ಶನಿವಾರ, ಜನವರಿ 19, 2019

ಬೆಂಗಳೂರಿಗೆ ಬಂದಿದ್ದು-2

ಈ ಪ್ರೀತಿ ಹಾಗೂ ಬರಹಗಳ ಒಂದು ವಿಚಿತ್ರ ಗುಣ ಏನೆಂದರೆ 'ಬಾ ಇಲ್ಲಿ' ಎಂದು ಪ್ರೀತಿಯಿಂದ ಕರೆದಾಗ ಅವು ಬರುವುದಿಲ್ಲ. ಅದೇ 'ನೀನು ನನಗಲ್ಲ ಬಿಡು' ಎಂದು ವಿಮುಖನಾದರೆ ಓಡಿ ಬಂದು ಅಪ್ಪಿಕೊಳ್ಳುತ್ತವೆ. ಬಸ್ಸು ಬಾರದ ಸಂಜೆಯೊಂದರಲ್ಲಿ ಕಾಯುತ್ತಾ ಕುಳಿತಿದ್ದಾಗ ಬರೆದ 'ಬೆಂಗಳೂರಿಗೆ ಬಂದಿದ್ದು' ಎನ್ನುವ ನನ್ನದೇ ಯಡವಟ್ಟುಗಳ ಸಂಕಲನದಂತಹಾ ಬರಹಕ್ಕೆ ದೊರೆತ ನಿಮ್ಮೆಲ್ಲರ ಪ್ರತಿಕ್ರಿಯೆಯನ್ನು ನೋಡಿ ನಿಜಕ್ಕೂ ಬೆಚ್ಚಿಬಿದ್ದಿದ್ದೇನೆ, ಅಷ್ಟೇ ಕೃತಜ್ಞನೂ ಆಗಿದ್ದೇನೆ. ಅದಕ್ಕೆ ಅಷ್ಟೆಲ್ಲ ಲೈಕು, ಕಮೆಂಟುಗಳು ಬಂದಿರುವಾಗ ಇದು ಎಲ್ಲಿ ಓದಿಸಿಕೊಳ್ಳದೇ ಹೋಗುತ್ತದೋ ಎನ್ನುವ ಭಯದಲ್ಲೇ ಅದರ ಮುಂದಿನ ಭಾಗವನ್ನು ಬರೆದುಮುಗಿಸಿದ್ದೇನೆ.
ಓದುವಿರೆಂಬ ನಂಬಿಕೆಯೊಂದಿಗೆ...

ಬೆಂಗಳೂರಿಗೆ ಬಂದಿದ್ದು-2

ಬೆಂಗಳೂರಿಗೆ ಬಂದ ಮೊದಲ ವಾರದಲ್ಲಿ, ಹೆಚ್ಚೂ ಕಡಿಮೆ ಒಂದೇ ಥರಾ ಕಾಣುವ ಬೆಂಗಳೂರಿನ ಬೀದಿಗಳ ನಡುವೆ ಅದೆಷ್ಟು ಕನ್ಫ್ಯೂಸ್ ಆಗುತ್ತಿದ್ದೆನೆಂದರೆ ನಮ್ಮ ಮನೆಯ ಮುಂದಿನದೇ ಸರ್ಕಲ್ ನಲ್ಲಿ ನಿಲ್ಲಿಸಿ, ಕಣ್ಣು ಮುಚ್ಚಿಸಿ, ಗಿರಗಿರನೆ ನಾಲ್ಕು ಸುತ್ತು ತಿರುಗಿಸಿ ವಾಪಾಸ್ ಮನೆಗೆ ಹೋಗು ನೋಡೋಣ ಎಂದರೂ ಮೇಲೆ ಕೆಳಗೆ ನೋಡುತ್ತಿದ್ದೆನೇನೋ. ಎಲ್ಲೇ ಮೂರು ದಾರಿಗಳು ಕೂಡಿರುವ ಸರ್ಕಲ್ ಕಂಡರೂ, ಅಲ್ಲಿ ನಾನು ತುಳಿಯುತ್ತಿದ್ದುದು ತಪ್ಪುಹಾದಿಯನ್ನೇ. ಯಾವುದೋ ಡೆಡ್ಡೆಂಡ್ ರಸ್ತೆಗೆ ಹೋಗಿ ಗಾಬರಿಯಲ್ಲಿ ಮೇಲೆ ಕೆಳಗೆ ನೋಡುತ್ತಾ, ಸ್ವಲ್ಪ ಹೊತ್ತಿಗೆ ಮುಂಚೆ ಇಲ್ಲೇ ಇದ್ದ ಅಕ್ಕನ ಮನೆ ಅದೆಲ್ಲಿ ಹೋಯ್ತೆಂದು ಅಕ್ಕಪಕ್ಕದಲ್ಲಿ ಓಡಾಡುತ್ತಿದ್ದ ಜನರ ಬಳಿ ವಿಳಾಸ ಕೇಳುತ್ತಿದ್ದೆ. ಇಂತಿಪ್ಪ ನನ್ನೊಬ್ಬನನ್ನೇ ದೂರದಲ್ಲೆಲ್ಲೋ ಇರುವ ಅದ್ಯಾವುದೋ ಕಂಪನಿಗೆ ಇಂಟರ್ವ್ಯೂಗೆ ಕಳಿಸಲು ಅಕ್ಕನಿಗಾದರೂ ಹೇಗೆ ಧೈರ್ಯ ಬಂದೀತು? ತುಸು ಯೋಚಿಸಿ, ಕೊನೆಗೆ ಅವಳೇ ನನ್ನೊಂದಿಗೆ ಹೊರಟು ನಿಂತಳು.
ತಮಾಷೆ ಇದ್ದದ್ದೇ ಅಲ್ಲಿ. ಮೂರ್ನಾಲ್ಕು ದಿನದ ಹಿಂದೆ ಬೆಂಗಳೂರಿಗೆ ಬಂದಿಳಿದ ನನಗೆ ಈ ಮಹಾನಗರದ ದೂರದ ಏರಿಯಾಗಳು ಅದೆಷ್ಟು ಅಪರಿಚಿತವಾಗಿದ್ದವೋ, ಏಳು ವರ್ಷದ ಹಿಂದೆ ಮದುವೆಯಾಗಿ ಇಲ್ಲಿಗೆ ಬಂದ ಅಕ್ಕನಿಗೂ ಅವು ಅಷ್ಟೇ ಅಪರಿಚಿತವಾಗಿದ್ದವು! ಗಿರಿನಗರ, ಬಸವನಗುಡಿಗಳಾಚೆ ಯಾವೊಂದು ಏರಿಯಾಗೂ ಸ್ವತಂತ್ರವಾಗಿ ಹೋಗದ, ವರ್ಷಕ್ಕೊಂದೆರೆಡು ಬಾರಿ ಹೋದರೂ ಭಾವನ ಜೊತೆ ಬೈಕಿನಲ್ಲಿ ಇಲ್ಲಾ ಆಟೋದಲ್ಲಿ ಹೋಗುತ್ತಿದ್ದ ಅಕ್ಕನ ಪಾಲಿಗೆ ಈ ಬಿಎಂಟಿಸಿ ಪ್ರಯಾಣವೆನನುವುದು ಮೊಟ್ಟ ಮೊದಲ ಬಾರಿಗೆ ಏರುತ್ತಿರುವ ರೋಲಕ್ ಕೋಸ್ಟರ್ರೇ ಆಗಿತ್ತು. ಹೀಗೆ ಹುಟ್ಟಾ ಬೃಹಸ್ಪತಿಗಳಾದ ನಾವಿಬ್ಬರೂ ಜೊತೆಯಾಗಿ ಇಂಟರ್ವ್ಯೂಗೆ ಹೊರಡುವುದೆಂದು ತೀರ್ಮಾನವಾಯಿತು. ಬಿಟಿಎಂ ಎನ್ನುವ ಬರೀ ಇನಿಶಿಯಲ್ ಗಳಿರುವ ಹೆಸರಿನ ಏರಿಯಾಗೆ ಹೋಗಲು ಯಾವ್ಯಾವ ಬಸ್ಸುಗಳಿವೆಯೆಂದು ತಿಳಿದುಕೊಂಡು ಹೇಳುವಂತೆ ಅಕ್ಕ ಭಾವನಿಗೆ ದೊಂಬಾಲುಬಿದ್ದಳು. ಯಾರ್ಯಾರಿಗೋ ಕಾಲ್ ಮಾಡಿ ನಮ್ಮ ಏರಿಯಾದಿಂದ ಬಿಟಿಎಂಗೆ ಹೋಗುವ ಬಸ್ಸುಗಳ ಕುಲ, ಗೋತ್ರ ವಿಚಾರಿಸಿದೆವು. ಅಂತೂ ಇಂತೂ ಅದೊಂದು ಸೋಮವಾರ ಬೆಳಗ್ಗೆ ಒಂಭತ್ತಕ್ಕೆಲ್ಲ ಸೀತಾ ಸರ್ಕಲ್ ನಲ್ಲಿ ನಿಂತು ಬಸ್ಸಿಗಾಗಿ ಕಾಯತೊಡಗಿದೆವು.
ಆಗ ಬಂತು ಟೂ ನಾಟ್ ಒನ್!
ಬಸ್ಸೊಂದು ಈ ಪಾಟಿ ರಶ್ಶಾಗಿದ್ದನ್ನು ನಾನು ನೋಡಿದ್ದೇ ಕಡಿಮೆ. ಮುಂದುಗಡೆ ಬಾಗಿಲಿನ ತುದಿಯಿಂದ ಹಿಡಿದು ಹಿಂದಿನ ಸೀಟಿನ ಮೂಲೆಯ ತನಕ ಒಂದೊಂದು ಅಡಿ ಜಾಗಕ್ಕೂ ಒಬ್ಬೊಬ್ಬ ಮನುಷ್ಯನನ್ನು ನಿಲ್ಲಿಸಿಕೊಂಡು ಬಂದಿದ್ದ ಆ ಬಸ್ಸನ್ನು ನೋಡಿ ನನಗಿಂತ ಭಯಂಕರವಾಗಿ ಬೆಚ್ಚಿಬಿದ್ದವಳು ಅಕ್ಕ. ಎಷ್ಟೋ ವರ್ಷಗಳ ಕೆಳಗೆ ಸಮಾಜ ಪುಸ್ತಕದಲ್ಲಿ ಓದಿದ್ದ 'ಜನಸಂಖ್ಯಾ ಸ್ಫೋಟ'ದ ಅರ್ಥ ಏನೆಂಬುದು ಈಗ ಇಬ್ಬರಿಗೂ ಗೊತ್ತಾಗಿತ್ತು. ಹಾಗಂತ ಮುಂದಿನ ಬಸ್ಸಿಗೆ ಕಾಯುವಷ್ಟು ಸಮಯವಿರಲಿಲ್ಲ. ಹಾಗೆ ಕಾದರೂ ಬರಲಿರುವ ಬಸ್ಸು ಇದರ ಅಜ್ಜನಂತಿದ್ದರೆ? ಎಂಬ ಭಯ ಬೇರೆ. ಅಂತೂ ಇಂತೂ ಹೇಗೋ ದಾರಿ ಮಾಡಿಕೊಂಡು ಬಸ್ಸಿನೊಳಗೆ ತೂರಿಕೊಂಡೆವು. ಒಳಗಿನ ಪರಿಸ್ಥಿತಿ ಇನ್ನೂ ಭಯಂಕರವಾಗಿತ್ತು. ಸೊಂಟ ಬಳುಕಿದ ತೆಂಗಿನ ಮರಗಳಂತೆ ನಿಂತು ನೇತಾಡಿಕೊಂಡಿದ್ದ ಜನರ ಕಾಲೊಂದು ಕಡೆ ಇದ್ದರೆ, ತಲೆ-ಕೈಗಳು ಮೇಲೆಲ್ಲೋ ಇರುವ ಪೋಲ್ ಸರಳಿನ ಕಡೆಗೆ ಓರೆಯಾಗಿ ಚಾಚಿಕೊಂಡಿದ್ದವು. ಪ್ರತಿಯೊಂದು ಹೆಜ್ಜೆಗೂ ಯಾರದೋ ಕಾಲು ತುಳಿಯುತ್ತಾ, ಅವರ ಕೆಂಗಣ್ಣಿನ ನೋಟಕ್ಕೀಡಾಗುತ್ತಾ ಹೇಗೋ ಒಳಸೇರಿಕೊಂಡೆ. ಮಹಿಳೆಯರು ಬಸ್ಸಿನ ಮುಂಭಾಗದಲ್ಲಿ ನಿಲ್ಲಬೇಕಾದ್ದರಿಂದ ಅಕ್ಕ ಅನಿವಾರ್ಯವಾಗಿ ಮುಂದೆಲ್ಲೋ ನಡೆದುಹೋದಳು. ಕಿಕ್ಕಿರಿದಿದ್ದ ಜಡೆ, ಚೂಡಿದಾರ, ಸೀರೆಗಳ ನಡುವೆ ಕರಗಿಹೋದ ಅವಳನ್ನು ಹುಡುಕುವ ವಿಫಲ ಪ್ರಯತ್ನ ಮಾಡುತ್ತಾ, ನಿಂತಲ್ಲೇ ಇಣುಕಾಡುತ್ತ ಬಸ್ಸಿನ ಪೋಲ್ ಗೆ ನೇತಾಡತೊಡಗಿದೆ.
