ಬುಧವಾರ, ಜೂನ್ 22, 2016

ಮೊದಲ ದಿನ ಮೌನ, ಅಳುವೇ...

ಹುಟ್ಟಿನ ಹೊರತಾಗಿ ಪ್ರತಿಯೊಂದು 'ಮೊದಲ ದಿನ'ದ ಹಿಂದೆಯೂ ಮುಗಿದುಹೋದ 'ಕೊನೆಯ ದಿನ'ವೊಂದಿರುತ್ತದೆ ಹಾಗೂ ಈ ಮೊದಲ ದಿನಗಳಲ್ಲದು ನೆನಪಾಗಿ ಕಾಡುತ್ತದೆ. ಶಾಲೆಯ ಮೊದಲ ದಿನ, ಪ್ರೌಢಶಾಲೆಯ  ಮೊದಲ ದಿನ, ಕಾಲೇಜ್ ನ  ಮೊದಲ ದಿನ, ನೌಕರಿಯ ಮೊದಲ ದಿನ, ಹೊಸಕಂಪನಿಯಲ್ಲಿನ  ಮೊದಲ ದಿನ, ಹೆಣ್ಣಿಗೆ ಮದುವೆಯ ನಂತರದ  ಮೊದಲ ದಿನ..... ಹೀಗೇ ಜೀವನದಲ್ಲಿ ಅದೆಷ್ಟೋ ಮೊದಲ ದಿನಗಳು ಬರುತ್ತಲೇ ಇರುತ್ತವೆ. ಇಲ್ಲಿ ಮೊದಲ ದಿನ ಎಂದರೆ ಮೊಟ್ಟ ಮೊದಲ ದಿನ ಮಾತ್ರವಲ್ಲ, ಮನಸ್ಸು ಹೊಸ ಸ್ಥಳ, ವಾತಾವರಣಗಳಿಗೆ ಹೊಂದಿಕೊಳ್ಳುವ ತನಕದ ಪ್ರತಿಯೊಂದು ದಿನವೂ ಮೊದಲ ದಿನವೇ! 

ಬಹುಷಃ ಎಲ್ಲರಿಗೂ ಹೀಗೇ ಅನ್ನಿಸುವುದಿಲ್ಲವೇನೋ. ತೀರಾ ಭಾವುಕವಾಗಿ ಯೋಚಿಸುವ, ಬಂದೊದಗಿದ ಹೊಸ ಪರಿಸರದಲ್ಲಿ ಬೇಗನೇ ಬೆರೆಯಲಾಗದೇ ಒದ್ದಾಡುವವರನ್ನ ಈ initial day's sindrome ಗಾಢವಾಗಿ ಕಾಡುತ್ತದೆ. ಆದರೆ ಎಲ್ಲರನ್ನೂ ಕಾಡುವ ಹಾಗೂ ಎಲ್ಲರ ನೆನಪಿನಲ್ಲಿ ಉಳಿಯುವ ದಿನವೆಂದರೆ ಮೊದಲ ಬಾರಿಗೆ ಶಾಲೆಗೆ ಸೇರಿದ ದಿನಗಳು....

