಜಾತಿ-ಧರ್ಮಗಳ ನಡುವಿನ ಕಂದಕಗಳ ಆಳ ಕೊಂಚ ಕಡಿಮೆಯಾಯಿತು. ಆದರೆ ಹಳ್ಳಿ ಬದುಕಿನ ಅತಿ ಸುಂದರ ಪದ್ಧತಿಗಳಾದ ಕೊಡು-ಕೊಳ್ಳುವಿಕೆಗಳೂ, ಸಹಕಾರ ಮನೋಭಾವಗಳೂ ನಗರ ಬದುಕಿನಲ್ಲಿ ಕೊಚ್ಚಿಹೂದವು. ನೆರೆ-ಹೊರೆಯೆನ್ನುವ ಕಲ್ಪನೆ ಮರೆಯಾಗಿ ಪಟ್ಟಣವೆನ್ನುವುದು ಅಪರಿಚಿತ ಸಂತೆಯಂತಾಗಿಬಿಟ್ಟಿದೆ. ಇನ್ನು ಕೃಷಿಯ ತವರಾದ ಹಳ್ಳಿಗಳಿಂದ ಜನ ವಿಮುಖರಾಗುತ್ತಿರುವುದು ಭವಿಷ್ಯಕ್ಕೆ ದೊಡ್ಡ ಸವಾಲು. ವ್ಯವಸಾಯ ರಂಗದಲ್ಲಿರುವ ನೂರೆಂಟು ತೊಡಕುಗಳು, ಅಭದ್ರತೆ, ಆತಂಕಗಳನ್ನು ನೋಡಿ ದಣಿದಿರುವ ಯುವ ಪೀಳಿಗೆ ನಗರ ಜೀವನದ ಸೊಬಗಿಗೆ ಮರುಳಾಗುತ್ತಿದೆ. ಕೆಲವೊಮ್ಮೆ ಇದು ಅನಿವಾರ್ಯವೂ ಹೌದು. ನಗರದ ಶ್ರಮರಹಿತ ಜೀವನ ಭೌತಿಕ ಹಾಗೂ ಮಾನಸಿಕವಾಗಿ ಮನುಷ್ಯನನ್ನು ದುರ್ಬಲಗೊಳಿಸುತ್ತಿದೆ. ಆದರೆ ಎದುರು   ಹೊಳೆಯುತ್ತಿರುವ ವೈಭವ ಕಣ್ಣಿಗೆ ಕಾಣುತ್ತದೇ ಹೊರತು ಅದರಾಳದಲ್ಲಿ ಮರೆಯಾಗಿ ಬೆರೆತಿರುವ ಅಪಾಯಗಳು ಗೋಚರವಾಗುವುದೇ ಇಲ್ಲ!

ನಗರಗಳು ನಗರಗಳಾಗೇ ಇರಲಿ, ಹಳ್ಳಿಗಳು ಹಳ್ಳಿಗಳಾಗೇ ಇರಲಿ. ಆದರೆ ಅಭಿವೃದ್ಧಿ ಎನ್ನುವುದು ಮಾತ್ರ ಈ ಎರೆಡರಲ್ಲೂ ವ್ಯಾಪಿಸಬೇಕು. ಕೈಗಾರಿಕಾ ಕ್ರಾಂತಿಯಂತೆಯೇ ಕೃಷಿವಲಯದಲ್ಲೂ ಹಸಿರುಕ್ರಾಂತಿಯಾಗಬೇಕು. ಎರೆಡೂ ಕಡೆ ಸ್ವಚ್ಛತೆಯೂ ಸೆರಿದಂತೆ ಇನ್ನಿತರ ಮೂಲಭೂತ ವಿಷಯಗಳು ವೃದ್ಧಿಯಾಗಬೇಕು. ಅಗತ್ಯತೆಗನುಗುಣವಾಗಿ ಸೌಲಭ್ಯಗಳು ಹಂಚಿಕೆಯಾಗಬೇಕು. ಆರ್ಥಿಕ ಸುಸ್ತಿಥಿಗಳಿಸಲು ನಗರಕ್ಕೇ ಹೋಗಬೇಕೆನ್ನುವ ಬದಲು ಹಳ್ಳಿಗಳಲ್ಲೇ ಪರ್ಯಾಯ ಜೀವನೋಪಾಯಗಳನ್ನ ಕಂಡುಕೊಳ್ಳಬೇಕು. ತುಂಬಾ ಮುಖ್ಯವಾಗಿ ಈ ಅಂಶಗಳೆಲ್ಲವೂ  ನಮಗೆ ಮನದಟ್ಟಗಬೇಕು. ಆಗಲೇ ಅಭಿವೃದ್ಧಿ ಹಾಗೂ ನಗರೀಕರಣಗಳ ನಿಜವಾದ ಲಾಭ ಸಮಾಜಕ್ಕೆ ಸಿಗಲು ಸಾಧ್ಯ.

('ಅಖಿಲ ಕರ್ನಾಟಕ ಪ್ರಥಮ ಯುವಕವಿ ಸಮ್ಮೇಳನ'ದ ಸ್ಮರಣ ಸಂಚಿಕೆಗಾಗಿ ಬರೆದ ಲೇಖನ)

ಗುರುವಾರ, ಮೇ 19, 2016

ಆಕರ್ಷಣೆ...

ಬೆಡಗನು ಬೀರುತ ಉರಿಯುವ ದೀಪವೇ
ಏತಕೆ ಕರೆಯುವೆ ಅರಿಯದ ಚಿಟ್ಟೆಯ?
ಸುಡುವುದು ತರವೇ ಸೋತುಬಂದ ಜೀವವ?


ಇತ್ತೆಲ್ಲೋ ಹಾರಾಡುತ ತನ್ನ ಪಾಡಿಗೆ;
ಕುಣಿಸುತಿರುವೆ ಏಕೆ ಹೀಗೆ ನಿನ್ನ ಹಾಡಿಗೆ?
ಎನಿತು ಚಂದ ಇದ್ದರೇನು,
ಎದೆಯ ಸುಡುವ ಜ್ವಾಲೆ ನೀನು!
ತಿಳಿಯದೀ ಕಹಿಯ ಸತ್ಯ
ಆ ಮೋಹಿತ ಬಡಪಾಯಿಗೆ...


ಕತ್ತಲಲ್ಲಿ ಕಿರಣ ತೋರಿ
ಸೆಳೆವೆ ನಿನ್ನ ಸಂಗಕೆ;
ಸೋಲಲೊಂದೆ ಕ್ಷಣವು ಸಾಕು
ಅಲೆಯುತಿರುವ ಭೃಂಗಕೆ!
ಇಳಿವ ತಾಳ್ಮೆಯೇಕೆ ಇಲ್ಲ
ಆಳದ ಅಂತರಾಳಕೆ?
ಉರಿಯೆ ಕೊನೆಗೆ ದೊರೆವ ಫಲವು
ಬರಿಯ ಮೇಲಣ ಮೋಹಕೆ..

('ಮಾನಸ'ದಲ್ಲಿ ಪ್ರಕಟಿತ)

ಸೋಮವಾರ, ಮೇ 16, 2016

ಹೃದಯ ಶಿವ ಅವರದೊಂದು ಗಝಲ್...

ಹೃದಯ ಶಿವ ಎಂದೊಡನೆ ನೆನಪಾಗುವುದು 'ಮುಂಗಾರುಮಳೆ'ಯ 'ಇವನು ಗೆಳೆಯನಲ್ಲ' ಹಾಡು....

ಇವನು ಗೆಳೆಯನಲ್ಲ..
ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ
ತುಂಬ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ......
..................................
.....ಒಲುಮೆಯೆಂಬ ಸುಳಿಗೆ
ಈಜು ಬರದೆ ಇಳಿದಿಹನಲ್ಲ,
ಸಾವಿನಲ್ಲೂ ನಗುವುದ ಬಲ್ಲ
.....................
ಮುಳುಗುವವನ ಕೂಗು
ಚಾಚುವಂತೆ ಮಾಡಿದೆ ಕೈಯ್ಯ,
ಜಾರಿ ಬಿಡುವುದೀ ಹೃದಯ
ಏನೋ ತಳಮಳ...

ಹೀಗೆ ತೀರ ಸಿನಿಮೀಯವೆನಿಸದ,  ಸರಳ-ಸುಂದರ ಸಾಲುಗಳಲ್ಲಿ ಪ್ರೀತಿಗೆ ಸೋಲಬಾರದ, ಆದರೂ ಸೋಲುತ್ತಿರುವ ನಾಯಕಿಯ ಸಂದಿಗ್ಧ ತಳಮಳವನ್ನ ಚಿತ್ರಿಸಿ, ಎಲ್ಲರ ಮನಗೆದ್ದವರು ಹೃದಯಶಿವ. ಇತರ ಸಿನಿ ಸಾಹಿತಿಗಳಂತೆ ಹೃದಯಶಿವ ನಮಗೆ ಹಿಂಡುಹಿಂಡಾಗಿ ಸಿಕ್ಕಿದ್ದು ಕಡಿಮೆಯೇ.  ಸಾಲುಸಾಲು ಚಿತ್ರಗಳಿಗೆ ಹಾಡು ಬರೆದದ್ದು ಅಥವಾ ಒಂದೇ ಚಿತ್ರದಲ್ಲಿ ಮೂರ್ನಾಲ್ಕು ಹಾಡು ರಚಿಸಿದ್ದನ್ನ ನಾನಂತೂ ಕೇಳಿಲ್ಲ (ಇತ್ತೀಚಿಗಿನ ವರ್ಷಗಳ ಹೊರತಾಗಿ).


