ಶುಕ್ರವಾರ, ನವೆಂಬರ್ 13, 2015

ಕಾಣದ ಕೈ ಎಲ್ಲಾ ಕದ್ದು...

"ಡಿಂಗ ಗುಡುಗಿದರೆ ಕಾಡು ನಡುಗೀತು!"
ಬಾಲಮಂಗಳ ಹಿಡಿದ ಅಪ್ಪ ದೊಡ್ಡ ಸ್ವರದಲ್ಲಿ ಕಥೆ ಓದಿ ಹೇಳುತ್ತಿದ್ದರೆ ಪಕ್ಕದಲ್ಲಿ ಕುಳಿತ ಐದು ವರ್ಷದ ಪುಟ್ಟು ಬೆರಗುಗಣ್ಣಿನಿಂದ ಅಪ್ಪನೆಡೆ ನೋಡುತ್ತಾ ತಟ್ಟೆಯಲ್ಲಿ ಅಮ್ಮ ಕಲಸಿಟ್ಟ ಒಂದೊಂದೇ ಅನ್ನದ ತುತ್ತನ್ನು ತನ್ನ ಪುಟ್ಟ ಕೈಗಳಲ್ಲಿ ಎತ್ತಿ ಬಾಯಿಗಿಟ್ಟುಕೊಳ್ಳುತ್ತಾನೆ. ಇದು ನಿತ್ಯದ ಅಭ್ಯಾಸ;

"ಪುಟ್ಟೂ.... ಊಟಕ್ಕೆ ಬಾ"
ಅಮ್ಮ ಕರೆದಾಗ ಪುಟ್ಟು ಕೈಯ್ಯಲ್ಲೊಂದು ಕಥೆಪುಸ್ತಕ  ಹಿಡಿದುಕೊಂಡೇ ಬರುತ್ತಾನೆ. ಅಪ್ಪನಾದರೂ ಅಷ್ಟೇ; ತಾನೆಷ್ಟೇ ಕೋಪಿಷ್ಟನಾದರೂ, ಯಾವ ಕೆಲಸದ ತಲೆಬಿಸಿಯಲ್ಲಿದ್ದರೂ ಪುಟ್ಟುವಿಗೆ ಕಥೆ ಓದಿಹೇಳುವುದನ್ನು ತಪ್ಪಿಸುವುದಿಲ್ಲ.

ಅದು ಬಾಲ್ಯ! ಬಾಲಮಂಗಳ ಎನ್ನುವ ಪುಟ್ಟ ಪುಸ್ತಕದ ಪುಟಗಳಲ್ಲಿ ಬಣ್ಣಬಣ್ಣದ ಚಿತ್ರಗಳಾಗಿ ಮೂಡಿ ಬರುತ್ತಿದ್ದ ಡಿಂಗ, ಲಂಬೋದರ, ಫಕ್ರು, ಕಿಂಗಿಣಿಗಳ ಜೊತೆ ಕನಸಿನಲ್ಲಿ ಆಡುತ್ತಿದ್ದ ಬಾಲ್ಯ; ಬೇಸಿಗೆಯಲ್ಲಿ ಅಡಿಕೆ ತೋಟಕ್ಕೆ ನೀರುಬಿಡಲು ಹೋಗುವ ಅಪ್ಪನ ಹಿಂದೆ ಸಣ್ಣ ಪೈಪೊಂದನ್ನು ಹಿಡಿದ ಪುಟ್ಟು ತಾನೂ ಓಡುತ್ತಿದ್ದ ಬಾಲ್ಯ; ಅಡಿಕೆ ಮರವೇರಿದ ತಮ್ಮಯ್ಯ ಕೊನೆಯನ್ನ ಕಿತ್ತು ತನ್ನ ಸೊಂಟಕ್ಕೆ ಕಟ್ಟಿಕೊಂಡ ಹಗ್ಗದಲ್ಲಿ ಜಾರಿಬಿಡುವುದನ್ನೂ, ಅದನ್ನು ಅಪ್ಪ ಅಷ್ಟೇ ನೈಪುಣ್ಯತೆಯಿಂದ ಹಿಡಿದು ರಾಶಿಹಾಕುವುದನ್ನೂ ಮೈಮರೆತು ನೋಡುತ್ತಿದ್ದ ಬಾಲ್ಯ; "ಬರುವಾಗ ಸೈಕಲ್ ತರ್ತೀನಿ" ಅಂತ ಹೇಳಿ  ಅಡಿಕೆ ಮಂಡಿಗೆ ಹೋಗಿದ್ದ ಅಪ್ಪ ಬರಿಗೈಲಿ ಮರಳಿದಾಗ ಹೊರಳಾಡಿ ಅತ್ತು ರಂಪಾಟಮಾಡಿದ್ದ ಬಾಲ್ಯ; "ಮಂದಿನ್ಸಲ ಅಪ್ನನ್ಜೊತಿಗೆ ನೀನೂ ಹೋಗಿ ಯಾತರದ್ ಬೇಕೋ ಆತರದ್ ಸೈಕಲ್ ತರ್ಲಕ್ಕಡ ಬಿಡಾ..." ಎಂದು ರಮಿಸಿದ್ದ ಅಮ್ಮನ ಮಡಿಲಲ್ಲಿ ಅಳು ಮರೆತಿದ್ದ ಬಾಲ್ಯ....

