ಸೋಮವಾರ, ಮಾರ್ಚ್ 27, 2017

ಕೆಲಸ ಮಾಡಿಸುವುದಕ್ಕೆ ಉರಿಗೋಪವೇ ಆಗಬೇಕೇ?

"ಒಂದೊಳ್ಳೆ ಕೆಲಸ ಸಿಗಬೇಕಂದ್ರೆ ಪುಣ್ಯ ಮಾಡಿರಬೇಕು; ಅದೇ ಒಳ್ಳೇ ಬಾಸ್ ಸಿಗಬೇಕಂದ್ರೆ ಹಿಂದಿನ ಜನ್ಮದ ಪುಣ್ಯ ಬೇಕು!"

ಈ ಮಾತು ಕೇಳಿ ಸಾಮಾನ್ಯರು ನಗಬಹುದು. ಆದರೆ ಇಂದಿನ ಐಟಿ ಹಾಗೂಕಾರ್ಪೋರೇಟ್ ಪ್ರಪಂಚದಲ್ಲಿ ದುಡಿಯುತ್ತಿರುವ ಒಬ್ಬನೇ ಒಬ್ಬನೂ ಈ ವಾಕ್ಯ ಸುಳ್ಳೆಂದು ಅಲ್ಲಗಳೆಯಲು ಸಾಧ್ಯವೇ ಇಲ್ಲ! ಹಾಗಿದೆ ಔದ್ಯೋಗಿಕ ಬದುಕಿನಲ್ಲಿ ಬಾಸ್ ಗಳ ಪಾತ್ರ.

ಮೊದಲು ಮ್ಯಾನೇಜರ್/ಬಾಸ್ ಬಗ್ಗೆ ತಿಳಿದುಕೊಳ್ಳೋಣ. ಆಧುನಿಕ ಜಗತ್ತಿನ, ಪೈಪೋಟಿಯನ್ನೇ ಉಸಿರಾಗಿಸಿಕೊಂಡು ಚಲಿಸುತ್ತಿರುವ ಖಾಸಗೀ ವಲಯದಲ್ಲಿ ಯಾವುದೇ ವಿಭಾಗದಲ್ಲಿ 'ಬಾಸ್' ಆಗುವುದೆಂದರೆ ತಮಾಷೆಯ ಮಾತಲ್ಲ. ಇಲ್ಲಿ ಯಾರದೋ ಕೈ 'ಬೆಚ್ಚಗೆ' ಮಾಡುವುದರಿಂದ ಅಥವಾ ಯಾವುದೋ ಒಂದು ಜಾತಿಯಲ್ಲಿ ಜನಿಸುವುದರಿಂದ ಮ್ಯಾನೇಜರ್ ಗಳಾಗುವದಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ವರ್ಷಗಳ ಅನುಭವ ಬೇಕು. ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವ ಚುರುಕುತನ ಬೇಕು. ಕೊರಡನ್ನು ತೇಯ್ದು ಗಂಧವನ್ನು ತೆಗೆಯುವ ಉಪಾಯ ಗೊತ್ತಿರಬೇಕು. ನುಗ್ಗಿ ಬರುವ ಅಲೆಯಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲ, ಅದರಲ್ಲೇ ಕೊಳೆ ತೊಳೆದುಕೊಳ್ಳುವ ಜಾಣತನವೂ ಇರಬೇಕು! ಆಗಲೇ ಒಬ್ಬ ಸಾಮಾನ್ಯ ಕೆಲಸಗಾರನೊಬ್ಬ  'ಬಾಸ್' ಆಗಲು ಸಾಧ್ಯ. ಆದರೆ ಇಷ್ಟಲ್ಲಾ ದೊಡ್ಡ ಗುಣಗಳನ್ನು ಮೈಗೂಡಿಸಿಕೊಳ್ಳುವ ಭರದಲ್ಲಿ ತನ್ನ ಕೈಕೆಳಗಿನವರನ್ನು ಹೇಗೆ ನಡೆಸಿಕೊಳ್ಳಬೇಕು, ಅವರ ಜೊತೆ ಹೇಗೆ ನಡೆದುಕೊಳ್ಳಬೇಕೆಂಬ 'ಸಣ್ಣ' ವಿಷಯವನ್ನವರು ಮರೆಯುತ್ತಿದ್ದಾರಾ?

