ಶುಕ್ರವಾರ, ಜುಲೈ 19, 2019

ಶ್ವಾನಗಳೆಲ್ಲ ಸಭೆಸೇರಿದವು!ಎಳೆ ಬಿಸಿಲಲ್ಲಿ ಛಳಿ ಕಾಸುತ್ತ ಕಾರ್ಪೋರೇಷನ್ ಶಾಲೆಯ ಬಯಲಿನಲ್ಲಿ ಮಲಗಿ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿರುವ ಪೊಮೇರಿಯನ್ ಜೂಲ್ನಾಯಿಯನ್ನೇ ನೋಡುತ್ತ ಪರಪರನೆ ಮೈ ಕೆರೆದುಕೊಳ್ಳುತ್ತ ತೂಕಡಿಸಿಕೊಂಡಿದ್ದರು ಕೆಂಚಣ್ಣ ಹಾಗೂ ಕರಿಯಣ್ಣ ಶ್ವಾನಗಳು. ಪಕ್ಕದಲ್ಲೇ ಹಲವಾರು ಮಕ್ಕಳು ಕ್ರಿಕೆಟ್ ಆಡುತ್ತ ಭಾನುವಾರದ ಮಜವನ್ನು ಸವಿಯುತ್ತಿದ್ದರು. ಇದ್ದಕ್ಕಿದ್ದಂತೆ ಹಾರೆ, ಪಿಕಾಸಿ, ಕಂಬ, ಶಾಮಿಯಾನಗಳ ಜೊತೆ ನುಗ್ಗಿದ ಕೆಲ ಕೂಲಿಕಾರರು ಮಕ್ಕಳನ್ನೆಲ್ಲ ಓಡಿಸಿ, ಬಯಲಿನ ಮಧ್ಯ ಬಿದ್ದಿರುವ ಕಲ್ಲು, ಕಸಗಳನ್ನೆಲ್ಲ ಎತ್ತಿ ಸ್ವಚ್ಛಗೊಳಿಸತೊಡಗಿದಾಗ ಕೆಂಚ, ಕರಿಯರಿಬ್ಬಗೂ ಮಹದಾಶ್ಚರ್ಯ. ಮುಂಗಾಲುಗಳೆರೆಡನ್ನೂ ಮುಂದೆ ಚಾಚಿ ಮೈ ಮುರಿಯುತ್ತ ಕೆಂಚಣ್ಣ ಬಾಯಿ ತೆರೆದ:
"ಗಣೇಶನ ಹಬ್ಬ ಮುಗೀತು. ರಾಜ್ಯೋತ್ಸವ ಮುಗೀತು. ಎಲೆಕ್ಷನ್ನೂ ಆಯ್ತು. ಈಗ ಇದ್ಯಾವ ಹೊಸ ಕಾರ್ಯಕ್ರಮ ಕರಿಯಣ್ಣ?"
ಬಾಯೊಳಗಿನ ಚೂಪು ಹಲ್ಲೆಲ್ಲವೂ ಹೊರಗೆ ತೋರುವಂತೆ ಆಕಳಿಸುತ್ತಿದ್ದ ಕರಿಯಣ್ಣನಿಗೂ ಅದೇ ಪ್ರೆಶ್ನೆ ಕಾಡತೊಡಗಿತ್ತು.
"ಬಹುಷಃ ಶಾಲೆಯ ಯೂನಿಯನ್ ಡೇ ಇರ್ಬೇಕು. ಅಲ್ಲಿಗೆ ಈ ವಾರದಲ್ಲೇ ಇನ್ನೊಂದೊಳ್ಳೇ ಊಟ ಕಾದಿದೆ ಅಂತಾಯ್ತು! ಇರು ಕೇಳ್ಕಂಡು ಬರ್ತೀನಿ."
ಡೊಂಕು ಬಾಲ ಬೀಸುತ್ತ ಕೆಲಸಗಾರರತ್ತ ನಡೆದುಹೋದ ಕರಿಯಣ್ಣನನ್ನೇ ನೋಡುತ್ತ "ಹಂಗೇ ಅಡಿಗೆ ವೆಜ್ಜೋ, ನಾನ್ವೆಜ್ಜೋ ಅಂತಾನೂ ಕೇಳು ಮಚ್ಚಾ" ಎಂದು ಕೂಗಿದ ಕೆಂಚಣ್ಣ. ಸಿಗಲಿರುವ ಮೂಳೇ ಪೀಸಿನ ಕನಸು ಅವನ ಬಾಯ್ತುಂಬಾ ನೀರಾಗಿ ಸುರಿಯತೊಡಗಿತ್ತು.
"ಕಂಯ್ಯಯ್ಯೋ, ಕಂಯ್ಯಯ್ಯೋ...."
ಕೆಲಸದವನು ಬೀಸಿದ ದೊಣ್ಣೆಯೇಟು ಸರಿಯಾಗಿಯೇ ಬಿದ್ದಿತ್ತು. ಪಕ್ಕದಲ್ಲಿರುವ ಮರಗಳೆಲ್ಲ ಅಲ್ಲಾಡಿಹೋಗುವಂತೆ ಕೂಗಿಕೊಂಡ ಕರಿಯಣ್ಣ ಬಾಲವನ್ನು ಕಾಲುಗಳ ಮಧ್ಯೆ ತೂರಿಸಿಕೊಂಡು ಕೆಂಚಣ್ಣನಿದ್ದಲ್ಲಿಗೆ ಓಡತೊಡಗಿದ. ಆದರೆ ವದೆ ತಿಂದ ಅವನ ಮೊದಲ ಆರ್ತನಾದ ಮುಗಿಯುವ ಮೊದಲೇ ಕೆಂಚಣ್ಣ ಓಡಿ ಶಾಲೆಯ ಗೇಟು ತಲುಪಿಯಾಗಿತ್ತು. ಇದನ್ನು ಕಂಡು ಮತ್ತಷ್ಟು ಭೀತನಾದ ಕರಿಯ ತನ್ನ ಸಕಲ ಸಾಮರ್ಥ್ಯವನ್ನೂ ಕಾಲುಗಳಿಗೆ ಹರಿಯಬಿಟ್ಟು ಓಡುತ್ತಾ ಹೋಗಿ ಕೆಂಚನನ್ನು ಹಿಂದಿಕ್ಕಿದ. ಹೀಗೆ ಒಬ್ಬರ ಓಟದಿಂದ ಇನ್ನೊಬ್ಬರು ಭಯ ಹೆಚ್ಚಸಿಕೊಳ್ಳುತ್ತ ಓಡಿ ಕೊನೆಗೆ ಮುಖ್ಯರಸ್ತೆಗೆ ಬಂದು ನಿಂತರು.
