ಬುಧವಾರ, ಜುಲೈ 26, 2017

ಹಾರಾಟದ ಸುತ್ತಮುತ್ತ..




ಪ್ರತಿದಿನ ಬೆಳಗ್ಗೆ ಬೆಂಗಳೂರು-ಹೊಸೂರು ಮುಖ್ಯರಸ್ತೆಯ ರೂಪೇನ ಅಗ್ರಹಾರ ನಿಲ್ದಾಣದಲ್ಲಿ ನಿಂತು ಕಂಪನಿಯ ವಾಹನಕ್ಕಾಗಿ ಕಾಯುವುದು ನನ್ನ ದಿನಚರಿ. 'ಹೊಸೂರು ರೋಡ್' ಎಂದೇ (ಕು)ಖ್ಯಾತವಾದ ಈ ರಸ್ತೆಯನ್ನು ದಾಟುವುದಕ್ಕೂ, ಉಕ್ಕಿ ಹರಿಯುತ್ತಿರುವ ನದಿಯೊಂದನ್ನು ಈಜಿ ದಡಸೇರುವುದಕ್ಕೂ ಹೆಚ್ಚಿನ ವ್ಯತ್ಯಾಸಗಳೇನೂ ಇಲ್ಲ. ಎರೆಡೂ ನಿಲ್ಲದ ಪ್ರವಾಹಗಳೇ! ಸಿಲ್ಕ್ ಬೋರ್ಡ್ ಎನ್ನುವ ಬೃಹತ್ ಜಂಕ್ಷನ್ ನಿಂದ ಕಟ್ಟೆಯೊಡೆದು ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೊಸೂರುಗಳ ಕಡೆಗೆ ಧಾವಿಸುವ ಸಾವಿರಾರು ಬೈಕು, ಕಾರು, ಬಸ್ಸೇ ಇತ್ಯಾದಿ ವಾಹನಗಳು ಭರಗುಡುತ್ತಾ ಓಡುತ್ತಿದ್ದರೆ ಈ ದ್ವಿಪಥ ರಸ್ತೆ ಅಕ್ಷರಶಃ ಬಿಸಿಲು, ಧೂಳು, ಹೊಗೆಗಳಿಂದ ಬೇಯುವ ಅಗ್ನಿಕುಂಡವಾಗಿಬಿಡುತ್ತದೆ. ಇಂತಹಾ ನೂರಾರು ರಸ್ತೆಗಳು ಒಟ್ಟು ಮೊತ್ತವೇ ಆಗಿರುವ ಬೆಂಗಳೂರಿಗೆ ಇದೇನು ಹೆಚ್ಚಲ್ಲ ಬಿಡಿ. ಇಲ್ಲಿ ನಿಂತು ಕಾಯುವಾಗೆಲ್ಲಾ ನನ್ನನ್ನು ವಿಚಿತ್ರ ಬಯಕೆಯೊಂದು ಕಾಡುತ್ತದೆ.

ಮನುಷ್ಯನಿಗೂ ಹಾರಲು ಬರಬೇಕಿತ್ತು!