ಮೊಮ್ಮಗನ ಹೆಸರೂ ಮರೆತು ಹೋಗಿ ಗಣೇಶ, ವಿಘ್ನೇಶ ಎಂದೆಲ್ಲಾ ಕರೆಯುತ್ತಿದ್ದ ಅಜ್ಜನ ಜೊತೆ ಅರಳೀಮರದ ಕಟ್ಟೆಯ ಮೇಲೆ ಕುಳಿತು ರಸ್ತೆಯಲ್ಲಿ ಹೋಗುವ ಬಸ್ಸಿಗೆ ಟಾಟಾ ಮಾಡುತ್ತಿದ್ದ  ಬಾಲ್ಯ; ಕೊನೆಗೆ ಅಜ್ಜ ಸತ್ತಾಗ ಅವನು ಬರೆದುಕೊಟ್ಟಿದ್ದ ಹಾಡಿನ ಪುಸ್ತಕ ಕೈಯ್ಯಲ್ಲಿ ಹಿಡಿದು ಬಿಕ್ಕಿಬಿಕ್ಕಿ ಅತ್ತಿದ್ದ ಬಾಲ್ಯ;  ನರ್ಸ್ ಕೈಗಳಲ್ಲಿ ಕಣ್ಮುಚ್ಚಿ ಮಲಗಿದ್ದ, ಈಗಷ್ಟೇ ಹುಟ್ಟಿರುವ ತಮ್ಮನ ಕೈಯ್ಯನ್ನೊಮ್ಮೆ ಮೆಲ್ಲನೆ ಮುಟ್ಟಿ ಪುಳಕಗೊಂಡಿದ್ದ ಬಾಲ್ಯ; ರಸ್ತೆಯ ನಡುವೆ ಐಸ್ ಕ್ಯಾಂಡಿ ಕೊಡಿಸೆಂದು ಹಠಹಿಡಿದು ಕುಳಿತ ತಮ್ಮನಿಗೆ ಸಾಲದಲ್ಲಿ ಐಸ್ ಕ್ಯಾಂಡಿ ಕೊಡಿಸಿ ಸುಮ್ಮನಾಗಿಸಿದ್ದ ಬಾಲ್ಯ..

