ಭಾನುವಾರ, ನವೆಂಬರ್ 12, 2017

ಪುಳಿಯೋಗರೆ ಉಡ್ಡಯನ!



ಬ್ರಹ್ಮಚಾರಿ ಜೀವನದ ಸಾರ್ವತ್ರಿಕ ಸಮಸ್ಯೆಗಳಲ್ಲಿ ಅಡಿಗೆ ಮಾಡಿಕೊಳ್ಳುವುದೂ ಒಂದು ಎನ್ನುವುದು ನನಗೆ ತುಂಬಾ ತಡವಾಗಿ ಅರ್ಥವಾದ ಸತ್ಯ. ಈ ಮೊದಲು ಕೆಲವು ಗೆಳೆಯರು "ಹೊರಗಡೆ ತಿಂದೂ ತಿಂದೂ ಸಾಕಾಗಿದೆ ಮಗಾ. ಬೇಗ ಮದುವೆ ಆಗ್ಬೇಕು" ಎಂದರೆ "ಅಲ್ವೋ ಒಂದು ಪ್ಲೇಟ್ ಚಿತ್ರಾನ್ನ, ಎರೆಡು ಪ್ಲೇಟ್ ಸೌತ್ ಮೀಲ್ಸ್'ಗೋಸ್ಕರ ಫೈವ್ ಸ್ಟಾರ್ ಹೋಟೆಲ್ನೇ ಪರ್ಚೇಸ್ ಮಾಡ್ತೀನಿ ಅಂತೀಯಲ್ಲೋ" ಎಂದು ತೀರಾ ಉಡಾಫೆಯಿಂದ ನಗುತ್ತಿದ್ದೆ. ಹುಟ್ಟಿದ ಮೊದಲ ಇಪ್ಪತ್ತೊಂದು ವರ್ಷ ಅಮ್ಮನ ಕೈಯ್ಯಡಿಗೆ ಸವಿಯುತ್ತಾ ಕಳೆದವನು ನಾನು. ನನ್ನ ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ, ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ ಮೊದಲ ಎರೆಡು ಕಂಪನಿಯವರೂ ಅತೀ ಕಡಿಮೆಬೆಲೆಗೆ ಮೂರು ಹೊತ್ತೂ ಊಟ ಕೊಟ್ಟಿದ್ದರು. ಇನ್ನು ರಜೆ ಇದ್ದ ಶನಿವಾರ ಭಾನುವಾರಗಳ ಬೆಳಗ್ಗೆ ಹಸಿವಾದರೆ ಅಕ್ಕಿ ಗಂಜಿ, ಇಲ್ಲದಿದ್ದರೆ ಹಾಪ್ ಕಾಮ್ಸ್'ನ ಬಾಳೇಹಣ್ಣು. ಮಧ್ಯಾಹ್ನ, ರಾತ್ರೆಗಳ ಊಟಕ್ಕೆ ಒಂದೋ ನೆಂಟರ ಮನೆ, ಇಲ್ಲವಾದರೆ ಮುಕ್ಕಾಲು ಲೋಟ ಅಕ್ಕಿಯನ್ನು ಮುಕ್ಕಾಲು ಬಟ್ಟಲು ನೀರಿನಲ್ಲಿ ಮುಳುಗಿಸಿ, ಇಂಡಕ್ಷನ್ ಒಲೆಯಮೇಲಿಟ್ಟು ಬೇಯಿಸಿ ಕೊನೆಗೆ ತಯಾರಾಗುವ, ಹೆಚ್ಚೂಕಡಿಮೆ ಅನ್ನವನ್ನೇ ಹೋಲುವ ಪದಾರ್ಥವನ್ನು ಹತ್ತಿರದ ಹೋಟೆಲ್ನಿಂದ ತಂದ ಸಾಂಬಾರಿನಲ್ಲಿ ಕಲಸಿಕೊಂಡು ತಿನ್ನುತ್ತಾ "ಎಲ್ಲಾ ಸೋಂಬೇರಿಗಳೂ ಹೋಟೆಲ್ನಲ್ಲಿ ತಿನ್ನುವಾಗ ರೂಮ್ನಲ್ಲೇ ಅಡಿಗೆ ಮಾಡಿಕೊಳ್ಳೋ ನಾವೆಷ್ಟು ಶ್ರಮಜೀವಿಗಳು ಅಲ್ವಾ ಮಗಾ?" ಎಂದು ರೂಮ್ ಮೆಟ್ ಹತ್ರ ಜಂಭಕೊಚ್ಚಿಕೊಳ್ಳುತ್ತಿದ್ದೆ.  ಹೀಗೆ ಒಟ್ಟಾರೆ ಬದುಕಿನ ಇಪ್ಪತ್ತಾರು ವರ್ಷಗಳು ಅಡಿಗೆಯೆಂಬ ಉಸಿರಾಟದಷ್ಟೇ ಸಹಜವಾದ, ಆದರೆ ಅಷ್ಟೇ ನಾಜೂಕಾದ ಕ್ರಿಯೆಯನ್ನು ಕಲಿಯದೆಯೇ ಕಳೆದುಹೋಗಿತ್ತು. ಕಾಳುಶ್ರಮವಿಲ್ಲದೇ ತಿನ್ನುತ್ತಿದ್ದ ಆಹಾರವೇನೂ ಸುಮ್ಮನೆ ಗಂಟಲಿಗಿಳಿಯುತ್ತಿರಲಿಲ್ಲ. "ಇದೇನಮ್ಮ, ದಿನಾ ಇದೇ ದೋಸೆ, ಉಪ್ಪಿಟ್ಟು, ರೊಟ್ಟಿ ಮಾಡ್ತೀಯಾ", "ಯಾರ್ ಗುರೂ ಅಡಿಗೆ ಮಾಡಿದ್ದು? ಬರೀ ಬಟಾಣಿ ಹಾಕಿ ಬೇಯ್ಸಿದಾರೆ", " ಏನ್ರೀ ಇವ್ರು, ಅನ್ನ ಸರಿಯಾಗಿ ಬೆಂದೇ ಇಲ್ಲ. ಹೋದವಾರ ಮಾಡಿದ್ದೇ ಮತ್ತೆ ಮಾಡಿದಾರೆ" ಎಂಬ ಇನ್ನೂ ಮುಂತಾದ ಟೀಕೆಗಳು ಅನ್ನ ಇಳಿದ ಅದೇ ಗಂಟಲಿನಿಂದ ಹೊರಬರುತ್ತಿದ್ದವು. ಆದರೆ ಕೇವಲ ಮೊವತೈದು ರುಪಾಯಿಗೆ ತಿಂಗಳಿಡೀ ಊಟ ಕೊಡುತ್ತಿದ್ದ ಎರೆಡನೇ ಕಂಪನಿಯನ್ನೂ ಬಿಟ್ಟೆನೋಡಿ? ಆಗಲೇ ಗೊತ್ತಾಗಿದ್ದು- ಅನ್ನದ ಹಾಗೂ ಅನ್ನದಾತರ ಮಹತ್ವ.

