ಮಂಗಳವಾರ, ನವೆಂಬರ್ 12, 2019

ಸ್ವಚ್ಛಂದ



ರಾತ್ರೆ ಸುರಿದ ಮಳೆಯಿಂದಾಗಿ ಶಿವಮೊಗ್ಗದಿಂದ ಕೊಡಚನಹಳ್ಳಿಗೆ ಹೋಗುವ ಎರೆಡು ಮಾರ್ಗಗಳಲ್ಲೂ ವಾಹನ ಸಂಚಾರ ಸ್ಥಗಿತಗೊಂಡಿದೆಯೆಂಬ ವಿಷಯ ತಿಳಿಯುವ ಹೊತ್ತಿಗಾಗಲೇ ನಾನು ಶಿವಮೊಗ್ಗದ ರೈಲ್ವೇ ನಿಲ್ದಾಣದಲ್ಲಿ ಇಳಿದಾಗಿತ್ತು. ಹೋಗೋಣವೆಂದರೆ ಒಬ್ಬನೇ ಒಬ್ಬ ಪರಿಚಿತನ ಮನೆಯೂ ಶಿವಮೊಗ್ಗದಲ್ಲಿಲ್ಲ. ದೂರದ ಪಟ್ಟಣಸೇರಿ ನನ್ನ ಜಿಲ್ಲೆಗೇ ನಾನು ಅದೆಷ್ಟು ಅಪರಿಚಿತನಾಗಿಬಿಟ್ಟೆನೆಂದು ಯೋಚಿಸುತ್ತಿದ್ದಾಗಲೇ ರಿಶಿಕೇಶ್ ನ ನೆನಪಾಗಿದ್ದು. 

ರಿಶಿ ನನ್ನ ಎಕ್ಸ್ ಕಲೀಗ್ ಕಮ್ ರೂಮ್ ಮೆಟ್. ತೀರ್ಥಹಳ್ಳಿಯವನು. ನಾಲ್ಕು ಜನರೆದುರು ನಿಂತು ಎರೆಡು ಮಾತನಾಡಲೂ ಅಂಜುತ್ತಲೇ ಗಣಪತಿ ಹಬ್ಬದ ರಾಜಬೀದಿ ಮೆರವಣಿಗೆಯಲ್ಲಿ ತಮಟೆಯ ಸದ್ದಿಗೆ ಕುಣಿಯಬೇಕೆಂದು ಆಸೆ ಪಡುತ್ತಿದ್ದವನು. ಇಪ್ಪತ್ತೋ, ಮೊವ್ವತ್ತೋ ಉಳಿಸಲು ರಾತ್ರೆ ಮಾಡಿದ ಗಂಜಿಯನ್ನೇ ಹಗಲೂ ಕುಡಿಯುತ್ತಾ ಖಾಯಿಲೆ ಬಿದ್ದು ಕೊನೆಗೆ ನೂರಾರು ರೂಪಾಯಿ ಮಾತ್ರೆ, ಔಷಧಗಳಿಗೆ ಚೆಲ್ಲುತ್ತಿದ್ದವನು. ನಿದ್ರೆಗಣ್ಣಿನಲ್ಲಿ ಎಬ್ಬಿಸಿ ಕೇಳಿದರೂ ತನ್ನ ಬಾಸ್, ಮ್ಯಾನೇಜರ್ ಗಳನ್ನು ಬೈಯ್ಯುತ್ತಲೇ ಮಾತು ಆರಂಭಿಸುತ್ತಿದ್ದವನು. ಕೊನೆಗೊಂದು ದಿನ  ನಿದ್ರೆಯಿಂದೆದ್ದಂತೆಯೇ ಎದ್ದು ತನಗೆ ಇಷ್ಟವಿಲ್ಲದ ಕೆಲಸದ ಜೊತೆ ಬೆಂಗಳೂರನ್ನೂ ಬಿಟ್ಟು ಹೊರಟುಹೋದವನು. ಅದಾಗಿ ನಾಲ್ಕು ವರ್ಷ ಅವನು ಸಂಪರ್ಕವೇ ತಪ್ಪಿಹೋಗಿತ್ತು. ಊರಿನಲ್ಲಿ ಯಾವುದೋ ಆಡಿಟರ್ ಫರ್ಮ್'ನಲ್ಲಿದ್ದಾನಂತೆ, ಕೃಷಿ ಮಾಡುತ್ತಿದ್ದಾನಂತೆ, ಮತ್ತೆ ಬೆಂಗಳೂರಿಗೆ ಬಂದ್ನಂತೆ, ಯಾವುದೋ ಧಾರಾವಾಹಿಗೆ ಸಂಭಾಷಣೆ ಬರೆಯುತ್ತಿದ್ದಾನಂತೆ... ಪ್ರತೀ ಬಾರಿ ವಿಚಾರಿಸಿದಾಗಲೂ ಅವನ ಕುರಿತಾದ ಹೊಸ ಸಮಾಚಾರವೊಂದು ಕಿವಿಗೆ ಬೀಳುತ್ತಿತ್ತು. ಸ್ಥಿರವಾದ ಒಂದು ನೆಲೆಯಿಲ್ಲದ ಅವನ ಈ ಅಲೆದಾಟದ ಸಮಾಚಾರಗಳನ್ನು ಹೇಳಿದವರೆಲ್ಲ ಇಷ್ಟು ವರ್ಷದಿಂದ ಬೆಂಗಳೂರಿನಲ್ಲೇ ಉಳಿದಿರುವ ನನ್ನ ತಾಳ್ಮೆ, ಶ್ರದ್ಧೆಗಳನ್ನು ಹಾಡಿಹೊಗಳಿದ್ದರು. ಆಗೆಲ್ಲ, ಪ್ರತಿದಿನ ಬೆಳಗ್ಗೆ ಒತ್ತಡದ ಮನಸ್ಸಿನೊಂದಿಗೆ ಕೆಲಸಕ್ಕೆ ಹೋಗುವಾಗ ರಿಶಿ ಮಾಡಿದ್ದೇ ಸರಿಯೆಂದೂ, ಸಂಜೆ ತಣ್ಣಗೆ ಮರಳಿಬರುವಾಗ ನಾನು ಸರಿಯೆಂದೂ ಯೋಚಿಸುವ ನಾನು, ಈ ಬೆಂಗಳೂರಿನೊಂದಿಗೆ ಯಾವುದೇ ಕ್ಷಣದಲ್ಲಾದರೂ ಕಳಚಿಹೋಗಬಹುದಾದ ಸೂಕ್ಷ್ಮ ನಂಟಿನೆಳೆಯಲ್ಲೇ ಬದುಕುತ್ತಿರುವೆನೆಂಬ ಸತ್ಯ ನೆನಪಾಗಿ ಅವರ ಶಭಾಶ್ಗಿರಿಯನ್ನು ನುಂಗಲೂ ಆಗದೇ, ಉಗುಳಲೂ ಆಗದೇ ಪೆಚ್ಚುನಗೆ ನಗುತ್ತಿದ್ದೆ. 

ಈಗ ರಿಶಿ ಇಲ್ಲೇ ಎಲ್ಲೋ ಶಿವಮೊಗ್ಗ ಪಟ್ಟಣದಲ್ಲೇ ಇದ್ದಾನೆಂಬ ಪಕ್ಕಾ ಸುದ್ದಿಯಿತ್ತು. ಅವನಿಗೆ ಕರೆಮಾಡುವುದೇ ಉಳಿದಿರುವ ಮಾರ್ಗವೆನಿಸಿ ಮೊಬೈಲ್ ಕೈಗೆತ್ತಿಕೊಂಡು ಫೋನಾಯಿಸಿದೆ‌. ಮೂರನೇ ರಿಂಗಿಗೇ ಫೋನು ಎತ್ತಿದ, ಖಾಲಿ ಕೂತವನಂತೆ.

"ಹಲೋ, ಅರೆರೇ ಭಟ್ರು! ಹೇಳಿ ಭಟ್ರೇ ಹೇಗಿದೀರ? ಅಪರೂಪಕ್ಕೆ ನೆನಪಿಸಿಕೊಂಡಿದೀರ? ಏನ್ ಸಮಾಚಾರ?"
ನಾಲ್ಕು ವರ್ಷಗಳ ಹಿಂದಿನ ಅದೇ ಹಳೇ ಧ್ವನಿಯಲ್ಲಿನ ಆತ್ಮೀಯತೆ ಮಾತ್ರ ಹೊಚ್ಚಹೊಸತರಂತಿತ್ತು.

"ಹಲೋ ರಿಶಿ! ನಾನು ಚೆನ್ನಾಗಿದೀನಿ. ನೀನು ಹೇಗಿದ್ದಿ? ಜಸ್ಟ್ ಈಗ ಶಿವಮೊಗ್ಗಕ್ಕೆ ಬಂದಿಳಿದೆ. ಇಲ್ಲಿ ನೋಡಿದ್ರೆ ನಮ್ಮೂರಿನ ದಾರಿನೇ ಬಂದ್ ಆಗಿದ್ಯಂತೆ..."

"ಓಹ್ ಹೌದಾ? ರಾತ್ರೆಯಿಡೀ ಭಯಂಕರ ಮಳೆ ಹುಯ್ದಿದೆ. ಒಂದ್ಕೆಲಸ ಮಾಡಿ. ನೇರ ನನ್ನ ರೂಮಿಗೆ ಬಂದ್ಬಿಡಿ. ದುರ್ಗಿಗುಡಿ ಗೊತ್ತಲ್ಲ, ಅದರ ಪಕ್ಕದ ರಸ್ತೆಯ ನಾಲ್ಕನೇ ಕ್ರಾಸಲ್ಲೇ ಇರೋದು ನನ್ನ ರೂಮು"

ಇಷ್ಟು ದಿನ ಹೇಗಿದ್ದೀ ಎಂದೂ ವಿಚಾರಿಸದೇ ಈಗ ಸಂಕಟ ಬಂದಿರುವಾಗ ನೆನಪಿಸಿಕೊಳ್ಳುತ್ತಿದ್ದೇನೆಂಬ ಮುಜುಗರದಿಂದ ತೊದಲುತ್ತಿದ್ದ ನನ್ನ ಮಾತಿನೊಳಗಿನ ದಾಕ್ಷಿಣ್ಯವನ್ನು ಅರಿತವನಂತೆ, ಬೇಡುವ ಮೊದಲೇ ಸಹಾಯಹಸ್ತ ಚಾಚಿದ ಅವನ ಅದೇ ಹಳೆಯ ಆತ್ಮೀಯತೆಗೆ ಅರೆಕ್ಷಣ ಮನಸ್ಸು ತುಂಬಿಬಂತು. ಬ್ಯಾಗ್ ಏರಿಸಿಕೊಂಡು ಅವನು ಹೇಳಿದ ವಿಳಾಸದತ್ತ ನಡೆಯತೊಡಗಿದೆ.

ಮಳೆ ಮುದ್ದಿಸಿಹೋದ ಚುಮುಚುಮು ಬೆಳಗೊಂದು ಶಿವಮೊಗ್ಗೆಯಲ್ಲಿ ಮೆಲ್ಲನೆ ಅರಳುತ್ತಿತ್ತು. ರಜೆಯ ಮೇಲೆ ತವರಿಗೆ ಬರುತ್ತಿರುವ ಅದೆಷ್ಟೋ ಹೃದಯಗಳನ್ನು ಹೊತ್ತ ಸಂಭ್ರಮದಿಂದೆಂಬಂತೆ ಹತ್ತಾರು ಬಸ್ಸುಗಳು ಲವಲವಿಕೆಯಿಂದ ನಿಲ್ದಾಣದೊಳಕ್ಕೆ ನುಗ್ಗುತ್ತಿದ್ದವು. ಅಲ್ಲಲ್ಲಿ ಬಟಾವಡೆಯಾಗಬೇಕಾದ ಅಂದಿನ ದಿನಪತ್ರಿಕೆಗಳನ್ನು ಗುಡ್ಡೆಹಾಕಿಕೊಂಡ ಹುಡುಗರು ಗಡಿಬಿಡಿಯಿಂದ ಕೆದಕಾಡುತ್ತಿದ್ದರು. ಜೊತೆಗೇ ಹಾಲಿನವರು, ಹೂವಿನವರು, ಹಬೆಯಾಡುತ್ತಿರುವ ಚಹಾದವರು.... ಹೀಗೆ ತಾಜಾ ಮುಂಜಾನೆಯೊಂದನ್ನು ಮತ್ತಷ್ಟು ತಾಜಾ ಆಗಿಸುವ ಎಲ್ಲ ರೀತಿಯ ಚಟುವಟಿಕೆಗಳೂ ಹನಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಜರುಗುತ್ತಿದ್ದವು. ನನ್ನೂರಿನ ಜನಜೀವನದ ಮುಖಗಳನ್ನು ಕಣ್ತುಂಬಿಕೊಳ್ಳುತ್ತಾ ದುರ್ಗಿಗುಡಿ ರಸ್ತೆಯತ್ತ ನಡೆಯತೊಡಗಿದೆ.

ಬೆಂಗಳೂರಿನಿಂದ ಊರಿಗೆ ಬಂದಿಳಿಯುವ ಈ ಮುಂಜಾನೆಗಳು, ಕಳೆದ ಏಳು ವರ್ಷಗಳಿಂದ ನನ್ನ ಬದುಕಿನ ಅತೀ ಸಂತಸದ ಕ್ಷಣಗಳು. ನಾನು ಕೇವಲ ನಾನಾಗಿ ಇರಬಲ್ಲ, ಆಫೀಸಿನ ಮುಗಿಯದ ಮಂಡೆಬಿಸಿಗಳ ಕರಿನೆರಳಿಲ್ಲದ, ಅಮ್ಮನ ಬೆಚ್ಚಗಿನ ಮಡಿಲಿನಂತಹ ಈ ಎರೆಡು-ಮೂರು ರಜಾದಿನಗಳು ನನ್ನೆದುರಿವೆಯೆಂಬ ಈ ದಿವ್ಯ ನೆಮ್ಮದಿಗೆ ಸಮನಾದ ಇನ್ನೊಂದು ಸಂಭ್ರಮವಿಲ್ಲ. ಈಗಷ್ಟೇ ಅಂಗಡಿ ಮುಂಗಟ್ಟುಗಳ ಕದ ತೆರೆಯುತ್ತಿರುವ, ಮನೆಯೆದುರು ರಂಗೋಲಿ ಹಾಕುತ್ತಿರುವ, ಸಿಟಿ ಬಸ್ಸಿಗಾಗಿ ಕಾಯುತ್ತಿರುವ, ತಮ್ಮದೇ ಊರಿನಲ್ಲಿ ಬದುಕು ಕಂಡುಕೊಂಡ ಇಲ್ಲಿನ ಪುಣ್ಯಪುರುಷರನ್ನೆಲ್ಲ ಕಣ್ತುಂಬಿಕೊಳ್ಳುವಾಗ ಮುಂದೊಂದು ದಿನ ಇವರಲ್ಲಿ ನಾನೂ ಒಬ್ಬನಾಗುವ ಹಗಲುಗನಸು ತನ್ನಷ್ಟಕ್ಕೆ ತಾನೇ ಮನದೊಳಗೆ ಬಿತ್ತರವಾಗುತ್ತದೆ. ನಾನು ಸಧ್ಯಕ್ಕೆ ಕಲ್ಪನೆಯಲ್ಲಿ ಮಾತ್ರ ಕಾಣಬಹುದಾದ ಈ ಬದುಕನ್ನು ಈಗಾಗಲೇ ಬದುಕುತ್ತಿರುವ ರಿಶಿಯನ್ನು ಭೇಟಿಯಾಗುತ್ತಿರುವುದಕ್ಕೆ ಒಂದು ತೆರನಾದ ಕುತೂಹಲ ಬೆರೆತ ಸಂತೋಷ ತಂತಾನೇ ಅರಳಿಕೊಂಡಿತ್ತು. ಈಗ ಹೇಗಿರಬಹುದು ರಿಶಿ? ಅಂದು ಐಟಿ ಬದುಕಿನ ಬಂಗಾರದ ಪಂಜರದಂತಹಾ ಬಂಧನದೊಳಗೆ ಕುಳಿತು ಅವನು ಹಂಬಲಿಸುತ್ತಿದ್ದ ಸ್ವತಂತ್ರ ಜೀವನ ಅವನಿಗೆ ಸಿಕ್ಕಿದೆಯಾ? ಪಟ್ಟಣದಾಚೆಗೂ ಇರುವ ಬದುಕುವ ದಾರಿ ಅವನ ಕೈ ಹಿಡಿದಿದೆಯಾ? ಯೋಚಿಸುತ್ತಿದ್ದಾಗಲೇ ಹೆಜ್ಜೆಗಳು ರಿಶಿ ಹೇಳಿದ ರಸ್ತೆಯ ತಿರುವಿನಲ್ಲಿದ್ದವು. ನಾಲ್ಕನೇ ಕ್ರಾಸಿನಲ್ಲಿ ನಾಲ್ಕು ಹೆಜ್ಜೆ ನಡೆಯುವಷ್ಟರಲ್ಲೇ ಎದುರಿದ್ದ ಎರೆಡು ಮಹಡಿ ಕಟ್ಟಡದ ಟೆರಾಸಿನ ಮೇಲೆ ಕೈಬೀಸುತ್ತ ನಿಂತಿದ್ದ ರಿಶಿ ಕಣ್ಣಿಗೆಬಿದ್ದ.

"ಓಹೋಹೋ ಬನ್ನಿ ಬನ್ನಿ... ಎಂತದಿದು ಭಟ್ರೇ. ನಾಲ್ಕು ವರ್ಷ ಆಯ್ತು, ಒಂಚೂರು ತ್ವಾರ-ಗೀರ ಎಂತದೂ ಆಗೇ ಇಲ್ವಲ್ಲ ನೀವು! ಹೊಟ್ಟೆಗೇನಾದ್ರೂ ತಿಂತಿದೀರೋ ಇಲ್ವೋ?"
ಮುಖದ ಮೇಲೆ ನಗೆ ತುಂಬಿಕೊಂಡು ಮೆಟ್ಟಿಲೇರುತ್ತಾ ಬಂದ ನನ್ನನ್ನು ಬ್ಯಾಗಿನ ಸಮೇತ ತಬ್ಬಿಕೊಳ್ಳುತ್ತಾ ಹೇಳಿದವನ ಮಾತು ಮಲೆನಾಡಿನ ಮಳೆಯಷ್ಟೇ ತಿಳಿಯಾಗಿತ್ತು.

"ಎಂತ ಮಾಡೋದು ಮಾರಾಯ? ಆಫೀಸಲ್ಲಿ ಬಾಸಿನ ಕಾಟ. ರೂಮಲ್ಲಿ ಓನರ್ ಕಾಟ. ಊರಿಗೆ ಬಂದ್ರೆ ಮದುವೆ ಅಗು ಅಂತ ಅಮ್ಮನ ಕಾಟ. ಎಲ್ಲದರ ಮಧ್ಯೆ ಹೋಟೆಲಿನ ಸೋಡಾ ಬೆರೆಸಿದ ಊಟ! ದಪ್ಪ ಆಗೋದಾದ್ರೂ ಹೆಂಗೆ ಹೇಳು?" 

"ಹ..ಹ.. ಬೆಂಗಳೂರಿನ ಬದುಕೇ ಹಾಗೆ. ಒಂಥರಾ ಶೋಕೇಸ್ ಇದ್ದಹಾಗೆ! ನೋಡೋದಕ್ಕೆ, ಹೇಳಿಕೊಳ್ಳೋದಕ್ಕೆ ತುಂಬಾ ಚಂದ. ಆದರೆ ಅನುಭವಿಸೋದಕ್ಕೆ ಬರೋದಿಲ್ಲ!" ಎನ್ನುತ್ತಾ ಹೆಗಲಮೇಲಿನ ಕೈ ತೆಗೆಯದೆಯೇ ರೂಮಿನೊಳಕ್ಕೆ ಕರೆದೊಯ್ದ. ಎತ್ತರದ ಮರದ ಮೇಲಿನ ಪುಟ್ಟ ಗೂಡಿನಂತಿತ್ತು ಅವನ ರೂಮು. ಕೋಣೆಯೆದುರಿನ ಖಾಲಿ ಜಾಗದಲ್ಲಿ ಪುಟ್ಟಪುಟ್ಟಗೆ ಹೂಬಿಟ್ಟುನಿಂತ ಪಾಟ್ ಗಳು, ಕೋಣೆಯೊಳಗೆ ಆಗಷ್ಟೇ ಹಚ್ಚಿದ್ದ ಅಗರಬತ್ತಿಯ ಘಮಲು, ಹಣತೆಯುರಿಯುತ್ತಿದ್ದ ದೇವರ ಫೋಟೋ, ಕಪಾಟಿನಲ್ಲಿ ಮಟ್ಟಸವಾಗಿ ಜೋಡಿಸಿಟ್ಟ ಪುಸ್ತಕಗಳು, ತಂತಮ್ಮ ಜಾಗದಲ್ಲಿ ಶಿಸ್ತಾಗಿ ಕುಳಿತಿರುವ, ಅವನು ತನ್ನ ಅಡಿಗೆಯನ್ನು ತಾನೇ ಮಾಡಿಕೊಳ್ಳುತ್ತಿದ್ದಾನೆಂದು ಸಾರುತ್ತಿರುವ ವಿವಿಧ ಪಾತ್ರೆಗಳು.. ಪರವಾಗಿಲ್ಲ ಆಸಾಮಿ, ಕೆಲಸ ಬಿಟ್ಟರೂ ಶಿಸ್ತು ಬಿಟ್ಟಿಲ್ಲ ಎಂದುಕೊಳ್ಳುತ್ತಲೇ ಹಾಸಿಗೆ ಹಾಸಿಕೊಂಡೇ ಇದ್ದ ಮಂಚದಮೇಲೆ ಕುಳಿತೆ. 

"ಮತ್ತೇನ್ರೀ ಸಮಾಚಾರ? ಹಬ್ಬಕ್ಕೆ ಎಷ್ಟುದಿನ ರಜೆ?"
ಕಾಫಿಪುಡಿ ಪ್ಯಾಕೇಟಿನ ತುದಿ ಕತ್ತರಿಸುತ್ತಾ ಕೇಳಿದ.

"ಮ್ಯಾನೇಜರ್ ಕೊಟ್ಟಿರೋದು ಒಂದು ದಿನ, ನಾನು ತಗೊಳ್ತಿರೋದು ಎರೆಡು ದಿನ."
ಮುಗುಳ್ನಕ್ಕು ಉತ್ತರಿಸಿದೆ.

"ಇನ್ನೂ ನಿಮಗೊಬ್ಬ ಒಳ್ಳೇ ಬಾಸ್ ಸಿಕ್ಕಿಲ್ಲ ಅಂತಾಯ್ತು ಹಂಗಾದ್ರೆ!"

"ನನ್ನ ಜಾತಕದಲ್ಲೇ ಆ ಯೋಗ ಇಲ್ಲಾಂತ ಕಾಣತ್ತೆ ರಿಶಿ. ಬಿಡು. ಮತ್ತೇನು ಸಮಾಚಾರ? ಹೇಗಿದೆ ಊರಿನ ಲೈಫು? ಈಗೆಲ್ಲಿ ಕೆಲಸ ಮಾಡ್ತಿದ್ದೀ?"
ಮತ್ತದೇ ಬೆಂಗಳೂರು, ಆಫೀಸು, ಬಾಸ್'ಗಳನ್ನು ನೆನಪಿಸಿಕೊಳ್ಳಲಿಕ್ಕೆ ಇಷ್ಟವಿಲ್ಲದೇ ಮಾತಿನ ದಿಕ್ಕು ಬದಲಿಸುವ ಜೊತಗೆ ಅವನ ಬದುಕಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲವೂ ಜೊತೆಯಾಗಿ ಆ ಪ್ರೆಶ್ನೆ ಕೇಳಿದೆ.

"ಸಧ್ಯಕ್ಕೆ ಎಲ್ಲೂ ಇಲ್ಲ!"
ನನ್ನ ಕಣ್ಣು, ಬಾಯಿಗಳು ಇಷ್ಟಗಲಕ್ಕೆ ತೆರೆದುಕೊಳ್ಳುವಂತಹಾ ಅಚ್ಚರಿಯ ಉತ್ತರವನ್ನು ತೀರಾ ತಣ್ಣಗಿನ ದನಿಯಲ್ಲಿ  ಕೊಟ್ಟುಬಿಟ್ಟ.

"ಉದ್ಯೋಗವೇ ಇಲ್ವಾ? ಹಾಗಾದರೆ ಬದುಕಿಗೇನು ಮಾಡ್ತಿದ್ದೀಯಪ್ಪಾ?"
ಅರ್ಧ ಅಚ್ಚರಿ, ಇನ್ನರ್ಧ ಆಘಾತದಿಂದೆಂಬಂತೆ ಕೇಳಿದೆ.

"ಉದ್ಯೋಗವೊಂದೇ ಆದಾಯದ ಮೂಲ ಅಲ್ಲ ಅಲ್ವ ಭಟ್ರೇ. ಅಷ್ಟಕ್ಕೂ ಈ ಉದ್ಯೋಗ ಬದುಕಿನ ಪರಕೀಯತೆಯಿಂದಾಚೆ ಬರಬೇಕೆಂದೇ ಅಲ್ವ ನಾನು ಬೆಂಗಳೂರು ಬಿಟ್ಟು ಬಂದದ್ದು? ಕಳೆದ ವರ್ಷ ಹೊಸದಾಗಿ ಮುಕ್ಕಾಲೆಕರೆ ತೋಟ ಖರೀದಿಸಿದೆ. ಮಳೆಗಾಲ ನೋಡೀ, ತೋಟಕ್ಕೆ ಔಷಧಿ ಹೊಡೆಯೋದಿತ್ತು. ಈ ತೋಟ ತಗೊಂಡಿದ್ದು ಅಪ್ಪನಿಗೆ ಒಂಚೂರೂ ಇಷ್ಟವಿಲ್ಲ. ಅಪ್ಪೀತಪ್ಪೀ ಕಾಲೆಡವಿದಾಗಲೂ ತೋಟದಾಚೆಗಿನ ಹಳ್ಳಕ್ಕಾದರೂ ಬೀಳುತ್ತಾರೆಯೇ ಹೊರತೂ ನನ್ನ ತೋಟಕ್ಕೆ ಕಾಲು ಇಡೋದಿಲ್ಲ! ಅದಕ್ಕೆ ನಾನೇ ಹೋಗಿ ಎಲ್ಲ ಕೆಲಸ ಮುಗಿಸಿ ಬಂದೆ..."

"ಅದೇನೋ ಸರಿ, ತೋಟ, ಮನೆ, ಅಪ್ಪ, ಅಮ್ಮ ಎಲ್ಲ ಅಲ್ಲಿರುವಾಗ ನೀನು ಇಲ್ಲೇನು ಮಡ್ತಿದ್ದೀಯ?"
ಅವನ ಉತ್ತರ ನನ್ನೊಳಗೆ ಮತ್ತೊಂದು ಪ್ರೆಶ್ನೆಯನ್ನು ಹುಟ್ಟುಹಾಕಿತ್ತು.

"ಇರೋ ಮುಕ್ಕಾಲೆಕರೆ ಜಮೀನಿಗೆ ಪೂರ್ತಿ ಜೀವನವನ್ನೇ ಬರೆದುಕೊಡೋಕಾಗತ್ತಾ ಹೇಳಿ? ಇಲ್ಲೊಬ್ಬರು ಆಡಿಟರ್ ಪರಿಚಯವಾಗಿದ್ದಾರೆ. ಅವರ ಕೆಲಸಗಳಲ್ಲಿ ಚಿಕ್ಕಪುಟ್ಟದನ್ನ ನನಗೆ ಕೊಡ್ತಾರೆ. ಒಂದಿಷ್ಟು ಪುಡಿಗಾಸೂ ಬರತ್ತೆ. ಅಲ್ಲದೇ ಇಲ್ಲೇ ಬೇಗೂರಲ್ಲಿ ನನ್ನ ಪರಿಚಯದವರೊಬ್ಬರ ಹೊಸದೊಂದು ಸೀರಿಯಲ್ ನ ಶೂಟಿಂಗ್ ನಡೀತಿದೆ. ಅದಕ್ಕೆ ಸಂಭಾಷಣೆ ನಾನೇ ಬರೀತಿದೀನಿ. ಹಾಗಾಗಿಯೇ ಈ ಟೆರಾಸು, ರೂಮು ಎಲ್ಲ..."

"ಓಹ್.. ಊರಿಗೆ ಬಂದು ಆಲ್ರೌಂಡರ್ ಆಗಿದೀಯ ಅನ್ನು! ಇನ್ನೂ ಏನೇನು ಧಂಧೆ ಮಾಡ್ತೀಯಪ್ಪಾ ಸಕಲ ಕಲಾವಲ್ಲಭ?"

"ಅದೂ ಇದೂ ಅಂತ ಏನಿಲ್ಲ ಸರ್. ಪುರ್ಸೊತ್ತಿದ್ದಾಗ ಬಂದು ಬಾಗಿಲು ಬಡಿಯೋ ಯಾವ ಕೆಲಸಕ್ಕೂ ಇಲ್ಲ ಅನ್ನೋದಿಲ್ಲ. ಊರಿನಲ್ಲಿ ಗೆಳೆಯನೊಬ್ಬನ ಓಮಿನಿ ಇದೆ. ಅವನು ಬ್ಯುಸಿ ಇದ್ದಾಗ ಅದಕ್ಕೆ ನಾನೇ ಡ್ರೈವರ್. ಆಗಾಗ ಕ್ಯಾಟರಿಂಗ್ ಗೂ ಹೋಗ್ತೀನಿ... ಬಿಡಿ. ಹೇಳೋದಕ್ಕೇನು? ಹತ್ತಾರು ಕೆಲಸಗಳಿವೆ. ಆದರೆ ಪಕ್ಕಾ ಉದ್ಯೋಗ ಅನ್ನುವಂಥಾದ್ದು, ನಿಶ್ಚಿತ ಕಮಾಯಿ ಆಗುವಂಥಾದ್ದು, ಬಹು ಮುಖ್ಯವಾಗಿ ಹೆಣ್ಣು ಕೊಡಬೇಕಾದ ಮಾವಂದಿರಿಗೆ ತೋರಿಸಬಹುದಾದಂಥಾದ್ದು ಒಂದೂ ಇಲ್ಲ... ಸರಿ ಭಟ್ರೇ, ನೀವೀಗ ರೆಸ್ಟ್ ಮಾಡಿ. ನಿಮ್ಮೂರಿನ ರೂಟು ಸರಿಯಾಗಲಿಕ್ಕೆ ಏನಿಲ್ಲವೆಂದರೂ ಸಂಜೆಯಾಗುತ್ತೆ. ಮಧ್ಯಾಹ್ನ ಅರಾಮಾಗಿ ಕೂತು ಮಾತಾಡೋಣ. ನನಗೊಂದು ಚಿಕ್ಕ ಕೆಲಸ ಇದೆ. ಹನ್ನೊಂದು ಗಂಟೆಗೆಲ್ಲ ವಾಪಾಸು ಬಂದು ಬಿಡ್ತೀನಿ. ನಿನ್ನೆಯ ಊಟಕ್ಕೇ ಒಗ್ಗರಣೆ ಹಾಕಿ ಹೆಚ್ಚೂ ಕಡಿಮೆ ಚಿತ್ರಾನ್ನ ಅನ್ನಬಹುದಾಂದಂಥಾದ್ದೊಂದನ್ನು ಮಾಡಿದೀನಿ. ತಗೊಳ್ಳಿ.. ಬೇಜಾರಾದ್ರೆ ಟಿವಿ ನೋಡಿ. ಏನೂ ಅಂದ್ಕೋಬೇಡಿ.." 
ಚಿತ್ರಾನ ತುಂಬಿದ ತಟ್ಟೆಯನ್ನು ಕೈಯ್ಯಲ್ಲಿಟ್ಟು, ನಾನು ಬೇಡವೆನ್ನುವ ಮೊದಲೇ ಬಾಗಿಲಿನಾಚೆ ಮಾರೆಯಾಗಿಬಿಟ್ಟ. 

ಇವನ ಬದುಕೂ ಬಣ್ಣ ಹಚ್ಚಿಕೊಂಡ ಈ ತಂಗಳಿನಂತಾಗಿಲ್ಲ ತಾನೇ?
ಚಿತ್ರಾನ್ನದ ತಟ್ಟೆ ಹಿಡಿದುಕೊಂಡು ಯೋಚಿಸತೊಡಗಿದೆ.

                      ****************

ಮೂರೂಕಾಲು ವರ್ಷಗಳ ಕಾಲ ಒಂದೇ ಸೂರಡಿಯಲ್ಲಿ ಬಾಡಿಗೆಯ ಜೊತೆ ಲೆಕ್ಕವಿಲ್ಲದಷ್ಟು ಬೈಟೂ ಕಾಫಿಗಳನ್ನೂ, ಫುಲ್ ಪ್ಲೇಟ್ ನ ಅರ್ಧಭಾಗ ಗೋಭೀಮಂಚೂರಿಗಳನ್ನು, ತಡ ರಾತ್ರೆಗೆ ನೆನಪಿಗೆ ಬರುತ್ತಿದ್ದ ಬಾಲ್ಯದ ತಮಾಷೆಗಳನ್ನೂ, ಹೊತ್ತಲ್ಲದ ಹೊತ್ತಿನಲ್ಲಿ ಊರಿನ ನೆನಪು ತರುತ್ತಿದ್ದ ಬಡಬಡಿಕೆಗಳನ್ನೂ, ಬೆಂಗಳೂರೆಂಬ ಬೆಂಗಾಡಿನಲ್ಲಿ ಬಂದೊದಗುತ್ತಿದ್ದ ಬೇಸರ-ತಲ್ಲಣಗಳನ್ನೂ ಹಂಚಿಕೊಂಡು ಜೊತೆಗಿದ್ದ ರಿಶಿಕೇಶ್ ಒಮ್ಮೊಮ್ಮೆ ಕನ್ನಡಿಯೊಳಗಿನ ನನ್ನದೇ ಬಿಂಬದಂತೆ ಕಾಣುತ್ತಿದ್ದ. ನಾಮಫಲಕದ ಅಕ್ಷರಗಳೇ ಮಾಸಿಹೋಗಿದ್ದ ಕಾಲೇಜೊಂದರಲ್ಲಿ ಓದು ಮುಗಿಸಿ, ಕಣ್ಮುಚ್ಚಿಕೊಂಡು ತಗ್ಗಿನೆಡೆಗೆ ಹರಿಯುವ ನೀರಿನಂತೆ ಬೆಂಗಳೂರೆಡೆಗೆ ಹರಿದುಬಂದಿದ್ದ ಇವನು, ಬದುಕು-ಭವಿಷ್ಯಗಳ ಬಗ್ಗೆ ಇಂತಹದೇ ಎನ್ನುವ ಸ್ಪಷ್ಟ ಕಲ್ಪನೆಗಳಿಲ್ಲದೆ ಯಾರೋ ಕೊಡಿಸುವ ಕೆಲಸವನ್ನು ನಂಬಿ ನಡುರಾತ್ರೆಯಲ್ಲಿ ಬಸ್ಸು ಹತ್ತಿ ಬಂದಿದ್ದ ಪಕ್ಕಾ ಹಳ್ಳಿಹೈದ. ತನ್ನ ಮೊದಲ ವೇತನ ಭಡ್ತಿಯಲ್ಲಿ ಎಲ್ಲರಿಗಿಂತ ಹೆಚ್ಚಿನ 'ಹೈಕ್' ಸಿಕ್ಕಾಗಲೂ "ಎಲ್ಲರಿಗಿಂತಲೂ ನನಗೇ ಜಾಸ್ತಿ ಹೈಕ್ ಕೊಟ್ಟಿದಾರೆ. ಇನ್ನು ನನ್ನ ಟೀಮಿನವರೆಲ್ಲ ನನ್ನನ್ನು ಪರಕೀಯನಂತೆ ನೋಡ್ತಾರೆ" ಎಂದು ಪೆಚ್ಚುಮುಖ ಹಾಕಿಕೊಂಡು ನುಡಿದವನು ಮುಗ್ಧನೋ, ಪೆದ್ದನೋ, ನಟನೋ ಎಂದು ನಿರ್ಧರಿಸಲಾಗದೆ ನಕ್ಕಿದ್ದೆ‌. ಹಿಂಜರಿಕೆ, ಅತಿಯಾದ ಚಿಂತಿಸುವಿಕೆ, ನಕಾರಾತ್ಮಕ ಯೋಚನೆ, ಕೀಳರಿಮೆ, ಭಾವುಕತೆಗಳ ಅಕ್ಷಯಪಾತ್ರೆಯಂತಿದ್ದವನನ್ನು ಬೆಂಗಳೂರಿನ ರೀತಿನೀತಿಗಳಿಗೆ 'ಅಪ್ಡೇಟ್' ಮಾಡಲು ಹೆಣಗಾಡಿದ್ದ ಗೆಳೆಯರಿಗೆಲ್ಲ ಅವನ ಕಾಲಿನ ಚಪ್ಪಲಿಯನ್ನೂ ಬದಲಾಯಿಸಲು ಸಾಧ್ಯವಾಗಿರಲಿಲ್ಲ. ಆದರೆ ಹೀಗೆ ಜೋಬದ್ರನಂತೆ ಆಫೀಸಿಗೆ ಹೋಗಿಬರುತ್ತಿದ್ದವನು ಅದೊಂದು ಸಂಜೆ ಮಾತ್ರ ಕಣ್ತುಂಬಾ ಪ್ರೀತಿ ಸುರಕೊಂಡು ಮರಳಿದ್ದ.

