ಶನಿವಾರ, ಡಿಸೆಂಬರ್ 31, 2016

ಪರಮೇಶಿ ಪ್ರಸಂಗ




ಪರಮೇಶಿ ದೈವಭಕ್ತನೇ. ಆದರೂ ಅವನಿಗೆ ವಿಷ್ಣುವಿನ 'ಅವತಾರ'ಗಳ ಬಗ್ಗೆ ಅನುಮಾನಗಳಿದ್ದವು. ಯಾವುದೋ ಆಪತ್ತು ಬಂದಕೂಡಲೇ ಗಂಡಾಗಿದ್ದವನು ಮೋಹಿನಿಯಾಗುವುದು, ವರಾಹವಾಗುವುದು, ಉಗ್ರ ನರಸಿಂಹನಾಗುವುದು ಹೇಗೆ ಸಾಧ್ಯ? ಅದರಲ್ಲೂ ಎಸ್ಪೆಶಲಿ ಗಂಡಸರು! ಅವರು ಹಾಗೆಲ್ಲಾ ಬದಲಾಗುವವರೇ ಅಲ್ಲ. ಮೆನ್ ಆರ್ ಆಲ್ವೇಸ್ ಮೆನ್! ಆಫಿಸಿನಲ್ಲಿ ಲೇಡಿ ಬಾಸ್ ಭದ್ರಕಾಳಿಯಾಗಿ, ಚಂಡಿಚಾಮುಂಡಿಯಾಗಿ, ಕನ್ನಡದ ಕಿರಣ್ ಬೇಡಿಯಾಗಿ....ಹೀಗೇ ಕ್ಷಣಕ್ಕೊಂದು ಭಯಾನಕ ರೂಪ ತಾಳುತ್ತಾ  ತನ್ನ ಮೇಲೆ ರೌದ್ರ ತಾಂಡವವಾಡಿದರೂ ತಾನು ಮಾತ್ರ ಡಾಬರ್ ಮನ್ ಅನ್ನು ಕಂಡ ಬಡಕಲು ಬೀದಿನಾಯಿಯಂತೆ ಬಾಲ ಮುದುರಿಕೊಂಡೇ ನಿಂತಿರುತ್ತೇನೆ. ತಾನು ಮಾತ್ರ ಅಲ್ಲ; ಹಿಂದಿನ ಜನ್ಮದ ಕೋಪವನ್ನೂ ಈ ಜನ್ಮಕ್ಕೆ 'ಕ್ಯಾರಿ ಫಾರ್ವಡ್' ಮಾಡಿಕೊಂಡು ಬಂದಂತಿರುವ ಅವರೆದುರು ಆರಡಿ ಎತ್ತರದ, ಜಿಮ್ ಬಾಡಿಯ ಕೋದಂಡನೂ ಬರೀ ದಂಡವೇ! 