ಚಿಕ್ಕವನಿದ್ದಾಗ ದೂರ್ ದರ್ಶನ್ ದಲ್ಲಿ 'ಜೈ ಹನುಮಾನ್' ಧಾರಾವಾಹಿಯಲ್ಲಿ ಆಂಜನೇಯ ಬಾನಿಗೆ ನೆಗೆದು ಹಾರಾಡುವುದನ್ನು ನೋಡುವಾಗಲೂ ಹೀಗೇ ಅನಿಸುತ್ತಿತ್ತು. ಹ...  ಒಂದು ನಿಮಿಷ. ರೆಕ್ಕೆಯಿಲ್ಲದಿದ್ದರೂ ವಿಧಾನಸೌಧದ ಸೂರು ಕಿತ್ತುಹೋಗುವಂತೆ ಹಾರಾಡುವ, ನೆಗೆದಾಡುವ ರಾಜಕಾರಣಿಗಳನ್ನು ನಾನೂ ನೋಡಿದ್ದೇನೆ. ಆದರೆ ನಾನು ಹೇಳುತ್ತಿರುವುದು ಆ ಹಾರಾಟದ ಬಗ್ಗೆಯಲ್ಲ; ಹಾತೆಹುಳಗಳಿಂದ ಹಿಡಿದು ದೈತ್ಯ ಹದ್ದುಗಳತನಕ ನೂರಾರು ಜಾತಿಯ ಕೀಟ-ಪಕ್ಷಿಗಳು ಸಣ್ಣ ಸದ್ದನ್ನೂ ಮಾಡದೇ ರೆಕ್ಕೆ-ಪುಕ್ಕ ಬಿಚ್ಚಿ ಬಾನಿನೆತ್ತರದಲ್ಲಿ ತೇಲಾಡುತ್ತಾವಲ್ಲಾ, ಆ ಹಾರಾಟದ ಬಗ್ಗೆ. ನಾವು ಮನುಷ್ಯರೂ ಹೀಗೇ ಹಾರುವಂತಿದ್ದರೆ ನಮ್ಮ ಪೃಥ್ವಿಯ ಎಷ್ಟೋ ಸಮಸ್ಯೆಗಳು ಹುಟ್ಟುತ್ತಲೇ ಇರಲಿಲ್ಲ ಅಲ್ವಾ?!

ನಮ್ಮ ಕಥೆಗಳನ್ನೇ ತೆಗೆದುಕೊಳ್ಳೋಣ. ನಾವು ಬೆಳಗ್ಗೆ ಎದ್ದವರೇ ಶಾಲೆಗೋ, ಕಾಲೇಜುಗೋ, ಆಫೀಸಿಗೋ ಹೊರಡುತ್ತೇವೆ. ಇನ್ನೂ ತಿಂಡಿ ತಿಂದಿಲ್ಲ, ಟೈ ಕಟ್ಟಿಕೊಂಡಿಲ್ಲ, ಶೂ ಪಾಲಿಶ್ ಆಗಿಲ್ಲ. ಶಾಲೆಯ/ಕಛೇರಿಯ ಬಸ್ಸು/ಕ್ಯಾಬು ಬರುವುದರೊಳಗೆ ಎಷ್ಟೆಲ್ಲಾ ಕೆಲಸ ಮುಗಿಸಿ ತಯಾರಾಗಬೇಕು. ಆ ಗಡಿಬಿಡಿಯಲ್ಲಿ ಏನೇನ್ನೋ ಮರೆತುಬಿಡುತ್ತೇವೆ. ವಿದ್ಯಾರ್ಥಿಗಳು ಅರ್ಧರಾತ್ರೆಯ ತನಕ ಕುಳಿತು ಬರೆದಿದ್ದ ಹೋಂ ವರ್ಕನ್ನು ಟೇಬಲ್ ಮೇಲೇ ಬಿಟ್ಟುಹೋಗುತ್ತಾರೆ. ಕಛೇರಿಯ ಯಾವುದೋ ಪ್ರಮುಖ ಫೈಲು ಸೋಫಾ ಮೇಲೇ ಉಳಿದುಬಿಟ್ಟಿರುತ್ತದೆ. ಬಸ್ ಪಾಸು ಯಾವುದೋ ಪ್ಯಾಂಟಿನ ಜೇಬಿನಲ್ಲಿ ಅವಿತಿರುತ್ತದೆ. ಐಡಿ ಕಾರ್ಡು ಮತ್ತೆಲ್ಲೋ ಕೈತಪ್ಪುತ್ತದೆ. ಬಸ್ಸಿನಲ್ಲಿ 'ಪಾಸ್' ಎಂದು ಹೇಳಿ ಜೇಬಿನಲ್ಲಿ ಪಾಸ್ ಇಲ್ಲದೇಹೋದಾಗ ಕಂಡಕ್ಟರ್ 'ಸಂಸ್ಕೃತ'ದಲ್ಲಿ ಬುದ್ಧಿಮಾತು ಹೇಳುತ್ತಾನೆ. ಹೋಂ ವರ್ಕ್ ತಂದಿಲ್ಲವೆಂದೊಡನೆಯೇ ಶಾಲೆಯ ಮಾಸ್ತರು ಕೈಯ್ಯಲ್ಲಿರುವ ಬೆತ್ತವನ್ನು ಟಿಪ್ಪೂಸುಲ್ತಾನನ ಖಡ್ಗದಂತೆ ಝಳಪಿಸುತ್ತಾರೆ. ಆಫೀಸಿನಲ್ಲಿ ಬಾಸು ಮರೆತ ಫೈಲನ್ನು ನೆನೆನೆನೆದು ತಾಂಡವ ನೃತ್ಯವನ್ನೇ ಆಡುತ್ತಾನೆ. ಇದಕ್ಕೆಲ್ಲಾ ಮೂಲಕಾರಣ ನಮಗಾಗಿ ಕಾಯದ ಕ್ಯಾಬು ಹಾಗೂ ಬಸ್ಸುಗಳು!

