ಮಳೆ.. ಎಲ್ಲೆಲ್ಲಿ ನೋಡಿದರೂ ನೀರೋ ನೀರು. ಮನೆಯೆದುರಿನ ಅಂಗಳ ಸಣ್ಣ ಹರಿವಿರುವ ಕೊಳದಂತಾಗಿಬಿಟ್ಟಿತ್ತು. ಕೆಂಪು-ಹಳದಿ ನೆಲದ ಸಂಗದಿಂದ ಮಳೆ ನೀರೂ ಸಹಾ ಕೆಂಪು ಮಿಶ್ರಿತ ಹಳದಿಯಾಗಿ ಕಾಣುತ್ತಿತ್ತು. ಅಂಗಳದ ಮಧ್ಯೆಮಧ್ಯೆ ನೀರಿನಿಂದಾಚೆ ತಲೆಹಾಕಿ ನಿಂತಿರುವ ಹುಲ್ಲುಗಳು ಆಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾದ ಕಾಡಿನಂತೆ ಗೋಚರಿಸುತ್ತಿದ್ದವು. ಎದುರುಗಡೆ ಗುಡ್ಡವನ್ನೆಲ್ಲ ಬಳಿದುಕೊಂಡು ಬಂದ ನೀರು ಸಣ್ಣದೊಂದು ಕಾಲುವೆಯ ಮೂಲಕ ಇಪ್ಪತ್ತಡಿ ಆಳದ ಕಣಿಗೆ ಧುಮುಕುತ್ತಾ ಚಿಕ್ಕ ಜಲಪಾತವೊಂದು ರಚನೆಯಾಗಿತ್ತು. ಸುರಿದ ಮಳೆಗೆ ಮತ್ತಷ್ಟು ಹಸಿರಾದ ಗುಡ್ಡದ ಮರಗಳು 'ಬರ್ಸೋರೇ ಮೇಘಾ ಮೇಘಾ..' ಎಂದು ಒಳಗೊಳಗೇ ಹಾಡಿಕೊಳ್ಳುತ್ತಿರುವಂತೆ ತಲೆಯಾಡಿಸುತ್ತಾ ನಿಂತಿದ್ದವು. ಹಿತ್ತಲಿನ ಯಾವ್ಯಾವುದೋ ಮೂಲೆಗಳಿಂದ ಸಣ್ಣ ಸಾಲುಗಳಂತೆ ಹರಿದುಬಂದ ನೀರೆಲ್ಲಾ ಅಂಗಳದಲ್ಲಿ ಗುಂಪುಗೂಡಿ ತಗ್ಗಿನತ್ತ ಹರಿದುಹೋಗುತ್ತಿತ್ತು. ಹಂಚುಮಾಡಿನಿಂದ ಟಪಟಪ ಉದುರುತ್ತಿರುವ ಹನಿಗಳು ನಿಂತ ನೀರಿನಲ್ಲಿ ಅಲೆಯ ಬಳೆಗಳನ್ನು ಮೂಡಿಸುತ್ತಿದ್ದವು.
ಶೀಟು ಹೊದಿಸಿದ ಛಾವಣಿಯ ಕೆಳಗಿನ ಕುರ್ಚಿಯಲ್ಲಿ ಪ್ರತಿಮೆಯಂತೆ ಕುಳಿತು ಪ್ರಕೃತಿಯ ಅಂಗಳದಲ್ಲಿ ಹಬ್ಬದಂತೆ ಜರುಗುತ್ತಿದ್ದ ಈ ಎಲ್ಲ ಚಟುವಟಿಕೆಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ಶಿಶಿರ ಭಾರವಾದ ನಿಟ್ಟುಸಿರಿನೊಂದಿಗೆ ಮೇಲೆದ್ದ.
ಅವನಿಗೆ ಮಲೆನಾಡು ಹೊಸತಲ್ಲ. ಮಳೆಯೂ ಹೊಸತಲ್ಲ. ಆದರೆ ಮಲೆನಾಡಿಗನಾಗಿಯೂ ಪಟ್ಟಣದವನಂತೆ ಮಳೆಯನ್ನು ಪ್ರೀತಿಯಿಂದ ನೋಡುತ್ತಿರುವ ಈ ಪರಿಯಿದೆಯಲ್ಲಾ, ಅದು ಮಾತ್ರ ಹೊಸತು. ಇಪ್ಪತ್ತೊಂದು ವರ್ಷಗಳಿಂದ ಹೀಗೇ ಧೋ ಎಂದು ಶಬ್ದ ಮಾಡುತ್ತಾ, ಮರ-ಮನೆ-ಅಂಗಳಗಳನ್ನು ತೋಯಿಸುತ್ತಾ ಸುರಿಯುತ್ತಿದ್ದ ಅದೇ ರಗಳೆ ಮಳೆ ಕಳೆದ ಏಳು ವರ್ಷಗಳಲ್ಲಿ ಹಠಾತ್ತನೆ ನವಿರಾದ ವರ್ಷಧಾರೆಯಾಗಿ ಬದಲಾದ ಬಗೆಗೆ ಅವನಲ್ಲೂ ಅಚ್ಚರಿಯಿದೆ. ಇದೇ ಮಳೆ ಅಲ್ಲಿ, ಬೆಂಗಳೂರೆಂಬ ಧಡಿಯ ಪಟ್ಟಣದಲ್ಲಿ ಮೋರಿಗಳನ್ನು ಉಕ್ಕಿಸುತ್ತಾ, ರಸ್ತೆಗಳ ಮೇಲೆ ಹರಿಯುತ್ತಾ, ಟ್ರಾಫಿಕ್ ಜ್ಯಾಮಾಗಿಸುತ್ತಾ ಸುರಿಯುವಾಗ ಅವನಿಗೆ ಖೇದವಾಗುತ್ತದೆ. ಕೆಲಸ ಸಿಕ್ಕಿದ ಮೊದಲ ವರುಷ ಹಳ್ಳಿಗೆ ಬಂದು ಹಿಂತಿರುಗಿದವನು ಅದೇ ಗುಂಗಿನಲ್ಲಿ ಬೆಂಗಳೂರಿನ ಮಳೆಗೆ ಮೈಕೊಟ್ಟು ಶೀತ-ಜ್ವರಗಳಿಗೊಳಗಾಗಿ ವಾರಗಟ್ಟಲೆ ಪಾಡುಪಟ್ಟಾಗಿನಿಂದ ಬೆಂಗಳೂರಿನ ಮೇಲೆ, ಅಲ್ಲಿಯ ಮಳೆಯ ಮೇಲೆ ತಾತ್ಸಾರವೊಂದು ಹುಟ್ಟಿಕೊಂಡಿತ್ತು. ಈಗ ಈ ಊರಿನ ಮಳೆ ಬಿಡಿಸುತ್ತಿರುವ ಚಂದದ ಚಿತ್ರಗಳನ್ನು ಕಣ್ತುಂಬಿಕೊಳ್ಳುವಾಗ ಆ ತಾತ್ಸಾರ ಮತ್ತಷ್ಟು ಬೆಳೆಯತೊಡಗಿತ್ತು.
"ಸುರೇಶನ ಅಂಗಡಿಗೆ ಹೋಗ್ತೀನಿ ಅಂದ್ಯಲ್ಲಾ, ಹೋಗೋದಿಲ್ವಾ?"
