ಗುರುವಾರ, ಡಿಸೆಂಬರ್ 14, 2017

ಪರಮೇಶಿ ಪರಾಕ್ರಮ

ಪರಮೇಶಿಗೆ ಪತ್ತೇದಾರಿ ಕಾದಂಬರಿಗಳೆಂದರೆ ಇನ್ನಿಲ್ಲದ ಹುಚ್ಚು. ತನ್ನ ಚಾಣಾಕ್ಷ ಬುದ್ಧಿಯಿಂದ ಖಳರ ಜೊತೆಗೆ ಸೆಣೆಸುತ್ತಾ, ಕೊಲೆಗಾರನನ್ನು ಸೆರೆಹಿಡಿಯುತ್ತಾ, ನಾಯಕಿಯನ್ನು ಇಂಪ್ರೆಸ್ ಮಾಡುವ ನಾಯಕನೊಂದಿಗೆ ತನ್ನನ್ನು ಹೋಲಿಸಿಕೊಂಡು ಹಗಲುಗನಸು ಕಾಣುವುದು ಪರಮೇಶಿಯ ನೆಚ್ಚಿನ ಅಭ್ಯಾಸಗಳಲ್ಲೊಂದು. ಬನೀನು ತೊಟ್ಟ ಬೇತಾಳದಂತಿರುವ ತನ್ನ ಭುಜಬಲದ ಮೇಲೆ ಅವನಿಗೊಂದು ತೆರನಾದ ಅಭಿಮಾನ. ಸಣ್ಣವನಿದ್ದಾಗ ತನಗಿಂತ ನಾಲ್ಕುಪಟ್ಟು ದಪ್ಪವಿದ್ದ ಕೋದಂಡನೊಂದಿಗೆ ಹೇಗೆ ಸೆಣೆಸಿದ್ದನೆನ್ನುವುದನ್ನು ಈಗಲೂ ನೆನಪಿಸಿಕೊಂಡು ಮೀಸೆ ತಿರುವಿಕೊಳ್ಳುವ ಪರಮೇಶಿ ಸದಾ ಚಿಕ್ಕ ತೋಳಿನ, ಮೈಗೆ ಅಂಟಿಕೊಂಡಂತಿರುವ ಬಟ್ಟೆಗಳನ್ನೇ ಧರಿಸುತ್ತಾನೆ‌. ಕನ್ನಡಿ ಕಂಡರೆ ಸಾಕು, ಪರಮೇಶಿಯ ಅಂಗಿ ಅವನ ಮೈಮೇಲೆ ನಿಲ್ಲುವುದಿಲ್ಲ. ಹಲ್ಮಟ್ಟೆ ಕಚ್ಚಿಹಿಡಿದು, ವಾರಗಳ ಹಿಂದೆ ಒಣಗಿಹೋದ ನುಗ್ಗೇಕಾಯಿಯಂತಿರುವ ತನ್ನ ಮಾಂಸಖಂಡಗಳನ್ನು ಬಿಗಿಗೊಳಸಿ "ಹೂಂ" ಎಂದು ಹೂಂಕರಿಸುತ್ತಾನೆ. ಇನ್ನೇನು ಮುರಿದು ಹೋಗುವಂತಿರುವ ಅವನ ಮೂಳೆಗಳನ್ನು ಕಂಡ ಕನ್ನಡಿ ಗಡಗಡನೆ ನಡುಗುತ್ತದೆ.

