ಸೋಮವಾರ, ಆಗಸ್ಟ್ 3, 2020

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...



ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕಳಿಕೆ ಶುರುವಾಗಿದೆ. 


“ನೋಡ್ತಿರು...ದೊಡ್ಡ ಸಾಧನೆ ಮಾಡಿ ನಾನೇನು ಅಂತ ತೋರಿಸ್ತೀನಿ ಅವಳಿಗೆ!”

ಅರ್ಧ ಕೆಜಿ ಅಳು, ಎರೆಡು ಕ್ವಿಂಟಾಲ್ ಹತಾಶೆ, ಎರೆಡು ಡಜನ್ ರೊಚ್ಚು, ಐದೂವರೆ ಕ್ವಾಟರ್ ನಶೆ ಹಾಗೂ ಸಾವಿರಾರು ಗ್ಯಾಲನ್ ದುಃಖ… ಇವೆಲ್ಲ ಒಟ್ಟಾಗಿ ಬೆರೆತ ಧ್ವನಿಯೊಂದು ಹಾಗಂತ ಅಬ್ಬರಿಸುತ್ತದೆ.


“ಹೂ ಮಚ್ಚೀ.. ನೀನೇನಾದ್ರೂ ಅಚೀವ್ಮೆಂಟ್ ಮಾಡ್ಲೇಬೇಕು. ನಿನ್ನ ಬಿಟ್ಟೋಗಿದ್ದು ಎಷ್ಟು ದೊಡ್ಡ ಲಾಸ್ ಅಂತ ಅವಳಿಗೆ ರಿಯಲೈಸ್ ಆಗ್ಬೇಕು. ಅದೇ ನನ್ ಆಸೆ ಮಚ್ಚೀ..”

ಪಕ್ಕದಲ್ಲಿ ನಾಲ್ಕನೇ ಕ್ವಾಟರ್ ನ ಹೊಡೆತಕ್ಕೆ ಸಣ್ಣಗೆ ತೊದಲುತ್ತಿರುವ ಧ್ವನಿ ಹಾಗಂತ ಬಡಬಡಿಸುತ್ತದೆ. 


“ನಿಜ ಮಗ.. ನಿನ್ನಿಂದ ಸಾಧ್ಯ ಇದೆ. ಮಾಡು ಮಗಾ ಮಾಡು..”

ಪಕ್ಕದಲ್ಲೇ ಕುಳಿತಿರುವ ಮತ್ತೆರೆಡು ವಾಲುಗಾಡಿಗಳು ಹಾಗಂತ ಬೆನ್ನುತಟ್ಟುತ್ತವೆ. ಇದ್ದಕ್ಕಿದ್ದಂತೆ ಅಲ್ಲಿನ ವಾತಾವರಣವೇ ಬದಲಾಗುತ್ತದೆ. ಈಗ ಅಲ್ಲೊಂದು ವೇದಿಕೆ ಸಿದ್ಧವಾಗಿದೆ. ಪ್ರಧಾನ ಮಂತ್ರಿಗಳೂ ಸೇರಿದಂತೆ ಹಲವಾರು ಘಟಾನುಘಟಿಗಳು ಅಲ್ಲಿ ಆಸೀನರಾಗಿದ್ದಾರೆ.ಅವರೆಲ್ಲ ಸೇರಿ ಆರನೇ ಕ್ವಾಟರನ್ನೂ ಯಶಸ್ವಿಯಾಗಿ ‌ಕುಡಿದು ಮುಗಿಸಿರುವ ನಮ್ಮ ‘ಮಚ್ಚಿ’ಗೆ ಇನ್ನೇನು ಪ್ರಶಸ್ತಿ ಕೊಡಲಿದ್ದಾರೆ. ಅವನ ಗೆಳೆಯರೆಲ್ಲ ಚಪ್ಪಾಳೆ ತಟ್ಟಲು ಹೆಮ್ಮೆಯಿಂದ ತಯಾರಾಗಿದ್ದಾರೆ‌. ಕೈಕೊಟ್ಟುಹೋದ ಹುಡುಗಿಯೀಗ 'ಇಂಥವನನ್ನು ಬಿಟ್ಟುಹೋದೆನಲ್ಲಾ' ಎಂದು ಕೈಕೈ ಹಿಸುಕಿಕೊಳ್ಳುತ್ತಿದ್ದಾಳೆ..


“ಆಆಆಆಆ…. ಹಚೀ"


ಟೆರಾಸು ದೊಡ್ಡದಾಗಿ ಆಕಳಿಸುತ್ತದೆ. ಇಂತಹಾ ಅದೆಷ್ಟೋ ತಡರಾತ್ರಿಯ ಸನ್ಮಾನ ವೇದಿಕೆಗಳನ್ನೂ, ಹತಾಶ ಚಾಲೆಂಜ್ ಗಳನ್ನೂ ನೋಡೀ ನೋಡೀ ಅದಕ್ಕೂ ಬೋರಾಗಿದೆ. ಇನ್ನೇನು ಪ್ರಶಸ್ತಿ ಬಂದೇಬಿಟ್ಟಿತು ಎನ್ನುವಷ್ಟರಲ್ಲಿ ನಷೆಯೇರಿ ಧರಾಶಾಯಿಯಾದ ಧೀರರನ್ನೆಲ್ಲ ತನ್ನ ಎದೆಯ ಮೇಲೆ ಮಲಗಿಸಿಕೊಂಡು ಅದೂ ನಿದ್ರೆಗೆ ಜಾರುತ್ತದೆ.


                       *****************


ಬ್ರಹ್ಮಚಾರಿ ಜೀವನವೆಂದರೆ ಇಂತಹಾ ಅನೇಕ ಎಪಿಸೋಡ್ ಗಳ ಧಾರಾವಾಹಿಯಿದ್ದಂತೆ. ಹುಟ್ಟಿದೂರ ಬಿಟ್ಟುಬಂದು, ಕಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡು, ನಗರದ ಕಟ್ಟಡದ ಟೆರಾಸೊಂದರ ಮೇಲಿನ ರೂಮನ್ನು ಗೊತ್ತುಮಾಡಿಕೊಂಡು, ಜೊತೆಗಿರಲಿಕ್ಕೆ ಹಾಗೂ ಬಾಡಿಗೆಯ ಜೊತೆ ಅದೆಷ್ಟೋ ಬೈಟೂ ಕಾಫಿಗಳನ್ನೂ, ಫುಲ್ ಪ್ಲೇಟಿನ ಅರ್ಧ ಗೋಭೀ ಮಂಚೂರಿಗಳನ್ನೂ ಹಂಚಿಕೊಳ್ಳಲಿಕ್ಕೆ ರೂಮ್ ಮೆಟ್ ಒಬ್ಬನನ್ನು ಹುಡುಕಿಕೊಳ್ಳುತ್ತಿದ್ದಂತೆಯೇ ಬ್ಯಾಚುಲರ್ ಬದುಕು ಆರಂಭವಾಗುತ್ತದೆ. ಹಾಗೆ ಬರುವ ಪ್ರತಿಯೊಬ್ಬ ಬ್ರಹ್ಮಚಾರಿಯ ಹೆಗಲಿನ ಚೀಲದಲ್ಲೂ ಬಿಟ್ಟುಬಂದ ಬಾಲ್ಯದ ನೆನಪುಗಳಿರುತ್ತವೆ. ಆಡಾಡುತ್ತಾ ಅರ್ಧಕ್ಕೇ ಬಿಟ್ಟು ಎದ್ದುಬರುವಾಗ ಜೋಪಾನವಾಗಿ ಎತ್ತಿಟ್ಟುಕೊಂಡುತಂದ ಗೋಲಿಯೊಂದಿರುತ್ತದೆ. ಕಾಲೇಜಿನಲ್ಲಿ ಗೆಳೆಯರ ಜೊತೆ ಕೇಕೆ ಹಾಕಿ ಕುಣಿದ ಸಂಮಭ್ರಮದ ಅವಶೇಷಗಳಿರುತ್ತವೆ. ಶಹರದ ರಂಗ್ ಬಿರಂಗೀ ಬದುಕಿನೆಡೆಗೆ ಭಯ ಬೆರೆತ ಅಚ್ಚರಿಯ ದೃಷ್ಟಿಯಿರುತ್ತದೆ. ಸಿಗಲಿರುವ ಗೆಳೆಯ-ಗೆಳತಿಯರ ಬಗ್ಗೆ ಕುತೂಹಲವಿರುತ್ತದೆ.


ನಗರ ಬ್ರಹ್ಮಚಾರಿಗಳ ಪಾಲಿನ ಸ್ವರ್ಗ. ಇದು ಚಿಟ್ಟೆಯ ಪಾಲಿನ ಹೂದೋಟದಂತೆ; ಡೈನೋಸರ್ ಗಳ ಪಾಲಿನ ಜುರಾಸಿಕ್ ಪಾರ್ಕಿನಂತೆ! ಊರಿನಲ್ಲಿ ಅಪ್ಪ-ಅಮ್ಮನಾದಿಯಾಗಿ ಸರ್ವ ಬಂಧುಮಿತ್ರರಿಂದಲೂ ಪ್ರೀತಿಯಿಂದ ಬೀಳ್ಕೊಡಲ್ಪಟ್ಟ ಹಳ್ಳಿಹೈದನನ್ನು ಮೆಜಸ್ಟಿಕ್ಕಿನ ಅಪರಿಚಿತ ಬೀದಿಯಲ್ಲಿ ಅನಾಥವಾಗಿ ಇಳಿಸಿದ ಬಸ್ಸು ತಿರುವಿನಾಚೆಗೆ ಸಾಗಿ ಮರೆಯಾಗಿಬಿಡುತ್ತದೆ. 'ಹೊಸನಗರ ಟೂ ಬೆಂಗಳೂರು' ಎಂಬ ಬೋರ್ಡಿನಲ್ಲಿ ತನ್ನೂರಿನ ಹೆಸರನ್ನು ಕೊನೆಯಬಾರಿಯೊಮ್ಮೆ ನೋಡಿಕೊಂಡ ಅವನು ನೂರಾರು ಅಪರಿಚಿತರ ಮೆಜಸ್ಟಿಕ್ಕಿನ ಬೀದಿಯಲ್ಲಿ ತನ್ನವರನ್ನು ಹುಡುಕುತ್ತಾ ಮೊದಲ ಹೆಜ್ಜೆಯಿಡುತ್ತಾನೆ. ಯಾವುದೋ ಗೆಳೆಯ/ಅಣ್ಣ/ಬಂಧುವು ಟೆರಾಸಿನ ಮೇಲೆ ಮಾಡಿಕೊಂಡಿರುವ ಒಂಟಿ ರೂಮು ಅಲ್ಯಾವುದೋ ಏರಿಯಾದ ಎಷ್ಟನೆಯದೋ ಕ್ರಾಸಿನಲ್ಲಿ ಅವನ ಹಾದಿಯನ್ನೇ ಕಾಯುತ್ತಿರುತ್ತದೆ.


ನಗರಕ್ಕೆ ಕಾಲಿಟ್ಟ ಮೇಲೆ ಎದುರಾಗುವ ಮೊದಲ ಸವಾಲೆಂದರೆ ಇಂಟರ್ವ್ಯೂ ಎಂಬ ಸ್ವಯಂವರ. ಇಷ್ಟು ವರ್ಷ ಕಾಲೇಜಿನಲ್ಲಿ ಕಲಿತ ಬಿಲ್ವಿದ್ಯೆ, ಕತ್ತಿವರಸೆ, ಕಳರೀಪಯಟ್ ಗಳನ್ನೆಲ್ಲಾ ಇಂಟರ್ವ್ಯೂವರ್ ಎಂಬ ಮಹಾರಾಜನೆದುರು ಎಷ್ಟೇ ವೀರೋಚಿತವಾಗಿ ಪ್ರದರ್ಶಿಸಿದರೂ ಅವನು ಕೆಲಸವೆಂಬ ಯುವರಾಣಿಯನ್ನು ಕೊಡದೇ ಸತಾಯಿಸುತ್ತಾನೆ. ಕೊನೆಗೂ ಯಾವುದೋ ಒಂದು ಕಂಪನಿಯಲ್ಲಿ ಶಿವಧನುಸ್ಸನ್ನು ಮುರಿದು ಕೆಲಸಗಿಟ್ಟಿಸುವ ಹೊತ್ತಿಗೆ ಬೆಂಗಳೂರಿನ ಹಲವಾರು ಏರಿಯಾಗಳ ಹೆಸರುಗಳೂ, ಬಿಎಂಟಿಸಿ ಬಸ್ಸಿನ ನಂಬರ್ ಗಳೂ ಬಾಯಿಪಾಠವಾಗಿ, ಬೆಂಗಳೂರು ವಾರದ ಹಿಂದೆ ಪರಿಚಯವಾದ ಹೊಸ ಗೆಳೆಯನಂತಾಗಿರುತ್ತದೆ. 


ಮೊದಲ ಉದ್ಯೋಗವೆಂದರೆ ಅವನು ಆಯ್ದುಕೊಳ್ಳುವುದಲ್ಲ, ಅವನನ್ನು ಆಯ್ಕೆಮಾಡಿಕೊಳ್ಳುವುದು! ಹಕ್ಕಿಯೊಂದು ಪುಟ್ಟ ಗೂಡಿನಿಂದ ವಿಶಾಲ ಜಗತ್ತಿಗೆ ಬಿದ್ದ ಸಮಯವದು. ಚಿಕ್ಕ ಹಳ್ಳಿಯಿಂದ ರಾಕ್ಷಸ ಪಟ್ಟಣಕ್ಕೆ, ವಿದ್ಯಾರ್ಥಿ ಜೀವನದಿಂದ ಔದ್ಯೋಗಿಕ ಬದುಕಿಗೆ, ಕನ್ನಡವಷ್ಟೇ ಇದ್ದ ಊರಿನಿಂದ ತೆಲುಗು, ತಮಿಳು, ಮಲೆಯಾಳ, ಹಿಂದಿ, ಇಂಗ್ಲೀಷುಗಳೆಲ್ಲದರ ಕಲಸು ಮೆಲೋಗರಕ್ಕೆ, ಅಪ್ಪ-ಅಮ್ಮ-ಗೆಳೆಯರ ಮಡಿಲಿನಿಂದ ಅಪರಿಚಿತ ಪ್ರತಿಸ್ಪರ್ಧಿಗಳಿರುವ ರಂಗಸ್ಥಳಕ್ಕೆ… ಹೀಗೆ ಬದುಕು ಈವರೆಗೆ ಕಾಣದ ಬೇರೆಯದೇ ವಾತಾವರಣಕ್ಕೆ ಥಟ್ಟನೆ ಹೊರಳಿಕೊಂಡುಬಿಟ್ಟಿರುತ್ತದೆ‌. ಬಸ್ಸಿನಲ್ಲಿ ಅಪರಿಚಿತೊಬ್ಬ ಜಗಳಕ್ಕೇ ನಿಲ್ಲುತ್ತಾನೆ. ಯಾರೋ ಮೊಬೈಲು, ಪರ್ಸು ಎಗರಿಸುತ್ತಾರೆ. ಆಫೀಸಿನಲ್ಲಿ ಬಾಸು ಕಿರುಚುತ್ತಾನೆ. ಸೀನಿಯರ್ ಸಿಡುಕುತ್ತಾನೆ. ಬದುಕು ಟ್ರಾಫಿಕ್ಕು-ಆಫೀಸುಗಳೆಂಬ ನಿಂತನೀರಿನಲ್ಲಿ ಮೆಲ್ಲನೆ ಬೆಳೆಯತೊಡಗುತ್ತದೆ. ಬೆಳಗಾಗುತ್ತಿದ್ದಂತೆಯೇ ಹಾಕಿ ಹೊರಟ ರೂಮಿನ ಬಾಗಿಲನ್ನು ಕತ್ತಲಾದ ನಂತರವೇ ತೆರೆಯುವಂತಾಗುತ್ತದೆ. ಸೂರ್ಯ ಅಪರಿಚಿತನಂತನಾಗುತ್ತಾನೆ. ಊರು, ಅಪ್ಪ, ಅಮ್ಮ, ಗೆಳೆಯರ ನೆನಪು ಉಕ್ಕುಕ್ಕಿ ಬರುತ್ತದೆ‌. ಫೋನು ದಿನಕ್ಕೆ ಹತ್ತು ಬಾರಿ ಅಮ್ಮನ ನಂಬರನ್ನು ಡಯಲ್ ಮಾಡುತ್ತದೆ. 'ನಾನು ಊರಿಗೆ ವಾಪಾಸು ಬರ್ತೀನಿ ಅಮ್ಮಾ' ಎಂಬ ಮಾತು ತುಟಿಯಂಚಿನಲ್ಲಿಮತ್ತೆ ಮತ್ತೆ ಜಾರಿಬೀಳುತ್ತದೆ. 


ಹೀಗಿರುವಾಗಲೇ ಮೊದಲ ಸಂಬಳವು ಅಪ್ಪನ ಮೈಮೇಲೆ ಹೆಮ್ಮೆಯ ತಿಳಿನೀಲಿ ಅಂಗಿಯಾಗಿ ಮಿರಮಿರ ಹೊಳೆಯುತ್ತದೆ. ಅಮ್ಮನ ಒಡಲಲ್ಲಿ ಸಂಭ್ರಮದ ಜರತಾರಿ ಸೀರೆಯಾಗಿ ಸರಭರಗುಟ್ಟುತ್ತದೆ. ತಂಗಿಯ ಕೈಯಲ್ಲಿ ಹರುಷದ ಬಳೆಯಾಗಿ ಘಲ್ಲೆನ್ನುತ್ತದೆ. ತಮ್ಮನ ಮೊಬೈಲಿಗೆ ಕರೆನ್ಸಿಯಾಗುತ್ತದೆ. ಬದುಕ ದಾರಿಯಲ್ಲಿ ಮೈಲುಗಲ್ಲೊಂದನ್ನು ಸದ್ದಿಲ್ಲದೇ ದಾಟಿಬಂದೆನೆಂಬುದು ಮೆಲ್ಲಗೆ ಅರಿವಾಗುತ್ತದೆ. 'ಕೆಲಸ ಸಿಕ್ತಲ್ಲಾ, ಇನ್ನು ಮದುವೆ ಮಾಡಬಹುದು' ಎಂಬ ಛೇಡಿಕೆ ಸಾಮಾನ್ಯವಾಗುತ್ತದೆ. ಆಫೀಸಿನ ಕ್ಯಾಂಟೀನಿನಲ್ಲಿ ತನ್ನಂತೆಯೇ ಬೆದರಿ ಕುಳಿತಿರುವ ಬಡಪಾಯಿಯೊಬ್ಬ ಪರಿಚಯವಾಗುತ್ತಾನೆ. ತನ್ನದೇ ಟೀಮಿನಲ್ಲಿರುವ ಸಹೋದ್ಯೋಗಿಯೊಬ್ಬಳು ಆತ್ಮೀಯಳಾಗುತ್ತಾಳೆ. ವಾರದ ಕೊನೆಯಲ್ಲಿ ಥಿಯೇಟರ್, ಮಾಲ್, ಪಾರ್ಕುಗಳ ಸುತ್ತಲಿಕ್ಕೆ ಗೆಳೆಯರ ತಂಡವೊಂದು ತಯಾರಾಗುತ್ತದೆ. ಮಗಾ, ಮಚ್ಚೀ, ಡ್ಯೂಡ್, ಡಾ ಗಳು ಒಬ್ಬೊಬ್ಬರಾಗಿ ಬದುಕಿನೊಳಗೆ ಪ್ರವೇಶಿಸತೊಡಗುತ್ತಾರೆ. ಯಾರೋ ಹುರಿದುಂಬಿಸಿದರೆಂದು ಕರೆಸ್ಪಾಂಡೆನ್ಸಿನಲ್ಲಿ ಎಂಬಿಎಗೆ ಸೇರಿಕೊಂಡು ಪಾಸಾಗಲಿಕ್ಕೆ ಪಾಡುಪಡುತ್ತಾನೆ. ಬಸ್ಸಿನಲ್ಲಿ ಪಕ್ಕದ ಸೀಟಿನಲ್ಲಿ ಕೂತ ಅಪರಿಚಿತನೊಬ್ಬ ಅದೆಂಥದೋ ಚೈನ್ ಲಿಂಕ್ ಬ್ಯುಸಿನೆಸ್ಸಿಗೆ ಸಿಕ್ಕಿಸಲು ನೋಡುತ್ತಾನೆ. ಇನ್ನೇನು ಹಣ ಹಾಕಬೇಕೆನ್ನುವಷ್ಟರಲ್ಲಿ ಯಾರೋ ತಡೆಯುತ್ತಾರೆ‌. ಹೀಗೆ ಬೆಂಗಳೂರಿನ ಕೋಟಿಯುಸಿರುಗಳ ಗಾಳಿ ಹಳ್ಳಿ ಹೈದನಿಗೆ ನಿಧಾನಕ್ಕೆ ಅಭ್ಯಾಸವಾಗತೊಡಗುತ್ತದೆ‌.


ಅಪ್ಪ, ಅಮ್ಮ, ತಮ್ಮ, ತಂಗಿಯರು ಶಹರಿಗೆ ಬರುತ್ತಾರೆ. ಒಂದು ಕಾಲದಲ್ಲಿ ಊರ ಜಾತ್ರೆಯಲ್ಲಿ ಕೈಹಿಡಿದು ನಡೆಸಿಕೊಂಡು ಹೋಗಿದ್ದ ಅಪ್ಪ-ಅಮ್ಮನ ಅದೇ ಕೈಯನ್ನು ಇಂದು ತಾನು ಹಿಡಿದು ರಸ್ತೆದಾಟಿಸುವಾಗ ಅವರ್ಣನೀಯ ಭಾವವೊಂದು ಎದೆತುಂಬಿನಿಲ್ಲುತ್ತದೆ. ಮೆಜಸ್ಟಿಕ್ಕಿನ ಸಂದಣಿಯಲ್ಲಿ ತಮ್ಮ ಅರೆಕ್ಷಣ ಕಳೆದುಹೋದಾಗ ಹೃದಯವೇ ನಿಂತುಹೋಗುತ್ತದೆ. ಬೆದರಿದ ಅಮ್ಮನನ್ನು ರಮಿಸಿ ಎಸ್ಕಿಲೇಟರ್ ಮೇಲೆ ಕರೆದೊಯ್ಯುವಾಗ ತಾನೂ ದೊಡ್ಡವನಾದೆ ಎನಿಸತೊಡಗುತ್ತದೆ. ಯಾವ್ಯಾವ ಏರಿಯಾದಲ್ಲಿ ಏನೇನು ಫೇಮಸ್ಸೆನ್ನುವುದನ್ನು ಅಪ್ಪನಿಗೆ ವರ್ಣಿಸಿ ಹೇಳುವ ಮಾತಿನಲ್ಲಿ ಉತ್ಸಾಹ ಪುಟಿಯುತ್ತದೆ. ಕೊನೆಯಲ್ಲಿ ಅವರೆಲ್ಲ ಊರಿನ ಬಸ್ಸುಹತ್ತಿ ಹೊರಟು ನಿಂತಾಗ ಕಣ್ಣಿನಿಂದ ಸಣ್ಣದೊಂದು ಮುಂಗಾರು ಸದ್ದಿಲ್ಲದೇ ಸುರಿದುಹೋಗುತ್ತದೆ.