ಬಹುಷಃ ಹೆಚ್ಚಿನ ಉತ್ತರಗಳು 'ಹೌದು' ಎಂದೇ ಬರುತ್ತವೆ. ಒಂದು ತಂಡವನ್ನಾಗಲೀ, ವ್ವವಸ್ಥೆಯನ್ನಾಗಲೀ ಮುನ್ನಡಿಸಬೇಕೆಂದರೆ ಅಲ್ಲಿ ಒತ್ತಡ ಹಾಕಬೇಕು, ಅಧಿಕಾರಯುತವಾದ ಅಪ್ಪಣೆಯಿರಬೇಕು, ತಪ್ಪುಗಳನ್ನು ತಡೆಯುವ ಗದರಿಕೆಯಿರಬೇಕು.... ಇದೆಲ್ಲಾ ನಿಜವೇ. ಆದರೆ ಎಷ್ಟರಮಟ್ಟಿಗೆ? ಒತ್ತಡವೇ ವಾತಾವರಣವಾಗಿಬಿಟ್ಟರೆ? ಪ್ರತೀ ಮಾತೂ ಗದರಿಕೆಯೇ ಆಗಿಹೋದರೆ? ಪ್ರತಿಯೊಂದು ಕೆಲಸವನ್ನೂ ನಡುಗುವ ಕೈಯ್ಯಲ್ಲೇ ಮಾಡುವಂತಾದರೆ? ಆಗ ಉದ್ಯೋಗವೆನ್ನುವುದು ಕೇವಲ ಯಂತ್ರಗಳೊಂದಿಗೆ ಒಡನಾಡುವ 'ಕರ್ಮ'ವಾಗುತ್ತದೇ ಹೊರತು ಮನಸ್ಸಿಗೆ ನೆಮ್ಮದಿಕೊಡುವ 'ಕಾಯಕ'ವಾಗುವುದೇ ಇಲ್ಲ!

