ಬುಧವಾರ, ಡಿಸೆಂಬರ್ 30, 2015

ನನ್ನೊಳಗಿನ ನಾನು..


ನನ್ನೊಳಗೊಬ್ಬ ಅವನಿದ್ದಾನೆ;
ಮೊಟ್ಟಮೊದಲ ಕೀಳರಿಮೆಯಲ್ಲಿ
ಹುಟ್ಟಿಬಂದವನು;
ನಕ್ಕು ಎಲ್ಲರೊಡನೆ ಬೆರೆಯಬಲ್ಲವನು.
ದುಃಖ ಕಂಡರೆ ಅವನ ಕಂಗಳಲಿ
ಒರೆಸಲು ಹಲವು ಕೈಗಳಿವೆ.
ನನ್ನಂತೆ ಒಂಟಿಯಲ್ಲ ಅವನು.

ನನ್ನಂತೆ ಹೆತ್ತವರ ಪಾಲಿಗವನು
ಹೆಗ್ಗಣವಲ್ಲ;
ದುರ್ಗುಣಗಳಿಲ್ಲ ಅನ್ನುವುದೊಂದೇ
ಅವನ ಸದ್ಗುಣವಲ್ಲ.

ಭಾವನೆಗಳ ಬಚ್ಚಿಟ್ಟ
ಸೆರೆಮನೆಯಲ್ಲ ಅವನ ಹೃದಯ.
ಸ್ವಚ್ಛಂದ ಮಾತುಗಳ ನವಿರಾದ ಕುಂಚದಲಿ
ಮಳೆಬಿಲ್ಲ ಮೂಡಿಸುವ ಮಾತುಗಾರ;
ಮೋಡಿಗಳ ಶರ ಹೂಡಿ ಮನದನ್ನೆಯ ಮನಕೆ
ಅವಳ ಒಲುಮೆಯ ಕದ್ದ ಜಾದೂಗಾರ.

ನನ್ನೆಲ್ಲ 'ಇಲ್ಲ'ಗಳ
ಹುಡುಹುಡುಕಿ ತೋರುವನು,
ಪ್ರತಿಯೊಂದು ಸೋಲಲ್ಲೂ
ಕುಟುಕುಟುಕಿ ಕಾಡುವನು,
'ಹೀಗಿರಬೇಕಿತ್ತು ನೀನು' ಎಂಬುದವನ ಲೇವಡಿ;
ನಾನೆಂಬ ಮಾರ್ಜಾಲದೊಳಮನದ ಹುಲಿಯವನು,
ಹತಾಶೆ ಫಲಿತ ಕಲ್ಪನಾ ನಾಯಕ
'ನನ್ನೊಳಗಿನ ನಾನು'

-ವಿನಾಯಕ ಭಟ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...