                       *************************


ಬ್ರಹ್ಮಚಾರಿಯ ಕೋಣೆಯ ಚಿತ್ರಗಳನ್ನು ಮಾಡ್ರನ್ ಆರ್ಟ್ ಗೆ ಹೋಲಿಸಬಹುದು. ಯಾವ ರೇಖೆ ಯಾವುದರೊಂದಿಗೆ ಸುತ್ತಿಕೊಂಡು  ಏನನ್ನು ತೋರುತ್ತಿದೆಯೆಂದು ವಿವರಿಸುವುದೇ ಕಷ್ಟ! 'ಸ್ವಚ್ಛ ಭಾರತ ಅಭಿಯಾನ' ಬಂದನಂತರವಾದರೂ ಈ ರೂಮು ಪ್ರತಿದಿನ ಪೊರಕೆಯ ಮುಖ ನೋಡುವುದಿಲ್ಲ. ಬಿಗ್ ಬಝಾರಿನಿಂದ ಹಿಡಿದು ಬರ್ಮಾ ಬಜಾರಿನ ತನಕ, ಫ್ಲಿಪ್ ಕಾರ್ಟಿನಿಂದ ಹಿಡಿದು  ಚೋರ್ ಬಜಾರಿನ ತನಕ ಎಲ್ಲ ಕಡೆಯಿಂದ ಖರೀದಿಸಿ ತಂದ ವಸ್ತುಗಳನ್ನೂ ಇಲ್ಲಿ ಕಾಣಬಹುದು. ಅಟ್ಟಹಾಸ ಮಾಡುವ ಸ್ಪೀಕರ್ ಗಳು, ಹಾವುಗಳಂತೆ ಸುತ್ತಿಕೊಂಡು ಹೆಣೆಯಾಡುತ್ತಿರುವ ಇಯರ್ ಫೋನ್ ಗಳು, ಮಲ್ಲಯುದ್ಧ ಮಾಡದ ಹೊರತು ಹಾಕಲು ಬರದ ಕಿಟಕಿಯ ಬೋಲ್ಟುಗಳು, ಸಣ್ಣಗೆ ಉಫ್ ಎಂದರೂ ತೆರೆದುಕೊಂಡು, ಒಳಗೆ ಸ್ನಾನ ಮಾಡುತ್ತಿರುವವರ ಮರ್ಯಾದೆ ಹರಾಜು ಹಾಕುವ, ಮುಚ್ಚಲು ಬಾರದ ಬಚ್ಚಲಿನ ಬಾಗಿಲುಗಳು, ಯಾರೋ ಬರ್ಬರವಾಗಿ ಕೊಂದು ನೇತುಹಾಕಿ ಹೋಗಿರುವ ಹೆಣದಂತೆ ನ್ಯಾಲೆಯ ಮೇಲೆ ಯದ್ವಾತದ್ವಾ ನೇತಾಡುವ ಅನಾಥ ಬಟ್ಟೆಗಳು, ಜಿರಳೆಗಳ ಅಪಾರ್ಟ್ಮೆಂಟು, ವಿಲ್ಲಾ, ಫ್ಲಾಟುಗಳಾಗಿ ಬದಲಾಗಿರುವ ಅಡುಗೆ ಪಾತ್ರೆಗಳು, ವಾಸನೆ ಆರದ ಬಾಟಲಿಗಳು, ಎಂತಹಾವರಿಗಾದರೂ ಕ್ಷಣಾರ್ಧದಲ್ಲಿ ಮೂರ್ಛೆತರಿಸುವ 'ಸುವಾಸನೆ'ಯ ಸಾಗ್ಸುಗಳು, ಮದ್ದಾನೆಯೊಂದು ಮಲಗೆದ್ದು ಹೋಗಿರುವಂತೆ ಸದಾ ಅಸ್ತವ್ಯಸ್ತವಾಗಿರುವ ಮಂಚ, ಎಷ್ಟೋ ತಿಂಗಳ ಕೆಳಗೆ ಅರ್ಧ ಓದಿ ಪುಟದ ತುದಿ ಮಡಿಚಿಟ್ಟಿರುವ, ತನ್ನನ್ನು ತಾನೇ ಓದಿಕೊಳ್ಳುತ್ತಿರುವ ಕಾದಂಬರಿ… 


ಸದಾ ನೆಗಡಿಯಾದಂತೆ ಸೋರುವ, ಕಿವಿಗೆ ಬಾಣಂತಿಯಂತೆ ಬಟ್ಟೆ ಕಟ್ಟಿಕೊಂಡಿರುವ ನಲ್ಲಿ, ಹತ್ತು ಪೈಸೆ ಬಾಡಿಗೆಯನ್ನೂ ಕೊಡದೇ ರೂಮಿನಲ್ಲಿ ಜೊತೆಗೇ ವಾಸಿಸುವ, ಪುಕ್ಕಟೆಯಾಗಿ ನಮ್ಮ ಊಟ, ತಿಂಡಿಗಳನ್ನೂ ಹಂಚಿಕೊಳ್ಳುವ, ಬಾಟಲಿಯ ಸೀಲ್ ಒಡೆಯುವ ಮೊದಲೇ ತುಪ್ಪ, ಎಣ್ಣೆಗಳ ರುಚಿ ನೋಡುವ ಕೀಟ ಪ್ರಬೇಧಗಳು, ಅಂಬಾನಿ ಕೊಟ್ಟ ಫ್ರೀ ಆಫರ್ ಮುಗಿದರೂ ಪ್ರೇಯಸಿಯ ಜೊತೆಗಿನ ಲಲ್ಲೆ ಮುಗಿಸದ ರೂಮ್ ಮೆಟ್, ಸುಖಾಸುಮ್ಮನೆ ಸ್ಮೈಲ್ ಕೊಡುವ ಎದುರು ಪಿಜಿ ಹುಡುಗಿ, ಕಾಡುಮನುಷ್ಯರ ಸೊಪ್ಪಿನ ಉಡುಗೆಗಿಂತಲೂ ಹೆಚ್ಚು ತೂತುಗಳಿರುವ ಮೈಯೊರೆಸುವ ಟವೆಲ್, ಗೋಡೆಗೆ ಮೊಳೆ ಹೊಡೆಯುವುದರಿರಲಿ, ಹಾಗೇ ಸುಮ್ಮನೆ ತಟ್ಟಿದರೂ 'ಯಾವನೋ ಅವ್ನೂ?' ಎಂದು ಓಡಿಬರುವ ಮನೆ ಓನರ್, ಹೊಚ್ಚಹೊಸ ಗಂಡನಿಗೆ ಮುದ್ದು ಮಾಡುತ್ತಿರುವ ಫೋಟೋಗಳನ್ನು ಹಾಕಿ ಮನಸಾರೆ ನೋಯಿಸುವ ಶಾಲೆಯ ದಿನಗಳ ಕ್ರಶ್, ಅಂಕಲ್ ಎಂದು ಕರೆದು ಪಿತ್ತನೆತ್ತಿಗೇರಿಸುವ ಕಾಲೇಜು ಹುಡುಗರು, ಫೋನಿನಲ್ಲಿ 'ಹಲೋ' ಎಂದ ಒಂದು ಶಬ್ದವನ್ನು ಕೇಳಿಕೊಂಡೇ ಮೈಹುಷಾರಿಲ್ಲವೆಂಬುದನ್ನು ಅರಿಯುವ ಅಮ್ಮ, ಯಾವುದೋ ಶಿಲಾಯುಗದ ಮಧ್ಯರಾತ್ರಿ ಹನ್ನೆರೆಡು ಗಂಟೆಗೆ ನಿಂತುಹೋಗಿರುವ ಗೋಡೆ ಗಡಿಯಾರ, ಈ ಕ್ಷಣಕ್ಕೆ ಬೇಕಾಗಿರುವ ವಸ್ತುವೊಂದನ್ನು ಬಿಟ್ಟು ಮತ್ತೆಲ್ಲದೂ ರಾಶಿ ಬಿದ್ದಿರುವ ಟೇಬಲ್, ಆಫರ್ ಇತ್ತೆಂಬ ಒಂದೇ ಒಂದು ಕಾರಣಕ್ಕೆ ಬಾಚಿತಂದ, ಬ್ರ್ಯಾಂಡ್ ಫ್ಯಾಕ್ಟರಿಗಿಂತಲೂ ಹೆಚ್ಚಿನ ಕಲೆಕ್ಷನ್ ಗಳಿರುವ ಬಟ್ಟೆ ಸಂಗ್ರಹ, ಒಳಗಿದ್ದ ಮೊಬೈಲೇ ಹಾಳಾದರೂ ಇನ್ನೂ ಎಸೆಯದ ಅದರ ರಟ್ಟಿನ ಡಬ್ಬ, ರೂಮಿನ ಯಾವ ಮೂಲೆಯಲ್ಲಿ ಬೇಕಾದರೂ ನಿಂತು ಬಟ್ಟೆಯನ್ನು ನೇರ ನ್ಯಾಲೆಯ ಮೇಲೇ ಕೂರುವಂತೆ ಎಸೆಯುವ ಕಲೆ, ಒಬ್ಬ ಎದ್ದು ನಿಂತು ಮೈಮುರಿದರೂ ಇನ್ನೊಬ್ಬ ರೂಮಿನಿಂದಾಚೆಗೆ ಉದುರಿಹೋಗುವ ಕಿಶ್ಕಿಂದೆಯಂತಹಾ ಕೋಣೆಯಲ್ಲಿ ಹೊಂದಿಕೊಂಡು ಹೋಗುವ ಸಹಬಾಳ್ವೆ...


ಯುವ ಭಾರತದ ಸಾವಿರ-ಲಕ್ಷ-ಕೋಟ್ಯಾಂತರ ಅವಿವಾಹಿತ ಬದುಕುಗಳು ಸಾಗುತ್ತಿರುವುದೇ ಇಂತಹಾ ರೋಚಕ, ತಳಕಂಬಳಕ ಹಳಿಗಳ ಮೇಲೆ.


                       *************************


ಹೀಗೆ ಗೆಳೆಯರು, ಉದ್ಯೋಗ, ತಿರುಗಾಟ, ಉಲ್ಲಾಸ… ಎಲ್ಲವೂ ಇರುವ ಹೊತ್ತಿಗೇ ಈ ಬದುಕಿನಲ್ಲೇನೋ ಕಮ್ಮಿಯಿದೆ ಎಂದೆನಿಸಲು ಶುರುವಾಗುತ್ತದೆ. ರೂಮ್ ಮೆಟ್ ನಿಂದ ಹಿಡಿದು ಆಫೀಸಿನ  ಪ್ಯೂನ್ ತನಕ ಪರಿಚಯದ ಎಲ್ಲರೂ ತಮ್ಮ ತಮ್ಮ ಹುಡುಗಿಯ ಜೊತೆ ಗಮ್ಮತ್ತನಿಂದ ತಿರುಗಾಡುತ್ತಾ ಒಬ್ವರನ್ನೊಬ್ಬರು ಮುದ್ದುಗರೆಯುವ ಫೋಟೋಗಳನ್ನು ಹಾಕುತ್ತಿರುವಾಗ ತನ್ನ ಬದುಕಿನ ಡುಯೆಟ್ ಹಾಡು ಹೀರೋಯಿನ್ನೇ ಇಲ್ಲದೆ ಸಾಗುತ್ತಿದೆಯೆಂಬುದು ಅರಿವಾಗುತ್ತದೆ. 


ಆಗ ಅವಳು ಕಣ್ಣಿಗೆ ಬೀಳುತ್ತಾಳೆ.


ಟೀಶರ್ಟು, ಜೀನ್ಸ್ ಪ್ಯಾಂಟುಗಳ ಪಾಶ್ ಹುಡುಗಿಯರ ನಡುವೆ ತಿಳಿಹಸಿರು ಚೂಡಿದಾರ ತೊಟ್ಟು ಸಾಧಾರಣವಾಗಿರುವ ಅವಳ ನೆನಪುಗಳೇಕೋ ಆಫೀಸು ಮುಗಿಸಿ ಬಂದ ಮೇಲೂ ಕೈಮರೆತು ಬ್ಯಾಗಿನಲ್ಲಿ ಸೇರಿಕೊಂಡುಬಿಟ್ಟಿರುವ ಫೈಲಿನಂತೆ ಅವನನ್ನು ಹಿಂಬಾಲಿಸಿಕೊಂಡುಬರುತ್ತವೆ. ಬೆಳಗಿನ ಜಾವ ಬಿದ್ದ, ಅವಳನ್ನೊಳಗೊಂಡ ಸುಂದರ ಕನಸನ್ನು ನೆನೆಯುತ್ತ ಮರುದಿನ ಬೆಳಗ್ಗೆ ಆಫೀಸಿಗೆ ಹೊರಟರೆ ದಾರಿಯಲ್ಲಿ ಅವಳೇ ಸಿಕ್ಕಿಬಿಡುತ್ತಾಳೆ! 'ಬೇಕಂತಲೇ ನಿನ್ನ ಕನಸಿನಲ್ಲಿ ಬಂದೆ' ಎಂಬಂತೆ ಮುಗುಳ್ನಕ್ಕು ಮಾತಿಗೆ ತೊಡಗುತ್ತಾಳೆ. ಅವರಿಬ್ಬರ ಅದೆಷ್ಟೋ ಅಭಿರುಚಿಗಳು ಒಂದೇ ಎನ್ನುವ ಅತ್ಯಮೂಲ್ಯ ಸಂಗತಿ ಅವನಿಗೆ ಅರಿವಾಗುತ್ತದೆ. ಕಾರಿಡಾರ್ ನಲ್ಲಿ ಎದಿರಾಗುತ್ತಾಳೆ. ಕ್ಯಾಂಟೀನ್ ನಲ್ಲಿ ಅಡ್ಡ ಬರುತ್ತಾಳೆ. ಆಫೀಸಿನವರು ಆಯೋಜಿಸಿದ ಪ್ರವಾಸವೊಂದರಲ್ಲಿ ಪಕ್ಕದ ಸೀಟಿನಲ್ಲೇ ಕುಳಿತುಬಿಡುತ್ತಾಳೆ! ಅವಳ ನವಿರಾದ ಮುಂಗುರುಳು ಹಾರಿಹಾರಿ ಅವನೆದೆಯ ಸೋಕುತ್ತಿದ್ದರೆ, ಅವನು ಮೇಲ್ಬರುವ ದಾರಿಯೇ ಇಲ್ಲದ ಸಿಹಿಯಾದ ಆಳವೊಂದಕ್ಕೆ ಜಾರುತ್ತಾ ಹೋಗುತ್ತಾನೆ. ಅವಳಿಗೆ ಹೇಳದೆಯೇ ಅವಳ ಹೆಸರಿನ ಮೊದಲೆರೆಡು ಅಕ್ಷರಗಳನ್ನು ಕದ್ದು ತನ್ನ ಹೆಸರಿನ ಮೊದಲ ಅಕ್ಷರಕ್ಕೆ ಜೋಡಿಸಿ ಪ್ರೇಮ ವರ್ಣಮಾಲೆಯ ಹೊಚ್ಚಹೊಸ ಪದವೊಂದನ್ನು ಕಟ್ಟಿಕೊಂಡುಬಿಡುತ್ತಾನೆ‌. ಮಂಜಿನ ಗಾಜೊಂದರ ಮೇಲೆ ಆ ಪದವನ್ನು ಬರೆದು ಅವಳು ಬರುವಳೆನ್ನುವಾಗ ಅಳಿಸಿ ಪೆಚ್ಚುನಗೆ ನಗುತ್ತಾನೆ. ಕಾಲ ಮೆಲ್ಲಗೆ ಹರಿಯುತ್ತದೆ. ಅವನು ನಡೆಯುವ ದಾರಿಗಳಿಗೆಲ್ಲ ಚಿಕ್ಕ ಚಿಕ್ಕ ತಿರುವುಗಳನ್ನು ನೀಡಿ ಅವಳಿರುವ ತಾಣಗಳಿಗೇ ತಂದು ಸೇರಿಸುತ್ತದೆ. ಆದರೆ ಇಷ್ಟೆಲ್ಲ ಕಾಕತಾಳೀಯಗಳ ಕೊನೆಯ ಫಲಿತಾಂಶ ತಮ್ಮಿಬ್ಬರ ಮಿಲನವೇ ಎಂದವನು ನಂಬಿರುವ ಹೊತ್ತಿಗೇ ಸಮಯ ಮಗ್ಗಲು ಬದಲಾಯಿಸಿಬಿಡುತ್ತದೆ‌. ಅವಳ ನವಿರು ಮುಗುಳ್ನಗೆಯೊಳಗೆ ಮತ್ಯಾರದೋ ಚಹರೆ ಕದಲತೊಡಗುತ್ತದೆ. ಸಂಜೆಯ ಪ್ರಯಾಣದಲ್ಲಿ ಮತ್ಯಾವುದೋ ನೆರಳೊಂದು ಅವಳ ಪಕ್ಕ ಚಲಿಸತೊಡಗುತ್ತದೆ. ಇದು ಹೀಗೇ ಮುಂದುವರೆದರೆ ತನ್ನ ಪ್ರೀತಿ ಪಂಜರದ ಹಕ್ಕಿಯ ಸ್ವಗತವಾಗುತ್ತದೆಂದು ಭೀತಿಗೊಳಗಾಗುವ ಅವನು ಅದೊಂದು ಸಂಜೆ ನಡುಗುತ್ತಿರುವ ಹೃದಯದ ಸಮೇತ ಅವಳೆದುರು ನಿಂತು ತನ್ನೆದೆಯ ಪುಸ್ತಕದಲ್ಲಿ ಹೇಳದೇ ಬರೆದಿಟ್ಟುಕೊಂಡಿರುವ ಅವಳ ಚಿತ್ರಗಳನ್ನೆಲ್ಲಾ ಅವಳೆದುರು ಹರಡಿನಿಲ್ಲುತ್ತಾನೆ.


ಅದೃಷ್ಟ ಚೆನ್ನಾಗಿದ್ದರೆ ಮೊದಲ ಮಾತಿನಲ್ಲೇ ತಿರಸ್ಕರಿಸಲ್ಪಡುತ್ತಾನೆ‌. ಇಲ್ಲವಾದಲ್ಲಿ ಮುಳುಗಲೇಬೇಕಿರುವ ದೋಣಿಯೊಂದು ತುಸು ದೂರ ಹೆಚ್ಚು ತೇಲಿದಂತೆ, ಇಲ್ಲೇ ಮುಳುಗಬೇಕಿದ್ದುದು ಅಲ್ಲೇಲ್ಲೋ ದಡದ ಸಮೀಪದಲ್ಲಿ ಮುಳುಗಿದಂತೆ ಕೆಲದಿನಗಳ ಕಾಲ ಆ ಪ್ರೀತಿ ಮುನ್ನಡೆಯುತ್ತದೆ. ಪಾರ್ಕಿನಲ್ಲಿರುವ ಹಕ್ಕಿಗಳಿಗೆಲ್ಲ ಇವರ ಪರಿಚಯವಾಗಿ, ಮಾಲುಗಳ ಎಸ್ಕಿಲೇಟರ್ ಗಳ ಮೇಲೆಲ್ಲಾ ಇವರ ಹೆಜ್ಜೆಗುರುತು ಜೊತೆಯಾಗಿ ಮೂಡಿ, ತಡರಾತ್ರಿಯ ನೆರಳು ಹಾಸಿದ ನಿರ್ಜನ ರಸ್ತೆಗಳಿಗೆಲ್ಲ ಇವರ ಪಿಸುಮಾತು ಬಾಯಿಪಾಠವಾಗಿ, ಒಲವಿನ ಈ ಬಂಡಿ ಮುಂದೆಸಾಗಿರುವಾಗಲೇ ಜನುಮ ಜನುಮದ್ದೆಂದು ನಂಬಿದ್ದ ಆ ಪಯಣ ಥಟ್ಟನೆ ನಿಂತುಹೋಗುತ್ತದೆ. ಸಣ್ಣ ಮುನಿಸು, ಮನೆಯವರ ಅಸಮ್ಮತಿ, ಎಂಥದೋ ಅಸಮಾಧಾನ.. ಇಂತಹಾ ಯಾವುದೋ ನೆಪದ ಎಡರಿಗೆ ಸಿಲುಕಿ ಅವಳು ಏಕಾಏಕಿ ತನ್ನ ಹಾದಿಯನ್ನೇ ಬದಲಿಸಿಬಿಡುತ್ತಾಳೆ. ವೇದನೆಯ ನೆನಪುಗಳನ್ನು ಯಾವುದೋ ಸಂಜೆಯ ಮೌನಕ್ಕಷ್ಟೇ ಸೀಮಿತಿಗೊಳಿಸಿ, ಅವನು ಮೊದಲ ಬಾರಿಗೆ ಸಿಕ್ಕ ಹಿಂದಿನ ದಿನ ಬೆಳಗ್ಗೆ ಹೇಗೆ ನಗುನಗುತ್ತಾ ಇದ್ದಳೋ ಅಂತಹದೇ ಉಲ್ಲಸವೊಂದನ್ನು ಮುಖದಮೇಲೆ ತಂದುಕೊಂಡುಬಿಡುತ್ತಾಳೆ.