ಒಳಗಿನಿಂದ ತೇಲಿಬಂದ ಅಮ್ಮನ ಮಾತು ಶಿಶಿರನನ್ನು ಯೋಚನೆಗಳ ಪ್ರಪಂಚದಿಂದ ಹೊರತಂದಿತು. ಹೌದು.. ಗೆಳೆಯ ಸೂರಿಯ ಅಂಗಡಿಗೆ ಹೋಗಲಿಕ್ಕಿದೆ. ಸಾಮಾನು ಕೊಳ್ಳಲಿಕ್ಕಲ್ಲ, ಆತ್ಮವಿಶ್ವಾಸವನ್ನು ಖರೀದಿಸಲಿಕ್ಕೆ! ಎರೆಡು ವರ್ಷದ ಹಿಂದೆ 'ಪಟ್ಟಣವೊಂದೇ ಬದುಕಿನ ದಾರಿ' ಎಂಬ ಅಘೋಷಿತ ನಿಯಮವನ್ನು ಮೀರಿ ಬೆಂಗಳೂರಿನಿಂದ ಊರಿಗೆ ಮರಳಿ ಬಂದವನು ಸೂರಿ. ಐದಾರು ತಿಂಗಳ ಕಾಲ ಸಂಪಾದನೆಯಿಲ್ಲದೆ ಅಲೆದಾಡಿದ್ದನಾದರೂ ಕೊನೆಗೆ ಯಾವುದೋ ಗ್ರಾಮಾಭಿವೃದ್ಧಿ ಯೋಜನೆಯಡಿ ಸಾಲ ಪಡೆದುಕೊಂಡು ಪಕ್ಕದೂರಿನಲ್ಲಿ ಅಂಗಡಿಯೊಂದನ್ನು ತೆರೆದಿದ್ದ. ಮೊದಮೊದಲು ಒಂದು ಸಾವಿರ ಇದ್ರೆ ಕೊಡು, ಎರೆಡು ಸಾವಿರ ಇದ್ರೆ ಕೊಡು ಎಂದು ಆಗಾಗ ಕರೆಮಾಡುತ್ತಿದ್ದನಾದರೂ ಈ ನಡುವೆ ತನ್ನ ಮೊಬೈಲ್ ಬದಲಾದಾಗಿನಿಂದ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವನಾಗಿಯೂ ಸಂಪರ್ಕಿಸುವ ಪ್ರಯತ್ನ ಮಾಡಿರಲಿಲ್ಲ. ಬಹುಷಃ ಕಷ್ಟಗಳು ಕಳೆದವೋ ಏನೋ? ಪ್ರಾರಂಭದಲ್ಲಿ ಹೊಯ್ದಾಡಿದ್ದ ವ್ಯಾಪಾರ ಬಹುಷಃ ಈಗ ಕೈಹಿಡಿದಿರಬಹುದು. ಸಾಲ, ಪರದಾಟಗಳ ಸದ್ದಿಲ್ಲದೇ ಶಾಂತವಾಗಿ ಬದುಕುತ್ತಿದ್ದಾನೆಂದು ಕಾಣುತ್ತದೆ. ಪಟ್ಟಣದಾಚೆಗೂ ಬದುಕು ಕಂಡುಕೊಂಡ ಅವನ ಯಶೋಗಾಥೆಯನ್ನೊಮ್ಮೆ ಕಣ್ಣಾರೆ ನೋಡಲಿಕ್ಕೆಂದು, ಆ ಮೂಲಕ ತನ್ನ ಮನದಲ್ಲಿ ಅಸ್ಪಷ್ಟವಾಗಿ ಉರಿಯುತ್ತಿರುವ ಆಸೆಗಳಿಗೊಂದಷ್ಟು ಉರುವಲು ಸಂಪಾದಿಸಲೆಂದು ಅವನೀಗ ಹೊರಟುನಿಂತಿದ್ದ.
ಮಳೆಯ ತಾಂಡವವಿನ್ನೂ ಕಡಿಮೆಯಾಗಿರಲಿಲ್ಲ. ಪರ್ಸನ್ನು ಜೇಬಿಗೆ ತುರುಕಿಕೊಂಡು, ಛತ್ರಿ ಬಿಡಿಸುತ್ತಾ ಅಂಗಳದ ನೀರಿಗಡಿಯಿಟ್ಟನು ಶಿಶಿರ್. ಪಚ್ ಪಚ್ಚೆನ್ನುತ್ತಾ ಸೊಂಟದ ತನಕ ಸಿಡಿಯುತ್ತಿದ್ದ ನೀರಿನಲ್ಲಿ ಬೇಕಂತಲೇ ದಪ್ಪ ದಪ್ಪ ಹೆಜ್ಜೆಗಳನ್ನಿಡುತ್ತಾ ಮುನ್ನಡೆದವನಿಗೆ ಉಣಗೋಲಿನಾಚೆ ನಾಲ್ಕು ತಿಂಗಳ ಕೆಳಗೆ ಕಟ್ಟಿ ಬಿಟ್ಟಿದ್ದ ಹೊಸಮನೆಯ ಪಾಯ ಎದುರಾಯಿತು. ಹೊಸಮನೆ! ತನ್ನ ಜೀವಮಾನದ ಸಾಧನೆ! ಏಳು ವರ್ಷಗಳ ಉದ್ಯೋಗ ಜೀವಿನದುದ್ದಕ್ಕೂ ಲಾಗ ಹಾಕಿ, ಪಲ್ಟಿ ಹೊಡೆದು ಉಳಿಸಿದ್ದ ಹಣದ ಮುಕ್ಕಾಲು ಭಾಗವನ್ನು ಸುರಿದ ಮೇಲೆ ಅಂತೂ ಇಂತೂ ಪಾಯವೊಂದು ಪೂರ್ಣವಾಗಿತ್ತು. ಇನ್ನು ಉಳಿದಿರುವ ಹಣದಿಂದ ಹಿಡಿದು ಜೇಬಿನಲ್ಲಿರುವ ಕಟ್ಟಕಡೆಯ ರೂಪಾಯಿಯ ತನಕ ಎಲ್ಲವನ್ನೂ ಸೇರಿಸಿದರೆ ಗೋಡೆಗಳನ್ನು ಕಟ್ಟಿನಿಲ್ಲಿಸಬಹುದೆಂಬ ಅಮೋಘವಾದ ಲೆಕ್ಕವನ್ನು ರಾಮಯ್ಯ ಮೇಸ್ತ್ರಿ ಕೂಡಿ, ಕಳೆದು, ಗುಣಿಸಿ, ಭಾಗಿಸಿ ಹೇಳಿದ್ದ.
"ಕನಿಷ್ಠ ಏಳೂವರೆಯಿಂದ ಎಂಟು ಲಕ್ಷ ಸಾಲ ಮಾಡ್ಬೇಕಾತ್ ಕಾಣಿ. ತಿಂಗ್ಳಿಗೆ ಹತ್ ಸಾವ್ರ ಕಟ್ರೂ ತೀರ್ಸೂಕೆ ಹತ್ತು ವರ್ಷ ಬೇಕಾತ್ ನಿಮ್ಗೆ..."
ಶಿಶಿರ್ ಅರೆಕ್ಷಣ ಆಕಾಶದತ್ತ ನೋಡಿ ಕಣ್ಮುಚ್ಚಿಕೊಂಡಿದ್ದ. ಎಂಟು ಲಕ್ಷ ಅವನಿಗೆ ದೊಡ್ಡ ಮೊತ್ತವಾಗಿ ಕಂಡಿರಲಿಲ್ಲ. ಅದನ್ನು ತೀರಿಸಲು ಬೇಕಾಗಿದ್ದ ಹತ್ತು ವರ್ಷವೂ ದೊಡ್ಡ ಅವಧಿಯೆನ್ನಿಸಿರಲಿಲ್ಲ. ಆದರೆ ಅದಕ್ಕೋಸ್ಕರ ಬೆಂಗಳೂರಿನ ಕಂಪನಿಗಳಲ್ಲಿ ಜೀತ ಮಾಡುತ್ತಾ, ಬಿಪಿ, ಶುಗರ್, ಬೊಜ್ಜುಗಳನ್ನು ಬೆಳೆಸಿಕೊಳ್ಳುತ್ತಾ ಕಳೆದುಕೊಳ್ಳಬೇಕಾದ ಅಮೂಲ್ಯ ಹತ್ತು ವರ್ಷಗಳಿದ್ದಾವಲ್ಲಾ? ಅದೇ ಅವನನ್ನು ಚಿಂತೆಗೀಡುಮಾಡಿದ್ದು. ಹೀಗೆ ಚಿಕ್ಕ ಚಿಕ್ಕ ಲೆಕ್ಕಾಚಾರಗಳೂ ದೊಡ್ಡ ದೊಡ್ಡ ಋಣಸಂದಾಯಗಳಾಗಿ ಮಧ್ಯಮ ವರ್ಗದವರ ಇಡೀ ಬದುಕನ್ನೇ ನುಂಗಿಹಾಕುವುದೆನ್ನುವ ಸತ್ಯ ಆಗಷ್ಟೇ ಅವನಿಗೆ ಅರಿವಾಗಿತ್ತು.