ಜ್ಯೋತಿ!

ಆ ಎರೆಡೂವರೆ ಅಕ್ಷರದ ಹೆಸರನ್ನು ಕೇವಲ ತನ್ನ ಹೃದಯಕ್ಕೆ ಮಾತ್ರ ಕೇಳಿಸುವಂತೆ ಪಿಸುಗುಟ್ಟಿದವನ ಕಣ್ಣಲ್ಲಿ ಈಗಷ್ಟೇ ಹುಟ್ಟಿದ ಕನಸೊಂದು ನವಿರಾಗಿ ಮೈಮುರಿಯುತ್ತಿತ್ತು. 

"ಯಾರೊಂದಿಗೂ ಅಷ್ಟಾಗಿ ಬೆರೆಯಲ್ಲ. ಗಟ್ಟಿಯಾಗಿ ಒಂದೂ ಮಾತಾಡಲ್ಲ. ಪಕ್ಕಾ ಗೌರಮ್ಮ.. ನಿನಗಂತಲೇ ಹೇಳಿ ಮಾಡಿಸಿದ ಹುಡುಗಿ!"

ಗೆಳೆಯರು ಹಾಗೆಂದು ತಮಾಷೆಮಾಡಿದಾಗ ನೂರು ದೀಪಗಳು ಒಮ್ಮಗೇ ಹೊತ್ತಿಕೊಂಡಂತೆ ಫಕ್ಕನೆ ಅವನ ಕೆನ್ನೆಯಲ್ಲರಳಿದ ನಾಚಿಕೆಯ ನಗುವಿತ್ತಲ್ಲ, ಅದು ಅವನು ಹೇಳದುದ್ದೆಲ್ಲವನ್ನೂ ಹೇಳಿಬಿಟ್ಟಿತ್ತು. ಅವಳೂ ಅಷ್ಟೇ, ಮೌನದ ಗೂಡೊಳಗಿನ ಮುದ್ದುಗಿಳಿಯಂತೆ ಸದಾ ಒಬ್ಬಳೇ ಇರುತ್ತಿದ್ದವಳು ಈ ರಿಶಿಯ ಬಳಿ ಮಾತ್ರ ತನ್ನೆಲ್ಲ ನಿನ್ನೆ, ನಾಳೆಗಳ ಸಂಗತಿಗಳನ್ನು ಪಿಸುಗುಟ್ಟಿಬಿಟ್ಟಿದ್ದಳು. ಯಾರದೋ ಪ್ರಾಜೆಕ್ಟ್ ನ ಕೆಲಸಕ್ಕಾಗಿ ಸಾಲ್ಡರ್ ಮಾಡುತ್ತಾ ಕೈಸುಟ್ಟುಕೊಂಡ ಅವನ ತೋರುಬೆರಳು ತನ್ನದೇ ಎಂಬಷ್ಟು ಅಕ್ಕರೆಯಿಂದ ಮುಲಾಮು ಹಚ್ಚಿದ್ದಳು. ನಮ್ಮೆಲ್ಲರ ಮುಖ ನೋಡಿ ಮಾತಾನಾಡಲೂ ಅಂಜುತ್ತಿದ್ದವಳು ಇವನ ಜೊತೆ ಮಾತ್ರ ಭವಿತವ್ಯದ ಯಾವುದೋ ಮಧುರ ಪಯಣಕ್ಕೆ ಅಣಿಯಾದವಳಂತೆ ನಗುನಗುತ್ತಾ ರಸ್ತೆಯುದ್ದಕ್ಕೂ ನಡೆದುಬಿಡುತ್ತಿದ್ದಳು. ಉಳಿದ ಹುಡುಗ-ಹುಡುಗಿಯರಂತೆ ತಂಟೆ, ತಕರಾರು, ಗೌಜು, ಗಲಾಟೆಗಳಲ್ಲದೆ ಹೀಗೆ ಸುಮ್ಮನೆ ನಡೆದುಹೋಗುವ ಇವರಿಬ್ಬರೂ ಮುಂದೊಮ್ಮೆ ಯಾರಿಗೂ ಹೇಳದೇ ದಾರಿಯ ನಡುವೆಯೇ ಯಾವುದೋ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡು ಬಂದರೂ ಆಶ್ಚರ್ಯವಿಲ್ಲ ಎಂದು ನಾವೆಲ್ಲ ತಮಾಷೆಮಾಡಿ ಛೇಡಿಸಿದ್ದೆವು.

ರಿಶಿ ಕೆನ್ನೀರಿನಲ್ಲಿ ಮಿಂದಂತೆ ನಾಚಿದ್ದ.

                  *****************

"ಜ್ಯೋತಿ ಅಮೇರಿಕಾಗೆ ಹೋದ್ಲಂತೆ?"
ಬಿಸಿಯಾರದ ಹಾಲಿನ ಪಾತ್ರೆಯನ್ನು ಬರಿಗೈಯ್ಯಲ್ಲಿಳಿಸಲುಹೋಗಿ ಸುಟ್ಟಕೊಂಡ ತನ್ನ ಕೈಯ್ಯನ್ನು ತಣ್ಣೀರಿಗದ್ದುತ್ತಾ ಕೇಳಿದ ರಿಶಿಕೇಶ್. ಸುಟ್ಟ ಬೆರಳನ್ನು ಸವರಿಕೊಂಡವನ ಸ್ಪರ್ಷಕ್ಕೆ ಅದೆಷ್ಟು ಮಧುರ ನೆನಪುಗಳು ತಾಕಿದ್ದವೋ?

"ಕೆಲವೊಂದು ಗಾಯಗಳು ಹೊಸತಾದರೂ ನೋವು ಮಾತ್ರ ಹಳತೇ ಆಗಿರುತ್ತದೆ, ಅಲ್ವಾ ಭಟ್ರೇ? ಅದೃಷ್ಟವಂತೆ.. ಕೊನೆಗೂ ತನ್ನಿಷ್ಟದಂತೆಯೇ ಶ್ರೀಮಂತ ಹುಡುಗನನ್ನೇ ಮಾದುವೆಯಾದಳು. ಈಗ್ಲೂ ಒಮ್ಮೊಮ್ಮೆ ಅನಿಸುತ್ತೆ, ಬೆಂಗಳೂರು ಬಿಟ್ಟುಬರದೇ ಸುಮ್ಮನೆ ಕೈಲಿದ್ದ ಕೆಲಸವನ್ನೇ ಮುಂದುವರೆಸಿಕೊಂಡು ಹೋಗಿದ್ದರೆ ಇವತ್ತು ನಾನೂ ಮೊವ್ವತ್ತು-ಮೊವ್ವತೈದು ಸಾವಿರ ಸಂಬಳ ತೆಗೆದುಕೊಳ್ಳುತ್ತಿದ್ದೆನೇನೋ, ಸಿರಿವಂತನನ್ನೇ ಮದುವೆಯಾಗುತ್ತೇನೆಂದು ನನ್ನ ಪ್ರೀತಿಯನ್ನು ತಿರಸ್ಕರಿಸಿದ್ದ ಅವಳು ಆಗಲಾದರೂ ನನ್ನನ್ನು ಒಪ್ಪುತ್ತಿದ್ದಳೇನೋ ಅಂತ.."
ನಿಟ್ಟುಸಿರಿಟ್ಟು ಮುಂದುವರಿಸಿದ.

"ನಾವೇನೇ ಮಾಡಿದರೂ ಆಗಬೇಕಾದುದು ಆಗಿಯೇ ತೀರುತ್ತದೆ ಅಲ್ವಾ... ಅಂದು ನಾನು ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು ಅಂತ ಅಂದುಕೊಳ್ಳೋದೆಲ್ಲ ಆಗಿ ಹೋದ ಗಾಯವನ್ನು ಜೀವಂತವಾಗಿರಿಸಲು ನಮಗೆ ನಾವೇ ಕೊಟ್ಟುಕೊಳ್ಳುವ ಏಟುಗಳಷ್ಟೇ..." 

ಅವನೇ ಪ್ರೆಶ್ನೆ ಕೇಳಿಕೊಂಡ, ಉತ್ತರವನ್ನೂ ಕೊಟ್ಟುಕೊಂಡ. ಹೀಗೆ ಸಮಸ್ಯೆ-ಸಮಾಧಾನಗಳೆರೆಡೂ ತಿಳಿದಿದ್ದೂ ಒಗಟು ಒಗಾಟಾಗಿಯೇ ಉಳಿಯುವ ಸ್ಥಿತಿಯೇ ಬದುಕೇ? 

ಅವನು ಮುಂದುವರೆಸಿದ‌.

"ಎಷ್ಟೊಂದು ಒದ್ದಾಡುತ್ತಿದ್ವಿ ಅಲ್ವಾ ಆ ದಿನಗಳಲ್ಲಿ? ಮೊವ್ವತ್ತು ರೂಪಾಯಿಗೆ ಊಟ ಸಿಗುತ್ತೇಂತ ಮೈಲು ದೂರದ ಎಲ್ಲೈಸಿ ಕ್ಯಾಂಟೀನಿಗೆ ನಡಕೊಂಡು ಹೋಗುತ್ತಿದ್ದಿದ್ದು, ಜ್ಯೂಸ್ ಅಂಗಡೀಲಿ ಪ್ರತೀಸಲ ಬಟರ್ ಫ್ರೂಟ್ ಜ್ಯೂಸಿನ ಬೆಲೆ ವಿಚಾರಿಸಿ ನಿಂಬೆ ಶರಬತ್ತು ಕುಡಿಯುತ್ತದ್ದಿದ್ದು, ಬ್ರಾಂಡೆಡ್ ಬಟ್ಟೆ ಕಡಿಮೆ ರೇಟಿಗೆ ಸಿಗುತ್ತೇಂತ ಅದ್ಯಾವುದೋ ಬೀದಿಗೆ ಹೋಗಿ ಟೋಪಿ ಹಾಕಿಸಿಕೊಂಡು ಬಂದಿದ್ದು... ಇವೆಲ್ಲ ಆಗಾಗ ನೆನಪಾಗಿ ಒಳಗೊಳಗೇ ನಗ್ತಿರ್ತೀನಿ, ಪಕ್ಕದಲ್ಲಿರುವವರು ನನ್ನ ಹುಚ್ಚ ಅಂದುಕೊಳ್ಳುವ ಮಟ್ಟಿಗೆ! ಆದರೆ ಆರುದಿನ ಕಾದಮೇಲೆ ಒಂದು ಭಾನುವಾರ ಸಿಗುತಿದ್ದ ಆ ಬದುಕಿನ ಖುಷಿ, ಜೀವನ ಪೂರ್ತಿ ಭಾನುವಾರವೇ ಆಗಿಹೋದ ಈ ಬದುಕಿನಲ್ಲೇಕೋ ಸಿಗ್ತಿಲ್ಲ."

ವಿಷಾದವೊಂದು ಮುನ್ನಡೆಸುತ್ತಿರುವಂತಿತ್ತು ಅವನ ಮಾತು. ನಿಜ ಹೇಳಬೇಕೆಂದರೆ ಅಂದು ರಿಶಿ  ತೆಗೆದುಕೊಂಡಿದ್ದು ತುಂಬಾ ದೊಡ್ಡ ನಿರ್ಧಾರವೇ ಆಗಿತ್ತು. ಅವನೇ ಹೇಳಿದಂತೆ ಶೋಕೇಶ್ ನಂತಿರುವ ಈ ಪಟ್ಟಣದ ಬದುಕಿನ ವೈಭವಗಳಾಚೆಗೆ ಕಾಲಿರಿಸಲು ಹಲವರಿಗೆ ಪೂರ್ಣ ಜೀವಮಾನವೇ ಸಾಕಾಗುವುದಿಲ್ಲ. 'ಮಗ ಬೆಂಗಳೂರಲ್ಲಿ ದುಡಿಯುತ್ತಿದ್ದಾನೆ' ಅನ್ನೋ ಮಾತನ್ನು ಅಪ್ಪ-ಅಮ್ಮ ಊರಿನಲ್ಲಿ ಎಲ್ಲರೆದುರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವಾಗ, 'ನೋಡು ಇವನನ್ನ, ಆರೂವರೆ ಸಾವಿರ ಸಂಬಳಕ್ಕೆ ಕೆಲಸಕ್ಕೆ ಸೇರಿದವನು. ಇವತ್ತು ಮೊವ್ವತ್ತು ಸಾವಿರ ತಗೋತಿದಾನೆ' ಎಂದು ಎಷ್ಟೋ ಕಿರಿಯರಿಗೆ ನಮ್ಮನ್ನು ಮಾದರಿಯಾಗಿ ಉದಾಹರಿಸಿ ಹೊಗಳುತ್ತಿರುವಾಗ, ಏನೇ ಒದ್ದಾಟಗಳಿದ್ದರೂ ತಿಂಗಳ ಕೊನೆಗೆ ನಿಗದಿತ ಮೊತ್ತವೊಂದು ಅಕೌಂಟಿಗೆ ಬಂದು ಬೀಳುತ್ತಿರುವಾಗ, ನಾವಾಗಿ ಕೇಳದಿದ್ದರೂ ಈ ಬೆಂಗಳೂರಿನ ಬದುಕು ನಮ್ಮವರ ನಡುವೆ ನಮಗೊಂದು ಘನತೆ-ಗೌರವಗಳನ್ನು ತಂದು ಕೊಟ್ಟಿರುವಾಗ, ಪಟ್ಟಣದಲ್ಲಿ ಕೆಲಸದಲ್ಲಿಲ್ಲದ ಹುಡುಗನಿಗೆ ಯಾವುದೇ ಕಾರಣಕ್ಕೂ ಮಗಳನ್ನು ಕೊಡಬಾರದೆಂದು ಜಗತ್ತಿನ ಮಾವಂದಿರೆಲ್ಲ ಗಟ್ಟಿಯಾಗಿ ನಿರ್ಧಾರಿಸಿ ಕುಳಿತಿರುವಾಗ.. ಮನಸ್ಸಿನ ಮಾತು ಕೇಳಿ, ಅಪ್ಪ-ಅಮ್ಮನನ್ನು ನೋಯಿಸಿ, ಇರುವ ಆದಾಯ-ಗೌರವಗಳನ್ನು ಕಳೆದುಕೊಳ್ಳುವುದಾದರೂ ಹೇಗೆ? ಎನ್ನುವ ಗೊಂದಲದಲ್ಲೇ ಹಲವರ ಬದುಕು ಮುಗಿದುಹೋಗುತ್ತದೆ. 

ಇವೆಲ್ಲ ಸಂದಿಗ್ಧಗಳಾಚೆಗೂ ತನ್ನ ಅಂತರಂಗದ ಮಾತು ಕೇಳಿ ರಿಶಿ ತಪ್ಪು ಮಾಡಿದನೇ?

"ಹೀಗೆ ಹೇಳ್ತೀನಂತ ಬೇಜಾರುಮಾಡಿಕೋಬೇಡ ರಿಶಿ. ಇಲ್ಲಿಗೆ ಬರೋಕೆ ಮುಂಚೆ ನೀನು ಮಾಡಿದ್ದು ಸರಿ ಅಂತಾನೇ ನಂಬಿದ್ದೆ. ನನಗೆ ನಿಲುಕದ ನೆಮ್ಮದಿಯೊಂದು ನಿನಗೆ ದಕ್ಕಿರಬಹುದೆಂದು ನಿರೀಕ್ಷಿಸಿದ್ದೆ. ಆದರೆ ಈಗ, ಸ್ಥಿರವಾದ ಒಂದು ನೆಲೆಯಿಲ್ಲ. ಹೇಳಿಕೊಳ್ಳುವಂತಹಾ ವರಮಾನವಿಲ್ಲ. 'ಒಂದು ಮಟ್ಟದ್ದು' ಎನ್ನುವಂತಹಾ ಉದ್ಯೋಗವೂ ಇಲ್ಲ.. ಸಿಗಬಹುದಾಗಿದ್ದ ಹೆಚ್ಚಿನ ಗೌರವದ ಬದುಕೊಂದನ್ನು ನೀನು ಕಳೆದುಕೊಂಡೆಯೇನೋ ಅನಿಸ್ತಿದೆ."

ಕೊಂಚ ಹಿಂಜರಿಕೆಯಿಂದಲೇ ಹೇಳಿಮುಗಿಸಿದೆ. ಈ ಮಾತುಗಳನ್ನು ಈ ಮೊದಲೇ ಹತ್ತಾರುಬಾರಿ ಕೇಳಿದಂತೆ  ಗಾಢ ಮುಗುಳ್ನಗುವೊಂದು ಅವನ ಮುಖದಮೇಲೆ ಮೂಡಿತು.

"ಹೌದು ಭಟ್ರೇ. ಒಂದು ಕಡೆಯಿಂದ ನೋಡಿದಾಗ ನೀವು ಹೇಳಿದ್ದೆಲ್ಲ ನಿಜವೇ. ಆ ಅನುಮಾನ ನನಗೂ ಇದೆ. ಆದರೆ ನಿಮಗೆ ನನ್ನದೊಂದು ಪ್ರೆಶ್ನೆ: ನೀವು ಹೇಳಿದ ಈ ಸ್ಥಿರವಾದ ನೆಲೆ, ಹೇಳಿಕೊಳ್ಳುವಂತಹಾ ವರಮಾನ, ಒಂದು ಮಟ್ಟದ ಉದ್ಯೋಗ... ಇವೆಲ್ಲವೂ ಇರುವ ನೀವು ಖುಷಿಯಾಗಿದ್ದೀರಾ?"
ಸದ್ದಿಲ್ಲದೇ ತೂರಿದ ಬುಲೆಟ್ನಂತಿತ್ತು ಅವನ ಪ್ರೆಶ್ನೆ.

"ನಾನು ಖುಷಿಯಾಗಿದ್ದೇನಾ?"
ಈ ಬಾರಿ ನನ್ನನ್ನು ನಾನೇ ಕೇಳಿಕೊಂಡೆ.

ನಾಳೆಗಳ ಬಗೆಗಿದ್ದ ವರ್ಷಗಳ ಹಿಂದಿನ ಅದೇ ತಳಮಳ, ಇಂದಲ್ಲ ನಾಳೆ ಹಳ್ಳಿಗೆ ಮರಳುವೆನೆಂಬ ಭರವಸೆಯೊಂದಿಗೇ ಆರಂಭವಾಗುವ ಪ್ರತಿದಿನದ ಹಗಲುಗಳು, ಕಾಡುವ ನಿನ್ನೆಯ ನೆನಪುಗಳು, ಎಷ್ಟೇ ಮಾಡಿದರೂ ಇಷ್ಟವಾಗದ ಕೆಲಸ, ಬಾಸ್ ಮೇಲಿನ ಕೋಪ, ಆಗಾಗ ಕಾಡುವ ನಾನು ತೀರಾ ಏಕಾಂಗಿಯೆಂಬ ನೋವು, ಇಲ್ಲದ್ದೇನನ್ನೋ ಪಡೆದುಕೊಳ್ಳಬೇಕೆಂಬ ಒದ್ದಾಟ... ಇಂದಿಗೂ ಇವೆಲ್ಲದರ ಜೊತೆಗೇ ಬದುಕಿದ್ದೇನೆ. ಒಂದುದಿನ ಎಲ್ಲದರಿಂದ ಮುಕ್ತಿಹೊಂದುವ ಕನಸು ಕಾಣುತ್ತಲೇ ಇವೆಲ್ಲವನ್ನೂ ಮೈಮೇಲೆಳೆದುಕೊಂಡು ಸಹಿಸುತ್ತಿದ್ದೇನೆ.

"ಏಕೋ ಗೊತ್ತಿಲ್ಲ ರಿಶಿ, ಈ ಬದುಕಿನ ಬಗ್ಗೆ ಅದೊಂದು ತೀರದ ಅಸಮಾಧಾನ ಹಾಗೇ ಉಳಿದುಬಿಟ್ಟಿದೆ. ನಾನು ಮಾಡುತ್ತಿರುವ ಕೆಲಸವೊಂದನ್ನು ಬಿಟ್ಟು ಉಳಿದುದೆಲ್ಲವೂ ನೆಮ್ಮದಿಯ ಉದ್ಯೋಗಗಳಂತೆ ಕಾಣುತ್ತವೆ. ಬಿಟ್ಟುಬಂದ ಪ್ರತಿಯೊಂದು ಜಾಗದಲ್ಲೂ ಖುಷಿಯಿತ್ತು, ಈಗ ಇರುವಲ್ಲಿ ಮಾತ್ರ ಇಲ್ಲ ಎನಿಸಿ ಒದ್ದಾಡುತ್ತೇನೆ. ನೀನು ನಂಬ್ತೀಯೋ ಇಲ್ವೋ, ಆಫೀಸಿನ ಹೊರಗೆ ನಿಂತಿರೋ ಸೆಕ್ಯುರಿಟಿ ಗಾರ್ಡ್'ನ ಕೆಲಸವೇ ಎಷ್ಟು ಚೆನ್ನಾಗಿದೆ ಅಂತ ಅದೆಷ್ಟೋ ಸಲ ಯೋಚಿಸಿದ್ದೇನೆ! ಇದೆಲ್ಲವನ್ನೂ ಬಿಟ್ಟು ಊರಿಗೆ ಹೋಗಿಬಿಡಬೇಕೆಂದು ಈ ಏಳು ವರ್ಷಗಳಲ್ಲಿ  ದಿನಕ್ಕೊಮ್ಮೆಯಾದರೂ ಯೋಚಿಸಿದ್ದೇನೆ. ಆದರೆ ಎಲ್ಲಿ ಈ ಸಮಾಜದೆದುರು, ವಿರೋಧಿಗಳೆದುರು, ಆಡಿಕೊಳ್ಳುವವರೆದುರು ಸೋತುಬಿಡುತ್ತೇನೋ ಎನ್ನುವ ಭಯ ನನ್ನನ್ನು ಕಟ್ಟಿಹಾಕಿದೆ."

ಕ್ಷಣಕಾಲ ಯೋಚಿಸುವನಂತೆ ಗಂಭೀರವಾದ ರಿಶಿ ದೀರ್ಘವಾಗೊಮ್ಮೆ ಉಸಿರೆಳೆದುಕೊಂಡು ಹೇಳಲಾರಂಭಿಸಿದ.

"ಗೆಲ್ಲೋದು ಹಾಗೂ ಸೋಲೋದು- ಇದರಲ್ಲಿ ಎರೆಡು ರೀತಿಯಿದೆ ಭಟ್ರೆ. ಒಂದು ನಮ್ಮೀ ಜನರು, ಸಮಾಜಗಳೆಂಬ ಕನ್ನಡಕಗಳಿಂದ ನೋಡಿ ನಿರ್ಧರಿಸುವುದು. ಇನ್ನೊಂದು ನಮ್ಮನಮ್ಮ ಸ್ವಂತ ಕಣ್ಣಲ್ಲೇ ನೋಡಿಕೊಳ್ಳುವುದು. ಅಂದು ಮಹಾನಗರದ ಆ ಒಂಟಿ ರೂಮಿನಿಂದೆದ್ದು ಕೆಎಸ್ಸಾರ್ಟಿಸಿ ಬಸ್ಸು ಹತ್ತಿ ಬಂದಿದ್ದ ನಾನು ಇಂದೇನಾದರೂ ಹುಂಡೈ ಕಾರಿನಲ್ಲಿ ಓಡಾಡುತ್ತಿದ್ದರೆ ಜಗತ್ತಿನ ದೃಷ್ಟಿಯಲ್ಲದು ಗೆಲುವು. ಆದರೆ ನಾನು ಹೀಗೆ, ಮತ್ತದೇ ಸರ್ಕಾರೀ ಬಸ್ಸಿನಲ್ಲಿ ಅಲೆಯುತ್ತಿರುವುದರಿಂದ ನನ್ನದು ಸೋಲು! ಪರರ ಅಳತೆಗೋಲಿಗೆ ಎಟಕುವುದು ಇಷ್ಟೇ. ಇನ್ನೂ ಆಳದಲ್ಲಿರುವ ನನ್ನ-ನಿಮ್ಮಂಥವರ ವಯಕ್ತಿಕ ತಳಮಳ, ಆಸೆ, ಕನಸು, ದುಃಖ, ದುಮ್ಮಾನಗಳೆಲ್ಲ ನಮ್ಮ ಹೊರತು ಮತ್ಯಾರಿಗೂ ಕಾಣುವುದಿಲ್ಲ. ಕಂಡರೂ ಸಮಾಜದ ದೃಷ್ಟಿಯಲ್ಲಿ ಅವೆಲ್ಲ ಎಲ್ಲರೂ ಅನುಭವಿಸುವ, ದಿನನಿತ್ಯದ ಸಾಮಾನ್ಯ ಜಂಜಾಟವಷ್ಟೇ. ಆದರೆ ಎರೆಡನೆಯದಿದೆಯಲ್ಲಾ ನಮ್ಮದೇ ಕಣ್ಣು, ಅದರಲ್ಲಿ ಇವೆಲ್ಲವೂ ಬಿಂಬಗಳಾಗಿ ಕದಲುತ್ತಿವೆ. ಕ್ಷಣಕ್ಷಣಕ್ಕೂ ನೆನಪಾಗಿ, ನೋವಾಗಿ, ಪ್ರೇಮವಾಗಿ, ತುಡಿತವಾಗಿ, ಹಂಬಲವಾಗಿ ತುಂಬಿ ಹರಿಯುತ್ತಿವೆ. ನಮ್ಮ ಬದುಕನ್ನು ನಾವು ನೋಡಿಕೊಳ್ಳಬೇಕಿರುವುದು ಆ ಕಣ್ಣಿನಿಂದಲೇ. ಆದರೆ ದುರಂತವೇನು ಗೊತ್ತಾ? ನಾವು ನಮ್ಮ ಕಣ್ಣಿಗೆ ಒಂದೋ ಆ ಸಮಾಜದ ದೃಷ್ಟಿಕೋನದ ಕನ್ನಡಕವನ್ನು ತೊಟ್ಟುಕೊಳ್ಳುತ್ತೇವೆ‌. ಇಲ್ಲ, ನಾವೇನೇ ಮಾಡಿದರೂ ಸರಿಯೆಂಬ ಮೊಂಡುತನದ ಪೊರೆಯನ್ನು ಬೆಳೆಸಿಕೊಳ್ಳುತ್ತೇವೆ. ಇವೆರೆಡರ ನಡುವಿನ ಸಮಚಿತ್ತವೆಂಬ ನಿಜವಾದ ನೇತ್ರಗಳಿಂದ ನಮ್ಮೀ ಬದುಕನ್ನು ನೋಡಿಕೊಳ್ಳುವುದೇ ಇಲ್ಲ!"

"ಆದರೆ ರಿಶಿ, ನಾವು ಬೇಡವೆನ್ನುತ್ತಿರುವ ಇದೇ ಯಾಂತ್ರಿಕ ಬದುಕಿನಲ್ಲಿ ಲಕ್ಷಾಂತರ ಜನ ಬದುಕುತ್ತಿರುವಾಗ ನಾವು ಮಾತ್ರ ಹೀಗೆ ಒಂದು ಕಡೆ ಹೋದಮೇಲೆ, ಇಲ್ಲಿಗಿಂತ ಅಲ್ಲೇ ಚೆನ್ನಾಗಿತ್ತು ಅಂದುಕೊಳ್ಳುವುದು, ಇಲ್ಲದಿರುವುದೇನನ್ನೋ ನೆನೆದು ಸುಮ್ಮನೆ ಕೊರಗುವುದು, ಎಲ್ಲ ಕಡೆಯೂ ಇರಬಹುದಾದ ಚಿಕ್ಕಪುಟ್ಟ ಸವಾಲುಗಳನ್ನೇ ದೊಡ್ಡ ಸಮಸ್ಯೆಗಳೆಂಬಂತೆ ಭ್ರಮಿಸಿ ಬಿಟ್ಟುಓಡುವುದು... ಇವೆಲ್ಲ ಮನಸ್ಸಿನ ದೌರ್ಬಲ್ಯ, ಹೊಣೆಗೇಡಿತನ, ದುಡುಕಿನ ನಿರ್ಧಾರ ಅಂತ ಅನಿಸ್ತಿಲ್ವಾ ನಿನಗೆ?"

"ಇಲ್ಲ ಭಟ್ರೇ... ನನ್ನ ಪ್ರಕಾರ ಬೆಂಗಳೂರು ಬದುಕನ್ನು ಇಷ್ಟ ಎಂದು ಅಪ್ಪಿಕೊಂಡವರಿಗಿಂತ ಅನಿವಾರ್ಯ ಎಂದು ಒಪ್ಪಿಕೊಂಡವರೇ ಜಾಸ್ತಿ. ನನ್ನ-ನಿಮ್ಮ ನಿಜವಾದ ಸಮಸ್ಯೆಯೇನು ಗೊತ್ತಾ? ನಮಗೆ ಸ್ವತಂತ್ರ ಬೇಕು. ಯಾರದೋ ಮೂಗಿನ ನೇರದ ಆದೇಶಗಳಿಗೆ ಕೈಕಾಲಾಡಿಸುವ ಹಂಗಿನ ಬದುಕಿನಿಂದ ಮುಕ್ತಿ ಬೇಕು. ನಮ್ಮದೇ ಆಸಕ್ತಿಗಳು, ಅಭಿರುಚಿಗಳು, ಕನಸುಗಳು.. ಇವುಗಳ ಜೊತೆ ಒಡನಾಡಲಿಕ್ಕೆ ಒಂದಿಷ್ಟು ಖಾಸಗೀ ಸಮಯಬೇಕು. ಮನಸ್ಸು ಹೇಳಿದ ತಾಣದಲ್ಲಿ ನಿಶ್ಚಿಂತರಾಗಿ ಅಲೆದಾಡುವ ಸ್ವಚ್ಛಂದತೆ ಬೇಕು. ಹಸಿರಿನ ತೋಟ, ಗದ್ದೆ ಬದಿಯ ಕಾಲುದಾರಿ, ಹೊಳೆಯ ನೀರಿನ ತಂಪು, ಹಿತ್ತಲ ಮಲ್ಲಿಗೆಯ ಪರಿಮಳ.. ಇವೆಲ್ಲವೂ ನಮಗೆ ಬೇಕು. ಇವೆಲ್ಲವನ್ನೂ ನಾವು ನಮಗೇ ತಿಳಿಯದಂತೆ ಮಿಸ್ ಮಾಡಿಕೊಳ್ಳುತ್ತಿರುತ್ತೇವೆ. ಆದ್ದರಿಂದಲೇ ಎಷ್ಟೇ ಕಾಲ ಉಸಿರಾಡಿಕೊಂಡಿದ್ದರೂ  ಪಟ್ಟಣದ ಗಾಳಿ ನಮ್ಮುಸಿರಿನಲ್ಲಿ ಬೆರೆಯುವುದೇ ಇಲ್ಲ. ಇದು ನಮ್ಮ ಅಂತರಾಳದ ಹಂಬಲವೇ ಹೊರತು ಹೊಣೆಗೇಡಿತನವೋ, ದುರ್ಬಲ ಮನಸ್ಥಿತಿಯೋ ಖಂಡಿತಾ ಅಲ್ಲ!"

"ನಿಜ. ಆದರೆ, ಹಂಬಲಿಸಿ ಮಣ್ಣಿಗೆ ಮರಳುವವನನ್ನು ಈ ಸಮಾಜ ಸ್ವಾಗತಿಸುತ್ತದಾ? ಚುಚ್ಚು ಮಾತುಗಳಿಂದ ನೋಯಿಸುವುದಿಲ್ವ?"
ಕೊನೆಯ ಸಂದಿಗ್ಧವನ್ನು ಕೇಳಿಬಿಟ್ಟೆ.

"ನಿಮ್ಮ ಮಾತು ನಿಜ.. ಅಂದು ಆ ವಿದೇಶೀ ಕಂಪನಿಯ ಪ್ರತಿಷ್ಠಿತ ಕೆಲಸ, ಏನೇ ಆದರೂ ತಿಂಗಳ ಕೊನೆಗೆ ಜೇಬು ತುಂಬುತ್ತಿದ್ದ ಸಂಬಳ, ಐಟಿ ಉದ್ಯೋಗಿಯೆಂಬ ಗೌರವದ ಲೇಬಲ್... ಇವನ್ನೆಲ್ಲ ಕಳಚಿಟ್ಟು ಬರಿಗಾಲಿನಲ್ಲಿ ಊರಿನ ಮಣ್ಣಿನ ಮೇಲಿಟ್ಟ ಆ ಹೆಜ್ಜೆ ನನಗಿನ್ನೂ ಚೆನ್ನಾಗಿ ನೆನಪಿದೆ... ಅದನ್ನು ಎಲ್ಲರೂ ಆಡಿಕೊಂಡರು. ಸೋತ ಹೆಜ್ಜೆ ಎಂದರು. ಬಿಟ್ಟೋಡಿಬಂದ ಬರಿಗಾಲು ಎಂದರು. ಆದರೆ ಯಾಕಾಗಿ ಬಿಟ್ಟುಬಂದೆ? ದಿಕ್ಕೆಟ್ಟುಬಂದ ಆ ಪಾದದಲ್ಲಿ ಅದೆಷ್ಟು ಬೊಬ್ಬೆಗಳಿದ್ದವು? ಅದನ್ನು ಮಾತ್ರ ಯಾರೂ ಕೇಳಲೇ ಇಲ್ಲ..."

ದೀರ್ಘ ಮೌನವೊಂದು ಇಬ್ಬರನ್ನೂ ಆವರಿಸಿತು. ದೂರ ಆಕಾಶದಲ್ಲಾಗಲೇ ಸೂರ್ಯ ತನ್ನ ಅವರೋಹಣ ಯಾತ್ರೆ ಆರಂಭಿಸಿದ್ದ. ಆಗಸದಲ್ಲಿ ಅಪರೂಪಕ್ಕೆ ಎದಿರಾದ ಹಳೆಯ ಗೆಳೆಯರಂತೆ ಜೊತೆ ನಿಂತಿದ್ದ ತುಂಡು ಮೋಡಗಳೆರೆಡು ದಿಗಂತದ ಬೇರೆ ಬೇರೆ ಅಂಚುಗಳತ್ತ ಹೊರಡಲು ಅಣಿಯಾಗುತ್ತಿದ್ದವು.

"ಬಿಡಿ ಭಟ್ರೇ.. ಈ ಗೊಂದಲಗಳೆಲ್ಲ ಜೀವನದಷ್ಟೇ ನಿರಂತರ. ಬನ್ನಿ, ನನ್ನ ಕೈತೋಟ ತೋರಿಸ್ತೀನಿ"

ಯೋಚನೆಗಳೊಳಗೆ ಮುಳುಗಿ ಹೋಗಿದ್ದ ನನ್ನನ್ನು ಕೆಳಗಿನ ಮನೆಯೆದುರಿನ ಪುಟ್ಟ ತೋಟಕ್ಕೆ ಕರೆದೊಯ್ದು. ಅಲ್ಲಿ ಸಾಲಾಗಿ ಡೇರೆ, ಗುಲಾಬಿ, ದಾಸವಾಳ, ಜಿನಿಯಾಗಳ ಜೊತೆ ಟೊಮೇಟೋ, ಬದನೇಕಾಯಿ, ಬೀನ್ಸ್ ಮುಂತಾದ ಗಿಡ-ಬಳ್ಳಿಗಳೆಲ್ಲ ಹೂ, ಹಣ್ಣು, ಕಾಯಿ ಧರಿಸಿನಿಂತಿದ್ದವು.