ಆದರೆ ಬದುಕಿನ ಆ ಕಹಿಸತ್ಯವನ್ನು ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವುದು ಅವನಿಂದ ಸಾಧ್ಯವಾಗುವುದಿಲ್ಲ. ಎದೆಯ ಮೇಲೆ ಅವಳು ತಲೆಯಾನಿಸಿ ನಕ್ಕ ನವಿರಾದ ಗುರುತು ಚಿಟಚಿಟನೆ ಉರಿಯತೊಡಗುತ್ತದೆ. ರಾತ್ರೆಗಳು ನಿದ್ರೆಯನ್ನು ಬಹಿಷ್ಕರಿಸುತ್ತವೆ. ನಗು ಬ್ಯಾನ್ ಆಗುತ್ತದೆ‌. ಯಾವ ದಾರಿಯಲ್ಲಿ ಕಾಲಿಟ್ಟರೂ ಹಳೆಯ ಹೆಜ್ಜೆಗುರುತಿನ ಮುಳ್ಳುಗಳು ಪಾದಕ್ಕೆ ನಾಟಿ ನೋವು ಛಿಲ್ಲನೆ ಚಿಮ್ಮುತ್ತದೆ. ಸಿಗದೇಹೋದ ಒಲವು ಇನ್ನಷ್ಟು, ಮತ್ತಷ್ಟು ಆತ್ಮೀಯವಾಗುತ್ತದೆ.  ಬಿಟ್ಟುಹೋದ ಹುಡುಗಿಯ ಮೇಲಿನ ಪ್ರೀತಿ ಬೆಟ್ಟದಂತೆ ಬೆಳೆಯುತ್ತದೆ. ಈ ಮುನ್ನ ಎಷ್ಟು ಬಾರಿ ಅವಳು ಪ್ರೀತಿ ಹೇಳಿಕೊಂಡಿದ್ದಳೋ ಅದರ ದುಪ್ಪಟ್ಟು ತಿರಸ್ಕಾರ ಅವಳ ನಡವಳಿಕೆಯಲ್ಲಿ ಚಿಮ್ಮುತ್ತದೆ. ಸಂಜೆ ನೆನಪುಗಳ ಪಾಲಾಗುತ್ತದೆ. ಬೆಳಗು ಕೆಟ್ಟಕನಸುಗಳಿಗೀಡಾಗುತ್ತದೆ. ಎದ್ದು ನೋಡಿದರೆ ಪಕ್ಕದ ಮಂಚದಲ್ಲಿ ರೂಮ್ ಮೆಟ್ ಜಗತ್ತಿನ ಅತ್ಯಂತ ಸುಖ ಜೀವಿಯಂತೆ ಗೊರಕೆ ಹೊಡೆಯುತ್ತಿರುತ್ತಾನೆ.


ಟೆರಾಸಿನ ಮೂಲೆಯಲ್ಲಿನ ಬಾಟಲಿಗಳು ಬಹುಸಂಖ್ಯಾತರಾಗುತ್ತವೆ. ಮೊಂಡು ಸಿಗರೇಟುಗಳ ಸಣ್ಣ ಸೈನ್ಯವೇ ತಯಾರಾಗುತ್ತದೆ. ಮನಸ್ಸು ಅಮೀಬಾದಂತೆ ರೂಪ ಬದಲಾಯಿಸತೊಡಗುತ್ತದೆ. ಬೆಳಗ್ಗೆಯಷ್ಟೇ ಅವಳ ನೆನಪುಗಳೇ ಬೇಡವೆಂದು ಗಹಗಹಿಸುತ್ತಿದ್ದದ್ದು ಸಂಜೆಯಾಗುವ ಹೊತ್ತಿಗೆ ಅವಳದೇ ನೆನಪುಗಳನ್ನು ನಾಟಿಸಿಕೊಂಡು ನರಳತೊಡಗುತ್ತದೆ. ‘ಇವತ್ತಿನಿಂದ ಎಲ್ಲರ ಜೊತೆ ಫ್ಲರ್ಟ್ ಮಾಡ್ತೀನಿ’ ಎಂದು ಹೊರಟಿದ್ದು ‘ಇನ್ನು ಯಾರ ಜೊತೆಗೂ ಬೆರೆಯುವುದಿಲ್ಲ’ ಎಂದು ಮೂಲೆಸೇರಿಬಿಡುತ್ತದೆ. ಒಮ್ಮೆ ಅವಳನ್ನು ಬೈದರೆ ಇನ್ನೊಮ್ಮೆ ತನ್ನನ್ನೇ ಘಾಸಿಗೊಳಿಸಿಕೊಂಡಂತೆ ವೇದನೆ ಪಡುತ್ತದೆ. 


ಅವನ ಕೈಯ ರೇಖೆಯೊಂದು ಮೆಲ್ಲನೆ ಸವೆದು ಮರೆಯಾದ ಅದೇ ಹೊತ್ತಿಗೆ ಅವಳ ಅಂಗೈಯ ಮದರಂಗಿಯಲ್ಲಿ ಬೇರ್ಯಾರದೋ ಹೆಸರು ಕೆಂಪಾಗಿ ಮೂಡಿನಿಲ್ಲುತ್ತದೆ. 


                       *************************


ಈ ನಡುವೆಯೇ ಊರಿನಲ್ಲಿನ ಅಪ್ಪನಿಗೆ ಲಘುವಾಗಿ ಆರೋಗ್ಯ ತಪ್ಪುತ್ತದೆ. ಅಮ್ಮ ಕೆಮ್ಮಿದ ಸದ್ದು ಬೆಂಗಳೂರಿಗೂ ಕೇಳುತ್ತದೆ. ಜಮೀನಿನ ಮೇಲಿನ ಸಾಲ ಪಾವತಿಸೆಂದು ಬ್ಯಾಂಕಿನವರು ಕಳಿಸಿದ ನೋಟಿಸು ನೇರ ರೂಮಿನ ಬಾಗಿಲನ್ನೇ ತಟ್ಟುತ್ತದೆ‌. ಹೈಕು, ಪ್ರಮೋಷನ್ನು, ಪ್ಯಾಕೇಜುಗಳ ಹಿಂದಿನ ಓಟ ಅನಿವಾರ್ಯವಾಗಿ ತೀವ್ರಗೊಳ್ಳುತ್ತದೆ. ಕೈಯಲ್ಲಿರುವ ಪುಡಿಗಾಸನ್ನು ಶೇರುಗಳಿಗೆ ಹಾಕುವುದೋ ಇಲ್ಲಾ ಊರಿನಲ್ಲೊಂದು ಜಮೀನು ಕೊಳ್ಳುವುದೋ ಎಂಬ ಗೊಂದಲ ಆರಂಭವಾಗುತ್ತದೆ. ಅಲ್ಯಾವುದೋ ನಗರದಾಚೆಗಿನ ಸೈಟು 'ನನ್ನನ್ನು ಕೊಳ್ಳು' ಎಂದು ಕೈಬೀಸಿ ಕರೆಯುತ್ತದೆ‌. ಇಎಮೈಗಳ ಲೆಕ್ಕ ಜೋರಾಗುತ್ತದೆ. ಗೆಳೆಯರೆಲ್ಲಾ ಬಾಗಿಲಿನಲ್ಲಿ ಸಾಲಾಗಿ ನಿಂತು ಮದುವೆಗೆ ಕರೆದುಹೋಗುತ್ತಾರೆ. ಅವರೆಲ್ಲ ತಮ್ಮ ತಮ್ಮ ಹೆಂಡಿರನ್ನು ತಬ್ಬಿ ಮುದ್ದಾಡುವ ಚಿತ್ರಗಳು ವಾಟ್ಸಾಪ್, ಫೇಸ್ಬುಕ್ಕುಗಳಲ್ಲಿ ರಾರಾಜಿಸುವಾಗ ಹದಿಮೂರೇ ಲೈಕು ಕಂಡ ಇವನ ಒಬ್ಬಂಟಿ ಪ್ರೊಫೈಲು ಫೋಟೋ ಗೋಳೋ ಎಂದು ಅಳತೊಡಗುತ್ತದೆ. ಅವಳ ನೆನಪುಗಳ ನಡುವೆಯೇ ಹೆಣ್ಣುಗಳ ಮನೆಗೆ ಓಡಾಟ ಶುರುವಾಗುತ್ತದೆ. ಕಾಫೀಡೇಗಳ ಜಗುಲಿಯಲ್ಲಿ ಭವಿಷ್ಯದ ಮಡದಿಯ ಜೊತೆ ಮದುವೆ ಚೌಕಾಶಿಯ ಮಾತುಕತೆಗಳಾಗುತ್ತವೆ. ಮುಂದೊಂದು ದಿನ ಅತ್ತ ದೇವತೆಯೂ ಅಲ್ಲದ, ಇತ್ತ ರಾಕ್ಷಸಿಯೂ ಆಗದ ಯಾರೋ ಒಬ್ಬಳು ಅವನ ಬದುಕಿಗೆ ಕಾಲಿಡುತ್ತಾಳೆ. ಅವನು ಮನೆ-ಮನದ ತುಂಬಾ ಚೆಲ್ಲಾಡಿಕೊಂಡಿರುವ ವೇದನೆಗಳನ್ನೆಲ್ಲ ಒಂದೊಂದಾಗಿ ಎತ್ತಿಡುತ್ತಾಳೆ. ಅವನೆಲ್ಲ ಅಸ್ತವ್ಯಸ್ಥ ನೆನಪುಗಳನ್ನು ನೋವಾಗದಂತೆ ಮೆಲ್ಲನೆ ಗುಡಿಸಿ ಚಂದದ ರಂಗೋಲಿಯಿಡುತ್ತಾಳೆ.


ಬ್ರಹ್ಮಚಾರಿ ಬದುಕಿನ ಕಟ್ಟಕಡೆಯ ಅವಶೇಷವಾದ ಟೆರಾಸಿನ ಮೇಲಿನ ತನ್ನ ಒಂಟಿಕೋಣೆಯ ಕೊನೆಯ ತಿಂಗಳ ಬಾಡಿಗೆಯನ್ನೂ ಕಟ್ಟಿದ ಅವನು, ಎಸೆದ ಮೇಲೂ ಉಳಿದ ಸಾಮಾನು ಸರಂಜಾಮುಗಳನ್ನೂ, ಮಧುರ ನೆನಪುಗಳನ್ನೂ ಗಂಟುಕಟ್ಟಿಕೊಂಡು ವಿವಾಹ ಜೀವನವೆಂಬ ಟೂ ಬಿಎಚ್ಕೆ ಮನೆಯತ್ತ ಮೆಲ್ಲನೆ ತನ್ನ ಬೈಕನ್ನು ಚಲಾಯಿಸುತ್ತಾನೆ.


(ಪಂಜು ಪತ್ರಿಕೆಯ 03-08-2020ರ ಸಂಚಿಕೆಯಲ್ಲಿ ಪ್ರಕಟಿತ)


ಬುಧವಾರ, ಜುಲೈ 8, 2020

ಗುಮಾಸ್ತ

(ಮಯೂರದ ಮಾರ್ಚ್ 2020 ಸಂಚಿಕೆಯಲ್ಲಿ ಪ್ರಕಟವಾದ ಕಥೆ)


ಕಿಕಿಕ್ಕಿರಿದು ತುಂಬಿದ್ದ ಸಿಟಿ ಬಸ್ಸು ತನ್ನೊಳಗೆ ಇಂಚಿಗೊಬ್ಬರಂತೆ ನಿಂತಿದ್ದ ಪ್ರಯಾಣಿಕರನ್ನು ಕುಲುಕಾಡಿಸುತ್ತಾ ಮೆಲ್ಲನೆ ಮುನ್ನಡೆಯುತ್ತಿತ್ತು. ರಶ್, ಸೆಖೆ, ಧೂಳುಗಳಲ್ಲಿ ಬೇಯುತ್ತಾ, ರಾಡು, ಕಂಬಿ, ಚೈನುಗಳನ್ನು ಹಿಡಿದು ಅಲ್ಲಾಡುತ್ತಾ ನಿಂತಿದ್ದ, ಇನ್ನು ಸ್ವಲ್ಪ ಸಮಯದಲ್ಲಿ ಯಾವ್ಯಾವುದೋ ಆಫೀಸು, ಫ್ಯಾಕ್ಟರಿಗಳ ಒತ್ತಡದ ಕೆಲಸಗಳ ಪಾಲಾಗಲಿದ್ದ ಉದ್ಯೋಗಿಗಳು ಯಾವಾಗ ಬೇಕಾದರೂ ಸಿಡಿಯಬಹುದಾದ ಬಾಂಬುಗಳಂತೆ ಮುಖ ಸಿಂಡರಿಸಿಕೊಂಡು ನಿಂತಿದ್ದರು. ಅವರ ನಡುವೆ ಕಷ್ಟದಲ್ಲಿ ಕಾಲೂರಿ ನಿಂತಿದ್ದ ರಾಜೀವ ಬಸ್ಸು ನಿಂತು ಚಲಿಸಲಾರಂಭಿಸಿದಾಗ ಹಿಂದಕ್ಕೂ, ಬ್ರೇಕು ಹಾಕಿದಾಗ ಮುಂದಕ್ಕೂ ವಾಲುತ್ತಾ ಅಸಮಾಧಾನದಲ್ಲಿ 'ಪ್ಚ್' ಎಂದ. 


ಬರೀ ಆರೇಳು ಕಿಲೋಮೀಟರ್ ದೂರದ ಆಫೀಸು. ಬಿರುಸಾಗಿ ತುಳಿದರೆ ಮೊವ್ವತ್ತು ನಿಮಿಷಕ್ಕೆ ಸೈಕಲ್ನಲ್ಲೇ ತಲುಪಿಬಿಡಬಹುದು. ಆದರೆ ಬಸ್ಸೆಂಬ ಈ ಶರವೇಗದ ವಾಹನಕ್ಕೂ ಒಂದೂವರೆ ಗಂಟೆ ತಗುಲುತ್ತದೆ. ಇದು ಈ ಬೆಂಗಳೂರು ಟ್ರಾಫಿಕ್ ನ ವಿಶ್ವರೂಪ. ಇವತ್ತೇನೋ ಹತ್ತೂ ಮೊವ್ವತ್ತರ ಬಸ್ಸಿನಲ್ಲಿದ್ದಾನೆ. ಆದರೆ ಪ್ರತಿದಿನ ಬೆಳಗ್ಗೆ ಆರೂ ಮೊವ್ವತ್ತಕ್ಕೆ ಹೊಡೆದುಕೊಳ್ಳುವ ಅಲಾರಾಂನ ಕೆನ್ನೆಗೆ ಬಾರಿಸಿ, ಆ ಎಂದು ಆಕಳಿಸಿ ಏಳುವಷ್ಟರಲ್ಲೇ ಗಡಿಯಾರ ಏಳರ ಮನೆಯ ಸಮೀಪ ಬಂದಿರುತ್ತದೆ. ಛಂಗನೆ ಹಾಸಿಗೆ ಬಿಟ್ಟೆದ್ದು, ಗಸಗಸನೆ ಹಲ್ಲುಜ್ಜಿ, ಬಾಕ್ಸಿನಲ್ಲಿರುವ ಇಡೀ ಸೋಪನ್ನು ಕೈಗೆತ್ತಿಕೊಂಡು ಸಂದಿಗೊಂದಿಗೆಲ್ಲಾ ಉಜ್ಜಿ, ಧೊಪಧೊಪನೆ ನೀರು ಹೊಯ್ದುಕೊಂಡು ಭರತನಾಟ್ಯ ಮಾಡುವವನಂತೆ ಸ್ನಾನ ಮುಗಿಸಿ ಏಳೂ ಹತ್ತಕ್ಕೆ ರೂಮು ಬಿಡುವುದು ರಾಜೀವನ ನಿತ್ಯದ ಅಭ್ಯಾಸ. ಸೀಟು ಸಿಗುವುದೆಂಬ ಆಸೆಯಲ್ಲಿ ರೂಮಿನ ಬಳಿಯೇ ಇರುವ  ಜೇಡಿಮರು ನಿಲ್ದಾಣದ ಬದಲು ಮುಕ್ಕಾಲು ಕಿಲೋಮೀಟರ್ ನಡೆದುಹೋಗಿ ಜನತಾ ಬಜಾರ್ ನಿಲ್ದಾಣದಲ್ಲಿ ಬಸ್ಸು ಹತ್ತುತ್ತಾನೆ. ಗುರುಬಲ ಗಟ್ಟಿಯಿದ್ದ ಪಕ್ಷದಲ್ಲಿ ಯಾವುದೋ ಒಂದು ಬಸ್ಸು ಒಂದೆರೆಡು ಖಾಲಿ ಸೀಟುಗಳೊಂದಿಗೆ ಆಗಮಿಸುತ್ತದೆ. ಇಲ್ಲವಾದರೆ ಮುಂದಿನ ಒಂದೂವರೆ ಗಂಟೆ ದೊಂಬರಾಟದವನಂತೆ ಬಸ್ಸೊಳಗಿನ ಮೇಲ್ಕಂಬಿಗೆ ನೇತಾಡಿಕೊಂಡೇ ಆಫೀಸು ತಲುಪಬೇಕಾಗುತ್ತದೆ. "ಅಲ್ರೀ, ಸುಮ್ನೆ ಯಾಕೆ ಅಷ್ಟು ದೂರದಿಂದ ಓಡಾಡ್ತೀರಾ? ಇಲ್ಲೇ ಕೋರಮಂಗಲದಲ್ಲೇ ರೂಮು ಮಾಡಬಹುದಲ್ರೀ?" ಎನ್ನುವ ಸಹೋದ್ಯೋಗಿಗಳಿಗೆ "ಆ ಏರಿಯಾ ಸೆಟ್ ಆಗ್ಬಿಟ್ಟಿದೆರೀ" ಎಂದು ಹಾರಿಕೆಯ ಉತ್ತರ ಕೊಡುತ್ತಾನೆ. ಅದು, ಕೆಲಸಕ್ಕೆ ಸೇರಿದ ಮೊದಲ ಕಂಪನಿಯಿರುವ, ಹಿಂದೊಮ್ಮೆ ಗೆಳೆಯರೊಡನೆ ಖುಷಿಯಲ್ಲಿ ಅಲೆದಾಡಿದ ಬೀದಿಗಳಿರುವ, ವಿಫಲ ಪ್ರೇಮದ ನೆನಪುಳಿಸಿಹೋದ ಪ್ರೇಯಸಿಯನ್ನು ಹಿಂಬಾಲಿಸಿ ನಡೆದ ರಸ್ತೆಗಳಿರುವ ಏರಿಯಾವೆಂಬ ಭಾವುಕ ಸಂಗತಿಯನ್ನು ಮಾತ್ರ ಅವನು ಇದುವರೆಗೆ ಯಾರಿಗೂ ಹೇಳಿಲ್ಲ. 


ಅವಳಿ ಮಕ್ಕಳ ಹೊತ್ತ ಬಸುರಿಯಂತೆ ಮೆಲ್ಲಗೆ ಸಾಗಿದ ಬಸ್ಸು ನಿಲ್ದಾಣದ ಸಮೀಪ ಬಂತು. ಗೋಡೆ ಕಟ್ಟಿದಂತೆ ನಿಂತಿದ್ದ ಜನರ ನಡುವೆ ನುಸುಳುತ್ತಾ ರಾಜೀವ ಬಾಗಿಲಿನತ್ತ ಧಾವಿಸಿದ. "ಕಾಲು ತುಳೀಬೇಡ್ವೋ ಹೈವಾನ್", "ತಳ್ಳಬೇಡ್ವೋ ಲೇ" ಎಂಬ ಬೈಗುಳಗಳನ್ನು ಬಸ್ಸಿನ ಗುರುಗುಡುವಿಕೆಯಷ್ಟೇ ಸಾಮಾನ್ಯವಾಗಿ ಸ್ವೀಕರಿಸಿ ಅಂತೂ ಇಂತೂ ಕೆಳಗುದುರಿಕೊಂಡು ಆಫೀಸಿನ ದಾರಿಯಾಚೆ ಬೀದಿಯಲ್ಲಿರುವ ತಳ್ಳುಗಾಡಿ ಹೋಟೆಲ್ ನತ್ತ ನಡೆಯತೊಡಗಿದ. ಕಛೇರಿಯ ಪಕ್ಕದಲ್ಲೇ ಹೋಟೆಲೊಂದಿದೆ. ಆದರೆ ಮೊವತೈದು ರೂಪಾಯಿಗೆ ಇಷ್ಟೇ ಇಷ್ಟು ಉಪ್ಪಿಟ್ಟು ಕೊಡುವ ಅಲ್ಲಿ ತಿಂಡಿ ತಿಂದರೆ ರಾಜೀವನ ಹೊಟ್ಟೆ ಹಾಗೂ ಲೆಕ್ಕದ ಪುಸ್ತಕ ಎರೆಡೂ ಅಳತೊಡಗುತ್ತವೆ. ಅದಕ್ಕೇ 'ಹೋಟೆಲಿನ ಮುಚ್ಚಿದ ಅಡುಗೆ ಮನೆಯಲ್ಲಿ ಓಡಾಡುವ ಜಿರಳೆಯ ಕುಲಬಾಂಧವನೇ ತಳ್ಳುಗಾಡಿಯಲ್ಲೂ ಓಡಾಡುವುದು' ಎಂಬ ಸಮರ್ಥನೆಯನ್ನು ತನಗೆ ತಾನೇ ಕೊಟ್ಟುಕೊಂಡು, ಪ್ರತಿದಿನ ಅಲ್ಲೇ ತಿಂಡಿತಿಂದ ರಾಜೀವ ಕಛೇರಿಯನ್ನು ಪ್ರವೇಶಿಸಿಸುತ್ತಾನೆ.