ಯೋಚನೆಗಳಲ್ಲಿ ಮುಳುಗಿ ನಡೆದವನ ಕಣ್ಣಿಗೆ ಅಲ್ಲೇ ಪಕ್ಕದ ತಗ್ಗಿನಲ್ಲಿ ಗಾಳಿಯ ಭಯಕ್ಕೆ ಪತರುಗುಟ್ಟುವಂತೆ ಹೊಯ್ದಾಡುತ್ತಾ ನಿಂತಿದ್ದ ಅಡಿಕೆ ತೋಟ ಕಂಡಿತು. ಪ್ರತೀ ಬಾರಿ ಗಾಳಿ ಬೀಸಿದಾಗಲೂ ಅಡಿಕೆ ಮರಗಳು ಒಂದಕ್ಕೊಂದು ಜಪ್ಪಿಕೊಂಡು ಕಾಯಿಗಳು ಮರದಿಂದುದುರಿ ಹೆಡಿಲನ ಗರಿಗಳ ಮೇಲೆ ಬೀಳುತ್ತಿದ್ದ ಪಟಪಟ ಸದ್ದು ಕರ್ಕಶವಾಗಿ ಕೇಳುತ್ತಿತ್ತು. ಅಲ್ಲಿ ಕೊಡೆ ಹಿಡಿದು ಮಳೆ ಮಾಡುತ್ತಿರುವ ಅವಾಂತರಗಳನ್ನು ಪರೀಕ್ಷಿಸುತ್ತಾ ನಿಂತಿದ್ದ ಅಪ್ಪ ಹಾಗೂ ಕೊನೆಗಾರ ಮಾದು ಆಡುತ್ತಿದ್ದ ಮಾತುಗಳು ಸ್ಪಷ್ಟವಾಗಿಯೇ ಅವನ ಕಿವಿ ತಲುಪಿದವು.
"ಕೊನೆಗೂ ಕೊಳೆರೋಗ ಬಂದೇ ಬಿಡ್ತಲ್ಲ ರಾಗಯ್ಯ?"
ಮಾದುವಿನ ಮಾತು ಬಾಯೊಳಗೆ ತುಂಬಿಕೊಂಡಿರುವ ಕವಳದ ನಡುವೆ ಕಷ್ಟದಿಂದ ಹಾದು ಹೊರಬಂತು.
"ಹೌದ್ ಮಾರಾಯಾ. ನಾಲ್ಕ್ ಸಲ ಔಸ್ತಿ ಹೊಡೆಸಿದ್ರೂ ಬಂದೇ ಬಿಡ್ತು ಧರಿದ್ರದ ಕೊಳೆ. ಈ ಬಾರಿ ಹೋದ್ಸಲದ ಕಾಲು ಭಾಗ ಬೆಳೆಯೂ ಬರೋದಿಲ್ವಾಂತ..."
ಕೊಳೆತು ಉದುರಿದ ಅಡಿಕೆಯೊಂದನ್ನು ಶವದಂತೆ ಎತ್ತಿಕೊಂಡು ಕೈಯಲ್ಲಿ ಹಿಡಿದಿದ್ದ ಅಪ್ಪ ಭಾರವಾದ ದನಿಯಲ್ಲಿ ಹಾಗಂತ ಹೇಳಿದ.
"ಹ್ವಾದ್ರೆ ಹ್ವಾಗ್ಲಿ.. ತಲೆ ಕೆಡ್ಸ್ಕಬೇಡಿ ಹ್ವಾಯ್. ಹೆಂಗಿದ್ರೂ ಮಗ ಬೆಂಗ್ಳೂರಂಗಿದ್ನಲೆ. ಎಷ್ಟ್ ಮಳಿ ಹೊಯ್ದ್ರೂ ಸಾಫ್ಟ್ ವೇರ್ ಕಂಪ್ನೀಗೆ ಕೊಳಿರೋಗ ಬತ್ತಿಲ್ಲೆ ಬಿಡಿ.."
ಹಲ್ಕಿರಿಯುತ್ತಾ ನುಡಿದ ಮಾದುವಿನ ಕೆಂಪು ಹಲ್ಲುಗಳಿಗಿಂತಲೂ ಅವನ ಮಾತುಗಳೇ ಹೆಚ್ಚು ಸಹಿಸಲಸಾಧ್ಯವೆನಿಸಿತು ಶಿಶಿರನಿಗೆ. ಆ ಮಾತುಗಳಿಂದಲೋ, ಅಲ್ಲಿ ಆ ಕ್ಷಣಕ್ಕೆ ಉತ್ಪತ್ತಿಯಾದ ನಿರೀಕ್ಷೆಯ ಹೊರೆಯಿಂದಲೋ ಪಾರಾಗುವುದಕ್ಕೇನೋ ಎಂಬಂತೆ ಬಿರಬಿರನೆ ಬಸ್ ನಿಲ್ದಾಣದತ್ತ ಹೆಜ್ಜೆಹಾಕತೊಡಗಿದ.
**************
"ಓಹೋಹೋ... ಏನು ಶಿಶಿರಣ್ಣೋರ್ ಸವಾರಿ ಎಲ್ಲಿಗೋ ಹೊಂಟಂಗಿದೆ?"
ಗಾಳಿ, ಮಳೆಗಳೊಂದಿಗೆ ಸೆಣೆಸುತ್ತಾ ಛತ್ರಿಯನ್ನು ಒಮ್ಮೆ ಅತ್ತ, ಇಮ್ಮೆ ಇತ್ತ ಹಿಡಿಯುತ್ತಾ ನಡೆಯುತ್ತಿದ್ದ ಶಿಶಿರನನ್ನು ನೋಡಿದ ಅಂಗಡಿಯ ಸೋಮಣ್ಣ ಗಟ್ಟಿಯಾಗಿ ಕೇಳಿದ.
"ಏನಿಲ್ಲ ಸೋಮಣ್ಣ.. ಇಲ್ಲೇ ನೊಣಬೂರಿಗೆ ಹೊರಟಿದ್ದೆ. ಮತ್ತೆ ಅರಾಮಾ..?" ಎನ್ನುತ್ತಾ ಶಿಶಿರ ಅವನ ಅಂಗಡಿಯ ಸೂರನ್ನು ಹೊಕ್ಕ. ಚಿಕ್ಕಂದಿನಿಂದಲೂ ನೋಡುತ್ತಾ ಬಂದಿರುವ, ತೊಂಭತ್ತರ ದಶಕದ ಬಣ್ಣವಿನ್ನೂ ಮಾಸದ ಅಂಗಡಿಯದು. ಹೆಚ್ಚೆಂದರೆ ಎರೆಡು ಮೂರು ಬಾರಿ ಬಣ್ಣ ಹೊಡೆದಿದ್ದನ್ನು ಬಿಟ್ಟರೆ ಹೆಚ್ಚೇನೂ ಬದಲಾಗದೆ, ತನ್ನ ಬಾಲ್ಯದ ಜೀವಂತ ಸ್ಮಾರಕದಂತೆ ಕಾಣುವ ಆ ಅಂಗಡಿಯನ್ನು ಕಂಡರೆ ಶಿಶಿರನಿಗೆ ಅದೇನೋ ಒಂಥರಾ ಪ್ರೀತಿ. ಶೀಟಿನ ತಗಡುಗಳನ್ನಿಟ್ಟು ಕಟ್ಟಿದ ಮಾಡಿನ ಕೆಳಗಿನ ಮರದ ಬೆಂಚಿನ ಮೇಲೆ ಕುಳಿತುಕೊಂಡು ಎದುರುಗಡೆಯಿರುವ ರಸ್ತೆಯನ್ನು ನೋಡುತ್ತಾ ಸೋಮಣ್ಣ ಮಾಡಿ ಕೊಡುವ ಬಿಸಿಬಿಸಿ ನೀರುಳ್ಳಿ ಬಜೆಯನ್ನು ಕಚ್ಚುವುದು ಅವನು ಜೀವನದಲ್ಲಿ ಅತೀ ಖುಷಿಯಿಂದ ಮಾಡುವ ಕೆಲವೇ ಕೆಲವು ಚಟುವಟಿಕೆಗಳಲ್ಲೊಂದು. ಅಂಗಡಿಯ ಗೋಡೆಯ ಮೇಲೆ ಮಾಲೆಮಾಲೆಯಾಗಿ ನೇತಾಡುತ್ತಿರುವ ಚಿಲ್ಲರೆ ತಿಂಡಿಗಳ ಪೈಕಿ ತನ್ನ ಬಾಲ್ಯಕ್ಕೆ ಸಂಬಂಧಿಸಿದ್ದು ಯಾವುದಾದರೂ ಇದೆಯೇನೋ ಎಂದು ಹುಡುಕುತ್ತಲೇ ಮರದ ಬೆಂಚಿನ ಮೇಲೆ ಕೂತು "ಒಂದು ಬಿಸಿಬಿಸಿ ಚಾ" ಎಂದು ಆರ್ಡರ್ ಮಾಡಿದ.