ಜಯಂತ್ ಕಾಯ್ಕಿಣಿಯವರ ಬಾಯಲ್ಲಿ ಬೇಂದ್ರೆಯವರ ಉಕ್ತಿಯೊಂದನ್ನ ಕೇಳಿದ್ದೆ: "ಹಸಿದವನ ಮುಂದೆ ಅನ್ನವನ್ನಿಡಬೇಕೇ ಹೊರತು ಪಾಕಶಾಸ್ತ್ರದ ಪುಸ್ತಕವನ್ನಲ್ಲ!" ಓದಲು ಕೂತವನೆದುರು ಅವನಿಗೆ ಹಿತವೆನಿಸುವುದನ್ನಿಡಬೇಕೇ ಹೊರತು ತನ್ನ ಪಾಂಡಿತ್ಯ ಪ್ರದರ್ಶನವನ್ನಲ್ಲ ಎಂದಿದ್ದರು ಜಯಂತ್. ಅಂತೆಯೇ ತೀರಾ ಕ್ಲಿಷ್ಟಕರ, ಭಯಂಕರ ಪ್ರತಿಮೆಗಳನ್ನ ಹಿಡಿದುತಂದು ಓದುಗರನ್ನ ಭೀತರಾಗಿಸುವ ಜಾಯಮಾನ ಹೃದಯಶಿವ ಅವರದ್ದಲ್ಲ ಅನ್ನಿಸುತ್ತದೆ. ಅವರದು ಅತ್ತ ತೀರಾ ಸರಳವೂ ಅಲ್ಲದ, ಇತ್ತ ಕ್ಲಿಷ್ಟವೂ ಅಲ್ಲದ ಹದವಾದ ಮೆದುಭಾಷೆ. ಇತ್ತೀಚಿಗೆ ದಿನಪತ್ರಿಕೆಯೊಂದರಲ್ಲಿ ಅವರ ಕವಿತೆಯೊಂದನ್ನ ಓದಿ ಇಷ್ಟಪಟ್ಟಿದ್ದೆ. ಮೊನ್ನೆ ಎಂದಿನಂತೆ ಇಂಟರ್ ನೆಟ್ ನಲ್ಲಿ ಅಲೆಯುತ್ತಿದ್ದಾಗ ಕು.ಸ.ಮಧುಸೂಧನ ಅವರು ಸಂಪಾದಿಸಿರುವ 'ಕಾವ್ಯ ಖಜಾನೆ' ಬ್ಲಾಗ್ ನಲ್ಲಿ ಅವರ ಇನ್ನೊಂದು ಕವನ ದೊರಕಿತು. ಇಷ್ಟವಾಯಿತು. ಚಂದದ ಬರಹಗಳು ನಾಲ್ಕು ಜನರ ಕೈಗೆಟುಕುವಂತೆ ಮಾಡುವುದು ಒಳ್ಳೆಯ ಓದುಗನ ಲಕ್ಷಣವೆಂದು ನಂಬಿ ಅವರ ಅನುಮತಿಯಿಲ್ಲದೇ ಈ ಕವನವನ್ನ ಬ್ಲಾಗಿಸುತ್ತಿದ್ದೇನೆ, ಹೃದಯಶಿವ ಹಾಗೂ ಮಧುಸೂದನ ಅವರ ಕ್ಷಮೆ ಕೋರುತ್ತಾ...

ಓದಿ... ಹೇಗಿದೆ ಅಂತ ಹೇಳಿ...

ಕತ್ತಲ ಕೋಣೆಯಲಿ ಒಬ್ಬನೇ ಕೂತು ಸದ್ದಿಲ್ಲದೆ ಅಳುತ್ತೇನೆ
ಮಾಗದ ನೂರಾರು ಎದೆಗಾಯಗಳಿಗೆ ಮದ್ದಿಲ್ಲದೆ ಅಳುತ್ತೇನೆ

ಏಕಾಂಗಿ ಮಿಡಿತ ಭೋರಿಡುವ ಹೊತ್ತು ಉಕ್ಕಿ ಬರಲು ಕಂಠ
ಕಂಬನಿಯನೊರಸಿ ಪೊರೆವ ಹಸ್ತಗಳ ಮುದ್ದಿಲ್ಲದೆ ಅಳುತ್ತೇನೆ

ಹಲವು ಹುನ್ನಾರ ಹೂಡಿ ನಿರಂತರ ಕೇಕೆ ಹಾಕಿ ನಗುತ್ತಿರುವ
ಕಾಲದ ಮೇಲೆ ಯಾವುದೇ ಬಗೆಯ ಜಿದ್ದಿಲ್ಲದೆ ಅಳುತ್ತೇನೆ

ದಿಕ್ಕೆಟ್ಟ ದಾರಿ ಕರೆದೊಯ್ದ ಕಡೆಗೆ ತಪ್ಪು ಹೆಜ್ಜೆಗಳ ಹಾಕಿ
ಬಾಳ ಜೂಜಿನಲ್ಲಿ ಕಡೆಗೂ ನನ್ನ ನಾ ಗೆದ್ದಿಲ್ಲದೆ ಅಳುತ್ತೇನೆ

ಹುಟ್ಟು-ಸಾವುಗಳ ನಡುವಿನಂತರದಿ ಜಡತೆ ಜಾಡ್ಯಕೆ ಮಣಿದು
ಬಿಟ್ಟ ಕಣ್ಣುಗಳ ಬಿಟ್ಟು 'ಹೇ ಹೃದಯ' ಎದ್ದಿಲ್ಲದೆ ಅಳುತ್ತೇನೆ

ಕವಿ: ಹೃದಯ ಶಿವ.

'ಕಾವ್ಯ ಖಜಾನೆ' ಬ್ಲಾಗ್ ಓದಿ:
http://kavyakajane.blogspot.in
ಶುಕ್ರವಾರ, ಮೇ 13, 2016

ಒಮ್ಮುಖ ಒಲವೊಂದು ಸೋತಾಗ...When a one sided love fails...

"ಅವಳನ್ನು ನಾನು ಪ್ರೀತಿಸುತ್ತಿದ್ದೇನೆ!"
ಚಂದದ ಘಳಿಗೆಯೊಂದರಲ್ಲಿ ಅವನು ಹಾಗಂತ ನಿರ್ಧರಿಸಿಬಿಡುತ್ತಾನೆ.ಆದರೆ ತನ್ನ ಬಾಳಿನ ಮುಂಬರುವ ಅದೆಷ್ಟೋ ಸಮಯದ ತನಕ ಪ್ರತಿ ಕ್ಷಣದಲ್ಲೂ ತನ್ನನ್ನು ಕಾಡಲಿರುವ, ಅತ್ತ ಸಾಯಿಸಲೂ  ಆಗದ, ಇತ್ತ ಬದುಕಲೂ  ಬಾರದ ರೋಗಗ್ರಸ್ತ ಮಗುವೊಂದನ್ನ ತಾನು ಸೃಷ್ಟಿಸುತ್ತಿದ್ದೇನೆಂಬ ಸಣ್ಣ ಕಲ್ಪನೆಯೂ  ಅವನಿಗಿರುವುದಿಲ್ಲ. ಯಾಕೆ ಪ್ರೀತಿಸುತ್ತಿದ್ದೇನೆ? ಅವಳಲ್ಲಿ ಅಂತಹದ್ದೇನಿದೆ? ಅವಳೂ ನನ್ನನ್ನ ಇಷ್ಟಪಡುತ್ತಾಳಾ? ಅವಳೇನಾದರೂ ಒಪ್ಪದೇ ಹೋದರೆ ಮುಂದೇನು?

ಈ ಪ್ರೆಶ್ನೆಗಳಲ್ಲಿ ಒಂದನ್ನಾದರೂ ಪ್ರೀತಿಸುವ ಮುನ್ನ ಅವನು ತನ್ನಲ್ಲಿ ತಾನು ಕೇಳಿಕೊಂಡಿರುವುದಿಲ್ಲ. ಅವಳ ಮನಸ್ಸೆನ್ನುವ ಆಳ ಅರಿಯದ ಕೊಳದೆಡೆಗೆ ಹುರುಪಿನಿಂದ ಮೊದಲ ಹೆಜ್ಜೆಯಿಡುವಾಗ, ಅವಳೇನಾದರೂ 'ಇಲ್ಲ' ಅಂದರೆ ನಿನ್ನೆಯ ತನಕ ತಾನು ಬದುಕಿದ್ದ, ಅವಳ ನೆರಳೂ ಇಲ್ಲದ ಅದೇ ಹಳೆಯ ಬದುಕಿಗೆ ಇಷ್ಟೇ ಹುರುಪಿನಿಂದ ಮರಳಿ ಬರುವುದು ತನ್ನಿಂದ ಸಾಧ್ಯವಾ ಅಂತ ಅವನು ಒಮ್ಮೆಯೂ ಯೋಚಿಸುವುದಿಲ್ಲ.ಮುದ್ದೆನಿಸುವ ಅವಳ ಮುಖ, ಸೆಳೆಯುವ ಮುಗುಳ್ನಗು, ಹಿತವಾದ ಮಾತು ಇವನ್ನೆಲ್ಲ ಮತ್ತೆ ಮತ್ತೆ ನೋಡುತ್ತಾ, ಸವಿಯುತ್ತಾ ತನ್ನ ಯೋಚನೆಗೆಳ ಪ್ರತಿ ಸೆಕೆಂಡಿನ ಲಕ್ಷದೊಂದನೇ ಭಾಗದಲ್ಲೂ ಅವಳನ್ನೇ ತುಂಬಿಕೊಂಡು ಬಿಡುತ್ತಾನೆ. ಎಷ್ಟೋ ಸಲ ಮುಂಜಾವಿನ ಕನಸುಗಳಲ್ಲಿ ಬಂದು ತನ್ನನ್ನು ಮುದ್ದಿಸಿಹೋಗಿದ್ದ, ಎಚ್ಚರವಾದ ನಂತರವೂ ಸಿಹಿಯಾದ ಅನುಭೂತಿ ಉಳಿಸಿ ಹೋಗಿದ್ದ ಆ ದಿವ್ಯ ರೂಪ ಇವಳದೇ ಎಂದು ನಂಬುತ್ತಾನೆ!