"ಇದು ನಮ್ಮ ಓನರ್ ಜಾಗ. ಪಾಪದ ಅಜ್ಜ. ಖಾಲಿ ಜಾಗದಲ್ಲಿ ನಿಂತು ಹೂದೋಟದ ಕನಸು ಕಾಣುತ್ತಿದ್ದರು. ನನಗೀಗ ಹಚ್ಚಿಕೊಳ್ಳೋಕೆ ಯಾವ ಜ್ಯೋತಿಯೂ ಇಲ್ಲ ನೋಡಿ, ಅದಕ್ಕೆ ಇವನ್ನು ಹಚ್ಚಿಕೊಂಡೆ!  ಈ ಗಿಡವಿದೆಯಲ್ಲ, ಇದು ಬಿಳಿ ಮತ್ತೆ ಕೆಂಪು ಗುಲಾಬಿಗಳೆರಡನ್ನೂ ಕಸಿ ಮಾಡಿದ್ದು. ಹೇಗೆ ಹೂಬರುತ್ತೇಂತ ನೋಡಬೇಕು. ಕಳೆದ ಸಲ ತುಂಬಾ ಡೇರೆಗಳು ಹುಟ್ಕೊಂಡಿದ್ವು, ಈ ಸಲ ಯಾಕೋ ಅಷ್ಟು ಇಲ್ಲ..." ರಿಶಿ ಹೇಳುತ್ತಲೇ ಇದ್ದ. 

ಯೋಚಿಸತೊಡಗಿದೆ: ಗಟ್ಟಿಯಾಗಿ ಎರೆಡು ಮಾತನಾಡಲೂ ಅಂಜುತ್ತಿದ್ದ. ಬಾಸ್ ಹೆಸರಿನಲ್ಲಿ ಫೋನ್ ರಿಂಗಾದಾಗೆಲ್ಲ ಬೆಚ್ಚಿಬೀಳುತ್ತಿದ್ದ. ತನ್ನಿಷ್ಟದ ಕೆಲಸಗಳನ್ನು ಮಾಡಲು ಸಮಯವೇ ಇಲ್ಲವೆಂದು ದೂರುತ್ತಿದ್ದ. ತಮಟೆಯ ಸದ್ದಿಗೆ ಕುಣಿಯಬೇಕೆನ್ನುತ್ತಿದ್ದ.  ತಿರಸ್ಕರಿಸಿಹೋದ ತನ್ನ ಹುಡುಗಿಯ ದಾರಿಯಲ್ಲಿ ಗಂಟೆಗಟ್ಟಲೆ ನಿಂತುಕಾಯುತ್ತಿದ್ದ. ಇಂದಲ್ಲ ನಾಳೆ ಅದ್ಯಾವುದೋ ಪವಾಡ ಜರುಗಿ ಅವಳು ತನ್ನನ್ನು ಒಪ್ಪಿಯೇ ಒಪ್ಪುತ್ತಾಳೆಂದು ಹಗಲುಗನಸು ಕಾಣುತ್ತಿದ್ದ. ಅವಳು ಮೆಚ್ಚುವಂತಹಾ ಲಕ್ಷಾಧಿಪತಿಯಾಗುತ್ತೇನೆಂದು ಕಂಪನಿಯಿಂದ ಕಂಪನಿಗೆ ಜಿಗಿದಿದ್ದ.

ಕೊನೆಗೊಂದು ದಿನ ಅದ್ಯಾವುದೋ ದಿವ್ಯ ನೆಮ್ಮದಿಯನ್ನರಸಿ ಈ ಎಲ್ಲಾ ಒದ್ದಾಟಗಳಿಗೂ ವಿದಾಯ ಹೇಳಿ ಎದ್ದು ನಡೆದಿದ್ದ...

ಅಸಮಾಧಾನದ ಅಪ್ಪ, ನೆನಪಾಗಿ ಉಳಿದುಹೋದ ಜ್ಯೋತಿ, ನಾಳೆ ಮತ್ತೆ ಸಿಕ್ಕೀತೆಂಬ ಖಾತ್ರಿಯಿಲ್ಲದ ಆದರೆ ಯಾವ ಗೋಡೆಗಳ ನಡುವಿನ ಬಂಧನಕ್ಕೂ ಒಳಪಡದ ಈ ಸ್ವಚ್ಛಂದ ಕಾಯಕ, ಆದಾಯ, ಪರಕೀಯತೆಗಳ ಹಂಗಿಲ್ಲದೆ ಯಾರದೋ ಜಾಗದಲ್ಲಿ ಇವನು ಅರಳಿಸಿಕೊಂಡಿರುವ ಈ ಹೂದೋಟ... 

ರಿಶಿ ಗೆದ್ದನಾ, ಸೋತನಾ? 

ಮತ್ತದೇ ಕಗ್ಗಂಟು ಬಿಗಿದುಕೊಳ್ಳುತ್ತಿದ್ದ ಹೊತ್ತಿಗೆ ನಮ್ಮೆದುರಿನ ಬೀದಿಯಲ್ಲಿ ಯಾವುದೋ ದೇವರ ಮೆರವಣಿಗೆಯೊಂದು ಸಾಗಿಬಂತು. ಅದರ ಎದುರಲ್ಲಿ ತಲೆಗೆ ಬಣ್ಣದ ಟೇಪು ಕಟ್ಟಿಕೊಂಡು ಕುಣಿಯುತ್ತಿದ್ದ ಯುವಕರ ಗುಂಪಿನ ನಡುವಿನಿಂದ ಇಬ್ಬರು ನಮ್ಮತ್ತ ನೋಡಿ ರಿಶಿಗೆ ಬಾ ಎಂಬಂತೆ ಕೈ ಬೀಸಿದರು. ರಿಶಿ ಪಕ್ಕದಲ್ಲಿದ್ದ ನನ್ನನ್ನು ತೋರಿಸಿ ಆಗುವುದಿಲ್ಲವೆಂಬಂತೆ ತಲೆಯಾಡಿಸಿದ. ಅವನ ಇಶಾರೆ ಕಂಡರೂ ಕಾಣದಂತೆ ಒಳಬಂದ ಅವರು ನೋಡನೋಡುತ್ತಿದ್ದಂತೆಯೇ ರಿಶಿಯ ಕೈಹಿಡಿದು ಮೆರವಣಿಗೆಯತ್ತ ಎಳೆದೊಯ್ದೇಬಿಟ್ಟರು.

ರಿಶಿ ಕುಣಿದ.. ಮೊದಲ ಬಾರಿಗೆ ಅಂಗಳಕ್ಕಿಳಿದ ಕರುವಿನಂತೆ.. ಬೋನು ಮುರಿದುಕೊಂಡು ಬಾನಿಗೇರಿದ ಸ್ವಚ್ಛಂದ ಹಕ್ಕಿಯಂತೆ.. ಏಳೇಳು ಜನ್ಮಗಳ ಕನಸೊಂದನ್ನು ನನಸಾಗಿಸಿಕೊಂಡ ಪ್ರೇಮಿಯಂತೆ.. ತನ್ನ ಬದುಕಿನ ಸಂಭ್ರಮವೆಲ್ಲ ತಮಟೆಯ ಸದ್ದಾಗಿ ಹೊಮ್ಮುತ್ತಿದೆಯೇನೋ ಎಂಬಂತೆ... ಬದುಕಿನ ಬೇಸರಗಳನ್ನೆಲ್ಲ ನೆಲದಾಳಕ್ಕೆ ಅದುಮಿಬಿಡುವವನಂತೆ... ರಿಶಿ ಕುಣಿದೇ ಕುಣಿದ.

ಸ್ವಚ್ಛಂದ ಆಗಸದಲ್ಲಿ ಹಾರುತ್ತಿದ್ದ ಹಕ್ಕಿಯೊಂದು ತನ್ನದೇ ಹಾಡು ಹಾಡಿಕೊಳ್ಳುತ್ತಿತ್ತು.

ನೋಡುತ್ತಾ ನಿಂತಿದ್ದ ನನ್ನ ಮನವೇಕೋ ತುಂಬಿಬಂತು. ರೂಮಿಗೆ ಮರಳಿ ಬ್ಯಾಗು ಏರಿಸಿಕೊಂಡು ಮೆಟ್ಟಿಲಿಳಿದೆ. ರಿಶಿ ನನ್ನನ್ನು ಬೀಳ್ಕೊಡಲು ಬಸ್ಸು ನಿಲ್ದಾಣದ ತನಕ ಬಂದ. 

"ಹೊರಟೇ ಬಿಟ್ರ ಭಟ್ರೆ? ಇತ್ತೀಚೆಗೇಕೋ ಗೊತ್ತಿಲ್ಲ, ಬಂದವರೆಲ್ಲ ಜೊತೆಗೇ ಇರಬೇಕು ಅನಿಸುತ್ತದೆ.. ಹಹ.. ಹೋದವರು ಹೋಗಿಯೇ ಬಿಡಬೇಡಿ. ಟಚ್ಚಲ್ಲಿರಿ..."

ನಗುವಿಗಿಂತ ಹೆಚ್ಚಿನದೇನೋ ಆಗಿದ್ದ ನಗು ನಕ್ಕು ಕೈಕುಲುಕಿದವನನ್ನು ಮೆಲ್ಲಗೆ ತಬ್ಬಿಕೊಂಡೆ. ಬಾಯ್ ಎಂದು ಕೈ ಬೀಸಿ ನಡೆದವನು ಈಗ ಮೆರವಣಿಗೆ ಮುಗಿದಿರಬಹುದಾದ ಬೀದಿಯ ಅದೇ ಒಂಟಿ ಕೋಣೆಯತ್ತ ನಡೆಯುತ್ತಾ, ನಿಲ್ದಾಣದೊಳಗಿನ ಜನಜಂಗುಳಿಯಲ್ಲಿ ಬೆರೆತುಹೋದ. 

('ನಿಮ್ಮೆಲ್ಲರ ಮಾನಸ'ಲ್ಲಿ ಪ್ರಕಟಿತ)

ಭಾನುವಾರ, ಆಗಸ್ಟ್ 11, 2019

ಅನಂತ ನಿಲಯ



"ಸೋರುತಿಹುದು ಮನೆಯ ಮಾಳಿಗೀ..."

ನೆಲದ ಮೇಲೆ ನೀರು ಸೋರುತ್ತಿರುವಲ್ಲೆಲ್ಲಾ ಪಾತ್ರೆಗಳನ್ನಿಡುತ್ತಾ ಅಮ್ಮ ಹಾಡುತ್ತಿದ್ದ ಹಾಡಿಗೆ ಸೋರುವ ಮಾಡಿನಿಂದ ಬೀಳುತ್ತಿದ್ದ ಹನಿಗಳು ತಾಳಹಾಕುತ್ತಿದ್ದವು. ಅಪ್ಪ ಕೈಯ್ಯಲ್ಲೊಂದು ಉದ್ದದ ಬಿದಿರುಕೋಲು ಹಿಡಿದು ಹಂಚುಗಳನ್ನು ಎತ್ತೆತ್ತಿ ಸರಿಯಾಗಿ ಕೂರಿಸುತ್ತಾ ಸೋರುವುದನ್ನು ಸರಿಪಡಿಸಲು ಯತ್ನಿಸುತ್ತಿದ್ದ. ಕಿಟಕಿಯ ಬಾಗಿಲನ್ನು ಕೊಂಚವೇ ಸರಿಸಿದ ವಿಶು ಹೊರಗೆ ಅಂಗಳದತ್ತ ನೋಡಿದ. ಅಲ್ಲಿ ಕಣ್ಣಿರುವುದೇ ಸುಳ್ಳೇನೋ ಎಂಬಷ್ಟು ಗಾಢ ಕತ್ತಲೆ... ಹಿಂದಿನಿಂದ ಧೋ ಎನ್ನುವ ಮಳೆಹನಿಗಳ ಆರ್ಭಟ. ಭಯವೆನ್ನಿಸಿ ಬಾಗಿಲು ಮುಚ್ಚಿದ. ಕರೆಂಟಿಲ್ಲದ ಕೋಣೆಯ ಹೊಸಿಲಿನಲ್ಲಿಟ್ಟಿದ್ದ ಸೀಮೆ ಎಣ್ಣೆ ಬುಡ್ಡಿದೀಪ ಗಾಳಿ ಹೇಳಿದಂತೆ ಕುಣಿಯುತ್ತಿತ್ತು. ವಿಶು ಕೋಣೆಯ ನಡುವಿಟ್ಟಿದ್ದ ಮಾಡಿನಿಂದ ಸೋರಿದ ನೀರಿನಿಂದಾಗಿ ಅರ್ಧ ತುಂಬಿದ್ದ ಪಾತ್ರೆಯೊಳಗೆ ಮೆಲ್ಲಗೆ ಕೈಯ್ಯಾಡಿಸಿದ. ಅದು ಫ್ರಿಜ್ಜಿನಲ್ಲಿಟ್ಟಂತೆ ತಣ್ಣಗಿತ್ತು. ನಿಮಿಷಗಳು ಜಾರಿದವು.

"ಜಾಸ್ತಿ ಮಾತಾಡ್ಬೇಡ ನೀನು!"

ಅಡಿಗೆ ಮನೆಯ ಕತ್ತಲಿಂದ ಅಚಾನಕ್ಕಾಗಿ ನುಗ್ಗಿಬಂದ ಗುಡುಗು ಧ್ವನಿಗೆ ವಿಶು ಬೆಚ್ಚಿಬಿದ್ದ.

"ಹೇಳಿದ ಕೂಡ್ಲೇ ಮನೆ ಕಟ್ಟೋಕೆ ಇಲ್ಲಿ ಅಜ್ಜನ ದೀಸ್ಯಾರು ಮಾಡಿಟ್ಟಿರೋ ಗಂಟಿಲ್ಲ ಗೊತ್ತಾಯ್ತಾ? ಅಷ್ಟಿದ್ದಿದ್ರೆ ಯಾರಾದ್ರೂ ದುಡ್ಡಿರೋ ಶ್ರೀಮಂತನ್ನೇ ಮದುವೆ ಆಗ್ಬೇಕಿತ್ತು. ಯಾರಾದ್ರೂ ಕಾಲು ಹಿಡಿದಿದ್ರ ನಿಂಗೆ ನನ್ನೇ ಮದುವೆ ಆಗೂ ಅಂತ?"
ಕತ್ತಲು ಕಾರುತ್ತಾ ನಿಂತಿದ್ದ ಬಾಗಿಲಿನಿಂದ ಧಡಬಡ ಹೆಜ್ಜೆಗಳನ್ನಿಡುತ್ತಾ ಹೊರಬಂದ ಅಪ್ಪ ಧಡಾಲನೆ ಮಲಗುವ ಕೋಣೆಯ ಬಾಗಿಲು ತೆಗೆದ ಸದ್ದೂ, ಅಡುಗೆ ಮನೆಯಲ್ಲಿ ಅಮ್ಮ ಬಿಕ್ಕಿದ ಸದ್ದೂ ಒಟ್ಟಿಗೇ ವಿಶಾಲನ ಕಿವಿಯನ್ನು ಹೊಕ್ಕವು. ಕಣ್ಕಟ್ಟಿದ್ದ ಕತ್ತಲಿನೊಳಗೆ ತಡಕುತ್ತಾ ಅಡಿಗೆ ಮನೆಯೊಳಕ್ಕೆ ನಡೆದ. ಅಲ್ಲಿ ಚಿಮಣಿ ಬುಡ್ಡಿಯ ಬಳಕಲ್ಲಿ ಅವನಿಗೆ ಕಂಡಿದ್ದು ಒಂದು ಕಡೆ ಅಪ್ಪ ಉಂಡೆದ್ದು ಹೋದ ಬಾಳೇಲೆ, ಅದರೆದುರು ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಾ ನಿಂತಿರುವ ಅಮ್ಮ...

"ಏನಾಯ್ತಮ್ಮಾ?"

ಅಮ್ಮ ಉತ್ತರಿಸಲಿಲ್ಲ. ಸೆರಗಿನಿಂದ ಮತ್ತೊಮ್ಮೆ ಕಣ್ಣೊರೆಸಿಕೊಂಡವಳು ಸ್ಟ್ಯಾಂಡಿನಿಂದ ಪುಟ್ಟ ತಟ್ಟೆಯನ್ನು ತೆಗೆದು ನೆಲದಮೇಲಿರಿಸುತ್ತಾ ಹೇಳಿದಳು:

"ಬೇಗಬೇಗ ಊಟ ಮಾಡು. ಕರೆಂಟಿನ್ನು ಬರಲ್ಲ!"


'ಪಚಕ್!'

ಮಾಡಿನಿಂದ ಸೋರಿದ ಹನಿಯೊಂದಕ್ಕೆ ಸಿಕ್ಕ ಚಿಮಣಿ ಬುಡ್ಡಿ ಆರಿಹೋಯಿತು. ಕೋಣೆಯ ತುಂಬಾ ತುಂಬಿಕೊಂಡ ಕತ್ತಲ ಹಿನ್ನೆಲೆಯಲ್ಲಿ ಹೊರಗೆ ಸುರಿಯುತ್ತಿದ್ದ ಮಳೆಗಾಳಿಯ ಸದ್ದು ಇನ್ನಷ್ಟು ಭಯಾನಕವಾಗಿ ಕೇಳತೊಡಗಿತು.

"ಅಮ್ಮಾ....."
ವಿಶು ಭಯದಿಂದ ಕರೆದ.


"ಏಳ್ಬೇಡ, ಅಲ್ಲೇ ಕೂತಿರು. ದೀಪ ಹಚ್ತೀನಿ"

ಕತ್ತಲ ಮರೆಯಿಂದ ಅಮ್ಮನ ದನಿ ಅಭಯ ಹೇಳಿತು. ನಂತರ ಅಮ್ಮ ನಡೆದದ್ದೂ, ಬೆಂಕಿ ಪೊಟ್ಟಣಕ್ಕಾಗಿ ತಡಕುವಾಗ ಅವಳ ಕೈಬಳೆ ಘಲಗುಟ್ಟಿದ್ದೂ, ಅವಳು ಗೀರಿದಾಗ ಥಂಡಿ ಹಿಡಿದ ಬೆಂಕಿಕಡ್ಡಿಗಳೆರೆಡು ಕೊರ್ ಕೊರ್ ಎಂದು ಆರಿಹೋದದ್ದೂ ಶಬ್ದಗಳಾಗಿ ಅವನ ಕಿವಿ ತಲುಪಿದವು. ಕೊನೆಗೂ ಹೊತ್ತಿಕೊಂಡ ಮೂರನೇ ಕಡ್ಡಿಯಲ್ಲಿ ಬುಡ್ಡಿಹಚ್ಚಿದ ಅಮ್ಮ ಆಚೆಕಡೆ ನೆಲದ ಮೇಲಿಟ್ಟಿದ್ದ ಪಾತ್ರೆಯನ್ನು ತಂದು ಹೊಸತಾಗಿ ಸೋರುತ್ತಿರುವಲ್ಲಿಟ್ಟು ಅಪ್ಪ ಉಂಡ ಬಾಳೇಲೆ ಎತ್ತಿಕೊಂಡು ಹೊರನಡೆದಳು. ಬಗ್ಗಿ ಪಾತ್ರೆಯನ್ನು ನೆಲದ ಮೇಲಿರಿಸುವಾಗ ಅವಳ ಕಣ್ಣ ಹನಿಗಳೆರೆಡು ಜಾರಿ ಪಾತ್ರೆಗೆ ಬಿದ್ದಿದ್ದು ಬುಡ್ಡಿಯ ಬೆಳಕಲ್ಲಿ ವಿಶಾಲನಿಗೆ ಸ್ಪಷ್ಟವಾಗಿಯೇ ಕಂಡಿತು. ಎದುರಿರುವ ಆ ಪಾತ್ರೆಯೊಳಕ್ಕೆ ಮತ್ತೊಮ್ಮೆ ಕೈಯ್ಯದ್ದಿದ.
ಅದರ ನೀರೀಗ ಕೊಂಚ ಬೆಚ್ಚಗಾದಂತೆನಿಸಿತು.

                       *****************

"ಇದು ನಮ್ ಅಪ್ಪಯ್ಯ ಕಟ್ಸಿದ್ ಮನಿ ಆಚಾರ್ರೇ. ಅದ್ಕೇ ಇದ್ರ ಮೇಲೆ ಪಾಸಿ ಜಾಸ್ತಿ. ನಾವಿರೋತಂಕ ಈ ಮನಿ ಕೆಡ್ಗೋ ಮಾತೇ ಇಲ್ಲೆ. ಮುಂದೆ ಮಕ್ಳ ಕಾಲಕ್ಕೆ ಕಂಡ್ಕಂಡ್ರಾಯ್ತ್.... ಏನಂತ್ರೀ ಅಚಾರ್ರೇ"

ಕುಂದಾಪುರದ ಆಚಾರಿಗೆ ಅಪ್ಪ ಹೇಳುತ್ತಿದ್ದ ಮಾತುಕೇಳಿದ ಅಮ್ಮ ಮಲಗಿದಲ್ಲೇ ಸಣ್ಣಗೆ ಗೊಣಗಿಕೊಂಡಳು. ರಾತ್ರೆಯಿಡೀ ಸುರಿದಿದ್ದ ಮಳೆ ಮಧ್ಯಾಹ್ನದ ಹೊತ್ತಿಗೆ ಸಣ್ಣ ವಿರಾಮ ತೆಗೆದುಕೊಂಡ ಬೆನ್ನಲ್ಲೇ ಸೋರುತ್ತಿದ್ದ ಮಾಡನ್ನು ಸರಿಪಡಿಸಲೆಂದು ಅಪ್ಪ ಆಚಾರಿಯನ್ನು ಕರೆಸಿದ್ದ. "ತೇಪೆ ಹಾಕೋದೇ ಆಗೋಯ್ತು ಜೀವನಾ ಎಲ್ಲಾ" ಎಂಬ ಅಮ್ಮನ ಗೊಣಗನ್ನ ಕೇಳಿಯೂ ಕೇಳದಂತೆ ಅಪ್ಪ ಕೆಲಸ ಆರಂಭಿಸಿದ್ದ. "ಊಟ ಬ್ಯಾಡ ಅಮ್ಮ" ಎಂದು ಹಲ್ಕಿರಿದ ಆಚಾರಿಗೊಂದು ಲೋಟ ಕಾಫಿ ಮಾಡಿಕೊಟ್ಟುಬಂದ ಅಮ್ಮ ಮಧ್ಯಾಹ್ನದ ನಿದ್ರೆಗೆಂದು ಹಾಸಿದ ಹಾಸಿಗೆಯ ಮೇಲೆ ವಿಶಾಲನೂ ಒರಗಿಕೊಂಡ. ಹೊರಗೆ ಆಚಾರಿಯೊಂದಿಗೆ ಅಪ್ಪ ಆಡುತ್ತಿದ್ದ ಒಂದೊಂದು ಮಾತಿಗೂ ಇಲ್ಲಿ ಅಮ್ಮ ಅಸಮಾಧಾನದ ನಿಟ್ಟುಸಿರಿಡುತ್ತಿದ್ದಳು.


"ಅಪ್ಪ ನಿನ್ನೆ ನಿಂಗೆ ಯಾಕೆ ಬಯ್ದಿದ್ದು ಅಮ್ಮಾ?"
ಅಮ್ಮ ಉತ್ತರಿಸಲಿಲ್ಲ.


"ಮನೆ ಕಟ್ಸು ಅಂತ ಹೇಳಿದ್ಕೇ ಬೈದ್ನ ಅಪ್ಪ?"
ಉತ್ತರವನ್ನೇ ಪ್ರೆಶ್ನೆಯಾಗಿಸಿ ಕೇಳಿದ ಮಗನಿಗೆ ಹೇಳಲು ಅವಳ ಬಳಿ ಉತ್ತರಗಳಿರಲಿಲ್ಲ, ಕನಸುಗಳಿದ್ದವು!


"ನೀನು ದೊಡ್ಡೋನಾದ ಮೇಲೆ ಇಂಜಿನಿಯರ್ ಆಗ್ಬೇಕು ವಿಶು. ನಿನ್ನ ಮಾವ ಕಟ್ಸಿದಾನಲ, ಅಂಥಾದ್ದೇ ಮನೆ ಕಟ್ಸ್ಬೇಕು!"

"ಶಂಕ್ರು ಮಾವ ಕಟ್ಸಿದಾನಲ ಆರ್ಸೀಸಿ ಮನೆ... ಅದೇ ಥರಾನ ಅಮ್ಮ?"

"ಹುಂ ಪುಟ್ಟೂ. ನಮ್ಗೊಂದು ಕೋಣೆ, ನಿನಗೊಂದು ಕೋಣೆ, ಬಂದೋರಿಗೆ ಉಳಿಯೋಕೆ ಒಂದು ಕೋಣೆ. ಕೋಣೆಕೋಣೆಗೂ ಫ್ಯಾನು.."

ವರಲೆ ತಿಂದು ಲಡ್ಡು ಹಿಡಿದಿದ್ದ ಮಾಡನ್ನೇ ದಿಟ್ಟಿಸುತ್ತಾ ಅಮ್ಮ ಹೇಳುತ್ತಾ ಹೋದಳು. ಅವಳ ಕನಸಿನ ಮಾಲಿಕೆಯನ್ನ ಮಧ್ಯದಲ್ಲಿ ತುಂಡರಿಸುವಂತೆ ವಿಶು ಕೇಳಿದ:
"ಮನಗೆ ಏನಂತ ಹೆಸರಿಡೋದು ಅಮ್ಮ?"

ಅವಳು ಯಾವುದೋ ಯೋಚನೆಗೆ ಜಾರಿದಂತೆ ಅರೆಕ್ಷಣ ಮೌನವಾದಳು. ನೆನಪಿನಾಳದಿಂದ ಆಯ್ದ ನೋವೊಂದು ಅವಳ ತುಟಿಯಲ್ಲಿ ಹೆಸರಾಗಿ ಹೊರಬಂತು:

"ಅನಂತ ನಿಲಯ!"

"ಹಂಗಂದ್ರೆ ಯಾರು?"

"ನಿನ್ನ ಅಣ್ಣ ವಿಶು"

"ಅಣ್ಣನಾ!?" ಅಚ್ಚರಿ ಆನಂದಗಳಿಂದ ಅವನ ಪುಟ್ಟ ಕಣ್ಣು ಇಷ್ಟಗಲಕ್ಕೆ ಅರಳಿತು.

"ಎಲ್ಲಿದಾನೆ ಅಮ್ಮ ನನ್ ಅಣ್ಣ?"


"ದೇವರ ಹತ್ರ...."

ಹಳೆಯ ನಕ್ಷತ್ರವೊಂದು ಅವಳ ಕಣ್ಣಂಚಲ್ಲಿ ಕರಗಿನಿಂತಿತ್ತು.


                        ****************

"ಹೌದು ವಿಶಾಲ್... ನನಗೆ ದುಡ್ಡಿರೋ ಹುಡುಗನ್ನೇ ಮದುವೆ ಆಗಬೇಕಂತ ಆಸೆ. ಈ ಪ್ರೀತಿ ಗೀತಿ ಎಲ್ಲಾನೂ ಮರೆತುಬಿಡಿ ಪ್ಲೀಸ್. ನೀವು ಮರೆಯದಿದ್ರೂ ನನ್ನ ನನ್ ಪಾಡಿಗೆ ಬಿಟ್ಬಿಡಿ. ಹರಕು ಮನೆಯಲ್ಲಿ ಮುರುಕು ಗೋಡೆಗಳನ್ನ ತೊಳೆಯೋ-ಬಳಿಯೋ ಬದುಕು ನನಗೆ ಇಷ್ಟವಿಲ್ಲ!"

ಅವಳು ಹಾಗೆಂದು ಹೇಳಿ ನಡುಬೀದಿಯಲ್ಲವನನ್ನು ಬಿಟ್ಟುಹೋದ ದಿನವೇ ಊರಿನಲ್ಲಿ ಮನೆಯ ಹೊರಕೋಣೆಯೊಂದರ ಗೋಡೆ ಕುಸಿದು ಬಿದ್ದಿತ್ತು... ಥೇಟ್ ಅವನ ಹೃದಯದಂತೆ. ರಾತ್ರೋರಾತ್ರಿ ಬಸ್ಸು ಹತ್ತಿ ಊರಿಗೆ ಬಂದಿಳಿದು ಮನೆಯಂಗಳಕ್ಕೆ ಕಾಲಿಟ್ಟವನನ್ನು ಒಳಗಿನಿಂದ ತೇಲಿಬಂದ ಸಂಭಾಷಣೆ ಸ್ವಾಗತಿಸಿತು:

"ಮಗ ಬೆಂಗ್ಳೂರಗೆ ಕೆಲ್ಸಕ್ಕಿದ್ದ. ಮತ್ತೆಂತ ಯೋಚ್ನೆ ಮಾಡ್ತ್ರಿ ಚಂದ್ರಯ್ಯ? ಮಳಿಗಾಲ ಮುಗೀತಿದ್ಹಂಗೆ ಮನೆ ಕಟ್ಟೂಕ್ ಶುರು ಮಾಡ್ಬಿಡಿ"

ಅದು ಗೋಪಾಲಾಚಾರಿಯ ಧ್ವನಿ.


"ಬೆಂಗ್ಳೂರಲ್ ಕೆಲ್ಸ ಮಾಡೋರೆಲ್ಲ ಇಂಜಿನಿಯರಲ್ಲ ಗೋಪಾಲ. ಅವ್ನಿಗೆ ಬರೋದೇ ಹದ್ಮೂರೋ ಹದ್ನಾಕೋ ಸಾವ್ರ ಸಂಬ್ಳ. ತಿಂಗ್ಳಿಗೆ ಎರೆಡು ಸಾವ್ರ ಉಳಿದ್ರೆ ಹೆಚ್ಚು. ಅಷ್ಟ್ರಲ್ಲಿ ಅವ್ನ ಖರ್ಚು ನೋಡ್ಕೋತಾನಾ, ತಂಗಿ ಮದುವೆ ಮಾಡ್ತಾನಾ, ಮನೆ ಕಟ್ತಾನಾ... ಯಾವ್ದು ಮಾಡ್ತಾನೆ ಪಾಪ? ನಮ್ ಕಥೆ ನೋಡಿದ್ರೆ ಹಿಂಗೆ...."
ಅಮ್ಮ ಅಲವತ್ತುಕೊಂಡಳು.


"ಅಷ್ಟೇ ಬಪ್ಪುದಾ ಮಾರ್ರೆ? ಆ ಚಂದಕ್ ಅಷ್ಟ್ ದೂರ ಎಂತಕ್ ಹ್ವಾದ್ದು? ಊರಾಗೇ ಎಂತರ್ ಕೆಲ್ಸ ಮಾಡ್ಕಂಡ್ ಇರ್ಲಕ್ಕಿದ್ದೀತಲೆ. ಬಾಡ್ಗೆ-ಊಟದ್ ಖರ್ಚಾರೂ ಉಳೀತಿತ್ತು"

ತನ್ನ ಬದುಕಿನ ಕಠೋರ ಸತ್ಯಗಳ ತಾಪ ಸೋಕಿ ಹೊಸಿಲ ದಾಟಿ ಒಳಗಡಿಯಿಡುತ್ತಿದ್ದವನ ಹೆಜ್ಜೆ ಸಣ್ಣಗೆ ಅದುರಿತು. ಅವರ ಯಾವ ಮಾತನ್ನೂ ಕೇಳಿಸಿಕೊಳ್ಳದವನಂತೆ ಮುಗುಳ್ನಗೆಯೊಂದಿಗೆ ಒಳಹೊಕ್ಕು ನೇರ ನಡುಮನೆಯ ಗೋಡೆಯತ್ತ ನಡೆದ. ಅಲ್ಲಿ ವಾಸ್ತವವೇ ಮೈದಾಳಿ ಮಲಗಿರುವಂತೆ ಚೂರುಚೂರಾಗಿ ಚದುರಿಬಿದ್ದಿತ್ತು.... ಎಪ್ಪತ್ತು ವರ್ಷದ ಹಿಂದೆ ಕಟ್ಟಿದ್ದ ಮಣ್ಣಿನ ಗೋಡೆ.

ಅಪ್ಪ ಎಂದಿನಂತೆ ಈ ದುರ್ದೈವಕ್ಕೆ ತನ್ನ ಬಡ ಜೀವನದ 'ಇಲ್ಲ'ಗಳನ್ನು ಹೊಣೆ ಮಾಡಿ ಸುಮ್ಮನಾದ. ಅಮ್ಮ ನಾಲ್ಕುಹನಿ ಕಣ್ಣೀರು ಸುರಿಸಿ ತಣ್ಣಗಾದಳು. ತಂಗಿ-ತಮ್ಮನನ್ನು ಅವರ ಕಾಲೇಜಿನ ಬಸ್ಸು ಕೊಂಡೊಯ್ದಿತು. ಕೊನೆಗೆ ಅಡಿಕೆ ದಬ್ಬೆಗಳಿಂದ ತೇಪೆ ಕಟ್ಟಿದ ತಾತ್ಕಾಲಿಕ ಗೋಡೆಯೆದುರು ಉಳಿದು ಹೋದವನು ವಿಶಾಲನೊಬ್ಬನೇ.

"ಹರಕು ಮನೆಯಲ್ಲಿ ಮುರುಕು ಗೋಡೆಗಳನ್ನ ತೊಳೆಯೋ-ಬಳಿಯೋ ಬದುಕು ನನಗೆ ಇಷ್ಟವಿಲ್ಲ ವಿಶಾಲ್!"

ಅವಳಾಡಿದ ಮಾತು ಅವನ ಕಿವಿಯಲ್ಲಿ ಗುಂಯ್ಗಟ್ಟಿತು. ನೋವಿನ ನೆನಪಿನೊಂದಿಗೆ ತುಂಬಿಬಂದ ಕಣ್ಣಿಂದ ಕಟ್ಟಕಡೆಯ ಕಂಬನಿಯ ಹನಿ ಜಾರಿಹೋಗುವ ಹೊತ್ತಿಗಾಗಲೇ ಅವನು ನಿರ್ಧರಿಸಿಬಿಟ್ಟಿದ್ದ:


"ನನಾಗದ ಈ ಅವಮಾನ ನನ್ನ ತಮ್ಮ-ತಂಗಿಗೆ ಆಗಲು ಖಂಡಿತಾ ಬಿಡಲಾರೆ!"

ಹಾಗೆಂದು ನಿರ್ಧರಿಸಿದ ಮರುಕ್ಷಣವೇ ಅವನು ಹೊರಟಿದ್ದು ನೇರ ಗೋಪಾಲಾಚಾರಿಯ ಮನೆಗೆ. ಮನೆಯೆದುರಿನ ಗುಡ್ಡ ಹತ್ತಿಳಿದು, ಕೆರೆಯಗುಂಟ ಕಾಲುದಾರಿಯಲ್ಲಿ ಸಾಗಿ ಅವನ ಮನೆಯಂಗಳ ತಲುಪುವ ಹೊತ್ತಿಗೆ ಸೂರ್ಯ ಪಶ್ಚಿಮದ ಹಾದಿ ಹಿಡಿದಿದ್ದ. ಕಡುಗೆಂಪು ಕಿರಣಗಳ ಹಿನ್ನೆಲೆಯಲ್ಲಿ ಪುಟ್ಟ ಅರಮನೆಯಂತೆ ಕಾಣುತ್ತಿತ್ತು- ಕೆಲವೇ ತಿಂಗಳ ಹಿಂದೆ ಕಟ್ಟಿದ್ದ ಗೋಪಾಲಾಚಾರಿಯ ಆರ್ಸೀಸಿ ಮನೆ. ನಾಲ್ಕನೇ ಕ್ಲಾಸು ಪಾಸಾಗದ ಗೋಪಾಲಾಚಾರಿಯೇ ಇಷ್ಟು ದೊಡ್ಡ ಮನೆ ಕಟ್ಟಿರುವಾಗ ಎಂಬಿಎ ಓದಿರುವ ನನಗೇಕೆ ಇದು ಸಾಧ್ಯವಾಗುತ್ತಿಲ್ಲ? ಶಿಕ್ಷಣವೇ ನನ್ನ ಸಾಮರ್ಥ್ಯವನ್ನು ಕಟ್ಟಿಹಾಕಿದೆಯಾ? ಹಾಗೆಂದು ಯೋಚಿಸುತ್ತರುವಾಗ ಬಾಯ್ತುಂಬಾ ಎಲೆಯಡಿಕೆ ತುಂಬಿಕೊಂಡ ಗೋಪಾಲಾಚಾರಿ ವರಾಂಡಾದಲ್ಲಿ ಪ್ರತ್ಯಕ್ಷನಾದ.