ಊಟದ ಮಟ್ಟಿಗೆ ಹೊಸ ಕಂಪನಿ ಹೊಸ ಹೊಸ ಸಮಸ್ಯೆಗಳನ್ನೊಡ್ಡಿತ್ತು. ಮೊದಲ ದಿನ ಮಧ್ಯಾಹ್ನವೇ ಶುರುವಾಯಿತು ಊಟದ ಬೇಟೆ. ಕಂಪನಿಯಿದ್ದ ಸುಮಾರು ಅರ್ಧ-ಮುಕ್ಕಾಲು ಕಿಲೋಮೀಟರ್ ಸುತ್ತಳತೆಯಲ್ಲಿ ಒಂದೇ ಒಂದು ಚಿಕ್ಕ-ಚೊಕ್ಕ ಹೋಟೆಲ್ ಕಣ್ಣಿಗೆ ಬೀಳಲಿಲ್ಲ. ಇದ್ದ ಒಂದೇ ಒಂದು ಹೋಟೆಲಿಗೆ ನುಗ್ಗಿ 'ಒಂದು ಸೌತ್ ಮೀಲ್ಸ್' ಎಂದು ನೂರರ ನೋಟು ಚಾಚಿದೆ. ನೋಡ ನೋಡುತ್ತಿದ್ದಂತೆ ನನ್ನ ಕೈಲಿದ್ದ ನೂರರ ನೋಟನ್ನು ಕಸಿದುಕೊಂಡ ಕ್ಯಾಶಿಯರ್ ಬಡ್ಡೀಮಗ ಮರಳಿಕೊಟ್ಟಿದ್ದು ಬರೀ ಹತ್ತು ರೂಪಾಯಿಯನ್ನ! ಕೆಲವೇ ಸೆಕೆಂಡ್'ಗಳ ಕೆಳಗೆ ನೂರರ ನೋಟಿದ್ದ ಕೈಗೀಗ ಬರೀ ಹತ್ತರ ಹರಕು ನೋಟು ಬಂದ ಅದ್ಭುತವನ್ನು ಪೆಚ್ಚಾಗಿ ನೋಡುತ್ತಾ ನಿಂತ ನನಗೆ ಬೆಂಗಳೂರು ಸಿಂಗಾಪುರ ಆಗಿದೆ ಅನ್ನುವುದರಲ್ಲಿ ಯಾವ ಅನುಮಾನವೂ ಉಳಿಯಲಿಲ್ಲ.