ಇದೆಲ್ಲದರ ಒಟ್ಟಾರೆ ಪರಣಾಮವಾಗಿ ತಾನವಳನ್ನ ಪ್ರೀತಿಸುತ್ತಿದ್ದೇನೆ ಎನ್ನುವ ನಿರ್ಧಾರಕ್ಕೆ ಬರುತ್ತಾನೆ. ಹಾಗೆ ನಿರ್ಧರಿಸುವುದಕ್ಕೆ ಅವಳ ಒಪ್ಪಿಗೆಯೇನೂ ಬೇಕಿಲ್ಲವಲ್ಲ! ಆದರೆ ಆ ಪ್ರೀತಿಯನ್ನು ಪಡೆಯಬೇಕೆಂದಾಗಲೇ ಶುರುವಾಗುವುದು ನಿಜವಾದ ಒದ್ದಾಟ. ಅವಳ ಮನಸ್ಸಿನಲ್ಲೇನಿದೆಯೋ ಗೊತ್ತಿಲ್ಲ. ಅವಳ ಇಷ್ಟ, ಕಷ್ಟಗಳ ಪರಿಚಯವಿಲ್ಲ. ಇಂದಿನ ತನಕ ಅವಳಂತರಂಗದಲ್ಲಿ ಇಲ್ಲದ ತನ್ನನ್ನು ಅಲ್ಲಿಗೆ ಪರಿಚಯಿಸಿ, ಪ್ರತಿಷ್ಠಾಪಿಸುವುದಲ್ಲದೇ ಅವಳ ಎಲ್ಲಾ ನಾಳೆಗಳನ್ನೂ ತನಗಾಗೇ ಮೀಸಲಿಡುವಂತೆ ಮಾಡಬೇಕು!!
ಹೇಗೆ?
ತಾನು ಇದ್ದಂತೆಯೇ ಇರಬೇಕ ಅಥವಾ ಬದಲಾಗಬೇಕಾ? ಬದಲಾಗಬೇಕೆಂದರೆ ಯಾವ ರೀತಿಯಲ್ಲಿ ಬದಲಾಗಬೇಕು? ಏನು ಮಾಡಿದರೆ ಅವಳಿಗೆ ಇಷ್ಟವಾಗುತ್ತದೆ? ಹೀಗೆ ಹತ್ತಾರು ಪ್ರಶ್ನೆಗಳನ್ನ ಮನಸ್ಸಿನೊಳಗಿಟ್ಟುಕೊಂಡೇ ಅವಳಿಗೆ ಹತ್ತಿರವಾಗುವ ಪ್ರಯತ್ನ ಮಾಡುತ್ತಾನೆ. ಮೊದಮೊದಲು ಸಮಯ, ಅದೃಷ್ಟಗಳು ಅವನ ಪರವಾಗಿಯೇ ಇರುತ್ತವೆ. ಅವನನ್ನು ಮತ್ತಷ್ಟು ಮೋಹಿತನನ್ನಾಗಿಸುವ  ಅವಳ ಮುಗುಳ್ನಗು, ಸ್ನೇಹ, ಸವಿಯಾದ ಮಾತು ಎಲ್ಲವೂ ಅವನಿಗೆ ದೊರೆಯುತ್ತವೆ. ಎಲ್ಲೇ ಹೊರಟುನಿಂತರೂ ಮತ್ತೆ ಮತ್ತೆ ಅವಳೇ ಎದುರಾದಾಗ, ಗುಂಪಿನ ನಡುವಿನಿಂದಲೂ ತನಗೆ ಮಾತ್ರವೇನೋ ಎಂಬಂತಹ ಮುಗುಳ್ನಗು ಬೀರಿದಾಗ, ಅವಳು ತನಗಾಗೇ ಬಂದಿದ್ದಾಳೆ, ತನಗೆ ಸಿಕ್ಕೇ ಸಿಗುತ್ತಾಳೆ ಎಂದೆಲ್ಲ ಭ್ರಮಿಸಿ ಪುಳಕಗೊಳ್ಳುತ್ತಾನೆ.

ಸಮಯ ಓಡುತ್ತಿದೆ. ಹೃದಯದಾಳದಲ್ಲಿ ಅರಳಿ ತೊನೆದಾಡುತ್ತಿರುವ ನೂರಾರು ಭಾವಪುಷ್ಪಗಳ ಪೈಕಿ ಒಂದನ್ನಾದರೂ ಕೊಯ್ದು ಅವಳೆದುರು ಹಿಡಿಯಬೇಕೆಂದುಕೊಂಡರೂ ಮನಸ್ಸು ಮಾತ್ರ ಅವಳು ಎದುರು ಬಂದಾಗ ಆಟಿಕೆಯಂಗಡಿಯೆದುರು ಮೈಮರೆತ ಮಗುವಾಗಿಬಿಡುತ್ತದೆ. ಅದರ ಹಣೇಬರಹವೇ ಅಷ್ಟು! ತನ್ನೊಳಗಿನ ಉತ್ಕಟವಾದ ಹಂಬಲಗಳನ್ನದು ಮಾತಿನ ರಾಜಬೀದಿಗೆ ಹರಿಯಬಿಡುವುದೇ ಇಲ್ಲ.

ಹೊರಗೆ ಮೌನ ಹೆಚ್ಚಿದಷ್ಟೂ ಅಂತರಾಳದ ಒದ್ದಾಟಗಳು ಇಮ್ಮಡಿಯಾಗುತ್ತವೆ. ಅವಳದೊಂದು ನಗುವಿಗಾಗಿ ಹಾತೊರೆಯುತ್ತಾನೆ.ಸಣ್ಣದೊಂದು ಮಾತಿಗಾಗಿ ನೆಪಗಳನ್ನು ಹುಡುಕುತ್ತಾ ಅಲೆದಾಡುತ್ತಾನೆ.ಅವಳು ಓಡಾಡುವ ದಾರಿಯಲ್ಲಿ ಲೆಕ್ಕವಿಲ್ಲದಷ್ಟು ಸಮಯ ಕಾಯುತ್ತಾ ನಿಂತುಬಿಡುತ್ತಾನೆ.ಅವಳೊಮ್ಮೆ ನಕ್ಕರೂ ಸಾಕು, ಆ ನಗು ಅವನ ಇಡೀ ದಿನವನ್ನ ಉಲ್ಲಾಸಮಯವಾಗಿಸುತ್ತದೆ.  ಅದೇ ಅವಳ ಚಿಕ್ಕದೊಂದು ಕಡೆಗಣಿಕೆ ದಿನಪೂರ್ತಿ ಅವನು ಒದ್ದಾಡುವಂತೆ ಮಾಡಿಬಿಡುತ್ತದೆ. ಹೀಗೆ ಒಮ್ಮೆ ಆತ್ಮೀಯವೆನಿಸಿ, ಮತ್ತೊಮ್ಮೆ ತೀರಾ ಸಾಮಾನ್ಯವೆನಿಸುವ ಅವಳ ವರ್ತನೆ ಉತ್ತರ ಹೊಳೆಯದ ಒಗಟಾಗಿ ಕಾಡತೊಡಗುತ್ತದೆ. ಪ್ರೀತಿಯನ್ನ ಹೇಳಿಬಿಡಬೇಕೋ ಅಥವಾ ಇನ್ನೂ ಕಾಯಬೇಕೋ ತಿಳಿಯುವುದಿಲ್ಲ. ಅಷ್ಟರಲ್ಲಿ ಇನ್ಯಾರೋ ಅವಳಿಗೆ ಹತ್ತಿರವಾಗುತ್ತಿದ್ದಾರೆನ್ನುವ ಆತಂಕವೊಂದು ಹುಟ್ಟಿನಿಲ್ಲುತ್ತದೆ. ತಡಮಾಡದರೆ ಎಲ್ಲಿ ಕಣ್ಣೆದರೇ  ತನ್ನ ಪ್ರೀತಿ ಕೈತಪ್ಪಿ ಹೋಗುತ್ತದೋ ಎಂದು ಭಯಪಡುತ್ತಾನೆ. ಏನಾದರಾಗಲಿ, ಹೇಳಿಯೇಬಿಡೋಣವೆಂಬ ನಿರ್ಧಾರಕ್ಕೆ ಬರುತ್ತಾನೆ.

ಖಾಲಿ ಗೋಡೆಯೆದುರು ಅವಳನ್ನ ಕಲ್ಪಿಸಿಕೊಂಡು ಪ್ರೀತಿ ಹೇಳಿಕೊಳ್ಳುತ್ತಾನೆ. ಅವಳೂ ತನ್ನನ್ನು ಒಪ್ಪಿದಂತೆ ಹಗಲುಗನಸು ಕಾಣುತ್ತಾ ಪುಳಕಗೊಳ್ಳುತ್ತಾನೆ. ಅವಳೊಡನೆ ಸುಂದರ ನಾಳೆಗಳನ್ನ ಕಳೆದಂತೆ ಭ್ರಮೆ ಪಡುತ್ತಾನೆ. ಸುಮ್ಮನೇ ಸಂಭ್ರಮಿಸುತ್ತಾನೆ, ಮರುಕ್ಷಣವೇ ಮೌನಿಯಾಗುತ್ತಾನೆ. ಕೊನೆಗೊಂದು ದಿನ ತನ್ನೆಲ್ಲಾ ಧೈರ್ಯವನ್ನ ಒಗ್ಗೂಡಿಸಿ ಇಷ್ಟು ದಿನ ತನ್ನಂತರಾಳದಲ್ಲಿ  ಮುಚ್ಚಿಟ್ಟುಕೊಂಡಿದ್ದ ಮಾತುಗಳನ್ನೆಲ್ಲಾ ತೊದಲುತ್ತಾ, ತಡವರಿಸುತ್ತಾ ಅವಳೆದುರು ಹೇಳಿಯೇಬಿಡುತ್ತಾನೆ..

ಒಮ್ಮುಖ ಒಲವೆನ್ನುವ ಪ್ರತಿಫಲ ದೊರೆಯದ ಪ್ರೀತಿಯಲ್ಲಿ ಅಂದುಕೊಂಡಂತೆ ನಡೆಯುವುದು ಆರಂಭದಲ್ಲಿ ಮಾತ್ರ! ಎರೆಡನೇ ಮಾತಿಗೆ ಅವಕಾಶವೇ ಇಲ್ಲದಂತೆ ಅವನ ಬಿನ್ನಹವನ್ನವಳು ತಿರಸ್ಕರಿಸಿಬಿಡುತ್ತಾಳೆ. ನಿನ್ನೆಡೆಗೆ ಅಂತಹ ಭಾವನೆಗಳೇ ಇಲ್ಲ ಎನ್ನುತ್ತಾಳೆ. ಗೆಳೆಯನಾಗಿದ್ದುಬಿಡುವಂತೆ ಉಪದೇಶಿಸಿ ನಡುರಸ್ತೆಯಲ್ಲಿ ಈಗಷ್ಟೇ ಒಡೆದ ಹೃದಯವನ್ನ ಹಿಡಿದು, ಅನಾಥನಂತೆ ನಿಂತಿರುವ ಅವನೆಡೆ ತಿರುಗಿಯೂ ನೋಡದೇ ನಡೆದುಬಿಡುತ್ತಾಳೆ. ಮುಂಬರಲಿರುವ ಸರಣಿ ನೋವುಗಳ ಸಾಲಿನ ಮೊದಲ ಪೆಟ್ಟು ಹಾಗೆ ಬಿದ್ದಿರುತ್ತದೆ.