ಐಟಿ,ಕಾರ್ಪೋರೇಟ್ ಉದ್ಯೋಗಿಗಳ ಬದುಕೆನ್ನುವ ದೂರದ ಬೆಟ್ಟದಲ್ಲಿ ಅದೆಷ್ಟೋ ಕಲ್ಲುಮುಳ್ಳುಗಳು. ಬೆಳಗ್ಗೆ ಎದ್ದೊಡನೆಯೇ ತಯಾರಾಗಿ ಓಡಬೇಕು. ರುಚಿಯಿರಲೇಬೇಕು ಎಂದೇನೂ ಇಲ್ಲದ ಬೆಳಗಿನ ಉಪಹಾರ; ತಡವಾದರೆ ಅದೂ ಇಲ್ಲ. ಚಲಿಸುವುದಕ್ಕಿಂತ ನಿಲ್ಲುವುದೇ ಜಾಸ್ತಿಯಿರುವ ಟ್ರಾಫಿಕ್ನಲ್ಲಿ, ಸಂದಣಿಭರಿತ ಬಸ್ನಲ್ಲಿ ಒಂಟಿ ಕಾಲಲ್ಲಿ ಎಲ್ಲೋ ಹುಟ್ಟಿ ಎಲ್ಲೋ ಚಾಚಿಕೊಂಡ ತೆಂಗಿನಮರಗಳಂತೆ ನಿಂತು ತಮ್ಮ ಪರ್ಸ್, ಮೊಬೈಲ್ ಗಳನ್ನು ಕಳ್ಳರಿಂದ ಕಾಪಾಡಿಕೊಳ್ಳುತ್ತಾ ಆಫೀಸು ತಲುಪಬೇಕು. (ದಿನದ ಮೂರ್ನಾಲ್ಕು ಗಂಟೆಗಳನ್ನು ಅತ್ತ ಆಫೀಸಿನಲ್ಲೂ ಅಲ್ಲದೇ, ಇತ್ತ ಮನೆಯಲ್ಲೂ ಅಲ್ಲದೇ ನಡುದಾರಿಯ ಟ್ರಾಫಿಕ್ನಲ್ಲಿ ತೂಕಡಿಸುತ್ತ ವ್ಯಯಿಸಬೇಕಾದ ಕರ್ಮ ಎಷ್ಟೋ ಜನರಿಗಿದೆ) ದಿನವಿಡೀ ಕಂಪ್ಯೂಟರ್ ಒಳಗಿನ ಲೆಕ್ಕಾಚಾರದ ಆಳದಲ್ಲಿ ಕೈಕಾಲು ಬಡಿಯಬೇಕು. ಮಧ್ಯದಲ್ಲಿ ಮತ್ತದೇ ರುಚಿ-ಶುಚಿಗಳರಿಯದ ಹೊರಗಿನೂಟ. ಸಂಜೆ ಮತ್ತೆ ಟ್ರಾಫಿಕ್ ಎನ್ನುವ ಸಮುದ್ರವನ್ನು ದಾಟಿ ಮನೆ/ರೂಮು ತಲುಪುವಷ್ಟರಲ್ಲಿ ಜೀವ 'ಹಾಸಿಗೆ ಮೇಲೆ ಬಿದ್ದರೆ ಸಾಕು' ಎನ್ನುವಷ್ಟು ದಣಿದುಹೋಗಿರಿತ್ತದೆ. ಆರು ದಿನಗಳು ಕಾದಮೇಲೆ ಸಿಕ್ಕ ವೀಕೆಂಡ್ ಕೇವಲ ಬಟ್ಟೆ ತೊಳೆದು,  ಕಸ-ಜಿರಲೆಗಳನ್ನು ಹೊಡೆದಟ್ಟಿ, ಊಟ ತಿಂಡಿ ಮುಗಿಸುವಷ್ಟರಲ್ಲೇ ಮುಗಿದು ಹೋಗುತ್ತದೆ. ಇನ್ನು ನೈಟ್ ಡ್ಯೂಟಿ ಮಾಡುವವರಂತೂ ಈ ಲೋಕದವರಾಗಿಯೇ ಉಳಿದಿರುವುದಿಲ್ಲ. ನಿದ್ರೆಯ ಸಮಯದಲ್ಲಿ ಕೆಲಸ, ಕೆಲಸದ ಸಮಯದಲ್ಲಿ ನಿದ್ರೆ. ಯಾವುದಕ್ಕೂ ನಿಗದಿತ ಸಮಯವಿಲ್ಲದೇ ಯಾವುದು ತಿಂಡಿಯೋ, ಯಾವುದು ಊಟವೋ,  ಯಾವುದು ನಿನ್ನೆಯೋ, ಯಾವುದು ನಾಳೆಯೋ...ಎಲ್ಲಾ ಅಯೋಮಯವಾಗಿಹೋಗಿರುತ್ತದೆ! 