ಈಗ ಮಧ್ಯಾಹ್ನದೂಟಕ್ಕಿರುವ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸತೊಡಗಿದೆ. ಒಂದೊತ್ತಿನ ಊಟಕ್ಕೆ ಸಾವಿರಗಟ್ಟಲೆ ತೆರುವುದಕ್ಕೆ ನಾನು ಯಾವ ಅಂಬಾನಿಯ ಅಳಿಯನೂ ಅಲ್ಲ. ಅಮ್ಮ ಸೂಚಿಸಿದ 'ಮದುವೆ ಆಗ್ಬಿಡು' ಎನ್ನುವುದು ಅತ್ಯಂತ ದುಬಾರಿ ಹಾಗೂ ಅಪಾಯಕಾರಿ ಮಾರ್ಗ. ಇನ್ನುಳಿದ ಏಕೈಕ ದಾರಿ ರೂಮಿನಲ್ಲೇ ಮಾಡಿಕೊಳ್ಳುವುದು. ಅಂದಹಾಗೇ ಇದು ಈಗ ಹೊಳೆದ ಉಪಾಯವೇನೂ ಆಗಿರಲಿಲ್ಲ. ಈ ಕಂಪನಿಗೆ ಆಯ್ಕೆಯಾದಾಗ "ಮಧ್ಯಾಹ್ನ ಊಟಕ್ಕೇನು ಮಾಡ್ತೀಯ?" ಎಂದು ಕೇಳದವರಿಗೆಲ್ಲ "ಪುಳಿಯೋಗರೆ, ಚಿತ್ರಾನ್ನ, ಉಪ್ಪಿಟ್ಟು... ಹೀಗೇ ಏನಾದ್ರೂ ರೂಮಲ್ಲೇ ಮಾಡಿ ತಗೊಂಡೋಗ್ತೀನಿ" ಎಂದು ಎದೆಯುಬ್ಬಿಸಿಕೊಂಡು ಹೇಳಿದ್ದೆ. ಅವರು ಅಚ್ಚರಿಯಲ್ಲಿ "ಅರೆರೇ ಹೌದಾ? ಶಭಾಶ್!" ಎಂದು ಮೆಚ್ಚಿದಾಗ ವೀರ ಕರ್ನಲ್'ನಂತೆ ಮೀಸೆ ತಿರುವಿಕೊಂಡಿದ್ದೆ. ಆದರೆ ಅಪ್ಪೀತಪ್ಪೀ ಯಾರಾದರೂ ಒಬ್ಬ "ಏನು ಹಾಕಿ ಉಪ್ಪಿಟ್ಟು ಮಾಡ್ತೀಯಪ್ಪ ನಳಮಹಾರಾಜ?" ಎಂದು ಕೇಳಿದ್ದರೂ ಉತ್ತರಕ್ಕೆ ನಾಲ್ಕು ಆಪ್ಶನ್ ಕೇಳುತ್ತಿದ್ದೆನೆನ್ನುವುದು ನನಗೆ ಮಾತ್ರ ಗೊತ್ತಿದ್ದ ಸತ್ಯ! ಇನ್ನಷ್ಟೇ ಕಲಿತು ಅಡಿಗೆ ಮಾಡಬೇಕಾದವನು, ಈಗಾಗಲೇ ಬಂಡಿಗಟ್ಟಲೆ ಬೇಯಿಸಿ ಬಿಸಾಕಿರುವ ಬಾಣಸಿಗನಂತೆ ಫೋಸ್ ಕೊಟ್ಟಿದ್ದೆ. ಅದ್ಯಾವ ಶಕುನ ದೇವತೆ ಅಸ್ತು ಅಂದಿದ್ದರೋ ಗೊತ್ತಿಲ್ಲ, ಆ ಸುಳ್ಳು ಸತ್ಯವಾಗುವ ಕಾಲವೀಗ ಬಂದೇಬಿಟ್ಟಿತು.