"ಮಾಹಿತಿ ಕೇಳಲಿಕ್ಕೆ ಹೋದ್ರೆ ದೊಣ್ಣೇಲಿ ಬಡೀತಾರೆ. ರೇಬೀಸ್ ಪೀಡಿತರು!"
ವದೆ ಬಿದ್ದ ಬೆನ್ನನ್ನು ನೆಕ್ಕಿಕೊಳ್ಳುತ್ತಲೇ ಕರಿಯಣ್ಣ ಬೈದುಕೊಂಡ.
"ಯಾವುದೋ ಮಹಾಸಭೆಯಂತೆ ಮಚ್ಚೀ. ತುಂಬಾ ಜನ ಸೇರ್ತಾರಂತೆ!"
"ಅಯ್ಯೋ ನಿನ್ನ ಬಾಲ ತುಂಡಾಗ! ವಿಷಯ ಗೊತ್ತಿದ್ರೂ ನನ್ನ ಕೇಳ್ಕೊಂಡ್ಬಾ ಅಂತ ಕಳಿಸಿ ಬೆಳ್ ಬೆಳ್ಗೆನೇ ವದೆ ತಿನ್ಸಿದ್ಯಲ್ಲೋ ಕಾಟನ್ ಪೇಟೆ ಕೆಂಚಾ!"
ಕರಿಯಣ್ಣ ಅಬ್ಬರಿಸಿದ.
"ಕೂಲ್ ಮಚ್ಚೀ, ಕೂಲ್. ನಂಗೂ ಗೊತ್ತಿರ್ಲೀಲ. ನಿಂಗೆ ಅವನು ದೊಣ್ಣೇಲಿ ಬಡಿದಿದ್ದು ನೋಡಿ ನಾನು ಗೇಟಾಚೆಗೆ ಓಡಿ ಹೋಗ್ತಿದ್ನಲ್ಲ? ಆಗ ಅಲ್ಲಿಬ್ಬರು ಮಾತಾಡಿಕೊಳ್ತಿದ್ರು"
ಹಲ್ಕಿರಿಯುತ್ತ ಹೇಳಿದ ಕೆಂಚಣ್ಣ.
"ಮಹಾಸಭೆನಾ? ಹಾಗೆಂದರೇನು? ಅದರಲ್ಲೂ ಊಟ ಇರತ್ತಾ?"
ಹಿಂಗಾಲಿನಿಂದ ಕಿವಿ ಕೆರೆದುಕೊಳ್ಳುತ್ತಾ ಕೇಳಿದ ಕರಿಯನಿಗೆ ಗೊತ್ತಿಲ್ಲ ಎಂಬಂತೆ ತಾರಮ್ಮಯ್ಯ ತೋರಿದ ಕೆಂಚಣ್ಣ. ಆಗಲೇ ದೂರದಲ್ಲಿ ಬರುತ್ತಿದ್ದ ಎತ್ತರ ನಿಲುವಿನ, ಕಾಬೆ ಕೋಲಿನಂತಹಾ ಕಾಲಿನ, ಕಡುಗಪ್ಪು ಮೈಯ ಡಾಬರ್ ತಾತ ಅವರ ಕಣ್ಣಿಗೆ ಬಿದ್ದದ್ದು. ಡಾಬರ್ ತಾತ ಹಲವಾರು ವರ್ಷ ಶ್ರೀಮಂತರ ಮನೆಯೊಂದರಲ್ಲಿ ಸಾಕಲ್ಪಟ್ಟಿದ್ದ ಅನುಭವಿ. ಒಡೆಯನ ಮನೆಯವರ ಜೊತೆಯೇ ನಾಲ್ಕಾರು ಊರು ಸುತ್ತಿದವರು. ಹೊಸ ಹುಳ ತಲೆಗೆ ಹೊಕ್ಕಿದ್ದ ನಾಯಿಗಳಿಬ್ಬರೂ ಅವರ ಬಳಿ ಹೋಗಿ ತಮ್ಮ ಅನುಮಾನವನ್ನು ಕೇಳಿಕೊಂಡರು.
"ಮಹಾಸಭೆ ಎಂದರೆ ನಾಡಿನಾದ್ಯಂತ ಇರುವ ಒಂದೇ ಗುಂಪು ಅಥವಾ ವರ್ಗಕ್ಕೆ ಸೇರಿದವರೆಲ್ಲ ಒಂದೆಡೆ ಸೇರಿ ತಮ್ಮ ಬದುಕು, ಭವಿಷ್ಯ, ಸಮಸ್ಯೆಗಳ ಬಗ್ಗೆ ಚರ್ಚಿಸುವುದು. ಅದಕ್ಕೆ ಬೇಕಾದ ಪರಿಹಾರ ಹಾಗೂ ಹೋರಾಟಗಳ ಬಗ್ಗೆ ನಿರ್ಣಯ ಕೈಗೊಳ್ಳುವುದು."
ಅಷ್ಟಂದ ಡಾಬರ್ ತಾತ ಕನ್ನಡಕ ಸರಿಪಡಿಸಿಕೊಳ್ಳುತ್ತಾ ನಡೆದುಹೋದರು.
                     ************
ಕೆಲಸದವನು ಏಟು ಕೊಟ್ಟ ಜಾಗ ಅವತ್ತಿಡೀ ಕರಿಯಣ್ಣನಿಗೆ ಚುಳುಕ್ ಎನ್ನುತ್ತಲೇ ಇತ್ತು. ಕೊನೆಗೂ ತಾಳಲಾಗದೆ ಅವನು ಹೇಳಿಯೇಬಿಟ್ಟ.