ಇರುವ ಒಂದೇ ಒಂದು ಭೂಮಿಯನ್ನು ಈ ವಾಹನಗಳು ಗಬ್ಬೆಬ್ಬಸುತ್ತಿರುವ ಬಗ್ಗೆ ಹೊಸತಾಗಿ ಏನೂ ಹೇಳಬೇಕಿಲ್ಲ. ವಿಜ್ಞಾನಿಗಳ ಮಾತನ್ನೇ ನಂಬುವುದಾದರೆ ಇನ್ನು ಮೊವತ್ತು-ನಲವತ್ತು ವರ್ಷಗಳಲ್ಲಿ ಪ್ರಪಂಚದ ಪೆಟ್ರೋಲ್, ಡೀಸೆಲ್ ಗಳೆಲ್ಲಾ ಮುಗಿದುಹೋಗುತ್ತವೆ. ದುಬೈನ ಕಟ್ಟಕಡೆಯ ಬಾವಿಯಲ್ಲೂ ಪೆಟ್ರೋಲ್ ಬತ್ತಿಹೋಗಿ ಫುಸ್ಸೆನ್ನುವ ಗಾಳಿಯೊಂದೇ ಉಳಿಯುವ ಆ ದಿನವನ್ನು, ವಿಪರೀತ ಎನ್ನುವಷ್ಟು ವಾಹನಗಳ ಮೇಲೆ ಅವಲಂಬಿತವಾಗಿರುವ ನಾವು-ನೀವು ಕಲ್ಪಿಸಿಕೊಳ್ಳುವುದೂ ಕಷ್ಟ. ವಿದೇಶಗಳಲ್ಲಿ, ನಮ್ಮ ಕೆಲವು ಪಟ್ಟಣಗಳಲ್ಲಿ ವಿದ್ಯುತ್ ಚಾಲಿತ ವಾಹನಗಳು ಬರಬಹುದು. ಆದರೆ ಮೊಬೈಲನ್ನು ಚಾರ್ಜ್ ಮಾಡಿಕೊಳ್ಳುವುದಕ್ಕೇ ಪರದಾಡುವಷ್ಟು ಕರೆಂಟ್ ನ ಅಭಾವವಿರುವ ನಮ್ಮ ಹಳ್ಳಿಗಳ ಕಥೆ? ಅವರೆಲ್ಲಾ ಮತ್ತೆ ಕುದುರೆ, ಎತ್ತುಗಳ ಕಾಲಿಗೇ ಬೀಳಬೇಕು! ಇದೆಲ್ಲವನ್ನೂ ಯೋಚಿಸಿದಾಗ 'ಮಿಲಿಯನ್ ಡಾಲರ್' ಪ್ರೆಶ್ನೆಯೊಂದು ನನ್ನೊಳಗೆ ಮೂಡುತ್ತದೆ:

ಕಾಗೆ, ಗೂಬೆಗಳಿಗೂ ಇರುವ ರೆಕ್ಕೆ ಮನುಷ್ಯನಿಗೇಕಿಲ್ಲ?