ಇಂಜಿನಿಯರುಗಳು ಕೂರುವ ಸಾಲು ಕ್ಯಾಬಿನ್ ಗಳ ಕೊನೆಯ ತುದಿಯಲ್ಲಿ ಅವನ ಅಕೌಂಟ್ಸ್ ಡಿಪಾರ್ಟ್ ಮೆಂಟ್. ಇಂಜಿನಿಯರ್ ಗೆಳೆಯರು 'ಗುಮಾಸ್ತರ ವಿಭಾಗ' ಎಂದು ಹಾಸ್ಯಮಾಡುವ ಜಾಗವದು. ಕಂಪನಿಯ ಇಡೀ ಹಣಕಾಸು ವ್ಯವಹಾರಗಳು, ಉದ್ಯೋಗಿಗಳಿಗೆ ಕೊಡಬೇಕಾದ ಸಂಬಳ, ಲೆಕ್ಕ ಪತ್ರಗಳು, ಪೆಟ್ಟಿ ಕ್ಯಾಶ್ ಎಲ್ಲವೂ ಮುಚ್ಚಿದ ಬಾಗಿಲಿನ ಒಳಗಿರುವ, ಹೊರಗಿನವರಿಗೆ ತೀರಾ ರಹಸ್ಯಮಯವಾಗಿ ಕಾಣುವ ಡಿಪಾರ್ಡ್ ಮೆಂಟ್. ಯಾರನ್ನೇ ಕೇಳಿದರೂ 'ನೀನು ಬಿಡಪ್ಪಾ. ಲಕ್ಷಾಂತರಗಳಲ್ಲಿ ವ್ಯವಹರಿಸುವವನು' ಎಂದು ಆ ಇಡೀ ಹಣವೇ ತನ್ನದು ಎಂಬಂತೆ ಮಾತನಾಡುತ್ತಾರೆ. ಕೆಲವರು ಇನ್ನೂ ಮುಂದೆ ಹೋಗಿ 'ಸಣ್ಣದೊಂದು ಬಿಲ್ ಕ್ರಿಯೇಟ್ ಮಾಡಿ ಎರೆಡು ಸಾವಿರದ ಒಂದು ನೋಟು ಎಗರಿಸಿದ್ರೂ ಸಾಕಲ್ರೀ' ಎಂದು 10% ತಮಾಷೆಯೂ, 90% ಅನುಮಾನವೂ ತುಂಬಿದ ದನಿಯಲ್ಲಿ ಕುಹುಕವಾಡುತ್ತಾರೆ. ಆಗೆಲ್ಲಾ ರಾಜೀವನಿಗೆ ನಗು ಬರುತ್ತದೆ. ಚಿತ್ರಗುಪ್ತನ ಚಿಕ್ಕಪ್ಪನ ಮಗನಂತಹಾ ತನ್ನ ಮ್ಯಾನೇಜರ್ ಲೆಕ್ಕದಲ್ಲಿ ಎಷ್ಟು ಪಕ್ಕಾ ಎಂಬುದು ಅವನಿಗೆ ಮಾತ್ರ ಗೊತ್ತು. ಅವರ ಭಯದಲ್ಲಿ ಅದೆಷ್ಟೋ ಬಾರಿ ಕ್ಯಾಶ್ ಹೆಚ್ಚೂ ಕಡಿಮೆಯಾದಾಗ ತಾನೇ ಕೈಯಿಂದ ಹಣ ಹಾಕಿ ಲೆಕ್ಕ ಸರಿದೂಗಿಸಿರುವುದೂ ಇದೆ. ಅಂಥಾದ್ದರಲ್ಲಿ ಹಣ ಎತ್ತುವುದೆಲ್ಲಿಂದ ಬಂತು?


"ಏನ್ರೀ ರಾಜೀವ್ ಈಗ ಬರ್ತಿದ್ದೀರಿ?"


ಬಾಗಿಲಿನ ಬಳಿ ಕುಳಿತಿದ್ದ ಕ್ವಾಲಿಟಿ ಚೆಕ್ ಟೀಮಿನ ಕಾವ್ಯ ಕಂಪ್ಯೂಟರ್ ನಿಂದ ಕಣ್ಣು ಕೀಳದೇ ಪ್ರಶ್ನಿಸಿದಳು.


"ಟ್ಯಾಕ್ಸ್ ಡಿಪಾರ್ಟ್ಮೆಂಟಲ್ಲಿ ಕೆಲಸ ಇತ್ತು. ಅದಕ್ಕೇ ಲೇಟಾಯ್ತು."

ರಾಜೀವ ಉತ್ತರಿಸಿದ. 


"ನೀವೇ ಪುಣ್ಯವಂತರು ಬಿಡೀಪ್ಪಾ. ಟ್ಯಾಕ್ಸಾಫೀಸು, ಜಿಎಸ್ಟಿ ಅಂತ ಯಾವಾಗಂದರೆ ಆವಾಗ ಎದ್ದು ಹೋಗ್ತೀರ. ಸಂಜೆಯಂತೂ ಗಡಿಯಾರಕ್ಕಿಂತಲೂ ಮೊದಲೇ ನಿಮಗೆ ಆರು ಗಂಟೆಯಾಗ್ತದೆ. ನಮ್ಮನ್ನ ನೋಡಿ, ಏಳರ ತನಕ ಇಲ್ಲೇ ಕೋಳೀತಾ ಕೂತಿರ್ಬೇಕು"


ಕುಹುಕ, ವ್ಯಂಗ್ಯ, ಈರ್ಷೆಗಳ ಸಮ್ಮಿಶ್ರಣದಲ್ಲಿ ಅವಳಾಡಿದ ಮಾತಿಗೆ ಏನು ಉತ್ತರಿಸಬೇಕೆಂದು ರಾಜೀವನಿಗೆ ಹೊಳೆಯಲಿಲ್ಲ. ಸುಮ್ಮನೆ ನಕ್ಕಂತೆ ನಕ್ಕು ಕ್ಯಾಬಿನ್ ನೊಳಗೆ ಬಂದು ಕುಳಿತವನ ಮನಸ್ಸಿನಲ್ಲಿ ಅವಳಿಗೆ ಕೊಡಬಹುದಾಗಿದ್ದ ಉತ್ತರಗಳು ಒಂದೊಂದಾಗಿ ಮೂಡತೊಡಗಿದವು. ತಾನು ಎಲ್ಲರಿಗಿಂತ ಮೊದಲು ಹೊರಡುವುದು ನಿಜ; ಆದರೆ ಬೆಳಗ್ಗೆ ಎಲ್ಲರಿಗಿಂತ ಮೊದಲು ಬರುವವನೂ ತಾನೇ ಅಲ್ವಾ? ಹಾಗೆ ನೋಡಿದರೆ ಒಟ್ಟಾರೆಯಾಗಿ ತಾನು ಅವರಿಗಿಂತ ಅರ್ಧ ಗಂಟೆ ಜಾಸ್ತಿಯೇ ಆಫೀಸಿನಲ್ಲಿರುತ್ತೇನೆ! ಜಿಎಸ್ಟಿ, ಟ್ಯಾಕ್ಸಾಫೀಸು, ಆಡಿಟರ್ ಆಫೀಸ್ ಅಂತ ಹೊರಗೆ ಓಡಾಡುವುದೂ ಸತ್ಯವೇ. ಆದರೆ ಆ ಅಸಾಸುರರುಗಳೆಲ್ಲರ ಜೊತೆ ಹೆಣಗಾಡುವ ರಗಳೆಯೇನೆನ್ನುವುದು ತನಗೆ ಮಾತ್ರ ಗೊತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಕಾವ್ಯಾಳಿಗೆ ತಿಂಗಳಿಗೆ ಎಪ್ಪತ್ತು ಸಾವಿರ ಕೊಡುತ್ತಾರೆ‌. ತನಗೆ ಬರೀ ಇಪ್ಪತೈದು. ಅವರವರ ಹುದ್ದೆ, ಜವಾಬ್ದಾರಿಗಳಿಗನುಸಾರವಾಗಿ ಅವರವರ ಕೆಲಸದ ಸಮಯ, ಸಂಬಳಗಳು ನಿರ್ಧರಿಸಲ್ಪಟ್ಟಿರುತ್ತವೆ. ಅದಕ್ಕೇಕೆ ಹೀಗೆ ಕೊಂಕು ಮಾತಾಡಬೇಕು? 


ಬೆಳ್ಳಂಬೆಳಗ್ಗೆ ಬೇಸರ ತರಿಸಿದ ಕಾವ್ಯಾಳಿಗೆ ಬೈದುಕೊಳ್ಳುತ್ತಲೇ ರಾಜೀವ ಕಂಪ್ಯೂಟರ್ ಚಾಲೂ ಮಾಡಿದ. ಎಂಟ್ರಿ ಮಾಡಬೇಕಿದ್ದ ಬಿಲ್ಲುಗಳು ಟೇಬಲ್ ನ ಮೇಲೆ ನಕ್ಷತ್ರಿಕರಂತೆ ಕುಳಿತು ಕಾಯುತ್ತಿದ್ದವು. ಅವುಗಳ ರಾಶಿ ನೋಡಿದವನು ಸಣ್ಣಗೆ ಬೆಚ್ಚಿಬಿದ್ದ. ಕಳೆದೊಂದು ವಾರದಿಂದ ಅದೂ ಇದೂ ಕೆಲಸದ ಮಧ್ಯೆ ಇವನ್ನು ಗಮನಿಸಿಯೇ ಇಲ್ಲ. ಈಗೇನಾದರೂ ಇಷ್ಟು ದೊಡ್ಡ ಕಟ್ಟು ಮ್ಯಾನೇಜರ್ ಕಣ್ಣಿಗೆ ಬಿದ್ದರೆ ಸಾಕ್ಷಾತ್ ಬ್ರಹ್ಮರಾಕ್ಷಸನಾಗಿ ಮೈಮೇಲೆ ಬೀಳುತ್ತಾನೆ! ಹಾಗಂದುಕೊಳ್ಳುತ್ತಾ ರಾಜೀವ ಬೇಗಬೇಗನೇ ಬಿಲ್ ಗಳನ್ನು ಎಂಟ್ರಿ ಮಾಡತೊಡಗಿದ. ಬಾಕಿಯಿದ್ದ ಪ್ರತಿಯೊಂದು ಬಿಲ್ ನಲ್ಲೂ ಮ್ಯಾನೇಜರ್ ನ ಉಗ್ರ ಮುಖ ಕಾಣತೊಡಗಿ ಕೈ ತಡಬಡಾಯಿಸತೊಡಗಿತು.


"ಶರ್ಮಾ ಸರ್ ಕರೀತಿದಾರೆ"


ಹಾಗೆಂದು ಹೇಳಿದ ಜವಾನನ ಮುಖದಲ್ಲಿ 'ಐತೆ ಮಗನೇ ನಿಂಗೆ' ಎನ್ನುವ ಕುಹುಕದ ನಗೆಯೊಂದು ಅವಿತಿರುವಂತೆನಿಸಿತು. ಇನ್ಯಾವ ಜ್ವಾಲಾಮುಖಿ ಸ್ಫೋಟಿಸಲಿದೆಯೋ ಎಂದುಕೊಳ್ಳತ್ತಲೇ ಮ್ಯಾನೇಜರ್ ಕ್ಯಾಬಿನ್ ನತ್ತ ನಡೆದ. ಶರ್ಮಾರ ಕ್ಯಾಬಿನ್ ನೊಳಗಿನ ವಾತಾವರಣ ಸಹಾ ಅವರಷ್ಟೇ ಗಂಭೀರವಾಗಿತ್ತು. ಒಳ್ಳೆಯ ಕೆಲಸಗಾರ. ಆದರೆ, ಹೇಳಿದ್ದನ್ನು ಒಂದೇ ಸಲಕ್ಕೆ ಅರ್ಥಮಾಡಿಕೊಳ್ಳದ, ಕೆಲಸ ಮಾಡುವಾಗ ತಡಬಡಾಯಿಸುವ ತನ್ನನ್ನು ಕಂಡರೆ ಮಾತ್ರ ಅವನಿಗೆ ಉರಿಗೋಪ. ತಾನಾದರೂ ಅಷ್ಟೇ, ಅವನ ಪ್ರತಿಯೊಂದು ಆಜ್ಞೆಯನ್ನೂ ಭಯದ ನೆರಳಿನಲ್ಲಿ ನಿಂತೇ ಸ್ವೀಕರಿಸುತ್ತೇನೆ. 


ಮುಚ್ಚಿದ್ದ ಬಾಗಿಲನ್ನು ಇಷ್ಟೇ ಇಷ್ಟು ತೆರೆದು "ಮೇ ಐ ಕಮಿನ್ ಸರ್?" ಎಂದ. ಕಂಪ್ಯೂಟರ್ ಪರದೆಯಿಂದ ಕಣ್ಣು ಕೀಳದೆಯೇ "ಹೂಂ" ಎಂದವನ ಧಾಟಿಯಲ್ಲಿ ಗಂಭೀರತೆ ಸ್ಫೋಟಿಸುತ್ತಿರುವಂತಿತ್ತು. ಮೆಲ್ಲನೆ ಹೆಜ್ಜೆಯಿಡುತ್ತಾ ನಡೆದು ಅವರೆದುರು ನಿಂತುಕೊಂಡ. 


"ರಾಜನ್ ಅಸೋಸಿಯೇಟ್ಸ್ ದು ಪೇಮೆಂಟ್ ಯಾಕಿನ್ನೂ ಆಗಿಲ್ಲ?"


ತಲೆಯೆ ಮೇಲೆ ಸಿಡಿಲು ಕುಕ್ಕಿದಂತಾಯಿತು ರಾಜೀವನಿಗೆ. ಸೋಮವಾರವೇ ಆಗಬೇಕಿದ್ದ ಪೇಮೆಂಟ್. ಕಳೆದೆರೆಡು ದಿನಗಳಿಂದ ಬೇರೆ ಬೇರೆ ಹೊರಗಿನ ಕೆಲಸಗಳಲ್ಲೇ ಬ್ಯುಸಿಯಿದ್ದ ತಾನು ಗಡಿಬಿಡಿಯಲ್ಲಿ ಮರೆತುಬಿಟ್ಟಿದ್ದೇನೆ. 


"ರಾಜೀವ್, ನಿಮ್ಮ ತಲೆ ನಿಮ್ಮ ಜೊತೆಗೇ ಹುಟ್ಟಿತಾ ಅಥವಾ ನೀವು ಹುಟ್ಟಿ ಹತ್ತು ವರ್ಷಗಳಾದ ಮೇಲೆ ಹುಟ್ಟಿತಾ?"


ಹೊರಗಡೆ ಯಾರೋ ಕಿಸಕ್ಕೆಂದ ಸದ್ದು ಮುಚ್ಚಿದ ಬಾಗಿಲಿನ ಮರೆಯಿಂದ ತೆಳುವಾಗಿ ಕೇಳಿಬಂತು. ದರಿದ್ರದ ಬಾಗಿಲು. ತನಗೇನಾದರೂ ಹೊಗಳಿಕೆ ಸಿಕ್ಕರೆ ಅದನ್ನು ಆಚೆ ಇದ್ದವರಿಗೆ ಕೇಳಿಸುವುದಿಲ್ಲ. ಇಂತಹಾ ಬೈಗುಳಗಳನ್ನಾದರೆ ಮೊದಲು ಬಿಟ್ಟುಕೊಡುತ್ತದೆ.


"ಅದೂ.. ಸರ್.. ಎರೆಡು ದಿನಗಳಿಂದ ಐಟಿ ನೋಟೀಸ್ ವಿಚಾರಣೆಯ ಓಡಾಟವೇ ಆಗಿದೆ. ಹಾಗಾಗಿ ಪೇಮೆಂಟ್ ಮಾಡಲಾಗಲಿಲ್ಲ.."


ಅವನ ಮಾತಿನ್ನೂ ಪೀಠಿಕೆಯಲ್ಲೇ ಇತ್ತು, ಆಗಲೇ ಶರ್ಮಾ ಮತ್ತೊಮ್ಮೆ ಗುಡುಗಿದ:


"ಎರೆಡು ದಿನಗಳಿಂದ ಊಟ ಮಾಡಿದ್ದೀರ ತಾನೇ?"


"ಇಲ್ಲ" ಎನ್ನಬೇಕೆಂದುಕೊಂಡ ರಾಜೀವ್. ಹಿಂದಿನ ದಿನ ಅಸೆಸ್ಮೆಂಟ್ ಮುಗಿಸಿ, ಅವರು ಹೇಳಿದ ಫೈಲ್ ಗಳ ನಕಲು ತಯಾರಿಸಿ ಸಬ್ಮಿಟ್ ಮಾಡಿ ಹೊರಟವನಿಗೆ ನೇರವಾದ ಬಸ್ಸೇ ಸಿಕ್ಕಿರಲಿಲ್ಲ. ತಡವಾಗಿ ಮನೆ ತಲುಪಿದ ಸುಸ್ತಿನಲ್ಲಿ ಅಡುಗೆ ಮಾಡಿಕೊಳ್ಳುವ ಉತ್ಸಾಹವಿಲ್ಲದೇ ಉಪವಾಸ ಮಲಗಿಕೊಂಡು, ನಡುರಾತ್ರಿಗೆ ಹಸಿವಿನಿಂದ ಎಚ್ಚರವಾಗಿ, ತಿನ್ನಲು ಏನೂ ಸಿಕ್ಕದೆ ಕೊನೆಗೆ ಬರಿಯ ನೀರನ್ನಷ್ಟೇ  ಕುಡಿದು ಮಲಗಿದ ವಿಷಯವನ್ನು ಹೇಳಿಬಿಡಬೇಕೆನಿಸಿತಾದರೂ ಹೇಳದೆ ಸುಮ್ಮನಾದ.


"ಇನ್ನೊಂದು ಸಲ ಯಾವುದೇ ವೆಂಡರ್ ನಿಂದ ಪೇಮೆಂಟ್ ಆಗಿಲ್ಲಾಂತ ಕಂಪ್ಲೇಂಟ್ ಬಂದರೆ…"


ರಾಜೀವ ಕ್ಯಾಬಿನ್ ನಿಂದ ಹೊರಗೆ ಬಂದ. ಅಲ್ಲಿ ಇಷ್ಟು ಹೊತ್ತು ತನ್ನ ಮೇಲಾದ ಸಹಸ್ರನಾಮಾರ್ಚನೆಯನ್ನು ಕೇಳಿಸಿಕೊಂಡಿದ್ದ ಮುಖಗಳೆಲ್ಲ ಕುಹುಕ ನಗೆಯನ್ನು ಮುಚ್ಚಿಟ್ಟುಕೊಂಡು ಕುಳಿತಿರುವಂತೆ ಭಾಸವಾಯಿತು. ಈ ಬಿಲ್ಲುಗಳನ್ನು ತೆಗೆದು ಆಚೆ ಕುಳಿತಿರುವ ಕಾವ್ಯಾಳ ತಲೆಯ ಮೇಲೆ ಕುಕ್ಕಿ 'ನನ್ನ ಸುಖಗಳನ್ನ ಆಡಿಕೊಳ್ತೀಯಲ್ಲಾ, ಈ ಕಷ್ಟಗಳ ಬಗ್ಗೆಯೂ ಸ್ವಲ್ಪ ಮಾತಾಡು' ಎಂದು ಅಬ್ಬರಿಸಬೇಕೆನ್ನಿಸಿತು. ಆದಷ್ಟು ಬೇಗ ತನ್ನ ಬಹುದಿನಗಳ ಕನಸಿನಂತೆ ಊರಲ್ಲೊಂದೆಕರೆ ಜಮೀನು ಕೊಂಡು, ಈ ಗುಲಾಮಗಿರಿಯ ಬದುಕಿನ ಎದೆಯ ಮೇಲೆ ಕಾಲಿಟ್ಟು ದಾಟಿಹೋಗಬೇಕೆಂದುಕೊಳ್ಳುತ್ತಾ ಮತ್ತದೇ ಬಿಲ್ಲು, ಪೇಮೆಂಟುಗಳೊಳಗೆ ಮುಳುಗಿಹೋದ.

 

                         ******************


"ನೀವ್ಯಾಕೆ ಸುಮ್ಮನೆ ಬೈಸಿಕೊಂಡಿರಿ? ಐಟಿ ಆಫೀಸಲ್ಲಿ ಎಷ್ಟೊಂದು ಓಡಾಟವಿತ್ತೂಂತ ಹೇಳೋದು ತಾನೇ?"


ಮೇಲ್ಮಹಡಿಯ ಕ್ಯಾಂಟೀನಿನ ಟೇಬಲ್ ನಲ್ಲಿ ಎದುರು ಕುಳಿತು ಕಾಫಿಯ ಸಿಪ್ಪಿಗೆ ತುಟಿ ಕೊಡುತ್ತಾ ಹೇಳಿದಳು ಮಂಗಳ.


"ಹೇಳುವುದಕ್ಕೆ ಅವರಿಗೂ ಅದು ಗೊತ್ತುರೀ. ಆದರೂ ಸುಮ್ಮನೆ ಬೈತಾರೆ. ಅವರಿಗೆ ಕೆಲಸ ಆಗಬೇಕಷ್ಟೇ"

ಟೆರಾಸಿನಾಚೆ ವಿಸ್ತಾರದಲ್ಲಿ ಹರಡಿ ನಿಂತಿದ್ದ ಬಿಲ್ಡಿಂಗುಗಳ ರಾಶಿಯನ್ನೇ ದಿಟ್ಟಿಸುತ್ತಾ ಹೇಳಿದ ರಾಜೀವ.


"ನಿಮ್ಮ ಸೀನಿಯರ್ ಕೂಡಾ ಹಾಗೇ ಮಾಡಿದರು. ಅವರಿಗೂ ಈ ಶರ್ಮಾನಿಗೂ ಹುರಿದಕ್ಕಿ ಬೇಯುತ್ತಿರಲಿಲ್ಲ. ಅದಕ್ಕೇ ತಾನು ಬಿಟ್ಟುಹೋದ ಮೇಲೆ ಕಂಪನಿಗೆ ತನ್ನ ಬೆಲೆ ತಿಳಿಯಬೇಕೆಂಬ ಹಠದಲ್ಲಿ ನಿಮಗೆ ಸರಿಯಾಗಿ ನಾಲೆಡ್ಜ್ ಟ್ರಾನ್ಸ್ ಫರ್ ಮಾಡಲಿಲ್ಲ. ಅಲ್ಲದೆ ಈ ಶರ್ಮಾನಿಗಾದರೂ ನಿಮ್ಮ ಮೇಲೆ ಅದೇನೋ ಒಂದು ವಿಶೇಷವಾದ ದ್ವೇಶ. ಬೇರೆ ಯಾರ ಕೆಲಸದಲ್ಲೂ ಕಾಣದ ಐಬುಗಳನ್ನ ನಿಮ್ಮ ಕೆಲಸದಲ್ಲಿ ಹುಡುಕುತ್ತಾನೆ.. ಹೋಗಲಿ ಬಿಡಿ. ಮುಂದಿನ ಸಲ ಏನಾದ್ರೂ ಅರ್ಜೆಂಟ್ ಪೇಮೆಂಟಿದ್ರೆ ಇನ್ವಾಯ್ಸ್ ನನಗೆ ಕೊಟ್ಟು ಹೋಗಿ ಸರೀನಾ. ನೀವು ಹೀಗೆ ವಿನಾಕಾರಣ ಬೈಸಿಕೊಳ್ಳುವುದು ನನಗೆ ಇಷ್ಟವಾಗೊಲ್ಲ."