"ನಾವೂ ಹೀಗೊಂದು ಮಹಾಸಭೆ ಮಾಡಬೇಕು! ನಗರದ ನೂರಾರು ಏರಿಯಾಗಳಲ್ಲಿ ಹಂಚಿಹೋಗಿರುವ ನಮ್ಮವರನ್ನೆಲ್ಲ ಒಟ್ಟಿಗೆ ಸೇರಿಸಿ ಸುಖಾಸುಮ್ಮನೆ ನಮ್ಮನ್ನು ಶಿಕ್ಷಿಸುವ ಮನುಷ್ಯನ ವಿರುದ್ದ ಜೊತೆಯಾಗಿ ಹೋರಾಡಬೇಕು!"
ಕೆಂಚಣ್ಣನಿಗೂ ಆ ನಿರ್ಧಾರ ಸರಿ ಎನ್ನಿಸಿತು. ವಾರದ ಕೆಳಗಷ್ಟೇ ವ್ಯಕ್ತಿಯೊಬ್ಬ ಅವನ ಬಾಲದ ತುದಿಯ ಮೇಲೆ ಬೈಕು ಹತ್ತಿಸಿದ್ದ ನೋವು ಇನ್ನೂ ಚುಳುಕ್ಕೆನ್ನುತ್ತಿತ್ತು. ಇಬ್ಬರೂ ಸೇರಿ ಬೆಂಗಳೂರಿನ ಬೇರೆ ಬೇರೆ ಏರಿಯಾಗಳಲ್ಲಿ ತಿಂದುಂಡು ತಿರುಗಾಡುತ್ತಾ ಕಚ್ಚಾಡಿಕೊಂಡಿರುವ ಹಿರಿ, ಕಿರಿ, ಮರಿ, ಪುರುಷ, ಮಹಿಳಾ ಶ್ವಾನಗಳನ್ನೆಲ್ಲ ಭೇಟಿಯಾಗಿ ಈ ಬಗ್ಗೆ ಚರ್ಚಿಸುವುದೆಂದು ನಿರ್ಧರಿಸಿದರು.
ಆದರೆ ಹೀಗೆ ವಿವಿಧ ಬೀದಿಗಳ ಶ್ವಾನ ಬಾಂಧವರನ್ನೆಲ್ಲ ಭೇಟಿಯಾಗ ಹೊರಟ ಕೆಂಚ, ಕರಿಯರಿಬ್ಬರಿಗೂ ಭಯಾನಕ ಅನುಭವ ಕಾದಿತ್ತು. ತಮ್ಮ ಏರಿಯಾಗೆ ಬಂದ ಈ ಇಬ್ಬರು ಆಗುಂತಕರ ಮೇಲೆ ಆ ಆ ಏರಿಯಾದ ಡಾನ್ ಶ್ವಾನಗಳು ಭೀಕರವಾಗಿ ಬೊಗಳುತ್ತಾ ಮುಗಿಬಿದ್ದರು. ಇವರು ತಮ್ಮ ಮಹಾಸಭೆಯ ಬಗ್ಗೆ ಬಾಯಿಬಿಡುವ ಮೊದಲೇ ಇವರ ಮೈಮೇಲೆ ಮಹಾಮಹಾ ಗಾಯಗಳಾಗಿದ್ದವು. ಬಿಟಿಎಂನಲ್ಲಂತೂ ಕೆಂಚಣ್ಣ 'ಕಬಾಬ್ ನಾಗ'ನಿಂದ ತಪ್ಪಿಸಿಕೊಳ್ಳಲು ಹೋಗಿ ಬಿಬಿಎಂಪಿಯವರು ತೋಡಿಟ್ಟುಹೋಗಿದ್ದ ಆಳದ ಹೊಂಡದೊಳಗೆ ಕಾಲುಮೇಲಾಗಿ ಬಿದ್ದುಬಿಟ್ಟ.
"ಅಯ್ಯೋ ಮುಟ್ಠಾಳರಾ, ಮೊದಲೇ ಹೇಳೋದಲ್ವ? ಮನುಷ್ಯರ ನಡುವೆ ಇದ್ದೂ ಇದ್ದೂ ನಮ್ಮವರಿಗೂ ಅವರ ಗುಣವೇ ಬಂದುಬಿಟ್ಟಿದೆ. ಗಂಡಸೊಬ್ಬ 'ತಪ್ಪು ಮಾಡಿದ್ದು ನಾನಲ್ಲ' ಅಂತ ಬಾಯ್ಬಿಡುವ ಮೊದಲೇ ಅವನನ್ನು ಹಿಡಿದು ಚಚ್ಚಿಹಾಕುತ್ತಾರೆ. ಪ್ರಚಾರ, ಅಡ್ವರ್ಟೈಸ್ ಗಳಿಗೆಲ್ಲ ಲೇಡೀಸನ್ನೇ ಕಳಿಸಬೇಕು!"
ಮೋರಿ ಬದಿಯಲ್ಲಿ ಗಾಯವೇ ಮೈಯ್ಯಾಗಿ ಮಲಗಿದ್ದ ಕೆಂಚ, ಕರಿಯರನ್ನು ಮರುಕದಿಂದ ನೋಡುತ್ತ ಡಾಬರ್ ತಾತ ಹೇಳಿದರು. ನಂತರ ಮೂವರೂ ಕೂತು ಮಾತಾಡಿ ನುಣುಪುಗೂದಲಿನ ಸುಂದರ ಜ್ಯೂಲ್ನಾಯಿ ಡಾಲಿಯನ್ನು ಈ ಕೆಲಸಕ್ಕಾಗಿ ನೇಮಿಸಿದರು. ವೈಯ್ಯಾರದಿಂದ ಬೀದಿಬೀದಿಗೂ ನಡೆದುಹೋದ ಡಾಲಿ ತನ್ನ ಮೃದುಮಧುರ ಬೊಗಳುಗಳ ಮೂಲಕ ಮಹಾಸಭೆಗೆ ಬರುವಂತೆ ಎಲ್ಲರ ಮನವೊಲಿಸುವಲ್ಲಿ ಯಶಸ್ವಿಯಾದಳು. ಜೊತೆಗೆ ಮಹಾಸಭೆಯ ದಿನ ಮೂರೂಹೊತ್ತೂ ಮಹಾನಗರದ ನಾನಾ ಹೋಟೆಲುಗಳಿಂದ ಎಸೆಯಲ್ಪಟ್ಟ  ಮೂಳೆ ಪೀಸುಗಳೇ ಮುಂತಾದ ಐಟಮ್ಗಳ ಭರ್ಜರಿ ಭೋಜನವಿರುತ್ತದೆಂದು ಹೇಳುವುದನ್ನೂ ಅವಳು ಮರೆಯಲಿಲ್ಲ.