ಮರುದಿನದಿಂದ ಅವಳ ವರ್ತನೆಯೇ ಬದಲಾಗುತ್ತದೆ. ಪರಸ್ಪರ ಎದುರುಬದುರಾದಾಗ ಅವಳ ಮುಖದಲ್ಲರಳುತ್ತಿದ್ದ ಮುಗುಳ್ನಗು ಆತ್ಮಹತ್ಯೆ ಮಾಡಿಕೊಂಡಿರುತ್ತದೆ. ಅವನಾಗಿ ಮಾತನಾಡಿಸಿದರೂ ಅವಳಿಂದ ಉತ್ತರವಿರುವುದಿಲ್ಲ. ಉತ್ತರಿಸಿದರೂ ಅದು ತೀರ ಕೃತಕವಾಗಿರುತ್ತದೆ. ಅವನಿರುವ ಯಾವುದೇ ಜಾಗದಲ್ಲಿ ಅವಳು ತಪ್ಪಿಯೂ ಸುಳಿಯುವುದಿಲ್ಲ. ಅವನ್ಯಾರೋ ರಸ್ತೆಯಲ್ಲೆದುರಾದ ಅಪರಿಚಿತನೆಂಬಂತೆ ವರ್ತಿಸತೊಡಗುತ್ತಾಳೆ.

ಅವನು ಅಕ್ಷರಷಃ ತತ್ತರಿಸಿಹೋಗುತ್ತಾನೆ. ಇಲ್ಲದ ಪ್ರೀತಿಯನ್ನ  ಪಡೆಯಲು ಹೋಗಿ ನಿನ್ನೆಯ ತನಕ ಇದ್ದ ಕನಿಷ್ಟ ಸ್ನೇಹವನ್ನೂ ಕಳೆದುಕೊಂಡೆನಲ್ಲ ಎಂದು ಪರಿತಪಿಸುತ್ತಾನೆ. ತುಂಡಾದ ಬೆಸುಗೆಯನ್ನ ಮತ್ತೆ ಹೆಣೆಯಲು ಒದ್ದಾಡುತ್ತಾನೆ, ಕಾಡಿಬೇಡುತ್ತಾನೆ. ಜೀವನೋತ್ಸಾಹವೇ ಬತ್ತಿ ಹೋದ ಬಂಜರಿನಂತೆ ಸುಡು ವೇದನೆಯಲ್ಲಿ ಬೇಯುತ್ತಾ ತನ್ನನ್ನು ತಾನೇ ಶಿಕ್ಷಿಸಿಕೊಳ್ಳುತ್ತಾನೆ. ಅವಳು ಮಾತ್ರ ಇದ್ಯಾವುದರ ಅರಿವೇ ಇಲ್ಲದಂತೆ ಆರಾಮವಾಗಿರುತ್ತಾಳೆ. ಏನೂ ನಡೆದೇ ಇಲ್ಲವೆಂಬಂತೆ ಎಲ್ಲರೊಂದಿಗೆ ಎಂದಿನಂತೆ ನಕ್ಕು ಮಾತನಾಡಿಕೊಂಡಿರುತ್ತಾಳೆ, ಅವನೊಬ್ಬನ ಹೊರತಾಗಿ....!

ಅವಳ ಸ್ನೇಹದ ಪರಿಧಿಯಿಂದ ಉಚ್ಛಾಟಿಸಲ್ಪಟ್ಟ ಅವನ ವೇದನೆ ಮೇರೆ ಮೀರುತ್ತದೆ. ಪ್ರಪಂಚದ ಪ್ರತಿಯೊಂದು ಸಂಗತಿಯೂ ಅವಳನ್ನೇ ನೆನಪಿಸಿ ಹೃದಯ ಹಿಂಡತೊಡಗುತ್ತದೆ. ಅವಳೊಂದಿಗೆ ನಕ್ಕ, ಮಾತನಾಡಿದ, ಜೊತೆನಡೆದ ನೆನಪುಗಳೆಲ್ಲ ಇರಿಯುವ ಮುಳ್ಳುಗಳಾಗಿಬಿಡುತ್ತವೆ. ಇಂತಹಾ ಪ್ರಕ್ಷುಬ್ಧ ಮನಸ್ತಿಥಿಯಲ್ಲೇ ಮತ್ತೆ ಮತ್ತೆ ಅವಳಿಗೆ ಹತ್ತಿರವಾಗುವ ವಿಫಲ ಪ್ರಯತ್ನಗಳಲ್ಲಿ ತೊಡಗುತ್ತಾನೆ. ಆದರೆ ಅವೆಲ್ಲವೂ ಅವನನ್ನ ಅವಳಿಂದ ಮತ್ತಷ್ಟು ದೂರಕ್ಕೇ ಒಯ್ಯುತ್ತವೆ. ಅವಳನ್ನ ಗೆಲ್ಲಲಾರದೇ ಹೋದ ತನ್ನ ಬಗ್ಗೆ ಇನ್ನಿಲ್ಲದಂತೆ ಕೀಳರಿಮೆಗೊಳಗಾಗುತ್ತಾನೆ. ಇದು ಬರೀ ತನ್ನ ಸೋಲಲ್ಲ, ಇಡೀ ತನ್ನ ವ್ಯಕ್ತಿತ್ವದ ಪರಾಜಯವೆಂಬಮಟ್ಟಿಗೆ ನಿರಾಶನಾಗುತ್ತಾನೆ. ಗುಂಪಿನ ನಡುವೆಯೂ ಏಕಾಂಗಿಯಾಗುತ್ತಾನೆ. ಅದರೂ ಹೃದಯ ಮಾತ್ರ ಸೋಲೊಪ್ಪುವುದಿಲ್ಲ. ಇಂದಲ್ಲ ನಾಳೆ ಅವಳು ತನನ್ನು ಒಪ್ಪುವ ದಿವ್ಯ ಘಳಿಗೆಯೊಂದು ಬಂದೀತೆಂಬ  ಕುಟುಕು ಆಸೆಯೊಂದನ್ನ ಅವನಲ್ಲಿ ಉರಿಸುತ್ತಾ, ವೇದನೆಗಳಲ್ಲೇ ದಿನದೂಡುವಂತೆ ಮಾಡುತ್ತದೆ. ಹಿಂಬಾಲಿಸುವ ಅವನು, ಹಿಂದಿರುಗಿ ನೋಡದ ಅವಳು, ಹೀಗೆ ಮುಂದುವರಿಯುತ್ತದೆ ಈ ಒಮ್ಮುಖ ಪಯಣ...

ಬಹುತೇಕ ಒಮ್ಮುಖ ಪ್ರೀತಿಯ ಕಥೆಗಳಲ್ಲಿ ನಡೆಯುವುದು ಇದೇ. ಪ್ರೀತಿಯ ಅತ್ಯಂತ ಯಾತನಾಮಯ ಅಧ್ಯಾಯವೆಂದರೆ ಈ ಒಮ್ಮುಖ ಒಲವು..... ದಿ ಒನ್ ಸೈಡೆಡ್ ಲವ್. ಹಗಲಿರುಳು ಹಾತೊರೆದು, ಹಂಬಲಿಸಿ, ಅಂತರಾಳದಲ್ಲಿ ದೇವತೆಯಂತೆ ಅರ್ಚಿಸಿದ ವ್ಯಕ್ತಿ ತನ್ನೆಡೆ ತಿರುಗಿಯೂ ನೋಡದೇ ಹೋಗುವ ದುರಂತಮಯ ಸ್ಥಿತಿಯಿದು. ಇಲ್ಲಿ ಯಾರ ತಪ್ಪೂ ಇಲ್ಲವಾದರೂ ಪ್ರೀತಿಸಲ್ಪಟ್ಟ ವ್ಯಕ್ತಿಯ ತಿರಸ್ಕಾರ ಪ್ರೀತಿಸಿದವರ ಪಾಲಿಗೆ ಶಿಕ್ಷೆಗಳ ಸರಮಾಲೆಯಾಗುತ್ತದೆ.

ಆಸೆಯಿಂದ ಕಟ್ಟಿಕೊಂಡ ನಂಬಿಕೆಯ ಸೌಧದ ಕಟ್ಟಕಡೆಯ ಸ್ತಂಭವೂ ನೆಲಕ್ಕುರುಳಿ, ಇನ್ನಿಲ್ಲದಂತೆ ತಿರಸ್ಕರಿಸಲ್ಪಟ್ಟಮೇಲೂ,  ಯಾವುದೋ ಪವಾಡವೊಂದು ನಡೆಯಬಹುದೆಂಬ ಸಣ್ಣ ಆಸೆಯೊಂದು ಉಳಿದಿರುತ್ತದಲ್ಲಾ, ಆದೇ ಈ ಎಲ್ಲಾ ವೇದನೆಗಳ ಮೂಲ. ಆ ಆಸೆ ಪ್ರತಿ ಬಾರಿಯೂ ಪೆಟ್ಟು ತಿನ್ನುತ್ತಲೇ ಇರುತ್ತದೆ, ಮತ್ತೆ ಏಳುತ್ತಲೇ ಇರುತ್ತದೆ. ನನಸಾಗುವುದಿಲ್ಲವೆಂದು ಗೊತ್ತಿದ್ದರೂ ಕೆಲವೊಂದು ಕನಸುಗಳನ್ನು ಜೀವಂತವಾಗಿಟ್ಟುಕೊಂಡು ಬದುಕುತ್ತೇವಲ್ಲ, ಬಹುಷಃ ಇದರಂತಹ ನೋವು ಮತ್ತೊಂದಿಲ್ಲ. ಇಂದಿನ ತನಕ ತಾನು ಉಸಿರಾಡಿಕೊಂಡುಬಂದಿದ್ದ ಭರವಸೆಯೊಂದು ಮುಂದಿನ ಕ್ಷಣದಿಂದ ತನ್ನ ಪಾಲಿಗಿಲ್ಲ ಎನ್ನುವ ಕಟು ಸತ್ಯವನ್ನ ಮನಸ್ಸು ಅರಗಿಸಿಕೊಳ್ಳದಾಗುತ್ತದೆ. ತಾನು ಮಾಡದ ತಪ್ಪನ್ನ ತಿದ್ದಿಕೊಳ್ಳಲೆಂದು ಒದ್ದಾಡುತ್ತದೆ. ಪ್ರತಿ ಪ್ರಯತ್ನದ ಫಲವಾಗಿ ಹತಾಶೆ, ನಿರಾಶೆಗಳನ್ನೇ ಪಡೆಯುತ್ತದೆ.