ಟ್ರಾಫಿಕ್ ಎನ್ನುವ, ಮಹಾಮಹಾಶಹರಗಳ ಜನರನ್ನೆಲ್ಲ ಬೆಚ್ಚಿ ಬೀಳಿಸುವ ಸಮಸ್ಯಾಸುರನನ್ನು ನಾನು ಕಣ್ಣಾರೆ ನೋಡಿದ್ದು ಅದೇ ಮೊದಲು. ಇಳಿಯಬೇಕಾದ ನಿಲ್ದಾಣ ಮುಂದೆಲ್ಲಿದೆ? ಗೊತ್ತಿಲ್ಲ. ಅದಕ್ಕಿನ್ನೂ ಎಷ್ಟು ದೂರ? ಗೊತ್ತಿಲ್ಲ. ನಿಜಕ್ಕೂ ಅದು ಮುಂದೆಯೇ ಇದೆಯಾ ಅಥವಾ ಹಿಂದೆಲ್ಲೋ ದಾಟಿ ಹೋಯಿತಾ? ಅದೂ ಗೊತ್ತಿಲ್ಲ. ಆಗಲೇ ಒಂದು ಗಂಟೆ ಕಳೆದಿದೆ. ಮುಂದಿರುವ ಅಕ್ಕ ನನಗೆ ಗೊತ್ತಾಗದಂತೆ ಎಲ್ಲಾದರೂ ಇಳಿದುಕೊಂಡು ಬಿಟ್ಟರೆ ಏನಪ್ಪಾ ಗತಿ ಎಂದು ನಾನು ಯೋಚಿಸುತ್ತಿದ್ದರೆ ಅವಳು, ಹಿಂದೆಲ್ಲೋ ಇರುವ ತನ್ನ ಸಣಕಲ ತಮ್ಮ ಈ ನೂಕಾಟದ ನಡುವೆ ಅದ್ಯಾವ ಕಿಟಕಿಯ ಸಂದಿಯಿಂದ ತೂರಿ ಆಚೆ ಬಿದ್ದುಹೋಗುತ್ತಾನೋ ಎಂದು ಚಿಂತಿಸುತ್ತಾ ಹೈರಾಣಾಗಿದ್ದಳು. ಪ್ರತಿ ಎರೆಡು-ಮೂರು ನಿಲ್ದಾಣ ಸರಿದಾಗಲೂ ಇದು ಬಿಟಿಎಮ್ಮಾ ಎಂದು ಕೇಳಿ ಕಂಡೆಕ್ಟರ್ ನಿಂದ ಬೈಸಿಕೊಂಡಿದ್ದಳು. ಹೀಗೆ ಖಾಲಿ ಹತ್ತೂ ಚಿಲ್ಲರೆ ಕಿಲೋಮೀಟರ್ ಕ್ರಮಿಸಲಿಕ್ಕೆ ಒಂದೂವರೆ ಗಂಟೆ ಕಾಲ ಅಲ್ಲಾಡುತ್ತಾ, ಕುಲುಕಿ ಬಳುಕುತ್ತಾ, ಹೋಗುತ್ತಲೇ ಇರಬೇಕಾದ ಪ್ರಯಾಣ ನಿಜಕ್ಕೂ ಕಿರಿಕಿರಿ ಹುಟ್ಟಿಸುವಂತಿತ್ತು.
*******************
ಕೊನೆಗೂ ಕಂಡಕ್ಟರ್ 'ಈಸ್ಟೆಂಡ್, ಈಸ್ಟೆಂಡ್...' ಎಂದು ಕೂಗಿಕೊಂಡಾಗ ಹೋದ ಜೀವ ಬಂದಂತಾಯಿತು. ಇನ್ನೂ ಖಾಲಿಯಾಗದ ಬಸ್ಸಿನಿಂದ ಅದು ಹೇಗೋ ಎಗರಿಕೊಂಡೆ. ಇನ್ನೊಂದರ್ಥದಲ್ಲಿ ಬಾಗಿಲಿನತ್ತ ಮುಖ ಮಾಡಿ ನಿಂತ ನನ್ನನ್ನು ಜನರೇ ತಳ್ಳಿಕೊಂಡುಬಂದು ಕೆಳಗಿಳಿಸಿದರು. ನಮ್ನಮ್ಮ ಕೈ, ಕಾಲು, ತಲೆಗಳೆಲ್ಲ ನಮ್ನಮ್ಮ ಬಳಿಯೇ ಇದೆಯೆಂಬುದನ್ನು ಖಾತರಿ ಪಡಿಸಿಕೊಂಡ ನಂತರ ನಾನು-ಅಕ್ಕ ಒರಾಕಲ್ ನತ್ತ ಹೊರಟೆವು. ಎದುರು ಸಿಕ್ಕವರ ಬಳಿಯೆಲ್ಲ ಹೆಸರೊಂದು ಬಿಟ್ಟು ಮತ್ಯಾವ ವಿವರವೂ ಗೊತ್ತಿಲ್ಲದ ಒರಾಕಲ್ ನ ವಿಳಾಸ ಕೇಳುತ್ತಾ, ಗೊಂದಲದಲ್ಲಿ ಒಬ್ಬರು ಇನ್ನೊಬ್ಬರ ದಾರಿ ತಪ್ಪಿಸುತ್ತಾ, ಹೆಜ್ಜೆಗೊಂದು ಬಾರಿ ನಾವು ಹೋಗುತ್ತಿರುವ ಮಾರ್ಗವನ್ನು ಅನುಮಾನಿಸುತ್ತ ಅಂತೂ ಇಂತೂ ಒರಾಕಲ್ ನ ಅಂಗಳ ತಲುಪಿನಿಂತೆವು.
ತಲೆಯೆತ್ತಿದಷ್ಟೂ ಎತ್ತರಕ್ಕೆ ಮಹಡಿ ಮಹಡಿಯಾಗಿ ಬೆಳೆದು ನಿಂತಿದ್ದ ಆ ಕಟ್ಟಡವನ್ನು ನೋಡಿಯೇ ನನ್ನ ಅರ್ಧ ಜೀವ ಬಾಯಿಗೆ ಬಂತು. ನನ್ನಂತೆಯೇ ಇಂಟರ್ವ್ಯೂಗೆ ಬಂದಿದ್ದ ಹತ್ತಾರು ಯುವಕರು ನಮ್ಮ ಸುತ್ತ ಸೇರಿಕೊಂಡು ಪಕ್ಕಾ ಇಂಗ್ಲೀಷಿನಲ್ಲಿ ಪಿಸುಗುಟ್ಟುತ್ತ ನಿಂತಿದ್ದರು. ಅಕ್ಕನಂತೂ ಒಂದು ಕಣ್ಣಿನಲ್ಲಿ ಸುತ್ತ ನೆರೆದ ಇನ್ನಿತರ ಕ್ಯಾಂಡಿಡೇಟ್ ಗಳನ್ನೂ, ಮತ್ತೊಂದು ಕಣ್ಣಿನಲ್ಲಿ ಪೆಕರನಂತೆ ಬಾಯ್ಬಿಟ್ಟುಕೊಂಡು ಬಿಲ್ಡಿಂಗನ್ನೇ ನೋಡುತ್ತಾ ನಿಂತಿದ್ದ ನನ್ನನ್ನೂ ನೋಡುತ್ತಿದ್ದಳು- ಹುಟ್ಟುವಾಗಲೇ ಫಾರ್ಮಲ್ಸ್ ಹಾಕಿಕೊಂಡು ಹುಟ್ಟಿರುವ ಈ ಬುದ್ಧಿವಂತರನ್ನೆಲ್ಲ ಹಿಂದಿಕ್ಕಿ ಈ ನನ್ನ ತಮ್ಮ ಕೆಲಸ ಗಿಟ್ಟಿಸುವುದು ಹೌದಾ ಎಂಬಂತೆ. ನಾನೇನೂ ಅವಳ ಈ ಅನುಮಾನವನ್ನು ಸುಳ್ಳಾಗಿಸಲಿಲ್ಲ ಬಿಡಿ, ಅದು ಬೇರೆ ವಿಷಯ. ಆದರೆ ಅದಕ್ಕೂ ಮೊದಲು ನಾನು ತೋರಿಸಿದ ಓವರ್ ಕಾನ್ಫಿಡೆನ್ಸ್ ಇದೆಯಲ್ಲಾ? ಅದೇ ನಿಜವಾದ ತಮಾಷೆ.