ನಿಮಗೆಲ್ಲಾ ಶಾಲೆಯ ಮೊದಲ ದಿನ ನೆನಪಿರಬೇಕಲ್ಲಾ? ನನಗಂತೂ ಈಗಲೂ ಕಣ್ಣ ಮುಂದೆ ಬಣ್ಣದ ಚಿತ್ರದಂತೆ ಸರಿದಾಡುತ್ತಿದೆ ಆ ದಿನ... ಹುಟ್ಟಿದ ಮೊದಲ ಆರು ವರ್ಷಗಳು ಅಪ್ಪ-ಅಮ್ಮನ ಜೊತೆ ಆರಾಮವಾಗಿ ಕಳೆದುಹೋಗಿತ್ತು. ಶಕ್ತಿಮಾನ್ ಹಾಗೂ ಕನ್ನಡ ಸಿನೆಮಾದ ಹೊಡೆದಾಟದ ದೃಶ್ಯಗಳಿಂದ ಪ್ರಭಾವಿತನಾಗಿ ಬಾಯಲ್ಲಿ ಡಿಶೂಂ ಡಿಶೂಂ ಅನ್ನುತ್ತಾ, ಕೈ ಕಾಲು ಬೀಸುತ್ತಾ ಮನೆ, ಅಂಗಳ, ತೋಟಗಳಲ್ಲೆಲ್ಲಾ ಸ್ವಚ್ಛಂದವಾಗಿ ನನ್ನ ಪಾಡಿಗೆ ಆಟಾಡಿಕೊಂಡಿದ್ದೆ. ಬೆಳಗ್ಗೆ ಬೆಲ್ಲ-ಬೆಣ್ಣೆಯ ಜೊತೆ ಅಮ್ಮ ಮಾಡುತ್ತಿದ್ದ ದೋಸೆ, ರೊಟ್ಟಿ, ಚಪಾತಿಗಳು, ಅಪ್ಪನ ಜೊತೆ ಅಡ್ಡಾಡುತ್ತಿದ್ದ ಹಸಿರು ಹಸಿರು ಅಡಿಕೆ ತೋಟ, ಅಲ್ಲಿ ಕುತೂಹಲ ಹುಟ್ಟಿಸುತ್ತಿದ್ದ ಏಡಿಕುಣಿ, ಡುರ್ರ್ ಎಂದು ಘರ್ಜಿಸಿ ಹೆದರಿಸುತ್ತಿದ್ದ ನೀರು ಬಿಡುವ ಮೋಟರ್, ಸಂಜೆ ಅಪ್ಪ ತರುತ್ತಿದ್ದ ಕಂಬಾರ್ ಕಟ್(ಕಡ್ಲೆ ಮಿಠಾಯಿ), ನಿಂಬೆಹುಳಿ ಚಾಕ್ಲೇಟ್, ಆಗಾಗ  ಅಮ್ಮನ ಜೊತೆ ಹೋಗಿ ನೋಡುತ್ತಿದ್ದ ತೀರ್ಥಹಳ್ಳಿ ಪೇಟೆ.... ಅದೊಂದು ಪುಟ್ಟ, ಸುಂದರ ಪ್ರಪಂಚ. 