ಒಮ್ಮೆ ಕಲ್ಪನೆ ಮಾಡಿಕೊಳ್ಳೋಣ. ಹಾರುವ ಶಕ್ತಿಯೊಂದಿದ್ದರೆ ಬೆಳಗ್ಗೆ ಒಂಭತ್ತಕ್ಕೋ, ಹತ್ತಕ್ಕೋ ಶುರುವಾಗುವ ಕಛೇರಿ, ಶಾಲೆಗಾಗಿ ಏಳೂ ಮೊವತ್ತಕ್ಕೇ ಮನೆಬಿಡುವ ಅಗತ್ಯವಿರುತ್ತಿರಲ್ಲಿಲ್ಲ. ನಿಧಾನಕ್ಕೆ ಎದ್ದು ಬೇಕಾದಷ್ಟು ಬಾರಿ ಆಕಳಿಸಬಹುದಿತ್ತು. ಬಿಸಿಬಿಸಿ ಕಾಫಿಯನ್ನು ಮೆಲ್ಲಗೆ ಹೀರುತ್ತಾ ನ್ಯೂಸ್ ಪೇಪರ್ ನ ಕಟ್ಟಕಡೆಯ ಮೂಲೆಯಲ್ಲಿರುವ ಜಾಹೀರಾತನ್ನೂ ಬಿಡದಂತೆ ಸಕಲ ಜ್ಞಾನವನ್ನೂ ತಲೆಯೊಳಗೆ ತುಂಬಿಕೊಳ್ಳಬಹುದಿತ್ತು. ತಿಂಡಿ ಬೇಯಿಸಿತ್ತಿರುವ ಹೆಂಡತಿಗೆ ತಿಳಿಯದಂತೆ ಎರೆಡು ಸುತ್ತು 'ದಮ್' ಎಳೆಯಬಹುದಿತ್ತು. ಇಷ್ಟದ ಹಾಡನ್ನು ಕೋರಸ್ ನ ಸಮೇತ ಹಾಡಿಕೊಳ್ಳುತ್ತಾ ಸ್ನಾನ ಮಾಡಬಹುದಿತ್ತು. ಈ ಸಂಭ್ರಮಗಳೆಲ್ಲಾ ಮುಗಿದು, ಇನ್ನೇನು ಅರ್ಧಗಂಟೆಯಷ್ಟೇ ಉಳಿದಿದೆಯೆನ್ನುವಾಗ ಅಂಗಳಕ್ಕೋ, ಟೆರಾಸಿಗೋ ಬಂದು ದೀರ್ಘವಾಗಿ ಉಸಿರೆಳೆದುಕೊಂಡು, ಎರೆಡೂ ಕೈಯ್ಯನ್ನು ಪಟಪಟನೆ ಆಡಿಸಿದರಾಯಿತು, ನಮ್ಮ ಪ್ರಯಾಣ ಶುರು! ಹೊಂಡಗುಂಡಿಗಳಿಗೆ ಬರೆದುಕೊಟ್ಟಿರುವ ರಸ್ತೆಗಳು, ತೊಟ್ಟಿಗಿಂತ ಜಾಸ್ತಿ ರಸ್ತೆಯ ಮೇಲೇ ಬಿದ್ದಿರುವ ಕಸಕಡ್ಡಿಗಳು, ತೋಡಿರಾಗ ಹಾಡುತ್ತಾ ಹಾರಿಬಂದು ನಮ್ಮಿಂದ ಬಲವಂತವಾಗಿ ರಕ್ತದಾನ ಮಾಡಿಸಿಕೊಳ್ಳುವ   