ಕಂಬಳಿ ಕೊಪ್ಪೆ ಹೊದ್ದ ಕೆಲಸದಾಳುಗಳ ಸಾಲು ಎದುರುಗಡೆ ರಸ್ತೆಯಲ್ಲಿ ಮುದುರಿಕೊಂಡು ನಡೆಯುತ್ತಿತ್ತು. ಅವರನ್ನು ತೋಯಿಸುವ ಹಠದಲ್ಲಿ ಟಪಟಪನೆ ಬೀಳುತ್ತಿದ್ದ ಮಳೆಯ ಹನಿಗಳು ಆ ಕಂಬಳಿ ಕೊಪ್ಪೆಯ ಕರಡಿ ಚರ್ಮದಂತಹಾ ಕಪ್ಪು ಚುಂಗುಗಳೊಳಗೆ ನುಸುಳಿ ಅದೃಶ್ಯವಾಗುತ್ತಿದ್ದವು. ರಸ್ತೆ ಬದಿಯ ತೋಡಿನಲ್ಲಿನ ನೀರು ಝಳ್ಳೆಂಬ ಕೂಗು ಹೊರಡಿಸುತ್ತಾ ಉತ್ಸಾಹದಲ್ಲಿ ಓಡುತ್ತಿತ್ತು.
"ಓಯ್ ರಮೇಶಾ... ಕಡೀಗೆ ದನ ವಾಪಾಸ್ ಬಂತನೋ ನೆನ್ನೆ?"
ಬುರುಬುರು ನೊರೆ ಲೋಟದ ತುತ್ತತುದಿಯನ್ನು ತಲುಪುವಂತೆ ಇಷ್ಟೆತ್ತರದಿಂದ ಚಹಾವನ್ನು ಸುರಿಯುತ್ತಲೇ ಸೋಮಣ್ಣ ಕೂಗಿ ಕೇಳಿದ ಪ್ರೆಶ್ನೆಗೆ ಕೆಳಗಡೆ ರಸ್ತೆಯಲ್ಲಿ ನಡೆಯುತ್ತಿದ್ದ ಆಳುಗಳ ಸಾಲಿನ ನಡುವಿನಿಂದ ಕಂಬಳಿ ಕೊಪ್ಪೆಯೊಂದು ತಲೆಯೆತ್ತಿ "ಹೋ ಬಂತು" ಎಂದಿತು. ಅದರ ಜೊತೆಗೇ ಮತ್ತೊಂದಿಷ್ಟು ಮುಖಗಳು ಇತ್ತ ಅಂಗಡಿಯತ್ತ ನೋಡಿ ಎಲೆ ಅಡಿಕೆಯಿಂದ ಕೆಂಪಾದ ಹಲ್ಲುಗಳನ್ನು ಕಿರಿದು ಮತ್ತೆ ಕೊಪ್ಪೆಯೊಳಗೆ ಸೇರಿಕೊಂಡವು.
"ಮಜ್ಗೇಹೊಳೆಲಿ ನೆನ್ನೆ ಯಾವ್ದೋ ದನ ತೇಲ್ಕೊಂಡು ಹೋಗ್ತಿತ್ತಂತೆ. ನಮ್ ಸೀನ, ಪದ್ದು ಹಿಡ್ಯೋಕೆ ನೋಡಿದ್ರೂ ಆಗ್ಲೀಲ್ವಂತೆ. ಇವ್ನ್ ಬೇರೆ ದನ ಮನೇಗ್ ಬಂದಿಲ್ಲಾಂತಿದ್ದ.."
ಚಾದ ಲೋಟ ಶಿಶಿರನ ಕೈಗಿಡುತ್ತಾ ನುಡಿದ ಸೋಮಣ್ಣ. ಮಳೆಯ ಛಳಿಯೊಂದಿಗೆ ಸೆಣೆಸುವಂತೆ ಬಿಸಿಬಿಸಿ ಹಬೆಯನ್ನು ಸೂಸುತ್ತಿದ್ದ ಚಾವನ್ನು ತುಟಿಗಿಟ್ಟುಕೊಂಡ ಶಿಶಿರನಿಗೆ ಇದೆಲ್ಲ ಒಂದು ಸುಂದರ ಚಲನಚಿತ್ರದಂತೆ, ತಾನೂ ಈ ಕ್ಷಣಕ್ಕೆ ಈ ಚಲನಚಿತ್ರದ ಭಾಗವಾಗಿರುವಂತೆ ಭಾಸವಾಗತೊಡಗಿತು. ಈ ಅಂಗಡಿಯ ಕಟ್ಟೆ, ಇಲ್ಲಿಂದ ಕಾಣುವ ಹಳ್ಳಿಯ ಚಿತ್ರ, ಈ ಮಳೆ, ಕೆಲಸದಾಳುಗಳು, ತನಗೊಂದು ಹನಿ ಹಾಲನ್ನೂ ಕೊಡದ ಯಾರದೋ ಮನೆಯ ದನದ ಮೇಲೆ ಇನ್ಯಾರಿಗೋ ಇರುವ ಕಾಳಜಿ, ವ್ಯವಹಾರವನ್ನು ಮೀರಿದ ಬಂಧವೊಂದರಲ್ಲಿ ಒಬ್ಬರಿಗೊಬ್ಬರು ಬೆಸೆದುಕೊಂಡಿರುವ ಇಲ್ಲಿನ ಸಂಸ್ಕೃತಿ…
ಆ ಪಟ್ಟಣದಲ್ಲೇಕೆ ಇವೆಲ್ಲಾ ಇಲ್ಲ?
ಹೀಗೆಲ್ಲ ಯೋಚಿಸುತ್ತಿರುವಂತೆಯೇ ಶಿಶಿರನ ಕಣ್ಣು ರಸ್ತೆಯ ಆಚೆ ದಿಬ್ಬದಲ್ಲಿರುವ ಮನೆಯತ್ತ ಹೋಯಿತು. ಅಲ್ಲಿ ಪಾರದರ್ಶಕ ರೈನ್ ಕೋಟ್ ತೊಟ್ಟ ಅಪರಿಚಿತ ಆಕೃತಿಯೊಂದು ಕೈಯಲ್ಲೊಂದು ಗುದ್ದಲಿ ಹಿಡಿದು ಅಂಗಳದಲ್ಲೆಂತದೋ ಕೆಲಸದಲ್ಲಿ ತೊಡಗಿತ್ತು.
"ಅದ್ಯಾರದು ಸೋಮಣ್ಣ? ತೋಡು ಬಿಡಿಸ್ತಿರೋದು?"
ಶಿಶಿರ ಕೇಳಿದ. ಅತ್ತ ಹಣಕಿ ನೋಡಿದ ಸೋಮಣ್ಣನ ಮುಖದ ತುಂಬಾ ಅಚಾನಕ್ಕಾಗಿ ತಾತ್ಸಾರ ತುಂಬಿಕೊಂಡಿತು.
"ಓ ಅದಾ.. ನಮ್ ಸುಬ್ಬಣ್ಣಯ್ಯನೋರ ಮಗ ರಮೇಶ. ನೀವೆಲ್ಲ ದೊಡ್ಡವ್ರಾಗೋದ್ರೊಳ್ಗೇ ಓದು ಮಗ್ಸಿ ಬೆಂಗ್ಳೂರ್ ಸೇರ್ಕಂಡೋರ್ ಅವ್ರು. ಒಂಥರಾ ವಿಚಿತ್ರ ಜನ. ಹತ್-ಹದಿನೈದ್ ವರ್ಷದಿಂದ ಯಾವ್ದೋ ಕಂಪ್ನೀಲಿ ಕೆಲ್ಸಕ್ಕಿದ್ರು. ನಲವತೈವತ್ ಸಾವ್ರ ಸಂಬ್ಳ ಬರ್ತಿತ್ತು. ಸುಮ್ನೆ ಮಾಡ್ಕಂಡ್ ಹೋಗೋದ್ ಬಿಟ್ಟು ಟೈಮಿಲ್ಲ, ನೆಮ್ಮದಿ ಇಲ್ಲ, ಊರಲ್ಲಿ ಜಮೀನ್ ಮಾಡ್ತೀನಿ ಅಂತ ಕೆಲ್ಸ ಬಿಟ್ಟು ಊರಿಗೆ ಬಂದ್ರು. ಇರೋ ಶಪ್ಪಡ್ಕಿನ್ ಜಾಗದಲ್ಲಿ ಹಿಂಗೇ ಗುದ್ಲಿ, ಪಿಕಾಸಿ ಹಿಡ್ಕಂಡು ಒಂದಿಷ್ಟು ದಿನ ಗುದ್ದಾಡಿದ್ರು. ಅಲ್ಲಿ ಸಿಟೀಲಿ ಸಾವ್ರಸಾವ್ರ ಕಂಡ ಜೀವ್ನಕ್ಕೆ ಇಲ್ಲಿ ಸಿಗೋ ಚಿಲ್ರೆ ಹಣ ಹೆಂಗ್ ಸಾಕಾದೀತು? ಒಂದಷ್ಟ್ ದಿನ ಒದ್ದಾಡಿ ಕೊನೆಗೆ ಮತ್ತೆ ಬೆಂಗ್ಳೂರಿಗೇ ಹೋದ್ರು. ಇನ್ನೂ ಕೆಲ್ಸ ಸಿಗ್ದೇ ಎಲ್ಲೆಲ್ಲೋ ಅಲೀತಿದಾರಂತೆ. ಪಾಪ ಅವ್ರ ಹೆಂಡ್ತಿ ಯಾವ್ದೋ ಕಂಪ್ನೀಲಿ ಕೆಲ್ಸ ಮಾಡಿ ಮನೆ ನಡೆಸ್ತಿದಾರಂತೆ. ಎಂಥಾ ಮರ್ಲ್ ಜನ ನೋಡಿ.."