"ನೀವೆಂತದೇ ಹೇಳಿ ವಿಶಾಲಯ್ಯ, ನಿಮ್ಮಪ್ಪಯ್ಯಂದು ಚುರ್ಕು ಸಾಲ್ದು!"
ನಾಲ್ಕು ಹಣ್ಣುಗಳಿರುವ ಬಾಳೆಗೊನೆಯ ಚಿಪ್ಪನ್ನು ವಿಶಾಲನೆದುರು ಟೀಪಾಯಿಯ ಮೇಲಿರಿಸುತ್ತಾ ನುಡಿದ ಗೋಪಾಲಾಚಾರಿ.


"ಇರೋ ಮುಕ್ಕಾಲೆಕ್ರೆ ತ್ವಾಟ್ದಂಗೆ ಅಡ್ಕೆ ಮರ ಒಂದ್ ಬಿಟ್ಟು ಮತ್ತೆಂತದೂ ಇಪ್ಪುಕಾಗ! ಪಾಪ ಆ ಅಮ್ಮ ಆಸೆಯಿಂದ ಏಲಕ್ಕಿ, ಲವಂಗ, ಮೆಣಸನಿನ್ ಬಳ್ಳಿ, ನಿಂಬೆ ಎಂತ ನೆಟ್ರೂ ಕಿತ್ ಒಗೀತ್ರು ನಿಮ್ ಅಪ್ಪಯ್ಯ. ಈ ಕಾಲ್ದಂಗೆ ಬರೀ ಒಂದನ್ನೇ ನಂಬ್ಕಂಡ್ರೆ ಹೆಂಗ್ ಬದ್ಕುಕಾತ್ ನೀವೇ ಹೇಳಿ"

"ಅವರ ಕಾಲ ಹೆಂಗೋ ನಡೀತು ಗೋಪಾಲಣ್ಣ. ಅಷ್ಟಕ್ಕೂ ಎಲ್ಲದಕ್ಕೂ ಅವ್ರನ್ನೇ ದೂರೋದು ತಪ್ಪು. ಇಪ್ಪತ್ತು ವರ್ಷ ಮನೇಲೆ ಇದ್ರೂ ದೊಡ್ಡ ಮಗನಾದ ನಾನು ತೋಟದ ಕಡೆ ಸರಿಯಾಗಿ ಕಾಲೇ ಹಾಕ್ಲೀಲ. ಇತ್ಲಗೆ ಇಂಜಿನಿಯರಿಂಗೋ, ಮತ್ತೆಂತದೋ ಮಾಡಿ ದೊಡ್ಡ ಸಂಬಳದ ಕೆಲಸ ತಂಗೊಂಡ್ನಾ ಅಂದ್ರೆ ಅದೂ ಇಲ್ಲ. ಸಿಕ್ಕ ಕೆಲ್ಸದಲ್ಲೂ ನಾಲ್ಕು ಕಾಸು ಉಳಿಸ್ಲೀಲ.... ಅದೆಲ್ಲ ಈಗ ಮುಗ್ದೋದ ಕಥೆ. ಅದು ಹಂಗಾಯ್ತು, ಇದು ಹಿಂಗಾಯ್ತು ಅಂತ ಕೂತ್ರೆ ನಾನೂ ಮತ್ತೊಬ್ಬ ಚಂದ್ರಶೇಖರ ಆಗ್ತೀನಿ ಅಷ್ಟೇ. ಈಗ ಇರೋದನ್ನೇ ಬಳಸ್ಕೊಂಡು ಹಾಳಾಗಿರೋದ್ನೆಲ್ಲಾ ಹೆಂಗೆ ಸರಿಮಾಡೋದಂತ ಯೋಚ್ನೆ ಮಾಡ್ಬೇಕು"
ವಿಶಾಲ ಗಂಭೀರವಾಗಿ ಹೇಳಿದ.


"ಚಿನ್ದಂತಾ ಮಾತಂದ್ರಿ ವಿಶಾಲಯ್ಯ. ಆದ್ರೆ ಮನೆ ಕಟ್ಟದು ಅಷ್ಟ್ ಸುಲ್ಭಕ್ಕಿಲ್ಲೆ. ನಾಗೋಣಿ ಸುರೇಶ್ ಗೌಡ್ರಿಗೆ ಐವತ್ ಲಕ್ಷ ಖರ್ಚಾಯ್ತಂಬ್ರು. ಕಲ್ಲೋಣಿ ಅಣ್ಣು ಹಾಂಡ್ರು ಮೊವತೈದು ಖರ್ಚ್ ಮಾಡ್ದ್ರಂಬ್ರು. ಎಲ್ಲ ಅವ್ರವ್ರ ಶಕ್ತೀಗ್ ತಕ್ಕಂಗೆ..."

"ನಿಮ್ಮನೆಗೆ ಎಷ್ಟು ಬಿತ್ತು ಗೋಪಾಲಣ್ಣ?"
ವಿಶಾಲ ಮಧ್ಯೆ ಬಾಯಿ ಹಾಕಿದ.


"ನಂಗೂ ಇಪ್ಪತ್ಹತ್ರ ಖರ್ಚಾಯ್ತ್ ಮರ್ರೆ. ಮರ್ಗೆಲ್ಸ ಎಲ್ಲ ನಾನೇ ನೋಡ್ಕಂಡೆ. ಮಕ್ಳಿಬ್ರೂ ಗಾರೆ ಮಾಡುವರೆ ಆಯಿದ್ಕೆ ಅದೊಂದ್ ಸುಲ್ಭ ಆಯಿತ್. ಗುತ್ತಿರೋರತ್ರನೇ ತರ್ಸಿದ್ಕೆ ಕಬ್ಣದ್ ಖರ್ಚೂ ಸ್ವಲ್ಪ ಚೀಪೇ ಆಯ್ತ್...."
ಮನೆಯೊಂದನ್ನು ಕಟ್ಟುವುದಕ್ಕೆ ಕೇವಲ ನೆಲ ಮಾತ್ರವಲ್ಲ, ಸ್ನೇಹ, ಸಂಬಂಧ, ಸಂಪರ್ಕಗಳೂ ಗಟ್ಟಿಯಾಗಿರಬೇಕು ಅಂದುಕೊಂಡ ವಿಶಾಲ ಅಲ್ಲಿಂದ ಹೊರಟ. ಅವನ ಕನಸಿನ ಮನೆಯ ಪಾಯಕ್ಕೆ ಮೊದಲ ಕಲ್ಲು ಈಗಷ್ಟೇ ದೊರಕಿತ್ತು.

                         ****************

"ಮನೆ ಕಟ್ಬಣಾಂತಿದೀನಿ ಅಮ್ಮ..."

ವಿಶಾಲ ಹಾಗೆಂದಾಗ ಅಮ್ಮನಿಗಾದ ಆಶ್ಚರ್ಯ, ಸಂತೋಷಕ್ಕೆ ಅವಳ ಕಣ್ಣು ಕತ್ತಲಲ್ಲೂ ಹೊಳೆಯಿತು.


"ಇನ್ನೂ ಎಷ್ಟು ದಿನಾಂತ ಹೀಗೆ ಮುರಿದು ಬಿದ್ದಿದ್ದನ್ನೇ ಎತ್ತೆತ್ತಿ ನಿಲ್ಸೋದು? ಆಗಿದ್ದಾಗ್ಲಿ, ಈ ವರ್ಷ ಮಳೆಗಾಲ ಮುಗೀತಿದ್ಹಂಗೆ ಪಾಯ ಹಾಕ್ಸೇಬಿಡ್ಬೇಕು!"

"ಹೌದು ವಿಶೂ. ಹತ್ರಿಂದ ಹನ್ನೆರ್ಡು ಲಕ್ಷಕ್ಕೆಲ್ಲ ಒಳ್ಳೆ ಮನೆ ಕಟ್ಬೋದು. ಮೇಲಿನ್ಮನೆ ಪದ್ಮಿನಿ ಕಟ್ಸಿದ್ಳಲ್ಲಾ, ಅಂಥಾದ್ದು!"
ಅವಳ ದನಿಯ ತುಂಬಾ ಹೊಸ ಉತ್ಸಾಹ.


"ಅಪ್ಪ ಎಷ್ಟು ಕೊಡ್ತಾರೆ ಅಮ್ಮ?"
ಥಟ್ಟನೆ ವಿಶಾಲ ಮುಖ್ಯ ವಿಷಯಕ್ಕೆ ಬಂದಾಗ ಇಷ್ಟುಹೊತ್ತು ನಕ್ಷತ್ರವಾಗಿದ್ದ ಅಮ್ಮನ ಕಣ್ಣು ಕಳೆಗುಂದಿತು.


"ಕೊಡೋಕೆ ಏನಿದೆ ಹೇಳು ವಿಶು? ತುಂಡೆಕ್ರೆ ತೋಟ್ದಲ್ಲಿ ಬೆಳ್ದಿದ್ದು ಊಟಕ್ಕೇ ಸಾಕಾಗತ್ತೆ....."


"ತೋಟದ ಮೇಲೆ ಬ್ಯಾಂಕಲ್ಲಿ ಸಾಲ ಕೊಡಲ್ವಾ?"

"ಎಲ್ಲಿಂದ ಕೊಡ್ತಾರೆ? ಈಗಾಗ್ಲೇ ಎರೆಡೂವರೆ ಲಕ್ಷ ಬೆಳೆಸಾಲ ಇದೆ ಅದ್ರ ಮೇಲೆ...  ಕಳೆದ್ಸಲ ಗವರ್ಮೆಂಟೋರು ನೆಟ್ಟಗೆ ಬಡ್ಡೀ ಕಟ್ದೆ ಓಡಾಡ್ತಿದ್ದೋರದ್ದೆಲ್ಲ ಪೂರ್ತಿ ಸಾಲಮನ್ನ ಮಾಡಿದ್ರು. ತಿಂಗ್ಳು ತಿಂಗ್ಳು ತಪ್ದೇ ಕಂತು ಕಟ್ತಿದ್ದ ನಮ್ದು ಮನ್ನಾ ಆಗಿದ್ದು ಬರೀ ಏಳ್ನೂರೈವತ್ತು ರೂಪಾಯಿ! ಈಗ ಮತ್ತೆ ಆ ಕಡೆ ಏನಾದ್ರೂ ಹೋದ್ರೆ ಬಾಕಿ ಕಟ್ಟಿ ಅಂತ ಹಿಡ್ಕೋತಾರೆ..."

ಉತ್ತರ ತೀರಾ ನಿರೀಕ್ಷಿಸಿದ್ದೇ ಆದರೂ ತುಂಬಾ ನಿರಾಸೆಯಾಯಿತು ವಿಶಾಲನಿಗೆ. ಅವನ ಉತ್ಸಾಹ ಬತ್ತಿದ್ದು ಕಂಡ ಅಮ್ಮ ಏನೋ ಹೊಳೆದವಳಂತೆ ಥಟ್ಟನೆ ಎದ್ದುಹೋದಳು. ನಿಮಿಷಗಳ ನಂತರ ದೇವರ ಮನೆಯ ದೀಪದ ಬೆಳಕಿನೊಳಗಿನಿಂದ ನಡೆದುಬಂದವಳ ಕೈಯ್ಯಲ್ಲಿ ಪುಟ್ಟ ಬಟ್ಟೆಯ ಗಂಟೊಂದಿತ್ತು.

"ಇದನ್ನ ತಗೋ ವಿಶು... ಅರವತ್ತು ಸಾವಿರ ಇದೆ ಇದ್ರಲ್ಲಿ.  ಯಾವ್ದಾರೂ ಒಂದು ಖರ್ಚಿಗೆ ಆಗತ್ತೆ"

"ಇದೆಲ್ಲಿತ್ತಮ್ಮ?"

"ನಿಮ್ಮಪ್ಪಂಗೆ ದುಡ್ಡು ಉಳ್ಸೋದೇ ಗೊತ್ತಿಲ್ಲ. ಅದ್ಕೆ ನಾನೇ ಮೊದ್ಲಿಂದನೂ ತುಪ್ಪ, ಹಪ್ಳ, ಉಪ್ಪಿನ್ಕಾಯಿ, ಮೆಣಸು ಮಾರಿದ ದುಡ್ಡನ್ನ ಸ್ವಲ್ಪಸ್ವಲ್ಪ ಎತ್ತಿಡ್ತಿದ್ದೆ, ವೈಶು ಮದುವೇಗೆ ಬೇಕಾಗುತ್ತೆ ಅಂತ! ತೀರ ಬಡವರ ಥರಾ ಮದುವೆ ಮಾಡಿದ್ರೆ ಸೇರಿದ ಮನೇಲಿ ಅವ್ಳಿಗೆ ಬೆಲೆ ಇರಲ್ಲ ನೋಡು. ಹಾಂ... ಇದ್ರ ಜೊತೆಗೆ ಒಂದೆಳೆಯ ಸರಾನೂ ಇದೆ, ಅಪ್ಪಯ್ಯ ನನ್ ಮದುವೇಲಿ ಕೊಟ್ಟಿದ್ದು. ಹಳೇದು... ಒಂದು ಹತ್ತಿಪ್ಪತ್ ಸಾವ್ರ ಬರ್ಬೋದೇನೋ.. ತಗೋ ಇದನ್ನ"

ವಿಶಾಲನ ಕಣ್ಣು ತುಂಬಿ ಬಂತು. ಎಷ್ಟೊಂದು ಕನಸುಗಳಿವೆ ಈ ತಾಯಿಯೊಳಗೆ... ತನ್ನ ಸಂಸಾರದ ಬಗ್ಗೆ, ಮಕ್ಕಳ ಬಗ್ಗೆ, ಮನೆಯ ಬಗ್ಗೆ. ಮುಗಿಯದ ಬಡತನ, ಕಳೆಯದ ಕಷ್ಟಗಳ ನಡುವೆಯೇ ತನ್ನವರಿಗೆಂದು ಪುಟ್ಟ ಅಳಿಲಿನಂತೆ ಕನಸುಗಳನ್ನು ಕೂಡಿಡುತ್ತಿದ್ದಾಳೆ... ತಾನು ಹರಕು ಚಾಪೆಯಲ್ಲಿ ಮಲಗಿದರೂ ತನ್ನ ಮಕ್ಕಳು ಸುಖದ ಸುಪ್ಪತ್ತಿಗೆಯಲ್ಲಿರಲೆಂಬ ಕನಸು ಕಾಣುತ್ತಾಳೆ...

"ಏ... ಮರೆತೇ ಬಿಟ್ಟಿದ್ದೆ! ಈಗ ಬಡವ್ರಿಗೆಲ್ಲ ಸ್ವಂತ ಮನೆ ಆಗ್ಬೇಕೂಂತ ಸರ್ಕಾರ ಅದೆಷ್ಟೋ ಹಣ ಕೊಡ್ತಿದ್ಯಂತೆ ವಿಶು... ಗ್ರಾಮಪಂಚಾಯ್ತಿ ಸವಿತಾನ ಕೇಳಿದ್ರೆ ಗೊತ್ತಾಗತ್ತೆ. ನಾಳೇನೇ ಕೇಳ್ತೀನಿ ತಡಿ!"

ಗಂಟನ್ನು ಅವನ ಕೈಯ್ಯಲ್ಲಿಟ್ಟು ಅಷ್ಟು ದೂರ ನಡೆದವಳು ಏನೋ ಹೊಳದಂತೆ ಥಟ್ಟನೆ ತಿರುಗಿ ಹೇಳಿದಳು. ತನ್ನ ಕನಸಿನ ದೀಪಕ್ಕೆ ಬಿದ್ದ ಮತ್ತೊಂದು ಬೊಗಸೆ ಎಣ್ಣೆಯಿಂದಾಗಿ ವಿಶಾಲನ ಕಣ್ಣು ದೇದೀಪ್ಯವಾಯಿತು.


                      **************

"ನಿಮ್ ಜಾತಿಯವರಿಗೆ ಯಾವ ಸ್ಕೀಮೂ ಇಲ್ವಲ್ಲ ಸೀತಮ್ಮಾ..."
ಮೂರನೇ ಬಾರಿಗೆ ಸರ್ಕಾರದ ಅದೇಶಗಳಿರುವ ಕಡತಗಳನ್ನು ಪರೀಕ್ಷಿಸಿದ ಸವಿತಾ ತನ್ನೆದುರಿನ ಖುರ್ಚಿಯಲ್ಲಿ ನೂರು ನಿರೀಕ್ಷೆಗಳನ್ನು ಕಣ್ಣಲ್ಲೇ ತುಂಬಿಕೊಂಡಂತೆ ಕುಳಿತಿರುವ ಸೀತಮ್ಮನಿಗೆ ಕನಿಕರದಿಂದ ಹೇಳಿದಳು.


"ಅದೇನೋ ಜಾನುವಾರು ಕೊಟ್ಗೆ ಕಟ್ಟೋಕೆ ಐವತ್ತು ಸಾವ್ರ ಕೊಡ್ತಾರಂತಲ್ಲಾ... ಅದಾದ್ರೂ ಇದೆಯಾ ನೋಡು"

"ಇಲ್ಲ ಸೀತಮ್ಮ. ಅದು ಹಳೆಯ ಗವರ್ಮೆಂಟಿನೋರು ಮಾಡಿದ್ದ ರೂಲ್ಸು. ಈಗಿನವ್ರು ಅದನ್ನ ತೆಗೆದಾಕಿದಾರೆ"

ಮುಖ ಚಿಕ್ಕದು ಮಾಡಿಕೊಂಡು ಗ್ರಾಮಪಂಚಾಯ್ತಿ ಆಫೀಸಿನಿಂದ ಹೊರಬಂದಳು ಸೀತಮ್ಮ. ಮನೆ ಕಟ್ಟುತ್ತೇನೆಂದ ಮಗನಿಗೆ ಚಿಕ್ಕ ಸಿಹಿಸುದ್ದಿಯನ್ನೂ ಕೊಡಲಾಗದ ಬೇಸರ ಅವಳ ಮುಖದತುಂಬಾ ಬೆವರಾಗಿ ಹರಿಯತೊಡಗಿತು.

"ಯಾರ ಭಿಕ್ಷೆಯೂ ನಮಗೆ ಬೇಕಾಗಿಲ್ಲ ಬಿಡಮ್ಮ. ನಾವು ಮಧ್ಯಮವರ್ಗದವರು. ಅವರಿಗೆ ಓಟು ಹಾಕಲಿಕ್ಕಲ್ಲದೆ ಮತ್ಯಾವುದಕ್ಕೂ ಉಪಯೋಗಕ್ಕೆ ಬಾರದವರು. ಅವರ ಸ್ಕೀಮು, ರೂಲ್ಸುಗಳನ್ನ ಅವರೇ ಇಟ್ಕೊಳ್ಳಿ. ನಾವು ನಮ್ಮ ಬೆವರಿನಿಂದಾನೇ ಮನೆ ಕಟ್ಟೋಣ!"

ವಿಶಾಲನ ಆವೇಶದ ಧ್ವನಿಯಲ್ಲಿದ್ದ ನಿರಾಸೆಯ ಎಳೆ ಸೀತಮ್ಮನಿಗೆ ಮಾತ್ರ ಅರ್ಥವಾಯಿತು.

                        ***************

"ಮೂರು ಬೆಡ್ರೂಮ್. ನಮಗೆ ಒಂದು, ಶಶಿಗೆ ಇನ್ನೊಂದು, ಮುಂದೆ ಮದುವೆ ಆದ್ಮೇಲೆ ನೀನು, ವೈಶು ಅಥವಾ ಇನ್ಯಾರಾದ್ರೂ ನೆಂಟ್ರು ಬಂದಾಗ ಇರೋಕೆ ಮತ್ತೊಂದು. ಎರೆಡು ಸ್ವಲ್ಪ ದೊಡ್ಡದಿರ್ಬೇಕು. ಇನ್ನೊಂದು ಚಿಕ್ಕದಾದ್ರೂ ಪರ್ವಾಗಿಲ್ಲ. ಈಗ ಜಗುಲಿ ಇರುವಲ್ಲಿ ಹಾಲ್ ಬರತ್ತೆ. ಅದರ ತುದೀಲಿ ದೇವರ ಕೋಣೆ. ಅದೇನೂ ಅಷ್ಟೊಂದು ದೊಡ್ಡ ಬೇಡ ಬಿಡು. ಅದ್ರ ಮುಂದ್ಗಡೆ ಕಿಚನ್. ಎಡಗಡೆ ಸಾಲಾಗಿ ಮೂರು ರೂಮು. ಬಾತ್ ರೂಮು, ಟಾಯ್ಲೆಟ್ಟು ಎಲ್ಲಾ ಹಿಂದ್ಗಡೆ. ಅಂಗಳದ ಆಚೆಗೆ ಸ್ವಲ್ಪ ಜಾಗ ಉಳಿಯತ್ತಲ್ಲಾ ಅಲ್ಲೊಂದು ಪುಟ್ಟ ಹಿತ್ಲು ಮಾಡ್ಬೋದು...."

ಇನ್ನಷ್ಟೇ ಕಟ್ಟಬೇಕಿರುವ ಮನೆಯ ನೀಲಿನಕ್ಷೆ ಅಮ್ಮನ ಮನದಲ್ಲಿ ಎಂದಿನಿಂದಲೋ ತಯಾರಿತ್ತು. ವಿಶಾಲನ ಜೊತೆಗೆ ಮಾತ್ರವಲ್ಲದೇ ಗೋಪಾಲಾಚಾರಿಯ ಜೊತೆಗೆ, ಪಕ್ಕದ ಮನೆಯ ಸುಬ್ಬಲಕ್ಷ್ಮಿಯ ಜೊತೆಗೆ, ಕೊನೆಗೆ ದರುಗು ತರುವ ರತ್ನನ ಜೊತೆಗೂ ಇದನ್ನೇ ಚರ್ಚಿಸುತ್ತಿದ್ದಳು. ಅವಳ ಆಸಕ್ತಿ, ಉತ್ಸಾಹಗಳನ್ನು ನೋಡಿದ ವಿಶಾಲ ಮನದಲ್ಲೇ ಬೇಡಿಕೊಂಡ:

"ಅಮ್ಮನ ಈ ಸಂಭ್ರಮ ಸುಳ್ಳಾಗದಿರಲಿ ದೇವರೇ!"

ಮುರಿದ ಗೋಡೆಗೆ ತೇಪೆಹಾಕಿ ಬೆಂಗಳೂರಿಗೆ ಮರಳಿದ ದಿನದಿಂದ ಅವನು ಗಂಭೀರನಾಗಿದ್ದ. ಅಮ್ಮನ ಮುಗ್ಧ ಮನದೊಳಗೆ ಕನಸೊಂದನ್ನು ತುಂಬಿ ಬಂದಿದ್ದನಲ್ಲಾ, ಆ ಕನಸು ಅವನನ್ನು ನಿದ್ರಿಸಗೊಡಲಿಲ್ಲ. ಆದಾಯ ಹೆಚ್ಚದೇ ಹೋದರೆ ಖರ್ಚುನ್ನೇ ಕಡಿಮೆ ಮಾಡಬೇಕು ಎಂಬ ನಿಯಮವನ್ನು ತನಗೆ ತಾನೇ ಹೇರಿಕೊಂಡ. ನಾಲ್ಕು ಸಾವಿರ ಕೀಳುವ ಆರ್ಸೀಸಿ ರೂಮನ್ನು ತೊರೆದು ಎರಡೂವರೆ ಸಾವಿರದ ಶೀಟ್ ಛಾವಣಿಯ ಕೋಣೆ ಹಿಡಿದ. ಕೋಣೆಯಲ್ಲೇ ಗಂಜಿ ಬೇಯಿಸಿಕೊಂಡು ಬೆಳಗಿನ ತಿಂಡಿ, ರಾತ್ರೆಯ ಊಟಗಳಿಗೆ ಸಮಾಧಾನ ಹೇಳಿದ. ಬೈಕು ಬೇಕು, ಲ್ಯಾಪ್ ಟಾಪ್ ಬೇಕು ಎನ್ನುವ ತನ್ನ ಅಸೆಗಳನ್ನೆಲ್ಲಾ ಕಷ್ಟಪಟ್ಟು ಕಟ್ಟಿ ಅಟ್ಟಕ್ಕೆಸೆದ. ಹಳೆಯ ಬಟ್ಟೆ ತೊಳೆಯುವಾಗ ಹರಿಯದಂತೆ ಮೆಲ್ಲಗೆ ಉಜ್ಜತೊಡಗಿದ. ಉಳಿತಾಯವೆನ್ನುವ ಮಂತ್ರವನ್ನು ಉಸಿರಾಟದಷ್ಟೇ ನಿರಂತರವಾಗಿ ಉಚ್ಛರಿಸತೊಡಗಿದವನಿಗೆ ಚೆನ್ನಾಗಿ ಗೊತ್ತಿತ್ತು, ತಾನಿಂದು ಉಳಿಸುವ ಒಂದೊಂದು ಪೈಸೆಯೂ ಮುಂದೊಂದು ದಿನ ತನ್ನ ಕನಸಿನ ಮನೆಯ ಒಂದೊಂದು ಇಟ್ಟಿಗೆಯಾಗಲಿದೆ! ಸ್ವಂತದ ಸೂರೆಂಬ ಆ ದಿವ್ಯ ಸ್ವಪ್ನದೆದುರು ಉಳಿದ ಬಯಕೆಗಳೆಲ್ಲ ತೃಣದಂತೆ ಕಾಣುತೊಡಗಿದವು ವಿಶಾಲನಿಗೆ. ಆತ್ಮೀಯರೆನಿಸಿದ ಪ್ರತಿಯೊಬ್ಬರ ಜೊತೆಯೂ ತನ್ನ ಕನಸನ್ನು ಹೇಳಿಕೊಂಡು ಅವರ ಸಲಹೆ ಪಡೆಯತೊಡಗಿದ. ಒಬ್ಬೊಬ್ಬರ ಮನೆ ಒಂದೊಂದು ರೀತಿಯಿತ್ತು:
"ಕಟ್ಟೋದು ಕಟ್ತೀಯ, ಚೆನ್ನಾಗೇ ಕಟ್ಟು. ಮೊವತ್ತು ಲಕ್ಷ ಖರ್ಚಾದ್ರೂ ಪರವಾಗಿಲ್ಲ. ಬ್ಯಾಂಕಲ್ಲಿ ಲೋನ್ ಕೊಡ್ತಾರೆ. ತಿಂಗ್ಳಾ ತಿಂಗ್ಳಾ ಕಟ್ಗೊಂಡ್ ಹೋಗ್ಬೋದು" ಎಂದ ಇಂಜಿನಿಯರ್ ಗೆಳೆಯ.

"ಈ ಅರ್ಸೀಸಿ ಎಲ್ಲ ನಿಮ್ಮ ಮಲ್ನಾಡಿನ ಮಳೆನ ತಡಿಯಲ್ಲರೀ. ಶಿಸ್ತಾಗಿ ಹಂಚಿನ ಮನೆ ಕಟ್ಟಿ. ಹೇಗೂ ನಿಮ್ಕಡೆ ಈ ನಾಟ, ಪಕಾಸಿ ಎಲ್ಲ ಚೀಪಾಗಿ ಸಿಗ್ತಾವೆ ಅಲ್ವಾ" ಎಂಬುದು ಸಹೋದ್ಯೋಗಿಯ ಸಲಹೆ.

"ಸಾಲ ಮಾಡಿ ಊರಲ್ಲೆಲ್ಲಾ ಯಾಕೆ ಮನೆ ಕಟ್ತೀರ್ರೀ? ಇಲ್ಲೇ ಆಫೀಸಿಗೆ ಹತ್ರದ ಏರಿಯಾದಲ್ಲೇ ಯಾವ್ದಾದ್ರೂ ಫ್ಲಾಟ್ ತಗೊಂಡು ಫ್ಯಾಮಿಲಿನ ಇಲ್ಲಿಗೇ ಕರ್ಸ್ಕೊಂಡ್ಬಿಡಿ" ಎಂದರು ಆಫೀಸಿನ ಬಾಸ್.

"ಒಂದೇ ಸಲಕ್ಕೆ ಮನೆ ಕಟ್ಟುಕಾತಿಲ್ಲೆ. ದುಡ್ಡಿದ್ಹಂಗೂ ಅಷ್ಟಷ್ಟೇ ಮರ್ಳು, ಜಲ್ಲಿಕಲ್ಲು, ಕಬ್ಣ, ಟೈಲ್ಸು ಎಲ್ಲ ತಂದ್ಹಾಕ್ಕಣಿ. ಆಮೆಲ್ ಸುಲ್ಭ ಆತ್" ಎಂದವನು ಗೋಪಾಲಾಚಾರಿ.

"ನೋಡು ತಮ್ಮಾ, ಈಗಿನ ಕಾಲ್ದಲ್ಲಿ ಯಾರನ್ನೂ ನಂಬೋಕಾಗಲ್ಲ. ಹುಟ್ತಾ ಅಣ್ಣ-ತಮ್ಮ, ಬೆಳೀತಾ ದಾಯಾದಿಗಳು ಅಂತ ಗಾದೇನೇ ಇದೆ. ಮುಂದೆ ಮೇಲ್ಗಡೆ ಕಟ್ಗೊಂತಾ ಹೋಗೋಕೆ ಅನುಕೂಲ ಇರೋಹಾಗೆ ಟೆರಾಸ್ ಮನೇನೆ ಕಟ್ಟು. ಇವತ್ತಲ್ಲಾ ನಾಳೆ ಅಣ್ಣ-ತಮ್ಮನ್ ಮಧ್ಯ ಒಂದು ಮಾತು ಬಂದೇ ಬರತ್ತೆ. ಆಗ ಇಷ್ಟೆಲ್ಲಾ ಖರ್ಚು ಮಾಡಿ ಕಟ್ಟಿರೋ ಮನೆ ಬಿಟ್ಟು ಖಾಲಿ ಕೈಲಿ ಹೋಗೋಹಂಗಾಗ್ಬಾರ್ದು ನೋಡು...." ಎಂದು ಹೆದರಿಸಿದವಳು ದೊಡ್ಡತ್ತೆ.

ತಲೆಗೊಂದು ಸಲಹೆ, ವ್ಯಕ್ತಿಗೊಂದು ಐಡಿಯಾ, ಮಾತಿಗೊಂದು ವಾಸ್ತು... ಇವೆಲ್ಲದರ ನಡುವೆ ತನ್ನ ಕನಸಿನ ಮನೆ ಯಾವುದೆಂದು ನಿರ್ಧರಿಸಲು ವಿಶಾಲನಿಗೆ ಕೊಂಚ ಕಷ್ಟವೇ ಆಯಿತು. ಹಳೆಯದೊಂದು ಆರ್ಡಿ, ಸರ್ಕಾರದವರು ಕಡ್ಡಾಯವಾಗಿ ಉಳಿಸಿಕೊಟ್ಟ ಪಿಎಫ್, ಗೆಳೆಯ ವಾಪಾಸು ಕೊಟ್ಟಿದ್ದು, ಅತ್ತೆ ಬಲವಂತವಾಗಿ ಕಟ್ಟಿಸಿಕೊಂಡ ಚೀಟಿ ಹಣ, ಹೊಟ್ಟೆಬಟ್ಟೆ ಕಟ್ಟಿ  ಉಳಿಸಿದ್ದು... ಹೀಗೆ ಆರು ತಿಂಗಳು ಕಳೆಯುವಷ್ಟರಲ್ಲಿ ಸುಮಾರು ಎರೆಡೂಮುಕ್ಕಾಲು ಲಕ್ಷ ಹಣ ಬೇರೆಬೇರೆ ಮೂಲೆಗಳಲ್ಲಿ ನಿಂತು ಅವನ ಮನೆಯ ಕನಸಿಗೆ ಕಂಬಗಳಾದವು. ಅವನ ಸಂಬಳದ ರಶೀತಿ, ಬ್ಯಾಂಕ್ ಸ್ಟೇಟ್ಮೆಂಟ್ ಗಳನ್ನು ನೋಡಿದ ಬ್ಯಾಂಕಿನವರು ಆರರಿಂದ ಏಳು ಲಕ್ಷದ ತನಕ ಲೋನ್ ಕೊಡುವುದಾಗಿ ಹೇಳಿದರು. ಇನ್ನೇನು ಬರುವ ಸಂಕ್ರಾಂತಿಯ ಬೆಳಗ್ಗೆ ಪೂಜೆ ಮಾಡಿಸಿಕೊಂಡ ಗುದ್ದಲಿ, ಹಾರೆಗಳು ಪಾಯದ ಮೊದಲ ಅಗೆತ ಅಗೆಯುತ್ತವೆ... ಅವನು ಹಾಗಂದುಕೊಂಡು ನೆಮ್ಮದಿಯ ನಿದ್ರೆಗೆ ಜಾರಿದ  ಮರುದಿನ ಬೆಳಗ್ಗೆಯೇ ಹೊಸದೊಂದು ಸುದ್ದಿ ಹೊತ್ತು ರಿಂಗಾದ ಮೊಬೈಲ್ ಅವನನ್ನು ಆ ಕನಸಿನಿಂದ ಎಬ್ಬಿಸಿತ್ತು:

"ವೈಷ್ಣವಿಗೆ ಒಳ್ಳೇಕಡೆಯಿಂದ ಸಂಬಂಧ ಬಂದಿದೆ!"

"ಅಷ್ಟೊಂದ್ ಗಡಿಬಿಡಿ ಯಾಕೆ. ಅವ್ಳಿಗಿನ್ನೂ ಇಪ್ಪತ್ತೊಂದ್ ವರ್ಷ. ಸರಿಯಾಗಿ ಮನೆಗಿನೆ ಕಟ್ಕೊಂಡು ಆಮೇಲೆ....."
ಅವನ ಮಾತಿನ್ನೂ ಪೂರ್ತಿಯಾಗಿರಲಿಲ್ಲ, ಅಷ್ಟರಲ್ಲೇ ಸಂಬಂಧ ತಂದ ದೂರದ ಸಂಬಂಧಿ ಶೇಖರ ಮಾವನ ಕ್ಯಾಸೆಟ್ ಚಾಲೂ ಆಯಿತು.


"ನೋಡ್ತಮ್ಮಾ, ಮನೇಲಿರೋ ಕೂಸಿಗೆ ಇವತ್ತಲ್ಲ ನಾಳೆ ಮದುವೆ ಮಾಡದೇಯ, ಗಂಡನ್ ಮನಿಗೆ ಕಳ್ಸದೇಯ. ಹುಡ್ಗ ನಿನ್ನಮ್ಮನ ಊರೋನೇ. ನಿನ್ ದೊಡ್ಮಾವ, ಅತ್ತೆ ಎಲ್ರಿಗೂ ಗೊತ್ತಿರೋ ಮಾಣಿ. ಬೆಂಗ್ಳೂರಲ್ ಇಂಜಿನಿಯರ್ ಆಗಿದ್ನ. ಎಪ್ಪತ್ತೂ ಚಿಲ್ರೆ ಸಾವ್ರ ಸಂಬ್ಳ ತಗಂತ್ನ. ಅಮ್ಮಂಗೆ ಹುಷಾರಿಲ್ಲೆ ಹೇಳಿ ಮದ್ವೆಗೆ ಗಡಿಬಿಡಿ ಮಾಡ್ತಿದ್ದ. ಇಲ್ಲಾಂದಿದ್ರೆ....."
ಬಾಯ್ತುಂಬಾ ರಸವಾಗಿ ತುಂಬಿಕೊಂಡ ಕವಳವನ್ನು ಉಗಿದುಬಂದು ಮಾತು ಮುಂದುವರೆಸಿದ ಶೇಖರಮಾವ.


"ಚಿನ್ದಂಥಾ ಗಂಡು ತಮ್ಮಾ... ಎಲೆಡ್ಕೆ ಕೂಡಾ ಹಾಕಿ ಗೊತ್ತಿಲ್ಲೆ. ಅಮ್ಮಂಗೆ ಹುಷಾರಿಲ್ಲೆ ಹೇಳಿ ಮನೆ ಬಾಗ್ಲಿಗೆ ತಾನೇ ರಂಗೋಲಿ ಹಾಕ್ತ್ನ. ಅಡ್ಗೆ ಪಡ್ಗೆ ಎಲ್ಲಾನೂ ಗೊತ್ತಿದ್ದು. ಹಾಡಲೂ ಬತ್ತು ಮಾಣಿಗೆ.... ನೀವು ಸೀಐಡಿಗಳನ್ನ ಬಿಟ್ಟು ಹುಡುಕ್ಸಿದ್ರೂ ಇಂಥಾ ಗಂಡು ಸಿಗ್ತಲ್ಲೆ ಹಾಂ...."