ಲಿಫ್ಟ್ ನೊಳಗೆ ತೂರಿಕೊಂಡ ನಮ್ಮೆದುರಿಗೆ ಪಕ್ಕಾ ಹುಡುಗನಂತೆ ಫಾರ್ಮಲ್ಸ್ ತೊಟ್ಟಿದ್ದ ಹುಡುಗಿಯೊಬ್ಬಳು ಬಂದು ನಿಂತಳು. ಕೈಯಲ್ಲಿದ್ದ ಫೈಲನ್ನು ಎದೆಗವುಚಿಕೊಂಡು, ಇನ್ನೇನು ಸಾವಿರಾರು ಅಡಿ ಎತ್ತರದ ಬೆಟ್ಟದ ಮೇಲಿಂದ ನೆಗೆಯಲಿರುವವಳಂತೆ ಭಯಕ್ಕೊಳಗಾಗಿ ನಿಂತಿದ್ದ ಅವಳನ್ನು ನೋಡಿ ಅಕ್ಕನಿಗೆ ಏನನಿಸಿತೋ ಏನೋ, "ಯಾಕೆ ಅಷ್ಟೊಂದು ಟೆನ್ಷನ್ ಆಗಿದೀರ? ಇಂಟರ್ವ್ಯೂ ಭಯಾನಾ?" ಎಂದು ಕೇಳಿಯೇ ಬಿಟ್ಟಳು. ಆ ಹುಡುಗಿ ಹೌದೆಂಬಂತೆ ತಲೆಯಾಡಿಸಿ ಸಣ್ಣಗೆ ನಕ್ಕಳು. ಅವಳ ಹೆಸರು, ಊರು ಎಲ್ಲಾ ಕೇಳಿದ ಅಕ್ಕ ಕೊನೆಗೆ "ಹೆದರಬೇಡಿ. ಧೈರ್ಯವಾಗಿರಿ. ಅರಾಮಾಗಿ ಆನ್ಸರ್ ಮಾಡಿ" ಎಂದು ಧೈರ್ಯ ಹೇಳಿ ನನ್ನತ್ತ ಒಮ್ಮೆ ನೋಡಿದಳು. ನಾನು ಮಾತ್ರ ಸುತ್ತಲಿನ ಪರಿಸ್ಥಿತಿಗೂ ನನಗೂ ಸಂಬಂಧವೇ ಇಲ್ಲವೆಂಬಂತೆ, ಮದುವೆ ಮನೆಯೊಂದಕ್ಕೆ ಬಂದಿರುವ ಗಂಡಿನ ಕಡೆಯ ನೆಂಟನಂತೆ ಠೀವಿಯಿಂದ ನಿಂತುಕೊಂಡಿದ್ದೆ! ಬೆಂಗಳೂರಂಥಾ ಬೆಂಗಳೂರಲ್ಲಿ ಬೆಳದ ಹುಡುಗಿಯೇ ಹೀಗೆ ಟೆನ್ಷನ್ ಆಗಿ ನಡುಗುತ್ತಿರುವಾಗ ಅದೆಲ್ಲಿಯೋ ಇರುವ ಹಳ್ಳಿ ಮೂಲೆಯಿಂದ ಬಂದಿರುವ ನನ್ನ ಕಾನ್ಫಿಡೆನ್ಸ್, ಧೈರ್ಯಗಳನ್ನು ನೋಡಿ ಅವಳಿಗೆ ಬಹಳ ಆಶ್ಚರ್ಯವಾಗಿತ್ತು.
ಜೊತೆಗೆ ನನಗೂ.
*******************
ರಿಜಿಸ್ಟರ್ ಗಳಿಗೆ ಸಹಿ ಹಾಕಿ, ರೆಸ್ಯೂಮ್ ಕೊಟ್ಟು, ಕಿಲಕಿಲನೆ ನಡೆದಾಡುತ್ತಿರುವ ಹುಡುಗಿ-ಹುಡುಗರನ್ನು ನೋಡುತ್ತಾ ಒಂದಿಷ್ಟು ಹೊತ್ತು ಕಾದಮೇಲೆ 'ರಿಟನ್ ಟೆಸ್ಟ್' ಬರೆಯಲೆಂದು ನಮ್ಮನ್ನೆಲ್ಲ ಕೋಣೆಯೊಂದರೊಳಕ್ಕೆ ಕರೆದೊಯ್ದರು. ಆಗಷ್ಟೇ ಡಿಗ್ರಿ ಎಕ್ಸಾಮ್ ಬರೆದು ಬಂದಿದ್ದ ನನಗೆ ಆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದೇನೂ ದೊಡ್ಡ ವಿಷಯವಾಗಲಿಲ್ಲ. ಫಲಿತಾಂಶಕ್ಕಾಗಿ ಮತ್ತಷ್ಟು ಹೊತ್ತು ಕಾಯಿಸಿದರೂ ಕೊನೆಗೆ ಶುಭ ಸುದ್ದಿಯನ್ನೇ ಹೇಳಿ, ಊಟ ಮಾಡಿಕೊಂಡು ಬರುವಂತೆ ಸೂಚಿಸಿ ಕಳಿಸಿದರು. ಆಪರೇಷನ್ ಥಿಯೇಟರ್ ನ ಹೊರಗೆ ಕಾಯುವಂತೆ ಆತಂಕದಲ್ಲಿ ಕೂತಿದ್ದ ಅಕ್ಕನಿಗೆ ಈ ಶುಭಸುದ್ದಿ ತಿಳಿಸಿದ ನಂತರ ಇಬ್ಬರೂ ಊಟ ಮಾಡಲೆಂದು ಮೇಲ್ಮಹಡಿಯತ್ತ ಹೊರಟೆವು.
ಹುಡುಗರಂತೆ ಪ್ಯಾಂಟು-ಶರ್ಟು ತೊಟ್ಟ ಹುಡುಗಿಯರು, ಹುಡುಗಿಯರಂತೆ ಕಿವಿ ಚುಚ್ಚಿಸಿಕೊಂಡ ಹುಡುಗರು, ಅವರೆಲ್ಲ ನಡೆದಾಡುವ ಸ್ಟೈಲ್, ಕ್ಷಣಾರ್ಧದಲ್ಲಿ ಬೆರಳುಗಳನ್ನು ಕೀಬೋರ್ಡಿನ ತುಂಬಾ ಓಡಾಡಿಸುವ ಚಾಕಚಕ್ಯತೆ.. ಹೀಗೆ ಸುತ್ತಲಿನ ಪ್ರತಿಯೊಂದು ಸಂಗತಿಯನ್ನೂ ಮೊದಲ ಬಾರಿಗೆ ಕಣ್ತುಂಬಿಕೊಳ್ಳುತ್ತಿದ್ದ ನನಗೆ ಇದೂ ಸಹಾ ನಾವು ನಿಂತಿರುವ ಮಣ್ಣಿನ ಮೇಲೇ ಇರುವ ಒಂದು ಜಾಗ ಎಂದು ನಂಬುವುದಕ್ಕೆ ನಿಮಿಷಗಳೇ ಹಿಡಿದವು
"ಇನ್ನೊಂದು ಆರು ತಿಂಗಳು ಕಣೋ, ನೀನೂ ಹಿಂಗೇ ಆಗ್ತೀಯ ನೋಡ್ತಿರು"
ಅಕ್ಕ ಆಗಲೇ ಕನಸು ಕಾಣಲಾರಂಭಿಸಿಯಾಗಿತ್ತು. ನಾನೂ ಹೀಗೇ, ಒಂದು ಕಿವಿ ಚುಚ್ಚಿಸಿಕೊಂಡು, ಜೀನ್ಸು ಪ್ಯಾಂಟಿನ ಹುಡುಗಿಯೊಬ್ಬಳ ಜೊತೆ ಇಂಗ್ಲೀಷಿನಲ್ಲಿ ಹರಟುತ್ತಿರುವ ಚಿತ್ರವೊಂದು ನನ್ನ ಕಣ್ಮುಂದೆ ಹಾದುಹೋಯಿತು. ಊಟ ಮುಗಿಸಿ ಬಂದ ನನ್ನನ್ನು ಹದಿನಾರು ಜನರ ಗುಂಪೊಂದರಲ್ಲಿ ಸೇರಿಸಿ ಕೋಣೆಯೊಂದರೊಳಕ್ಕೆ ತುಂಬಿದರು. ಹೊರಜಗತ್ತಿನ ಗಾಳಿ-ಬೆಳಕಿನ ಸಣ್ಣ ಹನಿಯೂ ಇಲ್ಲದ ಆ ಹವಾನಿಯಂತ್ರಿತ ಕೋಣೆಯನ್ನು ನೋಡಿ ಯಾವುದೋ ಕಥೆಯಲ್ಲಿ ಓದಿದ್ದ ಹಿಟ್ಲರನ ಗ್ಯಾಸ್ ಚೇಂಬರ್ ನೆನಪಾಯಿತು. ಸುತ್ತಲಿದ್ದ ಎಲ್ಲರೂ ಜಗತ್ತಿನ ಗಂಭೀರತೆಯನ್ನೆಲ್ಲಾ ಅರ್ಧ ಗಂಟೆಯ ಮಟ್ಟಿಗೆ ಗುತ್ತಿಗೆ ಪಡೆದವರಂತೆ ಮುಖ ಬಿಗಿದುಕೊಂಡು ಕುಳಿತಿದ್ದರು. ಆಯತಾಕಾರದ ಟೇಬಲ್ ನ ಆಚೆ ಸಾಲಿನಲ್ಲಿ ನಾನು ಬೆಳಗ್ಗೆ ನೋಡಿದ್ದ ಹುಡುಗಿ, ನನಗೆ ಎದಿರಾಗಿ ಕುಳಿತಿದ್ದಳು. ಆಚೀಚೆ ನೋಡುತ್ತ ನನ್ನೆಡೆಗೊಮ್ಮೆ ನೋಡಿ ಪರಿಚಯದ ನಗೆ ನಕ್ಕಳು. ಕೆಲಸಕ್ಕೆ ಸೇರಿದ ಮೇಲೆ ಇವಳೇ ನನಗೆ ಮೊದಲ ಫ್ರೆಂಡಾಗಬಹುದೆಂದು ಕುಳಿತಲ್ಲೇ ಯೋಚಿಸಿದೆ.
"ಹಲೋ ಆಲ್. ಆಲ್ ಆಫ್ ಯು ಹ್ಯಾಡ್ ಯುವರ್ ಲಂಚ್?"
ನಗುತ್ತಾ ಒಳಬಂದ ಆಸಾಮಿ ನಮ್ಮೂರಿನ ಯಾರನ್ನೋ ಹೋಲುತ್ತಾನೆನ್ನಿಸಿತು. ಎಲ್ಲರೂ ನಾಲ್ಕೇ ನಾಲ್ಕು ಹಲ್ಲು ಬಿಟ್ಟು "ಹಲೋ ಸರ್" ಎಂದು ಮತ್ತೆ ಮುಖ ಬಿಗಿದುಕೊಂಡರು.
ಆಗ ಶುರುವಾಯಿತು ಗ್ರೂಪ್ ಡಿಸ್ಕಶನ್!
"ಭಾರತಕ್ಕೆ ಐಟಿಬಿಟಿ ಬೇಕೇ ಬೇಡವೇ? ಇದು ನಿಮ್ಮ ಈ ಹೊತ್ತಿನ ಡಿಸ್ಕಶನ್ ನ ವಿಷಯ."