ಹೀಗಿರುವಾಗ ಅದೊಂದು ಘೋರ ದಿನ ಬಂದೇ ಬಿಟ್ಟಿತು. ಶಾಲೆಗೆ ಸೇರಬೇಕಾದ ದಿನ! ಬೆಳಗ್ಗೆ ಬೇಗ ಎಬ್ಬಿಸಿದ ಅಮ್ಮ ಒಳ್ಳೆಯ ಅಂಗಿ-ಚಡ್ಡಿ ತೊಡಿಸಿ, ಪೌಡರ್ ಹಚ್ಚಿ, ಕುಂಕುಮ ಇಡಿಸಿ ನನ್ನನ್ನ ತಯಾರು ಮಾಡಿದಳು. ಮೊನ್ನೆಯಷ್ಟೇ ತಂದ ಹೊಚ್ಚ ಹೊಸ, ಬಣ್ಣದ ಬ್ಯಾಗ್ ಗೆ ಹೊಸ ಸ್ಲೇಟು-ಕಡ್ಡಿ (ಬಳಪ), ನೀರಿನ ಬಾಟಲಿ, ವರೆಸೋ ಬಟ್ಟೆ ಎಲ್ಲಾ ತುಂಬಿ ನನ್ನ ಬೆನ್ನಿಗೇರಿಸಿದಳು. ಅಪ್ಪನ ಕೈ ಹಿಡಿದು ಹೊರಟಾಗ ಗೇಟಿನ ತನಕ ಬಂದು ಟಾಟಾ ಮಾಡಿ ಕಳಿಸಿದಳು. ಸಾಲು ಕಂಬಗಳ ಬೇಲಿಯ ನಡುವಿದ್ದ ಗೇಟನ್ನ ದಾಟಿ ಶಾಲೆಯ ಆವರಣದೊಳಗಡಿಯಿಡುತ್ತಿದ್ದಂತೆಯೇ ಅಪ್ಪನ ಕೈ ಹಿಡಿದಿದ್ದ ನನ್ನ ಕೈಗಳ ಹಿಡಿತ ಬಿಗಿಯಾಯಿತು. ಅಲ್ಲಿ ನಮ್ಮನೆಗಿಂತ ಮೂರು ಪಟ್ಟು ದೊಡ್ಡದಿರುವ, ಸಾಲು ಸಾಲು ಕೊಠಡಿಗಳ ಶಾಲೆ, ಯೂನಿಫಾಂ ತೊಟ್ಟು ಕಾರಿಡಾರ್ ಮೇಲೆ ಓಡಾಡುತ್ತಿರುವ ಮಕ್ಕಳು, ಆಫೀಸ್ ರೂಮೆದುರು ನಿಂತಿರುವ ಬಿಗಿಮುಖದ ಮೇಷ್ಟ್ರು... ಹಿಂದೆಂದೂ ನೋಡದ ಈ ಅಪರಿಚಿತ ದೃಶ್ಯಗಳು ದಿಗಿಲು ಹುಟ್ಟಿಸಿದವು. ಅಪ್ಪ ನೇರವಾಗಿ ಆಫೀಸ್ ರೂಮೊಳಗೆ ನಡೆದ. ಅಲ್ಲಿ ಕೂತಿದ್ದರು ಹೆಡ್ ಮೇಷ್ಟ್ರು. ಮೊದಲು ಅಪ್ಪನ ಜೊತೆ ಮಾತಾಡಿದವರು ಆಮೇಲೆ ನನ್ನನ್ನ ಕೇಳಿದರು:
'ಏನೋ? ಇಪ್ಪತ್ತರ ತನಕ ಮಗ್ಗಿ ಬರುತ್ತಂತೆ ಹೌದಾ?'
ನನಗೆ 'ಹೂಂ' ಅನ್ನಲೂ ಆಗದಷ್ಟು ಭಯ! ನನ್ನ ದಿಗಿಲುಬಿದ್ದ ಮುಖವನ್ನ ನೋಡಿ ನಗುತ್ತಾ, ನನ್ನ ಕೈಗೊಂದು ಪುಸ್ತಕ ಕೊಟ್ಟರು. ಹುಲಿಮುಖದ ಚಿತ್ರವಿರುವ ಮುಖಪುಟವಿದ್ದ ಒಂದನೇ ತರಗತಿಯ ಪಠ್ಯ ಪುಸ್ತಕವದು. ಅದನ್ನ ಬ್ಯಾಗಿನೊಳಗಿಟ್ಟುಕೊಟ್ಟ ಅಪ್ಪ ನನ್ನನ್ನು ಒಂದನೇ ತರಗತಿಯ ಕೊಠಡಿಯೊಳಗೆ ಕೂರಿಸಿ 'ಸಂಜೆ ಬಂದು ಕರ್ಕೊಂಡೋಗ್ತೀನಿ ಆಯ್ತಾ?' ಅಂತ ಹೇಳಿ ಹೊರನಡೆದ.  ತುಂಬಿ ನಿಂತಿದ್ದ ಕಣ್ಗಳಲ್ಲೇ ಒಮ್ಮೆ ಸುತ್ತ ನೋಡಿದೆ. ಮರದ ಹಲಗೆಯ ಮೇಲೆ ಕೂತು ದೊಡ್ಡ ದನಿಯಲ್ಲಿ ಮಾತಾಡುತ್ತಾ, ಒಬ್ಬರಿಗೊಬ್ಬರು ಎಳೆದಾಡುತ್ತಾ, ಗಲಾಟೆ ಮಾಡುತ್ತಾ ಕೂತಿರುವ ನನ್ನದೇ ವಯಸ್ಸಿನ ಹತ್ತಾರು ಅಪರಿಚಿತ ಮುಖಗಳು....