ಪ್ರಪಂಚದಲ್ಲಿ ಹಿಂದೆಂದೂ ಹುಟ್ಟಿರದ, ಮುಂದೆಂದೂ ಹುಟ್ಟದ ಇಂತಹಾ ಸಕಲಕಲಾವಲ್ಲಭ ವರನನ್ನು ಬೇಡವೆನ್ನಲು ವಿಶಾಲನಿಗೆ ಯಾವ ಕಾರಣವೂ ಉಳಿದಿರಲಿಲ್ಲ.

"ಅಂಥಾದ್ದೇನೂ ಕೇಳ್ತಿಲ್ಲೆ ಗಂಡಿನ ಕಡ್ಯೋರು. ಅವ್ರದ್ದೇ ಕೂಸು, ಏನೇ ಹಾಕ್ಸಿದ್ರೂ ಅವ್ಳಿಗೇ ಹೇಳಿದ್ದ. ಗಂಡಿಗೊಂದ್ ಬ್ರೆಸ್ಲೆಟ್ಟು, ಕೂಸಿಗೆ ಒಂದೆಳೆ ಸರ, ಒಂದ್ಜೊತೆ ಬಳೆ. ಎಲ್ಲೂ ಶಾಸ್ತ್ರಕ್ಕೆ ಕಮ್ಮಿ ಆಗ್ದಂಗೆ ಮದುವೆ.... ಇಷ್ಟೇ ಅವ್ರು ಕೇಳ್ತಿರೋದು. ಹಾಂ... ಅವ್ರ ದಿಬ್ಣದ್ ಖರ್ಚೊಂದು ನೀವೇ ಕೊಡವಡ"

ಕೈಯ್ಯಲ್ಲಿದ್ದ ಮೂರೂವರೆ ಲಕ್ಷ ಸಾಲದ ಹಣ ಯಕಶ್ಚಿತ್ ಕಾಗದದ ಚೂರಿನಂತೆ ಭಾಸವಾಯಿತು ವಿಶಾಲನಿಗೆ. ಆದರೆ 'ಹೆಣ್ಣಿನ ಕಡೆಯವರು ಮದುವೆಯಲ್ಲಿ ಬಡತನ ತೋರಿಸಿದರೆ ಮನೆಮಗಳು ಗಂಡನ ಮನೆಯಲ್ಲಿ ಸಸಾರವಾಗುತ್ತಾಳೆ' ಎಂಬ ಕಾಳಜಿಯ ಮುಂದೆ ಅವನ ಉಳಿದೆಲ್ಲಾ ಆತಂಕಗಳೂ ಗೌಣವಾದವು. ಹಳೆಯ ಮನೆಗೇ ಹೊಸಗೋಡೆ ಕಟ್ಟಿ ಬಣ್ಣ ಬಳಿಸಿದ. ವರಲೆ ತಿಂದು ವಿಕಾರವಾಗಿದ್ದ ಕಂಬ, ಜಂತಿಗಳನ್ನೆಲ್ಲಾ ತಾತ್ಕಾಲಿಕವಾಗಿ ಅಂದಗಾಣಿಸಲಾಯಿತು. ನೆಲದಲ್ಲಿ ಸಿಮೆಂಟು ಕಿತ್ತಹೋದಲ್ಲೆಲ್ಲಾ ಅಮ್ಮ ಸಗಣಿನೀರು ಬಳಿದಳು.

'ಈ ಮನೆ ಇನ್ನೊಂದು ಮೂರು ವರ್ಷ ಹೀಗೇ ನಿಂತರೆ ಸಾಕಪ್ಪಾ ದೇವ್ರೇ!'
ಮೈತುಂಬಾ ತೇಪೆ ಹಾಕಿಸಿಕೊಂಡು ಸಿಂಗರಿಸಿಕೊಂಡ ಹಣ್ಣುಹಣ್ಣು ಮುದಿಕಿಯಂತೆ ಕಾಣುತ್ತಿದ್ದ ಮನೆಯನ್ನು ನೋಡುತ್ತಾ ವಿಶಾಲ ಹಾಗಂದುಕೊಂಡ. ಈಗ ಆಗಿರುವ ಸಾಲಕ್ಕೆ ಮುಂದಿನ ಮೂರ್ನಾಲ್ಕು ವರ್ಷಗಳ ತನಕ ಹೊಸಮನೆಯ ಮಾತಿಲ್ಲವೆಂಬುದರಲ್ಲಿ ಯಾವ ಅನುಮಾನವೂ ಇರಲಿಲ್ಲ.
ಮದುವೆ ಭರ್ಜರಿಯಾಗಿಯೇ ನಡೆಯಿತು. ಸಿಂಗರಿಸಿಕೊಂಡು ಪುಟ್ಟ ದೇವತೆಯಂತೆ ಕಾಣುತ್ತಿದ್ದ ತಂಗಿ ಗಂಡನ ಜೊತೆಯಲ್ಲಿ ಹೊರಟು ನಿಂತಾಗ ಮನೆಯವರೆಲ್ಲಾ ಮನಸಾರೆ ಕಣ್ತುಂಬಿಕೊಂಡು ಕಳಿಸಿಕೊಟ್ಟರು. ಜೊತೆಯಲ್ಲಿ ಆಡುತ್ತಾ ಬೆಳೆದವಳ ಬಾಳು ಹಸಿರಾಗಿರಲೆಂಬ ಹಾರೈಕೆಯೊಂದಿಗೆ ಕಟ್ಟಿದ ತೋರಣ, ಮಂಟಪಗಳನ್ನು ಬಿಚ್ಚುತ್ತಿದ್ದವನ ಮನಸ್ಸೇಕೋ ಇನ್ನಿಲ್ಲದಂತೆ ತುಂಬಿಬಂತು.

                 **************

ಕಾಲ ನಾಲ್ಕು ವರ್ಷಗಳನ್ನು ಅನಾಮತ್ತಾಗಿ ತನ್ನ ಜೋಳಿಗೆಗೆ ಸೇರಿಸಿಕೊಂಡು ಮುನ್ನಡೆಯುತ್ತಿತ್ತು. ಎಷ್ಟು ತುಂಬಿದರೂ ಮತ್ತೆ ಬಾಯ್ಬಿಡುವ ಖರ್ಚುಗಳು, ನೋಟೀಸು ಕೊಟ್ಟು ಬೆದರಿಸುವ ಬ್ಯಾಂಕಿನವರು, ಯಾವ ನೋಟೀಸನ್ನೂ ಕೊಡದೆ ನೇರ ಮನೆಯಂಗಳಕ್ಕೇ ಬಂದು ನಿಲ್ಲುವ ಸಾಲಗಾರರು... ಇವೆಲ್ಲದರ ಭಾರ ಕಡಿಮೆ ಮಾಡಿಕೊಂಡು ಕೊಂಚ ನಿರಾಳವಾಗುವ  ಹೊತ್ತಿಗೆ ವಿಶಾಲನಿಗೆ ಮೊವತ್ತು ಹೊಸಿಲಿಗೆ ಬಂದು ನಿಂತಿತ್ತು. ಈ ನಾಲ್ಕು ವರ್ಷದಲ್ಲಿ ಭಾರೀ ಅಲ್ಲದಿದ್ದರೂ ಕೆಲವಾರು ಮದುವೆ ಸಂಬಂಧಗಳಾದರೂ ಬಂದು ಬಾಗಿಲು ತಟ್ಟಿದ್ದವು. ಮೊದಮೊದಲು ಇವನು ಬಾಗಿಲು ತೆರೆಯುವ ಧೈರ್ಯ ಮಾಡಿರಲಿಲ್ಲ. ಕೊನೆಗೊಂದೆರೆಡು ಬಾರಿ ಗಟ್ಟಿ ಮನಸ್ಸು ಮಾಡಿ ತೆರೆದನಾದರೂ ಬಾಗಿಲು ಬಡಿದವರು ಒಳಬರುವ ಧೈರ್ಯ ಮಾಡಲಿಲ್ಲ!

ಹರಕು ಗೋಡೆಗಳ ಮುರುಕು ಬಾಳಿಗೆ ಯಾವ ಹೆಣ್ಣೂ ಬರಲಿಚ್ಛಿಸುವುದಿಲ್ಲ. ಇದು ಐದು ವರ್ಷಗಳ ಕೆಳಗೇ ಅವನಿಗೆ ಅರ್ಥವಾಗಿದ್ದ ಸತ್ಯ. ಸ್ವತಃ ತನ್ನ ತಂಗಿಯನ್ನು ಕೊಡುವಾಗಲೇ ಗಂಡಿನ ಮನೆ, ಆಸ್ತಿ, ಸಂಬಳಗಳನ್ನೆಲ್ಲಾ ನಾಲ್ಕುನಾಲ್ಕು ಬಾರಿ ಅಳೆದು ನೋಡಿದ್ದ. ಹೀಗಿರುವಾಗ ತಲೆಗೆಳೆದರೆ ಕಾಲಿಗಿಲ್ಲ, ಕಾಲಿಗೆಳೆದರೆ ತಲೆಗಿಲ್ಲ ಎನ್ನುವ ತನ್ನ ಬಾಳಿಗೆ ಬಾ ಎಂದು ಯಾರನ್ನು ತಾನೇ ಕರೆಯುತ್ತಾನೆ?

"ಕರೆಯಲೇಬೇಕು ವಿಶು. ಗೆಲುವು ಕರೆದರೆ ಮಾತ್ರ ಬರುತ್ತದೆ!"
ಅಮ್ಮನ ಮಾತು ಎಷ್ಟು ಮೃದುವಾಗಿತ್ತೋ ಅಷ್ಟೇ ದೃಢವಾಗಿತ್ತು.


"ಗುಡಿಸಲಿನಲ್ಲೂ ಇರುವ ಪ್ರೀತಿ ಹಾಗೂ ಮಹಲಿನಲ್ಲೂ ಇರುವ ಖಾಲಿತನ... ಇವನ್ನು ಗುರುತಿಸುವಷ್ಟು ನಾವಿನ್ನೂ ಪ್ರಬುಧ್ದರಾಗಿಲ್ಲ. ನನಗೆ ಗೊತ್ತು... ಅಪ್ಪನ ಮೇಲೆ ನಿನ್ನೊಳಗೊಂದು ಬೇಸರವಿದೆ. ಎಲ್ಲೋ ಒಂದು ಕಡೆ ಅದಕ್ಕೆ ನಾನೂ ಕಾರಣ. ಅವರು ಎಂದೋ ಯಾರೋ ಹೇಳಿದ ಅಥವಾ ಕಾಲಕಾಲಕ್ಕೆ ಅವರಿವರು ಹೇಳುತ್ತಾ ಬಂದ 'ಇದೆಲ್ಲಾ ನಿನ್ನಿಂದ ಆಗೋಲ್ಲ' ಎನ್ನುವ ಮಾತನ್ನು ನಂಬಿದಷ್ಟೇ ದೃಢವಾಗಿ ತಮ್ಮ ಸಾಮರ್ಥ್ಯವನ್ನು ನಂಬಲಿಲ್ಲ. ಹಾಗೆ ನೋಡಿದರೆ ನನ್ನ ನಿನ್ನ ಬೇಸರ ಸರಿಯಾದದ್ದೇ. ಆದರೆ ಅದನ್ನೇ ನೆಪವಾಗಿಟ್ಟುಕೊಂಡು ಅದೇ ಸ್ಥಿತಿಯಲ್ಲಿ ಮುಂದುವರೆಯುವುದಿದೆಯಲ್ಲ, ಅದು ಘೋರ ತಪ್ಪು ವಿಶು..."

"ಹೌದು.. ನಮ್ಮ ಬದುಕಿನ ಎಲ್ಲಾ ಇಲ್ಲಗಳಿಗೂ ಕಟ್ಟಕಡೆಗೆ ನಾವೇ ಹೊಣೆಗಾರರು. ಕಛೇರಿಯೊಳಗೆ ಕುಳಿತ ಅಧಿಕಾರಿಗೂ ಒಂದು ಸಾಮರ್ಥ್ಯವಿದೆ; ಹೊರಗೆ ಕಾವಲು ಕಾಯುತ್ತಿರುವ ಜವಾನನಿಗೂ ಒಂದು ಸಾಮರ್ಥ್ಯವಿದೆ. ಆದರೆ ತಂತಮ್ಮ ಸಾಮರ್ಥ್ಯಗಳನ್ನು ಅವರು ಬಳಸಿಕೊಂಡ ರೀತಿಯಿದೆಯಲ್ಲ, ಅದು ಅವರ ಬದುಕನ್ನು ನಿರ್ಧರಿಸಿದೆ! ನಾನು, ನಿನ್ನ ಅಪ್ಪ ಇವನ್ನೆಲ್ಲ ಈಗ ಅರ್ಥಮಾಡಿಕೊಂಡು ಕೊರಗುತ್ತಿದ್ದೇವೆ. ನಾಳೆ ನೀನೂ ಈ ಜಾಗದಲ್ಲಿ ನಿಲ್ಲಬಾರದು ಅಂತಿದ್ರೆ ಬದಲಾವಣೆಗಳನ್ನು ಇವತ್ತೇ ಆರಂಭಿಸು. ನೀನು ಮಾಡಬಲ್ಲೆ. ನಾವೆಲ್ಲರೂ  ನಿನ್ನ ಜೊತೆಗಿದ್ದೇವೆ!"

ಎಂದೂ ಇಲ್ಲದ ಅಮ್ಮ ಇಂದು ಇಷ್ಟೊಂದು ವಿಶ್ವಾಸದಿಂದ ಆಡಿದ ಮಾತುಗಳು ನೇರವಾಗಿ ಗುರಿತಾಕಿದ್ದವು. ಸೋಲಿನ ಪಾತಾಳದತ್ತ ಜಾರುತ್ತಿರುವವನಿಗೆ ಬೇಕಾಗಿರುವುದು ಅದೇ: ನಾಲ್ಕೇ ನಾಲ್ಕು ಆತ್ಮವಿಶ್ವಾಸದ ಮಾತು. ನೀನು ಮಾಡಬಲ್ಲೆ, ಜೊತೆಗೆ ನಾನಿದ್ದೇನೆ ಎಂಬ ಧೈರ್ಯದ ಮಾತು.
ಅಮ್ಮ ಅದನ್ನೇ ಮಾಡಿದ್ದಳು.

ಹೀಗೆಲ್ಲಾ ಇದ್ದಾಗಲೇ ಇದ್ದಕ್ಕಿದ್ದಂತೆ ಅಡಿಕೆಗೆ ಒಳ್ಳೆಯ ರೇಟು ಬಂತು. ಕ್ವಿಂಟಾಲ್ಗೆ ಇಪ್ಪತ್ತೂ ಚಿಲ್ಲರೆ ಸಾವಿರ ಇದ್ದದ್ದು ಅನಾಮತ್ತು ಅರವತ್ತು ಸಾವಿರವಾಯ್ತು. ಹೇಗೆ ಲೆಕ್ಕ ಹಾಕಿದರೂ ಪ್ರತೀ ವರ್ಷಕ್ಕಿಂತ ಎರೆಡು ಲಕ್ಷ ಹೆಚ್ಚೇ ಕೈಗೆ ಬಂದಿತ್ತು. ಜೊತೆಗೆ ತಮ್ಮನೂ ದುಡಿಯುತ್ತಿದ್ದಾನೆ. ಐದು ವರ್ಷಗಳಿಂದ ಬರೀ ಯೋಜನೆಯಾಗಿಯೇ ಉಳಿದಿದ್ದ ಮನೆಯ ಕೆಲಸ ಆರಂಭಿಸುವುದಕ್ಕೆ ಇದೇ ಸರಿಯಾದ ಸಮಯ... ಹಾಗೊಂದು ವಿಶ್ವಾಸ ಮೂಡಿದ ನಂತರ ವಿಶಾಲ ಹಿಂದುಮುಂದು ನೋಡಲಿಲ್ಲ. ತನ್ನ ಸಕಲ ಸ್ನೇಹ-ಸಂಬಂಧ-ಸಂಪರ್ಕಗಳ ಮನೆಗೂ ಹೊಕ್ಕ. ಅವರ ಮಾತಿನ ಗುಡ್ಡೆಯಿಂದ ತನಗೆ ಬೇಕಾದ ಸಲಹೆ-ಸಹಾಯಗಳನ್ನಷ್ಟೇ ಆಯ್ದುಕೊಂಡು ಹೊರಬಂದ. ಇಷ್ಟೇ ಸುತ್ತಳತೆ, ಇಷ್ಟೇ ಕೋಣೆಗಳು, ಇಂತಹದೇ ವಿನ್ಯಾಸವಿರುವ ಪಕ್ಕಾ ಮನೆಯನ್ನು ನೆಲದಲ್ಲಿ ಕಟ್ಟುವ ಮೊದಲು ಮನದೊಳಗೆ ಕಟ್ಟಿನಿಲ್ಲಿಸಿಕೊಂಡ.
ನೋಡು ನೋಡುತ್ತಿದ್ದಂತೆಯೇ ಕಬ್ಬಿಣ, ಇಟ್ಟಿಗೆ, ಟೈಲ್ಸ್ ಗಳು ಮನೆಯೆದುರು ಬಂದು ರಾಶಿ ಬಿದ್ದವು. ಬ್ಯಾಂಕಿನಿಂದ ಬಿಡುಗಡೆಯಾದ ಸಾಲದ ಮೊದಲ ಕಂತು ಅಕೌಂಟ್ ಸೇರಿತು. ಇದ್ದುದರಲ್ಲೇ ಚೀಪ್ ಅಂಡ್ ಬೆಸ್ಟ್ ಆದ ಕಾಪಿಕಾನಿನ ಅಣ್ಣಯ್ಯ ಮೇಸ್ತ್ರಿಗೆ ಗಾರೆಯ ಜವಾಬ್ದಾರಿ ವಹಿಸಲಾಯಿತು. ಗೋಪಾಲಾಚಾರಿ ತನ್ನ ಗರಗಸಕ್ಕೆ ಸಾಣೆಹೆಣೆಯತೊಡಗಿದ. ಒಡಲತುಂಬಾ ಮರಳು ತುಂಬಿಕೊಂಡ ನಾಗರಾಜ ಮೇಸ್ತ್ರಿಯ ಲಾರಿ ಮನೆಯಂಗಳ ಪ್ರವೇಶಿಸಿತು. ಮೊವ್ವತ್ತು ವರ್ಷಗಳಿಂದ ಗರ್ಭದಲ್ಲೇ ಇದ್ದ ಕೂಸು ಭೂಮಿಗೆ ಬರುವ ದಿನ  ಕೊನೆಗೂ ಬಂದಿತ್ತು!

                         *************

ಸಮಯ ರಾತ್ರೆ ಹನ್ನೊಂದಾಗಿತ್ತು. ಕೆಲವು ಕ್ಷಣಗಳ ಹಿಂದಷ್ಟೇ ಬೆಂಗಳೂರಿನಿಂದ ಬಂದಿಳಿದಿದ್ದ ವಿಶಾಲ ಅಂಗಳದಲ್ಲಿ ನಿಂತಿದ್ದ. ನಾಳೆ ಭೂಮಿ ಹುಣ್ಣಿಮೆ, ಗುದ್ದಲಿಪೂಜೆಯೊಂದಿಗೆ ಕೆಲಸ ಆರಂಭವಾಗಲಿರುವ ದಿನ! ಮೊಗೆದಷ್ಟೂ ಚಿಮ್ಮುತ್ತಿದ್ದ ಆತಂಕ, ಸಂಭ್ರಮಗಳಿಂದ ಮನಸ್ಸು ತುಂಬಿಹೋಗಿತ್ತು. ತಲೆಯೆತ್ತಿ ಬಾನಿನೆಡೆ ನೋಡಿದ. ಹಳೆಯ ಸ್ವಪ್ನವೊಂದು ಸಾಕಾರವಾದಂತೆ ಸಂಭ್ರಮದ ನಗೆ ನಗುತ್ತಿರುವ ಚಂದಿರ...

ಕನಸೊಂದು ನನಸಾಗಲಿಕ್ಕೆ ಇಷ್ಟೊಂದು ಸಮಯ ಬೇಕಾ?

ಸುಮಾರು ಇಪ್ಪತೈದು ವರ್ಷಗಳ ಕೆಳಗೆ ಮಟಮಟ ಮಧ್ಯಾಹ್ನದಲ್ಲಿ ಅಮ್ಮ ಹಂಚಿಕೊಂಡಿದ್ದ ಕನಸು.. ಮರುಕ್ಷಣವೇ ಅಮ್ಮನ ನೆನಪಾಯಿತು. ಒಳಗೆ ಹೋಗಲೆಂದು ಮನೆಯತ್ತ ತಿರುಗಿದ. ಅಮ್ಮ ಅಲ್ಲಿಯೇ ನಿಂತಿದ್ದಳು.

"ನಿನಗೆ ನೂರು ವರ್ಷ ಆಯಸ್ಸು ನೋಡು. ನಿನ್ನತ್ರ ಮಾತಾಡೋಕೇ ಹೊರಟಿದ್ದೆ!"

"ನೂರು ವರ್ಷ ಇದ್ದು ಏನು ಮಾಡ್ಲಿ? ಮಗ ಕಟ್ಟಿದ ಮನೆಯಲ್ಲಿ ಗಂಡ, ಮಗ, ಸೊಸೆ, ಮೊಮ್ಮಕ್ಕಳ ಜೊತೆ ಹತ್ತು ವರ್ಷ ಇದ್ದರೆ ಸಾಕು!"

"ಮೂರು ರೂಮಿನ ಮನೆ, ರೂಮುರೂಮಿಗೆ ಫ್ಯಾನು... ಅಂತೂ ನಿನ್ನ 'ಅನಂತನಿಲಯ' ಕೊನೆಗೂ ನಿಜವಾಗ್ತಿದೆ. ಖುಷೀ ತಾನೇ?"
ಅಮ್ಮ ನಿರ್ಮಲವಾಗಿ ನಕ್ಕಳು, ಥೇಟ್ ಚಂದಿರನಂತೆ.

"ಆಗದೇ ಇರುತ್ತಾ ಮತ್ತೆ? ಮಗ ಮನೆ ಕಟ್ತಿದಾನಂದ್ರೆ ಸುಮ್ನೇನ...." ಅವಳ ಮಾತು ಮೌನದ ದಿಬ್ಬವೊಂದನ್ನು ಹಾದು ಮುಂದುವರೆಯಿತು.

"ನೀನು ಕಟ್ತಿರೋದು ಕೇವಲ ಮನೆಯಲ್ಲ ವಿಶು, ಇದು ನಾವು ಅನುಭವಿಸಿದ ಎಷ್ಟೋ ಅವಮಾನಗಳಿಗೆ ಉತ್ತರ. ನಿನಗೆ ಗೊತ್ತಾ? ನಮ್ಮನೆಯ ಒರಲೆಹಿಡಿದ ಜಂತಿಗಳನ್ನು ನೋಡಿ ಓರೆಗಿತ್ತಿಯರು ನಕ್ಕರು. ಮಣ್ಣು ಗೋಡೆಗಳಿಗೆ ಸಗಣಿ-ನೀರು ಬಳಿಯುವಾಗ ಅಕ್ಕಪಕ್ಕದಮನೆಯವರು ಕುಹುಕದ ದೃಷ್ಟಿ ಬೀರಿದರು. ತನ್ನ ಮನೆಯ ಗೃಹಪ್ರವೇಶಕ್ಕೆ ಕರೆಯಲು ಬಂದ ಅತ್ತಿಗೆ ನನ್ನ ಮಣ್ಣಿನೊಲೆಗಳನ್ನು ನೋಡಿದ ನೋಟವಿದೆಯಲ್ಲ, ಅದು ಇಂದಿಗೂ ನೆನಪಿದೆ ನನಗೆ. ಅಲ್ಲಿದ್ದದ್ದು  'ನಿನ್ನ ಜೀವನ ಇಷ್ಟೇ' ಎಂಬ ಕುಹುಕ. ಅಂದು ಅವರ ಟೀಕೆ, ಕುಹುಕ, ಕಡೆಗಣಿಕೆಗಳೆಲ್ಲದಕ್ಕೆ ನನ್ನ ಬಳಿ ಇದ್ದ ಒಂದೇ ಒಂದು ಉತ್ತರ ನೀನು!"


ವಿಶಾಲನ ದೃಷ್ಟಿ ಅಮ್ಮನಲ್ಲೇ ಸ್ಥಿರವಾಗಿತ್ತು. ಅಮ್ಮ ಮುಂದುವರೆಸಿದಳು.

"ನಂಗೆ ಗೊತ್ತಿತ್ತು ವಿಶು, ಇವತ್ತಲ್ಲ ನಾಳೆ ನಾವೂ ನಾಲ್ಕು ಜನರೆದುರು ತಲೆಯೆತ್ತಿ ನಡೆಯೋ ಕಾಲ ಬಂದೇ ಬರುತ್ತೆ ಅಂತ. ಆ ಸಮಯವನ್ನು ನೀನು ತಂದೇ ತರ್ತೀಯ ಅಂತ! ಕೊನೆಗೂ ನೀನು ನನ್ನ ನಂಬಿಕೆಯನ್ನು ನಿಜಮಾಡಿದೆ. ನನ್ನ ಮನಸ್ಸಿಗೀಗ ನೆಮ್ಮದಿ ಸಿಕ್ಕಿದೆ"

ತಾನು ಹೀಗೆ ನೆನಪಿಸಿಕೊಂಡು ಹಾಗೆ ಮರೆಯುತ್ತಿದ್ದ ಹೊಸ ಮನೆಯೆಂಬ ಕನಸು ಅಮ್ಮನ ಪಾಲಿಗೆ ಇಷ್ಟೊಂದು ಭಾವಾನಾತ್ಮಕವಾಗಿತ್ತೆಂಬುದು ವಿಶಾಲನಿಗೆ ಅರಿವಾದದ್ದು ಆಗಲೇ. ಯಾಕೋ ತುಂಬಾ ತಡಮಾಡಿಬಿಟ್ಟೆನೇನೋ ಅನ್ನಿಸಿತು. ಹಾಸಿಗೆಗೊರಗಿದವನ ಮನದ ತುಂಬಾ ಬಾಲ್ಯದಿಂದ ಇಂದಿನ ತನಕ ನೋಡುತ್ತಾ ಬಂದಿರುವ ಅಮ್ಮನ ನೆನಪುಗಳು ಚಿತ್ರಗಳಾಗಿ ಕದಲತೊಡಗಿದವು.

                        ***************

ಕಣ್ತೆರೆದು ನೋಡಿದ. ಇನ್ನೇನು ಬೆಳಗಾಗುವುದರಲ್ಲಿತ್ತು. ಕನಸು ನನಸಾಗಿಸಲಿರುವ ಬೆಳಗು! ತಡಬಡಾಯಿಸಿ ಎದ್ದ. ಅಮ್ಮ ಇನ್ನೂ ಎದ್ದಿರಲಿಲ್ಲ. ಪಾಪ.. ನಡುರಾತ್ರೆಯವರೆಗೂ ಎಚ್ಚರವಿದ್ದಳು. ಇನ್ನೂ ಸ್ವಲ್ಪ ಹೊತ್ತು ಆರಾಮವಾಗಿ ಮಲಗಲಿ. ಎದ್ದ ಮೇಲೆ ದಿನವಿಡೀ ದುಡಿಯುವುದು ಇದ್ದೇ ಇದೆ. ತಾನೇ ದೇವರಿಗೆ ದೀಪ ಹಚ್ಚಿ ಪೂಜೆಗೆ ಹೂ ಕೊಯ್ದ. ದನಗಳ ಹಾಲು ಕರೆದು, ಒಲೆಯಮೇಲಿಟ್ಟ. ಅಪ್ಪ ಆಗಲೇ ಎದ್ದು ತೋಟದತ್ತ ಹೋಗಿದ್ದರು. ಅಮ್ಮನನ್ನು ಎಬ್ಬಿಸಲೆಂದು ಕೋಣೆಯತ್ತ ನಡೆದ.

"ಅಮ್ಮಾ... ಅಮ್ಮಾ...."


"....................."

"ಸೀತಮ್ಮೋರೆ... ಏಳೇಳಿ ಸಾಕು. ಏನಿದು.. ಯಾವತ್ತೂ ಇಲ್ಲದ ನಿದ್ರೆ ಇವತ್ತು?"

ಮಗ್ಗಲಾಗಿ ಮಲಗಿದ್ದವಳ ಹೆಗಲು ಕದಲಿಸಲೆಂದು ಚಾಚಿದವನ ಕೈ ಬೆಂಕಿಸೋಕಿದಂತಾಗಿ ಛಕ್ಕನೆ ಹಿಂದಕ್ಕೆ ಬಂತು. ಇನ್ನಿಲ್ಲದಂತೆ ನಡುಗತೊಡಗಿದ ಆ ಕೈಗಳಿಂದ ಹಾಸಿಗೆಯ ಮೇಲೆ ಪವಡಿಸಿದ್ದ ಅವಳ ಕೈಯ್ಯನ್ನು ಮೆಲ್ಲಗೆ ಸ್ಪರ್ಷಿಸಿದ...
ಚಂದಮಾಮನ ತೋರಿಸುತ್ತಾ ತುತ್ತುಣಿಸಿದ್ದ ಕೈ.. ತನ್ನ ಹರಿದ ಅಂಗಿಯ ಹುಲಿಯುತ್ತಾ ಸೂಜಿ ಚುಚ್ಚಿಸಿಕೊಂಡಿದ್ದ ಕೈ.. ತನ್ನನ್ನು ಎದೆಗಪ್ಪಿಕೊಂಡು ಮುದ್ದಾಡಿದ್ದ ಕೈ... ಮೊಮ್ಮಗುವಿನ ತೊಟ್ಟಿಲು ತೂಗಿ ಲಾಲಿ ಹಾಡುವ ಕನಸು ಕಂಡಿದ್ದ ಕೈ... ಇನ್ನೇನು ನನಸಾಗಲಿದ್ದ ಮೊವ್ವತ್ತು ವರ್ಷಗಳ ಕನಸಿನ ಮನೆಯ ಪಾಯಕ್ಕೆ ಕುಂಕುಮವಿರಿಸಬೇಕಿದ್ದ ಕೈ....

ಅದೀಗ ನಿರ್ಜೀವವಾಗಿ ಬಿದ್ದಿತ್ತು.

ತಾಯಿಯೊಬ್ಬಳು ಮಗನಿಗೆ ಕೊಡಬಹುದಾದ ಅತಿದೊಡ್ಡ ಆಘಾತವದು...  ಹೃದಯ ಚಿಟ್ಟನೆ ಚೀರಿಕೊಂಡಿತು. ಆದರೆ ಗಂಟಲು ಕೂಗದಾಯಿತು. ಕಾಲುಗಳು ಕುಸಿದವು. ಕಣ್ಣು ಕತ್ತಲೆಬಂತು....

ಎಲಾ ದುರ್ದೈವಿ ಜೀವವೇ... ಇಂದಲ್ಲ ನಾಳೆ ಗಂಡ ಸರಿಹೋಗುತ್ತಾನೆಂದು ವರುಷಗಟ್ಟಲೆ ಕಾದೆ.. ಮಕ್ಕಳು ಕೈಗೆ ಬರಲೆಂದು ಮೊವ್ವತ್ತು ವರುಷ ಕಾದೆ.. ಕಲ್ಲು ದೇವರ ಬೇಡುತ್ತಾ ಲೆಕ್ಕವಿಲ್ಲದಷ್ಟು ದಿನ ಕಾದೆ..

ಇನ್ನೊಂದು ವರುಷ ಕಾಯದೇಹೋದೆಯ?

ಗೃಹ ಪ್ರವೇಶದ ದಿನ ಸೀರೆಯುಟ್ಟು ಸಂಭ್ರಮದಿಂದ ಓಡಾಡುವುದಿತ್ತು. ಉರಿಬಿಸಿಲ ಮಧ್ಯಾಹ್ನ ನಿನಗೆಂದೇ ಕಟ್ಟಿಸಿದ ಕೋಣೆಯಲ್ಲಿ, ತಿರುಗುವ ಫ್ಯಾನ್ ಕೆಳಗೆ ಮಲಗಿ ನೆಮ್ಮದಿಯಿಂದ ನಿದ್ರಿಸುವುದಿತ್ತು. ವರ್ಷಗಟ್ಟಲೆ ಒರಟು ಸಿಮೆಂಟು ನೆಲವನ್ನು ತಿಕ್ಕಿ ತಿಕ್ಕಿ ಸವೆದ ಕೈಗಳು ಮಗ ಕಟ್ಟಿದ ನಯವಾದ ನೆಲವನ್ನೊಮ್ಮೆ ಸಂಭ್ರಮದಿಂದ ಸವರುವುದಿತ್ತು. ಇನ್ನೂ ಏನೇನೋ ಸಂಭ್ರಮಗಳು ಬಾಕಿ ಇತ್ತು...

ಆಗಲೇ ಹೋಗಿಬಿಟ್ಟೆಯಾ?

ವಿಶಾಲ ನಿಂತಲ್ಲೇ ಕುಸಿದುಹೋದ. ಯಾರೋ ಎತ್ತಿ ಕೂರಿಸುತ್ತಿದ್ದರು. ಇನ್ಯಾರೋ ನೀರು ಕುಡಿಸುತ್ತಿದ್ದರು. ಮತ್ಯಾರೋ ಸಮಾಧಾನ ಹೇಳುತ್ತಿದ್ದರು...
ಅಮ್ಮ ಮಾತ್ರ ಮಲಗಿಯೇ ಇದ್ದಳು.

ಎಂದಿನಂತೆ ಬಂದು ಅಳುತ್ತಿರುವ ತನ್ನ ಮೈದಡವದೇ, ಬಾಚಿ ಅಪ್ಪಿಕೊಳ್ಳದೇ ಮಲಗಿಯೇ ಇದ್ದಳು. ಇನ್ನೆಂದೂ ತೆರೆಯದ ಚಿರ ನಿದಿರೆಯಲ್ಲಿ ಶಾಂತವಾಗಿ ಮುಚ್ಚಿಕೊಂಡಿದ್ದ ಆ ಕಂಗಳಲ್ಲಿ  ದಿವ್ಯ ನೆಮ್ಮದಿಯೊಂದು ಉಳಿದುಹೋಗಿತ್ತು.
ಹಿರಿಯ ಕಿರಿಯರೆಲ್ಲ ಬಂದರು.

"ಪುಣ್ಯವಂತೆ. ಹಾಸಿಗೆ ಹಿಡಿಯದೇ, ನೆಪೆಯದೇ ಹೇಗೆ ನಿದ್ರೆ ಮಾಡಿದಷ್ಟೇ ಸುಲಭದಲ್ಲಿ ಹೋಗ್ಬಿಟ್ಳು!" ಯಾರೋ ಮಾತನಾಡಿಕೊಂಡರು. ನಡೆಯಬೇಕಿದ್ದ ಕಾರ್ಯಗಳೆಲ್ಲ ನಡೆದವು. ಅಪರಕರ್ಮಗಳೆಲ್ಲ ಮುಗಿದ ಮಾರನೇ ದಿನ ಬಿರು ಬಿಸಿಲು ಸುಡುತ್ತಿದ್ದ ಮಧ್ಯಾಹ್ನ ಒರಲೆ ತಿಂದ ಮಾಡನ್ನು ನೋಡುತ್ತಾ ಮಲಗಿದ್ದ ವಿಶಾಲನಿಗೆ ಅದೇನನ್ನಿಸಿತೋ ಏನೋ, ಗೋಪಾಲಾಚಾರಿಯನ್ನು ಕರೆಸಿ, ಅಮ್ಮನ ಶರೀರ ಪಂಚಭೂತಗಳಲ್ಲೊಂದಾದ ಅದೇ ಹಳ್ಳದ ಬದುವಿನಲ್ಲಿ ಗೋರಿಯೊಂದನ್ನು ಕಟ್ಟಿಸಿದ. ಪಕ್ಕದಲ್ಲಿ ಕೆಂಗುಲಾಬಿಯ ಗಿಡವೊಂದನ್ನು ಕೈಯ್ಯಾರೆ ನೆಟ್ಟು ಬೊಗಸೆ ತುಂಬಾ ನೀರೆರೆದ. ಈಗಷ್ಟೇ ಕಟ್ಟಿದ ಪುಟ್ಟ ಮನೆಯಂತೆ ಕಾಣುತ್ತಿದ್ದ ಆ ಗೋರಿಯ ಹಣೆಯ ಮೇಲೆ ದಪ್ಪಕ್ಷರಗಳಲ್ಲಿ ಕೆತ್ತಲಾಗಿತ್ತು:
"ಅನಂತ ನಿಲಯ"

('ತರಂಗ' 15 ಆಗಸ್ಟ್ 2019ನೇ ಸಂಚಿಕೆಯಲ್ಲಿ ಪ್ರಕಟಿತ)

ಮಂಗಳವಾರ, ಜುಲೈ 30, 2019

ಯಾವ ಜನ್ಮದ ಮೈತ್ರಿ…



“ಅಯ್ಯೋ ಅಸ್ತಿ ಪಂಜರವೇ.. ಇನ್ನೂ ತಯಾರಾಗಿಲ್ವ ನೀನು?”