ಹೀಗೆ ಜೀವನ ನಡೆಸುತ್ತಿರುವ ಲಕ್ಷಾಂತರ ಜನರು ತಮ್ಮೀ ಯಾಂತ್ರಿಕತೆಯ ಬಗ್ಗೆ ಸಣ್ಣದಾಗಿ ದೂರುತ್ತಾರಾದರೂ ತಮ್ಮ ಪಾಲಿನ ಜವಾಬ್ದಾರಿಗಳನ್ನು ಪ್ರೀತಿಯಿಂದಲೇ ನಿರ್ವಹಿಸಿಕೊಂಡು ಹೋಗುತ್ತಾರೆ. ಅರ್ಧರಾತ್ರಿಯ ತನಕ ಗೇಯ್ದರೂ ಸರಿಯೇ, ಮಾಡಬೇಕಾದುದನ್ನು ಮಾಡಿಯೇ ತೀರುತ್ತಾರೆ. ವಿಶ್ರಾಂತಿಗೆಂದು ಇರುವ ಒಂದೇ ಒಂದು ಭಾನುವಾರವನ್ನೂ ಕೆಲವೊಮ್ಮೆ ಉದಾರವಾಗಿ ಬಿಟ್ಟುಕೊಡುತ್ತಾರೆ. ಮುಖದಲ್ಲಿ ಕಾಣುವ ಬೇಸರ ಮಾಡುವ ಕೆಲಸದಲ್ಲೂ ಪ್ರತಿಫಲಿಸಲು ಬಿಡುವುದಿಲ್ಲ. ಆದರೆ ಔದ್ಯೋಗಿಕ ಜೀವನವೊಂದು ಯಾವಾಗ ನರಕವೆನಿಸತೊಡಗುತ್ತದೆ ಗೊತ್ತಾ? ಯಾವಾಗ ಕೆಲಸ ಮಾಡುವ ಜಾಗದಲ್ಲಿ ನೆಮ್ಮದಿಯಿರುವುದಲ್ಲವೋ, ಗೌರವವಿರುವುದುಲ್ಲವೋ, ಮಾಡಿದ ಕೆಲಸಕ್ಕೊಂದು ಬೆಲೆ ಅನ್ನುವುದು ದೊರೆಯುವುದಿಲ್ಲವೋ ಆಗ.

ಎಷ್ಟೋ ಬಾರಿ ದಿನವಿಡೀ ಕುಳಿತು ಶ್ರಧ್ದೆಯಿಂದ ಮಾಡಿ ಮುಗಿಸಿದ ಹತ್ತಾರು 'ಎಫರ್ಟ್'ಗಳು ಚಿಕ್ಕದೊಂದು 'ಗುಡ್' ಎಂಬ ಮೆಚ್ಚುಗೆಯನ್ನೂ ಪಡೆಯುವುದಿಲ್ಲ. ಆದರೆ ದಿನದ ಕೊನೆಯಲ್ಲಿ ಮಾಡಿದ ಸಣ್ಣದೊಂದು ತಪ್ಪು ಮೇಲಾಧಿಕಾರಿಯ ಕ್ಯಾಬಿನ್ ತನಕ ಎಳೆದುಬಿಡುತ್ತದೆ. ಚಿಕ್ಕ ಗೌರವವೂಬಿಲ್ಲದೇ ತಾರಾಮಾರೀ ಬೈಗುಳಗಳಿಗೊಳಗಾಗುತ್ತದೆ. ಇಲ್ಲಿ ತನ್ನ 'ಸರಿ' ಗಳಿಗಿಂತ 'ತಪ್ಪು'ಗಳೇ ಹೆಚ್ಚು ಗುರುತಿಸಲ್ಪಡುತ್ತವೆ ಎಂಬ ಭಾವನೆ ಒಮ್ಮೆ ಬಂದುಬಿಟ್ಟರೆ ಮುಗಿದೇ ಹೋಯಿತು, ಆ ವಾತಾವರಣದ ಮೇಲೆ 'ನನ್ನದು' ಎನ್ನುವ ಪ್ರೀತಿ ಹುಟ್ಟುವುದಾದೇ ಇಲ್ಲ. ವರ್ಷವಿಡೀ ಗೇಯ್ದು, ತಮ್ಮ ಜೀವನದ ಅಮೂಲ್ಯ ಸಮಯ, ಬುದ್ಧಿ, ಶ್ರಮಗಳನ್ನೆಲ್ಲಾ ಕಂಪನಿಗಾಗಿ ವ್ಯಯಿಸಿ, ವರುಷದುದ್ದಕ್ಕೂ ಕಾದ 'ಸಂಬಳ ಏರಿಕೆ'ಯ ದಿನ ಆಸೆಯಿಂದ ಮೇಲಾಧಿಕಾರಿಯ ಕ್ಯಾಬಿನ್ ಹೊಕ್ಕಾಗ ಅವರು ನೀವು ವರುಷವಿಡೀ ಮಾಡಿದ ತಪ್ಪುಗಳನ್ನಷ್ಟೇ ಪಟ್ಟಿ ಮಾಡಿಕೊಂಡು ಕೂತಿದ್ದರೆ ಹೇಗಾಗಬೇಡ!?