ಅವನು ಅಷ್ಟಂದದ್ದೇ ತಡ, ಇಷ್ಟು ಹೊತ್ತು ಮುಖ ಬಿಮ್ಮನೆ ಮಾಡಿಕೊಂಡು ಕುಳಿತಿದ್ದವರೆಲ್ಲರೂ ಸಂಸತ್ತಿನಲ್ಲಿರುವ ರಾಜಕಾರಣಿಗಳ ಆತ್ಮಗಳನ್ನು ಮೈಮೇಲೆ ಬರಿಸಿಕೊಂಡವರಂತೆ ಮಾತನಾಡಲು ಶುರುವಿಟ್ಟುಕೊಂಡರು. ನನ್ನೆದುರೇ ಬೆಳಗ್ಗೆ ಫೈಲು ಅಪ್ಪಿಕೊಂಡು ಸಣ್ಣಗೆ ನಡುಗುತ್ತ ನಿಂತಿದ್ದ ಬೆಂಗಳೂರಿನ ಹುಡುಗಿ ಸಾಕ್ಷಾತ್ ಮಮತಾ ಬ್ಯಾನರ್ಜಿಯೂ ನಾಚುವಂತೆ ವಾದ ಮಾಡತೊಡಗಿದಳು. ಇವರನ್ನೇನಾದರೂ ಬಿಟ್ಟಿದ್ರೆ ಮೂರೇ ದಿನದಲ್ಲಿ ಭಾರತಕ್ಕೆ ಸ್ವಾತಂತ್ರ ತರುತ್ತಿದ್ದರೇನೋ ಎಂಬಂತೆ ಮಾತನಾಡಿದರು ಎಲ್ಲರೂ. ಒಬ್ಬರ ಮಾತು ಮುಗಿಯುವುದರೊಳಗೆ ಇನ್ನೊಬ್ಬರದ್ದು ಶುರುವಾಗುತ್ತಿತ್ತು. ಅದಾದಕೂಡಲೇ ಮತ್ತೊಬ್ಬರು.. ನಾನು ಮಾತ್ರ ಕಿವಿಗೆ ಹೆಡ್ ಫೋನ್ ತೊಟ್ಟ ಸದನದ ಸ್ಪೀಕರ್'ನಂತೆ ಬಾಯಿತೆರದುಕೊಂಡು ನೋಡುತ್ತಲೇ ಇದ್ದೆ.
ಭಾರತಕ್ಕೆ ಐಟಿ ಬೇಕು ಅಂದೋರಿಗೆ ಕೆಲಸ ಕೊಡ್ತಾರಾ ಅಥವಾ ಬೇಡ ಅಂದೋರಿಗಾ? ಐಟಿ ಕಂಪನಿಯ ಕೆಲಸಕ್ಕೇ ಬಂದುಕೊಂಡು ಐಟಿ ಇಂಡಸ್ಟ್ರಿಯೇ ಬೇಡ ಅನ್ನೋ ಮೂರ್ಖನಿಗೆ ಯಾರು ತಾನೇ ಕೆಲಸ ಕೊಡ್ತಾರೆ? ಅಥವಾ ಐಟಿ ಕೆಲಸಕ್ಕೇ ಬಂದು ಐಟಿಯೇ ಬೇಡ ಅನ್ನೋ ಭೂಪ ಅಂತ ಮೆಚ್ಚಿ ಕೆಲಸ ಕೊಟ್ಟು ಬಿಟ್ರೆ?
ಐಟಿ ಭಾರತಕ್ಕೆ ಬೇಕು ಅನ್ಲಾ, ಬೇಡ ಅನ್ಲಾ?
ಈ ಮಿಲಿಯನ್ ಡಾಲರ್ ಪ್ರೆಶ್ನೆಗೆ ನಾನು ಉತ್ತರ ಹುಡುಕಿಕೊಳ್ಳುವಷ್ಟರಲ್ಲಿ ದಿವ್ಯವಾಣಿಯೊಂದು ಮೊಳಗಿತು:
"ಡಿಸ್ಕಶನ್ ಈಸ್ ಓವರ್!"
ಡಿಸ್ಕಶನ್ ಕೋಣೆಯಿಂದ ನಗುತ್ತಾ ಒಬ್ಬನೇ ಹೊರಬಂದ ನನ್ನನ್ನು ಅಕ್ಕ ಉದ್ವೇಗದಿಂದ ಪ್ರಶ್ನಿಸಿದಳು:
"ಒಬ್ನೇ ಬರ್ತಿದೀಯಲ್ಲೋ? ಏನಾಯ್ತೋ? ನೀನೊಬ್ನೇ ಸೆಲೆಕ್ಟ್ ಆದ್ಯಾ?"
ನಾನು ಮತ್ತೂ ನಗುತ್ತಲೇ ಹೇಳಿದೆ:
"ನಡಿ. ಮನೆಗೆ ಹೋಗೋಣ. ನಾನೊಬ್ನೇ ರಿಜೆಕ್ಟ್ ಆದೆ!"
ಆಕಾಶವೆನ್ನುವ ಆಕಾಶ ಕಳಚಿ ಎದುರಿದ್ದ ಅಕ್ಕನ ತಲೆಯಮೇಲೆ ಧಡಾಲ್ಲನೆ ಬಿತ್ತು.
"ಅದನ್ನ ಇಷ್ಟೊಂದು ನಕ್ಕೊಂಡು ಹೇಳ್ತೀಯಲ್ಲೋ?!" ಅಕ್ಕ ಕುಸಿದಂತೆ ಕುಳಿತಳು.
ಕೆಲವೊಮ್ಮೆ ನಗೆಯೆನ್ನುವುದು ನಮ್ಮ ಅಂತರಾಳದಲ್ಲಿ ನಡೆಯುತ್ತಿರುವ ಹೊಯ್ದಾಟಗಳ ತದ್ವಿರುದ್ಧ ರೂಪವಾಗಿ, ಆದ ಮುಖಭಂಗವನ್ನು ಮರೆಮಾಚುವ ಮುಖವಾಡವಾಗಿ, ಕುಸಿದ ನಂಬಿಕೆಯ ಗಾಯವೊಂದನ್ನು ಕಾಣದಂತೆ ಮಾಡುವ ತೇಪೆಯಾಗಿ ಮುಖದ ಮೇಲೆ ಮೂಡುತ್ತದೆನ್ನುವುದು ನನಗೆ ಅರ್ಥವಾದದ್ದೇ ಆಗ.
-ವಿನಾಯಕ ಅರಳಸುರಳಿ.

ಸುಳ್ಳು ಮಾತುಗಳ ಕಿಡಿ...


ಅಂತೂ ಇಂತೂ ಚುನಾವಣೆ ಎಂಬ ಮಹಾಯುದ್ಧ ಮುಗಿದಿದೆ. ಕೆಲವರು ಗೆದ್ದು ಸೋತಿದ್ದಾರೆ. ಕೆಲವರು ಸೋತು ಗೆದ್ದಿದ್ದಾರೆ. ಇನ್ನು ಕೆಲವರು ಸೋತೆವೋ, ಗೆದ್ದೆವೋ ಎಂಬ ಗೊಂದಲದಲ್ಲೇ ಮುನ್ನಡೆಯಿಟ್ಟಿದ್ದಾರೆ. ಒಟ್ಟಾರೆಯಾಗಿ ಕವಿದ ಗೊಂದಲಗಳೆಲ್ಲ ತಾತ್ಕಾಲಿಕವಾಗಿ ಕರಗಿ ಸರ್ಕಾರವೊಂದು ರಚನೆಯಾಗಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳನ್ನು ಗಮನಿಸಿದ್ದೇ ಆದರೆ ರಾಜಕೀಯವೆನ್ನುವುದು ಹಿಂದೆಂದಿಗಿಂತ ಗಾಢವಾಗಿ ಯುವಜನತೆಯನ್ನು ತಟ್ಟಿರುವುದು ಗೋಚರವಾಗುತ್ತದೆ. ಅದು ಸ್ವಾಗತಾರ್ಹವೂ ಹೌದು. ಅದರಲ್ಲೂ ಉದ್ಯೋಗ, ಭಡ್ತಿ, ಸಂಬಳ, ಮನೆ, ಗೆಳೆಯರು, ಪ್ರವಾಸ, ಪಾರ್ಟಿ ಎಂದೆಲ್ಲ ಕೇವಲ ತಮ್ಮದೇ ವಯಕ್ತಿಕ ಚಿಂತೆಗಳೊಳಗೆ ಮುಳುಗಿಹೋಗಿದ್ದ ಸುಶಿಕ್ಷಿತ ಯುವಶಕ್ತಿ ದೇಶದ ರಾಜಕೀಯ ಭವಿಷ್ಯದ ಬಗ್ಗೆಯೂ ಕೊಂಚ ತಲೆ ಖರ್ಚು ಮಾಡಿ ನಾಲ್ಕಾರು ಕೂದಲು ಉದುರಿಸಿಕೊಳ್ಳುವಂತಾಗಿರುವುದು ಒಳ್ಳೆಯ ಲಕ್ಷಣವೂ ಹೌದು. ಆದರೆ ಅವರಲ್ಲಿ ಹೆಚ್ಚಿನವರು ತಂತಮ್ಮ ರಾಜಕೀಯ ಆಸಕ್ತಿಗಳನ್ನು ವ್ಯಕ್ತಪಡಿಸಿದ ರೀತಿಯಿದೆಯಲ್ಲ? ಅದೇ ಕೊಂಚ ಬೇಸರ ತಂದ ಸಂಗತಿ.