ಬಾಸ್ ಗೆ ಎದಿರಾಡಬೇಕೆಂದು ಅದೆಷ್ಟೇ  ಪ್ರಯತ್ನಿಸಿದರೂ ಪರಮೇಶಿಗೆ ಸಾಧ್ಯವಾಗುವುದೇ ಇಲ್ಲ.  ಹಿಂದಿನ ರಾತ್ರಿ ನೋಡಿದ ಅಣ್ಣಾವ್ರ ಚಿತ್ರದಿಂದ ಪ್ರೇರಿತನಾಗಿ ಇದ್ದ ಬದ್ದ ಧೈರ್ಯವನ್ನೆಲ್ಲಾ ಜೊತೆಗೂಡಿಸಿ "ಇವತ್ತು ಅವರಿಗೆ ಸರಿಯಾಗಿ ಉತ್ತರಕೊಡ್ತೇನೆ!" ಅಂತ ಎದೆಯುಬ್ಬಿಸಿಕೊಂಡು ಹೊರಡುವುದೇನೋ ನಿಜ. ಆದರೆ ಒಂದು ಸಲ ಅವರ ಬಿಗಿದ ಮುಖ, ದಪ್ಪ ಕನ್ನಡಕದೊಳಗಿಂದ ತನ್ನೆಡೆಗೆ ಬೆಂಕಿಯುಗುಳಲು ಸಿದ್ಧವಾಗಿರುವ ಕಣ್ಣು, ಮೇಲೆರೆಗಲು ತಯಾರಾಗಿರುವಂತೆ ಸೆಟೆದು ಕುಳಿತಿರುವ ಭಂಗಿ- ಇದನ್ನೆಲ್ಲಾ ನೋಡುತ್ತಿದ್ದಂತೆಯೇ ರಿಟೈರ್ಮೆಂಟಿಗೆ ಸನಿಹವಾಗಿದ್ದರೂ ಚಾಂಪಿನ್ ಆಗಿಯೇ ಉಳಿದಿರುವ ಹಳೇ ಜಟ್ಟಿಯನ್ನು ಕಂಡಂತಾಗಿ, ಅವನ ಧೈರ್ಯವೆಲ್ಲಾ ಬಾಗಿಲಿನಲ್ಲೇ ಹಾರಿಹೋಗಿ, ಮತ್ತೆ ಬಾಲ ಮುದುರಿದ ನಾಯಿಯಾಗಿಬಿಡುತ್ತಿದ್ದ! ಎಂದಿನಂತೆ ಕೈಕಟ್ಟಿ, ತಲೆ ತಗ್ಗಿಸಿ ತನ್ನ ಮೇಲಾಗುತ್ತಿರುವ 'ಸಹಸ್ರ ನಾಮಾರ್ಚನೆ'ಯನ್ನು ಶ್ರದ್ಧೆಯಿಂದ ಕೇಳಿಸಿಕೊಂಡು ತನ್ನ ಜಾಗಕ್ಕೆ ಮರಳುತ್ತಿದ್ದ.

ಉದ್ಯೋಗಕ್ಕೆ ಸೇರಿದ ಆರಂಭದಲ್ಲಿ ಕೆಲಸ ಗೊತ್ತಿಲ್ಲದ ಕಾರಣದಿಂದ ಹಾಗೂ ಬಾಸ್ ಮೇಲಿನ ಭಯದಿಂದ ಹೆಚ್ಚೆಚ್ಚು ತಪ್ಪುಗಳಾಗುತ್ತಿದ್ದವು. ಅಲ್ಲದೇ ಮೊದಲೇ ಎಡಬಿಡಂಗಿ ಗುಣದವನೂ ಆಗಿದ್ದರಿಂದ ಒಂದಿಲ್ಲೊಂದು ತಪ್ಪು ಮಾಡುತ್ತಲೇ ಇದ್ದ ಪರಮೇಶಿ. 'ಫರ್ಸ್ಟ್ ಇಂಪ್ರೆಷನ್ ಈಸ್ ದಿ ಬೆಸ್ಟ್ ಇಂಪ್ರಷನ್' ಎಂಬಂತೆ ಮೊದಲ ಹೆಜ್ಜೆಯಲ್ಲೇ 'ಯಡವಟ್ಟು' ಎಂಬ ಹಣೆಪಟ್ಟಿ ಹಚ್ಚಕೊಂಡವನಿಗೆ ಬಾಸ್ ರಿಂದ ಆಗಾಗ ಮಹಾಮಂಗಳಾರತಿ ನಡೆಯುತ್ತಲೇ ಇತ್ತು. ಕೆಲವೊಮ್ಮೆ ತನ್ನದಲ್ಲದ ಅಥವಾ ತೀರಾ ಕ್ಷುಲ್ಲಕ ತಪ್ಪಿಗೂ ತಾರಾಮಾರಿ ಬೈಗಳು ಕೇಳಬೇಕಾಗುತ್ತಿತ್ತು. ತಿರುಗಿ ಹೇಳಲೂ ಆಗದೆ, ತೀರಾ ಸಹಿಸಿಕೊಳ್ಳಲೂ ಆಗದೇ ಬೋನಿಗೆ ಬಿದ್ದ ಕರಡಿಯಂತಾಗಿತ್ತು ಪರಮೇಶಿಯ ಸ್ಥಿತಿ. ಆದರೂ ಅವನೇನು ಸಂಪೂರ್ಣ ತೆಪ್ಪಗಿರುತ್ತಿರಲಿಲ್ಲ. ಅವಕಾಶ ಸಿಕ್ಕಾಗೆಲ್ಲಾ ಆತ್ಮೀಯ ಸಹೋದ್ಯೋಗಿಗಳೆದುರು, ಗೆಳೆಯರುದುರು ಹಾಗೂ ಮನೆಯವರೆದುರು ತನ್ನ ಬಾಸ್ ಅನ್ನು ಕ್ಷುದ್ರಾತಿಕ್ಷುದ್ರ ಜೀವಿಗಳಿಗೆ ಹೋಲಿಸಿ ತಮಾಷೆಮಾಡುವ ಮೂಲಕ ಅಷ್ಟರಮಟ್ಟಿಗೆ ತನ್ನ ಉರಿ ಕಡಿಮೆಮಾಡಿಕೊಳ್ಳುತ್ತಿದ್ದ. 