ಕೆಲವು ಬಾಸ್ ಗಳೇಕೆ ಹಾಗಿರುತ್ತಾರೆ? ಎಲ್ಲರೂ ಎಲ್ಲರೂ ನೂರಕ್ಕೆ ನೂರು ಪರ್ಫೆಕ್ಟ್ ಆಗಿರಬೇಕೆಂಬ ಹಠಕ್ಕೋ? 'ಕ್ರೋಧಂ ಸರ್ವರ್ಥ ಸಾಧನಂ' ಎಂಬ ತಪ್ಪು ತಿಳುವಳಿಕೆಗೋ? ಬಹುಷಃ ಕಾರಣ ಅವರಿಗೂ ಗೊತ್ತಿರಲಿಕ್ಕಿಲ್ಲ. ಹೆಚ್ಚಿನಸಲ ಒಬ್ಬ ಉರಿಗೋಪದ ಬಾಸ್ ಕೈಕೆಳಗೆ ಪಳಗಿದ ಶಿಷ್ಯನೇ ಮುಂದೆ ಮತ್ತೊಬ್ಬ ಉರಿಗೋಪದ ಬಾಸ್ ಆಗಿ ರೂಪುಗೊಳ್ಳುತ್ತಾನೆ. 'ಅಂದು ನಾನು ಅನುಭವಿಸದ್ದರೆದುರು ಇದೇನೂ ಅಲ್ಲ' ಎನ್ನುವ ಭಾವನೆ ಬೇರೂರಿರುತ್ತದೋ ಅಥವಾ 'ಹೀಗೆ ನಡೆದುಕೊಳ್ಳುವುದೇ ಸರಿಯಾದ ರೀತಿ' ಎಂದುಕೊಂಡಿರುತ್ತಾರೋ ಗೊತ್ತಿಲ್ಲ. ಎಂದೋ ಯಾರೋ ಕಟ್ಟಿಸಿಕೊಂಡ ದಂಡ ಇಂದು ವಸೂಲಾಗುತ್ತಿರುತ್ತದೆ. ದುರಂತವೆಂದರೆ ಇಂದು ತನ್ನ ಕೈಕೆಳಗಿನವರ ಮೇಲೆ ಎಗರಾಡುವಾಗ ಅಂದು ತನ್ನ ಮೇಲಾಧಿಕಾರಿಯ ಕಡುಗೋಪದಿಂದ ತನಗೆಷ್ಟು ನೋವಾಗುತ್ತಿತ್ತೆಂಬುದು ಅವರಿಗೆ ನೆನಪಾಗುವುದೇ ಇಲ್ಲ! ಅಲ್ಲದೇ ಕೆಲವೊಮ್ಮೆ ಅನುಭವದ 'ಆಳ'ಕ್ಕಿಂತ ಹಿರಿತನದ 'ಎತ್ತರ'ವೇ ಹೆಚ್ಚಾಗಿ ಕೆಲಸಮಾಡತೊಡಗುತ್ತದೆ. ತನ್ನ ಮನದೊಳಗೇ ಹಾಕಿಕೊಂಡಿರುವ ಅಥವಾ ಹತ್ತಾರು ವರ್ಷಗಳಿಂದ ಆಚರಿಸುತ್ತಾ, ಆಚರಿಸುತ್ತಾ ಡಿಫಾಲ್ಟ್ ಆಗಿಹೋಗಿರುವ ಸಿದ್ಧಸೂತ್ರದಂತೇ ತನ್ನ ಕೈಕೆಳಗಿನವರೂ ನಡೆಯಬೇಕೆಂದು ಅದು ಬಯಸುತ್ತದೆ. 