ಜೀನ್ಸ್ ಪ್ಯಾಂಟು ತೊಟ್ಟು, ತೋಳಿನ ಬನಿಯನ್ ಧರಿಸಿ ಇನ್ನೇನು ಅಂಗಿ ಹಾಕಿಕೊಳ್ಳಬೇಕೆನ್ನುವಷ್ಟರಲ್ಲಿ ಮಹಡಿಯ ಮೇಲಿನ ನನ್ನ ಸಿಂಗಲ್ ರೂಮಿನ ಬಾಗಿಲು ದಡದಡನೆ ಸದ್ದು ಮಾಡಿತ್ತು. ಅದರ ಜೊತೆಗೇ ಘಲಘಲಿಸಿದ, ಕೈಬಳೆಗಳೆರೆಡು ಪರಸ್ಪರ ಸೋಕಿಕೊಂಡ ಶಬ್ದ ಬಾಗಿಲು ಬಡಿಯುತ್ತಿರುವುದು ವೈಶ್ಣವಿಯೇ ಎಂಬುದನ್ನು ಸಾಬೀತುಪಡಿಸಿತ್ತು. ಹಾಕಿಕೊಳ್ಳಬೇಕಿರುವ ಅಂಗಿಯನ್ನು ಕೈಯಲ್ಲೇ ಹಿಡಿದು ಬಾಗಿಲು ತೆರೆದರೆ ತಲೆಯಿಂದ ಕಾಲಿನ ತನಕ ಫುಲ್ ಪ್ಯಾಕಪ್ ಆಗಿ, ತೋಳಲ್ಲಿ ವ್ಯಾನಿಟಿ ಬ್ಯಾಗನ್ನೂ, ಬೆನ್ನಲ್ಲಿ ಇನ್ನೊಂದು ಬ್ಯಾಗನ್ನೂ ಧರಿಸಿದ ವೈಶ್ಣವಿಯೆಂಬ ಐದಡಿಯ ಅಕಾರ “ಅಸ್ತಿಪಂಜರವೇ” ಎನ್ನುತ್ತಾ ಪ್ರತ್ಯಕ್ಷವಾಯಿತು.


“ಅಲ್ವೇ ಹಿಡಿಂಬೆ, ಬಸ್ಸಿರೋದೇ ಹತ್ತೂವರೆಗೆ. ಈಗಿನ್ನೂ ಗಂಟೆ ಎಂಟೂ ಆಗಿಲ್ಲ, ಅಷ್ಟರಲ್ಲೇ ಗಡಿಬಿಡಿ ಮಾಡ್ತೀಯಲ್ಲೇ? ಅಲ್ಲಿ ಕೆಎಸ್ಸಾರ್ಟಿಸಿ ಸ್ಟಾಪಿನ ಕಲ್ಲು ಬೆಂಚಿನ ಮೇಲೆ ಕೂತು ತೂಕಡಿಸೋದಕ್ಕೆ ಇಷ್ಟು ಅರ್ಜೆಂಟಾ ನಿಂಗೆ?”


ಬಾಗಿಲಿಗಡ್ಡ ನಿಂತ ನನ್ನನ್ನು ತಳ್ಳಿಕೊಂಡೇ ಒಳಬಂದಳನ್ನು ಪ್ರಶ್ನಿಸಿದೆ. “ಅದೆಲ್ಲ ಆಮೇಲೆ ಹೇಳ್ತೀನಿ. ನೀನೀಗ ಬೇಗ ಹೊರಡು” ಎನ್ನುತ್ತಾ ಮಂಚದ ಮೇಲಿದ್ದ ಜಯಂತ ಕಾಯ್ಕಿಣಿಯವರ ‘ತೂಫಾನ್ ಮೇಯ್ಲ್’ ಅನ್ನು ತಿರುವಿಹಾಕತೊಡಗಿದಳು. ನಾನು ಶರ್ಟ್ ನ ಗುಂಡಿ ಹಾಕಿಕೊಳ್ಳುತ್ತಾ ಕನ್ನಡಿಯತ್ತ ನಡೆದೆ.


ದೀಪಾವಳಿಗೆ ಊರಿಗೆ ಹೋಗುವುದು ಆರು ವರ್ಷಗಳ ಬೆಂಗಳೂರಿನ ಬದುಕಿನಲ್ಲಿ ನಾನು ಒಂದು ಬಾರಿಯೂ ತಪ್ಪಿಸದೇ ಅನುಸರಿಸಿಕೊಂಡು ಬಂದಿರುವ ಅಭ್ಯಾಸ. ‘ಮಾಮು ಬಂದಾ’ ಎಂದು ಖುಷಿಯಿಂದ ಕುಣಿಯುವ ಪಕ್ಕದ ಮನೆಯ ಆಕಾಂಕ್ಷುವಿನ ಜೊತೆ ಗುಡ್ಡದ ಮೇಲೆಲ್ಲಾ ಅಲೆಯುತ್ತಾ ಪಟಾಕಿ ಹೊಡೆಸುವುದು ದಶಕದಾಚೆ ಬಿಟ್ಟು ಬಂದ ಬಾಲ್ಯಕ್ಕೆ ಮತ್ತೆ ಹತ್ತಿರವಾಗಿಸುವ ಆಟ. ಆದರೆ ಈ ಬಾರಿಯ ವಿಶೇಷವೆಂದರೆ ಜೊತೆಯಲ್ಲಿ ವೈಶ್ಣವಿಯೂ ಇರುವುದು. “ನಾನು ವಿಹಾರ್ ನ ಮನೆಗೇ ಬರ್ತಿದ್ದೀನಿ. ನೀನೂ ಅಲ್ಲಿಗೇ ಬಾ” ಎಂಬ ಕಟ್ಟಪ್ಪಣೆ ಸಾಗರದಲ್ಲಿರುವ ಅವಳ ಅಮ್ಮನಿಂದ ಬಂದ ಮರುಕ್ಷಣವೇ ವೈಶ್ಣವಿ ನನಗೆ ಮೆಸೇಜ್ ರವಾನಿಸಿದ್ದಳು.
“ಅಮ್ಮ ಹಬ್ಬಕ್ಕೆ ನಿಮ್ಮನೆಗೇ ಬರ್ತಾಳಂತೆ. ಒಂದಿನ ಜಾಸ್ತಿ ರಜ ಹಾಕೋ.. ಪಣಂಬೂರು ಬೀಚಿಗೆ ಹೋಗಿಬರೋಣ ಮಧು ಕಾರಲ್ಲಿ. ಅದೇ.. ನಿನ್ನ ಹುಡುಗಿಯ ಊರಿಗೆ.”


ನನ್ನ ಹುಡುಗಿಯ ಊರು….


ಕೇಳಲು ಹಿತವೆನಿಸಿತ್ತು. ಜೊತೆಜೊತೆಗೆ ಕೈಹಿಡಿದು ಒಂದು ಹೆಜ್ಜೆಯಾದರೂ ನಡೆಯಲಿಲ್ಲ. ಎದುರು ಬದುರಾಗಿ ಕುಳಿತು ಒಂದು ಲೋಟ ಕಾಫಿಯನ್ನೂ ಗುಟುಕರಿಸಲಿಲ್ಲ. ಒಬ್ಬರು ಇನ್ನೊಬ್ಬರಿಗಾಗಿ ದಾರಿಯಲ್ಲಿ ನಿಂತು ಕಾಯಲಿಲ್ಲ‌. ಸಂಜೆಯ ಕಲ್ಲು ಬೆಂಚಿನಲ್ಲಿ ಒಬ್ಬರಿಗೊಬ್ಬರು ಆತು ಕುಳಿತು ನೆನಪಿನ ಜೋಳಿಗೆಯಿಂದ ಹಳೆಯದೊಂದು ಖುಷಿಯನ್ನೋ, ನೋವನ್ನೋ ಆಚೆತೆಗೆದು ಹೇಳುತ್ತಾ ಹೆಗಲಿಗೆ ತಲೆಯಾನಿಸಲಿಲ್ಲ..


ಅದರೂ ಅವಳು ನನ್ನ ಹುಡುಗಿ.


ನನ್ನ ನೂರು ಕರೆ, ಬಿನ್ನಹಗಳಿಗೆ ಕಿವುಡಿಯಾಗಿ ನಡೆದುಹೋದಳು. ಒಂದು ಹೊರಳು ನೋಟಕ್ಕಾಗಿ ಕಾದು ನಿಂತ ನನ್ನೆಡೆಗೆ ತಿರುಗಿಯೂ ನೋಡದೆ ಹೊರಟುಹೋದಳು. ಈ ಹೊತ್ತಿಗೆ ಅದ್ಯಾರೋ ನೂರು ಬೋಟುಗಳ ಒಡೆಯನ ತೋಳಿನಲ್ಲಿ ಬಂಧಿಯಾಗಿ ನನಗೆಂದೂ ಎಟುಕದ ಸಮುದ್ರದಲ್ಲಿ ವಿಹರಿಸುತ್ತಿರುವಳು.


ಆದರೂ ಅವಳು ನನ್ನ ಹುಡುಗಿ!


ಪ್ರೇಮದ ದಿವ್ಯ ಅನುಭೂತಿಯೆಂದರೆ ಇದೇ ಅಲ್ಲವೇ? ಎಂದೂ ಬಾರದವರನ್ನು ಕಳಿಸಿಕೊಡಲು ಒದ್ದಾಡುವುದು. ಸಿಕ್ಕಿಯೇ ಇಲ್ಲದ್ದನ್ನು ಕಳೆದುಕೊಳ್ಳುವ ವೇದನೆಯಲ್ಲಿ ನರಳುವುದು. ಶುರುವೇ ಆಗದ್ದನ್ನು ಮುಗಿಯಲು ಬಿಡೆನೆಂದು ಹಠ ಹಿಡಿಯುವುದು ಹಾಗೂ ಕೈತಪ್ಪಿಹೋದ ಮೇಲೂ ಅದು ನನ್ನದೇ ಎಂದು ನಂಬುವುದು...


“ಏನ್ ಸರ್? ಕನ್ನಡೀಲಿ ಹಳೇ ಹುಡುಗಿಯ ಬಿಂದಿ ಕಾಣ್ತಿದೆಯಾ?”
ವೈಶ್ಣವಿ ಗಿಟಿಗಿಟಿ ನಕ್ಕಳು.


“ಇಲ್ಲ ಮೇಡಂ. ಸುಶೀಲ ಟೀಚರ್ ಮಗಳ ಮುಂಬುಹಲ್ಲು ಕಾಣ್ತಿದೆ”
ನನ್ನ ಯೋಚನೆಗಳ ಸುಳಿವು ಬಿಟ್ಟುಕೊಡುವ ಇಚ್ಛೆಯಿಲ್ಲದೆ ಮಾರುತ್ತರ ನೀಡಿದೆ.


“ಕಂಡರೆ ನೋಡಿಕೋ. ಈಗ ಕನ್ನಡಿಬಿಟ್ಟು ಈಚೆ ಬಾ. ಅದು ಹೆಣ್ಣುಮಕ್ಕಳ ರಂಗಸ್ಥಳ” ಎನ್ನುತ್ತಾ ನನ್ನನ್ನು ಹಿಂದಕ್ಕೆಳೆದು ದರ್ಪಣದ ಮುಂದೆ ತಾನು ಸ್ಥಾಪಿತಳಾದಳು. ಮೂರು ಕವಲಾಗಿ ಸುಳಿಯೊಡೆದು ಪರಸ್ಪರ ಸುತ್ತಿಕೊಂಡಿದ್ದ ಜಡೆಯನ್ನು ಬೆನ್ನಿನಿಂದ ಮುಂದಕ್ಕೆ ವರ್ಗಾಯಿಸಿಕೊಂಡು ಅದರ ಬ್ರಶ್ ನಂತಹಾ ತುದಿಯನ್ನು ಬಾಚಿಕೊಳ್ಳತೊಡಗಿದಳು. ಬಾಚಿ ಬಾಚಿ ಮತ್ತಷ್ಟು ಚೂಪಾದ ಅದನ್ನು ಹಾವಿನಂತೆ ಸುರುಳಿಸುತ್ತಿ ತಲೆಯ ಹಿಂಭಾಗದ ಇಳಿಜಾರಿನಲ್ಲಿ ಎತ್ತಿ ಮಡಿಚಿಕಟ್ಟಿಕೊಂಡು ಥಟ್ಟನೆ ತಿರುಗಿ ಅಯಾಮ್ ರೆಡಿ! ಎಂದು ಕಣ್ಣುಮಿಟುಕಿಸಿದಳು. ಮೋಟು ಜಡೆಯನ್ನು ಹೀಗೇ ಬಾಚಿ ಬಾಚಿ ಎತ್ತಿಕಟ್ಟಿಕೊಳ್ಳುತ್ತಿದ್ದವಳು ಅಮ್ಮ. “ನಂಗೆ ಮೊದ್ಲು ಎಷ್ಟು ದಪ್ಪ ಜಡೆಯಿತ್ತು ಗೊತ್ತಾ? ಶಾಲೇಲಿ ಎಲ್ರೂ ನನ್ನ ನೋಡಿ ಹೊಟ್ಟೆಕಿಚ್ಚು ಪಡ್ತಿದ್ರು. ಅದ್ಯಾರ ದೃಷ್ಟಿ ಬಿತ್ತೋ ಏನೋ, ಎಲ್ಲಾ ಉದ್ರಿ ಹಿಂಗಾಯ್ತು” ಎನ್ನುತ್ತಾ ತನ್ನ ಮೋಟು ಜಡೆಯನ್ನೇ ಹಿಂದೆಂದೋ ಇದ್ದ ದಟ್ಟ ಕೂದಲೆಂಬಂತೆ ನೀವುತ್ತಾ ಬೇಸರಿಸುತ್ತಿದ್ದರೆ, ಉದುರಿ ಹೋಗಿರುವುದು ಹಾಗೂ ಈಗ ಇರುವುದು.. ಈ ಎರೆಡರ ಪ್ರಾಮುಖ್ಯತೆಯೂ ಗೊತ್ತಿಲ್ಲದ ಆರೇಳು ವರ್ಷದ ನಾನು ಅವಳು ಎತ್ತಿಕಟ್ಟಿದ ಜಡೆಯ ಉಂಡೆಯನ್ನು ಮೆಲ್ಲನೆ ಸೋಕಿ ಹೂಂ ಎನ್ನುತ್ತಿದ್ದೆ.


ಆದರೆ ‘ಜ್ಯೋತಿ’ಯ ಜಡೆ ಹೀಗಿರಲಿಲ್ಲ. ಅದು ದಟ್ಟ, ನೀಳ. ರಸ್ತೆ ಬದಿಯಲ್ಲಿ ಅವಳನ್ನೇ ಕಾಯುತ್ತಾ ನಿಂತ ನನ್ನನ್ನು ನೋಡಿಯೂ ನೋಡದಂತೆ ಬೆನ್ನು ಹಾಕಿ ನಡೆಯುತ್ತಿದ್ದವಳ ಬೆನ್ನಿನ ತುಂಬಾ ಲೋಲಕದಂತೆ ನೇತಾಡುತ್ತಾ ನನ್ನನ್ನು ಮತ್ತಷ್ಟು ಮೋಹಕನನ್ನಾಗಿಸುತ್ತಿತ್ತು. ಅದೆಷ್ಟೇ ದೂರದಿಂದ ನೋಡಿದರೂ ಅದು ಅವಳೇ ಎಂದು ಗುರುತು ಹತ್ತುತ್ತಿದ್ದುದೇ ಅವಳ ಆ ನೀಳ ಜಡೆಯಿಂದ. ತುಂಬು ಬೆನ್ನಿನ ಮೇಲೆ ಕಪ್ಪು ಬಿಳಲಿನಂತೆ ಇಳಿಬಿದ್ದ ಜಡೆ, ಕೈಯನ್ನು ಆಚೀಚೆ ಬೀಸದೇ ಮೊಲದಂತೆ ಮುದುರಿಕೊಂಡು ನಡೆಯುವ ಭಂಗಿ… ಇವೆಲ್ಲ ಒಂದುಗೂಡಿ ಅವಳೆಂಬ ಚೆಲುವೆಗೆ ಪ್ರತ್ಯೇಕವಾದ ನಿಲುವೊಂದನ್ನು ಕೊಟ್ಟಿದ್ದವು. ಬೆನ್ನು ಹಾಕಿ ನಡೆದಾಗಲೂ ನನಗೆ ತೋರದೇ ಮರೆಮಾಚಿರುವ ಅವಳ ಇನ್ನೊಂದು ಮುಖ ನನ್ನತ್ತಲೇ ನೋಡಿ ಮುಗುಳ್ನಗುತ್ತಿರುವಂತೆ ನಾನು ಪರವಶನಾಗುತ್ತಿದ್ದೆ. ಈಗಲೂ ಅಷ್ಟೇ, ಬಸ್ಸಿನಲ್ಲಿ  ಕುಳಿತು ಸಾಗುವಾಗ ಹೊರಗಡೆ ರಸ್ತೆಯಲ್ಲಿ, ಸೆಕೆಂಡಿನ ನೂರೊಂದನೇ ಭಾಗದಲ್ಲಿ ಅವಳು ರಪ್ಪನೆ ಹಾದುಹೋದರೂ ನನಗೆ ತಿಳಿದುಬಿಡುತ್ತದೆ… ಅದು ಅವಳೇ ಎಂದು. ಬಹುಷಃ ಈ ಅಂತರಂಗದೊಳಗೆ ಅವಳಷ್ಟು ಗಾಢವಾಗಿ ಇನ್ಯಾವ ರೂಪವೂ ಅಚ್ಚೊತ್ತಲಾರದೇನೋ?


ಯೋಚನೆಗಳ ಹರಿವು ಬತ್ತುವ ಹೊತ್ತಿಗೆ ನಮ್ಮನ್ನು ಹೊತ್ತ ಬಿಎಂಟಿಸಿ ಬಸ್ಸು ಮೆಜಸ್ಟಿಕ್ ನಿಲ್ದಾಣ ಪ್ರವೇಶಿಸುತ್ತಿತ್ತು.


              *****************


“ಅಯ್ಯೋ.. ನೀರಿನ ಬಾಟಲಿ ಮರೆತೇ ಬಿಟ್ಟೆ!”


ನಿಲ್ದಾಣದ ಬೆಂಚಿನ ಮೇಲೆ ಚಕ್ಕಳಮಕ್ಕಳ ಹಾಕಿಕೊಂಡು ತಪಸ್ವಿನಿಯಂತೆ ಕುಳಿತಿದ್ದವಳು ಥಟ್ಟನೆ ಜಾಂಬವತಿಯಂತೆ ಕೆಳಗೆರಗಿಕೊಂಡಳು.


“ಅಷ್ಟಕ್ಕೇ ಇಷ್ಟ್ಯಾಕೆ ಶಾಕ್ ಆಗ್ತೀಯ ಮಾರಾಯ್ತೀ? ಅಲ್ನೋಡು, ಆ ಗೂಡಂಗಡೀಲಿ ನಿನ್ಹಂಗೆ ಬಾಟಲಿ ಮರೆತುಬರುವವರಿಗಂತಾನೇ ಬಾಟಲಿ ಬಾಟಲಿಗಟ್ಟಲೆ ನೀರಿಟ್ಟುಕೊಂಡಿದ್ದಾರೆ. ನಿಜ ಹೇಳಬೇಕಂದ್ರೆ ಅವರ ಹೊಟ್ಟೆಪಾಡು ನಡೆಸುವವರೇ ನಿನ್ನಂತಹಾ ಮರೆಗುಳಿ ಜಾಂಬವತಿಯರು” ಎಂದು ಗೂಡಂಗಡಿಯತ್ತ ನಡೆಯತೊಡಗಿದೆ. ಹಿಂದಿನಿಂದ “ಎರೆಡು ಬಾಟ್ಲಿ ತಗೊಂಬಾ” ಎಂದು ಕೂಗಿದ್ದು ಕೇಳಿಸಿದರೂ ಕೇಳಿಸದಂತೆ ನಡೆದು ಅರ್ಧ ಲೀಟರ್ ನ ಒಂದು ಬಾಟಲಿಯೊಂದಿಗೆ ಮರಳಿದೆ. ಹುಡುಗಿ ತಪಸ್ವಿನಿಯ ಫೋಸಿಗೆ ಮರಳಿದ್ದಳು.


“ಎರೆಡು ಬಾಟ್ಲಿ ತಗೊಂಬಾ ಅಂದ್ನಲ್ಲಾ? ಯಾಕೆ ಒಂದೇ ತಂದೆ?” ಬಾಟಲಿಯ ಮುಚ್ಚಳ ತೆರೆಯುತ್ತಲೇ ಆಕ್ಷೇಪಿಸಿದಳು.


“ಸ್ನಾನ ಮಾಡ್ಬೇಕಂತಿದೇಯೇನು? ಇಷ್ಟು ಸಾಕು ಸುಮ್ನಿರು. ಪ್ರಯಾಣ ಮಾಡುವಾಗ ಜಾಸ್ತಿ ನೀರು ಕುಡೀಬಾರ್ದು. ನಾನೇನೂ ಮಧ್ಯದಲ್ಲಿ ನೀರು ಕುಡಿಯಲ್ಲ. ಇನ್ನೊಂದು ಬಾಟಲ್ ಯಾಕೆ, ತಲೆಗೆ ಜಪ್ಪೋಕೆ?” ಪ್ರಶ್ನಿಸಿದೆ.


“ನೋಡು ಪುಟ್ಟಾ.. ಹೆಣ್ಮಕ್ಕಳ ಹತ್ರ ಪ್ರತಿಯೊಂದು ವಿಷಯಾನೂ ಯಾಕೆ ಏನು ಅಂತ ವಿವರಣೆ ಕೇಳಬಾರದು. ವಿವರಿಸಲಾಗದ, ವಿವರಿಸಿದರೂ ನಿಮ್ಮಂಥಾ ಶಾಣ್ಯಾರಿಗೆ ಅರ್ಥವಾಗದ ಎಷ್ಟೋ ಸಂಗತಿಗಳಿವೆ ನಮ್ಮೀ ಪ್ರಪಂಚದಲ್ಲಿ. ಸುಮ್ನೇ ಜಾಣ ಮರಿ ಥರಾ ಹೋಗಿ ಇನ್ನೊಂದು ಬಾಟಲಿ ತಗೊಂಬಾ ನಡಿ… “
ಬೆನ್ನಿಗೆ ಕೈಯಿಟ್ಟು ತಳ್ಳಿದವಳನ್ನು ದುರದುರನೆ ನೋಡಿ ಮೇಲೆದ್ದೆ. ಏನಾದರೂ ಹೇಳಿ ರೇಗಿಸಬೇಕೆನಿಸುತ್ತಿತ್ತಾದರೂ ಅವಳು ಹೇಳಿದ ‘ಹೆಣ್ಮಕ್ಕಳ ವಿಷಯ’ ಎಂಬ ಪದ ನನ್ನ ಬಾಯಿ ಕಟ್ಟಿಸಿತು. ಮತ್ತೊಂದು ನೀರಿನ ಬಾಟಲಿ ಕೊಂಡು ತಿರುಗಿ ನೋಡಿದರೆ ತಲೆಯ ತನಕ ಪುಲ್ ಓವರ್ ಎಳೆದುಕೊಂಡು ಬೆಂಚಿಗೆ ಅಂಟಿ ಕುಳಿತಿರುವ ಹುಡುಗಿ ಛಳಿಗೆ ಸಿಕ್ಕ ಮೊಲದಂತೆ ಕಂಡಳು.


ಇಂದು ಈ ರಾತ್ರಿಯಲ್ಲಿ ಒಟ್ಟಿಗೇ ಹೊರಟು ನಿಂತಿರುವ ಈ ನಮ್ಮ ಪ್ರಯಾಣ ಆರಂಭವಾದದ್ದು ಬರೀ ಒಂದು ವರ್ಷದ ಕೆಳಗೆ. ಅದೊಂದು ನೆಮ್ಮದಿಯ ಭಾನುವಾರದಂದು ಗಿರಿನಗರದ ಬೀದಿಯೊಂದರಲ್ಲಿ ಅಕ್ಕನ ಮಗನ ಕೈಹಿಡಿದು ನಡೆಯುತ್ತಿದ್ದಾಗ ದಾರಿಬದಿಯ ತರಕಾರಿಯಂಗಡಿಯಿಂದ ಆಚೆ ಬರುತ್ತಾ ಕಣ್ಣಿಗೆ ಬಿದ್ದ ಈ ಐದಡಿ ಕುಳ್ಳದ ಹೆಣ್ಣು ಆಕೃತಿಗೂ ನನಗೂ ಹದಿಮೂರು ವರ್ಷಗಳ ಹಿಂದಿನ ಪರಿಚಯವಿದೆಯೆಂಬುದು ಥಟ್ಟನೆ ನೆನಪಾಗಿತ್ತು. ಎಲ್ಲೋ ಕೈಮರೆತಿದ್ದ ನವಿಲುಗರಿಯೊಂದು ಮತ್ತೆಂದೋ, ಯಾವುದೋ ಪುಸ್ತಕದ ಪುಟ ತೆರೆದಾಗ ಅಚಾನಕ್ಕಾಗಿ ಸಿಕ್ಕಿಂತೆ ಸಿಕ್ಕಿದವಳು ಬಾಲ್ಯದ ಗೆಳತಿ ವೈಶ್ಣವಿ. ಅವಳೊಬ್ಬಳೇ ಸಿಕ್ಕಿದ್ದರೆ ಆ ಭೇಟಿ ‘ಹೇಗಿದ್ದೀ? ಅರಾಮಾ? ಈಗೆಲ್ಲಿದ್ದೀ? ಮದುವೆಯಾಯ್ತಾ?’ ಎಂಬ ಪ್ರಿ-ರೆಕಾರ್ಡೆಡ್ ಕುಶಲೋಪರಿಯಲ್ಲೇ ಮುಗಿದುಹೋಗುತ್ತಿತ್ತೇನೋ? ಆದರೆ ಜೊತೆಯಲ್ಲಿ ಅವಳ ತಾಯಿ- ಸುಶೀಲ ಟೀಚರ್ ಕೂಡಾ ಇದ್ದರಲ್ಲಾ, ಹಾಗಾಗಿ ಆ ಭೇಟಿ ಅವಳ ಮನೆಯ ತನಕವೂ ಕರೆದೊಯ್ದಿತ್ತು. ಅಂದಿನ ಆ ಅನಿರೀಕ್ಷಿತ ಕ್ಷಣದಲ್ಲಿ ಮತ್ತೆ ಭೇಟಿಯಾದವರು ನಾನು ಹಾಗೂ ವೈಶ್ಣವಿಯಾದರೂ ಆ ನೆಪದಲ್ಲಿ ಹಳೆಯ ಸ್ನೇಹವನ್ನು ಮತ್ತೆ ಗಾಢವಾಗಿಸಿಕೊಂಡವರು ಊರಿನಲ್ಲಿರುವ ನನ್ನ ಅಮ್ಮ ಹಾಗೂ ಸಾಗರದಲ್ಲಿ ಟೀಚರ್ ಆಗಿರುವ ಅವಳ ಅಮ್ಮ. ಹದಿಮೂರು ವರ್ಷಗಳ ಹಿಂದೆ ಮುಗಿದೇ ಹೋಯಿತೆಂಬಂತೆ ಕೊನೆಗೊಂಡಿದ್ದ ಅವರಿಬ್ಬರ ಪರಿಚಯ ನನ್ನ ಕಣ್ಣಿಗೆ ವೈಶ್ಣವಿ ಬೀಳುವ ಮೂಲಕ ಪುನರಾರಂಭವಾಗಿತ್ತು. ಒಂದೇ ತವರಿನ ಒಂದೇ ಕಾಲಘಟ್ಟದಿಂದ ಬಂದವರಾದ ಅವರಿಗೆ ಆತ್ಮೀಯರಾಗುವುದಕ್ಕೆ ನಮಗಿಂತಲೂ ಹೆಚ್ಚಿನ ನೆಪಗಳಿದ್ದವು. ಇಪ್ಪತ್ತು ವರ್ಷಗಳ ಕೆಳಗೆ ಇಸ್ಕೂಲಿನಲ್ಲಿ ಓದುತ್ತಿದ್ದ ನಾನು ಒದಗಿಸಿದ, ‘ಶಾಲೆಗೆ ಹೊಸದಾಗಿ ವರ್ಗವಾಗಿ ಬಂದಿರುವ ಟೀಚರ್ ಕೂಡಾ ಸಾಗರದವರೇ’ ಎಂಬ ಚಿಕ್ಕ ಮಾಹಿತಿಯಿಂದ ಬೆಳೆದ ಸ್ನೇಹ ಅವರದು. ಊರಿನಲ್ಲಿದ್ದಷ್ಟೂ ದಿವಸ ಜೊತೆಯಾಗಿ ಹಪ್ಪಳ, ಸಂಡಿಗೆ ಮಾಡುತ್ತಾ, ಗಿಡಗಂಟಿಗಳ ನೆಟ್ಟು ಸಲಹುತ್ತಾ, ದೊಡ್ಡದನಿಯಲ್ಲಿ ಹರಟುತ್ತಾ ಅವರು ಕಳೆಯುತ್ತಿದ್ದ ಅದೇ ಭಾನುವಾರದ ಸಂಜೆಗಳನ್ನು ನಾನು ಹಾಗೂ ವೈಶ್ಣವಿ ಧರೆಗುಂಡಿಯ ಮಣ್ಣಿನಲ್ಲಿ ಜಾರುಬಂಡಿಯಾಡುತ್ತಾ, ತೋಟದ ಹಳ್ಳದಲ್ಲಿ ಆಣೆಕಟ್ಟು ಕಟ್ಟುತ್ತಾ ಸವಿಯುತ್ತಿದ್ದೆವು. ‘ಗುಬ್ಬಚ್ಚಿ ಗುಬ್ಬಚ್ಚಿ ಬಾ.. ಬಾ.. ಬಣ್ಧದ ಚಾಪೀಸ್ ಕೊಡ್ತೀವಿ.‌.” ಎಂದು ಮನೆಯ ಹಿಂದಿನ ಮರದಡಿ ನಿಂತು ಗುಬ್ಬಿಗಳನ್ನು ಹಾಡಿ ಕರೆದಿದ್ದೆವು. ಪ್ರತಿದಿನ ಮುಂಜಾನೆ ಶಾಲೆಗೆ ಹೊರಡುವ ವೇಳೆಯಲ್ಲಿ ಊರ ಮಧ್ಯದ ಸುಬ್ರಹ್ಮಣ್ಯ ಸರ್ಕಲ್, ಬಲಗಡೆಯ ಮಣ್ಣುದಾರಿಯಿಂದ ಬರುವ ನನ್ನನ್ನೂ, ಎಡಗಡೆಯ ಟಾರು ರಸ್ತೆಯಿಂದ ಬರುವ ಅವಳನ್ನೂ ಜೊತೆಮಾಡಿ ಶಾಲೆಗೆ ಕಳುಹಿಸಲು ಕಾಯುತ್ತಿತ್ತು. ಟೀಚರ್ ರ ಮಗಳ ಜೊತೆಗೆ ಮಾತ್ರವಲ್ಲದೆ ಸಾಕ್ಷಾತ್ ಟೀಚರ್ ರ ಜೊತೆಗೂ ಆತ್ಮೀಯತೆಯಿಂದಿರುವವನೆಂಬುದು ಇಡೀ ಶಾಲೆಯಲ್ಲೇ ನನಗೊಂದು ಗತ್ತನ್ನು ಕೊಟ್ಟಿತ್ತು ಹಾಗೂ ಮುಂದಿನ ಆರು ವರ್ಷಗಳ ಕಾಲ ಅದು ಮೆಂಯ್ಟೇನ್ ಆಗಿತ್ತು.


ಆದರೆ ಆರನೇ ವರ್ಷದ ಕೊನೆಯ ಬೇಸಿಗೆ ಎಂದಿನಂತೆ ಬರಲಿಲ್ಲ.


ಜೊತೆಯಾಗಿ ತೇಲಿಬಿಟ್ಟ ಹತ್ತಾರು ದೋಣಿಗಳಾಗಲೇ ಕಡಲು ತಲುಪಿದ್ದವು. ನಾವು ಕಿತ್ತಾಡಿಕೊಳ್ಳತ್ತ ನೀರೆರೆದ ಗಿಡಗಳಲ್ಲಾಗಲೇ ಮಲ್ಲಿಗೆ, ಸೇವಂತಿಗೆಗಳು ಅರಳಿನಿಂತಿದ್ದವು. ಹಿಂದಿನ ಅಂಗಳದ ಹಲಸಿನ ಮರದಲ್ಲಿ ನಾವು ಕರೆದ ಗುಬ್ಬಿಗಳೆಲ್ಲ ಬಂದು ಕುಳಿತು ನಮ್ಮನ್ನೇ ಕರೆಯುತ್ತಿದ್ದವು.


ವೈಶ್ಣವಿ ಹೊರಟುನಿಂತಿದ್ದಳು.


‘ಟ್ರಾನ್ಸ್ ಫರ್’ ಎಂಬ ಗಾಡಿ ನಿಲ್ದಾಣದಲ್ಲಿ ನಿಂತು ಕರೆಯುತ್ತಿತ್ತು. ನನ್ನಮ್ಮ ಹಾಗೂ ಸುಶೀಲ ಟೀಚರ್ ಒಬ್ಬರನ್ನೊಬ್ಬರು ತಬ್ಬಿಕೊಂಡು ಅತ್ತರು. ನಾವು ಸುಮ್ಮನೆ ನಿಂತೆವು. ಸಂಜೆಯ ಹೊತ್ತಿಗೆ ಧೂಳೆಬ್ಬಿಸುತ್ತಾ ಬಂದ ಪಟ್ಟಣದ ಬಸ್ಸಿನೊಳಗೆ ಅವರು ಎಳೆದುಕೊಂಡು ಹತ್ತಿದ ಸಾಮಾನು ಸರಂಜಾಮುಗಳ ನಡುವೆ ತಾನೂ ಒಂದು ವಸ್ತುವೆಂಬಂತೆ ಏರಿಕುಳಿತ ವೈಶ್ಣವಿ ನೆನಪಿನ ಪುಟಗಳತ್ತ ಸಾಗಿಮರೆಯಾದಳು.