ಅಪ್ಪ ಇನ್ನೂ ಶಾಲೆಯ ಗೇಟ್ ದಾಟಿರಲಿಲ್ಲ. ಅಷ್ಟು ಹೊತ್ತು ಕಷ್ಟದಿಂದ ತಡೆದಿಟ್ಟುಕೊಂಡಿದ್ದ ಅಳುವೆಲ್ಲಾ ಕಿತ್ತುಕೊಂಡುಬಂದು "ಅಪ್ಪಾ....ನಾನೂ ಬರ್ತೀನಿ.. " ಅಂತ ಅಳುತ್ತಾ ಅಪ್ಪನ ಹಿಂದೆಯೇ ಓಡಿದೆ! ಅಪ್ಪ ಏನೇನೋ ಬಣಿಸಿ ನೋಡಿದ. ಏನೇ ರಮಿಸಿದರೂ ನಾನು ಒಪ್ಪಲಿಲ್ಲ.ಅಪ್ಪ ಕೊನೆಗೂ ಸೋತು 'ಸರಿ ನಾಳೆಯಿಂದ ಬಂದ್ರಾಯ್ತು ಬಾ' ಅಂತ ಮನೆಗೆ ವಾಪಾಸ್ ಕರೆದುಕೊಂಡು ಬಂದ. ಆದರೆ ಮರುದಿನವೂ ಇದೇ ಘಟನೆ ಮರುಕಳಿಸಿದಾಗ ಅಕ್ಷರಷಃ ವ್ಯಗ್ರಳಾಗಿದ್ದು ಮಾತ್ರ ಅಮ್ಮ! ಹೋದ ಚಂದದಲ್ಲೇ ಮರಳಿಬರುತ್ತಿದ್ದ ನನಗಾಗಿ ದಾಸವಾಳ ಗಿಡದ ಬರಲು (ಕೋಲು) ಹಿಡಿದು ಕಾಯುತ್ತಿದ್ದಳು! 'ಬರಲು ಸೇವೆ' ಬಾಗಿಲಲ್ಲೇ ಆರಂಭವಾಯಿತು. ಅತ್ತು, ಮುಖ ಕೆಂಪಾಗಿ ನಿಂತಿದ್ದ ನನಗೆ ನಾಲ್ಕು ಬಾರಿಸಿ, ಕೈಗೊಂದು ಸ್ಲೇಟು-ಕಡ್ಡಿ ಕೊಟ್ಟು " ಸಂಜೆ ತನಕ ಅಆಇಈ, ಮಗ್ಗಿ, ಕಾಗುಣಿತ ಬರೀತ ಕೂತಿರು. ಶಾಲೆಗೆ ಹೋಗ್ದಿದ್ದಕ್ಕೆ ಇದೇ ಶಿಕ್ಷೆ ನಿಂಗೆ!"  ಎಂದು ಅಬ್ಬರಿಸಿದಳು. ಮಾರನೇ ದಿನ "ಇವತ್ತು ಅವನ್ನ ನಾನು ಶಾಲೆಗೆ ಬಿಡ್ತೀನಿ" ಅಂತ ಮತ್ತೊಂದು ಬರಲು ಹಿಡಿದು ಹೊರಟೇ ಬಿಟ್ಟಳು! ಮನೆಯಿಂದ ಶಾಲೆಯ ತನಕ ರಸ್ತೆಯುದ್ದಕ್ಕೂ ಅಳುತ್ತಾ ಓಡುತ್ತಿದ್ದ ನನ್ನನ್ನೂ, ಕೋಲು ಹಿಡಿದು ಹಿಂದೆಯೇ ಅಟ್ಟಿಸಿಕೊಂಡು ಬರುತ್ತಿದ್ದ ಅಮ್ಮನನ್ನೂ ಇಡೀ ಅರಳಸುರಳಿ ಊರಿಗೆ ಊರೇ ಮುಸಿಮುಸಿ ನಗುತ್ತಾ ನೋಡುತ್ತಿತ್ತು! 

