ಅಜ್ಜಿ ಮನೆಗೆ ವಾಪಾಸ್ ಬರ್ತಿದಾಳಂತೆ!
ಈ ಸುದ್ದಿ ಕೇಳಿ ಖುಷಿಪಟ್ಟವನು ಹನ್ನೆರೆಡು ವರ್ಷದ ಗೋಪಿಯೊಬ್ಬನೇ. ಅಪ್ಪ ತಟಸ್ಥನಾಗಿದ್ದ. ಅಮ್ಮ ಬೆಳಗಿನಿಂದಲೂ ಭುಸುಗುಟ್ಟುತ್ತಾ ಓಡಾಡಿಕೊಂಡಿದ್ದಳು. "ಅವತ್ತು ದೊಡ್ಡದಾಗಿ ನಾವು ಸಾಕ್ತೀವಿ ಅಂತ ಅಷ್ಟೆಲ್ಲಾ ರಾದ್ದಾಂತ ಮಾಡಿ ಕರ್ಕೊಂಡ್ ಹೋದ್ರಲ್ಲಾ ನಿಮ್ಮ ಅಣ್ಣ-ಅತ್ತಿಗೆ, ಇಷ್ಟು ಬೇಗ ಸಾಕಾಗಿ ಹೋಯ್ತಂತಾ? ಅವರ ಕಾಯಿಲೇನ ಇನ್ನಷ್ಟು ಜಾಸ್ತಿ ಮಾಡಿ, ಈಗ ಇಲ್ಲಿ ತಂದ್ ಹಾಕಿದ್ರೆ ನೋಡ್ಕೊಳ್ಳೋರ್ಯಾರು? ನಾನವತ್ತು ಬಾಣಂತಿಯಾಗಿ ಮಲಗಿದ್ದಾಗ ನೋಡೋಕೆ ಬಂದಿದ್ದ ನನ್ನ ಅಪ್ಪ-ಅಮ್ಮನ್ನ ಕಣ್ಣೀರು ಹಾಕಿಸಿ ಕಳ್ಸಿದ್ರಲ್ಲಾ ನಿಮ್ಮಮ್ಮ, ಇವತ್ತು ಅವರು ಮಲಗಿದಾಗ ನೋಡ್ಕೊಳ್ಳೋಕೆ ನಾನೇ ಬೇಕಂತ?" ಎಂದು ಅವಳು ಅಡಿಗೆಮನೆಯಲ್ಲಿ ಕೂಗಾಡುತ್ತಿದ್ದದ್ದು ಕೇಳಿ ಚೂಯಿಂಗ್ ಗಮ್ ತಗೊಳ್ಳೋಕೆ ಒಂದು ರೂಪಾಯಿ ಕೇಳಲೆಂದು ಬಂದಿದ್ದ ಗೋಪಿ ಬಾಗಿಲಲ್ಲೇ ನಿಂತುಬಿಟ್ಟ. ಜೇಬಲ್ಲಿ ಒಂದು ರೂಪಾಯಿಯಿದೆ. ಇನ್ನೊಂದು ರೂಪಾಯಿ ಸಿಕ್ಕಿದ್ರೆ ಎರೆಡು ಚೂಯಿಂಗ್ ಗಮ್ ಜೊತೆ ಒಂದು WWE ಕಾರ್ಡ್ ಫ್ರೀ ಬರ್ತಿತ್ತು. ಆದ್ರೆ ಈಗೇನಾದ್ರೂ ಅಮ್ಮನತ್ರ ಕೇಳಿದ್ರೆ ಒಂದು ರೂಪಾಯಿಗೆ ಹತ್ತು ಒದೆತ ತಿನ್ಬೇಕಾಗುತ್ತೆ! ಏನು ಮಾಡೋದು ಅಂತ ಯೋಚಿಸುತ್ತಾ ನಿಂತಿರುವಾಗಲೇ ಮನೆಯೆದುರು ಗೇಟ್ ತೆರೆದ ಸದ್ದಾಯಿತು. ಕೈಯ್ಯಲ್ಲೊಂದು ಬ್ಯಾಗ್ ಹಿಡಿದು ದಾಪುಗಾಲಿಡುತ್ತಾ ಬರುತ್ತಿದ್ದ ದೊಡ್ಡಪ್ಪ; ಅವರ ಹಿಂದೆ ಚಿಕ್ಕ ಬಟ್ಟೆಯ ಗಂಟನ್ನು ಕಂಕುಳಲ್ಲಿಟ್ಟುಕೊಂಡು ವಾಲುತ್ತಾ ನಡೆದುಬರುತ್ತಿರುವ ಅಜ್ಜಿ. ಆರೇಳು ತಿಂಗಳ ಕೆಳಗೆ ಇದೇ ದೊಡ್ಡಪ್ಪ ಅಪ್ಪ-ಅಮ್ಮನ ಜೊತೆ ಜಗಳಾಡಿ ತನ್ನ ಮನೆಗೆ ಕರೆದುಕೊಂಡು ಹೋಗುವಾಗ ಅವಳ ಬೆನ್ನು ಇಷ್ಟೊಂದು ಬಾಗಿರಲಿಲ್ಲ; ಇವತ್ಯಾಕೋ ತೀರ ವಯಸ್ಸಾದವಳಂತೆ ಕಾಣುತ್ತಿದ್ದಾಳೆ ಕಾವೇರಜ್ಜಿ.
ಜಗುಲಿಯ ಖುರ್ಚಿಯ ಮೇಲೆ ಕೈಲಿದ್ದ ಚೀಲವನ್ನ ಹೆಚ್ಚೂ ಕಡಿಮೆ ಬಿಸಾಕುವಂತೆಯೇ ಇಟ್ಟ ದೊಡ್ಡಪ್ಪ "ಹೂಂ, ಒಳಗೆ ಹೋಗು" ಅಂದರು.