                   ****************


ಮರಳಿ ಸಿಕ್ಕ ಗೆಳತಿಯ ಬಾಡಿಗೆ ಮನೆಗೆ ಹೋದಾಗ ಕಾಫಿಯ ಜೊತೆಗೆ ಸಿಕ್ಕ ಮತ್ತೊಂದು ಸಂಗತಿಯೆಂದರೆ ಅವಳ ಮದುವೆಯ ಸಮಾಚಾರ. ಸಾಮಾನ್ಯದವರ್ಯಾರನ್ನೂ ಒಪ್ಪದ ಮಗಳಿಗೆ ಅಸಾಮಾನ್ಯ ವರನೊಬ್ಬನನ್ನು ಹುಡುಕೀ ಹುಡುಕೀ ಅವಳ ತಾಯಿ ದಣಿದಿದ್ದರು.  ಸಿಕ್ಕು, ನಾನೂ ಇವಳ ಆತ್ಮೀಯರ ಪಟ್ಟಿಯಲ್ಲೊಬ್ಬನೆಂದು ಖಾತ್ರಿಯಾದ ದಿನವೇ ಇವಳ ಶಾದಿ ಡಾಟ್ ಕಾಂನ ಪ್ರೊಫೈಲ್ಲನ್ನು ಅಂದಗಾಣಿಸುವ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. “ಎಂಥೆಂಥಾ ಸಂಬಂಧಗಳು ಬಂದಿದ್ವು ಗೊತ್ತಾ? ಚಿನ್ನದ ತಕ್ಕಡೀಲಿ ತೂಗಬಹುದಾದಂಥಾ ಗಂಡುಗಳು. ನಾನು ಬರೀ ಆಸ್ತಿ ಬಗ್ಗೆ ಮಾತಾಡ್ತಿಲ್ಲ ಹಾಂ… ಆದ್ರೆ ಇವನಿಗೆ ಕೂದಲು ಕಡಿಮೆ, ಅವನ ಹೈಟ್ ಕಮ್ಮಿ, ಇವನು ಉರಿಸಿದ್ದಪ್ಪನಂತಿದ್ದಾನೆ, ಅವನು ಸಾಧು, ಅವ ಒಂಥರಾ ಮಳ್ಳನ ಥರಾ ಇದಾನೆ ಅಂತ ಒಬ್ಬೊಬ್ಬರಿಗೂ ಒಂದೊಂದು ನೆಪ ಹೇಳಿ ನಿರಾಕರಿಸಿಬಿಟ್ಟಳು. ಈಗ ನಿಮ್ಮೂರಿನಿಂದಲೇ ಎರೆಡು ಒಳ್ಳೆಯ ಸಂಬಂಧಗಳು ಬಂದಿದಾವೆ. ಒಬ್ಬ ಶ್ರೀನಿವಾಸ ಕೇಕೋಡರ ಮಗ. ಒಳ್ಳೆಯ ಗುಣದವನು. ಸ್ಥಿತಿವಂತರೂ ಹೌದು. ಹೈದರಾಬಾದಿನಲ್ಲಿ ಇಂಜಿನಿಯರ್ ಆಗಿದಾನೆ. ಇನ್ನೊಬ್ಬ ಪರಮೇಶ ಶಾಸ್ತ್ರಿಗಳ ಮಗ. ಅವನ ಗುಣದ ಬಗ್ಗೆ ಅವನ ಇಡೀ ಕೇರಿಯೇ ಹಾಡಿಕೊಂಡು ಹೊಗಳತ್ತೆ! ಬಿಟ್ಟರೆ ಸಿಗದ ಸಂಬಂಧಗಳು. ನೀನೇ ಏನಾದ್ರೂ ಬಣಿಸಿ ಅವಳನ್ನ ಮದುವೆಗೊಪ್ಪಿಸು ವಿಹಾರ” ಎಂದು ಹೆಚ್ಚೂ ಕಡಿಮೆ ಅಂಗಲಾಚಿದಂತೆ ಕೇಳಿಕೊಂಡಿದ್ದರು.


ಆದರೆ ಮದುವೆಯೆಂದೊಡನೆ ವೈಶ್ಣವಿಯ ಕ್ಯಾಸೆಟ್ ಬೇರೆಯ ರಾಗವನ್ನೇ ಹಾಡುತ್ತಿತ್ತು. “ಬಡತನ ಮತ್ತು ಕುಡುಕತನ- ಇವೆರೆಡೂ ಕೊಡುವ ಹಿಂಸೆಗಳೆಂಥಾದ್ದೆಂಬುದನ್ನು ನಾನು ನೋಡಿದೀನಿ ಕಣೋ. ಅಮ್ಮನಿಗಿದು ಹೆಗಲ ಮೇಲಿನ ಜವಾಬ್ದಾರಿ ಕಳೆದುಕೊಳ್ಳುವ ಸಂಗತಿ. ಆದರೆ ನನಗೆ ಜೀವನ ಪೂರ್ತಿ ಸಂಬಂಧವೊಂದನ್ನು ಹೆಗಲಮೇಲಿಟ್ಟುಕೊಂಡು ಬದುಕಬೇಕಾದ ಸಂಗತಿ! ಗೊತ್ತೇ ಇಲ್ಲದವನೊಬ್ಬನ ಬೊಗಸೆಯೊಳಗೆ ನನ್ನಿಡೀ ಬದುಕನ್ನೇ ಇಟ್ಟು ‘ಒಪ್ಪಿಸಿಕೋ ದೊರೆಯೇ’ ಅನ್ನುವ ಮೊದಲು, ಇರುವ ಒಂದೇ ಒಂದು ಬದುಕಿನುದ್ದಕ್ಕೂ ನನ್ನನ್ನು ಸಂಭಾಳಿಸುವ ಯೋಗ್ಯತೆ ಅವನಿಗಿದೆಯಾ ಅಂತ ಸೂಕ್ಷ್ಮವಾಗಿ ಗಮನಿಸುವುದರಲ್ಲಿ ಏನು ತಪ್ಪಿದೆ?” ಎಂದ ಅವಳ ಮಾತಿನಲ್ಲಿ ನನಗೆ ನನ್ನ ಜ್ಯೋತಿ ಆಡಿಹೋದ ಕೊನೆಯ ಮಾತುಗಳೇ ಅನುರಣಿಸಿದ್ದವು:


“ನಾನು ಚೆನ್ನಾಗಿ ಓದಿಕೊಂಡೆ. ಒಳ್ಳೆಯ ಕೆಲಸ ಹಿಡಿದೆ. ಯಾಕೆ ಹೇಳಿ ವಿಹಾರ್? ನನ್ನ ಹಾಗೂ ಗಂಡು ದಿಕ್ಕಿಲ್ಲದ ನನ್ನ ಅಪ್ಪ-ಅಮ್ಮನ ಸುಭದ್ರ ನಾಳೆಗಳಿಗೋಸ್ಕರ ಅಲ್ವಾ? ನನಗೆ ಗೊತ್ತು. ಮದುವೆಯ ವಿಷಯದಲ್ಲಿ ನನಗೆ ಹತ್ತಾರು ಆಯ್ಕೆಗಳಿವೆ ಹಾಗೂ ಅವುಗಳ ಪೈಕಿ ನಾನು ಉತ್ತಮವಾದುದ್ದನ್ನೇ ಆಯ್ದುಕೊಳ್ಳುತ್ತೇನೆ. ಈಗ, ಪ್ರೀತಿಯೆಂಬ ಈ ಕ್ಷಣಿಕ ಭಾವುಕತೆಗೆ ಸೋತು ಒಂದಿಡೀ ಬದುಕನ್ನು ನನ್ನ ಕಲ್ಪನೆಯಂತಿರದ ನಿಮ್ಮೊಂದಿಗೆ ಹಂಚಿಕೊಳ್ಳಲಾರೆ. ನನ್ನನ್ನು ಕ್ಷಮಿಸಿ…”


ಪ್ರೀತಿ, ಮದುವೆ, ಸಂಬಂಧ.. ಇವೆಲ್ಲ ಕೇಳಲಿಕ್ಕೆ ಎಲ್ಲರಿಗೂ ಒಂದೇ ರೀತಿಯ ಪದಗಳು. ಆದರೆ ಪ್ರತಿಯೊಬ್ಬರ ಅಂತರಾಳದಲ್ಲೂ ಹೇಗೆ ಬೇರೆಬೇರೆಯ ಚಿತ್ರವನ್ನೇ ಬಿಡಿಸುತ್ತಾವಲ್ಲಾ? ಇವೆಲ್ಲ ಒಂದಾಗಿ ಸೇರುವ ಆ ಬಿಂದು ಯಾವುದು? ಮದುವೆಯಾ? ಪ್ರತಿಯೊಂದು ಮದುವೆಯಲ್ಲೂ ಈ ಎಲ್ಲ ಸಂಗತಿಗಳೂ ಒಂದಾಗಿ ಕೂಡುತ್ತವೆಯಾ? ನಮ್ಮೆಲ್ಲರಿಗೂ ನಾವ್ನಾವು ಬಯಸಿದ್ದೇ ದೊರಕುತ್ತದೆಯಾ? ಸುತ್ತುತ್ತಿರುವ ಚಕ್ರದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಬೆನ್ನಟ್ಟುತ್ತಾ ತಿರುಗುತ್ತಿರುವ, ಯಾರಿಗೆ ಯಾರೂ ಸಿಗದ ಬೇರೆ ಬೇರೆ ಅಂಚುಗಳೇ ನಾವೆಲ್ಲ?
ಕಿಟಕಿಯಾಚೆಗೆ ಸರಿದುಹೋಗುತ್ತಿದ್ದ ಕತ್ತಲಿನ ಚಿತ್ರಗಳಂತೆಯೇ ಪ್ರೆಶ್ನೆಗಳು ಹಾದುಹೋಗುತ್ತಿದ್ದವು.


                  ****************


ಬೆಳಗಿನ ಎರೆಡನೇ ಜಾವದ ಕತ್ತಲ ರಸ್ತೆಗೆ ಪ್ರಖರ ಬೆಳಕನ್ನೆರಚುತ್ತಾ ಬಸ್ಸು ಮುಂದಕ್ಕೋಡುತ್ತಿತ್ತು. ನನ್ನ ಹೆಗಲಿಗೊರಗಿಕೊಂಡಿದ್ದ ವೈಶ್ಣವಿ ಗಾಢವಾದ ನಿದ್ರೆಯಲ್ಲಿದ್ದಳು. ಅವಳ ನಿದ್ರೆಗೆ ಭಂಗ ಬರದಂತೆ ಕುಳಿತಲ್ಲೇ ಮೆಲ್ಲನೆ ಮಿಸುಕಾಡಿ ನನ್ನ ಭಂಗಿಯನ್ನು ಕೊಂಚ ಬದಲಾಯಿಸಿದೆ. ಆದರೂ ಆ ಸೂಕ್ಷ್ಮ ಅಲುಗಾಟದಿಂದ ಕೊಂಚ ವಿಚಲಿತಳಾದಂತೆ ನಿದ್ರೆಗಣ್ಣಿನಲ್ಲೇ ಏನೋ ಮಣಗುಟ್ಟಿದಳು. ನನಗೆ ಆಶ್ಚರ್ಯವಾಯಿತು. ಎಷ್ಟು ಗಾಢವಾಗಿ ನಿದ್ರಿಸುತ್ತಿದ್ದಾಳೆ… ಕನವರಿಸುವಷ್ಟು! ಈ ಇರುಳಿನ ಈ ಪ್ರಯಾಣದಲ್ಲಿ ನನ್ನ ಹೆಗಲಿಗೊರಗಿ ನಿದ್ರಿಸುತ್ತಿದ್ದಾಳೆ. ಮುಂದಿನ ವರುಷ ಇದೇ ಇರುಳಿನ ಇಂಥಾದ್ದೇ ಪ್ರಯಾಣದಲ್ಲಿ ತನ್ನ ಗಂಡನ ಹೆಗಲಿಗೊರಗಿ ಇಷ್ಟೇ ನಿಷ್ಕಲ್ಮಷವಾಗಿ ನಿದ್ರಿಸುತ್ತಿರುತ್ತಾಳೆ. ಅವರ ನಡುವೆ ಪ್ರೀತಿಯಿರುತ್ತದೆ. ದಂಪತಿಗಳೆಂಬ ಅನ್ಯೋನ್ಯತೆಯಿರುತ್ತದೆ. ಹಾಗಾದರೆ ನಮ್ಮ ನಡುವಿರುವುದೇನು? ಸ್ನೇಹವಾ? ನಂಬಿಕೆಯಾ? ವಿಶ್ವಾಸವಾ? ಅಥವಾ ಅವೆಲ್ಲವನ್ನೂ ಮೀರಿದ ಮತ್ಯಾವುದೋ ಮಧುರವಾದ, ಆದರೆ ಅಷ್ಟೇ ಕ್ಷಣಿಕವಾದ ನಂಟಾ? ಮುಂದೊಂದು ದಿನ ಗಂಡನ ಹೆಗಲಿಗೊರಗಿ ನಿದ್ರಿಸುವಾಗ ಇವಳಿಗೆ ಈ ದಿನ, ಈ ಇರುಳು, ಈ ಪ್ರಯಾಣಗಳೆಲ್ಲಾ ನೆನಪಾಗುತ್ತಾವಾ? ತನಗೆ ಎಚ್ಚರವಾಗದಿರಲೆಂದು ಮಿಸುಕಾಡದೇ ಕುಳಿತಿದ್ದ ನಾನು ನೆನಪಾಗುತ್ತೇನಾ?


ಜ್ಯೋತಿಗೆ ನನ್ನ ನೆನಪಾಗುತ್ತಿದೆಯಾ?


ನಾನು ಅವಳಿಗಾಗಿ ಕಾದು ನಿಂತ ಜಾಗ, ಆಡಿದ ಮಾತು, ಹಿಂಬಾಲಿಸಿದ ಹಾದಿ, ಕೊಟ್ಟ ಹೂವು.. ಇವುಗಳಲ್ಲಿ ಯಾವೊಂದಾದರೂ ನನ್ನ ನೆನಪು ತರದೇ ಹೋಗುತ್ತವೆಯಾ?


ಅವಳ ನೆನಪುಗಳು ಬಸ್ಸಿನ ಕಿಟಕಿ ಮುಚ್ಚಿದರೂ ಅಗೋಚರ ರಂಧ್ರವೊಂದರಿಂದ ನಸುಳಿ ಬರುವ ಛಳಿಗಾಳಿಯಂತೆ ನುಗ್ಗಿಬರತೊಡಗಿದವು. ಎಲ್ಲಿರಬಹುದು ಅವಳು? ಎಂದೂ ಮುಗಿಯದ ಈ ದಿವ್ಯ ಕನವರಿಕೆಯನ್ನು ನನ್ನ ಪಾಲಿಗೆ ಕೊಟ್ಟು ಈ ಕ್ಷಣದಲ್ಲಿ ಅದ್ಯಾರ ಹೆಗಲಿಗೊರಗಿ ನಿದ್ರಿಸುತ್ತಿರಬಹುದು?


ಹೀಗೆ ನಾನು ಈ ಲೋಕದ್ದೇ ಅಲ್ಲವೆಂಬಂತಹಾ ಯೋಚನೆಗಳಲ್ಲಿ ಕಳೆದುಹೋಗಿದ್ದಾಗಲೇ ಹೆಗಲಿಗೊರಗಿದ್ದ ವೈಶ್ಣವಿಯಲ್ಲೇನೋ ತಳಮಳ ಸಂಭವಿಸತೊಡಗಿತು. ನಾನು ನೋಡುತ್ತಿರುವಂತೆಯೇ ಬೆಚ್ಚಿದಂತೆ ಕಣ್ತೆರೆದು ಒಂದು ಕೈಯನ್ನು ಬಾಯಿಗಡ್ಡವಿಟ್ಟುಕೊಂಡು, ಇನ್ನೊಂದರಿಂದ ಮುಚ್ಚಿದ ಕಿಟಕಿಯ ಗಾಜನ್ನು ಎಳೆಯತೊಡಗಿದಳು. ತಕ್ಷಣ ಪರಿಸ್ಥತಿಯ ಅರಿವಾದ ನಾನು ಕಿಟಕಿಯನ್ನು ಹಿಂದಕ್ಕೆಳೆದು ಅವಳಿಗೆ ತಲೆ ಹೊರಗೆ ಹಾಕಲು ಅನುವುಮಾಡಿಕೊಟ್ಟೆ. ಮುಂದಿನ ಹಲವು ನಿಮಿಷಗಳ ಕಾಲ ಬಿಟ್ಟೂ ಬಿಟ್ಟೂ ಕರುಳೇ ಆಚೆ ಬಂದಂತೆ ಹೊಟ್ಟೆಯಲ್ಲಿರುವುದನ್ನೆಲ್ಲಾ ಕಾರಿಕೊಂಡು ಸೀಟಿಗೊರಗಿದವಳನ್ನು ನೋಡಿ ಕಳವಳವಾಯಿತು. ಪಾಪ, ಯಾವಾಗಲೂ ಸ್ಲೀಪರ್ ಟ್ರೈನಿನಲ್ಲೋ, ರಾಜಹಂಸದಲ್ಲೋ ಓಡಾಡುತ್ತಿದ್ದವಳು. ಈ ಬಾರಿ ನಾನೇ ಒತ್ತಾಯ ಮಾಡಿ ನೆಟ್ಟಗಿನ ಸೀಟುಗಳ ಒರಟು ಪ್ರಯಾಣದ ಕರ್ನಾಟಕ ಸಾರಿಗೆ ಬಸ್ಸು ಹತ್ತಿಸಿದ್ದೆ.


“ಪ್ರಯಾಣ ಮಾಡುವಾಗ ವಾಂತಿಯಾಗುತ್ತೆ ಅಂತ ಮೊದಲೇ ಹೇಳೋದಲ್ವೇನೇ ಹುಡುಗೀ.. ಸ್ಲೀಪರ್ರೋ, ಸೆಮಿ ಸ್ಲೀಪರ್ರೋ ಬುಕ್ ಮಾಡ್ತಿದ್ದೆ..”
ಪಶ್ಚಾತ್ತಾಪದಿಂದ ಕೇಳಿದೆ.


“ವಾಂತಿಯಾಗುವುದಕ್ಕೆ ಪ್ರಯಾಣದ ಕುಲುಕಾಟವೇ ಕಾರಣವಾಗಬೇಕಿಲ್ಲ ಕಣೋ” ಬಳಲಿಕೆಯ ಮಧ್ಯೆಯೂ ಕ್ಷೀಣವಾಗು ನಕ್ಕು ಮುಂದುವರಿಸಿದಳು. “ನಡೆಯುವಾಗಲೂ ಆಗುತ್ತದೆ, ಕುಳಿತಿರುವಾಗಲೂ ಆಗುತ್ತದೆ.. ಅಷ್ಟೇ ಏಕೆ, ಸುಮ್ಮನೆ ನಿದ್ರಿಸುವಾಗಲೂ ಯಾವುದೋ ಕೆಟ್ಟಕನಸಿನಾಳದಿಂದ ಎದ್ದುಬಂದು, ನನ್ನನ್ನೂ ಎಬ್ಬಿಸಿ ವಿಷಕಾರಿಕೊಳ್ಳುತ್ತದೆ.. ‌ನನಗೆ ಗರ್ಭಕೋಶದ ತೊಂದರೆಯಿದೆ…”


“ಗರ್ಭಕೋಶಾನಾ?”
ಹೆಚ್ಚೂಕಮ್ಮಿ ಕಿರುಚಿದಂತೆಯೇ ಕೇಳಿದ ನನಗೆ ನಿಜಕ್ಕೂ ಆಘಾತವಾಗಿತ್ತು.


“ಏನು ಹೇಳ್ತಿದೀಯ ವೈಶು? ಏನಾಗಿದೆ ನಿನಗೆ? ಅದೇನದು ಗರ್ಭಕೋಶದ ಖಾಯಿಲೆ? ಯಾಕೆ ಬಂತು ಅದು? ಡಾಕ್ಟರಿಗೆ ತೋರ್ಸಿದೀಯಾ? ನನಗ್ಯಾಕೆ ಹೇಳಲಿಲ್ಲ ಈ ವಿಷಯಾನ?”
ಮನದಲ್ಲಿ ಸಾಲುಸಾಲಾಗಿ ಮೂಡಿದ ಆತಂಕದ ಪ್ರೆಶ್ನೆಗಳನ್ನೆಲ್ಲ ಹಾಗ್ಹಾಗೇ ಕೇಳಿದೆ‌‌.


“ಯಾಕೆ ಬಂತು ಅಂದರೆ ಏನು ಹೇಳಲಿ ಹೇಳು? ಮೊದಮೊದಲು ತಿಂಗಳಿಗೆ ಹೊರಗಾಗುವುದು ವ್ಯತ್ಯಾಸವಾಯಿತು. ಬರುಬರುತ್ತಾ ಅದು ತಾರಾಮಾರಿ ಹೊಟ್ಟೆನೋವಿಗೆ ಹಾಗೂ ವಾಂತಿಗೆ ತಿರುಗಿತು. ಪರಿಚಯದವರೇ ಆದ ಡಾಕ್ಟರೊಬ್ಬರಿಗೆ ತೋರಿಸ್ತಿದೇನೆ. ವಾಸಿಯಾಗುತ್ತೆ ಅಂದಿದಾರೆ. ಆಗುವ ತನಕ ಇದೆಲ್ಲ ಇದ್ದದ್ದೇ…”


“ಅಮ್ಮನಿಗೆ ಹೇಳಿದೀಯಾ?”


“ಹೇಳಿ ಏನು ಪ್ರಯೋಜನ ಹೇಳು? ಪಾಪ, ಅವಳ ಖಾಯಿಲೆಗಳೇ ಅವಳಿಗಾಗಿದೆ. ಜೊತೆಗೆ ನನ್ನದನ್ನೂ ಸೇರಿಸಿ ಅವಳ ರಾತ್ರೆಗಳ ನಿದ್ರೆಯನ್ನ ಕೆಡಿಸಲಾ? ಅಷ್ಟಕ್ಕೂ ಅವಳಿಗೇನಾದರೂ ಹೇಳಿದರೆ ಸುಮ್ಮನೆ ಗಾಬರಿಯಾಗ್ತಾಳೆ. ಕೆಲಸಬಿಡು, ಊರಿಗೆ ಬಾ, ಈ ಡಾಕ್ಟರಿಗೆ ತೋರಿಸು, ಆ ದೇವಸ್ಥಾನಕ್ಕೆ ಹೋಗು, ಈ ಬೆಟ್ಟ ಹತ್ತು, ಮದುವೆಯಾಗು ಅಂತೆಲ್ಲ ಗಡಿಬಿಡಿ ಮಾಡ್ತಾಳೆ. ಹೆಣ್ಮಕ್ಕಳ ಬಾಳಿನ ಸಕಲ ಸಮಸ್ಯೆಗಳಿಗೂ ಮದುವೆಯೇ ಮದ್ದು ಎಂಬುದು ಅವಳ ನಂಬಿಕೆ. ಅದಕ್ಕೇ ಅವಳಿಗೇನೂ ಹೇಳದೇ ಇದು ವಾಸಿಯಾಗುವ ತನಕ ಏನಾದರೊಂದು ನೆಪ ಹೇಳಿ ಮದುವೆಯನ್ನು ಮುಂದೂಡುತ್ತಿದ್ದೇನೆ.”


ದಣಿದ ಒಡಲಾಳದಿಂದ ನೋವಿನ ಸಮೇತ ಹೊರಬಂದ ಆ ಮಾತುಗಳನ್ನು ಕೇಳಿ ಬಹಳ ಖೇದವೆನಿಸಿತು. ಮಕ್ಕಳಾಗಿಲ್ಲ. ಮದುವೆಯೇ ಆಗಿಲ್ಲ. ಇಷ್ಟರಲ್ಲೇ ‘ಗರ್ಭಕೋಶ’ ಎನ್ನುವ ಅಷ್ಟು ದೊಡ್ಡ ಪದವನ್ನು ಎತ್ತಾಡುವಂತೆ ಮಾಡಿರುವ ಖಾಯಿಲೆ ಯಾವುದಿರಬಹುದು? ಕೇಳಬೇಕೆನಿಸಿದರೂ ಬಳಲಿ ಬಸವಳಿದವಳ ಬಳಿ ಬೇರೇನೂ ಕೇಳಲಾಗಲಿಲ್ಲ. ಹೆಗಲಿಗೆ ಒರಗಿ ಕಷ್ಟದಿಂದೆಂಬಂತೆ ಕಣ್ಮುಚ್ಚಿದವಳ ಮುಖ ಬಸ್ಸಿನ ಕುಲುಕಾಟಕ್ಕೆ ಹೆಗಲಿನಿಂದ ಜಾರಿಹೋಗದಂತೆ ಕೈ ಅಡ್ಡ ಇಟ್ಟೆ.


‘ಇವಳಿಗೆ ಕೇಕೋಡರ ಮಗನಿಗಿಂತ ಶ್ರೀಮಂತನಾದ, ಶಾಸ್ತ್ರಿಗಳ ಮಗನಿಗಿಂತ ಸದ್ಗುಣನಾದ ವರ ದೊರಕಲಿ ದೇವರೇ..’


ಮನಸ್ಸು ಅಪ್ರಯತ್ನದಿಂದ ಹಾರೈಸಿತು. ನಿದ್ರೆಯೆಂಬುದು ಕಿಟಕಿಯಾಚೆಗಿನ ದೂರದ ಕತ್ತಲಿನ ಮಡುವಿನಲ್ಲಿ ಮುಳುಗಿ ಹೋಗಿರುವ ಬೀದಿದೀಪದಂತೆ ಕ್ಷೀಣವಾಯಿತು.


“ಹೆಣ್ಣುಮಕ್ಕಳ ಪ್ರಪಂಚದಲ್ಲಿ ನಿಮಗೆ ಅರ್ಥವಾಗದಂತಹಾ ಅದೆಷ್ಟೋ ಸೂಕ್ಷ್ಮ ಸಂಗತಿಗಳಿವೆ ವಿಹಾರ್..”


ಆ ಮಾತು ಅವಳ ನಿದ್ರೆಯ ಲೋಕದಿಂದಲೇ ಅನುರಣಿಸುತ್ತಿರುವಂತೆ ಭಾಸವಾಯಿತು. ಈ ಹೆಣ್ಣೆಂಬ ಜೀವಿಯೇ ಹೀಗೆ..  ತನಗಷ್ಟೇ ಸೀಮಿತವಾದ ಅದೆಷ್ಟೋ ಗುಟ್ಟು, ಸಂಗತಿ, ತುಮುಲಗಳನ್ನು ಒಳಗಿಟ್ಟುಕೊಂಡೇ ನಮ್ಮೊಂದಿಗೆ ಬೆರೆಯುತ್ತದೆ. ಇಷ್ಟು ದಿನ ಮದುವೆಯ ವಿಷಯದಲ್ಲಿವಳು ನಡೆದುಕೊಳ್ಳುತ್ತಿದ್ದ ರೀತಿಯನ್ನು ರೂಪ, ಹಣ, ಅಂತಸ್ತುಗಳ ಮೇಲಿನ ವ್ಯಾಮೋಹವೆಂದೇ ತಿಳಿದಿದ್ದೆ. ಅದರ ಹಿಂದೆ ಹೀಗೊಂದು ಸಂಕಟವಿದೆಯೆಂಬ ಸಣ್ಣ ಕಲ್ಪನೆಯೂ ಬಂದಿರಲಿಲ್ಲ. ಕಣ್ಣೆದುರು ಸದಾ ನಗುಮುಖ ತೋರಿಸಿಕೊಂಡಿರುವವಳಿಗೇ ಇಂಥಾದ್ದೊಂದು ತಳಮಳಿಸುವ ಗುಪ್ತ ಚಹರೆಯೊಂದಿರುವಾಗ ಬೆನ್ನುಹಾಕಿ ನಡೆದು ಹೋದವಳೊಳಗೆ ಅದಿನ್ನೆಂತಹಾ ವೇದನೆಗಳಿದ್ದಿರಬಹುದು?


ಯಾಕೋ ಜ್ಯೋತಿ ತೀವ್ರವಾಗಿ ಕಾಡತೊಡಗಿದಳು.


                 ************************


ಎಂಟರ ಎಳೆ ಬಿಸಿಲಿನಲ್ಲಿ ನಮ್ಮ ಮನೆ ಹೊಳೆಯುತ್ತಾ ನಿಂತಿತ್ತು. ಉಣಗೋಲು ತೆರೆಯುತ್ತಿದ್ದಂತೆಯೇ ಮುದ್ದಿನ ಭರದಲ್ಲಿ ತಲೆ, ಬಾಲ ಕುಣಿಸುತ್ತಾ ನನ್ನ ಮೇಲೆರಗಿದ ಟಾಮಿಯನ್ನು ವೈಶ್ಣವಿ “ಏ ನಾನು ನಿಮ್ಮನೆ ಗೆಸ್ಟ್ ಕಣೋ.. ನನ್ನೂ ಮಾತಾಡ್ಸೋ..” ಎನ್ನುತ್ತಾ ತನ್ನಕಡೆಗೆಳೆದುಕೊಂಡಳು. ಟಾಮಿಯನ್ನು ಅವಳ ಅಪ್ಪುಗೆಗೊಪ್ಪಿಸಿ ಅಂಗಳ ದಾಟಿದವನಿಗೆ ಜಗುಲಿಯ ಕುರ್ಚಿಯ ಮೇಲೆ ದಿನಪತ್ರಿಕೆ ಹಿಡಿದು ಕುಳಿತಿರುವವರನ್ನು ನೋಡಿ ಆಶ್ಚರ್ಯವಾಯಿತು. ವೈಶ್ಣವಿಯ ಸೋದರಮಾವ ಭಾಸ್ಕರರಾಯರು. ಗಂಡುದಿಕ್ಕಿಲ್ಲದ ವೈಶ್ಣವಿಯ ಕುಟುಂಬದಲ್ಲಿ ಯಾವೊಂದು ಗುರುತರ ಸಂಗತಿ ಜರುಗಿದರೂ ಅದು ಇವರ ಭಾಗವಹಿಸುವಿಕೆಯಿಲ್ಲದೇ ಮುಗಿದದ್ದೇ ಇಲ್ಲ. ಅವರೇ ಬಂದಿದ್ದಾರೆಂದರೆ ಶಾಸ್ತ್ರಿಗಳ ಪುತ್ರನಿಗೋ, ಕೇಕೋಡರ ಮಗನಿಗೋ ಕಂಕಣಬಲ ಕೂಡಿಬಂದಿದೆ ಎಂದು ಊಹಿಸಿಕೊಂಡು ಒಳಗೇ ನಕ್ಕು ಮುನ್ನಡೆದೆ. ಒಳಗಿನ ಕೋಣೆಗಳಲ್ಲಿ ಅಮ್ಮಂದಿರಿಬ್ಬರೂ ಸಮರೋಪಾದಿಯಲ್ಲಿ ಓಡಾಡಿಕೊಂಡಿದ್ದರು. ನಮ್ಮನ್ನು  ಕಂಡವರೇ “ಬನ್ನಿ. ಬೇಗ ಕೈಕಾಲ್ಮುಖ ತೊಳ್ಕೊಂಡು ತಿಂಡಿ ತಿನ್ನಿ” ಎಂದು ಗಡಿಬಿಡಿ ತೋರಿದರು. ಇಷ್ಟು ಗಡಿಬಿಡಿಯಲ್ಲಿ ತಿಂಡಿತಿಂದು ಹಿಡಿಯಬೇಕಿರುವುದು ಯಾವ ಫ್ಲೈಟನ್ನೆನ್ನುವುದು ಅರ್ಥವಾಗದೆ ನಾನೂ, ವೈಶ್ಣವಿಯೂ ಒಬ್ಬರ ಮುಖ ಒಬ್ಬರು ನೋಡಿಕೊಂಡೆವಾದರೂ ನನ್ನ ಮನದಲ್ಲಾಗಲೇ ಊದು ಬತ್ತಿಯಾಗಿ ಹೊಗೆಯಾಡುತ್ತಿದ್ದ ಸಂದೇಹವೀಗ ಒಲೆಕುಂಟೆಯಾಯಿತು. ಸಾಧಾರಣವಾಗಿ ಹಬ್ಬದ, ಗಡಿಬಿಡಿಯ ಬೆಳಗುಗಳಲ್ಲಿ ಮಾಡುವ ಒಗ್ಗರಣೆ ಕಲಸಿದ ತೆಳು ಅವಲಕ್ಕಿಯನ್ನು ತಿಂದು ಮುಗಿಸುವಷ್ಟರಲ್ಲಿ ಹೆಚ್ಚೂ ಕಡಿಮೆ ಉಣಗೋಲು ಹಾರಿಕೊಂಡೇ ಬಂದ ಅಣ್ಣನ ಮಗ ಸಾಕೇತ “ಅರ್ಜೆಂಟ್ ಮಿಲ್ಲಿಗೆ ಹೋಗ್ಬೇಕು ಬಾ” ಎನ್ನುತ್ತಾ ಇನ್ನೂ ಒಣಗದ, ನನ್ನ ತೊಳೆದ ಕೈಯನ್ನು ಹಿಡಿದುಕೊಂಡು ದರದರನೆ ಎಳೆದುಕೊಂಡೇ ಹೋಗತೊಡಗಿದ. ಜಗುಲಿಯಿಂದಾಚೆ ಕಾಲಿಡುವ ಮುನ್ನ ಹೊರಳಿನೋಡಿದ ನನಗೆ ‘ಏನು ವಿಷಯ?’ ಎಂದು ಪ್ರಶ್ನಿಸುತ್ತಿದ್ದ ವೈಶ್ಣವಿಯೂ, ಅವಳನ್ನು ಅವಳ ಪ್ರಶ್ನೆಯ ಸಮೇತ ಕೋಣೆಯೊಳಗೆ ತಳ್ಳಿಕೊಂಡು ಹೋಗುತ್ತಿದ್ದ ಸೋದರ ಮಾವ ಭಾಸ್ಕರರೂ ಕಣ್ಣಿಗೆ ಬಿದ್ದರು. ಈ ಧಾವಾಂತಗಳೇ ಸಾಕಿತ್ತು, ವೈಶ್ಣವಿಯನ್ನು ನೋಡಲಿಕ್ಕೆ ಗಂಡಿನ ಕಡೆಯವರು ಬರಲಿದ್ದಾರೆಂದು ಅರ್ಥವಾಗುವುದಕ್ಕೆ. ಯಾರಿರಬಹುದು ಆ ಪುಣ್ಯಾತ್ಮ? ಕೇಕೋಡರ ಮಗನಾ? ಶಾಸ್ತ್ರಿಗಳ ಸುಪುತ್ರನಾ? ಅಥವಾ ಇನ್ಯಾವುದೋ ಸಂಸ್ಥಾನದ ಯುವರಾಜನಾ? ಇವರ ಗಡಿಬಿಡಿ ಕಂಡರೆ ಯಾವುದೋ ದೊಡ್ಡ ಮನೆತನದ ಯುವರಾಜನೇ ಇರಬೇಕು. ಪಾಪ ವೈಶು- ಟೂರು, ಟ್ರಿಪ್ಪು ಎಂದೆಲ್ಲಾ ಕುಣಿದಾಡಿಕೊಂಡು ಬಂದಳು. ಇಲ್ಲಿವರೆಲ್ಲಾ ಸೇರಿ ಇಷ್ಟು ದೊಡ್ಡ ರೈಲು ಹತ್ತಿಸಲಿದ್ದಾರೆಂಬುದು ಹುಡುಗಿಗೆ ಗೊತ್ತಾಗುವುದಾದರೂ ಹೇಗೆ ಎಂದುಕೊಂಡೆ. ದಾರಿಯಿಡೀ ಕಾಡಿದರೂ ಸಾಕೇತ ಬರಲಿರುವ ಗಂಡಿನ ಜುಟ್ಟು, ಜನಿವಾರಗಳ ಬಗ್ಗೆ ಚಿಕ್ಕ ವಿವರವನ್ನೂ ಬಾಯ್ಬಿಡಲಿಲ್ಲ. ಗದರಿಸಿ ಕೇಳಿದಾಗ ‘ಇಂದಾವರದ ಗಂಡು’ ಎಂದಷ್ಟೇ ಹೇಳಿ ತಾನು ಗುನುಗುತ್ತಿದ್ದ ಹಾಡಿನೊಳಗೆ ತೂರಿಕೊಂಡ. ಮನೆ ತಲುಪುವಷ್ಟೂ ಹೊತ್ತು ನಾನು ಇಂದಾವರದಲ್ಲಿರುವ‌ ಎಲ್ಲಾ ಮದುವೆ ವಯಸ್ಸಿಗೆ ಬಂದಿರುವ ಯುವರಾಜರನ್ನೂ, ಅವರ ಸರಾಸರಿ  ವರಮಾನವನ್ನೂ ಲೆಕ್ಕ ಹಾಕುತ್ತಲೇ ಕುಳಿತುಕೊಂಡೆ.