ಅಂತೂ ಇಂತೂ ಅಮ್ಮನ ಏಟಿಗೆ ಹೆದರಿ ನಾನು ಶಾಲೆಗೆ ಹೋಗುವಂತಾಯಿತು. ಎಷ್ಟೇ ತಡೆದರೂ ಮನೆಯ ನೆನಪುಗಳು ನಿಲ್ಲುತ್ತಿರಲಿಲ್ಲ.  ಆಗಾಗ ಅದು ಅಳುವಾಗಿ ಉಕ್ಕಿ ಬರುತ್ತಿತ್ತು. ದಪ್ಪ ಮೀಸೆಯ ಮೇಷ್ಟರುಗಳಂತೂ ನಮಗೆ ಹೊಡೆಯಲೆಂದೇ ಈ ಭೂಮಿಗೆ ಬಂದವರಂತೆ ಕಾಣುತ್ತಿದ್ದರು. ಅದೊಂದು ಸಲ ಪಾಠ ಮಾಡುತ್ತಿದ್ದ ಯೋಗೀಶ್ವರಪ್ಪ ಮೇಷ್ಟ್ರನ್ನ ಮನೆಯ ಗುಂಗಿನಲ್ಲಿ 'ಅಪ್ಪ' ಅಂತ ಕೂಗಿ ನಗೆಪಾಟಲಾಗಿದ್ದೆ! ಅಪರಿಚಿತ ಮುಖಗಳ ನಡುವೆ ಶಾಲೆ ಮುಗಿಯುವ ಸಮಯದ 'ಲಾಂಗ್ ಬೆಲ್'ಗಾಗಿ ಕಾಯುತ್ತಾ ಕೂತಿರುತ್ತಿದ್ದೆ. ಅದರೆ ಮುಂದೆ ಅವೇ ಅಪರಿಚಿತ ಮುಖಗಳು ನನ್ನ ಗೆಳೆಯರಾದವು. ಕೈ ಹಿಡಿದು ಆಟದ ಬೈಲಿಗೆ ಕರೆದೊಯ್ದವು. ಜೊತೆಯಲ್ಲಿ ಆಡಿದವು. ನೆಲ್ಲಿಕಾಯಿ, ಸಂಪಿಗೆ ಹಣ್ಣು ತಂದು ತಿನ್ನಲು ಕೊಟ್ಟವು. ಜಗಳಾಡಿ ಅಳಿಸಿದವು, ತಮಾಷೆಮಾಡಿ ನಗಿಸಿದವು. ಮುಂದೆ ಶಾಲೆ ಆತ್ಮೀಯವಾಯಿತು. ಕೊನೆಗೆ ಏಳನೇ ತರಗತಿ ಮುಗಿಸಿ ಹೊರಟುನಿಂತಾಗ ಥೇಟ್ ನನ್ನ ಮನೆಯಂತೆಯೇ ಕಂಡಿತು. ವರ್ಷಗಳೇ ಕಳೆದರೂ ಇಂದಿಗೂ ಹಚ್ಚ ಹಸಿರಾಗಿರುವ, ಚಂದದ ನೆನಪಾಗಿ ಉಳಿದುಬಿಟ್ಟಿತು....

                    ************

ಬಹುಷಃ ನೆನಪುಗಳಷ್ಟು ಗಾಢವಾಗಿ ಮನುಷ್ಯನನ್ನು ಮತ್ತೇನೂ ಕಾಡಲಾರದೇನೋ. ಹಿಂದೆಂದೋ ಜೊತೆಯಾಗಿ ನಕ್ಕ ನೆನಪುಗಳು ಇಂದು ಕಂಬನಿಯಾಗಿ ಕಾಡುತ್ತವೆ; ಅತ್ತ ನೆನಪುಗಳು ತುಟಿಯಂಚಲ್ಲಿ ಮುಗುಳ್ನಗೆಯಾಗಿ ಮೂಡುತ್ತವೆ. ಒಟ್ಟಿನಲ್ಲಿ ಎಂದೋ ಸವಿದ ಸವಿಯೊಂದನ್ನ ಮತ್ತೆ ನಾಲಿಗೆಯಂಚಲ್ಲಿ ಮೂಡಿಸಿ ಹೃದಯದ ಹಸಿವನ್ನು ಹೆಚ್ಚಿಸುತ್ತವೆ ಈ ಹಾಳು ನೆನಪುಗಳು...