                 ******************
ಅಂದುಕೊಂಡಂತೆಯೇ ಮಹಾಸಭೆಯ ದಿನ ಬಂದೇ ಬಿಟ್ಟಿತು. ಜಗತ್ತಿನ ವಿವಿಧ ಭಾಗಗಳ ಶ್ವಾನಗಳ ಬಗ್ಗೆ ಟೀವಿ ಯಲ್ಲಿ ನೋಡಿ ತಿಳಿದುಕೊಂಡಿರುವ ಅನುಭವಿ ಡಾಬರ್ ತಾತನನ್ನು ಮಹಾಸಭೆಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಊರ ಹೊರಗೆ ಕಸ ಎಸೆಯಲೆಂದೇ ಮೀಸಲಿಟ್ಟಿರುವ, ಮನುಷ್ಯರು ಅಷ್ಟಾಗಿ ಬಾರದ ಮೋರಿ ಪಾಳ್ಯದ ಎತ್ತರದ ದಿಬ್ಬವೊಂದರ ಮೇಲೆ ವೇದಿಕೆ ನಿರ್ಮಿಸಲಾಗಿತ್ತು. ಸಮಯವಾಗುತ್ತಿದ್ದಂತೆಯೇ ಬೇರೆಬೇರೆ ಏರಿಯಾದ ಶ್ವಾನಗಳು ಗುಂಪಾಗಿ ಬರತೊಡಗಿದರು. ಎಲ್ಲರೂ ಮಸ್ತಾನಿ ಹೋಟೆಲ್ ನ ಕಬಾಬ್ ಪೀಸಿನ 'ವೆಲ್ಕಮ್ ಡಿಶ್' ತಿಂದು ವೇದಿಕೆಯತ್ತ ನಡೆಯತೊಡಗಿದರು‌.
ಹೀಗೆ ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆಯೇ ವೇದಿಕೆಯ ಮುಂದೆ ಕೋಲಾಹಲ ಶುರುವಾಯಿತು. ಸ್ವಾಗತ ಗೀತೆಯನ್ನು ಹಾಡಲಿರುವ ಪಿಂಕಿ ಪೊಮೇರಿಯನ್ ಳ ಪಕ್ಕ ಖಾಲಿ ಇದ್ದ ಒಂದೇ ಒಂದು ಸೀಟಿನಲ್ಲಿ ತಾನೇ ಕೂರಬೇಕೆಂದು ಬೂದಿಗುಡ್ಡೆ ಬಸಿಯ ಹಾಗೂ ಕುಂಟುಕಾಲು ಡ್ಯಾನಿ ಪೈಪೋಟಿಗೆ ಬಿದ್ದರು. ಗುರ್ ಗುರ್ ಎನ್ನುವ ಸಣ್ಣ ವಾದದೊಂದಿಗೆ ಶುರುವಾದ ಅವರ ಜಗಳ ತಾರಕಕ್ಕೆ ಹೋಗಿ, ಡ್ಯಾನಿಯ ಮೂರನೇ ಕಾಲನ್ನು ಬಸಿಯ ಇನ್ನೇನು ಕಚ್ಚಬೇಕು, ಅಷ್ಟರಲ್ಲಿ ಕೆಂಚ-ಕರಿಯರು ಮೊದಲೇ ತಯಾರಿಸಿದ್ದ 'ಆ್ಯಂಟಿ ಬಡಿದಾಟ ಸಂಘ'ದ ಕಟ್ಟುಮಸ್ತು ಶ್ವಾನಗಳು ಅಲ್ಲಿಗೆ ಬಂದು ಅವರಿಬ್ಬರನ್ನೂ ಹಿಡಿದುಕೂರಿಸಿ ಸಮಾಧಾನಪಡಿಸಿದರು.
ಅಂತೂ ಇಂತೂ ಮಹಾಸಭೆ ಆರಂಭವಾಯಿತು. ಕುಮಾರಿ ಪಿಂಕಿ ಪೊಮೇರಿಯನ್ ಬಾಲ ಕುಣಿಸುತ್ತಾ ವೇದಿಕೆಗೆ ನಡೆದುಹೋಗಿ, ತಾನೇ ರಚಿಸಿ, ಸಂಗೀತ ಸಂಯೋಜಿಸಿದ "ನಾವೆಲ್ಲರೂ ಶ್ವಾನಗಳು, ಒಂದೇ ಬೀದಿಯ ಬಂಧುಗಳು..." ಹಾಡನ್ನು ಪ್ರಾರ್ಥನಾಗೀತೆಯಾಗಿ ಹಾಡಿದಳು. ಅದಕ್ಕೆ ಕೆಂಚ ಹಾಗೂ ಗೆಳೆಯರ ತಂಡದವರು ಪರಸ್ಪರ ಕೈಕೈ (ಕಾಲುಕಾಲು) ಹಿಡಿದುಕೊಂಡು ನರ್ತಿಸಿದರು. ನಂತರ ಡಾಬರ್ ತಾತನ ಅಧ್ಯಕ್ಷತೆಯಲ್ಲಿ "ಬೀದಿ ಬಾಂಧವರ ಜ್ವಲಂತ ಸಮಸ್ಯೆಗಳು" ವಿಷಯದಡಿ ಚರ್ಚಾಕಾರ್ಯಕ್ರಮ ಆರಂಭವಾಯಿತು. ಕನ್ನಡಕ ಸರಿಪಡಿಸಿಕೊಂಡ ಡಾಬರ್ ತಾತ ತಮ್ಮ ಪ್ರಾಸ್ತವಿಕ ಮಾತುಗಳನ್ನು ಆರಂಭಿಸಿದರು. "ದೂರದ ಏರಿಯಾಗಳಿಂದ ಬಂದಿರುವ ನನ್ನ ಶ್ವಾನ ಮಿತ್ರರೇ, ಇಂದು ಸರಿಯಾದ ಸಮಯದಲ್ಲೇ ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಇಪ್ಪತ್ತೊಂದನೇ ಶತಮಾನದ ಎರೆಡನೇ ದಶಕ ಮುಗಿಯುತ್ತಾ ಬಂದರೂ ಶ್ವಾನಗಳ ಜೀವನ ಕ್ರಮದಲ್ಲಿ ಬದಲಾವಣೆಗಳಾಗಿಲ್ಲ. ಪರಿಹಾರದ ಮಾತನಾಡುವ ಮೊದಲು ಸಮಸ್ಯೆಗಳು ಸ್ಪಷ್ಟವಾಗಬೇಕು. ಈಗ ಒಬ್ಬೊಬ್ಬರಾಗಿ ನಿಮ್ಮ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ" ಎಂದರು.