ಇಲ್ಲಿ ಅರ್ಥಮಾಡಿಕೊಳ್ಳಬೇಕಾದ ಮುಖ್ಯ ಸಂಗತಿಯೆಂದರೆ ತನ್ನಿಂದಾಗುವ ಪ್ರಯತ್ನಗಳನ್ನೆಲ್ಲ ಅವನು ಮಾಡಿಯಾಗಿದೆ. ಅವನ ಹಿಡಿತದಲ್ಲಿರದ ಸಂಗತಿಗಳಿಗೆ ಅವನು ಏನು ತಾನೇ ಮಾಡಲು ಸಾಧ್ಯ? ತನ್ನ ಸನಿಹವನ್ನ ಇಷ್ಟಪಡದ ವ್ಯಕ್ತಿಯ ಹಿಂದೆ ಬೀಳುವುದರಿಂದ, ಅವರನ್ನ ಬಲವಂತವಾಗಿ ಮಾತಿಗೆಳೆಯುವುದರಿಂದ ಅವರಿಗೆ ಮತ್ತಷ್ಟು ಕಿರಿಕಿರಿಯಾಗುತ್ತದೇ ಹೊರತು, ಅಲ್ಲಿ ಆತ್ಮೀಯತೆ ಹುಟ್ಟಲಾರದು. ಅಲ್ಲದೇ ಅವರ ಪ್ರತಿಯೊಂದು ನಕಾರಾತ್ಮಕ ಪ್ರತಿಕ್ರಿಯೆಯೂ ಅವನನ್ನ ನೋವಿನಾಳಕ್ಕೇ ನೂಕುತ್ತದೆ. ತಾನು ಹೀಗಿರದೇ ಹಾಗಿದ್ದಿದ್ದರೆ ಅವಳಿಗೆ ಇಷ್ಟವಾಗುತ್ತಿತ್ತೇನೋ, ತನ್ನ ಭಾವನೆಗಳನ್ನ ಬೇರೆ ರೀತಿಯಲ್ಲಿ ಹೇಳಿಕೊಂಡಿದ್ದರೆ ಅವಳು ಒಪ್ಪುತ್ತಿದ್ದಳೇನೋ ಎಂಬುದೆಲ್ಲ ತೀರಾ ಅಸಂಬದ್ಧ  ಯೋಚನೆಗಳು. ಇದ್ದುದ್ದನ್ನ ಇದ್ದಂತೆಯೇ ಇಷ್ಟಪಡುವುದೇ ನಿಜವಾದ ಪ್ರೀತಿ. ನಡೆದು ಹೋದದ್ದನ್ನ ಬದಲಾಯಿಸಲು ಸಾಧ್ಯವಿಲ್ಲ. ಹೀಗೆ ಕಳೆದುದರ ಬಗ್ಗೆಯೇ ಕೊರಗುತ್ತಿರುವುದು ಅವನನ್ನ ದೈಹಿಕವಾಗಿ, ಮಾನಸಿಕವಾಗಿ ಮತ್ತಷ್ಟು ಕೃಷವಾಗಿಸುತ್ತದೆಯೇ ಹೊರತು ಅದರಿಂದ ನಯಾಪೈಸೆಯಷ್ಟೂ ಪ್ರಯೋಜನವಾಗಲಾರದು. ಹತಾಶೆ, ದುಃಖಗಳಲ್ಲಿ ವ್ಯಯಿಸಿದ ಸಮಯದಷ್ಟು ದೊಡ್ಡ ನಷ್ಟ ಮತ್ತೊಂದಿಲ್ಲ! ಇಂದಿನ ದಾರಿಯಲ್ಲಿ ಅದೆಷ್ಟೇ ದೊಡ್ಡ ಮುಳ್ಳು ಕಾಲಿಗೆ ನಾಟಿದರೂ ಸಾವರಿಸಿಕೊಂಡು, ಹೊಸ ಹುರುಪಿನೊಂದಿಗೆ ನಾಳೆಯ ಪಯಣಕ್ಕೆ ಅಣಿಯಾಗಲೇಬೇಕು.

ಅಷ್ಟಕ್ಕೂ ಪ್ರೀತಿಗೆ ಬದಲಾಗಿ ಪ್ರೀತಿಯೇ ದೊರೆಯಬೇಕೆಂದೂನೂ ಇಲ್ಲವಲ್ಲ. ಪ್ರಯತ್ನಕ್ಕೆ ತಕ್ಕ ಪ್ರತಿಫಲವನ್ನು ಕೇಳುವುದಕ್ಕೆ ಇದೇನೂ ವ್ಯವಹಾರ ಅಲ್ಲವಲ್ಲ! 'ಅವಳೆಂದರೆ ನನಗಿಷ್ಟ, ಪ್ರೀತಿಸುತ್ತೇನೆ. ನನ್ನನ್ನ ಇಷ್ಟಪಡುವುದು, ಬಿಡುವುದು ಅವಳಿಗೆ ಬಿಟ್ಟ ವಿಷಯ' ಅಂದುಕೊಂಡು ಪ್ರೀತಿಸಲಿಕ್ಕಾಗುವುದಿಲ್ಲವಾ?  ಪರಿಶುದ್ಧವಾದ ಪ್ರತಿಯೊಂದು ಪ್ರೇಮವೂ ಇಂದಲ್ಲ ನಾಳೆ, ಯಾವುದೋ ಒಂದು ರೂಪದಲ್ಲಿ ಸಾಕ್ಷಾತ್ಕಾರವಾಗಿಯೇ ತೀರುತ್ತದೆಂಬ ಸಣ್ಣ ನಂಬಿಕೆಯೊಂದಿದ್ದರೆ ಸಾಲದೇ?

ಒಮ್ಮುಖ ಒಲವೆನ್ನುವುದೊಂದು ಪವಿತ್ರವಾದ ಭಾವನೆ. ಇಲ್ಲಿ ಅಸಂಖ್ಯ ನೋವುಗಳ ನಡುವೆಯೂ ವಿವರಿಸಲಾಗದ ಸಾರ್ಥಕತೆಯೊಂದಿದೆ. ಎಂದೆಂದಿಗೂ ತನ್ನವರಾಗದ ವ್ಯಕ್ತಿಯೊಬ್ಬರ ನೋವು, ನಲಿವುಗಳಿಗೆ ಮಿಡಿಯುವ, ಅವರು ಸದಾ ಖುಷಿಯಾಗಿರಲೆಂದು ಹಾರೈಸುವ ಉದಾತ್ತ ಪ್ರೇಮವಿದೆ. ಗೆಲುವು, ಸೋಲುಗಳಾಚೆಗೆ ಆ ಪ್ರೀತಿಯನ್ನು ಆರಾಧಿಸುವ ನಿರ್ಮಲ ಮನಸ್ಸಿದೆ. ಪ್ರೀತಿಸಿ ಸೋತಿದ್ದೇವೆ, ಇರಲಿ; ಇದು ದ್ವೇಶಿಸಿ, ಮೋಸಮಾಡಿ ಗೆಲ್ಲುವಷ್ಟು ಕೆಟ್ಟದ್ದೇನೂ ಅಲ್ಲವಲ್ಲ?!!

('ನಿಮ್ಮೆಲ್ಲರ ಮಾನಸ'ದಲ್ಲಿ ಪ್ರಕಟವಾದ ಬರಹ)

ಗುರುವಾರ, ಮಾರ್ಚ್ 24, 2016

ಕಡಲೂರ ಮನೆಮಗಳು

ಕಡಲೂರ ಮನೆಮಗಳು ಮಲೆನಾಡಿನ ಸೊಸೆಯಾಗಿ
ಕಳೆದಿಲ್ಲ ಇನ್ನೂ ಅರೆವರುಷ;
ಮನೆತನದ ಕಿರಿ ಕೂಸು, ಮಾಗಿಲ್ಲ ಎಳೆ ಮನಸು
ನೆನೆಯುವಳು ತವರನ್ನು ಪ್ರತಿದಿವಸ.

ಕರಿಮೇಘದ ಅಂಚಿಗೆ ಮಿಂಚಿನ ಬೆಳ್ಳಿಯ
ಉಂಗುರ ತೊಡಿಸಿದೆ ಮುಂಗಾರು;
ಜಡಿಮಳೆಯು ಹಿಡಿದು ಕಡಲು ಉಕ್ಕುವ ಕಾಲ
ಹೇಗಿಹುದೋ ಏನೋ ತನ್ನೂರು.

ಮೊದಲ ಮಣ್ಣಿನ ಕಂಪು ಘಮ್ಮೆಂದು ಹೊಮ್ಮಿರಲು
ನಡೆವಾಸೆ ನೆನೆಯುತ್ತ ತುಸುದೂರ;
ದಡವ ಕೊರೆಯುತ ಕಡಲು ಮೊರೆವ ಸದ್ದಿನ ನೆನಪು
ಮೂಡಿರಲು ಮನಸೇಕೋ ಬಲು ಭಾರ.

ಅತ್ತೆಯ ಬಿಗಿ ಮುಖ ಕಂಡರೆ ನಡುಕ
ಮರೆಮಾಚಿ ನೂರೆಂಟು ಬಯಕೆಯನು;
ತುಂಬುಗಣ್ಣಲಿ ತುಳುಕಿ ನುಡಿದ ಮೌನದ ಮಾತ
ಅರಿಯದೆ ಹೋದನೆ ನನ್ನವನು?