ಎದುರಾಳಿಯನ್ನು ಜರಿಯುವುದು, ಶತಾಯಗತಾಯ ಅವರ ಚಾರಿತ್ರ್ಯಹರಣ ಮಾಡುವುದು, ಆ ಮೂಲಕವೇ ತಾನು 'ಯೋಗ್ಯ' ಎನ್ನಿಸಿಕೊಳ್ಳಲು ಪ್ರಯತ್ನಿಸುವುದು ರಾಜಕಾರಣದ ಹುಟ್ಟುಲಕ್ಷಣ. ಈಗಂತೂ ಈ ಪ್ರಕ್ರಿಯೆ ನೂರಕ್ಕೆ ತೊಂಭತ್ತೆಂಟರಷ್ಟು ಮಿತಿಮೀರಿಯೇ ನಡೆಯುತ್ತಿದೆ. ಸುಳ್ಳು ಸುದ್ದಿಗಳಿಗೆ ರೆಕ್ಕೆ-ಪುಕ್ಕ ಕಟ್ಟಿ ಹಾರಿಬಿಡುವುದು ಸರ್ವೇಸಾಮಾನ್ಯ. ಆದು ಯಾವ ರಾಜಕಾರಣಿಗಾಗಲೀ, ರಾಜಕೀಯ ಪಕ್ಷಕ್ಕಾಗಲೀ ಹೊಸತಲ್ಲ. ಆದರೆ ಇಡೀ ನಮ್ಮ ನಾಗರಿಕ ಸಮಾಜವೇ ಈ ಅನಾಗರಿಕ ಕ್ರಮವನ್ನು ಹಿಂಬಾಲಿಸಿಕೊಂಡು ಹೋಯಿತಲ್ಲಾ? ಅದು ಚಿಂತಿಸಲೇಬೇಕಾದ ವಿಷಯ. ಪ್ರಜಾಪ್ರಭುತ್ವದೊಳಗೆ ಪ್ರಜೆಯಾಗಿ ಹುಟ್ಟಿದ ಮೇಲೆ ಯಾವುದೋ ಒಂದು ಪಕ್ಷವನ್ನು ಬೆಂಬಲಿಸುವುದು ಸಹಜ. ತಾನು ನಂಬಿದ ಸಿದ್ಧಾಂತವೇ ಶ್ರೇಷ್ಠವೆಂದು ವಾದಿಸುವುದು, ಎದುರಾಳಿಯ ಹುಳುಕು ಹಲ್ಲುಗಳ ಪಕ್ಕದಲ್ಲಿ ತಮ್ಮವರ ಅಚ್ಚಬಿಳಿಯ ದಂತಪಂಕ್ತಿಗಳನ್ನಿಟ್ಟು "ನೀವೇ ನೋಡಿ" ಎಂದು ನಾಲ್ಕು ಜನರಿಗೆ ತೋರಿಸುವುದು... ಇವೆಲ್ಲವೂ ಸರಿಯೇ. ಇಲ್ಲಿಯ ತನಕದ ಹಣ್ಣಿನಲ್ಲಿ ಯಾವ ಹುಳುವೂ ಇಲ್ಲ. ಆದರೆ ನಾವು ಬೆಂಬಲಿಸದವರು ಎಂಬ ಒಂದೇ ಒಂದು ಕಾರಣಕ್ಕೆ ಎದುರಾಳಿಯನ್ನು ಹೀನಾಮಾನವಾಗಿ ಆಡಿಕೊಳ್ಳುವುದಿದೆಯಲ್ಲಾ? ಅದೇಕೋ ಸರಿಯೆನ್ನಿಸುವುದಿಲ್ಲ. ಅದರಲ್ಲೂ ಸುಳ್ಳು ಎಂದು ಗೊತ್ತಿದ್ದೂ ಕೆಲವೊಂದು 'ಸೃಷ್ಟಿಸಲ್ಪಟ್ಟ' ವದಂತಿಗಳನ್ನು ಹಬ್ಬಿಸುವುದು, ಅಪಾಯಕಾರಿಯಾದ ದ್ವೇಷವನ್ನು ಸಮಾಜದ ಉದ್ದಗಲಕ್ಕೂ ಹರಡುವುದು, ಆದ ಅನಾಹುತಗಳನ್ನು ಜಾತ್ಯಾತೀತವಾಗಿ ಖಂಡಿಸುವ ಬದಲು ನೋವಿಗೂ-ಸಾಂತ್ವನಕ್ಕೂ ಒಂದು ವರ್ಗವನ್ನು ಸೃಷ್ಟಿಸುವುದು... ಇವೆಲ್ಲ ನಮ್ಮ ಕೈತೋಟದೊಳಕ್ಕೆ ನಾವೇ ಬಿಟ್ಟುಕೊಳ್ಳುವ ವಿಷ ಕ್ರಿಮಿಗಳಂಥವು. ಏಕೆಂದರೆ ಚುನಾವಣೆಯೇನೋ ನಾಲ್ಕೈದು ತಿಂಗಳಲ್ಲಿ ಮುಗಿದುಹೋಗುತ್ತದೆ. ಗೆದ್ದ ಅಭ್ಯರ್ಥಿ ಕೆಲ ಸಾವಿರಗಳನ್ನು ಕಾರ್ಯಕರ್ತರತ್ತ ಎಸೆದು, ಅಭಿಮಾನಿಗಳತ್ತ ಕೈ ಬೀಸುತ್ತಾ ಎತ್ತರದ, ಬೆಚ್ಚಗಿನ ಸಿಂಹಾಸನದತ್ತ ನಡೆದುಬಿಡುತ್ತಾನೆ. ಆದರೆ ಅವನ ಗೆಲುವಿಗಾಗಿ ದುಡಿದ, ಅವರ ಬಹುಪರಾಕುಗಳನ್ನೂ, ಎದುರಾಳಿಯ ಮುರ್ದಾಬಾದ್ ಗಳನ್ನೂ ಹಂಚಿ ಹರಡಿದ, ಅವನಿಗೋಸ್ಕರ ಆದಷ್ಟೂ ದೊಣ್ಣೆ ಹಿಡಿದು ಬಡಿದಾಡಿದ, ಸಾಧ್ಯವಾದಷ್ಟೂ ಮನೆ-ಮನಗಳನ್ನು ಮುರಿದ ಸಾಮಾನ್ಯ ಜನರಿದ್ದಾರಲ್ಲ? ಅವರು ಮರಳಿ ಬರಬೇಕಿರುವುದು ಮತ್ತದೇ ಸಾಮಾನ್ಯ ಜಗತ್ತಿಗೆ! ನಿನ್ನೆಯ ತನಕ ಅವರೇ ಹರಿಯ ಬಿಟ್ಟಿದ್ದ, ಯಾವಾಗ ಬೇಕಾದರೂ ವಿಷ ಕಕ್ಕಬಲ್ಲ, ಅದೇ ದ್ವೇಷದ ಮಿನ್ನಾಗರಗಳು ಚಾಪೆಯ ಕೆಳಗೆಲ್ಲೋ ಸರಿದಾಡುತ್ತಿರುವ ಕತ್ತಲ ಸಮಾಜಕ್ಕೆ. ತಮ್ಮದಲ್ಲದ ಸೋಲು - ಗೆಲುವುಗಳನ್ನು ಜನ ಬಹಳ ಬೇಗ ಮರೆತು ಹೋಗುತ್ತಾರೆ. ಆದರೆ ಆ ಒಂದು ಗೆಲುವಿಗಾಗಿ ಹರಡಿದ ದ್ವೇಷವಿದೆಯಲ್ಲ? ಅದು ಅಷ್ಟು ಸುಲಭಕ್ಕೆ ವಾಸಿಯಾಗುವುದಿಲ್ಲ.
ಈಗ ಯುವಜನರ ವಿಷಯಕ್ಕೆ ಮರಳಿ ಬರೋಣ. ಈ ಸಲದ ಚುನಾವಣೆ ಮತ್ತೆಲ್ಲ ಮಾಧ್ಯಮಗಳಿಗಿಂತ ಹೆಚ್ಚಾಗಿ ಪ್ರಸಾರವಾಗಿದ್ದು ಸಾಮಾಜಿಕ ಜಾಲತಾಣಗಳ ಮುಖೇನ. ಅತ್ಯಗಾಧ ಸಂಖ್ಯೆಯ ವೀಕ್ಷಕರಿರುವ, ಬೆರಳಂಚಿನ ಮೂಲಕವೇ ಅವರೆಲ್ಲರ ಮನಸ್ಸನ್ನು ತಲುಪಬಲ್ಲ, ಕವಡೆ ಕಾಸಿನ ಶ್ರಮವಿಲ್ಲದೇ ಅವರೆಲ್ಲರೂ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಮಾಡಬಲ್ಲ, ಅವರನ್ನು ಕೆರಳಿಸಿ, ಹೊರಳಿಸಬಲ್ಲ ಸುಲಭ ಮಾಧ್ಯಮವೆಂದರೆ ಅದು ಸಾಮಾಜಿಕ ಜಾಲತಾಣಗಳೇ ಎಂಬುದು ಪ್ರತಿಯೊಂದು ಪಕ್ಷವೂ ಅರಿತುಕೊಂಡಿರುವ ಸತ್ಯ. ಅಂತೆಯೇ ಅವರು ಅದನ್ನು ಬಳಸಿಕೊಂಡರು ಕೂಡಾ. ಆದರೆ ಹಿಂದಿನಿಂದಲೂ ಅವರು ನಡೆಸಿಕೊಂಡು ಬಂದಿರುವ ಈ ಮತ ಬೇಟೆಯ ಇಂದ್ರಜಾಲದಾಟಗಳಿಗೆ ಹಿಂದೆಂದಿಗಿಂತ ಸುಲಭವಾಗಿ ಮತ್ತು ಅಗಾಧವಾಗಿ ಸೋತವರು ನಮ್ಮ ಯುವಜನ. ಇದನ್ನು ಅವರ 'ಸೋಲು' ಎಂದು ಏಕೆ ಹೇಳುತ್ತಿದ್ದೇನೆಂದರೆ ತಟಸ್ಥವಾಗಿ ನಿಂತು ಸರಿ-ತಪ್ಪುಗಳ ಗುರುತಿಸಬಲ್ಲ ಬುದ್ಧಿಮತ್ತೆಯಿದ್ದೂ ಶತಮಾನದಿಂದ ನಡೆಯುತ್ತಾ ಬಂದಿರುವ ಕಣ್ಕಟ್ಟು ಪ್ರದರ್ಶನಗಳನ್ನು ಬಹಳ ಸುಲಭವಾಗಿ ಒಪ್ಪಿಕೊಂಡು, ತಾವೂ ಅದನ್ನೇ ಮುಂದುವರಿಸಿದರಲ್ಲಾ? ಅದು ನಿಜಕ್ಕೂ ಸೋಲೇ ಸರಿ!
ಇಲ್ಲಿ ನಾನು ಒಂದು ಪಕ್ಷವನ್ನು ಒಪ್ಪಿ ಅದಕ್ಕೆ ಮತ ಹಾಕುವುದರ ಬಗ್ಗೆ ಹೇಳುತ್ತಿಲ್ಲ. ಆದರೆ ತಾನು ನಂಬುವ ಪಕ್ಷದ ಕೀರ್ತಿ ಪತಾಕೆಯನ್ನು ಹಾರಾಡಿಸುವ ಭರದಲ್ಲಿ ನಾವು ನಡೆದುಕೊಂಡ ರೀತಿಯಿದೆಯಲ್ಲ? ಅದೇ ನಮ್ಮ ನಿಜವಾದ ಸೋಲು! ಚಿಕ್ಕದೊಂದು ಉದಾಹರಣೆ ಕೊಡುತ್ತೇನೆ: ಚುನಾವಣೆಗೆ ಸುಮಾರು ಒಂದು ತಿಂಗಳಿತ್ತೇನೋ‌‌. ಫೇಸ್ಬುಕ್ಕಿನಲ್ಲಿ ಸರ್ವಪಕ್ಷಗಳ ಬೆಂಬಲಿಗರೂ ಮನಸೋ ಇಚ್ಛೆ ಕಚ್ಚಾಡುತ್ತಿದ್ದರು. ಎಲ್ಲದರ ಮಧ್ಯೆ ಬಹುದೊಡ್ಡ ಹುದ್ದೆಯಲ್ಲಿರುವ ಮಾನ್ಯ ಮಂತ್ರಿಗಳೊಬ್ಬರು ನೀಡಿದರು ಎನ್ನಲಾದ ತೀರಾ ಕೆಳಮಟ್ಟದ ಹೇಳಿಕೆಯೊಂದನ್ನು ಸಾರುತ್ತಿರುವ ಫೋಟೋವೊಂದು ಯಾರೋ ಹಾಕಿದ್ದರು. ಮೊದಲ ನೋಟಕ್ಕೇ ಅದು ಸುಳ್ಳು ಸೃಷ್ಟಿಯೆಂಬುದು ಎಂತಹಾ ದಡ್ಡನಿಗಾದರೂ ಗೊತ್ತಾಗುವಂತಿತ್ತಾದರೂ ಅದನ್ನೇ ಮುಂದಿಟ್ಟುಕೊಂಡ ಜನ ಶಕ್ತಿ ಮೀರಿ ಬೈದಾಡಿಕೊಳ್ಳುತ್ತಿದ್ದರು. ಬಹು ಮುಖ್ಯವಾಗಿ ಅದು ಎರೆಡು ಪಂಗಡಗಳ ಭಾವನೆಗಳನ್ನು ಕೆರಳಿಸುವಂತಹಾ ಪೋಸ್ಟ್ ಆಗಿತ್ತು. ಇದೆಲ್ಲ ಸಾಮಾನ್ಯ ಸಂಗತಿಯಾದರೂ ಕಟ್ಟಕಡೆಗೆ ಎರಡು ಅಂಶಗಳು ಬಹಳ ಬೇಸರ ತರಿಸಿದವು. ಒಂದು: ತಾನು ಹಾಕುತ್ತಿರುವುದು ಸುಳ್ಳಾಂಬಟ್ಟೆ ಸಂದೇಶವೆಂಬುದು ಗೊತ್ತಿದ್ದೇ ಆ ವ್ಯಕ್ತಿ ಅದನ್ನು ಹಾಕಿದ್ದ. ಕೆಲವರು ಆ ಅಂಶವನ್ನೇ ಎತ್ತಿ ಕೇಳಿದಾಗ "ನಿಮ್ಮ ಪಕ್ಷದವರೂ ಇದನ್ನೇ ಮಾಡುತ್ತಿರುವಾಗ ನಾನೇಕೆ ಮಾಡಬಾರದು?" ಎಂಬ ಉದ್ಧಟತನದ ಉತ್ತರ ಕೊಟ್ಟ. ಎರೆಡು: ಹೀಗೆ ವಿತಂಡ ವಾದದ ಮೂಲಕ ಪ್ರಚಾರ ಪಡೆಯುತ್ತಿದ್ದವನು ಯಾವುದೋ ಪಕ್ಷದ ಕಾರ್ಯಕರ್ತನಾಗಿರದೆ ಪ್ರತಿಷ್ಠಿತ ಕಂಪನಿಯೊಂದರ ಪ್ರತಿಭಾನ್ವಿತ ಎಂಜಿನಿಯರಾಗಿದ್ದ!