ಸಂಜೆ ಬಂದವನೇ ನೇರ ಅಂಗಡಿಗೆ ಹೋಗಿ "ಪುಳಿಯೋಗರೆ ಮಿಕ್ಸ್ ಯಾವ್ದ್ಯಾವ್ದಿದೆ?" ಎಂದೆ. ಮುತ್ತಿಕೊಂಡಿದ್ದ ಗ್ರಾಹಕರ ನಡುವೆ ಸುಸ್ತಾಗಿದ್ದ ಅಂಗಡಿಯವನು "ಅಯ್ಯಂಗಾರ್ ಇದೆ ಕೊಡ್ಲಾ ಸರ್?" ಎಂದ. ನನಗೆ ಗೊತ್ತಿರೋ ಮಟ್ಟಿಗೆ ಈ ಅಯ್ಯಂಗಾರಿಗಳು ಎಂದರೆ ತಮಿಳುನಾಡಿನವರೋ, ಕೇರಳದವರೋ ಇರಬೇಕು. "ಅವರ ಶೈಲಿ ನಂಗೆ ಅಷ್ಟಾಗಿ ಆಗಿಬರೋಲ್ಲ. ನಮ್ಮೂರಿನ ಈ ಅಡಿಗ, ಐತಾಳ, ಭಟ್ಟ ಅಂತ ಯಾವ್ದಾದ್ರೂ ಇದ್ಯಾ ಗುರೂ?" ಎಂದು ಕೇಳಬೇಕೆಂದುಕೊಂಡೆ. ಆದರೆ ಅವನ ಪಕ್ಕದಲ್ಲಿದ್ದ ತಕ್ಕಡಿಯ ತೂಕದ ಕಲ್ಲು ಹಾಗೂ ಅವನ ಅಸಮಾಧಾನದ ಮುಖ ನೋಡಿ ಭಯವಾಗಿ 'ಭಾರತೀಯರೆಲ್ಲ ಒಂದೇ' ಎಂಬ ನಿರ್ಧಾರಕ್ಕೆ ಬಂದು "ಸರಿ, ಅಯ್ಯಂಗಾರನ್ನೇ ಕೊಡಿ" ಎಂದೆ. ಜೊತೆಗೆ ಎರೆಡು ವಾರಕ್ಕಾಗುವಷ್ಟು ಅಡಿಗೆ ಎಣ್ಣೆಯನ್ನೂ ಖರೀದಿಸಿ ರೂಮಿಗೆ ಬಂದು ಪವಡಿಸಿದೆ. ನಿದಿರೆಯಲ್ಲಿ ನಾನು ಭರ್ಜರಿ ಪುಳಿಯೋಗರೆ ಮಾಡಿದಂತೆ, ಅದನ್ನು ನನ್ನ ಹೊಸ ಸಹೋದ್ಯೋಗಿಗಳೆಲ್ಲ ಚಪ್ಪರಿಸಿಕೊಂಡು ತಿಂದು ಡರ್ರನೆ ತೇಗಿದಂತೆ ಕನಸು ಕಂಡು ಮಲಗಿದಲ್ಲೇ ಬೆನ್ನು ತಟ್ಟಿಕೊಂಡೆ.