"ಅಲ್ಲ ಶಂಕ್ರು ಅದೂ...." ಅಂತ ಏನೋ ಹೇಳಲು ಹೊರಟ ಅಜ್ಜಿಯ ಮಾತನ್ನು ಅರ್ಧಕ್ಕೇ ತುಂಡರಿಸಿ, "ನೋಡೂ, ನೀನು ಜಾಸ್ತಿ ಮಾತಾಡ್ಬೇಡ. ನಿನಗೆ ಇನ್ನೂ ಪ್ರಾಯ ತುಂಬಿ ಬರೋದಿಲ್ಲ. ಬಾಯಿ ಮುಚ್ಕಂಡು ಒಂದು ಮೂಲೇಲಿ ಕೂರೋದ್ನ ಕಲಿ"
ಹಾಗಂತ ಗುಡುಗಿ ಹೊರಡಲೆಂದು ತಿರುಗಿದವರನ್ನ ಅಮ್ಮನ ಮಾತು ತಿವಿದಿತ್ತು: "ಅವತ್ತು ಮತ್ತೆ ಈ ಮನೆ ಮೆಟ್ಲು ಹತ್ಸೊಲ್ಲ, ನನ್ನಮ್ಮನ್ನ ನಾನೇ ಸಾಕ್ತೀನಿ ಅಂತ ಕರ್ಕೊಂಡ್ ಹೋದೋರ್ಗೆ ಇಷ್ಟು ಬೇಗ ಅಮ್ಮ ಭಾರ ಅದ್ಲೇನೋ!"
ತಕ್ಷಣ ಬಾಲ ಮೆಟ್ಟಿಸಿಕೊಂಡ ಹಾವಿನಂತೆ ಭುಸುಗುಟ್ಟಿದ್ದರು ದೊಡ್ಡಪ್ಪ: "ಈ ಕೊಂಕು ಮಾತೆಲ್ಲ ನಿನ್ನ ಗಂಡನ್ಹತ್ರ ಇಟ್ಕೋ. ಅಷ್ಟಕ್ಕೂ ಅಮ್ಮನ ಆಸ್ತಿ ಇಟ್ಕೊಂಡ್ ತಿಂತಿರವ್ರು ನೀವು ತಾನೇ? ಬೇಕಾದ್ರೆ ನೋಡ್ಕೊಳ್ಳಿ, ಇಲ್ಲ ಬಿಡಿ" ಅಂತ ಧಡಧಡನೆ ಮೆಟ್ಟಿಲಿಳಿದು ಬಿರುಗಾಳಿಯಂತೆ ಹೊರಟೇಹೋದರು. ಅಪ್ಪ ಇದ್ಯಾವುದನ್ನೂ ಕೇಳಿಸಿಕೊಳ್ಳದವನಂತೆ ಗದ್ದೆಯಕಡೆ ನಡೆದ.
ಹಿತ್ತಲ ಬದಿಯಲ್ಲಿದ್ದ ಪುಟ್ಟ ಕೋಣೆಯನ್ನು ಅಜ್ಜಿಗೆ ಬಿಟ್ಟುಕೊಡಲಾಯಿತು. ಅಜ್ಜಿಗ್ಯಾಕೋ ಅದು ಹಿಡಿಸಿದಂತೆ ಕಾಣಲಿಲ್ಲ. "ನಂಗೆ ಈ ಕೋಣೆ ಬೇಡ. ಇಲ್ಲಿ ಓಡುಹುಳ ಬರ್ತಾವೆ" ಅಂತ ರಾಗ ತೆಗೆದಾಗ ಅಮ್ಮ ಧುಮುಗುಟ್ಟಿದಳು. "ನಿಮಗಂತ ಹೊಸ ಕೋಣೆ ಎಲ್ಲಿಂದ ತರೋಣ? ಇರೋದ್ರಲ್ಲೇ ಹೊಂದ್ಕೊಂಡು ಹೋಗ್ಬೇಕು. ನಾವೆಲ್ಲಾ ಏನು ಅರಮನೇಲಿ ಮಲಗ್ತಿದೀವ?" ಅಜ್ಜಿ ಮುಂದೆ ಮಾತನಾಡಲಿಲ್ಲ. ಸುಮ್ಮನೆ ಒಳಗೆ ಹೋಗಿ ತನಗಾಗಿ ಹಾಸಿದ್ದ ಹಾಸಿಗೆಯ ಮೇಲೆ ಕೂತಳು. ಕಿಟಕಿಯ ಮೂಲಕ ಅಂಗಳದಲ್ಲಿ ಸೈಕಲ್ ಹೊಡೆಯುತ್ತಿರುವ ಗೋಪಿಯನ್ನು ನೋಡಿದವಳೇ ಏನೋ ನೆನಪಾದಂತೆ ತನ್ನ ಬಟ್ಟೆಯ ಗಂಟು ತೆರೆದು, ಅದರೊಳಗೆ ಪುಟ್ಟ ಪ್ಲಾಸ್ಟಿಕ್ ಕವರಿನೊಳಗೆ ಇಟ್ಟುಕೊಂಡಿದ್ದ ಉತ್ತುತ್ತೆಯನ್ನ ತೆಗೆದು ಗೋಪಿಯನ್ನ ಕರೆದಳು:
"ಮಾಣೀ.. ಬಾರಾ ಇಲ್ಲಿ"
ಸೈಕಲ್ ತುಳಿಯುತ್ತಿದ್ದ ಗೋಪಿ ಅಲ್ಲಿಂದಲೇ ಕೂಗಿದ "ಎಂತ ಅಜ್ಜೀ? ನಾನು ಸೈಕಲ್ ಹೊಡೀತಿದೀನಿ"
ನಾಲ್ಕು ಉತ್ತುತ್ತೆಯನ್ನ ಕೈಲಿ ಹಿಡಿದುಕೊಂಡು ವಾಲಾಡುವ ಹೆಜ್ಜೆಯಲ್ಲಿ ತಾನೇ ಅಂಗಳಕ್ಕೆ ಬಂದಳು. "ಇಕಾ ಉತ್ತುತ್ತೆ. ಮೊನ್ನೆ ಶಾರದ ಬಂದೊಳು ದಿನಾ ಎರೆಡೆರಡು ತಿನ್ನಿ ಅಂತ ಕೊಟ್ಟು ಹೋದ್ಲು. ನಂಗೆ ಹಲ್ಲು ಗಟ್ಟಿ ಇಲ್ಲ. ತಗಾ, ನೀನಾದ್ರೂ ತಿನ್ನು"
ಗೋಪಿ ಖುಷಿಯಿಂದ ಅಷ್ಟನ್ನೂ ಒಟ್ಟಿಗೇ ಬಾಯಿಗೆ ತುರುಕಿಕೊಂಡ. ಏನೋ ಜಂಬು ವಾಸನೆ ಅನ್ನಿಸಿದರೂ ರುಚಿಯಾಗೇ ಇತ್ತು ಉತ್ತುತ್ತೆ.