ಹೌದು. ಎಂಜಿನಿಯರಾದರೂ, ಮತ್ತೊಬ್ಬನಾದರೂ ಎಲ್ಲರೂ ಮನುಷ್ಯರೇ. ಆದರೆ ಇಲ್ಲಿ ಅಷ್ಟೆಲ್ಲ ಓದಿಕೊಂಡೂ ಕುರುಡು ಅಭಿಮಾನಕ್ಕೋ, ಮತ್ತೊಂದಕ್ಕೋ ತನ್ನ ವಿವೇಚನೆಯನ್ನು ಸೇಲ್ ಮಾಡಿಕೊಂಡ ಈ ಸುಶಿಕ್ಷಿತನಿಗೂ, ಒಂದು ಬಾಟಲಿ ಸಾರಾಯಿಗೆ ತನ್ನ ಮತವನ್ನು ಮಾರಿಕೊಳ್ಳುವ ಒಬ್ಬ ಅಶಿಕ್ಷಿತನಿಗೂ ನಡುವೆ ಏನಾದರೂ ವ್ಯತ್ಯಾಸ ಉಳಿಯಿತಾ? ಇಬ್ಬರೂ ಮಾಡಿರುವುದೂ ಒಂದೇ ಅಚಾತರ್ಯವಲ್ಲವಾ? ಹಾಗೆ ನೋಡಿದರೆ ಆ ಗಾಂಪ ಕುಡಿದು, ಮತ ಹಾಕಿ ತನ್ನ ಪಾಡಿಗೆ ಹೋಗಿ ಯಾವುದೋ ರಸ್ತೆಯ ಮಧ್ಯದಲ್ಲೋ, ಮೋರಿಯ ಮಡಿಲಿನಲ್ಲೋ ಬಿದ್ದುಕೊಳ್ಳುತ್ತಾನೆ. ಆದರೆ ಈ ಪಂಡಿತ ತನಗೇರಿರುವ ಅಂಧ ನಶೆಯ ಜೊತೆ ಇನ್ನೂ ಹತ್ತು ಜನರ ನಡುವೆ ಬೆಂಕಿ ಹಚ್ಚುತ್ತಿದ್ದಾನೆ!
ಇದೊಂದು ಚಿಕ್ಕ ಉದಾಹರಣೆಯಷ್ಟೇ. ಹೀಗೆ, ಎಲುಬಿದ್ದೂ ಇಲ್ಲದಂತಿರುವ ಬೆರಳ ತುದಿಯಿಂದ ಸಾವಿರಾರು ನೀಚ ಸುದ್ದಿಗಳನ್ನು ಸೃಷ್ಟಿಸಿ ಸಮಾಜದ ಸ್ವಾಸ್ಥ್ಯದ ನಡುವೆ ಹರಿಯಬಿಟ್ಟವರು ಹಲವರಿದ್ದಾರೆ. ಅವುಗಳ ಸತ್ಯಾಸತ್ಯತೆಗಳ ತಿಳಿಯುವ ತಾಳ್ಮೆಯಿಲ್ಲದೆ, ಕೆಲವೊಮ್ಮೆ ತಿಳಿದೂ ತಿಳಿಯದಂತೆ ಶೇರ್, ಲೈಕ್ ಕಮೆಂಟ್ ಮಾಡುವ ಮೂಲಕ ನಾವೂ ಅದರ ಭಾಗವಾಗಿದ್ದೇವೆ‌. ಎದುರಾಳಿಯನ್ನು ವಾಚಾಮಗೋಚರ ನಿಂದಿಸುವುದೇ ದಿಟ್ಟತನದ ಪರಮಾವಧಿಯೆಂಬಂತೆ ವರ್ತಿಸಿದ್ದೇವೆ. ನಮ್ಮನ್ನು ನಾವೇ ನೇರ-ದಿಟ್ಟ-ನಿರಂತರರೆಂದು ಘೋಷಿಸಿಕೊಂಡು ಹೆಗಲು ತಟ್ಟಿಕೊಂಡಿದ್ದೇವೆ. ಎದುರಾಳಿ ಹೇಳಿದ ಒಂದು ಮಾತು ಕಿವಿಗೆ ಬಿದ್ದರೆ ಸಾಕು, ಅವನ ವಂಶವೃಕ್ಷಕ್ಕೇ ಕೈ ಹಾಕಿ ಅಲ್ಲಡಿಸಿಬಿಡುತ್ತೇವೆ. ಅವನು ಏನು ಹೇಳುತ್ತಿದ್ದಾನೆ? ಯಾವ ವಿಷಯದ ಬಗ್ಗೆ ಮಾತನಾಡುತ್ತಿದ್ದಾನೆ? ಅಲ್ಲಿ ಸತ್ಯವಿದೆಯಾ? ಅದರಿಂದೇನಾದರೂ ಕಲಿಯುವುದಿದೆಯಾ? ಊಹೂಂ... ಅಷ್ಟು ಮಾತ್ರದ ತಾಳ್ಮೆ ನಮಗ್ಯಾರಿಗೂ ಇಲ್ಲವೇ ಇಲ್ಲ. ಪ್ರತಿಯೊಬ್ಬ ವ್ಯಕ್ತಿಯನ್ನೂ ಈಗಾಗಲೇ ನಮ್ಮ (ಮೂಢ)ನಂಬಿಕೆಗೆ ತಕ್ಕಂತೆ ಒಂದು ಪಕ್ಷದ ಪ್ರಚಾರಕನೆಂದು ನಮಗೆ ನಾವೇ ನಿರ್ಧರಿಸಿಕೊಂಡಿದ್ದೇವೆ. ಅವನ ಪ್ರತಿಯೊಂದು ಕ್ರಮವನ್ನೂ ಹಳಿಯಲು ತಯಾರಾಗಿಯೇ ನಿಂತಿರುತ್ತೇವೆ. ಸಾಲದೆಂಬಂತೆ ನಾವು ಬೆಂಬಲಿಸುವವರ ವಿರುದ್ಧ ಒಂದೇ ಒಂದು ಹೆಜ್ಜೆಯಿಟ್ಟ ಕಾರಣಕ್ಕೇ ಹೀನಾತಿಹೀನ ಮಾತುಗಳನ್ನಾಡಿ ತಣಿಯುತ್ತೇವೆ. ಪರಿಸ್ಥಿತಿಯ, ವಾಸ್ತವದ ನಿಜವಾದ ಚಿತ್ರ ನಮ್ಮ ಕಣ್ಣುಗಳನ್ನು ತಲುಪುವುದೇ ಇಲ್ಲ. ಇದು ಅತಿಯಾದ ಬುದ್ಧಿವಂತಿಕೆ, ಅಭಿಮಾನ ಹಾಗೂ ಅಹಂನ ಪರಾಕಾಷ್ಠೆಗಳು ತಂದಿಟ್ಟಿರುವ ವಿವೇಚನಾಹೀನತೆಯಲ್ಲದೆ ಮತ್ತೇನಲ್ಲ. ನಾವಾಡುವ ಅವಾಚ್ಯಗಳು ನಮ್ಮ ವ್ಯಕ್ತಿತ್ವವನ್ನು ತಗ್ಗಿಸುತ್ತವೇ ಹೊರತು ಎದುರಾಳಿಯನ್ನಲ್ಲ.
ಈ ಎಲ್ಲ ಆವೇಶಗಳಾಚೆ ನಾವು ಮರೆತಿರುವ ಸಂಗತಿಯೆಂದರೆ, ಯಾವ ಪ್ರಚಾರ, ಪ್ರಹಸನ, ವಿಕಾಸ, ಕ್ರಾಂತಿಗಳಾದರೂ ಅವು ನಡೆಯಬೇಕಿರುವುದು ಸಾವಿರಾರು ಜನರಿರುವ ಈ ಸಮಾಜದೊಳಗೆಯೇ. ಇಲ್ಲಿ ನಾವು ಹಚ್ಚುವ ಸಣ್ಣ ಕಿಡಿಗೂ ಹೊತ್ತಿ ಉರಿಯಬಲ್ಲ ನೂರು ತರಗೆಲೆಗಳಿವೆ. ಇಂದು ಯಾರದೋ ತಾತ್ಕಾಲಿಕ ಗೆಲುವಿಗಾಗಿ ನಾವು ಅನುಸರಿಸುತ್ತಿರುವ ಕೀಳು ಹಾದಿಗಳು, ಹರಡುತ್ತಿರುವ ಮುಳ್ಳುಗಳು ಮುಂದೊಂದು ದಿನ ಮುಳ್ಳು ಹಾಗು ಮುಳ್ಳು ಮಾತ್ರವೇ ಬೆಳೆಯಬಲ್ಲ ಜಾಲಿಯ ಮರವಾಗಲಿದೆಯೆಂಬ ಸತ್ಯ ನಮಗೆಲ್ಲ ಅರಿವಾಗಬೇಕಿದೆ. ಎದುರಾಳಿಯನ್ನು ಕೆರಳಿಸುವ ಮೂಲಕ ನಾವು ಹೊಂದಲೆತ್ನಿಸುತ್ತಿರುವ ವಿಕೃತ ಆನಂದ ಕೊನೆಯಾಗಬೇಕಿದೆ. ದ್ವೇಷ ಮತ್ತೆ ಮತ್ತೆ ತನ್ನನ್ನು ಹೊಂದುವಂತೆ 'ಟೆಮ್ಟ್' ಮಾಡುವ ನಿಕೋಟಿನ್ ನಂತೆ. ಅದನ್ನು ದೂರವಿಡುವುದೊಂದೇ ಅದರಿಂದ ಪಾರಾಗಲು ಇರುವ ದಾರಿ.
-ವಿನಾಯಕ ಅರಳಸುರಳಿ.
(ನಿಮ್ಮೆಲ್ಲರ ಮಾನಸ ಜುಲೈ 2018ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ.)

ಮೊಟ್ಟ ಮೊದಲ ಕಿರುಚಿತ್ರ..