ವ್ಯಂಗ್ಯದ ನಗೆಯೊಂದಿಗೆ ಸೋಮಣ್ಣ ಮಾತುಮುಗಿಸಿದ.
ಶಿಶಿರ ನಗಲಿಲ್ಲ. ಯೋಚಿಸತೊಡಗಿದ: ಎಲಾ ಊರ ಮೇಲಿನ ಪ್ರೇಮವೇ! ಬರೀ ಇಪ್ಪತ್ತು-ಮೊವ್ವತ್ತರ ಭಾವುಕ ಮನಸ್ಕರನ್ನಷ್ಟೇ ಕಾಡುತ್ತೀಯೆಂದು ತಿಳಿದರೆ ನಲವತ್ತು ದಾಟಿದವರನ್ನೂ ಈ ಪರಿ ಹಿಂಸಿಸುತ್ತೀಯಲ್ಲಾ? ತನ್ನದೇನೋ ಅವಿವಾಹಿತ ಅಲೆಮಾರಿ ಮನಸ್ಸು. ಆದರೆ ವರ್ಷಾನುವರ್ಷಗಳಿಂದ ಅಲ್ಲಿ ಪಟ್ಟಣದಲ್ಲೇ ಮನೆ ಮಾಡಿಕೊಂಡು, ಅಲ್ಲೇ ಹೆಂಡತಿ-ಮಕ್ಕಳು, ಬಂಧು-ಬಳಗ, ಸ್ನೇಹಿತ-ಹಿತೈಶಿಗಳರುವ 'ಸ್ಥಿರ' ಬದುಕನ್ನು ಕಟ್ಟಿಕೊಂಡವರ ಕನವರಿಕೆಯಲ್ಲೂ ಹುಟ್ಟಿದೂರೇ ಇರುತ್ತದೆಂದರೆ!? ಇದೇನು ಹೋಮ್ ಸಿಕ್ನೆಸ್ಸಾ ಅಥವಾ ಇರುವುದನ್ನು ಪ್ರೀತಿಸಲಾಗದೆ ಇನ್ಯಾವುದಕ್ಕೋ ಹಂಬಲಿಸುವ ಚಂಚಲತೆಯಾ? ಈ ಮುಂಚೆ ತಾನು ಕೆಲಸ ಮಾಡುತ್ತಿದ್ದ ದೊಡ್ಡ ಕಂಪನಿಯಲ್ಲಿ ಲಕ್ಷ ಸಂಬಳ ಪಡೆಯುತ್ತಿದ್ದ ತನ್ನ ಮ್ಯಾನೇಜರ್ ಸಹಾ ಅದೊಂದು ದಿನ ಪೆಟ್ಟಿ ಅಂಗಡಿಯಲ್ಲಿ ಜೊತೆಗೆ ಟೀ ಕುಡಿಯುತ್ತಾ ನಿಂತಿದ್ದಾಗ 'ಹಳ್ಳಿಯಲ್ಲೊಂದಿಷ್ಟು ಜಮೀನು ಕೊಳ್ಳುತ್ತೇನೆ. ಎರೆಡು ಹಸು ಕಟ್ಟಿ ಹೈನುಗಾರಿಕೆ ಮಾಡ್ತೇನೆ. ಮನೆಯ ಸುತ್ತ ತರಕಾರಿ ಬೆಳೆಯುತ್ತೇನೆ' ಎಂದೆಲ್ಲಾ ಕನವರಿಸುವವರಂತೆ ಹೇಳಿದ್ದರು. ಹಳ್ಳಿಯವರಿಗೆ 'ಕಾಣುವ' ಪಟ್ಟಣದ ಬದುಕು ಹಾಗೂ ಹಳ್ಳಿಬಿಟ್ಟು ಪಟ್ಟಣ ಸೇರಿಕೊಂಡವರು 'ಅನುಭವಿಸುವ' ಪಟ್ಟಣದ ಬದುಕು- ಒಂದೇ ಎಂಬಂತೆ ಕಾಣುವ ಇವೆರೆಡರ ನಡುವೆ ಅದೆಷ್ಟೊಂದು ವ್ಯತ್ಯಾಸ! ಎರೆಡು ದಿನ ರಜೆ ಹಾಕಿ ಬಂದು, ಗುದ್ದಲಿ ಹಿಡಿದು ಹೀಗೆ ಜಡಿಮಳೆಯಲ್ಲಿ ತೋಯುತ್ತಾ 'ನಾನೂ ಊರ ಮಗ' ಎಂದು ಸಂಭ್ರಮಿಸುವ ರಮೇಶನಂತಹಾ ಅದೆಷ್ಟು ಅತೃಪ್ತ ಜೀವಗಳನ್ನು ಊರು ಕೊನೆಗೂ ತನ್ನ ಮಡಿಲಿಗೆಳೆದುಕೊಳ್ಳುತ್ತದೆ?
ಯೋಚಿಸುತ್ತಲೇ ಮೇಲೆದ್ದ ಶಿಶಿರನಿಗೆ ಎರೆಡು ವರ್ಷಗಳ ಪ್ರಾಜೆಕ್ಟ್ ಗೆಂದು ಜರ್ಮನಿಗೆ ಹೋಗಿ ಬಂದಿದ್ದ ಗೆಳೆಯ ಶ್ಯಾಮನ ಮಾತುಗಳು ನೆನಪಾದವು. ಅಲ್ಲಿ ಹೀಗೆಲ್ಲಾ ಇಲ್ಲವಂತೆ. ಹಳ್ಳಿಯಂತಹಾ ಹಳ್ಳಿಗಳಲ್ಲೂ ಕಂಪನಿಗಳಿದ್ದಾವಂತೆ! ಪಟ್ಟಣದಂತಹಾ ಪಟ್ಟಣಗಳಲ್ಲೂ ಗದ್ದೆ, ತೋಟ, ಹಳ್ಳಗಳಿದ್ದಾವಂತೆ! ಆರು ತಿಂಗಳು ಅಲ್ಲಿದ್ದ ಶ್ಯಾಮ ಪ್ರತಿದಿನ ಆಫೀಸಿಗೆ ಹೋಗಬೇಕಾದರೆ ಗದ್ದೆ-ತೋಟಗಳನ್ನು ದಾಟಿಕೊಂಡು ಹೋಗಬೇಕಿತ್ತಂತೆ! ಅಲ್ಲಿನ ರೈತರೂ ಸಹಾ ಬೆನ್ಜ್ ಕಾರು ಕೊಳ್ಳುತ್ತಾರಂತೆ! ಎಂತಹಾ ಪುಣ್ಯವಂತರು! ನಾವಿಲ್ಲಿ ಆಶ್ಚರ್ಯ ಸೂಚಕ ಚಿಹ್ನೆಗಳಿಂದಲೇ ಕೊನೆಗೊಳಿಸುವ ಅದೆಷ್ಟೋ ಸಂಗತಿಗಳನ್ನು ಅವರು ಸಾಮನ್ಯ ವಿಷಯಗಳೆಂಬಂತೆ ನಿತ್ಯಜೀವನದಲ್ಲಿ ಅನುಭವಿಸುತ್ತಿದ್ದಾರೆ! ಶ್ಯಾಮನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಶಿಶಿರನಿಗೆ ಪಟ್ಟಣದ ಬದುಕನ್ನು ಹೀಗೆ ಅನಿವಾರ್ಯವಾಗಿಸಿರುವ ಸರ್ಕಾರದ ಮೇಲೆ, ರಾಜಕಾರಣಿಗಳ ಮೇಲೆ, ಅದನ್ನೇ ಸಾರ್ವತ್ರಿಕವಾಗಿ ಒಪ್ಪಿಕೊಂಡಿರುವ ಜನರ ಮೇಲೆ, ಕೊನೆಗೆ ತನ್ನ ಮೇಲೂ ಅಸಾಧ್ಯ ಕೋಪವುಕ್ಕಿತ್ತು.