"ನಿಂಗಿವತ್ ಇಸ್ಕೂಲಿಲ್ವಾ?"
"ಇಲ್ಲ ಅಜ್ಜೀ. ಭಾನುವಾರ ಅಲ್ವಾ"
ಎರೆಡು ನಿಮಿಷ ಅಲ್ಲೇ ಎಳೆ ಬಿಸಿಲಲ್ಲಿ ಛಳಿಕಾಸುತ್ತ ನಿಂತು ಮತ್ತೆ ವಾಲಾಡುತ್ತಾ ಒಳಗೆ ಹೋದವಳನ್ನ ನೋಡಿದ ಗೋಪಿಗೆ ಏನೋ ಹೊಳೆದು ಅವಳ ಹಿಂದೆಯೇ ಓಡಿದ. ಹಾಸಿಗೆಯೆದುರು ಮೊಣಕಾಲೂರಿ ಕೂತವನು ಸಣ್ಣ ದನಿಯಲ್ಲಿ ಕೇಳಿದ:
"ಅಜ್ಜೀ ನಿನ್ಹತ್ರ ಒಂದು ರೂಪಾಯಿ ಇದ್ಯಾ?"
"ಎಂತಕೆ ಮಾಣೀ?"
"ಮತ್ತೇ.. ನಾನು ಚೂಯಿಂಗ್ ಗಮ್ ತಗೋಬೇಕು ಅದಿಕ್ಕೇ"
"ನೋಡ್ತೀನಿ, ತಡಿ" ಅಂದವಳು ತನ್ನ ದಿಂಬಿನಡಿ ಇದ್ದ ಸಣ್ಣ ಕೈಚೀಲದಿಂದ ನಾಲ್ಕಾರು ನಾಣ್ಯಗಳನ್ನು ಹೊರತೆಗೆದಳು. ಅವನ್ನು ಕಿಟಕಿಯಿಂದ ಬರುತ್ತಿರುವ ಬೆಳಕಿನಲ್ಲಿ ಕಣ್ಣಿನ ಸಮೀಪ ಹಿಡಿದು ನೋಡಿ ತಲಾ ಐದು ಹಾಗೂ ಒಂದರ ಒಂದೊಂದು ನಾಣ್ಯ ಗೋಪಿಯರ ಕೈಗಿತ್ತು ಪಿಸುಗುಟ್ಟಿದಳು- "ಹಂಗೇ ಬರ್ಬೇಕಾದ್ರೆ ನಂಗೆ ಕಾವೇರಿ ಹೋಟ್ಲಿಂದ ಕಾರ್ಸೇವು ತಗೊಂಡ್ಬಾ. ಅಮ್ಮಂಗೆ ಹೇಳ್ಬೇಡ!"
ಗೋಪಿ ಖುಷಿಯಿಂದ ಓಡಿದ.
****************
ಅಜ್ಜಿ ಬಂದ ದಿನದಿಂದ ಮನೆಯಲ್ಲಿ ಒಂದಿಲ್ಲೊಂದು ಗಲಾಟೆ ನಡೆಯುತ್ತಲೇ ಇತ್ತು. ಟಾಯ್ಲೆಟ್ ಗೆ ಹೋದೋರು ಸರಿಯಾಗಿ ನೀರು ಹಾಕಿಲ್ಲ, ವದ್ದೆ ಬಟ್ಟೆ ಮಂಚದ ಮೇಲೇ ಇಟ್ಟಿದ್ದಾರೆ, ಕೈಚೀಲದಲ್ಲಿ ಕೊಳಕು ತಿಂಡಿ ಇಟ್ಟುಕೊಂಡಿರೋದ್ರಿಂದ ಇಲಿ, ಜಿರಲೆ ಜಾಸ್ತಿ ಆಗಿದಾವೆ.... ಹೀಗೇ ಏನೇನೋ ಕಾರಣಕ್ಕೆ. ಕೆಲವೊಮ್ಮೆ ಕಾರಣವೇನೆಂದೇ ಗೋಪಿಗೆ ತಿಳಿಯುತ್ತಿರಲಿಲ್ಲ. ಅಮ್ಮನ ಬೈಗುಳದಿಂದ ಶುರುವಾಗಿ, ನಂತರ ಅಪ್ಪನ ಧ್ವನಿ ತಾರಕಕ್ಕೇರಿ ಕೊನೆಗದು ಅಜ್ಜಿಯ ಕಣ್ಣೀರಿನೊಂದಿಗೆ ಕೊನೆಯಾಗುತ್ತಿತ್ತು. ಎರೆಡೇ ವರ್ಷಗಳ ಕೆಳಗೆ ಇವರಿಗೆ ಎದುರು ನಿಂತು ಅಷ್ಟೇ ಗಟ್ಟಿದನಿಯಲ್ಲಿ ಜಗಳಾಡುತ್ತಿದ್ದ ಅಜ್ಜಿ ಇಂದು ಈ ಪರಿ ಮೆತ್ತಗಾಗಿರುವುದನ್ನ ನೋಡಿ ಗೋಪಿಗೆ ಒಮ್ಮೊಮ್ಮೆ ಆಶ್ಚರ್ಯವಾಗುತ್ತಿತ್ತು.