ಊರಿನಲ್ಲಿ ಡಿಗ್ರಿ ಓದುತ್ತಿದ್ದ ದಿನಗಳಲ್ಲಿ ಮನೆಯಲ್ಲಿದ್ದ ತೂಕದ ಕಲ್ಲು, ಕಬ್ಬಿಣದ ಸರಳೇ ಮುಂತಾದ ಭಾರದ ವಸ್ತುಗಳನ್ನೆಲ್ಲ ಹೇಗ್ಹೇಗೋ ಎತ್ತಿಳಿಸಿ ವ್ಯಾಯಾಮ ಮಾಡುತ್ತಾ ಮನೆಯವರನ್ನೆಲ್ಲ ಭಯಬೀಳಿಸುತ್ತಿದ್ದ ಪರಮೇಶಿ  ಕಳೆದ ಆರು ತಿಂಗಳಿಂದ ಪ್ರತಿದಿನ ಜಿಮ್'ಗೆ ಹೋಗುತ್ತಿದ್ದಾನೆ. ಇವನ ದೇಹದಾರ್ಢ್ಯವನ್ನು ಹೆಚ್ಚಿಸಬಲ್ಲ ಯಾವ ಉಪಕರಣವೂ ಅಲ್ಲಿಲ್ಲವೆನ್ನುವುದು ಬೇರೆ ವಿಷಯ ಬಿಡಿ. ಅಲ್ಲಿ ಮೊದಲ ದಿನ ಅಂಗಿ ಕಳಚಿದಾಗ ಇವನ ಡಯೆಟ್ ಮಾಡದೇ ಬಂದಿರುವ ಸಿಕ್ಸ್ ಪ್ಯಾಕನ್ನು ನೋಡಿ ಟ್ರೈನರ್ ಕೂಡಾ ಬೆಚ್ಚಿಬಿದ್ದದ್ದು ಈಗ ಇತಿಹಾಸ. ಅಲ್ಲದೇ ಸಂಜೆ ತನ್ನ ರೂಮಿನೆದುರಿಗಿನ ಪಾರ್ಕಿನಲ್ಲಿ ಮಕ್ಕಳಿಗೆ ಹೇಳಿಕೊಡುವ ಕರಾಟೆಯ ಪಟ್ಟು-ಪೆಟ್ಟುಗಳನ್ನು ಪರಮೇಶಿ ಆಸಕ್ತಿಯಿಂದ ನೋಡಿಕೊಳ್ಳುತ್ತಾನೆ. ರೂಮ್ ಮೇಟ್ ಇಲ್ಲದ ಹೊತ್ತಿನಲ್ಲಿ 'ಕ್ಯೂ ಯಾ ಹೈ....' ಎಂಬ ಭಯಾನಕ ಕೂಗಿನೊಂದಿಗೆ ಕರಾಟೆ ಅಭ್ಯಾಸಕ್ಕೆ ತೊಡಗಿದನೆಂದರೆ ಗೋಡೆಯ ಮೇಲಿರುವ ಹಲ್ಲಿ, ಜೇಡ, ಜಿರಳೆಗಳೆಲ್ಲ ಬಿದ್ದು ಓಡತೊಡಗುತ್ತವೆ‌.

ಪರಮೇಶಿಯ ಸಣಕಲು ದೇಹದ ಹಿಂದಿರುವ ಅಗಾಧ ಶಕ್ತಿಯ ಅರಿವಿಲ್ಲದ ಗೆಳೆಯರು ಅವನನ್ನು ಹಾಸ್ಯಮಾಡುತ್ತಾರೆ. ಆದರೆ ಇವತ್ತಲ್ಲ ನಾಳೆ ತನ್ನೊಳಗಿರುವ ಸಿಂಹ ಆಚೆಗೆ ಬರುತ್ತದೆನ್ನುವುದು ಪರಮೇಶಿಗೆ ಮಾತ್ರ ಗೊತ್ತಿರುವ ಸತ್ಯ. ತನ್ನ ಕಲ್ಪನೆಯಲ್ಲಿ ತಾನು ಖಳರೊಂದಿಗೆ ಹೇಗೆ ಸೆಣೆಸುತ್ತೇನೆಂದು ಗೊತ್ತಿಲ್ಲದೆ ಮಾತಾಡುವ ಅವರನ್ನು ನೋಡಿ ಒಳಗೊಳಗೇ ನಗುವ ಪರಮೇಶಿ ಆಫೀಸಿನ ಸುಂದರಿ- ರಿಸೆಪ್ಷನಿಸ್ಟು ಲೀಶಾಳನ್ನು ಸಹಾ ಅನೇಕ ಬಾರಿ ರೌಡಿಗಳಿಂದ ಕಾಪಾಡಿದ್ದಾನೆ.

ಹೀಗಿದ್ದಾಗ ಪರಮೇಶಿಯ ಪರಾಕ್ರಮ ಜಗತ್ತಿಗೆ ತಿಳಿಯುವಂತಹಾ ಘಟನೆಯೊಂದು ನಡೆದೇಹೋಯಿತು. ಅದೊಂದು ಗಿಜಿಗುಡುತ್ತಿದ್ದ ಸೋಮವಾರ ಬೆಳಗ್ಗೆ ಯಾವುದೋ ಕೆಲಸದ ಮೇಲೆ ಬ್ಯಾಂಕಿಗೆ ಹೋಗಿದ್ದ ಪರಮೇಶಿ ಉದ್ದದ ಕ್ಯೂನಲ್ಲಿ ನಿಂತು ಚಲನ್ ತುಂಬುವುದರಲ್ಲಿ ನಿರತನಾಗಿದ್ದ. ಎಲ್ಲರೂ ತಂತಮ್ಮ ಕೆಲಸಗಳಲ್ಲಿ ಮುಳುಗಿಹೋಗಿದ್ದರು.

ಆಗ ಕೇಳಿತು ಅಪಾಯದ ಸೈರನ್!

ಆಗಲಿರುವ ಅನಾಹುತವೇನೆಂಬುದನ್ನು ಹೇಳದೇ ಕ್ಯೂಂವ್ ಕ್ಯೂಂವ್ ಎಂದು ಒಂದೇ ಸಮನೆ ಬಾಯ್ಬಡಿದುಕೊಳ್ಳತೊಡಗಿದ ಸೆಕ್ಯೂರಿಟಿ ಸೈರನ್ನಿಗೆ ನಿಂತ, ಕುಳಿತ, ಓಡಾಡುತ್ತಿದ್ದ ಗ್ರಾಹಕರೆಲ್ಲರೂ ದಂಗಾಗಿ ಸುತ್ತಲೂ ನೋಡತ್ತಿರುವಾಗಲೇ ದಪ್ಪ ಮೀಸೆಯ, ಕೈಯ್ಯಲ್ಲಿ ಮಾರುದ್ದದ ರೈಫಲ್ ಹಿಡಿದ ಠೋಣಪನೊಬ್ಬ ಬ್ಯಾಂಕಿನ ಒಳಗೆಬಂದು ಬಾಗಿಲುಹಾಕಿಬಿಟ್ಟ!

ಹೈಜಾಕ್!

ನೂರಾರು ಪತ್ತೇದಾರಿ ಕಾದಂಬರಿ, ಸಿನೆಮಾಗಳನ್ನು ನೋಡಿ ಪಳಗಿದ್ದ ಪರಮೇಶಿಯ ಚತುರ ಬುದ್ಧಿ ಕ್ಷಣಾರ್ಧದಲ್ಲಿ ಹಾಗೆಂದು ನಿರ್ಧರಿಸಿಬಿಟ್ಟಿತು. ಅವನು ನಿಂತ ಜಾಗದಿಂದ ಕೆಲವೇ ಹೆಜ್ಜೆಗಳ ಅಂತರದಲ್ಲಿ ಕೈಯ್ಯಲ್ಲಿ ಮಾರುದ್ದದ ರೈಫಲ್ ಹಿಡಿದ ಆ ಕ್ರೂರಮುಖದ ಉಗ್ರಗಾಮಿ ನಡೆದುಬರುತ್ತಿದ್ದ. ಇದೇ ಸರಿಯಾದ ಸಮಯ, ತನ್ನ ನಿಜವಾದ ತಾಕತ್ತೇನೆನ್ನುವುದನ್ನು ಜಗತ್ತಿಗೆ ತೋರಿಸಬೇಕು... ಪರಮೇಶಿಯೊಳಗಿನ ಸಿಂಹ ಬಾಲ ಬೀಸತೊಡಗಿತು.

"ಕ್ಯೂ.. ಯಾ... ಹೈ.."