ಹೀಗಿರುವಾಗ ಅದೊಂದು ದಿನ ಅನಿರೀಕ್ಷಿತ ಘಟನೆಯೊಂದು ನಡೆದುಹೋಯಿತು. ಅದ್ಯಾವುದೋ ಅತಿ ಮುಖ್ಯ ಕಾಗದಪತ್ರವೊಂದು ಅಚಾನಕ್ಕಾಗಿ ಕಾಣೆಯಾಯಿಗಿಬಿಟ್ಟಿತು. ಪರಮೇಶಿಗೋ ಅದನ್ನು ಖುದ್ದು ಬಾಸ್ ಗೆ ಕೊಟ್ಟಂತೆ ಮಾಸಲು ಮಾಸಲು ನೆನಪು; ಆದರೆ ಅವರು ಮಾತ್ರ ನೀನದನ್ನು ಕೊಟ್ಟದ್ದೇ ಸುಳ್ಳು ಎಂದು ವಾದಿಸತೊಡಗಿದ್ದರು. ಸಾಲದ್ದಕ್ಕೆ ಎಲ್ಲರೆದುರೇ ಪರಮೇಶಿಯ ಮರೆವನ್ನು, ಬೇಜಾವಬ್ದಾರಿಗಳನ್ನು ದೊಡ್ಡ ಗಂಟಲಿನಲ್ಲಿ ಹರಾಜು ಹಾಕುತೊಡಗಿದರು. ಈ ಕುರುಕ್ಷೇತ್ರ ನೋಡಲಾಗದೆ ಎಲ್ಲರೂ ಭೂತಕನ್ನಡಿ ಹಿಡಿದುಕೊಂಡು ಹುಡುಕಲಾಗಿ, ಎಷ್ಟೆಲ್ಲಾ ಗಲಾಟೆ ಸೃಷ್ಟಿಸಿದ ಆ ಪತ್ರ ಕೊನೆಗೂ ಬಾಸ್  ಟೇಬಲ್ ಮೇಲೆ ರಾಶಿಬಿದ್ದಿದ್ದ ಕಡತಗಳ ಮಧ್ಯದಿಂದಲೇ ಎದ್ದು ಬಂತು! ಎಲ್ಲರೂ ಅಯ್ಯೋ ಪಾಪ ಎನ್ನುವಂತೆ ತನ್ನೆಡೆಗೆ ನೋಡಿದ್ದೇ ತಡ, ಅದೆಷ್ಟೋ ದಿನದಿಂದ ಸಹಿಸಿಕೊಂಡಿದ್ದ ಉಗ್ರ ಕೋಪವೆಲ್ಲಾ ತಾನೇ ಆಗಿ ಎದ್ದುನಿಂತ ಪರಮೇಶಿ. ಕೈಲಿದ್ದ ಫೈಲನ್ನು ರಪ್ ಎಂದು ಟೇಬಲ್ ಮೇಲೆ ಕುಕ್ಕಿದವನೇ "ಮುಂದಿನ ಸಲ ಮಾತನಾಡುವ ಮೊದಲು ಒಮ್ಮೆ ನಿಮ್ಮ ಕಾಲ ಬುಡ ನೋಡಿಕೊಳ್ಳಿ" ಎಂದು ಗುಡುಗಿ, ದಢಾಲ್ಲೆಂದು ಬಾಗಿಲು ತಳ್ಳಿಕೊಂಡು ನಡೆದೇಬಿಟ್ಟ. 