ಇವರಲ್ಲಿ ಯಾರು ಸರಿಯೋ, ಯಾರು ತಪ್ಪೋ, ದೇವರೇ ಬಲ್ಲ. ಎರೆಡು ವರ್ಷಗಳ ಕೆಳಗೆ ಅಜ್ಜ ತೀರಿಕೊಂಡಾಗ ಆಸ್ತಿ ಭಾಗದ ವಿಷಯದಲ್ಲಿ ಆರಂಭವಾಗಿತ್ತು ದಾಯಾದಿ ಕಲಹ. ಯಾರ್ಯಾರಿಗೆ ಎಷ್ಟೆಟ್ಟು ಬರಬೇಕಿತ್ತೋ, ಎಷ್ಟೆಷ್ಟು ಬಂತೋ ಗೊತ್ತಿಲ್ಲ; ಇದ್ದ ಮೂರುಮೆಟ್ಟು ಭೂಮಿಗಾಗಿ ಮೂವರು ಅಣ್ಣ-ತಮ್ಮಂದಿರು ಹಾಗೂ ಒಬ್ಬ ಅಕ್ಕ ಪೆಡಂಭೂತಗಳಂತೆ ಕಿತ್ತಾಡಿಕೊಂಡು ದೂರಾಗಿದ್ದರು. ಆಗೆಲ್ಲಾ ದೊಡ್ಡಪ್ಪ-ದೊಡ್ಡಮ್ಮಾದಿಗಳಿಂದ ಹಿಡಿದು ಇದೇ ಅಜ್ಜಿಯ ತನಕ ಎಲ್ಲರೂ ತನ್ನ ಅಮ್ಮನ ಮೇಲೆ ಹರಿಹಾಯುತ್ತಿದ್ದಾಗ, ನೊಂದ ಅಮ್ಮ ತನ್ನನ್ನು ತಬ್ಬಿಕೊಂಡು ಅಳುತ್ತಾ ಮಲಗುತ್ತಿದ್ದಾಗ 'ಅಮ್ಮ ಪಾಪ' ಅನ್ನಿಸುತ್ತಿತ್ತು ಗೋಪಿಗೆ. ಆದರೆ ಇಂದು ಬೆನ್ನು ಬಾಗಿ, ಸರಿಯಾಗಿ ನಡೆಯಲು ಆಗದೇ, ಸುಕ್ಕುಗಳ ನಡುವೆ ಅಡಗಿಕೊಂಡಿರುವ ಕಣ್ಗಳನ್ನ ಮತ್ತಷ್ಟು ಕಿರಿದಾಗಿಸಿಕೊಂಡು ಅಳುವ ಅಜ್ಜಿಯನ್ನ ನೋಡಿದಾಗಲೂ 'ಪಾಪ' ಅಂತಲೇ ಅನ್ನಿಸುತ್ತಿತ್ತು. ಅಮ್ಮ ಮನೆಯಲ್ಲಿಲ್ಲದ ಹೊತ್ತಿನಲ್ಲಿ ತನ್ನ ಕೋಣೆಗೆ ಕರೆದೊಯ್ದು ಕೈಚೀಲದಲ್ಲಿ ಮುಚ್ಚಿಟ್ಟುಕೊಂಡಿರುತ್ತಿದ್ದ , ತನ್ನನ್ನು ನೋಡಲು ಬಂದವರ್ಯಾರೋ ಕೊಟ್ಟು ಹೋಗಿದ್ದ ತಿಂಡಯನ್ನ ಕೈಗಿತ್ತು "ಗಬಗಬ ತಿನ್ನು, ಅಮ್ಮ ಬರೋಕೂ ಮುಂಚೆ!" ಎಂದು ತನ್ನ ಬೆನ್ನು ನೇವರಿಸುತ್ತಿದ್ದ ಅಜ್ಜಿಗೆ, ಅಮ್ಮನಿಗೆ ತಿಳಿಯದಂತೆ ಕಾರ್ಸೇವು, ಗೋಲಿಬಜೆ, ಬೋಂಡಾ ತಂದು ಕೊಡುತ್ತಿದ್ದ, ಅವಳ ದುಡ್ಡಿನಲ್ಲಿಯೇ!
ಮರಳಿ ಬಂದ ಆರಂಭದಲ್ಲಿ ಅಜ್ಜಿ ಅಲ್ಲೇ ಹತ್ತಿರದಲ್ಲಿದ್ದ ಲೋಕೆಶರಾಯರ ಮನೆಗೆ ಯಾವಾಗಲೂ ಹೋಗಿ ಬರುತ್ತಿದ್ದಳು. ಅಲ್ಲಿ ಇವಳಿಗಿಂತ ಕೆಲವೇ ವರ್ಷಗಳಿಗೆ ಚಿಕ್ಕವರಾದ ಲೋಕೆಶರಾಯರ ತಾಯಿ ಸುಂದ್ರಮ್ಮನ ಜೊತೆ ಹರಟುತ್ತಾ, ಅವರ ಸೊಸೆ ಫಾಲ್ಗುಣಿ ಕೊಡುವ ಕಾಫಿ, ಪಾನಕ ಕುಡಿಯುವುದು, ಕುರುಕಲು ತಿಂಡಿ ಮೆಲ್ಲುವುದು ಅಜ್ಜಿಯ ಮೆಚ್ಚಿನ ದಿನಚರಿಯಾಗಿತ್ತು. ಆದರೆ ಯಾವಾಗ ಇವಳ ಕೆಮ್ಮು, ಅನಾರೋಗ್ಯಗಳು ಜಾಸ್ತಿಯಾದವೋ, ಅವರೂ ಇವಳನ್ನು ದೂರವಿರಿಸತೊಡಗಿದರು. ಕೊನೆಗೊಂದು ದಿನ ಫಾಲ್ಗುಣಿ "ಕಾವೇರಮ್ಮ, ನನ್ನ ಮಕ್ಕಳಿನ್ನೂ ಚಿಕ್ಕವು. ನೀವು ಹೀಗೆ ಕೆಮ್ತಾ ಇಲ್ಲೇ ಕೂತಿದ್ರೆ ಅವಕ್ಕೂ ಕೆಮ್ಮು ಅಂಟಿಕೊಳ್ಳತ್ತೆ. ಮತ್ತೆ ಮತ್ತೆ ಇಲ್ಲಿಗೆ ಬರಬೇಡಿ" ಅಂತ ಮುಖಕ್ಕೆ ಹೊಡೆದಂತೆ ಹೇಳಿಯೇಬಿಟ್ಟಳು! ಅವಮಾನದಿಂದ ಸೋತ ಹೆಜ್ಜೆಗಳನ್ನಿಡುತ್ತಾ ಮನೆಗೆ ಬಂದಿದ್ದಳು ಕಾವೇರಜ್ಜಿ.