ಸೊಳ್ಳೆಗಳು, ರಸ್ತೆಯನ್ನೇ ಮೋರಿಯನ್ನಾಗಿಸಿಕೊಂಡು ನಿಂತಿರುವ ಕೊಳಚೆ ನೀರು.... ಇದ್ಯಾವುದರ ತಲೆಬಿಸಿಯಿಲ್ಲದೇ, ವೇಲು, ಕರ್ಚೀಫೇ ಇತ್ಯಾದಿಗಳನ್ನು ಮೂತಿಗೆ ಬಿಗಿದುಕೊಳ್ಳುವ ರಗಳೆಯಿಲ್ಲದೇ ಹಾಯಾಗಿ ಹಾರುತ್ತಾ ಆಫೀಸು/ಶಾಲೆಗಳನ್ನು ತಲುಪಬಹುದಿತ್ತು. ಹೋಗಿ ಟೆರಾಸಿನ ಮೇಲೆ 'ಲ್ಯಾಂಡ್' ಆಗಿ ಒಮ್ಮೆ ಮೇಲಕ್ಕೆ ನೋಡಿದರೆ ಬಾಸ್ ಕೂಡಾ ಸೇರಿದಂತೆ ಸೂಟು-ಬೂಟು ತೊಟ್ಟ ನೂರಾರು ಉದ್ಯೋಗಿಗಳು ಹಾರುತ್ತಾ ಬರುತ್ತಿರುವ ವಿಹಂಗಮ ದೃಶ್ಯ ಕಣ್ಣಿಗೆ ಬೀಳುತ್ತಿತ್ತು!

ಹಾರಾಟದಿಂದ ತಪ್ಪಿಹೋಗುವ ಇನ್ನೊಂದು ಅಪಾಯವೆಂದರೆ ಬೀದಿನಾಯಿಗಳ ಧಾಳಿ. ಹಗಲಿನ ಹೊತ್ತಿನಲ್ಲಿ ಪಾಪಚ್ಚಿಗಳಂತೆ ಬಿದ್ದುಕೊಂಡಿರುವ ಈ ನಿರ್ಗತಿಕ ಶ್ವಾನಗಳು ರಾತ್ರೆಯಾಗುತ್ತಿರುವಂತೆಯೇ 'ಗ್ರಾಮಸಿಂಹ'ಗಳಾಗಿಬಿಡುತ್ತವೆ. ಇಡೀ ಏರಿಯಾವನ್ನೇ ತಮ್ಮ ಸುಪರ್ದಿಗೆ ತೆಗೆದುಕೊಂಡು ಗಸ್ತು ತಿರುಗುತ್ತಾ ಎದುರಿಗೆ ಸಿಗುವ ಒಬ್ಬಂಟಿ ಯಾತ್ರಿಕರನ್ನು ಬೆದರಿಸುತ್ತವೆ. ಅದರಲ್ಲೂ ಚಿಂದಿ ಜೀನ್ಸ್, ನಾಲ್ಕಾರು ಜೇಬು-ಬಾಲಗಳಿರುವ ಕಾರ್ಗೋ ಪ್ಯಾಂಟ್ ನಂತಹಾ 'ಡಿಂಗ್ರಿ' ಉಡುಪು ತೊಟ್ಟವರು ಕಂಡರಂತೂ ಮುಗಿದೇಹೋಯಿತು, ಹೀನಾಮಾನವಾಗಿ ಬೊಗಳುತ್ತಾ ಧಾಳಿಮಾಡಿಬಿಡುತ್ತವೆ. ಹೀಗಾಗಿ ರಾತ್ರೆ ಒಬ್ಬಂಟಿಯಾಗಿ ಓಡಾಡುವರು ಹಾಗೂ 'ಡಿಂಗ್ರಿ' ವಸ್ತ್ರ ತೊಡುವವರಿಗೆ ಹಾರುವ ಶಕ್ತಿ ವರದಾನವಾಗಲಿದೆ. ಇನ್ನು ಲಕ್ಷಾಂತರ ಪತಿರಾಯರುಗಳಿಗೆ ಈ 'ಹಾರಾಟ'ದಿಂದ ಅದೆಷ್ಟು ಉಪಯೋಗವಾಗುತ್ತದೆ ಗೊತ್ತಾ? ಅವರಿನ್ನು ಪದೇ ಪದೇ ತಮ್ಮ ಹೆಂಡತಿಯನ್ನು ಶಾಪಿಂಗ್ ಗೆ ಕರೆದುಕೊಂಡು ಹೋಗುವ ಅಗತ್ಯವೇ ಇರುವುದಿಲ್ಲ. ಕ್ರೆಡಿಟ್ ಕಾರ್ಡನ್ನು ಅದರ ಪಾಸ್ ವರ್ಡಿನ ಸಮೇತ ಕೈಲಿಟ್ಟು ಕಳಿಸಿಕೊಟ್ಟರಾಯಿತು, ಮಹಿಳಾಮಣಿಗಳು ತಮ್ಮ ಪಾಡಿಗೆ ಹಾರಿಕೊಂಡು ಹೊರಟುಬಿಡುತ್ತಾರೆ.  ತಮಗೆ ಬೇಕಾದಷ್ಟು ಶಾಪಿಂಗ್ ಮಾಡಿಕೊಂಡು, ಅಂಗಡಿಯಲ್ಲಿರುವ ಅಷ್ಟೂ ವೆರೈಟಿಗಳನ್ನೂ ಆಚೆ ತರಿಸಿ, ಯಾವ ವಾಹನದ ಹಂಗಿಲ್ಲದೇ ಸ್ವತಂತ್ರವಾಗಿ ಹಾರುತ್ತಾ ಬಂದುಬಿಡುತ್ತಾರೆ. ಹಾಂ, ಈ ಒಡವೆ, ಬಟ್ಟೆ ಅಂಗಡಿಗಳ ಸೇಲ್ಸ್ ಮ್ಯಾನ್ ಗಳಿಗೆ ಮಾತ್ರ ಈ 'ಹಾರಾಟ'ದಿಂದ ತೊಂದರೆಯಾಗುತ್ತಿತ್ತೆನ್ನುವುದರಲ್ಲಿ ಸಂಶಯವೇ ಇಲ್ಲ. ಇಲ್ಲದ ಟ್ರಾಫಿಕ್ನಿಂದ ಉಳಿಯುವ ಸಮಯವನ್ನೂ ಈ ಮಹಿಳಾಮಣಿಗಳು ಅಂಗಡಿಯಲ್ಲಿ ಸೆಲೆಕ್ಷನ್ ಗೆಂದೇ ವ್ಯಯಿಸುವುದರಿಂದ ಅವರ ಶ್ರಮ ಹೆಚ್ಚಾಗುತ್ತದೆ. ಹೀಗಾಗಿ ಅವರೆಲ್ಲಾ ಒಟ್ಟಾಗಿ ನಮ್ಮೀ 'ಹಾರು ಸಿದ್ಧಾಂತ'ದ ವಿರುದ್ಧ ಹೋರಾಟನಡೆಸುವ ಅಪಾಯವೂ ಇಲ್ಲದಿಲ್ಲ.