ಒಂದು ಕ್ಷಣದ ಆವೇಶದಲ್ಲಿ ಹಾಗೊಂದು ಮಾತಂದು ಬಂದವನಿಗೆ ನೆತ್ತಿಗೇರಿದ್ದ ಕೋಪ ಇಳಿದ ಕೂಡಲೇ ನಡುಕ ಶುರುವಾಯಿತು. ತಾನೇನೂ ಎದುರಾಡದೆಯೇ ಅಷ್ಟೆಲ್ಲಾ ಎಗರಾಡುತ್ತಿದ್ದವರು ಇನ್ನು ಮುಂದೆ ಸುಮ್ಮನಿರುತ್ತಾರೆಯೇ? ಕನ್ನಡಕದೊಳಗಿನ ತಮ್ಮೆರೆಡೂ ಹದ್ದಿನ ಕಣ್ಣುಗಳನ್ನೂ ನನ್ನ ಮೇಲೇ ನೆಟ್ಟು ತಪ್ಪುಗಳನ್ನು ಹುಡುಕುತ್ತಾರೆ. ತಾನಾಡಿದ ಮಾತಿಗೆ ಬಡ್ಡಿ ಸಮೇತ ಜಿದ್ದಿ ತೀರಿಸಿಕೊಳ್ಳುತ್ತಾರೆ! ಅವನು ಕ್ಯಾಂಟೀನಿನಲ್ಲಿ ಕೈಯ್ಯಲ್ಲಿ ಅನ್ನದ ತುತ್ತು ಹಿಡಿದು ಹೀಗೆಲ್ಲಾ ಚಿಂತಿಸುತ್ತಿದ್ದಾಗ ಆಕಾಶದಲ್ಲಿ ಅದ್ಯಾವ ದೇವರು 'ಅಸ್ತು' ಅಂದರೋ ಏನೋ, ಮತ್ತೆ ತನ್ನ ಕ್ಯಾಬಿನ್ ಗೆ ಮರಳುವ ಹೊತ್ತಿಗೆ ಅವನ ಜಂಘಾಬಲವನ್ನೇ ಉಡುಗಿಸುವಂತಹ ಸುದ್ದಿಯೊಂದು ಅವನಿಗಾಗಿ ಕಾದು ಕೂತಿತ್ತು. ಅವನು ಆಚೆ ಹೋಗುತ್ತಿದ್ದಂತೆಯೇ ಇತ್ತಕಡೆ ಬ್ಯಾಂಕಿಂದ ಫೋನ್ ಬಂತಂತೆ. ನಾಲ್ಕು ದಿನದ ಹಿಂದೆ ಯಾವುದೋ ಸಪ್ಲೈಯರ್ ಹೆಸರಿಗೆ ಅವನು ಬರೆದಿದ್ದ ಚೆಕ್ಕೊಂದು 'ಸ್ಪೆಲ್ಲಿಂಗ್ ಮಿಸ್ಟೇಕ್' ಎಂಬ ಕಾರಣಕ್ಕೆ ಬೌನ್ಸ್ ಆಗಿತ್ತು! 

ಕೊಲ್ಲಲು ಬಂದವನ ಕೈಗೆ ಕೋವಿ ಕೊಟ್ಟಂತಾಯಿತು ಪರಮೇಶಿಯ ಸ್ಥಿತಿ. ಮೊದಲೇ ಗಾಯಗೊಂಡ ಹುಲಿಯಾಗಿದ್ದ ಬಾಸ್ ಈ ಸುದ್ದಿ ಕೇಳಿ ಸಾಕ್ಷಾತ್ ಸಿಂಹಿಣಿಯೇ ಆಗಿದ್ದರು. 'ಬರಲಿ ಅವನು. ಸರಿಯಾಗಿ ಮಾಡ್ತೀನಿ!' ಎಂದು ಘರ್ಜಿಸಿದ್ದರು. ಆದರೆ ಅದೇ ಸಮಯಕ್ಕೆ ಯಾವುದೋ ಕಸ್ಟಮರ್ ಜೊತೆಗೆ ಮೀಟಿಂಗ್ ಹಾಗೂ ಲಂಚ್ ಇದ್ದಿದ್ದರಿಂದ ಅಲ್ಲಿಗೆ ಹೋಗಿದ್ದರು. ಬಂದಮೇಲೆ ಅವರು ಮಾಡುವ ಮೊದಲ ಕೆಲಸವೇ ತನಗೊಂದು ಗತಿ ಕಾಣಿಸುವುದು. ಮುಗಿದೇ ಹೋಯ್ತು ತನ್ನ ಕಥೆ!