ಈ ವಿಷಯ ತಿಳಿದ ಅಮ್ಮನಿಗೂ ಅಜ್ಜಿಯ ಮೇಲೆ ಕನಿಕರ ಮೂಡಿತ್ತೋ ಏನೋ. "ನೋಡಿದ್ರಾ? ಅವತ್ತು ಅತ್ತೆ ಗಟ್ಟಿ ಇದ್ದು, ನಮ್ಜೊತೆ ಜಗಳ ಕಾಯ್ತಿದ್ದಾಗ ಅವರ ಕಿವಿ ಊದ್ತಿದ್ದ ಇದೇ ಫಾಲ್ಗುಣಿ-ಸುಂದರಮ್ಮ, ಇವತ್ತು ಅವರಿಗೆ ವಯಸ್ಸಾದ ಕೂಡ್ಲೇ ಹೇಗೆ ಮಾತಾಡ್ತಿದಾರೆ ಅಂತ?" ಎಂದು ಅಪ್ಪನ ಬಳಿ ಹೇಳಿದ್ದು ಪಕ್ಕದಲ್ಲೇ ಮಲಗಿದ್ದ ಗೋಪಿಯ ಕಿವಿಗೆ ಸ್ಪಷ್ಟವಾಗಿಯೇ ಕೇಳಿತ್ತು.
ಬರುಬರುತ್ತಾ ಅಜ್ಜಿಯ ಜೀರ್ಣಶಕ್ತಿ ಕುಸಿಯತೊಡಗಿತು. ಏನೇ ತಿಂದರೂ ವಾಂತಿಯೋ, ಬೇದಿಯೋ ಶುರುವಾಗಿಬಿಡುತ್ತಿತ್ತು. ನಿಶ್ಯಕ್ತಿಯಿಂದ ಮಲಗಿಯೇ ಇರುತ್ತಿದ್ದ ಅವಳು, ಅಪ್ಪ ಪೇಟೆಯ ಕಡೆಗೆ ಹೊರಟಿದ್ದು ಕಂಡರೆ ಸಾಕು "ಚಂದ್ರೂ.... ಶಂಕ್ರು, ಶಶಿ ಯಾರಾದ್ರೂ ಕಂಡ್ರೆ ಬಂದು ನನ್ನ ನೋಡ್ಕೊಂಡು ಹೋಗೋಕೆ ಹೇಳೋ" ಅಂತ ಮಲಗಿದಲ್ಲಿಂದಲೇ ಕೂಗಿ ಹೇಳುತ್ತಿದ್ದಳು. ಪ್ರತೀ ಸಲವೂ ಇದನ್ನೇ ಕೇಳಿ, ಕೇಳಿ ಬೇಸತ್ತ ಅಪ್ಪ "ಹೌದೌದು. ದಿನಕ್ಕೆ ನಾಲ್ಕು ಸಲ ಬಂದು ಹೋಗೋಕೆ ಅವರಿಗೆ ಬೇರೆ ಉದ್ಯೋಗವೇ ಇಲ್ಲಾಂದ್ಕೊಂಡ್ಯಾ?" ಅಂತ ರೇಗಿದ್ದನಾದರೂ ತನ್ನ ಅಣ್ಣಂದಿರಿಗೆ ತಾಯಿಯ ಕರೆಯನ್ನು ಮುಟ್ಟಿಸಲು ಮರೆತಿರಲಿಲ್ಲ. ಆದರೆ ತಾಯಿ ಬೇರಿನ ಹಂಗು ಕಳಚಿಕೊಂಡು ಸ್ವತಂತ್ರ ವೃಕ್ಷಗಳಾಗಿ ಬೆಳೆದು ನಿಂತಿದ್ದವರಿಗೆ ನಾಲ್ಕು ಹೆಜ್ಜೆ ಬಂದು ವೃದ್ಧ ತಾಯಿಯನ್ನ ಮಾತನಾಡಿಸಿಕೊಂಡು ಹೋಗುವುದೂ ವೃಥಾ ಶ್ರಮವೆನಿಸಿತ್ತು!
ಬೆಳಗ್ಗೆ ಉತ್ತುತ್ತೆ ಕೇಳಲು ಅಜ್ಜಿಯ ಕೋಣೆಗೆ ಹೋದಾಗ "ನೋಡಾ ಮಾಣೀ... ಮಕ್ಳಿಗೆಲ್ಲಾ ಈ ಮುದುಕಿ ಬ್ಯಾಡಾಗಿಹೋದ್ಲು" ಅಂತ ಬಿಕ್ಕಿದ್ದ ಅಜ್ಜಿಗೆ ಏನು ಹೇಳಬೇಕೆಂದು ತಿಳಿಯದೇ ಕಣ್ಕಣ್ಣು ಬಿಡುತ್ತಾ ನಿಂತುಬಿಟ್ಟ ಗೋಪಿ.