ಕೊನೆಗೂ ನನ್ನ ಪುಳಿಯೋಗರೆ ಪ್ರಯೋಗದ ಹಗಲು ಬಂದೇಬಿಟ್ಟಿತು. ಒಂದು ಗಂಟೆ ಮುಂಚೆಯೇ ಎದ್ದು ಯಾವ ಫೈವ್ ಸ್ಟಾರ್ ಹೋಟೆಲಿನ ಅಡಿಗೆಭಟ್ಟನಿಗೂ ಕಮ್ಮಿ ಇಲ್ಲದಂತೆ ಆಪ್ರೋನ್ ಕ್ಲಾತ್ ಕಟ್ಟಿಕೊಂಡು ತಯಾರಾದೆ. ಒಂದು ಆ್ಯಂಗಲ್'ನಿಂದ ಅನ್ನದಂತೇ ಕಾಣುತ್ತಿದ್ದ ಪದಾರ್ಥವನ್ನು ತಯಾರಿಸಿ ಪಕ್ಕಕ್ಕಿಟ್ಟೆ.

ಮುಂದಿನ ಸರದಿ ಪುಳಿಯೋಗರೆ ಮಿಕ್ಸ್ ನದು!

ಸ್ಟೀಲ್ ಪಾತ್ರೆಯನ್ನು ಇಂಡಕ್ಷನ್ ಒಲೆಯ ಮೇಲಿಟ್ಟು ಚಾಲೂಮಾಡಿದೆ. ಪಾತ್ರೆಯೊಳಕ್ಕೆ ಪಾಮಾಯಿಲನ್ನು ಸುರಿದು ಬಾಯಿ ಒಡೆದ ಪುಳಿಯೋಗರೆ ಪೊಟ್ಟಣ ತೆಗೆದುಕೊಂಡೆ. ಅರೆಕ್ಷಣದಲ್ಲಿ ಎಣ್ಣೆ ಚಿಟಿಚಿಟಿಗುಟ್ಟಲು ಪ್ರಾರಂಭಿಸಿತು. ಅಲ್ಲಿಯ ತನಕ ಎಲ್ಲವೂ ಸರಿಯಾಗಿಯೇ ಇತ್ತು, ಆದರೆ ಕೈಲಿದ್ದ ಪೊಟ್ಟಣದ ಅಷ್ಟೂ ಪುಳಿಯೋಗರೆ ಪುಡಿಯನ್ನು ಪಾತ್ರೆಯೊಳಕ್ಕೆ ಸುರಿದು ಮುಖದ ತುಂಬಾ ಕಣ್ಣಿದ್ದ 'ಕಣ್ ಸೆಟ್ಗ'ದಿಂದ ಅಲ್ಲಾಡಿಸತೊಡಗಿದೆ ನೋಡಿ,  ಇದ್ದಕ್ಕಿದ್ದಂತೆಯೇ ಎದುರಿದ್ದ ಪಾತ್ರೆಯೊಳಗೆ ಕೋಲಾಹಲ ಆರಂಭವಾಯಿತು! ಒಳಗಿದ್ದ ಎಣ್ಣೆ ಈಗಷ್ಟೇ ಬಂದ ಅಪರಿಚಿತ ಪುಳಿಯೋಗರೆ ಪುಡಿಯ ಜೊತೆ ಚಿಟಿಚಿಟಿಯೆನ್ನುತ್ತಾ ಭೀಕರ ಹೋರಾಟಕ್ಕಿಳಿಯಿತು. ಬೇಯುತ್ತಿದ್ದ ಪುಳಿಯೋಗರೆ ಪುಡಿ ಕಪ್ಪುಬಣ್ಣಕ್ಕೆ ತಿರುಗತೊಡಗಿತು. ಈ ಮಾರಾಮಾರಿಕಂಡು ಗಾಬರಿಯಾದ ನಾನು ಒಲೆಯ ಸ್ವಿಚ್ ಆರಿಸಿ ಕೈ ಹಿಂದೆತರುತ್ತಿದ್ದೆ...