ಹಾಗಂತ ಹಾರಾಟದಿಂದ ಬರೀ ಉಪಯೋಗಗಳು ಮಾತ್ರ ಇವೆಯೆಂದು ಹೇಳುವಂತಿಲ್ಲ. ಎಲ್ಲೆಲ್ಲಿ 'ಹಾರಾಟ' ಹೆಚ್ಚಾಗುತ್ತದೋ ಅಲ್ಲೆಲ್ಲಾ ನಿಯಮಾವಳಿಗಳು ಹುಟ್ಟಿಕೊಳ್ಳುತ್ತವೆ. ಇಲ್ಲೂ ಅಷ್ಟೇ. ಎತ್ತರದ ಟವರ್ ಗಳನ್ನು ಕಟ್ಟಿಸಿ, ಜೇಬಿಗೆ ಪೀಪಿ ಸಿಕ್ಕಿಸಿಕೊಂಡ ಟ್ರಾಫಿಕ್ ಪೋಲೀಸರನ್ನು ಅಲ್ಲಲ್ಲಿ ನಿಲ್ಲಿಸಿ ಹಾರುತ್ತಾ ಬರುವವರ ಮೇಲೊಂದು ಕಣ್ಣಿಡಬೇಕಾಗುತ್ತದೆ. ಏಕೆಂದರೆ ಈಗ ರಸ್ತೆಗಳಲ್ಲಿ ವೀಲಿಂಗ್ ಮಾಡುವ, ಹ್ಯಾಂಡಲ್ ಬಿಟ್ಟು ಬೈಕ್ ಓಡಿಸುವ ಬಿಸಿರಕ್ತದ ಹುಡುಗರು ಆಕಾಶದಲ್ಲಿ  ಒಂದೇ ಕೈ ಬಡಿಯುವುದು, ಗಾಳಿಯಲ್ಲಿ ಪಲ್ಟಿ ಹೊಡೆಯುವುದೇ ಮುಂತಾದ ಕಪಿಚೇಷ್ಟೆಗಳನ್ನ ಮಾಡಲಿಕ್ಕೂ ಸಾಕು. ಇನ್ನು ಕೆಲವು ಮುರುಷಪುಂಗವರು ಕುಡಿದು ಹಾರುತ್ತಾ ಬಂದು 'ಶಿವಾ' ಎಂದು ತಮ್ಮಪಾಡಿಗೆ ಹೋಗುತ್ತಿರುವ ಬಡಪಾಯಿಗಳಿಗೆ ಢೀ ಕುಟ್ಟಿ, ಕೊನೆಗೆ ಇಬ್ಬರೂ ಕಾಲುಮೇಲಾಗಿ ನೆಲಕ್ಕೆ ಬೀಳುವ ಅಪಾಯವನ್ನೂ ಅಲ್ಲಗಳೆಯುವಂತಿಲ್ಲ!  ಸಿಗ್ನಲ್ ಗಳಲ್ಲಿ ಕಡಲೆಕಾಯಿ, ಸೊಳ್ಳೆ ಬ್ಯಾಟ್, ನೀರಿನ ಬಾಟಲಿ,  ಇತ್ಯಾದಿಗಳನ್ನು ಮಾರುವ ರಸ್ತೆ ವ್ಯಾಪಾರಿಗಳೆಲ್ಲಾ ಹಾರುತ್ತಾ ಹಿಂದೆ ಬಂದು ತಮ್ಮ ಉತ್ಪನ್ನಗಳನ್ನು ಕೊಳ್ಳುವಂತೆ ಬೇಡಿಕೆ (ಬೆದರಿಕೆ!) ಇಡುತ್ತಾ ಬೆನ್ನಟ್ಟಿಬರುವ ಸಂಭವವೂ ಇಲ್ಲದಿಲ್ಲ. ಸರಗಳ್ಳರೇ ಮುಂತಾದವರು ಹಾರುಗಳ್ಳರುಗಳಾಗಿ ಬದಲಾಗಿ ನಡುಆಕಾಶದಲ್ಲೇ ಧಾಳಿನಡೆಸುವ ಸಾಧ್ಯತೆಗಳೂ ಹೆಚ್ಚಿವೆ. ಈ ಎಲ್ಲಾ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಈಗಿರುವ ರಸ್ತೆ ನಿಯಮಗಳಂತೆಯೇ 'ಹಾರಾಟ ವಿಧೇಯಕ'ಗಳನ್ನು ರೂಪಿಸಬೇಕಾಗುತ್ತದೆ. 