ಹಾಗೇ ಹದಿನೈದು ದಿನ ಕಳೆದ ಮೇಲೆ ಒಂದು ದಿನ ಸಂಜೆ ಗೋಪಿ ಶಾಲೆಯಿಂದ ಬರುವ ಹೊತ್ತಿಗೆ ಅಜ್ಜಿ ಲವಲವಿಕೆಯಿಂದ ಎದ್ದು ಓಡಾಡುತ್ತಿದ್ದಳು. ಗೋಪಿಯನ್ನು ಕಂಡವಳೇ "ಬಾರೋ ಮಾಣೀ.. ಇಲ್ನೋಡೋ... ಯಮ ಬರೆ ಎಳ್ದಿದಾನೆ! ನಾನು ಸಧ್ಯಕ್ಕೆ ಸಾಯಲ್ಲ!" ಎಂದು ತನ್ನ ಮೊಣಕಾಲಿನ ಮೇಲೆ ಮಚ್ಚೆಯಂತೆ ಮಂದವಾಗಿ ಮೂಡಿದ್ದ ಕಪ್ಪು ಗುರುತನ್ನು ತೋರಿಸಿ ಹಿಗ್ಗಿನಿಂದ ಹೇಳಿದಳು. ಅಲ್ಲೇ ಇದ್ದ ಅಮ್ಮನೂ "ಹೌದೋ ಪುಟ್ಟೂ. ಇನ್ನೂ ಕೆಲವು ವರ್ಷ ನೀನು ಉತ್ತುತ್ತೆ, ದ್ರಾಕ್ಷಿ ತಿನ್ತಿರ್ಬೋದು!" ಎಂದು ನಕ್ಕಳು. ಗೋಪಿಯೂ ನಕ್ಕ: "ಅಂದರೆ... ಅಜ್ಜಿ ಸಾಯಲ್ಲ!"
****************
ಎಂಟನೇ ತರಗತಿ ಪಾಸಾದ ಗೋಪಿಯನ್ನು ಮುಂದೆ ಉಡುಪಿಯಲ್ಲಿ ಬಿಟ್ಟು ಓದಿಸಬೇಕೆಂದು ತೀರ್ಮಾನಿಸಲಾಯಿತು. ಅಲ್ಲಿ ಗೌರಿಶಂಕರ್ ಎನ್ನುವವರೊಬ್ಬರು ತಮ್ಮ ತಂದೆಯ ಸ್ಮರಣಾರ್ಥ ಹಾಸ್ಟೆಲ್ ಒಂದನ್ನು ನಡೆಸುತ್ತಿದ್ದಾರಂತೆ. ವಿದ್ಯಾರ್ಥಿಗಳಿಗಾಗೇ ಇರುವ ಆ ಹಾಸ್ಟೆಲ್ ಗೆ ತಿಂಗಳಿಗೆ ಐವತ್ತೇ ರೂಪಾಯಿ ಬಾಡಿಗೆ! ಆದರೆ ಕೆಲವೊಂದು ಶರತ್ತುಗಳಿವೆ; ವಿದ್ಯಾರ್ಥಿಗಳು ವರುಷಕ್ಕೆ ಎರೆಡು ಬಾರಿ ಮಾತ್ರ ಊರಿಗೆ ಹೋಗಿ ಬರಬಹುದು. ಒಂದು ಅಕ್ಟೋಬರ್ ರಜೆಗೆ, ಇನ್ನೊಂದು ಬೇಸಿಗೆ ರಜೆಗೆ! ಉಳಿದಂತೆ ವಿದ್ಯಾರ್ಥಿಗಳ ರಿಪೋರ್ಟ್ ಕಾರ್ಡಿನಿಂದ ಹಿಡಿದು ಎಲ್ಲಾ ಶೈಕ್ಷಣಿಕ ಜವಾಬ್ದಾರಿ, ಮೇಲ್ವಿಚಾರಣೆಗಳೂ ಗೌರಿಶಂಕರ್ ಅವರದೇ ಆಗಿರುತ್ತದೆ.
ಗೋಪಿಯ ಮಾವ ಅಲ್ಲೇ ಇದ್ದು ಓದಿದ್ದರಿಂದ ಗೋಪಿಗೆ ಅಲ್ಲಿಯ 'ಸೀಟ್' ಸುಲಭವಾಗಿ ಸಿಕ್ಕಿತ್ತು. ಉಡುಪಿಗೆ ಹೋಗುತ್ತಿರುವ ವಿಷಯವನ್ನು ಅಜ್ಜಿಗೆ ಹೇಳಬಾರದೆಂದು ಅಮ್ಮ ತಾಕೀತು ಮಾಡಿದ್ದಳು. ಅಂತೂ, ಇಂತೂ ಗೋಪಿ ಮನೆಬಿಡುವ ದಿನ ಬಂದೇ ಬಿಟ್ಟಿತು. ಹೊರಡಲು ಇನ್ನೇನು ಸ್ವಲ್ಪ ಸಮಯವಿದ್ದಾಗ ಗೋಪಿ ಅಜ್ಜಿಯ ಕೋಣೆ ಹೊಕ್ಕ. ಮೊದಲಿನಂತೆ ನಡೆದಾಡಲಾಗದ ಅಜ್ಜಿ ಹೆಚ್ಚಾಗಿ ಮಲಗಿಯೇ ಇರುತ್ತಿದ್ದಳು. ಗೋಪಿಯನ್ನು ಕಂಡವಳೇ ಕಾರ್ಸೇವಿಗೆಂದು ಬೆಳಗ್ಗೆಯೇ ತೆಗೆದಿಟ್ಟುಕೊಂಡಿದ್ದ ಚಿಲ್ಲರೆಯನ್ನು ಕೊಡಲೆಂದು ಕೈ ಮುಂದೆ ಚಾಚಿದಳು....
"ಅಜ್ಜೀ... ನಾನು ಉಡುಪಿಗೆ ಹೋಗ್ತಿದೀನಿ"
"ಆಂ... ಉಡುಪಿಗಾ? ಯಾಕೆ ಮಾಣೀ? ಯಾವತ್ತು ವಾಪಾಸ್ ಬರ್ತೀಯ?"