ಅಕ್ಕರೆಯಿಂದ ಮತ್ತೆಮತ್ತೆ ಓದುತ್ತಿದ್ದ ಗೆಳತಿಗೋಸ್ಕರವೇ ಹತ್ತಾರು  ಚುಟುಕುಗಳನ್ನ ಬರೆದೊಯ್ಯುತ್ತಿದ್ದ ಬಾಲ್ಯ; ಶಾಲೆ ಮುಗಿಸಿ ಬರುವ ದಾರಿಯಲ್ಲಿ ಹರಿಯುತ್ತಿದ್ದ ಮಳೆನೀರಿಗೆ ಆಣೆಕಟ್ಟು ಕಟ್ಟುತ್ತಾ ಮನೆಗೆ ಬರುವುದು ತಡವಾದಾಗ ಅಮ್ಮನಿಂದ  ಪೆಟ್ಟು ತಿಂದಿದ್ದ ಬಾಲ್ಯ; ವಾರಕ್ಕೊಮ್ಮೆ ಬರುತ್ತಿದ್ದ ಭಾನುವಾರದ ಸಿನೆಮಾಗಾಗಿ ಚಾತಕಪಕ್ಷಿಯಂತೆ ಕಾದಿರುತ್ತಿದ್ದ ಬಾಲ್ಯ; ಕೊನೆಗೆ ಸಮಯಸಾಗುತ್ತಾ ಕಾಣದ ಕೈಯ್ಯಿ ಎಲ್ಲ ಕದ್ದು ನೆನಪಿನಲ್ಲಷ್ಟೇ ಉಳಿದುಹೋದ ಬಾಲ್ಯ...

ಇಂದು ಬೇಕೆಂದದ್ದನ್ನು ಮರುಕ್ಷಣವೇ ಕೊಂಡುಕೊಳ್ಳುವ ಸಾಮರ್ಥ್ಯವಿದೆ; ಆದರೆ ಬಯಸಿದ್ದು ದೊರಕಿತೆಂದು ಮನಸಾರೆ ಸಂಭ್ರಮಿಸಲು ಯಾಕೆ ಆಗುತ್ತಿಲ್ಲ? ದಿನದ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದ ಆ ತೋಟಕ್ಕೆ ಕಾಲಿಟ್ಟು ಅದೆಷ್ಟು ತಿಂಗಳಾಯಿತು? ಬೇಕೆಂದಾಗ ಸಿಡಿ ಕೊಂಡೋ,  ಡೌನ್ ಲೋಡ್ ಮಾಡಿಯೋ ನೋಡಬಹುದಾದ ಸಿನೆಮಾಗಳು ಆ 'ಭಾನುವಾರದ ಸಿನೆಮಾ'ದಷ್ಟು ಸೊಗಾಸಾಗೇಕಿಲ್ಲ? ವಿಷಯವೇ ಇಲ್ಲದೇ ಗಂಟೆಗಟ್ಟಲೇ ಹರಟುತ್ತಿದ್ದ ಗೆಳತಿಗೆ ಇಂದು ನಾನು ಮರೆತೇ ಹೋದದ್ದಾದರೂ ಹೇಗೆ? ಜೊತೆಯಲ್ಲಿ ಆಡಿ, ಜಗಳಾಡಿ, ಅಳಿಸಿ ಕೊನೆಗೆ ರಮಿಸುತ್ತಿದ್ದ ತಮ್ಮನೊಂದಿಗೆ ಎರೆಡು ಮಾತಾಡಲೂ ಇಂದೇಕೆ ಸಮಯವೇ ಸಿಗುತ್ತಿಲ್ಲ?
ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತೇನೆ; ರಜೆ ಹಾಕಿ ಊರಿಗೆ ಬಂದಾಗ ಕೆಲವೊಂದು ತಂಪು ಸಂಜೆಗಳಲ್ಲಿ ಸುಮ್ಮನೆ ಹೊರಗೆ ಹೊರಟುಬಿಡುತ್ತೇನೆ; ಅದೇ ತೋಟದ ದಾರಿಯಲ್ಲಿ, ಗುಡ್ಡದ ಏರಿಯಲ್ಲಿ, ಹಳ್ಳದ ದಂಡೆಯಮೇಲೆ ನಡೆಯುತ್ತಾ ಮತ್ತದೇ ಖುಷಿಗಾಗಿ ಅರಸುತ್ತೇನೆ. ಅಪ್ಪ ಬಾಳೇದಿಂಡನ್ನು ಕೆತ್ತಿ ಗಾಡಿ ಮಾಡಿಕೊಟ್ಟಿದ್ದ ಜಾಗವನ್ನು ದಿಟ್ಟಿಸುತ್ತಾ ನಿಮಿಷಗಟ್ಟಲೆ ನಿಲ್ಲುತ್ತೇನೆ. ಮುದ್ದಿನ ಬೆಕ್ಕು ನರಳುತ್ತಾ ಪ್ರಾಣಬಿಟ್ಟ ಅಂಗಳದ ಮೂಲೆಯನ್ನೊಮ್ಮೆ ಮೆಲ್ಲನೆ ಸವರುತ್ತೇನೆ. ಗೆಳತಿ ಹೊರಳಿನೋಡಿ ನಕ್ಕು ಮುನ್ನಡೆದಿದ್ದ ದಾರಿಯಲ್ಲಿ ಸುಮ್ಮನೆ ನಡೆಯುತ್ತೇನೆ.....