ಹಾಗೆಂದವಳ ಮುಖವನ್ನೇ ಅಚ್ಚರಿಯಿಂದೆಂಬಂತೆ ದಿಟ್ಟಿಸಿದ ರಾಜೀವ. ಅವಳ ಕಾಡಿಗೆ ಬೆರೆತ ಕಣ್ಣುಗಳೂ ಅವನನ್ನೇ ನೋಡುತ್ತಿದ್ದವು. ವಿವರಿಸಲಾಗದ ನವಿರುತನವೊಂದನ್ನು ಸೂಸುತ್ತಿರುವ ಆ ನೋಟಕ್ಕೆ ವಿಚಲಿತನಾಗಿ ದೃಷ್ಟಿಯನ್ನು ಆಚೀಚೆ ಹರಿಸಿದ. ತುಟಿಯಂಚಿನ ಲಿಪ್ಸ್ಟಿಕ್ ಗೆ ಅಂಟಿಕೊಂಡ ಮುಗುಳ್ನಗುವಿನೊಂದಿಗೆ ಅವಳು ಟೀ ಲೋಟಗಳನ್ನು ಎತ್ತಿಟ್ಟು ಬಸ್  ಸ್ಟ್ಯಾಂಡಿನತ್ತ ನಡೆಯತೊಡಗಿದಳು. ಎದೆಯಲ್ಲಿ ಈಗಷ್ಟೇ ಮೂಡಿರುವ ನವಿರಾದ ಅಚ್ಚರಿಯ ಸಮೇತ ಅವನು ಅವಳನ್ನು ಹಿಂಬಾಲಿಸತೊಡಗಿದ.


"ಮತ್ತೆ.. ನಿಮ್ಮ ಮದುವೆ ಯಾವಾಗ?"


ಮನದಲ್ಲಿ ಅರಳುತ್ತಿರುವ ಬಿಡಿ ಹೂಗಳಿಗೆ ದಾರ ಪೋಣಿಸುವಂತಹಾ ಪ್ರೆಶ್ನೆಯನ್ನು ಕೇಳಿದವಳ ಮುಖವನ್ನೇ ನೋಡುತ್ತಾ ರಾಜೀವ ಉತ್ತರಿಸಿದ.


"ಮದುವೆಯನ್ನೋ ಜಹಾಜನ್ನು ಹೇಗೆ ನಾನಿರೋ ದಡಕ್ಕೆ ಬಿಟ್ಟುಕೊಳ್ಳುವುದೋ ಗೊತ್ತಾಗುತ್ತಿಲ್ಲ ಮಂಗಳಾ. ಊರಲ್ಲಿ ಒಂದಷ್ಟು ಕೈಸಾಲಗಳಿವೆ. ಅವನ್ನ ತೀರಿಸಬೇಕು. ಮನೆ ರಿಪೇರಿ ಮಾಡಿಸಬೇಕು. ನಂತರ ಒಂದೆಕರೆ ನೀರಾವರಿ ಜಮೀನು ಕೊಳ್ಳಬೇಕು. ಜೊತೆಗೆ ನೋಟೀಸು ಕೊಡದೇ ಬರುವ ಸಾಂದರ್ಭಿಕ ಖರ್ಚುಗಳು ಬೇರೆ. ಗುಮಾಸ್ತಗಿರಿಯೆಂಬ ತೂತು ಮಡಿಕೆಯಲ್ಲಿ ಇಂತಹಾ ಆಸೆಗಳನ್ನು ತುಂಬಿಟ್ಟುಕೊಂಡು ಕಾಯುತ್ತಿರುವ ನಮ್ಮನ್ನೆಲ್ಲಾ ಯಾರು ತಾನೇ ಒಪ್ತಾರೆ ಹೇಳಿ?"


"ಅಲ್ಲೇ.. ಅಲ್ಲೇ ನೀವು ತಪ್ಪುತಿಳಿದಿರುವುದು. ನೀವಂದುಕೊಂಡಂತೆ ಎಲ್ಲಾ ಹುಡುಗಿಯರೂ ಹಣದ ಹಿಂದೆ ಬೀಳುವವರಲ್ಲ ರಾಜೀವ್. ಹಳ್ಳಿ, ಜಮೀನು, ಸರಳ ಜೀವನಗಳನ್ನು ಇಷ್ಟಪಡುವವರೂ ಇದ್ದಾರೆ. ಈಗ ನನ್ನನ್ನೇ ನೋಡಿ? ನನಗೆ ಲಕ್ಷಗಳ ಕಾರನ್ನು ಮನೆ ಮುಂದೆ ತಂದು ನಿಲ್ಲಿಸುವವ ಬೇಕಿಲ್ಲ. ಸರ್ಕಾರಿ ಬಸ್ಸಿಗೇ ಆದರೂ ಪ್ರೀತಿಯಿಂದ ಕೈಹಿಡಿದು ಹತ್ತಿಸುವವನಾದರೆ ಸಾಕು. ನಮ್ಮನ್ನು ಖುಷಿಯಾಗಿರಿಸಲಿಕ್ಕೆ ದೊಡ್ಡ ಸಂಬಳವೇ ಕೈಸೇರಬೇಕಿಲ್ಲ. ತಿಂಗಳ ಕೊನೆಗೆ ಚಿಕ್ಕ ಮಲ್ಲಿಗೆ ಮಾಲೆಯ ಜೊತೆಗೆ ಬೊಗಸೆ ತಲುಪುವ ಸಣ್ಣ ಮೊತ್ತವಾದರೂ ಸಾಕು".


ಯಾವ ಕೋನದಿಂದಲೂ ಅವಳ ಮಾತು ನಾಟಕೀಯವಾಗಿರುವಂತೆ ಕಾಣಲಿಲ್ಲ. ಅದೇಕೋ ಅವನ್ನು ಕೇಳಿಸಿಕೊಳ್ಳುವುದು ಹಿತವೆನಿಸಿತು. ಕೇಳುತ್ತಲೇ ಇರಬೇಕೆನಿಸುತ್ತಿರುವ ಈ ಸಂಭಾಷಣೆಯನ್ನು ಜಾರಿಯಲ್ಲಿಡುವಂತಹಾ ಪ್ರಶ್ನೆಯೊಂದನ್ನು ಕೇಳಲೆಂದು ಬಾಯಿತೆರೆಯುವಷ್ಟರಲ್ಲೇ ಅವಳು ಹತ್ತಬೇಕಾದ ಬಸ್ಸು ನಿಲ್ದಾಣವನ್ನು ಪ್ರವೇಶಿಸಿತು. ಬೈ ಹೇಳಿ ಬಸ್ಸು ಹತ್ತಿ ಹೋದವಳ ದಾರಿಯನ್ನೇ ನೋಡುತ್ತಾ ನಿಂತುಬಿಟ್ಟ ರಾಜೀವ್. 


ಈ ಮಾತನ್ನವಳು ತನಗೆಂದೇ ಆಡಿದಳಾ? 


ಅವಳು ಹಾಗೆ ಹೇಳುವಾಗ ತನ್ನನ್ನೇ ದಿಟ್ಟಿಸುತ್ತಿದ್ದ, ಅವರ್ಣನೀಯ ಭಾವಗಳು ತುಂಬಿದ್ದ ಅವಳ ಕಣ್ಣುಗಳ ಚಿತ್ರ 'ಹೌದು' ಎನ್ನುವ ಪುರಾವೆಯಂತೆ ಅವನೆದುರು ಮೂಡಿನಿಂತಿತು.


                      ********************


"ಬೋರ್ವೆಲ್ ತೋಡಿಸಲೇಬೇಕು"


ಆಚೆಕಡೆ ಫೋನಿನಲ್ಲಿ ಅಪ್ಪ ತುಸು ಗಂಭೀರವಾಗಿಯೇ ಹೇಳಿದರು. 


ರಾಜೀವನಿಗೂ ಗೊತ್ತಿತ್ತು. ಇದ್ದ ಒಂದೆಕರೆ ಗದ್ದೆ ಕಳೆದೆರೆಡು ವರ್ಷಗಳಿಂದ ಏನನ್ನೂ ಬೆಳೆಯದೇ ಹಾಳುಬಿದ್ದಿದೆ. ತನ್ನ ಕೆಲಸದ ಹೊರತಾಗಿ ತಮಗಿರುವ ಏಕ ಮಾತ್ರ ತುತ್ತಿನ ಪಾತ್ರೆಯದು. ನಾಳೆ ತಾನೇನಾದರೂ ಈ ಇಷ್ಟವಿಲ್ಲದ ಪಟ್ಟಣವನ್ನು ಬಿಟ್ಟು ಹೋದದ್ದೇ ಆದರೆ ಬದುಕುವುದಕ್ಕಾಗಿ ಆ ಪಾತ್ರೆಗೇ ಕೈಹಾಕಬೇಕಾಗುತ್ತದೆ. ಹಾಗಾಗಿ ಅದನ್ನು ಬಾಡಲು ಬಿಡುವ ಪ್ರೆಶ್ನೆಯೇ ಇಲ್ಲ. ಗದ್ದೆಯಾಚೆಗಿನ ಹಳ್ಳ ಡಿಸೆಂಬರ್ ವೇಳೆಗೇ ಹರಿಯುವುದನ್ನು ನಿಲ್ಲಿಸಿಬಿಡುತ್ತದೆ. ಹಾಗಾಗಿ ಬೋರ್ವೆಲ್ ತೋಡಿಸಲೇಬೇಕು. 


"ಸರಿ. ನೀವು ಮುಂದುವರೆಸಿ. ಹಣ ನಾನು ಹೊಂದಿಸುತ್ತೇನೆ".


ಅಷ್ಟಂದು ಫೋನಿಟ್ಟವನ ತಲೆಯೊಳಗೆ ನೂರು ಚಿಂತೆಯ ಹಕ್ಕಿಗಳು ಮೊಟ್ಟೆಯಿಡತೊಡಗಿದವು. ಒಂದು ಬೋರ್ವೆಲ್ ಗೆ ಹತ್ತಿರ ಹತ್ತಿರ ಒಂದು ಲಕ್ಷವಾದರೂ ಬೇಕು. ಅದು ಒಂದಕ್ಕೆ. ಹಾಗಂತ ಮೊದಲ ಪ್ರಯತ್ನದಲ್ಲೇ ನೀರು ಸಿಗುತ್ತದೆಯೆಂಬುದಕ್ಕೆ ಯಾವುದೇ ಖಾತ್ರಿಯಿಲ್ಲ. ಕಷ್ಟಪಟ್ಟು ದುಡಿದ ಎಷ್ಟು ಸಾವಿರಗಳನ್ನು ನೀರಿಲ್ಲದ ಕೊಳವೆಗಳಿಗೆ ಎಸೆಯಬೇಕೋ? ತಾನೀಗ ಮತ್ತಷ್ಟು ಸಾಲಕ್ಕೆ ಬೀಳಲಿದ್ದೇನೆನ್ನುವುದಷ್ಟೇ ಸಧ್ಯಕ್ಕೆ ಖಾತ್ರಿಯಿರುವ ಏಕಮಾತ್ರ ಸಂಗತಿ.


ಯಾರನ್ನು ಕೇಳುವುದು? ಗೆಳೆಯರ್ಯಾರೂ ಅಷ್ಟೆಲ್ಲ ಸಾಲ ಕೊಡುವಷ್ಟು ಸ್ಥಿತಿವಂತರಲ್ಲ. ಸ್ಥಿತಿವಂತರಾಗಿರುವವರ್ಯಾರೂ ಅಷ್ಟು ಸಾಲ ಕೊಡುವಷ್ಟು ಆತ್ಮೀಯರಲ್ಲ. ಭಾವನನ್ನು ಕೇಳೋಣವೆಂದರೆ "ಅಪ್ಪ ಮಾಡಿದ ಸಾಲವನ್ನು ತೀರಿಸುತ್ತೀಯೆಂದುಕೊಂಡರೆ ನೀನೇ ಒಂದು ಹೊಸ ಖಾತೆ ತೆರೆಯುತ್ತಿದ್ದೀಯಲ್ಲಾ" ಎಂದು ಕುಹುಕವಾಡುತ್ತಾರೆ‌. ಕಂಪನಿಯಲ್ಲಿ ಉದ್ಯೋಗಿಗಳಿಗೆ ಸಾಲಕೊಡುವುದನ್ನು ನಿಲ್ಲಿಸಿ ವರ್ಷವಾಗಿದೆ. ಇನ್ನು ಫೈನಾನ್ಸ್ ಕಂಪನಿಗಳ ಬಾಗಿಲಿಗೋ, ಇಲ್ಲಾ ಬ್ಯಾಂಕುಗಳ ಕೌಂಟರ್ ಗೋ ಎಡತಾಕೋಣವೆಂದರೆ ಅವರು ಹೊರಿಸುವ ಬಡ್ಡಿಯನ್ನು ತಾಳುವುದು ತನ್ನಿಂದ ಸಾಧ್ಯವಿಲ್ಲ.


ತಾನು ಹೊದ್ದಿರುವುದು ಚಾದರವನ್ನೋ ಅಲ್ಲಾ ಚಿಂತೆಗಳನ್ನೋ ಎಂಬಂತೆ ರಾಜೀವ ನಿದ್ರೆ ಬರದೆ ಹೊಡಕಾಡಿದ. ಯಾಕೋ ಮೊದಲ ಬಾರಿಗೆ ಪಟ್ಟಣದ ಬಸ್ಸು ಹತ್ತಿದಾಗಿನ ದಿನಗಳು ನೆನಪಾದವು. ಸಂಬಳ ಹತ್ತು ಸಾವಿರ ಸಿಕ್ಕರೂ ಸಾಕು, ರಾಜರಾಜವರ್ಮನಂತೆ ಬದುಕಿಬಿಡುತ್ತೇನೆಂದು ನಂಬಿದ್ದ ದಿನಗಳವು. ಇಷ್ಟು ದಿನ ಅಪ್ಪ ಕೊಡುತ್ತಿದ್ದ ಹಣದಲ್ಲಿ ಬದುಕುತ್ತಿದ್ದ ಲೆಕ್ಕಾಚಾರದ ಬದುಕು ಇನ್ನೇನು ಕೊನೆಯಾಗುತ್ತದೆಂಬ ಕನಸು ಕಾಣುತ್ತಿದ್ದ ಕಾಲ. ಆರಿದ್ದ ಸಂಬಳ ಹತ್ತಾಗಿ, ಹದಿನೈದಾಗಿ ಈಗ ಇಪ್ಪತೈದಾಗಿದೆ. ಲೆಕ್ಕದ ಪುಸ್ತಕ ಬದಲಾಗಿದೆಯಾದರೂ ಲೆಕ್ಕಗಳು ಮಾತ್ರ ಹಾಗೇ ಉಳಿದಿವೆ. 


ಹೇಗಾದರೂ ಮಾಡಿ ಒಂದೊಳ್ಳೆ ಎಂಎನ್ಸಿಗೆ ದಾಟಿಕೊಳ್ಳಬೇಕು ಎಂದುಕೊಂಡ ರಾಜೀವ. ಈ ಹಿಂದೆ ಕೂಡಾ ಆ ಪ್ರಯತ್ನ ಮಾಡಿದ್ದನಾದರೂ ಅಲ್ಲಿನ ನಿರ್ಬಂಧಿತ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಬಿಟ್ಟುಬಂದಿದ್ದ. ಈ ಬಾರಿ ತನ್ನ ಒಳ ತುಮುಲಗಳನ್ನೆಲ್ಲಾ ಬದಿಗಿಟ್ಟು ಸಂಬಳವೊಂದನ್ನೇ ಗಮನದಲ್ಲಿಟ್ಟುಕೊಂಡು ದುಡಿಯಬೇಕು. ಕನಿಷ್ಠ ಮೊವತೈದು ಸಾವಿರವಾದರೂ ಕೈಗೆ ಬಂದರೆ ಸಾಕು‌. ಬಾಡಿಗೆ, ಓಡಾಟ, ಊಟ, ತಿಂಡಿ, ಇತ್ಯಾದಿಗಳಿಗೆಂದು ತಿಂಗಳಿಗೆ ಹತ್ತು ಸಾವಿರ ಎತ್ತಿಟ್ಟರೂ ಕನಿಷ್ಟ ಇಪ್ಪತ್ತು ಸಾವಿರ ಕೈಯಲ್ಲುಳಿಯುತ್ತದೆ. ಹನ್ನೆರೆಡು ಲಕ್ಷ ಲೋನ್ ತೆಗೆದರೂ ಸಾಕು, ಅರ್ಧ-ಮುಕ್ಕಾಲೆಕರೆಯಷ್ಟು ತೋಟ ಕೊಳ್ಳಬಹುದು. ಸ್ವಲ್ಪ ವರ್ಷ ಕೆಲಸ ಮಾಡಿ ಒಂದಷ್ಟು ಸಾಲ ತೀರಿಸುವ ಹೊತ್ತಿಗೆ ತೋಟವೂ ಫಲಕೊಡತೊಡಗುತ್ತದೆ. ಆಗ ಮೆತ್ತಗೆ ಈ ಕಂಪನಿಯ ಹಡಗನ್ನು ನೀರಿಗೆ ಬಿಟ್ಟು ಊರಿನ ದೋಣಿಗೆ ದಾಟಿಕೊಳ್ಳಬೇಕು. ಈಗಲೇ ವಯಸ್ಸು ಮೊವ್ವತ್ತಕ್ಕೆ ಎರೆಡೇ ಮೆಟ್ಟಿಲು ದೂರವಿದೆ. ಇನ್ನು ನಾಲ್ಕು ವರ್ಷಗಳೊಳಗಾಗಿ ಇವನ್ನೆಲ್ಲಾ ಸಾಧಿಸಿ ಊರು ಸೇರಿಬಿಡಬೇಕು. ಮತ್ತೂ ತಡವಾದರೆ ದೇಹ ತೋಟದ ಕೆಲಸಕ್ಕೆ ಬಗ್ಗಲಾರದು. 


ಹಾಗಾದರೆ ಮದುವೆ? ಅದಕ್ಕೆ ಬೇಕಾದ ಹಣ? ಅದರ ಮುಂದಿನ ಕಥೆ?


ಕೊನೆಯಿಲ್ಲದ ಪ್ರೆಶ್ನೆಗಳಿಗೆ ಉತ್ತರ ಹುಡುಕುವುದಕ್ಕಿಂತ ನಿದ್ರಿಸುವುದೇ ಸುಲಭವೆಂದುಕೊಂಡ ಮನಸ್ಸು ನಿದ್ರೆಗೆ ಜಾರಿತು.


                      *******************


"ನಾಳೆ ಚಂದ್ರಲೇಖಾಳ ಮದುವೆಯಿದೆ ಸರ್. ಆಫೀಸಿನವರೆಲ್ಲಾ ಮೈಸೂರಿಗೆ ಹೋಗುತ್ತಿದ್ದಾರೆ. ನಾನೂ ಅವರೊಟ್ಟಿಗೆ ಹೋಗುವುದಕ್ಕೆ ರಜೆ ಬೇ.."


"ಗಜೇಂದ್ರ ಅ್ಯಂಡ್ ಕೋದು ಪೇಮೆಂಟ್ ಬಂತಾ?"

ರಾಜೀವನ ಮಾತು ಕೇಳಿಸಿಯೇ ಇಲ್ಲವೆಂಬಂತೆ ಕೇಳಿದ ಶರ್ಮಾ. 


"ಆಲ್ಮೋಸ್ಟ್ ಆಗಿದೆ ಸರ್. ಫಾಲೋ ಅಪ್ ಮಾಡುತ್ತಿದ್ದೇನೆ. ಈ ವೀಕೆಂಡ್ ಹೊತ್ತಿಗೆ ಮತ್ತೊಮ್ಮೆ…"


"ಇವತ್ತು ಇ-ಸ್ಟ್ಯಾಂಪಿಗ್ ಮುಗಿಸಿಕೊಂಡು ನಾಳೆಯೇ ಅವರಿಗೆ ಮತ್ತೊಂದು ರೌಂಡ್ ರಿಮೈಂಡರ್ ನೋಟೀಸು ಕೊಟ್ಟು ಬನ್ನಿ. ವಾರದ ಕೊನೆಯ ತನಕವೆಲ್ಲಾ ಕಾಯಲು ಸಾಧ್ಯವಿಲ್ಲ."


"ಅಲ್ಲ ಸರ್.‌ ನಾಳೆ ಮದುವೆ ಮುಗಿಸಿಕೊಂಡು ನಾಡಿದ್ದು ಬೆಳಗ್ಗೆಯೇ.."


"ವಾರಕ್ಕೆ ಮೂರು ಜನ ಮದುವೆಯಾಗುತ್ತಾರೆ. ಅದಕ್ಕೆಲ್ಲಾ ರಜೆ ಕೊಡುತ್ತಾ ಹೋದರ ಇಲ್ಲಿ ಕೆಲಸ ಮಾಡುವವರು ಯಾರು? ಪ್ಲೀಸ್ ಡೂ ಆ್ಯಸ್ ಐ ಸೆಡ್!"


ತಾನಿಟ್ಟ ಕೋರಿಕೆಗೂ, ಅವರು ಕೊಟ್ಟ ತೀರ್ಮಾನಕ್ಕೂ ಸಂಬಂಧವೇ ಇಲ್ಲವಲ್ಲಾ ಎಂದುಕೊಂಡು ಸಣ್ಣಗಿನ ದನಿಯಲ್ಲಿ ಕೊನೆಯ ಪ್ರಯತ್ನವೆಂಬಂತೆ ಕೇಳಹೊರಟ ರಾಜೀವನ ಮಾತನ್ನು ಅರ್ಧಕ್ಕೇ ತುಂಡರಿಸುತ್ತಾ ಶರ್ಮಾ ಹೆಚ್ಚುಕಮ್ಮಿ ಕಿರುಚಿಯೇ ಬಿಟ್ಟ. ಪೆಚ್ಚುಮೋರೆ ಹಾಕಿಕೊಂಡು ಹೊರಬಂದವನಿಗೆ ತನ್ನ ಕ್ಯಾಬಿನ್ ನ ತುಂಬಾ ಕುಹುಕದ ಮುಸಿಮುಸಿ ನಗೆ ತಾಂಡವವಾಡುತ್ತಿರುವಂತೆ ಭಾಸವಾಯಿತು. ಅವಮಾನದ ಭಾರಕ್ಕೆ ಕುಸಿದವನಂತೆ ಕುರ್ಚಿಯ ಮೇಲೆ ಕುಳಿತವನಿಗೆ ಕಾಳಜಿ ತುಂಬಿದ ನೋಟವೊಂದು ತನ್ನತ್ತಲೇ ನೋಡುತ್ತಿರುವಂತೆನಿಸಿ ಮೆಲ್ಲನೆ ಕತ್ತುಹೊರಳಿಸಿ ನೋಡಿದ.