ಸಾಲಿನಲ್ಲಿ ಹಿಂದೆ ಮುಂದೆ ನಿಂತವರೆಲ್ಲ ಬೆಚ್ಚಿಬೀಳುವಂತೆ ಕಿರುಚಿದ ಪರಮೇಶಿ ಛಂಗನೆ ಕುಪ್ಪಳಿಸಿ ಮುಂದಡಿಯಿಡುತ್ತಿದ್ದ ಆತಂಕವಾದಿಯ ಹೊಟ್ಟೆಗೆ ಬಲವಾಗಿ ಒಂದೇಟುಹಾಕಿದ. ತೀರಾ ಅನಿರೀಕ್ಷಿತವಾಗಿದ್ದ ಈ ಪ್ರಹಾರಕ್ಕೆ ಬೆಚ್ಚಿದ ಅವನು ಎರೆಡು ಹೆಜ್ಜೆ ಹಿಂದಕ್ಕೆ ಸರಿದ‌ನಾದರೂ ಮರುಕ್ಷಣವೇ ಸುಧಾರಿಸಿಕೊಂಡು ಪರಮೇಶಿಯ ಮೇಲೆರಗಿದ. ನೋಡನೋಡುತ್ತಿದ್ದಂತೆಯೇ ಬ್ಯಾಂಕಿನ ಆವರಣ ರಣರಂಗವಾಗಿ ಹೋಯಿತು. ಮುಂದಿನ ಮೂರು ನಿಮಿಷಗಳ ಕಾಲ ನಡೆದ ಭೀಕರ ಹೋರಾಟದಲ್ಲಿ ಪರಮೇಶಿಗೆ ಆಶ್ಚರ್ಯವಾಗುವಂತಹಾ ಘಟನೆಯೊಂದು ನಡೆದುಹೋಯಿತು. ಪರಮೇಶಿಯ ಪ್ರತಿಯೊಂದು ಕರಾಟೆ ಪಟ್ಟಿಗೂ ತಕ್ಕ ಪ್ರತ್ಯುತ್ತರ ನೀಡುತ್ತಿದ್ದ ಆತಂಕವಾದಿಯ ಜೊತೆಗೆ ಪ್ಯೂನ್ ಪಾಪಣ್ಣ ಹಾಗೂ ಕ್ಯಾಶಿಯರ್ ಕಾಮರಾಜ್ ಕೂಡಾ ಸೇರಿಕೊಂಡುಬಿಟ್ಟರು. ಇದೇನಿದು ಆಶ್ಚರ್ಯ? ಇವರೂ ಸಹಾ ಆತಂಕವಾದಿಯ ಜೊತೆಗೆ ಶಾಮೀಲಾಗಿದ್ದಾರಾ? ಹಾಗೆಂದು ಯೋಚಿಸುತ್ತಲೇ ಪರಮೇಶಿ ತನ್ನ ಧಾಳಿಯನ್ನು ತೀವ್ರಗೊಳಿಸಿದ. ಆದರೆ ಮುಂದಿನ ಕೆಲವೇ ನಿಮಿಷಗಳಲ್ಲಿ ಮೂವರೂ ಸೇರಿ ಭೀಕರವಾಗಿ ಎಗರಾಡುತ್ತಿದ್ದ ಪರಮೇಶಿಯನ್ನು ಹಿಡಿದು ಒಂದು ಹದಕ್ಕೆ ತಂದರು.

ತಾನು ಅಷ್ಟೆಲ್ಲ ವೀರಾವೇಶದಿಂದ ಹೋರಾಡಿದ್ದು ಯಾವುದೋ ಅಲ್-ಖೈದಾ ಉಗ್ರವಾದಿಯೊಂದಿಗೆ ಅಲ್ಲವೆಂದೂ, ಅಚಾನಕ್ಕಾಗಿ ಕೂಗತೊಡಗಿದ ಸೈರನ್ನನ್ನು ಪರೀಕ್ಷಿಸಲೆಂದು ಒಳಗೆ ಬಂದಿದ್ದ, ಆಗಷ್ಟೇ ಡ್ಯೂಟಿಗೆ ಹಾಜರಾಗಿ ಇನ್ನೂ ಯೂನಿಫಾಮ್ ತೊಡದ ಬ್ಯಾಂಕಿನ ಸೆಕ್ಯೂರಿಟಿ ಗಾರ್ಡ್ ಶೇರ್ ಸಿಂಗ್'ನ ಜೊತೆಯೆಂದೂ ಅರ್ಥವಾಗುವ ಹೊತ್ತಿಗೆ ಪರಮೇಶಿಯನ್ನು ಅವನೊಳಗಿನ ಸಿಂಹದ ಜೊತೆಗೇ ಹೆಡೆಮುರಿಕಟ್ಟಿ ಮೂಲೆಯಲ್ಲಿ ಕೂರಿಸಲಾಗಿತ್ತು.

('ಮಂಗಳ'ದಲ್ಲಿ ಪ್ರಕಟಿತ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...