ಬಿಡುವಿನ ಅರ್ಥವನ್ನೇ ಮರೆಸುತ್ತಿರುವ ಬೆಂಗಳೂರು, ಕೆಲಸದಾಚೆಗಿನ ಸಂಗತಿಗಳನ್ನೇ ಅರಿಯದಂತಿರುವ ಎಂಡಿ, ಬಾಸ್, ಮ್ಯಾನೇಜರ್ ಗಳು, ಎಷ್ಟೇ ಬುದ್ಧಿವಂತನಾದರೂ ಭಾವನೆಗಳಿಗೆ ಸ್ಪಂದಿಸಲಾರದ ಕಂಪ್ಯೂಟರ್ ಎದುರು ಯಾಂತ್ರಿಕವಾಗಿ ಕಳೆದುಹೋಗುತ್ತಿರುವ ದಿನಗಳು, ಅನಿರೀಕ್ಷಿತ ಸಮಯದಲ್ಲಿ ರಿಂಗಾಗತೊಡಗಿದ ಮೊಬೈಲ್ನಲ್ಲಿ ಮೂಡಿಬರುತ್ತಿರುವ ಅಮ್ಮನ ನಂಬರ್ ಮೂಡಿಸುವ ಆತಂಕ, ಎಷ್ಟೇ ದುಡಿದರೂ ವಸತಿ, ಬಟ್ಟೆ, ಆಹಾರಗಳಿಗಿಂತ ಹೆಚ್ಚಿನದೇನನ್ನೂ ಕೊಡಲಾರದ ಸಂಪಾದನೆ... ಇದೆಲ್ಲದರ ನಡುವೆ ಕಳೆದುಹೋಗಿರುವ ನನ್ನನ್ನು ಹುಡುಕುವುದಾದರೂ ಹೇಗೆ?
ಹಳೆಯದೊಂದು ಅಪ್ಪ-ಅಮ್ಮನ ಜೊತೆ ತೆಗೆಸಿಕೊಂಡ  ಫೋಟೋ ನೋಡುತ್ತಾ ಯೋಚಿಸುತ್ತೇನೆ. ತಮ್ಮನ ಹೆಗಲಮೇಲೆ ಕೈಹಾಕಿ ನಿಂತಿರುವ 'ಪುಟ್ಟು' ತಣ್ಣಗೆ ನಗುತ್ತಾನೆ...

("ನಿಮ್ಮೆಲ್ಲರ ಮಾನಸ"ದ ನವೆಂಬರ್೨೦೧೫ ನೇ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...