ಪರಮೇಶಿ ನಡುಗಿಹೋದ. ಎಂದೋ ಮರೆತಿದ್ದ ಮನೆದೇವರಿಗೆ ಹರಕೆಹೊತ್ತ. ಕುಳಿತಲ್ಲಿಂದಲೇ ದೂರದಲ್ಲಿರುವ ಇಷ್ಟದೈವ ಗುಡಿಬಂಡೆ ಆಂಜನೇಯನಿಗೆ ಅಡ್ಡಬಿದ್ದ. ಯಾರೇ ಬಂದು ತನ್ನ ಡಿಪಾರ್ಟ್ ಮೆಂಟಿನ ಬಾಗಿಲು ತೆಗೆದರೂ ಅದು 'ಅವರೇ' ಎಂದೆಣಿಸಿ ಅವನ ಎದೆ ಧಸಕ್ ಎನ್ನುತ್ತಿತ್ತು. ಮುಂದಿನ ಒಂದು ಗಂಟೆಯ ಒಂದೊಂದು ನಿಮಿಷವನ್ನೂ ಎರಗಲಿರುವ ಸಿಡಿಲಿನ ಉದ್ದಗಲಗಳನ್ನು ಕಲ್ಪಿಸಿಕೊಳ್ಳುತ್ತಲೇ  ಕಳೆದುಬಿಟ್ಟ.

ಆಗ ತೆರೆಯಿತು ಬಾಗಿಲು. ಜೊತೆಗೇ ಔವ್ssssss ಎಂಬ ಭಯಾನಕ ತೇಗಿನ ಶಬ್ದ! ತನ್ನ ಪಾಲಿನ ಯಮರಾಯನ ಕೋಣ ತನ್ನ ಡಿಪಾರ್ಟ್ಮೆಂಟಿನ ಬಾಗಿಲಿನಲ್ಲಿಯೇ ಬಾಲ ಬೀಸುತ್ತಾ ನಿಂತಿದೆ ಎಂಬುದು ಗೊತ್ತಾಗಿಹೋಯಿತು ಪರಮೇಶಿಗೆ. ಕಣ್ಣು ಕೂಡಾ ಅಲುಗಿಸದೇ ತನ್ನೆದುರಿನ ಕಂಪ್ಯೂಟರ್ ನೋಡುತ್ತಾ ಕುಳಿತುಬಿಟ್ಟ. ಮುಂದೆ ಧಕ್ ಎಂದು ಆಟೋಮ್ಯಾಟಿಕ್ ಬಾಗಿಲು ಹಾಕಿಕೊಂಡ ಸದ್ದು; ಟಕ್ ಟುಕ್, ಟಕ್ ಟುಕ್ ಎಂಬ ಕಾಲ್ನಡಿಗೆ; ಕರ್ರ್... ಎಂದು ಈಸಿ ಚೇರಿನಮೇಲೆ ಕುಳಿತ ಶಬ್ದ. ಮುಂದಿನ ಎರೆಡು ನಿಮಿಷ ಅಸಹನೀಯ ಮೌನ. ಕೂಡಲೇ "ಪರಮೇಶಿ, ಬನ್ನಿ ಇಲ್ಲಿ" ಎಂಬ ಮರಣಕರೆ!