**********
"ಎನಫ್ ಈಸ್ ಎನಫ್"
ಶಿಶಿರ ಸ್ವಲ್ಪ ಜೋರಾಗಿಯೇ ಗೊಣಗಿಕೊಂಡ. ಬೆಂಗಳೂರಿಗೆ ಒಳಹೋಗುವ ದಾರಿಗಳು ಮಾತ್ರ ಅಲ್ಲ, ಹೊರಬರುವ ಮಾರ್ಗಗಳೂ ಇವೆ. ಒಳಬರುತ್ತೇವೋ, ಹೊರಹೋಗುತ್ತೇವೋ ಎನ್ನುವುದು ಯಾವ ಬಸ್ಸನ್ನು ಹತ್ತುತ್ತೇವೆನ್ನುವುದರ ಮೇಲೆ ನಿರ್ಧಾರವಾಗುತ್ತದೆ.
ತಾನೀಗ ಬಸ್ಸು ಬದಲಿಸುವ ಸಮಯ ಬಂದಿದೆ.
ಭಯವನ್ನು ಕಟ್ಟಿಡಬೇಕು. ಜನ ಏನನ್ನುತ್ತಾರೋ ಎನ್ನುವ ಭಯ. 'ಪೇಟೆಯವನು' ಎನ್ನುವ ಪೇಟ ಎಲ್ಲಿ ಕಳಚಿ ಬೀಳುತ್ತದೋ ಎನ್ನುವ ಭಯ. ಪರ್ಸಿನೊಳಗೆ ಏನನ್ನು ತುಂಬಿಕೊಳ್ಳಲಿ ಎನ್ನುವ ಭಯ. 'ಪಟ್ಟಣದ ಹುಡುಗನೇ ಬೇಕು' ಎನ್ನುವ ಹುಡುಗಿಯರ ಭಯ!
ಸೂರಿಯ ಅಂಗಡಿ ಚೆನ್ನಾಗಿ ನಡೆಯುತ್ತಿದೆ. ಈ ಮೊದಲೇ ಅವನು ಒಂದೆರೆಡು ಬಾರಿ ಕೇಳಿದ್ದ. ಒಂದು - ಒಂದೂವರೆ ಲಕ್ಷ ಹೂಡಿದರೆ ಐಸ್ಕ್ರೀಂ, ಕೋಲ್ಡ್ ಡ್ರಿಂಕ್ಸ್, ಮತ್ತೊಂದಿಷ್ಟು ಬೇಕರಿ ಐಟಮ್ ಗಳನ್ನ ಇಡಬಹುದು. ಊರಲ್ಲಿ ಎಲ್ಲೂ ಅವೆಲ್ಲಾ ಇಲ್ಲ ಎನ್ನುತ್ತಿದ್ದ. ಆ ಒಂದೂವರೆ ಲಕ್ಷವನ್ನು ನಾನೇ ಹೊಂದಿಸಿಕೊಡಬೇಕು. ಬಂದ ಲಾಭದಲ್ಲಿ ಅಷ್ಟಷ್ಟೇ ಕೂಡಿಸುತ್ತಾ ನಿಧಾನಕ್ಕೆ ಒಂದೆಕರೆ ನೀರಾವರಿ ಜಮೀನು ಕೊಳ್ಳಬೇಕು. ಅಲ್ಲಿಗೆ ಬೆಂಗಳೂರಿನ ಹಾದಿ ಪೂರ್ಣವಾಗಿ ಮುಚ್ಚುತ್ತದೆ...
'ಯಾರ್ರೀ ಸಿರ್ಗಾರ್ ಕೈಮರ ಇಳ್ಯೋರೂ?"
ಕಂಡಕ್ಟರ್ ನ ಕೂಗು ಯೋಚನೆಗಳ ಆಳದೊಳಗೆ ಕೊಕ್ಕೆ ಹಾಕಿ ಶಿಶಿರನನ್ನು ಆಚೆ ಎಳೆಯಿತು. ಬಸ್ಸಿಂದ ಇಳಿದು ನೇರ ಸೂರಿಯ ಅಂಗಡಿಯತ್ತ ಹೆಜ್ಜೆ ಹಾಕಿದ. ಹೇಗಿರಬಹುದು ಸುರೇಶ? ಎಷ್ಟಿರಬಹುದು ಅವನ ತಿಂಗಳ ಆದಾಯ? ದಿನಕ್ಕೆ ಮುನ್ನೂರು ರೂಪಾಯಿ ವ್ಯಾಪಾರ ಆದ್ರೂ ಸಾಕು ಮಾರಾಯ ಎನ್ನುತ್ತಿದ್ದ. ಹಳ್ಳಿಯಲ್ಲಿ ನೆಮ್ಮದಿ ಅಷ್ಟು ಅಗ್ಗಕ್ಕೆ ದೊರೆಯುತ್ತದಾ? ಬರೀ ಮುನ್ನೂರು ರೂಪಾಯಿಗೆ? ಇದಕ್ಕೆಲ್ಲ ಉತ್ತರಿಸಬೇಕಾದವನು ಅವನೇ. ಕೇಳಬೇಕು ಅವನನ್ನ: ಓದಿದ್ದೇವೆನ್ನುವ ಒಂದೇ ಒಂದು ಕಾರಣಕ್ಕೆ ಎಲ್ಲರೂ ಬಿಟ್ಟುಹೋಗುವ ಇದೇ ಹಳ್ಳಿಯಲ್ಲಿ ಅದು ಹೇಗೆ ಬದುಕು ಕಂಡುಕೊಂಡೆ ಎಂದು. ನಾನಲ್ಲಿ ಕಂಪ್ಯೂಟರ್ ಮುಂದಿನ ಅಸಹಾಯ ಕುರ್ಚಿಗಳಲ್ಲಿ, ಅರ್ಥವೇ ಇಲ್ಲದ ಫೈಲುಗಳ ಕಡತಗಳಲ್ಲಿ, ಬಾಸ್ ಜೊತೆಗಿನ ಬಿಸಿಬಿಸಿ ಚರ್ಚೆಗಳಲ್ಲಿ, ಇಷ್ಟವೇ ಆಗದ ಡೆಬಿಟ್ ಕ್ರೆಡಿಟ್ ಗಳನ್ನು ಹೊಂದಿಸುವ ಮಂಡೆಬಿಸಿಯಲ್ಲಿ ಮತ್ತೆಮತ್ತೆ ದಣಿಯುತ್ತಾ ಅದನ್ನೇ ಜೀವನವೆಂದು ನಂಬಿರುವಾಗ ಇಲ್ಲಿ ಬಳ್ಳಿ ಹಬ್ಬುವ ಲಯವನ್ನೂ, ಹೂವು ಅರಳುವ ಸೌಂದರ್ಯವನ್ನೂ, ನೆಟ್ಟ ಗಿಡ ಬೆಳೆ ಬೆಳೆಯುವ ಸಂಭ್ರಮವನ್ನೂ ತಮ್ಮ ತಮ್ಮ ಜೀವನೋಪಾಯವಾಗಿಸಿಕೊಂಡು ಬದುಕುವ ಮಹಾಭಾಗ್ಯದ ಕಥೆಯನ್ನಾದರೂ ಕೇಳಿ ಕೃತಾರ್ಥನಾಗಬೇಕು. ಹಾಗೆಂದು ಯೋಚಿಸುವಾಗಲೇ ಶಿಶಿರ ಸುರೇಶನ ಅಂಗಡಿಯ ಅಂಗಳವನ್ನು ಪ್ರವೇಶಿಸಿದ. 'ಸುಸ್ವಾಗತ' ಎಂಬ ಕೊಳೆ ಹಿಡಿದ ದ್ವಾರಬಾಗಿಲಿನ ಮೇಲಿನ ಬರಹವನ್ನು ಓದಿಕೊಂಡು ಒಳಗೆ ಹೋದವನಿಗೆ ಸುರೇಶನ ಅಂಗಲಾಚುವ ದನಿ ಅನಿರೀಕ್ಷಿತವಾಗಿ ಕಿವಿಮೇಲೆ ಬಿತ್ತು.
"ಇನ್ನು ಒಂದೇ ಒಂದು ವಾರ ಟೈಮ್ ಕೊಡಿ ಅಣ್ಣ.. ಪೂರ್ತಿ ಒಂದೂವರೆ ಸಾವ್ರ ನಿಮ್ ಅಕೌಂಟ್ಗೆ ಹಾಕ್ಬಿಡ್ತೀನಿ... ಈ ಸಲ ಖಂಡಿತ ತಪ್ಸಲ್ಲ.. ಖಂಡಿತಾ ಅಣ್ಣ.."