ಸಾಂತ್ವನ ಸೂಸುವ ದೃಷ್ಟಿಯನ್ನು ತನ್ನತ್ತಲೇ ನೆಟ್ಟು ಕುಳಿತಿದ್ದಳು.. ಕಾಡಿಗೆ ಕಂಗಳ ಹುಡುಗಿ ಮಂಗಳಾ!


                       ******************


"ನೀವೇಕೆ ಬೇರೆ ಕಡೆ ಕೆಲಸ ನೋಡಬಾರದು?"


ಕಾಳಜಿ ಬೆರೆತ ದನಿಯಲ್ಲಿ ಹಾಗೆಂದು ಕೇಳಿದವಳು ಎಂದಿಗಿಂತ ಸಮೀಪದಲ್ಲಿ ಕುಳಿತಿರುವಂತೆನಿಸಿತು ರಾಜೀವನಿಗೆ.


"ಬಿಟ್ಟು ಹೋಗಬಹುದು. ಈ ಶರ್ಮಾನ ವರ್ತನೆ ನೋಡಿದಾಗೆಲ್ಲಾ ನನಗೆ ಹಾಗೇ ಅನಿಸುತ್ತದೆ. ಆದರೆ ರಮೇಶ್ ಸರ್ ರ ಮುಖ ನೋಡಿಕೊಂಡು ಸುಮ್ಮನಿದ್ದೇನೆ."

ಕಾಫಿಯ ಸಿಪ್ಪೊಂದನ್ನು ಹೀರಿ ರಾಜೀವ ಮುಂದುವರೆಸಿದ.


"ಅಂದು ಕೆಲಸವಿಲ್ಲದೆ ಅಲೆಯುತ್ತಿದ್ದಾಗ ಇಂಟರ್ವ್ಯೂ ಕೂಡಾ ಮಾಡದೆ ಸೇರಿಸಿಕೊಂಡವರು ರಮೇಶ್ ಸರ್. ಈಗ ಬೇರೆ ಯಾರೇ ಬಂದರೂ ನಾನು ಮಾಡುತ್ತಿರುವ ಕೆಲಸ ನಿಭಾಯಿಸುವುದು ಕಷ್ಟವಿದೆ. ಅದರಲ್ಲೂ ಈ ಶರ್ಮಾನನ್ನು ತಡೆದುಕೊಂಡಂತೂ ಯಾರೂ ಆರು ತಿಂಗಳಿಗಿಂತ ಹೆಚ್ಚಿಗೆ ಉಳಿಯಲಾರರು. ಅದೊಂದೇ ಋಣ, ಇವತ್ತಿಗೂ ನನ್ನನ್ನಿಲ್ಲೇ ಕಟ್ಟಿಹಾಕಿರುವುದು".


"ಅದೊಂದೇನಾ? ಬೇರೆ ಯಾರೂ ಇಲ್ವಾ?"

ಹಾಗೆ ಕೇಳಿದವಳ ದನಿಯಲ್ಲಿ ಥಟ್ಟನೆ ಇಣುಕಿತ್ತು ಹುಸಿಗೋಪ. ಆ ಮುನಿಸಿನ ಆಳದಿಂದ ಎದ್ದುಬಂದಿದ್ದ ಪ್ರೆಶ್ನೆ ತೀರಾ ಸ್ಪಷ್ಟವಾಗಿತ್ತು:


"ನಿಮ್ಮನ್ನಿಲ್ಲಿ ಕಟ್ಟಿ ಹಾಕಿರುವ ಸೆಳೆತಗಳ ಪಟ್ಟಿಯಲ್ಲಿ ನನ್ನ ಹೆಸರಿಲ್ಲವಾ?"


ಕ್ಯಾಂಟೀನಿನ ಗೋಡೆಗೆ ತೂಗುಹಾಕಿದ್ದ ಹೂವಿನ ಭಾವಚಿತ್ರ ಇದ್ದಕ್ಕಿದ್ದಂತೆ ಸುಮಧುರ ಘಮಸೂಸುತ್ತಿರುವಂತೆ ಭಾಸವಾಯಿತು ರಾಜೀವನಿಗೆ. ಗಿಡದಂಚಿನಲ್ಲಿ ಅರಳಲು ಸಿದ್ಧವಾಗಿ ನಿಂತಿರುವ ಮೊಗ್ಗಿನಂತೆ ನವಿರಾದ ರಹಸ್ಯವನ್ನು ಬಚ್ಚಿಟ್ಟುಕೊಂಡು ತನ್ನನ್ನೇ ನೋಡುತ್ತಿದ್ದ ಆ ಕಣ್ಣಿನಾಳವನ್ನೇ ನೋಡುತ್ತಾ ಉಳಿದುಬಿಟ್ಟ. ಆ ದಿನ ಕಛೇರಿಯಿಂದ ಬಸ್ ನಿಲ್ದಾಣದ ತನಕ ನಡೆದವರ ನಡುವೆ ಒಂದು ಮಾತಾದರೂ ಹುಟ್ಟಲಿಲ್ಲ. ತೀರಾ ಬಸ್ಸು ಹತ್ತುವಾಗ ಇಷ್ಟು ಹೊತ್ತಿನಿಂದ ತಯಾರಿ ಮಾಡಿಕೊಂಡ ಮಾತೊಂದನ್ನು ಅವನಿಗಷ್ಟೇ ಕೇಳುವಂತೆ ಪಿಸುಗುಟ್ಟಿ ಹೋದಳು ಮಂಗಳಾ:


"ನನಗೆ ಮನೆಯಲ್ಲಿ ಗಂಡು ನೋಡುತ್ತಿದ್ದಾರೆ!"


                     ***************


"ವೇಣು ಬಂದಿದಾನೆ ನೋಡೋ ರಾಜೀ.."


ಅಮ್ಮನ ಕರೆ ಕೇಳಿದ ರಾಜೀವ ಹಿತ್ತಲಕಡೆ ಅಂಗಳದಿಂದ ಮುಂಬಾಗಿಲಿಗೆ ಬಂದ. ನಡುವಳದ ಹೊಸಿಲಿನಲ್ಲಿ ಅವನ ಮುಖ ಕಾಣಿಸಿಕೊಳ್ಳುತ್ತಿದ್ದಂತೆಯೇ ಜಗುಲಿಯಲ್ಲಿ ಕುರ್ಚಿಯ ಮೇಲೆ ಆಸೀನನಾಗಿದ್ದ ವೇಣು ಮೇಲೆದ್ದು ಹೇಯ್ ಎಂದು ಮುಗುಳ್ನಕ್ಕ. ಒಂದೇ ಶಾಲೆಯ ಒಂದೇ ಬೆಂಚಿನಲ್ಲಿ ಕುಳಿತು ಓದಿದ ಬಾಲ್ಯದ ಗೆಳೆಯ ವೇಣು. ದೊಡ್ಡ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಇಂಜಿನಿಯರ್ರಾಗಿ ಕೆಲಸಮಾಡುತ್ತಿದ್ದ. ಇನ್ನೇನು ಎರೆಡು ವಾರದಲ್ಲಿ ಆಗಲಿದ್ದ ಮದುವೆಗೆ ಬಾಲ್ಯದ ಗೆಳೆಯನನ್ನು ಆಹ್ವಾನಿಸಲೆಂದು ತಾನೇ ಬಂದಿದ್ದ.


"ಯಾವಾಗ ಬಂದ್ಯಪ್ಪಾ ಲಂಡನ್ ನಿಂದ?"


ಅಪ್ಪ ಕೇಳಿದರು.


"ಒಂದು ತಿಂಗಳಾಯ್ತು ರಾಯ್ರೇ"

ವೇಣು ಉತ್ತರಿಸಿದ.


"ಮತ್ತೆ ಹೋಗ್ಬೇಕಾ ಹೇಗೆ?"


"ಇಲ್ಲ. ಪ್ರಾಜೆಕ್ಟ್ ಮುಗ್ದಿದೆ. ಇನ್ನು ಬೆಂಗಳೂರಲ್ಲೇ ಕೆಲಸ"


"ಗುಡ್. ಹೊಸ ಸಂಸಾರಕ್ಕೆ ಹೊಸ ಮನೆ ನೋಡಿ ಆಯ್ತಾ?"


"ಆಯ್ತು. ಅಲ್ಲೇ ಆಫೀಸಿಗೆ ಹತ್ರದಲ್ಲೇ ಒಂದು ಫ್ಲಾಟ್ ತಗೊಂಡೆ. ಬಾಡಿಗೆ ಗೀಡಿಗೆಯ ರಗಳೆಯೆಲ್ಲ ಬೇಡ ಅಂತ"


"ಎಷ್ಟಾಯ್ತು ಒಟ್ಟು?"


"ರಿಜಿಸ್ಟ್ರೇಶನ್ನೆಲ್ಲಾ ಸೇರಿ ಮೊವ್ವತ್ತೆಂಟು ಲಕ್ಷ ಆಯ್ತು. ಡೌನ್ ಪೇಮೆಂಟ್ ಇಪ್ಪತ್ತು ಮಾಡಿದೆ…"


ಅಪ್ಪ ಹಾಗೂ ಗೆಳೆಯನ ನಡುವೆ ನಡೆಯುತ್ತಿದ್ದ ಸಂಭಾಷಣೆ ತನ್ನ ಜಗತ್ತಿಗೆ ಸಂಬಂಧವೇ ಇಲ್ಲದ ಬೇರೆಯದೇ ಲೋಕದ್ದೇನೋ ಅನ್ನಿಸಿತು ರಾಜೀವನಿಗೆ. ಅವರಿಬ್ಬರೂ ಸಂಭಾಷಿಸುತ್ತಲೇ ಮನೆಯ ಹೊರಗಡೆ ಬಂದರು. ರಾಜೀವನೂ ಹಿಂಬಾಲಿಸಿದ. ಅವರ ಮಾತೀಗ ಅಂಗಳದಲ್ಲಿ ಠೀವಿಯಿಂದ ನಿಂತಿದ್ದ ವೇಣುವಿನ ಬೈಕಿನತ್ತ ತಿರುಗಿತು. 


"ಒಟ್ಟು ಒಂದು ಲಕ್ಷದ ನಲವತ್ತಾಯ್ತು ಬೈಕಿಗೆ. ತಿಂಗಳು ತಿಂಗಳು ಇಎಮೈ ರಗಳೆಯೆಲ್ಲ ಬೇಡ ಅಂತ ಒಂದೇ ಸಲಕ್ಕೆ ಪೇಮಾಡಿಬಿಟ್ಟೆ"


ರಾಜೀವ ಬೈಕಿನತ್ತ ನಡೆದ. ಹೆಚ್ಚುಗಾರಿಕೆಯ ಚಿಹ್ನೆಯಂತೆ, ಸಮಾಜದ ಗೌರವದ ಪ್ರತೀಕದಂತೆ, ಭದ್ರತೆ ಸಾಧಿಸಿದ ಬದುಕಿನ ಪ್ರತಿಬಿಂಬದಂತೆ ಬೀಗುತ್ತಾ ನಿಂತಿದ್ದ ಅದನ್ನು ಮೆಲ್ಲನೆ ಸವರಿದ. 


"ನಮ್ಮ ಪ್ರತೀಕ್ ಕೂಡಾ ಇದ್ನೇ ತಗೊಂಡಿದಾನೆ. ಪೇಸ್ಬುಕ್ನಲ್ಲಿ ಫೋಟೋ ಹಾಕಿದ್ದ. ನೋಡಿದ್ಯಾ?"

ವೇಣು ಪ್ರಶ್ನಿಸಿದ.


ಎಲ್ಲರೂ ಒಂದೇ ಶಾಲೆಯಲ್ಲಿ ಓದಿದವರು. ಅದೇ ಮರದ ಬೆಂಚಿನ ಮೇಲೆ ಕುಳಿತು, ಕಲಿತು ಎದ್ದು ಹೋದವರು. ತನ್ನ ಜಟಕಾಗಾಡಿಯಿನ್ನೂ ಅದದೇ ಕ್ಷುಲ್ಲಕ ಲೆಕ್ಕಾಚಾರಗಳ ಬೀದಿಯಲ್ಲಿ ಅಲೆಯುತ್ತಿರುವಾಗ ಇವರೆಲ್ಲರೂ ಎಲ್ಲೆಲ್ಲಿಗೆ ತಲುಪಿಬಿಟ್ಟರು!


"ಮತ್ತೆ.. ನೀನ್ಯಾವಾಗ್ಲೋ ಮದುವೆ ಊಟ ಹಾಕ್ಸೋದು?"

ವೇಣು ಪ್ರಶ್ನಿಸಿದ.


"ಎಂಥಾ ಮದುವೆನೋ ಏನೋ. ಮೊದಲು ಮನೆ ರಿಪೇರಿ ಮಾಡ್ಸಿ, ಊರಲ್ಲೇ ಎಲ್ಲಾದ್ರೂ ಒಂದೆಕರೆ ಜಮೀನು ತಗೋಬೇಕಂತಿದೀನಿ. ಆ ಸಾಲ ಸ್ವಲ್ಪವಾದ್ರೂ ತೀರಿದಮೇಲೆ ಮದುವೆ ಗಿದುವೆ ಎಲ್ಲಾ."

ರಾಜೀವ ತನ್ನ ಲೆಕ್ಕದ ಪುಸ್ತಕವನ್ನು ಬಿಡಿಸಿಟ್ಟ.


"ಕೆಲಸ ಬದಲಾಯಿಸೋದು ತಾನೇ? ಯಾಕೆ ಅದೇ ಕಂಪನಿಯಲ್ಲಿ ಉಳಿದು ಕೊಳೀತಿದೀಯಾ? ಜಾಸ್ತಿ ಸಂಬಳ ಎಲ್ಲಿ ಸಿಗುತ್ತದೋ ಅಲ್ಲಿಗೆ ದಾಟ್ಕೋಬೇಕು"


"ಬದಲಾಯಿಸ್ಬೋದು. ಆದ್ರೆ ಸಧ್ಯಕ್ಕೆ ನಮ್ಮ ಕಂಪನೀಲಿ ಅಕೌಂಟೆಂಟ್ ಅಂತ ಇರೋದು ನಾನೊಬ್ನೇ. ಇನ್ನೊಬ್ಬನನ್ನು ತಗೊಂಡು ಅವನು ಸ್ವಲ್ಪ ತಯಾರಾಗೋದ್ರೊಳಗೇ ನಾನೂ ಬಿಟ್ಟುಬಿಟ್ರೆ ಕಂಪನೀಗೆ ತುಂಬಾ ತೊಂದರೆಯಾಗುತ್ತೆ. ಕಷ್ಟದಲ್ಲಿದ್ದಾಗ ಕೆಲಸ ಕೊಟ್ಟ ಕಂಪನಿ. ಅವರ ಬಗ್ಗೇಗೂ ಸ್ವಲ್ಪ ಯೋಚಿಸಬೇಕಲ್ವಾ.."


"ಹಾಹಾಹಾ.."

ರಾಜೀವನ ಮಾತಿಗೆ ವೇಣು ನಕ್ಕುಬಿಟ್ಟ.


"ನೋಡು ಗುರೂ, ಈ ಥರದ ಸೆಂಟಿಮೆಂಟುಗಳೆಲ್ಲ ವಯಕ್ತಿಕ ಜೀವನದಲ್ಲಿರಬೇಕು, ವೃತ್ತಿ ಬದುಕಿನಲ್ಲಲ್ಲ. ಈ ಐಟಿ, ಕಾರ್ಪೋರೇಟ್ ಜಗತ್ತಿನಲ್ಲಿ ಭಾವನೆಗಳೆಲ್ಲಾ ಚಲಾವಣೆಯಾಗುವುದಿಲ್ಲ. ಇಲ್ಲಿ ಮನುಷ್ಯ ತನ್ನ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತಾನೆ ಹಾಗೂ ಅದನ್ನು 'ಪರಿಸ್ಥಿತಿ' ಎನ್ನುತ್ತಾನೆ. ನೀನೂ ಹಾಗೇ ಇದ್ದರೆ ಮಾತ್ರ ಇಲ್ಲಿ ಉದ್ಧಾರ ಆಗ್ತೀಯ. ನೀನು ಒಂದೊಂದಾಗಿ ಅಷ್ಟೆಲ್ಲಾ ಮಾಡುವಷ್ಟರಲ್ಲಿ ನಿನ್ನ ವಯಸ್ಸು ಮಠ ಸೇರಿಕೊಂಡಿರತ್ತೆ. ಏನನ್ನೇ ಆದ್ರೂ ಪ್ಲಾನ್ ಮಾಡಿಯೇ ಮಾಡ್ಬೇಕು. ನಿನ್ನಂಥದೇ ಯೋಚನೆಗಳಿರೋ, ಕೆಲಸಕ್ಕೆ ಹೋಗ್ತಿರೋ ಸರಳ ಹುಡುಗೀನ ಹುಡುಕಿ ಮದುವೆಯಾಗು. ನಿನ್ನ ಸಂಪಾದನೆಯ ಜೊತೆ ಅವಳ ಸಂಬಳವೂ ಸೇರಿದ್ರೆ ಈ ಎಲ್ಲ ಲೆಕ್ಕಾಚಾರಗಳೂ ಸುಲಭವಾಗುತ್ತವೆ"


ತನ್ನಂಥವೇ ಕನಸುಗಳಿರುವ ಸರಳ ಹುಡುಗಿ..


ಯಾಕೋ ಮಂಗಳಾ ಅಪ್ರಯತ್ನವಾಗಿ ನೆನಪಾದಳು.


ಬದುಕಿನ ಆಯವ್ಯಯದ ಕಡತದಲ್ಲಿ ಹೂಡಿಕೆಯ ಹೊಸ ಪುಟವೊಂದು ತೆರೆದುಕೊಂಡಂತಾಗಿ ರಾಜೀವನ ಕಣ್ಣು ಹೊಳೆಯತೊಡಗಿತು.


                *****************


"ಮತ್ತೆ.. ಯಾವಾಗ ಮದುವೆ?'


ಆ ಪ್ರೆಶ್ನೆಯನ್ನು ಸುಮ್ಮನೆ ಫೋನಿನಲ್ಲಿನ ಸಂಭಾಷಣೆಯನ್ನು ಮುಂದುವರಿಸಲೆಂಬಂತೆ  ಕೇಳಿದನಾದರೂ ಕೇಳಿದ ನಂತರ ಇದಕ್ಕೆ ಅವಳು ಕೊಡುವ ಉತ್ತರ ತನ್ನ ಇಡೀ ಜೀವಮಾನವನ್ನೇ ನಿರ್ಧರಿಸಲಿದೆಯೇನೋ ಅನ್ನಿಸಿತು ರಾಜೀವನಿಗೆ.


"ಏನೋ ಗೊತ್ತಿಲ್ಲಾರೀ. ಮನೆಯಲ್ಲಿ ಹುಡುಗ ನೋಡ್ತಿದಾರೆ. ಯಾವಾಗ ಸೆಟ್ಟಾಗತ್ತೋ ಏನೋ.."

ಮಂಗಳಾಳ ಧ್ವನಿಯಲ್ಲಿ ಚಿಂತೆಯ ಪಸೆಯಿತ್ತು.


"ಓಹೋ. ಯಾವ್ದಾದ್ರೂ ಸಂಬಂಧ ಬಂದಿದ್ಯಾ?"

ಮನಸ್ಸಿನಲ್ಲಿ ಭುಗಿಲೆದ್ದ ಆತಂಕ ಮಾತಿನಲ್ಲಿ ಸ್ಫುರಿಸದಂತೆ ಕಷ್ಟಪಟ್ಟು ತಡೆಹಿಡಿಯುತ್ತಾ ಕೇಳಿದ ರಾಜೀವ.


"ಒಂದೆರೆಡು ಬಂದುಹೋಗಿವೆ. ಇನ್ನೊಂದು ಬರುವುದಿದೆ"

ದೀರ್ಘವಾದ ನಿಟ್ಟುಸಿರಿನೊಂದಿಗೆ ಮಾತನ್ನು ಅರ್ಧಕ್ಕೇ ನಿಲ್ಲಿಸಿದಳು.


"ಯಾಕ್ರೀ? ನಿಮಗಿಷ್ಟವಾಗಿಲ್ವಾ ಆ ಸಂಬಂಧಗಳು?"


"ತಲೆ ಚಿಟ್ಟುಹಿಡಿದು ಹೋಗಿದೆ ರಾಜೀವ್. ಇಂಜಿನಿಯರ್ರು, ಡಾಕ್ಟ್ರು. ಅಷ್ಟು ಸಂಬಳ, ಇಷ್ಟು ಆಸ್ತಿ. ಅಲ್ಲೊಂದು ಸೈಟು, ಇಲ್ಲೊಂದು ಕಂಪನಿ. ಜಾತಕದಲ್ಲಿ ಗುರು ಅಲ್ಲಿ, ಶನಿ ಇಲ್ಲಿ… ಎಷ್ಟು ಲೆಕ್ಕಾಚಾರಗಳು ಗೊತ್ತಾ? ತಮಾಷೆಯೇನಂದ್ರೆ ಈ ಯಾವ ಲೆಕ್ಕಾಚಾರದಲ್ಲೂ ನನಗೇನು ಇಷ್ಟ ಎನ್ನುವ ಅಂಶವೇ ಇಲ್ಲ!"


"ನಿಮಗೇನು ಇಷ್ಟ?"