ಮೊದಲಿಗೆ ಮೈಕು ಪಡೆದು ಮಾತಿಗಾರಂಭಿಸಿದ ಕರಿಯಣ್ಣ ಸಾಕಷ್ಟು ತಯಾರಿಯೊಂದಿಗೇ ಬಂದಿದ್ದ. "ಬಂಧುಗಳೇ, 'ಗ್ರಾಮ ಸಿಂಹ' ಎಂದೇ ಖ್ಯಾತರಾದ ನಮ್ಮನ್ನು, ಇಡೀ ಭೂಮಿಯೇ ತನ್ನದೆಂದು ಭ್ರಮಿಸಿರುವ ಸ್ವಾರ್ಥಿ ಮನುಷ್ಯ ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದಾನೆ. ಎಲ್ಲಿ ಕಂಡರಲ್ಲಿ ನಮ್ಮ ಮೇಲೆ ದೊಣ್ಣೆ ಬೀಸುವುದು, ಕಲ್ಲೆಸೆಯುವುದು ಮಾಡುತ್ತಾನೆ. ಹುಲಿ, ಆನೆ, ಜಿಂಕೆ ಎಲ್ಲದರ ಹಿತಾಸಕ್ತಿಗಳ ರಕ್ಷಣೆಗೂ ಸಂಘಗಳಿವೆ. ಆದರೆ ನಮ್ಮ ಹೆಸರಿನಲ್ಲಿ ಯಾವ ಕಮಿಟಿಯೂ ಇಲ್ಲ. ರಾಜ್ಯದ ಆಯವ್ಯಯದಲ್ಲಾಗಲೀ, ಕೇಂದ್ರ ಬಜೆಟ್ ನಲ್ಲಾಗಲೀ ಶ್ವಾನ ಕಲ್ಯಾಣಕ್ಕೆಂದು ಒಂದು ಪೈಸೆಯನ್ನೂ ಮೀಸಲಿಡುತ್ತಿಲ್ಲ. ಇನ್ನು ದೀಪಾವಳಿಯ ಸಮಯದಲ್ಲಂತೂ ನಮ್ಮ ಗೋಳು ಕೇಳುವಂತೆಯೇ ಇಲ್ಲ. ಬಾಲಗಳಿಗೆ ಪಟಾಕಿ ಸರ ಕಟ್ಟಿ, ಊರೆಲ್ಲ ಅಟ್ಟಾಡಿಸಿ ಗೋಳುಹೊಯ್ದುಕೊಳ್ಳುತ್ತಾರೆ. ನಮ್ಮ ಬಾಲವನ್ನವರು ‘ರಾಕೇಟ್ ಉಡ್ಡಯನ ಕಟ್ಟೆ’ ಎಂದು ಭಾವಿಸಿರುವಂತಿದೆ" ಎಂದನು.
ಮೈಕು ಇಸಿದುಕೊಂಡು ಅವನ ಮಾತನ್ನು ಮುಂದುವರೆಸಿದ ಕೆಂಚಣ್ಣ "ಅಷ್ಟೇ ಅಲ್ಲ ಬಂಧುಗಳೇ, ರಾಕ್ಷಸ ಲಾರಿಗಳಲ್ಲಿ ಬರುವ ಮಹಾನಗರ ಪಾಲಿಕೆಯವರು ಬಲವಂತವಾಗಿ ನಮ್ಮವರನ್ನು ಹೊತ್ತೊಯ್ದು ಸಂತಾನ ಹರಣ ಚಿಕಿತ್ಸೆಗೆ ಒಳಪಡಿಸುತ್ತಿದ್ದಾರೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕಿರುವ ನಮ್ಮ ಭವಿಷ್ಯದ ವಂಶಾವಳಿಯನ್ನೇ ನಿರ್ನಾಮ ಮಾಡುವ ಹುನ್ನಾರ ನಡೆಯುತ್ತಿದೆ" ಎಂದು, ಕೊಂಚ ದನಿ ತಗ್ಗಿಸಿ "ಬಲ್ಲ ಮೂಲಗಳ ಪ್ರಕಾರ ಬೌಬೌ ಬಿರಿಯಾನಿ ಎನ್ನುವ ನಿಷೇಧಿತ ಖಾದ್ಯವೊಂದರ ತಯಾರಿಕೆಗಾಗಿ ನಮ್ಮ ಬೀದಿ ಬಾಂಧವರ ಕಳ್ಳಸಾಗಣಿಕೆ ಅವ್ಯಹತವಾಗಿ ನಡೆಯುತ್ತಿದೆ. ಯಾವುದೇ ದೊಡ್ಡ ಲಾರಿಯನ್ನು ಕಂಡರೂ ನಮ್ಮವರು ಹೆದರಿ ಬಾಲ ಮುದುರಿಕೊಂಡು ಓಡುವಂತಾಗಿದೆ. ಅಲ್ಲದೆ ಬೀದಿಯಲ್ಲಿ ನಮ್ಮ ಪಾಡಿಗೆ ಮಲಗಿರುವಾಗ ಬೈಕು, ಕಾರು ಬಸ್ಸುಗಳನ್ನು ಮೇಲೆ ಹತ್ತಿಸಿ, ಆಸ್ಪತ್ರೆಗೂ ಸೇರಿಸದೇ ಪರಾರಿಯಾಗುತ್ತಾರೆ" ಎನ್ನುತ್ತಾ ತನ್ನ ಬಾಲವನ್ನು ನೆಕ್ಕಿಕೊಂಡನು‌.