ಈ ಒಂದೆರೆಡು ದುಷ್ಪರಿಣಾಮಗಳ ಹೊರತಾಗಿ ಹೇಳುವುದಾದರೆ ಹಾರಾಟ ಒಂದು ಅದ್ಭುತ ಶಕ್ತಿ. ನಿಮಗೆಲ್ಲಾ ಜೀವವಿಕಾಸದ ಸಿದ್ಧಾಂತ ನೆನಪಿದೆಯಾ? ಸಮುದ್ರದಲ್ಲಿ ಮಾತ್ರವಿದ್ದ ಜೀವಿಸಂಕುಲ ನೀರಿನಿಂದ ಮೇಲಕ್ಕೆ ಎಗರುತ್ತಾ ಎಗರುತ್ತಾ ಕ್ರಮೇಣ ಅವುಗಳಲ್ಲಿ ನೆಲದಮೇಲಿನ ವಾತಾವರಣಕ್ಕೆ ಬೇಕಾದ ರಚನೆಗಳು ಮೈಗೂಡಿದವಂತೆ. ಅಂತೆಯೇ ನಾವುಗಳೂ ಇವತ್ತಿನಿಂದಲೇ ದಿನಕ್ಕೆ ಅರ್ಧಗಂಟೆಯಾದರೂ ಕೈಯ್ಯನ್ನು ರೆಕ್ಕೆಯಂತೆ ಬಡಿಯುತ್ತಾ ಮಂಚ, ಕಟ್ಟೆ, ದಿಬ್ಬ ಮುಂತಾದ ಚಿಕ್ಕ ಎತ್ತರಗಳಿಂದ ಹಾರಲು ಪ್ರಯತ್ನಿಸುವುದು ಒಳ್ಳೆಯದು. ಯಾರಿಗೆ ಗೊತ್ತು? ಕೊನೆಗೆ ನಮ್ಮ ಮೊಮ್ಮಕ್ಕಳು, ಮರಿಮಕ್ಕಳ ಕಾಲಕ್ಕಾದರೂ ಕನಿಷ್ಟ ಬಾವಲಿಗಿರುವಂತಹಾ ರೆಕ್ಕೆಗಳು ಮೂಡಿದರೂ ಮೂಡಬಹುದು! ಆಗ ನನ್ನೀ ಲೇಖನವು 'ಹ್ಯೂಮನ್ ಫ್ಲೈ ಥಿಯರಿ' ಅಂತಲೋ, 'ಮನುಷ್ಯನ ಹಾರು ಸಿದ್ಧಾಂತ' ಅಂತಲೋ ಪ್ರಸಿದ್ಧವಾಗಿ ನನಗೆ ನೊಬೆಲ್ ಬಹುಮಾನ ದೊರೆತರೂ ದೊರೆಯಬಹುದು. ಇಂತಹಾ ಒಂದು ಮಹಾನ್ ವಿಕಾಸದ ಮುನ್ನುಡಿಕಾರರಾದ ನಾನು-ನೀವು 'ಹಾರು ಸಿದ್ಧಾಂತದ ಹರಿಕಾರರು' ಎಂದು ಮೋಡಗಳ ಮೇಲಿನ ವೇದಿಕೆಯಲ್ಲಿ ಹಾರಾಡುತ್ತಾ ಪ್ರಶಸ್ತಿ ಸ್ವೀಕರಿಸುವ ಸಂದರ್ಭ ಸೃಷ್ಟಿಯಾದರೂ ಆಗಬಹುದು. ಏನಂತೀರಾ?

ವಿಶೇಷ ಸೂಚನೆ: ಈ ಲೇಖನದಿಂದ ಪ್ರೇರಿತರಾಗಿ ಬೇಗ ರೆಕ್ಕೆಗಳು ಬರಬೇಕೆಂಬ ಅತಿಯಾಸೆಯಿಂದ, ಹಾರಿಯೇ ಬಿಡುತ್ತೇನೆಂಬ ಓವರ್ ಕಾನ್ಫಿಡೆನ್ಸ್ ನಿಂದ ಎತ್ತರದ ಮಹಡಿಯಿಂದಲೋ, ಮರದಿಂದಲೋ ಧುಮುಕಿ ಕೈ, ಕಾಲು, ಸೊಂಟ ಮುರಿದುಕೊಂಡರೆ ಅದಕ್ಕೆ ಲೇಖಕರು ಜವಾಬ್ದಾರರಾಗಿರುವುದಿಲ್ಲ!

(ಮಂಗಳ 24-5-2017ರ ಸಂಚಿಕೆಯಲ್ಲಿ ಪ್ರಕಟವಾದ ನಗೆಬರಹ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...