ಮಾತಿನ ನಡುವೆಯೇ ಶಿಶಿರನಿಗೆ ಕುಳಿತುಕೋ ಎಂಬಂತೆ ಸನ್ನೆ ಮಾಡಿದ ಅವನು ಮತ್ತೆರೆಡು ನಿಮಿಷ ಅಂಗಲಾಚುವಿಕೆಯನ್ನ ಮುಂದುವರಿಸಿದ. ಅವನ ಮಾತುಗಳತ್ತ ಕಿವಿನೆಟ್ಟು ಕುರ್ಚಿಯಲ್ಲಿ ತಳವಿಟ್ಟ ಶಿಶಿರ ಅಂಗಡಿಯೊಳಗೆಲ್ಲಾ ದೃಷ್ಟಿ ಹರಿಸಿದ. ಆಗಷ್ಟೇ ಧೂಳಿನ ಸಣ್ಣ ಮಳೆಯೊಂದು ಸುರಿದು ಹೋದಂತಿತ್ತು ಆ ಕೋಣೆಯೊಳಗಿನ ಸ್ಥಿತಿ. ಮರದ ರ್ಯಾಕ್ ನಲ್ಲಿ ಅರ್ಧ ಖರ್ಚಾಗಿ ಉಳಿದ ನೋಟ್ ಪುಸ್ತಕಗಳು ಆ ಧೂಳನ್ನೇ ಹೊದ್ದು ಬಿಮ್ಮನೆ ಕುಳಿತಿದ್ದವು. ಉರುಟು ಕರಡಿಗೆಯೊಳಗೆ ವಾಲಿಸಿಟ್ಟ ಬಣ್ಣದ ಪೆನ್ಸಿಲ್ ಗಳು ನಿಂತಲ್ಲೇ ನಿದ್ರೆ ಹೋದಂತೆ ಕಾಣುತ್ತಿದ್ದವು. ರ್ಯಾಕ್ ತುದಿಯಲ್ಲಿ ನಗುವ ಬುದ್ಧನ ವಿಗ್ರಹವೊಂದು ಶತಮಾನದಿಂದ ಹೀಗೇ ಧ್ಯಾನಿಸುತ್ತಿರುವಂತೆ ಕುಳಿತಿತ್ತು. ಅರ್ಧ ಮುಚ್ಚಿದ ಕಾಗದದ ಬಾಕ್ಸ್ ನೊಳಗಿನ ಎರೇಸರ್, ಶಾರ್ಪ್ನರ್ ಗಳು ಏನನ್ನೂ ಅಳಿಸಲಾಗದೇ, ಏನನ್ನೂ ಹೆರೆಯಲಾಗದೆ ಅಸಹಾಯಕವಾಗಿ ಮಲಗಿದ್ದವು. ಗೋಡೆಗೆ ತೂಗುಹಾಕಿದ ಪ್ಯಾಕೆಟ್ನೊಳಗಿನ ಮೊಬೈಲ್ ನ ಅಂಗಿ-ಚಡ್ಡಿಗಳು ತಮ್ಮನ್ನು ತೊಡುವವರಿಗಾಗಿ ತೀವ್ರವಾಗಿ ಕಾಯುತ್ತಿರುವಂತೆ ಭಾಸವಾಗುತ್ತಿತ್ತು. ಗೋಡೆಯಲ್ಲಿದ್ದ, ಚಂದದ ಹುಡುಗಿಯೊಬ್ಬಳು ಕೈಮುಗಿದು ನಿಂತ ಚಿತ್ರವಿರುವ ಕ್ಯಾಲೆಂಡರ್ ಇನ್ನೂ ಕಳೆದ ತಿಂಗಳನ್ನೇ ತೋರಿಸುತ್ತಾ ನೇತಾಡುತ್ತಿತ್ತು. ಅದನ್ನು ನೋಡಿದ ಶಿಶಿರನಿಗೆ ಇಲ್ಲಿ ಕೆಲದಿನಗಳಿಂದ ಕಾಲ ನಿಂತೇ ಹೋಗಿದೆಯೇನೋ ಎಂದು ತೀವ್ರವಾಗಿ ಅನ್ನಿಸತೊಡಗಿತು. ಅಷ್ಟರಲ್ಲಿ ಕೊನೆಗೂ ಒಂದು ವಾರದ ಸಮಯವನ್ನು ಪಡೆದ ಸೂರಿ ಫೋನಿಟ್ಟು ಉಷ್ಯಪ್ಪಾ ಎಂದು ನಿಟ್ಟುಸಿರಿಟ್ಟ.
ಯಾಕೋ ಶಿಶಿರನಿಗೆ ಆ ನಿಟ್ಟುಸಿರು ಅವನ ಅಂಗಡಿಯ ಪ್ರತಿಯೊಂದು ಸರಕಿನಿಂದಲೂ ಹೊರಬಂದಂತೆ ಭಾಸವಾಯಿತು.
"ಏನಪ್ಪಾ ಮತ್ತೆ ಸಮಾಚಾರ? ಯಾವಾಗ ಬಂದೆ ಊರಿಗೆ?"
ಹಾಗೆ ಕೇಳುವಾಗ ಸುರೇಶನ ಮುಖದ ಮೇಲೆ ಮೂಡಿದ ನಗು ಇಷ್ಟು ಹೊತ್ತು ತಾನು ಅಂಗಲಾಚಿದ ಮುಜುಗರವನ್ನು ಮರೆಸುವ ವ್ಯಾಪಾರೀನಗೆಯಂತಿತ್ತು.
"ನಾನು ಮೊನ್ನೆ ಬಂದೆ. ಏನಿದು ನಿನ್ನ ಕಥೆ?"
ಶಿಶಿರ ಕಳವಳದಿಂದ ಕೇಳಿದ.
"ಇದು ಕಥೆ ಅಲ್ಲ ಮಾರಾಯ, ಜೀವನ"
ಸೂರಿ ಜೋರಾಗಿ ನಕ್ಕು ಮುಂದುವರಿಸಿದ.
"ಸಾರಿ, ನಿಂಗೆ ಕಾಲ್ ಮಾಡೋಕಾಗ್ಲೀಲ ಇತ್ತೀಚೆಗೆ. ಹಳ್ಳಿ ಮನೆಯ ಅಂಗಡಿ ಅಂದ್ರೆ ಇನ್ನು ಹೇಗಿರತ್ತೆ ಹೇಳು? ಹೇಳೀಕೇಳೀ ಮಳೆಗಾಲ ಬೇರೆ. ಏನೇನೂ ವ್ಯಾಪಾರ ಇಲ್ಲ ಮಾರಾಯಾ. ಇಲ್ನೋಡು, ಆರು ತಿಂಗಳ ಕೆಳಗೆ ತಂದ ಐಟಮ್ಗಳೆಲ್ಲ ಹಾಗಾಗೇ ಬಿದ್ದಿದಾವೆ. ನಂದು ಮಾತ್ರ ಅಲ್ಲ, ಇಲ್ಲಿನ ಎಲ್ಲರದ್ದೂ ಇದೇ ಕಥೆ. ಇತ್ತೀಚೆಗೆ ಮನೆಗೊಂದು ಕಾರು, ತಲೆಗೊಂದು ಬೈಕು ಬಂದ ಮೇಲೆ ಜನಕ್ಕೆ ಪಟ್ಟಣ ತುಂಬಾ ಹತ್ರ ಆಗಿದೆ. ಎರೆಡು ರೂಪಾಯಿಯ ಪೆನ್ಸಿಲ್ ಕೊಳ್ಳೋದಕ್ಕೂ ಅಲ್ಲಿಗೇ ಹೋಗ್ತಾರೆ. ಐದು ರೂಪಾಯಿ ಕೊತ್ತಂಬರಿ ಕಟ್ಟು ಬೇಕಂದ್ರೂ ಅವರ ಬೈಕು ನೇರ ಸಿಟಿಗೇ ಓಡ್ತದೆ. ನಿನ್ನ ಬದುಕೇ ಪರವಾಗಿಲ್ಲ. ತಿಂಗಳ ಸಂಬಳ ಅಂತ ಒಂದು ಮೊತ್ತವಾದರೂ ತಪ್ಪದೇ ಬರುತ್ತೆ. ಪಾಪ.. ಎದುರುಗಡೆ ಅಂಗಡಿಯ ವಾಲ್ಮೀಕಿ ಮೊನ್ನೆ ಎಂಟ್ಹತ್ತು ಇಂತಿಂಥಾ ದೊಡ್ಡ ಚಿಪ್ಸು, ಮೈದಾಹಿಟ್ಟು, ರಾಗಿ ಹಿಟ್ಟಿನ ವ್ಯಾಪಾರವಾಗದ ಪ್ಯಾಕೇಟುಗಳನ್ನ ತಂದು 'ದನಕ್ಕೆ ಕೊಡು' ಎಂದು ನಂಗೆ ಕೊಟ್ಟು ಹೋದ" ಎನ್ನುತ್ತಾ ಅಂಗಡಿಯ ಮೂಲೆಯತ್ತ ಕೈತೋರಿಸಿದ. ಅಲ್ಲಿ ತಿಂಗಳಾನುಗಟ್ಟಲೆ ಬಿಕರಿಯಾಗಲು ಕಾದೂ ಕಾದೂ ಸೋತಿದ್ದ ವಿವಿಧ ಕಂಪನಿಯ ಲೇಬಲ್ ಹೊತ್ತ ಪ್ಯಾಕೇಟುಗಳು ಅಪರಾಧಿಗಳಂತೆ ತಲೆತಗ್ಗಿಸಿ ನಿಂತಿದ್ದವು.