ಅಷ್ಟರಲ್ಲಿ ಪಕ್ಕದಲ್ಲೇ ಕುಳಿತಿದ್ದ ಎಚ್ಡೀಕೋಟೆಯಿಂದ ಬಂದವನಾದ ಬೀರ ಮೈಕನ್ನು ಕಸಿದುಕೊಂಡು "ಕೇವಲ ನಗರದಲ್ಲಿ ಮಾತ್ರವಲ್ಲ, ಗ್ರಾಮಾಂತರ ಪ್ರದೇಶದಲ್ಲೂ ಶ್ವಾನಗಳ ಬದುಕು ಅಪಾಯದಲ್ಲಿದೆ ಮಿತ್ರರೇ. ರಾತ್ರೆಯ ಹೊತ್ತಲ್ಲಿ ಊರೊಳಗೆ ನುಗ್ಗಿ ನಮ್ಮನ್ನು ಜೀವಂತ ಹೊತ್ತೊಯ್ಯುವ ಚಿರತೆ, ಕುರ್ಕಗಳ ಕುರಿತಾಗಿಯೂ ನಾವಿಂದು ಚರ್ಚಿಸಬೇಕಿದೆ" ಎಂದು ಬೊಗಳಿದನು. ಅಷ್ಟರಲ್ಲಿ ಮತ್ತೆ ಮೈಕನ್ನು ಎಳೆದುಕೊಂಡ ಕೆಂಚ-ಕರಿಯರು "ಸಮಸ್ಯೆ ಕೇವಲ ಹೊರಗಿನಿಂದ ಮಾತ್ರ ಬರುತ್ತಿಲ್ಲ. ನಮ್ಮ ನಮ್ಮ ನಡುವೆಯೇ ಭಿನ್ನಾಭಿಪ್ರಾಯಗಳಿವೆ. ಶ್ವಾನ ಸಮಾಜದಲ್ಲಿ ಪುರುಷ ಹಾಗೂ ಮಹಿಳಾ ನಾಯಿಗಳ ನಡುವೆ ಭೇದಭಾವ ತೋರಲಾಗುತ್ತಿದೆ. ಪುರುಷ ಶ್ವಾನಗಳಿಗೆ ಅನ್ಯಾಯವಾಗುತ್ತಿದೆ. ಸಂಜೆಯ ವಾಕಿಂಗ್ ಗೆಂದು ಪಕ್ಕದ ಏರಿಯಾಗೆ ಹೋದರೆ ನಮ್ಮವರೇ ನಮ್ಮಮೇಲೆ ಗುಂಪಾಗಿ ಧಾಳಿ ಮಾಡಿ ಕಚ್ಚಿ ಗಾಯಗೊಳಿಸುತ್ತಾರೆ. ಆದರೆ ಮಹಿಳೆಯರನ್ನು ಸುಮ್ಮನೆ ಬಿಡಲಾಗುತ್ತದೆ” ಎಂದು ತಿಂಗಳ ಕೆಳಗೆ ತಮ್ಮ ಮೈಮೇಲಾದ ಗಾಯಗಳನ್ನು ಪರಪರ ಕೆರೆದುಕೊಳ್ಳುತ್ತಾ ನುಡಿದರು. ಈ ಮಾತು ಕೇಳುತ್ತಿದ್ದಂತೆಯೇ ಸಭೆಯಲ್ಲಿದ್ದ, ಈ ಹಿಂದೆ ಅಕ್ಕಪಕ್ಕದ ಏರಿಯಾದವರಿಂದ ಕಚ್ಚಿಸಿಕೊಂಡ ಪುರುಷ ಶ್ವಾನಗಳೆಲ್ಲ ಊಊ ಎಂದು ಒಕ್ಕೋರಲಿನಿಂದ ಊಳಿಡುವ ಮೂಲಕ ಬೆಂಬಲ ಸೂಚಿಸಿದರು.
ಎಲ್ಲರ ಸಮಸ್ಯೆಗಳನ್ನೂ ಆಲಿಸಿದ ಡಾಬರ್ ತಾತ  ಪ್ರತಿಯೊಂದು ಏರಿಯಾದ ಪ್ರತಿನಿಧಿಗಳನ್ನೂ ಕೂರಿಸಿಕೊಂಡು ಸುಧೀರ್ಘ ಚರ್ಚೆ ನಡೆಸಿದ ನಂತರ ಎಲ್ಲ ಸಮಸ್ಯೆಗಳಿಗೂ ಪರಿಹಾರವಿರುವ ವಿಧೇಯಕವೊಂದನ್ನು ತಯಾರಿಸಿದರು. ಅದು ಹೀಗಿತ್ತು:
*ಏರಿಯಾವಾರು ಕಲಹ ಬಿಡಬೇಕು. ಪಕ್ಕದ ಏರಿಯಾದ ನಾಯಿಯೊಬ್ಬ ನಮ್ಮ ಏರಿಯಾಗೆ ಬಂದರೆ ಅವನನ್ನು ಅತಿಥಿಯಂತೆ ಕಾಣಬೇಕೇ ಹೊರತು, ಗುಂಪುಕಟ್ಟಿಕೊಂಡು ಕಚ್ಚಿ ಓಡಿಸಬಾರದು.
