ಶನಿವಾರ, ನವೆಂಬರ್ 4, 2017

ರಜೆಯಲ್ಲಿ ಕಾಣುವ ಬೆಂಗಳೂರು

ನವೆಂಬರ್ ಒಂದು ಕೂಡಾ ಮುಗಿದಿದೆ. ಅಲ್ಲಿಗೆ 2017ರ ಕ್ಯಾಲೆಂಡರ್ ನ ರಜಾದಿನಗಳೆಲ್ಲ ಬಹುತೇಕ ಮುಗಿದಹಾಗೇ. ಕ್ರಿಸ್ಮಸ್ ಒಂದೇ ಉಳಿದುಕೊಂಡಿರುವ ಈ ಕ್ಯಾಲೆಂಡರ್ ನ ಕಟ್ಟಕಡೆಯ ಹಬ್ಬ.
ಈ ಸಾಲುಸಾಲು ರಜೆಗಳು ಬಂದಾಗ ಬೆಂಗಳೂರಿನಲ್ಲೆ ಉಳಿದುಹೋಗುವರಿಗೆ ಸಿಗುವ ಅತಿದೊಡ್ಡ ಖುಷಿ ಏನು ಗೊತ್ತಾ? ಖಾಲಿ ರೋಡುಗಳು ಹಾಗೂ ಖಾಲಿ ಬಸ್ಸುಗಳು! ಇಷ್ಟುದಿನ ಕಾಲು ಮುರಿದ ಆಮೆಯಂತೆ ಕುಗುರುತ್ತಾ ಸಾಗುತ್ತಿದ್ದ ಇದೇ ರಸ್ತೆಗಳಲ್ಲಿನ ವಾಹನಗಳಿಗೀಗ ಊರಿನ ಬಸ್ಸಿನಂತೆ ಸುಂಯ್ಯನೆ ಓಡತೊಡಗುತ್ತವೆ. ಅದೇಕೋ ಗೊತ್ತಿಲ್ಲ, ರಶ್ಶಿಲ್ಲದ ಬಿಎಂಟಿಸಿ ಗಳಲ್ಲಿ ಓಡಾಡುವುದೆಂದರೆ ನನಗೊಂಥರಾ ಖುಷಿ. ನಗರದೊಳಗಿನ ಅದೇ ಬನಶಂಕರಿ, ಜಯನಗರ, ಬಸವನಗುಡಿಗಳಲ್ಲಾಗಿರಬಹುದು ಅಥವಾ ಊರ ಹೊರಗಿನ ಯಲಹಂಕ, ಜಾಲಹಳ್ಳಿ, ಬಿಇಎಲ್ ಗಳಲ್ಲಾಗಿರಬಹುದು, ಇಷ್ಟುದಿನ ಬಸುರಿ ಹೆಂಗಸಿನಂತೆ ಮಾರಿಗೊಮ್ಮೆ ನಿಲ್ಲುತ್ತಾ, ಏದುಸಿರು ಬಿಡುತ್ತಾ, ಚಿಕ್ಕ ಏರು ಬಂದರೂ ಭರ್ರೋ ಎಂದು ಬೊಬ್ಬಿಡುತ್ತಾ, ಒಳಗೆ ಒಂಟಿಕಾಲಿನಲ್ಲಿ ನಿಂತ ಐಟಿಬಿಟಿ ತಪಸ್ವಿಗಳೆಲ್ಲ ಒಬ್ಬರ ಮೇಲೊಬ್ಬರು ಮಗುಚಿ ಬೀಳುವಂತೆ ಥಟಾಥಟ್ಟನೆ ಬ್ರೇಕುಹಾಕುತ್ತಾ, ಅಡ್ಡಬಂದ ಬೈಕಿನವನು ಮನೆಯಲ್ಲಿ ಹೇಳಿಬಂದಿದ್ದಾನಾ ಇಲ್ಲವಾ ಎಂದು ವಿಚಾರಿಸಿಕೊಳ್ಳುತ್ತಾ, ನಿಲ್ಲುತ್ತಾ, ತೆವಳುತ್ತಾ, ಚಲಿಸುತ್ತಿದ್ದ ಪ್ರಯಾಣವಿಂದು ತಂಗಾಳಿ ಮುಖಕ್ಕೆ ರಾಚುವಷ್ಟರಮಟ್ಟಿಗೆ ವೇಗವಾಗಿ ಓಡುತ್ತಿದೆ. ಇಷ್ಟುದಿನ ಉರಿಸಿದ್ದಪ್ಪನಂತೆ ಭುಸುಗುಟ್ಟುತ್ತಿದ್ದ ಕಂಡಕ್ಟರ್ ಇಂದು ಉಲ್ಲಾಸದಿಂದ "ಬೆಳ್ಳಿ ರಥದಲಿ ಸೂರ್ಯ ತಂದ ಕಿರಣಾ" ಎಂದು ಹಾಡುತ್ತಿದ್ದಾನೆ. ಎರೆಡು ರೂಪಾಯಿ ಚಿಲ್ಲರೆಗೇ ಮನೆ ಮಂದಿಯೆಲ್ಲರ ಮಾನ ಹರಾಜು ಹಾಕುತ್ತಿದ್ದವನಿಂದು ಏಳು ರೂ ಚಿಲ್ಲರೆಯನ್ನು ಸದ್ದಿಲ್ಲದೆ ಕೊಟ್ಟುಬಿಟ್ಟಿದ್ದಾನೆ. ಕಿಟಕಿಯಿಂದ ಹೊರಗೆ ನೋಡಿದರೆ ಇಷ್ಟು ದಿನ ಬಾಸಿನ ಮುಖದಂತೆ ಬಿರುಸಾಗಿ ಕಾಣುತ್ತಿದ್ದ ಹೊರಗಿನ ವಾತಾವಾರಣ ಇಂದು 'ಅವಳ' ವದನದಷ್ಟು ನಿರ್ಮಲವಾಗಿದೆ. ಈ ಉಲ್ಲಾಸಮಯ ಪ್ರಯಾಣದಲ್ಲಿ ಕೈಯಲ್ಲಿ ಹಿಡಿದ ಪುಸ್ತಕದೊಳಗಿನ ಶೆರ್ಲಾಕ್ ಹೋಮ್ಸ್ ಹಿಂದೆಂದಿಗಿಂತ ರೋಚಕವಾಗಿ ಕಥೆಹೇಳುತ್ತಿದ್ದಾರೆ.
ಇನ್ನು ಬೆಂಗಳೂರಿನ ಬೀದಿಗಳಂತೂ ಸೀಸನ್ನಿಗೆ ತಕ್ಕಂತೆ ಸಿಂಗರಿಸಿಕೊಳ್ಳುತ್ತವೆ. ಗಣಪತಿ ಹಬ್ಬದ ರಜೆಯಲ್ಲಿ ಎಲ್ಲಿ ನೋಡಿದರೂ ಒಂದಡಿಯಿಂದ ಹಿಡಿದು ಒಂಭತ್ತಡಿಯ ತನಕದ, ಹಲವಾರು ಭಾವ-ಭಂಗಿಗಳ ಗಣೇಶನ ವಿಗ್ರಹಗಳು, ಸ್ವತಂತ್ರ ದಿನಾಚರಣೆಯ ಸಮಯದಲ್ಲಿ ವಾಹನಗಳ ಕಿವಿಗೆ ಚುಚ್ಚಿಕೊಂಡ ತ್ರಿವರ್ಣ ಧ್ವಝಗಳು, ರಾಜ್ಯೋತ್ಸವದ ದಿನ ಪಟಪಟ ಹಾರಾಡುತ್ತಾ ಓಡುವ ಕನ್ನಡದ ಬಾವುಟಗಳು, ದೀಪಾವಳಿಯಲ್ಲಿ ಮನೆಮನೆಯ ಬಾಗಿಲಲಲ್ಲೂ ಮಿನುಗುವ ದೀಪ, ಪಟಾಕಿ, ನಕ್ಷತ್ರಕಡ್ಡಿಗಳು... ಹೀಗೇ ಬೆಂಗಳೂರಿಗೆ ಬೆಂಗಳೂರೇ ಒಂದಿಲ್ಲೊಂದು ಬಣ್ಣ/ಬೆಳಕಿನಲ್ಲಿ ತೊಯ್ದುಹೋಗುತ್ತದೆ. ಯಾವ ಕಲಿಗಾಲ ಮುರಕೊಂಡು ಬಿದ್ದರೂ, ಎಷ್ಟೇ ಬುದ್ಧಿ ತುಂಬಿ ತುಳುಕಿದರೂ, ಯಾವ ರಾಜಕಾರಣಿ ಬತ್ತಿ ಇಟ್ಟರೂ, ಯಾವ ಘಾತುಕ ಶಕ್ತಿ ಬಾಯಿಬಡಿದುಕೊಂಡರೂ, ಹಬ್ಬ-ಭಾಷೆ-ಸಂಸ್ಕೃತಿ.. ಈ ಮೂರು ಸಂಭ್ರಮಗಳನ್ನು ಮನುಷ್ಯನಿಂದ, ಮನಸ್ಸಿನಿಂದ ದೂರಮಾಡುವುದು ಸಾಧ್ಯವೇ ಇಲ್ಲ ಅಂತ ಅನಿಸೋದು ಇಂತಹಾ ಆಚರಣೆಗಳನ್ನು ನೋಡಿದಾಗಲೇ‌. ಈ ಎಲ್ಲ ಸಂಭ್ರಮಗಳ ಕಣ್ತುಂಬಿಕೊಳ್ಳುತ್ತಾ, ಕಿವಿಗೊಂದು ಇಯರ್ ಫೋನು ಚುಚ್ಚಿಕೊಂಡೋ, ಇಲ್ಲಾ ಪುಸ್ತಕವೊಂದನ್ನು ಹಿಡಿದುಕೊಂಡೋ ಕಿಟಕಿ ಬದಿಯ ಸೀಟಿನಲ್ಲಿ ಕುಳಿತು ಬೆಂಗಳೂರು ಸುತ್ತುವಂತಹಾ ಈ ಮೋಜು ಎಂತಹದ್ದೆಂಬುದನ್ನು ಬಲ್ಲವ ಮಾತ್ರ ಬಲ್ಲ! ಎತ್ತರದ ಫ್ಲೈ ಓವರುಗಳ ಮೇಲಿಂದ ಕಾಣುವ ಪಕ್ಷಿನೋಟ, ಆಳದ ಅಂಡರ್ ಪಾಸ್ಗಳ ಕತ್ತಲೆಯೊಳಗಿನ ನಮ್ಮದೇ ಬಸ್ಸಿನ ಪ್ರತಿಧ್ವನಿಯ ಸದ್ದು, ಬಸವನಗುಡಿಯಲ್ಲಿ ಮೂಗಿಗೆ ರಾಚುವ ಹೂಹಣ್ಣುಗಳ ಘಮಲು, ಕಾದು ಕಾದು ಕೊನೆಗೂ ಬಂದ ನಾ ಹತ್ತಬೇಕಾದ ಬಸ್ಸು.. ಬೆಂಗಳೂರೂ ನನ್ನೂರಿನಂತೆನಿಸುತ್ತದೆ.
ಆದರೆ ಸಧ್ಯಕ್ಕೆ ಬೆಂಗಳೂರಿನಲ್ಲಿ ಒತ್ತಡವೊಂದನ್ನು ಬಿಟ್ಟು ಮತ್ತೇನೂ ಸ್ಥಿರವಾಗಿಲ್ಲ. ಒಂದು ಭಾನುವಾರ ಅಥವಾ ಎರೆಡು ದಿನದ ದೀಪಾವಳಿ ಮುಗಿಯುತ್ತಿದ್ದಂತೆ ಮತ್ತದೇ ಟ್ರಾಫಿಕ್ಕು ಮರಳಿಬಂದು ಬೆಂಗಳೂರಿನ ರಸ್ತೆಗಳನ್ನು ಅಟಕಾಯಿಸಿಕೊಳ್ಳುತ್ತದೆ. ಮತ್ತದೇ ನಿಲ್ಲಲಾಗದ ರಶ್ಶು, ಮುಂದೆ ಹೋಗದ ಟ್ರಾಫಿಕ್ಕು, ಜೇಬುಕತ್ತರಿಸುವ ಕಾಕರು... ಇವೆಲ್ಲದರ ನಡುವೆ ಕೆಲಕ್ಷಣಗಳ ಉಲ್ಲಾಸ ತರುವ ಭಾನುವಾರವೇ ಮುಂತಾದ ಇನ್ನಿತರ ರಜಾದಿನಗಳಿಗೊಂದು ದೊಡ್ಡ ಸಲಾಂ ಹೇಳಬೇಕೆಂದು ಇಷ್ಟೆಲ್ಲ ಬರೆದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...