ಬಲಿಪೀಠದೆಡೆಗೆ ನಡೆಯವ ಕುರಿಯಂತೆ ನಡೆದು ಬಂದು "ಯೆಸ್ ಮ್ಯಾಡಮ್" ಎಂದು ಕೈಕಟ್ಟಿ ನಿಂತ. "ಏನ್ ಕೆಲಸ ಮಾಡ್ತೀರ್ರೀ ನೀವು????" ಎಂಬ ಘರ್ಜನೆಯನ್ನು ನಿರೀಕ್ಷಿಸಿದ್ದವನಿಗೆ ತನ್ನ ಕಿವಿಗಳನ್ನು ತಾನೇ ನಂಬಲಾಗಲಿಲ್ಲ. "ಚೆಕ್ ಬರೆಯುವಾಗ ಹುಷಾರಾಗಿ ಬರೀರಿ ಆಯ್ತಾ? ತಪ್ಪಾದರೆ ಕ್ಯಾನ್ಸಲ್ ಮಾಡಿ. ಅದನ್ನೇ ಕಳಿಸ್ಬೇಡಿ" ತೀರಾ ತಗ್ಗಿದ, ಮೃದುವಾದ, ಸಣ್ಣನೆಯ ದನಿಯಲ್ಲಿ ನುಡಿದಿದ್ದರು, ತೀರಾ ಚಿಕ್ಕ ಮಗುವೊಂದಕ್ಕೆ ಹೇಳುವಂತೆ! ಇದು ನಿಜವೆಂದು ನಂಬುವುದಕ್ಕೆ ಪರಮೇಶಿಗೆ ನಿಮಿಷಗಳೇ ಹಿಡಿದವು. ಅದಾಗಿ ಕೆಲವೇ ನಿಮಿಷಗಳಲ್ಲಿ ಹೊರಟೇಹೋಗಿಬಿಟ್ಟರು ಪರಮೇಶಿಯ ಉರಿಗೋಪದ ಮೇಡಮ್.

ನಿಜವಾಗಿ ನಡೆದದ್ದು ಏನೆಂದು ಪರಮೇಶಿಗೆ ಗೊತ್ತಾದದ್ದೇ ಸಂಜೆ. ಕೆಲಸ ಮುಗಿಸಿ ಮನೆಗೆ ಹೊರಟವನನ್ನು ಮರೆಗೆ ಕರೆದುಕೊಂಡುಹೋದ ಆಫೀಸಿನ ಸಹಾಯಕ ಸಿಬ್ಬಂದಿಯಲ್ಲೊಬ್ಬನಾದ ರಮೇಶಣ್ಣ ಗುಟ್ಟಾಗಿ ಕೇಳಿದರು: 
"ನಿಮ್ಮ ಬಾಸ್ ಇದಾರಾ ಸರ್?" 
"ಇಲ್ಲರೀ. ಬೇಗ ಹೊರಟೋದ್ರು. ಯಾಕೆ ಏನ್ ವಿಷ್ಯ?"
"ಅಯ್ಯೋ ಯಾಕೆ ಕೇಳ್ತೀರ. ಅನಾಹುತ ಆಗೋಯ್ತು ಸರ್. ಇವತ್ತು ಬಂದಿದ್ದ ಕಸ್ಟಮರ್ಸ್ ಗಂತ ನಾನ್ ವೆಜ್ ಊಟ ತರ್ಸಿದ್ವಾ. ಅವರ ಊಟ ಮುಗಿದ್ರೂ ಒಂದು ಐಟಮ್ ಸ್ವಲ್ಪ ಜಾಸ್ತೀನೇ ಉಳಿದುಬಿಡ್ತು. ಅದ್ಕೇ ನಾನೂ, ನಮ್ ಹುಡುಗ್ರೂ ಸ್ವಲ್ಪ್ ಸ್ವಲ್ಪ ಹಾಕ್ಕೊಂಡ್ ತಿಂದ್ವಿ. ಅದೇನ್ ಹಾಕಿ ಆ ದರಿದ್ರದ ಚಿಕನ್ ಮಡಿದ್ರೋ ಏನೋ, ಸ್ವಲ್ಪ ಹೊತ್ತಿಗೇ ಎಲ್ರಿಗೂ ಹೊಟ್ಟೆಯೊಳ್ಗೆ ಗುಡಗುಡಾಂತ ಶುರುವಾಯ್ತು ನೋಡಿ, ಆಗಿಂದ ಈಗಿನ್ ತನಕ ಸುಮಾರ್ ಆರ್ಸಲ ಟಾಯ್ಲೆಟ್ ಗೆ ಹೋಗ್ಬಂದೆ. ನನ್ ಪುಣ್ಯ, ಕಸ್ಟಮರ್ಸ್ಯಾರೂ ತಿನ್ಲೀಲ ಆ ದರಿದ್ರಾನ. ಆದ್ರೆ ನಿಮ್ ಬಾಸ್ ಗೆ ಮಾತ್ರ ನಾನೇ ಒತ್ತಾಯ ಮಾಡಿ ಎರೆಡೆರೆಡ್ಸಲ ಬಡ್ಸಿ ತಿನ್ಸ್ಬಿಟ್ಟೆ ಸಾರ್! ಅದ್ಕೇ ಕೇಳ್ದೆ ಹೇಗಿದಾರೇಂತ. ಯಾರಿಗೂ ಹೇಳ್ಬೇಡಿ ಆಯ್ತಾ?" ಎಂದವನೇ ಮತ್ತೆ ಟಾಯ್ಲೆಟ್ ಕಡೆಗೆ ಓಡಿದ!