ಹೊಸ ಕಂಪನಿಗೆ ಸೇರಿ ಒಂದು ವಾರವಷ್ಟೇ ಆಗಿದೆ. ಮೊದಲೇ ಹೇಳಿದಂತೆ ಹೊಸ ವಾತಾವರಣದ ಈ ಮೊದಮೊದಲ ದಿನಗಳೆಂದರೆ ನೆನಪುಗಳ ಪರ್ವ ಕಾಲ. ಹಳೆಯ ಕಂಪನಿ ಬಿಟ್ಟು ಇಲ್ಲಿ ಸೇರುವ ಮಧ್ಯಂತರದ ಮೂರು ವಾರ ಊರಿನಲ್ಲಿದ್ದು ಬಂದುದ್ದರಿಂದ ಮನೆಯ ನೆನಪುಗಳೂ ಇವಕ್ಕೆ ಜೊತೆ ಸೇರಿಕೊಂಡು ಮನಸ್ಸು ಅಕ್ಷರಷಃ ಮಗುವಾಗಿಬಿಟ್ಟಿದೆ. ಬೆಳಗ್ಗೆ ಎದ್ದೊಡನೆಯೇ 'ನಾನಿವತ್ತು ಆಫೀಸಿಗೆ ಹೋಗಲ್ಲ' ಅಂತ ಹಠಮಾಡತೊಡಗುತ್ತದೆ. ಅದನ್ನ ರಮಿಸುತ್ತಾ,  ಸಮಾಧಾನ ಮಾಡುತ್ತಾ ದಟ್ಟ ಟ್ರಾಫಿಕ್ನ ನಡುವೆ, ರಶ್ ಬಸ್ನಲ್ಲಿ ಒಂಟಿ ಕಾಲಲ್ಲಿ ನಿಂತು ಆಫೀಸ್ ಗೆ ಬರುವಷ್ಟರಲ್ಲಿ ಸಾಕುಸಾಕಾಗುತ್ತದೆ. ಇಲ್ಲಿ ನೂರಾರು ಅಪರಿಚಿತ ಮುಖಗಳು. ಕೇಳೇ ಇರದ ರೂಲ್ಸ್ ಗಳು. ತರಹೇವಾರಿ ಯಂತ್ರಗಳು. ವಿಭಿನ್ನ ಹಾವಭಾವಗಳು. ಸಂತೆಯಂತೆ ಸದಾ ಗಿಜಿಗುಡುವ ಸಂದಣಿ. ಇದೆಲ್ಲದರ ನಡುವೆ ಗೆಳೆಯರಿಲ್ಲದೆ ಒಂಟಿಯಾಗಿ ಮುದುಡುವ ಮನಸ್ಸು ಮತ್ತೆ ಮತ್ತೆ ಓಡುವುದು ಒಮ್ಮೆ ಬಾಲ್ಯಕ್ಕೆ,  ಮತ್ತೊಮ್ಮೆ ಹಳೇ ಕಂಪನಿಗೆ!

ಐದು ನಿಮಿಷ ತಡವಾಗಿ ಹೋದರೂ ಆಫೀಸ್ನಲ್ಲಿ ತಿಂಡಿ ಸಿಗುವುದಿಲ್ಲ. ಉಪವಾಸ ಆಚೆ ಬರುವಾಗ 'ತಿಂಡಿಗೆ ಬಾರೋ' ಅಂತ ಕರೆಯುವ ಅಮ್ಮನ ನೆನಪಾಗುತ್ತದೆ.
ಎಷ್ಟೇ ತಡವಾಗಿ ಹೋದರೂ 'ಕರೆದ್ಕೂಡ್ಲೇ ಬರೋಕಾಗಲ್ಲ' ಅಂತ ಬಯ್ಯುತ್ತಲೇ ತಟ್ಟೆಗೆ ತಿಂಡಿ ಹಾಕಿ 'ಕಾಫಿ ಬೇಕಾ, ಹಾಲಾ?' ಎಂದು ಕೇಳುವ ಅವಳ ಪ್ರೀತಿಯ ದನಿ ಕಿವಿಯಲ್ಲಿ ಗುಂಯ್ಗುಟ್ಟುತ್ತದೆ...