"ಸಿಟಿ.."
ಅಷ್ಟಂದ ಶಿಶಿರ ಭಾರವಾಗಿ ನಿಟ್ಟುಸಿರಿಟ್ಟ.
"ಈ ಪಟ್ಟಣ ಅನ್ನೋದು ಜನರ ಪಾಲಿಗೆ ಇಂದು ಕೇವಲ ಒಂದು ಹುಚ್ಚಾಗಿ ಉಳಿದಿಲ್ಲ ಸೂರಿ. ಅದೀಗ ಎಲ್ಲರ ಅನಿವಾರ್ಯವಾಗಿಬಿಟ್ಟಿದೆ. ಊರಲ್ಲಿ ಪೂರ್ತಿ ಹೊಟ್ಟೆ ತುಂಬಿಸುವ ಹತ್ತು ಸಾವಿರಕ್ಕಿಂತಲೂ ಪಟ್ಟಣದಲ್ಲಿ ಅರ್ಧ ಹಸಿವನ್ನೂ ನೀಗಿಸದ ಮೊವ್ವತ್ತು ಸಾವಿರವನ್ನೇ ಎಲ್ಲರೂ ಬಯಸುತ್ತಾರೆ. ಪಟ್ಟಣದ ಸರಕೇ ಬೇಕು. ಪಟ್ಟಣದ ಸೇವೇಯೇ ಆಗಬೇಕು. ಪಟ್ಟಣದ ಬೀದಿಗಳಲ್ಲಿ ಅಲೆದಾಡುವುದೇ ಚಂದ... ಇವೆಲ್ಲದರ ನಡುವೆ ಅತ್ತ ಪಟ್ಟಣಿಗರೂ ಆಗದೆ, ಇತ್ತ ಹಳ್ಳಿಯವರೂ ಆಗದೆ ನಡು ಹೊಸಿಲಲ್ಲೇ ಉಳಿದು ಸೊರಗುವ ನನ್ನ-ನಿನ್ನಂಥವರನ್ನು ಕೇಳುವವರಾದರೂ ಯಾರು?"
ತನ್ನಷ್ಟಕ್ಕೇ ಎಂಬಂತೆ ನುಡಿದ ಶಿಶಿರನ ಮಾತಿಗೆ ಏನನ್ನೂ ಹೇಳದಾದ ಸೂರಿ ಏನೋ ಹೊಳೆದಂತೆ ಥಟ್ಟನೆ ಮೇಲೆದ್ದ. "ಲಾಗದಮನೆ ಶಂಕ್ರಣ್ಣನತ್ರ ಐದು ಸಾವಿರ ಇದ್ರೆ ಕೊಡಿ ಅಂದಿದ್ದೆ. ಈಗ ಬಾ ಅಂದಿದ್ರು. ಹೋಗಿ ತರೋಣ ಬರ್ತೀಯಾ?" ಎನ್ನುತ್ತಾ ಹೊರಗೆ ನಡೆದ. ಹಳ್ಳಿ ಬದುಕಿನ ಮತ್ತೊಂದು ಯಾಚನೆ, ಮತ್ತೊಂದು ಬೇಡುವಿಕೆಯನ್ನು ನೋಡಲಿಚ್ಛಿಸದ ಶಿಶಿರ "ಇಲ್ಲ ಹೋಗಿ ಬಾ" ಎನ್ನುತ್ತಾ ಮೇಲೆದ್ದ. ದ್ವಾರಬಾಗಿಲಿನಲ್ಲಿ 'ನಮಸ್ಕಾರ. ಪುನಃ ಬನ್ನಿ' ಎಂಬ ಬರಹದ ಕೆಳಗೆ ಕೈಗಳೆರೆಡು ಮುಗಿದುಕೊಂಡಿದ್ದವು. ಆ ನಮಸ್ಕಾರ, ಆ ಆಶಯ ಇಡೀ ಹಳ್ಳಿ ಬದುಕಿನ ಸಕಲ ಜೀವನದ್ದೆಂಬಂತಿತ್ತು.
ಶಿಶಿರನನ್ನು ಬಸ್ಸು ನಿಲ್ದಾಣದ ತನಕ ಬೈಕಿನಲ್ಲಿ ಬಿಟ್ಟ ಹೊರಡುವ ಮುನ್ನ ಸುರೇಶ ಕೊನೆಯ ಆಘಾತದ ಮಾತನ್ನು ನುಡಿದ:
"ಮುಂದಿನ ತಿಂಗಳಲ್ಲಿ ಅಂಗಡಿ ಖಾಲಿ ಮಾಡಿ ಬೆಂಗಳೂರಿಗೆ ಬರ್ಬೇಕಂತಿದೀನಿ. ಯಾವುದಾದ್ರೂ ಕೆಲಸ ಇದ್ರೆ ಹೇಳು..."
ಶಿಶಿರ ಥಟ್ಟನೆ ತಿರುಗಿದ. ತಾನು ಯಾರ ಬಳಿ 'ನನಗೆ ಆಸರೆಯಾಗು' ಎಂದು ಕೇಳಲು ಬಂದಿದ್ದನೋ ಆ ಆಸರೆಯೇ ಅವನೆದುರು ನಿಂತು 'ನನ್ನನ್ನು ಉಳಿಸು' ಎಂದು ಕೇಳುತ್ತಿರುವುದನ್ನು ನೋಡಿದವನ ಮನದಿಂದ ನಗೆಯೊಂದು ಭಾರವಾಗಿ ಹೊರಬಂತು.
"ಬಾ ಸೂರಿ.. ಇಷ್ಟಪಡದವರನ್ನೇ ಬಿಡದ ಪಟ್ಟಣ.. ಇನ್ನು ಕಷ್ಟ ಪಡುವವರಿಗೆ ಇಲ್ಲ ಎನ್ನುತ್ತದೆಯೇ? ಧಾರಾಳವಾಗಿ ಬಾ..."
ಸೂರಿಗೆ ಕೈಬೀಸಿದ ಶಿಶಿರ ಬಸ್ಸು ಹತ್ತಿ ಕುಳಿತ. ಮುಚ್ಚಿದ ಕಿಟಕಿ ಗಾಜಿನಾಚೆಗೆ ಸುರಿಯುತ್ತಿದ್ದ ಮಳೆ ತನ್ನದಲ್ಲದ ಯಾವುದೋ ಕನಸಿನ ಲೋಕದಲ್ಲಿ ಸುರಿಯುತ್ತಿರುವಂತೆ ಭಾಸವಾಯಿತು. ತಾನು ಕುಳಿತಿರುವ ಬಸ್ಸೂ ಸೇರಿದಂತೆ ರಸ್ತೆಯ ಮೇಲಿರುವ ಸಕಲ ವಾಹನಗಳೂ ಆ ಮಳೆಯಿಂದ ದೂರ ಸಾಗುತ್ತಾ ದೂರದ ಬೆಂಗಳೂರಿನತ್ತ ಓಡುತ್ತಿವೆಯೇನೋ ಅನ್ನಿಸಿ ಶಿಶಿರ ಸೀಟಿಗೊರಗಿ ಗಟ್ಟಿಯಾಗಿ ಕಣ್ಮುಚ್ಚಿಕೊಂಡ.
(ಡಿಸೆಂಬರ್ 2019ರ ಮಯೂರದಲ್ಲಿ ಪ್ರಕಟಿತ)