ನಿಟ್ಟುಸಿರಿನದೇ ಮಾತಿನ ರೂಪವೆಂಬಂತೆ ನುಡಿದವಳಿಗೆ ಉಸಿರಿನಷ್ಟೇ ನಯವಾದ ಸ್ವರದಲ್ಲಿ ಆ ಪ್ರೆಶ್ನೆ ಕೇಳಿದ. ಪ್ರತಿಯಾಗಿ ಅತ್ತಕಡೆಯಿಂದ ಬಿಕ್ಕಿನ ಧ್ವನಿ ಭಾವಲಹರಿಯ ಮೊನಚು ಮೊನೆಯಂತೆ ತೇಲುತ್ತಾ ಬಂದು ಅವನ ಕಿವಿಯನ್ನು ಇರಿಯಿತು.


"ನನಗೆ.. ನನಗೆ.. ನನ್ನನ್ನು ಅರ್ಥಮಾಡಿಕೊಳ್ಳುವವನು ಇಷ್ಟ. ಕಡಿಮೆ ಸಂಬಳವಾದರೂ ಪರವಾಗಿಲ್ಲ, ನನ್ನನ್ನು ಪ್ರೀತಿಸುವವನು ಇಷ್ಟ. ಹಳ್ಳಿಯ ಮಡಿಲಿನ ಪುಟ್ಟ ಹಂಚಿನ ಮನೆಯಲ್ಲಿ ಮನೆಕೆಲಸ ಮಾಡಿ ದಣಿಯುವ ನನಗೆಂದೇ ತೋಟದ ಹೂವೊಂದನ್ನ ಕೊಯ್ದು ತರುವವನು ಇಷ್ಟ. ಹಣ, ಆಸ್ತಿ, ಅಂತಸ್ತುಗಳೆಲ್ಲದರಾಚೆಗೂ ಇರುವ ಅಪ್ಪಟ ಬದುಕನ್ನು ಪ್ರೀತಿಸುವ ಸಾಮಾನ್ಯ ವ್ಯಕ್ತಿಯೇ ನನಗಿಷ್ಟ. ಹೇಳಿ ರಾಜಿ.. ನನಗೆ ಅಂಥವನೇ ಸಿಗ್ತಾನೆ ಅಲ್ವಾ?"


ಕಿಟಕಿಯಾಚೆಗೆಲ್ಲೋ ಹಕ್ಕಿಯೊಂದು ನವಿರಾಗಿ ಉಲಿಯಿತು‌. ಹಾದು ಬಂದ ತಂಗಾಳಿ ಹೊತ್ತು ತಂದ ಹೂ ಘಮದ ಸಮೇತ ನೇರ ಎದೆಯನ್ನೇ ಹೊಕ್ಕಂತಾಯಿತು. 


"ಹೇಳಿ ಗೋಪೀ.. ಸಿಗ್ತಾನೆ ಅಲ್ವಾ?"

ಅವಳು ಪುನರುಚ್ಛರಿಸಿದಳು.


"ಸಿಗುತ್ತಾನೆ ಮಂಗಳಾ.. ಸಿಕ್ಕೇ ಸಿಗುತ್ತಾನೆ. ಚಾಚುವ ಹಾಗೂ ಬಾಚುವ ಕೈಗಳೆರೆಡನ್ನೂ ಪರಸ್ಪರ ಸೇರಿಸಲೆಂದೇ ಮೇಲ್ಲೊಬ್ಬ ಕುಳಿತಿದ್ದಾನೆ. ಅವನು ಖಂಡಿತಾ ನೀವು ಬಯಸಿದವನನ್ನೇ ನೀಡುತ್ತಾನೆ."


'ಸಿಗುತ್ತೇನೆ' ಎಂಬ ಪದವನ್ನು 'ಸಿಗುತ್ತಾನೆ' ಎಂದು ತಪ್ಪಾಗಿ ಹೇಳಿಬಿಟ್ಟೆನೇನೋ ಅನ್ನಿಸಿತು ರಾಜೀವನಿಗೆ.


"ಅಲ್ಲಾ, ನನ್ನ ಮನಸ್ಸಿನ ಲೆಕ್ಕಾಚಾರಗಳನ್ನೆಲ್ಲಾ ಇಷ್ಟು ಮುಕ್ತವಾಗಿ ನಿಮ್ಮತ್ರ ಹೇಳ್ಕೊಳ್ತಿದೀನಲ್ಲಾ, ಅಷ್ಟಕ್ಕೂ ನೀವು ಯಾರು ನನಗೆ?"

ತಾನು ಕೇಳಬಯಸುತ್ತಿರುವ ಉತ್ತರವನ್ನು ಪ್ರೆಶ್ನೆಯಲ್ಲೇ ಮುಚ್ಚಿಟ್ಟಂತೆ ಕೇಳಿದಳು ಮಂಗಳಾ. ತುಟಿಯಂಚಿನಲ್ಲಿ ತುದಿಗಾಲಿನಲ್ಲಿ ನಿಂತಿರುವ ಆ ಸವಿಸತ್ಯವನ್ನು ಮರೆಮಾಚುತ್ತಾ ಅವನು ನುಡಿದ:


"ಇನ್ನೊಮ್ಮೆ ಹೇಳ್ತೀನಿ"


"ನಿಜವಾಗ್ಯೂ ಹೇಳ್ತೀರಾ?"


"ನಿಜವಾಗ್ಯೂ ಹೇಳ್ತೀನಿ"


"ನಾನು ಕಾಯ್ತಿರ್ತೀನಿ.."


"ಗುಡ್ ನೈಟ್"


"ಗುಡ್ ನೈಟ್"


ಒಲ್ಲದ ಮನಸ್ಸಿನಿಂದ ಸಂಪರ್ಕ ಕತ್ತರಿಸಿದ ರಾಜೀವ ಹಾಸಿಗೆಗೆ ಒರಗಿಕೊಂಡ. ಬಹಳ ದಿನಗಳ ನಂತರ ಚಂದದ ಕನಸೊಂದು ತನಗಾಗೇ ಕಾಯುತ್ತಿರುವಂತೆ ಮನಸ್ಸೆಲ್ಲಾ ಉಲ್ಲಾಸಮಯವಾಗಿತ್ತು‌.


"ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ

ಕೈಹಿಡಿದು ನಡೆಸೆನ್ನನೂ"


ಹೊರಗಿನ ನಿರ್ಜನ ರಸ್ತೆಯಲ್ಲಿ ಕಾರೊಂದು ಅವನೆದೆಯದೇ ಹಾಡನ್ನು ಗುನುಗುತ್ತಾ ಹಾದುಹೋಯಿತು.


ಒಪ್ಪಿಬಿಡುತ್ತಾಳಾ?


ತಾನೆಂಬ ಅಲೆಮಾರಿ ದೋಣಿಯೀಗ ಮಂಗಳಾಳೆನ್ನುವ ಸುಂದರ ತೀರವನ್ನು ತಲುಪಿನಿಂತಿದೆಯಾ?


ನವಿರಾದ ಅಯೋಮಯದ ಹೊದಿಕೆಯಡಿಯಲ್ಲಿ ಮೆಲ್ಲನೆ ಯೋಚಿಸತೊಡಗಿದ. ಬೇಡ. ಈಗಲೇ ಕೇಳುವುದು ಬೇಡ. ಮೊದಲು ಆರ್ಥಿಕವಾಗಿ ಸ್ವಲ್ಪ ಬಲಾಢ್ಯನಾಗಬೇಕು. ತನ್ನ ಮಗಳ ಆಯ್ಕೆಯನ್ನು ಪರೀಕ್ಷಿಸಲೆಂದು ಅವಳ ಮನೆಯವರು ಬಂದಾಗ ತಾನು ತೀರಾ ಅರಮನೆಯಲ್ಲಲ್ಲದಿದ್ದರೂ ಚೊಕ್ಕದಾದ ಟೆರಾಸಿನ ಮನೆಯಲ್ಲಾದರೂ ನಿಂತು ಅವರನ್ನು ಸ್ವಾಗತಿಸಬೇಕು. ಬದುಕಿನಲ್ಲಿ ಮೊಟ್ಟಮೊದಲಬಾರಿಗೆ ತನ್ನನ್ನು ಆಯ್ಕೆಮಾಡಿಕೊಂಡಿರುವವಳ ಆಯ್ಕೆಯನ್ನು ತಾನು ಸಮರ್ಥಿಸಲೇಬೇಕು!


ಅಂದಿನ ಅವನ ನಿದಿರೆ ಎಂದಿನಂತಿರಲಿಲ್ಲ.


               ***************



ಕನಸು ನನಸಾಗುತ್ತಿದೆ!


ಇನ್ನೇನು ಮಂಗಳಾ ಬಂದು ಕೂರಬೇಕಿರುವ ಕ್ಯಾಬಿನ್ ನ ಕುರ್ಚಿಯನ್ನೇ ನೋಡುತ್ತಾ ತನ್ನೊಳಗೇ ಹಾಗೆಂದುಕೊಂಡ ರಾಜೀವ್. ಜೊತೆಯಲ್ಲಿ ಓದಿ ಬೆಳೆದ ಗೆಳೆಯರೆಲ್ಲರ ಮದುವೆ ದಿಬ್ಬಣಗಳು ಮನೆಯ ಮುಂದೆಯೇ ಸಾಗುತ್ತಿವೆ. ಅವರ 'ವೆಲ್ ಸೆಟಲ್ಡ್' ಬದುಕಿನ ಹೆಮ್ಮೆಯ ಪ್ರತೀಕಗಳಾದ ಕಾರು, ಬೈಕುಗಳ ಉನ್ಮಾದದ ಹಾರನ್ನೀಗ ತನ್ನ ಅಸ್ಥಿರ ಬದುಕನ್ನು ಕೆಣಕುತ್ತಿದೆ. ತನ್ನ ತೇರೂ ಹೊರಡಬೇಕಿದೆ‌. ಕಾರಿನಲ್ಲಲ್ಲದಿದ್ದರೂ ಕಾಲ್ನಡಿಗೆಯಲ್ಲಾದರೂ ನಡೆದು ಸಾಗಬೇಕಿದೆ. ಖುಷಿಯ ಸಂಗತಿಯೆಂದರೆ ಜೊತೆನಡೆಯಲಿಕ್ಕೆ ತನಗೀಗ ವಿನೂತನ ಜೊತೆಯೊಂದು ದೊರಕಿದೆ.. 


ಮಂಗಳಾ! 


ಅಭಿಪ್ರಾಯಗಳಲ್ಲಿ ಸಾಮ್ಯತೆಯಿದೆ. ಆಕಾಂಕ್ಷೆಗಳು ಒಂದೇ ಆಗಿವೆ. ಲೆಕ್ಕಾಚಾರಗಳು ಮ್ಯಾಚ್ ಆಗುತ್ತಿವೆ. ಅವಳು ಹುಡುಕುತ್ತಿರುವ ವಿಗ್ರಹದ್ದೂ, ತಾನು ಕೆತ್ತುತ್ತಿರುವ ಕಲ್ಲಿನದ್ದೂ ಅಂತಿಮ ರೂಪ ಒಂದೇ ಆಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ತನ್ನೆದೆಯಲ್ಲಿ ಪ್ರಜ್ವಲಿಸುತ್ತಿರುವ ಪ್ರೇಮ ಜ್ಯೋತಿಯೇ ಅವಳ ಹೃದಯದಲ್ಲೂ ಉರಿಯುತ್ತಿದೆ. ತನ್ನಂತೆಯೇ ಮಧ್ಯಮ ವರ್ಗದವಳು. ಊರು, ನೆಮ್ಮದಿ, ಜಮೀನು ಎಂದು ತನ್ನಹಾಗೇ ಚಿಕ್ಕಚಿಕ್ಕ ಆಸೆಗಳ ಕೈತೋಟ ಬೆಳೆಸಿಕೊಂಡಿರುವವಳು. ಇಬ್ಬರೂ ಸಂಗಾತಿಗಳಾಗಿ ಕೈಜೋಡಿಸಿದರೆ ಆ ಕೈತೋಟ ಉದ್ಯಾನವನವಾಗಲಿಕ್ಕೆ ಎಷ್ಟು ಹೊತ್ತು? ಇಬ್ಬರ ಸಂಬಳದಲ್ಲಿ ಒಬ್ಬರದ್ದನ್ನು ತಿಂಗಳ ಖರ್ಚಿಗೆ ಬಳಸಿ ಇನ್ನೊಬ್ಬರದ್ದನ್ನು ಉಳಿಸಿದರೂ ಮುಂದಿನ ಎರೆಡು ವರ್ಷದಲ್ಲಿ ಒಂದೊಳ್ಳೆ ಜಮೀನು ಕೊಳ್ಳಬಹುದು. ಇಲ್ಲಿ ದುಡಿದು ಲೋನ್ ತೀರಿಸುತ್ತಾ ಅಲ್ಲಿ ಕೃಷಿಯನ್ನೂ ನಿಭಾಯಿಸದರೆ ಮತ್ತೆರೆಡು ವರ್ಷಗಳಲ್ಲಿ ತೋಟವೂ ಫಲಕೊಡಲಾರಂಭಿಸುತ್ತದೆ. ಆ ಪ್ರತಿಫಲ ತಮ್ಮ ನೆಮ್ಮದಿಯ ಬದುಕಿಗೆ ಸಾಕಾಗುವ ಮಟ್ಟವನ್ನು ತಲುಪಿದ ದಿನ ತಾನು ಹಾಗೂ ಮಂಗಳಾ ಈ ಒತ್ತಡ, ಯಾಂತ್ರಿಕತೆಗಳ ಮಹಾನಗರಿಯನ್ನೊಮ್ಮೆ ಕೊನೆಯ ಬಾರಿಗೆ ನೋಡಿ ಊರಿನ ಬಸ್ಸು ಹತ್ತುತ್ತೇವೆ!


ಕನಸಿನ ಗೂಡನ್ನು ಜೊತೆಯಾಗಿ ಹೆಣೆಯುವುದರಲ್ಲಿ ಎಷ್ಟೊಂದು ಸಂಭ್ರಮವಿದೆಯಲ್ಲಾ?


ಅವಳಿನ್ನೂ ಬಂದು ಕೂರದ ಖಾಲಿ ಕುರ್ಚಿಯ ಸುತ್ತಾ ಕನಸುಗಳ ಬಳ್ಳಿ ಹಬ್ಬಿಸುತ್ತಿದ್ದ ರಾಜೀವ ಥಟ್ಟನೆ ವಾಚು ನೋಡಿಕೊಂಡ. ಸಮಯ ಹತ್ತೂ ಮೊವ್ವತ್ತು ದಾಟಿದೆ. ಅವಳೇಕಿನ್ನೂ ಆಫೀಸಿಗೆ ಬಂದಿಲ್ಲ? ಹುಷಾರು ಗಿಷಾರು ತಪ್ಪಿರಬಹುದೇ? ಕೇಳೋಣವೆಂದು ಫೋನಾಯಿಸಿದ. ಆಚೆ ಕಡೆ ಸಂಪೂರ್ಣ ರಿಂಗಾದರೂ ಅವಳಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸಣ್ಣ ಚಿಂತೆಯ ಕಿಟಕಿಯೊಂದನ್ನು ತೆರೆದಿಟ್ಟಕೊಂಡೇ ಕೆಲಸ ಮುಂದುವರೆಸಿದ. 


"ಸರ್ ಬರಬೇಕಂತೆ"


ರಾಜೀವ ಈ ಲೋಕಕ್ಕೆ ಮರಳಿದ. ಕರೆ ಕಳಿಸಿದ ಶರ್ಮಾನ ಕ್ಯಾಬಿನ್ ನತ್ತ ನಡೆದ. ಆಶ್ಚರ್ಯವೆಂಬಂತೆ ಅಲ್ಲಿ ಶರ್ಮಾನ ಪಕ್ಕ ಕುಳಿತಿದ್ದ ರಮೇಶ್ ಸರ್ ಸಹಾ ಕಣ್ಣಿಗೆ ಬಿದ್ದರು. 


"ಏನು ಕೆಲಸ ಮಾಡ್ತೀರ್ರೀ ರಾಜೀವ್?"

ತೀರಾ ಅನಿರೀಕ್ಷಿತವಾದ ಆ ಮಾತು ರಮೇಶ್ ರ ಬಾಯಿಂದ ಬಂತು.


"ವರ್ಮಾ ಟ್ರೇಡರ್ಸ್ ನವರ ಫೈಲ್ ಎಲ್ಲೋ ಕಳೆದುಹಾಕಿದೀರಂತೆ?"


ರಾಜೀವನಿಗೆ ಕಾಲ ಕೆಳಗಿನ ನೆಲ ಜರ್ರನೆ ಜಾರಿದಂತೆ ಭಾಸವಾಯಿತು. ಐದಾರು ತಿಂಗಳ ಕೆಳಗೆ ತನ್ನ ಕೈಗೇ ಬಂದಿದ್ದ ಫೈಲದು. ಈಗ ಹಠಾತ್ತನೆ ಕಾಣೆಯಾಗಿದೆ. ಬಹುಮುಖ್ಯ ಕಾಗದ ಪತ್ರ, ಕೊಟೇಶನ್, ಟೆಂಡರ್ ವಿವರಗಳಿದ್ದ ಅದನ್ನು ಇದೇ ಶರ್ಮಾನಿಗೆ ಕೊಟ್ಟಂತೆ ಮಾಸಲು ಮಾಸಲು ನೆನಪು ತನಗೆ. ತನ್ನೀ ಅನಿಶ್ಚಿತತೆಯನ್ನೇ ಬಂಡವಾಳವಾಗಿಸಿಕೊಂಡಿರುವ ಶರ್ಮಾ ತಾನದನ್ನು ಪಡೆದೇ ಇಲ್ಲ ಎಂದು ವಾದ ಮಾಡುತ್ತಿದ್ದಾನೆ.  ಪಡೆದಿಲ್ಲವೋ ಇಲ್ಲಾ ಎಲ್ಲೋ ಇಟ್ಟು ಮರೆತು ಈಗ ತಪ್ಪನ್ನು ತನ್ನ ಮೂತಿಗೆ ಒರೆಸುತ್ತಿದ್ದಾನೋ ಹೇಗೆ ಹೇಳುವುದು? ಸದಾ ತನ್ನ ಟೇಬಲ್ ಮೇಲೆ ಫೈಲುಗಳ ಗುಡ್ಡೆ ಹಾಕಿಕೊಂಡಿರುತ್ತಾನೆ. ಅದರಲ್ಲಿ ಯಾವುದನ್ನೋ ಕಳೆದುಕೊಂಡು ತನ್ನ ಮೇಲೆ ಎಗರಾಡುತ್ತಾನೆ. ನೆನ್ನೆಯಷ್ಟೇ ಆ ಫೈಲಿನ ಬಗ್ಗೆಯೂ ಒಂದು ಸುತ್ತಿನ ವಾದ ಮುಗಿದಿತ್ತು. ಈಗದು ನೇರ ರಮೇಶ್ ಸರ್ ಟೇಬಲ್ ತನಕ ಬಂದು ತಲುಪಿದೆ. ಯಾವುದೋ ಗಡಿಬಿಡಿಯಲ್ಲಿ ಅದನ್ನು ಕೊಟ್ಟು ಮರೆತ ತನ್ನ ದುರ್ಬಲ ಸ್ಮೃತಿಶಕ್ತಿಯನ್ನು ಹಳಿದುಕೊಳ್ಳುತ್ತಾ, ಮುಂದಿನ ಬೈಗುಳಕ್ಕಾಗಿ ಎದುರುನೋಡುತ್ತಾ ನಿಂತುಕೊಂಡ ರಾಜೀವ್.


"ಯಾಕೆ ಇಷ್ಟೊಂದು ಎಡಬಿಡಂಗಿ ಕೆಲಸ ಮಾಡ್ತೀರ? ಆ ಫೈಲಿನ ಪ್ರಾಮುಖ್ಯತೆ ಗೊತ್ತಿಲ್ವ ನಿಮಗೆ? ಚಿಲ್ಲರೆಯಂತೆ ಕಳೆದುಬಿಟ್ಟಿದ್ದೀರಲ್ಲಾ ಅದನ್ನ?"

ರಮೇಶ್ ಮಾತಿಗೆ ಏನು ಹೇಳುವುದೆಂದೇ ತಿಳಿಯದೆ ತಲೆತಗ್ಗಿಸಿದ ರಾಜೀವ್. ತನ್ನದಲ್ಲದ ತಪ್ಪಿಗೆ ಇಂತಹಾ ಮಾತು ಕೇಳುತ್ತಿರುವುದಕ್ಕೆ ಮನಸ್ಸಿಗೆ ಹಿಂಸೆಯಾಗುತ್ತಿತ್ತು.


"ಯಾವ ಕೆಲಸ ಕೊಟ್ಟರೂ ಹೀಗೇ ಮಾಡೋದು ಇವನು. ನನಗಂತೂ ಸಾಕಾಗಿಹೋಗಿದೆ. ಹೀಗೇ ನಡೆದರೆ ಬೇರೊಬ್ಬನನ್ನು ನೋಡಿಕೊಳ್ಳಬೇಕಾಗುತ್ತದೆ!"


ಈ ಬಾರಿ ಶರ್ಮಾ ಆಡಿದ ಆ ಮಾತು ನೇರ ರಾಜೀವನ ಗೌರವಕ್ಕೇ ಇರಿಯಿತು. ತಾನೂ ಮಾಡಿರಬಹುದಾದ ತಪ್ಪು. ಅದನ್ನು ನನ್ನ ತಲೆಗೆ ಕಟ್ಟುತ್ತಿದ್ದಾನೆ! ಬೆಳಗಿನಿಂದ ಸಂಜೆಯ ತನಕ ತಾನು ಮಾಡುವ ನೂರು ಸಫಲ ಕೆಲಸಗಳನ್ನು ನೋಡದೇ ವಿಫಲವಾದದ್ದನ್ನು ಮಾತ್ರ ಎತ್ತಿಯಾಡುತ್ತಾನೆ. ಈಗಂತೂ ತೀರಾ ಏಕವಚನಕ್ಕೇ ಇಳಿದಿದ್ದಾನೆ! ರಾಜೀವನ ಆತ್ಮಗೌರವ ಕನಲಿಹೋಯಿತು.


"ಆ ಫೈಲನ್ನು ನಾನು ನಿಮಗೆ ಕೊಟ್ಟಿದ್ದೇನೆ!"

ಮೊಟ್ಟಮೊದಲಬಾರಿಗೆ ದನಿಯನ್ನು ತಾರಕಕ್ಕೇರಿಸಿದ ರಾಜೀವ್.


"ಏನು ಮಾತಾಡ್ತಿದ್ದೀಯಾ? ಹಾಗೆ ಅರ್ದರ್ಧ ಕೆಲಸ ಮಾಡಲಿಕ್ಕೆ ನಾನೇನೂ ನೀನಲ್ಲ!"

ಶರ್ಮಾ ಚೀರಿದ.


"ಕೆಲಸಗಳು ಅರ್ಧಂಬರ್ಧವಾಗಲಿಕ್ಕೆ ಯಾರು ಸರ್ ಕಾರಣ? ಮಾಡುತ್ತಿರುವ ಕೆಲಸವನ್ನು ಪೂರ್ಣಮಾಡಲು ಬಿಡದೆ ಅದು ಬೇಡ ಇದು ಮಾಡು, ಇದು ಬೇಡ ಅದು ಮಾಡು ಎನ್ನುವವರು ಯಾರು ಹೇಳಿ? ಒಂದೇ ಸಮಯಕ್ಕೆ ನಾಲ್ಕು ಕೆಲಸ ಹೇಳಿ, ನಾಲ್ಕನ್ನೂ ಒಟ್ಟಿಗೇ ಮುಗಿಸು ಎಂದರೆ ನಾನಾದರೂ ಏನು ಮಾಡಲಿ?"

ಬಹಳ ಕಷ್ಟದಿಂದ ಮಾತಿನಲ್ಲಿ ಗೌರವವನ್ನುಳಿಸಿಕೊಳ್ಳುತ್ತಾ ಹೇಳಿದ ರಾಜೀವ್.


"ಮಾಡಬೇಕು. ನಿನಗೆ ಸಂಬಳ ಕೊಡುತ್ತಿರುವುದೇ ಅದಕ್ಕೆ! ಅಷ್ಟಕ್ಕೂ ಈಗ ಮತ್ತೊಬ್ಬ ಜೂನಿಯರ್ ನನ್ನು ಕೊಟ್ಟಿಲ್ವಾ?"

ಶರ್ಮಾ ಭುಸುಗುಟ್ಟಿದ.


"ಅವರು ಬಂದಿರುವುದು ಮೂರು ತಿಂಗಳ ಕೆಳಗೆ. ಅದಕ್ಕೂ ಮೊದಲು ಒಂದು ವರ್ಷ ನಾನೊಬ್ಬನೇ ಎಲ್ಲವನ್ನೂ ಮಾಡಿದ್ದೇನೆ. ಆ ಸಮಯದಲ್ಲಾದ ತಪ್ಪುಗಳ ಬಗ್ಗೆಯೇ ನೀವೀಗ ಮಾತಾಡ್ತಿರೋದು!" 

ಪಟ್ಟು ಹಿಡಿದವನಂತೆ ನುಡಿದ ರಾಜೀವ್. 


"ನಾನೀಗ ನಿಮ್ಮನ್ನು ಕರೆದದ್ದು ವಾದ ಮಾಡಲಿಕ್ಕಲ್ಲ ರಾಜೀವ್"

ರಮೇಶ್ ಶರ್ಮಾನ ಪರವಾಗಿ ಬ್ಯಾಟು ಬೀಸಿದರು.


"ಹಾಗಲ್ಲ ಸರ್. ನನಗೆ ನೀವೂ ಕೆಲಸ ಹೇಳ್ತೀರ. ಇವರೂ ಹೇಳುತ್ತಾರೆ. ಅತ್ತಕಡೆ ಬ್ರಾಂಚ್ ಮ್ಯಾನೇಜರ್ ಗಳೂ ಸಹಾ ಒತ್ತಡ ಹಾಕುತ್ತಾರೆ. ಎಲ್ಲರೂ ಕುದುರೆ ಮೇಲೆ ಕುಳಿತುಕೊಂಡೇ ಬರುತ್ತಾರೆ. ಎಲ್ಲರಿಗೂ ಅವರವರ ಕೆಲಸವೇ ಮೊದಲು ಮುಗಿಯಬೇಕಿರುತ್ತದೆ. ಇವೆಲ್ಲದರ ಮಧ್ಯೆ ನನಗೆ ಪ್ರತಿದಿನವೂ ಮಾಡಬೇಕಾದ ನನ್ನದೇ ಆದ ಜವಾಬ್ದಾರಿಗಳಿವೆ. ಇವರು ಹೀಗೆ ಎಲ್ಲದಕ್ಕೂ ಅಡ್ಡಗಾಲು ಹಾಕಿ, ಕೊನೆಗೆ ಯಾವ ಕೆಲಸವೂ ಪೂರ್ಣವಾಗಿಲ್ಲ ಎಂದು ನನ್ನನ್ನು ದೂರುತ್ತಾರೆ. ಹೀಗೆ ಮಾಡಿದರೆ ನನಗೆ ಕಷ್ಟವಾಗುತ್ತೆ"

ರಾಜೀವ ತನ್ನ ಅಸಹಾಯಕತೆಯನ್ನು ತೋಡಿಕೊಂಡ.


"ಸರಿ ರಾಜೀವ್. ಅಷ್ಟೊಂದು ಕಷ್ಟವಾಗುವುದಾದರೆ ನೀವು ಬೇರೆಲ್ಲದಾರೂ ಕೆಲಸ ನೋಡಿಕೊಳ್ಳಿ!"


ಆಘಾತಕ್ಕಿಂತ ಹೆಚ್ಚಾಗಿ ಆಶ್ಚರ್ಯ ತುಂಬಿದ ಕಂಗಳಿಂದ ನೋಡಿದ ರಾಜೀವ್. ಆ ಮಾತು ಕುಟಿಲ ಶರ್ಮಾನ ನಾಲಿಗೆಯಿಂದ ಉದುರಿರದೇ ರಮೇಶರ ಬಾಯಿಂದ ಬಂದಿತ್ತು!


"ನಮಗೆ ಕಷ್ಟಪಟ್ಟು ಕೆಲಸ ಮಾಡುವವರು ಬೇಕಿಲ್ಲ ರಾಜೀವ್. ಇಷ್ಟಪಟ್ಟು ಮಾಡುವವರು ಬೇಕು. ಇನ್ನೆರೆಡು ವಾರದಲ್ಲಿ ನೀವು ಮಾಡುತ್ತಿರುವ ಕೆಲಸವನ್ನೆಲ್ಲಾ ಜೂನಿಯರ್ ಗೆ ಕಲಿಸಿ ಈ ತಿಂಗಳ ಕೊನೆಗೆ ಎಂಡ್ ಮಾಡಿ."


"ಈಗ ನಾನೊಬ್ಬನೇ ಇರುವುದು.. ನಾನೂ ಬಿಟ್ಟರೆ ಕಂಪನಿಗೆ ತೊಂದರೆಯಾಗುತ್ತದೆ"


ಹಿಂದೆ ತಾನಾಡಿದ ಆ ಮಾತು ತನ್ನನ್ನೇ ಅಪಹಾಸ್ಯ ಮಾಡಿದಂತೆ ಭಾಸವಾಯಿತು ರಾಜೀವನಿಗೆ. ಮೂರು ವರ್ಷಗಳಿಂದ 'ತನ್ನ ಕಂಪನಿ' ಎಂಬ ಪ್ರೀತಿಯಲ್ಲಿ ನಿರ್ವಹಿಸಿದ ಉದ್ಯೋಗ. ಒಂದೇ ಕ್ಷಣದಲ್ಲಿ ಮುರಿದುಹೋಯಿತಲ್ಲಾ? ಊಟ ಬಿಟ್ಟು ನಡೆದಿದ್ದೆ. ರಾತ್ರೆಯ ತನಕ ದುಡಿದಿದ್ದೆ. ನಡುರಾತ್ರೆಯಲ್ಲೂ ಲ್ಯಾಪ್ಟಾಪು ತೆರೆದು ಹೇಳಿದ ಕೆಲಸ ಮಾಡಿಕೊಟ್ಟಿದ್ದೆ. ಯಾವುದೂ ಲೆಕ್ಕಕ್ಕೆ ಬಾರದೇ ಹೋಯ್ತಲ್ಲ? ಸಂಸ್ಥೆ-ಉದ್ಯೋಗಿಯೆನ್ನುವ ಸಂಬಂಧದ ಋಣವನ್ನು ಬರಿಯ ಸಂಬಳದಲ್ಲೇ ತೀರಿಸಿಬಿಟ್ಟರಲ್ಲಾ? ತಾನೊಬ್ಬನೇ ಇದ್ದಾಗ ನಯವಾಗಿ ನಡೆಸಿಕೊಂಡು ಇನ್ನೊಬ್ಬನು ಬಂದಾಗ ತೊಲಗು ಎಂದುಬಿಟ್ಟರಲ್ಲಾ?


ಮತ್ತೆ ಅಲ್ಲಿ ನಿಲ್ಲಲು ಮನಸ್ಸಾಗದೆ ಆಚೆಬಂದ ರಾಜೀವ್ ರಾಜೇನಾಮೆಯ ಈಮೆಯ್ಲ್ ಟೈಪಿಸತೊಡಗಿದ. ಎಂತಹಾ ಹುಸಿ ಲೋಕವಿದು! ತನ್ನಂತಹಾ ಉದ್ಯೋಗಿಗಳು ಬೀದಿಗೆ ನೂರುಮಂದಿ ಸಿಗುತ್ತಾರೆ. ಸುಮ್ಮನೆ ಒಂದು ಜಾಹೀರಾತು ಕೊಟ್ಟರೆ ನುಗ್ಗಿಬಂದು ಸಾಲುಗಟ್ಟಿ ನಿಲ್ಲುತ್ತಾರೆ. ಇವರ ಪಾಲಿಗೆ ತಾನು ಬರಿಯ ಗುಮಾಸ್ತನೆಂಬ ಹುದ್ದೆಯೇ ಹೊರತು ರಾಜೀವನೆಂಬ ಸಜೀವ ವ್ಯಕ್ತಿಯಲ್ಲ.


ಸಂಜೆ ಭಾರದ ಹೆಜ್ಜೆಗಳನ್ನಿಡುತ್ತಾ ಕಂಪನಿಯ ಆವರಣದಿಂದ ಹೊರಬಂದ ರಾಜೀವ್ ಬಸ್ ಸ್ಟಾಪಿನತ್ತ ನಡೆಯತೊಡಗಿದ. ತಲೆ ಉರುಳಿಬಿದ್ದ ಹಕ್ಕಿಗೂಡಿನಂತಾಗಿತ್ತು. ನಾಳೆಯಿಂದ ಹೊಸತಾಗಿ ಕೆಲಸ ಹುಡುಕಲು ಆರಂಭಿಸಬೇಕು. ಅದಿನ್ನೆಷ್ಟು ಬೀದಿಗಳಲ್ಲಿ ಅಲೆದಾಟವೋ? ಅದಿನ್ನೆಷ್ಟು ಕೋಟು, ಟೈಗಳೆದುರಿಗಿನ ಬಿನ್ನಹವೋ? ಖಾತೆಯಲ್ಲೀಗ ಬರೀ ಮೊವ್ವತ್ತು ಸಾವಿರವಿದೆ. ಮತ್ತೊಂದು ಕೆಲಸ ಸಿಗುವ ತನಕ ಅಷ್ಟನ್ನೇ ಬಳಸಬೇಕು. 


ಏಳು ವರ್ಷಗಳ ಕಾಲ 'ಸೆಟಲ್ ಆಗುವುದು' ಎನ್ನುವ ಕಾಣದ ತೀರದತ್ತ ಹೊರಟ ಬದುಕು ಹೇಗೆ ಇದ್ದಕ್ಕಿದ್ದಂತೆ ಮತ್ತೆ ಅಲೆದಾಟ ಆರಂಭಿಸಿದ ಜಾಗಕ್ಕೇ ಬಂದು ನಿಂತುಬಿಟ್ಟಿತಲ್ಲಾ?


ಯೋಚನೆಗಳನ್ನು ಹರಿಯುವಂತೆ ಥಟ್ಟನೆ ಫೋನು ರಿಂಗಾಗತೊಡಗಿತು. ಆಚೆಕಡೆಯಿಂದ 'ಹಲೋ' ಎಂದ ಅಪ್ಪನ ಧ್ವನಿಗೆ 'ಹೇಳಿ' ಎಂದ.


"ಅದೂ.. ಬೋರ್ವೆಲ್ ನವ ಬಂದಿದ್ದ. ಅವನ ಬಾಕಿ ಐವತ್ತು ಸಾವಿರ ಕೊಡಬೇಕಂತೆ. ನಾಳೆ ಮೊವ್ವತ್ತು ಕೊಡಿ. ಇನ್ನು ಇಪ್ಪತ್ತು ಶನಿವಾರ ಕೊಡಿ ಅಂದ. ನನ್ನ ಹತ್ತಿರ ಬರೀ ಹತ್ತು ಸಾವಿರ ಇದೆ.."


ಸಾಕು ನಿಲ್ಲಿಸೀ ಎಂದು ಕಿರುಚಬೇಕೆನಿಸಿತು ರಾಜೀವನಿಗೆ. ಲೆಕ್ಕಕ್ಕೆ ಲೆಕ್ಕ ಜೋಡಿಸುವ ಗುಮಾಸ್ತನ ಕೆಲಸವನ್ನೇ ಬಿಟ್ಟು ಹೊರಬಿದ್ದಿದ್ದೇನೆ. ಆದರೂ ಈ ಸಾಲ, ವೆಚ್ಛಗಳ ಲೆಕ್ಕ ಮಾತ್ರ ತನ್ನನ್ನು ಬಿಡುತ್ತಿಲ್ಲವಲ್ಲಾ? ಮನೆ ತಲುಪಿದವನೇ ನೆಟ್ ಬ್ಯಾಂಕಿಂಗ್ ತೆರೆದು ಹದಿನೈದು ಸಾವಿರ ಅಪ್ಪನ ಖಾತೆಗೆ ವರ್ಗಾಯಿಸಿ ಸುಮ್ಮನೆ ಕುಳಿತುಕೊಂಡ‌. ಆಚೆ ಆಗಸ ಗುಡುಗು, ಮಿಂಚುಗಳ ಕಾರುತ್ತಾ ಜಡಿಮಳೆಯೊಂದಕ್ಕೆ ತಯಾರಾಗುತ್ತಿತ್ತು.


ಯಾಕೋ ಮಂಗಳಾ ಇನ್ನಿಲ್ಲದಂತೆ ನೆನಪಾಗತೊಡಗಿದಳು. ಅವಳೊಂದಿಗೆ ಎಲ್ಲವನ್ನೂ ಹೇಳಿಕೊಳ್ಳಬೇಕು. ಅವಳ ಸಾಂತ್ವನದ ನುಡಿಗಳ ಕೇಳಬೇಕು. 'ನಿಮ್ಮೊಂದಿಗೆ ನಾನಿದ್ದೇನೆ' ಎಂಬ ಅವಳ ಭರವಸೆಯ ಮಾತಿನಿಂದೊಷ್ಟು ನೆಮ್ಮದಿ ಪಡೆಯಬೇಕು. ಅವಳಿಗೆ ಕರೆ ಮಾಡಲೆಂದು ಮೊಬೈಲ್ ಆಚೆ ತೆಗೆದ‌.


ಥಟ್ಟನೆ ಅದು ರಿಂಗಣಿಸುತ್ತಾ, ಪರದೆಯ ಮೇಲೆ ಮಂಗಳಾಳ ಹೆಸರು ಮೂಡಿಬರತೊಡಗಿತು!


ಮಂಗಳಾ.. ತನ್ನದೇ ಭಾವನೆಗಳ ಪ್ರತಿರೂಪವಾಗಿರುವ ಮಂಗಳಾ.. ತಾನೆಂಬ ಶತಮೂರ್ಖನನ್ನು ಸಂತೈಸುವ ಏಕಮಾತ್ರ ಜೀವ..


ಉದ್ವೇಗವುಕ್ಕುವ ದನಿಯಲ್ಲಿ 'ಹಲೋ' ಎಂದ. ಅತ್ತಕಡೆಯಿಂದ ಭಾವವೀಣೆಯೇ ನುಡಿಯುತ್ತಿರುವಂತೆ ಹಿತವಾದ ಆ ದನಿ "ಹಲೋ, ಎಲ್ಲಿದ್ದೀರಾ?" ಎಂದಿತು. "ನಿಮ್ಮದೇ ನಿರೀಕ್ಷೆಯಲ್ಲಿ.." ಎನ್ನಬೇಕೆಂದುಕೊಂಡಿದ್ದವನು ಸಾವರಿಸಿಕೊಂಡು "ರೂಮಿನಲ್ಲಿ" ಎಂದ. 


"ನಿಮಗೊಂದು ವಿಷಯ ಹೇಳ್ಬೇಕು" 

ಹಾಗೆಂದವಳ ದನಿಯಲ್ಲಿ ನವಿರಾದ ನಾಚಿಕೆಯಿತ್ತು.


ಆಶ್ಚರ್ಯದಿಂದ "ಏನು?" ಎಂದ.


"ನನಗೆ ಸಂಬಂಧ ನಿಶ್ಚಯವಾಯ್ತು!"


ಗುಡುಗುತ್ತಿದ್ದ ಆಕಾಶ ಸ್ತಬ್ದವಾಯಿತು. ಹೊಯ್ದಾಡುತ್ತಿದ್ದ ಮರಗಳು ನಿಶ್ಚಲವಾದವು. ಬೀಸುತ್ತಿದ್ದ ಗಾಳಿಯೂ ಚಲನೆ ಮರೆತಂತೆ ನಿಂತುಹೋಯಿತು.


"ಏನು..?"


ತಾನು ಕೇಳಿಸಿಕೊಂಡಿದ್ದು ಸುಳ್ಳಾಗಿರಬಹುದೇನೋ ಎಂಬ ಕುಟುಕು ಆಸೆಯಲ್ಲಿ ಮತ್ತೆ ಕೇಳಿದ.


"ನನ್ನ ಅತ್ತೆಯ ಪರಿಚಯದ ಹುಡುಗ. ಜರ್ಮನಿಯಲ್ಲಿ ಇಂಜಿನಿಯರ್ ಆಗಿದಾರೆ. ಅದು ಮುಖ್ಯ ಅಲ್ಲ ಬಿಡಿ. ಇಂದು ನೋಡಲಿಕ್ಕೆ ಬಂದಿದ್ದರು. ಅವರೊಂದಿಗೆ ಮಾತನಾಡಿದ ನನಗೆ ಬಹಳ ನೇರ ಹಾಗೂ ಸ್ಪಷ್ಟ ಅನ್ನಿಸಿದರು. ಇನ್ನು ನಾಲ್ಕು ತಿಂಗಳಲ್ಲಿ ಮರಳಿ ಹೋಗ್ಬೇಕಂತೆ. ಹಾಗಾಗಿ ಎಲ್ಲ ಗಡಿಬಿಡಿಯಲ್ಲಿ ನಡೆದುಹೋಯ್ತು. ಮೊದಲೇ ಹೇಳೋಕಾಗಿಲ್ಲ. ಸಾರಿ.."


ಅವಳು ಹೇಳುತ್ತಲೇ ಹೋದಳು. ಸುಳಿಗಾಳಿ ಕಟ್ಟಿ ನಿಂತಿದ್ದ ದುಃಖದಂತೆ ವೇಗಾವಾಗಿ ನುಗ್ಗಿಬಂತು. ಮೇಜಿನ ಮೇಲಿದ್ದ, ಮನೆ-ತೋಟ-ಭವಿಷ್ಯ-ಮದುವೆಗಳೆಂಬ ನೂರಾರು ಆಸೆಗಳ ಲೆಕ್ಕವನ್ನು ಹೊತ್ತಿದ್ದ ಅವನ ಲೆಕ್ಕದ ಪುಸ್ತಕ ಫಟ್ಟೆಂಬ ಶಬ್ದದೊಂದಿಗೆ ಕೆಳಗಿದ್ದ ನೀರನ ಹೂಜಿಯ ಮೇಲೆ ಬಿದ್ದು ತೋಯ್ದು ಹೋಯ್ತು.


"ಯಾಕೆ ಮಾತಾಡ್ತಿಲ್ಲ? ಕೋಪಾನಾ? ಸಾರಿ ಹೇಳಿದ್ನಲ್ಲಾ? ಇನ್ನಿರೋದು ಬರೀ ನಾಲ್ಕೇ ತಿಂಗಳು ರೀ. ಈಗ್ಲೂ ಹೀಗೆ ಮೌನವಾಗಿದ್ರೆ ಹೇಗೆ? ಈ ವಿಷಯಾನ ಇನ್ನೂ ಯಾರಿಗೂ ಹೇಳಿಲ್ಲ ಗೊತ್ತಾ? ನನಗೀಗ ಅತ್ಯಂತ ಆತ್ಮೀಯರೆಂದರೆ ನೀವೊಬ್ಬರೇ. ಅದಕ್ಕೇ ಮೊದಲು ನಿಮಗೇ ಕಾಲ್ ಮಾಡ್ತಿದೀನಿ.."


ಮುಚ್ಚಿದ ಬಾಗಿಲಿನಾಚೆ ಕತ್ತಲಲ್ಲಿ ಸುರಿಯುತ್ತಿದ್ದ ಅಗೋಚರ ಮಳೆಯ ಸದ್ದು ತಾರಕಕ್ಕೇರಿತು. ಅವಳು ಮಾತು ಮುಂದುವರೆಸಿದಳು.


"ಅಂದ್ಕೊಂಡೆ ನಿಮಗೆ ಸರ್ಪೈಸ್ ಆಗತ್ತೆ ಅಂತ. ಹೋಗ್ಲಿ ಬಿಡಿ. ಹೇ.. ಅಂದಹಾಗೇ ಮೊನ್ನೆ 'ನನಗೆ ನೀವು ಯಾರು' ಅಂತ ಹೇಳ್ತೀನಿ ಅಂದಿದ್ರಲ್ಲಾ? ಮುಂದೆ ಕೇಳಲಿಕ್ಕೆ ಆಗುತ್ತದೋ ಇಲ್ವೋ. ಪ್ಲೀಸ್ ಈಗಲೇ ಹೇಳ್ರೀ.‌. ಯಾರು ನೀವು ನನಗೆ?"


"ನಾನು.. ನಾನು‌‌‌.."


ಭಾವಲೋಕದ ಅತಿಸೂಕ್ಷ್ಮ ತಂತಿಯೊಂದು ತುಂಡಾಗುತ್ತಿರುವ ಸದ್ದಿನಂತೆ ಅವನು ನುಡಿದ:


"ನಾನು ಗುಮಾಸ್ತ"



ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...