"ಅನಾಥವಾಗಬೇಕಿರುವುದು ಅನಾಥಾಶ್ರಮ/ವೃದ್ಧಾಶ್ರಮಗಳೇ ಹೊರತು ಅಪ್ಪ-ಅಮ್ಮ ಅಲ್ಲ!"
ಗೆಳೆಯ Venu Hasrali ಅವರು ಈ ಥೀಮ್ ಅನ್ನು ಹೇಳಿದಾಗ ನಿಜಕ್ಕೂ ವಾಹ್ ಎನ್ನಿಸಿತು. ಏಕಕಾಲಕ್ಕೆ ಕಿರುತೆರೆ, ಹಿರಿತೆರೆ ಹಾಗೂ ಮೊಬೈಲ್ ತೆರೆ ಮೂರರ ಬಗ್ಗೆಯೂ ಯೋಚಿಸುವ ಹಾಗೂ ಮೂರರಲ್ಲೂ ಉಳಿಯುವಂತಹಾದ್ದೇನನ್ನೋ ಮಾಡಬೇಕೆಂದು ಶ್ರಮಪಡುತ್ತಿರುವ ಗೆಳೆಯ ವೇಣು ಹಸ್ರಾಳಿ ಅವರ ನಿರ್ದೇಶನದ ಮೊಟ್ಟ ಮೊದಲ ಕಿರುಚಿತ್ರ #ಆಶೀರ್ವಾದ ಇಂದು ಬಿಡುಗಡೆಯಾಗಿದೆ. ಹಲವಾರು ಚೌಕಟ್ಟುಗಳಾಚೆಗೂ ಅವರ, ನಮ್ಮ ನಿರೀಕ್ಷೆಯನ್ನು ಮೀರಿ ಸುಂದರವಾಗಿ ಮೂಡಿಬಂದಿದೆ. ನಾನು ಬರೆದ ನಾಲ್ಕು ಸಾಲುಗಳ ಸಾಹಿತ್ಯ ಸಹಾ ರಾಮಸೇನೆಯ ನಡುವಿನ ಅಳಿಲಿನಂತೆ ನಡುವೆ ಸೇರಿಕೊಂಡಿದೆ.
ಹೊಸತಂಡ... ಹಳೆಯದೇ ಪ್ರೀತಿಯನ್ನು ಹೊಸ ದೃಶ್ಯವಾಗಿಸುವ ಹೊಸ ಪ್ರಯತ್ನ... ಒಮ್ಮೆ ನೋಡಿ... ಅಭಿಪ್ರಾಯ ತಿಳಿಸಿ.. ಇಷ್ಟವಾದಲ್ಲಿ ಶೇರ್ ಮಾಡಿ...

ಏಕೋ ಕಾಣೆ ಕಡಲೇ...


ಕೋ ಕಾಣೆ ಕಡಲೇ
ನೀನೆಂದರೆ ನನಗೆ ಬಲು ಪ್ರೀತಿ;
ನಿನ್ನ ತೀರದಿ ತಾನೇ ನನ್ನವಳ ಊರು?
ನಿನ್ನ ಅಲೆಯಲೆಯೂ ಅವಳದೇ ರೀತಿ.
ನಿನಗೆ ನಾನು ಎಷ್ಟೊಂದು ದೂರ
ನನಗೇಕೋ ನೀ ತುಂಬ ಸನಿಹ;
ಅಳಿಸೋಕೆ ಮುನ್ನ ಓದೊಮ್ಮೆ ಅಲೆಯೇ
ಮರಳಲ್ಲಿ ನಾ ಬರೆದ ಪ್ರೇಮದ ಬರಹ.
ಹೇಳು ಮರಳೇ ಇದುವೇ ತಾನೇ
ಅವಳು ಆಡಿಬೆಳೆದ ಜಾಗ?
ಅವಳ ಕಾಲ್ತೊಳೆದ ನವಿರಾದ ಅಲೆಯೇ
ಮತ್ತೊಮ್ಮೆ ಬರುವೆಯ ದಡಕೆ ಈಗ?
ಕಾಯುತ್ತ ನಿಂತ ಈ ನನ್ನ ಹೆಜ್ಜೆ
ದಯಮಾಡಿ ಅಳಿಸದಿರು ಅಲೆಯೇ;
ಮುಂದೊಮ್ಮೆ ಅವಳು ಬಂದಾಗ ಇಲ್ಲಿ
ಬೆರೆಯುವುದೋ ಏನೋ ಹೆಜ್ಜೆಗೆ ಹೆಜ್ಜೆ.
ಅವಳ ಮನವೂ ನಿನ್ನಂತೇ ಕಡಲೇ
ತಿಳಿಯೋಕೆ ಆಗದ ಆಳ;
ಅರಿಯಲಿ ಹೇಗೆ ಮೇಲಷ್ಟೇ ತೇಲಿ
ಒಳಗೊಳಗೇ ಸುಳಿಯೊಳಗೆ ಮುಳುಗಿದವಳ?
ಏಕೋ ಕಾಣೆ ಕಡಲೇ
ಅವಳೆಂದರೆ ನನಗೆ ನಿನ್ನಂತೇ;
ನೂರೊಂದು ಬಾರಿ ಎದೆತನಕ ಬಂದು
ದಾಟದೆಯೇ ಮರಳಿದಳು ದಡದ ರೇಖೆ.
30/5/2017

ಬಾಹುಬಲಿಗೆ..


ಪಾದಕೆರಗುವುದು
ಅಷ್ಟು ಸುಲಭವಲ್ಲ;
ನಮಸ್ಕಾರಗಳೆಲ್ಲಾ
'ಸಾಷ್ಟಾಂಗ'ವಾಗುವುದಿಲ್ಲ.
ಎಲ್ಲ ಕಳಚಿಟ್ಟ ಮೇಲೂ
ಉಳಿಯುವ 'ನಾನು'
ಅಷ್ಟು ಸುಲಭಕ್ಕೆ ಬಾಗುವುದಿಲ್ಲ‌;
ನೀ ಬಿಚ್ಚಿಟ್ಟ ಆ
ಕಟ್ಟ ಕಡೆಯ ವಸ್ತ್ರವ ಸುತ್ತಿಕೊಳ್ಳುವುದ
ನಾನಿನ್ನೂ ಬಿಟ್ಟಿಲ್ಲ.
ಈ ಘಂಟೆ, ಘಮಲುಗಳು
ನಿನ್ನೆತ್ತರವ ತಲುಪುವುದಿಲ್ಲ;
ಈ ಮಸ್ತಕದ ಹೊರೆಯ
ನಿನ್ನ ಪಾದಕೊರಗಿಸದ ಹೊರತು
ನನಗೆ ನೀ ಕಾಣುವುದಿಲ್ಲ!
ಬಾಗಿರುವೆನು ನಾನೀಗ
ಏಳುವುದಕ್ಕಾಗಿ;
ಬಾನಿಗೇ ಬೆಳೆದು ನಿಂತ
ನಿನ್ನೀ ತಳಪಾಯದ
ವಿಸ್ತಾರವ ಅರಿಯುವುದಕ್ಕಾಗಿ..
(ವಿಜಯಕರ್ನಾಟಕದ ಜುಲೈ15,2019ರ ಲವಲvkಯಲ್ಲಿ ಪ್ರಕಟಿತ.)
-ವಿನಾಯಕ ಅರಳಸುರಳಿ.

ವಂದಲಗನ ಸೊಪ್ಪು ಮರೀಬೇಡೀ..


"ಏನಾದ್ರೂ ಕಳ್ಕೊಂಡ್ರಾ ಅಜ್ಜಿ?"
ಒಂದು ಕೈಯ್ಯಲ್ಲಿ ಕೈಚೀಲವನ್ನು ಹಿಡಿದು, ಇನ್ನೊಂದರಿಂದ ಬಗಲಲ್ಲಿರುವ ವ್ಯಾನಿಟಿ ಬ್ಯಾಗ್ ನೊಳಗೆ ತಡಕಾಡುತ್ತಿದ್ದ ಅಜ್ಜಿ ತಲೆಯೆತ್ತಿ ನೋಡಿದಳು. ಎದುರುಗಡೆ ಹಲ್ಕಿರಿಯುತ್ತಾ ನಿಂತಿದ್ದಾನೆ ಮುದುಕ! ತನಗಿಂತ ವಯಸ್ಸಾದವನು ತನ್ನನ್ನು 'ಅಜ್ಜಿ' ಎಂದದ್ದು ಆಕೆಗೆ ರೇಗಿಹೋಯಿತು. "ಅದೆಲ್ಲಾ ನಿಮಗ್ಯಾಕೆ? ಸುಮ್ಮನೆ ನಿಮ್ಮೆದೆಷ್ಟೋ ಅಷ್ಟು ನೋಡಿಕೊಂಡು ಮುಂದೆ ಹೋಗಿ" ಎಂದು ಮುದುರುಬಿದ್ದ ಕಣ್ಣುಗಳನ್ನು ಕೆಂಪಗೆಮಾಡುತ್ತಾ ಬಿರುಸಾಗಿ ನುಡಿದಳು.
"ಮುಂದೆ ಹೋಗು ಅನ್ನೋದಕ್ಕೆ ನಾನೇನು ಭಿಕ್ಷೆ ಕೇಳಿದೆನಾ? ಪರಿಚಯದ ಅಜ್ಜಿ,
ಪಾಪ ಏನೋ ಹುಡುಕುತ್ತಿದ್ದಾರಲ್ಲಾ ಅಂತ ಕೇಳಿದೆ ಅಷ್ಟೇ" ವೃದ್ಧನ ಮುಖದಲ್ಲಿನ ಮಂದಹಾಸ ಹಾಗೇ ಇತ್ತು.
"ಏನು ಪರಿಚಯ? ನಾನಂತೂ ಇದೇ ಮೊದಲು ನಿಮ್ಮನ್ನ ನೋಡ್ತಿರೋದು. ಇನ್ನೆಲ್ಲಿಂದ ಬರ್ಬೇಕು ಪರಿಚಯ" ಮತ್ತೆ ಮತ್ತೆ ತನ್ನನ್ನು ಅಜ್ಜಿ ಎನ್ನುವ ಅಜ್ಜನ ಮೇಲೆ ಆಕೆಗಿನ್ನೂ ಕೋಪ ಹೋಗಿಲ್ಲ.
"ನೀವು ನೋಡದೇ ಇರಬಹುದು. ಆದರೆ ನಾನು ನೋಡಿದೀನಲ್ಲಾ! ನಿಮ್ಮ ಮನೆಯ ಹತ್ತಿರಾನೇ ನಾನೂ ಇರೋದು."
"ಅಷ್ಟಕ್ಕೇ ಹೀಗೆ ಮದ್ಯ ದಾರಿಯಲ್ಲಿ ಅಡ್ಡಹಾಕಿ ಮಾತನಾಡಿಸಬಹುದೂ ಅಂದುಕೊಂಡ್ರಾ? ಇಷ್ಟು ವಯಸ್ಸಾಗಿದೆ, ಸಭ್ಯತೆ ಬೇಡ್ವಾ?"
"ನೀವು ಏನು ಹುಡುಕ್ತಿದೀರಾಂತ ನಂಗೆ ಗೊತ್ತು ಅಜ್ಜೀ" ಅವಳ ಕೋಪವನ್ನ ಗಮನಿಸಿಯೇ ಇಲ್ಲದಂತೆ ನಗುತ್ತಾ ನುಡಿದರು.