"ಇನ್ಮುಂದೆ ಅಲ್ಲೇ ಇದ್ಕೊಂಡು ಓದ್ತೀನಿ ಅಜ್ಜಿ...."
ಚಿಲ್ಲರೆ ಹಿಡಿದು ಮುಂಚಾಚಿದ್ದ ಕೈ ಅಲ್ಲೇ ಸ್ತಬ್ಧವಾಯಿತು.
ಬಳಲಿ ಮುದುರಿದ್ದ ಕಣ್ಣು ತುಂಬಿ ಬಂತು.
"ನಂಗೆ ಹೇಳ್ಲೇ ಇಲ್ವಲ್ಲಾ ಮಾಣೀ...." ಎಂದು ಗದ್ಗದವಾಗಿ ಕೇಳಿದ ಸ್ವರದಲ್ಲಿ ನೋವು ಮಡುಗಟ್ಟಿ ನಿಂತಿತ್ತು.
ಸೋತ ದೃಷ್ಟಿಯಲ್ಲಿ ಅಜ್ಜಿಯನ್ನೇ ನೋಡುತ್ತ ನಿಂತಿದ್ದ ಗೋಪಿ ಏನೋ ಹೊಳೆದಂತೆ ಥಟ್ಟನೆ ಅಜ್ಜಿಯ ಕೈಲಿದ್ದ ಚಿಲ್ಲರೆಯನ್ನ ತೆಗೆದುಕೊಂಡ.
"ಇರು ಅಜ್ಜೀ. ಈಗ್ಲೇ ಹೋಗಿ ನಿಂಗೆ ಕಾರ್ಸೇವು ತಂದ್ಕೊಡ್ತೀನಿ" ಅಂತ ಒಂದೇ ಉಸಿರಿಗೆ ಹೊರಗೋಡಿದವನು ಬಂದು ನಿಂತದ್ದು ಹೋಟೆಲ್ ಎದುರಿನ ಅಂಗಳದಲ್ಲೇ. ಏದುಸಿರು ಬಿಡುತ್ತಾ ತಲೆಯೆತ್ತಿ ನೋಡಿದ-
'ಕಾವೇರಿ ಹೋಟೆಲ್' ಬಾಗಿಲು ಮುಚ್ಚಿತ್ತು!
ಹೊರಟುನಿಂತ ಗೋಪಿಯನ್ನು " ಚೆನ್ನಾಗಿ ಓದು ಮಾಣೀ... ಒಳ್ಳೇದಾಗ್ಲಿ...ಹೋಗಿ ಬಾ... ಈ ಅಜ್ಜೀನ ಮರ್ತ್ ಬಿಡ್ಬೇಡ. ಆಗಾಗ ಬಂದು ಹೋಗ್ತಿರು ಆಯ್ತಾ...." ಎಂದು ಮನಸಾರೆ ಹರಸಿ ಕಳಿಸಿದಳು ಕಾವೇರಜ್ಜಿ.
****************
ಗೋಪಿ ಉಡುಪಿಗೆ ಹೋದ ಎರೆಡು ತಿಂಗಳಿಗೆಲ್ಲಾ ಅಜ್ಜಿಯ ಆರೊಗ್ಯ ಬಿಗಡಾಯಿಸಿತು. ಶಿವಮೊಗ್ಗದ ಆಸ್ಪತ್ರೆಯ ಸ್ಪೆಶಲ್ ವಾರ್ಡಿನಲ್ಲಿ ಬಳಲಿ, ಬೆಂಡಾಗಿ, ಜೀವಚ್ಛವದಂತೆ ಮಲಗಿದ್ದ ಎಂಬತ್ತರ ಮುದುಕಿಯನ್ನು ಪರೀಕ್ಷಿಸಿದ್ದ ಡಾಕ್ಟರ್ ಘೋಷಿಸಿಬಿಟ್ಟರು:
"ಇದು ಲಿವರ್ ಜಾಂಡೀಸ್!"
"ಹೆಚ್ಚೆಂದರೆ ಇನ್ನೊಂದು ತಿಂಗಳು ಬದುಕಬಹುದು. ಕರ್ಕೊಂಡು ಹೋಗಿ, ಇದ್ದಷ್ಟು ದಿನ ಚೆನ್ನಾಗಿ ನೋಡ್ಕೊಳ್ಳಿ"
ನಡೆದುದೆಲ್ಲವನ್ನೂ ಗೋಪಿಗೆ ಫೋನಿನಲ್ಲಿ ಹೇಳಿದ ಅಮ್ಮ ಒಮ್ಮೆ ಬಂದು ನೋಡಿಕೊಂಡು ಹೋಗೆಂದಿದ್ದಳು. ಅಂತೆಯೇ ಗೋಪಿ ಊರಿಗೆ ಹೋಗಲು ತನ್ನ ವಾರ್ಡನ್ ಗೌರಿ ಶಂಕರರ ಅನುಮತಿ ಕೇಳಲು ಬಂದ.
"ನಿನ್ನಂಥವರು ತುಂಬಾ ಜನರನ್ನು ನೋಡಿದೀನಿ ಹುಡುಗಾ!"
ಹುಚ್ಚು ಕೆದರಿದ ಕರಡಿ ಅರಚಿದಂತಿತ್ತು ಅವನ ಧ್ವನಿ.
"ಬಂದು ಇನ್ನೂ ಎರೆಡು ತಿಂಗಳಾಗಿಲ್ಲ, ಆಗ್ಲೇ ಕಥೆ ಹೇಳ್ತೊಂಡು ಬಂದ್ಬಿಟ್ಟ. ನಿಂಗೆ ಮೊದಲೇ ಹೇಳಿಲ್ವಾ ವರ್ಷಕ್ಕೆ ಎರೆಡು ಸಲ ಮಾತ್ರ ಊರಿಗೆ ಬಿಡೋದೂಂತ? ಅಕ್ಟೋಬರ್ ತನಕ ಬಾಯ್ಮುಚ್ಚಿಕೊಂಡು ಇರ್ಬೇಕು ಗೊತ್ತಾಯ್ತಾ?"