ಬೇಸರವ ಒಸರುತಿಹ ಮಳೆಹನಿಯ ಎಣಿಸುತ
ನೋಡುತ್ತಾ ಕುಳಿತಿರಲು ಕಿಟಕಿಯಲಿ;
ಮೆಲ್ಲಗೆ ಬಂದನು ನಲ್ಲ, ಕಣ್ಣ ಮುಚ್ಚಿದ ಬಳಸಿ
ಹೂಕಂಪು ಹರಡಿತು ಕೋಣೆಯಲಿ.

ಹೂಮುಡಿಸಿ ಹೂಮೊಗಕೆ ಮುತ್ತಿಟ್ಟು ಕೇಳಿದನು
ನಡೆಯೋಣವೇ ಮಳೆಯಲ್ಲಿ ತುಸುದೂರ?
ಒಂದೇ ಕೊಡೆಯಡಿಯಲ್ಲಿ ಸಾಗುತಿರೆ ಕೈ-ಕೈ ಹಿಡಿದು
ಕರಗಿಹೋಗಿತ್ತು ಬೇಸರ.

(ಮಂಗಳ 16-3-2016ನೇ ಸಂಚಿಕೆಯಲ್ಲಿ ಪ್ರಕಟವಾದ ಕವನ)

ಮಂಗಳವಾರ, ಫೆಬ್ರವರಿ 23, 2016

ಕೋಮು ಸೌಹಾರ್ದ..

ಯುದ್ಧ ಬರುತಿದೆ, ಯುದ್ಧ ಬರುತಿದೆ
ರಕ್ತ-ಧೋಮಳೆ ಕಾದಿದೆ!
ಎದ್ದು ಹೋರಾಡುವ ಸೌಹಾರ್ದತೆಯಲಿ ನಾವೇ,
ಗದ್ದುಗೆಯಲಿ ಹೊದ್ದು ಮಲಗಿಹರಿಗೆ ಕಾಯದೇ!
ಎಲ್ಲೋ ಗಡಿಯಿಂದ ನುಸುಳಿ ಬರದು;
ನಮ್ಮ ನಡುವಲೆ ಎದೆಯ ಸೀಳುತ,
ಒಡಲ ಬಗೆಯುತ ಸಿಡಿವುದು!
ಮತದ ಮತ್ಸರ ಸುಡುತ ಹರಡಲು
ಬಹಳ ಸಮಯವು ಹಿಡಿಯದು!
ಒಡೆದ ಮನೆಯೇ ಕಿಡಿಯ ಆಗರ,
ಕಡೆಗೆ ನಾಶವು ಖಂಡಿತ!
ನಮ್ಮ ದ್ವೇಷವೆ ಅವರ ಆಯುಧ,
ನಮ್ಮ ದೋಸ್ತಿಯೆ ಅವರ ಅಂತ್ಯ!
ಗೆಲುವ ಸ್ನೇಹದಿ ಸೇರುತ.
ನಮ್ಮ ಹಬ್ಬಕೆ ನೀವೇ ನೆಂಟರು,
ನಿಮ್ಮ ಗುಡಿಗೆ ನಾವೇ ಭಂಟರು,
"ಶಾಂತಿಯುಗ"ವ ಕಟ್ಟುವ;
ವಿಷವ ಬಿತ್ತುವ ನೀಚ ನರಿಗಳ
ಅರಿತು ದೂರಕೆ ಅಟ್ಟುವ!
('ಕರಾವಳಿ ಕರ್ನಾಟಕ'ದ ಅಂತರ್ಜಾಲ ಆವೃತ್ತಿಯಲ್ಲಿ ಪ್ರಕಟವಾದ ನನ್ನ ಕವನ)

ಬುಧವಾರ, ಫೆಬ್ರವರಿ 3, 2016

ಎಂದು ಎಚ್ಚರ?

ಎಂದಿಗೆ ಎಚ್ಚರ ನಿನಗೆ?
ಎಂದಿಗೆ ಅರಿವಿನ ಬೆಳಗು?
ಶತಮಾನ ಕಳೆಯುತಿದೆ
ಮುಗಿದಿಲ್ಲ ಅನ್ಯಾಯದ ಇರುಳು!

ದೇಶಕೆ ಹನಿಸಿದ ಬೆವರೆಷ್ಟು?
ಏಳಿಗೆಯೆಡೆಗಿನ ನಡೆಯೆಷ್ಟು?
ಧರ್ಮಕೆ ಹರಿಸಿದ ನೆತ್ತರೆಷ್ಟು?
ಹರಿಸಿ ಪಡೆದ ಫಲವದೆಷ್ಟು?
ಲೆಕ್ಕ, ತರ್ಕ ಮರೆತ ಮಂದಮತಿಯೇ
ಎಂದಿಗೆ ಎಚ್ಚರ ನಿನಗೆ?

ದಕ್ಷನೊಬ್ಬನ ಸಾವು
ಮರೆತು ಹೋಯಿತು ಮೂರೇ ದಿನಕೆ
ಮಣ್ಣಲಿ ಕರಗಿಹೋದ ಅವನ ದೇಹದಂತೆಯೇ;
ನೊಂದ ಮಾನಿನಿಯ ಕೂಗು
ಮಾಸಿಹೋಯಿತು ನಡು-
-ರಸ್ತೆಯಲಿ ಚೆಲ್ಲಿದ ಅವಳ ರಕ್ತದಂತೆಯೇ!
ಮೈಮರೆತು ಮಲಗಿಹ ಜಡ ಮತಿಯೇ
ಎಂದಿಗೆ ಎಚ್ಚರ ನಿನಗೆ?

ನಕಲಿ ಕಡತಗಳನ್ನು ಪುಟಪುಟದಲ್ಲೂ
ಮೋಸದ ಲೇಖನಿಯಲಿ ಕಥೆಯಾದ,
ಅರ್ಹತೆ, ವಿದ್ಯೆ ಕೌಶಲ್ಯಗಳಿದ್ದೂ
"ಪ್ರಭಾವ"ದ ಕಣ್ಣೆದುರಲಿ ಕಸವಾದ
ದಿವಾನ, ಜವಾನ, ರಕ್ಷಕ, ನಾಯಕರಿಗೆ
ತೆತ್ತು ಸೊರಗಿಹ 'ಮಧ್ಯಮ' ಮತಿಯೇ
ಎಂದಿಗೆ ಎಚ್ಚರ ನಿನಗೆ?

('ರಂಗೋತ್ರಿ'  ಸಂಸ್ಥೆಯವರು ಆಯೋಜಿಸಿದ್ದ 'ಅಖಿಲ ಕರ್ನಾಟಕ ಪ್ರಥಮ ಯುವಕವಿ ಸಮ್ಮೇಳನ'ದಲ್ಲಿ ನಾನು ವಾಚಿಸಿದ ಕವನ)

ಗುರುವಾರ, ಜನವರಿ 14, 2016

ಒಲವಿಗೆ...

ಮೌನಮಾಮರದೊಂಟಿ ರೆಂಬೆಯ
ಉಲಿವ ನೆನಪಿನ ಕೋಗಿಲೆ;
ಕಳೆದ ಮುದಗಳ ಘಮದ ಕೊಳದಲಿ
ಅರಳಿನಿಂತಿಹ ನೈದಿಲೆ.

ಉದಯದಂಚಿನ ಒಲವ ಮಿಂಚಲಿ
ಹೃದಯ ತುಂಬಿದ ಬಿಂಬವೇ;
ಸಸಿಯ ಉಸಿರೊಳಹೊಕ್ಕ, ಹೆಮ್ಮರ-
-ಸೂಸಿ ನಿಂತಿಹ ಗಂಧವೇ.

"ಇಲ್ಲ"ಗಳ ಮುಳ್ಳುಗಳ ನಡುವಲಿ
ಇರುವುದ ಕಲಿಸಲರಳಿದ ಕುಸುಮವೇ;
ಸೊಲ್ಲ ಸವಿಯಲಿ ಕಲ್ಲ ಕರಗಿಸಿ
ಹೃದಯವಾಗಿಸಿದೊಲುಮೆಯೇ.

ದೂರಜನ್ಮದ ಬಂಧ ತೀರದಿಂ
ಅರಸಿ ಬಂದಿಹ ಅಲೆಗಳೆ;
ಕನಸು, ಕಲ್ಪನೆಯಲಿ ಮನವ ಹೆಣೆದು
ಸರಸವಾಡುವ ಬಲೆಗಳೆ.

ತಪನೆಯುಕ್ಕಿ, ವಿರಹ ಬಿಕ್ಕಿ
ಬಾಳು ಕರೆದಿಹ ಚೈತ್ರವೇ;
ಇರುಳಿನಂದದಿ ಬರುವ ಬೆಳಗಿಗೆ
ಮೆರಗು ತರಲೆಂದೇ ಈ ಅಗಲಿಕೆ?
("ಮಂಗಳ"ದಲ್ಲಿ ಪ್ರಕಟವಾದ ನನ್ನ ಕವನ)

ಮಂಗಳವಾರ, ಜನವರಿ 12, 2016

ಒಂದು ಅನಾಮಿಕ ಉರ್ದು ಕವನ...

ಮಾಲಿಕನ ಹೆಸರಿಲ್ಲದೆಯೇ ಅಂತರ್ಜಾಲದ ತಂಬೆಲ್ಲಾ ಅಲೆದಾಡುತ್ತಿರುವ ಉರ್ದು ಕವನವಿದು. ಬೆಳಗ್ಗೆ ವಾಟ್ಸಾಪ್ಪಿನಲ್ಲಿ ಬಂದು ಕೂತಿತ್ತು.  ಯಥಾವತ್ತಾಗಿ ಬ್ಲಾಗಿಸಿದ್ದೇನೆ. ಒಮ್ಮೆ ಓದಿ...

ತೇರಿ ಡೋಲಿ ಉಠೀ
ಮೇರಿ ಮಯ್ಯತ್ ಉಠೀ
ಫೂಲ್ ತುಜ್ ಪರ್ ಭೀ  ಬರ್ ಸೇ
ಫೂಲ್ ಮುಝ್ ಪರ್ ಭೀ  ಬರ್ ಸೇ
ಫರ್ಕ್ ಸಿರ್ಫ್ ಇತ್ ನಾ ಸಾ ಥಾ
ತು ಸಜ್ ಗಯೀ
ಮುಝೆ ಸಜಾಯಾ ಗಯಾ...