ಢಮಾರ್!

ಅದ್ಯಾವ ರಾಸಾಯನಿಕ ಕ್ರಿಯೆ ನಡೆಯಿತೋ, ಎಣ್ಣೆ-ಪುಳಿಯೋಗರೆಪುಡಿಗಳ ಅದ್ಯಾವ ಅಣು-ಪರಮಾಣುಗಳು ಕಚ್ಚಾಡಿಕೊಂಡವೋ ಗೊತ್ತಿಲ್ಲ, ದೊಡ್ಡ ಸದ್ದಿನೊಂದಿಗೆ ಸ್ಫೋಟ ಸಂಭವಿಸಿ ಪಾತ್ರೆಯೇ ಅಲ್ಲಾಡಿಹೋಯಿತು. ಬೆಚ್ಚಿಬಿದ್ದ ನಾನು ಬಾಂಬ್ ಸ್ಫೋಟಕ್ಕ ಸಿಲುಕಿದವನಂತೆ ಛಂಗನೆ ನೆಗೆದು ಪಕ್ಕದಲ್ಲಿದ್ದ ಮಂಚವೇರಿಕುಳಿತೆ!

ಸುಟ್ಟ ಹೊಗೆ, ಕರಟಿದ ವಾಸನೆ, ಮೇಜಿನ ಮೇಲೆಲ್ಲಾ ಚೆಲ್ಲಾಪಿಲ್ಲಿಯಾದ ಕಡಲೆಬೀಜ-ಪುಳಿಯೋಗರೆ ಪುಡಿಗಳು...  ಉಪಗ್ರಹವನ್ನು ಹೊತ್ತ ರಾಕೇಟೊಂದು ಈಗಷ್ಟೇ ಬಾಹ್ಯಾಕಾಶಕ್ಕೆ ಹಾರಿದ ಜಾಗದಲ್ಲಿ ಇರುವಂತಹಾ ಎಲ್ಲಾ ಲಕ್ಷಣಗಳೂ ಅಲ್ಲಿದ್ದವು. ಪುಣ್ಯಕ್ಕೆ ಒಲೆಯ ಸ್ವಿಚ್ಚನ್ನು ನಾನಾಗಲೇ ಆರಿಸಿದ್ದರಿಂದ ಸ್ಫೋಟ ಅಲ್ಲಿಗೇ ನಿಂತಿತು. ಆಗಿದ್ದಾದರೂ ಏನೆಂಬುದೇ ಅರಿವಾಗದೆ ಕಂಗಾಲದ ನಾನು ಮೆಲ್ಲನೆ ಸುಧಾರಿಸಿಕೊಂಡೆ. ನಾನು ಕೊಂಡು ತಂದದ್ದು ಪುಳಿಯೋಗರೆ ಪುಡಿಯೋ ಅಥವಾ ಬೇರ್ಯಾವ ಆಸ್ಫೋಟನಾಕಾರಿ ಸಾಮಗ್ರಿಯೋ ಎಂದು ಪರೀಕ್ಷಿಸಿದೆ. ಯಾರಿಗೆ ಗೊತ್ತು? ಆಲ್-ಖೈದಾದವರೋ, ಇನ್ಯಾವ ಉಗ್ರ ಸಂಘಟನೆಯವರೋ ಪುಳಿಯೋಗರೆ ಪ್ಯಾಕ್ನಲ್ಲಿ ಪುಡಿಪುಡಿ ಬಾಂಬ್ ತುಂಬಿಸಿ ಕಳಿಸಿರಲಿಕ್ಕೂ ಸಾಕು! ಅಥವಾ ಮೊದಲು ನಾನು ಅಯ್ಯಂಗಾರನ್ನು ಬೇಡ ಅಂದಿದ್ದನ್ನೇನಾದರೂ ಕೇಳಿಸಿಕೊಂಡ, ಇಲ್ಲೇ ಎಲ್ಲೋ ತೆಲಾಡುತ್ತಿರುವ ಯಾವದೋ ಅಯ್ಯಂಗಾರಿ ಆತ್ಮ ಹೀಗೆ ಮಾಡಿದ್ದರೂ ಮಾಡಿರಬಹುದು.