ಅಲ್ಲಿಗೆ ಅಜ್ಜಿಯನ್ನು ಜೀವಂತ ನೋಡುವ ಅಂತಿಮ ಅವಕಾಶ ಮುಗಿದುಹೋಗಿತ್ತು.
ಇದಾಗಿ ಎರೆಡು ವಾರವಾಗಿತ್ತಷ್ಟೇ. ಅದೊಂದು ಶನಿವಾರ ಗೋಪಿ ಶಾಲೆ ಮುಗಿಸಿ ಬರುವ ಹೊತ್ತಿಗೆ ಆ ಕಹಿ ಸುದ್ದಿ ಅವನಿಗಾಗಿ ಕಾದುಕೂತಿತ್ತು. ಅಜ್ಜಿ ತನ್ನ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಳು. ಉಟ್ಟ ಬಟ್ಟೆಯಲ್ಲೇ ಗೋಪಿ ಬಸ್ಸು ಹತ್ತಿದ. ಮನೆ ತಲುಪುವ ಹೊತ್ತಿಗೆ ಸಂಜೆಯಾಗಿತ್ತು...
ಅಲ್ಲಿ... ಅಂಗಳದ ನಟ್ಟ ನಡುವೆ ಮಲಗಿತ್ತು ಅಜ್ಜಿಯ ಶವ...
ಅಜ್ಜಿ.. ತನ್ನ ಪ್ರೀತಿಯ ಅಜ್ಜಿ... ಮಾಣೀ ಎಂದು ತಲೆ ನೇವರಿಸುತ್ತಿದ್ದ ಅಜ್ಜಿ... ಹಿಡಿ ಕಾರ್ಸೇವಿಗಾಗಿ ಹಾತೊರೆಯುತ್ತಿದ್ದ ಅಜ್ಜಿ.. ಮಕ್ಕಳು-ಮರಿ, ನೆಂಟರಿಷ್ಠರಿಗೆಲ್ಲಾ ಬೇಡಾಗಿ ಕಣ್ಣೀರಿಡುತ್ತಿದ್ದ ಅಜ್ಜಿ....
ಗೋಪಿ ನೋಡಿದ.. ನೋಡಿಯೇ ನೋಡಿದ... ಜೀವಮಾನದಲ್ಲಿ ಇನ್ನೆಂದೂ ನೋಡಲಾಗದ ಈ ಮುಖ ತನ್ನ ಕೊನೆಯ ಕ್ಷಣದ ತನಕವೂ ಹಾಗೇ ಕಣ್ಣಲ್ಲಿ ಉಳಿದು ಹೋಗಲೆಂಬಂತೆ ಮೈಯೆಲ್ಲಾ ಕಣ್ಣಾಗಿ ನಿಂತು ನೋಡಿದ...
ಅಂತಿಮ ಸಂಸ್ಕಾರಕ್ಕೆಂದು ಶವವನ್ನ ಒಯ್ಯತೊಡಗಿದರು. ಗೋಪಿ ನಿಂತಲ್ಲೇ ಕಲ್ಲಾಗಿ ನೋಡುತ್ತಿದ್ದ. ಕೆಲವೇ ಕ್ಷಣಗಳ ಹಿಂದೆ ಜೀವಂತವಾಗಿದ್ದ, ಯಾರದೋ ಅಮ್ಮನಾಗಿ, ಯಾರದೋ ಅಜ್ಜಿಯಾಗಿ, ಇನ್ಯಾರದೋ ಪ್ರೀತಿಯಾಗಿ ಉಸಿರಾಡಿಕೊಂಡಿದ್ದ ದೇಹವನ್ನ ಅಗ್ನಿ ಇಂಚಿಂಚಾಗಿ ಆಹುತಿ ತೆಗೆದುಕೊಂಡಿತು. ಎಲ್ಲವೂ ಮುಗಿದು, ಎಲ್ಲರೂ ಮನೆಗೆ ಬಂದರು. ಸ್ನಾನ ಮಾಡಿಕೊಂಡು ಒಳಗೆ ಬಂದ ಗೋಪಿ ಥಟ್ಟನೆ ಏನೋ ಹೊಳೆದಂತಾಗಿ ಬ್ಯಾಗಿನಲ್ಲಿದ್ದ ಪರ್ಸ್ ತೆರೆದ. ಅಲ್ಲಿ ಬೆಚ್ಚಗೆ ಕೂತಿತ್ತು ಅವನು ಜೋಪಾನವಾಗಿಟ್ಟುಕೊಂಡಿದ್ದ ಐದು ರೂಪಾಯಿಯ ನಾಣ್ಯ.....ಅಜ್ಜಿ ಕಟ್ಟಕಡೆಯ ಬಾರಿಗೆ ಕಾರ್ಸೇವು ತಾ ಎಂದು ಕೊಟ್ಟಿದ್ದ ನಾಣ್ಯ...
ಅದನ್ನೊಮ್ಮೆ ಆಸ್ಥೆಯಿಂದ ಸವರಿದ.
ಪಕ್ಕದಿಂದಲೇ ಅಜ್ಜಿಯ ದನಿ ಕೇಳಿದಂತಾಯ್ತು:
"ಬರ್ಬೇಕಾದ್ರೆ ನಂಗೆ ಕಾವೇರಿ ಹೋಟ್ಲಿಂದ ಕಾರ್ಸೇವು ತಗೊಂಡು ಬಾ ಮಾಣೀ... ಅಮ್ಮಂಗೆ ಹೇಳ್ಬೇಡ!"

('ಮೈಸೂರು ಅಸೋಸಿಯೇಷನ್-ಮುಂಬೈ' ಸಂಸ್ಥೆಯ 'ಮಾಸ್ತಿ ಜಾಗತಿಕ ಕನ್ನಡ ಕಥಾ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನ ಗಳಿಸಿದ ಕಥೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