ಬಾಲಕ್ಕೆ ಅಷ್ಟೆಲ್ಲಾ ಬೆಂಕಿ ಹಿಡಿದಿದ್ದ ಆಟಂ ಬಾಂಬ್ ಸಿಡಿಯದೇ ಯಾಕೆ ಠುಸ್ಸಾಯಿತೆಂಬುದು ಆಗ ಗೊತ್ತಾಯ್ತು ಪರಮೇಶಿಗೆ. ರಮೇಶಣ್ಣನ ಒತ್ತಾಯಕ್ಕೆ ಸಿಕ್ಕಿ ದೋಷವಿದ್ದ ಚಿಕನನ್ನು ತುಸು ಹೆಚ್ಚೇ ತಿಂದಿದ್ದ ಬಾಸ್ ಗೆ ಸ್ವಲ್ಪ ಹೊತ್ತಿನಲ್ಲೇ ಹೊಟ್ಟೆಯೊಳಗೆ 'ಗುಡಗುಡ' ಆರಂಭವಾಗಿತ್ತು ಹಾಗೂ ಕ್ಯಾಬಿನ್ ಗೆ ಮರಳುವ ಹೊತ್ತಿಗದು ಉಲ್ಬಣಿಸಿತ್ತು. ತನ್ನೆದುರು ಗಟ್ಟಿಯಾಗಿ "ಏಯ್ss" ಎಂದು ಉಸುರಿದ್ದರೂ ಕುಳಿತಲ್ಲೇ 'ಅನಾಹುತ'ವಾಗಿಬಿಡುವ ಸಂಭವವಿದ್ದರಿಂದ ಮೆತ್ತಗೆ ಪಾಠಹೇಳಿ ಕಳಿಸಿಬಿಟ್ಟರು. ಆ 'ಬಾಧೆ'ಯ ನಡುವೆಯೂ ತನ್ನನ್ನು ಕರೆದು ಚೆಕ್ಕಿನ ವಿಷಯ ಮಾತನಾಡಿದ್ದರೆಂದರೆ ಅವರೊಳಗೆ ಅದೆಷ್ಟು ಕೋಪವಿದ್ದಿರಬೇಡ! ಅಂತೂ ಇಂತೂ ಚಿಕನ್ ರೂಪದಲ್ಲಿ ಬಂದು ತನ್ನನ್ನು ಬೀಸುವ ದೊಣ್ಣೆಯಿಂದ ಪಾರುಮಾಡಿದ ದೇವರಿಗೆ ಹಾಗೂ ಅದನ್ನು ತಿನ್ನಿಸಿದ ರಮೇಶಣ್ಣನಿಗೆ ಮನದೊಳಗೇ ವಂದಸಿ ಮನೆಕಡೆ ಹೆಜ್ಜೆಹಾಕಿದ ಪರಮೇಶಿ.

(ಡಿಸೆಂಬರ್ 2016ರ 'ತುಷಾರ'ದಲ್ಲಿ ಪ್ರಕಟಿತ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...