ತು ಭೀ ಘರ್ ಕೋ ಚಲೀ
ಮೈ ಭೀ ಘರ್ ಕೋ ಚಲಾ
ಫರ್ಕ್ ಸಿರ್ಫ್ ಇತ್ನಾ ಸಾ ಥಾ
ತು ಉಠ್ ಕೆ ಗಯೀ
ಮುಝೆ ಉಠಾಯಾ ಗಯಾ...

ಮೆಹೆಫಿಲ್ ವಹಾಂ ಭೀ ಥಿ
ಲೋಗ್ ಯಹಾಂ ಭೀ ಥೆ,
ಫರ್ಕ್ ಸಿರ್ಫ್ ಇತ್ನಾ ಸಾ ಥಾ
ಉನ್ ಕಾ ಹಸ್ನಾ ವಹಾಂ
ಇನ್ಕಾ ರೋನಾ ಯಹಾಂ...

ಖಾಝೀ ಉಧರ್ ಭೀ ಥಾ
ಮೌಲ್ವೀ ಇಧರ್ ಭೀ ಥಾ
ದೋ ಬೋಲ್ ತೇರೆ ಪಢೆ
ದೋ ಬೋಲ್ ಮೇರೆ ಪಢೆ
ತೇರಾ ನಿಕಾಹ್ ಪಢಾ
ಮೇರಾ ಜನಾಝಾ ಪಢಾ 
ಫರ್ಕ್ ಸಿರ್ಫ್ ಇತ್ನಾ ಸಾ  ಥಾ..
ತುಝೆ ಅಪ್ನಾಯಾ ಗಯಾ 
ಮುಝೆ ದಫ್ನಾಯಾ ಗಯಾ....
👇🏿👇🏿
ಅನುವಾದ- ಎಂ ಕೆ ಜೀರ್ಮುಖಿ

ನಿನ್ನ ಪಲ್ಲಕಿ ಹೊರಟಿತು 
ನನ್ನ ಹೆಣವೂ;
ಹೂ ಮಳೆ ನಿನ್ನ ಮೇಲೆ ಸುರಿಯಿತು 
ನನ್ನ ಮೇಲೂ;
ಆದರೆ ವ್ಯತ್ಯಾಸವಿಷ್ಟೆ,
ನೀನು ಸಜ್ಜಾಗಿದ್ದೆ 
ನನ್ನನ್ನು ಸಜ್ಜುಗೊಳಿಸಿದ್ದರು 

ನೀನು ಕೂಡ ಮನೆಗೆ ಹೊರಟಿದ್ದೆ,
ನಾನು ಕೂಡ ;
ಆದರೆ ವ್ಯತ್ಯಾಸವಿಷ್ಟೆ,
ನೀನು ಎದ್ದು ಹೊರಟಿದ್ದೆ 
ನನ್ನನ್ನು ಎತ್ತಿಕೊಂಡು ಹೊರಟರು  

ಸಮಾರಂಭ ಅಲ್ಲೂ ನಡೆಯುತಿತ್ತು
ಜನರ ಗುಂಪು ಇಲ್ಲೂ ಸೇರುತ್ತಿತ್ತು 
ಆದರೆ ವ್ಯತ್ಯಾಸವಿಷ್ಟೆ  
ಅಲ್ಲಿ ಮದರಂಗಿ ನಡೆಯುತಿತ್ತು
ಇಲ್ಲಿ ರೋಧನೆಯೇ ಕೇಳುತಿತ್ತು

ಗುರುಗಳು ಅಲ್ಲೂ ಇದ್ದರು 
ಗುರುಗಳು ಇಲ್ಲೂ ಇದ್ದರು  
ಅವರಲ್ಲಿ ನಿನಗೆ ನಿಕಾಹ್ ನೆರವೇರಿಸಿದರು 
ಇವರಿಲ್ಲಿ ನನಗೆ ಶವಸಂಸ್ಕಾರ ನೆರವೇರಿಸಿದರು 
ಆದರೆ ವ್ಯತ್ಯಾಸವಿಷ್ಟೆ
ನಿನ್ನನ್ನು ಅಲ್ಲಿ  ತಮ್ಮದಾಗಿಸಿಕೊಂಡರು
ನನ್ನನ್ನು ಇಲ್ಲಿ  ಮಣ್ಣಾಗಿಸಿದರು
**************************

ಶನಿವಾರ, ಜನವರಿ 9, 2016

ನನ್ನ ತಂಗಿ..

ಅದೇಕೆ ಹೀಗನ್ನಿಸುತ್ತದೋ ಗೊತ್ತಿಲ್ಲ; ಇಂಥಾದ್ದೊಂದು ತುಡಿತ ಇಂದಿಗೂ ನನ್ನ ಮನದಾಳದಲೆಲ್ಲೋ ಹಾಗೆಯೇ ಇದೆ.
ನನಗೊಬ್ಬಳು ತಂಗಿ ಇರಬೇಕಿತ್ತು!
ಮೊದಮೊದಲು ಈ ವಿಚಿತ್ರ ಬಯಕೆ ಇರೋದು ನನಗೆ ಮಾತ್ರ ಅಂದುಕೊಂಡಿದ್ದೆ. ಆದರೆ ಒಂದಿಬ್ಬರು ಗೆಳೆಯರು ಸಾಕ್ಷಾತ್ ತಮ್ಮ ಬಾಯಿಂದಲೇ ಇದನ್ನು ಹೇಳಿದಾಗ, ಬರಹಗಾರರೊಬ್ಬರ ಬ್ಲಾಗ್ ನಲ್ಲೂ ಇದನ್ನೇ ಓದಿದಾಗ ಈ ವಿಚಿತ್ರ ಭಾವನೆಗೊಳಗಾದವನು ನಾನು ಮಾತ್ರ ಅಲ್ಲ ಅಂತ ಸಮಾಧಾನವಾಯಿತು, ಹಾಗೆಯೇ ಆಶ್ಚರ್ಯವೂ ಆಯಿತು.
ನಿಜದಲ್ಲಿ ನನಗೆ ತಂಗಿಯೊಬ್ಬಳಿದ್ದಿದ್ದರೆ ಹೀಗೆಲ್ಲಾ ಅನ್ನಿಸುತ್ತಿತ್ತೋ ಇಲ್ವೋ ಗೊತ್ತಿಲ್ಲ; ಈ ತಂಗಿಯದು ತುಂಬಾ ವಿಶೇಷವಾದ ಬಂಧ. ಅವಳು ಮಮತೆ ತೋರುವ ತಾಯಿಯಾಗಿರುತ್ತಾಳೆ, ತುಂಟಾಟವಾಡುವ ಮಗುವಾಗಿರುತ್ತಾಳೆ, ಭಾವನೆಗಳನ್ನ ಹಂಚಿಕೊಳ್ಳಬಲ್ಲ ಗೆಳತಿಯೂ ಆಗಿರುತ್ತಾಳೆ. 
ಮದುವೆಯಾಗಿ ಪಟ್ಟಣ ಸೇರಿರುವ ಹೆಣ್ಣುಮಗಳು ಖಾಯಿಲೆಯಿಂದ ಬಳಲುತ್ತಿರುವ  ಅಣ್ಣನನ್ನ ತನ್ನ ಮನೆಯಲ್ಲಿಟ್ಟುಕೊಂಡು ಸಾಕ್ಷಾತ್ ತಾಯಿಯಾಗಿ ಸಲಹುತ್ತಿರವುದನ್ನ ನನ್ನ ಕುಟುಂಬದಲ್ಲೇ ಕಂಡಿದ್ದೇನೆ; ಅಷ್ಟೇ ಯಾಕೆ, ಸಹೋದರರ ಹೆಸರೆತ್ತಿದೊಡನೆ  ಹೊಳೆಯುವ ಮಮತೆಯ ಮಿಂಚೊಂದನ್ನ ನನ್ನ ಅಮ್ಮನ ಕಣ್ಣಲ್ಲಿ ಗಮನಿಸಿದ್ದೇನೆ. ಬಾಳು ಹಸನಾಗದೇಹೋದ ಅಣ್ಣನನ್ನು ನೆನೆದು ಅವಳು ಕಣ್ಣೀರಿಟ್ಟಿದ್ದನ್ನ ನೋಡಿದ್ದೇನೆ. ತವರನ್ನ ಬಿಟ್ಟುಬಂದು ಇಪ್ಪತ್ತೈದು ಸಂವತ್ಸರವೇ ಕಳೆದಿದ್ದರೂ ಇಂದಿಗೂ ಎಷ್ಟೋಸಲ ನನ್ನನ್ನ ಕರೆಯುವಾಗ ಬಾಯ್ತಪ್ಪಿ ಅವಳು ಕೂಗುವುದು ತನ್ನ ತಮ್ಮನ ಹೆಸರನ್ನ!
ಹೌದು; ನನಗೂ ಒಬ್ಬಳು ತಂಗಿಯಿರಬೇಕಿತ್ತು. ಅಪ್ಪ, ಅಮ್ಮನೂ ಕೇಳದೇ ಮುಟ್ಟದ ನನ್ನ ಪರ್ಸಿನಿಂದ ಹೇಳದೇ ಕೇಳದೇ ಹಣ ಎತ್ತಿಕೊಂಡು ಹೋಗುವ ತುಂಟ ತಂಗಿ, ನಾನು ಜಡೆಯೆಳೆದು, ರೇಗಿಸಿ, ಕೀಟಲೆ ಕೊಡುವ ಮುದ್ದು ತಂಗಿ, ತಾನು ಬಯಸಿದ ಡ್ರೆಸ್ ಕೊಡಿಸೆಂದು ದೊಂಬಾಲುಬಿದ್ದು ಹಠಮಾಡುವ ಮಗುವಿನ ಮನಸ್ಸಿನ ತಂಗಿ, ನನ್ನ ಸವಕಲು ಭಾವನೆಗಳಿಗೆ ಸಮಾಧಾನ ಹೇಳುವ ಆತ್ಮೀಯ ತಂಗಿ, ನನ್ನೆದೆಗೊರಗಿ ನಿಮಿಷಗಟ್ಟಲೆ ಕಣ್ಣೀರಿಟ್ಟು ಗಂಡನ ಮನೆಗೆ ಹೊರಟುನಿಂತಿರುವ  ಪ್ರೀತಿಯ ತಂಗಿ...
ಕೆಲವೊಮ್ಮೆ ಇದೆಲ್ಲಾ ಹುಚ್ಚು ಭಾವನೆಗಳ ಪರಾಕಾಷ್ಠೆ ಅನ್ನಿಸುತ್ತದೆ. ಆದರೆ ಇಂತಹ ಹುಚ್ಚ ನಾನೊಬ್ಬನೇ ಅಲ್ಲ ಎನ್ನುವ ಮೊಂಡು ಧೈರ್ಯದಮೇಲೆ ಇದನ್ನೆಲ್ಲ ನಿಮ್ಮೊಂದಿಗೆ ಹಂಚಿಕೊಳ್ಳುವ ಸಾಹಸ ಮಾಡುತ್ತಿದ್ದೇನೆ. ನಿಮ್ಮ ಅಭಿಪ್ರಾಯ ಹೇಳ್ತೀರಲ್ವ?
ನನ್ನ ತಂಗಿ
ಎಳೆಯ ವಯಸು, ನಲಿವ ಮನಸು
ಕಣ್ಣ ತುಂಬ ಕನಸಿದೆ;
ಮುದ್ದು ಮುಖದ ಮುಗ್ಧ ಚೆಲುವು
ಅಮ್ಮನಂತೆಯೇ ಅನಿಸಿದೆ!
ಮನೆಯೊಳಗೆ-ಹೊರಗೆ ಕುಣಿವ ನಡೆಗೆ
ಕಾಲಗೆಜ್ಜೆ ಝಣಝಣ;
ಅವಳು ಇರದ ಒಂದು ದಿನವೂ
ಮನೆಯು ಏಕೋ ಭಣಭಣ!
ಅಡುಗೆ ಮನೆಯ ಸೇರಿ ಅಮ್ಮನ
ಕಾಡಿ ಜಗಳವಾಡಲು;
ಅಮ್ಮ ಮುನಿಯೆ ಓಡಿ ಬಂದು
ನನ್ನ ಮಡಿಲಲವಿತಳು!
ಹಬ್ಬ-ಪೂಜೆ ಬಂದರಂತೂ
ಮೈಯ್ಯ ಮರೆತು ನಲಿವಳು;
ಹಸಿರು ಲಂಗ, ಝುಮುಕಿ ಧರಿಸಿ,
ಬಿಂದು ಇಟ್ಟು, ಬಳೆಯ ತೊಟ್ಟು,
ತಾರೆಯಂತೆ ಹೊಳೆವಳು!
ಒಂದು ಕ್ಷಣದ ಕೋಪದಲ್ಲಿ
ಮುನಿದು ಒರಟನಾಗುವೆ;
ಅವಳ ಕಣ್ಣ ಹನಿಗೆ ಸೋತು
ಮುತ್ತನಿಟ್ಟು ರಮಿಸುವೆ.
ಜಾತ್ರೆಯಲ್ಲಿ ಕೈಯ್ಯ ಹಿಡಿದು
ನಡೆವ ಮುದ್ದು ಮಗುವು ನೀ;
ನನ್ನ ಮನವು ನೊಂದ ಕ್ಷಣದಿ
ನೋವ ಮರೆಸೊ ನಗುವು ನೀ..
('ಪಂಜು' ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಕವನ)