* ಸಂತಾನ ಹರಣ ಚಿಕಿತ್ಸೆಯ ವಿರುದ್ಧ, ನಾಯಿ ಹಿಡಿಯುವ ನಗರ ಪಾಲಿಕೆಯವರು ಹಾಗೂ ಸುಮ್ಮಸುಮ್ಮನೆ ಕಲ್ಲು, ದೊಣ್ಣೆ ಎಸೆಯುವವರ ವಿರುದ್ಧ ಸಾಮೂಹಿಕ ಹೋರಾಟ ನಡೆಸಬೇಕು. ಅವರು ಕಂಡಲ್ಲಿ ಅಟ್ಟಿಸಿಕೊಂಡು ಹೋಗುವುದು, ಗುಂಪಾಗಿ ನಿಂತು ಘೋಷಣೆ ಕೂಗುವ (ಬೊಗಳುವ!) ಮೂಲಕ ತೀವ್ರವಾಗಿ ಖಂಡಿಸಬೇಕು‌.
* ಕಸ ಆಯುವ ಬಡಪಾಯಿಗಳ ಮೇಲೆ ಎಗರಾಡಬಾರದು. ಅವರನ್ನು ಅಟ್ಟಿಸಿಕೊಂಡು ಹೋಗಬಾರದು.
*ಹಾಗೆಯೇ ರಾತ್ರೆ ಒಂಟಿಯಾಗಿ ಬ್ಯಾಗು ಹಿಡಿದು ಓಡಾಡುವ ದಾರಿಹೋಕರ ಮೇಲೆ ಎರಗಬಾರದು. ಬದಲಿಗೆ ಬಾಲ ಆಡಿಸುವುದು, ಮುದ್ದುಮುದ್ದಾಗಿ ಕುಂಯ್ಗುಟ್ಟುವುದು, ಪಲ್ಟಿ ಹೊಡೆಯುವುದು ಮಾಡುವ ಮೂಲಕ ಜನರ ಪ್ರೀತಿ ಸಂಪಾದಿಸಬೇಕು.
* ಗ್ರಾಮಭಾಗದ ನಾಯಿಗಳನ್ನು ಹಿಡಿದು ಕೊಲ್ಲಲುತ್ತಿರುವ ಕುರ್ಕ, ಚಿರತೆಗಳ ಜೊತೆ ಸಂಧಾನ-ಮಾತುಕತೆ ನಡೆಸಬೇಕು. ಅವರು ಒಪ್ಪದಿದ್ದಲ್ಲಿ ಅವರ ವಿರುದ್ಧ ಹೋರಾಡಲು ಮುಧೋಳ, ಡಾಬರ್, ರ್ಯಾಟ್ ವಿಲ್ಲರ್ ಮುಂತಾದ ಗಟ್ಟಿಮುಟ್ಟಾದ ಶ್ವಾನಗಳ ಪಡೆಯೊಂದನ್ನು ಕಟ್ಟಬೇಕು.
* ವಾಹನಗಳಿಗೆ ಸಿಕ್ಕಿ ಗಾಯಗೊಳ್ಳುವ ನಾಯಿಗಳಿಗೆ ಮನುಷ್ಯನಿಂದಲೇ ಪರಿಹಾರ ಕೊಡಿಸಬೇಕು. ಕೊಡದ ಪಕ್ಷದಲ್ಲಿ ಅಂಥವರ ಫೋಟೋ, ವೀಡಿಯೋಗಳನ್ನು ಫೇಸ್ಬುಕ್, ಯೂಟ್ಯೂಬ್ ಗಳಿಗೆ ಅಪ್ಲೋಡ್ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅವರನ್ನು ಖಂಡಿಸಬೇಕು.
*ಈ ನೀತಿ ಸಂಹಿತೆಯನ್ನು ಉಲ್ಲಂಘಿಸುವ ಶ್ವಾನಗಳಿಗೆ ಹಮ್ಮುರಬಿ ಹಾಗೂ ಸೌದಿ ಅರೇಬಿಯಾ ಮಾದರಿಯ ‘ಬೆರಳ್ ಗೆ ಬೆರಳ್. ಕೊರಳ್ ಗೆ ಕೊರಳ್’ ಶಿಕ್ಷೆಗಳನ್ನು ನೀಡಲಾಗುವುದು!
ಹೀಗೆ ಚರ್ಚಾಗೋಷ್ಠಿ ಸಂಪನ್ನವಾಗಿ, ಮಧ್ಯಾಹ್ನದ ಊಟವಾದ ನಂತರ ಸಾಂಸ್ಕೃತಿಕ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಆರಂಭವಾದವು. ತಮ್ಮ ಅಮೂಲ್ಯ ಕೃತಿಗಳ ಮೂಲಕ ಶ್ವಾನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಅನೇಕ ಶ್ವಾನಗಳಿಗೆ ಪ್ರಶಸ್ತಿನೀಡಲಾಯಿತು. 'ಕಂಬ ಕಂಡೊಡನೆ ನಮಗೇನಾಗುತ್ತದೆ?' ಗೆ ಅತ್ಯುತ್ತಮ ಮನೋವೈಜ್ಞಾನಿಕ ಕೃತಿಯೆಂದೂ, 'ಬಳೇಪೇಟೆಯವ ಜೂಲು ಚೆಲುವೆ' ಕಾದಂಬರಿಗೆ ಅತ್ಯುತ್ತಮ ಸಾಮಾಜಿಕ ಕಾದಂಬರಿಯೆಂದೂ, ‘ಮೈ ಕೆರೆದುಕೊಳ್ಳಲು ಸುಲಭ ವಿಧಾನಗಳು’ ಕೃತಿಗೆ ಅತ್ಯುತ್ತಮ ವೈದ್ಯಕೀಯ ಕೃತಿಯೆಂದೂ, 'ಮಹಾನಗರಪಾಲಿಕೆಯವರೇ ಹುಷಾರ್!' ನಾಟಕಕ್ಕೆ ಅತ್ಯುತ್ತಮ ಕ್ರಾಂತಿಕಾರಿ ನಾಟಕವೆಂದೂ ಪ್ರಶಸ್ತಿ ನೀಡಲಾಯಿತು. ಜೊತೆಗೆ ಐದು ವರ್ಷ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಿಸ್ಟರ್ ಮುಧೋಳ್ ಅವರನ್ನು ಸನ್ಮಾನಿಸಲಾಯಿತು. ಅವರ ಮುಂದಾಳತ್ವದಲ್ಲಿ ಮರಿ ಶ್ವಾನಗಳಿಗೆ ಉಚಿತ ಆತ್ಮರಕ್ಷಣಾ ತರಬೇತಿ ನೀಡುವ ಕುರಿತಾಗಿಯೂ ಚರ್ಚಿಸಲಾಯಿತು. ಕೊನೆಗೆ ವಂದನಾರ್ಪಣೆಯ ವೇಳೆ ಸ್ವತಃ ಡಾಬರ್ ತಾತ “ನೀ ಜೈಲಲಿ ಹುಟ್ಟಿ ಬಯಲಿಗೆ ಬಂದೆ ಕೃಷ್ಣ ಕೃಷ್ಣ ಕೃಷ್ಣ… ನಾ ಬೋನಲಿ ಹುಟ್ಟಿ ಬೀದಿಗೆ ಬಂದೆ ಏಕೆ ಹೀಗೆ ಕೃಷ್ಣ?” ಎಂದು ಭಾವುಕರಾಗಿ ಹಾಡಿದ್ದನ್ನು ಕೇಳಿ ಶ್ವಾನಗಳೆಲ್ಲರ ಕಣ್ಣೂ ಮಂಜಾಯ್ತು. ದುಃಖಿತರಾದ ಎಲ್ಲರಲ್ಲೂ ಉತ್ಸಾಹ ಚಿಮ್ಮಿಸಲೆಂದು ಆಂಗ್ಲ ಹಾಡಿನ ಸಿಡಿ ಹಾಕಲಾಯಿತು. ‘ಹೂ ಲೆಟ್ ದ ಡಾಗ್ಸ್ ಔಟ್?’ ಹಾಡಿಗೆ ಶ್ವಾನಗಳೆಲ್ಲ ಬಾಲ ಕುಣಿಸತ್ತಾ, ನಾಲಿಗೆ ಹೊರಚಾಚಿಕೊಂಡು ಕುಣಿಯತೊಡಗಿದರು. ವೇದಿಕೆಯ ಮೇಲೆ ಮಾತ್ರವಲ್ಲದೆ ಕೆಳಗಿನ ಸಭೆಯಲ್ಲೂ ನರ್ತನ ಆರಂಭವಾಯಿತು. ಕುಣಿದು ಕುಪ್ಪಳಿಸಿದ ಶ್ವಾನಗಳೆಲ್ಲ ಇಂತಹಾದ್ದೊಂದು ಅಭೂತಪೂರ್ವ ಕಾರ್ಯಕ್ರಮವನ್ನು ಆಯೋಜಿಸಿದ ಕೆಂಚ, ಕರಿಯರನ್ನು ಹೆಗಲ ಮೇಲೆ ಹೊತ್ತು ಕುಣಿಯತೊಡಗಿದರು.
“ಡರ್… ಪೋಂವ್..ಪೋಂವ್”
ಅವರ ಸಂಭ್ರಮವನ್ನು ಹರಿಯುವಂತಹಾ ಭಾರೀ ವಾಹನದ ಸದ್ದೊಂದು ಇದ್ದಕ್ಕಿದ್ದಂತೆ ಕೇಳಿಬಂತು.
“ಬಿಬಿಎಂಪಿ ಲಾರಿ ಬರ್ತಿದೆ. ಎಲ್ರೂ ಓಡಿ!”
ಅಷ್ಟೇ! ಖುಷಿಯಿಂದ ಜಿಗಿದಾಡುತ್ತಿದ್ದ ನಾಯಿಗಳೆಲ್ಲ ಹೊತ್ತಿದ್ದ ಕೆಂಚ ಕರಿಯರನ್ನು ಎತ್ತಿ ಬಿಸಾಕಿ ದಿಕ್ಕಾಪಾಲಾಗಿ ಓಡತೊಡಗಿದರು. ಮೋರಿಪಾಳ್ಯದ ಬೂದಿಗುಡ್ಡೆಯ ಮೇಲೆ ನಾಯಿಗಳೆಲ್ಲ ಸೇರಿಕೊಂಡು ಗಲಾಟೆ ಮಾಡುತ್ತಿವೆಯೆಂದು ಯಾರೋ ಬಿಬಿಎಂಪಿಯವರಿಗೆ ಫೋನ್ ಮಾಡಿ ಕಂಪ್ಲೇಟ್ ಕೊಟ್ಟಿದ್ದರಿಂದ ನಾಯಿ ಹಿಡಿಯುವ ವಾಹನ ಅಲ್ಲಿಗೆ ಧಾವಿಸಿಬಂದಿತ್ತು. ಆದರೆ ಅಷ್ಟು ದೂರದಿಂದಲೇ ಅದರ ಶಬ್ದವನ್ನು ಗುರುತಿಸಿದ ಶ್ವಾನಗಳೆಲ್ಲ ಚಿರತೆಯ ವೇಗದಲ್ಲಿ ಓಡುತೊಡಗಿದವು. ಸಿಕ್ಕ ಕೆಲವು ನಾಯಿಗಳನ್ನು ತುಂಬಿಕೊಂಡ ಬಿಬಿಎಂಪಿ ವಾಹನ ಭೋಂಭೋಂ ಎಂದು ವಿಜಯೋತ್ಸಾಹ ಮಾಡುತ್ತಾ ಮರಳಿಹೋಯಿತು‌.
ಕಾಲ್ತುಳಿತದಿಂದ, ಬಿಬಿಎಂಪಿ ವಾಹನದಿಂದ ತಪ್ಪಿಸಿಕೊಂಡು ತಮ್ಮ ಏರಿಯಾ ತಲುಪುವಷ್ಟರಲ್ಲಿ ಕೆಂಚ-ಕರಿಯರಿಬ್ಬರ ಜೀವ ಬಾಯಿಗೆ ಬಂದಿತ್ತು.

('ಮಂಗಳ''ಲ್ಲಿ ಪ್ರಕಟಿತ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...