ಸಂಜೆ ಈ ಘಟನೆಯ ಕುರಿತಾದ ಸಮಗ್ರ ವರದಿಯೊಂದನ್ನು ತಯಾರಿಸಿ, ಗೆಳತಿಯೊಬ್ಬಳಿಗೆ ಒಪ್ಪಿಸಿ ಅವಳ ತಜ್ಞ ಅಭಿಪ್ರಾಯ ಕೇಳಿದೆ. ಎರೆಡು ನಿಮಿಷಗಳ ಕಾಲ ಸುಧೀರ್ಘವಾಗಿ ನಕ್ಕ ಅವಳು ಒಲೆಯ ಉಷ್ಣದ ಪ್ರಮಾಣ ಜಾಸ್ತಿ ಇದ್ದುದು ಹಾಗೂ ಸ್ಟೀಲ್ ಪಾತ್ರೆಗೆ ಪಾಮಾಯಿಲ್ ಹಿಡಿಸದೇ ಹೋಗಿದ್ದೇ ಈ ಸ್ಫೋಟಕ್ಕೆ ಕಾರಣವೆಂದು ತೀರ್ಪುಕೊಟ್ಟಳು. ಅಲ್ಲದೆ ತಾನು ಅಡಿಗೆ ಮಾಡತೊಡಗಿದ್ದ ಆರಂಭದಲ್ಲೂ ಹೀಗೇ  ಆಗುತ್ತಿತ್ತೆಂದು ಹೇಳಿ 'ಆಸ್ಫೋಟವಿಲ್ಲದೆ ಅಡಿಗೆ ಕಲಿತವರಿಲ್ಲವೈ' ಎಂದು ಸಮಾಧಾನಮಾಡಿದಳು.

ಅಂದು ಮಧ್ಯಾಹ್ನ ಮತ್ತೆ ಹೋಟೆಲ್ನಲ್ಲಿ ಹತ್ತರ ಹರಕು ನೋಟು ಹಿಡಿದುಕೊಂಡು ಸೋಡಬೆರೆಸಿದ ಅನ್ನತಿನ್ನುತ್ತಾ ಕುಳಿತಿದ್ದಾಗ ಹಿಂದಿನ ಕಛೇರಿಯಲ್ಲಿ ಪ್ರೀತಿಯಿಂದ ಬಡಿಸುತ್ತಿದ್ದ ಹೆಡ್ ಕುಕ್ ಅಜ್ಜಿ, ಮನೆಯಿಂದ ತಂದದ್ದನ್ನು ಹಂಚಿಕೊಳ್ಳುತ್ತಿದ್ದ ಸಹೋದ್ಯೋಗಿಗಳು, ಕೇಳಿದ್ದನ್ನೆಲ್ಲ ಬೇಸರವಿಲ್ಲದೆ ಮಾಡಿ ಬಡಿಸುವ ಅಮ್ಮ ಕಣ್ಮುಂದೆ ನಿಂತಂತಾಯಿತು. ಎದ್ದು ಕೈ ತೊಳೆದುಕೊಂಡೆ. ಸಿಂಕಿನಲ್ಲಿ ಮುಖಕ್ಕೆರಚಿಕೊಂಡ ನೀರಿನ ಜೊತೆಗೆ ಒಂದೆರೆಡು ಕಣ್ಣ ಹನಿಗಳೂ ಸದ್ದಿಲ್ಲದೇ ಜಾರಿಹೋದವು.

(12-11-2017ರ ವಿಶ್ವವಾಣಿ 'ವಿರಾಮ' ಸಾಪ್ತಾಹಿಕದಲ್ಲಿ ಪ್ರಕಟಿತ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...