ಮೊದಲ ಉದ್ಯೋಗ ಕೊಟ್ಟು, ಕೆಲಸ ಕಲಿಸಿ, ಸಂಬಳ ನೀಡಿ, ನಾಲ್ಕು ವರ್ಷಗಳ ಕಾಲ ತನ್ನ 'Family'ಯ ಸದಸ್ಯನಾಗಿ ಸಲಹಿದ ಸಂಸ್ಥೆ ಹೆಜ್ಜೆಗೊಮ್ಮೆ ನೆನಪಾಗುತ್ತದೆ. ಹತ್ತಾರು ಮುಖಗಳ ನಡುವೆಲ್ಲೋ 'ಅಲ್ಲಿಯ' ಗೆಳೆಯನನ್ನು ಕಂಡಂತಾಗುತ್ತದೆ. ಯಾರದೋ ಮಾತಿನ ಧಾಟಿ ಇನ್ಯಾರನ್ನೋ ನೆನಪಿಸುತ್ತದೆ. ಹಿಂಡು ಹಿಂಡು ಜನರ ನಡುವಲ್ಲಿ ನನ್ನವರನ್ನು ಹುಡುಕಿ ಸೋಲುತ್ತೇನೆ. ಖಾಲಿ ಟೇಬಲ್ನಲ್ಲಿ ಕೂತು ಉಣ್ಣುವಾಗ ಸದಾ ಜೊತೆಗಿರುತ್ತಿದ್ದ ಗೆಳೆಯರ ದಂಡು ಕಣ್ಣೆದುರು ಮೂಡುತ್ತದೆ. ಎಲ್ಲೋ  ಹಸಿರುಡುಗೆ ತೊಟ್ಟ ಆಕೃತಿಯೊಂದು ಕಂಡಾಗ 'ಅವಳೇ' ಎದುರು ನಿಂತಂತಾಗುತ್ತದೆ......

                    **************
ಹೆಚ್ಚುತ್ತಿರುವ ಜವಾಬ್ದಾರಿಗಳಿಗನುಗುಣವಾಗಿ ಹೆಚ್ಚಿಸಿಕೊಳ್ಳಲೇಬೇಕಾಗಿರುವ ಸಂಪಾದನೆ, ಬೆಳೆಸಲೇಬೇಕಾಗಿರುವ ಕರಿಯರ್, ತಲುಪಲೇಬೇಕಾಗಿರುವ ಗೋಲ್ ಗಳು, ಕಟ್ಟಲೇಬೆಕಾಗಿರುವ ಮನೆ.... ಈ ಜವಾಬ್ದಾರಿಗಳು ಮನುಷ್ಯನನ್ನು ಎಷ್ಟೊಂದು ಅಲೆಸುತ್ತವೆ ಅಲ್ವಾ? ಒಂದು ಕಡೆ ನೆಲೆಯಾಗಿ ನಿಲ್ಲುವುದಕ್ಕೆ ಬಿಡುವುದೇ ಇಲ್ಲ. 'ಇದು ನನ್ನ ಜಾಗ' ಅನ್ನಿಸುವ ಹೊತ್ತಿಗೆ ಅಲ್ಲಿಂದ ಕಾಲ್ಕೀಳುವ ಸಮಯ ಬಂದುಬಿಡುತ್ತದೆ....

ಇವೆಲ್ಲಾ ನನ್ನ ಖಾಸಗೀ ಭಾವನೆಗಳು, ನನಗೆ ಮಾತ್ರ ಸಂಬಂಧಿಸಿದವು. ಇವನ್ನೆಲ್ಲಾ ಹೀಗೆ ಹೇಳಿಕೊಳ್ಳುವುದು ಸರಿಯೋ, ತಪ್ಪೋ ಗೊತ್ತಿಲ್ಲ. ಆದರೆ ಒಳಗೆ ಮಡುಗಟ್ಟಿ ನಿಂತ ಭಾವನೆಗಳನ್ನ ಕೊಂಚವಾದರೂ ಹೊರಹರಿಸಿ ಅಷ್ಟಾದರೂ ಹಗುರಾಗಲೆಂದು ಇಷ್ಟೆಲ್ಲಾ ಗೀಚಿದ್ದೇನೆ, ಇದರಲ್ಲಿ ಕೆಲವು ನಿಮ್ಮದೂ ಆಗಿರಬಹುದೆಂಬ ನಂಬಿಕೆಯೊಂದಿಗೆ.....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...