ಹಾಗಂತ ಎಲ್ಲಾ ಮೇಲ್ವಿಚಾರಕರೂ ಹೀಗೇ ಅನ್ನಲಿಕ್ಕಾಗುವುದಿಲ್ಲ.  ಸಂಬಳ, ಪದವಿಗಳ ಬೇಧವಿಲ್ಲದೆ ಗೆಳೆಯನಂತೆ ನಡೆದುಕೊಳ್ಳುವವರಿದ್ದಾರೆ. 'ಏನ್ರೀ,  ಹೇಗಿದಾಳ್ರೀ ನಿಮ್ಮ ಗರ್ಲ್ ಫ್ರೆಂಡ್?" ಎಂದು ತಮಾಷೆಮಾಡುವ ಹಗುರ ಮನಸ್ಸಿನವರಿದ್ದಾರೆ. "ಇದೊಂದು ಶನಿವಾರ ವರ್ಕ್ ಮಾಡಿ ಆಯ್ತಾ?" ಎಂದು ಗೌರವಯುತವಾಗಿ ದುಡಿಸಿಕೊಳ್ಳುವ ಜಾಣರಿದ್ದಾರೆ. ಕೆಲಸದಾಚೆಗಿನ ವಿಚಾರಗಳನ್ನೂ ಚರ್ಚಿಸುತ್ತಾ ಮನಸ್ಸಿಗೆ ಹತ್ತಿರವಾಗುವವರಿದ್ದಾರೆ. ಇಂಥವರ ಮಾತನ್ನ ತೆಗೆದು ಹಾಕುವುದು ಎಂತಹವರಿಗೂ ಕಷ್ಟವೇ. ನನ್ನ ಪ್ರಯತ್ನಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ವ್ಯಕ್ತಿಯೊಬ್ಬ ನನ್ನ ತಪ್ಪುಗಳನ್ನೂ ಗುರುತಿಸಿದಾಗ ನಾನದನ್ನು ಸ್ವೀಕರಿಸುವ ರೀತಿಯೇ ಬೇರೆಯಾಗಿರುತ್ತದೆ. ಅವರು ತನ್ನ ಮೇಲೆ ಭರವಸೆಯಿಟ್ಟಿದ್ದಾರೆನ್ನುವುದನ್ನು ಅರಿತುಕೊಂಡ ಪ್ರತಿಯೊಬ್ಬನೂ ಹೆಚ್ಚೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾನೆ. ಆ ಭರವಸೆಯನ್ನು ಉಳಿಸಿಕೊಳ್ಳುವ ಹಾದಿಯಲ್ಲೇ ಯೋಚಿಸುತ್ತಾನೆ. 

ಕೆಲಸ ಮಾಡಿಸುವುದೇ ಒಬ್ಬರ ಕರ್ತವ್ಯವಾಗಿರುವಾಗ ಅದನ್ನು ಗೌರವಯುತವಾಗಿಯೇ ಮಾಡಿಸಬಹುದಲ್ಲ? ತಪ್ಪನ್ನು ತಿದ್ದುವ ರೀತಿ ಶಿಲ್ಪಿ ಉಳಿಯಿಂದ ಕೊಟ್ಟ ಏಟಿನಂತಿರಬೇಕಲ್ಲದೇ, ಚಾಲಕ ಚಾವಟಿಯಿಂದ ಕೊಟ್ಟ ಒದೆಯಂತಲ್ಲ ಅಲ್ವಾ? ತಿದ್ದಬೇಕು, ಬೆಳೆಯಲು ಬಿಡಬೇಕು. ಆ ಮೂಲಕ ನಾವು ಬೆಳೆಯಬೇಕು' ಎನ್ನುವ ಉದಾರಗುಣ ಹೊಂದಿರುವ ಬಾಸ್ ಸಿಕ್ಕಿದರೆಂದರೆ ಉದ್ಯೋಗ ಜೀವನದ ಅರ್ಧ ಕಷ್ಟಗಳು ಮುಗಿದಂತೆಯೇ.

(ಮಾರ್ಚ್ 2017ರ 'ನಿಮ್ಮೆಲ್ಲರ ಮಾನಸ'ದಲ್ಲಿ ಪ್ರಕಟವಾದ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...