"ಏನು?"
"ನಿಮ್ಮ ಮನೆಯ ವಿಳಾಸವಿರುವ ಚೀಟಿಯನ್ನ ತಾನೇ?"
"ಅದು..... ನಿಮಗ್ಹೇಗೆ ಗೊತ್ತಾಯ್ತು?" ಅಜ್ಜಿಗೆ ಪರಮಾಶ್ಚರ್ಯ.
"ನನಗೆಲ್ಲಾ ಗೊತ್ತು. ನಾನೂ ಅತ್ತಕಡೆಯೇ ಹೊರಟಿದ್ದೇನೆ. ಬನ್ನಿ ನಿಮ್ಮನ್ನೂ ಮನೆ ತಲುಪಿಸ್ತೇನೆ" ಅಜ್ಜನ ಮುಖದಲ್ಲಿ ಗೆಲುವಿನ ಮಂದಹಾಸ.
"ನಾನ್ಯಾಕೆ ನಿಮ್ಮ ಜೊತೆ ಬರ್ಲಿ? ನನಗೆ ನಮ್ಮ ಮನೆಯ ದಾರಿ ಗೊತ್ತಿದೆ" ಅಜ್ಜಿಯ ಬಿಂಕದ ನುಡಿ.
"ಹಾಗಾದರೆ ಮತ್ಯಾಕೆ ವಿಳಾಸದ ಚೀಟಿ ಹುಡುಕ್ತಿದ್ರಿ?"
".................."
"ಪರವಾಗಿಲ್ಲ ಬನ್ನಿ. ನೀವು ಮನೇ ದಾರಿ ಮರೆತ್ರೀಂತ ನಿಮ್ಮ ಯಜಮಾನ್ರಿಗೆ ಹೇಳಲ್ಲ ನಾನು"
"ಅವರು ನಿಮಗೆ ಗೊತ್ತಾ?" ಅಜ್ಜಿಗೆ ಮತ್ತೊಮ್ಮೆ ಅಚ್ಚರಿ.
"ಬುದ್ಧಿ ಬಂದಾಗಿಂದಾನೂ ಗೊತ್ತು"
"ಆದ್ರೆ ನಾನ್ಯಾವತ್ತೂ ನಿಮ್ಮನ್ನು ನೋಡೇ ಇಲ್ವಲ್ಲಾ?"
"ನಾನು ನೋಡಿದೀನಲ್ಲ"
ಹೆಜ್ಜೆಗಳು ಬೆರೆತು ಮುನ್ನಡೆದವು.
"ಅಲ್ಲಾ... ಮನೆ ದಾರಿ ಮರೆಯೋರು ಹೊರಗ್ಯಾಕೆ ಬರ್ತೀರ?" ಅಜ್ಜನ ಕುಹುಕ.
"ನಾನೇನು ದಾರಿ ಮರ್ತಿಲ್ಲ. ಈ ಬೆಂಗ್ಳೂರಲ್ಲಿ ಎಲ್ಲಾ ಬೀದಿಗಳು ಒಂದೇ ಥರಾ ಕಾಣ್ತಾವೆ. ಅದ್ಕೆ ಸ್ವಲ್ಪ ಗೊಂದಲ ಅಷ್ಟೇ"
ಸಮರ್ಥಿಸಿಕೊಳ್ಳುತ್ತಾ ಮುಂದುವರಿಸಿದಳು:
"ನಾಳೆಯಿಂದ ಬೇಸಿಗೆ ರಜೆ ಆರಂಭ. ನನ್ನ ಮೊಮ್ಮಗ ಬರ್ತಿದಾನೆ ಅಮೆರಿಕಾದಿಂದ. ಅವನಿಗೆ ದೂದ್ ಪೇಡ ಅಂದ್ರೆ ತುಂಬಾ ಇಷ್ಟ. ಆದ್ರೆ ಅವನಮ್ಮ ಇದೆಲ್ಲಾ ತಿನ್ನೋಕೆ ಬಿಡಲ್ಲ. ಅವಳಿಲ್ಲದಾಗ ನನ್ಹತ್ರ ಗಲಾಟೆ ಮಾಡ್ತಾನೆ ಪೇಡ ಕೊಡಿಸು ಅಂತ. ಅದಕ್ಕೆ ಈಗಲೇ ತಗೊಂಡೆ, ಅವರು ಬಂದ್ಮೇಲೆ ಪುರ್ಸೊತ್ತಾಗಲ್ಲ ಅಂತ."
"ಓಹೋ ಹೌದಾ....."
"ಸಣ್ಣವನಿದ್ದಾಗ ನನ್ನ ಮಗನಿಗೂ ಹಾಗೇ, ಪೇಡ ಅಂದ್ರೆ ಪ್ರಾಣ. ಆಗೆಲ್ಲಾ ನಾನು ಮನೆಲೇ ಮಾಡಿಕೊಡ್ತಿದ್ದೆ. ಈಗ ವಯಸ್ಸಾಯ್ತು ನೋಡಿ. ಮಾಡೋಕಾಗಲ್ಲ"
"ಹಾಂ. ನಿಜ ನಿಜ. ಆದ್ರೂ ಅದಕ್ಕೆ ನೀವೇ ಬರ್ಬೇಕ? ಎಷ್ಟೊಂದು ವಾಹನಗಳು ಓಡಾಡೋ ರಸ್ತೆ ಇದು"
"ಇನ್ಯಾರಿದಾರೆ ಹೇಳಿ? ನನ್ನ ಹೆಂಡತಿ ಮಕ್ಕಳಷ್ಟೇ ನನ್ನ ಪ್ರಪಂಚ ಅಂತ ಮಗ ದೂರ ಹೋದ. ಇರೋ ಒಂದು ಕಿರಾಣಿ ಅಂಗಡಿಯೇ ನನ್ನ ಜಗತ್ತು ಎನ್ನುತ್ತಾ ಗಂಡ ಹೊರಗೆ ಹೋಗ್ತಾರೆ. ಅಂದ್ಮೇಲೆ ಇವರೆಲ್ಲರೂ ನನ್ನ ಪ್ರಪಂಚ ಅಂದುಕೊಂಡಿರುವ ನಾನೇ ಈ ಎಲ್ಲಾ ಕೆಲಸ ಮಾಡಬೇಕಲ್ವಾ.....?"
ಮುದುಕನ ಮುಖದಲ್ಲಿ ಕಳವಳಿಕೆಯೊಂದು ಹಾದು ಹೋಯಿತು.
"ಅಂದಹಾಗೇ ನಿಮ್ಮನೆಯಲ್ಲಿ ಈ ವಂದಲಗ ಏನಾದ್ರೂ ಬೆಳೆದಿದೀರ? ಇದ್ದರೆ ಇವರ ಹತ್ರ ಕೊಟ್ಟು ಕಳಿಸ್ತೀರ? ಅದರ ಲೇಹ ಮಾಡಿ ಕಳಿಸ್ಬೇಕು. ದಿನಾ ಬೆಳಗ್ಗೆ ತಿಂದ್ರೆ ಮೊಮ್ಮಗನ ನೆನಪಿನ ಶಕ್ತಿ ಹೆಚ್ಚಾಗುತ್ತೆ. ಪಾಪ, ಚಿಕ್ಕ ವಯಸ್ಸಿಗೇ ಅದೆಷ್ಟೆಲ್ಲಾ ಕಲೀಬೇಕು ಅವ್ನು ."
"ಹೂಂ, ಇರ್ಬೇಕು ನೋಡ್ತೀನಿ"
ಮನೆ ಬಂತು. ಬಾಗಿಲು ತೆರೆದ ಕೆಲಸದವಳು ವೃದ್ಧನನ್ನು ನೋಡಿ ತಲೆತಗ್ಗಿಸಿ ನಿಂತಳು. ಒಳಗೆ ಬಂದೊಡನೆಯೇ ಕೈಲಿದ್ದ ಪೇಡದ ಪೊಟ್ಟಣವನ್ನು ಫ್ರಿಜ್ಜಿನಲ್ಲಿಡಲೆಂದು ಅಡುಗೆ ಕೋಣೆಗೆ ನಡೆದವಳನ್ನೇ ನೋಡುತ್ತಾ ಅಜ್ಜ ಜೇಬಿನಿಂದ ಮೊಬೈಲ್ ತೆಗೆದು ಕಿವಿಗಿಟ್ಟುಕೊಂಡರು. "ಹಲೋ ಮಾಣಿ... ಹುಡುಕೋದು ಬೇಡ, ಅನುಸೂಯ ಸಿಕ್ಕಿದ್ಲು... ಮತ್ತೆ ಸ್ವೀಟ್ಸ್ ಅಂಗಡಿಗೆ ಹೋಗಿದ್ಲು, ಮೊಮ್ಮಗನಿಗೆ ಪೇಡ ತರ್ತೀನಿ ಅಂತ. ಮನೇಗೆ ಕರ್ಕೊಂಡ್ಬಂದೆ. ಕೆಲಸವಳು ಇದಾಳೆ ಜೊತೆಗೆ. ನೀನು ಅಂಗ್ಡೀಗೆ ಬಾ. ನಾನೂ ಹೊರ್ಟಿದೀನಿ....."
ಮೊಬೈಲ್ ಜೇಬಿಗಿಳಿಸಸಿದವರು ಅಲ್ಲೇ ನಿಂತಿದ್ದ ಕೆಲಸದವಳಿಗೆ "ಜೋಪಾನ. ಮತ್ತೆ ಆಚೆ ಹೋಗದಂಗೆ ನೋಡ್ಕೋ" ಎಂದು ಗಡುಸುದನಿಯಲ್ಲಿ ತಾಕೀತು ಮಾಡಿದರು. ಅಷ್ಟರಲ್ಲಿ ಅವರ ನೋಟ ಗೋಡೆಯತ್ತ ಸರಿಯಿತು....
ಅಲ್ಲಿ ತನ್ನ ಸುತ್ತಲೂ ಗಂಧದ ಹಾರ ಹಾಕಿಸಿಕೊಂಡು ತಣ್ಣಗೆ ನಗುತ್ತಾ ನಿಂತಿತ್ತು, ವರುಷದ ಕೆಳಗೆ ಅಪಘಾತಕ್ಕೀಡಾದ ಅವರ ಮಗ, ಸೊಸೆ ಹಾಗೂ ಮೊಮ್ಮಗನ ಫೋಟೋ....
ಅದನ್ನೇ ಅರೆಕ್ಷಣ ದಿಟ್ಟಿಸಿ ನಿಟ್ಟುಸಿರಿಟ್ಟು ಅಡಿಗೆ ಮನೆಯತ್ತ ಮತ್ತೊಮ್ಮೆ ತುಂಬುಗಣ್ಣಿಂದ ನೋಡಿದರು. ಭಾರವಾದ ಹೆಜ್ಜೆಗಳನ್ನಿಡುತ್ತಾ ಹೊರಗೆ ನಡೆದವರಿಗೆ ಬಾಗಿಲಿನಿಂದ ಹೇಳಿತು ಆ ದನಿ..
"ವಂದಲಗನ ಸೊಪ್ಪು ಮರೀಬೇಡೀ....."
(ವಿಶ್ವವಾಣಿಯಲ್ಲಿ ಪ್ರಕಟವಾದ ನನ್ನ ಕಿರು ಕಥೆ.)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...