ಮರಳಿ ಮನೆಯೊಳಗೆ ಕಾಲಿಡುವ ಹೊತ್ತಿಗೆ ಮನಸ್ಸು ಇನ್ನೇನು ಬಿಡಿಸಿಕೊಳ್ಳಲಿರುವ ಒಗಟಿನ ಉತ್ತರಕ್ಕಾಗಿ ಕಾತರವಾಗಿತ್ತು.  ಒಳ ಬಂದ ನನ್ನನ್ನು ಬಂದ ವೇಗದಲ್ಲೇ ಬಚ್ಚಲುಮನೆಗೆ ರವಾನಿಸಿಲಾಯಿತು. ಸುತ್ತಮುತ್ತಲೆಲ್ಲೂ ವೈಶ್ಣವಿಯ ಸುಳಿವೇ ಇರಲಿಲ್ಲ. ಅವಳ ದಿಬ್ಬಣದ ಡ್ರೈವರ್ ನಾನೇ ಎಂಬುದು ಹೊರಗೆ ನಿಂತಿದ್ದ ಭಾಸ್ಕರರಾಯರ ಇನೋವಾವನ್ನು ನೋಡಿದಾಗಲೇ ಅರಿವಾಗಿತ್ತು. ಈಗ ನನ್ನ ಸ್ನಾನಕ್ಕೂ ಗಡಿಬಿಡಿ ಮಾಡುವುದನ್ನು ನೋಡಿದಾಗ ಅದು ಖಾತ್ರಿಯಾಯಿತು. ಬಹುಷಃ ಗಂಡಿಗೆ ಪರಿಚಯವಿರುವ ಯಾರದೋ ಮನೆಯಲ್ಲಿ ಹೆಣ್ಣುನೋಡುವ ಶಾಸ್ತ್ರ ಇಟ್ಟುಕೊಂಡಿದ್ದಾರೆ. ಅಲ್ಲಿಗೆ ಹೊರಡಲಿಕ್ಕೆಂದೇ ಇಷ್ಟೆಲ್ಲ ಗಡಿಬಿಡಿ ಎಂದುಕೊಂಡೆ. ಇಲ್ಲಿ ಇಷ್ಟೆಲ್ಲಾ ಧಾವಂತ ಸೃಷ್ಟಿಸಿರುವ ಆ ರಣಧೀರ ಕುಟುಂಬ ಯಾವುದೆಂದು ಚಿಂತಿಸುತ್ತಲೇ ಸ್ನಾನ ಮುಗಿಸಿ ಹೊರಬಂದವನನ್ನು ಭಾಸ್ಕರರಾಯರ ಗಂಭೀರ ಮುಖ ಎದಿರಾಯಿತು.


“ದೇವರಿಗೆ ನಮಸ್ಕಾರ ಮಾಡಿ ಬಾ. ನಿನ್ನ ಜೊತೆ ಮಾತಾಡೋದಿದೆ.”
ಏಕೆ, ಏನು ಎಂಬ ಮರುಪ್ರೆಶ್ನೆಗಳಿಗೆ ಆಸ್ಪದವೇ ಇಲ್ಲದಷ್ಟು ಗಂಭೀರವಾಗಿತ್ತು ಅವರ ಧ್ವನಿ. ನಡೆಯುತ್ತಿರುವ ಪ್ರಹಸನಗಳೆಲ್ಲದರ ಗುಟ್ಟನ್ನೂ ತಿಳಿದಿರುವ, ನಿಗೂಢ ತುಂಟ ನಗೆ ನಗುತ್ತಾ ನಿಂತಿದ್ದ ಫೋಟೋದ ದೇವರಿಗೆ ನಮಸ್ಕರಿಸಿ ಭಾಸ್ಕರ ರಾಯರು ಇದ್ದಲ್ಲಿಗೆ ಮರಳಿದೆ. ಅವರ ಜೊತೆಗೇ ಅಪ್ಪ ಹಾಗೂ ಅಮ್ಮನೂ ಅಲ್ಲಿ ಕಾಯುತ್ತಾ ನಿಂತಿರುವುದು ನನ್ನ ಕುತೂಹಲಕ್ಕೆ ಎಣ್ಣೆಸುರಿಯಿತು.


“ವೈಶ್ಣವಿಯದೂ ನಿನ್ನದೂ ಜಾತಕ ನೋಡಿಸಿಕೊಂಡು ಬಂದಿದ್ದೇವೆ”
ನನಗೆ ನನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ಇಷ್ಟು ಹೊತ್ತು ನಡೆದಿದ್ದ ರಹಸ್ಯ ಕಾರ್ಯಾಚರಣೆಯ ಮೊದಲ ಬಾಂಬು ನನ್ನ ಬುಡದಲ್ಲೇ ಢಮಾರೆಂದಿತ್ತು.


“ಏನು!? ವೈಶ್ಣವಿ ಹಾಗೂ ನನ್ನ ಜಾತಕವಾ? ಯಾಕೆ?”


ಧೀರ್ಘ ಮಾತಿಗೆ ಅನುವಾಗುವವರಂತೆ ಭಾಸ್ಕರರು ಶ್ವಾಸಕೋಶದ ತುಂಬಾ ಉಸಿರೆಳೆದುಕೊಂಡು ಆರಂಭಿಸಿದರು.  
“ನೋಡು ವಿಹಾರ್, ಕಾಲ ಯಾರನ್ನೂ ಕಾಯೋದಿಲ್ಲ. ನೀವು, ಈಗಿನಕಾಲದ ಹುಡುಗರಿಗೆ ಅದು ಅರ್ಥವಾಗೋದಿಲ್ಲ. ಏನೋ ಕಡಿದು ಗುಡ್ಡೆ ಹಾಕುವವರಂತೆ ಈಗಲೇ ಮದುವೆ ಬೇಡ, ಇನ್ನೆರೆಡು ವರ್ಷ ಬೇಡ ಅಂತೆಲ್ಲ ವರಾತ ಹೂಡುತ್ತೀರ. ಕೊನೆಗೆ ವಯಸ್ಸು ಮೀರಿದ ಗಡಿಬಿಡಿಯಲ್ಲಿ ಸಿಕ್ಕ ಯಾರಿಗೋ ಸಿಕ್ಕಿಹಾಕಿಕೊಳ್ತೀರ‌. ನಿಮ್ಮ ವಿಷಯದಲ್ಲಿ ಹಾಗಾಗುವುದು ಬೇಡ. ಹೇಳೀ ಕೇಳೀ ನಿಮ್ಮಿಬ್ಬರದೂ ಹಳೆಯ ಪರಿಚಯ. ಹೊಸದಾಗಿ ಹೊಂದಿಕೊಂಡು ಹೋಗಲಿಕ್ಕೆ ನಿಮ್ಮಿಬ್ಬರಿಗೆ, ಕನಿಷ್ಠ ನಿಮ್ಮ ಮನೆಯವರ ನಡುವೆಯಾದರೂ ಅಂತಹಾ ಅಪರಿಚಿತತೆಯೇನಿಲ್ಲ. ತಂದೆಯಿಲ್ಲದ ಒಬ್ಬಳೇ ಮಗಳನ್ನು ಕಣ್ಣಳತೆಯಲ್ಲೇ ಇರುವ, ಗೊತ್ತಿರುವವರ ಮನೆಗೇ ಕೊಡಬೇಕಂತ ಸುಶೀಲಾಗೂ ಬಹಳ ಆಸೆಯಿತ್ತು.. ಅದಕ್ಕೇ ನಾವು ಹಿರಿಯರು ಕೂತು ಈ ಮಾತುಕತೆಯಾಡಿದ್ದೇವೆ. ಅಂಗೈಯಲ್ಲೇ ಇರುವ ಬೆಣ್ಣೆಗೂ ಕಾಯಿಸಬೇಕಿರುವ ತುಪ್ಪಕ್ಕೂ ಜಾತಕ ಕೂಡಿಸಿದ್ದೇವೆ. ಇವತ್ತು ದೇವಸ್ಥಾನದಲ್ಲಿ ನಿಮ್ಮೆದುರೇ ಪ್ರಸಾದ ಕೇಳಿಸುತ್ತೇವೆ. ಹಾಗಂತ ನಿಮ್ಮ ಯಾವ ಇಚ್ಛೆಯನ್ನೂ ಮುರಿಯುವ ಮನಸ್ಸು ನಮಗಿಲ್ಲ. ನಿಮ್ನಿಮ್ಮ ಬದುಕಿನ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಅಂತಿಮ ಹೊಣೆಯನ್ನು ನಿಮಗೇ ಬಿಡುತ್ತಿದ್ದೇವೆ. ಇಬ್ಬರಿಗೂ ಇನ್ನೊಂದು ವಾರ ಕಾಲಾವಕಾಶವಿದೆ. ಮುಂದಿನದು ನಿಮಗೇ ಬಿಟ್ಟಿದ್ದು”


ಯಾವುದೋ ಸಿನೆಮಾದ ಯಾವುದೋ ಪಾತ್ರವೊಂದರ ಕಥೆಯಲ್ಲಿ ಬರುತ್ತಿದ್ದ ತಿರುವೊಂದು ಈಗ ನನ್ನ ಬದುಕಿನಲ್ಲೇ ಬಂದ ಪರಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುದೇ ತಿಳಿಯದೆ ಭಾಸ್ಕರರ ಮುಖವನ್ನೇ ನೋಡುತ್ತಾ ನಿಂತೆ. ನಾನು ಕೇಳಿಸಿಕೊಂಡಿದ್ದು ನಿಜವಾ? ಮದುವೆಯ ವಿಷಯದಲ್ಲಿ ತನ್ನದೇ ಆದ ವಿಸ್ತಾರ ಕನಸುಗಳಿರುವ ವೈಶ್ಣವಿಯ ಬದುಕಿಗೆ ನನ್ನನ್ನು ಅಪವಾದಿಸಲಾಗುತ್ತಿದೆಯಾ? ಇದಕ್ಕೆ ಅವಳ ಸಹಮತವಿದೆಯಾ? ಯಾವುದೋ ಹುಡುಗಿಯ ಹಿಂದೆ ವರ್ಷಗಟ್ಟಲೆ ಅಲೆದು ತಿರಸ್ಕೃತನಾಗಿ ಬಂದವನೆಂದು ತಿಳಿದೂ ನನ್ನ ಪಕ್ಕದಲ್ಲವಳು ವಧುವಾಗಿ ನಿಲ್ಲುತ್ತಾಳಾ? ಗೊಂದಲಗಳು ಸಮರೋಪಾದಿಯಲ್ಲಿ ಎದೆಯೊಳಗೆ ಪುಟಿದೇಳತೊಡಗಿದವು.


ಆಗ ಬಂದಳು ವೈಶ್ಣವಿ..


ತಿಳಿನೀಲಿ ಬಣ್ಣದ ಸೀರೆ. ಕೊರಳ ಬಳಸಿ ಬಂದು ಸೆರಗಿನ ಇಳಿಜಾರಿನೊಳಗೆ ಮಾಯವಾಗಿರುವ ಎರೆಡೆಳೆಯ ಸರ. ಹೋದ ಜನ್ಮದಲ್ಲೆಂದೋ ನಾನೇ ಮುಡಿಸಿದಂತೆ, ನೇರ ನನ್ನ ನೆನಪಿಗೇ ಸಂಬಂಧಿಸಿದಂತೆ ಅತ್ಯಂತ ಪರಿಚಿತವಾದ ಪರಿಮಳ ಹೊಮ್ಮಿಸುತ್ತಿರುವ ಮುಡಿಯ ಮಲ್ಲಿಗೆ. ಸೂರ್ಯ ಮುಳುಗಿದ ಬಾನಿನಲ್ಲಿ ಎದ್ದುಬಂದ ಮಿಣುಕು ತಾರೆಯಂತಹಾ ಹಣೆಯ ಚುಕ್ಕಿ ಬಿಂದಿ, ಇವುಗಳೆಲ್ಲವೂ ಒಟ್ಟಾಗಿ ಸೃಷ್ಟಿಸಿರುವ ದಿವ್ಯ ಸೌಂದರ್ಯದ ಭಾರಕ್ಕೋ, ಯಾರನ್ನೂ ನೇರವಾಗಿ ನೋಡಲಾಗದ ಸಂಕೋಚಕ್ಕೋ ನೆಲದಮೇಲೆ ನೆಟ್ಟಿರುವ ನೋಟ..


ಇದುವರೆಗೆ ನಾನು ನೋಡದ ಹೊಸ ಚಹರೆಯೊಂದನ್ನು ಅವಳು ಧರಿಸಿ ಬಂದಿರುವಂತೆ ಭಾಸವಾಯಿತು. ಏನನ್ನೂ ಹೇಳಲಾರದವನಾಗಿ ಸುಮ್ಮನೆ ನಡೆದು ಇನೋವಾದ ಮುಂದುಗಡೆ ಚಾಲಕನ ಪಕ್ಕದ ಸೀಟನ್ನೇರಿ ಕುಳಿತುಕೊಂಡೆ‌. ಇಲ್ಲೇ ಏಕೆ ಕುಳಿತೆ? ಅವಳ ಕಣ್ಣಿನಿಂದ ಪಾರಾಗುವುದಕ್ಕಾ? ಖಾತ್ರಿಯಿರಲಿಲ್ಲ. ಆದರೆ ಹಾಗೆ ಕುಳಿತಮೇಲೆ ಅಮೂಲ್ಯವಾದುದೇನನ್ನೋ ಹಿಂದೆ ಬಿಟ್ಟು ಬಂದಿರುವಂತೆ ಮನಸ್ಸು ಚಡಪಡಿಸತೊಡಗಿತು. ದೇವಸ್ಥಾನ ತಲುಪುವವರೆಗೂ ಓರೆ ಕನ್ನಡಿಯಲ್ಲಿ ನನ್ನನ್ನೇ ಹುಡುಕುವವನಂತೆ ಹಿಂದಿನ ಸೀಟಿನಲ್ಲಿ ತನ್ನ ಅಮ್ಮನಿಗೊರಗಿ ಕುಳಿತಿದ್ದ ಅವಳ ಪ್ರತಿಬಿಂಬಕ್ಕಾಗಿ ಅರಸುತ್ತಲೇ ಇದ್ದೆ.


ದೇವಸ್ಥಾನ ಬಂತು. ಎಲ್ಲರೂ ಇಳಿದೆವು. ದೇವರೆದುರಲ್ಲಿ ನಿಂತು ಜಾರಲಿರುವ ಹೂವಿಗಾಗಿ ಕಾಯುತ್ತಿದ್ದಾಗ ಮನಸ್ಸೇಕೋ ಶುಭ ಸೂಚನೆಯೇ ದೊರೆಯಲೆಂದು ಪ್ರಾರ್ಥಿಸಿಕೊಂಡಿತು. ಪಕ್ಕದಲ್ಲಿ ನಿಂತ ವೈಶ್ಣವಿಯೂ ಅದನ್ನೇ ಕೇಳಿಕೊಳ್ಳುತ್ತಿದ್ದಾಳಾ? ಅಂದಾಜಿಸಲಾಗಲಿಲ್ಲ. ಎಲ್ಲರ ಹಾರೈಕೆಯಂತೆ ದೇವರ ಮುಡಿಗಿರಿಸಿದ್ದ ಹೂವಿನ ಗೊಂಚಲು ಬಲಕ್ಕೇ ಜಾರಿಬಿತ್ತು. ಎಲ್ಲರೂ ಖುಷಿಯಿಂದ ಹೋ ಎಂದರು. ನಾನು ವೈಶ್ಣವಿಯನ್ನೇ ನೋಡಿದೆ. ಅವಳು ದೇವರನ್ನೇ ನೋಡುತ್ತಿದ್ದಳು.


ಮನೆಗೆ ಮರಳುತ್ತಿದ್ದಂತೆಯೇ ವೈಶ್ಣವಿ ಇಬ್ಬರು ಅಮ್ಮಂದಿರ ಜೊತೆಗೆ ಅಡುಗೆಮನೆ ಸೇರಿಕೊಂಡುಬಿಟ್ಟಳು. ಅವಳಿರುವ ಕಾರಣಕ್ಕೇ ನನ್ನದೇ ಮನೆಯ ಒಂದು ಭಾಗವಾದ ಆ ಕೋಣೆಯೊಳಗೆ ಕಾಲಿಡುವುದಕ್ಕೂ ಆಗದೆ ಮನಸ್ಸು ಹಿಂಜರಿಯತೊಡಗಿತು. ಇನ್ನು ಅವಳಾದರೂ ಎದುರೇ ಬರದೆ ಅಡಗಿದಂತೆ ಓಡಾಡಿಕೊಂಡಿದ್ದಳು. ಅಡುಗೆಮನೆಯ ಕಿಟಕಿಯಿಂದ ಕಂಡ ಅವಳು ಮುಡಿದ ಹೂ, ಕೋಣೆಯೊಳಗೆ ನಡೆದು ಬಾಗಿಲು ಎಳೆದುಕೊಂಡವಳ ಬಳೆತುಂಬಿದ ಕೈ, ಪಕ್ಕವೇ ಹಾದುಹೋದಾಗ ನನ್ನ ಕೈಗೆ ಸೋಕಿಹೋದ‌ ಸೀರೆ ಸೆರಗು.‌. ಹೀಗೆ ದಿನವಿಡೀ ಅವಳು ಸಂಪೂರ್ಣವಾಗಿ ಸಿಗದೇ ಒಂದು ಅನುಭೂತಿಯಂತೆ, ಚಂದದ ಕನಸಿನಂತೆ ಸುಳಿದಾಡಿಕೊಂಡಿದ್ದಳು. ಕೆಲವೇ ಗಂಟೆಗಳ ಕೆಳಗೆ ಒಂದಿಡೀ ರಾತ್ರೆ ಒಬ್ಬರ ಹೆಗಲಿಗೊಬ್ಬರು ಆತು ಕುಳಿತು ಬಂದ ನಮ್ಮಿಬ್ಬರ ನಡುವೆ ಇದ್ದಕ್ಕಿದ್ದಂತೆಯೇ ಸೃಷ್ಟಿಯಾದ ಈ ಸಂಕೋಚದ ಮರೆ ಅಚ್ಚರಿಯದಾಗಿತ್ತು.


ಆದರೆ ಅವಳು ಮಾತಿಗೆ ಸಿಗದೆ ದೂರ‌ ಹೋದಷ್ಟೂ ಮನಸ್ಸಿನ ಹೊಯ್ದಾಟ ಜಾಸ್ತಿಯಾಗತೊಡಗಿತ್ತು. ನಾನು ಯೋಚಿಸುತ್ತಿರುವುದು ಸರಿಯೇ? ಇಷ್ಟು ದಿನ ನನ್ನ ಗಾಢ ಪ್ರೀತಿಯ ಇನ್ನೊಂದು ಕಥೆ ಹೇಳಿಕೊಂಡವಳೆದುರೇ ನಿಂತು ‘ನಾನು ನಿನ್ನನ್ನು ಒಪ್ಪಿದ್ದೇನೆ’ ಎಂದು ಹೇಗೆ ಹೇಳಲಿ? ಅಷ್ಟಕ್ಕೂ ನಾನು ಮದುವೆಯಾಗಬೇಕೇ? ಜ್ಯೋತಿಯ ಮೇಲಿನ ನನ್ನ ಅನುರಾಗ ಇಲ್ಲಿಗೇ ಮುಗಿಯಬೇಕೇ? ಇವೆಲ್ಲದಕ್ಕೂ ಮುನ್ನ ವೈಶ್ಣವಿಯ ಮನಸ್ಸಿನಲ್ಲೇನಿದೆ? ಒಂದೂ ಅರ್ಥಕ್ಕೆ ನಿಲುಕದಾಯಿತು. ಏನೇ ಆದರೂ ಸಂಜೆ ಅವಳೊಂದಿಗೆ ಮತಾಡಲೇಬೇಕೆಂದು ಲೆಕ್ಕಹಾಕಿ ಮಧ್ಯಾಹ್ನದ ಕಿರುನಿದಿರೆಗೆಂದು ಅಡ್ಡಾದೆ.


         **************************


ರಾತ್ರೆ ಬಾಕಿಯಾದ ನಿದಿರೆಯನ್ನೆಲ್ಲ ಮುಗಿಸಿ ಎದ್ದಾಗ ಮನಸ್ಸು ಹಗುರಾಗಿತ್ತು. ಎದ್ದು ಮುಖ ತೊಳೆದುಕೊಂಡು ಒಳಬಂದವನೆದುರು ಅಚ್ಚರಿಯೆಂಬಂತೆ “ಆಯ್ತಾ ನಿದ್ರೆ?” ಎನ್ನುತ್ತಾ ವೈಶ್ಣವಿ ಕಾಫಿ ಲೋಟದ ಸಮೇತ ಹಾಜರಾದಳು. ನಾನಗಿ ಕೇಳುವ ಮೊದಲೇ “ದೇವಸ್ಥಾನಕ್ಕೆ ಹೋಗ್ಬರೋಣ್ವ?” ಎಂದು ನನ್ನ ಆಲೋಚನೆಯನ್ನು ನೇರ ಕಣ್ಣಿನಿಂದಲೇ ಕದ್ದವಳಂತೆ ಕೇಳಿಬಿಟ್ಟಳು. ಸುಮಾರು ಹದಿಮೂರು ವರ್ಷಗಳ ಹಿಂದಿನ ಸಂಜೆಯೊಂದು ಮತ್ತೆ ಜೀವಂತವಾದ ಹಳೆಯ ದಾರಿಯಲ್ಲಿ ಇಬ್ಬರೂ ನಡೆಯತೊಡಗಿದೆವು.


“ಮತ್ತೆ… ಏನಂತ ಡಿಸೈಡ್ ಮಾಡಿದ್ರಿ ಸಾರ್?”
ಗುಡ್ಡದಲ್ಲಿ ಅಡ್ಡಾಗಿ ಒರಗಿದ್ದ ಮರದ ಮೇಲೆ ಕೂರುತ್ತಾ ಕೇಳಿದವಳ ಮಾತಿನಲ್ಲಿ ಎಂದಿನ ಸಲುಗೆಯಿತ್ತು‌. ನಮ್ಮ ಮಾತುಗಳನ್ನು ಆಲಿಸಲಿಕ್ಕಾಗಿಯೇ ಎಂಬಂತೆ ಸುತ್ತಲಿನ ಕಾಡು ನವಿರಾದ ನಿಶ್ಯಬ್ದದಲ್ಲಿ ನಿಂತಿತ್ತು.


“ನನಗೇನೂ ತೋಚುತ್ತಿಲ್ಲ ವೈಶು. ಕಳೆದೊಂದು ವರ್ಷದಲ್ಲಿ ನನ್ನ ಬದುಕಿನ ಅತಿ ಚಿಕ್ಕ ಹೊಯ್ದಾಟವನ್ನೂ ಬಿಡದೆ ನಿನ್ನ ಬಳಿ ಹೇಳಿಕೊಂಡಿದ್ದೇನೆ. ಜ್ಯೋತಿಯ ಮೇಲಿನ ನನ್ನ ಅನುರಾಗವನ್ನು ಅವಳಿಗೆ ಹೇಳಿದ್ದಕ್ಕಿಂತ ಹೆಚ್ಚಿಗೆ ನಿನ್ನ ಬಳಿ ತೋಡಿಕೊಂಡಿದ್ದೇನೆ. ಅವಳ ಕುರಿತಾದ ನನ್ನ ಚಿಕ್ಕ ಕನವರಿಕೆಯೂ ನಿನಗೆ ಗೊತ್ತಿದೆ. ಈಗ ಅದೇ ಕನಸುಗಳೊಳಗೆ ನೀನು ತುಂಬಿಕೋ ಎಂದು ಹೇಗೆ ಹೇಳಲಿ? ನಿನ್ನ ಕಲ್ಪನೆಯಲ್ಲಿರುವ ವರ ನಾನಾಗಲಾರೆನೆಂಬ ಸತ್ಯ ಗೊತ್ತಿದ್ದೂ…”


ಮಾತಿನ ಉಳಿದ ಭಾಗವನ್ನು ನೀನೇ ಪೂರ್ತಿಮಾಡೆಂಬಂತೆ ಅಲ್ಲಿಗೇ ನಿಲ್ಲಿಸಿಬಿಟ್ಟೆ‌.


“ಕಲ್ಪನೆ... ಯಾರಿಗಿಲ್ಲ ಹೇಳು? ನಿನಗಿಲ್ವಾ? ನಿನ್ನ ಜ್ಯೋತಿಗಿಲ್ವಾ? ಕಲ್ಪನೆಗಳೆಲ್ಲ ನೂರಕ್ಕೆ ನೂರರಷ್ಟು ನಿಜವಾಗುವುದು ಕಲ್ಪನೆಯಲ್ಲಿ ಮಾತ್ರ! ಅಷ್ಟಕ್ಕೂ ನೀನು ನಾನು ಬಯಸಿದಂತಿಲ್ಲ ಅಂತ ಯಾಕಂದುಕೊಂಡೆ?”


ಆಶ್ಚರ್ಯದಿಂದ ನೋಡಿದೆ. ಮದುವೆಯ ವಿಷಯ ಎದ್ದಾಗಿನಿಂದಲೂ ಮುಖ ತಪ್ಪಿಸಿಕೊಂಡು ಓಡಾಡುತ್ತಿದ್ದವಳಿಂದ ಇಂತಹಾದ್ದೊಂದು ಮಾತನ್ನು ನಿರೀಕ್ಷಿಸಿಯೇ ಇರಲಿಲ್ಲ. ಬೆಳಗಿನಿಂದ ಸಂಭವಿಸುತ್ತಿದ್ದ ಅಚ್ಚರಿಗಳ ಪೈಕಿ ಇದೇ ದೊಡ್ಡದೆನಿಸಿತು. ವೈಶ್ಣವಿ ಮುಂದುವರಿಸಿದಳು‌.


“ಜ್ಯೋತಿ ಜ್ಯೋತಿ ಅಂತ ಅಷ್ಟೆಲ್ಲ ಕಥೆ ಹೇಳಿದೆಯಲ್ಲ? ನೀನು ಹೇಳುತ್ತಿದ್ದೀ ಅಂತಷ್ಟೇ ಅದನ್ನ ಕೇಳಿಸಿಕೊಳ್ಳುತ್ತಿದ್ದೆ ಅಂದುಕೊಂಡೆಯಾ? ಅಷ್ಟಕ್ಕೂ ನಿನ್ನ ಬದುಕಿನಲ್ಲಿ ಆ ಜ್ಯೋತಿ ಯಾರು ಗೊತ್ತಾ? ಮಂಜು ಕವಿದ ಯಾವುದೇ ಗಾಜು ಕಂಡರೂ ಅದರ ಮೇಲೆ  ಬರೆಯುತ್ತೀಯಲ್ಲ.. ಆ ಹೆಸರೇ ಜ್ಯೋತಿ. ಕಥೆ ಪುಸ್ತಕದ ಮಧ್ಯದಲ್ಲೆಲ್ಲೋ ಸಾಲೊಂದರಲ್ಲಿ ಬಂದ ‘ಜ್ಯೋತಿ’ ಪದವನ್ನು ಹೆಕ್ಕಿ ಅಂಡರ್ ಲೈನ್ ಮಾಡ್ತೀಯಲ್ಲಾ, ಆ ವಿಶೇಷಣವೇ ಜ್ಯೋತಿ. ಹಸಿರು ಬಣ್ಣದ ಅಂಗಿ ಹಾಕಿಕೊಂಡು ‘ಇದು ಅವಳ ಚೂಡಿದಾರಕ್ಕೆ ಮ್ಯಾಚ್ ಆಗ್ತಿತ್ತು’ ಅಂತೀಯಲ್ಲಾ, ಆ ನೆನಪೇ ಜ್ಯೋತಿ. ಅವಳು ಮರೆತ ನಿನ್ನ ಹುಟ್ಟುಹಬ್ಬದ ದಿನ ಮೊಬೈಲ್ ರಿಂಗಾದಾಗೆಲ್ಲ ‘ಅವಳೇ’ ಅಂತ ಆಸೆಯಿಂದ ಎತ್ತಿಕೊಳ್ತೀಯಲ್ಲಾ, ಆ ಹುಚ್ಚು ನಿರೀಕ್ಷೆಯೇ ಜ್ಯೋತಿ. ಯಾವತ್ತೂ ಇಲ್ಲದವನು ಅವಳ ಹುಟ್ಟು ಹಬ್ಬದ ದಿನ ದೇವಸ್ಥಾನಕ್ಕೆ ಹೋಗಿ ನಿಲ್ಲುತ್ತೀಯಲ್ಲಾ, ಆ ಪ್ರಾರ್ಥನೆಯೇ ಜ್ಯೋತಿ. ಅವಳೆಂದರೆ ನಿನ್ನ ಪಾಲಿಗೆ ಅಷ್ಟೇ ಕಣೋ.. ಮಂಜಿನ ಮೇಲಿನ ಹೆಸರು. ಹೆಸರಿನ ಕೆಳಗೆ ಬರೆದ ಅಡಿಗೆರೆ. ನೆನಪಾಗಿ ಕಾಡುವ ಬಣ್ಣ. ಹೆಸರು ಗೊತ್ತಿಲ್ಲದೆ ರಿಂಗಾಗುವ ಅನಾಮಿಕ ಕರೆ. ದೊರೆಯದೆಂದು ತಿಳಿದೂ ಬೇಡಿಕೊಳ್ಳುವ ಪ್ರಾರ್ಥನೆ! ನಿಜ ವಿಹಾರ್.. ಜ್ಯೋತಿಯೆನ್ನುವುದು ನಿನ್ನ ಪಾಲಿಗೆ ವ್ಯಕ್ತಿಯಲ್ಲ. ಭೌತಿಕ ದೇಹವಲ್ಲ. ಅದೊಂದು ಆತ್ಮದಂತಹಾ ಅನುಭೂತಿ. ಅದು ನಿನ್ನೊಳಗಿನ ಅನುರಾಗವನ್ನು ಸಜೀವಗೊಳಿಸಿದ ಜೀವಜಲ. ಬೆಳಗ್ಗೆ ಭಾಸ್ಕರ ಮಾವ ನಮ್ಮ ಮದುವೆಯ ವಿಚಾರವನ್ನು ಪ್ರಸ್ತಾಪಿಸಿದಾಗ ನನಗೆ ಸಣ್ಣಗೆ ಆಘಾತವಾಯಿತು. ಪಕ್ಕದಲ್ಲೇ, ಪಡಸಾಲೆಯ ಕೋಣೆಯಲ್ಲೇ ಸುಳಿದಾಡಿಕೊಂಡಿದ್ದ ಈ ಹುಡುಗನೇಕೆ ಒಮ್ಮೆಯಾದರೂ ನನ್ನ ಕನಸಿನಲ್ಲಿ ಬಾರದೇ ಹೋದನೆಂದು ಅಚ್ಚರಿಯಾಯಿತು. ಆದರೆ ವಿಹಾರ್, ನನ್ನ ಪಾಲಿಗೆ ಮದುವೆಯೆಂಬುದು ಬೇರೆಯವರದಕ್ಕಿಂತ ತುಸು ಹೆಚ್ಚೇ ಕೊಂಡಿಗಳಿರುವ ಸಂಬಂಧದ ಸೂಕ್ಷ್ಮ ಎಳೆ ಕಣೋ. ಅದು ಕೇವಲ ಈಗಿರುವ ಪಿಜಿ ತೊರೆದು ಒನ್ ಬಿಎಚ್ಕೆ ಮನೆಗೆ ವರ್ಗವಾಗುವ ಸಂಗತಿಯಲ್ಲ. ಚಿಕ್ಕಂದಿನಿಂದಲೂ ನಾನು ಕಾಣದೇ ಹೋದ ಕುಟುಂಬ ವಾತಾವರಣದಲ್ಲಿ ಸೇರಿಕೊಳ್ಳುವುದು.‌ನನ್ನ ಹೊರತು ಬೇರಾರೂ ತನ್ನವರಿಲ್ಲದ ಅಮ್ಮನನ್ನೂ ಅದರೊಳಗೆ ಸೇರಿಸಿಕೊಳ್ಳುವುದು. ನಾನು ಕೇಳದೇ ಹೋದ, ಕಥೆ ಹೇಳುವ ಅಜ್ಜ-ಅಜ್ಜಿಯರ ಪ್ರೀತಿಯನ್ನು ನನ್ನ ಮಗುವಿಗೆ ಒದಗಿಸಿಕೊಡುವುದು. ಈಗ ಅನಿಸುತ್ತಿದೆ.. ನಾನು ಕಲ್ಪಿಸಿಕೊಂಡ ಆ ಬದುಕು ನನ್ನ ಎದುರೇ ಇತ್ತು.  ಕೈ ಚಾಚಿದರೆ ಸಿಗುವಷ್ಟು ಸಮೀಪದಲ್ಲೇ ಸುಳಿದಾಡಿಕೊಂಡಿತ್ತು... ನಿನ್ನ ರೂಪದಲ್ಲಿ! ನಿನ್ನ ಹೆಸರಿನಲ್ಲಿ ನಾನು ಕಳೆದುಕೊಂಡ ಬಾಲ್ಯ, ಅಮ್ಮನ ಬದುಕಿನ ಸಂಜೆಗಳನ್ನು ಕಳೆಯಲಿಕ್ಕ ಆತ್ಮೀಯವಾದುದೊಂದು ಅಂಗಳ, ಹಾಗೂ ನನಗೆ ತಲೆಯಾನಿಸಿ ಬದುಕಲಿಕ್ಕೊಬ್ಬ ಪ್ರಾಮಾಣಿಕ ಗೆಳೆಯ ದೊರೆಯುವುದಾದರೆ ಈ ಸಂಬಂಧಕ್ಕೆ ನನ್ನ ಸಮ್ಮತಿಯಿದೆ. ಇನ್ನು ಮುಂದಿನದ್ದೆಲ್ಲ ನಿನ್ನ ಚಿತ್ತ…”


ಹಿನ್ನೆಲೆಯಲ್ಲಿ ಮುಳುಗುತ್ತಿದ್ದ ಸೂರ್ಯನೀಗ ಅವಳ ಹಣೆಯ ಕುಂಕುಮದ ಬಣ್ಣಕ್ಕೇ ತಿರುಗಿದ್ದ. ದೇವಸ್ಥಾನದಲ್ಲಿ ಮುಡಿದ ಹೂವಿನ್ನೂ ಅವಳ ಮುಡಿಯಲ್ಲೇ ಇತ್ತು. ಈ ಸಂಜೆಯ ಹಿನ್ನೆಲೆಯಲ್ಲವಳು ಬೇರೆಯೇ ಆಗಿ ಕಾಣುತ್ತಿದ್ದಳು. ನನಗ ಹೇಳಲಿಕ್ಕೆ ಇನ್ನೇನೂ ಉಳಿದಿರಲಿಲ್ಲ‌‌. ಅವಳಾಡಿದ ಮಾತುಗಳಲ್ಲಿ ನನ್ನದೂ ಸೇರಿಹೋಗಿತ್ತು. ಮನಸ್ಸೀಗ ಹಗುರವಾಗಿತ್ತು. ಏನನ್ನೂ ಹೇಳದೇ ಅವಳ ಪಕ್ಕ ಕುಳಿತುಕೊಂಡೆ. ನಾನು ಹೇಳದ‌ ಉತ್ತರ ಅವಳಿಗೆ ಅರ್ಥವಾದಂತೆ ಮೆಲ್ಲಗೆ ಹೆಗಲಿಗೆ ತಲೆಯಾನಿಸಿದಳು. ಹೆಸರು ಗೊತ್ತಿಲ್ಲದ ಹಕ್ಕಿಯೊಂದು ಎಲ್ಲೋ ಕುಳಿತು ಹಾಡುತ್ತಿತ್ತು.


ಅಷ್ಟರಲ್ಲಿ ಏನೋ ನೆನಪಾಗಿ ಥಟ್ಟನೆ ಕೇಳಿದಳು:
“ಹೇ.. ಮರೆತೇ ಬಿಟ್ಟಿದ್ದೆ. ನಿನ್ನೆ ನನ್ನ ಖಾಯಿಲೆಯ ಬಗ್ಗೆ ಹೇಳಿದೆನಲ್ಲಾ, ಅದರ ಬಗ್ಗೆ ನೀನೇನೂ ಕೇಳಲೇ ಇಲ್ಲಾ?”


“ಅದ್ಯಾವ ದೊಡ್ಡ ವಿಷಯ ಬಿಡು. ಸೇಫ್ಟಿಗೆ ಯಾವಾಗಲೂ ಎರೆಡು ಬಾಟಲಿ ನೀರು ಜೊತೆಗಿಟ್ಟುಕೊಂಡರಾಯಿತು..”
ತಣ್ಣಗೆ ಉತ್ತರಿಸಿದೆ.


“ನಿನ್ನಜ್ಜೀ” ಎಂದು ಮುಖ ಕಿವುಚುತ್ತಾ ನನ್ನ ತೋಳು ಚಿವುಟಿ ನಕ್ಕಳು. ನಾನೂ ನಕ್ಕೆ. ಈ ನಗುವಿಗಾಗಿಯೇ ಕಾಯುತ್ತಿದ್ದನೇನೋ ಎಂಬಂತೆ ಸಂತೃಪ್ತನಾದ ಸೂರ್ಯ ಬೆಟ್ಟಗಳ ಹಿಂದೆ ಜಾರಿಹೋದ.


(ಆಗಸ್ಟ್ 2019ರ ಮಯೂರದಲ್ಲಿ ಪ್ರಕಟಿತ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...