ಬುಧವಾರ, ಜನವರಿ 6, 2016

ನಾನೂ ಹಾಗಿದ್ದಿದ್ದರೆ...

"ಯಾರಿಗೂ ಅವರ ರಿಯಲ್ ಲೈಫ್ ಇಷ್ಟ ಆಗಲ್ಲ. ಪ್ರತಿಯೊಬ್ರೂ ಅವರ ಲೈಫ್ ಬೇರೆಥರ ಇರ್ಬಾರ್ದಾಗಿತ್ತ ಅಂತ ಕೊರಗ್ತಾನೇ ಇರ್ತಾರೆ"

'ಲೂಸಿಯ' ಚಿತ್ರದಲ್ಲಿ ಬರುವ ಮಾತುಗಳಿವು. ಇದೊಂದು ಸಾರ್ವಕಾಲಿಕ ಸತ್ಯವೆಂಬುದು ನನಗೆ ಅರ್ಥವಾಗಿದ್ದು ಕೆಲ ದಿನಗಳ ಕೆಳಗೆ.

ಹೆಚ್ಚಿನವರಂತೆ ನನಗೂ ನನ್ನ ಬಗ್ಗೆ ಅದೆಷ್ಟೋ ಕೀಳರಿಮೆಗಳು; ನನಗೆ ಧೈರ್ಯ ಸಾಲದು, ತುಂಬಾ ನಿಧಾನಿ, ಕಾರ್ಯ ಕೌಶಲ್ಯಗಳಿಲ್ಲ, ನೋಡೋಕೂ ಚೆನ್ನಾಗಿಲ್ಲ, ಸಾಮಾನ್ಯಜ್ಞಾನ ಕಡಿಮೆ..... ಹೇಳುತ್ತಾ ಹೋದರೆ ಪುಟಗಟ್ಟಲೆ ಆಗಬಹುದು ಎನ್ನುವಷ್ಟಿವೆ. ಎಷ್ಟೇ ಪ್ರಯತ್ನಿಸಿದರೂ ಇವೆಲ್ಲಾ ಬರೀ 'ಕೀಳರಿಮೆಗಳು' ಅಂದುಕೊಂಡು ಇದರಿಂದಾಚೆಬರಲು ಮನಸ್ಸು ತಯಾರಿಲ್ಲ. ಇಂತಿಪ್ಪ ನನಗೆ ಆತ್ಮೀಯ ಗೆಳಯನೊಬ್ಬನಿದ್ದಾನೆ. ನೋಡೋಕೆ ಗುಂಡುಗುಂಡಾಗಿರುವ Handsome guy. ಎಂತಹ ಕೊತ್ವಾಲನೇ ಎದುರು ನಿಂತರೂ ಉತ್ತರಿಸಬಲ್ಲ ಧೈರ್ಯಶಾಲಿ. ಯಾವ ಹೊಸ ಸಂಗತಿಯನ್ನಾದರೂ ಕ್ಷಣಾರ್ಧದಲ್ಲಿ ಕಲಿಯಬಲ್ಲ ಚಾಣಾಕ್ಷ. ನನಗಿಂತ ಮೂರುಪಟ್ಟು ಹೆಚ್ಚಿಗೆ ಸಂಬಳ ಪಡೆಯುತ್ತಾನೆ. ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ,ರಾಜಕೀಯ, ಕ್ರೀಡೆ, ಚಿತ್ರರಂಗ ಹೀಗೆ ಎಲ್ಲಾ ಪ್ರಸ್ತುತ ವಿದ್ಯಮಾನಗಳಲ್ಲೂ ವಾಹ್ ಎನ್ನಬಹುದಾದಂತಹ ಲೋಕಜ್ಞಾನ ಅವನದು. ನಾನೂ ಇವನ ಹಾಗೇ ಇರಬೇಕಿತ್ತು ಅಂತ ಅದೆಷ್ಟುಸಲ ಅಂದುಕೊಂಡಿದೀನೋ ಲೆಕ್ಕವೇ ಇಲ್ಲ.

ಕೆಲದಿನಗಳ ಹಿಂದೆ ಇಬ್ಬರೂ ಅಪರೂಪಕ್ಕೆ 'ಜೀವನ'ದ ಬಗ್ಗೆ ಗಂಭೀರವಾಗಿ ಏನೋ ಮಾತನಾಡುತ್ತಿದ್ದಾಗ, "ನಾನೇನಾದರೂ ನಿನ್ಹಂಗಿದ್ದಿದ್ರೆ ಇವತ್ತು ಎಲ್ಲೋ ಹೋಗಿರ್ತಿದ್ದೆ ಭಟ್ಟ! ಏನ್ಮಾಡೋದು, ನಾನಿರೋದು ಹೀಗೆ..." ಅಂತ ವಿಷಾದದ ದನಿಯಲ್ಲಿ ಅಂದುಬಿಟ್ಟ. ನನಗಂತೂ ಮಹದಾಶ್ಚರ್ಯ!! ನಾನು 'ಹೀಗಿರಬೇಕಿತ್ತು' ಅಂತ ಅಂದುಕೊಳ್ಳುತ್ತಿರುವ ವ್ಯಕ್ತಿಯೂ ನನ್ನ ಬಗ್ಗೆ ಹಾಗೇ ಯೋಚಿಸುತ್ತಿದ್ದಾನೆ ಅಂದರೆ? ನನಗೇ ಗೊತ್ತಿಲ್ಲದ ನನ್ನ ಅದ್ಯಾವ ಮಹಾನ್ ಗುಣ ಇವನಿಗೆ ಕಂಡಿತೋ ನನಗಂತೂ ಹೊಳೆಯಲಿಲ್ಲ. ವ್ಯಕ್ತಿ-ವ್ಯಕ್ತಿಗಳ ನಡುವೆ ಗುಣ, ವ್ಯಕ್ತಿತ್ವ, ಧೈರ್ಯ, ಅಂತಸ್ತು, ಸಂಪಾದನೆಗಳಲ್ಲಿ ಅದೆಷ್ಟೇ ಅಂತರವಿದ್ದರೂ ಕಟ್ಟಕಡೆಗೆ ಎಲ್ಲರ ಆಂತರಾಳದ ತೊಳಲಾಟ ಮಾತ್ರ ಒಂದೇ ಅನ್ನಿಸಿಬಿಟ್ಟಿತು.

ಹೀಗೇ ಒಬ್ಬರಲ್ಲಿ ಇನ್ನೊಬ್ಬರಿಗೆ ಕಾಣುವ ಸಾಮರ್ಥ್ಯ, ಕೌಶಲಗಳು ಅವರ ಬಗ್ಗೆ ಅವರಿಗೇ ಅರ್ಥವಾಗಿಬಿಟ್ಟಿದ್ದರೆ ಲೋಕದ ಸ್ಥಿತಿಯೇ ಬದಲಾಗಿಬಿಡುತ್ತಿತ್ತೋ ಏನೋ... ನೀವೇನಂತೀರ?

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...